ಬಾಗಿಲಲ್ಲೇ ನಿಂತು, ಮುಖದಗಲ ಹಲ್ಕಿರಿದು
‘ಒಳಗೆ ಬರಲಪ್ಪಣೆಯೆ ಸಾರ್’-ಎಂದು
ಮೆಲ್ಲಗೆ ಅಂದು,
ಸಾಹೇಬರೇನು ಮಾಡುತ್ತಿದ್ದಾರೋ-
ಚಾ ಕುಡಿಯುತ್ತಿದ್ದಾರೋ, ಪರಿವಾರದೊಡನೆ
ಸುಖ ಸಂಕಥಾ ವಿನೋದದಲ್ಲಿರುವರೋ,
ಅಥವಾ ಅರ್ಜಂಟು ಕಾಗದಕ್ಕೆ ತಮ್ಮ
ನಾಮಾಂಕಿತವನಿಡುವರೋ, ದುಷ್ಟಪಾಲಕ
ಶಿಷ್ಟಶಿಕ್ಷಕ ತಂತ್ರದವತಾರ ಯೋಜನೆಯಲ್ಲಿ
ಸಮಾಧಿಸ್ಥರಾಗಿರುವರೋ, ಎಂದು
ಬಾಗಿಲ ಹೊರಗೆ ಧ್ಯಾನದಲ್ಲೇ ನಿಂದು,
ಕೂಗಿದರು ದನಿ ಕೇಳಲಿಲ್ಲವೊ ಏನೋ ಎಂದು
ಸಂತೈಸಿಕೊಂಡು,
ಕೈ ಹೊಸಗಿ, ಕೋಟಿನ ಕಾಲರ್ ಸರಿಪಡಿಸಿಕೊಂಡು,
ಮನೆಯಲ್ಲಿ ಮೂರು ಮೊಳ ನೆಯ್ದು ತಂದಿರುವ ಕೀರ್ತನೆಯನ್ನು
ನೆನೆಸಿಕೊಂಡು,
ಮೆಲ್ಲಗೆ ಕೆಮ್ಮಿ, ಇಷ್ಟವಿಧ ಭುಕ್ತಿ ಭಾವಗಳ
ತಂಬೂರಿ ಶೃತಿಪಡಿಸಿಕೊಂಡು,
ದಾರಿ ಯಾವುದಯ್ಯಾ – ಪ್ರಮೋಷನ್ನಿಗೆ ?
ಮತವೋ ಮಠವೋ ಮಂತ್ರಿಯೋ
ಯಾರು ಹಿತವರು ನಿನಗೆ ಈ ಮೂವರೊಳಗೆ – ಎಂದು
ಸಾರಾಸಾರ ವಿಚಾರ ಮಾಡಿ, ನಾಮದ ಬಲವೊಂದನೇ ನಂಬಿ
ಬಿನ್ನಹಕೆ ಬಾಯನು ತೆರೆದು,
ಅನಂತ ಆಸೆಗಳ ಜೋಳಿಗೆ ಬಿಗಿದು
ಕಂಡವರ ಬಾಗಿಲ ಕಾದು, ದೃಢ ಚಿತ್ತದಲಿ
ಮುಂದುವರಿಯುತ್ತಿರುವ
ನೀನೆ ದಾಸವರೇಣ್ಯ
ದಾಸಕುಲ ಶಿರೋಮಣಿ
ದಾಸನೆಂದರೆ ನೀನೆ
ಈ ಪರಿಯ ಸೊಬಗನ್ನು ಮತ್ತಾವನಲ್ಲೂ ಕಾಣೆ.