ಪ್ರಸನ್ ವೆಂಕಟದಾಸರು ಬಾಲಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿದ್ದಾರೆ. ಮಕ್ಕಳಿಗೆ ‘ಹ’ ಕಾರ, ‘ಪ’ ಕಾರ ಮತ್ತು ‘ರ’ ಯುಕ್ತ ರೂಪಗಳು ತೊಡಕಾಗುತ್ತದೆ ಎಂಬುದನ್ನು ಒಂದು ರಚನೆಯಿಂದ ತಿಳಿಯಬಹುದು.

ಎತ್ತೋದೆಯಮ್ಮಾ ನಂಗನೆತ್ತಿಕೋ ಅಮ್ಮಾ
ಬಾಲು ಮತ್ತು ಅತ್ತು ಬಂದೀನೆ ಇತ್ತೆ ಅಮ್ಮಿ ತಿಂದೇನೆ ||ಪ||
ತುತಿ ಬಾಯಿ ವಂಗ್ಯಾವೆ ಬಿತಿ ಅವು ವಾತತ್ತಿ ಬತ್ತಾವೆ
ಅತ್ತಿ ಅವು ಉಪ್ಪುಕಾಯಿ ಅಮ್ಮ ಮಮ್ಮಾಲ್ಲೆ
ಉತ್ತತ್ತಿ ಬೆನಿ ತಿಂದೇನೆ

ಕೃಷ್ಣನ ಬಾಲಲೀಲೆಗಳನ್ನು ಬಣ್ಣಿಸುವಾಗ ಕೃಷ್ಣ ತನ್ನ ತಾಯಿಯಲ್ಲಿ ಯಾವ ಯಾವ ಬಗೆಯ ಊಟವನ್ನು ಅಪೇಕ್ಷಿಸುತ್ತಾನೆಂಬುದನ್ನುಪುರಂದರದಾಸರ ಒಂದು ಕೀರ್ತನೆಯಿಂದ ಅಭಿವ್ಯಕ್ತವಾಗುತ್ತದೆ. ಮಕ್ಕಳು ತಾಯಿಯ ಹತ್ತಿರ ಸಹಜವಾಗಿ ಮಾತಾಡುವ ರೀತಿ ಕೀರ್ತನೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಹಸಿಮೆಯಾಗುತಿದೆ ಅಮ್ಮಕೇಳೆ
ಹಸನಾದ ಅವಲಕ್ಕಿ ಬೆಲ್ಲ ಕಲಸಿಕೊಡೆ ||ಪ||

ಬಿಸಿಬಿಸಿ ಅನ್ನ ಕೈಸುಡುತಿದೆ ಬದಿಯಲ್ಲಿ ಕೊಡೆ
ಖಾರಸಾರು ಮಾಡಬೇಡ ಉಮ್ಣಬಾರನೆ ಎನಗೆ ನೀ
ಸಾರು ಮಾಡಿದರೆ ಬೇಗ ನಂಬುವೆ

ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ | ಎನಗೆ
ಗಟ್ಟು ತುಪ್ಪ ಹಾಕಿದರೆ ಬೇಗ ನುಂಗುವೆ
ನೀರು ಮೊಸರು ಹಾಕಿದರೆ ನೆಲೆಕೆ ಒತ್ತುವೆ | ಎನಗೆ
ಗಟ್ಟಿ ಮೊಸರು ಹಾಕಿದರೆ ತಟ್ಟ ನುಂಗುವೆ

ಮಗು ತಾಯಿಯ ಹತ್ತಿರ ಆತ್ಮೀಯವಾಗಿ ಮಾತನಾಡುವ ಮಾತೃ ವಾತ್ಸಲ್ಯ ಇಲ್ಲಿ ವ್ಯಕ್ತವಾಗಿದೆ. ಈ ಕೀರ್ತನೆಗಳಲ್ಲಿ ಮಗುವಿನ ಮನೋಧರ್ಮದ ಸಹಜ ಚಿತ್ರಣವಿದೆ. ಮಕ್ಕಳ ಊಟ-ತಿಂಡಿಯ ವಿವರಗಳು, ಮಕ್ಕಳ ಕಲ್ಪನೆಗಳು ಕೀರ್ತನೆಗಳಲ್ಲಿ ಸೊಗಸಾಗಿ ಬಂದಿವೆ.

ಮಕ್ಕಳ ಭಾಷೆ ತನ್ನದೇ ಆದ ಶಬ್ದಕೋಶವನ್ನು ಒಳಗೊಂಡಿರುತ್ತದೆ. ಅವುಗಳಿಗೆ ಅವುಗಳದ್ದೇ ಆದ ಅರ್ಥವಿರುತ್ತದೆ. ಕೀರ್ತನೆಯಲ್ಲಿ ಉಕ್ತವಾದ ಕೆಲವು ಬಾಲಭಾಷೆಯ ಪದಗಳನ್ನು ಕಲೆ ಹಾಕಲಾಗಿದೆ.*[1]

ಅಮ್ಮಿ – ಮೊಲೆಹಾಲು                  ಹಾ-ನೋವು
ಬುಶ್ – ಸ್ನಾನ, ಜಳಕ                   ಶಂಬೋ-ದೇವರು
ಚಿಕ್ಕಾಲಿ – ಸಣ್ಣ ರೊಟ್ಟಿ               ಪೈಯಾ-ಹಣ, ದುಡ್ಡು
ಬೂ – ಊರು                             ಅಚ್ಚಿ- ರೊಟ್ಟಿ
ಬಾಜಿ – ಮಲಗು                         ಭೌವಾ-ದೆವ್ವ, ಭಯ
ಮಮ್ಮ – ಆಹಾರ                       ಗುಮ್ಮ-ದೆವ್ವ, ಭಯ
ಜೋಜೋ- ಮಲಗು                    ಆಬು-ನೀರು
ಬೆಲ್ಲ- ಮುದ್ದು                         ಬುಬುಶಿ-ಸ್ನಾನ

ಇಂತಹ ಶಬ್ದಗಳು ಒಂದು ಪರಿಸರದಲ್ಲಿ ಮೂಡಿಬಂದಿರುವುದರಿಂದ ಅವು ಕೀರ್ತನೆಗಳಲ್ಲಿ ಬಳಕೆಯಾದಾಗ ಅವುಗಳ ಭಾಷೆ, ಲಯ, ಧಾಟಿ, ಧೋರಣೆಗಳು ಮಕ್ಕಳ ಲೋಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಅಲ್ಲಿ ಆಡುಮಾತಿನ ಲಯಕ್ಕೆ, ಶಬ್ದಸಂಪತ್ತಿಗೆ ವಿಶಿಷ್ಟವಾದ ಸಂವೇದನೆಯಿದೆ. ‘ಎಲ್ಲಾಡಿ ಬಂದ್ಯೋ’, ‘ಸಿಕ್ಕಿದನೆಲೆ ಜಾಣೆ’, ‘ರಂಗಯ್ಯ ಮನೆಗೆ ಬಂದರೆ’, ‘ಒಲ್ಲೆನವ್ವ ನಮ್ಮವಲ್ಲ ಬಾರದಿರೆ’, ‘ಮೊಸರು ತಂದಿನೊ’ ಇಂತಹ ಕೀರ್ತನೆಗಳಲ್ಲಿ ಸವಿಯಾದ ಸೌಖ್ಯ ಭಾವಕ್ಕೆ ಪ್ರತೀಕವಾಗಿರುವುದಲ್ಲದೆ ಆತ್ಮೀಯ ವಾತಾವರಣವನ್ನು ಸೃಷ್ಟಿಸಿ ಅಂತಃಕರಣವನ್ನು ಬೆಳಗುತ್ತವೆ. ಮಗುವಿಗೆ ಬಾಗಿಲಿಂದಾಚೆಗೆ ಹೋಗಬೇಡ ಎನ್ನುವುದರ ಹಿಂದೆ ತನ್ನ ಕೂಸನ್ನು ಯಾರಾದರೂ ಕದ್ದುಕೊಂಡು ಹೋದಾರು ಎಂಬ ಭಯ ಅದರ ಹಿಂದಿರುವ ಭಾವತೀವ್ರತೆ ಇಲ್ಲಿ ಸಹಜವಾಗಿ ಮತ್ತು ಸಮರ್ಥವಾಗಿ ಅಭಿವ್ಯಕ್ತಿ ಗೊಂಡಿದೆ. ಇಂತಹ ಮಾತುಗಳು ತಾಯಂದಿರ ಮನೋಧರ್ಮ ಎಂತಹದು ಎನ್ನುವುದನ್ನು ಎತ್ತಿತೋರಿಸುತ್ತದೆ. ‘ಗುಮ್ಮನ ಕರೆಯದಿರೆ’ ಎಂದಾಗ ಮಕ್ಕಳ ಭಾವನೆಯ ಸೂಕ್ಷ್ಮ ಸಂವೇದನೆ ತಿಳಿದು ಬರುತ್ತದೆಯಲ್ಲದೆ ಅದುವೆ ಕಾವ್ಯ ಭಾಷೆಯಾಗುತ್ತದೆ.

||

ತಾಯಿ ಮಗುವಿನ ಅಸದೃಶ್ಯ ಪ್ರೇಮವನ್ನು ಯಶೋದಾ ಕೃಷ್ಣನ ಆದರ್ಶನದಲ್ಲಿ ದಾಸರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಶಿಶುವಿನ ಆಟ-ಪಾಟಗಳನ್ನು ತಾಯಿಯ ಶಂಕೆ, ಆತಂಕಗಳು, ಆರೈಕೆ ಹಾರೈಕೆಗಳು ಯಶೋದೆಯ ಭಾಗ್ಯ ಕೃಷ್ಣನ ತುಂಟಾಟ. ತಾಯಿ ಕೃಷ್ಣನ ಹೆದರಿಸಿ ಎಚ್ಚರಿಸುವುದು, ಅಕ್ಕರೆಯಿಂದ ಹಾಲು ಬೆಣ್ಣೆಯ ನೂಡುವುದು. ಕೃಷ್ಣನ ಹಠ ಗೋಪಿಯರ ದೂರು ಮೊದಲಾದ ವಿಷಯಗಳನ್ನು ಗುರುತಿಸಬಹುದು.

ಪುರಂದರದಾಸರು ಬಾಲಕೃಷ್ಣನನ್ನು ವರ್ಣಿಸುವಾಗ ಒಮ್ಮೆ ತಾವು ವರ್ಣಿಸಿದಂತೆಯೂ ಮತ್ತೊಮ್ಮೆ ಯಶೋದೆ ಆಡಿಸಿದಂತೆಯೂ ಮೊಗದೊಮ್ಮೆ ಗೋಪಿಕಾಸ್ತ್ರೀಯರು ಆಡಿಸಿದಂತೆಯೂ ಕೃತಿಗಳನ್ನು ರಚಿಸಿದ್ದಾರೆ. ಕೃಷ್ಣನು ಯಶೋದೆಯ ಮಗನಾದದ್ದನ್ನು ಕಂಡು ಅವಳ ಭಾಗ್ಯವನ್ನು ಕೊಂಡಾಡುತ್ತಾರೆ.

ಗೋಪಿಯ ಭಾಗ್ಯವಿದು
ಆ ಪರಮಾತ್ಮನ ಅಪ್ಪಿ ಮುದ್ದಾಡುವುದು

ಈ ಕೀರ್ತನೆಯಲ್ಲಿ ದಾಸರು ಯಶೋದ ತನ್ನ ಕಂದನಿಗೆ ನಿರ್ವಹಿಸಿದ ಮಾತೃ ಸಹಜ ಪಾಲನೆ ಪೋಷಣೆಯನ್ನು ನೋಡಿ ಅವಳ ಭಾಗ್ಯದ ಬಗ್ಗೆ ಆಶ್ಚರ್ಯಚಿಕಿತರಾಗಿ ತನ್ಮೂಲಕ ಬಂದ ವಾಣಿಯನ್ನು ಅವಳ ಪಾಲನೆ ಪೋಷಣೆ ಶಬ್ದದಲ್ಲಿ ಹಿಡಿದಿಟ್ಟಿದ್ದಾರೆ. ಒಂಬತ್ತು ನುಡಿಗಳ ಈ ಕೀರ್ತನೆ ಬಹು ಸ್ವಾರಸ್ಯವಾಗಿದೆ. ಹಾಗೂ ಔಚಿತ್ಯಪೂರ್ಣವಾಗಿದೆ. ಅದರ ಒಂದು

ನುಡಿ ಹೀಗಿದೆ.
ನಮ್ಮಪ್ಪ ರಂಗಯ್ಯ ಆಳಬೇಡವೊ ದೊಡ್ಡ
ಗುಮ್ಮ ಬಂದಿದೆ ಸುಮ್ಮನಿರು ಎನುತ||
ಅಮ್ಮಿಯನೀಯುತ ಅಮರರನಾಳ್ದ |
ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ

ಈ ಪದ್ಯದಿಂದ ದಾಸರು ತಾಯ್ತನದ ಅಕ್ಕರೆಯನ್ನು ಎಷ್ಟರಮಟ್ಟಿಗೆ ಅರಿತಿದ್ದರು ಎಂದು ವಿದಿತವಾಗುತ್ತದೆ. ಭಾಷೆ, ಪದಲಾಲಿತ್ಯ, ಪ್ರಾಸಜೋಡಣೆಯ ಓಟ ನೋಡಿದರೆ ತಾಯಿಯ ಮಾತೃ ವಾತ್ಸಲ್ಯದ ವ್ಯಾಖ್ಯಾನದಂತಿದೆ. ‘ರಮ್ಮಿಸಿ ರಮ್ಮಿಸಿ’ ಎನ್ನುವಲ್ಲಿ ಪದದ ದ್ವಿರುಕ್ತಿಯಿಂದ ಭಾವುಕರ ಮನಸ್ಸಿನ ಮೇಲೆ ಚಿತ್ರ ಅಚ್ಚೋತ್ತಿ ಹೃದಯಾಹ್ಲಾದವಾಗುತ್ತದೆ.

ಕರ್ನಾಟಕದ ಹರಿದಾಶ ಸಾಹಿತ್ಯದ ಶ್ರೀಕಾರ ಪುರುಷರಾದ ಶ್ರಿ ಪಾದರಾಜರ ಅಂಕಿತ ರಂಗವಿಠಲ. ಅವರ ಅಂಕಿತದಲ್ಲಿಯ ರಂಗ ಎಂಬ ಶಬ್ದ ಬಾಲಕೃಷ್ಣನಿಗೆ ಮೀಸಲಿದ್ದಂತೆ. ಈಗಿನ ಕಾಲದ ಪ್ರೀತಿಯ ಹೆಸರುಗಳಾದ ರಾಜು, ಪುಟ್ಟು, ರಾಮು ಮೊದಲಾದವುಗಳಂತೆ ಶ್ರೀಪಾದರಾಜರು ಬಾಲ ಕೃಷ್ಣನಿಗೆ ಇಟ್ಟ ಹೆಸರು ರಂಗ, ರಂಗಯ್ಯಾ, ಶ್ರೀಪಾದರಾಜರ ದೊರೆತ, ಪ್ರಕಟಗೊಂಡ ಕೃತಿಗಳಲ್ಲಿ ಸುಮಾರು ಹತ್ತು ಕೃತಿಗಳು ಕೃಷ್ಣನ ಬಾಲಲೀಲೆಗ್ಲೆ ಮೀಸಲಾಗಿದೆ. ಹೊರಗೆ ಹೋಗಿ ಆಟವಾಡಿ ಬಳಲಿಬಂದ ಕೃಷ್ಣನನ್ನು ಕುರಿತು

ಎಲ್ಲಾಡಿ ಬಂದ್ಯೋ ಎನ್ನ ರಂಗಯ್ಯಾ ನೀ
ನೆಲ್ಲಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ

ಈ ಕೀರ್ತನೆಯಲ್ಲಿ ಕೃಷ್ಣನಲ್ಲಿರುವ ಭಕ್ತಿಯಿಂದ ತಾಯಿ ಗೋಪಿಯ ಮೂಲಕ ಮಗುವಿಗೆ ಕೌತಕದಿಂದ ಕೇಳುತ್ತಿರುವಂತೆ ಚಿತ್ರಿಸಿದ್ದಾರೆ. ತಾಯಿಯಾದರೂ ಕೂಡಾ ಯಶೋದೆಗೆ ಆಗಾಗ ಆ ಮಹಿಮನ ಸರ್ವೋತ್ತಮತ್ವದ ಜ್ಞಾನ ಬರುತ್ತಿರುತ್ತದೆ.

ಯಶೋದೆಯೂ ಕೃಷ್ಣನ ಆಟಪಾಟಗಳನ್ನು ನೋಡಲು ಬಹಳ ಉತ್ಸುಕಳಾಗಿದ್ದಳೂ. ಮನೆಯಲ್ಲಿ ಅವನಿಗೆ ವಿವಿಧ ರೀತಿಯ ಭಕ್ಷ್ಯ, ಭೋಜ್ಯಗಳನ್ನು, ಉಡಿಗೆ ತೊಡಿಗೆಗಳನ್ನು ಅಣಿ ಮಾಡಿದ್ದಳು. ಕೃಷ್ಣನು ಮನೆ ಬಿಟ್ಟು ಹೊರಗೆ ಆಡಿ ಬರುವುದನ್ನು ಮಾತೃಹೃದಯ ಸಹಿಸದಾಗಿದೆ. ಮನೆಯಲ್ಲಿ ನೀಡಿದ ಚಿನಿಪಾಲು ಕುಡಿದು ಓರಗೆಯ ಮಕ್ಕಳೊಡನೆ ಮುದ್ದಾಗಿ ಮನೆಯಲ್ಲಾಡದೆ ಎಲ್ಲಾಡಿ ಬಂದೆ? ಎಂದು ಪ್ರಶ್ನಿಸುವಳು. ಏಕೆಂದರೆ ತಾಯಿಯ ಮಗುವಿನ ಆಟಪಾಟಗಳನ್ನು ನೋಡಿ ಕೃತಾರ್ಥಳೂ ಸಂಸುಷ್ಟಳೂ ಆಗಲಪೇಕ್ಷಿಸಿದ್ದಾಳೆ. ನಂತರ ಮಗು ಆಡಲು ಹೋದರೆ ಹೋಗಲಿ ಕನಿಷ್ಟಪಕ್ಷ ಹೇಳಿಯಾದರು ಹೋಗಬಾರದೆ, ಹಾಗೆ ಹೇಳದುದರಿಂದಾಗಿ ತಾಯಿಯ ನೆರಮನೆ, ಗುಡಿಗುಂಡಾರಗಳನ್ನು ಹುಡುಕುವಳು. ಸಹಜ ಪ್ರಪಂಚದಲ್ಲಿ ತಾಯಿಯ ತನ್ನ ಮಗು ಒಂದು ಕ್ಷಣ ಕಾಣದಿದ್ದಾರೆ ಎಷ್ಟು ಕಾತರದಿಂದ ಅಲ್ಲಿ ಇಲ್ಲಿ ಹುಡುಕುವಳೊ ಹಾಗೆ ಯಶೋದೆಯೂ ಬಾಲಕೃಷ್ಣನಿಗಾಗಿ ಅಷ್ಟದಿಕ್ಕುಗಳಲ್ಲಿ ಅರಸಿದಳು, ಅಲ್ಲೆಲ್ಲಿಯು ಕಾಣಾದಾದಾಗ ಅವರ ದೃಷ್ಟಿಯೇ ಕೆಟ್ಟು ಹೋಯಿತು. ಇನ್ನೆಷ್ಟು ಹೇಳಲಿ ನನ್ನ ಕಣ್ಣ ಮುಂದಾಡಬಾರ‍ದೆ? ಎಂದು ತಾಯಿಯು ತನ್ನ ಮಗನಿಗೆ ಪ್ರಶ್ನಿಸುವ ರೀತಿಯಲ್ಲಿ ಶ್ರೀಪಾದರಾಜರ ಕೀರ್ತನೆ ಮುಕ್ತಾಯವಾಗಿತ್ತದೆ. ಈಗಾಗಲೇ ಹೇಳಿದಂತೆ ಅವರ ಇನ್ನೊಂದು ಕೀರ್ತನೆ ಬಹಳ ಸುಂದರವಾಗಿದೆ. ಅದನ್ನು ಅವರ ಶಬ್ದಗಳಲ್ಲಿಯೇ ಇನ್ನೊಮ್ಮೆ ಕೇಳೋಣ.

ಎಲ್ಲಾಡಿ ಬಂದ್ಯೋ ನೀ ಹೇಳಯ್ಯಾ
ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ

ನೊಸಲಲಿ ಕಿರು ಬೆವರಿಟ್ಟಿದೆ ಅಲ್ಲಿ
ಹೊಸಪರಿ ಸುದ್ದಿಯು ಹುಟ್ಟಿದೆ
ಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ
ನಸುನಗೆ ಕೀರ್ತಿ ಹೆಚ್ಚಿದೆ

ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ
ಕೊರಳ ಪದಕವೆಲ್ಲಿ ನೀಗಿದೆ
ಸರತೆಲ್ಲ ಅವಳಲ್ಲಿ ಸಾಗಿದೆ ಆ
ತರುಣಿ ಮಹಿಮೆ ಹೀಗಾಗಿದೆ

ಕಳ್ಳತನವ ಹೀಗೆ ಮಾಡಿದೆ ನಿನ್ನ
ಸುಳ್ಳು ಕಡೆಗೆ ನಾ ನೋಡಿದೆ
ಎಲ್ಲರಿಗೂ ಠಕ್ಕು ಮಾಡಿದೆ
ಚೆಲುವ ರಂಗ ವಿಠಲ ನಗೆಗೀಡಾದೆ.

ಈ ಕೀರ್ತನೆಯಲ್ಲಿ ಸಕಲ ಗೋಪೀಜಾರ ಎಂದು ದೂರುವ ಕೃಷ್ಣನ ಬಗ್ಗೆ ಕಳ್ಳವಾರ್ತೆ ಗೋಕುಲವೆಲ್ಲಾ ಹರಡಿದ್ದು. ಅದರಿಂದ ಅವನ ತಾಯಿ ನೊಂದದ್ದು ಬಹುರಮ್ಯವಾಗಿ ಚಿತ್ರಿಸಿದ್ದಾರೆ. ಇಂತಹ ಕೀರ್ತನೆಗಳು ದಾಸಸಾಹಿತ್ಯದಲ್ಲಿ ಕಳಶಪ್ರಾಯವಾಗಿದೆ. ಗೋಕುಲದಲ್ಲಿ ಇಷ್ಟೆಲ್ಲ ವಾರ್ತೆ ಹುಟ್ಟಿರುವುದರಿಂದ ಚೆಲುವ ರಂಗ ವಿಠಲ ನಗೆಗೀಡಾದೆ ಎಂದು ಕೊನೆಗೆ ತಾಯಿಯು ಮಗನಿಗೆ ಇನ್ನು ಮುಂದಾದರೂ ಪಾಠಕಲಿಯಲಿ ಎಂಬ ಬುದ್ದಿವಾದದ ಹೇಳಿಕೆಯನ್ನು ಇಲ್ಲಿ ಊಹಿಸಬಹುದಾಗಿದೆ. ಇನ್ನೊಂದು ಕೀರ್ತನೆ,

ಕೇಳಿದ್ಯಾ ಕೌತುಕವನ್ನು ಕೇಳಿದ್ಯಾ
ಕೇಳಿದ್ಯಾ ಕೌತುಕವನ್ನು ನಾ
ಕೇಳಿದ್ಯಾ ನಿನಗಿಂತ ಮುನ್ನ ‘ಅಹಾ’
ಚಾಳಿಕಾರ ಕೃಷ್ಣ ಪೇಳವೆ ಮಧುರೆಗೆ
ಕೋಳಿ ಕೂಗದ ಮುನ್ನನಾಳೆ ಪಯಣವಂತೆ

ಈ ಕೀರ್ತನೆಯಲ್ಲಿ ಅಕ್ರೂರನು ಕೃಷ್ಣನನ್ನು ಕರೆಯಲು ಬಂದದ್ದು; ಕೃಷ್ಣನು ಹೋಗಲು ಸಿದ್ಧನಾಗಿರುವುದನ್ನು ಚಿತ್ರಿಸಲಾಗಿದೆ. ಈ ಕೀರ್ತನೆಯ ಪ್ರಾರಂಭವೇ ಬಹುಸ್ವಾರಸ್ಯವಾಗಿದೆ. ನಾಟಕೀಯ ಶೈಲಿಯಲ್ಲಿ ಪ್ರಾರಂಭವಾಗಿ, ಅಸಹಾಯಕ ಭಾವದಲ್ಲಿ ಮುಕ್ತಾಯವಾಗುತ್ತದೆ. ಕೃಷ್ಣನು ಮಧುರೆಗೆ ಹೋಗಿರುವ ಸುದ್ದಿ ಗೋಪಿಯರೆಲ್ಲರಿಗೆ ಕೌತುಕವಾಗಿದೆ. ಅವರು ಪರಸ್ಪರ ಹೇಳಿಕೋಳ್ಳುತ್ತಿರುವಾಗ ಅವರಲೊಬ್ಬಳು ನಾನು ನಿನಗಿಂತ ಮುಂಚೆ ಕೇಳಿದ್ದೇನೆ ಎಂದು ತನ್ನ ಹೆಗ್ಗಳಿಕೆಯನ್ನು ಸ್ಥಾಪಿಸುವುದನ್ನು ನಾವು ಕಾಣಬಹುದು. ಕೃಷ್ಣನು ಮಧುರೆಗೆ ‘ಪೇಳದೆ’ ಹೋಗುತ್ತಿರುವುದರಿಂದ ಅವನಿಗೆ ಚಾಳಿಗಾರ ಎಂದು ಸಂಬೋಧಿಸಿರುವುದು ಔಚಿತ್ಯಪೂರ್ಣವಾಗಿದೆ.

ಮುಂದಿನ ನುಡಿಗಳಲ್ಲಿ ಕರೆಯಲು ಬಂದವನು ಯಾರು, ಕೃಷ್ಣನು ಮಾವನ ಮನೆಗೆ ಹೋಗುತ್ತಿರುವುದು ಏಕೆ, ಅಲ್ಲಿಯ ಸ್ವಾಗತದ ವೈಭವಗಳನ್ನು ವರ್ಣಿಸಲಾಗಿದೆ. ಕೊನೆಯಲ್ಲಿ ಗೋಪಿಯೊಬ್ಬಳು ಕೃಷ್ಣನು ಮಾವನ ಮನೆಗೆ ಹೋಗುವುದು ತಮಗೆ ಆಗದ ಸುದ್ದಿ, ಅದನ್ನು ಎಷ್ಟೆಂದು ಹೇಳಲಿ ಎಂದು ಹತಾಶಳಾಗುವಳು.

ಗೋಕುಲದಲ್ಲಿ ಕೃಷ್ಣನು ನಡೆಸಿದ ಹಾವಳಿ ಅಷ್ಟಿಷ್ಟಲ್ಲ. ಹಾಲು ಮೊಸರು ಬೆಣ್ಣೆಗಳನ್ನು ಸೂರೆ ಮಾಡಿದ್ದು. ಗೋಪಿಯರು ಎಷ್ಟು ಸಿಟ್ಟುಮಾಡಿದರೂ ಲೆಕ್ಕಿಸಿದೆ ಅವರಿಗೆ ಕಿರುಕುಳ ಕೊಟ್ಟಿದ್ದೆ ಕೊಟ್ಟಿದ್ದು. ಅವನ ಕೀಟಲೆಗಳನ್ನು ಸಹಿಸದೆ ಗೋಪಿಯರು ಗುಂಪು ಗುಂಪಾಗಿ ಬಂದು ಯಶೋದೆಯಲ್ಲಿ ತಮ್ಮ ತಮ್ಮ ದೂರುಗಳನ್ನು ಹೇಳಿಕೊಳ್ಳುವರು. ಈ ಚಿತ್ರವನ್ನು ಶ್ರೀಪಾದರಾಜರು ಬಹುಮಾರ್ವಿಕವಾಗಿ ಚಿತ್ರಿಸಿದ್ದಾರೆ. ಗೋಪಿಯರು ಯಶೋದೆಯ ಇದಿರಿನಲ್ಲಿಯೇ ದೂರುವುದು ಒಂದು ಪರಿಯಾದರೆ, ಕೃಷ್ಣನು ಅದೆಲ್ಲವು ಸುಳ್ಳು ಎಂದು ವಾದಿಸುವುದು, ಸಾಕ್ಷಾದಾರಗಳಿಂದ ಸಮರ್ಥಿಸುವುದು ಇನ್ನೊಂದು ಪರಿ. ಬಾಲಗೋಪಾಲನ ಮುಗ್ಧ ಪ್ರಶ್ನೆಗಳಿಗೆ ಯಾರಿಂದಲೂ ಸರಿಯಾದ ಉತ್ತರ ಕೊಡಲಾಗದು. ಆ ಕೀರ್ತನೆಯ ಸವಿ ಹೀಗಿದೆ.

ಗೊಲ್ಲತಿಯರೆಲ್ಲ ಕೂಡಿ ಎನ್ನ ಮೇಲೆ ಇಲ್ಲದ ಸುದ್ದಿಪುಟ್ಟಿಸಿ
ಕಳ್ಳನೆಂದು ದೂರುತ್ತಾರೆ ಗೋಪಿ ಎನ್ನು ಕೊಲ್ಲಬೇಕೆಂದು ಬಗೆದು

ಹರಿವಿಯ ಹಾಲು ಕುಡಿಯಲು ಎನ್ನ ಹೊಟ್ಟೆ
ಕೆರೆಯೇನೆ ಹೇಳಮ್ಮಯ್ಯ
ಕರೆದು ಅಣ್ಣನ್ನ ಕೇಳಮ್ಮ ಉಂಟಾದರೆ
ಒರಳಿಗೆ ಕಟ್ಟಮ್ಮಯ್ಯ……………… ||೧||

ಮೀಸಲು ಬೆಣ್ಣೆಯನು ಮೆಲುವದು ಎನಗೆ
ದೋಷವಲ್ಲಮೇನಮ್ಮಯ್ಯ
ಆಸೆ ಮಾಡಿದರೆ ದೇವರು ಕಣ್ಣ
ಮೋಸದಿ ಕುಕ್ಕೂನಮ್ಮಯ್ಯ……….||೨||

ಅಟ್ಟವನೇರಿ ಹಿಡಿವುದು ಅದು ಎನಗೆ
ಕಷ್ಟವಲ್ಲವೆ ಹೇಳಮ್ಮಯ್ಯ ಬೂ
ಕೊಟ್ಟ ಹಾಲು ಕುಡಿಯಲಾರದೆ ನಾನು
ಬಟ್ಟಲೊಳಗಿಟ್ಟು ಪೋದೆನೆ…………||೩||

ಪುಂಡತನ ಮಾಡಲು ನಾನು ದೊಡ್ಡ
ಗಂಡಸೇನೆ ಹೇಳಮ್ಮಯ್ಯ ಎನ್ನ
ಕಂಡವರು ದೂರುತ್ತಾರೆ ಗೋಪಮ್ಮ ನಾನಿನ್ನ
ಕಂದನಲ್ಲವೆ ಅಮ್ಮಯ್ಯ……….. ||೪||

ಉಂಗುರದ ಕರದಿಂದ ಗೋಪಮ್ಮ ತನ್ನ
ಶೃಂಗಾರದ ಮಗನೆತ್ತಿ
ರಂಗವಿಠಲನ ಪಾಡಿ ಉಡುಪಿನ
ಉತ್ತುಂಗ ಕೃಷ್ಣನ ತೂಗಿದಳು………………||೫||

ಇಲ್ಲಿ ಗೋಪಿಯರೆಲ್ಲರು ಕೂಡಿ ಯಶೋದೆಯ ಮುಂದೆ ಕೃಷ್ಣನು, ಹರವಿಗಟ್ಟಲೆ ಹಾಲು ಕುಡಿದದ್ದು, ಮೀಸಲಿಟ್ಟ, ಬೆಣ್ಣೆಮೆದ್ದದ್ದು, ಅಟ್ಟವೇರಿ ಹಾಲು ಕುಡಿದದ್ದು ಹಾಗೂ ತಮಗೆಲ್ಲ ಪುಂಡತನ ಮಾಡಿದ ದೂರುಗಳ ವರದಿ ಒಪ್ಪಿಸಿ ಹೋದಮೇಲೆ, ತಾಯಿಯು ಕೃಷ್ಣನಿಗೆ ಅವುಗಳ ನ್ಯಾಯ ವಿಚಾರಣೆ ಮಾಡುವ ವಿಷಯದ ಮೇಲೆ ಕೀರ್ತನೆ ರಚಿತವಾಗಿದೆ. ಯಶೋದೆಯು ಗೋಪಿಯರು ಒಪ್ಪಿಸಿದ ದೂರಿನ ವರದಿಯಲ್ಲಿ ಒಂದೊಂದಾಗಿ ವಿಚಾರಿಸಿದರೆ ಕೃಷ್ಣನು ಕೊಡುವ ಉತ್ತರ ಸ್ವಾರಸ್ಯವಾಗಿಯೂ ತರ್ಕಬದ್ಧವಾಗಿಯೂ ಇದೆ. ನ್ಯಾಯಾಲಯದಲ್ಲಿಯ ವಾಗ್ವಾದದಂತೆ ಈ ಕೀರ್ತನೆ ರಚಿತವಾಗಿದೆ.

ಕೃಷ್ಣನ ಮೊದಲನೆ ವಾದ-ಹರವಿಯ ಹಾಲು ಕುಡಿಯಲು ನನ್ನ ಹೊಟ್ಟೆಯೇನು ಕೆರೆಯೆ? ಬೇಕಾದರೆ ಅಣ್ಣನ ಕೇಳು. ಇಲ್ಲಿ ಅಣ್ಣನೇ ಸಾಕ್ಷಿ, ಕುಡಿದಿದ್ದು ನಿಜವಾದರೆ ಶಿಕ್ಷೆ ಒರಳಿಗೆ ಕಟ್ಟು ಎನ್ನುವುದು. ಎರಡನೇವಾದ ಮೀಸಲು ಬೆಣ್ಣೆ ತಿನ್ನುವುದಕ್ಕೆ ದೇವರೇ ಸಾಕ್ಷಿ, ತಿಂದರೆ ದೇವರು ಕಣ್ಣು ಕಳೆಯಲಿ ಎನ್ನುವ ಶಿಕ್ಷೆ. ಅದಾವ ದೇವರು ಕಣ್ಣು ಕಳೆಯಬೇಕೋ ! ಮೂರನೇ ದೂರು-ಅಟ್ಟವನ್ನೇರಿ ಹಾಲು ಕದ್ದದ್ದು. ಅದಕ್ಕೆ ತಾಯಿ ಯಶೋದೆಯ ಸಾಕ್ಷಿ, ಏಕೆಂದರೆ ಅಟ್ಟವೇರುವುದು ಪುಟ್ಟ ಮಗುವಾದ ಕೃಷ್ಣನಿಗೆ ಕಷ್ಟ, ಮೇಲಾಗಿ ಯಶೋದೆ ಕೊಟ್ಟ ಬಟ್ಟಲು ಹಾಲಿನಲ್ಲಿಯೇ ಕುಡಿದು ಉಳಿಸಿ ಹೋದವನಿಗೆ ನೆರೆಮನೆಯ ಅಟ್ಟದ ಮೇಲಿನ ಹಾಲು ಕದ್ದು ಕುಡಿಯುವ ಅವಶ್ಯಕತೆಯಾದರು ಎಲ್ಲಿದೆ. ಕೊನೆಯ ದೂರು ಎಂದರೆ, ಸಕಲ ಗೋಪಿ ಜಾರತ್ವ, ಅವರೆಲ್ಲರ ಮಾನಹಾನಿ ಮಾಡಿದ ಪುಂಡ ಎಂಬುದು. ಅದಕ್ಕೆ ಕೃಷ್ಣನ ಉತ್ತರ ಬಹುಸ್ವಾರಸ್ಯವಾಗಿದೆ. ನನ್ನನ್ನು ಪುಂಡನೆಂದು ದೂರಲು ನಾನೇನು ದೊಡ್ಡಗಂಡೆ? ನಿನ್ನಯ್ಯ ಪುಟ್ಟ ಕಂದನಲ್ಲವೆ? ನನ್ನ ಗುಣ ನಿನಗೆ ಗೊತ್ತಿಲ್ಲವೆ? ಎಂದು ತಾಯಿಗೆ ಬಹು ದೈನ್ಯದಿಂದ ಬೇಡಿದಂತೆ ವಾದಿಸುವನು. ಗೋಪಿಯರೆಲ್ಲರು ಸೇರಿ ತನ್ನನ್ನು ಹೊಡೆಯುವ ಉಪಾಯದಿಂದ ಬಂದು ನಿನ್ನ ಮುಂದೆ ದೂರು ಹೇಳುತ್ತಿರುವರು. ಅದೆಲ್ಲ ಸುಳ್ಳು ಎಂದು ಸಾಧಾರವಾಗಿ ಸಮರ್ಧಿಸಿ ಗೆಲ್ಲುವನು. ಮಗನ ಮಾತು ಸತ್ಯ ಎಂದು ತಿಳಿದ ಮೇಲೆ ಯಶೋದೆಯೂ ಅವನನ್ನು ಎತ್ತಿ ಮುದ್ದಾಡಿದಳು. ತಾಯಿಗೆ ಮಗನ ಮೇಲೆ ಮಮತೆ ಇದ್ದಾಗ್ಯೂ ಎಷ್ಟು ಶಿಕ್ಷೆಯಲ್ಲಿಟ್ಟಿದ್ದಳು. ಅವಳ ಸಂಯಮ ಹಾಗೂ ಆದರ್ಶ ಅನುಕರಣೀಯವಾಗಿದೆ. ಯಶೋದೆಯು ಅಷ್ಟು ಶಿಕ್ಷೆಯಲ್ಲಿಟ್ಟಿದ್ದರೂ ಅವಳ ಕಣ್ಣು ತಪ್ಪಿಸಿ ಅವನೆಷ್ಟು ಸ್ವತಂತ್ರ ತುಂಟನಿದ್ದನೆಂಬ ಹಲವಾರು ವಿಷಯಗಳು ನಮಗೆ ದಾಸರ ಕೃತಿಗಳಲ್ಲಿ ತಿಳಿದುಬರುತ್ತದೆ. ತಾಯಿ ಮಕ್ಕಳ ಮಾತೃ ವಾತ್ಸಲ್ಯದಲ್ಲಿ ಕೋಪಕ್ಕೆ ತಾವಿಲ್ಲ! ಅದು ಬಿಸಿಲಿಗೆ ಮಂಜು ಕರಗಿದಂತೆ ಗಾಢವಾದ ವಾತ್ಸಲ್ಯ ಪ್ರೇಮದಿಂದ ಕೂಡಲೆ ಕರಗಿ ನೀರಾಗಿ ಬಿಡುತ್ತದೆ.

“ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೊ”

ಈ ಕೀರ್ತನೆಯಲ್ಲಿ ದೃಷ್ಟಿತಾಕುವುದೆಂಬ ಭಯದಿಂದ ಮಾತೃ ಹೃದಯದಲ್ಲಿ ವ್ಯಕ್ತವಾದ ಪ್ರೀತಿ ಏಳುನುಡಿಗಳ ಶಬ್ದ ಮೂಡಿಬಂದಿದೆ.

“ಬಾರೋ ನಮ್ಮ ಮನೆಗೆ ಗೋಪಾಲ ಕೃಷ್ಣ”

ಗೋಪಾಲನ ಹಾವಳಿ ಸಹಿಸಲಾರದೆ ದೂರು ಹೇಳುವ ಗೋಪಿಯರು ಹಲವರಿದ್ದಾರೆ. ಅವನ ಆಗಮನಕ್ಕಾಗಿಯೇ ಸದಾ ಎದುರು ನೋಡುವವರು ಹಲವರುಂಟು. ಅವರೆಲ್ಲ ಬಂದು “ಬಾರೋ ನಮ್ಮ ಮನೆಗೆ” ಎಂದು ಆಹ್ವಾನ ಮಾಡುವ ಕೀರ್ತನೆಯು ಬಹು ಸೊಗಸಾಗಿದೆ. ಅವರು ಅವನಿಗೆ ‘ಮೊರನೆಲ್ಲ ಸವಿದ ಕೃಷ್ಣ ಅಂಗನೆಯರ ವ್ರತಭಂಗ ಮಾಡಿದ ರಂಗವಿಠಲ’ ಎಂದು ಸಂಬೋಧಿಸಿ ಕರೆಯುವುದರಿಂದ ಅವರು ಇಷ್ಟೆಲ್ಲಾ ಕೋಟಲೆಗಳನ್ನು ಸಹಿಸಿಯೂ ಅವನನ್ನು ಬಿಟ್ಟು ಒಂದು ಕ್ಷಣವೂ ಇರಲೊಲ್ಲರು, ಮನಸ್ಸೇಬಾರದೆಂದು ಬಹು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. ಶ್ರೀಪಾದರಾಜರಿಗೆ -ತಾವು, ಗೋಪಿಯರು, ಯಶೋದೆ ಮೊದಲಾದವರು ಕೃಷ್ಣನನ್ನು ಸ್ತುತಿಸುತ್ತ ಆಡಿಸಿರುವುದು ಸಾಲದೇನೋ ಎಂಬಂತೆ ಗೆಳೆಯನೊಬ್ಬನ ಪಾತ್ರ ಸೃಷ್ಟಿಸಿ ಅವನಿಂದ ಅವರಿಬ್ಬರ ಬಾಲ್ಯದ ಸವಿ ನೆನಪುಗಳನ್ನು ಓದುಗರ ಗಮನಕ್ಕೆ ತರುತ್ತಾರೆ.

“ಮರೆತೆಯೇನೋ ರಂಗಾ ಮಂಗಳಾಂಗ
ತುರುಕರು ಕಾಯುವಲ್ಲಿ ತೊಂಡನಾಗಿದ್ದೆನ್ನ”

ಇಲ್ಲಿ ಬಬ್ಬ ಗೆಳೆಯನಿಂದ ಅವರಿಬ್ಬರೂ ಚಿಕ್ಕಂದಿನಲ್ಲಿ ಹಸು ಕಾಯುವಾಗ ಆಡಿದ ಆಟ, ಪಾಡಿ ಕಂಡುಂಡ ರಸನಿಮಿಷಗಳನ್ನು ನೆನಪಿಗೆ ತಂದು ಕೃಷ್ಣನಿಗೆ ತನ್ನ ಪರಿಚಯ ಮಾಡಿಕೊಡುವಂತಿದೆ.

“ಯಾಕೆ ಇಂಥ ದುಡುಕು ಕೃಷ್ಣಯ್ಯಾ ನಿನ
ಗೇಕೆ ಇಂಥ ದುಡುಕು
ಪಾಕಶಾಸನ ವಂದ್ಯ ಪೋರತನಗಳು
ಸಾಕು ಸಾಕಯ್ಯ ಕೃಷ್ಣ |

ಇದರಲ್ಲಿ ಹುಡುಗಾಟದ ಮಗುವಿಗೆ ದುಡುಕುತನವನ್ನು ಬಿಡಲು ತಾಯಿ ಬುದ್ಧಿ ಹೇಳಿದ್ದು ಕಂಡುಬರುತ್ತದೆ. ಈ ಕೀರ್ತನೆಯಲ್ಲಿ ಬಾಲಕೃಷ್ಣನ ಬಾಲಲೀಲೆಗಳ ಸರಸ ಸಮನ್ವಯವನ್ನು ಬಗೆದು ಚಿತ್ರಿಸಿದ್ದಾರೆ. ಮೊಸರು ಕದ್ದದ್ದು, ಪೂತನಾವಧೆ, ಕಂಸ ಸಂಹಾರ, ಯಮಳಾರ್ಜುನ ಬಂಧ ವಿಮೋಚನ, ಚಾಣೂರ ಮುಷ್ಟಿಕರವಧೆ ಮೊದಲಾದವುಗಳನ್ನು ಬಾಲಕೃಷ್ಣನ ಲೀಲೆಗಳೊಂದಿಗೆ ಸಮನ್ವಯಗೊಳಿಸಿದ್ದಾರೆ. ಒಟ್ಟಿನಲ್ಲಿ ದಾಸಸಾಹಿತ್ಯದಲ್ಲಿ ವಾತ್ಸಲ್ಯ ಭಾವದ ಕೀರ್ತನೆಗಳು ಆರಂಭದಲ್ಲಿ ಮೂಡಿಬಂದಿದೆ. ಮುಂದಿನ ಹರಿದಾಸ ಪೀಳಿಗೆಗೆ ಪ್ರೋತ್ಸಾಹದ ಕೀರ್ತನೆಗಳಾದವು. ವಾತ್ಸಲ್ಯ ಭಾವದ ಮೇಲೆ ನೂರಾರು ಕೀರ್ತನೆಗಳನ್ನು ರಚಿಸಿದ ಕೀರ್ತಿ ಪುರಂದರದಾಸರದಾದರೆ ಕೃಷ್ಣನ, ಬಾಲಲೀಲೆಯನ್ನೊಳಗೊಂಡ ಭಾಗವತ ದಶಮ ಸ್ಕಂಧ ಪೂರ್ವಾರ್ಧವನ್ನು ಕೀರ್ತನರೂಪದಲ್ಲಿ ಕನ್ನಡಿಸಿದ ಹಿರಿಮೆ ಪ್ರಸನ್ನವೆಂಕಟದಾಸರದಾಗಿದೆ. ಅವರೆಲ್ಲರ ರಚನೆಗಳಲಿ ಬಾಲಭಾಷೆ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೀರ್ತನೆಗಳಲ್ಲಿ ‘ಏನು ಸುಕೃತವ ಮಾಡಿದಳೂ’, ‘ಅಮ್ಮ’, ಸಿಕ್ಕಿದನೆಲೆ ಜಾಣೆ, ಛಿನಿನ್ನ ಮೊರೆ ಮೇಲೆ, ಚಿನ್ನಾ, ಗೋಪಾಲ ಏನು ಬೇಕು ಬಾರಯ್ಯರಂಗ, ಇಂತಹ ಸಂಬೋಧನೆಗಳು ಸುಂದರವಾಗಿ ಅಭಿವ್ಯಕ್ತಗೊಂಡಿವೆ. ಅವು ಕೀರ್ತನೆಗಳಲ್ಲಿ ಬಳಕೆಯಾಗಿ ಒಂದು ಆತ್ಮೀಯ ಸನ್ನಿವೇಶವನ್ನು ಹಾಗೂ ಭಾವನಾತ್ಮಕ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಕೀರ್ತನೆಗಳಲ್ಲಿಯ ಬಾಲಭಾಷೆಯು ಸರಳ ಮತ್ತು ನೇರವಾಗಿ ಬಳಕೆಯಾಗಿದೆ. ಪ್ರಾಸಗಳಲ್ಲಿ ಯಾವುದೇ ರೀತಿಯ ತೊಡಕ್ಕಿಲ್ಲ. ಬಾಲ ಭಾಷೆಯ ಕೀರ್ತನೆಗಳಲ್ಲಿಯ ಲಯ, ನಾದ, ಗುಣ, ದ್ರವ್ಯ, ಮನೋಧರ್ಮ ಇವೆಲ್ಲಕ್ಕೂ ವಿಶಿಷ್ಟವಾದ ಸಂವೇದನೆಯುಂಟು. ಅವು ತನ್ನದೇ ಆದ ಅಂತಸ್ಸತ್ವದಿಂದ, ಅನನ್ಯತೆಯಿಂದ ಕೂಡಿವೆ. ಒಟ್ಟಿನಲ್ಲಿ ಬಲಭಾಷೆಯನ್ನೊಳಗೊಂಡ ಶ್ರೀ ಕೃಷ್ಣಲೀಲೆಯ ಕೀರ್ತನೆಗಳು ಮಕ್ಕಳ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

 

[1]* ಇಲ್ಲಿ ಉಕ್ತವಾದ ಕೀರ್ತನೆಗಳನ್ನು ‘ಸಾವಿರ ಕೀರ್ತನೆಗಳು ‘ (೨೦೦೦) ಸಂ. ಎ.ವಿ. ನಾವಡ ಮತ್ತು ಗಾಯತ್ರೀ ನಾವಡ, ಕ.ವಿ.ವಿ. ಹಂಪಿ ‘ಕೀರ್ತನ ಮಂಜರಿ’ (೧೯೮೫) ಸಂ. ವಿ.ಎ. ಜೋಶಿ ಸಮಾಜ ಪುಸ್ತಕಾಲಯ, ಧಾರವಾಡ ಈ ಸಂಕಲನಗಳಿಂದ ಆಯ್ದುಕೊಳ್ಳಲಾಗಿದೆ.