ಎಣಿಕಾಧಿಕಾರಿ ನಾ ಮೈಸೂರು ಮಿತ್ರ ಎಣಿಕೆ ಮಾಡುವ ಅಧಿಕಾರ ಹೊಂದಿರುವವ. ಜಿಲ್ಲಾಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಮತ ಎಣಿಕೆ ಕಾರ್ಯದಲ್ಲಿ ನಡೆದ…ನಲ್ಲಿ ಏಜೆಂಟರುಗಳಿಗಾಗಿ ಮತ ಎಣಿಕಾಧಿಕಾರಿಗಳೇ ಇಪ್ಪತ್ತು ನಿಮಿಷ ಕಾಯ್ದೆ ಪ್ರಸಂಗ ನಡೆಯಿತು’. ಕನ್ನಡ ಮತ್ತು ಸಂಸ್ಕೃತ ಪದ ಸೇರಿ ಆಗಿರುವ ಪದ. ಸಂಧಿ ನಿಯಮ ಸ್ಪಷ್ಟವಿಲ್ಲ.

ಎಚ್ಚರಗಣ್ಣು ನಾ ಕನ್ನಡ ಪ್ರಭ ಜಾಗ್ರತವಾಗಿ ಅವಲೋಕಿಸುವ ದೃಷ್ಟಿ. ‘ಲಾಸಾದ ಬಳಿಯ ಆಶ್ರಮದಿಂದ ಚೀನೀಯರ ಎಚ್ಚರಗಣ್ಣನ್ನು ತಪ್ಪಿಸಿ ೯೦೦ ಕಿ.ಮೀಗಳಿಗೂ ದೂರವನ್ನು ದುರ್ಗಮ ಪ್ರದೇಶಗಳಿಂದ ಕ್ರಮಿಸಿ ಧರ್ಮಶಾಲಾ ತಲುಪುವುದೆಂದರೆ…’. ಸೂಕ್ಷ್ಮದೃಷ್ಟಿಗೆ ‘ಹದ್ದಿನಕಣ್ಣು’ ಎಂಬ ಪ್ರಯೋಗವಿದೆ. ಇದೇ ಅರ್ಥದಲ್ಲಿ ಬಳಕೆಯಾಗಿರುವ ಸಮಾಸಪದ.

ಎತ್ತುಗ ನಾ ಸುಧಾ ಕಟ್ಟಡಗಳಲ್ಲಿ ಮೇಲೇರಲು ಮತ್ತು ಕೆಳಗಿಳಿಯಲು ಮೆಟ್ಟಿಲುಗಳಿಗೆ ಪರ್ಯಾಯವಾಗಿ ಬಳಸುವ ಯಾಂತ್ರಿಕ ಸಾಧನ. ‘ತನ್ನ ಕೊಠಡಿಯಿಂದ ಕೆಳಗಿನ ಅಂತಸ್ತಿನಲ್ಲಿದ್ದ ಅಡುಗೆ ಮನೆಗೆ ಬರಲು ಎತ್ತುಗ (ಲಿಫ್ಟ್) ವೊಂದನ್ನಿಟ್ಟಿದ್ದ’. ಇಂಗ್ಲಿಶಿನ ‘ಲಿಫ್ಟ್‌’ಗೆ ಸಂವಾದಿ ಪದವಾಗಿ ಬಳಸಿರುವುದು ಮೇಲಿನ ಪ್ರಯೋಗದಿಂದಲೇ ಗೊತ್ತಾಗುತ್ತದೆ. ಆದರೆ ನೋಡುಗ-ಓದುಗ ಮಾದರಿಯಲ್ಲಿ ಎತ್ತುಗ ಎಂದರೆ ಎತ್ತುವವನು(ಭಾರ) ಎಂದು ಅರ್ಥವಾಗಿ ಸಮಸ್ಯೆಯುಂಟಾಗಬಹುದೇನೋ.

ಎರೆಗೊಬ್ಬರ ನಾ ಕನ್ನಡ ಪ್ರಭ ಎರೆಹುಳುವಿನಿಂದಾದ ಗೊಬ್ಬರ. ‘ಎರೆಹುಳದ ಗೊಬ್ಬರದ ಪ್ರಯೋಜನವನ್ನು ಪ್ರಾಯಶ ಈಗ ತಿಳಿದುಕೊಂಡಿರುವ ವಿಜ್ಞಾನಿಗಳು ಭಾರತದಲ್ಲಿ ಲಭ್ಯವಾಗುವ ಅಗಾಧ ಪ್ರಮಾಣದ ಸಾವಯವ ತ್ಯಾಜ್ಯ ವಸ್ತುಗಳಿಂದ ಎಷ್ಟೆಲ್ಲಾ ಎರೆಗೊಬ್ಬರ ತಯಾರಿಸಬಹುದೆಂದು ಲೆಕ್ಕ ಹಾಕುತ್ತಿದ್ದಾರೆ’. ರಸಗೊಬ್ಬರ, ಸೀಮೆಗೊಬ್ಬರ ಮಾದರಿಯಲ್ಲಿ ಬಂದಿರುವ ಪದ. ಆದರೆ ‘ಎರೆ’ ಎಂಬುದಕ್ಕೆ ಬೇರೆಯೇ ಅರ್ಥವಿದೆ.

ಎಸೆಗಾರಿಕೆ ನಾ ಉದಯವಾಣಿ (ಚೆಂಡು) ಎಸೆಯುವ ಶೈಲಿ. ‘ನಿಯಮಬಾಹಿರ ಎಸೆಗಾರಿಕೆ ಸಂಬಂಧ ಅಖ್ತರ್ ಅವರನ್ನು ನಿಷೇಧಿಸುವ ಮೊದಲು ಕೈಗೊಳ್ಳಬೇಕಾದ ಕೆಲವೊಂದು ವಿಧಿವಿಧಾನಗಳನ್ನು ಐಸಿಸಿ ಸಲಹಾ ಸಮಿತಿ ಸ್ವೀಕರಿಸಿರಲಿಲ್ಲ.’ ಕ್ರೀಡಾರಂಗಕ್ಕೆ ಸಂಬಂಧಿಸಿದ ಪದ. ಕ್ರಿಕೆಟ್ಟಿನಲ್ಲಿ ಬರುವ ಬೌಲಿಂಗ್ ಎಂಬುದಕ್‌ಎಕ ಸಂವಾದಿಯಾಗಿ ಬಳಕೆಯಾಗಿದೆ. ‘ಎಸೆಗಾರ’ ಬಳಕೆಯಾದಂತಿಲ್ಲ.

 

ಏಕಕಂಡಿ ಗು ಉದಯವಾಣಿ ಎಲ್ಲ ಕೆಲಸಗಳನ್ನೂ ಒಂದೇ ಕಡೆ ಮಾಡಿಸಿಕೊಳ್ಳಬಹುದಾದ ವ್ಯವಸ್ಥೆ. ‘…. ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಮತ್ತು ಕಾಲವಿಳಂಬವನ್ನು ತಪ್ಪಿಸಲು ಭೂ ಪರಿವರ್ತನೆಗೆ ಏಕಕಿಂಡಿ (ಸಿಂಗಲ್ ವಿಂಡೊ) ಪದ್ಧತಿಯನ್ನು ಅನುಸರಿಸಲು…’. ಒಂದು ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಒಂದೇ ಕಡೆ ಮಾಡಿಸಿಕೊಳ್ಳಬಹುದಾದ ಅನುಕೂಲಕರ ವ್ಯವಸ್ಥೆಯನ್ನು ಇಂಗ್ಲಿಶಿನಲ್ಲಿ ಸಿಂಗಲ್ ವಿಂಡೊ ಎಂಬುದಾಗಿ ಕರೆಯಲಾಗುತ್ತದೆ. ಈ ಪದಗಳ ಸಂವಾದಿಯಾಗಿ ‘ಏಕಗವಾಕ್ಷ’ ಎಂಬ ಪದ ಬಳಕೆಗೆ ಬಂದಿತು. ಅದೇ ಮಾದರಿಯಲ್ಲಿ ಮೇಲಿನ ಪದವೂ ಬಂದಿದೆ.

ಏಕಾಂಗಿನಿ ನಾ ಜಾಹೀರಾತು ಒಂಟಿಯಾದ ಹೆಣ್ಣು, ‘ವ್ಯವಸ್ಥೇಯ ವಿರುದ್ಧ ಏಕಾಂಗಿನಿಯ ಸಮರ’. ಕೆಲವೊಂದು ಪದಗಳು ಪುರುಷರನ್ನು ಸೂಚಿಸುತ್ತವೆಂಬ ತಪ್ಪು ಕಲ್ಪನೆಯಿಂದ ಅದಕ್ಕೆ ಪ್ರತ್ಯಯವನ್ನು ಸೇರಿಸಿ ಸ್ತ್ರೀವಾಚಿಯನ್ನಾಗಿ ಮಾಡಲಾಗುತ್ತದೆ. ಮೇಲಿನ ಪ್ರಯೋಗ ‘ಕಾರ್ಯದರ್ಶಿನಿ’ ಮಾದರಿಯಲ್ಲಿ ಬಂದಿದೆ.

ಏಕರೂಪೀಕರಣ ನಾ ಪುಸ್ತಕ ಮಾಹಿತಿ ಒಂದೇ ರೂಪಕ್ಕೆ ತರುವುದು. ‘ಅಲ್ಲದೆ ಎಲ್ಲ ಜ್ಞಾನವನ್ನು ಏಕರೂಪೀಕರಣಕ್ಕೆ ಒಳಗಾಗಿಸಿದರೆ “ಸಾಹಿತ್ಯದ ಆತ್ಮಶಕ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಉಪಾಯಗಳು ಅಮುಖ್ಯವಾಗಿ ಬಿಡುತ್ತದೆ.”. ‘ಈಕರಣ’ ಪ್ರತ್ಯಯ ಹತ್ತಿಸಿ ಅನೇಕ ಹೊಸ ಪದಗಳನ್ನು ಬಳಸಲಾಗುತ್ತಿದೆ. ಈ ರೂಪ ಒಂದು ಹೊಸ ಸೇರ್ಪಡೆ. ಮಾದರಿ: ವೈಭವೀಕರಣ, ಸರಳೀಕರಣ

ಏರಿಳಿವು ನಾ ಕನ್ನಡ ಪ್ರಭ ಏರಿ ಇಳಿಯುವ ಕ್ರಿಯೆ. ‘ಆಕಾಶಕ್ಕೆ ಎತ್ತಿ ಬಾರಿಸಿದ ಚೆಂಡುಗಳ ಏರಿಳಿವಿನ ಗತಿಯನ್ನು ಚಿತ್ರೀಕರಿಸಿ ಪ್ರಸಾರ ಮಾಡಿದ ರೀತಿಯೂ ಅತ್ಯಂತ ಮನಮೋಹಕ’. ‘ಏರಿಳಿತ’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ. ಆದರೆ, ‘ಇಳಿವು’ ಪದ ಬಳಕೆಯಲ್ಲಿಲ್ಲ. ‘ಏರಿಳಿತ’ ಪದವೇ ಸೂಕ್ತವಾದುದು.

 

ಒಟ್ಟುಗಟ್ಟಳೆ ಗು ಜಾಹೀರಾತು ಸಗಟು; ರಾಶಿ ರಾಶಿ. ‘ಚಿನ್ನಾಭರಣ/ಸಂಬಂಧಪಟ್ಟ ಉತ್ಪನ್ನಗಳಿಗೆ ಒಟ್ಟುಗಟ್ಟಳೆಯ ವ್ಯಾಪಾರಿಗಳು ಮತ್ತು ವಿತರಕರು ಬೇಕಾಗಿದ್ದಾರೆ’. ಇಂಗ್ಲಿಶಿನ ‘ಹೋಲ್‌ಸೇಲ್’ ಎಂಬ ಪದಕ್ಕೆ ‘ಸಗಟು’ ಎಂಬ ಪದ ಬಳಕೆಯಲ್ಲಿದೆ. ಅದೇ ಅರ್ಥದಲ್ಲಿ ಈ ಪದ ಬಳಕೆಯಾಗಿದೆ. ಇಲ್ಲಿ ಪ್ರಮಾಣವಾಚಕ ಪ್ರತ್ಯಯವನ್ನು ಲಕ್ಷಗಟ್ಟಳೆ, ಸಾವಿರಗಟ್ಟಲೆಯಲ್ಲಿ ಬಳಸಿದಂತೆ ಬಳಸುವುದು ಉದ್ದೇಶವಿರುವಂತೆ ತೋರುತ್ತದೆ.

ಒಡಬೆರಸು ಕ್ರಿ ಕನ್ನಡ ಪ್ರಭ ಸಾಕಷ್ಟು ಬೆರಕೆ ಮಾಡಿದ. ‘ಒಟ್ಟಿನಲ್ಲಿ ದೃಶ್ಯಗಳನ್ನು ಇಡಿ ಇಡಿಯಾಗಿಯೂ ಹಾಗೂ ಅದರ ವಿವರಗಳನ್ನು ಬಿಡಿ ಬಿಡಿಯಾಗಿಯೂ ಹದವಾಗಿ ಒಡಬೆರಸಿ ಮಾಡುವ ಪ್ರಸಾರ’. ಒಡೆದು-ಬೆರೆಸಿದ ಎಂಬುದಕ್ಕೆ ಉಪಯೋಗಿಸಿರುವ ಪದ. ಸಮಾ ಕ್ರಿಯೆ ಸರಿಹೊಂದದೆ ಅರ್ಥಸ್ಪಷ್ಟತೆ ಕಷ್ಟವಾಗುತ್ತದೆ. ಆದ್ದರಿಂದ ಒಡೆದು. ಬೆರೆಸಿದ ಎಂಬುದಾಗಿಯೇ ಬಿಡಿಸಿ ಬಳಸುವುದು ಸೂಕ್ತ.

ಒಡ್ಡಾ ರುಡ್ಡಿಜಾಹೀರಾತು ಹೇಗೆಂದರೆ ಹಾಗೆ; ಶಿಸ್ತಿಲ್ಲದ. ‘ಕಿರಣನ ಒಡ್ಡಾರುಡಿ ಮಲಗುವ ರೂಢಿ ಈ ಗುಂಪಿಗೆ ಸೇರಿದ್ದು. ‘ಅಡ್ಡಾದಿಡ್ಡಿ’ ಪದಕ್ಕೆ ಸಮಾನಾಂತರವಾಗಿ ಬಂದಿರುವ ಪದ. ‘ಒಡ್ಡೊಡ್ಡಾಗಿ’ ಎಂಬುದೂ ಬಳಕೆಯಲ್ಲುಂಟು.

ಒತ್ತೆಸೆರೆ ನಾ ತರಂಗ ಬೇರೊಬ್ಬರ ಬಿಡುಗಡೆಯಾಗಿ ಆಧಾರವಾಗಿ ಮಾಡಿರುವ ಬಂಧನ. ‘ತಮ್ಮ ವಿಮೋಚನೆಯ ಅನಂತರ ಒಂದು ಪತ್ರಿಕಾಗೋಷ್ಠಿಯಲ್ಲಿ ಒಂದು ವಾರದ ಒತ್ತೆಸೆರೆಯ ಅನುಭವಗಳನ್ನು ಇವರು ಹೇಳಿಕೊಂಡರು’. ‘ಒತ್ತೆ’ಯಾಗಿ ಹಿಡಿದಿಟ್ಟಿದ್ದ ವ್ಯಕ್ತಿಗಳನ್ನು ಒತ್ತೆಯಾಳು ಎಂದು ಹೇಳಿದಂತೆ ‘ಒತ್ತೆ’ಯಾಗಿ ಹಿಡಿದಿಟ್ಟಿದ್ದೇ ಅಲ್ಲದೆ ಬಂಧನದಲ್ಲಿಟ್ಟಂತೆಯೂ ನಡೆಸಿಕೊಂಡು ಕಾರಣ ಅದನ್ನು ಒತ್ತೆಸೆರೆ ಎಂದು ಕರೆಯಲಾಗಿದೆ.

ಒದರಿಗಾರ ನಾ ಲಂಕೇಶ ಪತ್ರಿಕೆ ಒದರುವವನು, ಒಂದೇ ಸಮನೆ ಹೇಳುವವನು ‘…ಹೆಗಡೆ ಮತ್ತು ಬಿ.ಜೆ.ಪಿ. ಪತ್ರಿಕಾಗೋಷ್ಠಿಯನ್ನು ಸ್ಟೆನೋಗ್ರಾಫರ್‌ಗಳಂತೆ ಬರೆದುಕೊಳ್ಳುವ ಈ ಒದರಿಗಾರರು…’. ವರದಿಗಾರರನ್ನು ಲೇವಡಿ ಮಾಡಲು ಮೂಲಪದದ ಧಾಟಿಯಲ್ಲೇ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿ ಬೇರೊಂದು ಅರ್ಥವೂ ಬರುವಂತೆ ಬಳಸಿರುವ ಪದ. ಇವು ಲಘುಬರೆಹಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ.

ಒಲವಿಗ ನಾ ಸುಧಾ ಒಲವುಳ್ಳವ, ಪ್ರೀತಿಯುಳ್ಳವ. ‘….ಶಾಲೆ ಸಚಿವೆ…ಯವರು ಸಂಘ ಪರಿವಾರದವರ ಮನೋಭಿಲಾಶೆಗೆ ಪೂರಕವಾಗಿ ಇತಿಹಾಸ ಬರೆಯುವಂಥ ಕೇಸರಿ ಒಲವಿಗರನ್ನು ಆಯ್ಕೆ ಮಾಡಿರುವುದು…’. ಒಲವನ್ನು (ಆಶಕ್ತಿಯನ್ನು) ಉಳ್ಳವನು ಒಲವಿಗ. ಇಲ್ಲಿನಿರ್ದಿಷ್ಟ ನಿಲುವಿನಲ್ಲಿ ಆಸಕ್ತಿ ಪಡೆದವರನ್ನು ಸೂಚಿಸಲು ‘ಒಲವಿಗ’ ಪದ ರಚನೆ ಮಾಡಿದ್ದಾರೆ.

ಒಳಕುದಿತ ನಾ ಕನ್ನಡ ಪ್ರಭ ಕಾಣದಂತಿರುವ ಅಸಮಾಧಾನ. ‘ಶಂಕರನನ್ನು ಮಟ್ಟ ಹಾಕಲು ಕುಮಾರಸ್ವಾಮಿ ಒಳಕುದಿತ’. ಒಳನೋಟ ಮಾದರಿಯಲ್ಲಿ ಬಂದಿರುವ ಪದ.

ಒಳವಡಿಕೆ ನಾ ಸುಧಾ ಒಳಗೆ ಸೇರಿಸಬಹುದಾದುದು. ‘ವಿವಿಧ ಗಾತ್ರದ, ವಿವಿಧ ಮಾದರಿಯ ಸಿಲಿಕೋನ್ ಒಳವಡಿಕೆ (ಇಂಪ್ಲಾಂಟ್)ಗಳನ್ನು ಭಾರತದಲ್ಲೇ ತಯಾರಿಸಿ ರಫ್ತು ಮಾಡುವುದು ಗುರಿಯಾಗಿತ್ತು’. ‘ಅಳವಡಿಕೆ’ ಪದದ ಮಾದರಿಯಲ್ಲಿ ಬಂದಿರುವ ಪದ. ಇಂಗ್ಲಿಶಿನ ‘ಇಂಪ್ಲಾಂಟ್, ಎಂಬುದಕ್ಕೆ ಸಂವಾದಿಯೆಂಬುದಾಗಿ ಮೇಲಿನ ವಾಕ್ಯದಲ್ಲಿ ಗುರುತಿಸಬಹುದಾಗಿದೆ.

 

ಓಟುದಾದ ನಾ ತರಂಗ ಮತಚಾಲಯಿಸುವವ, ಮತದಾತ. ‘ಹಿಂದೆಲ್ಲಾ ಓಟುದಾರರಿಗೂ ಒಂದು ಕನಿಷ್ಠ ಅರ್ಹತೆ-ಎಂದರೆ ಒಂದು ನಿರ್ದಿಷ್ಟ ಕಸುಬು ಅಥವಾ ಆಸ್ತಿ ಅಥವಾ ವಿದ್ಯೆ ಬೇಕಾಗಿತ್ತು’. ‘ದಾರ’ ಪ್ರತ್ಯಯವನ್ನು ಅನೇಕ ಪದಗಳಲ್ಲಿ ಬಳಸಲಾಗುತ್ತಿದೆ. ಕೆಲವೊಮ್ಮೆ ‘ಗಾರ’ ಪ್ರತ್ಯಯವೂ ಬರುತ್ತದೆ. ಎಲ್ಲಿ ಯಾವುದು ಬರಬೇಕು ಎಂಬುದು ಇನ್ನು ನಿರ್ಧಾರವಾಗಿಲ್ಲ. ಇಂಗ್ಲಿಶ್ ಪದಗಳ ಜೊತೆಗೆ ಈಪ್ರತ್ಯಯಗಳ ಬಳಕೆ ನಡೆಯುತ್ತಿದೆ. ಉದಾ: ಬ್ಯಾಟುಗಾರ, ಗೋಲುಗಾರ ಇತ್ಯಾದಿ. ಇದೇ ಮಾದರಿಯಲ್ಲಿ ‘ಓಟುಗಾರ’ ಕೂಡಾ ಬಂದಿದೆ. ಆದರೆ ಈಗಾಗಲೇ ಕನ್ನಡದಲ್ಲಿ ‘ಮತದಾರ’, ‘ಮತದಾತ’ ಎಂಬ ಪದಗಳು ಚೆನ್ನಾಗಿ ಬಳಕೆಯಲ್ಲಿರುವುದನ್ನು ಕಾಣಬಹುದು.

 

ಔತಮ್ಯ ನಾ ಉದಯವಾಣಿ ಉತ್ತಮಿಕೆ. ‘ಕಲಾವಿದ ಔತಮ್ಯ ಹುಡುಕುತ್ತ ತನ್ನತನ ಪಡೆದುಕೊಳ್ಳಬೇಕೆಂದು ನುಡಿದ ಖ್ಯಾತ ಸರೋದ್ ವಾದಕ….’. ‘ಔಚಿತ್ಯ’ದ ಮಾದರಿಯಲ್ಲಿ ಬಂದಿರುವ ಹೊಸ ಪದ. ಆದರೂಬೇಗ ಅರ್ಥವಾಗುವುದು ಸಾಧ್ಯವಾಗದು. ಇಂಗ್ಲಿಶಿನ ‘ಎಕ್ಸ್‌ಲೆನ್ಸ್‌’ ಪದದ ಸಂವಾದಿಯಾಗಿರುವಂತಿದೆ.

ಔಷಧೋತ್ಪನ್ನ ಗು ಕನ್ನಡ ಪ್ರಭ ಔಷಧಕ್ಕೆ ಸಂಬಂಧಿಸಿ ಉತ್ಪನ್ನಗಳು. ‘ವಿಶ್ವವಾಣಿಜ್ಯ ಒಪ್ಪಂದಕ್ಕೆ ಬದ್ಧವಾಗಿರಲು ಭಾರತ ತೆಗೆದುಕೊಂಡ ನಿಲುವು ದೇಶದ ಹಲವು ಕ್ಷೇತ್ರಗಳಲ್ಲಿ ಅಸಮಾಧಾನ ಹುಟ್ಟಿಸಿದ್ದು, ಔಷಧೋತ್ಪನ್ನ ಉದಾ: ‘ಕೃಷ್ಣುತ್ಪನ್ನ’, ‘ಶಾಖೋತ್ಪನ್ನ’ ಇತ್ಯಾದಿ. ಆದರೆ ಇಲ್ಲೆಲ್ಲಾ ಮುಖ್ಯವಾದ ಒಂದು ವಸ್ತುವಿನಿಂದ ಉತ್ಪಾದಿಸಲಾದ ಎಂಬರ್ಥವಿದೆ. ಆದರೆ ಮೇಲಿನ ಪ್ರಯೋಗದಲ್ಲಿ ಔಷಧಕ್ಕಾಗಿ ಉಪಯೋಗಿಸುವ ಉತ್ಪನ್ನಗಳು ಎಂಬುದರ ಬದಲಾಗಿ ಔಷಧದಿಂದ ಉತ್ಪನ್ನವಾದ ಎಂಬ ಅರ್ಥ ಸ್ಫುರಿಸುತ್ತದೆ.