ಆಂದೋಲನಗಾರ ನಾ ಉದಯವಾಣಿ ಕ್ರಾಂತಿ ನಡೆಸುವವ, ಚಳುವಳಿ ನಡೆಸುವವ. ‘ಇದನ್ನು ಹಿಂದಿನ ಆಂದೋಲನಗಾರರು ಮಾತ್ರವಲ್ಲದೆ ಭಾರತೀಯ ಸಮುದಾಯದ ಸಾಮಾನ್ಯ ಸದಸ್ಯರೂ ತೀವ್ರವಾಗಿ ಪ್ರತಿಭಟಿಸಿದ್ದಾರೆ’. ಯಾವುದಾದರೂ ಒಂದನ್ನು ಮಾಡಬಲ್ಲ ಎಂಬುದನ್ನು ಸೂಚಿಸಲು ‘ಗಾರ’ ನಾಮಸಾಧಕ ಪ್ರತ್ಯಯ ಬಳಸಲಾಗುತ್ತದೆ. ಮೇಲಿನ ಪ್ರಯೋಗದ ಸಮಾನಾರ್ಥಕವಾಗಿ ‘ಚಳುವಳಿಕಾರ’ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಆಕಸ್ಮಿಕತೆ ನಾ ಕರ್ಮವೀರ ಒಮ್ಮೆಲೇ ಜರುಗುವಿಕೆ/ಗೊತ್ತಿಲ್ಲದಂತೆ ನಡೆಯುವ ಘಟನೆ. ‘ಲೈಫ್ ಈಸ್ ಎನ್ ಆಕ್ಸಿಡೆಂಟ್. ಲವ್ ಈಸ್ ಎನ್ ಆಕ್ಸಿಡೆಂಟ್’ ಜೀವನವೊಂದು ಆಕಸ್ಮಿಕತೆ, ಪ್ರೇಮವೊಂದು ಆಕಸ್ಮಿಕತೆ’. ನಾಮಪದ ರೂಪಿಸಲು ‘ತೆ’ ಪ್ರತ್ಯಯದ ಬಳಕೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ‘ಆಕಸ್ಮಿಕ’ ಎಂಬುದು ನಾಮಪದವೂ ಹೌದು. ಆದ್ದರಿಂದ ‘ತೆ’ ಅವಶ್ಯವಿಲ್ಲ.

ಆಕರ್ಷಣದಾಯಕ ಗು ಪುಸ್ತಕವೊಂದರಲ್ಲಿ ಬಳಕೆ ಆಕರ್ಷಣೆಯನ್ನು ಉಂಟುಮಾಡುವ. ‘ಆಕರ್ಷಣದಾಯಕ ಕಥೆ, ವಿಷಯಗಳನ್ನು ನಾವು ಎಂದಿಗೆ ಆರಿಸುವೆವು?’ ಮೇಲಿನ ಪ್ರಯೋಗದಲ್ಲಿ ಆಕರ್ಷಕ ಎಂಬ ರೂಪವೇ ಸರಿಯಾದ ಅರ್ಥವನ್ನು ಕೊಡುತ್ತದೆ. ‘ಆಕರ್ಷಣದಾಯಕ’ ಅನಗತ್ಯ ಹಾಗೂ ವಿಚಿತ್ರ ಪ್ರಯೋಗ. ಮಾದರಿ ರೂಪ: ಪ್ರೋತ್ಸಾಹದಾಯಕ, ಹರ್ಷದಾಯಕ.

ಆಕ್ರಮಣಕೋರ ನಾ ಕರ್ಮವೀರ ದಾಳಿ ಮಾಡುವವರು, ಆಕ್ರಮಿಸಿಕೊಳ್ಳುವವರು. ‘ಇಂದು ಮತ-ಧರ್ಮಗಳ ಚೌಕಟ್ಟಿನಲ್ಲೇ ಹೆಚ್ಚುತ್ತಿರುವ ಅಸಹನೆ, ಅಸಹಿಷ್ಣುತೆ ಮತ್ತು ಈ ಕಾರಣದಿಂದಲೇ ತಲೆದೋರುವ ಅಪನಂಬಿಕೆ, ಮೈಮನಸ್ಸು, ದ್ವೇಷ ಮನುಷ್ಯರನ್ನು ಆಕ್ರಮಣಕೋರರನ್ನಾಗಿ ಪರಿವರ್ತಿಸುತ್ತಿವೆ.’ ‘ಕೋರ’ ಪ್ರತ್ಯಯ ಬಳಸಿ ವ್ಯಕ್ತಿ ವಾಚಕ ಪಡೆಯುವ ರೂಢಿಯಿದೆ. ಇದು ಸಾಮಾನ್ಯವಾಗಿ ನೇತ್ಯಾತ್ಮಕ ಅರ್ಥ ನೀಡುವಂತಹ ಸಂದರ್ಭದಲ್ಲಿ ಬಳಕೆಯಾಗುವುದು ಕಂಡುಬರುತ್ತದೆ. ಉದಾ: ಲಂಚಕೋರ, ಚಾಡಿಕೋರ ಇತ್ಯಾದಿ. ಈ ಮಾದರಿಯಲ್ಲಿ ಬಂದಿರುವ ಪದ. ಆದರೆ ಇದುವರೆಗೆ ‘ಆಕ್ರಮಣಕಾರ’ ಎಂದು ಬಳಸಲಾಗುತ್ತಿತ್ತು.

ಆಕ್ರೋಶಿಸು ಕ್ರಿ ಕನ್ನಡಪ್ರಭ ಕೋಪದಿಂದ ಗಟ್ಟಿಯಾಗಿ ಕಿರುಚಾಡು. ‘….ನೀವು ದಲಿತರ ಮೇಲೆ ದುರುದ್ದೇಶದಿಂದ ಮೊಕದ್ದಮೆ ಹೂಡುತ್ತಿದ್ದೀರಿ ಎಂದು ಆಕ್ರೋಶಿಸಿದ್ದರಿಂದ ಪರಸ್ಪರ…’. ‘ಇಸು ಪ್ರತ್ಯಯದೊಡನೆ ಬಂದಿರುವ ಪದ. ಆದರೆ ಆಕ್ರೋಶ ಎನ್ನುವುದಕ್ಕೆ ‘ಸಿಟ್ಟು’ ಎಂಬರ್ಥವೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಆಟೋಪಯೋಗಿ ಗು ಮಾತಿನಲ್ಲಿ ಬಳಕೆ ಕ್ರೀಡೆಯಲ್ಲಿ ಉಪಯೋಗಿಸುವಂತಹ. ‘ಅವರು ಆಟೋಪಯೋಗಿ ವಸ್ತುಗಳ ತಯಾರಕರು’. ಪೀಠೋಪರಕರಣ, ಪಾಠೋಪಕರಣ ಮಾದರಿ ಮೇಲಿನ ಪದ ಸೃಷ್ಟಿಗೆ ಕಾರಣವಿರಬೇಕು. ಮಾದರಿ: ಜನೋಪಯೋಗ.

ಆಡಳಿತಗಾರಿಕೆ ನಾ ಸುಧಾ ಆಡಳಿತ ನಡೆಸುವ ಕೌಶಲ್ಯ, ಆಡಳಿತ ನಡೆಸುವುದು. ‘ಮುಖಾಮುಖಿ ಧೋರಣೆ ಆಡಳಿತ ಸಲ್ಲದು. ಆಡಳಿತಗಾರಿಕೆಯ ಮನೋಧರ್ಮದಿಂದ ಅವರು ದೂರವಿರಬೇಕು’. ಮೇಲಿನ ವಾಕ್ಯದಲ್ಲಿ ಆಡಳಿತ ನಡೆಸುವ ಕೌಶಲ್ಯ  ತೋರಿಸುವುದು ಎನ್ನುವುದಕ್ಕಿಂತಲೂ ಆಡಳಿತದ ದರ್ಪತೋರಿಸುವುದು ಎಂಬರ್ಥವೇ ಹೆಚ್ಚು ಸ್ಫುರಿಸುತ್ತದೆ. ಮಾದರಿ ತೋಟಗಾರಿಕೆ, ಹೈನುಗಾರಿಕೆ ಇತ್ಯಾದಿ.

ಆಡಳಿತಯಂತ್ರಾಂಗ ನಾ ಪ್ರಜಾವಾಣಿ ಆಡಳಿತ ನಡೆಸುವಲ್ಲಿ ಒಳಗೊಳ್ಳುವ ಸಿಬ್ಬಂದಿವರ್ಗ. ‘ಎಲ್ಲಕ್ಕಿಂತ ಮುಖ್ಯವಾಗಿ ಈ ಮೂರು ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಚುನಾವಣೆ ಕಾಲದಲ್ಲಿ ಆಡಳಿತ ಯಂತ್ರಾಂಗವನ್ನು ದುರುಪಯೋಗ ಮಾಡಿಕೊಳ್ಳಬಹುದು ಎಂಬ ಶಂಕೆ ಇದ್ದಂತಿವೆ’. ಇಂಗ್ಲಿಶಿನ ‘ಆಡ್ಮಿನಿಸ್ಟ್ರೇಟಿವ್ ಮೆಶಿನರಿ’ ಎಂಬುದಕ್ಕೆ ಕನ್ನಡದಲ್ಲಿ ರೂಪಿಸಿರುವ ಪದಗಳು. ಇದುವರೆವಿಗೆ ‘ಆಡಳಿತ ಯಂತ್ರ’ ಎಂಬುದಾಗಿ ಬಳಕೆಯಲ್ಲಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಪದಗಳಲ್ಲಿನ ‘ಅಂಗ’ದ ಮಾದರಿಯಲ್ಲಿ ಯಂತ್ರಾಂಗ ಬಂದಿದೆ. ಮೇಲಿನ ಮೂರೂ ಆಡಳಿತದ ಅಂಗಗಳು. ಆದರೆ ಯಂತ್ರಾಂಗದ ಎಂದರೆ ಯಂತ್ರದ ಒಂದು ಭಾಗ ಎಂಬಂತೆ ಅರ್ಥ ಸ್ಪುರಿಸುವುದಿಲ್ಲವೇ?

ಆತ್ಮಚರ ನಾ ತರಂಗ ತುಂಬಾ ಆತ್ಮೀಯನಾದವ, ಅಂತರಂಗ ಸಂಗಾತಿ. ‘ದಾಂಪತ್ಯದಲ್ಲಿ ಅತೃಪ್ತಿ ಇಲ್ಲ. ಆದರೂ ಆತ್ಮಚರನೊಬ್ಬ ಬೇಕಾಗಿದ್ದಾನೆ’. ‘ಸಹಚರ’ ಪದದ ಮಾದರಿಯಲ್ಲಿ ಬಂದಿರುವ ಪದ. ತೀರಾ ವೈಯಕ್ತಿಕವಾದದ್ದನ್ನೂ ಹೇಳಿಕೊಳ್ಳಬಲ್ಲ. ಕೇಳಿ ಸಾಂತ್ವನ ನೀಡಬಲ್ಲಂತಹ ವ್ಯಕ್ತಿ ಎಂಬಂಥದಲ್ಲಿ ಬಳಕೆಯಾಗಿದೆ ಎನಿಸುತ್ತದೆ.

ಆತ್ಮಹಂತಕ ನಾ ಉದಯವಾಣಿ ತನ್ನನ್ನು ತಾನೇ ಕೊಂದುಕೊಳ್ಳುವನ. ‘ಇಂದಿನ ಆತ್ಮಹಂತಕ ಬಾಂಬರ್‌ನ ದೇಹ ಚೂರುಚೂರಾಗಿದ್ದು ಆತ ವಾಯುಸೇನಾ ಸಿಬ್ಬಂದಿಗಳನ್ನು…. ವಿಫಲಯತ್ನ ಮಾಡಿದನೆಂದು ಪೊಲೀಸರು ತಿಳಿಸಿದರು’. ಇಂಗ್ಲಿಶಿನ ‘ಸೂಯಿಸೈಡರ್’ ಎಂಬುದರ ಸಂವಾದಿಯಾಗಿ ಬಂದಿದೆ. ಆದರೆ ಇನ್ನಿತರ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯನ್ನು ಹೀಗೆ ಕರೆಯಲಾಗಿಲ್ಲ ಎಂಬುದನ್ನು ಗಮನಿಸಬಹುದು. ಮುಂದೆ ಇದೇ ಪದಕ್ಕೆ ಚಲಾವಣೆ ಸಿಗಬಹುದೇ?

ಆಪ್ತಪರಿಚಿತ ಗು ಸುಧಾ ಹತ್ತಿರದಿಂದ ಬಲ್ಲ; ತೀರಾ ಸನಿಹವಾದ; ಗುರುತುಳ್ಳ. ‘ಶಿವರಾಮ ಕಾರಂತರ ಸರಸೋತಿ-ಪಾರೋತಿ ಮತ್ತೆಷ್ಟೋ ಅಜ್ಜಿಯರ ಪಾತ್ರಗಳು ನಮಗೆ ಆಪ್ತಪರಿಚಿತ’. ‘ಬಹಳ’, ‘ತುಂಬಾ’, ‘ತೀರಾ’ ಇತ್ಯಾದಿ ಗುಣವಾಚಕಗಳೊಡನೆ ಆಪ್ತ, ಪರಿಚಿತ ಪದಗಳನ್ನು ಬಳಸಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತವೆ. ಅಂತೆಯೇ ಬಹುಶಃ ಮೇಲಿನ ಪದಗಳನ್ನು ಬಳಸಿರಬಹುದೇ? ಇಲ್ಲಿ ಎರಡು ಗುಣಗಳು ಬೆಸೆದುಕೊಂಡಿವೆ. ಒಂದು: ಆಪ್ತ ಎಂದರೆ ತೀರಾ ಒಳಹೊಕ್ಕು ನೋಡುವ ಅವಕಾಶವಿರುವ; ಎರಡು: ಪರಿಚಿತ: ಕೇವಲ ಪರಿಚಯಕ್ಕೆ ಮಾತ್ರ ಸೀಮಿತ. ಮೇಲಿನ ಉಲ್ಲೇಖದಲ್ಲಿ ಎರಡೂ ಗುಣಗಳ ಮಿಶ್ರಣ ವಿರಬಹುದೇ?

ಆಫ್ಘಾನಿಸ್ತಾನೀಕರಣ ನಾ ಪ್ರಜಾವಾಣಿ ಆಫ್ಘನ್‌ ಮಾದರಿಯಂತೆ ಬದಲಾಯಿಸುವುದು. ‘ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ‘ಆಫ್‌ಘಾನಿಸ್ತಾನೀಕರಣ’ದ ಬಗ್ಗೆ ಅಮೆರಿಕ ಇಂದು ತೀವ್ರ ಕಳವಳ ವ್ಯಕ್ತಪಡಿಸಿದೆ’. ‘ಅಮೇರಿಕೀರಣ’, ‘ಭಾರತೀಕರಣ’ ಮಾದರಿಯ ಪದಗಳನ್ನು ಅನುಸರಿಸಿ ಸೃಷ್ಟಿಸಿದ ಪದ. ಇಲ್ಲೆಲ್ಲಾ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಕಡೆ ಒತ್ತು ನೀಡಲಾಗಿದೆ. ಮೇಲಿನ ಪ್ರಯೋಗದಲ್ಲಿ ‘ಆಫ್ಘನ್’ ಎಂಬುದು ಸಂಸ್ಕೃತಿ. ‘ಆಫ್ಘನೀಕರಣ’ದ ಬದಲಾಗಿ ದೇಶದ ಹೆಸರಿನೊಂದಿಗೆ ಈಕರಣ ಪ್ರಯೋಗವಾಗಿದೆ.

ಆಮದನಿ ನಾ ಹಾಯ್‌ ಬೆಂಗಳೂರ್ ಆದಾಯ. ‘ಇಡೀ ಕುಟುಂಬಕ್ಕೆ ಹೇರಳವಾದ ಆಸ್ತಿಯಿದೆ, ಆಮದನಿಯಿದೆ’. ಆಮದು ಪದಕ್ಕೆ ಆದಾಯ ಎಂಬ ಅರ್ಥವೂ ಇದೆ. ಆದರೆ ಇತ್ತೀಚೆಗೆ ಆಮದು ಪದವನ್ನು ವಾಣಿಜ್ಯ ವ್ಯವಹಾರಗಳ ವ್ಯಾಪ್ತಿಯಲ್ಲೇ ಬಳಸುತ್ತಿರುವುದರಿಂದ ಆಮದನಿ ಎಂಬ ಹೊಸ ಪದದಸೃಷ್ಟಿಗೆ ಕಾರಣವಾಗಿರಬಹುದೇ?

ಆಮದಿಸು ಕ್ರಿ ತರಂಗ ಬೇರೆ ದೇಶದಿಂದ ತರಿಸಿಕೊಳ್ಳುವುದು. ‘ಲೇಹಕ್ಕೆ ಬೇಕಾಗಿರುವ ಕಚ್ಚಾವಸ್ತುಗಳೇ ದುಬಾರಿಯಾಗಿದ್ದು ಅವುಗಳನ್ನು ದೂರದ ಊರುಗಳಿಂದ ಆಮದಿಸಬೇಕಾಗಿರುವುದರಿಂದ ಕನಿಷ್ಠಲಾಭದಲ್ಲಿ ಮಾರಾಟ ಮಾಡಿಯೂ…’. ‘ಇಸು’ ಪ್ರತ್ಯಯ ಬಳಸಿ ಕ್ರಿಯಾಪದ ಮಾಡಿದ ಮಾದರಿ. ಎಲ್ಲ ಸಂದರ್ಭಗಳಲ್ಲೂ ‘ಇಸು’ ಪ್ರಯೋಗ ಸೂಕ್ತವಾಗಿ ಕಾಣದು.

ಆಯಾತಿ ಗು ಸಂಯುಕ್ತ ಕರ್ನಾಟಕ ಹೊರಗಿನಿಂದ ಬರುವ, ತರಿಸಿಕೊಳುವ. ‘ಆಯಾತಿ ಎಣ್ಣೆಗಳನ್ನು ಆಯಾತಕಾರರು ಡಿಲವರಿ ಮಾಡುತ್ತಿದ್ದು ಸರ್ಕಾರದವರು ಆಯಾತಿಸುಂಕ ಹೆಚ್ಚಿಸಿದ ಹಣವನ್ನು ಆಯಾತಕಾರರು ಖರೀದಿದಾರರಿಂದ ವಸೂಲು ಮಾಡುವ ಸನ್ನಾಹ ಮಾಡಿದ್ದಾರೆ.’ ಆಯಾತ (ಆಂದು) ಪದಕ್ಕೆ ಇ ಪ್ರತ್ಯಯ ಸೇರಿ ಆಯಾತಿ ಎಂಬ ಗುಣವಾಚಕ ರೂಪ ಬಂದಿದೆ.

ಆರಾಧನೀಯ ಗು ಮಯೂರ ಆರಾಧನೆಗೆ ಅರ್ಹನಾದ, ಪೂಜಿಸಲರ್ಹವಾದ. ‘….ಅಂದರೆ ಕಂಪೆನಿಯ ಶ್ರೇಯಸ್ ಕೋರ್ತೀವಿ… ಎನ್ನುತ್ತಿದ್ದರು. ಆತನ ಸ್ವಾಮಿಭಕ್ತಿ ಶಾರದಾಗೆ ಆರಾಧನೀಯವಾಯಿತು’. ‘ಈಯ’ ಪ್ರತ್ಯಯ ಬಳಸಿ ‘ಅರ್ಹವಾದ’ ಎಂಬ ಅರ್ಥವನ್ನು ಪಡೆಯಲಾಗುತ್ತದೆ. ಉದಾ: ಮನನೀಯ; ಗಮನೀಯ. ಈ ಮಾದರಿಯಲ್ಲಿ ಬಂದಿರುವ ಪದ.

ಆಲೋಚಕ ನಾ ಸಂಯುಕ್ತ ಕರ್ನಾಟಕ ಪರಾಮರ್ಶೆ ಮಾಡುವವರು. ‘ಈ ಕ್ರಮದಿಂದ ಕ್ಲಿಂಟನ್‌ರವರ ಕೆಲವು ಆಲೋಚಕರಿಗೂ ಆಶ್ಚರ್ಯವಾಗದಿದ್ದುದು ಅನಾಹುತದ ಸೂಚನೆ ಎನ್ನಬಹುದು’. ಪದಗಳ ನಿರ್ಮಾಣ ಹಲವು ಬಗೆಯಲ್ಲಿ ಆಗಬಹುದು. ಮೇಲಿನ ಉದಾಹರಣೆಯಲ್ಲಿ ವಸ್ತುವಾಚಕದಿಂದ ವ್ಯಕ್ತಿವಾಚಕ ಪದ ನಿರ್ಮಾಣಗೊಂಡಿರುವಂತಿದೆ. ಮಾದರಿ: ಚಿಂತನೆ-ಚಿಂತಕ; ಬೋಧನೆ-ಬೋಧಕ. ಇಲ್ಲಿ ಆಲೋಚಕ ಪದ ವಿಮರ್ಶಕ, ಟೀಕಾಕಾರ, ಕ್ರಿಟಿಕ್ ಎಂಬ ಅರ್ಥವನ್ನು ಹೊಂದಿದೆ. ಹಿಂದಿನ ಪ್ರಭಾವದಿಂದ ಈ ರೂಪ ಬಳಕೆಯಾದಂತಿದೆ.

ಆವಾಸಿಕ ಗು ಪುಸ್ತಕವೊಂದರಲ್ಲಿ ಬಳಕೆ ವಸತಿಯ ಸೌಲಭ್ಯವಿರುವ. ‘ಆವಾಸಿಕ ಶಿಕ್ಷಣ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯರೊಬ್ಬರು ತಮ್ಮ ಅನುಭವವನ್ನು ಹೀಗೆಂದು ಹೇಳಿದರು’. ಇಂಗ್ಲಿಶ್‌ನ ರೆಸಿಡೆನ್ಶಿಯಲ್ ಪದದ ಸಂವಾದಿ ಪದ. ಈಗಾಗಲೇ ವಸತಿ ಶಾಲೆ ಎಂಬುದಾಗಿಯೂ ಬಳಕೆಯಲ್ಲುಂಟು.

ಆವೀಕೃತ ಗು ಕರ್ಮವೀರ ದ್ರವರೂಪದಲ್ಲಿರುವ; ನೀರಿನಂತಿರು. ‘ಸೊಳ್ಳೆನಾಶಕ ಕೊಯ್ಲ್. ಮ್ಯಾಟ್ ಮತ್ತು ಆವೀಕೃತ ದ್ರವದ ಉಪಯೋಗ ಭರದಿಂದಲೇ ಸಾಗಿದೆ’. ಇಂಗ್ಲಿಶಿನ Liquidated ಪದದ ತಪ್ಪಾದ ಕನ್ನಡಾನುವಾದ. Liquid ಎಂದರೆ ದ್ರವ, ನೀರು. Liquidated ಎಂದರೆ ನೀರಿನಂತಿರುವ, ದ್ರವರೂಪದಲ್ಲಿರುವ. ಆದರೆ ಮೇಲಿನ ರಚನೆ ಆವೀಕೃತ ಎಂದರೆ ಆವಿಯಾಗಿಸಲ್ಪಟ್ಟ ಎಂದರ್ಥ. ಆವಿಶೀಲ ಎಂಬ ಪದವೂ ಬಳಕೆಯಾಗಿದೆ.

ಆವಿಷ್ಕಾರಕ ನಾ ವಿಜ್ಞಾನ ಸಂಗಾತಿ ‘ಹೊಸದನ್ನು ಕಂಡುಹಿಡಿಯುವವ. ಅಮೆರಿಕಾದ ಫಿಲಿಪ್ ಮೌರಿಸ್ ಎಂಬ ಹೆಸರಿನ ಒಬ್ಬ ಆವಿಷ್ಕಾರಕ್ಕೆ ಒಂದು ಉಪಕರಣವನ್ನು ತಯಾರಿಸಿದ್ದಾನೆ’. ಸಂಶೋಧನೆಯಿಂದ ಸಂಶೋಧಕ ಹುಟ್ಟಿಕೊಂಡಿರುವಂತೆ ಆವಿಷ್ಕಾರದಿಂದ ಆವಿಷ್ಕಾರಕ  ಹುಟ್ಟಿಕೊಂಡಿದೆ. ಆದರೂ ಇದೊಂದು ವ್ಯಕ್ತಿವಾಚಕ ಎನ್ನುವುದಕ್ಕಿಂತ ಗುಣವಾಚಕ ಎಂದೆನಿಸುವುದೇ ಹೆಚ್ಚು.

ಆಶಾದಾಯಕತೆ ನಾ ಲಂಕೇಶ ಪತ್ರಿಕೆ ಆಸೆಯನ್ನು ಹುಟ್ಟಿಸುವಂತಹದು, ಭರವಸೆಯನ್ನು ಕೊಡುವಂತಹುದು. ‘…ಜಿಲ್ಲಾ ಪೊಲೀಸ್ ಪಡೆಯನ್ನು ಅಲ್ಲಿಗೆ ರವಾನಿಸಿ. ಅದೊಂದು ಆಶಾದಯಕತೆ ಎಂದುಕೊಂಡರೆ ಭುಗಿಲೇಳುವ ಹಿಂಸಾಚಾರವನ್ನು ತಡೆಯಲು ಆಗದು ಎನ್ನುವದೂ ಅಷ್ಟೇ ವಾಸ್ತವ.’ ‘ತೆ’ ಪ್ರತ್ಯಯ ಬಳಕೆಗೆ ಮತ್ತೊಂದು ನಿದರ್ಶನ.

ಆಸಕ್ತಿತ ಗು ಕನ್ನಡ ಪ್ರಭ ಆಸಕ್ತಿಯುಳ್ಳವರು. ‘ಕೆನ್ ಶ್ರೀ ಅಕೆಡಮಿ ಆಫ್ ಎಕ್ಸ್‌ಲೆನ್ಸ್ ಮರಿಯಣ್ಣನ ಪಾಳ್ಯದಲ್ಲಿದ್ದು ಆಸಕ್ತಿಯುಳ್ಳವರಿಗೆ ಟೆನ್ನಿಸ್ ಅಂಕಣವನ್ನು ತಿಂಗಳಿಗೆ ೧೫೦ ರೂ ಬಾಡಿಗೆ ಮೇಲೆ ಕೊಡಲು ಇಚ್ಚಿಸಿದೆ. ಆಸಕ್ತಿತರು ಶ್ರೀ…. ಅವರನ್ನು ಸಂಪರ್ಕಿಸಬಹುದು’. ‘ಆಸಕ್ತ’ ಪದ ಈಗಾಗಲೇ ಬಳಕೆಯಲ್ಲಿದೆ. ನಾಮಪದದಿಂದ ಗುಣವಾಚಕವನ್ನು ರೂಪಿಸುವಾಗ ಸಣ್ಣ ಮಾರ್ಪಾಡಿನೊಂದಿಗೆ ‘ತ’ ಪ್ರತ್ಯಯ ಹಚ್ಚಲಾಗುತ್ತದೆ. ಉದಾ:-ಚಿಂತೆ-ಚಿಂತಿತ, ದಮನ-ದಮನಿತ, ಅನುಮಾನ-ಅನುಮಾನಿತ. ಈ ಮಾದರಿಯಲ್ಲೇ ಬಂದಿರುವ ಪದ. ಆದರೂ ‘ಆಸಕ್ತ’ ಪದ ಈಗಾಗಲೇ ಇರುವುದರಿಂದ ಇದು ಬೇಕೇ?.

ಆಸಕ್ತಿದಾರ ನಾ ಸಂಯುಕ್ತ ಕರ್ನಾಟಕ ಆಸಕ್ತಿಯುಳ್ಳವ. ‘ಜಾಗತಿಕ ಟೆಂಡರ್ ಮೂಲಕ ಆಸಕ್ತಿದಾರರನ್ನು ಕರ್ನಾಟಕ ಸರ್ಕಾರ ಆಹ್ವಾನಿಸಿ ಈ ಯೋಜನೆಗೆ ಚಾಲನೆ ನೀಡಿತ್ತು’. ‘ಆಸಕ್ತರು’ ಎಂದು ಸುಲಭವಾಗಿ ಬಳಸಬಹುದಾದ ಪದವಿರುವಾಗ ‘ದಾರ’ ಸೇರಿಸುವುದು ಬೇಕೆ?

ಆಸನಗ್ರಹಣ ನಾ ಸಂಯುಕ್ತ ಕರ್ನಾಟಕ ಕುಳಿತುಕೊಳ್ಳುವಿಕೆ. ‘ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ತಮ್ಮ ತಮ್ಮ ಆಸನಗ್ರಹಣ ಮಾಡಿದಾಗ ಸದನ ಅಂದರೆ ‘ಸಂಸದೀಯತ್ವ’ ವಿವಿಧ ಪಕ್ಷಗಳಲ್ಲಿ ಹಂಚಿಕೊಳ್ಳುತ್ತದೆ.’ ‘ಗ್ರಹಣ’ ಪದಕ್ಕೆ ಹಿಡಿಯುವುದು ಎಂಬರ್ಥವಿದೆ. ಉದಾ: ಪ್ರಾಣಿಗ್ರಹಣ. ಆದರೆ ನಂತರದಲ್ಲಿ ಬೇರೆ ಅರ್ಥವನ್ನೂ ನೀಡಲಾಗಿದೆ. ಉದಾ: ಪದಗ್ರಹಣ ಇಲ್ಲಿ ಅಧಿಕಾರವಹಿಸಿಕೊಳ್ಳುವುದು ಎಂದು ಅರ್ಥಬರುತ್ತದೆ. ಮೇಲಿನ ಪ್ರಯೋಗದಲ್ಲಿ ಕುಳಿತುಕೊಳ್ಳುವಿಕೆ ಎಂಬರ್ಥ ಬರುವಂತೆ ಬಳಸಲಾಗಿದೆ.

ಆಸ್ತಿಕತನ ನಾ ಕರ್ಮವೀರ ದೇವರಲ್ಲಿ ನಂಬಿಕೆ ಇರುವಿಕೆ. ‘…. ಚಿಕ್ಕಜಾಲದಲ್ಲಿ ಮತ್ತೊಂದು, ಹೀಗೆ ಗಣೇಶನ ಗುಡಿ ಕಟ್ಟಿಸಿರುವ ಶ್ರೀಯುತರ ಆಸ್ತಿಕತನಕ್ಕೆ ಯಾರಾದರೂ ಸೆಲ್ಯೂಟ್ ಹೊಡೆಯಲೇಬೇಕು’. ‘ತನ’, ‘ತೆ’, ‘ತ್ವ’ ಈ ಮೂರೂ ಪ್ರತ್ಯಯಗಳನ್ನು ಗುಣವಾಚಕಗಳೊಡನೆ ಬಳಸಿ ನಾಮರೂಪಗಳನ್ನು ಸಾಧಿಸಲಾಗುತ್ತದೆ. ಆಸ್ತಿಕತೆ ಎಂಬ ಪ್ರಯೋಗವೇ ಹೆಚ್ಚು ಬಳಕೆಯಲ್ಲಿದೆ. ಎಲ್ಲ ಸಂದರ್ಭಗಳಲ್ಲೂ ಒಂದರೊಡನೊಂದು ಬದಲಾವಣೆ ಸಾಧ್ಯವಿಲ್ಲ. ಉದಾ: ಬಾಲಕತನ, ಬಾಲಕತ್ವ, ಬಾಲಕತೆ. ಇಲ್ಲಿ ಮೊದಲೆರಡರ ಪ್ರಯೋಗ ಒಪ್ಪಬಹುದಾದರೂ ಮೂರನೆಯದು ಸಾಧ್ಯವಿಲ್ಲ.

ಆಳುಗುಂಡಿ ನಾ ಪ್ರಜಾವಾಣಿ ಒಬ್ಬ ಮನುಷ್ಯ ಒಳಗೆ ಕೆಲಸ ಮಾಡಬಹುದಾದಷ್ಟು ದೊಡ್ಡದಾದ ಮನುಷ್ಯ ನಿರ್ಮಿತ ಹಳ್ಳ. ‘ಬಣ್ಣದ ಖಾಲಿ ಕೊಳವೆಗಳನ್ನು ಹಾಕಿದ ನಂತರ… ಪ್ರತಿ ಇನ್ನೂರು ಮೀಟರ್‌ಗೊಂದರಂತೆ ಆಳುಗುಂಡಿಯನ್ನು ಬಿಟ್ಟುಕೊಂಡು ಅಗೆದ ಮಣ್ಣನ್ನೆಲ್ಲಾ ಮುಚ್ಚಿಬಿಡುತ್ತಾರೆ.’ ಇಂಗ್ಲಿಶಿನ ಮ್ಯಾನ್‌ಹೋಲ್‌’ಗೆ ಸಂವಾದಿಯಾಗಿ ತಂದಿರುವ ಕನ್ನಡ ಪದ.

ಆದರ್ಶವಂತ ನಾ ತರಂಗ ಆದರ್ಶವನ್ನುಳ್ಳವ. ‘…. ಪ್ರತಿಯೊಬ್ಬ ಬಸ್ ನಿರ್ವಾಹಕನೂ ನಿಮ್ಮಂತೆ ಆದರ್ಶವಂತನಾದರೆ ನಮ್ಮ ಸಾರಿಗೆ ಸಂಸ್ಥೆ ವಿಶ್ವದಲ್ಲೇ ಒಂದು ಮಾದರಿ ಸಂಸ್ಥೆಯಾಗುತ್ತದೆ.’ ಬುದ್ಧಿವಂತ, ಗುಣವಂತ ಮಾದರಿಯಲ್ಲಿ ಬಂದಿರುವ ಪದ.

ಆದರ್ಶನೀಯ ನಾ ಪ್ರಜಾವಾಣಿ ಆದರ್ಶವಾದುದು. ‘ಒಂದು ವೇಳೆ ಖಾತೆ ಬದಲಾವಣೆಯಾಗಿರದಿದ್ದರೆ, ಬಡ್ತಿ ಸಿಕ್ಕಿದ್ದರೆ, ಆಗ ಎಲ್ಲವೂ ನಿರಭ್ರ, ನಿರ್ಮಲ, ಆದರ್ಶನೀಯ’. ‘ಈಯ’ ಪ್ರತ್ಯಯದೊಡನೆ ಬಂದಿರುವ ಪದ. ಮಾದರಿ: ಮನನೀಯ, ಪರಿವರ್ತನೀಯ.

 

ಇಂಗ್ಲೀಷಾಂತರ ಗು ತರಂಗ ಇಂಗ್ಲಿಶಿನ ಕಡೆಗೆ ವಾಲಿದ. ‘ವಾಜಪೇಯಿಜೀಯವರಂಥ ದೂರದೃಷ್ಟಿಯ ಮುತ್ಸದ್ದಿ ಸೀಮೋಲ್ಲಂಘನ ಮಾಡಿದಾಗ ಅನೇಕ ಇಂಗ್ಲೀಷಾಂತರಗೊಂಡ ಬುದ್ಧಿಜೀವಿಗಳು ಗೇಲಿ ಮಾಡಿದ್ದರು’. ‘ತತ್ವಾಂತರ’, ‘ಪಕ್ಷಾಂತರ’ ಮಾದರಿಯಲ್ಲಿ ಬಂದಿರುವ ಪದ. ರೂಪ ಸಾದೃಶ್ಯದ ಮೇಲೆ ಅನೇಕ ಪದಗಳು ಇಂದು ಸೃಷ್ಟಿಯಾಗುತ್ತಿರುವುದಕ್ಕೆ ಇದೊಂದು ಉದಾಹರಣೆ.

ಇಚ್ಛಾವಂಚಕ ನಾ ಪ್ರಜಾವಾಣಿ ಉದ್ದೇಶಪೂರ್ವಕವಾಗಿ ಮೋಸ ಮಾಡುವವರು. ‘ಇಚ್ಛಾವಂಚಕರ ವಿರುದ್ಧ ಕ್ರಮಕ್ಕೆ ಬ್ಯಾಂಕ್ ಸಿಬ್ಬಂದಿ ಆಗ್ರಹ’. ಮೋಸ, ವಂಚನೆ ಮಾಡುವವರು ಮೋಸಗಾರ, ವಂಚಕರೇ. ಆದರೆ ಮೇಲಿನ ಪ್ರಯೋಗದ ‘ಇಚ್ಛೆ’ ಎಂಬುದಕ್ಕೆ ಇಂಗ್ಲಿಶಿನ ‘ಡೆಲಿಬರೇಟ್’ ಎಂಬ ಪದ ಕಾರಣವಿರಬಹುದೇನೋ? ಆದರೂ ಅರ್ಥಸ್ಪಷ್ಟತೆಯಿಲ್ಲ.

ಇಡಿತನ ನಾ ಸುಧಾ ಪೂರ್ಣವಾಗಿರುವಿಕೆ; ಪೂರ್ಣತ್ವ; ಏಕತೆ. ‘ಜಾತಿ ಮತ ಆಚಾರ ವಿಚಾರಗಳ ನಿಮಿತ್ತ ಬಿಡಿತನದ ಬಿಕ್ಕಟ್ಟಿನಿಂದ ಬೇರ್ಪಟ್ಟವರನ್ನು ಇಡಿತನದ ಬಿಕ್ಕಟ್ಟಿನಲ್ಲಿ ಕಟ್ಟಿ ಏಕಧ್ಯೇಯಿಗಳಾಗಿ ಸೆಣೆಸಲು ಕಾರಣರಾಗಿದ್ದಾರೆ.’ ಸಮಷ್ಟಿ ಎಂಬ ಅರ್ಥದಲ್ಲಿ ಬಳಕೆಯಾಗಿರುವ ಪದ.

ಇತಿಹಾಸಾರ್ಹ ಗು ಜಾಹೀರಾತು ಚರಿತ್ರೆಗೆ ಸೇರಲು ಯೋಗ್ಯವಾದ. ‘ಭಾರತ ಸರ್ಕಾರ, ಬಾಂಗ್ಲಾದೇಶ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಈ ಇತಿಹಾಸಾರ್ಹ ಪ್ರಾರಂಭದ ಭಾಗವಾಗಲು ಹಿಂದೂಜಾ ಗ್ರೂಪ್ ಮತ್ತು ಅಶೋಕ್ ಲೇಲ್ಯಾಂಡ್ ಹೆಮ್ಮೆ ಪಡುತ್ತವೆ’. ಚರಿತ್ರಾರ್ಹ ಎಂಬುದು ಈಗಾಗಲೇ ಬಳಕೆಯಲ್ಲಿರುವ ಪದ. ಇದಲ್ಲೆ, ಐತಿಹಾಸಿಕ, ಚಾರಿತ್ರಿಕ ಎಂಬುದೂ ಬಳಕೆಯಲ್ಲಿವೆ. ಚರಿತ್ರೆ=ಇತಿಹಾಸ ಎಂಬ ಆಧಾರದ ಮೇಲೆ ಮೇಲಿನ ಪ್ರಯೋಗ ಕಾಣಿಸಿಕೊಂಡಿದೆ.

ಇಲಾಖಿಗ ನಾ ಕನ್ನಡ ಪ್ರಭ ಇಲಾಖೆಯಲ್ಲಿ ಕೆಲಸ ಮಾಡುವವರು. ‘ಉದ್ದೇಶಿತ ಸೌಲಭ್ಯವನ್ನು ಇತರೆ ಇಲಾಖಿಗರೂ ನಿರೀಕ್ಷಿಸಿದರೆ? ವೈದ್ಯರು ಪಟ್ಟಣಗಳಲ್ಲೇ ಇರುತ್ತೇವೆ ಎಷ್ಟು ಕಡಿಮೆ ಕೊಡುತ್ತೀರಿ ಎಂದರೆ? ಉತ್ತರ?’. ಪರ್ಸೋ ಅರೇಬಿಕ್ ಪದದೊಡನೆ ಕನ್ನಡದ ‘ಇಗ’ ಪ್ರತ್ಯಯ ಬಳಸಿ ತಂದಿರುವ ಸಂಕರ ಪದ. ಈ ಮಾದರಿಯಲ್ಲಿ ಇಂಗ್ಲಿಶಿನ ಅನೇಕ ಪದಗಳು ಬಂದಿವೆ.

ಇಹೋತ್ತರ ನಾ ಪ್ರಜಾವಾಣಿ ಈ ಲೋಕದ ನಂತರದ, ಈ ಜೀವನದ ನಂತರದ, ‘….ಓದಿದ್ದರೆ, ಕುವೆಂಪು ರಾಮಾಯಣದ ಒಂದಕ್ಷರವನ್ನಾದರೂ ಓದಿದ್ದರೆ ನನ್ನ ಇಹೋತ್ತರ ಪಯಣದ ಒಂದು ತುತ್ತು ದಾರಿ ಬುತ್ತಿಯಾದರೂ ಆಗುತ್ತಿತ್ತೇನೋ’. ‘ಉತ್ತರ’ ಪದವನ್ನು ಬಳಸಿ ಹೊಸಪದ ಸೃಷ್ಟಿ ಮಾಡುತ್ತಿದ್ದರೂ ಆ ಮೇಲಿನ ಪ್ರಯೋಗದಲ್ಲಿ ಇದೇ ಅರ್ಥವನ್ನು ಕೊಡುವ ಇನ್ನೊಂದು ಪದವಿದೆ. ಇಹ ಪರ. ಸಾಮಾನ್ಯವಾಗಿ ಇವೆರಡೂ ಪದಗಳು (ಇಹ-ಪರ) ಒಂದರೊಡನೊಂದು ಬಳಕೆಯಾಗುತ್ತವೆ. ಇಹದ ನಂತರದ ಸ್ಥಿತಿ ಪರ. ಆದರೆ ಮೇಲಿನ ಪ್ರಯೋಗ ಬಳಕೆಯಲ್ಲಿ ಉಳಿಯಬಹುದು ಎನಿಸುತ್ತದೆ.

ಇಳಿಮಧ್ಯಾಹ್ನ ನಾ ಸಂಕ್ರಮಣ ಮಧ್ಯಾಹ್ನದ ನಂತರ ಸಂಜೆಯ ಕಡೆಗೆ ಮುಂದುವರಿಯುತ್ತಿರುವ ಸಮಯ. ‘ವಿಚಾರಗೋಷ್ಠಿಯಲ್ಲಿ ಅಂದು ಇಳಿಮಧ್ಯಾಹ್ನದ ಹೊತ್ತು ಮಂಡಿಸಲಾದ ಪ್ರಬಂಧದಲ್ಲಿ…. ‘ಇಳಿಹೊತ್ತು’, ‘ಇಳಿವಯಸ್ಸು’ ಇತ್ಯಾದಿ ಪದಗಳು ಮೇಲಿನ ಪದದ ಸೃಷ್ಟಿಗೆ ಮಾದರಿಯಾಗಿರಬೇಕು. ಪೂವಾಹ್ನ. ಮಧ್ಯಾಹ್ನ, ಅಪರಾಹ್ನ ಪದಗಳು ಈಗಾಗಲೇ ಬಳಕೆಯಲ್ಲಿವೆ. ಅಪರಾಹ್ನ ಎಂದರೆ ಮಧ್ಯಾಹ್ನದ ನಂತರ ಸಂಜೆಯ ನಡುವಿನ ಕಾಲ. ಮೇಲಿನಪ್ರಯೋಗದಲ್ಲಿ ಇನ್ನೇನು ಮಧ್ಯಾಹ್ನ ಮುಗಿಯುತ್ತಿರುವ ಕಾಲ ಎಂಬರ್ಥ ಬಂದು ಅದಕ್ಕೆ ಅರ್ಥವಿಲ್ಲದಂತಾಗುತ್ತದೆ. ಆದ್ದರಿಂದ ಮಧ್ಯಾಹ್ನ ಅಥವಾ ಅಪರಾಹ್ನ ಎಂದು ಉಪಯೋಗಿಸುವುದು ಸೂಕ್ತ.

 

ಈಜಾಳು ನಾ ಉದಯವಾಣಿ ಈಜುಗಾರ; ಈಜುವ ಕ್ರೀಡೆಯಲ್ಲಿರುವವನು. ‘ಚೀನದ ಈಜಾಳು ಮರಳಿ ದ್ರವ್ಯ ಸೇವನೆಗೆ’. ‘ಕ್ರೀಡಾಳು’, ‘ಸ್ಪರ್ಧಾಳು’ ಮಾದರಿಯಲ್ಲಿ ಬಂದಿರುವ ಪದ. ‘ಈಜುಗಾರ’ ‘ಈಜುಪಟು’ ಎಂಬುದೂ ಮೇಲಿನ ಪದಕ್ಕೆ ಸಮಾನಾರ್ಥಕವಾಗಿ ಬಳಕೆಯಲ್ಲಿವೆ.

ಈಡೇರಿತ ಗು ಪ್ರಜಾವಾಣಿ ನೆರವೇರಿದ, ಸಫಲವಾದ. ‘ಆಂಧ್ರ ಉದ್ಘಾಟನೆಯಿಂದ ಮದ್ರಾಸು ಪ್ರಾಂತ್ಯದ ಎರಡು ಕೋಟಿ ತೆಲುಗು ಭಾಷೆಯಾಡುವ ಜನರ ಆಶೋತ್ತರಗಳು ಇಂದು ಈಡೇರಿತವಾದವು’. ಈಡೇರು ಕನ್ನಡ ರೂಪ. ಈ ರಚನೆಯ ಹಿಂದಿನ ಮಾದರಿ ಸಂಸ್ಕೃತದ್ದು. ಮಾದರಿ: ಚಿತ್ರಿತ, ರಚಿತ. ‘ಈಡೇರಿತು’, ‘ಈಡೇರಿದವು’ ಎಂಬುದು ನೇರವಾಗಿ ಬಳಸಬಹುದಾದ ಪದಗಳು.

 

ಉಗ್ರಗಾಮಿತ್ವ ನಾ ಸುಧಾ ಕ್ರೂರತನದಿಂದಲೇ ಕಾರ್ಯಸಾಧಿಸುವ ಗುಣ. ‘೧೯೭೯-೮೨ರ ಸಮಯದಲ್ಲಿ ಸಿಂಹಳೀಯರ ಅತಿ ಭಾಷಾ ಪ್ರೇಮದಿಂದಾಗಿ ತಮಿಳು ಉಗ್ರಗಾಮಿತ್ವಕ್ಕೆ ಚಾಲನೆ ದೊರೆತು, ಲಂಕಾದ ಪೊಲೀಸರು ತಮಿಳು ಬಹುಮತವಿರುವ ಜಾಫ್ನಾದಲ್ಲಿ ಕಾರ್ಯಾಚರಣೆ ನಡೆಸಿ ಪ್ರಭಾಕರನ್ ಮತ್ತಿತರರು ಚೆನ್ನೈನಲ್ಲಿ ಆಶ್ರಯ ಪಡೆದಾಗ ಭಾರತದ ಸಾಹನುಭೂತಿ ವ್ಯಕ್ತವಾಗತೊಡಗಿತು’. ಇತ್ತೀಚೆಗೆ ನಾಮಪದಗಳಿಗೆ ‘ತ್ವ’ ಹಚ್ಚಿದ ಪದಗಳ ಸೃಷ್ಟಿ ಬಹಳವಾಗುತ್ತಿದೆ. ಇದೊಂದು ಅಂತಹ ಉದಾಹರಣೆ. ಮಾದರಿ: ಸ್ವಾಮಿತ್ವ, ತ್ರಿಮೂರ್ತಿತ್ವ ಇತ್ಯಾದಿ.

ಉಗುಳುಗಂಟ ನಾ ತರಂಗ ಸಿಕ್ಕಸಿಕ್ಕಲ್ಲಿ ಉಗುಳುವವ. ‘ಅನಂತರ ಹಳೆಯ ದೇವರ ಕ್ಯಾಲೆಂಡರುಗಳನ್ನು ಅಂಥ ಮೂಲೆಗಳಲ್ಲಿ ಹಚ್ಚಿ ಉಗುಳುವವರ ಬಾಯಿಗೆ ಬೀಗ ಹಾಕಿದ್ದಾರೆ. ನಮ್ಮ ಉಗುಳುಗಂಟರಲ್ಲಿರುವ ದೈವಿಕ ಭಕ್ತಿ ಮೆಚ್ಚಲೇಬೇಕು’. ‘ಜಗಳಗಂಟ’ ಮಾದರಿಯನ್ನನುಸರಿಸಿ ಬಂದಿರುವ ಹೊಸ ಪದ. ‘ಗಂಟ’ ತದ್ದಿತ ಪ್ರತ್ಯಯಕ್ಕೆ ಇದರಲ್ಲಿ ವ್ಯವಹರಿಸುವವನು ಎಂಬರ್ಥವಿದೆ.

ಉತ್ಸಾಹಿತ ನಾ ಉದಯವಾಣಿ ಹುರುಪಿನಿಂದ ಕೂಡಿರುವ. ‘ಅಂತೆಯೇ ಈ ಕಾರ್ಯ ಪ್ರವಾಹೋಪಾದಿಯಲ್ಲಿ ಸಾಗಬೇಕು. ನಾವೆಲ್ಲರೂ ಪಾಲ್ಗೊಳ್ಳಬೇಕು. ಉತ್ಸಾಹಿತರನ್ನು ಮುಂದೆ ತಳ್ಳಿ ಹಿಂದೆ ನಿಂತು ನೋಡುವ…’ ಬಹುಶಃ ಮೇಲಿನ ಪ್ರಯೋಗಕ್ಕೆ ‘ವಿವಾಹಿತ’ ಪದ ಮಾದರಿಯಿರಬೇಕೆನಿಸುತ್ತದೆ. ಏಕೆಂದರೆ, ‘ಉತ್ಸಾಹಿ’ ಎಂಬ ಪದವೇ ಬೇಕಾದ ಅರ್ಥವನ್ನು ನೀಡಲು ಸಾಕಾಗುತ್ತದೆ. ಅಂದಮೇಲೆ ‘ತ’ ಹತ್ತಿಸುವುದು ಅನವಶ್ಯಕವೆನಿಸುತ್ತದೆ.

ಉತ್ಸಾಹಿಸು ಕ್ರಿ ಸಂಯುಕ್ತ ಕರ್ನಾಟಕ ಉತ್ಸಾಹ, ಹುರುಪು ತುಂಬು. ‘ರೈತರ ಮಾರುಕಟ್ಟೆಗಳಿಂದ ಹಳ್ಳಿಗಳ ಕಡೆ ಸೊತ್ತುಗಳು ಸೇರುವಂತೆ ಗ್ರಾಮೀಣ ಶ್ರಮಿಕರನ್ನು ಉತ್ಸಾಹಿಸಿ ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಿ…’ ‘ಇಸು’ ಪ್ರತ್ಯಯ ಬಳಕೆ ಎಲ್ಲೆಡೆಯೂ ಸಾಧ್ಯವಿಲ್ಲವಾದರೂ ಬಳಕೆ ನಡೆಯುತ್ತಲೇ ಇದೆ. ಸಂಸ್ಕೃತ ಮೂಲ ನಾಮ ಪದಗಳಿಗೆ ‘ಇಸು’ ಬಳಸಿ ತರುವ ಕ್ರಿಯಾಪದರೂಪ ಒಂದಾದರೆ (ಆನಂದ+ಇಸು=ಆನಂದಿಸು; ಸಂತೋಸ+ಇಸು=ಸಂತೋಷಿಸು ಇತ್ಯಾದಿ. ಇಲ್ಲೆಲ್ಲಾ ಪದ ಮೊದಲ ವ್ಯಕ್ತಿಯನ್ನು ರೂಪ ಇನ್ನೊಂದು. (ಮಾಡು+ಇಸು=ಮಾಡಿಸು, ಹೇಳು+ಇಸು=ಹೇಳಿಸು ಇತ್ಯಾದಿ. ಇಲ್ಲೆಲ್ಲಾ ಕರ್ತೃ ಎರಡನೆಯವನಾಗುತ್ತಾನೆ) ಮೇಲಿನ ಪ್ರಯೋಗದಲ್ಲಿ ಮೊದಲಿನ ರೂಪ ಕಂಡುಬಂದು ಎರಡನೇ ರೂಪದ ಅರ್ಥವನ್ನು ಪಡೆಯುವಂತಹದ್ದಾಗಿದೆ. ಬಹುಶಃ ಮೇಲಿನ ಪದಕ್ಕೆ ‘ಪ್ರೋತ್ಸಾಹಿಸು’ ಎಂಬುದು ಮಾದರಿಯಾಗಿರಬಹುದು.

ಉದ್ಭವಿಕೆ ನಾ ಸಂಯುಕ್ತ ಕರ್ನಾಟಕ ತಲೆದೋರುವುದು, ಹುಟ್ಟುವಿಕೆ ‘ಸಂಪುಟ ಕಾರ್ಯದರ್ಶಿಯನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ….ನೇಮಕದ ಹಿಂದಿರುವ ಉದ್ದೇಶಗಳ ಬಗ್ಗೆ ಅನೇಕ ಪ್ರಶ್ನೆಗಳ ಉದ್ಭವಿಕೆಗೆ ಕಾರಣವಾಗಿದೆ. ಎಂದು…. ಉದ್ಭವ ಪದವೇ ಮೇಲಿನ ಅರ್ಥವನ್ನು ನೀಡಲು ಸಾಕು. ಹೊಸಪದ ಸೃಷ್ಟಿಗೆ ಬೇರೆ ಪದಗಳನ್ನು ಮಾದರಿಯಾಗಿಟ್ಟುಕೊಳ್ಳುವುದು ಒಂದು ಕಾರಣ. ಮೇಲಿನ ಪ್ರಯೋಗ ಅಂತಹದ್ದಕ್ಕೆ ಉದಾಹರಣೆ. ಹುಟ್ಟುವಿಕೆ, ಮಾಡುವಿಕೆ ಪದಗಳನ್ನು ಗಮನಿಸಿ ಮೇಲಿನ ಪದ ಸೃಷ್ಟಿಯಾಗಿರಬಹುದು.

ಉದ್ದೋಉದ್ದ ಪ್ರಜಾವಾಣಿ ಸಾಕಷ್ಟು ಉದ್ದವಾದ, ಉದ್ದಕ್ಕೂ ಹರಡಿರುವ, ‘ವಾಣಿವಿಲಾಸ ಸಾಗರ ಅಣೆಕಟ್ಟೆಯ ಬಲಭಾಗದ ಮೇಲ್ತುದಿಯಲ್ಲಿರುವ ನಿರೀಕ್ಷಣಾ ಮಂದಿರದಲ್ಲಿ ಒಮ್ಮೆ ನಿಂತು ನೋಡಿ. ಉದ್ದೋಉದ್ದ ನೀಲಿ ನೀರಿನ ಹಾಳೆ’. ಕೆಲವೊಂದು ಪದಗಳನ್ನು ಪುನರಾವರ್ತಿಸುವುದರಿಂದ ಬಹಳ, ತೀರಾ ಎನ್ನುವ ಅರ್ಥವನ್ನು ಪಡೆಯಲಾಗುತ್ತದೆ. ಉದಾ: ಮಡಿಯೋ ಮಡಿ (ತುಂಬಾ ಮಡಿ). ಇದೇ ಮಾದರಿಯಲ್ಲಿ ಬಂದಿರುವ ಪದವಾದರೂ ರಚನೆಯಲ್ಲಿ ಮೊಟಕಾಗಿದೆ. ಉದ್ದವೋ ಉದ್ದ ಎಂದು ಆಗಬೇಕಿತ್ತು.

ಉಪಧೂಮಪಾನಿ ನಾ ಮಾತಿನಲ್ಲಿ ಬಳಕೆ ಬೀಡಿ, ಸಿಗರೇಟು ಇತ್ಯಾದಿಗಳನ್ನು ಸೇದಿ ಬಿಟ್ಟ ಹೊಗೆ ಕುಡಿಯುವವರು. ‘ಇಂತಹವರನ್ನು ಉಪಧೂಮಪಾನಿಗಳೆಂದು ಕರೆಯಬಹುದು, ಇಂಗ್ಲಿಶಿನ ‘ಪ್ಯಾಸಿವ್ ಸ್ಮೋಕರ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಪದ.

ಉಪನ್ಯಸಿಸು ಕ್ರಿ ಪ್ರಜಾವಾಣಿ ಭಾಷಣ ಮಾಡು; ಉಪನ್ಯಾಸ ನೀಡು. ‘ತುಂಬಿದ ತರಗತಿಯಲ್ಲಾಗಲೀ…. ಸಾರ್ವಜನಿಕ ಸಭೆಯಲ್ಲಾಗಲ್ಲಿ ವೀಸೀ ಅಪ್ಪಿತಪ್ಪಿಯೂ ಆವೇಸಬರದಿಂದ ಅಬ್ಬರಿಸುತ್ತ ನಾಟಕೀಯವಾಗಿ ಉಪನ್ಯಸಿಸುತ್ತಿರಲಿಲ್ಲ. ‘ಇಸು’ ಪ್ರತ್ಯಯ ಬಳಕೆಗೆ ಉದಾಹರಣೆ. ಮಾದರಿ: ಅಭ್ಯಸಿಸು.

ಉಪಪಾಲು ನಾ ಪ್ರಜಾವಾಣಿ ಒಳಪಾಲು: ಸಣ್ಣಭಾಗ ‘ಹಿಂದುಳಿದವರಲ್ಲಿ ಅತಿ ಹಿಂದುಳಿದವರಿಗೆ ಉಪಪಾಲು (ಸಬ್‌ಕೋಟಾ) ಕಲ್ಪಿಸುವ ಸರ್ಕಾರದ ತೀರ್ಮಾನದಿಂದ ಕೆರಳಿದ….ನಾಯಕರು…’ ಇಂಗ್ಲಿಶಿನ ‘ಸಬ್‌ಕೋಟಾ’ ಕ್ಕೆ ಸಂವಾದಿಯಾಗಿ ತಂದಿರುವ ಪದವೆಂಬುದು ಪ್ರಯೋಗದಲ್ಲೇ ವ್ಯಕ್ತವಾಗುತ್ತದೆ.

ಉಪಯೋಗದಾರ ನಾ ಜಾಹೀರಾತು ಬಳಸುವವ ‘ರೈಲ್ವೆ ವಿಷಯದ ಬಗ್ಗೆ …. ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು…. ಉಪಯೋಗದಾರರನ್ನು ಆಹ್ವಾನಿಸಲಾಗಿದೆ’. ‘ಬಳಕೆದಾರ’ ಎಂಬುದು ಈಗಾಗಲೇ ಬಂದಿದೆ. ‘ರೈಲು ಬಳಕೆದಾರರ ಸಂಘ’ ಇತ್ಯಾದಿ ಗಮನಿಸಬಹುದು.

ಉಪಶಾಸ್ತ್ರೀಯ ಗು ಪ್ರಜಾವಾಣಿ ಶಾಸ್ತ್ರೀಯವಲ್ಲದ ಆದರೆ ಅದರ ಅಂಗವಾದ; ‘ನಿರ್ಣಾಯಕರಾಗಿ ಸಂಗೀತ ಕ್ಷೇತ್ರದ ಖ್ಯಾತನಾಮರು, ಶಾಸ್ತ್ರೀಯ, ಉಪಶಾಸ್ತ್ರೀಯ, ಸಂಗೀತ ಆಧಾರಿತ ಹೀಗೆ ವಿವಿಧ ಬಗೆಯ…’ ಲಘುಶಾಸ್ತ್ರೀಯ ಎಂಬುದು ಈಗ ಬಳಕೆಯಲ್ಲಿರುವ ಪದ.

ಉಪಹಾರ ನಾ ಜಾಹೀರಾತು ಬಹುಮಾನವಾಗಿ ನೀಡುವ ಉತ್ತೇಜಕಗಳು. ‘ಅಲ್ಲದೆ ಬಂಧು ಬಾಂಧವರಿಗೆ ವಿಶೇಷ ಉಪಹಾರವಾಗಿ ನೀಡಲು ರೇಮಂಡ್ ಗಿಫ್ಟ್ ವೋಚರ್‌ಗಳೂ ಇವೆ’. ಹಿಂದಿಯ ‘ಉಪಹಾರ್’ ಅದೇ ಅರ್ಥದಲ್ಲಿ ಕನ್ನಡಕ್ಕೆ ಬಂದಿರುವಂತಿದೆ. ಬಹುಶಃ ಇಂಗ್ಲೀಶಿನ ಇನ್ಸೆಂಟಿವ್‌ಗೆ ಸಂವಾದಿಯಾಗಿರಬಹುದು. ಕನ್ನಡದಲ್ಲಿ ‘ಪ್ರೋತ್ಸಾಹಕ’ ಎಂಬುದಾಗಿ ಬಳಸಬಹುದು.

ಉಸಿರಿಗ ನಾ ಕನ್ನಡಪ್ರಭ ೧. ಮಾತನಾಡುವವವ ೨. ಜೀವವಾಗುಳ್ಳವ. ‘ಕನ್ನಡ ಉಸಿರಿಗಿರ ಶ್ರಮದ ಫಲವಾಗಿ ರೂಪುಗೊಂಡು ಅಂತೂ ಉಳಿದುಕೊಂಡು ಬಂದಿರುವ ಸಂಸ್ಥೆ, ವರ್ಷಕ್ಕೊಮ್ಮೆ ಉತ್ಸವ…’. ‘ಇಗ’ ಪ್ರತ್ಯಯದೊಡನೆ ಬಂದಿರುವ ಪದ. ‘ಉಸಿರ್’ (ಕ್ರಿ) (ನಾ)ಎಂಬುದಕ್ಕೆ ಮಾತನಾಡು ಎಂಬರ್ಥವಿದೆಯಲ್ಲದೆ ಜೀವ, ಪ್ರಾಣವಾಯು ಎಂದೂ ಇದೆ. ಮೇಲಿನ ಪ್ರಯೋಗದಲ್ಲಿ ಎರಡೂ ಬಗೆಯಿಂದ ಅರ್ಥ ಸಾಧಿಸಬಹುದಾಗಿದೆ.

ಉಸ್ತುವಾರ ನಾ ಉದಯವಾಣಿ ಕಾರ್ಯಕ್ರಮದ ನಿಯೋಜಕ ಅಥವಾ ವ್ಯವಸ್ಥಾಪಕ. ‘….ಹಾಸ್ಯೋತ್ಸವ ಅಂದು ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿದೆ ಎಂದು ಹಾಸ್ಯೋತ್ಸವ ಉಸ್ತುವಾರ… ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಾಮಾನ್ಯವಾಗಿ ವ್ಯಕ್ತಿವಾಚಕ ಪದಗಳ ಸೃಷ್ಟಿ ಹೀಗಾಗುತ್ತಿತ್ತು. ವ್ಯಾಪಾರ-ವ್ಯಾಪಾರಿ, ಅಧಿಕಾರ-ಅಧಿಕಾರಿ, ವ್ಯವಹಾರ-ವ್ಯವಹಾರಸ್ಥ ಇತ್ಯಾದಿ. ಈ ಉದಾಹರಣೆಯಲ್ಲಿ ಉಸ್ತುವಾರಿಯಿಂದ ವ್ಯಕ್ತಿವಾಚಕ ಉಸ್ತುವಾರ ಪದ ರಚನೆಯಾಗಿದೆ.

 

ಊಟದ ಗೋಷ್ಠಿ ನಾ ಸಂಯುಕ್ತ ಕರ್ನಾಟಕ ಆಹಾರದ ಏರ್ಪಾಡು ‘ವಿಚಾರಗೋಷ್ಠಿಗಿಂತ ಮೊದಲು ಉಟದ ಗೋಷ್ಠಿ ಏರ್ಪಾಡಾಗಿತ್ತು’. ‘ಗೋಷ್ಠಿ’ ಎಂಬ ಪದದ ಉಪಯುಕ್ತತೆ ಬರುಬರುತ್ತಾ ತೀರಾ ಹಗುರವಾಗುತ್ತಾ ಹೋಗುತ್ತಿದೆ. ವಿಚಾರಗೋಷ್ಠಿ ಎಂದರೆ ಚರ್ಚೆ, ವಿಚಾರ ಮಾಡುವವರ ಸಮೂಹ, ಸಭೆ ಎಂದು ಉನ್ನತ ಅರ್ಥ ಬರುವಂತಿದೆ. ಆದರೆ ಪಾನಗೋಷ್ಠಿ, ಊಟದ ಗೋಷ್ಠಿಗಳೆಲ್ಲಾ ಜನರ ಸಮೂಹ ಎಂದಷ್ಟೇ. ಒಂದು ಮಾದರಿಯನ್ನನುಸರಿಸಿ ಬಂದಿರುವಂತಹ ಪದಗಳು.