ಕಂಠದಾನಿ ನಾ ಪ್ರಜಾವಾಣಿ ಚಲನಚಿತ್ರದಲ್ಲಿ ಬೇರೋಬ್ಬರ ತುಟಿ ಚಲನೆಗೆ ಧ್ವನಿ ನೀಡುವವರು. ‘ಕಂಠದಾನಿಗಳಿಗೆ ಅವಕಾಶ ನೀಡಿ’. ನಾಮಪದಗಳನ್ನು ಇಕಾರಾಂತಗೊಳಿಸಿ ವ್ಯಕ್ತಿವಾಚಕಗಳನ್ನಾಗಿ ಮಾಡು ಕ್ರಿಯೆ ನಡೆಯುತ್ತಿದೆ. ಅಂತಹ ಒಂದು ಪ್ರಯೋಗ. ಮಾದರಿ: ನೇತ್ರದಾನಿ, ರಕ್ತದಾನಿ ಇತ್ಯಾದಿ.

ಕಂಪ್ಯೂಟರ್ಷಾಹಿ ನಾ ಪ್ರಜಾವಾಣಿ ಕಂಪ್ಯೂಟರ್ ಆಡಳಿತ; ತಂತ್ರಜ್ಞಾನದ ಆಡಳಿತ. ‘ಎರಡು ಶಿಕ್ಷಣ ನೀತಿಗಳ ನಡುವೆ ಸಾಂಪ್ರದಾಯಿಕ ಶಿಕ್ಷಣದ ಸ್ವರೂಪ, ಧ್ಯೇಯ ಮತ್ತು ಅವಶ್ಯಕತೆಗಳನ್ನು ಆರ್ಥಿಕ ಹೊರೆಯೆಂದೇ ತಿಳಿಯುತ್ತಿರುವ ಸರ್ಕಾರದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕಂಪ್ಯೂಟರ್‌ಷಾಹಿ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದೆ’. ‘ಶಾಹಿ’ ಪದಕ್ಕೆ ರಾಜ್ಯ (ಆಡಳಿತ) ಎಂಬ ಅರ್ಥವಿದೆ. ಕಾಲಕ್ಕನುಗುಣವಾಗಿ ಈ ಪದವನ್ನು ಬಳಸಿಕೊಂಡು ಪದ ಸೃಷ್ಟಿಮಾಡುತ್ತಲೇ ಬರಲಾಗುತ್ತಿದೆ. ಉದಾ: ರಾಜಶಾಹಿ, ವಸಾಹತುಶಾಹಿ, ಪ್ರಜಾಶಾಹಿ ಇತ್ಯಾದಿ. ಕಂಪ್ಯೂಟರ್‌ನ ಪ್ರಭಾವ ಎಲ್ಲೆಡೆ ಅಧಿಕಾವಾಗಿರುವ ಈಕಾಲಕ್ಕೆ ತಕ್ಕಂತೆ ಹುಟ್ಟಿಕೊಂಡ ಪದ.

ಕಂಠೋಕ್ತ ಗು ಲಂಕೇಶ ಪತ್ರಿಕೆ ಕಂಠದಲ್ಲಿ ಹೇಳಿದ. ‘ಆದಿಚುಂಚನಗಿರಿ ಆಣೆ… ಎಂದು ಕಂಠೋಕ್ತವಾಗಿ ಹೇಳಿದೊಡನೆ…. ಕರಗಿ ನೀರಾದರು’. ‘ವೇದೋಕ್ತ’, ‘ಶಾಸ್ತ್ರೋಕ್ಷ’ ಪದಗಳನ್ನು ಗಮನಿಸಿ ಹುಟ್ಟಿಸಿರುವ ಪದ. ಆದರೆ ಅಲ್ಲಿ ಶಾಸ್ತ್ರಗಳಲ್ಲಿ ಹೇಳಿದ, ವೇದಗಳಲ್ಲಿ ಹೇಳಿದ ಎಂಬರ್ಥ ಬರುವುದು. ಅಂದರೆ ಅಲ್ಲಿ ಒಂದು ದಾಖಲೆಯಲ್ಲಿ ಇರುವಂತೆ ಎಂಬುದಾಗಿ ಗೊತ್ತಾಗುತ್ತದೆ. ಕಂಠೋಕ್ತದಲ್ಲಿ ಅಂತಹ ಅರ್ಥವಿಲ್ಲ. ಕೇವಲ ಲಘು-ಹಾಸ್ಯ ಲೇಖನಗಳಲ್ಲಿ ಈ ಬಳಕೆ ಸಾಧ್ಯವಿರಬಹುದು.

ಕಟಬಿಟಿ ನಾ ಸಂಕ್ರಮಣ ಅಡ್ಡಿ, ತೊಂದರೆ. ‘ಸರಕಾರದ ಮಟ್ಟದಲ್ಲಿ ಅನೇಕ ನೆಲೆಗಳಲ್ಲಿ ಕಟಿಬಿಟಿ ಮಾಡುವ ಸಾಮರ್ಥ್ಯವೂ ಇವರಿಗುಂಟು’. ಇತ್ತೀಚಿನ ದಿನಗಳಲ್ಲಿ ಬಂದಿರುವ ಪ್ರಯೋಗ, ಕಸಿವಿಸಿ, ಕಿರಿಕಿ ಮುಂತಾದ ಪದಗಳ ಸಾದೃಶ್ಯದಿಂದ ಹುಟ್ಟಿಬಂದಿರುವ ಪದ.

ಕಡೆಗಣನೆ ನಾ ಉದಯವಾಣಿ ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು, ಗಮನಿಸದಿರುವುದು. ‘ನಿಗಮ ಮಂಡಲಿಗಳಿಗೆ ನೇಮಕ: ಮುಸ್ಲಿಮರ ಕಡೆಗಣನೆ ಆರೋಪ’. ಗಣನೆ ಪದ ಬಳಕೆಯಲ್ಲಿದ್ದರೂ ಮೇಲಿನ ಪ್ರಯೋಗ ಬಳಕೆಯಲ್ಲಿ ಕಡಿಮೆ. ಕಡೆಗಣಿಸು, ಕಡೆಗಾಣು ಬಳಕೆಯಲ್ಲಿದೆ. ಅದರಿಂದ ನಾಮರೂಪ ಸಾಧಿಸಿ ತಂದಿರುವ ಪದ.

ಕಣ್ಣಿರಿಕೆ ನಾ ಸಂಯುಕ್ತ ಕರ್ನಾಟಕ ನಿಗಾ, ಹತೋಟಿ, ಅಧಿಕಾರ ವ್ಯಾಪ್ತಿ. ಇಷ್ಟಕ್ಕೂ ವಿಧಾನಸೌಧದ ಉಸ್ತುವಾರಿಗಾಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನಿಯರ ಕಣ್ಣೀರಿಕೆಯಲ್ಲಿ ಒಂದು ಇಲಾಖೆಯೇ ಇದೆ’. ‘ಕಣ್ಣೀರಿಸು’ ಎಂಬುದಕ್ಕೆ ‘ನಿಗಾವಹಿಸು’ ಎಂಬುದಾಗಿ ಅರ್ಥ ಬರುತ್ತದೆ. ಅದರಿಂದ ಮೇಲಿನ ಪದವನ್ನು ಸೃಷ್ಟಿಸಿರುವಂತಿದೆ. ಕಣ್ಣರಿಕ ಬಳಕೆಯ ಪದ.

ಕತ್ತು ಕತ್ತು ನಾ ಉದಯವಾಣಿ ಸರಿಸಮ; ಸಮಬಲ. ‘ಮಧ್ಯಪ್ರದೇಶದಲ್ಲಿ ಮತ್ತು ಆಂಧ್ರ ಪ್ರದೇಶದ ತೆಲಂಗಾಣ ಪ್ರದೇಶದಲ್ಲಿ ಬಿಜೆಪಿ ಮತ್ತುಕಾಂಗ್ರೆಸ್ ಮಧ್ಯೆ ಕತ್ತುಕತ್ತಿನ ಹೋರಾಟವಿದೆ’. ಇಂಗ್ಲಿಶಿನ ಕೆಲವೊಂದು ಪದಗಳನ್ನು ರೂಪಾಂತರಿಸಿ ಅಥವಾ ಕನ್ನಡೀಕರಿಸಿ ಬಳಕೆ ಮಾಡುವ ರೂಢಿಯಿದೆ. ಕೆಲವೊಮ್ಮೆ ನೇರಾನುವಾದವೂ ಸಹ ಇರುತ್ತದೆ. ಆದರೆ ಅದರಲ್ಲಿ ಸ್ವಲ್ಪ ಮಟ್ಟಿನ ಅರ್ಥವಾದರೂ ಇರುತ್ತದೆ. ಮೇಲಿನ ಪ್ರಯೋಗದಲ್ಲಿ ಇಂಗ್ಲಿಶಿನ ‘ನೆಕ್ ಟು ನೆಕ್’ ಪದದ ಸಂವಾದಿಯಾಗಿ ‘ಕತ್ತುಕತ್ತು’ ಪ್ರಯೋಗವಾಗಿದೆ. ಉದ್ದೇಶಿತ ಅರ್ಥ ಸ್ಫುರಿಸುವುದು ಸಾಧ್ಯವಾಗದೇ ಹೋಗಬಹುದು. ಕನ್ನಡದಲ್ಲಿ ಸಮಬಲ, ಸಮಸಮ ಎಂಬ ಪ್ರಯೋಗಗಳಿವೆ.

ಕನಿಕರಣೀಯ ನಾ ಪುಸ್ತಕದಲ್ಲಿ ಬಳಕೆ ಕನಿಕರಕ್ಕೆ ಕಾರಣವಾಗುವಂತಹದು. ‘ಅವನಿದ್ದಾಗ ನಾವಿಲ್ಲ, ನಾವಿದ್ದಾಗ ಅವನಿಲ್ಲ. ಕಡಲೆಯಿದ್ದಾಗ ಹಲ್ಲಿಲ್ಲ. ಹಲ್ಲಿದ್ದಾಗ ಕಡಲೆಯಿಲ್ಲ ಎಂಬ ಗಾದೆಯಂತೆ ಮಂಜಣ್ಣ ಈಗ ಊಟಕ್ಕೆ ಹೊರಟ, ಮಂಜಣ್ಣು ಬೇಗ ಬಾ ಎಂದೆವು. ನಮ್ಮ ದನಿ ಕನಿಕರಣೀಯವಾಗಿತ್ತು’. ‘ಅನುಕರಣೀಯ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಕನಿಕರಕ್ಕೆ ‘ಈಯ’ ಸೇರಿಸಿದ ಬಗೆ ತಿಳಿಯದಾಗಿದೆ.

ಕಪ್ಪುಕಾರಕ ಗು ಜಾಹೀರಾತು ಕಪ್ಪು ಬಣ್ಣ ತರುವಂತಹ. ‘ನಿಮ್ಮ ಕೂದಲಿಗೆ ಒಂದು ನೈಜವಾದ ಬಣ್ಣವನ್ನು ನೀಡುವುದಕ್ಕಾಗಿ ಅವರಿ ಮತ್ತು ಭೃಂಗರಾಜ್‌ನಂತಹ ನೈಸರ್ಗಿಕ ಗಿಡಮೂಲಿಕಾ ಕಪ್ಪುಕಾರಕಗಳು ಡೈಯೊಂದಿಗೆ ಕೆಲಸ ಮಾಡುತ್ತವೆ’. ‘ಕಾರಕ’ ಪ್ರಯತ್ಯಕ್ಕೆ ತರುವಂತಹ,ಉಂಟು ಮಾಡುವಂತಹ ಎಂಬ ಅರ್ಥವಿದೆ. ಕಾರಕ್ಕೆ ವ್ಯಾಕರಣದಲ್ಲಿ ಕ್ರಿಯೆಗೆ ನಿಮಿತ್ತವಾಗಿರುವುದು ಎಂದಿದೆ. ಮೇಲಿನ ಪ್ರಯೋಗದಲ್ಲಿ ಕಪ್ಪು ತರುವಂತಹ ಎಂದಾಗುತ್ತದೆ.

ಕರಕುಶಲಿ ನಾ ಉದಯವಾಣಿ ಕಸೂತಿ, ಹೆಣಿಗೆ ಮುಂತಾದ ಕೈಕೆಲಸದಲ್ಲಿ ಪರಿಣತರಾದವರು, ವಸ್ತುಗಳನ್ನು ತಯಾರಿಸುವವರು. ‘ವಿವಿಧ ವಿನ್ಯಾಸದಲ್ಲಿದ್ದ ಈ ಕರಕುಶಲ ಉತ್ಪನ್ನಗಳು ಕಾಶ್ಮೀರ ಮತ್ತು ಹರಿಯಾಣದ ಕರಕುಶಲಿಗಳ ಕಲಾತ್ಮಕ ನೈಪುಣ್ಯತೆಯನ್ನು ಬಹು ಚೆನ್ನಾಗಿ ಬಿಂಬಿಸಿದವು’. ವಸ್ತುವಾಚಕಗಳನ್ನು ವ್ಯಕ್ತಿವಾಚಕವನ್ನಾಗಿ ಮಾಡಿರುವ ಒಂದು ಪ್ರಯೋಗ ಮಾದರಿ: ಜೀವ-ಜೀವ.

ಕರಮುಕ್ತಿ ನಾ ಸಂಯುಕ್ತ ಕರ್ನಾಟಕ ತೆರಿಗೆ ನೀಡಬೇಕಾಗಿಲ್ಲದಿರುವಿಕೆ, ‘ಈ ತಯಾರಿಕಾ ಕ್ಷೇತ್ರದಲ್ಲಿ ಸೋತು ಸುಣ್ಣಾದ ನೀತಿ ರಚನಾಕಾರರು ಈಗ ಖಾಸಗಿ ಪಾಲುದಾರಿಕೆಗೆ ಜೋತು ಬಿದ್ದಿದ್ದಾರೆ. ಖಾಸಗಿ ಪಾತ್ರಧಾರಿಗಳಿಗೆ ಕರಮುಕ್ತಿ, ಕೆಲವೊಂದು ಆಮದು ಕರ ವಿನಾಯ್ತಿ ಮುಂತಾದ ಆಮಿಷಗಳನ್ನು ಒಡ್ಡಲಾಗಿದೆ’. ಇಂಗ್ಲಿಶಿನ ‘ಟ್ಯಾಕ್ಸ್‌ಫ್ರೀ’ ಪದದ ಸಂವಾದಿ ಯಾಗಿ ತಂದಿರುವ ಪದ.

ಕರಲಾಭ ನಾ ಜಾಹೀರಾತು: ಕರ ನೀಡುವುದರಿಂದ ವಿನಾಯಿತಿ. ‘ನಿಮ್ಮ ವಿನಿಯೋಜನೆ ಕರಲಾಭಗಳೊಂದಿಗೆ ದಕ್ಷವಾಗಿರುವಂತೆ ಹಾಗೂ ನಗದೀಕರಣಗೊಳ್ಳುವಂತೆ ಮಾಡಿರಿ’. ಇಂಗ್ಲೀಶಿನ ‘ಟ್ಯಾಕ್ಸ್‌ಬೆನಿಫಿಟ್’ ಪದಗಳಿಗೆ ಸಂವಾದಿಯಾಗಿ ಸೃಷ್ಟಿಸಿರುವ ಪದ.

ಕರಾವಳಿಗ ನಾ ತರಂಗ ಕರಾವಳಿ ಪ್ರದೇಶದ ನಿವಾಸಿ. ‘ಆದರೆ ನೂರಾರು ವರ್ಷಗಳಿಂದ ತಂತಮ್ಮ ಬದುಕಿನ ತಾಯಿಬೇರನ್ನು ಊರಿದ ಕರಾವಳಿಗರನ್ನು ಅಷ್ಟು ಶೀಘ್ರ ಗತಿಯಲ್ಲಿ ಸ್ಥಳಾಂತರಿಸಲು ಸಾಧ್ಯವೇ? ‘ಇಗ’ ಪ್ರತ್ಯಯದೊಡನೆ ಶಬ್ದ ಸೃಷ್ಟಿ ಬಹಳ ಹಿಂದಿನಿಂದಲೂ ಎರಡು ಬಗೆಯಲ್ಲಿ ನಡೆಯುತ್ತಿದೆ: ಒಂದು ಪ್ರದೇಶ ಸೂಚಿಸಿ: ಬೆಂಗಳೂರಿಗ, ಹಳ್ಳಿಗ, ಪಟ್ಟಣಿಗ ಇತ್ಯಾದಿ ಎರಡು: ವೃತ್ತಿ ಸೂಚಿಸಿ: ಲೆಕ್ಕಿಗ, ಪ್ರವಾಸಿಗ ಇತ್ಯಾದಿ. ಮೇಲಿನದು ಮೊದಲಿನ ವರ್ಗಕ್ಕೆ ಸೇರುವ ಪದ.

ಕರಾಳಯಾದಿ ನಾ ಸಂಯುಕ್ತ ಕರ್ನಾಟಕ ಅಹಿತಕರ-ಅಸಭ್ಯ-ಭ್ರಷ್ಟ ಕೆಲಸಗಳನ್ನು ಮಾಡಿ ತಪ್ಪಿಗೆ ಒಳಗಾಗಿರುವ ಸಂಸ್ಥೆ-ವ್ಯಕ್ತಿಗಳ ಪಟ್ಟಿ, ‘ ಆ ಕರಾಳಯಾದಿಯಲ್ಲಿರುವ ಹೆಸರುಗಳನ್ನು ಆಗಿಂದಾಗ್ಗೆ ವಿಮರ್ಶಿಸಿ ವರ್ತಮಾನ ಸ್ಥಿತಿಗೂ ತರಲಾಯಿತು’. ‘ಕಪ್ಪು ಪಟ್ಟಿ’ ಎಂಬುದಕ್ಕೆ ಪರ್ಯಾಯವಾಗಿ ಸೃಷ್ಟಿಸಿರುವ ಪದ.

ಕರಗಳ್ಳತನ ನಾ ಸಂಯುಕ್ತ ಕರ್ನಾಟಕ ತೆರಿಗೆ ನೀಡದೆ ವಂಚಿಸುವುದು. ‘ಖಾಸಗಿ ವಲಯ ಕರಗಳ್ಳತನವಲ್ಲದೇ ಬ್ಯಾಂಕ್ ಗಳಿಂದ ತೆಗೆದುಕೊಂಡ ಸಾಲಗಳನ್ನು ಸಕಾಲಕ್ಕೆ ತೀರಿಸುವುದಿಲ್ಲ’. ‘ಕಳ್ಳತನ’ ಪದಕ್ಕೆ ಪೂರ್ವಪದವಾಗಿ ‘ಸರ’ ಬಂದು ಸರಗಳ್ಳತನ ಪದ ಸೃಷ್ಟಿಯಾಯಿತು. ಈಗ ಅದೇ ಮಾದರಿಯಲ್ಲಿ ಬಂದಿದೆ ಮೇಲಿನ ಪದ. ಆದರೂ ‘ತನ’ ಪ್ರತ್ಯಯಕ್ಕೆ ಗುಣವನ್ನು ಸೂಚಿಸುವ ‘ಗುಣ’ ಇಲ್ಲದೇ ಹೋಗಿರುವುದನ್ನು ಕಾಣಬಹುದು. ಏಕೆಂದರೆ ಕಳುವಿಗೆ ಸರವೂ ಒಂದೇ ಕರವೂ ಒಂದೆ. ಆದರೆ ಕಳುವಾದುದು ಏನು ಎಂಬುದನ್ನು ಪೂರ್ವಪದ ಸುಪುಷ್ಟಗೊಳಿಸುತ್ತದೆ.

ಕರೋತ್ತರ ಗು ಜಾಹೀರಾತು ನೀಡಿದ ನಂತರದ. ‘ಆಕರ್ಷಕ ಕರೋತ್ತರ ಲಾಭಗಳು’. ‘ಸ್ವಾತಂತ್ರ್ಯೋತ್ತರ’ ಮಾದರಿಯಲ್ಲಿ ಬಂದಿರುವ ಪದ. ಇದನ್ನು ‘ಆಫ್ಟರ್ ಟ್ಯಾಕ್ಸ್’ ಎಂಬ ಪದಗಳ ಸಂವಾದಿಯಾಗಿ ಬಳಸಲು ತಂದಿರುವಂತಿದೆ.

ಕರ್ಕಶತೆ ನಾ ಕನ್ನಡ ಪ್ರಭ ಒರಟಾದುದು; ಬಿರುಸಾದುದು; ಕೇಳಲಾಗದುದು. ‘ಗಂಧಗಾಳಿಯೂ ಇಲ್ಲದವರು ಸ್ಪರ್ಧಿಗಳಾಗಿಯೂ ಹಾಡುವ ಅವಕಾಶ ಗಿಟ್ಟಿಸುತ್ತಿರುವುದರಿಂದ ಹಾಡುವ ಕಾರ್ಯಕ್ರ ಕರ್ಕಶತೆಯ ಸಂತೆಯಾಗುತ್ತಿರುವುದಂತೂ ಸತ್ಯ. ‘ಗುಣವಾಚಕವನ್ನು ನಾಮಪದವನ್ನಾಗಿ ರೂಪಿಸಲು ‘ತೆ’ ಪ್ರತ್ಯಯ ಬಳಸುವುದಕ್ಕೆ ಮೇಲಿನ ಪ್ರಯೋಗ ಉದಾಹರಣೆ.

ಕರ್ತವ್ಯಬಾಹಿರ ಗು ಪ್ರಜಾವಾಣಿ ಕರ್ತವ್ಯಕ್ಕೆ ಅಭಿಮುಖವಾದ. ‘ಪ್ರಕೃತಿಯ ಇಂತಹ ಅಪರೂಪದ ದೃಶ್ಯಗಳು ಕರ್ತವ್ಯ ಬಾಹಿರನಾಗಿ ತನ್ನ ಜವಾಬ್ದಾರಿ ಮರೆತ ಮಾನವನ ಕಣ್ಣು ತೆರೆಸಬಹುದಲ್ಲ’. ‘ಕರ್ತವ್ಯಭ್ರಷ್ಟ’ ಅಥವಾ ‘ಕರ್ತವ್ಯಚ್ಯುತ’ ಎಂಬುದು ಇದುವರೆಗಿನ ಬಳಕೆ.

ಕರ್ನಾಟಕೇತರ ಗು ಉದಯವಾಣಿ ಕರ್ನಾಟಕಕ್ಕೆ ಸೇರಿದ, ಕರ್ನಾಟಕದ್ದಲ್ಲದ. ‘ರಾಜ್ಯದ ಇಂಜಿನೀಯರಿಂಗ ಕಾಲೇಜುಗಳಿಗೆ ಕರ್ನಾಟಕೇತರರ ಕೋಟಾದ ವಿದ್ಯಾರ್ಥಿಗಳ ಸೀಟು ಆಯ್ಕೆ ಪ್ರಕ್ರಿಯೆ… ಆರಂಭವಾಗಲಿದೆ’. ‘ಇತರ’ ಪದ ಬಳಸಿ ಪದಸೃಷ್ಟಿ ನಡೆಯುತ್ತಲೇ ಇದೆ. ಉದಾ:ಕನ್ನಡೇತರ, ಬ್ಯಾಂಕೇತರ ಇತ್ಯಾದಿ. ಆದರೆ ಪ್ರದೇಶವನ್ನು ಸೂಚಿಸುವ ಪದಗಳ ಜೊತೆ ‘ಇತರ’ ಬಳಕೆ ಇಲ್ಲವೆಂದೇ ಹೇಳಬಹುದು.

ಕಲಾಕಾರ ನಾ ಕರ್ಮವೀರ ಲಲಿತ ಕಲೆಯನ್ನು ಬಲ್ಲವನು. ‘ಕೆನರಾ ಬ್ಯಾಂಕ್ ಪ್ರಾಯೋಜಿತ ‘ಕಸದಿಂದ ರಸ’ ಮಾಡುವ ಬಗ್ಗೆ ಥೈಲಾಂಡ್ ಕಲಾಕಾರದಿಂದ ಮಹಿಳೆಯರಿಗೆ ತರಬೇತಿ ದೊರೆಯಿತು’. ‘ಕಲಾ’ ಸಂಸ್ಕೃತ ಪದಕ್ಕೆ ಕನ್ನಡ ಪ್ರತ್ಯಯ ಹತ್ತಿಸುವ ರೂಢಿಯಿಲ್ಲ. ಕನ್ನಡದಲ್ಲಿ ‘ಕಲಾ’, ‘ಕಲೆ’ಯಾಗುತ್ತದೆ. ಇದಕ್ಕೆ ಕನ್ನಡದ ತದ್ದಿತ ಪ್ರತ್ಯಯ ‘ಗಾರ’ ಹತ್ತುತ್ತದೆ. ಹಾಗಾಗಿ ‘ಕಲೆಗಾರ’ ಸರಿಯಾದ ಪ್ರಯೋಗವೆನಿಸುತ್ತದೆ. ಮಾದರಿ ಮಾಲೆ+ಗಾರ: ಮಾಲೆಗಾರ-ಕಾರ ಸಂಸ್ಕೃತ ಪ್ರತ್ಯಯವಾದ್ದರಿಂದ ಕಲಾ-ರೂಪ ಹಾಗೇ ಉಳಿದಿದೆ.

ಕಲಿಕಾರ್ಥಿ ನಾ ಕನ್ನಡ ಪ್ರಭ ಕಲಿಯಲು ಬಯಸುವವರು; ಕಲಿಯಲು ಬರುವವರು; ‘…ಸುಧಾರಿತ ಜೀವನ ನಡೆಸುವವರೆಲ್ಲರೂ ಅಲ್ಲಿ ಕಲಿಕಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಪರಿಸರವಿದ್ದು…’ ‘ಶಿಬಿರಾರ್ಥಿ’ ‘ವಿದ್ಯಾರ್ಥಿ’ ಮಾದರಿಯಲ್ಲಿ ಬಂದಿರುವ ಪದ.

ಕಲ್ಪಕತೆ ನಾ ಪ್ರಜಾವಾಣಿ ಕಲ್ಪನಾಶಕ್ತಿ, ರಚನೆ. ‘ಭೈರಪ್ಪನವರೇ ನಿಮ್ಮಬರವಣಿಗೆಯಲ್ಲಿ ಅನೇಕ ಕಡೆ ಕವಿ ಹೃದಯದ ಕಲ್ಪಕತೆ ಇದೆ, ಗಮನಿಸಿದ್ದೀರಾ?’ ಈಗಾಗಲೇ ಬಳಕೆಯಲ್ಲಿರುವ ‘ಕಲ್ಪನೆ’ ಎಂಬುದಕ್ಕೆ ‘ಕಲ್ಪಕ’ ‘ಚಿತ್ರಕ’ ಮಾದರಿಯಲ್ಲಿ ಎಂಬ ಗುಣವಾಚಕ ರೂಪಿಸಿಕೊಂಡು ‘ತೆ’ ಪ್ರತ್ಯಯದೊಡನೆ ಬಳಸಿದಂತಿದೆ.

ಕ್ಷಮತೆ ಪತ್ರ ನಾ ಉದಯವಾಣಿ ನಿರ್ಧರಿಸಿದ ಕೆಲಸಕ್ಕೆ ದೈಹಿಕ ಆರ್ಹತೆ ಇದೆಯೆಂದು ತಿಳಿಸುವ ಪತ್ರ. ‘ಗಾಯಗೊಂಡಿದ್ದ ಭಾರತ ವಿಕೆಟ್ ಕೀಪರ್ ನಯನ್ ಮೊಂಗಿಯಾ ತನ್ನ ಕ್ಷಮತೆ ಪತ್ರವನ್ನು ಭಾರತೀಯ ಕ್ರಿಕೆಟ್ ಮಂಡಳಿಗೆ ಕಳುಹಿಸಿದ್ದಾರೆ’. ಇಂಗ್ಲಿಶಿನ ‘ಫಿಟ್‌ನೆಸ್ ಸರ್ಟಿಫಿಕೆಟ್’ ಎನ್ನುವ ಪದಗಳಿಗೆ ಸಂವಾದಿಯಾಗಿ ಕನ್ನಡದಲ್ಲಿ ಮೇಲಿನ ಪ್ರಯೋಗ ಬಂದಿದೆ.

ಕ್ಷಮಾಮಯಿ ನಾ ಉದಯವಾಣಿ ತಪ್ಪನ್ನು ಕ್ಷಮಿಸುವವನು. ‘ಸ್ಫೀಕರ್, ಮತದಾರರು, ಭೂಮಿ ದಯಾಮಯಿಗಳು ಸಿಟ್ಟಾಗುವುದಿಲ್ಲ. ಈ ಮೂವರೂ ಕ್ಷಮಾಮಯಿಗಳು ಎಂದು ಸಿಪಿಐನ ಪುಟ್ಟಣ್ಣಯ್ಯ ಹೇಳಿದರು’. ‘ಕೆಲವೊಂದು ನಾಮಪದಗಳಿಂದ ವ್ಯಕ್ತಿ ಸೂಚಿ ಪದಗಳು ಸಾಧಿತವಾಗುತ್ತವೆ. ದಯಾಮಯ-ದಯಾಮಯಿ; ಆದರೆ ಕ್ಷಮಮಯ ಬಳಕೆಯಾದಂತಿಲ್ಲ. ಇನ್ನು ಮೇಲೆ ಬರಬಹುದು.

ಕಳಚಾಟ ನಾ ಚುಟುಕ ಕಳಚುವ, ಬಿಚ್ಚುವ ಕ್ರಿಯೆ. ‘ಥೈವಾನ್ ರಾಷ್ಟ್ರಕ್ಕೆ ಸೇರಿದ ರಾಜಕಾರಣಿಯೂ, ಹಿಂದೆ ನೈಟ್ ಕ್ಲಬ್‌ಗಳಲ್ಲಿ ವಸ್ತ್ರ ಕಳಚಾಟದ ಕ್ಯಾಬರೆ ನೃತ್ಯವನ್ನು ಆಡಿಕೊಂಡಿದ್ದವರೂ ಆದ ವೂಚೂ ಶಾವೆಟಾನ್ ತಾವು ಹಿಂದೆಯೇ ನುಡಿದಿದ್ದಂತೆ ಇತ್ತೀಚೆಗೆ ನಗ್ನರಾಗಿದ್ದಂತೆಯೇ ವಿವಾಹವಾದರು’. ‘ಆತ’ ಎಂಬ ಪದವನ್ನು ಇತರ ಪದಗಳ ಜೊತೆ ಸೇರಿಸಿ ಅನೇಕ ಪದಗಳನ್ನು ಬಳಸಲಾಗುತ್ತಿದೆ. ಉದಾಹರಣೆಗೆ ನೂಕಾಟ, ತಳ್ಳಾಟ, ಓಡಾಟ ಇತ್ಯಾದಿ. ಇಲ್ಲೆಲ್ಲಾ ‘ಆಟ’ ಕ್ರೀಡೆ ಎಂಬ ರೀತಿಯಲ್ಲಿ ಬಳಕೆಯಾಗುವುದಿಲ್ಲ. ಆದರೆ ಮೇಲಿನ ಪದದಲ್ಲಿ ಕಳಚುವ ಆಟ ಎಂಬಂತೆ ಬಳಕೆಯಾಗಿದೆಯೇ ಎಂಬ ಅನುಮಾನ ಬರುತ್ತದೆ. ಏಕೆಂದರೆ ತಳ್ಳಾಟ-ತಳ್ಳಾಡು ನೂಕಾಟ-ನೂಕಾಡು ಮಾದರಿಯಲ್ಲಿ ಕಳಚಾಟ-ಕಳಚಾಡು ಸಾಧ್ಯವಿಲ್ಲ. ಮೇಲಿನ ಪದಕ್ಕೆ ಬಿಚ್ಚಾಟ ಎಂಬ ಪರ್ಯಾಯ ಪದವೂ ಇದೆ.

ಕಳ್ಳಸಾಗಣಿಗೆ ನಾ ಉದಯವಾಣಿ ಕಳ್ಳತನದಿಂದ ಸಾಗಿಸುವವನು. ‘ಬಾಂಗ್ಲಾ ಕಳ್ಳಸಾಗಣಿಗ ಗಸ್ತು ಪಡೆಗೆ ಬಲಿ’. ವ್ಯಕ್ತಿಸೂಚಕ ಪದ ಸೃಷ್ಟಿ ‘ಇಗ’ ಪ್ರತ್ಯಯದೊಡನೆ ನಡೆಯುತ್ತದೆ. ಉದಾ: ಪಯಣ-ಪಯಣಿಗ. ಆದರೆ ‘ಕಳ್ಳಸಾಗಣೆಗಾರ’ ಎಂಬ ಪದ ಚಲಾವಣೆಯಲ್ಲಿದೆ.

ಕಾಡುಗಾರಿಕೆ ನಾ ಜಾಹೀರಾತು ಮರ-ಕಾಡು ಬೆಳೆಸುವ ಉದ್ಯಮ. ‘ಸರಕಾರವು ಪ್ರಾಯೋಜಿಸಿದ ಕಾಡುಗಾರಿಕೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಅನುಭವದೊಂದಿಗೆ ಟೀಕ್ ಬೆಳೆಯ ಬೆಳವಣಿಗೆಯಲ್ಲಿ ಯಥೇಷ್ಟ ಅನುಭವವಿರುವ ವ್ಯಕ್ತಿಗಳನ್ನು ತನ್ನ ನೌಕರವರ್ಗದಲ್ಲಿ ಸೇರಿಸಿಕೊಳ್ಳುತ್ತಿದೆ’. ‘ಕೈಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ’ ಮಾದರಿಯಲ್ಲಿ ಬಂದಿರುವ ಪದ. ಈಗ ಮರಬೆಳೆಸುವ ಕೆಲಸವೂ ಸಹಾ ಒಂದು ಉದ್ಯಮದ ಮಟ್ಟಕ್ಕೆ ಏರಿರುವುದನ್ನು ಇಲ್ಲಿ ಕಾಣಬಹುದು.

ಕಾನೂನಾತ್ಮಕ ಗು ಸಂಯುಕ್ತ ಕರ್ನಾಟಕ ಕಾನೂನಿನ ಮೂಲಕ ಕೊಡಲಾಗಿರುವ. ‘ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಗತಿಗಳ ಪ್ರವೇಶಕ್ಕೆ ಮೀಸಲು ವರ್ಗದವರಿಗೆ ಸಾಮಾನ್ಯವರ್ಗದವರಿಗಿಂತ ಅತ್ಯಂತ ಕಡಿಮೆ ಅಂಕ ನಿಗದಿ ಮಾಡಿರುವ ಕಾನೂನಾತ್ಮಕ ಕ್ರಮವನ್ನು ರದ್ದು ಪಡಿಸಿದೆ’. ‘ಶಾಸನಾತ್ಮಕ’ ಎಂಬ ಪದ ಈಗ ಬಳಕೆಯಲ್ಲಿದೆ. ವ್ಯಾಕರಣ ಬದ್ಧವೂ ಹೌದು. ‘ಕಾನೂನ್’ ಪರ್ಸೋ ಅರೇಬಿಕ್ ಪದ. ಅದರೊಡನೆ ‘ಆತ್ಮಕ’ ಸಂಸ್ಕೃತ ಪ್ರತ್ಯಯ ಸೇರಿ ರೂಪುಗೊಂಡ ಪದ.

ಕಾನೂನು ಮುರುಕ ನಾ ಸಂಯುಕ್ತ ಕರ್ನಾಟಕ ಕಾನೂನನ್ನು ಉಲ್ಲಂಘಿಸುವವರು. ‘ಕಾನೂನು ಮುರುಕರಿಗೆ ಸಿಂಹಸ್ವಪ್ನ ವಾಗಿ ಸಮಾಜಕ್ಕೆ ಮಾದರಿಯಾಬೇಕಾದ ಪೊಲೀಸ್ ಪೇದೆಯೇ ಅಮಾಯಕ ಬಾಲಕರಿಗೆ ಅಡ್ಡಹಾದಿ ಹಿಡಿದು…’. ‘ಮನೆ ಮುರುಕ’ ಪದದ ಮಾದರಿಯಲ್ಲಿ ಬಂದಿರುವ ಪದ. ‘ಮುರುಕ’ ಪದಕ್ಕೆ ಮುರಿಯುವವರು ಎಂದಿದ್ದುದು ಈಗ ವಿಸ್ತೃತಗೊಂಡು ಉಲ್ಲಂಘಿಸುವವರು ಎನ್ನುವ ಅರ್ಥವೂ ಬಂದಿದೆ.

ಕಾನೂನೋಲ್ಲಂಘನೆ ನಾ ಕನ್ನಡ ಪ್ರಭ ಕಾಯಿದೆ, ನಿಯಮಗಳನ್ನು ಮುರಿಯುವುದು. ‘ವಿಶ್ವವಿದ್ಯಾಲಯಗಳಲ್ಲಿರುವ ಅಧಿಕಾರಶಾಹಿತ್ವ, ವೃತ್ತಿಮಾತ್ಸರ್ಯ, ಭ್ರಷ್ಟಾಚಾರ, ಕೃತಿಚಾರ್ಯ, ಕಾನೂನೋಲ್ಲಂಘನೆ, ಉದಾಸೀನತೆ, ರೂಢಿಗತ ಮೌಢ್ಯಗಳು…’ ಪದರಚನೆಯಾಗುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಲಾಗುತ್ತದೆ. ಆದರೆ, ಇತ್ತೀಚೆಗೆ ಆ ನಿಯಮಗಳೆಲ್ಲಾ ಅಷ್ಟಾಗಿ ಪಾಲನೆಯಾಗುತ್ತಿಲ್ಲ. ಮೇಲಿನ ಪ್ರಯೋಗದಲ್ಲಿ ‘ಕಾನೂನ್’ ಪರ್ಸೋ ಅರೇಬಿಕ್, ಉಲ್ಲಂಘನೆ ಸಂಸ್ಕೃತ ಮೂಲದ ಪದ. ಇವೆರಡೂ ಸೇರಿ ಸಂಸ್ಕೃತ ಸಂಧಿ ನಿಯಮದಂತೆ ಪದರಚನೆಯಾಗಿದೆ.

ಕಾಯಿಲೆಪೀಡಿತ ಗು ಜಾಹೀರಾತು ರೋಗಕ್ಕೆ ತುತ್ತಾದ; ಕಾಯಿಲೆಯಿಂದ ಕೂಡಿದ. ‘ಕಂಪೆನಿ, ಅದರ ಅಂಗ ಸಂಸ್ಥೆ ಹಾಗೂ ಸಂಯೋಜಿತ ಕಂಪನಿಗಳು ಯಾವುದಾದರೂ ಇದ್ದರೆ, ಅವರ ಕಾಯಿಲೆಪೀಡಿತ, ದುರ್ಬಲ, ಅಶಕ್ತಯಾ ಮೃತ ಉದ್ಯೋಗಿಗಳಿಗೆ…’ ಅನ್ಯದೇಶೀಯ ಪದ ‘ಕಾಯಿಲೆ’ಗೆ ಸಂಸ್ಕೃತದ ಗುಣವಾಚಕ ‘ಪೀಡಿತ’ ಸೇರಿದೆ. ಸಾಮಾನ್ಯವಾಗಿ ಇಂತಹ ರೂಪಗಳು ಕಡಿಮೆ. ಸಂಸ್ಕೃತಕ್ಕೆ ಸಂಸ್ಕೃತವೇ ಸೇರಿದ ‘ರೋಗ ಪೀಡಿತ’ ಪದ ಬಳಕೆಯಲ್ಲಿದೆ. ಇತ್ತೀಚೆಗೆ ಇಂತಹ ರಚನೆಗಳು ಬರುತ್ತಿವೆ.

ಕಾಲಗಟ್ಟಲೆಕನ್ನಡ ಪ್ರಭ ಹಲವು ಕಾಲ; ಹಲವು ಗಂಟೆ. ‘ಎಲ್ಲೂ ನಿಲ್ಲದೆ ನಿರಂತರವಾಗಿ ಆಕಾಶದ ನಿಗೂಢ ಬ್ರಹ್ಮಾಂಡದ ಒಡಲ ಗರ್ಭದ ಬಯಲ ಕಡೆಗೆ ಒಂದೇ ಸಮನೆ ಕಾಲಗಟ್ಟಲೆ ಹಾಡುತ್ತಾ ಮೇಲಾರುತ್ತ ಕುದಿಯುತ್ತಾ… ‘ಗಂಟೆಗಟ್ಟಲೆ’, ‘ದಿನಗಟ್ಟಲೆ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಇಲ್ಲೆಲ್ಲಾ ಒಂದು ಅವಧಿಯನ್ನು ಸೂಚಿಸುವ ಪದಗಳಿವೆ. ಆದರೆ ಮೇಲಿನ ಪ್ರಯೋಗದಲ್ಲಿ ಹಾಗಿಲ್ಲ.

ಕಾಲೀನ ಗು ತರಂಗ ಕಾಲದ. ‘ಬಾಲಾಪುರದಲ್ಲಿ ಕಂಡುಬಂದ ಅತ್ಯಂತ ವಿಶೇಷ ಸಂಗತಿಯೆಂದರೆ ಕೆಳಪದರದಲ್ಲಿ ಕಂದಕಗಳನ್ನು ಅಗೆದಾಗ ಉತ್ತರ ಹರಪ್ಪಾಕಾಲೀನ ಹೊಳೆಯುವ ಕೆಂಪು ಮಣ್ಣಿನ ಪಾತ್ರೆಗಳು….’ ಸಾಮಾನ್ಯವಾಗಿ ‘ಕಾಲೀನ’ ಪದ ಕೇವಲ ‘ಸಮಕಾಲೀನ’ ಎಂಬುದರಲ್ಲಿ ಮಾತ್ರ ಬಳಕೆ ಯಾಗುತ್ತಿತ್ತು. ಬೇರೆಡೆಯಲ್ಲೆಲ್ಲಾ ‘ಕಾಲದ’ ಎಂಬ ಪದವೇ ಬಳಕೆಯಾಗುತ್ತಿತ್ತು.

ಕಾಲುಡುಗೆ ನಾ ಉದಯವಾಣಿ ಕಾಲಿಗೆ ಧರಿಸುವ ಬಟ್ಟೆ; ಕಾಲು ಚೀಲ. ‘ರಿ ಬೋಕ್ ಇಂಡಿಯಾ ಇತ್ತೀಚೆಗೆ ಹೈಡ್ರೋಮೂವ್ ಎಂಬ ಆರಾಮ ಹಾಗೂ ಉಷ್ಣ ನಿಯಂತ್ರಣದ ಕಾಲುಡುಗೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ’. ‘ಉಡುಗೆ’ ಪದಕ್ಕೆ ಧರಿಸುವ ಬಟ್ಟೆ ಎಂದರ್ಥವಿದೆ. ಈಗ ವಿಶೇಷ ಸಂದರ್ಭಕ್ಕೆ ಬಟ್ಟೆಗಳನ್ನು ತಯಾರು ಮಾಡಲಾಗುತ್ತಿದೆ. ಉದಾ: ಈಜುಡುಗೆ; ಮೇಲುಡುಗೆ ಇತ್ಯಾದಿ. ಮೇಲಿನ ಪದ ಒಂದು ಅಂಗಕ್ಕೆ ಸೀಮಿತವಾಗಿ ಬಂದಿದೆ.

ಕಾಲೋಚಿತ ಗು ಕರ್ಮವೀರ ಕಾಲಕ್ಕೆ ತಕ್ಕ. ‘ಬೆಲೆ ಏರಿಕೆಯನ್ನು ಅಳೆಯಲು ಸರಕಾರ ಬಳಸಿಕೊಳ್ಳುತ್ತಿರುವ ಸಗಟು ಬೆಲೆ ಸೂಚ್ಯಂಕ ಮತ್ತು ಗ್ರಾಹಕ ಬೆಲೆ ಸೂಚ್ಯಂಕಗಳೆರಡೂ ದೋಷಪೂರ್ಣವಾಗಿವೆ. ಅವು ಕಾಲೋಚಿತವಾಗಿಲ್ಲ’. ‘ಸಮಯೋಚಿತ’ ಎಂಬುದು ಇದುವರೆಗೆ ಬಳಕೆಯಲ್ಲಿದ್ದ ಪದ. ಇದು ಆ ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ಸರಿಯಾದ ಕ್ರಮ ಎಂಬರ್ಥ ನೀಡುತ್ತದೆ. ಮೇಲಿನ ಉದಾಹರಣೆಯಲ್ಲಿ ಈ ಕಾಲಕ್ಕೆ ತಕ್ಕಂತೆ ಎಂಬರ್ಥ ಬರುವಂತಿದೆ.

ಕಾವೀಕರಣ ನಾ ಕನ್ನಡಪ್ರಭ ಹಿಂದೂ ಧಾರ್ಮಿಕ ಚೌಕಟ್ಟಿಗೆ ಒಳಪಡಿಸುವುದು. ‘ಹೀಗಿದ್ದರೂ ಈ ಮಹಿಳೆ ‘ಕಾವೀಕರಣ’ ವಿರುದ್ಧ ಬಂಧನಕ್ಕೆ ಒಳಗಾಗುತ್ತಾರೆ. ಧರ್ಮಯುದ್ಧವನ್ನೇ ಸಾರುತ್ತಾರೆ’ ಇಂಗ್ಲಿಶಿನ ‘ಐಸೇಶನ್’ಗೆ ಸಂವಾದಿಯಾಗಿ ಕನ್ನಡದಲ್ಲಿ ‘ಈಕರಣ’ ಪ್ರತ್ಯಯ ಬಳಕೆಯಾಗುತ್ತದೆ. ಇಂಗ್ಲಿಶಿನಲ್ಲಿ ‘ಸ್ಯಾಫ್ರನೈಸೇಶನ್’ ಎಂಬ ಪದ ಇತ್ತೀಚೆಗೆ ಬಳಕೆಗೆ ಬಂದಿದ್ದು ಅದಕ್ಕೆ ಸಂವಾದಿಯಾಗಿ ಮೇಲಿನ ಪ್ರಯೋಗ ಬಂದಿದೆ. ಆದರೆ ಇದಕ್ಕೆ ‘ಕೇಸರೀಕರಣ’ ಎಂಬುದಾಗಿಯೂ ಪದ ಬಳಕೆಯಾಗಿರುವುದನ್ನು ಇದೇ ಅಂಕಣದಲ್ಲಿ ಮುಂದೆ ಕಾಣಬಹುದು. ಇಂಗ್ಲಿಶಿನ ಒಂದೇ ಪದಕ್ಕೆ ಕನ್ನಡದಲ್ಲಿ ಎರಡು ರೀತಿಯ ಪ್ರಯೋಗವಾಗಿರುವುದನ್ನು ಗಮನಿಸಬಹುದು.

ಕ್ರೀಡಾಕಾರ ನಾ ಸಂಯುಕ್ತ ಕರ್ನಾಟಕ ಆಟಗಾರ. ‘ಆದರೇನು? ಈ ಕ್ರೀಡಾಕಾರನ ಚಿತ್ರ ತೆಗೆಯಲು ಹೋದ ಛಾಯಾಗ್ರಾಹಕರಿಗೆ ನೌಕರಿ ಕೊಡಿಸೆಂದು ದುಂಬಾಲು ಬಿದ್ದ’. ‘ಕಾರ’, ‘ಗಾರ’ ಪ್ರತ್ಯಯದ ಬಳಕೆಯ ಬಗ್ಗೆ ನಿರ್ದಿಷ್ಟತೆ ಇನ್ನೂ ಬಂದಿಲ್ಲವಾದರೂ, ಕೆಲವೊಂದು ಕಡೆ ಅದರ ಬಳಕೆ ಸೂಕ್ತವಾಗಿ ಕಾಣಲಾರದು. ಅರ್ಥಸ್ಪಷ್ಟತೆ ತೊಡಕಾಗಬಹುದು. ಮೇಲಿನ ಪ್ರಯೋಗವನ್ನು ನೋಡಿದಾ ಚೌಕಾಕಾರ, ವೃತ್ತಕಾರ ಮಾದರಿಯ ಪದಗಳು ನೆನಪಿಗೆ ಬಂದು ‘ಆಕಾರ’ ಉತ್ತರ ಪದವಾಗಿಬಹುದೇ ಎಂಬ ಗೊಂದಲವುಂಟಾಗಬಹುದು. ಸಂಸ್ಕೃತದ ‘ಕ್ರೀಡಾ’ ಕನ್ನಡಕ್ಕೆ ಬಂದಾಗ ‘ಕ್ರೀಡೆ’ ಆಗುತ್ತದೆ. ಆಗ ಬೇಟೆ+ಗಾರ ಮಾದರಿಯಲ್ಲಿ ಕ್ರೀಡೆಗಾರ ಎಂದಾಬಹುದೇನೋ! ಈಗಾಗಲೇ ಕ್ರೀಡಾಳು, ಆಟಾಳು ಎಂಬ ಪದಗಳು ಬಳಕೆಯಲ್ಲಿವೆ.

ಕ್ರೀಡಾಕೃಷಿ ನಾ ಪ್ರಜಾವಾಣಿ ಆಟಗಳ ಕಲಿಕೆ. ‘ಆದರೆ ಗುರುತಿಸಬೇಕಾದ ಅಂಶವೆಂದರೆ ಕ್ರೀಡಾಕೃಷಿಯ ಮೂಲಕ ವಿದ್ಯಾಕ್ರಾಂತಿಯಾಗಿದ್ದು….’. ‘ಕೃಷಿ’ ಎಂಬ ಪದ ಬೇಸಾಯಕ್ಕೆ ಸಂಬಂಧಪಟ್ಟದ್ದಾದರೂ ಇಂದು ಇನ್ನಿತರ ಕ್ಷೇತ್ರಗಳಲ್ಲಿಯೂ ಬಳಕೆಯಾಗುತ್ತಿದೆ. ಉದಾ. ಸಾಹಿತ್ಯಕೃಷಿ. ಈ ಪದವನ್ನು ಅನುಸರಿಸಿ ಮೇಲಿನ ಪ್ರಯೋಗ ಬಂದಿದೆ.

ಕ್ರೀಡೋತ್ಸಾಹಿ ನಾ ಸುಧಾ ಆಟ ನೋಡುವುದರಲ್ಲಿ ಉತ್ಸಾಹ ಇರುವವ, ಆಟದಲ್ಲಿ ಆಸಕ್ತಿ ಇರುವವ. ‘ಪುಟ್‌ಬಾಲ್ ಮ್ಯಾಚ್ ಆರಂಭವಾಗಿ ಇಪ್ಪತ್ತು ನಿಮಿಷಗಳೇ ಕಳೆದವು. ಒಬ್ಬ ಕ್ರೀಡೋತ್ಸಾಹಿ ಅವಸರದಿಂದ ಪ್ರೇಕ್ಷಕರ ಗ್ಯಾಲರಿಗೆ ಬಂದು, ಒಂದು ಸೀಟನ್ನು ಆಕ್ರಮಿಸಿ ಕುಳಿತುಕೊಂಡ’. ಕ್ರೀಡಾ+ಉತ್ಸಾಹಿ ಎಂಬ ಎರಡು ಪದಗಳು ಸೇರಿ ಸಂಧಿ ಕ್ರಿಯೆಗೆ ಅನುಗುಣವಾಗಿ ಬಂದಿರುವ ಪದ.

ಕುಟುಂಬಶಾಹಿ ನಾ ಕನ್ನಡ ಪ್ರಭ ಕುಟುಂಬದ ಸದಸ್ಯರ ಆಡಳಿತ. ‘ಕುಟುಂಬಶಾಹಿ ಪರ-ವಿರೋಧಿ ಧೂಳು ಕವಿದ ಹಾಸನ’. ಹಿಂದೆಲ್ಲಾ ‘ವಂಶಪಾರಂಪರ್ಯ’ ಎಂಬ ಪದವನ್ನು ಬಳಸಲಾಗುತ್ತಿತ್ತು ಅಧಿಕಾರಶಾಹಿ, ಸಾಮ್ರಾಜ್ಯಶಾಹಿ, ರಾಜ್ಯಶಾಹಿ ಎಂಬ ಪದಗಳ ಆಧಾರದ ಮೇಲೆ ಕುಟುಂಬದವರ ಆಡಳಿತ ಎನ್ನುವ ಅರ್ಥದಲ್ಲಿ ಬಳಕೆಯಾಗಿರುವ ಪದ.

ಕುಡುಕಿ ನಾ ಕರ್ಮವೀರ ಮದ್ಯಪಾನವನ್ನು ಚಟವಾಗಿ ಉಳ್ಳ ಹೆಂಗಸು. ‘ಹೆಂಡತಿ ಕುಡುಕಿಯಾದರೆ ಗಂಡನ ಗತಿ ಏನು?’. ಸ್ತ್ರೀವಾಚಕ ಪದ ಸೃಷ್ಟಿ ಮಾಡಲು ಮೂಲಪದದ ಕೊನೆಯ ಸ್ವರವನ್ನು ‘ಇ’ ಕಾರಾಂತಗೊಳಿಸುವುದು ಒಂದು ವಿಧಾನ. ಉದಾ: ಕುರುಡ-ಕುರುಡಿ ಈ ಮಾದರಿಯಲ್ಲಿ  ಬಂದಿರುವ ಹೊಸ ಪದ. ಆದರೂ ಸಮಾಜದ ಸಂಸ್ಕೃತಿಯನ್ನು ಭಾಷೆಯೂ ಬಿಂಬಿಸುತ್ತದೆ ಎಂಬುದಕ್ಕೆ ಮೇಲಿನ ಪದ ಇದುವರೆವಿಗೂ ಸೃಷ್ಟಿಯಾಗದಿರುವುದೇ ಸಾಕ್ಷಿ.

ಕುಪೋಷಣೆ ನಾ ಸುಧಾ ಸರಿಯಾದ ರೀತಿಯ ಪೋಷಣೆ ಇಲ್ಲದಿರುವುದು ‘ಧಾನ್ಯಗಳ ಜತೆಜತೆಗೆ ಅಷ್ಟಿಷ್ಟು ತರಕಾರಿ, ಹಾಲು ಹಣ್ಣುಗಳಿದ್ದರೆ ಕುಪೋಷಣೆ ನಿವಾರಣೆ ಸಾಧ್ಯವಿದೆ’, ‘ನ್ಯೂನಪೋಷಣೆ’ ಎಂಬ ಪದ ಬಳಕೆಯಾಗಿದೆ. ಮೇಲಿನ ಪ್ರಯೋಗಕ್ಕಿಂತ ಇದು ಸೂಕ್ತ ಅರ್ಥವನ್ನು ನೀಡಬಲ್ಲದು. ‘ಕು’ ಎಂಬ ಪೂರ್ವಪ್ರತ್ಯಯ ಕೆಟ್ಟ ಎಂಬರ್ಥವನ್ನು ನೀಡುತ್ತದೆ. ಆದರೆ ಇಲ್ಲಿ ‘ಇಲ್ಲ’ ಎನ್ನುವುದನ್ನು ಸೂಚಿಸಬೇಕಾದುದರಿಂದ ‘ನ್ಯೂನ’ ಎಂಬುದು ಸೂಕ್ತ ಬಳಕೆ ಎನಿಸುತ್ತದೆ.

ಕುಮೈತ್ರಿ ನಾ ಸಂಯುಕ್ತ ಕರ್ನಾಟಕ ಹೀನಸಂಗ; ತಕ್ಕುದಲ್ಲದ ಮೈತ್ರಿ/ಸ್ನೇಹ. ಅಧಿಕೃತ ಪ್ರಕಟಣೆ ಹೊರಡುವುದಕ್ಕೆ ಮೊದಲೇ ದೊಡ್ಡ ಕಂಪನಿಗಳಿಗೆ ವಿಷಯ ತಿಳಿದಿರುವುದಾದರೆ ಯು.ಟಿ.ಐ. ಹಾಗೂ ದೊಡ್ಡ ಕಂಪನಿಗಳ ನಡುವೆ ಕುಮೈತ್ರಿ ಇದೆಯೆಂದು ಅರ್ಥವಾಗುತ್ತದೆ.’ ಕು’ ಉಪಸರ್ಗಹೊಂದಿದ ನಾಮಪದಗಳು ಕೆಟ್ಟ, ಹೀನ ಎಂಬರ್ಥದೊಡನೆ ಬಳಕೆಯಾಗುತ್ತದೆ. ಇದೇ ಅರ್ಥದಲ್ಲಿ ಈಗ ‘ಅಪವಿತ್ರ ಮೈತ್ರಿ’ ಎಂಬ ಪದ ಬಳಕೆಯಲ್ಲಿದೆ.

ಕುರುಡತ್ವ ನಾ ಜಾಹೀರಾತು ಕುರುಡು; ಕಣ್ಣು ಕಾಣಸಿದಿರುವುದು. ‘ದುರದೃಷ್ಟಕರ ವಿಷಯವೆಂದರೆ ನಮ್ಮ ದೇಶದಲ್ಲಿ ೨೦ ಲಕ್ಷಕ್ಕಿಂತಲೂ ಹೆಚ್ಚು ಜನ ಕಾರ್ನಿಯಾದ ಕುರುಡತ್ವಕ್ಕೆ ವಶರಾಗಿದ್ದಾರೆ’. ‘ಅಂಧತ್ವ’ ಬಳಕೆಯಲ್ಲಿರುವ ಪದ. ಸಂಸ್ಕೃತದ ಪದರಚನೆಯ ನಿಯಮವನ್ನು ಬಳಸಲಾಗಿದೆ. ಇಲ್ಲಿ-ತ್ವ ಪ್ರತ್ಯಯವನ್ನು ‘ಕುರುಡ’ ಪದಕ್ಕೆ ಹತ್ತಿಸಲಾಗಿದೆ. ಇದೊಂದು ವಿಚಿತ್ರ ರಚನೆ. ಅಲ್ಲದೆ ವ್ಯಾಕರಣ ಬದ್ಧವಾಗಿಯೂ ಇಲ್ಲ. ಮೇಲಿನ ಉದಾಹರಣೆಯಲ್ಲಿ ‘ಕುರುಡುತನ’ ಸರಿಯಾದ ಪ್ರಯೋಗ ವಾಗುತ್ತಿತ್ತು. ಏಕೆಂದರೆ ‘ತನ’ ಕನ್ನಡ ಪ್ರತ್ಯಯ.

ಕುವೈದ್ಯ ನಾ ಪ್ರಜಾವಾಣಿ ಢೋಂಗಿ ವೈದ್ಯ, ಅರ್ಹತೆಯಿಲ್ಲದೆ ಚಿಕಿಸೆ ಮಾಡುವವ. ‘ಸಮಾಜಕ್ಕೆ ಕಂಟಕಪ್ರಾಯರಾಗಿರುವ ಕುವೈದ್ಯರನ್ನು ಗುರುತಿಸಿ ಅವರ ಪೀಡೆಯಿಂದ ಸಮಾಜವನ್ನು ಮುಕ್ತಗೊಳಿಸಿದರೆ ವೈದ್ಯ ಸಹೋದರ ಯುಮರಾಜನಿಗೆ ಕೊಂಚ ವಿಶ್ರಾಂತಿಯಾದರೂ ದೊರಕಬಹುದು’. ‘ಕು’ ಉಪಸರ್ಗದೊಡನೆ ಪದಸೃಷ್ಟಿ ಕಡಿಮೆ. ಮೇಲಿನ ಪದ ಇಚ್ಛಿತಾರ್ಥವನ್ನು ನೀಡುವುದು ಸ್ವಲ್ಪ ಕಷ್ಟ.

ಕ್ಷುದ್ರಾತಿಕ್ಷುದ್ರ ಗು ಹಾಯ್ ಬೆಂಗಳೂರ್ ಅತಿ ಹೀನವಾದ; ಅತ್ಯಂತ ಕೀಳಾದ; ಕಟ್ಟಕಡೆಯ ‘…ಕಡೆಗೆ ಎಲ್ಲರನ್ನು ನಡುಗಿಸುವಂಥ ಒಂದು ಹೆಸರು ಯಾವುದನ್ನೂ ಅನುಭವಿಸದೇ ಸತ್ತು ಹೋದವರು! ತಮ್ಮ ಏರಿಯಾಗಳಲ್ಲಿ ಕ್ಷುದ್ರಾತಿಕ್ಷುದ್ರ ಹಾವಳಿ ನಡೆಸಿದರು!…’ ಅರ್ಥಕ್ಕೆ ಒತ್ತು ನೀಡುವ ಉದ್ದೇಶದಿಂದ ತೀರಾ, ತುಂಬಾ ಎಂಬ ಅರ್ಥ ಬರುವಂತೆ ಒಂದೇ ಪದದ ಪುನರಾವರ್ತನೆಯ ನಡುವೆ ‘ಅತಿ’ ಬಳಸುವುದು ಕಂಡುಬರುತ್ತದೆ. ಮಾದರಿ: ಹೀನಾತಿ ಹೀನ, ಭ್ರಷ್ಟಾತಿಭ್ರಷ್ಟ ಇತ್ಯಾದಿ. ನೇತ್ಮಾತ್ಮಕ ಅರ್ಥಬರುವಲ್ಲಿ ಮಾತ್ರ ಇದರ ಬಳಕೆ ಕಂಡುಬರುತ್ತದೆ.

ಕೂಡುತಾಣ ನಾ ಸಂಕ್ರಮಣ ಒಟ್ಟಿಗೆ ಸೇರುವ ಸ್ಥಳ. ‘ಸಾಹಿತ್ಯ ಸಮ್ಮೇಳನದಲ್ಲಿ ಜನಾಕರ್ಷಣೆಗೊಳಗಾದ ಇನ್ನೊಂದು ಕೂಡುತಾಣವೆಂದರೆ ಭೋಜನ ಶಾಲೆ’ ‘ನಿಲ್ದಾಣ’, ‘ತಂಗುದಾಣ’ ಪದಗಳ ಆಧಾರದ ಮೇಲೆ ಬಂದಿರುವ ಪದ. ಆದರೆ ವ್ಯಾಕರಣ ಪ್ರಕ್ರಿಯೆಯಲ್ಲಿ ಇಲ್ಲೆಲ್ಲಾ ‘ತ’ ಕಾರಕ್ಕೆ ‘ದ’ ಕಾರ ಆದೇಶವಾಗಿದೆ. ಆದರೆ ಮೇಲಿನ ಪ್ರಯೋಗದಲ್ಲಿ ‘ತ’ ಕಾರವೇ ಉಳಿದಿದೆ.

ಕ್ರೂರತೆ ನಾ ತರಂಗ ದಯೆಯಿಲ್ಲದಿರುವುದು. ‘…ತಮ್ಮ ಮುಂದೆ ಹರಡಿಕೊಂಡಿರುವ ಅಪಹರಣಕಾರರಿಗೂ ಹೀಗೆ ಅನ್ನಿಸುತ್ತಿರಬಹುದೇ? ಇದೂ ತಾಳ್ಮೆಯ ಇನ್ನೊಂದು ಮುಖವೇ. ಧರ್ಮಾಧತೆ, ಕ್ರೂರತೆಯಿಂದ ಮುಚ್ಚಿಕೊಂಡಿತ್ತು ಅಷ್ಟೇ’. ‘ಕ್ರೂರ’ ಎಂಬುದು ಗುಣವಾಚಕವಾಗಿ ಬಳಕೆಯಲ್ಲಿದೆಯಾದರೂ ಅದಕ್ಕೆ ‘ಕ್ರೌರ್ಯ’ ಎಂಬ ನಾಮಪದವೂ ಅಲ್ಲದೆ ಅರ್ಥ ಸಮರ್ಪಕವಾದುದೂ ಆಗಿದೆ. ಆದ್ದರಿಂದ ‘ತೆ’ ಪ್ರತ್ಯಯ ಬಳಸಿ ಪದಸೃಷ್ಟಿ ಬೇಕಾಗಿಲ್ಲ ಎನ್ನಿಸುತ್ತದೆ.

ಕೃಷಿಗಾರಿಕೆ ನಾ ಪ್ರಜಾವಾಣಿ ವಿಭಿನ್ನ ಮಾದರಿಯ ಸಾಗುವಳಿ ‘ದಾವಣಗೆರೆಯ ಡಾ. ಎಂ.ಕೆ. ರೇಣುಕಾರ್ಯರವರೇ ಈ ಫಾರ್ಮಿನ ನಿಜವಾದ ರೂವಾರಿಗಳು. ಹಾಗಿದ್ದರೆ ಈ ಕೃಷಿಗಾರಿಕೆಯ ಹೆಚ್ಚಗಾರಿಕೆಯಾದರೂ ಏನು…’. ತೋಟಗಾರಿಕೆ, ಹೈನುಗಾರಿಕೆ ಮಾದರಿ ಯಲ್ಲಿ ಬಂದಿರುವ ಪದ. ವಿಶೇಷಾದ ಜ್ಞಾನವನ್ನು ಬಳಸಿಕೊಂಡು ನಡೆಸುವ ಕೃಷಿಯಾದ್ದರಿಂದ ಇಲ್ಲಿ ‘ಗಾರಿಕೆ’ ಪ್ರತ್ಯಯ (ಗಾರ+ಇಕೆ) ಬಳಸಲಾಗಿದೆ. ಆದರೆ ಕೃಷಿಗಾರ ಪದವಿಲ್ಲವೆಂಬುದನ್ನು ಗಮನಿಸಬಹುದು.

ಕೆಂಡತನ ನಾ ಮಾತಿನಲ್ಲಿ ಬಳಕೆ ಕಿಡಿಕಾರುವ ಗುಣ; ತೀಕ್ಷ್ಣತೆ. ‘ಅವರ ಲೇಖನಗಳಲ್ಲಿ ಕೆಂಡತನವಿದೆ’. ‘ತನ’ ಪ್ರತ್ಯಯದೊಡನೆ ಸೃಷ್ಟಿಯಾಗಿರುವ ನಾಮಪದ. ಆದರೆ ಎಲ್ಲ ಪದಗಳಿಗೂ ‘ತನ’ ಪ್ರತ್ಯಯ ಸೇರಿಸಿ ಪದಸೃಷ್ಟಿ ಸಾಧುವಲ್ಲ. ಗುಣವಾಚಕಗಳಿಗೆ ‘ತನ’ ಸೇರಿ ನಾಮವಾಚಕ ಪದ ವಾಗುತ್ತದೆ. ಮೇಲಿನ ಪ್ರಯೋಗದಲ್ಲಿ ಕೆಂಡ ಗುಣವಾಚಕವಲ್ಲ.

ಕೆಚ್ಚುಗಾರ ನಾ ವಿಜಯ ಕರ್ನಾಟಕ ಸಾಹಸಿ, ಧೈರ್ಯಶಾಲಿ. ‘ಶಾಪವನ್ನು ವರವಾಗಿ ಬದಲಿಸಿದ ಕೆಚ್ಚುಗಾರ’. ‘ಗಾರ’. ಪ್ರತ್ಯಯದೊಡನೆ ಬಂದಿರುವ ಹೊಸ ಪದ.

ಕೇಶಮಾಲಿನ್ಯ ನಾ ಪ್ರಜಾವಾಣಿ ಕೂದಲಿನಿಂದುಂಟಾಗುವ ಮಾಲಿನ್ಯ. ‘ಕರ್ನಾಟಕದ ಏಕೈಕ ಕೂದಲು ಸಂಸ್ಕರಣಾ ಉದ್ಯಮ ಕೊಪ್ಪಳದ ಭಾಗ್ಯನಗರದಲ್ಲಿದೆ. ಆದರೆ ಊರಲ್ಲಿ ಎಲ್ಲಿ ನೋಡಿದಲ್ಲಿ ಅದರದೇ ತಿಪ್ಪೆ. ಸುಟ್ಟ ಕೂದಲಿನ ಕಮಟು ವಾಸನೆ. ಈ ಕೇಶಮಾಲಿನ್ಯವನ್ನು ನಿವಾರಿಸಲು ಯಾವ ಭಾರೀ ಬಂಡವಾಳವೂ ಬೇಕಿಲ್ಲ…’ ಕೆಲವೊಂದು ಪದಸೃಷ್ಟಿಗೆ ಅನ್ಯಪದಗಳು ಮಾದರಿಯಾಗುತ್ತವೆ. ಮೇಲಿನ ಪದಕ್ಕೆ ವಾಯುಮಾಲಿನ್ಯ, ಜಲಮಾಲಿನ್ಯ ಇತ್ಯಾದಿಗಳು ಮಾದರಿಯಾಗಿದೆ. ಆದರೆ ಅಲ್ಲೆಲ್ಲಾ ಜಲ, ವಾಯು ಕಲುಷಿತವಾದರೆ, ಇಲ್ಲಿ ಕೂದಲಿನ ಪರಿಸರ ಕಲುಷಿತವಾಗುತ್ತಿರುವುದನ್ನು ಸೂಚಿಸುತ್ತದೆ.

ಕೇಶಸಾಧನ ನಾ ಕನ್ನಡ ಪ್ರಭ ಕೂದಲಿನ ವಿವಿಧ ವಿನ್ಯಾಸಗಳ ಸೃಷ್ಟಿಗೆ ಬಳಸುವ ಉಪಕರಣಗಳು. ‘ಬಳಿಕ ಬೆಂಗಳೂರಿನಲ್ಲಿ ನಡೆದ ಗ್ರಾಹಕ ವಸ್ತುಗಳ ಪ್ರದರ್ಶನದಲ್ಲಿ ಮಂಜುಳಾ ಅವರು ಈ ಕೇಶ ಸಾಧನಗಳನ್ನು ಮಾರಾಟ ಮಾಡಿದರು’. ವಿವಿಧ ವಲಯಗಳ ಅಭಿವೃದ್ಧಿಗೆ ಬಳಸುವ ವಸ್ತುಗಳನ್ನು ಸಾಧನ, ಉಪಕರಣ, ಸಲಕರಣೆ ಮುಂತಾಗಿ ಕರೆಯಲಾಗುತ್ತದೆ. ಇಲ್ಲಿ ಕೂದಲು ಬೆಳೆಸಲು ಅಲ್ಲದಿದ್ದರೂ ಕೂದಲಿನ ವಿವಿಧ ವಿನ್ಯಾಸಗಳ ಸೃಷ್ಟಿಗೆ ಬಳಸುವುದಾದ್ದರಿಂದ ‘ಸಾಧನ’ ರೂಪ ಪಡೆದಿದೆ.

ಕೇಸರೀಕರಣ ನಾ ಉದಯವಾಣಿ ಹಿಂದೂ ಧರ್ಮದ ನಿಯಮಕ್ಕೆ ಒಳಪಡಿಸುವುದು. ‘ರಾಜಕೀಯ ಕೇಸರೀಕರಣ: ಕಾಂಗ್ರೆಸ್‌ದುಗುಡ’. ವಿವರಣೆಗೆ ನೋಡಿ: ಕಾವೀಕರಣ

ಕ್ಷೇತ್ರಾಧಿಕಾರ ನಾ ಸುಧಾ ವ್ಯಾಪ್ತಿಯೊಳಗಿನ ಅಧಿಕಾರ. ‘ಆಸ್ತಿ ವಿಭಜನೆಗೋಸ್ಕರ ಸೂಕ್ತ ಕ್ಷೇತ್ರಾಧಿಕಾರವುಳ್ಳ ನ್ಯಾಯಾಲಯದಲ್ಲಿ ದಾವಾ ಹಾಕಬೇಕಾಗುತ್ತದೆ’. ಇಂಗ್ಲಿಶಿನ ‘ಜೂರಿಸ್ಡಿಕ್‌ಶನ್’ ಪದಕ್ಕೆ ಸಂವಾದಿಯಾಗಿ ಬಂದಿರುವ ಕನ್ನಡ ಪದ. ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಬಳಸಲ್ಪಡುವ ಈ ಪದ ಇದುವರೆಗೆ ‘ವ್ಯಾಪ್ತಿ’ ಎಂಬುದಾಗಿಯೇ ಬಳಕೆಯಾಗುತ್ತಿತ್ತು.

ಕೈ ಓಟ ನಾ ಮಾತಿನಲ್ಲಿ ಬಳಕೆ ಬರೆಹದ ಓಘ, ಶೈಲಿ. ‘ಬರೆವಣಿಗೆಯಲ್ಲಿ ಅವನ ಕೈ ಓಟವಿದೆ’. ಕೈ ಬೆರಳುಗಳ ಚಲನವಲನವನ್ನು, ಅವುಗಳ ಗುಣಲಕ್ಷಣಗಳನ್ನು ‘ಕೈ ಓಟ’ವೆಂದು ಇಲ್ಲಿ ಸೂಚಿಸಲಾಗಿದೆ. ಫ್ಲೋ ಎಂಬ ಪದಕ್ಕೆ ಸಂವಾದಿಯಾಗಿ ಓಟ ಬಳಸಿರಬಹುದು. ಕೈ ಮತ್ತು ಕರ ಸಮಾನಾರ್ಥಕಗಳಾದರೂ ಎಲ್ಲ ರಚನೆಗಳಲ್ಲೂ ಒಂದರ ಬದಲು ಇನ್ನೊಂದು ಬರಲಾರವು. ‘ಕೈಬರಹ’ ಸರಿ. ಆದರೆ ಕರಬರೆಹ(?). ‘ಕರಕುಶಲ’ ಸರಿ, ಕೈಕುಶಲ(?). ಕೈ ಕನ್ನಡ, ಕರ ಸಂಸ್ಕೃತ ಆಗಿರುವುದೇ ಕಾರಣವೇ?

ಕೊಯ್ಲೋತ್ತರ ಗು ಪ್ರಜಾವಾಣಿ ಬೆಳೆದ ಬೆಳೆಯನ್ನು ಕತ್ತರಿಸಿದ ನಂತರ/ಕುಯ್ಲು ಮುಗಿದ ಮೇಲೆ. ‘ಅಷ್ಟೇ ಅಲ್ಲ. ಕೊಯ್ಲು ಮತ್ತು ಕೊಯ್ಲೋತ್ತರ ತಂತ್ರಜ್ಞಾನಗಳ ವಿವಿಧ ಮಾಹಿತಿಯನ್ನು ನೀಡುತ್ತದೆ’. ಒಂದು ಘಟನೆಯನ್ನು ಕೇಂದ್ರವಾಗಿಟ್ಟುಕೊಂಡು ನಂತರದ ಸಮಯವನ್ನು ಸೂಚಿಸುವ ಎರಡು ಪದ ಕೂಡಿಸಿದ ಪದರಚನೆ ನಡೆಯುತ್ತಲೇ ಇದೆ. ಉದಾ. ಸ್ವಾತಂತ್ರ್ಯೋತ್ತರ, ವಸಾಹತೋತ್ತರ, ಮರಣೋತ್ತರ ಇತ್ಯಾದಿ. ಆದರೆ ಕೃಷಿಗೆ ಸಂಬಂಧಿಸಿದಂತೆ ಪದಗಳು ಬಂದಿರಲಿಲ್ಲ. ಅದೂ ಅಲ್ಲದೆ ಸಾಮಾನ್ಯವಾಗಿ ಸಂಸ್ಕೃತ ಪದಗಳೊಡನೆ ‘ಉತ್ತರ’ ಪದ ಬಂದು ಪದರಚನೆಯಾಗುತ್ತಿತ್ತು. ಮೇಲಿನ ಪದದಲ್ಲಿ ಪದಗಳೊಡನೆ ‘ಉತ್ತರ’ ಪದ ಬಂದು ಪದರಚನೆಯಾಗುತ್ತಿತ್ತು. ಮೇಲಿನ ಪದದಲ್ಲಿ ‘ಕುಯ್ಲು’ (>ಕೊಯ್ಲು) ಕನ್ನಡ ಪದದೊಡನೆ ‘ಉತ್ತರ’ ಸಂಸ್ಕೃತ ಪದ ಸೇರಿರುವುದು ಗಮನಾರ್ಹ.

ಕೋಟೆಬಾಕ ನಾ ಹಾಯ್‌ ಬೆಂಗಳೂರ್ ಕೋಟೆಯನ್ನೇ ನುಂಗಿದವನು. ‘ಚಿತ್ರದುರ್ಗ ಪರುಸಭೆಯ ಅಧ್ಯಕ್ಷರೆಂಬ ಕೋಟೆಬಾಕರ ಭಕ್ಷಕ ಪುರಾಣ’. ‘ಹೊಟ್ಟೆಬಾಕ’ ಮಾದರಿಯನ್ನನುಸರಿಸಿ ಬಂದಿರುವ ಪದ. ಮೇಲಿನ ಉದಾಹರಣೆಯಲ್ಲಿ ‘ಬಾಕ’ ಪದ ‘ನುಂಗು’ವುದಕ್ಕೆ ಸಮಾನವಾಗಿ ಬಳಸಿದಂತಿದೆ.

ಕೊಳ್ಳುಗಾರ ನಾ ತರಂಗ ಕೊಳ್ಳುವವ, ‘ಇಂದು ಅಮೆರಿಕಾ ಸಂಯುಕ್ತ ಸಂಸ್ಥಾನ ಪ್ರಪಂಚದ ಅತಿದೊಡ್ಡ ಮಾದಕ ದ್ರವ್ಯ ಕೊಳ್ಳುಗಾರ’, ಕೆಲಸವನ್ನು ಮಾಡುವವ, ನೆರವೇರಿಸುವ ಎಂಬರ್ಥದಲ್ಲಿ ಒಂದು ನಾಮಪದದೊಡನೆ ಕಾರ/ಗಾರ ತದ್ಧಿತ ಪ್ರತ್ಯಯದ ಬಳಕೆಯಿದೆ. ಗಾರ ಪ್ರತ್ಯಯ ಒಂದು ನಾಮಪದದೊಡನೆ ಬಂದುಇನ್ನೊಂದು ನಾಮಪದದ ಸೃಷ್ಟಿಗೆ ಕಾರಣವಾಗುತ್ತದೆ. ಆದರೆ ಮೇಲಿನ ಪ್ರಯೋಗದಲ್ಲಿ ಕ್ರಿಯಾಧಾತುವಿನೊಡನೆ ಬಳಕೆಯಾಗಿದೆ. ಸಾಮಾನ್ಯವಾಗಿ ಕ್ರಿಯಾಪದದೊಡನೆ ‘ಗ’ ಪ್ರತ್ಯಯ ಬಳಕೆಯಲ್ಲಿದೆ. ನೋಡುಗ-ಹೇಳುಗ ಇತ್ಯಾದಿ.

ಕೋನಾಕೃತಿ ನಾ ಜಾಹೀರಾತು ಚೂಪಾದ ಆಕಾರ/ತ್ರಿಭುಜದ ಆಕೃತಿ. ‘ಕೋನಾಕೃತಿಯಲ್ಲಿ ಕತ್ತರಿಸಲಾಗಿರುವ ಬದಿ ಭಾಗಗಳಿಂದಾಗಿ ನಿಮ್ಮ ಚಲನವಲನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ’. ಇಂಗ್ಲಿಶಿನ ‘ಆಂಗುಲರ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಕನ್ನಡ ಪದ.

ಕೋಮಾವಸ್ಥೆ ನಾ ಕನ್ನಡ ಪ್ರಭ ಖಾಯಿಲೆಯಿಂದಲೇ ಅಥವಾ ಚೋರಾದ ಹೊಡೆತದಿಂದಲೋ ದೀರ್ಘಕಾಲ ಅಪ್ರಜ್ಞಾವಸ್ಥೆಯಲ್ಲಿರುವುದು. ‘…ಗಾಯಗೊಂಡು ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ರಮಣ್ ಲಂಬಾ ಢಾಕಾಗದಲ್ಲಿ ನಿಧನರಾದರು’. ‘ಕೋಮಾ’ ಇಂಗ್ಲಿಶಿನ ಪದ. ಇಂಗ್ಲಿಶಿನ ಪದದೊಡನೆ ಕನ್ನಡ-ಸಂಸ್ಕೃತ ಪದಗಳನ್ನು ಸೇರಿಸಿ ಪ್ರಯೋಗಿಸುವುದು ರೂಢಿಯಲ್ಲಿದೆ. ಉದಾ: ಕಂಪ್ಯೂಟರೀಕರಣ, ಬ್ಯಾಟುಗಾರ, ಶೇರುದಾರ ಇತ್ಯಾದಿ. ಇದೊಂದು ಅಂತಹ ಮಾದರಿಗೆ ಸೇರ್ಪಡೆ. ‘ಕೋಮಾ’ ಎಂಬುದೇ ಒಂದು ಸ್ಥಿತಿ/ಅವಸ್ಥೆಯಾದ್ದರಿಂದ ಕೋಮಾದಲ್ಲಿದ್ದರು ಎಂಬುದೇ ಸಾಕು ಎನಿಸುತ್ತದೆ. ಹೆಚ್ಚುಒತ್ತುನೀಡಲು ‘ಅವಸ್ಥೆ’ ಬಳಸಿರಬಹುದೇ?.