ಗು ಅಥವಾ ವ್ಯಕ್ತಿಯ ಜ್ಞಾನ ಸಂಪಾದನೆಗೆ ಭಾಷೆ ಮಹತ್ವ ಪೂರ್ಣ ಕಾರ್ಯ ಮಾಡುತ್ತದೆ. ಮಗುವಿನ ಬೌದ್ಧಿಕ ವಿಕಾಸಕ್ಕೆ ಭಾಷೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಮನುಷ್ಯನ ಚಿಂತನೆ, ಕಲ್ಪನೆ, ಭಾವನೆ ಮತ್ತು ಜ್ಞಾನಗಳಿಗೆ ಭಾಷೆಯೇ ಮಾಧ್ಯಮವಾಗಿದೆ. ಭಾಷಾಕಲಿಕೆಯ ಪ್ರಕ್ರಿಯೆಯು ಬೇರೆ ಬೇರೆ ಮಕ್ಕಳಲ್ಲಿ ಬೇರೆ ಬೇರೆ ತೆರನಾಗಿದ್ದಾರೂ ಭಾಷಾ ಕಲಿಕೆಯ ಸ್ತರಗಳು ಸಾಮಾನ್ಯವಾಗಿ ಎಲ್ಲ ಮಕ್ಕಳಲ್ಲಿ ಒಂದೇ ಆಗಿರುತ್ತದೆ. ಮಗುವಿನ ಭಾಷಾಕಲಿಕೆಯ ವಿಕಾಸ ಕ್ರಮವನ್ನು ಡಾ. ಎಚ್.ಎಂ.ಮಹೇಶ್ವರಯ್ಯನವರು ಎಂಟು ಹಂತಗಳಲ್ಲಿ ವಿಂಗಡಿಸಿದ್ದಾರೆ.[1] ಭಾಷಾ ಕಲಿಕೆಯಲ್ಲಿ ಅನುಕರಣೆಗೆ ಪ್ರಮುಖ ಸ್ಥಾನವಿದೆ. ಅನುಕರಣೆ ಇಲ್ಲದಿದ್ದರೆ ಭಾಷಾಕಲಿಕೆ ಅಸಾಧ್ಯ. ಧ್ವನಿಗಳ ಪುನರಾವರ್ತನೆ, ತನಗೆ ಸ್ವಗತ ಸಂಭಾಷಣೆಗೆ ತೊಡಗುವುದು ಇವು ಕಲಿಕೆಯಲ್ಲಿ ಮಹತ್ವದ ಪಾತ್ರವಹಿಸುವವು. ಹೆಚ್.ಆರ್. ಭಾಟಿಯಾರವರು ಹೇಳುವಂತೆ ಮಗು ಶೈಶವಾವಸ್ಥೆ ಮತ್ತು ಬಾಲ್ಯಾವಸ್ಥೆಯಲ್ಲಿದ್ದಾಗ ಸರಿ-ತಪ್ಪುಗಳ ಭೇದ ಗೊತ್ತಾಗುವುದಿಲ್ಲ. ತಂದೆ-ತಾಯಿ ಮಾತನ್ನು ಅನುಕರಿಸುತ್ತದೆ. ಆ ಹಂತದಲ್ಲಿ ಭಾಷಾ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಇತರರಾಡುವ ಮಾತುಗಳನ್ನು ತನ್ನಷ್ಟಕ್ಕೆ ತಾನೆ ಅನುಕರಿಸುತ್ತದೆ.[2] ಮಗು ಅನುಕರಣೆಯಿಂದಹಾಗೂ ಪ್ರಯತ್ನ ದೋಷವಿಧಾನದಿಂದ ಮಾತನಾಡಲು ಕಲಿಯುತ್ತದೆ.

ಬಾಲ್ಯಾವಸ್ಥೆಯು ೬ನೆಯ ವರ್ಷದಿಂದ ಪ್ರಾರಂಭವಾಗುತ್ತದೆ (೬ ರಿಂದ ೧೪ನೆಯ ವಯಸ್ಸು) ಅಥವಾ ಮಗು ಶಾಲೆಗೆ ಸೇರಿದಾಗಿನಿಂದ ಈ ಅವಧಿ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಮಗುವಿಗೆತಿಳಿವಳಿಕೆ ಶುರುವಾಗುತ್ತದೆ. ಆದ್ದರಿಂದ ಮಗುವಿನ ಬಾಳಿನಲ್ಲಿ ಇದೊಂದು ಮೈಲಿಗಲ್ಲು. ಶಾಲೆಗೆ ಕಾಲಿಟ್ಟಾಗ ಪರಿಸರ ಬದಲಾವಣೆಯಿಂದ ಅವನ ವರ್ತನೆಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗುತ್ತವೆ. ಬಾಲ್ಯಾವಸ್ಥೆಯಲ್ಲಿ ಮಗು ಮಾನಸಿಕವಾಗಿ ಬೆಳವಣಿಗೆಯಾಗಿರುತ್ತದೆ. ಯಾವುದಾದರೂ ಒಂದು ಇಂದ್ರಿಯದಿಂದ ಬರುವ ಸಂವೇದನೆಯಿಂದ ಕೆಲವು ವಸ್ತುಗಳ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುತ್ತದೆ. ದೃಶ್ಯ, ಶಬ್ದ, ರುಚಿ, ವಾಸನೆ ಹಾಗೂ ಸ್ಪರ್ಶಗಳ ಪ್ರತ್ಯಕ್ಷಾನುಭವದಿಂದ ಮಕ್ಕಳು ಬಾಹ್ಯ ಪರಿಸರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮಗುವಿನ ಬೆಳವಣಿಗೆ ಮುಂದುವರೆದಂತೆ ಹೆಚ್ಚು ಹೆಚ್ಚು ಸ್ವರ್ಶಾನುಭವಗಳು ದೊರೆತಂತೆ ಭಾವನೆಗಳು ರೂಪುಗೊಳ್ಳುತ್ತವೆ. ಪದಗಳ ಪರಿಚಯ, ಅರ್ಥ ವ್ಯತ್ಯಾಸದ ತಿಳಿವಳಿಕೆ ಹೆಚ್ಚಿದಂತೆಲ್ಲ ವಸ್ತುಗಳ ಬದಲಾಗಿ ಪದಗಳನ್ನು ಕೇಳಿ ಇಲ್ಲವೆ ತಿಳಿದು ಸ್ವರಿಸಿಕೊಂಡಾಗ ಭಾವನೆಗಳು ಪರಿಚಯಕ್ಕೆ ಬರುತ್ತವೆ. ಬಾಲ್ಯಾವಸ್ಥೆಯಲ್ಲಿ ಸಂವೇದನೆಗಳಿಗೆ ಕೂಡಲೆ ನಿಶ್ಚಿತ ಅರ್ಥವಾಗುವುದಿಲ್ಲ. ಮಗುವಿಗೆ ಪ್ರತ್ಯಕ್ಷಾನುಭವ ಬೆಳೆದಂತೆ ಸಂವೇದನೆಗಳಿಗೆ ನಿಶ್ಚಿತ ಅರ್ಥವುಂಟಾಗುತ್ತದೆ.

ಶಾಲೆಗಳಲ್ಲಿ ಮಕ್ಕಳು ಅನೇಕ ಸಂಗತಿಗಳನ್ನು ಪದಗಳ ಮೂಲಕವೇ ಕಲಿಯುತ್ತಾರೆ. ಈ ಪದಗಳು ಒಳಗೊಂಡಿರುವ ಭಾವನೆಗಳ ಅರ್ಥ ಎಷ್ಟು ಸ್ಪಷ್ಟವಾಗಿರುತ್ತದೆಯೋ ಅಷ್ಟೇ ಚೆನ್ನಾಗಿ ಕಲಿವು ಸಿದ್ದಿಸುತ್ತದೆ. ಶಾಲೆಯಲ್ಲಿ ಮಕ್ಕಳು ವಿಷಯಗಳನ್ನು ಕಲಿಯಲು ಆಲೋಚಿಸಬೇಕು. ಈ ಕಾರ್ಯದಲ್ಲಿ ಭಾಗಾವಹಿಸುವ ವಸ್ತುಗಳ, ಭಾವನೆಗಳ ಅರ್ಥ ಸ್ಪಷ್ಟವಾಗಬೇಕಾದರೆ ಪದಗಳ ಪರಿಚಯ ಅಗತ್ಯ. ಪದಸಂಪತ್ತು ಹೆಚ್ಚಾದಷ್ಟು ಆಲೋಚನೆ ತೀವ್ರವಾಗಿ ನಡೆಯುತ್ತದೆ. ಆದ್ದರಿಂದ ಪ್ರಾಥಮಿಕ ಶಾಲೆಗಳಲ್ಲಿ ಪದಸಂಪತ್ತು ಹೆಚ್ಚು ಹೆಚ್ಚು ಬೆಳೆಯುವಂತೆ ವಿವಿಧ ಕಾರ್ಯಗಳನ್ನು (ಭಾಷಣ, ಪ್ರಬಂಧ ಸ್ಪರ್ಧೆ, ಇಂತಹ ಭಾಷಿಕ ಚಟುವಟಿಕೆಗಳನ್ನು ಏರ್ಪಡಿಸುವುದು) ರೂಪಿಸಬೇಕು. ಮಕ್ಕಳ ಪೂರ್ವಾನುಭವಕ್ಕೆ ಹೆಚ್ಚಿನ ಆದ್ಯತೆ ಕೊಡುವುದರಿಂದ ಹೊಸ ಜ್ಞಾನ ಹಳೆಯ ಅನುಭವದೊಂದಿಗೆ ಹೆಣೆದುಕೊಂಡು ರೂಪುತಾಳುತ್ತದೆ. ಇದು ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಅನ್ವಯಿಸುತ್ತದೆ. ಅದಕ್ಕಾಗಿ ಮಕ್ಕಳ ಪೂರ್ವಾನುಭವವನ್ನು ಪ್ರಚೋದಿಸಿ ಹೊಸ ಅನುಭವಗಳನ್ನು ಸ್ವೀಕರಿಸುವಂತೆ ಮಕ್ಕಳ ಮನಸ್ಸನ್ನು ಕಲಿಕೆಗೆ ಸಿದ್ಧಗೊಳಿಸಬೇಕು. ಕೆಲವೊಮ್ಮೆ ಶಬ್ದಗಳ ಮೂಲಕ ಮಾಡುವ ವಿವರಣೆಗಿಂತ ಆ ಕೃತಿಯ ಮೂಲಕ ಮಾಡುವ ವಿವರಣೆ ಭಾಷಾ ಕಲಿಕೆಯ ದೃಷ್ಟಿಯಿಂದ ಹೆಚ್ಚು ತಿಳಿವಳಿಕೆ ಮೂಡಿಸುತ್ತದೆ. ಹೀಗಾಗಿ ಪ್ರತ್ಯಕ್ಷಾನುಭವದಿಂದ ಮಕ್ಕಳು ಬಾಹ್ಯ ಪರಿಸರವನ್ನು ಗ್ರಹಿಸಲು ಹಾಗೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ[3]. ಈ ಹಿನ್ನೆಲೆಯಲ್ಲಿ ಕೀರ್ತನೆಗಳಲ್ಲಿ ಉಕ್ತವಾದ ಬಾಲಭಾಷೆಯ ಸ್ವರೂಪವನ್ನು ಈ ಅಧ್ಯಾಯದಲ್ಲಿ ವಿವೇಚಿಸಲಾಗಿದೆ.

I

‘ಶ್ರೀ ಕೃಷ್ಣಲೀಲೆ’ ಎಂಬ ಭಾಗದ ಕೀರ್ತನೆಗಳಲ್ಲಿ ದಾಸರ ಭಕ್ತಿ, ನಿಷ್ಠೆ ಸ್ಪುಟವಾಗಿ ಮೂಡಿದೆ. ಭಕ್ತಿಮಾರ್ಗದಲ್ಲಿ ಕೃಷ್ಣನನ್ನು ಕುರಿತು ಭಜನೆ, ಕೀರ್ತನೆ, ಸ್ಮರಣೆಗಳಿಗೆ ವಿಶೇಷ ಮಹತ್ವವಿರುತ್ತದೆ. ಇಲ್ಲಿಯ ವಾತ್ಸಲ್ಯಭಾವ ಕಣ್ಣು ಕುಕ್ಕುತ್ತದೆ. ಭಕ್ತನು ದೇವರೊಡನೆ ತಾಯಿ ಮಗುವಿನ ಸಂಬಂಧ ಕಲ್ಪಿಸಿಕೊಳ್ಳುವನು. ದಾಸ್ಯ ಹಾಗೂ ಸಖ್ಯ ಭಾವಗಳಲ್ಲಿ ಇಲ್ಲದ ನಿಷ್ಕಾಮತೆ ಇಲ್ಲಿದೆ. ಕೌಸಲ್ಯೆ ಶ್ರೀರಾಮನನ್ನು ಕಂಡದ್ದು ಈ ಭಾವದಿಂದ. ಯಶೋಧೆ ಬಾಲಕೃಷ್ಣನಲ್ಲಿ ತೋರಿದ ಪ್ರೀತಿ ವಾತ್ಸಲ್ಯ ಅಸಾಧಾರಣ, ಅನುಕರಣೀಯ, ರಾಧೆ-ಕೃಷ್ಣರ ಅಮರ ಪ್ರೇಮದ ಸವಿಯೂ ಇಲ್ಲಿದೆ. ಗೋಪಿಕಾ ಸ್ತ್ರೀಯರೊಡನೆ ಕೃಷ್ಣ ನಡೆಸಿದ ಕಣ್ಣು ಮುಚ್ಚಾಲೆ ಆಟದ ನೋಟವೂ ದಾಸರ ಗಮನ ಸೆಳೆದಿದೆ. ಶ್ರೀ ಕೃಷ್ಣನ ಹಲವಾರು ಬಾಲಲೀಲೆಗಳನ್ನು ದಾಸರು ನೆನೆದು ಕೊಂಡ ಬಗೆ ಮನಗಂಬುವಂತಿದೆ. ಆ ಸಂದರ್ಭದಲ್ಲಿ ಕೃಷ್ಣನನ್ನು ಸಂಬೋಧಿಸುವಾಗ ಬಾಲಭಾಷೆ ಲೀಲಾಜಾಲವಾಗಿ, ಮುಕ್ತವಾಗಿ ಹರಿದಿದೆ. ತಾಯಿಯ ಶೋಧೆಯ ಪುತ್ರ ವಾತ್ಸಲ್ಯ ಹೀಗಿದೆ.

ಎಲ್ಲಾಡಿ ಬಂದ್ಯೋ ಮುದ್ದುರಂಗಯ್ಯ ನೀ ||ಪ||
ನೆಲ್ಲಾಡಿ ಬಂದ್ಯೋ ಕೃಷ್ಣಯ್ಯ
ಎಲ್ಲಾಡಿ ಬಂದ್ಯೋ ಎನ್ನ ಕಣ್ಣ ಮುದ್ದಾಡದೆ ||ಅ.ಪ||

ಆಲಯದೊಳಗೆ ನೀನಾಡದೆ ಬೆಣ್ಣೆ
ಪಾಲು ಸಕ್ಕರೆಯ ನೀ ಮೆಲ್ಲದೆ, ಚಿಕ್ಕ
ಬಾಲರೊಡಗೂಡಿ ಆಡದೆ
ಬಾಲಯ್ಯ ನೀನೆನ್ನ ಕಣ್ಣಮುಂದಾಡದೆ ||೧||

ಪದಕ ರತ್ನವ ನೀನೊಲ್ಲದೆ, ದಿವ್ಯ
ಮಧುರ ಭಾಷಣದ ನೀನಾಡದೆ
ಸುದತಿಯರೊಡಗೂಡ್ಯಾಡದೆ, ಮುದ್ದು
ಚದುರ ಕೃಷ್ಣಯ್ಯ ಎನ್ನ ಕಣ್ಣ ಮುಂದಾಡದೆ ||೨||

ಅಷ್ಟ ದಿಕ್ಕಿನಲ್ಲಿ ಅರಸಿ ಕಾಣದೆ, ಬಲು
ದೃಷ್ಟಿಗೆಟ್ಟಿತೊ ನಿನ್ನ ನೋಡದೆ, ನಾ
ನೆಷ್ಟು ಹೇಳಲು ಕೇಳಬಾರದೆ, ರಂಗ
ವಿಠಲ ನೀನೆನ್ನ ಕಣ್ಣ ಮುಂದಾಡದೆ ||೩||

ಶ್ರೀ ಪಾದರಾಯರ ಈ ಕೀರ್ತನೆಯಲ್ಲಿ ಯಶೋಧೆಯ ಪುತ್ರವಾತ್ಸಲ್ಯದ ಭಾವ ಕೆನೆಗಟ್ಟಿದೆ. ಕೃಷ್ಣ ಆಟವಾಡಿ ಬಂದಾಗ ನನ್ನ ಕಣ್ಣಮುಂದೆ ಆಡಬೇಕೆಂದು ಪ್ರೀತಿಯಿಂದ ಹೇಳುತ್ತಾಳೆ. ಮನೆಯಲ್ಲಿ ಬೆಣ್ಣೆ, ಹಾಲು ಸಕ್ಕರೆ ತಿನ್ನುತ್ತಾ ಕಣ್ಣ ಮುಂದೆಯೇ ಆಟವಾಡಬೇಕೆಂದೂ ಹೇಳುತ್ತಾಳೆ. ತಾಯಿಯ ಹಂಬಲ, ಪುತ್ರ ವಾತ್ಸಲ್ಯ ಸೊಗಸಾಗಿ ಬಂದಿದೆ ‘ಕೃಷ್ಣಯ್ಯ, ‘ಮುದ್ದು ರಂಗಯ್ಯ’, ‘ಎಲ್ಲಾಡಿ ಬಂದ್ಯೋ’ ಇಂತಹ ವಾತ್ಸಲ್ಯಭರಿತ ಸಂಬೋಧನೆಗಳು ಅರ್ಥಪೂರ್ಣವಾಗಿ ಬಳಕೆಯಾಗಿವೆ. ಮುಗ್ದಮಗು ತಾಯಿಗೆ ಹೆದರಿ, ಹೇಳಿದಂತೆ ಕೇಳುವುದು ವಾತ್ಸಲ್ಯದ ಇನ್ನೊಂದು ಮುಖ. ಪುರಂದರದಾಸರ ಒಂದು ಕೀರ್ತನೆಯಲ್ಲಿ ಆ ಭಾವ ಸೊಗಸಾಗಿ ಚಿತ್ರಿತವಾಗಿದೆ.

ಗುಮ್ಮನ ಕರೆಯದಿರೆ ಅಮ್ಮ ನೀನು
ಗುಮ್ಮನ ಕರೆಯದಿರೆ ||ಪ||
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ ||ಅ.ಪ||

ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣುಮುಚ್ಚುವುದಿಲ್ಲವೆ
ಚಿಣ್ಣರ ಬಡೆಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ ||೧||

ಬಾವಿಗೆ ಪೋಗೆ ಕಾಣೆ, ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೊಡೆ, ಕರುಗಳ ಬಿಡೆ, ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ ||೨||

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆಯ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ ||೩||

ಯಶೋದೆ ಪ್ರೀತಿಪೂರ್ವಕವಾಗಿ ಮಗನನ್ನು ಬೆದರಿಸಿದಾಗ ಆಗ ಕೃಷ್ಣನು ಇನ್ನು ಮೇಲೆ ಹಠ ಮಾಡುವುದಿಲ್ಲವೆಂದು ತಾಯಿಯ ಮುಂದೆ ಪ್ರಾರ್ಥಿಸುತ್ತಾನೆ. ಆತನ ದೈನ್ಯತೆಯ ಹಿಂದೆ ಬಾಲಭಾಷೆ ಕಣ್ಮುಂದೆ ಕಟ್ಟಿದಂತೆ ಬಳಕೆಯಾಗಿದೆ. ‘ಗುಮ್ಮನ ಕರೆಯದಿರೆ’ ಎಂದಾಗ ಮಗುವಿನ ಅಂತರಂಗದಲ್ಲಿಯ ತಳಮಳ ಭಾಷೆಯ ಮೂಲಕ ಅಭಿವ್ಯಕ್ತವಾಗಿದೆ. ಭಾವನಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಒಂದುಬಗೆಯ ಚಿತ್ರಕ ಶೈಲಿ ಅಲ್ಲಿ ಮೂಡಿದೆ. ಗುಮ್ಮ-ದೆವ್ವ, ಭಯ, ಅಮ್ಮಿ-ಮೊಲೆಹಾಲು, ಮಮ್ಮು-ಅನ್ನ, ಆಹಾರ ಮುಂತಾದ ಪದರೂಪಗಳು ಸೊಗಸಾಗಿ ಬಳಕೆಯಾಗಿವೆ. ಪ್ರಾಸಯುಕ್ತವಾದ ಈ ಮಾತುಗಳು ಸರಳವಾಗಿದ್ದು ನೆನಪಿಟ್ಟುಕೊಳ್ಳಲು ಸುಲಭವಾಗುತ್ತವೆ. ಗೋಪಿಕಾ ಸ್ತ್ರೀಯರು ಕೃಷ್ಣನೊಡನೆ ನಡೆಸಿದ ಕಣ್ಣುಮುಚ್ಚಾಲೆಯ ಆಟ, ಅವರು ಅವನನ್ನು ಕುರಿತು ಬೆಳೆಸಿಕೊಂಡ ವ್ಯಾವೋಹದಿಂದ ಯಶೋದೆ ತನ್ನ ಮಗನನ್ನು ಯಾರಾದರೂ ಎತ್ತಿಕೊಂಡು ಹೋದಾರೆಂಬ ಭಯದಿಂದ ಬಾಗಿಲನಿಂದಾಚೆಗೆ ಹೋಗಬಾರದೆಂದು ಅವನಿಗೆ ಹೇಳುತ್ತಾಳೆ. ಆಗ ಕೃಷ್ಣನನ್ನು ಸಂಬೋಧಿಸುವಾಗ ಬಾಲಭಾಷೆ ಸೊಗಸಾಗಿ ಮೂಡಿಬಂದಿದೆ.

ಪೋಗದಿರಲೊ ರಂಗ, ಬಾಗಿಲಿಂದಾಚೆಗೆ ||ಪ||
ಭಾಗವತರು ಕಂಡರೆತ್ತಿ ಕೊಂಡೊಯ್ದರೊ||ಅ.ಪ||

ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ
ಪರಮಾತ್ಮನ ಕಾಣದರಸುವರೊ
ದೊರಕದ ವಸ್ತು ದೊರಕಿತು ನಮಗೆಂದು
ಹರುಷದಿಂದಲಿ ಬಂದು ಕರೆದೆತ್ತಿಕೊಂಬರೊ ||೧||

ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗರಣ ಮಾಳ್ವರು ಗೋಪಾಲನೇ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು
ಮಿಗಿಲು ವೇಗದಿ ಬಂದು ಬಿಗಿದಪ್ಪಿಕೊಂಬರೊ ||೨||

ದುಷ್ಟ ನಾರಿಯರು ತಮ್ಮಿಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹತ್ತಿ ತಿರುಗುವರೊ
ಸೃಷ್ಟೀಶ ಪುರಂದರ ವಿಠ್ಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೊ ಗೋಪಾಲ ||೩||

ಇಂತಹ ಕೀರ್ತನೆಗಳಲ್ಲಿ ಭಕ್ತದೇವರಲ್ಲಿ ಬೆಳೆಸಿಕೊಂಡ ಅನ್ಯೋನ್ಯತೆ ಸೊಗಸಾಗಿ ಬಂದಿದೆಯಲ್ಲದೆ ಮುಗ್ಧವಾದ ವಾತ್ಸಲ ಭಾವ ಹೊರಹೊಮ್ಮಿದೆ. ‘ಬಗೆ ಬಗೆ ಆಟಗಳಲ್ಲಿ ಕಲಿತಯ್ಯ’, ‘ಆಡಿದನೊ ರಂಗ ಅದ್ಬುತದಲಿ ಕಾಳಿಂಗನ ಫಣಿಯಾಟ’ ಈ ಕೀರ್ತನೆಗಳು ಹೃದಯಂಗಮವಾಗಿದೆ. ‘ಎಲೆ ಎಲೆ ಸಿಡಿಲು ಮಿಂಚೆ ಗರ್ಜಿಸದಿರಿ ನೀವು’,’ಕಡಗ ಕಂಕಣ ಕಟಿಯ ತೊಡರು’, ‘ಗಲಭೆ ಇದೇನೋ ಬೊಮ್ಮಾದಿಗಳ’ ಈ ಸುಳಾದಿಗಳಲ್ಲಿ ಕೃಷ್ಣಲೀಲೆ ಹೃದಯಂಗಮವಾಗಿದೆ. ಯಶೋಧೆ ಮೊಸರು ಕಡೆಯುವಾಗ ಕೃಷ್ಣನು ನಡೆಸಿದ ಕಿಡಿಗೇಡಿತನವನ್ನು ಕಂಡು

ಮಂಥನ ಮಾಡಲೀಯೆ ಮಾಧವ ಮೊಸರು ಮೀಸಲು
ಇಂಥದುಂಟೇ ರಂಗ ಬಿಡುಬಿಡು ಕಂಡೆಯಾ ಕಡೆಗೋಲು
ಎಂಥವನೋ ನೀನು ಏಳೂತ್ತಾಗಳೇ ಜಗಳ
ಇಂಥದುಂಟೆ ರಂಗ ಬಿಡುಬಿಡು ಕಂಡೆಯ ಕಡೆಗೋಲು

ಎಂದು ಹೇಳುವ ನುಡಿಗಳಲ್ಲಿ ವಾತ್ಸಲ್ಯದ ಸೊಗಸು ಹೃದಯಂಗಮವಾಗಿದೆ. ಮುದ್ದು ಕೃಷ್ಣನ ಚೆಲುವನ್ನು ದಾಸರು ಸೊಗಸಾಗಿ ಬಣ್ಣಿಸಿದ್ದಾರೆ.

ಕಟವಾಯ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ
ಪಟವಾಳಿ ಕೈಪ ಕೊರಳೊಳು ಪದಕ
ಸಟ್ಟೆಯಲ್ಲ ಬ್ರಹ್ಮಾಂಡ ಹೃದಯದೊಳಿರುತಿರಲು
ಮಿಟಿಮಿಟಿ ನೋಡುವ ಈ ಮುದ್ದುಕೃಷ್ಣ

ಎಂಬ ಕೀರ್ತನೆಯಲ್ಲಿ ಬಾಲಕೃಷ್ಣನ ವ್ಯಕ್ತಿತ್ವ ಸೊಗಸಾಗಿ ಚಿತ್ರಿತವಾಗಿದೆ ‘ಕಟವಾಯ ಬೆಣ್ಣೆ’, ‘ಕಾಡೆಗೆಗಣ್ಣು’ ಎಂತಹ ಸುಂದರವಾದ ಪದಪುಂಜಗಳಿವು. ಈಗಲೂ ಉತ್ತರ ಕರ್ನಾಟಕದ ವ್ಯಾವಹಾರಿಕ ಕನ್ನಡದಲ್ಲಿ ಈ ಪದ ಪುಂಜಗಳು ಬಳಕೆಯಲ್ಲಿವೆ ಎಂಬುದು ಗಮನಾರ್ಹ.

ಮುಂಗುರುಳು ಮುಂಜೆಡೆ ಬಂಗಾರದರಳೆಲೆ
ರಂಗುಮಾಣಿಕದ ಉಂಗುರವಿಟ್ಟು
ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲುನುತ
ಅಂಗಳದೊಳಗಾಡುತಿಹ ಮುದ್ದುಕೃಷ್ಣ

ತಾಯಿ ಯಶೋದೆಯು ಬಗೆ ಬಗೆಯ ಅಲಂಕಾರಗಳಿಂದ ಮಗನನ್ನು ಶೃಂಗರಿಸುತ್ತಾಳೆ. ಆ ವರ್ಣನೆ ಈ ಕೀರ್ತನೆಯಲ್ಲಿ ಹೃದಯಂಗಮವಾಗಿ ಚಿತ್ರಿತವಾಗಿದೆ. ಯಶೋಧೆಯು ಕೃಷ್ಣನನ್ನು ಮಲಗಿಸುವ ಸನ್ನಿವೇಶ ಅದ್ಭುತವಾಗಿದೆ. ತೊಟ್ಟಿಲಲ್ಲಿ ಹಾಕಿ ‘ಹೊನ್ನುತಾಗುಬ್ಬಿ ತಾಹೊನ್ನು ತಾ’ ಎಂದು ಬಣ್ಣಿಸಿ ಹಾಡುತ್ತಾಳೆ ಹಣೆಗೆ ತಿಲಕವಿಟ್ಟು, ಕೊರಳಿಗೆ ಹಾರ ಹಾಕಿ ‘ಕುಣಿಯೊ ಕುಣಿಯೊ’ ಎಂದು ಕುಣಿಸಿ ಆಡಿಸುತ್ತಾಳೆ. ಇಲ್ಲಿಯ ಕಥನ, ನಾಟ್ಯ, ನಿರೂಪಣೆ ಮತ್ತು ಸಾಂಕೇತಿಕ ಧ್ವನಿ ನಾದಮಯವಾಗಿ ತೋರುತ್ತದೆ. ಶ್ರೀ ಕೃಷ್ಣನನ್ನು ಯಶೋದೆ ಲಾಲಿಸುವ ಬಗೆಯನ್ನು ದಾಸರು ಬಹಳ ಮನೋಹರವಾಗಿ ವರ್ಣಿಸಿದ್ದಾರೆ. ಇಲ್ಲೆಲ್ಲ ಜೋಗುಳ ಹಾಡಿನ ದಾಟಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಗಂಗಾ ಜನಕನಿಗೆ ಹೊಂಗಲಶಗಳಿಂದ
ಮಂಗಳ ಮಜ್ಜನ ಮಾಡಿಸುವಳು
ಅಂಗನೆ ದ್ರೌಪದಿಗೆ ಅಕ್ಷಯಾಂಬರವಿತ್ತ
ರಂಗಗೆ ಪೊಂಬಟ್ಟೆಯ ಉಡಿಸುವಳು
ಅಂಗಜನಯ್ಯನ ಅನರ್ಘ್ಯರತ್ನಾಭರ
ಗಳಿಂದಲಿ ಸಿಂಗರಿಪಳು
ಇಂಗಡಲೊಡೆಯಗೆ ಕೆನೆಹಾಲ ನೈವೇದ್ಯ
ಸಂಗ್ರಾಮ ಭೀಮಗೆ ರಕ್ಷೆಬೊಟ್ಟು,

ಎಂತಹ ಸೊಗಸಾದ ನಿರೂಪಣೆಯಿದು ! ಪದಲಾಲಿತ್ಯ, ಲಲಿತ ಲಯದ ಗತಿಗಳಿಂದ ಕೂಡಿದ ಇಂತಹ ಕೀರ್ತನೆಗಳು ಜನತಾ ದೃಷ್ಟಿಯಿಂದ ಕೂಡಿವೆ. ಅದ್ಭುತ ಸೃಷ್ಟಿಲೀಲೆಯ ರಹಸ್ಯವನ್ನು ತಿಳಿಗನ್ನಡದಲ್ಲಿ ಜನರ ಮನ ಸೊರೆಗೊಳ್ಳುವಂತೆಹೃದಯಕ್ಕೆ ನೇರವಾಗಿ ತಟ್ಟುವಂತೆ ದಾಸರು ನಿರೂಪಿಸಿದ್ದಾರೆ.

ಬೊಮ್ಮಂಡೆ ಕೋಟೆಗಳ ಗೊಂಬೆ ಮನೆಯ ಮಾಡಿ
ಬೊಮ್ಮಭವಾದಿಗಳ ಗೊಂಬೆಗಳ ಮಾಡಿ
ಒಮ್ಮೊಮ್ಮೆ ನಲಿಯುತ ಗೊಂಬೆಯಾಟವಾಡುವ

ಶ್ರೀ ಕೃಷ್ಣನ ಬಾಲಲೀಲೆ ಸೊಗಸಾಗಿ ಇಲ್ಲಿ ಮೂಡಿದೆ. ಪುರಂದರದಾಸರ ಇಂತಹ ಕೀರ್ತನೆಗಳು ಸತ್ವಪೂರ್ಣವಾಗಿವೆ. ಅಲ್ಲಲ್ಲಿ ದಾಸರು ಕೊಡುವ ಉಪಮೆ, ರೂಪಕಗಳ ಸೊಗಸು ಮೆಚ್ಚುವಂತಹದಿದೆ. ಅಮೂರ್ತವಾದ ವಿಷಯವನ್ನು ಮೂರ್ತಗೊಳಿಸುವಲ್ಲಿ, ಕವಿಯ ಭಾವನೆಯನ್ನು ಸಹೃದಯವ ಹೃದಯದಲ್ಲಿ ಪುನರ್ ನಿರ್ಮಿಸುವಲ್ಲಿ ದಾಸರು ತರುವ ಶಬ್ದಚಿತ್ರಗಳು ತುಂಬ ಮನೋಜ್ಞವಾಗಿವೆ. ಕೃಷ್ಣನ ಹಾವಭಾವಗಳನ್ನು ವರ್ಣಿಸುವಾಗ ನಿರಾಡಂಬರ ಶೈಲಿ ಲೀಲಾಜಾಲವಾಗಿ ಹರಿದಿದೆ.

ಪ್ರಸನ್ನ ವೆಂಕಟದಾಸರ ಹಲವಾರು ಕೀರ್ತನೆಗಳಲ್ಲಿ ಬಾಲಭಾಷೆ ಪರಿಣಾಮಕಾರಿಯಾಗಿ ಬಳಕೆಯಾಗಿದೆ. ಯಶೋಧೆಯು ಶ್ರೀ ಕೃಷ್ಣನನ್ನು ತೊಟ್ಟಿಲಲ್ಲಿ ಮಲಗಿರುವ ದೃಶ್ಯವು ಜೋಗುಳ ಹಾಡನ್ನು ನೆನೆಪಿಗೆ ತರುತ್ತದೆ. ಮಗುವನ್ನು ನಾನಾ ರೀತಿಯಿಂದ ಗುಣಗಾನ ಮಾಡಿ ಮಲಗಿಸುತ್ತಾಳೆ. ಆ ಕೀರ್ತನೆ ಹೀಗಿದೆ.

ಲಾಲಿ ಮುಕುಂದ ಲಾಲಿ ಗೋವಿಂದ
ಲಾಲಿಮಯ್ಯಾ ಲಾಲಿ
ಲಾಲಿ ಮೂರೈದಾಲಿಪ್ಪೆ ಲಾಲಿಯರ ಪ್ರಭುಲಾಲಿ || ಪ||

ಜಗ ಜಗುಳಿಸಿ ವಟಪತ್ರದಿ ಮಲಗಿದೆ
ಲಾಲಿಮಯ್ಯಾ ಲಾಲಿ
ಮಗುವಾಗಿ ವ್ರಜದೊಳು ತೊಟ್ಟಿಲೊಳೊಪ್ಪಿದೆ
ಲಾಲಿಮಯ್ಯ ಲಾಲಿ ||೧||

ಸ್ವಗತಭೇದ ವರ್ಜ್ಯ ಪರಮಾತ್ಮ ಪರಬ್ರಹ್ಮ
ಲಾಲಿಮಯ್ಯಾ ಲಾಲಿ
ಜಗದ ಜೀವರ ಬಿಂಬಮೂರ್ತಿ ತನಂತಾನೆ
ಲಾಲಿಮಯ್ಯಾ ಲಾಲಿ ||೨||

ಪಯೋನಿಧಿವಾಸ ಪರೇಶ ಪರಿಪೂರ್ಣ
ಲಾಲಿಮಯ್ಯಾ ಲಾಲಿ
ಶ್ರೀಯರಸ ವೈಕುಂಠವಲ್ಲಭ ಶ್ರೀ ಕೃಷ್ಣಾ
ಲಾಲಿಮಯ್ಯಾ ಲಾಲಿ ||೩||

ಧರೆಯ ಪಾವನಮಾಡಿ ಪಾಂಡವರಿಗಾಗಿ ಬಂದೆ
ಲಾಲಿಮಯ್ಯಾ ಲಾಲಿ
ಸುರರ ಪುಣ್ಯದ ಬಳ್ಳಿ ಫಲಿಸಲಿಕ್ಕುದಿಸಿದೆ
ಲಾಲಿಮಯ್ಯಾ ಲಾಲಿ ||೪||

ಅಜಾಮಿಳ ಗಜ ಧ್ರುವ ಅಂಬರೀಷ ಪಾಲಾ
ಲಾಲಿಮಯ್ಯಾ ಲಾಲಿ
ಸುಜೀವಿ ಪ್ರಹ್ಲಾದನ ಸಲಹಿದ ನರಹರಿ
ಲಾಲಿಮಯ್ಯಾ ಲಾಲಿ ||೫||

ಅಸಮ ಬಾಲಕ ಅವ್ಯಾಕೃತಾಂಗನೆ
ಲಾಲಿಮಯ್ಯಾ ಲಾಲಿ
ವಿಷಮ ವಿದೂರ ಅಗಣಿತ ಸುಗುರ್ಣವ
ಲಾಲಿಮಯ್ಯಾ ಲಾಲಿ ||೬||

ಸ್ಮೃತಿ ಗಿರಿಧರ ಶಿಶುಮೃಗ ಶೈಲಧರ
ಲಾಲಿಮಯ್ಯಾ ಲಾಲಿ
ಕೃತಕೃಷ್ಣೆ ಧರ್ಮಪಾಲ ಪ್ರಸನ್ವೆಂಕಟೇಶ
ಲಾಲಿಮಯ್ಯಾ ಲಾಲಿ

ಕೀರ್ತನೆಯ ಉದ್ದಕ್ಕೂ ಜೋಗುಳ ಹಾಡಿನಲ್ಲಿ ಬರುವ ಜೋ ಜೋ ಎನ್ನುವ ನಾದದಂತೆ ‘ಲಾಲಿಮಯ್ಯಾ ಲಾಲಿ’ ಎಂಬುದರ ಪುನರುಕ್ತಿ ಕಾವ್ಯ ಸೌಂದರ್ಯವನ್ನು ಹೆಚ್ಚಿಸಿದೆ. ಅದು ಗೆಜ್ಜೆಯ ನಾದದಂತೆ ಕಿವಿಯನ್ನು ಸ್ಪರ್ಶಿಸುತ್ತದೆ. ಬಾಲ ಭಾಷೆಯನ್ನೊಳಗೊಂಡ ಇಂತಹ ಕೀರ್ತನೆಗಳಲ್ಲಿ ಛಂದೋಗತಿ ಮತ್ತು ಪ್ರಾಸಾನುಪ್ರಾಸ ಇವೆಲ್ಲವೂ ಒಟ್ಟಾಗಿ ಸೇರಿ ಭಾಷೆಯ ಸೊಗಸನ್ನು ಹೆಚ್ಚಿಸಿವೆ. ನಾದ ಮತ್ತು ಅರ್ಥ ಅವುಗಳ ಹೊಂದಾಣಿಕೆಯೇ ಭಾಷೆ ಅದು. ಕಾವ್ಯದಲ್ಲಿ ಪಡೆಯುವ ರೀತಿ ಪರಿಣಾಮಕಾರಿಯಾಗಿದೆ.

ಹಿರಿಯರು ತಮ ಮಕ್ಕಳು ಆಡಿಸುವಾಗ ಬಳಕೆಯಾಗುವ ಭಾಷೆ ಸಹಜವಾಗಿ ಕೀರ್ತನೆಗಳಲ್ಲಿ ಒಡಮೂಡಿರುವುದನ್ನೂ ಕಾಣಬಹುದು. ಅವರ ಭಾಷೆ ಸ್ವಯಂ ಪ್ರೇರಿತವಾದ ಭಾವ, ಧ್ವನಿ, ಕಲ್ಪನೆಗಳಿಂದ ಹೆಚ್ಚು ಚಿತ್ರವತ್ತಾಗಿರುತ್ತದೆ. ‘ಇಂದು ಸೈರಿಸಿರಿ ಶ್ರೀ ಕೃಷ್ಣನ ತಪ್ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮ’ ಎನ್ನುವಲ್ಲಿ ಪಾಲಕರು ತಮ್ಮ ಮಗನ ತುಂಟಾಟವನ್ನು ನೋಡಿ ಇದೊಂದು ಸಾರಿ ಕ್ಷಮಿಸಿರಿ ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭಾವ ಇಂತಹ ಕೀರ್ತನೆಗಳಲ್ಲಿದೆ. ಎಷ್ಟೋ ಸಾರಿ ಮಕ್ಕಳ ನೋವು ನಲಿವುಗಳ ಬಗ್ಗೆ ಪಾಲಕರ ಮನಸ್ಸುಗಳಲ್ಲಿ ನಡೆದ ಚಿಂತನೆ ಹಾಗೂ ಮಾತಿನಲ್ಲಿ ಮೂಡಿದ ಅಭಿವ್ಯಕ್ತಿಗಳು ಸಾಮ್ಯವಿರುವುದು ಕಂಡುಬರುತ್ತದೆ. ಮುಗ್ದವಾದ ಮಕ್ಕಳ ಭಾವಮಯತೆ ತೆರೆದಿಟ್ಟ ಅಂತಃಕರಣ ಇವು ಕೀರ್ತನೆಗಳ ಜೀವಾಳ.ಮಕ್ಕಳ ಮುಗ್ದ ಮನಸ್ಸು ಸಹೃದಯದ ಹೃದಯ ತಟ್ಟುತ್ತದೆ.

 

[1]೧. ಹೆಚ್. ಎಂ.ಮಹೇಶ್ವರಯ್ಯ ’ಮಗು ಮತ್ತು ಭಾಷೆ’ ಅ.ಪ್ರಾರಂಭಿಕ ಸರೋಚ್ಚಾರ ಹಂತಆ. ಕಿಲಕಿಲನೆ ನಗುವ ಹಂತ ಇ. ತೊದಲು ನುಡಿಯ ಹಂತ.ಈ. ಅನುಕರಣೆಯ ಹಂತಉ.ಶಬ್ದ ವಾಕ್ಯದ ಹಂತಊ. ಸರಳವಾಕ್ಯಗಳ ಹಂತ. ಎ. ಕ್ಲಿಷ್ಟವಾಕ್ಯ ಹಂತ (Holorhara stri stage) ಏ. ಸಂಕಲ್ಪನಾತ್ಮಕ ಹಂತ, ವಿವರಣೆಗಾಗಿ ನೋಡಿ ಜಾನಪದ ಸಂವಹನ ೧೯೯೦ ಪು.೭೭-೮೩

[2]೨. H.R. Bhatia-elements of Eductional psychology page. 49

 

[3]H.R. Bhatia-elements of Educational psychology page. 51-52