ಅಂಗಶೂನ್ಯತೆ ನಾ ಕರ್ಮವೀರ ದೇಹದ ಯಾವುದಾದರೊಂದು ಅಂಗದಿಂದ ವಂಚಿತರಾಗಿರುವುದು. ‘ಅಂಗವಿಕಲತೆ, ಅಂಗಶೂನ್ಯತೆ ಕೆಲವರಿಗೆ ಶಾಪವಾದರೆ ರಮೇಶ ಅವರಿಗೆ ಈ ವಿಶೇಷಾಂಗಗಳು ವರದಾನ.’ ದೇಹದ ಅಂಗಗಳಲ್ಲಿ ಇದ್ದರೂ ಉಪಯೋಗಿಸಲು ಸಾಧ್ಯವಾಗದ ರೀತಿಯಲ್ಲಿರುವುದು ಅಂಗವಿಕಲತೆಯಲ್ಲಿ ಒಳಗೊಳ್ಳುವುದು. ಅಂಗ ಇಲ್ಲದ ಸಂದರ್ಭಗಳಲ್ಲಿ ಅಂಗಶೂನ್ಯತೆ ಅಥವಾ ಅಂಗಹೀನತೆ ಸರಿಯಾದ ಬಳಕೆ ಎನಿಸುತ್ತದೆ.

ಅಂದಿಗ ನಾ ತುಷಾರ ಅಂಥವರು. ‘ಗುರುತಿನವರು, ಅಂದಿಗರು ಸಿಕ್ಕರೆ ಚಿನ್ನ ಕಂಡಷ್ಟು ಹಿಗ್ಗಿ ಮಾತನಾಡಿಸುತ್ತಾರೆ.’ ‘ಅಂದಿಗ’ ಎಂದರೆ ಆ ರೀತಿ ಇರುವವನು ಎಂದರ್ಥ. ಪಂಪನಲ್ಲೇ ಇದರ ಪ್ರಯೋಗವಿದೆ. ಸಂಬಂಧವಾಚಿ ನಾಮಪದಗಳಲ್ಲಿ ಬಹುವಚನ ಪ್ರತ್ಯಯವಾಗಿ ‘ಅಂದಿರು’ ಎಂಬುದರ ಬಳಕೆಯಿದೆ. ಉದಾ : ತಾಯಂದಿರು, ಅಣ್ಣಂದಿರು. ಮೇಲಿನ ವಾಕ್ಯದಲ್ಲಿ ಈ ಅರ್ಥಗಳನ್ನು ಪಡೆಯುವ ಉದ್ದೇಶವಿದ್ದಂತಿದೆ. ‘ಒಂದಿಗ’ ಎಂಬ ಪದದೊಡನೆ ಪರಾಮರ್ಶಿಸಲು ‘ಅಂದಿಗ’ದೊಡನೆ ಕನ್ನಡ-ಕನ್ನಡ ನಿಘಂಟು ಸೂಚನೆ ನೀಡುತ್ತದೆ. ‘ಪಡೆದಿರುವವನು’ ಎಂದದರ ಅರ್ಥ. ಉದಾ: ಮಕ್ಕಳೊಂದಿಗ. ಏನೇ ಇರಲಿ ಅಪರೂಪದ ಪ್ರಯೋಗ.

ಅಂಶತಃ ಆ ಜಾಹೀರಾತು ಅಂಶಿಕವಾಗಿ; ‘ಪ್ರವಾಸ ವೆಚ್ಚವನ್ನು ಅಂಶತ : ನೀಡಲಾಗುವುದು’. ‘ಭಾಗಶಃ’ ಎಂಬುದು ಬಳಕೆಯಲ್ಲಿರುವ ಪದ. ನಿಷ್ಪತ್ತಿ ತಿಳಿದುಬಂದಿಲ್ಲ.

ಅಕಲುಷ ಗು ಪ್ರಜಾವಾಣಿ ಕಳಂಕವಿಲ್ಲದ ಶುದ್ಧವಾದ. ‘ಬಿ.ಕಾಂ. ಓದುತ್ತಿರುವ ಈ ಊರಿನ ಪ್ರವೀಣ ರೆಡ್ಡಿಯ ಅಕಲುಷ ಕನ್ನಡ ಪ್ರೀತಿ, ನಿರಾತಂಕ ಪರಿಶ್ರಮಗಳಿಗೆ ಊರಿನ ಹಿರ್ಯಾರೂ ಆಧಾರ. ನಿಷೇಧಾರ್ಥಕ ಪೂರ್ವಪ್ರತ್ಯಯದೊಂದಿಗೆ ಬಂದಿರುವ ಪದ. ಆದರೂ ಪೂರ್ವಪ್ರತ್ಯಯ ಯಾವ ಅಕ್ಷರಕ್ಕೆ ಹೇಗೆ ಸೇರಬೇಕು ಎಂಬುದನ್ನು ಕುರಿತು ಗೊಂದಲವಿದೆ. ಉದಾ: ಕಾಮ; ನಿಷ್ಕಾಮ; ಕಲ್ಮಷ=ನಿಷ್ಕಲ್ಮಷ. ಅಕಲುಷ ಬದಲಾಗಿ ನಿಷ್ಕಲ್ಮಷ ಸೂಕ್ತ ಪ್ರಯೋಗವಾಗುತ್ತಿತ್ತೇನೋ? ಅಥವಾ ಇದು ಅಕಲುಷಿತ ಮತ್ತು ನಿಷ್ಕಲ್ಮಷಗಳ ಮಿಶ್ರಣವೋ?

ಅಕಾಲವೃದ್ಧ ನಾ ಸುಧಾ ಚಿಕ್ಕವಯಸ್ಸಿನಲ್ಲಿ ಬರುವ ಮುಪ್ಪು. ‘ಹತಾಶೆಯ ವಾತಾವರಣವೇ ತುಂಬಿರುವ ಈ ಕಾಲದಲ್ಲಿ ಯುವಕರೂ ಅಕಾಲವೃದ್ಧರಾಗಿ ವೈರಾಗ್ಯದೆಡೆಗೆ ಬಲವಂತವಾಗಿ ನೂಕಲ್ಪಡುತ್ತಿರುವಾಗ ಕ್ಷುಲ್ಲಕವೆನಿಸುವ…’. ‘ಅಕಾಲವರ್ಷ’, ‘ಅಕಾಲಫಲ’ ಮುಂತಾದ ಪದಗಳ ಮಾದರಿಯಲ್ಲಿ ಬಂದಿರುವ ಪದ. ಮೇಲಿನ ಪ್ರಯೋಗದಲ್ಲಿ ದೈಹಿಕ ಅವಸ್ಥೆಗಿಂತಲೂ ಮಾನಸಿಕ ಸ್ಥಿತಿಯನ್ನು ಸೂಚಿಸಲು ಪದ ಬಳಸಿದಂತೆ ತೋರುತ್ತದೆ.

ಅಕುಶಲಕರ್ಮಿ ನಾ ಪುಸ್ತಕದಲ್ಲಿ ಬಳಕೆ ವೃತ್ತಿಯಲ್ಲಿ ತರಬೇತಿಯಿಲ್ಲದ ಕಾರ್ಮಿಕ; ತರಬೇತಿ ಹೊಂದಿರದ ಕಾರ್ಮಿಕ. ‘ಅದರಲ್ಲಿ ವ್ಯಾಪಾರಿಗಳು, ಬ್ಯಾಂಕರಗಳು, ಕುಶಲಕರ್ಮಿಗಳು ಮತ್ತು ಅಕುಶಲಕರ್ಮಿಗಳು ಇದ್ದರು’. ‘ಅ’ ನಿಷೇಧ ಪೂರ್ವಪ್ರತ್ಯಯ ಹಚ್ಚಿದ ಪದಸೃಷ್ಟಿ ಇತ್ತೀಚೆಗೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಅನ್ಯಭಾಷೆಯ ಪ್ರಭಾವವೂ ಹೌದು. ಇಲ್ಲಿ ಇಂಗ್ಲಿಶಿನ ‘ಅನ್‌ಸ್ಕಿಲ್ಡ್’ ಎಂಬ ಪದ ಆಧಾರವಾಗಿದೆ.

ಅಗ್ನಿಗಾನ ನಾ ಹಾಯ್ ಬೆಂಗಳೂರ್‌ ಬೆಂಕಿ ಹಚ್ಚುವಿಕೆ. ‘ಪಾವಗಡದಲ್ಲಿ ನಕ್ಸಲೈಟರ ಅಗ್ನಿಗಾನ’. ಬೆಂಕಿ ಹಚ್ಚಿ ಸುಟ್ಟಿದ್ದನ್ನು ವಿಡಂಬನಾತ್ಮಕವಾಗಿ ಹೇಳಲು ಬಳಸಿರುವ ಪದ. ಸಾಮಾನ್ಯವಾಗಿ ನರ್ತನ ಪದವನ್ನು ಬಳಸಲಾಗುತ್ತದೆ. ಇಲ್ಲಿ ‘ಗಾನ’ವನ್ನು ಬಳಸಲಾಗಿದೆ.

ಅಗ್ನಿಶಮನ ಗು ಉದಯವಾಣಿ ಬೆಂಕಿ ಆರಿಸುವ. ‘ಸೀಬರ್ಡ್ ನೌಕಾನೆಲೆ ಪ್ರದೇಶದಲ್ಲಿ ನಿರಂತರ ಕಾರ್ಯ ನಿರ್ವಹಿಸುವ ರಾಷ್ಟ್ರದ ಪ್ರಥಮ ಅಗ್ನಿಶಮನ ಕಾರ್ಯಾಚರಣೆ ಪಡೆ ಕೇಂದ್ರ ನಿರ್ಮಿಸಲು….’. ಈಗ ‘ಅಗ್ನಿಶಾಮಕ’ ಪದ ಪ್ರಯೋಗದಲ್ಲಿದೆಯೆಂಬುದನ್ನು ಗಮನಿಸಬಹುದು.

ಅಚಾರಿತ್ರಿಕ ಗು ಸುಧಾ ಚಾರಿತ್ರಿಕವಲ್ಲದ; ಚರಿತ್ರೆಗೆ ನಿಲುಕದ. ‘ಕುಸುಮಕ್ಕನಂಥವರು ಅಪತ್ರಿಕಾ, ಮಾತ್ರವಲ್ಲ, ಅ-ಚಾರಿತ್ರಿಕವೂ. ಇಂಥವರ ಚರಿತ್ರೆಯನ್ನು ಬರೆಯಲಿಕ್ಕಾಗುವುದಿಲ್ಲ’. ‘ಅ’ ನಿಷೇಧಾರ್ಥ ಪೂರ್ವಪ್ರತ್ಯಯ ಬಳಸಿ ತಂದಿರುವ ಪದ. ಮೇಲಿನ ಪದವನ್ನು ನೋಡಿದರೆ, ಚರಿತ್ರೆಯಲ್ಲಿ ಬಂದಿರದೆ/ಹೇಳದ, ಚರಿತ್ರೆಗೆ ನಿಲುಕದ ಹೀಗೆ ಅನೇಕ ಅರ್ಥಗಳು ಗೋಚರಿಸುತ್ತವೆ. ಆದರೆ ಪ್ರಯೋಗದಲ್ಲಿರುವ ಅರ್ಥವೇ ಬೇರೆಯಾಗಿದೆ. ‘ಚರಿತ್ರೆ’ ಎಂದರೆ ವ್ಯಕ್ತಿತ್ವ ಎಂಬ ಅರ್ಥ (ಉದಾ: ಚಾರಿತ್ರ್ಯವಧೆ) ವೂ ಕನ್ನಡದಲ್ಲಿದೆ. ಹಾಗಾಗಿ ಇದು ಗೊಂದಲ ತರುವ  ಪ್ರಯೋಗ.

ಅಚ್ಚೀಕರಿಸು ಕ್ರೀ ಕನ್ನಡಪ್ರಭ ಮುದ್ರೆಯೊತ್ತು; ಟಂಕಿಸು; ಅಚ್ಚುಮಾಡು. ‘ವಿಪರ್ಯಾಸ ಎಂದರೆ ಕನ್ನಡ ಬೆರಳಚ್ಚುಯಂತ್ರದಲ್ಲಿ ‘ಋ’ ಅನ್ನು ಅಚ್ಚೀಕರಿಸುವ ಕೀನೇ ಇಲ್ಲ’. ‘ಈಕರಿಸು’ ಪ್ರತ್ಯಯ ಹಚ್ಚಿ ರೂಪಿಸಿರುವ ಕ್ರಿಯಾಪದ. ಮಾದರಿ: ಸರಳೀಕರಿಸು, ಹಿಂದೀಕರಿಸು ಇತ್ಯಾದಿ. ಟಂಕಿಸು ಎಂಬ ಪದವೂ ಬಳಕೆಯಲ್ಲಿದೆ. ‘ಅಚ್ಚಿಸು’ ರೂಪವೇ ಈ ಅರ್ಥವನ್ನು ನೀಡಬಲ್ಲದು.

ಅಚೈತನ್ಯಶಾಲಿ ಗು ಪುಸ್ತಕವೊಂದರಲ್ಲಿ ಬಳಕೆ ಶಕ್ತಿಯಿಲ್ಲದಿರುವ; ಸಾಮರ್ಥ್ಯವಿಲ್ಲದಿರುವ. ‘ಜನತಂತ್ರಕ್ಕೆ ಅಚೈತನ್ಯಶಾಲೀ ಜನತೆ ಅನಾರೋಗ್ಯಕಾರಿ’. ಚೈತನ್ಯಶಾಲಿ ರಚನೆಗೆ ಅ-ಪೂರ್ವಪ್ರತ್ಯಯವನ್ನು ಹತ್ತಿಸಿ ನಿಷೇಧಾರ್ಥಕವನ್ನಾಗಿ ಮಾಡಿಕೊಳ್ಳಲಾಗಿದೆ. ಸಾಧ್ಯ ರೂಪಗಳು: ಅಸಂಗ್ರಹಶಾಲಿ, ಅಬಲಶಾಲಿ.

ಅಜೇಯತೆ ನಾ ತರಂಗ ಯಾರೂ ಜಯಿಸಿಲ್ಲದಿರುವಿಕೆ. ‘ಈಗಾಗಲೇ ಅಗ್ರಸ್ಥಾನಿಯಾಗಿ ‘ಸೂಪರ್ ಸಿಕ್ಸ್’ ಹಂತಕ್ಕೆ ನೆಗೆದಿರುವ ಪಾಕಿಸ್ಥಾನ ಮುಂದೆಯೂ ಇದೇ ಅಜೇಯತೆಯನ್ನು ಕಾಯ್ದುಕೊಳ್ಳುವುದು ಹೆಚ್ಚು ಕಡಿಮೆ ನಿಶ್ಚಿತ’. ‘ತೆ’ ಪ್ರತ್ಯಯ ಹಚ್ಚಿ ಗುಣವಾಚಕವನ್ನು ನಾಮಪದವನ್ನಾಗಿ ಮಾಡಿರುವುದಕ್ಕೆ ಉದಾಹರಣೆ.

ಅಡಕ ಕೊಡುಗೆ ನಾ ಉದಯವಾಣಿ ಒಂದೇ ಯೋಜನೆಯಲ್ಲಿ ಹಲವು ಬಗೆಯ ಸಹಾಯವನ್ನುಳ್ಳ ಕೊಡುಗೆ. ‘ಹೊಸ ಟೆಲಿಕಾಂ ಅಡಕ ಕೊಡುಗೆ ಅನುಷ್ಠಾನ ಬಹುತೇಕ ಖಚಿತ’. ಇಂಗ್ಲಿಶಿನ ‘ಪ್ಯಾಕೇಜ್’ ಎಂಬ ಪದಕ್ಕೆ ಸಂವಾದಿಯಾಗಿ ಬಂದಿರುವ ಕನ್ನಡ ಪದ.

ಅಣಕವಾಡ ನಾ ಸುಧಾ ಪ್ರಹಸನ. ‘ಉ.ಪ್ರ., ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಅಪರಾಧಿಗಳ ತಂಡಗಳೇ ರಾಜಕಾರಣವನ್ನು ಕೈಗೆತ್ತಿಕೊಂಡಿದ್ದು ಪ್ರಜಾಸತ್ತೆ ಎಂಬುದು ಕೇವಲ ಒಂದು ಅಣಕವಾಡವಾಗಿ ಪರಿಣಮಿಸಿರುವುದು ವ್ಯಕ್ತವಾಗುತ್ತದೆ’. ಅಣಕ, ಅಣಕವಾಡುಕ್ರಿ, ಅಣಕಿಸುಕ್ರಿ, ರಚನೆಗಳಿಂದ ಅಣಕವಾಡ ಎಂಬ ನಾಮವಾಚಕವನ್ನು ರೂಪಿಸಿಕೊಳ್ಳಲಾಗಿದೆ ವಾಡಾ, ವಾಡೆ=ಗೃಹ, ಸೌಧ

ಅತಾತ್ವಿಕ ಗು ಕನ್ನಡಪ್ರಭ ತತ್ವರಹಿತವಾದ. ‘ಹಿಂದುಳಿದ ಕಲ್ಪನೆಯನ್ನಾಧರಿಸಿ ಅತಾತ್ವಿಕ ನಿಲುವಿಗೆ ಭದ್ರವಾಗಿ ಅಂಟಿಕೊಂಡು ಅವರು ಬಂಡಾಯಕ್ಕಿಳಿದಿದ್ದರೆ ಈ ನಡುವೆ ಠುಸ್ಸೆನ್ನುತ್ತಿರಲಿಲ್ಲ. ‘ತಾತ್ವಿಕ’ ಎಂಬ ಗುಣವಾಚಕದ ನಿಷೇಧ ರೂಪವನ್ನು ತತ್ವಹೀನವಾದ, ತತ್ವರಹಿತವಾದ ಎಂದು ಹೇಳುವುದು ರೂಢಿ. ಆದರೆ ‘ಅ’ ನಿಷೇಧ ಪೂರ್ವ ಪ್ರತ್ಯಯವನ್ನು ಬಳಸುವುದು ಹೆಚ್ಚಾಗಿ ಇಂದು ಅನೇಕ ಸಂಸ್ಕೃತ ಪದಗಳಿಗೆ ನಿಷೇಧ ರೂಪವನ್ನು ಕಲ್ಪಿಸಲಾಗುತ್ತಿದೆ.

ಅತ್ಯಾಧುನಿಕಾತ್ಮಕ ಗು ಪ್ರಜಾವಣಿ ಅತಿ ಆಧುನಿಕತೆಯ. ‘ಈ ಸೂಟಿಂಗ್ಸ್‌ನ ಹೊಚ್ಚ ಹೊಸ ಶ್ರೇಣಿ, ಅಂತರಾಷ್ಟ್ರೀಯ ಕಲಾ ಕೌಶಲ್ಯಕ್ಕೆ ಒಳಪಡಿಸಿ ಅತ್ಯಾಧುನಿಕಾತ್ಮಕವಾಗಿ ನೇಯಲ್ಪಟ್ಟಿವೆ’. ‘ಅತ್ಯಾಧುನಿಕವಾಗಿ’ ಎಂಬುದೇ ಅರ್ಥಪೂರ್ಣವಾಗಿದೆ. ‘ಆತ್ಮಕ’ ಸೇರಿಸುವುದರಿಂದ ಹೆಚ್ಚಿನದೇನನ್ನೂ ಸಾಧಿಸಲಾಗುವುದಿಲ್ಲ. ಆದರೂ ಜನರನ್ನು ಆಕರ್ಷಿಸಿ ಮರುಳುಗೊಳಿಸುವ ಕಲೆಯುಳ್ಳ ಜಾಹೀರಾತುಗಳಲ್ಲಿ ಇಂಥ ಪದಗಳ ಬಳಕೆ ಹೆಚ್ಚು.

ಅತಿಕ್ರಮಿ ನಾ ಉದಯವಾಣಿ ಒಂದು ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸುವವ. ‘ತೋಲೋಲಿಂಗ್ ಕದನ:೫೫ ಅತಿಕ್ರಮಿಗಳ ಹತ್ಯೆ’ ಸಾಮಾನ್ಯವಾಗಿ ‘ಅತಿಕ್ರಮಣಕಾರ’ ಪದ ಪ್ರಯೋಗವಾಗುತ್ತಿತ್ತು. ಬಹುಶಃ ಮೇಲಿನ ಪದ ಸೃಷ್ಟಿಗೆ ಪ್ರೇರಣೆ ‘ಪರಾಕ್ರಮಿ’ ಎಂಬ ಪದ.

ಅತಿರೇಕಿಕರಣ ನಾ ಉದಯವಾಣಿ ವಿರುದ್ಧವಾದ ನಡೆ; ಮಿತಿಮೀರುವಿಕೆ. ‘ಚುನಾವಣಾ ಆಯೋಗದಿಂದ ಅತಿರೇಕೀಕರಣಗಳಾಗುತ್ತಿವೆ ಎಂದು ಆರೋಪಿಸಿದ ಅವರು, ಚುನಾವಣಾ ನೀತಿ ಸಂಹಿತೆಯ ಅನುಷ್ಠಾನದ ಬಗ್ಗೆ…’ ‘ಈಕರಣ’ ಪ್ರತ್ಯಯದೊಂದಿಗೆ ಬಂದಿರುವ ಪದ. ‘ಅತಿರೇಕಗೊಳಿಸು’ ಎಂಬ ಅರ್ಥ ಬರಬಹುದು ಎನ್ನಿಸುತ್ತದೆ. ‘ಅತಿರೇಕ’ ಎಂದರೇ ಸಾಕಾಗಿತ್ತು.

ಅದೃಢೀಕೃತ ಗು ಉದಯವಾಣಿ ನಿಶ್ಚಿತವಲ್ಲದ. ‘ಪ್ಲೋರಿಡಾ: ಅದೃಢೀಕೃತ ಫಲಿತಾಂಶ: ಬುಶ್‌ಗೆ ೯೩೦ ಮತಗಳ ಮುನ್ನಡೆ’. ಸುಲಭವಾಗಿ ವಿರುದ್ಧಾರ್ಥ ಪಡೆಯಲು ‘ಅ’ ಪೂರ್ವಪ್ರತ್ಯಯ ಬಳಸಲಾದ ಪದ.

ಅಧ್ಯಯನಾರ್ಥಿ ನಾ ಉದಯವಾಣಿ ಅಧ್ಯಯನ ಮಾಡಲು ಅಪೇಕ್ಷಿಸಿ ಬಂದವ. ‘ವಿವಿಧ ರಾಷ್ಟ್ರಗಳಿಂದ ಆಯ್ದ ಅಧ್ಯಯನಾರ್ಥಿಗಳಿಗೆ ಬಹು ವಿಷಯಕ ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ’. ‘ವಿದ್ಯಾರ್ಥಿ’ ಪದವನ್ನು ಆಧಾರವಾಗಿಟ್ಟುಕೊಂಡು ಹಲವು ಪದಗಳು ಸೃಷ್ಟಿಯಾಗುತ್ತಲಿವೆ. ಉದಾ: ಶಿಬಿರಾರ್ಥಿ. ಇದೇ ಮಾದರಿಯಲ್ಲಿ ಬಂದಿರುವ ಮತ್ತೊಂದು ಪದ.

ಅಧಿಕೋತ್ಪನ್ನ ಗು ಸಂಯುಕ್ತ ಕರ್ನಾಟಕ ಹೆಚ್ಚಾಗಿ ಉತ್ಪಾದಿಸಲಾದ. ‘ಬೇಸಾಯಗಾರರ ನಾಡಾದ ಭಾರತದಲ್ಲಿ ಕೃಷಿ ವಲಯವು ಸುದ್ಧಿ ಮಾಡದ ದಿನವಿಲ್ಲ. ಬರಗಾಲದಲ್ಲೂ ಸುದ್ಧಿ, ಅಧಿಕೋತ್ಪನ್ನದಲ್ಲೂ ಸುದ್ದಿ’. ಸಾಮಾನ್ಯವಾಗಿ ವಸ್ತು ಸೂಚಿಸುವ ಪದದೊಡನೆ ‘ಉತ್ಪನ್ನ’ ಪದವನ್ನು ಸಂಧಿಮಾಡಲಾಗುತ್ತಿದೆ. ಉದಾ: ತೈಲೋತ್ಪನ್ನ, ಚಾಕೋತ್ಪನ್ನ, ಹೈನೋತ್ಪನ್ನ ಇತ್ಯಾದಿಗಳು. ಮೇಲಿನ ಪ್ರಯೋಗದಲ್ಲಿ ಪ್ರಮಾಣ ಸೂಚಕ ಪದದೊಡನೆ ಸಂಧಿ ಮಾಡಲಾಗಿದೆ.

ಅಧಿಬಾರ ನಾ ಕನ್ನಡ ಪ್ರಭ ವಸ್ತುಗಳ ಮೇಲೆ ವಿಧಿಸುವ ಮೂಲ ತೆರಿಗೆಗಿಂತ ಅಧಿಕವಾದ ತೆರಿಗೆ. ‘ರಾಜ್ಯದಲ್ಲಿ ಪೆಟ್ರೋಲ್ ಮೇಲೆ ಅವೈಜ್ಞಾನಿಕವಾಗಿ ಅಧಿಭಾರವನ್ನು ವಿಧಿಸಲಾಗಿದ್ದು. ಈ ಬಗ್ಗೆ ಚರ್ಚೆಯಾಗುವವರೆಗೆ ಬೆಲೆ ಹೆಚ್ಚಳವನ್ನು ತಡೆಹಿಡಿಯಬೇಕು ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಕೇಂದ್ರ ಸರ್ಕಾರವನ್ನು ಅಗ್ರಹಪಡಿಸಿದ್ದಾರೆ’. ‘ಉಪಕರ’ದ (ಸರ್ಚಾರ್ಜ್‌) ಸಮಾನಾರ್ಥಕವಾಗಿ ಬಳಕೆಯಾಗಿರುವ ಇನ್ನೊಂದು ರಚನೆ.

ಅನಾಧ್ಯಾತ್ಮಿಕ ಗು ಹಾಯ್‌ ಬೆಂಗಳೂರ್ ಆಧ್ಯಾತ್ಮಿಕಕ್ಕೆ ಸಂಬಂಧಪಡದ, ಆಧ್ಯಾತ್ಮಿಕವಲ್ಲದ. ‘ಆಕೆಯ ಅನಾಧ್ಯಾತ್ಮಿಕ ಆಸಕ್ತಿಗಳಿಗೆ ಕುರುಹಾಗಿ ಒಂದಿಡೀ ಡಬ್ಬಿಯ ತುಂಬ ನಿರೋಧ್‌ಗಳಿದ್ದವು’. ಟಿಪ್ಪಣಿಗೆ ನೋಡಿ: ಅರಾಷ್ಟ್ರೀಯತ್ವ.

ಅನಾಯ್ಕೆ ನಾ ಸಂಯುಕ್ತ ಕರ್ನಾಟಕ ಆಯ್ಕೆ ಮಾಡದಿರುವುದು; ಆರಿಸದಿರುವುದು. ‘ಗೊಂದಲ ತಂದ ಅನಾಯ್ಕೆ’. ಆರಿಸು, ಆಯ್ಕೆ ಪ್ರಚಲಿತ ರೂಪಗಳು. ಕನ್ನಡ ಪದಕ್ಕೆ ಸಂಸ್ಕೃತದ ನಿಷೇಧಾರ್ಥಕ ಪ್ರತ್ಯಯ ‘ಅನ್’ ಸೇರಿ ಆದ ರಚನೆ. ಸಾಮಾನ್ಯವಾಗಿ ಇಂತಹ ರಚನೆಗಳು ಕಡಿಮೆ. ಮಾದರಿರೂಪ: ಆರ್ಯ-ಅನಾರ್ಯ, ನಾಗರಿಕ-ಅನಾಗರೀಕ.

ಅನೀತಿವಂತ ನಾ ಸಂಯುಕ್ತ ಕರ್ನಾಟಕ ಒಳ್ಳೆಯ ನಡವಳಿಕೆಯಿಲ್ಲದವ; ಅಡ್ಡದಾರಿ ಹಿಡಿದವ. ‘ಕೇಂದ್ರ ರಾಜ್ಯ ಮಂತ್ರಿ ತನ್ನ ಕೈಯಲ್ಲಿರುವ ಕೆಲವು ಅನೀತಿವಂತರ ಕರಾಳದಯಾದಿಗೆ ಸೇರಿದ ಹೆಸರುಗಳನ್ನು ಪ್ರಕಾಶಿಸಲು ಮಾಡಿದ ವಿನಂತಿಗಳನ್ನು ೧೯೮೦ರಲ್ಲಿ ಮನ್ನಿಸಲಿಲ್ಲ’. ‘ನೀತಿ-ಅನೀತಿ’ಯಂತೆ ‘ನೀತಿವಂತ’ ಪದಕ್ಕೆ ವಿರುದ್ಧಾರ್ಥ ಪಡೆಯಲು ‘ಅ’ ಉಪಸರ್ಗ ಸೇರಿಸಲಾಗಿದೆ. ಆದರೆ ‘ನೀತಿಗೆಟ್ಟವ’ ಎಂಬುದು ಬಳಕೆಯಲ್ಲಿರುವ ಪದ.

ಅನುಕಂಪನೀಯ ಗು ಸಂಯುಕ್ತ ಕರ್ನಾಟಕ ಸಹಾನುಭೂತಿಗೆ ಅರ್ಹವಾದ, ಕನಿಕರ ತೋರಿಸಬಹುದಾದ. ‘ಅನುಕಂಪನೀಯ ಜೀವನ್ವಕ್ತಿಗಳಿಗೆ ಕರುಣಾಮಯಿ, ಮನಕರಗುವ ಅಭಿರಾಮರಾಗಿಯೂ ನಡೆದರು’. ‘ಅನುಕಂಪ’ ಪದಕ್ಕೆ ಸಹಾನುಭೂತಿ, ಕನಿಕರ ಎಂಬರ್ಥವಿದೆ. ‘ಅನುಕಂಪನ’ ಪದಕ್ಕೆ ಅನುಸರಿಸಿದ ಸ್ಪಂದನ, ಕಂಪನ ಎಂಬರ್ಥವಿದೆ. ಆದರೆ ‘ಅನುಕಂಪಕ್ಕೆ’ ಈಯ ಸೇರಿಸಲು ಸಾಧ್ಯವಾಗದೇ ‘ಅನುಕಂಪನ’ಕ್ಕೆ ಸೇರಿಸಿರಬಹುದು. ಏನೇ ಆದರೂ ನಿರ್ದೇಶಿತ ಅರ್ಥವನ್ನು ನೀಡಲು ಈ ಪದಿಂದ ಸಾಧ್ಯವಿಲ್ಲ.

ಅನುಕಂಪಾತ್ಮಕ ಗು ಸುಧಾ ಅನುಕಂಪದ ಆಧಾರದ. ‘ವಿಧವೆಗೆ ಸಿಗುವ Family Pension ಗೂ ಮತ್ತು ಆಕೆಗೆ ದೊರಕುವ ಅನುಕುಂಪಾತ್ಮಕ ಕೆಲಸಕ್ಕೂ ಯಾವ ಸಂಬಂಧವೂ ಇಲ್ಲ’. ‘ಆತ್ಮಕ; ಪ್ರತ್ಯಯ ಬಳಸಿ ಅನೇಕ ಪದಗಳ ಹುಟ್ಟು ಸಾಧ್ಯವಾಗುತ್ತಿದೆ. ಉದಾ: ರಚನಾತ್ಮಕ, ನೇತ್ಯಾತ್ಮಕ ಇತ್ಯಾದಿ. ಈ ಮಾದರಿಯನ್ನನುಸರಿಸಿ ಬಂದಿರುವ ಪದ. ‘ಅನುಕಂಪದ ದೃಷ್ಟಿಯಿಂದ’ ಎನ್ನುವುದು ಇದರ ಅರ್ಥ.

ಅನುಮೋದನಾರ್ಹ ಗು ಸಂಯುಕ್ತ ಕರ್ನಾಟಕ ಒಪ್ಪಬಹುದಾದ. ‘ಸಿದ್ಧ ಉಡುಪು ಕ್ಷೇತ್ರದಲ್ಲಿ ಜಾಗತಿಕ ಪೈಪೋಟಿ ಎದುರಿಸಲು ದೇಶ ಸಜ್ಜಾಗಬೇಕು ಎಂಬ ಸಚಿವ ಕಾಶಿರಾಂ ರಾಣಾರ ಅನಿಸಿಕೆಯ ಅನುಮೋದನಾರ್ಹವಾಗಿದೆ’. ‘ಅರ್ಹ’ಪದದೊಡನೆ ಬಂದಿರುವ ಮತ್ತೊಂದು ಪದ. ಮಾದರಿ: ಆಕ್ಷೇಪಾರ್ಹ, ಸ್ತುತ್ಯರ್ಹ ಇತ್ಯಾದಿ.

ಅನುಕೂಲಪರ ಗು ಸಂಯುಕ್ತ ಕರ್ನಾಟಕ ಸಹಾಯಕವಾಗಿರುವ. ‘ಹೀಗೆ ತಮ್ಮ ವ್ಯಾಪಾರಕ್ಕೆ ‘ಅನುಕೂಲಪರವಾಗುವ’ ಹತ್ತು ಹಲವು ದೌರ್ಬಲ್ಯಗಳು ಮಕ್ಕಳನ್ನು ತಮ್ಮ ಶಾಲೆಗೆ ಕಳುಹಿಸಿಕೊಡುವ ಪಾಲಕ-ಪೋಷಕರುಗಳಲ್ಲಿವೆಯೆ?’ ಅನುಕೂಲರ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ. ‘ಪರ’ ಪ್ರತ್ಯಯ ಹತ್ತಿಸಿ ಅದೇ ಅರ್ಥದಲ್ಲಿ ಬಳಸಲಾದ ಪದ.

ಅನುಷ್ಠಾನಿಸು ಕ್ರಿ ಉದಯವಾಣಿ ಜಾರಿಗೊಳಿಸು; ಆಚರಿಸು. ‘ಕಂದಾಯ ಪಾಲುದಾರಿಕೆ ಪ್ರಸ್ತಾವವನ್ನು ಅನುಷ್ಠಾನಿಸದಿದ್ದರೆ ದೂರಸಂಪರ್ಕ ಕ್ಷೇತ್ರ ಕುಸಿದು ವಿನಾಶ ಹೊಂದುವುದೆಂದು ಕಾಂಗ್ರೆಸ್ ನಾಯಕ ಶ್ರೀ….’. ‘ಇಸು’ ಪ್ರತ್ಯಯ ಪ್ರಯೋಗಕ್ಕೆ ಮತ್ತೊಂದು ಉದಾಹರಣೆ.

ಅನೇರ ನಾ ಪುಸ್ತಕವೊಂದರಲ್ಲಿ ಬಳಕೆ ‘ಪ್ರಕಟಣೆಗಾಗಿ ನೇರ ಅಥವಾ ಅನೇರವಾಗಿ ಸಹಕಾರಿಯಾದ…’. ‘ಅಪ್ರತ್ಯಕ್ಷ’, ‘ಪರೋಕ್ಷ’ ಎಂಬ ಪದಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ಪದಗಳು. ಆದರೆ ಇತ್ತೀಚೆಗೆ ‘ಅ’ ನಿಷೇಧ ಪೂರ್ವಪ್ರತ್ಯಯ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಪದಗಳ ಸೃಷ್ಟಿಯಾಗುತ್ತಿದೆ. ಆ ದಾರಿಯಲ್ಲಿ ಮೇಲಿನ ಪ್ರಯೋಗವೂ ಒಂದು.

ಅನೌಚಿತ್ಯತೆ ನಾ ಸಂಯುಕ್ತ ಕರ್ನಾಟಕ: ಯೋಗ್ಯವಲ್ಲದುದು. ‘ಪರಿಷ್ಕೃತ ನೀತಿ ಜಾರಿ ತಡೆ ಜೊತೆಗೆ ಇದರ ಹಿನ್ನೆಲೆ ಕುರಿತಂತೆ ತನಿಖೆ ನಡೆಯಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಸಂವಿಧಾನಾತ್ಮಕ ಅನೌಚಿತ್ಯತೆ ಮಾತ್ರವಲ್ಲ, ಲೋಸಭೆಯ ವಿಶ್ವಾಸ ಕಳೆದುಕೊಂಡ ಸರ್ಕಾರಕ್ಕೆ ಇಂತಹ…’. ‘ತೆ’ ಪ್ರತ್ಯಯ ಎಲ್ಲ ಪದಗಳಿಗೂ ಬಳಸುವುದು ಉಚಿತವಲ್ಲ. ಏಕೆಂದರೆ ‘ತೆ’ ಇಲ್ಲದೆಯೂ ಎಷ್ಟೋ ಪದಗಳು ಇಚ್ಚಿತ ಅರ್ಥವನ್ನು ಕೊಡುತ್ತವೆ. ಉದಾ: ವೈವಿಧ್ಯ, ಲಕ್ಷ್ಯ ಇತ್ಯಾದಿ. ಆದರೆ ಬಳಕೆದಾರರು ಇದನ್ನು ಗಮನಿಸದೆ ‘ತೆ’ ಬಳಸುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.

ಅಪಘಟನೆ ನಾ ಸುಧಾ ಆಕಸ್ಮಿಕವಾದ ಕೆಡಕು, ಕೆಟ್ಟ ಘಟನೆ. ‘ಈಗಾಗಲೇ ಜರುಗಿರುವ ಅಪಘಟನೆಗಳಿಂದ ಹಣ್ಣಾಗಿರುವ ಆ ಜೀವ, ಅವುಗಳ ಕಹಿ ನೆನಪಿನ ಮರುಕಳಿಕೆಯಿಂದ…’ ಸಂಸ್ಕೃತದ ‘ಅಪ’ ಮತ್ತು ‘ದು’ ಪೂರ್ವಪ್ರತ್ಯಯಗಳು ‘ಕೆಟ್ಟ’ ಎಂಬುದನ್ನು ಸೂಚಿಸಿದರೂ ಮೇಲಿನ ಸಂದರ್ಭದಲ್ಲಿ ‘ದು’ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು. ಉದಾ: ದುರ್ಘಟನೆ.

ಅಪತ್ರಿಕಾ ವಾರ್ತೆ ನಾ ಸುಧಾ ಪತ್ರಿಕೆಗಳಲ್ಲಿ ಸುದ್ದಿಯಾಗದ. ‘ಅಪತ್ರಿಕಾ ವಾರ್ತೆ’ ಅಂತ ಕುವೆಂಪು ಹೇಳುತ್ತಿದ್ದರಲ್ಲಾ? ಕುಸುಮಾ ಅವರ ಕೆಲಸವೆಲ್ಲ ಬಹುಮಟ್ಟಿಗೆ ಅಪತ್ರಿಕಾಕ್ರಿಯೆಯೇ’ ನಿಷೇಧ ಪೂರ್ವಪ್ರತ್ಯಯ ಬಳಸಿದ್ದರೂ ಅದನ್ನು ಎರಡೂ ಪದಗಳನ್ನು ಗಮನಿಸಿ ಬಳಸಲಾಗಿದೆ.

ಅಪರ್ಯಾಪ್ತ ಗು ಉದಯವಾಣಿ ವ್ಯಾಪ್ತವಲ್ಲದ; ತೃಪ್ತಿಕರವಲ್ಲದ. ‘….ನ್ಯಾಯಾಲಯದ ನ್ಯಾಯಾಧೀಶರು ಈಚೆಗೆ ಅಂಗೀಕರಿಸಿದ ನೀತಿ ಸಂಹಿತೆ ಅಪರ್ಯಾಪ್ತವಾಗಿದ್ದು ಕಳಪೆ ಭಾಷೆಯಲ್ಲಿ ಬರೆಯಲಾಗಿದೆ ಎಂದು…’. ‘ಅ’ ನಿಷೇಧ ಪೂರ್ವಪ್ರತ್ಯಯದಿಂದಾದ ಪದರಚನೆ.

ಅಪರಿವರ್ತನೀಯ ಗು ತರಂಗ ಪರಿವರ್ತನೆ ಸಾಧ್ಯವಿಲ್ಲದ. ‘ಅತಿ ಮೌಲ್ಯಕ್ಕೊಳಗಾದ ಅಪರಿವರ್ತನೀಯ ನಾಣ್ಯ ಕರೆನ್ಸಿ, ಭಾರಿ ತೆರಿಗೆಯ ಗೋಡೆಗಳ ಹಿಂದೆ ಅವಿತ ಉದ್ಯಮಗಳು…’. ಕೆಲವು ಪದಗಳಿಗೆ ‘ಆಗದ, ಮಾಡದ, ಬಾರದ’ ಬಳಸಿ ನಿಷೇಧ ರೂಪಗಳನ್ನು ಪಡೆಯಲಾಗುತ್ತದೆ. ಮೇಲಿನ ಪದಕ್ಕೆ ಸಂಬಂಧಿಸಿದಂತೆ ‘ಪರಿವರ್ತಿಸಲಾಗದ’ ಎಂದು ಬಳಕೆಯಾಗುತ್ತಿತ್ತು. ಆದರೆ ಇಂದು ನಿಷೇಧ ಸೂಚಿಸಲು ಪೂರ್ವಪ್ರತ್ಯಯಗಳ ಬಳಕೆ ಸುಲಭವೆಂದು ಬಳಸಲಾಗುತ್ತದೆ.

ಅಪರಿಹಾರ ನಾ ಕನ್ನಡ ಪ್ರಭ ಪರಿಹಾರ ಕಾಣದಿರುವುದು. ‘ನೆಲ, ಜಲ, ಗಡಿ ಸಮಸ್ಯೆಗಳ ಅಪರಿಹಾರಕ್ಕೆ ರಾಜಕೀಯ ಸಂಕಲ್ಪದ ಅಭಾವವೇ ಕಾರಣ’. ಇದೊಂದು ವಿಚಿತ್ರ ರಚನೆ. ಪರಿಹಾರ, ಪರಿಹರಿಸು, ಪರಿಹಾರ ಕಾಣದಿರುವಿಕೆ-ಇವು ರೂಢಿಯಲ್ಲಿರುವ ಪ್ರಯೋಗಗಳು. ನಾಮವಾಚಕಕ್ಕೆ ಅದರ ಹಿಂದೆ ಅ-, ಅಥವಾ ಅನ್-ಮೊದಲಾದ ನಿಷೇಧಾರ್ಥಕ ಪೂರ್ವಪ್ರತ್ಯಯಗಳನ್ನು ಹತ್ತಿಸಿ ಅನಾಗರಿಕ, ಅಸಿಂಧು, ಅನಾರ್ಯ ಮೊದಲಾದ ರಚನೆಗಳನ್ನು ಸೃಷ್ಟಿಸಿಕೊಳ್ಳುವುದು ರೂಢಿ.

ಅಪರೋಕ್ಷ ನಾ ಪ್ರಜಾವಾಣಿ ಪ್ರತ್ಯಕ್ಷವಾಗಿ. ‘…ಕಾಲಕಾಲಕ್ಕೆ ಮಾರ್ಗದರ್ಶನ ಮಾಡಿದ ಸಂಸ್ಥೆಯ ಹಿತೈಷಿಗಳಿಗೆ ಪರೋಕ್ಷವಾಗಿ ಮತ್ತೆ ಅಪರೋಕ್ಷವಾಗಿ ದುಡಿದ ಎಲ್ಲ ಕಾರ್ಯಕರ್ತರಿಗೂ…’ ‘ಪರೋಕ್ಷ’ ಪದಕ್ಕೆ ‘ಪ್ರತ್ಯಕ್ಷ’ ಎಂಬುದು ವಿರುದ್ಧ ಪದವಾದರೂ ಅಪರೋಕ್ಷವಾಗಿ ಎಂಬುದಾಗಿ ನಿಷೇಧ ಪೂರ್ವಪ್ರತ್ಯಯ ತಂದಿರುವ ಪದ. ಸೂಕ್ತಪದ ತಕ್ಷಣ ಹೊಳೆಯದಿದ್ದರೆ, ಸುಲಭರೂಪವಾದ ನಿಷೇಧ ಪೂರ್ವಪ್ರತ್ಯಯ ಬಳಸುವುದು ಇತ್ತೀಚೆಗೆ ಹೆಚ್ಚುತ್ತಿದೆ.

ಅಪ್ಪಣಿಸು ಕ್ರಿ ಸುಧಾ ಆಜ್ಞೆಮಾಡು. ‘ಅವಳೂ ನಮ್ಮಂಗೆ ಮನುಷ್ಯಳೇ ಕಣೆ….ಬಾ’. ಅಪ್ಪಣಿಸಿದಂತೆ ಮಾತು ಬಂದಾಗ ಎಲ್ಲರೂ ಹಿಂಬಾಲಿಸಿದರು’. ‘ಇಸು’ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ. ಸಾಮಾನ್ಯವಾಗಿ ಸಂಸ್ಕೃತ ನಾಮಪದಗಳೊಡನೆ ‘ಇಸು’ ಬಂದು ಕ್ರಿಯಾಪದ ರಚನೆಯಾಗುವುದು ರೂಢಿ.

ಅಪ್ರತಿನಿಧಿತ ಗು ಉದಯವಾಣಿ ಪ್ರತಿನಿಧಿಸಲ್ಪಡದ. ‘ಅಪ್ರತಿನಿಧಿತ ಪ್ರದೇಶಗಳಲ್ಲಿ ವಿತರಣಾಗಾರರನ್ನು ಆಹ್ವಾನಿಸಲಾಗಿದೆ.’ ‘ಆ’ ನಿಷೇಧ ಪೂರ್ವಪ್ರತ್ಯಯ ಹತ್ತಿಸಿ ಅನೇಕ ಪದಗಳನ್ನು ಬಳಸಲಾಗುತ್ತಿದೆ. ಆ ಮಾದರಿಯಲ್ಲಿ ಬಂದಿರುವ ಹೊಸ ಪದ. ಸಾಮಾನ್ಯವಾಗಿ ‘ಪ್ರತಿನಿಧಿಗಳಿಲ್ಲದ’ ಎಂದೇ ಬಳಸಲಾಗುತ್ತಿತ್ತು.

ಅಪ್ರಾಯಸ್ಥ ಗು ಲೋಕಧ್ವನಿ ಪ್ರಾಯಕ್ಕೆ ಬಂದಿಲ್ಲದ, ವಯಸ್ಸಿಗೆ ಬಂದಿಲ್ಲದವ, ೧೮ ವರ್ಷಕ್ಕೆ ಕಡಿಮೆ ವಯಸ್ಸಿನವ. ‘ವಿನಯ ತಂದೆ ಗಣಪತಿ ಹೆಗಡೆ ವಯಸ್ಸು ಅಸಮಾಸ ೮ ವರ್ಷ ಅಪ್ರಾಯಸ್ಥ, ರಕ್ಷಕಿ ತಾಯಿ ಸಾವಿತ್ರಿ ಕೋಂ ಗಣಪತಿ ಹೆಗಡೆ ವಯಸ್ಸು ಅಸಮಾಸ ೪೦ ವರ್ಷ ರೈತಾಪಿ, ಸಾ: ಶಿರಸಿ ತಾಲೂಕು, ಶೀಗೇಹಳ್ಳಿ ಗ್ರಾಮದ ತೆಂಗಿನ ಮನೆ’. ಇಂಗ್ಲಿಶಿನ ಮೈನರ್ ಎಂಬುದಕ್ಕೆ ಸಂವಾದಿಯಾಗಿ ಬಳಸಿರುವ ಪದ. ಇನ್ನು ಎರಡು ಪದಗಳು ‘ಅಪ್ರಾಪ್ತ’, ‘ಅವಯಸ್ಕ’ ಎಂಬುವು ಈಗಾಗಲೇ ಬಳಕೆಯಾಗಿರುವುದನ್ನು ಗಮನಿಸಬಹುದು.

ಅಭ್ಯರ್ಥಿಕೆ ನಾ ಕನ್ನಡ ಪ್ರಭ ಉಮೇದುವಾರಿಕೆ ‘ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕೂಡ ಇದೇ ರೀತಿಯ ಹಲವಾರು ನಿರ್ಣಯಗಳ ಮೂಲಕ ಸಯೀದ್ ಅವರ ಅಭ್ಯರ್ಥಿಕೆಯನ್ನು ಬೆಂಬಲಿಸಿದರು. ‘ಇಕೆ’ ಪ್ರತ್ಯಯದೊಡನೆ ಬಂದಿರುವ ಪದ. ‘ಅಭ್ಯರ್ಥನ’ ಎಂದೂ ಬಳಕೆಯಲ್ಲಿದೆ.

ಅಭಿನಯಗಾತಿ ನಾ ತರಂಗ  ನಟಿಸುವವಳು; ಪಾತ್ರವಹಿಸುವವಳು. ‘… ಆ ಕಾಲದಲ್ಲಿ ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸಿ ಮದುವೆಯಾಗಿ ಬದುಕಿದ ಗಟ್ಟಿಗ. ಸ್ವತಃ ಹಾಡುಗಾತಿ, ನೃತ್ಯಗಾತಿ ಮತ್ತು ಅಭಿನಯಗಾತಿಯೂ ಆಗಿದ್ದ ಇವರ ಮಡದಿ…’. ಬಹುಶಃ ಪ್ರಾಸಬದ್ಧವಾಗಿ ಬರೆಯಬೇಕೆಂದು ಮೇಲಿನ ಪ್ರಯೋಗ ರೂಪಿಸಿರಬಹುದೇನೋ? ಸಾಮಾನ್ಯವಾಗಿ ‘ಗಾರ’ ಪ್ರತ್ಯಯಕ್ಕೆ ‘ಗಾತಿ’ ಸ್ತ್ರೀಲಿಂಗ ಸೂಚಕವಾಗುತ್ತದೆ. ಆದರೆ ‘ಅಭಿನಯಗಾರ’ ಎಂಬ ಪದವೇ ಇಲ್ಲ. ನಟಿ ಎಂಬುದನ್ನು ಸೂಚಿಸಲು ಇನ್ನೊಂದು ಪದ ‘ಅಭಿನೇತ್ರಿ’ ಎಂಬುದೂ ಇದೆ. ‘ಅಭಿನೇತಾ’ ಪುಲ್ಲಿಂಗ ಸೂಚಕ ಪದ.

ಅಭಿರುಚಿವಂತ ಗು ಲಂಕೇಶ್ ಪತ್ರಿಕೆ ಅಭಿರುಚಿಯಿರುವ, ಆಸಕ್ತಿಯುಳ್ಳ. ‘ದಾಂಪತ್ಯಗಾಥೆ’ ಎಂಬ ಕಿರು ಕಾದಂಬರಿ ಪ್ರಕಟಿಸಿದ್ದರೂ ಕಾದಂಬರಿಕಾರ್ತಿಯಾಗಿ ಅಭಿರುಚಿವಂತ ಓದುಗರ ಗಮನ ಸೆಳೆಯಲು ಆದಂತಿಲ್ಲ’. ಬುದ್ದಿವಂತ, ಸಿರಿವಂತ ಮಾದರಿಯ ಪದಗಳ ಮೇಲೆ ಬಂದಿರುವ ಪದ.

ಅಭಿವೃದ್ಧಿತ ಗುಉದಯವಾಣಿ ‘ಅಭಿವೃದ್ಧಿ ಪಡಿಸಲಾದ’. ಈಗ ಪ್ರಮುಖರಾಷ್ಟ್ರವೊಂದು ದೇಶಿ ಅಭಿವೃದ್ಧಿತ ಸೂಪರ್ ಕಂಪ್ಯೂಟರ್‌ನ್ನು ತನಗೆ ಮಾರುವಂತೆ ಭಾರತವನ್ನು ಸಂಪರ್ಕಿಸಿದೆ’. ಸಂಗ್ರಹಿತ, ನಿರ್ಮಿತ ಮಾದರಿಯನ್ನನುಸರಿಸಿ ಬಂದಿರುವ ಪದ.

ಅಮುಖವಾಣಿ ನಾ ಲಂಕೇಶ್ ಪತ್ರಿಕೆ ಮುಖವಾಣಿಯಲ್ಲದ್ದು. ‘…ಬಿ.ಜೆ.ಪಿ.ಗೆ ‘ಹೊಸದಿಗಂತ’ ಎಂಬ ಮುಖವಾಣಿಯಲ್ಲದೆ ‘ಉದಯವಾಣಿ’ ಎಂಬ ಅಮುಖವಾಣಿಯೂ ಇದೆ’. ಒಂದು ಪದಕ್ಕೆ ವಿರುದ್ಧ ಪದ ಸಿಗದ ಸಂದರ್ಭದಲ್ಲಿ ‘ಅ’ ನಿಷೇಧ ಪ್ರತ್ಯಯ ಬಳಸಿ ಪದ ಸೃಷ್ಟಿಸುವುದು ಸುಲಭದ ಕೆಲಸ. ಆದರೂ ಇಲ್ಲಿ ವ್ಯಂಗ್ಯದಿಂದ ಕೂಡಿದ ಕಾರಣ ವಿರುದ್ಧಾರ್ಥ ಬರದೆ ಇದೂ ಒಂದು ಮುಖವಾಣಿ ಎಂದೇ ಅರ್ಥವಾಗುತ್ತದೆ.

ಅಮೂಲ್ಯತೆ ನಾ ಸಂಯುಕ್ತ ಕರ್ನಾಟಕ ಬೆಲೆ ಬಾಳುವಿಕೆ, ಮಹತ್ವ. ‘ಹಳ್ಳಿಮನೆಯಲ್ಲಿ ಮೊದಲು ಅವು ದೊರೆತಾಗ ಅವುಗಳ ಅಮೂಲ್ಯತೆ ಗೊತ್ತಾಯಿತು’. ‘ತೆ’ ಪ್ರತ್ಯಯ ಬಳಸಿ ಗುಣವಾಚಕವನ್ನು ನಾಮಪದವನ್ನಾಗಿ ರೂಪಿಸಿರುವ ಪ್ರಕ್ರಿಯೆಗೆ ಉದಾಹರಣೆ.

ಅಮೋಘತೆ ನಾ ಜಾಹೀರಾತು ಬೆಲೆ ಬಾಳುವಿಕೆ. ‘ನೀವು ಅಮೋಘವಾದ ಬೈಕ್ ಹೊಂದಿದ್ದೀರಿ. ಅದರ ಅಮೋಘತೆ ಯನ್ನು ಕಾಪಾಡಲು ನೀವು ಬದ್ಧರು.’ ಗುಣವಾಚಕದಿಂದ ನಾಮಪದ ಸೃಷ್ಟಿಸಲು ‘ತೆ’ ಪ್ರತ್ಯಯದ ಬಳಕೆ ನಡೆದಿದೆ.

ಅರಕ್ತತೆ ನಾ ಜಾಹೀರಾತು ರಕ್ತವಿಲ್ಲದಿರುವಿಕೆ. ‘ಇದರ ಕೊರತೆ ಅರಕ್ತತೆಗೆ ಕಾರಣವಾಗಿ ಅದರಿಂದ ಕಲಿಯುವ ಸಾಮರ್ಥ್ಯ, ಮಿದುಳಿನ ಶಕ್ತಿ ತಗ್ಗಿ ನಿರುತ್ಸಾಹ-ನಿರಾಸಕ್ತಿ ತಲೆದೋರುತ್ತದೆ, ‘ರಕ್ತಹೀನತೆ’ ಎಂಬುದು ಹೆಚ್ಚಾಗಿ ಬಳಕೆಯಲ್ಲಿರುವ ಪದ. ಅಲ್ಲದೆ ‘ಅ’ ನಿಷೇಧ ಪೂರ್ವ ಪ್ರತ್ಯಯವನ್ನು ‘ರಕ್ಷತೆ’ಗೆ ಹತ್ತಿಸಲಾಗಿದೆ. ‘ರಕ್ತತೆ’ ಪದಕ್ಕೆ ಕೆಂಪಾಗಿರುವಿಕೆ ಎಂಬರ್ಥ ಇದೆಯೇ ವಿನಃ ರಕ್ತದಿಂದ ಕೂಡಿದ್ದೆಂಬ ಅರ್ಥವಿಲ್ಲ. ಆದರೆ ಇದು ಕೆಂಪಾಗಿರುವಿಕೆ ಎಂಬ ಅರ್ಥ ಹೆಚ್ಚಾಗಿ ಗೊತ್ತಿರದ ಕಾರಣ ಅರಕ್ತತೆ ಎಂಬುದು ರಕ್ತಹೀನತೆ ಎಂಬ ಅರ್ಥ ಪಡೆಯಬಹುದು.

ಅರಾಜಕೀಯ ಗು ಸುಧಾ ರಾಜಕೀಯ ಮಾಡದ, ರಾಜಕೀಯದಲ್ಲಿಲ್ಲದ. ‘ಮಹಮದ್ ರಫೀಕ್‌ತರಾರ್ ಅವರಿಗೆ ಅರ್ಹತೆಯೇ ಇಲ್ಲ ಎಂದೇನಿಲ್ಲ. ಅವರೊಬ್ಬ ಅ-ರಾಜಕೀಯ ವ್ಯಕ್ತಿ’. ‘ಅ’ ಪೂರ್ವ ಪ್ರತ್ಯಯವನ್ನು ಹಚ್ಚಿ ನಿಷೇಧಾರ್ಥ ರೂಪಗಳನ್ನು ಸೃಷ್ಟಿಸುವುದು ನಡೆದಿದೆ. ಆದರೆ ‘ಅರಾಜಕ’ ಎಂಬ ಪದವೊಂದು ಬಳಕೆಯಲ್ಲಿದೆ. ಮೇಲಿನ ಪದ ಅದರಿಂದ ಬಂದದ್ದೇನೋ ಎಂಬ ಅನುಮಾನ ಬರಬಹುದು. ಆದರೆ ಇಲ್ಲಿ ‘ರಾಜಕೀಯ’ ಪದಕ್ಕೆ ನಿಷೇದ ರೂಪವನ್ನು ನೀಡಿರುವುದಾಗಿದೆ. ಕೆಳಗಿನ ವಾಕ್ಯವನ್ನು ಗಮನಿಸಿ. ಶ್ರೀಯುತರು… ಎಂಬ ರಾಜಕೀಯೇತರ ವೇದಿಕೆಯನ್ನು ಹುಟ್ಟುಹಾಕಿದರು. ಇಲ್ಲಿ ರಾಜಕೀಯೇತರ ಎಂಬ ಪದದ ಬದಲು ‘ಅರಾಜಕೀಯ’ ಎಂಬ ಪದ ಬಂದರೂ ಆಶ್ಚರ್ಯವಿಲ್ಲ.

ಅರಾಷ್ಟ್ರೀಕರಣ ನಾ ಸಂಯುಕ್ತ ಕರ್ನಾಟಕ ರಾಷ್ಟ್ರದ ಒಡೆತನದಿಂದ ಬಿಡುಗಡೆಗೊಳಿಸುವುದು ‘ಅರಾಷ್ಟ್ರೀಕರಣವೆಂದರೆ ಸಾರ್ವಜನಿಕ ಕಂಪನಿಗಳ ಪೂರ್ಣ ಒಡೆತನವನ್ನು ಖಾಸಗಿಯವರಿಗೆವಹಿಸುವುದು’. ‘ಅ’ ನಿಷೇಧ ಉಪಸರ್ಗದೊಂದಿಗೆ ಬಂದಿರುವ ಪದ. ವಿರುದ್ಧಾರ್ಥ ಪಡೆಯಲು ಸುಲಭೋಪಾಯ.

ಅರಾಷ್ಟ್ರೀಯತ್ವ ನಾ ಸಂಯುಕ್ತ ಕರ್ನಾಟಕ ರಾಷ್ಟ್ರೀಯ ಪ್ರಜ್ಞೆಗೆ ವಿರುದ್ಧವಾದುದು ‘ಮಿಶನರಿಗಳ ಪ್ರಭಾವವು ಅರಾಷ್ಟ್ರೀಯತ್ವಕ್ಕೆ ಹೇಗೆ ಕಾರಣವಾಗುವದೆಂಬುದು ಆದಿವಾಸಿ ಪ್ರದೇಶಗಳಲ್ಲಿ ಅನುಭವವಾಗತೊಡಗಿದೆ’. ‘ಅ’ ನಿಷೇಧ ಪ್ರತ್ಯಯ ಬಳಸಿ ಪದಕ್ಕೆ ವಿರುದ್ಧಾರ್ಥ ತರುವ ಪ್ರಕ್ರಿಯೆ ಸುಲಭವಾದುದು ಎಂದರೂ ಕೆಲವು ಪದಗಳಿಗೆ ಇದಕ್ಕಿಂತ ಬೇರೇನೂ ಮಾಡಲಾಗುವುದಿಲ್ಲ ಎಂಬುದೂ ಗಮನಾರ್ಹ.

ಅರಿಷಡ್ವೈರಿ ನಾ ತರಂಗ ಆರು ಬಗೆಯ ವೈರಿಗಳು. ‘ಅದನ್ನು ಮುಕ್ತಿಧಾಮ ಎಂದು ಸಾಂಕೇತಿಕವಾಗಿ ಅರ್ಥೈಸಿದರೆ ಅರಿಷಡ್ವೈರಿಗಳನ್ನೂ ಮೀರಿ, ಸಾತ್ವಿಕ ಮಾರ್ಗದಲ್ಲಿ ಚಲಿಸಿ ಮುಕ್ತಿ ಪಡೆಯವ ಮಾನವ…’. ಸಂಸ್ಕೃತದ ಅರಿಷಡ್ವರ್ಗಕ್ಕೆ ಆರು ಬಗೆಯ ವೈರಿ ಆಧ್ಯಾತ್ಮಿಕ ಎಂಬಂರ್ಥವಿದೆ. ಮೇಲಿನ ಪ್ರಯೋಗದಲ್ಲಿ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ವೈರಿ ಪದ ಬಂದ ದ್ವಿರುಕ್ತಿಯಂತಾಗಿದೆ. ಇಲ್ಲದಿದ್ದರೆ ಷಡ್ವೈರಿ ಎನ್ನಬೇಕಾಗುತ್ತದೆ.

ಅರೆಲೋಹ ನಾ ವಿಜ್ಞಾನ ಸಂಗಾತಿ ಪೂರ್ಣವಾಗಿ ಲೋಹಗುಣವಿಲ್ಲದುದು. ‘ಆವರ್ತಕೋಷ್ಠಕದ “IV ಬಿ” ಗುಂಪಿಗೆ ಅರೆಲೋಹವಾದ ಸಿಲಿಕಾನ್ ಸೇರುತ್ತದೆ’. ಅಪೂರ್ಣವಾದ, ಪೂರ್ಣವಲ್ಲದ, ಅರ್ಧ, ತುಸು ಎಂಬರ್ಥ ‘ಅರೆ ಲೋಹ’ ಪದದ ವಿಶೇಷವಾಗಿದೆ’. ಮಾದರಿ ರೂಪ: ಅರೆನಗ್ನ, ಅರೆಮನಸ್ಸು, ಅರೆಮನಸು, ಅರೆನೆಲೆ.

ಅರ್ಥಗಾರಿಕೆ ನಾ ಉದಯವಾಣಿ ಅರ್ಥವನ್ನು ವಿವರಿಸುವುದು. ಯಕ್ಷಗಾನ ಪ್ರಸಂಗಗಳಲ್ಲಿ ‘ಅರ್ಥಗಾರಿಕೆಯಲ್ಲಿ ಸೈ ಎನ್ನಿಸಿಕೊಂಡವರು’ ಮಾತುಗಾರಿಕೆ, ಹಾಡುಗಾರಿಕೆ ಮಾದರಿಯಲ್ಲಿ ಬಂದಿರುವ ಪದ. ಅರ್ಥೈಸುವುದು ಒಂದು ಕಲೆ ಎಂಬಂತೆ ಬಳಸಲಾಗಿದೆ. ಅರ್ಥಗಾರ ಪದ ಬಳಕೆಯಲ್ಲಿಲ್ಲ.

ಅರ್ಥದಾರಿ ನಾ ಕನ್ನಡಪ್ರಭ ಬೇರೊಂದು ಅರ್ಥ ಉಂಟುಮಾಡುವುದು. ‘ಒಂದೊಂದಕ್ಕೂ ಕೋರ್ಟ್‌ನಿರ್ದೇಶನ ಸೂತ್ರ ಬರೆದುಕೊಟ್ಟರೂ ನಮ್ಮ ಬ್ಯುರಾಕ್ರಸಿಯಲ್ಲಿ ಅರ್ಥದಾರಿಗಳಿಗೇನೂ ಕಮ್ಮಿಯಿಲ್ಲ’. ಇಂಗ್ಲಿಶ್‌ನ ಮಿಸ್-ಇಂಟರ್‌ಪ್ರಿಟೇಶನ್ ಪದದ ಅರ್ಥಕ್ಕೂ ಸಮೀಪ ಬರಬಹುದಾದಂತಹ ಪದ. ಅಂದರೆ, ಇರುವ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ಕೊಡಬಲ್ಲ ಮಾರ್ಗವನ್ನು ಹುಡುಕುವುದು ಎಂಬರ್ಥ ಬರಬಹುದೇ?

ಅರ್ಥೋನ್ನತಿ ನಾಮಾತಿನಲ್ಲಿ ಬಳಕೆ ಹಣಕಾಸಿನ ಉತ್ತಮ ಸ್ಥಿತಿ. ‘ಕೆಲವರು ಆತ್ಮಾನಂದಕ್ಕಾಗಿ ಸಾಹಿತ್ಯ ರಚಿಸಿದರೆ ಇನ್ನು ಕೆಲವರು ‘ಅರ್ಥೋನ್ನತಿ’ಗಾಗಿ ರಚಿಸುತ್ತಾರೆ. ‘ಅರ್ಥ’ ಪದಕ್ಕೆ ‘ಹಣ’ ಎಂಬರ್ಥವಿದ್ದು ಇನ್ನೊಂದು ಅರ್ಥವೂ (ಶಬ್ದದ ಅಭಿಪ್ರಾಯ) ಇರುವುದರಿಂದ ಮೇಲಿನ ಪ್ರಯೋಗದಲ್ಲಿ ಅರ್ಥಸಂದಿಗ್ಧತೆಯಿದೆ.

ಅಲಕ್ಷತೆ ನಾ ಸಂಯುಕ್ತ ಕರ್ನಾಟಕ ಲಕ್ಷ್ಯ ಮಾಡದಿರುವುದು; ಗಮನ ನೀಡದಿರುವುದು. ‘ಶ್ರೀಕಂಠದತ್ತ ಒಡೆಯರ್ ಉತ್ಸವದಲ್ಲಿ ಪಾಲ್ಗೊಳ್ಳವರೋ ಇಲ್ಲವೋ ಅದು ಬೇರೆ ಮಾತು. ಆದರೆ ಸರ್ಕಾರ ಮಾತ್ರ ಈ ಅಲಕ್ಷತೆ ತೋರಬಾರದಿತ್ತು ಎಂಬ ಅಭಿಪ್ರಾಯ ಮೂಡಿದೆ’. ಸೂಕ್ತ ಪದವಿದ್ದರೂ ಸಾದೃಶ್ಯದ ಆಧಾರದ ಮೇಲೆ ಪದರಚನೆಗೆ ಇದು ಉದಾಹರಣೆ. ‘ತೆ’ ಪ್ರತ್ಯಯ ಹಚ್ಚಿ ನಾಮಪದ ರಚಿಸಲಾಗಿದೆ. ‘ಅಲಕ್ಷ್ಯ’ ಎಂಬ ಪದವೇ ಇರುವಾಗ ಇದು ಬೇಕೆ? ಅಲ್ಲದೆ ಇಲ್ಲಿ ಯಾವ ಪದಕ್ಕೆ ನಿಷೇಧ ತರಲಾಗಿದೆ ಎಂಬುದೂ ಗೊಂದಲಕ್ಕೆ ಕಾರಣವಾಗಿದೆ. ಏಕೆಂದರೆ ‘ಲಕ್ಷತೆ’ ಪದ ಬಳಕೆಯಲಿಲ್ಲ.

ಅವಗೆಂಪು ನಾ ಸುಧಾ ಕೆಂಪಿನ ಒಂದು ವಿಧ. ‘ಇದೊಂದು ಹೈಟೆಕ್ ಪೆನ್, ಇದರ ನಿಬ್ಬಿನ ಬಳಿ ಒಂದು ಅವಗೆಂಪು ಕಿರಣಗಳ ಕ್ಯಾಮರಾ ಕೂಡಾ ಇದೆ’. ಇಂಗ್ಲಿಶಿನ ‘ಇನ್‌ಫ್ರಾರೆಡ್’ ಎಂಬುದಕ್ಕೆ ಸಂವಾದಿಯಾಗಿರುವಂತಿದೆ.

ಅವಲಂಬನಾರ್ಹ ಗು ಜಾಹೀರಾತು ಭರವಸೆಯಿಡಬಹುದಾದ, ನಂಬಬಹುದಾದ. ‘ನೀವು ನಿಮ್ಮ ಮಾರುತಿಯನ್ನು ಇನ್ನಷ್ಟು ಹೆಚ್ಚು ಅವಲಂಬನಾರ್ಹವಾಗಿ ಮಾಡಲು ಬಯಸುವುದಿಲ್ಲವೇ’? ಇಂಗ್ಲಿಶಿನ ‘ಡಿಪೆಂಡೆಬಲ್’ ಎಂಬುದಕ್ಕೆ ಸಂವಾದಿಯಾಗಿ ‘ಅರ್ಹ’ ಉತ್ತರ ಪದದೊಡನೆ ಬಂದಿರುವ ಪದ.

ಅವಶೇಷೀಕರಣ ನಾ ಸುಧಾ ಪಳೆಯುಳಿಕೆಯಂತಾಗುವಿಕೆ. ‘ಸತ್ತ ಪ್ರಾಣಿ ಅಥವಾ ಸಸ್ಯವು ಪಳೆಯುಳಿಕೆಯಾಗಿ ಉಳಿಯುವ ಕ್ರಿಯೆಯನ್ನು ಅವಶೇಷಿಕರಣ (ಫಾಸಿಲೈಸೇಷನ್) ಎಂದು ಕರೆಯಬಹುದು. ಈಕರಣ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ. ಇಂಗ್ಲಿಷಿನ ‘ಫಾಸಿಲೈಸೇಷನ್‌’ಗೆ ಸಂವಾದಿಯಾಗಿ ಮೇಲಿನ ಪ್ರಯೋಗ ಬಳಕೆಯಾಗಿರುವುದನ್ನು ಗಮನಿಸಬಹುದು.

ಅವಯಸ್ಕ ನಾ ಪುಸ್ತಕವೊಂದರಲ್ಲಿ ಬಳಕೆ ವಯಸ್ಕನಲ್ಲದವ; ಅಪ್ರಾಪ್ತ ವಯಸ್ಸಿನವ. ‘ಅವಯಸ್ಕ ಪೋಷಕ’ ವಯಸ್ಕ ನಾಮವಾಚಕಕ್ಕೆ ಅ ಎಂಬ ನಿಷೇಧಾರ್ಥಕ ಪೂರ್ವಪ್ರತ್ಯಯವನ್ನು ಹಚ್ಚಿ ಬಳಸಲಾಗಿದೆ. ಅಪ್ರಾಪ್ತವಯಸ್ಕ ಸಮಾನಾರ್ಥಕ ಪದ. ಇದು ಅಪ್ರಾಪ್ತವಯಸ್ಕದ ಸಂಕ್ಷಿಪ್ತ ರೂಪವೂ ಹೌದೆಂದು ಹೇಳಬಹುದು. ಮಾದರಿ ರೂಪ: ಅನಾಗರಿಕ, ಅರಸಿಕ.

ಅವಿವೇಚನೆ ನಾ ಸಂಯುಕ್ತ ಕರ್ನಾಟಕ ಒಳಿತು, ಕೆಡುಕುಗಳ ಅರಿವಿಲ್ಲದಿರುವುದು. ಸಾಧಕ-ಬಾಧಕಗಳನ್ನು ಕುರಿತು ಯೋಚಿಸದಿರುವುದು. ‘ಜಾರ್ಜ್‌ಫರ್ನಾಂಡೀಸರು ರಕ್ಷಣಾ ಸಚಿವರಾದ ಮೇಲೆ ಚೀನಾ ಕುರಿತಂತೆ ತಮ್ಮ ಅವಿವೇಚನೆಯ ಹೇಳಿಕೆಗಳ ಮೂಲಕ ವಾಜಪೇಯಿ ಸರ್ಕಾರವನ್ನು…’. ‘ಅ’ ನಿಷೇಧ ಪೂರ್ವಪ್ರತ್ಯಯ ಬಳಸಿ ತಂದಿರುವ ಪದ. ಸಾಮಾನ್ಯವಾಗಿ ‘ರಹಿತ’ (ವಿವೇಚನಾರಹಿತ) ಪದ ಬಳಕೆಯೊಡನೆ ನಿಷೇಧ ತುರುವುದುಂಟು.

ಅಶ್ವೇತ ಗು ತರಂಗ ಬಿಳಿಯರಲ್ಲದ, ಬಿಳಿಯ ಜನಾಂಗಕ್ಕೆ ಸೇರದ. ‘ಆದರೆ ಬಾಕರ್ ಜಾಗಕ್ಕೆ ಬಂದ ಗೆರಾಲ್ಡ್ ಮಜೋಲಾ ಅವರತ್ತ ಕ್ರಿಕೆಟ್ ವಿಶ್ವವೇ ಈಗ ಬೆರಗಣ್ಣಿನಿಂದ ನೋಡುತ್ತಿದೆ. ಕಾರಣ ಮಜೋಲಾ ಓರ್ವ ಅಶ್ವೇತ ಅಧಿಕಾರಿ: ಸಾಮಾನ್ಯವಾಗಿ ಕಪ್ಪು ಜನಾಂಗಕ್ಕೆ ಸೇರಿದ ಎಂದೇ ಬಳಕೆಯಾಗುತ್ತಿದ್ದ ಪದ ಮೇಲಿನ ಪ್ರಯೋಗದಲ್ಲಿ ನಿಷೇಧಾರ್ಥ ಪೂರ್ವಪ್ರತ್ಯಯದೊಡನೆ ಬಂದಿದೆ.

ಅಶ್ರದ್ಧೆ ನಾ ಪುಸ್ತಕವೊಂದರಲ್ಲಿ ಬಳಕೆ ಆಸಕ್ತಿಯಿಲ್ಲದಿರುವುದು. ‘…. ವಿದ್ಯಾರ್ಥಿಗಳ ಆಶ್ರದ್ಧೆಗಿಂತಲೂ ಅವರಿಗೆ ಇಂಗ್ಲಿಷ್ ಕಲಿಸಿ ಹೊರಬರುವ ನಮ್ಮ ಅಜ್ಞಾನ ಮತ್ತು ಆಶ್ರದ್ಧೆಗಳೇ ಮೂಲಕಾರಣವೆಂಬುದನ್ನು ಮಾತ್ರ ಯಾರೂ ಗಮನಿಸಿದಂತಿಲ್ಲ. ‘ಶ್ರದ್ಧೆ’ ನಾಮವಾಚವನ್ನು ನಿಷೇಧಾರ್ಥಕ ಅ-ಪೂರ್ವಪ್ರತ್ಯಯವನ್ನು ಬಳಸುವುದರೊಂದಿಗೆ ನಿಷೇಧಾರ್ಥಕ ನಾಮವಾಚಕವನ್ನಾಗಿ ಮಾಡಿಕೊಳ್ಳಲಾಗಿದೆ. ಮಾದರಿ ರೂಪ: ಅಸಮಂಜಸ.

ಅಶಾಂತಿಯುತ ಗು ಸುಧಾ ಶಾಂತಿಯಿಂದ ಕೂಡಿಲ್ಲದ, ಶಾಂತಿರಹಿತ, ಕ್ಷೋಭೆಗೊಳಗಾದ, ‘ತಮ್ಮ ಏಳಿಗೆಯನ್ನೇ ಸಾಧಿಸಿಕೊಳ್ಳುವುದರಲ್ಲಿ ಮುಳುಗಿರುವ ಇಂದಿನ ನಾಯಕರು ಬಂಧನಕ್ಕೊಳಗಾದರೆ ಅವರ ಹಿಂಬಾಲಕರು ಮಾತ್ರ ಅಶಾಂತಿಯುತ ಬೊಬ್ಬೆ ಹಾಕುತ್ತಿದ್ದಾರೆ’. ‘ಯುತ’ ಪ್ರತ್ಯಯವನ್ನು ಹೊಂದಿರುವ, ಕೂಡಿದ ಎಂಬರ್ಥ ಬರುವಂತೆ ಬಳಸಲಾಗುತ್ತದೆ. ‘ಶಾಂತಿಯುತ’ದಲ್ಲಿ ಶಾಂತಿಯಿಂದ ಕೂಡಿದ ಎಂದಾದರೆ ‘ಅ’ ಪೂರ್ವಪ್ರತ್ಯಯವನ್ನು ಬಳಸಿ ಇದರ ನಿಷೇಧಾರ್ಥವನ್ನು ಪಡೆಯಲು ಯತ್ನಿಸಲಾಗಿದೆ.

ಅಸಮಾಧಾನಿತ ಗು ಹಾಯ್ ಬೆಂಗಳೂರ್ ಅಸಮಾಧಾನಗೊಂಡಿರುವ. ‘ಈ ಮಧ್ಯೆ ಅಸಾಮಾಧಾನಿತ ಚಂದ್ರಶೇಖರ ಮೂರ್ತಿಯವರನ್ನು ಸಂಪರ್ಕಿಸಿದ ಕಾಂಗ್ರೆಸ್ ಹೈಕಮಾಂಡ್ “ನೀವು ರಾಜ್ಯಸಭೆಗೆ ಬನ್ನಿ. ಪ್ರೇಮಚಂದ್ರಸಾಗರ್ ಲೋಕಸಭೆಗೆ ಆಯ್ಕೆಯಾಗಲಿ” ಎಂದಿದ್ದು ಹೆಚ್ಚು ಕಡಿಮೆ ಕಾಂಗ್ರೆಸ್ ಪಾಳೆಯದಲ್ಲಿದ್ದ ಅಸಮಾಧಾನಗಳನ್ನು ಮೂಲೋತ್ಪಾಟನೆ ಮಾಡಿಬಿಟ್ಟಿದೆ. ಸಮಾಧಾನಿಸು, ಸಮಾಧಾನಿತ, ರೂಪಗಳು ಕನ್ನಡದಲ್ಲಿ ಬಳಕೆಯಲಿಲ್ಲ. ಆದರೂ ಒಮ್ಮೆಲೇ ನಿಷೇಧ ಪೂರ್ವಪ್ರತ್ಯಯ ಸಹಿತ ಪದ ನಿರ್ಮಾಣಗೊಂಡಿದೆ. ಇದೊಂದು ವಿಶೇಷವೆನ್ನಬೇಕು. ಅಲ್ಲದೆ ‘ಸಮಾಧಾನಿತ’ ಪದ ಬಳಕೆಗೆ ಬಂದರೆ ಆಶ್ಚರ್ಯವಿಲ್ಲ.

ಅಸಮೃದ್ಧಿ ನಾ ಕರ್ಮವೀರ ಬೆಳವಣಿಗೆಯಿಲ್ಲದ್ದು; ತುಂಬಿದಂತಿಲ್ಲದಿರುವುದು. ‘ಮಗು ಅತ್ತು ಕಿರಿಕಿರಿ ಉಂಟುಮಾಡಲು ಹಸಿವೆ, ಸೆಕೆ, ಗದ್ದಲ, ನೀರಡಿಕೆ ಹೀಗೆ ಯಾವುದಾದರೂ ಅಸುಖರ ವಿಷಯ ಕಾರಣವಾಗಿರಬಹುದು. ವೃಕ್ಷಗಳ, ಬೆಳಗಳ ಅಸಮೃದ್ಧಿಗೆ ನೀರು ಗೊಬ್ಬರಗಳ ಕೊರತೆ ಕಾರಣವಾಗಿರಬಹುದು.’ ಪದದ ನೇತ್ಯಾತ್ಮಕ ಅರ್ಥ ಪಡೆಯಲು ಬಹು ಸುಲಭಮಾರ್ಗ ‘ಅ’ ಪೂರ್ವಪ್ರತ್ಯಯದ ಬಳಕೆ. ಅಂತೆಯೇ ಇತ್ತೀಚಿನ ದಿನಗಳಲ್ಲಿ ವಿರುದ್ಧ ಅರ್ಥ ಪಡೆಯಲೂ ಈ ಪೂರ್ವಪ್ರತ್ಯಯ ಬಳಕೆಯಾಗುತ್ತಿದೆ. ಉದಾ: ಜಾತ್ಯತೀತ-ಅಜಾತ್ಯತೀತ. ಮೇಲಿನ ಪ್ರಯೋಗ ಇದಕ್ಕೊಂದು ಉದಾಹರಣೆ.

ಅಸಹಾಯಕತೆ ನಾ ಪ್ರಜಾವಾಣಿ ಸಹಾಯವಿಲ್ಲದಿರುವುದು. ‘ವಚನಗಳಲ್ಲಿರುವ ಮೊನಚಾದ ವಿಡಂಬನೆ, ವ್ಯಂಗ್ಯ, ವಿಷಾಧ, ನೋವು, ಅಸಹಾಯಕತೆಗಳೆಲ್ಲ ಕಾರಣಿಕ ಪ್ರಭುವಿನ ಮೂಲಕ ಓದುಗನನ್ನು ತಟ್ಟುತ್ತದೆ. ಇದೊಂದು ವಿಚಿತ್ರ ರಚನೆ. ‘ಸಹಾಯ’ ಪದದ ವಿರುದ್ಧಾರ್ಥಕ ರೂಪ ‘ಅಸಹಾಯ’. ಇದರ ಗುಣವಾಚಕ ರೂಪ ‘ಅಸಹಾಯಕ’ ಇದನ್ನು ನಾಮವಾಚಕವನ್ನಾಗಿಸಿದರೆ ‘ಅಸಹಾಯಕತೆ’ ಎಂದಾಗಬೇಕು. ಮಾದರಿ ರೂಪ: ನಿರರ್ಥಕತೆ, ಸಂಕೀರ್ಣತೆ.

ಅಸಾಂದರ್ಭಿಕ ನಾ ಪ್ರಸ್ತುತವಲ್ಲದುದು; ಈ ಸಂದರ್ಭಕ್ಕೆ ಬೇಡದುದು. ‘ಪೃಥ್ವಿ ಕ್ಷಿಪಣಿಯನ್ನು ಎಲ್ಲಿ ಸಂಗ್ರಹಿಸಿ ಇಡಬೇಕು ಅಥವಾ ಯಾವಾಗ ಉಪಯೋಗಿಸುತ್ತೇವೆ ಎಂಬ ಪ್ರಶ್ನೆ ಈಗ ಅಸಾಂದರ್ಭಿಕ ಎಂದು ಅವರು ನುಡಿದರು’. ಸಂದರ್ಭ ರೂಪ ನಾಮವಾಚಕ. ಸಾಂದರ್ಭಿಕ, ಅಸಾಂದರ್ಭಿಕಗಳು ಮೂಲತಃ ಗುಣವಾಚಕಗಳು. ಆದರೆ ಸಾಂದರ್ಭಿಕ ಪ್ರಯೋಗ ನಾಮವಾಚಕವಾಗಿ ಪ್ರಯೋಗವಾಗಿದೆ.

ಅಸಾಂಪ್ರದಾಯಕ ಗು ಕನ್ನಡಪ್ರಭ ಹಿಂದಿನಿಂದು ಬೆಳೆದು ಬಂದಿರುವುದಕ್ಕೆ ಭಿನ್ನವಾದ. ‘ಸೋಲಾರ್ ವಾಟರ್ ಹೀಟರ್‌ಗಳನ್ನು ತಯಾರಿಸುವುದರಲ್ಲಿ ತೊಡಗಿರುವ ಕೈಗಾರಿಕೆಗಳಿಗೆ ಸೂಕ್ತ ಮಾನಕಗಳನ್ನು ಸ್ಥಾಪಿಸುವುದಕ್ಕಾಗಿ ಅಸಾಂಪ್ರದಾಯಕ ಶಕ್ತಿಮೂಲಗಳ ಮಂತ್ರಾಲಯದಿಂದ ತೀವ್ರತರ ಪ್ರಯತ್ನಗಳು ನಡೆದವು’. ‘ಅ’ ನಿಷೇಧ ಪೂರ್ವ ಪ್ರತ್ಯಯ ಬಳಸಿ ಸೃಷ್ಟಿಸಿರುವ ಪದ. ‘ನಾನ್-ಫಾರ್ಮಲ್’ ಎಂಬ ಇಂಗ್ಲಿಷ್ ಪದದ ಸಂವಾದಿ ಪದ. ಆದರೆ ‘ನಾನ್-ಫಾರ್ಮಲ್’ ಎಂಬ ಪದಕ್ಕೆ ಶಿಕ್ಷಣಕ್ಷೇತ್ರದಲ್ಲಿ ‘ಅನೌಪಚಾರಿಕ’ ಎಂಬರ್ಥವಿದೆ.

ಅಸಾಮಯಿಕ ಗು ಸುಧಾ ಅಕಾಲ; ಸಮಯವಲ್ಲದ ಸಮಯ. ‘ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿ ಅಸಾಮಯಿಕವಾಗಿ ಗತಿಸಿದಾಗ ಆತನನ್ನೇ ನಂಬಿರುವ ಕುಟುಂಬದ ಸದಸ್ಯರಲ್ಲೊಬ್ಬರಿಗೆ ಕೆಲಸ ನೀಡುವ ಬಗ್ಗೆ ನಡೆಯುವ ಅನೇಕ ಅನಿಯಮತೆಗಳು ದುರಾಚಾರಗಳು ಸರ್ಕಾರದ ಗಮನಕ್ಕೆ ಬಂದು….’ ‘ಅ’ ನಿಷೇಧ ಪೂರ್ವಪ್ರತ್ಯಯ ಹತ್ತಿಸಿ ತಂದಿರುವ ಪದ. ಇಂಗ್ಲಿಶಿನ ‘ಅನ್‌ಟೈಮ್ಲಿ’ ಎಂಬುದರ ಸಂವಾದಿ ಪದ.

ಅಸಾಹಿತಿ ನಾ ಸುಧಾ ಸಾಹಿತ್ಯ ಕೃಷಿ ಮಾದವರು. ‘ಜಾತಿ ರಾಜಕೀಯ, ಸ್ವಾರ್ಥಲಾಲಸೆ, ಸಾಹಿತಿ-ಅಸಾಹಿತಿ ಎಂದುಒಡೆದು ನೋಡುವ ರಾಜಕಾರಣ ಈ ಸರಸ್ವತಿ ದೇಗುಲವನ್ನು ಮಲಿನಗೊಳಿಸಬಾರದು’. ‘ಅ’ ಪೂರ್ವಪ್ರತ್ಯಯ ಹತ್ತಿಸಿ ನಿಷೇಧ ಪದ ರೂಪಿಸಿರುವ ಒಂದು ಬಗೆ.

ಅಸಾಹಿತ್ಯಿಕ ಗು ಸುಧಾ ಸಾಹಿತ್ಯಕ್ಕೆ ಸಂಬಂಧಪಡದ. ‘ಹಲವಾರು ಉನ್ನತ ಸಾಧನೆಗಳ ಕೀರ್ತಿಗೆ ಭಾಜನವಾಗಿರುವ ಕ.ಸಾ.ಪ. ಒಂದು ರಾಜಕೀಯ ಅಧಿಕಾರ ಕೇಂದ್ರವಾಗಬಾರದು, ಅಸಾಹಿತ್ಯಿಕ ಚಟುವಟಿಕೆಗಳ ಮನೆಯಾಗಬಾರದು’. ‘ಅ’ ನಿಷೇಧ ಪೂರ್ವಪ್ರತ್ಯಯ ಬಳಕೆಗೆ ಮತ್ತೊಂದು ಮಾದರಿ.

ಅಸ್ವಾಗತಾರ್ಹ ಗು ತರಂಗ ಸ್ವಾಗತಿಸಲಾಗದ; ಇಷ್ಟವಿಲ್ಲದ. ‘ಯಾದವರ ಪರಂಪರೆಯಿಂದ ಇವೆರಡು ಪ್ರಮುಖ ಪಕ್ಷಗಳಿಗೆ ಆಶ್ಚರ್ಯವಾಗಿದ್ದರೆ, ಸತ್ಯವನ್ನು ಹೇಳಬೇಕಾಗುತ್ತದೆ. ಅದು ಸಂಪೂರ್ಣವಾಗಿ ಅಸ್ವಾಗತಾರ್ಹ ಆಶ್ಚರ್ಯವಾಗಿರಲಿಲ್ಲ’. ‘ಅ’ ನಿಷೇಧ ಪೂರ್ವಪ್ರತ್ಯಯ ಬಳಕೆಗೆ ಒಂದು ಉದಾಹರಣೆ. ಕೇವಲ ವಿರೋಧ ಪದಕ್ಕಾಗಿ ಮಾತ್ರ ಇದರ ಸೃಷ್ಟಿಯಾಗಿದೆ. ಏಕೆಂದರೆ, ನಿಷೇಧದಲ್ಲಿ ‘ಅರ್ಹ’ ಪದ ಬಳಕೆ ಸಮಂಜಸವಾಗಿ ಕಾಣದು.

ಅಸ್ವಾರಸ್ಯ ನಾ ಕರ್ಮವೀರ ಸ್ವಾರಸ್ಯವಿಲ್ಲದ್ದು, ಸವಿಯಿಲ್ಲದ್ದು. ‘…..ಅವಳಿಗೆ ನೆರವಾಗಲೆಂದು ನೀರು ಜಗ್ಗಲು ಹಿಡಿಯುವಾಗ ಅವಳ ಹೆಳಲಿನ ಸಮೀಪದ ವಾಸನೆ ಎಷ್ಟೇ ಅಸ್ವಾರಸ್ಯವೆನಿಸಿದರೂ ಏನೋ ಅವನಿಗೊಂದು ಜುಂ ಹಿಡಿಸುವ ರೋಮಾಂಚ ಅದರಲ್ಲಡಗಿರುತ್ತಿತ್ತು.’ ವಿವರಕ್ಕೆ ನೋಡಿ: ಅಸಮೃದ್ಧಿ.

ಅಸುರಕ್ಷಿತ ಗು ಸಂಯುಕ್ತ ಕರ್ನಾಟಕ ಕ್ಷೇಮವಲ್ಲದ ರಕ್ಷಣೆಯಿಲ್ಲದ. ‘ದೆಹಲಿ ಲಖನೌದಂತೆ ಬೆಂಗಳೂರು ಸಹ ನಾಗರೀಕರ ಮಟ್ಟಿಗೆ ಅಸುರಕ್ಷಿತ ನಗರಗಳ ಪಾಲಿಗೆ ಸೇರಿದೆ’. ‘ಅ’ ನಿಷೇಧ ಪೂರ್ವಪ್ರತ್ಯಯ ಹಚ್ಚಿದ ನಿಷೇಧ ರೂಪದ ಪದ. ‘ರಕಷಿತ’ ಪದಕ್ಕೆ ಹೆಚ್ಚು ಒತ್ತು ನೀಡಲು ‘ಸು’ ಪೂವð ಪ್ರತ್ಯಯ ಸೇರಿಸಲಾಗಿದೆ. ಅದಕ್ಕೆ ನಿಷೇಧ ತರುವುದರ ಮೂಲಕ ಸುರಕ್ಷಿತವಲ್ಲ ಎಂಬುದಕ್ಕೆ ಒತ್ತು ನೀಡಲಾಗಿದೆ. ಅರಕ್ಷಿತ ಎಂಬ ಪದ ಬಳಕೆಯಲ್ಲಿದ್ದರೂ ಅದು ಮೇಲಿನ ಪದ ನೀಡುವ ಅರ್ಥದಷ್ಟು ಪರಿಣಾಮಕಾರಿಯಾಗಲಾರದು ಎನಿಸುತ್ತದೆ.

ಅಸ್ತುಮುದ್ರೆ ನಾ ಉದಯವಾಣಿ ಒಪ್ಪಿಗೆ ನೀಡುವುದು; ಸಮ್ಮತಿ. ‘ಕಾವೇರಿ ಜಲ ಹಂಚಿಕೆ ಒಪ್ಪಂದಕ್ಕೆ ಸುಪ್ರೀಂಕೋರ್ಟಿನ ಅಸ್ತು ಮುದ್ರೆ’. ಸಮ್ಮತಿ ಎಂಬ ಅರ್ಥದಲ್ಲಿ ‘ಮುದ್ರೆ’ ಪದ ಬಳಕೆಯಾಗಿದೆ. ಸಹಿಯೊಡನೆ ಬಳಸುವ ‘ಸೀಲ್‌’ಗೆ ಇದು ಸಂವಾದಿ.

ಅಸೂಯಾಸ್ಪದ ಗು ಪುಸ್ತಕವೊಂದರಲ್ಲಿ ಬಳಕೆ ಹೊಟ್ಟೆಕಿಚ್ಚಿಗೆ, ಅಸೂಯತೆಗೆ ಕಾರಣವಾಗುವಂತಹ. ‘ಸಾಲದ್ದಕ್ಕೆ ಅಸಾಧಾರಣವಾದ, ಅಸೂಯಾಸ್ಪದವಾದ ವಾಗ್ಮಿತೆ ಅವರದು’. ಅನುಮಾನಾಸ್ಪದ, ಸಂದೇಹಾಸ್ಪದ ಮಾದರಿಯಲ್ಲಿ ಬಂದಿರುವ ಪದ. ‘ಅಸ್ಪದ’ ಎಂಬ ರೂಪವನ್ನು ‘ಅವಕಾಶವಿರುವ’ ಎನ್ನುವ ಅರ್ಥದಲ್ಲಿ ಹೆಚ್ಚು ಬಳಸುತ್ತೇವೆ; ‘ಕಾರಣವಾಗುವ’ ಎಂಬ ಅರ್ಥದಲ್ಲಿ ಅಲ್ಲ.

ಅಸೈದ್ಧಾಂತಿಕ ಗು ಉದಯವಾಣಿ ಸಿದ್ಧಾಂತಕ್ಕೆ ವಿರೋಧವಾದ. ‘ಅಸೈದ್ಧಾಂತಿಕ ಸ್ವಾರ್ಥ ನಿಲುವು’. ‘ಸೈದ್ಧಾಂತಿಕ’ ಪದದ ವಿರುದ್ಧಾರ್ಥ ಪಡೆಯಲು ‘ಅ’ ನಿಷೇಧ ಪ್ರತ್ಯಯವನ್ನು ಬಳಸಲಾಗಿದೆ.

ಅಹಿಂಸಾತ್ಮಕರು ನಾ ತರಂಗ ಹಿಂಸೆ ಮಾಡದಿರುವವರು, ಹಿಂಸೆಯಲ್ಲಿ ನಂಬಿಕೆಯಿಲ್ಲದಿರುವವರು. ‘ನಾವು ಭಾರತೀಯರು ಅಹಿಂಸಾತ್ಮಕರು, ಎಂದೂ ಪರರನ್ನು ಗೆಲ್ಲುವ, ಹೊಡೆಯುವ ಚಿಂತನೆಯನ್ನು ಮಾಡದವರು’. ಗುಣವಾಚಕಕ್ಕೆ ಬಹುವಚನ ಪ್ರತ್ಯಯ ಹತ್ತಿಸಿ ನಾಮಪದ ರೂಪಿಸಲಾಗಿದೆ. ಇಂದು ಈ ಬಗೆಯಲ್ಲಿ ಪದ ರಚನೆ ನಡೆಯುತ್ತಿದೆ. ಉದಾ: ಶ್ರೇಯಾಂಕಿತ-ಶ್ರೇಯಾಂಕಿತರು.