ಖಗೋಳೀಯ ಗು ಸುಧಾ ಆಕಾಶ ಮಂಡಲಕ್ಕೆ ಸಂಬಂಧಿಸಿದ. ‘ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎಂಬ ಐದು ಮಾಹಿತಿಗಳನ್ನು ಒದಗಿಸು ಪುಸ್ತಕವೇ ಪಂಚಾಂಗ. ಖಗೋಳಿಯ ಮಾಹಿತಿಗಳು, ಧಾರ್ಮಿಕ ಜೀವನದ ಪ್ರೇರಣೆಗಳು….’. ಗುಣವಾಚಕ ಸಾಧಕ ಪ್ರತ್ಯಯ ‘ಈಯ’ದೊಡನೆ ಬಂದಿದೆ. ಇತ್ತೀಚೆಗೆ ಈ ಪ್ರತ್ಯಯದ ಬಳಕೆ ಹೆಚ್ಚಾಗುತ್ತಿದೆ. ಮಾದರಿ: ಪುಸ್ತಕೀಯ, ಮಾನವೀಯ ಇತ್ಯಾದಿ.

ಖಣಜೇಂದ್ರ ನಾ ಕನ್ನಡ ಪ್ರಭ ಉಗ್ರಾಣದ ಅಧಿಪತಿ. ‘ಪ್ರತಿಭೆಯ ಖಣಜೇಂದ್ರ… ಉಪೇಂದ್ರ’. ದೇವೇಂದ್ರ, ವೃಷಭೇಂದ್ರ ಇತ್ಯಾದಿ ಪದಗಳನ್ನುಸರಿಸಿ ಬಂದ ಪದ. ಖಣಜ ಎಂದರೇನು? ಖನಿಜ, ಖಣಿ ಪದಗಳ ಸಂಯೋಜನೆ ಇದ್ದಂತಿದೆ. ‘ಕಣಜ’ ಪದಕ್ಕೆ ತಪ್ಪಾಗಿ ‘ಖಣಜ’ ಬಳಸಿರಬಹುದೇ?

ಖಲ್ವಾಟತನ ನಾ ಉದಯವಾಣಿ ಕೂದಲು ಉದುರಿ ತಲೆ ಬೋಳಾಗುವಿಕೆ, ಬೋಳುತಲೆಯಾಗುವಿಕೆ. ‘ಕಕೇಶಿಯನ್ ಜನಾಂಗದಲ್ಲಿ ಸ್ವಲ್ಪ ಮಟ್ಟಿಗಾದರೂ ಬೋಳು ತಲೆಯವರಾಗುತ್ತಾರೆ. ಏಶ್ಯನ್ ಪುರುಷರಲ್ಲಿ ಖಲ್ವಾಟತನ ಕಡಿಮೆ’. ‘ತನ’ ಪ್ರತ್ಯಯ ಬಳಸಿ ‘ಗುಣ’ವುಳ್ಳದ್ದು ಎಂದು ಅರ್ಥ ಬರುವಂತೆ ಪದಗಳನ್ನು ಸಾಧಿಸಲಾಗುತ್ತದೆ. ಉದಾ : ಸೋಮಾರಿತನ, ಬಡತನ, ಆದರೆ ‘ಖಲ್ವಾಟ’ ಗುಣವೇ?

ಖಾಲಿತನ ನಾ ಪ್ರಜಾವಾಣಿ ಖಾಲಿಯಾದ ಸ್ಥಿತಿ, ಏನೂ ಇಲ್ಲದಿರವಿಕೆ. ‘ಕಟ್ಟಿಕೊಂಡ ಕನಸುಗಳಿಗಿಂತ ಬೇರೆಯೇ ಆಗಿ ಬದುಕುತ್ತಿರುವ ಇವರಿಗೆ ನಿರಾಶೆ, ಶೂನ್ಯತೆ, ನಿಷ್ಕ್ರಿಯತೆ, ಖಾಲಿತನಗಳಿಂದ ತುಂಬಿರುವ ಭಾಸವಾಗುತ್ತದೆ. ‘ಜಾಣತನ’ ಮಾದರಿಯಲ್ಲಿ ಬಂದಿರುವ ಪದ.

ಖಾಸಗಿತನ ನಾ ಪ್ರಜಾವಾಣಿ ಪ್ರತ್ಯೇಕ ಅಸ್ತಿತ್ವ, ಸ್ವಂತಿಕೆ. ‘ಇಪ್ಪತ್ತೈದು ವರ್ಷಗಳಿಮದ ಘೋಷಾ ಸ್ಥಿತಿಯಲ್ಲಿದ್ದ ತನ್ನ ಖಾಸಗಿತನವನ್ನು ಕಾಪಾಡಿಕೊಂಡಿದ್ದು ಈಗ ಮುಸುಕು ತೆಗೆಯೇ ಮಾಯಾಂಗನೆ ಎಂಬ ಕರೆಗೆ ಓಗೊಟ್ಟು..’ ತನ ಪ್ರತ್ಯಯದೊಡನೆ ಬಂದಿರುವ ಮತ್ತೊಂದು ಪ್ರಯೋಗ. ಅನ್ಯಭಾಷಾ ಪದದೊಡನೆಯೂ ಕನ್ನಡದ ಪ್ರತ್ಯಯ ಬಳಕೆ ನಡೆಯುತ್ತಿರುವುದಕ್ಕೆ ಮೇಲಿನ ಪ್ರಯೋಗ ಒಂದು ಉದಾಹರಣೆ.

ಖುಶಿಕರ ಗು ಜಾಹೀರಾತು ಸಂತಸವನ್ನು ನೀಡುವ ‘ಈ ಜಗತ್ತನ್ನು ಇನ್ನೂ ತೀಕ್ಷ್ಣವಾಗಿ ಸ್ಪಷ್ಟವಾಗಿ ಜೀವಂತವಾಗಿ ಮತ್ತು ಖುಶಿಕರವಾಗಿ ನೋಡುವಂತೆ ಮಾಡುವ ಕನ್ನಡಕ… ‘ಕರ/ಕಾರಿ’ ಪ್ರತ್ಯಯದೊಂದಿಗೆ ಪದಸೃಷ್ಟಿಯಾದರೂ ಮೇಲಿನ ಅರ್ಥದಲ್ಲಿ ‘ಸಂತೋಷಕರ’ ಎಂಬ ಪದ ಬಳಕೆಯಲ್ಲಿತ್ತು. ಪರ್ಸೋ-ಅರೇಬಿಕ್ ಪದದೊಡನೆ ಕನ್ನಡ ‘ಕರ’ ಪ್ರತ್ಯಯ ಸೇರಿಸಿ ತಂದಿರುವ ಪದ. ‘ಖುಶಿ’ ಹಾಗೂ ‘ಸಂತೋಷ’ದ ನಡುವೆ ಭಿನ್ನ ಅರ್ಥಛಾಯೆಯಿದೆ ಎನ್ನಿಸುತ್ತದೆ.

 

ಗಡಿಗಲ್ಲು ನಾ ಉದಯವಾಣಿ ಗಡಿಯನ್ನು ಗುರ್ತಿಸಲು ನೆಟ್ಟಿರುವ ಗುರುತುಕಲ್ಲು. ‘…ವೀಕ್ಷಣಾ ಠಾಣೆಯ ಬಳಿ ಕಮಲಾಪುರ ಕಾರ್ಯಾಚರಣೆ ಪ್ರದೇಶದಲ್ಲಿ ೫೨-೧೪ ಮತ್ತು ೫೨-೧೫ನೆಯ ಗಡಿಕಲ್ಲುಗಳ ನಡುವೆ ಹಾದು…’. ‘ಮೈಲಿಗಲ್ಲು’ ಮಾದರಿಯಲ್ಲಿ ಬಂದಿರುವ ಪದ.

ಗಂಭೀರತೆ ನಾ ಸಂಯುಕ್ತ ಕರ್ನಾಟಕ ಗಹನತೆ. ‘ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ… ಸರ್ಕಾರ ವಿಫಲವಾಗಿದ್ದು ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೇ ವರ್ತಿಸಿದೆ’. ಗಂಭೀರ ಗುಣವಾಚಕಕ್ಕೆ ‘ಗಾಂಭೀರ್ಯ’ ಎಂಬುದು ನಾಮಪದವಾದರೂ ಅದರ ಅರ್ಥ ಮೇಲಿನ ಪ್ರಯೋಗಕ್ಕೆ ಅನ್ವಯವಾಗದು. ಹಾಗಾಗಿ ‘ತೆ’ ಪ್ರತ್ಯಯ ಬಳಕೆ ಸೂಕ್ತವಾದುದು ಎನಿಸುತ್ತದೆ.

ಗಣ್ಯಾತ್ಮ ನಾ ಪ್ರಜಾವಣಿ ಗೌರವಕ್ಕೆ ಪಾತ್ರವಾದ ಆತ್ಮ, ಶ್ರೇಷ್ಠವಾದ ಆತ್ಮ. ‘ಹೇ ಗಣ್ಯಾತ್ಮ, ನಿಮ್ಮ ಪುಣ್ಯ ಚೇತನ ನಮ್ಮ ಹರಸಲಿ’. ‘ಪುಣ್ಯಾತ್ಮ’ ಮಾದರಿಯಲ್ಲಿ ಬಂದಿರುವ ಪದ. ಇನ್ನು ಮುಂದೆ ‘ಅತಿ ಗಣ್ಯಾತ್ಮ’ ಬಂದರೂ ಬರಬಹುದು.

ಗಣಿತಬದ್ಧ ಗು ತರಂಗ ಲೆಕ್ಕಾಚಾರದಿಂದ ಕೂಡಿದ, ಗಣಿತರೀತ್ಯಾ. ‘ಗ್ರಹ-ನಕ್ಷತ್ರಗಳು ನೆಲದ ಮೇಲೆ ಪ್ರಭಾವ ಬೀರುವುದನ್ನು ವಿಶ್ವದ ಎಲ್ಲೆಡೆಯ ವಿದ್ವಾಂಸರೂ ಗಮನಿಸಿದ್ದರೂ. ಅದನ್ನು ಗಣಿತಬದ್ಧವಾಗಿ ಗುರುತಿಸುವ ಕಲೆಯನ್ನೂ ತಿಳಿದಿದ್ದರು’. ‘ಬದ್ಧ’ ಗುಣವಾಚಕದೊಂದಿಗೆ ಪದಗಳು ಬಳಕೆಯಲ್ಲಿವೆ. ಉದಾ: ಕ್ರಮಬದ್ಧ, ಸಂವಿಧಾನಬದ್ಧ ಇತ್ಯಾದಿ. ಮೇಲಿನ ಪದ ಹೊಸ ಸೇರ್ಪಡೆಯಾಗಿದೆ.

ಗತಪುಟ ನಾ ಜನಮುಖಿ ಮರೆಯಾದ ಹಿಂದಿನ ಪುಟ/ಹಾಳೆ. ‘….ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ಬಸವಣ್ಣ ಕಾಲುವೆಯ ಇತಿಹಾಸದಂತೆ ಗತಪುಟ ಸೇರುತ್ತಿದ್ದು….’. ‘ಗತಕಾಲ’ ಮಾದರಿಯಲ್ಲಿ ಬಂದಿರುವ ಪದ. ಅಂದರೆ ಮುಖ್ಯವಾಗಿ ಮರೆತು ಹೋದಂತೆ ಎಂದು ಸೂಚಿಸುವುದೇ ಆಗಿದೆ.

ಗತ್ತುಗಾರಿಕೆ ನಾ ಉದಯವಾಣಿ ಜಂಬ. ‘ಹೆಬ್ಬೆರಳ ಗತ್ತುಗಾರಿಕೆ ಉಳಿಸಿದ ಶಸ್ತ್ರಚಿಕಿತ್ಸೆ’. ‘ಹೆಚ್ಚುಗಾರಿಕೆ’ ಮಾದರಿಯಲ್ಲಿ ಬಂದಿರುವ ಪದ. ‘ಗತ್ತು’ ಪದವೇ ಅರ್ಥವನ್ನು ಸೂಚಿಸಲು ಸಾಕಾಗಿತ್ತು. ಆದರೂ ಇತ್ತೀಚೆಗೆ ಇಂಥ ಪದಗಳ ಸೃಷ್ಟಿ ನಡೆಯುತ್ತಿದೆ.

ಗತೇತಿಹಾಸ ನಾ ಕನ್ನಡ ಪ್ರಭ ಹಿಂದೆ ನಡೆದಿರುವ ದಾಖಲಾಗಿರುವ ಸಂಗತಿಗಳು. ‘ತ.ರಾ.ಸು. ಅವರು ನಮ್ಮ ಕನ್ನಡನಾಡಿನ ಮುಖ್ಯವಾಗಿ ಚಿತ್ರದುರ್ಗದ ಗತೇತಿಹಾಸದ ಸರೋವರದಲ್ಲಿ ಮನದಣಿಯ ಈಜಾಡಿದ ಹಂಸ’. ‘ಪೂರ್ವೇತಿಹಾಸ’ ಮಾದರಿಯಲ್ಲಿ ಬಂದಿರುವ ಪದ. ವ್ಯಾಕರಣ ಬದ್ಧವಾಗಿದೆ. ಆದರೂ ಸಾಮಾನ್ಯವಾಗಿ ಗತ ಇತಿಹಾಸ ಎಂದೇ ಬಳಕೆಯಾಗುತ್ತಿದೆ.

ಗರುಡಾರೋಹಿ ಗು ಕನ್ನಡ ಪ್ರಭ ಗರುಡನ ಮೇಲೇರಿರುವ. ‘ಕೊಟ್ಟೂರಿನ ಸೋಗಿನವರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗರುಡಾರೋಹಿ ಗಣೇಶನ ವಿಗ್ರಹವಿದು’. ‘ಅಶ್ವಾರೋಹಿ’ ಪದದ ಮಾದರಿಯಲ್ಲಿ ಬಂದಿರುವ ಪದ. ‘ಆರೂಢ’ ಎಂಬ ಪದದ ಬಳಕೆಯೂ ಇರುವುದನ್ನು ಗಮನಿಸಬಹುದು. ಉದಾ: ‘ಗರುಡಾರೂಢ’

ಗಸ್ತುವಾರಿ ಗು ಸಂಯುಕ್ತ ಕರ್ನಾಟಕ ಕಾವಲು ಕಾಯುವ; ಅತ್ತಿಂದಿತ್ತ ಓಡಾಡುವ, ‘ಲೋಕೋಪಯೋಗಿ ಸಚಿವ ಧರ್ಮಸಿಂಗ್ ಅವರು ರಾಯಚೂರು ಉಸ್ತುವಾರಿ ಸಚಿವರಲ್ಲ ಅವರು ಗಸ್ತುವಾರಿ ಸಚಿವರಾಗಿದ್ದಾರೆಂದು…’. ‘ಉಸ್ತುವಾರಿ’ ಪದಕ್ಕೆ ವ್ಯಂಗ್ಯವಾಡಲು ಮೇಲಿನ ಪ್ರಯೋಗ ಬಂದಂತಿದೆ. ಅಲ್ಲದೆ ‘ಗಸ್ತು’ ಪದಕ್ಕೆ ಕಾವಲಿಗಾಗಿ ಅತ್ತಿತ್ತ ಓಡಾಡುವುದು ಎಂಬರ್ಥವೂ ಇದ್ದು ಕೇವಲ ಅಂತಹ ಕೆಲಸ ಮಾಡುವುದನ್ನು ಸೂಚಿಸಲು ಬಳಸಲಾಗಿದೆ.

ಗಾಡಿದಾಟು ನಾ ಪ್ರಜಾವಾಣಿ ಗಾಡಿಗಳು ಹೋಗಿ ಬಂದು ಮಾಡಲು ಅನುಕೂಲವಾಗಿರುವ ರಸ್ತೆ/ದಾರಿ. ‘ಗಾಡಿದಾಟು ಮತ್ತು ಸೂಪರ್ ಪ್ಯಾಸೇಜ್ ನಿರ್ಮಾಣಕ್ಕಾಗಿ ಟೆಂಡರ್’. ‘ರಸ್ತೆದಾಟು’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ. ‘ರಸ್ತೆದಾಟು’ ಎಂಬುದು ಪಟ್ಟಣಗಳಲ್ಲಿ ಪಾದಚಾರಿಗಳಿಗಾಗಿ ರಸ್ತೆಯನ್ನು ದಾಟುವ ಸಲುವಾಗಿ ಮಾಡಿರುವ ಸೌಲಭ್ಯ. ಇಲ್ಲಿ ಗಾಡಿಗಳು ಓಡಾಡಲು ಅನುಕೂಲವಾಗುವಂತಹ ರಸ್ತೆ ನಿರ್ಮಾಣ ಕುರಿತಾದದ್ದು. ಅಲ್ಲಿ ರಸ್ತೆಯನ್ನು ದಾಟಿದರೆ, ಇಲ್ಲಿ ಗಾಡಿಯನ್ನು ದಾಟುವ ಎಂಬರ್ಥ ಬಂದು ಸ್ವಲ್ಪ ಗೊಂದಲವಾಗಬಹುದು.

ಗಾಯಗೀಡಾದ ಗು ಉದಯವಾಣಿ ಗಾಯಗೊಂಡ. ‘ಹಲ್ಲೆಯಿಂದ ಗಾಯಗೀಡಾದ ೧೧ ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ’. ‘ಈಡಾಗು’ ಪದವನ್ನು ‘ಗುರಿಯಾಗು’ ಎಂಬರ್ಥ ದಲ್ಲಿ ಹಾನಿ, ನಷ್ಟ, ಅಪಘಾತ, ಸಾವು ಮುಂತಾಗಿ ಬೇರೊಂದು ಶಕ್ತಿಯ ಪ್ರಭಾವದಿಂದಾಗುವಂತಹ ಕಡೆಗಳಲ್ಲಿ ಬಳಸಲಾಗುತ್ತಿದೆ. ಮೇಲಿನ ಪ್ರಯೋಗದಲ್ಲಿ ಗಾಯಗೊಂಡ (ಕೊಳ್ ರೂಪದ ಭೂತಕಾಲ ರೂಪ) ಎಂಬ ರೂಪ ಸರಿಯಾದ ಪ್ರಯೋಗವಾಗುತ್ತದೆ.

ಗ್ಯಾಟೋತ್ತರ ಗು ವಿಜ್ಞಾನ ಸಂಗಾತಿ ಗ್ಯಾಟ್ ಒಪ್ಪಂದ ನಂತರದ. ‘ಪೇಟೆಂಟ್-ಗ್ಯಾಟೋತ್ತರ ವ್ಯಾಪಾರದ ಅವಿಭಾಜ್ಯ ಅಂಗ’. ‘ಮರಣೋತ್ತರ’, ‘ನವ್ಯೋತ್ತರ’ ಪದಗಳ ಮಾದರಿಯಲ್ಲಿ ಬಂದಿರುವ ಪದ. ಆದರೆ ‘ಉತ್ತರ’ ಪ್ರತ್ಯಯ ಪದ ಸೇರಿರುವುದು ಇಂಗ್ಲಿಶಿನ ‘ಗ್ಯಾಟ್’ ಪದಕ್ಕೆ ಎಂಬುದು ಗಮನಾರ್ಹ.

ಗ್ರಾಹಕೀಕರಣ ನಾ ಸಂಯುಕ್ತ ಕರ್ನಾಟಕ ಆಕರ್ಷಿಸುವಿಕೆ ‘ಪಾಶ್ಚಿಮಾತ್ಯರ ಗ್ರಾಹಕೀಕರಣ ಕೂಡ ಯುವಜನತೆ ಕ್ರಿಶ್ಚಿಯನ್ ಧರ್ಮದತ್ತ ಆಕರ್ಷಣೆಗೊಳ್ಳುವಂತೆ ಮಾಡಿದೆ’. ‘ಈಕರಣ’ ಪ್ರತ್ಯಯ ಪ್ರಯೋಗಕ್ಕೆ ಒಂದು ಉದಾಹರಣೆ. ಆದರೆ ಇಲ್ಲಿ ‘ಗ್ರಾಹಕ’ ಪದದ ಅರ್ಥದಲ್ಲಿ ಸ್ಪಷ್ಟತೆಯಿಲ್ಲ. ಬಹುಶಃ ಗ್ರಾಹಕ= ಆಕರ್ಷಣೆ, ಸೆಳೆಯುವಿಕೆ ಎಂಬರ್ಥದಲ್ಲಿ ಬಳಕೆಯಾಗಿರಬಹುದೇ? ಹಾಗಿದ್ದರೆ, ಸೆಳೆಯುವ ತಂತ್ರ ಎಂಬರ್ಥ ಮೇಲಿನ ಪ್ರಯೋಗದಲ್ಲಿ ವ್ಯಕ್ತವಾಗುತ್ತದೆ.

ಗ್ಲಾಸ್ ಮೇಟ್ ನಾ ವಿಜಯ ಕರ್ನಾಟಕ  ಜೊತೆಯಲ್ಲಿ ಪಾನ ಮಾಡುವವ. ‘ಧರಣಿಯಲ್ಲಿ ಗಂಟಲು ಕೆಡುವ ಹಾಗೆ ಸರಕಾರ ಹಾಗೂ ಮಂತ್ರಿಗಳ ಜನ್ಮ ಜಾಲಾಡುವ ನಾಯಕ ಮಣಿಗಳು ಸಂಜೆಯಾಗುತ್ತಲೇ ಆಡಳಿತ ಪಕ್ಷದ ಗ್ಲಾಸ್‌ಮೇಟ್‌ಗಳೊಂದಿಗೆ ಗುಂಡು ಹಾಕುತ್ತಾ….’ ‘ರೂಂಮೇಟ್’, ‘ಕ್ಲಾಸ್‌ಮೇಟ್’ ಮಾದರಿಯಲ್ಲಿ ಬಂದಿರುವ ಪದ. ಕನ್ನಡದಲ್ಲಿ ಈ ಪದಗಳು ಕನ್ನಡದ್ದೇ ಅನ್ನುವಷ್ಟರಲ್ಲಿ ಮಟ್ಟಿಗೆ ಬಳಕೆಯಲ್ಲಿದೆ. ಮೇಲಿನ ಪದವೂ ಅದೇ ರೀತಿಯಲ್ಲಿ ಬಳಕೆಗೆ ಬರಬಹುದೇನೋ. ‘ಸಹಪಾನಿ’ ಕನ್ನಡದ್ದಾಗಬಹುದೇ?

ಗುಂಡಾಡಿ ಗು ಪ್ರಜಾವಾಣಿ ಮದ್ಯದ ಅಮಲಿನಲ್ಲಿರುವ. ‘ಗುಂಡಾಡಿ ಇಲಿಗಳ ಗಮ್ಮತ್ತು’. ‘ಉಂಡಾಡಿ’ ಪದದ ಮಾದರಿಯಲ್ಲಿ ಬಂದಿರುವ ಪದ. ಲಘುಪ್ರಬಂಧ ಹಾಸ್ಯ ಬರೆಹಗಳಲ್ಲಿ ಇಂತಹ ಪದಗಳ ಬಳಕೆಯನ್ನು ಕಾಣಬಹುದು.

ಗುಂಪುಗಾರಿಕೆಗ್ರಸ್ತ ಗು ಸಂಯುಕ್ತ ಕರ್ನಾಟಕ ಒಳಗೊಳಗೆ ಪಂಗಡ ಕಟ್ಟುವ ಕ್ರಿಯೆಗೆ ಒಳಗಾಗಿರುವ. ‘ಗುಂಪುಗಾರಿಕೆಗ್ರಸ್ತ ಮೈಸೂರು ಜಿಲ್ಲಾ ಕಾಂಗ್ರೆಸ್’. ‘ಗಲಭೆಗ್ರಸ್ತ’, ‘ಶಾಪಗ್ರಸ್ತ’ ಪದಗಳ ಮಾದರಿಯಲ್ಲಿ ಬಂದಿರುವ ಪದ.

ಗುಪ್ತಚಾರಿಕೆ ನಾ ಸಂಯುಕ್ತ ಕರ್ನಾಟಕ ಯಾರಿಗೂ ಗೊತ್ತಾಗದಂತೆ ಮಾಹಿತಿ ಸಂಗ್ರಹಿಸುವುದು. ‘ಭಾರತವು ಪಾಕ್ ಗುಪ್ತಚಾರಿಕೆಯ ಬಗ್ಗೆ ನೇಪಾಳದೊಂದಿಗೆ ಇರಿಸಿದ್ದ ಸಂದೇಹವನ್ನು ನೇಪಾಳಿ ಆಡಳಿತ ತಿಳಿದಿದೆ’. ‘ಬೇಹುಗಾರಿಕೆ’ ಪದ ಬಳಕೆಯಲ್ಲಿದೆ. ಗುಪ್ತಚಾರ ಬಳಕೆಯಲ್ಲಿದ್ದರೂ ಮೇಲಿನ ಪ್ರಯೋಗ ಬಳಕೆಯಲ್ಲಿರಲಿಲ್ಲ.

ಗುರಾಯಿಸು ಕ್ರಿ ಕನ್ನಡ ಪ್ರಭ ಕೋಪವನ್ನು ವ್ಯಕ್ತಪಡಿಸು; ಗುರ್ರೆನ್ನು. ‘ಮೊದಲಿಗೆ, ರಾಮಕೃಷ್ಣ ಹೆಗಡೆಯವರನ್ನು ಸಂಪುಟದಿಂದ ತೆಗೆಯಬೇಕು ಎಂದು ಗುರಾಯಿಸಿದ್ದ… ರನ್ನು ಸಮಾಧಾನಗೊಳಿಸಲು…’ ‘ಇಸು’ ಪ್ರತ್ಯಯ ಬಳಸಿ ಕ್ರಿಯಾಪದ ಸೃಷ್ಟಿ ಕನ್ನಡದಲ್ಲಿದೆ. ಆದರೆ ಇಲ್ಲಿ ಯಾವ ಪದಕ್ಕೆ ‘ಇಸು’ ಪ್ರತ್ಯಯ ಬಳಸಿ ಕ್ರಿಯಾಪದ ಸೃಷ್ಟಿ ಕನ್ನಡದಲ್ಲಿದೆ. ಆದರೆ ಇಲ್ಲಿ ಯಾವ ಪದಕ್ಕೆ ‘ಇಸು’ ಹತ್ತಿಸಲಾಗಿದೆ ಎಂಬುದು ಗೊತ್ತಾಗುವುದಿಲ್ಲ. ‘ಗುರ್’ ಪದಕ್ಕೆ ‘ಎನ್ನು’ ಸೇರಿಸಿ ಗುರ್ರೆನ್ನು ಮಾಡಬಹುದು. ‘ಗುರ್’ ಎಂಬುದಕ್ಕೆ ಅರ್ಥವೇನೋ ಕೊಡಬಹುದು ಪ್ರಾಣಿಗಳ ಕೋಪದ ಧ್ವನಿ ಅಭಿನಯ. ಆದರೆ ‘ಗುರ್’ ಪದಕ್ಕೆ ‘ಇಸು’ ಸೇರಿಸಿದರೆ ‘ಗುರಿಸು’ ಆಗುತ್ತದೆ. ಇಲ್ಲಿ ರೂಪ ಸಾದೃಶ್ಯ ಚುನಾಯಿಸು, ನಿಭಾಯಸು ಪದಗಳದ್ದಾಗಿದೆ. ‘ಗುರಾವಣೆ’ ರೂಪವಿಲ್ಲ. ಆದ್ದರಿಂದ ಗುರಾಯಿಸು ನಿಷ್ಪತ್ತಿ ಹೇಗಾಗಿರಬಹುದು ಎಂದು ಹೇಳುವುದು ಕಷ್ಟ.

ಗುರಿಹೀನತೆ ನಾ ಕನ್ನಡ ಪ್ರಭ ಧ್ಯೇಯ ಅಥವಾ ಉದ್ದೇಶವಿಲ್ಲದಿರುವುದು. ‘ಕುರಿಗಳು ಸಾರ್ ಕುರಿಗಳು… ಎಂದು ಕವಿ ನಿಸಾರ್ ಅಹಮದ್ ಕುರಿಗಳು ಗುರಿಹೀನತೆಯನ್ನು ಮನುಷ್ಯನ ಗುರಿಹೀನತೆಗೆ ನವೀಕರಿಸಿ ಹಾಡಿದ್ದರು’. ‘ಗುಣಹೀನ’, ‘ಮತಿಹೀನ’ ಮುಂತಾದ ಪದಗಳ ಮಾದರಿಯಲ್ಲಿ ಮೊದಲು ‘ಗುರಿಹೀನ’ ಎಂದು ಪದಸೃಷ್ಟಿಸಿ ‘ತೆ’ ಪ್ರತ್ಯಯ ಪತ್ತಿಸಲಾಗಿದೆ. ಬಹಳ ಅರ್ಥಪೂರ್ಣವಾದ ಪದ. ‘ಗುರಿಹೀನ’ ಕೂಡಾ ಇದರೊಂದಿಗೆ ಬಳಕೆಗೆ ಬಂದಂತಾಗಿದೆ.

ಗುಳುಗುಳಿಸು ಕ್ರಿ ಕರ್ಮವೀರ ಕಚಗುಳಿ ಇಡು. ‘ಭಾವನೆಯ ಆಳಕ್ಕಿಳಿದು ಕಚಗುಳಿಯ ಗುಳಿಗುಳಿಸಲು ಇನ್ನು ನಾನು ವಾಸ್ತವವಾಗುವ ಪರಿಯಾದರೂ ಹೇಗೆ? ಕಚಗುಳಿ ಇಡುವ ಕ್ರಿಯೆಯನ್ನು ಅನುಕರಿಸಲು ಸೃಷ್ಟಿಸಿರುವ ಕ್ರಿಯಾಪದ. ‘ಕಚಗುಳಿಸು’ ಸರಿಯಾದ ಪ್ರಯೋಗವೇನೋ?

ಗೃಹಸ್ಥಾಶ್ರಮಿ ನಾ ಸುಧಾ ಕುಟುಂಬ ಜೀವನ ಸಾಗಿಸುವವ. ‘ತಂದೆ ಇವರ ಮದುವೆ ಮಾಡಿದರು. ಇವರು ಗೃಹಸ್ಥಾಶ್ರಮಿಗಳಾದರು….’. ವ್ಯಕ್ತಿವಾಚಕ ಪದ ಸೃಷ್ಟಿಗೆ ಒಂದು ಉದಾಹರಣೆ.

ಗೃಹೋತ್ಪನ್ನ ಗು ಸಂಯುಕ್ತ ಕರ್ನಾಟಕ ಮನೆಯಲ್ಲಿ ಬಳಸಬಹುದಾದ ತಯಾರಿಕೆಗಳು. ‘ಗೃಹೋತ್ಪನ್ನಗಳ ಕ್ಷೇತ್ರಕ್ಕೆ ಗೋದ್ರೇಜ್ ಪುಡ್ಸ್ ಲಗ್ಗೆ’. ‘ಶಾಖೋತ್ಪನ್ನ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಇಲ್ಲಿ ಮನೆಯಲ್ಲಿ ತಯಾರಿಸಲಾದ (ಗೃಹ ಕೈಗಾರಿಕೆ) ಎಂಬರ್ಥ ಬರುವುದೇ ಹೆಚ್ಚು.

ಗೆಲ್ಗಂಬ ನಾ ಸುಧಾ ವಿಜಯವನ್ನು ಸೂಚಿಸುವ ಸಲುವಾಗಿ ನೆಡುವ ಕಂಬ. ‘ಈಗ ಹರಿಕೃಷ್ಣ ಒಂದಾದ ಮೇಲೊಂದರಂತೆ ಗೆಲ್ಗಂಬ ನೆಡುತ್ತಿದ್ದಾನೆ’. ಸಾಮಾನ್ಯವಾಗಿ ವಿಜಯ ಪತಾಕೆ ಹಾರಿಸಿದರು ಎಂಬುದಾಗಿ ಬಳಕೆಯಾಗುತ್ತಿತ್ತು. ಅಲ್ಲದೆ ಜಯವನ್ನು ನಿರ್ಧರಿಸಲು ಬಳಸುವ ಗುರಿ ಕಂಬವನ್ನು ಸಹಾ ಗೆಲ್ಬಂಬ ಎಂಬುದಾಗಿಯೇ ಹೇಳಲಾಗುತ್ತದೆ.

ಗೊಂಚಲೀಕರಣ ನಾ ಸುಧಾ ಗುಂಪಾಗಿ ವರ್ಗೀಕರಿಸಿಕೊಳ್ಳುವುದು. ‘ಆಕಾಶವಾಣಿ ವಾರ್ತೆಗಳನ್ನು ಪ್ರಾಮುಖ್ಯಕ್ಕೆ ಅನುಗುಣವಾಗಿ ವಿಭಾಗಿಸುವುದನ್ನು ಬಂಚಿಂಗ್ ಅಥವಾ ಗೊಂಚಲೀಕರಣ ಎನ್ನುತ್ತಾರೆ’. ‘ಈಕರಣ’ ಪ್ರತ್ಯಯ ಬಳಕೆಗೆ ಒಂದು ಉದಾಹರಣೆ.

ಗೊತ್ತುಹಚ್ಚು ಕ್ರಿ ಸಂಯುಕ್ತ ಕರ್ನಾಟಕ ತಿಳಿದುಕೋ, ಕಂಡುಹಿಡಿ. ‘ಪ್ರಧಾನಿಯ ಎರಡು ಭಾಗಗಳ ಲೇಖನದ ‘ಮ್ಯೂಸಿಂಗ್ಸ್’ ವಿಚಾರಗಳನ್ನು ಕೆಲವರಿಗೆ ಮಾತ್ರ ನೀಡುವ ಕಳಪೆ ನಿರ್ಧಾರದಿಂದ ಗೊತ್ತುಹಚ್ಚಲಾಗಿದೆ’. ‘ಹಚ್ಚು’ ಸಹಾಯಕ ಕ್ರಿಯಾಪದವಾಗಿ ‘ಪತ್ತೆ’ ಎಂಬ ಪದದೊಡನೆ ಮಾತ್ರ ಬರುತ್ತದೆ. ಇದು ‘ಮಾಡು’ ಎನ್ನುವ ಅರ್ಥವನ್ನು ನೀಡುತ್ತದೆ. ಮೇಲಿನ ವಾಕ್ಯದಲ್ಲಿ ಅದೇ ಅರ್ಥವನ್ನು ಪಡೆಯಲು ‘ಗೊತ್ತು’ವಿನ ಜೊತೆಗೆ ‘ಹಚ್ಚು’ ಪ್ರಯೋಗಿಸಲಾಗಿದೆ(=ಪತ್ತೆಮಾಡು)

ಗೌರವಾನ್ವಿಕೆ ನಾ ಗೌರವ, ಮರ್ಯಾದೆ. ‘ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡು ಕಳಂಕಿತರೆನಿಸಿಕೊಂಡಿದ್ದ ಜಯಲಲಿತಾ ಅವರಿಗೆ ಭಾರತೀಯ ಜನತಾ ಪಕ್ಷವು ರಾಜಕೀಯ ಗೌರವಾನ್ವಿಕೆಯನ್ನು ತಂದುಕೊಟ್ಟಿತ್ತು’. ಮೇಲಿನ ಪ್ರಯೋಗದ ನಿಷ್ಪತ್ತಿ ಹೇಗೆ ಎಂಬುದು ತಿಳಿಯದು. ‘ಗೌರವಾನ್ವಿತೆ’ ಪದ ಬಳಕೆಯಲ್ಲಿದ್ದು ಅದು ವ್ಯಕ್ತಿಯನ್ನು ಸೂಚಿಸುತ್ತದೆ.

ಗೌರವಾರ್ಥಿ ಮಾತಿನಲ್ಲಿ ಬಳಕೆ ಗೌರವಕ್ಕೆ ಪಾತ್ರರಾದವರು. ‘…ಹಾಗೂ ಸಭೆಗೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಗೌರವಾರ್ಥಿಗಳಿಗೂ ನನ್ನ ವಂದನೆಗಳು’. ‘ಅರ್ಥಿ’ ಪದಕ್ಕೆ ‘ಬಯಸುವುದು’ ಎಂದರ್ಥವಿದ್ದರೂ  ಇಂದು ವಿವಿಧ ಬಗೆಯಲ್ಲಿ ಬಳಕೆಯಾಗುತ್ತಿದೆ. ಶಿಖಿರದಲ್ಲಿ ಭಾಗವಹಿಸುವವರು ‘ಶಿಬಿರಾರ್ಥಿ’. ಇಲ್ಲೂ ಅರ್ಥ ಸರಿಯಿರಬಹುದು. ಶಿಬಿರದಲ್ಲಿ ಭಾಗವಹಿಸಲು ಅರ್ಜಿಹಾಕಿಕೊಂಡಿರುತ್ತಾರೆ. ಇದೇ ಮಾದರಿಯನ್ನು ಕಂಡು ಮೇಲಿನ ಪ್ರಯೋಗ ಬಂದಿದ್ದರೂ ‘ಅರ್ಥಿ’ಗೆ ಮುನ್ನಿನ ಅರ್ಥವಿಲ್ಲದಂತಾಗಿ ಅರ್ಹರಾದ ಪಾತ್ರರಾದ ಎಂಬರ್ಥ ಬಂದಿದೆ.

 

ಚಂದಾದಾರಿಕೆ ನಾ ವಿವೇಕ ಸಂಪದ ಚಂದಾದಾರರಾಗುವುದು. ‘ಚಂದಾದಾರಿಕೆ ಹೆಚ್ಚಿದಷ್ಟು ಹೆಚ್ಚು ಜನಮನವನ್ನು ಬೆಳಗಬಹುದಾದುದರಿಂದ ಶ್ರೀ ಗುರೂಜಿಯಂತೂ ಈ ಚಂದಾ ಸೇವೆಯನ್ನೇ ತನಗೆ ಪರಮಪ್ರಿಯವಾದ ಮಹಾಸೇವೆಯೆಂದೂ, ಈ ನಿಟ್ಟಿನಲ್ಲಿ, ನಿಷ್ಠೆಯಿಂದ ಒಂದು ಚಂದಾದಾರಿಕೆ ಮಾಡಿಸಿದಲ್ಲಿ ಒಂದು ಗಂಟೆಯ ತಪಸ್ಸಿನ ಫಲ ಕರುಣಿಸುವುದಾಗಿಯೂ ಅದಾಗಲೇ ಸಾರಿದ್ದಾರೆ’. ಚಂದಾ, ಚಂದಾದಾರ ಪದ ಬಳಕೆಯಲ್ಲಿದೆ. ಆದರೆ ಚಂದಾದಾರಿಕೆ ಬಳಕೆಯಲ್ಲಿ ಇಲ್ಲ. ‘ಇಕೆ’ ಪ್ರತ್ಯಯ ಹಚ್ಚಿ ಪದ ನಿರ್ಮಾಣಮಾಡುವುದು ರೂಢಿಯಲ್ಲಿದೆ. ಉದಾ: ಡಾಕ್ಟರಿಕೆ, ಮಾಸ್ತರಿಕೆ ಅಥವಾ ತೋಟಗಾರಿಕೆ, ವರದಿಗಾರಿಕೆ. ಆದರೆ ಇಲ್ಲೆಲ್ಲಾ ‘ಇಕೆ’ ಕೆಲಸದ ಸ್ವರೂಪವನ್ನು ತಿಳಿಸುವ ಪದಗಳನ್ನಾಗಿ ಬಳಸಲಾಗಿದೆ. ಆದರೆ ಮೇಲಿನ ಪದದಲ್ಲಿ ಆ ಅರ್ಥವಿಲ್ಲ.

ಚಟವಂತ ನಾ ಪ್ರಜಾವಾಣಿ ಹವ್ಯಾಸ ಅಥವಾ ಚಾಳಿಯನ್ನು ಮಾಡಿಕೊಂಡಿರುವವ. ‘….ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಎಂಬ ಹೇಳಿಕೆ ಇರುವಂತೆ ಇಲ್ಲಿ ‘ಎ ಪಾನ್ ಶಾಪ್, ಕಡ್ಡಾಯವಾಗಿ ಚಟವಂತರಿಗೆ ಮಾತ್ರ’ ಎಂದು ಬರೆಯಲಾಗಿದೆ’. ‘ಸಿರಿವಂತ’ ‘ಹಣವಂತ’ ಮಾದರಿಯಲ್ಲಿ ಬಂದಿರುವ ಪದ.

ಚಟಹಾರಿ ಗು ಕನ್ನಡಪ್ರಭ: ಅಭ್ಯಾಸ/ಹವ್ಯಾಸವನ್ನು ಬಿಡಿಸುವಂತಹ/ನಿವಾರಿಸುವಂತಹ. ‘ಸಾಕಷ್ಟು ಪರಿಣಾಮಕಾರಿ ಚಟಹಾರಿ ಔಷಧಗಳು ಬಳಕೆಯಲ್ಲಿವೆಯಾದರೂ ಸೇವಿಸಿದಾಗ ಇವು ಅಸಹನೀಯವಾದ ತಲೆನೋವು…’ ‘ಹಾರಿ’ಯ ಬಳಕೆ ಎರಡು ರೀತಿಯಲ್ಲಿ ನಡೆಯುತ್ತದೆ. ‘ಚೇತೋಹಾರಿ’ ಪದದಲ್ಲಿ ಚೈತನ್ಯ ನೀಡುವಂತಹ ಎಂದರ್ಥ ಬಂದರೆ, ವಿಷಹಾರಿ ಹಾಗೂ ಮೇಲಿನ ಪದದಲ್ಲಿ ನಿವಾರಣೆಯಾಗುವಂತಹ ಎಂಬರ್ಥದಲ್ಲಿ ಬಳಕೆಯಾಗಿದೆ.

ಚಾರಿತ್ರ್ಯವಂತ ನಾ ಕನ್ನಡ ಪ್ರಭ ಒಳ್ಳೆಯ ಗುಣವನ್ನು ದೀರ್ಘಕಾಲದಿಂದ ಉಳಿಸಿಕೊಂಡು ಬಂದಿರುವವನು. ‘ಚಾರಿತ್ರ್ಯವಂತರಿಂದ ಮಾತ್ರ ದೇಶದ ಪುನರ್ನಿರ್ಮಾನ ಸಾಧ್ಯ’. ‘ಸಿರಿವಂತ’, ‘ಬುದ್ಧಿವಂತ’ ಮಾದರಿಯಲ್ಲಿ ಬಂದಿರುವ ಪದ.

ಚಿಂತಾವದನ ನಾ ಕನ್ನಡ ಪ್ರಭ ಛಾಯಾ ಚಿತ್ರದ ಕೆಳಬರಹ. ಚಿಂತೆ ಹೊತ್ತ ಮುಖ, ದುಃಖಿ. ‘ಯು.ಎಸ್.ಓಪನ್ ಮಹಿಳೆಯರ ಕ್ವಾರ್ಟರ್ ಫೈನಲ್ಸ್‌ನಲ್ಲಿ ಜಯಗಳಿಸಿದ ಹಿಂಗಿಸ್ ಸಂತಸದಿಂದ ಬೀಗುತ್ತಿದ್ದರೆ ಎಡ ಚಿತ್ರ ಸೋತ ಸೆಲೆಸ್ ಚಿಂತಾವದನರಾಗಿದ್ದಾರೆ’. ‘ಚಿಂತಾಕ್ರಾಂತ’ ಎಂಬುದು ಬಳಕೆಯಾಗುತ್ತಿದೆ. ಮೇಲಿನ ಪ್ರಯೋಗ ಹೊಸ ಪದ.

ಚಿತ್ತೈಕಾಗ್ರತೆ ನಾ ಜಾಹೀರಾತು ಒಂದೇ ಕಡೆಗೆ ಇರುವ ಮನಸ್ಸು. ‘ಇದರ ಕೊರತೆ, ಆಯಾಸ ನಿರುತ್ಸಾಹಕ್ಕೆ ಕಾರಣವಾಗಿ ಚಿತ್ತೈಕಾಗ್ರತೆ ಅಸಾಧ್ಯವಾದೇಗಿ, ಜ್ಞಾಪಕ ಶಕ್ತಿ ಕುಗ್ಗುತ್ತದೆ’. ‘ಚಿತ್ತ+ಏಕಾಗ್ರತೆ= ಚಿತ್ತೇಕಾಗ್ರತೆ ಎಂದಾಗಬೇಕು. ಆದರೆ ಇಲ್ಲಿನ ರೂಪ ಹೇಗೆ ರೂಪುಗೊಂಡಿದೆ ತಿಳಿಯದು. ಬಹುಶಃ ಚಿತ್ತಯಿಸು>ಚಿತ್ತೈಸು ಮಾದರಿಯನ್ನೇನಾದರೂ ಅವಲಂಬಿಸಿ ರಚನೆಯಾಗಿರಬಹುದು.

ಚಿತ್ರಪಟು ನಾ ಸುಧಾ ಚಲನಚಿತ್ರ ನಟ. …ಯಾವ ಥ್ರಿಲ್ಲರ್ ಕಾದಂಬರಿಕಾರರೂ ಊಹಿಸದಂಥ ಯಾವ ಹಾಲಿವುಡ್ ಚಿತ್ರಪಟುವೂ ಕಲ್ಪಿಸದಂಥ…. ‘ಪಟು’ ಪದವನ್ನು ಶೂರ, ಸಮರ್ಥ, ಎಂಬರ್ಥದಲ್ಲಿ ಬಳಸಲಾಗುತ್ತದೆ. ಕ್ರೀಡಾಪಟು, ಕುಸ್ತಿಪಟು ಇತ್ಯಾದಿ. ಆದರೆ ಎಲ್ಲದರಲ್ಲಿಯೂ ‘ಪಟು’ ಬಳಕೆ ಸಾಧ್ಯವೇ ಎಂಬುದನ್ನು ನೋಡಬೇಕು. ಮೇಲಿನ ಪ್ರಯೋಗದಲ್ಲಿ ಹಿಂದಿನ ಪದವನ್ನು ನೋಡಿ ಚಲನಚಿತ್ರ ಎಂಬುದನ್ನು ಊಹಿಸಬಹುದಾಗಿದೆ.

ಚಿರಾಯುಷಿ ನಾ ಕನ್ನಡ ಪ್ರಭ ದೀರ್ಘಾಯುಸ್ಸುಳ್ಳವನು. ‘ಇಂದು ಅಸ್ನೋಟಿಕರ್ ಕೊಂದವರೇನೂ ಚಿರಾಯುಷಿಗಳಲ್ಲ’. ‘ಚಿರಾಯು’ ಎಂಬುದೇ ದೀರ್ಘಾಯಸ್ಸುಳ್ಳ ವ್ಯಕ್ತಿ ಎಂದು ಅರ್ಥನೀಡುತ್ತದೆ. ಆದರೆ ‘ಶತಾಯುಷಿ’ ಎಂಬ ಪದವನ್ನು ಆಧಾರವಾಗಿಟ್ಟುಕೊಂಡು ಮೇಲಿನ ಪದ ಸೃಷ್ಟಿಯಾಗಿರುವಂತಿದೆ.

ಚುಡಾವಣೆ ನಾ ಉದಯವಾಣಿ ಚುಡಾಯಿಸುವಿಕೆ. ‘ಚೆನ್ನೈ: ಇನ್ನೊಂದು ಚುಡಾವಣೆ ಪ್ರಕರಣ; ಮಹಿಳೆ ಸಾವು’. ‘ಚುಡಾಯಿಸು’ ಕ್ರಿಯಾರೂಪದಿಂದ ಸಾಧಿಸಲಾಗಿರುವ ನಾಮರೂಪ. ಇದುವರೆಗೆ ‘ಚುಡಾಯಿಸುವಿಕೆ’ ಎಂದೇ ಬಳಕೆಯಾಗುತ್ತಿತ್ತು. ಮಾದರಿ ಉಡಾವಣೆ, ಚುನಾವಣೆ.

ಚುನಾವಣೋತ್ತರ ಗು ಪ್ರಜಾವಾಣಿ ಚುನಾವಣೆಯ ನಂತರದ. ‘ಚುನಾವಣೋತ್ತರ ಹಿಂಸೆಗೆ ದೇಶಾದ್ಯಂತ ೧೮ ಬಲಿ’. ಸ್ವಾತಂತ್ರ್ಯೋತ್ತರ, ನವ್ಯೋತ್ತರ ಇತ್ಯಾದಿ ಪದಗಳ ಮಾದರಿಯಲ್ಲಿ ಬಂದಿರುವ ಪದ. ಚುನಾವಣೆ ಪದದ ಕೊನೆಯಲ್ಲಿ ಎಕಾರ ಇದ್ದರೂ ಅಕಾರವೆಂದು ಭಾವಿಸಿ ಸಂಧಿ ಮಾಡಿದಂತಿದೆ.

ಚೂರ್ಣಿಸು ಕ್ರಿ ಸುಧಾ ಪುಡಿಮಾಡು ಹುಡಿಮಾಡು. ‘ತುಂಗೆ ಗಡ್ಡೆಯನ್ನು ತೆಗೆದುಕೊಂಡು ಗಡ್ಡೆಗಳನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿ ಕುಡಿಯಲು ಕೊಡುವುದು ಅಥವಾ ಕಡಸಿಗೆಯ ಬೀಜವನ್ನು ಚೂರ್ಣಿಸಿ ಕಷಾಯ ಮಾಡಿಕೊಡುವುದು….’ ಆಯುರ್ವೇದದಲ್ಲಿ ಅನೇಕ ಔಷಧಿಗಳನ್ನು ಚೂರ್ಣಾದ ರೂಪದಲ್ಲಿ ಕೊಡಲಾಗುವುದು. ಇಲ್ಲಲ್ಲದೆ ಚೂರ್ಣದ ಪ್ರಯೋಗ ಬೇರೆಲ್ಲೂ ಬರುವುದಿಲ್ಲ. ಮೇಲಿನ ಪ್ರಯೋಗದಲ್ಲಿ ‘ಇಸು’ ಸೇರಿಸಿ ಕ್ರಿಯಾಪದ ರೂಪ ಸಾಧಿಸಲಾಗಿದೆ.

ಚೋಡು ಕ್ರಿ ವಿಜಯ ಕರ್ನಾಟಕ ಬಿಡು (ರೈಲು ಬಿಡು, ಬೊಗಳೆ ಬಿಡು) ‘ಕನಕಪುರದ ಮಾಜಿ ಶಿಷ್ಯನ ಹೆಗಲ ಮೇಲೆ ಕೈ ಇಟ್ಟಿರುವ ಇವರು ಗುರೂ ಕನಕಪುರದಲ್ಲಿ ಹೆಲ್ಪ್ ಮಾಡು. ನಾನೇ ಪಿ.ಎಂ. ಇಲ್ಲಿ ನೀನೇ ಸಿ.ಎಂ. ಎಂದು ಚೋಡುತ್ತಿದ್ದಾರಂತೆ’. ಇಂಗ್ಲಿಷ್ ಪದಗಳು ಕನ್ನಡದ ಪದಗಳೊಡನೆ ಬೆರಕೆಯಾಗುತ್ತಿರುವುದು ತಿಳಿದ ವಿಷಯ. ಹಿಂದಿಯ ‘ಜೋಡು’ (ಬಿಡು ಎಂದರ್ಥ) ಕನ್ನಡದಲ್ಲಿನ ನಿಯಮಕ್ಕೆ ತಕ್ಕಂತೆ ಉಕಾರಾಂತವಾಗಿ ಪರಿವರ್ತನೆಗೊಂಡು ಬಳಕೆಯಾಗಿದೆ. ಲಘು ಲೇಖನಗಳಲ್ಲಿ ಇಂತಹ ಪದಗಳ ಬಳಕೆ ಕಾಣಬಹುದು.

 

ಛತ್ರಛಾಯೆ ನಾ ಕನ್ನಡ ಪ್ರಭ ಅಧೀನ, ಅಡಿ, ನೆರಳು. ‘ಹಳೆಯ ಜನತಾ ಪರಿವಾರವನ್ನು ಸಮತಾಪಾರ್ಟಿ, ಲೋಕಶಕ್ತಿ ಮತ್ತೆ ಜನತಾದಳದ ಛತ್ರಛಾಯೆಯಡಿ ಒಂದುಗೂಡಿಸಿ ಜನತಾದಳವನ್ನು…’. ‘ಇಂಗ್ಲಿಶಿನ ‘ಅಂಡರ್‌ದಿ ಅಂಬ್ರೆಲ್ಲಾ’ ಎಂಬುದರ ಸಂವಾದಿಯಾಗಿ ಬಂದಿರಬಹುದು ಎನಿಸುತ್ತದೆ.

ಛಿದ್ರೀಕರಣ ನಾ ಕನ್ನಡ ಪ್ರಭ ಸಣ್ಣ ಸಣ್ಣ ಚೂರುಗಳಾಗಿ ಒಡೆಯುವಿಕೆ. ‘ಕರ್ನಾಟಕದಲ್ಲಿ ದಲಿತ ಹೋರಾಟದ ನಾಯಕತ್ವದ ವಹಿಸಿದ್ದ ದಲಿತ ಸಂಘರ್ಷ ಸಮಿತಿಯೇ ಛಿದ್ರೀಕರಣಕ್ಕೊಳಗಾಗಿ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವುದು….’ ‘ಈಕರಣ’ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ.