I

ನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಸಾಹಿತ್ಯ ಕೃತಿಗಳನ್ನು ಸಲ್ಲಿಸುವ ಮೂಲಕ ಹರಿದಾಸರು ಕನ್ನಡಿಗರ ಹೃದಯದಲ್ಲಿ ಸ್ಮರಣೀಯ ಸ್ಥಾನ ಪಡೆದಿದ್ದಾರೆ. ತಮ್ಮ ಭಕ್ತಿಯ ಅನುಭವ, ಅನುಭಾವ, ಸಾಮಾಜಿಕ, ಅನುಭವಗಳು, ಸಮಾಜದ ರೀತಿ ನೀತಿಗಳು, ಜನರ ನಡೆನುಡಿ, ಆಚಾರ ವ್ಯವಹಾರಗಳು ಎಲ್ಲವನ್ನೂ ಕಂಡಾಗಿನ ಅವರ ಪ್ರತಿಕ್ರಿಯೆಗಳು ವಿವಿಧ ಪ್ರಣಾಳಿಕೆಗಳಲ್ಲಿ ಪ್ರವಹಿಸಿವೆ; ಆಯಾ ಭಾವಕ್ಕೆ ತಕ್ಕ ಬಂಧ ರೂಪುಗೊಂಡಿದೆ. ಈ ದೃಷ್ಟಿಯಿಂದ ಹರಿದಾಸರ ಬಿಡಿರಚನೆಗಳನ್ನು ಗಮನಿಸಿದಾಗ ಎದ್ದು ಕಾಣುವ ಪ್ರಕಾರಗಳು ಮೂರು. ಅ. ಕೀರ್ತನೆಆ. ಸುಳಾದಿಇ. ಉಗಾಭೋಗ.

ಕೀರ್ತನೆ ಹರಿದಾಸ ಸಾಹಿತ್ಯದ ಪ್ರಮುಖ ಆಕರ್ಷಣೇ. ‘ಕೀರ್ತನೆ’ ಎಂದರೆ ‘ಭಗವಂತನ ಸ್ತುತಿಪರವಾದ ಹಾಡು’ ಎಂದು ಸ್ಥೂಲವಾಗಿ ಅರ್ಥೈಸಬಹುದು. ಇದು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ರಚಿತವಾಗಿರುವ ಒಂದು ಪ್ರಕಾರವೂ ಹೌದು. ರಚನೆಯ, ಸ್ವರೂಪದ ದೃಷ್ಟಿಯಿಂದ ಪಲ್ಲವಿ, ಅನುಪಲ್ಲವಿ ಮತ್ತು ನುಡಿಗಳು ಹೀಗೆ ಮೂರು ರೀತಿಯ ‘ಧಾತು’ಗಳು ಕಂಡುಬರುತ್ತವೆ. ರಚನಕಾರರ ಜೀವನಾನುಭವ ಅಥವಾ ದರ್ಶನ ಪಲ್ಲವಿಯಲ್ಲಿದ್ದು ಅನುಪಲ್ಲವಿ ಮತ್ತು ನುಡಿಗಳಲ್ಲಿ ಅದರ ಸಮರ್ಥನೆಯಿರುತ್ತದೆ. ಮೂರು, ಐದು, ಏಳು ಹೀಗೆ ನುಡಿಗಳು ಬೆಸಸಂಖ್ಯೆಯಲ್ಲಿದ್ದು ಕೊನೆಯ ನುಡಿಯಲ್ಲಿ ರಚನಕಾರ ಅಂಕಿತವಿರುತ್ತದೆ. ಸದಾಚಾರ, ನೈತಿಕತೆ, ಧರ್ಮ ಮೌಲ್ಯಗಳು ಇವು ಕೀರ್ತನೆಗಳ ವಸ್ತುಗಳು. ಭಕ್ತ ಎಲ್ಲ ಕೀರ್ತನೆಗಳಲ್ಲೂ ಸೂತ್ರದೋಪಾದಿಯಲ್ಲಿರುವ ಮೂಲ ಸ್ತೋತ್ರ. ಕೀರ್ತನೆಯ ಮಾದರಿ ಹೀಗಿದೆ.

ರಾಗ : ಶಂಕರಾಭರಣ, ತಾಳ : ಆದಿತಾಳ

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ
ಶಕ್ತಿ ಬೇಕು ಮುಂದೆ ಮುಕ್ತೀಯ ಬಯಸುವಗೆ               ||ಪ||

ಸತಿ ಅನುಕೂಲ ಬೇಕು ಸುತನಲ್ಲಿ ಗುಣ ಬೇಕು
ಮತಿವಂತನಾಗಬೇಕು ಮತ ಒಂದಾಗಿರಬೇಕು    ೧

ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸವ್ರತ ಬೇಕು ಉಪಶಾಂತವಿರಬೇಕು     ೨

ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು
ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು                      ೩

ರಾಗ-ತಾಳ ನಿರ್ದೇಶನವಿರುವ ಈ ಇಡೀ ಕೀರ್ತನೆಯ ಸಾರ ಪಲ್ಲವಿಯಲ್ಲಿರುವುದು ಗಮನಾರ್ಹ “ರಂಗವಿಠಲ” ಅಂಕಿತ ಕೊನೆಯ ನುಡಿಯಲ್ಲಿದ್ದು ಅದು ಶ್ರೀಪಾದರಾಜರ ರಚನೆಯೆಂಬುದನ್ನು ಸೂಚಿಸುತ್ತದೆ. ಹೀಗೆಯೇ ಕನಕದಾಸರ ಕೀರ್ತನೆಗಳು “ಆದಿ ಕೇಶವ”, ಪುರಂದರರ ಕೀರ್ತನೆಗಳು “ಪುರಂದರ ವಿಠಲ”, ವ್ಯಾಸರಾಯರವು “ಶ್ರೀಕೃಷ್ಣ” ಅಂಕಿತಗಳಲ್ಲಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ‘ಕೀರ್ತನೆ’ ಎಂದರೆ ಭಗವಂತನ ಸ್ತುತಿಪರವಾದ ಹಾಡು. ಪ್ರಮುಖವಾಗಿ ೧೫ನೆಯ ಶತಮಾನದ ಶ್ರೀಪಾದರಾಯರಿಂದ ಮೊದಲಾಗುವ, ಹರಿದಾಸರಿಂದ ರಚಿತವಾದ ಸುಳಾದಿ-ಉಗಾಭೋಗಗಳನ್ನುಳಿದ ಬಿಡಿಗೀತಗಳ ಸಮೂಹಕ್ಕೆ ಕೀರ್ತನೆಗಳು ಎಂಬ ಹೆಸರಿದೆ. ಆದರೆ ಹರಿದಾಸರ ಕೃತಿಗಳೆಲ್ಲವನ್ನೂ ಸುಳಾದಿ, ಕೀರ್ತನೆ, ಉಗಾಭೋಗ ಒಟ್ಟಾಗಿ ‘ಕೀರ್ತನೆಗಳು’ ಎಂದು ಕರೆಯುವ ರೂಢಿಯಿರುವುದರಿಂದ ಪ್ರಸ್ತುತ ಅಧ್ಯಾಯವನ್ನು ‘ಕೀರ್ತನೆಗಳ ಛಂದಸ್ಸು’ ಎಂದು ಹೆಸರಿಸಲಾಗಿವೆ. ಸು. ೧೨ನೆಯ ಶತಮಾನದಲ್ಲಿದ್ದ ಸಕಲೇಶ ಮಾದರಸ, ಬಸವಣ್ಣನೇ ಮೊದಲಾದ ಶಿವದಾಸರು ಈ ರೀತಿಯ ಹಾಡುಗಳನ್ನು ರಚಿಸಿದ್ದರೆಂದು ಹೇಳಲಾಗಿದ್ದರೂ ಅವರು ಮುಖ್ಯವಾಗಿ ವಚನಕಾರರು ಕೀರ್ತನಕಾರರಲ್ಲ. ಆ ಕಾಲದಲ್ಲಿ ಹೇಗೆ ಸಾವಿರಾರು ಸಂಖ್ಯೆಯಲ್ಲಿ ವಚನಗಳು ಹುಟ್ಟಿಕೊಂಡವೋ ಹಾಗೆಯೇ ಹರಿದಾಸರ ಪರಂಪರೆಯಲ್ಲಿ ಕೀರ್ತನೆಗಳು ವಿಪುಲವಾಗಿ ರಚಿತವಾದವು. ಈ ಕಾರಣದಿಂದ ಕೀರ್ತನೆಗಳನ್ನು ‘ಹರಿದಾಸರಿಂದ ರಚಿತವಾದ ಗೇಯ ಕೃತಿಗಳು’ ಎಂಬ ಅರ್ಥದಲ್ಲಿ ವಿವೇಚಿಸಲಾಗಿದೆ.

ಕ್ರಮವಾಗಿ ಪಲ್ಲವಿ, ಅನುಪಲ್ಲವಿ ಮತ್ತು ನುಡಿ ಇದುಕೀರ್ತನೆಯ ಬಾಹ್ಯ ಸ್ವರೂಪ, ಆಯಾ ದಾಸರ ಯಾವುದೋ ಒಂದು ಅನುಭವ ಇಲ್ಲವೇ ಕಾಣ್ಕೆ ಸಾಂದ್ರವಾಗಿ ಪಲ್ಲವಿಯಲ್ಲಿ ರೂಪುಗೊಂಡಿರುತ್ತದೆ. ಮುಂದೆ ಅನುಪಲ್ಲವಿ, ಅನಂತರದ ನುಡಿ ಅದನ್ನು ಘೋಷಿಸುತ್ತದೆ, ಸಮರ್ಥಿಸುತ್ತದೆ. ನುಡಿಗಳು ಹೆಚ್ಚಾಗಿ ನಾಲ್ಕು ಸಾಲಿನವು. ಸಾಮಾನ್ಯವಾಗಿ ಮೂರು, ಐದು, ಏಳು ಹೀಗೆ ನುಡಿಗಳು ಬೆಸಸಂಖ್ಯೆಯಲ್ಲಿರುತ್ತವೆ. ಹತ್ತಾರು ನುಡಿಗಳಿರುವ ದೀರ್ಘವಾದ ಕೀರ್ತನೆಗಳಿದ್ದರೂ ಮೂರರಿಂದ ಐದು ನುಡಿಗಳುಳ್ಳ ಕೀರ್ತನೆಗಳೇ ಹೆಚ್ಚು ಕೀರ್ತನೆಯ ಕೊನೆಯಲ್ಲಿ ಆಯಾ ಕರ್ತೃವಿನ ಅಂಕಿತವಿರುತ್ತದೆ. ಉದಾಹರಣೆಗೆ ಪುರಂದರದಾಸರ ಒಂದು ಕೀರ್ತನೆಯ ಸ್ವರೂಪವನ್ನು ನೋಡಬಹುದು.

ರಾಗ : ಕಾಂಭೋಜ ಝಂಪೆತಾಳ
ಇದು ಭಾಗ್ಯವಿದು ಭಾಗ್ಯವಿದು ಭಾಗವಯ್ಯಪಲ್ಲವಿ
ಪದುಮನಾಭವ ಪಾದಭಜನೆ ಸುಖವಯ್ಯಅನುಪಲ್ಲವಿ

ಕಲ್ಲಾಗಿ ಇರಬೇಕು ಕಠಿನಭವ ತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ ೧

ಬುದ್ಧಿಯಲಿ ತನುಮನವ ತಿದ್ಧಿಕೊಳ್ಳಲುಬೇಕು
ಮುದ್ದಾಗಬೇಕು ಮುನಿಯೋಗಿಗಳಿಗೆ
ಮಧ್ವಮತಾಬ್ದಿಯೊಳು ಮಿನಾಗಿರಲುಬೇಕು
ಶುದ್ಧನಾಗಿರಬೇಕು ಕರಣತ್ರಯಗಳಲ್ಲಿ೨

ವಿಷಮ ಭೋಗದ ತೃಣಕೆ ಉರಿಯಾಗಿರಲುಬೇಕು
ನಿಶಿಹಗಲು ಶ್ರೀಹರಿಯ ನೆನೆಯಬೇಕು
ವಸುಧೇಶ ಪುರಂದರ ವಿಠಲರಾಯನ
ಹಸನಾದ ದಾಸರ ಸೇವಿಸಲುಬೇಕು೩

(ಪುರಂದರದಾಸರು)

ಇಲ್ಲಿ ಆದಿಪ್ರಾಸ ನಿಯತವಾಗಿ ಬಂದಿರುವುದನ್ನು ಗಮನಿಸಬಹುದು. ಅಂತೆಯೇ ಛಂದಶ್ಯಾಸ್ತ್ರದಲ್ಲಿ ಹೇಳೀರುವ ಸಿಂಹ, ಗಜ, ವೃಷಭ, ಅಜ, ಶರಭ, ಹಯ ಈ ಆರು ರೀತಿಯ ಪ್ರಾಸಗಳಲ್ಲಿ ಅಜಪ್ರಾಸವನ್ನುಳಿದು ಇತರ ಎಲ್ಲವನ್ನು ಹರಿದಾಸರ ಕೀರ್ತನೆಗಳಲ್ಲಿ ಕಾಣಬಹುದು.

||

ಹರಿದಾಸರ ಕೃತಿಗಳನ್ನು ಪ್ರಧಾನವಾಗಿ ಕಾವ್ಯಗಳು ಮತ್ತು ಇತರ ಕೃತಿಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಕನಕದಾಸರ ಮೋಹನತರಂಗಿಣಿ, ನಳ ಚರಿತ್ರೆ, ಜಗನ್ನಾಥದಾಸರ ಹರಿಕಥಾಮೃತಸಾರ ಮುಂತಾದುವು ಮೊದಲ ವರ್ಗಕ್ಕೆ ಸೇರುತ್ತವೆ. ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ವೃತ್ತಾನಾಮಗಳು, ಸುವ್ವಾಲಿ, ಗುಂಡಕ್ರಿಯೆ, ದಂಡಕ, ಶೋಭಾನೆ, ಉರುಟಣೆ ಹಾಡು, ಲಾವಣಿ, ಕೋಲುಪದ, ಜೋಗುಳ ಮುಂತಾದುವೆಲ್ಲ ಎರಡನೆಯ ವರ್ಗದಲ್ಲಿ ಸಮಾವೇಶಗೊಳ್ಳುತ್ತದೆ. ಛಂದಸ್ಸಿನ ದೃಷ್ಟಿಯಿಂದ ಹೇಳುವುದಾದರೆ ಕಾವ್ಯಗಳಲ್ಲಿ ವೈವಿಧ್ಯ ಕಡಿಮೆ, ವಿಶೇಷವಾಗಿ ಷಟ್ಪದಿ, ಸಾಂಗತ್ಯಗಳು ಮಾತ್ರಬಳಕೆಯಾಗಿವೆ. ಆದರೆ ಎರಡನೆಯ ವರ್ಗದಲ್ಲಿ ವೈವಿಧ್ಯ ಅಪಾರ. ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ, ಸಾಂಗತ್ಯ, ದಂಡಕ ಮುಂತಾದ ಸಾಂಪ್ರದಾಯಿಕ ಬಂಧಗಳ ಜೊತೆ ಜೊತೆಗೇ ಮಾತ್ರಾಲಯದ, ಅಂಶಲಯದ, ವಿವಿಧ ವಿನ್ಯಾಸಗಳ ಚತುಷ್ಪದ, ಷಟ್ಪದ ಮುಂತಾದ ವಿನೂತನ ಬಂಧುಗಳು ಅಧಿಕವಾಗಿ ಬಳಕೆಯಾಗಿವೆ. ಪ್ರತ್ಯೇಕಗಣಗಳ ಬಳಕೆಯಿಂದ ಹಲವು ವಿನ್ಯಾಸಗಳನ್ನು ರಚಿಸಲಾಗಿದೆ. ಮಾತ್ರಾ ಮೌಲ್ಯದ ಹೊಂದಾಣಿಕೆಯಲ್ಲಿ ತರುವ ಸಂಕೋಚನ ವಿಕಸನಗಳು ಪದಗತಿಗೆ ವಿಶಿಷ್ಟ ಬಳುಕನ್ನು ನೀಡುತ್ತವೆ. ಮೇಲಿಂದ ಮೇಲೆ ಬರುವ ಪ್ರಾಸವೈವಿಧ್ಯಗಳು ನಾದದ ಮೆರುಗನ್ನು ನೀಡುತ್ತವೆ. ಕೇಳುಗರನ್ನು ಕುಣಿಸುವಂತಹ ಮಾಂತ್ರಿಕಶಕ್ತಿ ಕೆಲವೆಡೆ ಕಂಡುಬರುತ್ತದೆ. ಅಂತೆಯೇ ಹಲವೆಡೆ, ವಿಚಾರ ಪ್ರವಾಹದಿಂದ ತುಮ್ಬಿ ಹರಿಯುವ ಲಲಿತಗತಿ ಕಂಡುಬರುತ್ತದೆ. ಒಟ್ಟಾರೆ ಜನಪದ ಮಟ್ಟುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತಿರುವುದು, ಕಂದವೃತ್ತಾದಿಗಳನ್ನು ಕೈಬಿಟ್ಟಿರುವುದು ಇಲ್ಲಿ ವಿಶೇಷವಾಗಿ ಕಾಣಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಗೇಯತೆಗೆ ಪ್ರಾಧಾನ್ಯವಿತ್ತಿರುವುದು ಇಲ್ಲಿಯ ಒಂದು ಗಮನಾರ್ಹ ಅಂಶ. ಇಂತಹ ವೈವಿಧ್ಯಮಯತೆ ಮತ್ತು ಗೇಯತೆಯ ಪ್ರಾಧಾನ್ಯ. ಹರಿದಾಸರ ಕೃತಿಗಳ ಚೆಲುವಿನ ಒಂದು ಮುಖ. ಅವರು ಬಳಸಿರುವ ವಿವಿಧ ಬಂಧಗಳಿಗೆ ಮಾದರಿಯಾಗಿ ಈ ಕೆಲವನ್ನು ನೋಡಬಹುದು.

೧. ರಾಜೀವ. ಉಪಮ ಸು. ನೇತ್ರೇ                         (ಸುವಿವಿ.ವಿ.ಬ್ರ.(ಪ್ರ
ರಾಜಿಸು. ತಿಹ ಶುಭ, ಗಾತ್ರೇ                               (ಮೃಗವಿ.ವಿ.ಬ್ರ (ಪ್ರ
ರಾಜಮ. ಧ್ಯಳೆಮುನಿ, ಸ್ತೋತ್ರೇ                         (ಮುಕ್ತಿವಿ.ವಿ.ಬ್ರ (ಪ್ರ
ಭಾಜಪ್ರಿ. ಯಳೆ ನೃಪ. ಪುತ್ರಿ                               (ಆಹವಿ.ವಿ.ಬ್ರ (ಪ್ರ
ಶ್ರೀಜನಾ. ರ್ದನನಾಜ್ಞೆ, ವ್ಯಾಜದಿಂ. ಭೂದೇವಿ          ವಿ.ವಿ.ವಿ.ವಿ
ರಾಜಸ. ರಿಗೆ ದ್ವಂದ್ವ. ಭೋಜನ. ಗೈಸುವೆ            ವಿ.ವಿ.ವಿ.ವಿ

(ಪ್ರಾಣೇಶವಿಠಲ)

೨. ಸಾಮಜ. ರಾಜನ. ವರದ                               (ಬಲುವಿ.ವಿ.ಬ್ರ. (ಪ್ರ
ಪ್ರೇಮದಿ. ಭಕುತರ. ಪೊರೆದ.                            ವಿ.ವಿ.ಬ್ರ
ಆ ಮಹಾ. ದಿತಿಜರ. ತರದಿ                                (ನಿವಿ.ವಿ.ಬ್ರ (ಪ್ರ
ಸ್ಸೀಮಮ. ಹಿಮನಾಗಿ. ಮೆರೆದ                         ವಿ.ವಿ.ಬ್ರ.

(ಮೋಹನ ವಿಠಲ)

೩. ಕಾಲನ ಧೂತರು ಯಾವಾಗ, ಎಳೆವರೊ. ಕಾಣದು. ಎಚ್ಚರಿಕೆ.
ಬೇಲೂರು ಪುರವಾಸ. ನೆಲೆಯಾದಿ. ಕೇಶವ. ನಾಳಾಗು.ಎಚ್ಚರಿಕೆ.
ವಿ.ವಿ.ವಿ.ವಿ.ವಿ.ರು.
ವಿ.ವಿ.ವಿ.ವಿ.ವಿ.ರು.

೪. ಒಡಲಿ. ನಾಸೆ. ಗಾಗಿ. ನೋಣನು.ತುಡುಕಿ. ಬಿದ್ದು. ಜೇನಿ.ನೊಳಗೆ
ಮಿಡುಕು.ವಂತೆ. ಬಾಯಿ. ಬುಡುವೆ. ಬಿಸರು. ಹಾಕ್ಷ. ನೇ
ಬಿಡಿಸು. ಎನ್ನ. ಪಾಶ. ಬಂಧ ವಾ.(ದೋಷದೂರ
ಕಾಗಿ. ನೆಲೆ. ಯಾದಿ. ಕೇಶ.ವಾ [ಕನಕದಾಸ
ನೊಡೆಯ ವೆಂಕ.ಟಾದ್ರಿ. ಮಾಧ. ವಾ
೩.೩.೩.೩.೩.೩.೩.೩.
೩.೩.೩.೩.೩.೩.ಮು
೩.೩.೩.೩.ಮು (ಪ್ರ
೩.೩.೩.೩.ಮು (ಪ್ರ
೩.೩.೩.೩.ಮು

೫. ಕಣ್ಣುಗ. ಳಿಂದ ನಿ. ನ್ನಯ ದಿವ್ಯ. ಮೂರ್ತಿಯ. ನೋಡಲಿಲ್ಲ (ಶ್ರುತಿ
ಸನ್ನುತ. ಮಹಿಮೆಯ. ಅನುದಿನ. ನಾನುಕೊಂ. ಡಾಡಲಿಲ್ಲ
ಹೆಣ್ಣು ಹೊ. ನ್ನು ಮೆಚ್ಚಿ. ನಿನ್ನದಾ. ಸರ ದಾಸ್ಯ. ಮಾಡಲಿಲ್ಲ (ಮುನಿ
ಸನ್ನುತ. ವರ ಪಾದ. ಪದ್ಮಯು. ಗಂಗಳ. ಸ್ಮರಿಸಲಿಲ್ಲ
(ಪುರಂದರವಿಠಲ)
ವಿ.ವಿ.ವಿ.ವಿ.ರು (ಪ್ರ
ವಿ.ವಿ.ವಿ.ವಿ.ರು.
ವಿ.ವಿ.ವಿ.ವಿ.ರು.(ಪ್ರ
ವಿ.ವಿ.ವಿ.ವಿ.ರು.
ಛಂದಸ್ಸಿನ ದೃಷ್ಟಿಯಿಂದ ಹರಿದಾಸರ ಕೀರ್ತನೆಗಳನ್ನು ಪರಿಶೀಲಿಸಿದರೆ, ಅಲ್ಲಿ ವಿವಿಧ ವೃತ್ತಗಳ ಬಳಕೆಯನ್ನು ಗಮನಿಸಬಹುದು. ಕರ್ಣಾಟ ವಿಷಯ ಜಾತಿಯ ಅನೇಕ ಛಂದೋರೂಪಗಳನ್ನು ಕೀರ್ತನಕಾರರು ಬಳಸಿದ್ದಾರೆ. ಏಳೆ, ತ್ರಿಪದಿ, ಸಾಂಗತ್ಯ, ಸೀಸಪದ್ಯ, ಷಟ್ಪದಿ – ಇವುಗಳ ಲಯವನು ಸ್ಥೂಲವಾಗಿ ಗುರುತಿಸಬಹುದು.

೧. ಏಳೆ
ಗಜರಾಜ ವರದ. ನೀ ನಾದರೆ ಆಕೆ
ಗಜಗಾಮಿನಿ ತಾ.ನಾದಳು
(ಕನಕದಾಸರು)

೨. ತ್ರಿಪದಿ
i) ಚಕ್ರಭೂ.ತಳದಲ್ಲಿ ಚಕ್ರವ, ಪಿಡಿದನ
ಅಕ್ರೂರ.ನೊಡನೆ. ಮಧುರೆಗೆ
ಅಕ್ರೂರ.ನೊಡನೆ. ಮಧುರೆಗೆ. ಪೋಧ ತ್ರಿ
ವಿಕ್ರಮ. ನಮ್ಮ. ಮನೆದೈವ
(ವಾದಿರಾಜರು)
ii) ತಾಯ ಮಾ.ತನು ಕೇಳಿ. ಸಾಸಿರ. ತೋಳಿನ
ಅವಿನ. ಕಳ್ಳನ. ಕೊಂದಾನ್ಮ್ಯಾ
ಅವಿನ. ಕಳ್ಳನ. ಕೊಂದು ಭೂ.ಮಿಯ
ಅವನಿಸು.ರರಿಗೆ. ಇತ್ತಾನ್ಮ್ಯಾ
(ಕನಕದಾಸರು)

೩. ಸಾಂಗತ್ಯ
ಶ್ರೀ ಹಯ.ವದನ. ಆ.ಶ್ರಿತಜನ.ಮೋದನ
ಮೋಹಾಂಧ.ಕಾರ ಮಾ.ರ್ತಾಂಡಾ
ಸೋಹಂ ಎಂ.ದವರಿಗೆ. ಶೋಕವ.ನೀನ ನಿ
ರಹಂಕಾ.ರಿಗಳ ರ.ಕ್ಷಿಸುವ
(ವಾದಿರಾಜರು)

೪. ಸೀಸ ಪದ್ಯ
ಕರಿಪತಿ.ಯ ಸರಸಿ.ಯೊಳು ಮೊಸ.ಳೆ ಪಿಡಿಯ.ಲು ಭರದಿ
ಪರಮ ಪು.ರುಷ ಜಗ.ತ್ಪ್ರತಿಯೆನಲು
ಗರುಡವಾ.ಹನನಾಗಿ. ಹರಿ ಬಂದ.ವನ ಕಾಯ್ದ
ಪರದೈವ.ವಾರು ಜಗ.ದೊಳಗೆ ಪೇ.ಳಾ
(ಕನಕದಾಸರು)

ಇವುಗಳೊಂದಿಗೆ, ಮದನವತಿ, ದೊರಯಕ್ಕರ, ನಡುವಣಕ್ಕರ,ಚೌಪದಿ ಈ ಛಂದೋರೂಪಗಳನ್ನೂ ಸಹಿತ ನೋಡಬಹುದು.

೧.ಮದನವತಿ
– ರು
ನೆನೆವೆನು. ಅನುದಿನ. ನಿಮ್ಮಮ. ಹೆಮೆಯನು. ಮಧ್ವರಾಯಾ
-ರು
ಸನಕಾದಿ. ಮುನಿವೃಂದ . ಸೇವಿತ. ಪಾದಾಬ್ಜ. ಮಧ್ವರಾಯಾ
೨. ದೊರೆಯಕ್ಕರ
ತಿರುಪತಿ. ವೆಂಕಟ. ರಮಣ
ನಿನ ಗ್ಯಾತಕೆ. ಬಾರದು. ಕರುಣ

೩. ನಡುವಣಕ್ಕರ
ಆಡಿ. ಅಳುಕದ. ಅಜ್ಞಾನಿ. ಮನುಜರ. ಸಂಗ ಬೇಡ
ಕೂಡಿ ಕು.ಮಂತ್ರವ. ಎಣಿಸುವ. ನರರ ಪ್ರ.ಸಂಗ ಬೇಡ

೪. ಚೌಪದಿ
ಕಂಡೆ ಕ.ರುಣ ನಿಧಿ.ಯ. ಗಂಗೆಯ
ಮಂಡೆಯೊ.ಳಿಟ್ಟ ದೊರೆ.ಯ
ರುಂಡಮಾ.ಲೆ ಸಿರಿ.ಯ ನೊಸಲೊಳು
ಕೆಂಡಗ.ಣ್ಣಿನ ಬಗೆ.ಯ

ಕೀರ್ತನೆಗಳಲ್ಲಿ ಕಂಡುಬರುವ ಈ ವಿವಿಧ ಬಂಧಗಳನ್ನು ಗಮನಿಸಿದಾಗ ಅವು ಅಂಶ ಲಯ ಪ್ರಧಾನವಾದುವೆಂಬುದು ಸ್ಪಷ್ಟವಾಗುತ್ತದೆ. ಮಾತ್ರಾಗಣಗಳನ್ನು ಮೂಲಮಾನವಾಗಿಟ್ಟುಕೊಂಡು ಕೀರ್ತನೆಗಳನ್ನು ಪರಿಶೀಲಿಸಿದಲ್ಲಿ ಅವು ಸಾಮಾನ್ಯವಾಗಿ ಲಲಿತ, ಮಂದಾನಿಲ, ಉತ್ಸಾಹ (ಕ್ರಮವಾಗಿ ೫, ೪ ಮತ್ತು ೩ ಮಾತ್ರೆಯ ಗಣಗಳು) ಲಯಗಳಲ್ಲಿರುವುದು ಕಂಡುಬರುತ್ತದೆ. ಈ ಮೂರು ಲಯಗಳ ಖಚಿತ ನಡೆಯನ್ನು ವಿವಿಧ ಷಟ್ಪದಿಗಳಲ್ಲಿ ರಚಿತವಾಗಿರುವ ಕೀರ್ತನೆಗಳಲ್ಲಿ ಮಾತ್ರ ಗುರುತಿಸಬಹುದು.

೧. ಮಂದಾನಿಲಯದ ಶರಷಟ್ಪದಿ
ಮೋಸದಿ ಜೀವರ
ಘಾಸಿಮಾ.ಡಿದ ಪಾಪ
ಕಾಶಿಗೆ. ಹೋದರೆ. ಹೋದೋ.ತೇ
ಶ್ರೀಶನ. ಭಕುತರ
ದೂಷಿಸಿ.ದಾ ಫಲ
ಕಾಸು.ಕೊಟ್ಟರೆ. ಬಿಟ್ಟೀ.ತೇ
(ಕನಕದಾಸರು)

೨. ಉತ್ಸಾಹಲಯದ ಭೋಗಷಟ್ಪದಿ
ಈಶ. ನಿನ್ನ. ಚರಣ. ಭಜನೆ
ಆಸೆ.ಯಿಂದ ಮಾಡು.ವೆನು
ದೋಷ.ರಾಶಿ. ನಾಶ. ಮಾಡೋ.ಶ್ರೀಶ. ಕೇಶ.ವ
(ಕನಕದಾಸರು)

೩. ೩+೪ರ ಲಯದ ಭಾಮಿನೀ ಷಟ್ಪದಿ
ಬಟ್ಟ. ಮುತ್ತಿನ. ಪದಕ. ಹಾರನೆ
ಬಾಹು. ಹಸ್ತ ಚ.ತುಷ್ಟ.ನೆ
ಇಟ್ಟ. ತೊಡಿಗೆಯ. ಹೇಮ. ಕಂಕಣ. ಪಾಶ. ಅಂಕುಶ.ಧರನೆ
(ಕನಕದಾಸರು)

೪. ಲಲಿತಲಯದ ವಾರ್ಧಕಷಟ್ಪದಿ
ಸೆಳೆಯುತಿ.ರ್ದನು ಖಳನು. ಬೆಳೆಯುತಿ. ರ್ದುದುಸೀರೆ
ಪೊಳೆವ. ಪೊಂ.ಬಟ್ಟಿ, ನಾ.ನಾ ವಿಚಿ.ತ್ರದ ಬಣ್ಣ
ಹೊಳಲು ತುಂಬುವ ತೆರದಿ. ಸೆಳೆಸೆಳೆದು. ಪಾಪಾತ್ಮ. ಬಳಲಿ
ಇಳೆ.ಯೋಳಗೊರಗಿ.ದ
(ಕನಕದಾಸರು)

ಕೀರ್ತನೆಗಳ ಈ ಛಂದೋವೈವಿಧ್ಯವನ್ನು ಕುರಿತು ಡಿ.ಎಸ್. ಕರ್ಕಿಯವರು “ಕ್ರಿ.ಶ.೧೬ನೆಯ ಶತಮಾನವು ಕನ್ನಡ ಛಂದಸ್ಸಿನ ದೃಷ್ಟಿಯಿಂದ ಮೂರನೆಯ ಪ್ರಯೋಗ ಯುಗವನ್ನು ನಿರ್ದೇಶಿಸುತ್ತದೆ” ಎನ್ನುತ್ತಾರೆ. ಹನ್ನೆರಡನೆ ಶತಮಾನದಲ್ಲಿ ವಚನಗಳ ರೂಪದಲ್ಲಿ ಹೊಮ್ಮಿದ ಭಕ್ತಿ ಸಾಹಿತ್ಯ ೧೬ನೆಯ ಶತಮಾನದಲ್ಲಿ ಕೀರ್ತನೆಗಳ ರೂಪದಲ್ಲಿ ಹೊಮ್ಮಿತ್ತು. ವಚನಕಾರರ ಕೈಯಲ್ಲಿ ಅಂಶಗಣ ಮಾತ್ರಾಗಣವಾಗಿ ಪರಿವರ್ತಿತವಾದದ್ದು ಕೀರ್ತನಕಾರರ ಕೈಯಲ್ಲಿ ಮತ್ತೆ ಅಂಶಲಯವೇ ಪ್ರಧಾನವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಾತು ನಿಜ. ಕೀರ್ತನೆಗಳ ಲಯವನ್ನು ಗಮನಿಸಿದಾಗ ಅಂಶಲಯವೇ ಪ್ರಧಾನವಾಗಿ ಕಂಡುಬರುತ್ತದೆ. ಆದರೆ. ಗಣವಿಭಜನೆಗೆ ತೊಡಗಿದರೆ ಇತ್ತ ಅಂಶಗಣವೂ ಸಾಧುವಿಲ್ಲ; ಅತ್ತ ಮಾತ್ರ ಗಣವೂ ಸಾಧ್ಯವಾಗುವುದಿಲ್ಲ. ಹಿಂದಿನ ಕೆಲವು ಉದಾಹರಣೆಗಳಲ್ಲಿ ಇದನ್ನು ಗಮನಿಸಬಹುದು. ಉದಾಹರಣೆಗೆ, ಇನ್ನೊಂದು ಕೀರ್ತನೆಯನ್ನು ನೋಡಬಹುದು.

ಇದಿರದಾ.ವನು ನಿನ.ಗೀ ಧರೆ.ಯೊಳು
ಪದುಮ ನಾ.ಭನ ದಾಸ. ಪರಮೋಲ್ಲಾ.ಸಾ

ವಾದಿತಿ. ಮಿರಮಾಂ.ರ್ತಾಂಡ ನೆಂ.ದೆನಿಸಿದ
ವಾದಿ ಶ.ರಭ ಬೇ.ರುಂಡ ವ್ಯಾ.ಸರಾಯಾ                     ೧

ಯತಿಗಳೊ.ಳಗೆ ನಿಮ್ಮಂದದ.ವರುಗಳ
ಪ್ರತಿಗಣೆ.ನು ಈ.ಕ್ಷತಿಯೊಳು. ಯತಿರಾಯಾ                  ೨

ಹಮ್ಮಿನಳಿ.ದು ಶ್ರೀ.ಪತಿ ರಂಗ.ವಿಠಲನ್ನ
ಸುಮ್ಮಾನ.ದಿಂ ಸೇ.ವಿಪ ವ್ಯಾಸ.ಮುನಿರಾಯ               ೩
(ಶ್ರೀಪಾದರಾಯರು)

ಈ ಕೀರ್ತನೆ ಅಂಶಲಯದಲ್ಲಿದ್ದು, ವಿಷ್ಣುಗಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದರೂ ಖಚಿತವಾದ ಗಣವಿಭಜನೆ ಸಾಧ್ಯವಾಗುವುದಿಲ್ಲ. ಮಾತ್ರಾಗಣಾನುಸಾರವಾದ ವಿಭಜನೆಯೂ ಸಾಧ್ಯವಿಲ್ಲ. ಆದರೆ ಸಂಗೀತದ ಲಯದ ಹಿನ್ನೆಲೆಯಲ್ಲಿ ನಿರ್ದಿಷ್ಟವಾದ ಲಯವಿದೆ. ಹರಿದಾಸರ ಹೆಚ್ಚಿನ ಕೀರ್ತನೆಗಳ ಛಂದಃಸ್ವರೂಪ ಹೀಗೆಯೇ ಇದೆ. ಸಂಗೀತದ ತಳಹದಿಯ ಮೇಲೆ ರಚಿತವಾಗಿರುವ ಈ ಕೀರ್ತನೆಗಳಲ್ಲಿ ವರ್ಣ ವುತ್ತದ ಲಯಗಳನ್ನಾಗಲಿ ಮಾತ್ರಾ ವೃತ್ತದ ಸ್ವರೂಪವನ್ನಾಗಲಿ ನಿರ್ದೇಶಿಸುವುದು ಉಚಿತವೆನ್ನಿಸದು. ಸಂಗೀತದ ತಳಹದಿಯ ಮೇಲೆ ರಚಿತವಾಗಿರುವುದರಿಂದ ಕೀರ್ತನೆಗಳ ಗಣಗಳನ್ನು ಅಂಶಲಯಬದ್ಧವಾದ ಗಣಗಳಿ ಘಟಿತ ಪ್ರಕಾರಗಳಲ್ಲಿ ಹೆಚ್ಚೆಂದರೆ, ನಾಲ್ಕು ಅಂಶ (ರುದ್ರಗಣ) ಅಥವಾ ಐದು ಮಾತ್ರೆಯ ಗಣ ಮತ್ತು ಮೂರು+ನಾಲ್ಕು ಮಾತ್ರೆಗಳ ಮಿಶ್ರಲಯಗಳಲ್ಲಿ ಮಾತ್ರ ನಿರ್ವಹಣೆ ಸಾಧ್ಯ. ಆದರೆ ಸಂಗೀತದ ಖಂಡ(ತಕ ತಕಿಟ), ಮಿಶ್ರ (ತಕಿಟ ತಕಧಿನ) ಹಾಗೂ ಚತುರಸ್ರ (ತಕಧಿನ) ಜಾತಿಗಳ ಲಯಗಳಲ್ಲಿ ಕೀರ್ತನೆಗಳ ನಿರ್ವಹಣೆ ವಿಸ್ತಾರವಾಗುವ ಸಾಧ್ಯತೆಯಿದೆ. ಕೀರ್ತನೆಗಳ ಛಂದಸ್ಸಿನ ಈ ಸ್ವರೂಪವನ್ನು ಕುರಿತು ದ್ರಾವಿಡಾ ಛಂದಸ್ಸಿನ ತಳಹದಿಯಾದ ಬ್ರಹ್ಮ-ವಿಷ್ಣು-ರುದ್ರಗಣಗಳು ಇಲ್ಲಿಯೂ ಇದ್ದರೂ ಬೇರೊಂದು ಮಾದರಿಯಾಗಿ ಹೆಣೆದುಕೊಂಡಿರುವ ಹೊಸಛಂದಸ್ಸು ಹರಿದಾಸರಿಂದ ಹೊಸದಾಗಿ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ದಾಸರು ತಂಬೂರಿ ಚಟಕಿಗಳೊಂಡಿಗೆ ಹಾಡುವುದರಿಂದ ಕೀರ್ತನೆಗಳು ಖಂಡಛಾಪುತಾಳಕ್ಕೆ ಅನುಗುಣವಾಗಿ ಸಂಯೋಜಿತವಾಗಿರುತ್ತದೆ. ಅದನ್ನು ಬಿಟ್ಟರೆ ಮಿಶ್ರಛಾಪುತಾಳ ಪ್ರಮುಖವಾಗಿ ಕಂಡುಬರುತ್ತದೆ. ಉಳಿದವುಗಳಲ್ಲಿ ಹೆಚ್ಚಿನವು ಚತುರಸ್ರಲಯದಲ್ಲಿ ಏತಕಾಳ ಅಥವಾ ಆದಿತಾಳಕ್ಕೆ ಹೊಂದಿಕೊಳ್ಳುತ್ತವೆ. ಖಂಡಾಛಾಪು ತಾಳವಂತೂ ಈ ಕೀರ್ತನೆಗಳ ಲಯದಿಂದ ಹುಟ್ಟಿದ ತಾಳವೆಂದರೂ ತಡೆಯುತ್ತದೆ. ಬಹುಶಃ ಕನ್ನಡ ಕಾವ್ಯದ ಛಂದಸ್ಸೇ ಕನ್ನಡ ನಾಡಿನ ಲಯಕೆ ನಿರ್ಧಾರ‍ಕ ಸೂತ್ರವಾಗಿದ್ದು. ತಾಳ ವೈವಿಧ್ಯಕ್ಕೆ ಜನ್ಮಕೊಟ್ಟಿದೆ” ಎಂದು ಹೇಳಬಹುದು.

ಈ ‘ಕೀರ್ತನೆ’ಯನ್ನು ಹೋಲುವ ಶಿವದಾಸರ ಹಾಡುಗಳನ್ನು ಕುರಿತು ಹೇಳುವಾಗ, ಹರಿದಾಸರ “ಕೀರ್ತನ ಪ್ರಕಾರಕ್ಕೆ ೧೨ನೇ ಶತಮಾನದ ಬಸವಾದಿ ಶಿವದಾಸರ ಈ ಗೀತಾ (ಹಾಡುಗಳ) ಪ್ರಕಾರವು ಮೂಲವೂ ಮಾದರಿಯೂ ಆಗಿದ್ದುವು” ಎನ್ನುತ್ತಾರೆ, ಎಲ್.ಬಸವರಾಜು ಅವರು. (ಆದರೆ ಇದರೊಂದಿಗೇ ಶ್ರೀರಂಗದಲ್ಲಿದ್ದ, ದಾಸಸಾಹಿತ್ಯದ ಪ್ರವರ್ತಕರಾದ ಶ್ರೀಪಾದರಾಜರ ಮೇಲಾದ ತಮಿಳಿನ ಆಳ್ವಾರರ ಪ್ರಭಾವವನ್ನೂ ಮರೆಯುವಂತಿಲ್ಲ. ತಾಯ್ನುಡಿಯಲ್ಲಿ ರಚಿತವಾಗಿದ್ದ ವೈಷ್ಣವ ಆಳ್ವಾರರ ಭಕ್ತಿಗೀತೆಗಳನ್ನು ಅವರು ಸ್ವತ ಕೇಳಿದವರಾಗಿದ್ದರು; ಅವುಗಳ ಪರಿಣಾಮವನ್ನು ಅರಿತವರಾಗಿದ್ದರು). ಉದಾಹರಣೆಗೆ ‘ಶಿವದಾಸ’ರ ಒಂದು ಹಾಡಿನ ಸ್ವರೂಪ ಹೀಗಿದೆ.

ಒಲ್ಲೆನೊಕತನವ ಒಲ್ಲೆ, ನಾನಾರೆ;
ಕೊಲ್ಲಬಂದಾನೆಗೆ ಕೋಪದಲಿ ನಲ್ಲ || ||ಪಲ್ಲವ||

ಮಾನವೆಂಬವ ನನ್ನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮುತ್ತಿನ್ನಾರಿಗೆ ಹೇಳುವೆ ||

ಮನೆಯಾತನ ಕೊಂದು, ಮಾನವ ಹಳ್ಳವ ಕೂಡಿ
ಬಿನುಗು ಭಾವದಿರೆನು [ಬೀದಿ] ಪಾಲ ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ ||

ಮುನ್ನಿನ ಪ್ರಮಥ ಗಣಂಗಳೆನ್ನ ಬಂಧು ಬಳಗ
[ಉನ್ಮನಿಯ] ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನತ್ತ ಬಾರೆ ನಾನೆಲೆ ತಾಯಿ ||
(ಅಕ್ಕಮಹಾದೇವಿ)

‘ಕೀರ್ತನೆ’, ‘ಹಾಡು’ ಇವುಗಳಲ್ಲಿ ಎದ್ದು ಕಾಣುವ ವ್ಯತ್ಯಾಸವೆಂದರೆ ಕೀರ್ತನೆಯಲ್ಲಿ ಅನು ಪಲ್ಲವಿ ನಿಯತ ಹಾಡುಗಳಲ್ಲಿ ಅನುಪಲ್ಲವಿ ಇರುವುದಿಲ್ಲ. (ಈ ನಿಯಮಕ್ಕೂ ಅಪವಾದ ವುಂಟು) ಕೀರ್ತನೆಗಳಿಗೆ ರಾಗ ತಾಳಗಳ ವೈವಿಧ್ಯವಿದೆ ಮತ್ತು ಅವುಗಳ ಸ್ಪಷ್ಟ ನಿರ್ದೇಶನವಿದೆ. ಹಾಡುಗಳಿಗೆ ಸ್ಪಷ್ಟವಾದ ರಾಗನಿರ್ದೇಶನವಿದ್ದರೂ ತಾಳ ವೈವಿಧ್ಯವಿರುವಂತೆ ಕಾಣುವುದಿಲ್ಲ. ಎಲ್ಲೋ ಪ್ರಾಸಂಗಿಕವಾಗಿ ಎನ್ನುವಂತೆ ಅಟ್ಟತಾಳ, ಝಂಪೆತಾಳ, ರೂಪಕತಾಳಗಳ ಹೆಸರುಗಳು ಬಂದಿವೆ. ಅಷ್ಟೆ.

ಒಟ್ಟಿನಲ್ಲಿ, ನಿರ್ದಿಷ್ಟ ವರ್ಣಸಂಖ್ಯೆ ಮತ್ತು ಗುರು ಲಘುಗಳ ನಿನ್ಯಾಸಕ್ರಮದಿಂದಾಗಲಿ, ನಿರ್ದಿಷ್ಟ ಮಾತ್ರಾಸಂಖ್ಯೆ ಮತ್ತು ಗುರುಲಘುಗಳ ವಿನ್ಯಾಸಕ್ರಮದಿಂದಾಗಲಿ ನಿರ್ಬಂಧಿತವಾಗದೆ ಲಯಾನುಸಾರವಾಗಿ ಏರ್ಪಡುವ ಪ್ರತಿಗಣದಲ್ಲಿ ಗುರು ಲಘುಗಳ ಸಂಖ್ಯೆ ಮತ್ತು ವಿನ್ಯಾಸಕ್ರಮದಲ್ಲಿ ಸ್ವಯಂಚಾಲಿತವಾದ ಸ್ವಾತಂತ್ರ್ಯವಿದ್ದು, ಹಾಡಿನ ಸುಭಗತೆಗೆ ಲಯಗತಿಗೆ ಅಡ್ಡಿಯಾಗದಂತೆ ಗಣಗಣಗಳಲ್ಲಿ ಪರಸ್ಪರ ಸಮತೂಕವಿರುತ್ತದೆ. ಅಂಶಗಣ ಪ್ರಕಾರ ವಿಭಜನೆಯಾ ಸಾಧ್ಯವಿಲ್ಲದ, ಮಾತ್ರಗಣಗಳ ಚೌಕಟ್ಟಿಗೂ ಒಳಪಡದ, ಆದರೆ ನಿರ್ದಿಷ್ಟ ಸಂಗೀತ ಧಾಟಿಯುಳ್ಳ ಗೀತಪ್ರಕಾರಗಳು ಈ ಕೀರ್ತನೆಗಳು. ಸಂಗೀತ ಪ್ರಾಧಾನವಾದ ಈ ಪ್ರಕಾರದಲ್ಲಿ ಅಂಶ ಮಾತ್ರಲಯಗಳೆರಡನ್ನೂ ಗುರುತಿಸಬಹುದು. ಕಾವ್ಯಗಳಲ್ಲಿ ಪ್ರಯೋಗವಾಗಿರುವ ನಿಯತವಾದ ಛಂದೋ ಪದ್ಧತಿಗೂ ಇವುಗಳಿಗೂ ಅಂತರವಿದೆ ಎಂಬ ಮಾತು ನಿಜ. ಇಂತಹ ಕೀರ್ತನೆಯ ಲಯ ಇಂತಹ ಛಂದೋಬಂಧಕ್ಕೆ ಹತ್ತಿರವಾಗಿದೆ ಎಂದು ಗುರುತಿಸಬಹುದೇ ವಿನಾ ಕಾವ್ಯಗಳಲ್ಲಿನ ಗಣಗಳ ರೀತಿಯಲ್ಲಿ ಕೀರ್ತನೆಗಳ ಗಣಗಳನ್ನು ಖಚಿತವಾಗಿ ವಿಭಜಿಸಲು ಸಾಧ್ಯವಿಲ್ಲ. ಸಂಗೀತದ ಸೌಕರ್ಯವನ್ನು ಹೆಚ್ಚಾಗಿ ಒಳಗೊಂಡುದರಿಂದ ಛಂದಸ್ಸಿನ ಅತಿ ನಿರ್ಬಂಧತೆಯಿಂದ ಬಿಡುಗಡೆ ಹೊಂದಿದುವು ಈ ಕೀರ್ತನೆಗಳು.

III

ಮೇಲ್ನೋಟಕ್ಕೇ ದಾಸರ ಕೀರ್ತನೆಗಳು ಮತ್ತು ಶರಣರ ಗೀತೆಗಳಲ್ಲಿ ಕೆಲವು ವ್ಯತ್ಯಾಸಗಳು ಎದ್ದು ಕಾಣುತ್ತವೆ. ದಾಸರ ಕೀರ್ತನೆಗಳಲ್ಲಿ ಅನುಪಲ್ಲವಿ ನಿಯತ, ಶರಣರ ಹಾಡುಗಳಲ್ಲಿ ಸಾಮಾನ್ಯವಾಗಿ ಅನುಪಲ್ಲವಿ ಇರುವುದಿಲ್ಲ. ಕೀರ್ತನೆಗಳಲ್ಲಿ ರಾಗ ತಾಳಗಳೆರಡರ ನಿರ್ದೇಶನವೂ ಇರುತ್ತದೆ. ಶರಣರ ಗೀತೆಗಳಿಗೆ ರಾಗ ನಿರ್ದೇಶನ ಮಾತ್ರ ಇದೆ. ದಾಸರ ಕೀರ್ತನೆಗಳಲ್ಲಿ ಸಾಹಿತ್ಯ ಸಂಗೀತಗಳಿಗೆ ಪ್ರಾಧಾನ್ಯ. ಅವು ನಾದಭೂಯಿಷ್ಯವಾದವು. ಸಂಗೀತ ಶಾಸ್ತ್ರದ ಹಿನ್ನೆಲೆಯಲ್ಲಿ ರಚಿತವಾಗಿವೆ. ಶರಣರ ಕೃತಿಗಳು ತತ್ವಪ್ರಧಾನವಾದವು. ವಿಚಾರ ಭೂಯಿಷ್ಯವಾದವು. ಈ ಕಾರಣದಿಂದಲೇ ಬಹುಶಃ ಶರಣರ ಹಾಡುಗಳು ದಾಸರಕೀರ್ತನೆಗಳಂತೆ ಜನಪ್ರಿಯವಾಗಲಿಲ್ಲವೆಂಬ ಅಭಿಪ್ರಾಯವೂ ವಿದ್ವಾಂಸರದಲ್ಲಿದೆ!

ಏನೇ ಆದರೂ ಶರಣರು, ದಾಸರು ಇಬ್ಬರೂ ಹಾಡುಗಳನ್ನು ಕೀರ್ತನೆಗಳನ್ನು ರಚಿಸಿರುವುದು ಸ್ಪಷ್ಟ. ಸಾಕಷ್ಟು, ಸಾಹಿತ್ಯ ಸಾಮಗ್ರಿಯಂತೂ ದೊರೆತಿದೆ. ಅವು ಯಾರಿಂದ ಯಾವಾಗ ರಚನೆಯಾದವು ಎನ್ನುವ ಬಗ್ಗೆ ಮತ್ತು ಅವುಗಳ ಸಂಗೀತ ಮೌಲ್ಯವೇನು? ಹರಿದಾಸರ ಹಾಡುಗಳಿಗೆ ಶರಣರ ಹಾಡುಗಳೇ ಮೂಲವೆ? ಎನ್ನುವ ಬಗ್ಗೆ ಖಚಿತವಾಗಿ ಹೇಳಲು ಆ ದಿಕ್ಕಿನಲ್ಲಿ ಇನ್ನಷ್ಟು ಅಭ್ಯಾಸದ ಅಗತ್ಯವಿದೆ. ಬಸವಾದಿ ಶರಣರೇ ಹಾಡುಗಳನ್ನು ರಚಿಸುವುದಾದಲ್ಲಿ ನಮ್ಮ ಕೀರ್ತನ ಸಾಹಿತ್ಯದ ಇತಿಹಾಸ ಇನ್ನೂ ಮುನ್ನೂರು ವರ್ಷಕಾಲ ಹಿಂದೆ ಸರಿಯುತ್ತದೆ. ಸದ್ಯಕ್ಕೆ ಕೀರ್ತನ ಸಾಹಿತ್ಯ ೧೫-೧೬ನೇ ಶತಮಾನಗಳಲ್ಲಿ ಶ್ರೀಪಾದರಾಜರಿಂದ ಮೊದಲಾಗಿ ಕನಕ ಪುರಂದರಾಗಿ ಹರಿದಾಸ ಪರಂಪರೆಯಿಂದ ಪುಷ್ಟಿಗೊಂಡಿತೆಂದು ಇಟ್ಟುಕೊಳ್ಳಬಹುದು.

‘ಕೀರ್ತನೆ’ ಮತ್ತು ‘ಕೃತಿ’ಗಳು ಮೊದಲು ಸಮಾನಾರ್ಥಕಗಳಾಗಿದ್ದಾರೂ ಕ್ರಮೇಣ ‘ಕೃತಿ’ ಶಾಸ್ತ್ರೀಯವಾಗಿ ಬೆಳೆದು ‘ಕೀರ್ತನೆ’ಗಿಂತ ಭಿನ್ನಸ್ತರದಲ್ಲಿ ಗುರುತಿಸಲ್ಪಟ್ಟಿತು. ಕೀರ್ತನೆ ಸಾಹಿತ್ಯ ಪ್ರಧಾನ ಪ್ರಬಂಧ, ಕೃತಿ ಸಂಗೀತಪ್ರದಾನ ಪ್ರಬಂಧ, ದೇವರ ನಾಮದ (ಕೀರ್ತನೆಯ) ವಿನ್ಯಾಸ ವಿಕಾಸವು ಕೃತಿಯೊಂದಕ್ಕೆ ಬೀಜರೂಪದಲ್ಲಿದೆ, ಎರಡಕ್ಕೂ ಮಾತು ಸಮಾನವಾದರೂ ಕೀರ್ತನೆಯಲ್ಲಿ ಮಾತು ಪ್ರಧಾನಕರ, ಕೃತಿಗಳು ಶುದ್ಧ ಸಂಗೀತದ ಉತ್ತಮ ನಿದರ್ಶನಗಳು ಇಂತಹ ಮಾತುಗಳಿಂದ ಹರಿದಾಸರ ಆನಂತರದ ವಾಗ್ಗೇಯಕಾರರಲ್ಲಿ ಇಂತಹ ರಚನೆಗಳು ಸಂಗೀತ ಪ್ರಾಧಾನವಾಗಿ ಮಿತವಾದ ಸಾಹಿತ್ಯವನ್ನೊಳಗೊಂಡು, ಹಾಡಲು ಅನುಕೂಲವಾಗುವ ರಾಗಗಳಲ್ಲಿ, ಅತೀತ ಅನಾಗಾರ ಪ್ರಯೋಗಗಳೊಂದಿಗೆ ಬೆಳೆದು ಕೃತಿಗಳೆನಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ ನೆರವಲ್ ಕಲ್ಪನಾಸ್ವರಗಳು ಚಿಟ್ಟೆಸ್ವರಗಳಿಗೂ ಅವಕಾಶ ದೊರೆತು ಕೃತಿಗಳು ಹೆಚ್ಚು ಹೆಚ್ಚು ಶಾಸ್ತ್ರೀಯವಾಗುತ್ತಾ ನಡೆದವು. ಒಟ್ಟಾರೆ ಕೀರ್ತನೆಯ ಛಂದೋಲಯ ಹಾಡುಗಬ್ಬವಾಗಿವೆ; ಸಂಗೀತ ಪ್ರಾಧಾನವಾಗಿವೆ.