ನ್ನಡ ಸಾಹಿತ್ಯಕ್ಕೆ ಸುಮಾರು ಸಾವಿರದ ಐನೂರು ವರ್ಷಗಳ ಇತಿಹಾಸವಿದೆ. ಆದರೆ ಅಷ್ಟು ವರ್ಷಗಳ ಕಾಲವೂ ಸ್ತ್ರೀಪರವಾದ, ಸ್ತ್ರೀವಿಚಾರಗಳನ್ನು ಪ್ರತಿಧ್ವನಿಸುವ ಸಾಹಿತ್ಯ ರಚನೆಯಾದುದು ತುಂಬ ಕಡಿಮೆ. ಹತ್ತನೆಯ ಶತಮಾನದಲ್ಲಿ ಅತ್ತಿಮಬ್ಬೆ ತಾನು ಸ್ವತಃ ಬರಹಗಾರ್ತಿಯಾಗದಿದ್ದರೂ ತನ್ನ ಸಂಪತ್ತನ್ನು ಜೈನಧಾರ್ಮಿಕ ಕೃತಿಯಾದ ಶಾಂತಿಪುರಾಣ ವನು ಪ್ರಚಾರ ಮಾಡಲು ಬಳಸಿದ್ದು ಹಾಗೂ ರನ್ನನ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ವನ್ನು ನೀಡಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸ್ವರಿಸುವಂತಹ ಒಂದು ಮಹತ್ವದ ಘಟ್ಟ.

ಹನ್ನರಡನೆಯ ಶತಮಾನದ ವಚನ ಸಾಹಿತ್ಯ ಸ್ತ್ರೀಪರವಾದ ಚಳುವಳಿಗೆ ವೈಚಾರಿಕವಾದ ಭದ್ರ ಬುನಾದಿಯನ್ನು ಹಾಕಿತು ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಸಂಸಾರದ ಸಾಂಸ್ಥಿಕ ಬಂಧದಿಂದ ಹೊರ ಬಂದು ನಿಶ್ಚಿತವಾದ ತಿರುವನ್ನು ನೀಡಿದ ಅಕ್ಕಮಹಾದೇವಿಯ ಬದುಕು ಬರೆಹಗಳು ಕನ್ನಡ ಸಾಹಿತ್ಯದ ಸ್ತ್ರೀಪರ ಚಿಂತನೆಯ ಚರಿತ್ರೆಯಲ್ಲಿ ಮಹತ್ವದ ಘಟ್ಟಗಳು. ಅಕ್ಕಮಹಾದೇವಿಯ ಮಾರ್ಗದಲ್ಲಿ ಮುನ್ನಡೆದ ಮುಕ್ತಾಯಕ್ಕ, ಕಾಳವ್ವೆ, ಗಂಗಾಂಬಿಕೆ ಮುಂತಾದ ಶರಣೆಯರ ಬರೆಹಗಳಲ್ಲಿ ಸ್ತ್ರೀವಾದಿ ತತ್ವಗಳ ಛಾಯೆಯನ್ನು ನಾವು ಗುರುತಿಸಬಹುದು. ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಸಾಂಸ್ಕೃತಿಕ ನೆಲೆಗಳನ್ನು ಹುಡುಕುವಾಗ ಶರಣರ ವಚನಗಳಿಗೆ ಆದ್ಯತೆ ನೀಡಬೇಕಾಗಿದೆ.

ಕನ್ನಡ ಸಾಹಿತ್ಯದಲ್ಲಿ ಎದ್ದ ಮತ್ತೊಂದು ಪ್ರಮುಖ ಸ್ತ್ರೀವಾದಿ ಸಾಂಸ್ಕೃತಿಕ ನೆಲೆಯೆಂದರೆ ದಾಸ ಸಾಹಿತ್ಯ. ದಾಸ ಸಾಹಿತ್ಯದಲ್ಲಿ ಪ್ರಗತಿಪರ ಚಿಂತನೆಯ ಮಜಲುಗಳು, ಸಮಕಾಲೀನ ಸಮಾಜದ ಧೋರಣೆಗಳು ಹಾಗೂ ನಂಬಿಕೆ, ಆಚರಣೆಗಳ ಬಗೆಗಿನ ಸಂಪೂರ್ಣ ಅರಿವು ಆ ಸಾಹಿತ್ಯದ ಅಧ್ಯಯನಕಾರನಿಗೆ ಉಂಟಾಗುತ್ತದೆ. ಪಾತಿವ್ರತ್ಯಕ್ಕೆ, ಧಾರ್ಮಿಕ ವ್ರತಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಗಲಗಲಿ ಅವ್ವ, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವರ ರಚನೆಗಳನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಗಮನಿಸಬೇಕಾಗುತ್ತದೆ. ಕೌಟುಂಬಿಕ ಜೀವನವನ್ನು ಹಸನಾಗಿರಿಸುವುದು ಹಾಗೂ ಪತಿವ್ರತಾಧರ್ಮ ಕಾಪಾಡುವುದು ಇವೇ ಮುಂತಾದ ಮೌಲ್ಯಗಳನ್ನು ಅಭಿವ್ಯಕ್ತಿಸುವುದು ಮಹಿಳಾ ದಾಸರ ರಚನೆಗಳ ಮುಖ್ಯ ಉದ್ದೇಶವಾಗಿದೆ. ಅವರ ಒಟ್ಟು ದೃಷ್ಟಿಕೋನವನ್ನು ಗಮನಿಸಿದಾಗ ಕುಟುಂಬ ಮತ್ತು ಸಮುದಾಯದಲ್ಲಿ ಮಹಿಳೆಯರ ಸಂಸ್ಕೃತಿ ಸಂವರ್ಧನೆಯಾಗಿದೆ. ಕನ್ನಡ ಸಾಹಿತ್ಯವನ್ನು ಸಂಸ್ಕೃತಿ ನೆಲೆಯಿಂದ ವಿಶ್ಲೇಷಿಸುವಾಗ ಹರಪನಹಳ್ಳಿ ಭೀಮವ್ವನ ರಚನೆಗಳ ಹಿಂದಿರುವ ತಾತ್ವಿಕತೆ ಹಾಗೂ ಅವಳ ಕೊಡುಗೆಯನ್ನು ವಿವರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ಈ ಅಧ್ಯಾಯದಲ್ಲಿ ಆ ಕುರಿತು ಚರ್ಚೆ ಬೆಳಸಲಾಗಿದೆ.

ಸಾಹಿತ್ಯದ ಪ್ರತಿಯೊಂದು ಸಾಮಾಜಿಕ ಚಳುವಳಿಯ ಅತ್ಯಂತ ಪ್ರಬಲ ಸಾಧನಗಳಲ್ಲಿ ಭಾಷೆಯೂ ಒಂದು. ಭಾಷಿಕರ ಭಾವನೆಗಳನ್ನು ಅನುಭವಗಳನ್ನು ಹೊರತರುವ ಅತ್ಯಂತ ಪ್ರಬಲ ಮಾಧ್ಯಮ ಭಾಷೆಗಿರುವುದರಿಂದ ಅದು ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಮಹಿಳೆಯರ ಸಂವೇದನೆಗಳಿಗೆ ಸೂಕ್ಷ್ಮಗ್ರಹಿಕಾ ಶಕ್ತಿಗೆ ಅವರ ಭಾಷಾ ನಿರ್ವಚನ ಪ್ರಮುಖ ಪಾತ್ರವಹಿಸುತ್ತದೆ. ಸ್ತ್ರೀಯರ ಭಾಷೆ-ಲಯ-ನಾದ ಪುರುಷರಿಗಿಂತ ಭಿನ್ನವಾಗಿರುತ್ತದೆ. ತನ್ನ ತನದ ಅಭಿವ್ಯಕ್ತಿಗೆ ಆಕೆ ಬಳಸುವ ಭಾಷೆ ಅವಳ ಅಸ್ತಿತ್ವವನ್ನು ಪುರುಷ ಲೋಕದ ವೈಭವೀಕರಣಕ್ಕೆ ವಿರುದ್ಧ ನಡೆಯುವ ತತ್ವರಿಣಾಮವಾಗಿ ಲಿಂಗ ಸಮಾನತೆಯನ್ನು ಬಿಂಬಿಸುತ್ತದೆ. ಕುಟುಂಬದ ಪರಿಸರದಲ್ಲಿ ನಡೆಯುವ ಸಾಮಾಜೀಕರಣದ ಪ್ರಕ್ರಿಯೆ
ಭವಿಷ್ಯದಲ್ಲಿ ಜೀವನವನ್ನು ಕುರಿತಂತೆ ತಳೆಯಬಹುದಾದ ಭಾಷಿಕ ನಿಲುವು, ಒಲವುಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಡುತ್ತದೆ. ಭಾಷಿಕ ಕ್ರಿಯೆಗಳು ಬದುಕಿನ ಹಲವು ವಲಯಗಳಲ್ಲಿ ನಡೆಯುವುದರಿಂದ ಆ ವಿಭಿನ್ನ ಸಾಮಾಜೀಕರಣದ ಪರಿಣಾಮಗಳನ್ನು ಭಾಷಿಕರು ಎದುರಿಸಬೇಕಾಗುತ್ತದೆ. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ತಮ್ಮ ಭಾವನೆಗಳನು, ಆಲೋಚನೆಗಳನ್ನು ನಿರ್ಭಯವಾಗಿ ಅಭಿವ್ಯಕ್ತಿಸಿದ್ದಾರೆ. ಸ್ತ್ರೀಪರವಾದ ಧೋರಣೆಯ ಪುನರ್ ಮೌಲೀಕರಣದಲ್ಲಿ ಅವರು ಬಳಸುವ ಭಾಷೆ ತುಂಬ ಮಹತ್ವದ ಪಾತ್ರವಹಿಸುತ್ತದೆ. ಭೀಮ್ಮವಳ ರಚನೆಗಳು ಇದಕ್ಕೆ ಹೊರತಲ್ಲ. ಭೀಮವ್ವ ತನಗೆ ಅನಿಸಿದ್ದನ್ಜು ತನ್ನ ಪರಿಸರದ ಭಾಷೆ ಮತ್ತು ಲಯದಲ್ಲಿ ಅಭಿವ್ಯಕ್ತಿಸಿದಿದಾಳೆ. ಒಂದು ಬಗೆಯ ಸಾಂಸ್ಕೃತಿಕ ಕಾವ್ಯ ಸಂಯೋಜನೆಯ ಕ್ರಿಯೆ ಅವಳ ರಚನೆಗಳಲಿ ನಡೆದಿದೆ.

ಭೀಮವ್ವಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ ಹಾಗೂ ಭಾಗವತಗಳ ಕತೆ, ಘಟನೆಗಳನ್ನು ಮೂಲಭಿತ್ತಿಯನ್ನಾಗಿಟ್ಟುಕೊಂಡು ಮಹಿಳೆಯ ಬದುಕನ್ನು ಕೇಂದ್ರ ವಸ್ತುವನ್ನಾಗಿ ಹೊಂದಿ ಅನೇಕ ಲಘು ಮತ್ತು ದೀರ್ಘ ಹಾಡುಗಳನ್ನು ರಚಿಸಿದ್ದಾಳೆ. ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬರೆಯಲಾರಂಭಿಸಿದ ಭೀಮವ್ವ ಕನ್ನಡ ಸಾಹಿತ್ಯಕ್ಕೆ ನಿಶ್ಚಿತವಾದ ಮಹಿಳೆಯರ ಪರವಾದ ಸಾಂಸ್ಕೃತಿಕ ಧೋರಣೆಯನ್ನು ನೀಡಿದವರಲ್ಲಿ ಅಗ್ರಮಾನ್ಯರಿ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿಯೇ ವಿಧವೆಯಾದ ಭೀಮವ್ವ ವೈಯಕ್ತಿಕ ಅದುಕಿನಲ್ಲಿ ಅಪಾರ ನೋವುಗಳನ್ನು ಅನುಭವಿಸಿದರು. ಆದರೆ ಆ ತೊಂದರೆಗಳು ಅವಳ ಜೀವನವನ್ನು ಪಕ್ವ ಮಾಡಿದವೇ ಹೊರತು ಮಂಕಾಗಿಸಲಿಲ್ಲ. ಮುತ್ತೈದೆಯರ ಜೀವನ ಕ್ರಮವನ್ನು ಬಿಂಬಿಸುವ ಅವಳ ರಚನೆಗಳು ಕನ್ನಡ ಸಾಹಿತ್ಯದಲ್ಲಿ ಮಹಿಳಾ ವಿಚಾರಗಳಿಗೆ ಸಂಬಂಧಿಸಿದಂತೆ ಹೊಸದೊಂದು ಅಲೆಯನ್ನು ಎಬ್ಬಿಸಿದವು.

ಭೀಮವ್ವಳು ಕೆಲವು ರಚನೆಗಳನ್ನು ಗಮನದಲ್ಲಿಟ್ಟುಕೊಡು ಆ ಕಾಲದ ಮಹಿಳೆಯರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ವಿವಿಧ ಆಯಾಮಗಳನ್ನು ಕುರಿತು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಆಹಾರ ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಆಹಾರ ಪದಾರ್ಥಗಳ ಪ್ರಸ್ತಾಪವು ಸಂದರ್ಭಕ್ಕೆ ತಕ್ಕಂತೆ ಕನ್ನಡ ಕಾವ್ಯಗಳಲ್ಲಿ ಬಂದಿದೆ. ಇದಕ್ಕೆ ದಾಸ ಸಾಹಿತ್ಯವೂ ಹೊರತಲ್ಲ. ಭೀಮವ್ವನ ರಚನೆಗಳಲ್ಲಿ ಅನೇಕ ರೀತಿಯ ಸಿಹಿ ಪದಾರ್ಥಗಳ ಪ್ರಸ್ತಾಪ ಕಂಡುಬರುತ್ತದೆ. ಕೀರ್ತನೆಗಳಲ್ಲಿ ಕಂಡುಬರುವ ಬಹುಪಾಲು ಅಡುಗೆಗಳು ಹಬ್ಬ ಹರಿದಿನಗಳಲ್ಲಿ ಮಾಡುವಂತಹವೇ ಆಗಿವೆ. ಕಾರಣ ಕೃಷ್ಣನಿಗೆ ಅಥವಾ ದೇವರಿಗೆ ನೈವೇದ್ಯ ಮಾಡುವ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಪ್ರಸ್ತಾಪ ಬರುತ್ತದೆ. ಆ ಸಂದರ್ಭದಲ್ಲಿ ವಿಶೇಷ ಸಿಹಿ ಪದಾರ್ಥದ ಪ್ರಸ್ತಾಪ ಸೊಗಸಾಗಿ ಬಂದಿದೆ.

ಅಚ್ಚಮುತ್ತಿನ ಹರಿವಾಣದಿ ಮಾಲತಿ
ಬಟ್ಟವಿ ಗೌಲಿಗಳು
ಅಷ್ಟ ಗುಳ್ಳವು ಶಾವಿಗೆ ಪರಡಿ ಪಾಯಸ
ಭಕ್ಷ ಎಣ್ಣೋರಿಗೆ ಭಾರಿ ಬಟ್ಟಲು ತುಪ್ಪ
ಮಂಡಿಗೆಚೂರ್ಮವು ಬಂದ್ಯ ಬೀಸೋರಿಗೆ
ದುಂಡು ಗುಳ್ಳೋರಿಕೆಗೆಯ
ಚೆಂದವಾಗಿದ್ದ ಚೆಕ್ಕುಲಿ ಕರ್ಜಿಕಾಯ್ಗಿಳು
ಅಂದವಾದ ಕಾಯಿರಸ ಶಾಖಪಾಕವು

ಮಂಗಳಗೌರಿಗೆ ಬಡಿಸಿದ ಈ ನೈವೆಧ್ಯ ವೈವಿಧ್ಯಮಯವಾಗಿದೆ. ಮುತ್ತಿನ ಹರಿವಾಣದಲ್ಲಿ ಬಡಿಸಿದ ಬಟ್ಟವಿ, ಗೌಲಿ, ಶ್ಯಾವಿಗೆ, ಪರಡಿ, ಪಾಯಸ, ಎಣ್ಣೋರಿಗೆ, ಮಂಡಿಗೆ, ಬುಂದ್ಯ, ಬೀಸೋರಿಗೆ, ಚೆಕ್ಕುಲಿ ಮುಂತಾದವು. ಇಲ್ಲಿ ಬಳಕೆಯಾದ ಬಹುಪಾಲು ಅಡುಗೆಗಳು ಉತ್ತರ ಕರ್ನಾಟಕ ಮತ್ತು ಮಧ್ಯಕರ್ನಾಟದಲ್ಲಿ ಬಳಕೆಯಲ್ಲಿವೆ. ಆಧುನಿಕ ಪೂರ್ವ ಕರ್ನಾಟಕದ ಆಹಾರ‍ಪಾನೀಯಗಳ ಬಗ್ಗೆ ಅಭ್ಯಾಸ ಮಾಡುವವರಿಗೆ ಭೀಮವ್ವನ ಹಾಡುಗಳು ಪ್ರಮುಖ ಆಕರಗಳಾಗುತ್ತವೆ.

ಭಾಷಾ ಸಮುದಾಯದ ಭಾಷಿಕರ ಬದುಕಿನಲ್ಲಿ ಅವರು ಧರಿಸುವ ಉಡುಗೆ ತೊಡುಗೆಗಳು ಮುಖ್ಯ ಅವಶ್ಯಕತೆಗಳಾಗಿವೆ. ಒಂದು ಭಾಷಿಕ ಸಮುದಾಯದ ಸಂಸ್ಕೃತಿಯ ಅನನ್ಯತೆಯನ್ನು ಗುರುತಿಸುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ. ಭೀಮವ್ವನ ರಚನೆಗಳಲ್ಲಿ ಆ ಕಾಲದಲ್ಲಿ ಬಳಕೆಯಲ್ಲಿದ್ದ ಆಭರಣ ಹಾಗೂ ವೇಷಭೂಷಣಗಳ ಕಿರುಪರಿಚಯ ನಮಗಾಗುತ್ತದೆ. ಶ್ರೀ ಕೃಷ್ಣನ ಬಾಲಲೀಲೆಯನ್ನು ಬಣ್ಣಿಸುವಾಗ ಅಲಂಕಾರ ಆಭರಣಾದಿಗಳ ವರ್ಣನೆ ಸೊಗಸಾಗಿ ಬಂದಿರುತ್ತದೆ.

ಕಂಕಣ ಬಳೆ ಕಾಲಿನಲ್ಲಿರಿಸಿ
ಮುತ್ತಿನ ಬಟ್ಟರಳಲೆ ಚಂದ್ರರಾಗಟೆ
ಕಟ್ಟಿದರೊಂದೊಂದು ಕಿವಿಗೆ ಚೌರಿ
ಅಚ್ಚಶಾವಂತಿಗೆ ಅರಳು ಮಲ್ಲಿಗೆ ಮಾಲೆ
ವಾಲೆ ಮೂಗೂತಿ ವೈಯಾರದ ಬಾವುಲಿ ಕೂದಲಿ
ಗೊಂದೊಂದರಂತೆ ಸಿಗ್ಗಿಸಿ
ಮಾರಯ್ಯನ ಮೋರೆ ನೋಡಲು ಮದವೆರಿದ
ಗಜದಂತೆ ನಡೆದರು.

ಕೃಷ್ಣನ ವೇಷ ಭೂಷಣವನ್ನು ಚಿತ್ರಿಸಿರುವ ಚೌರಿ, ಚಾವುರಿ, ವಾಲೆ, ಚಂದ್ರರಾಗಟೆ ಇಂತಹ ಆಭರಣಗಳು ಜಾಜಿಮಲ್ಲಿಗೆ, ಸಂಪಿಗೆ, ಕಮಲ, ಕೆಂದಾವರೆ, ತಾವರೆ, ಎಳೆತುಳಸಿ ಇಂತಹ ಹೂ ಮಾಲೆಗಳಿಂದ ಶ್ರೀ ಕೃಷ್ಣ ಶೋಭಿಸುತ್ತಿದ್ದ ಇವು ಆ ಕಾಲದಲ್ಲಿ ದೇವರಿಗೆ ಮುಡಿಸುವ ಆಭರಣಗಳನ್ನು ಚಿತ್ರಿಸುತ್ತವೆ. ಭೀಮವ್ವ ಸಂದರ್ಭಕ್ಕೆ ತಕ್ಕಂತೆ ಮುತ್ತೈದವರು ಭರಿಸುವ ಓಲೆ, ಕಾಲುಂಗರ, ಗೆಜ್ಜೆ, ಹಾರ ಮುಂತಾದ ಆಭರಣಗಳ ಪಟ್ಟಿಯನ್ನೇ ಕೊಡುತ್ತಾಳೆ. ಇಲ್ಲಿ ಉಲ್ಲೇಖಿತವಾದ ಕೆಲವು ಆಭರಣಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿವೆ. ಇನ್ನು ಕೆಲವು ಕಣ್ಮರೆಯಾಗಿವೆ. ಒಂದು ಕಾಲಘಟ್ಟದ ಸ್ತ್ರೀಸಮುದಾಯವನ್ನು ಅರಿಯಲು ಅವು ನೆರವಾಗುತ್ತದೆ. ಜಲಕ್ರೀಡೇಯ ಹಾಡಿನಲ್ಲಿ ಬಗೆಬಗೆಯ ಸೀರೆಗಳ ವರ್ಣನೆ ಸೊಗಸಾಗಿ ಬಂದಿದೆ. ಗೋಪಿಕಾ ಸ್ತ್ರೀಯರು ನೀರಾಟವಾಡಲು ಹೋಗಿ ಅಲ್ಲಿ ತಮ್ಮ ಸೀರೆಗಳನ್ನು ಕಳೆದುಕೊಂಡು ಪರಿಪರಿಯಾಗಿ ಪರಿತಪಿಸುವ ಚಿತ್ರಿವಿದೆ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ತಮ್ಮ ಸೀರೆಯನ್ನು ವರ್ಣಿಸುತ್ತಾರೆ.

ಕರಿಯ ಹೂವಿನ ಸೀರೆ, ಬಿಳಿದು ಹೂವಿನ ಸೀರೆ
ಜರಕಾಟಿ ಕೆಂಪು ಹೂವಿನ ಸೀರೆ
ಸಾಕಾವಳಿ ಸೀರೆ ರಾಗಾವಳಿ ಸೀರೆ
ದ್ವಾರ ಮುನಿಸೀರೆ
ಗೋಧಿ ಮಗ್ಗಿನ ಸೀರೆ ಗುಬ್ಬಿ ಕಣ್ಣಿನ ಸೀರೆ
ಬಾಳೆ ಪಟ್ಟೆಸೀರೆ ಬದನೆ ಬಣ್ಣದ ಸೀರೆ
ಕಾಡಿಗಣ್ಣಿನ ಸೀರೆ ಚಂದ್ರಕಾಳಿ ಸೀರೆ
ಸಾಸ್ವೆಚುಕ್ಕೆ ಸೀರೆ ಸರಪಳ್ಯಂಚಿನ ಸೀರೆ
ರೇಷ್ಮೇ ಚುಕ್ಕೆ ಸೀರೆ ಕರಿಯ ಮಧುರಸೀರೆ……….. ಕವಳ ಹೂವಿನ ಸೀರೆ
ಹಸುರು ಪತ್ತಲ……. ಚೆಂಗಾವಿ ಪತ್ತಲ

ಹೀಗೆ ವಿವಿಧ ಸೀರೆಗಳ ವರ್ಣನೆ ಬರುತ್ತದೆ. ಒಂದೊಂದು ಸೀರೆಗೂ ಭಾವನಾತ್ಮಕ ಸಂಬಂಧವಿದೆ. ಸೋದರ ಮಾವ ಉಡಿಸಿದ ಸೀರೆ, ತವರು ಮನೆಯವರು ಕೊಟ್ಟ ಸೀರೆ ಹೀಗೆ ಗೋಪಿಯರ ಭಾವನೆಗಳ ಅಭಿವ್ಯಕ್ತಿ ಚೆನ್ನಾಗಿ ಮೂಡಿಬಂದಿದೆ. ಹೊಸ ಸೀರೆ ಉಡಿಸಿದ ಬೇರೆ ಬೇರೆ ಸನ್ನಿವೇಶಗಳು ಸೊಗಸಾಗಿ ಬಂದಿವೆ (ಮೈನೆರೆದಾಗ, ಸೀಮಂತ ಕಾರ್ಯವಾದಾಗ ಇತ್ಯಾದಿ). ಇಂತಹ ಸೀರೆ ಕಳುವಾದಾಗ ಹೆಂಗಳೆಯರ ಮನಸ್ಥಿತಿಯ ಕಳವಳ, ಭಯ, ಅಳುಕು ಹೇಳತೀರದು. ‘ಕೃಷ್ಣನು ಬಿದ್ದಂಥ ಕಾಳಿ ಮಡುವಿನೊಳು ಒಟ್ಟಾಗಿ ನಾವೆಲ್ಲ ಧುಮುಕೋಣ ಹೋಗಿ’ ಎನ್ನುವಲ್ಲಿ ಅವರ ಅಸಹಾಯಕತೆ, ಸ್ತ್ರೀ ಸಹಜ ಮೃದುತ್ವ, ಸಂಕೋಚ, ಲಜ್ಜೆ ಇಂತಹ ಭಾವನೆಗಳು ಕರುಳು ಮಿಡಿಯುತ್ತವೆ. ಆ ಕಾಲದ ಕುಟುಂಬ ವ್ಯವಸ್ಥೆಯ ಲೌಕಿಕ ಜ್ಞಾನ ಆ ಕಾಲದ ಸಂಬಂಧಗಳು ಪರಸ್ಪರರು ಸಂಬೋಧಿಸುವ ಸಂಬೋಧನಾ ರೂಪಗಳು ಹಾಡಿನಲ್ಲಿ ಹರಿದಿದೆ. ಭಾಷೆಯು ಸಂಸ್ಕೃತಿಯ ಅಂಗ ಮತ್ತು ವಾಹಕವಾಗಿರುವುದರಿಂದ ಭಾವನೆಗಳು ತುಂಬ ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ.

ಭಾಷಾ ಸಮುದಾಯವು ಸಾಮಾಜಿಕ ಸಂಬಂಧಗಳ ಬಲೆ. ಸಂಸ್ಕೃತಿಯು ಸಮಾಜ ಜೀವನವನ್ನು ಪ್ರತಿಬಿಂಬಿಸುತ್ತದೆ. ಸಂಸ್ಕೃತಿಯು ಸಮಾಜದ ಎಲ್ಲ ಆಚಾರ ವಿಚಾರಗಳನ್ನೂ ಒಳಗೊಂಡಿರುತ್ತದೆ. ಅದು ಭಾಷೆಯ ಮೂಲಕ ವ್ಯಕ್ತವಾಗುತ್ತದೆ. ಇದರಿಂದ ಬರಹಗಾರನು ಸಮಾಜದ ಯಾವುದೇ ವಿಷಯವನ್ನು ತೆಗೆದುಕೊಂಡರೂ ತನ್ನ ಕೃತಿಯಲ್ಲಿ ತನ್ನ ಕಾಲದ ವಿಚಾರಗಳನ್ನು ಅಭಿವ್ಯಕ್ತಿಸುತ್ತಾನೆ. ಇದಕ್ಕೆ ಭೀಮವ್ವಳು ಹೊರತಲ್ಲ. ಭೀಮವ್ವಳ ರಚನೆಗಳಲ್ಲಿ ವೈದಿಕ ಧರ್ಮದೊಂದಿಗೆ ಆ ಕಾಲದ ಜನಪದರ ಆಚರಣೆ, ಸಂಪ್ರದಾಯಗಳು ಸೇರಿ ಹೋಗಿವೆ. ಮನಸ್ಸಿಗೆ ನೆಮ್ಮದಿ. ನೈತಿಕ ಬಲ ದೃಢತೆಯನ್ನು ಪಡೆಯಲು ವ್ರತ ಕತೆಗಳು ಆಚರಣೆಗಳು ಅವಳ ರಚನೆಗಳಲ್ಲಿ ಹೆಪ್ಪುಗಟ್ಟಿವೆ.

ಶುಕ್ರವಾರದ ಹಾಡು ಹೀಗಿದೆ:
ಶ್ರಾವಣ ಮಾಸ ಶುಕ್ಕುರುವಾರ ಶುಭಮೂರ್ತ
ಕಾಲದಿ ಕಮಲಾಕ್ಷಿಯನು
ಆಲಯ ದೊಳಗಿಟ್ಟಿದರದಿಂದ ಪೂಜಿಸಿ
ಬೇಡಿದ ಭೀಷ್ಟ ನೀಡುವಳು

ಅದರಂತೆ ಶನಿವಾರದ ಹಾಡು, ಮಂಗಳಗೌರಿ ಹಾಡು, ಲಕ್ಷ್ಮಿದೇವಿ ಹಾಡು ಸೊಗಸಾಗಿ ಮೂಡಿಬಂದಿವೆ. ಅದರಂತೆ. ಭೀಮವ್ವನ ಕಾಲದ (ಹೆಚ್ಚಾಗಿ ವೈದಿಕ ಕುಟುಂಬದ) ಹೆಂಗಳೆಯರು ಆಚರಿಸುತ್ತಿದ್ದ ವ್ರತಗಳು ಅವರ ರಚನೆಗಳಲ್ಲಿ ಅಭಿವ್ಯಕ್ತವಾಗಿವೆ. ಅದಲ್ಲದೆ ಹಸೆಗೆ ಕರೆಯುವುದು, ಆರತಿಯೆತ್ತುವುದು, ಬಾಗಿಲು ಕಟ್ಟುವುದು, ಉರುಟಣೆ ಮಾಡುವ ಹಾಡುಗಳಿಗೆ. ಅವು ಆ ಕಾಲದ ಸಾಮಾಜಿಕ ಚಿತ್ರಣವನ್ನು ಆ ಸಂದರ್ಭದಲ್ಲಿ ನಡೆಯುವ ಆಚರಣೆಯನ್ನು ನೀಡುತ್ತವೆ. ಬಸಿರು ಹೆಂಗಸರಿಗೆ ಹೂ ಮುಡಿಸಿ ಬಯಕೆ ತೀರಿಸುವ ವಿಶೇಷ ಸಂದರ್ಭವೂ ನಮ್ಮಲ್ಲಿ ರೂಢಿಯಲ್ಲಿದೆ. ಅಂತಹ ಸಂದರ್ಭದಲ್ಲಿ ನಡೆಯುವ ‘ಬಸಿರು ಬಣ್ಣಿಸಿದ್ ಹಾಡು’ ತುಂಬ ಸೊಗಸಾಗಿದೆ.

ದೇವೆಂದ್ರನ ಸೊಸೆ ದೇವಕಿ ತನಯಳು
ಏನೇನು ಬಯಸಿದಳು||ಪ||

ಒಂದು ತಿಂಗಳು ತುಂಬಲು ಸುಭದ್ರ
ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬು ನೇರಳು ಬಯಸಿದಳು
ಅಂಬುಜಾಕ್ಷನ ತಂಗಿ ಪೈಜಣರುಳಿ ಗೆಜ್ಜೆ ಕಾ
ಲುಂಗರ ಕಿರುಪಿಲ್ಯ ಇಟ್ಟೇನೆಂಬುವಳು||೧||

ಎರಡು ತಿಂಗಳು ತುಂಬಲು ಸುಭದ್ರ
ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು
ಪರಿವೇಶನ ತಂಗಿ ಹರಡಿ ಕಂಕಣ ಹಸ್ತ
ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು||೨||

ಮೂರು ತಿಂಗಳು ತುಂಬಲು ಸುಭದ್ರ
ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು
ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ
ಮಾಣಿಕ್ಯ ದ್ವೋಡ್ಯಾಣ ಇಟ್ಟೇನೆಂಬುವಳು ||೩||

ನಾಲ್ಕು ತಿಂಗಳು ತುಂಬಲು ಸುಬಧ್ರ
ಆಕಳ ತುಪ್ಪ ಅನಾರಸ ಬಯಸಿದಳು
ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು
ಏಕಾವಳಿಯ ಸರ ಹಾಕೇನೆಂಬುವಳು||೪||

ಐದು ತಿಂಗಳು ತುಂಬಲು ಸುಭದ್ರ
ಕೆನೆ ಮೊಸರಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು
ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು
ಕುಸುಮ ಮಲ್ಲಿಗೆ ಮೊಗ್ಗು ಮುಡಿದೇನೆಂಬುವಳು ||೫||

ಆರು ತಿಂಗಳು ತುಂಬಲು ಸುಭದ್ರ
ಚೌರಿ, ರಾಗಟೆ ಜಡೆ ಬಂಗಾರ ಬಯಸಿದಳು
ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು
ಜಾಜಿಮಲ್ಲಿಗೆ ಮೊಗ್ಗು ಮುಡಿದೇನೆಂಬುವಳು||೬||

ಏಳು ತಿಂಗಳು ತುಂಬಲು ಸುಭದ್ರ
ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು
ಕಾಳಿ ಮರ್ದನನ ತಂಗಿ ಕಮಲ ಕ್ಯಾದಿಗೆ ಮುಡಿಯ
ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು||೭||

ಎಂಟು ತಿಂಗಳು ತುಂಬಲು ಸುಭದ್ರ
ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು
ವೈಕುಂಠ ಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು
ಸೀಮಂತ ದುತ್ಸವ ಮಾಡೆ ಸುಖದಿಂದಿರುವಳು||೮||

ಒಂಬತ್ತು ತಿಂಗಳು ತುಂಬಲು ಸುಭದ್ರಗೆ
ಬಂಗಾರದೊರಸಿನಲ್ಲಿರಿಸಿ ಆರತಿ ಮಾಡಲು
ಮಂಗಳ ಮಹಿಮ ಭೀಮೇಶ ಕೃಷ್ಣನ ತಂಗಿ
ಕಂದ ಅಭಿಮನ್ಯು ಎಂಬುವನ ಪಡೆದಳು ||೯||

ಈ ಹಾಡು ಸೀಮಂತ ಸಂದರ್ಭದಲ್ಲಿ (ಕುಬುಸ) ಮಹಿಳೆಯರ ನಾಲಗೆಯ ಮೇಲೆ ಇಂದಿಗೂ ಜೀವಂತವಾಗಿದೆ. ಗರ್ಭಿಣಿ ಹೆಂಗಸರು ಒಂಬತ್ತು ತಿಂಗಳುಗಳಲ್ಲಿ ಬಯಸುವ ಆಹಾರ ಪದಾರ್ಥ ಹಾಗೂ ಸುಖವಾಗಿ ಹೆರಿಗೆಯಾಗಲಿ ಎಂಬ ಸಹಜ ಧೋರಣೆಯು ತುಂಬ ಸೊಗಸಾಗಿ ಮೂಡಿಬಂದಿವೆ. ಅದೇ ರೀತಿ ಜೋಗುಳ ಹಾಡುಗಳು ಹೆಸರಿಡುವ ಹಾಡುಗಳು ಇವು ಒಂದು ಭಾಷಿಕ ಸಮುದಾಯದ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ. ಭೀಮವ್ವ ತಾನು ಸಂದರ್ಶಿಸಿದ ಸೋದೆ ಕ್ಷೇತ್ರದ ವಾದಿರಾಜ, ಕೊಲ್ಲಾಪುರದ ಮಹಾಲಕ್ಷ್ಮೀ, ಪಂಢರಾಪುರದ ಪಾಂಡುರಂಗ, ಕಾಶಿ ವಿಶ್ವನಾಥ ಈ ತೀರ್ಥ ಕ್ಷೇತ್ರಗಳ ಮಹಿಮೆಯನ್ನು ಬಣ್ಣಿಸುವ ಹಾಡುಗಳನ್ನು ರಚಿಸಿದ್ದಾಳೆ.

ಸಮುದಾಯದ ಜೀವನ ಚಕ್ರ ಅಂಗೀಕರಿಸಿದ ದೈವ, ಹಬ್ಬ, ಹರಿಕಥೆ ಮುಂತಾದ ಅಂಶಗಳು ಭೀಮವ್ವನ ರಚನೆಗಳಲ್ಲಿವೆ. ಮದುವೆಯ ನಂತರ ಗಂಡನ ಮನೆಗೆ ಮೊದಲಬಾರಿಗೆ ಹೊರಡುವಾಗ ತವರು ಮನೆಯವರು ಉಡಿ ತುಂಬುವರು

ಉಡಿಯ ತುಬಿದೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ
ಕಡಲೆ ಕೊಬ್ಬರಿ ಬಟ್ಟೆಲೊಳು ಬಾಳೆ ಫಲಗ
ಳ್ವುಡಿ ತುಂಬಿರೆ ನಮ್ಮ
………………….
…………………
ಶ್ರೇಷ್ಟ ಭೀಮೇಶ ಕೃಷ್ಣನ ಪಟ್ಟದರಸಿ
ಗಟ್ಟಿ ಕುಂಕುಮ ವೀಳ್ಯಕೊಟ್ಟು ರುಕ್ಮಿಣಿಗೆ

ಇಂತಹ ಸಂಪ್ರದಾಯಗಳು ಒಂದು ಭಾಷಿಕ ಸಮುದಾಯದ ಸಂಸ್ಕೃತಿಯನ್ನು ಒಂದು ಕಾಲದ ಸಾಮಾಜಿಕ ಸ್ಥಿತಿಯನು ಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭೀಮವ್ವ ದ್ವೈತ ಸಿದ್ದಾಂತವನ್ನು ಪ್ರಚುರ ಪಡಿಸುತ್ತ ಸಾಮಾಜಿಕ ಚಿಂತನೆಯನ್ನು ತನ್ನ ರಚನೆಗಳಲ್ಲಿ ನೀಡಿದ್ದಾಳೆ. ಸಂಪ್ರದಾಯ್ದ ಚೌಕಟ್ಟಿನಲ್ಲಿ ಸಾಮಾಜಿಕ ಕಳಕಳಿ ತೋರಿಸಿದ್ದಾಳೆ. ಅವಳ ಲೋಕಾನುಭವ ಹಾಡುಗಳಲ್ಲಿ ಹರಿದಿದೆ. ‘ಸುದಾಮ ಚರಿತೆ’ ಎಂಬ ಹಾಡಿನಲ್ಲಿ ಕೃಷ್ಣನ ಭೇಟಿಗೆ ಬಂದ ಸುದಾಮನ ಚಿತ್ರವನ್ನು ಹೇಳುತ್ತ ‘ಒಡೆದ ಗುಂಡು ತಂಬಿಗೆ ಬಡಿದಾನದಾರ ಸುತ್ತ ಮ್ಯಾನ’ ಎನ್ನುವಲ್ಲಿ ಆ ಕಾಲದ ಬಡತನದ ಪರಿಣಾಮವನ್ನು ಕಟ್ಟಿಕೊಡುತ್ತದೆ.

ಭೀಮವ್ವನ ಈ ನೆಲದ ಭಾಷೆಯಲ್ಲಿ (ದೇಶಿ ರಚನೆಯಲ್ಲಿ) ಹಾಡುಗಳನ್ನು ರಚಿಸಿದ್ದಾಳೆ. ಅಲಿ ಭಕ್ತ ಹೃದಯ ಆರ್ದ್ರತೆಯಿದೆ. ಆ ಪೂರ್ವವಾದ ಕಾವ್ಯ ಸೌಂದರ್ಯವೂಯಿದೆ. ಕೃಷ್ಣನ ಮೇಲೆ ಯಶೋಧೆಗೆ ಗೋಪಿಯರ ದೂರು ಮಾಡಿದಾಗ ಯಶೋದೆ ಬಾಲಕೃಷ್ಣನ ಸಮರ್ಥನೆ ಹೀಗಿದೆ.

ಯಾಕೆನ್ನ ದೂರುವರೆ ಪೇಳಮ್ಮಯ್ಯ
ಪೋಕ ಬದ್ದಿಯ ಗೊಲ್ಲತಿ
ಗೋಕುಲದೊಳಗಿಂಥ ನೋಡೆ ನಾಕಾಣಿ ನೆಲ್ಲೆಲ್ಲೂ

ಇದರಂತೆ ಕೃಷ್ಣನ ಬಾಲಲೀಲೆ, ತುಂಟಾಟಗಳನ್ನು ವರ್ಣಿಸುವಾಗ ಮಾತೃ ವಾತ್ಸಲ್ಯ ಭಾವ ಸಹಜ ಸುಂದರವಾಗಿ ಚಿತ್ರಿತವಾಗಿದೆ. ಸರಳ, ಸುಲಭವಾದ ಶೈಲಿಯಲ್ಲಿ ಭೀಮವ್ವಳು ಕಾವ್ಯ ಕಟ್ಟಿದ್ದಾಳೆ. ಆ ಕಾಲದ ಸಾಮಾನ್ಯ ಜನತೆಯ ಬದುಕನ್ನು ಹೇಳುವಾಗ.

ಹಿಟ್ಟಿನ ಕಡುವು ಹಿಂಡಿಯ ಪಲ್ಯವನು ಮಾಡಿ
ಅಚ್ಚೆಳ್ಳು ಗಾಣದೆಣ್ಣೆಯನು
ನುಚ್ಚು, ಮಜ್ಜಿಗೆ ಹುಳಿ ಹುಳಿಯ ಕಟ್ಟಂಬಲಿ
ಇಟ್ಟಿರು ನೈವೇದ್ಯಗಳು

ಬಹುಶಃ ಬೇರೆಯಾವ ದಾಸರೂ ಇಷ್ಟು ಸಹಜವಾಗಿ ಹಾಗೂ ಸೊಗಸಾದ ಆಡುಮಾತುಗಳನ್ನು ಸಮೀಕರಿಸಿಲ್ಲ. ತೊಡಕಿಲ್ಲದ ವರ್ಣನೆಗಳು, ಅಲಂಕಾರಗಳು ಆಗೂ ಆಡುನುಡಿಯ ಹೊದಿಕೆಯಾದ ರಚಿತವಾದ ಅವಳ ಹಾಡುಗಳು ರಸಭರಿತವಾಗಿವೆ. ಭೀಮವ್ವನ ರಚನೆಗಳು ಪಲ್ಲವಿ, ಅನುಪಲ್ಲವಿಗಳ ಗೊಂಚಲು ಇಲ್ಲದೆ ಎರಡು ಸಾಲುಗಳಿಂದ ಹಿಡಿದು ನೂರೈವತ್ತು ಸಾಲುಗಳವರೆಗೂ ಇವೆ. ಗೇಯ ಪ್ರಧಾನವಾದ ಅವಳ ರಚನೆಗಳು ಮಾತ್ರಾಛಂದಸ್ಸು ಮತ್ತು ಅಂಶ ಛಂದಸ್ಸಿನಲ್ಲಿ ಹೆಣೆಯಲ್ಪಟ್ಟಿವೆ. ಜಾನಪದ ಮಟ್ಟುಗಳನ್ನು ಬಳಸಿಕೊಂಡ ಈ ರಚನೆಗಳನ್ನು ಲಯದ ದೃಷ್ಟಿಯಿಂದ ಹೇಳುವುದಾದರೆ ತಾಳವೇ ಪ್ರಧಾನ. ಸಂಗೀತ ಸಮೀಕರಿಸಿ ಹಾಡುವಾಗ ಶಿಥಿಲೋಚ್ಚಾರಣೆ ಹೆಚ್ಚು.

ಭೀಮವ್ವನ ರಚನೆಗಳು ಹೆಚ್ಚಾಗಿ ಮೌಖಿಕ ಪರಂಪರೆಗೆ ಸೇರಿರುವುದರಿಂದ ಆಡುನುಡಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಪ್ರದೇಶದ ಆಡು ರೂಪಗಳು, ವಿಶೇಷಣಗಳು, ನುಡಿಗಟ್ಟುಗಳು ಧಾರಾಳವಾಗಿ ಬಳಕೆಯಾಗಿವೆ. ಆಗಾಮಿ – ಮುಂದಿನ, ಕೋರಿ-ತುಂಡುಸೀರೆ, ಬಡಿವಾರ-ಜಂಬ ಮುಂತಾದವು. ದೇಸಿಯ ಭಾಷೆಯಲ್ಲಿ ಸಮಕಾಲೀನ ಬದುಕಿನ ಚಿತ್ರಣವನ್ನು, ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾಳೆ, ಬಡಪಾಯಿ ಹೆಂಗಸಿನ ಚಿತ್ರ ಕೊಡುವ ರೀತಿ ತುಂಬ ಮನೋಜ್ಞವಾಗಿದೆ.

ಉಟ್ಟಳು ಮೂರು ಸೀರೆಯನು ತೋಳಿನಲಿ
ತೊಟ್ಟಳು ಚಿಂದಿಕುಪ್ಪಸವ
ಕಟ್ಟಿದ್ದ ಜಡೆಗಣ್ಣೆ ಹಚ್ಚಿ ತಳುಪನ್ಹಾಕಿ
ಬುಟ್ಟು ಕುಂದುಮ ತೀಡಿದಳು

ಇಲ್ಲಿ ಸ್ವಭಾವೋಕ್ತಿಯ ಶೈಲಿ ಸೊಗಸಾಗಿ ಬಂದಿದೆ. ‘ಮೊಸರು ತಂದಾಲಿಗೆಪ್ಪಿಟ್ಟಂತೆ’ ಇಂತಹ ಸುಂದರವಾದ ಉಪಮೇಯಗಳು ಬಂದಿವೆ. ಸಾಮಾಜಿಕ ಬದುಕನ್ನು ಪ್ರತಿಬಿಂಬಿಸುವ ಗಾದೆಗಳೂ ಬಳಕೆಯಾಗಿವೆ. ‘ಕೆಟ್ಟು ನೆಂಟರ ಮನೆ ಸೇರಿ ಕೊಂಬುದಕ್ಕಿಂತ ಅಟ್ಟಡವಿಯ ವಾಸಲೇಸು’, ‘ಪರರ ಮಂದಿರವಾಸ ಪರಮ ಕಷ್ಟವೆ ತಾಯಿ’, ‘ಮಡದಿಯರ ಸರಿ ಮತ್ತೊಬ್ಬರಾಗುವರೆ’ ಇಂತಹ ಅನುಭವೋಕ್ತಿಗಳು ಪರಿಣಾಮಕಾರಿಯಾಗಿ ಬಳಕೆಯಾಗಿವೆ. ಭೀಮವ್ವ ಹದಿನೆಂಟನೆಯ ಶತಮಾನದ ಮಧ್ಯಬಾಗದಲ್ಲಿ ಬದುಕಿದ್ದರಿಂದ ಆ ಕಾಲದಲ್ಲಿ ಕನ್ನಡ ಭಾಷೆಯನ್ನು ಪ್ರವೇಶಿಸಿದ ಉರ್ದು,ಮರಾಠಿ, ತೆಲುಗು ಪದಗಳು ಅವರ ರಚನೆಗಳಲ್ಲಿ ಬಳಕೆಯಾಗಿವೆ. ಶಿಫಾರಸ್ಸು, ದೌಲತ್ತು ಬಜಾರ್ ಮುಂತಾದವು ಸಹಜವಾಗಿ ಅಭಿವ್ಯಕ್ತವಾಗಿವೆ.

ಭೀಮವ್ವಳ ರಚನೆಗಳಲ್ಲಿ ಸಂಭಾಷಣೆಗೆ ಹೆಚ್ಚಿನ ಮಹತ್ವವಿದೆ. ದುರ್ಯೋಧನ ದ್ರೌಪದಿಯನ್ನು ಒಲಿಸಿಕೊಳ್ಳಲು ಯತ್ನಿಸಿದಾಗ ಅವರ ನಡುವೆ ನಡೆಯುವ ಮಾತಿನ ಚಕಮಕಿ ಅರ್ಥಪೂರ್ಣವಾಗಿದೆ.

…… ದ್ರೌಪದಿ ನಿನಗಂಡರಡವಿಗೈದು ವೋರು
ಹೆಂಡತ್ಯಾಗಿರೆನ್ನ ಬಳಿಗೆ ಬಾರೆ ಎಂದನು
ಕೆಂಡ ತುಂಬಿದ ಕೊಂಡದೊಳು ಕಂಡು ನೀ ಹಾರುವರೇನೊ
ತುಂಡು ಮಾಡಿ ಕಡಿವೋರೈವರು ಬ್ಯಾಡೋ ಎಂದಳು

ದ್ರೌಪದಿ, ದುರ್ಯೋಧನನನ್ನು ಮತಿಗೇಡಿ ಎಂದು ಬೈಯುತ್ತಾಳೆ. ಸರಿಯಾಗಿ ಬದುಕುವ ನೀತಿ ಮಾರ್ಗವನ್ನು ಅವನಿಗೆ ಹೇಳುತ್ತಾಳೆ. ಸ್ತ್ರೀಯರಿಗೆ ಶೀಲ ಮುಖ್ಯವೆಂದು ಇದರಿಂದ ವೇದ್ಯವಾಗುತ್ತದೆ. ಅದರಂತೆ ರುಕ್ಮಿಣಿ ಭಾಮೆಯರ ಸಂವಾದವಂತೂ ಸವತಿ ಮಾತ್ಸರ್ಯಕ್ಕೆ ಉತ್ತಮ ನಿದರ್ಶನವಾಗಿದೆ. ಬದುಕಿನ ಇಂತಹ ದಟ್ಟ ಅನುಭವಗಳು ಅವ್ವಳ ರಚನೆಗಳಲ್ಲಿವೆ.

ಹೀಗೆ ಭೀಮವ್ವಳ ಹಾಡುಗಳು ಸಾಸ್ಕೃತಿಕ ಪಠ್ಯಗಳಾಗಿವೆ. ಅವಳ ವ್ರತಾಚರಣೆಯ ಹಾಡುಗಳು ಸಾಹಿತ್ಯವಾಗಿಯಷ್ಟೇ ಅಲ್ಲ. ಸಾಂಸ್ಕೃತಿಕವಾಗಿಯೂ ಮಹತ್ವದ್ದಾಗಿವೆ. ಭೀಮವ್ವಳ ರಚನೆಗಳನ್ನು ಬದಲಾಗುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಸನ್ನಿವೇಶದಲ್ಲಿ ಆಧುನಿಕ ದೃಷ್ಟಿಕೋನದಿಂದ ಹಾಗೂ ಅನ್ಯಜ್ಞಾನ ಶಿಸ್ತುಗಳ ಹಿನ್ನೆಲೆಯಿಂದ ಪರಿಶೀಲಿಸಿ ಮೌಲ್ಯಮಾಪನ ಮಾಡಬೇಕಾಗಿದೆ. ಅವರ ರಚನೆಗಳಲ್ಲಿಯ ಚಲನಶೀಲ ಅಂಶಗಳನ್ನು ವರ್ತಮಾನಕ್ಕೆ ತಕ್ಕಂತೆ ಮರು ಓದಿಗೆ ಗುರಿಪಡಿಸಬೇಕಾಗಿದೆ. ಅಲ್ಲಿ ಅಭಿವ್ಯಕ್ತಗೊಂಡ ವಿಶಿಷ್ಟ ಮಹಿಳಾ ಧೋರಣೆಗಳನ್ನು ಹಾಗೂ ಅದಕ್ಕೆ ಕಾರಣವಾದ ಸಾಮಾಜಿಕ ಸನ್ನಿವೇಶಗಳನ್ನು ಕೆದಕಿ ನೋಡುವುದು ಅಗತ್ಯವಾಗಿದೆ. ದಾಸ ಸಾಹಿತ್ಯದ ರಚನೆ ಮತ್ತು ಸಂಗೊಪನೆಗೆ ಕಾರಣವಾದ ಭೀಮವ್ವಳ ಬಗ್ಗೆ ವಿಸ್ತಾರವಾದ ಅಧ್ಯಯನ ಆಗಬೇಕಾಗಿದೆ.[1]

 

[1]ಈ ಅಧ್ಯಾಯದಲ್ಲಿ ಉಲ್ಲೇಖಿಸಲಾದ ಹಾಡುಗಳನ್ನು ಟಿ.ಎನ್.ನಾಗರತ್ನ ಅವರು ಸಂಪಾದಿಸಿ ಹರಪನಹಳ್ಳಿ ಭೀಮವ್ವನ ಹಾಡುಗಳು (೧೯೮೪) ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಈ ಗ್ರಂಥದಿಂದ ಆರಿಸಿಕೊಳ್ಳಲಾಗಿದೆ.