ಜಗಳಾಟ ನಾ ಕನ್ನಡ ಪ್ರಭ ಜಗಳವಾಡುವಿಕೆ. ‘ಆತನ ಅಮ್ಮ ಸಹ ಈ ಜಗಳಾಟದಲ್ಲಿ ಥೇಟ್ ರಾಕ್ಷಸಿಯಂತೆಯೇ ಆತನಿಗೆ ಕಾಣಿಸುತ್ತಾಳೆ. ‘ಹೊಡೆದಾಟ, ಬಡಿದಾಟ’ ಪದಗಳ ಮಾದರಿಯಲ್ಲಿ ಬಂದಿರುವ ಪದ. ಆಗಾಗ ಕನ್ನಡದಲ್ಲಿ ಬಳಕೆಯಾಗಿದೆ.

ಜಗಿಮೇಣ ನಾ ಮಾತಿನಲ್ಲಿ ಬಳಕೆ ಪೆಪ್ಪರಮೆಂಟಿನಂತೆ ಸಿಹಿಯಾದ, ಅಗಿಯುತ್ತಲೇ ಇರಬಹುದಾದ ರಬ್ಬರಿನಂತಹ ಕರಗದ ವಸ್ತು. ‘ಇತ್ತೀಚಿಗೆ ಎರಡು ದುಶ್ಚಟಗಳು ನಮ್ಮ ಯುವಕರನ್ನು ಕಾಡುತ್ತಿದೆ. ಒಂದು ಜಗಿಮೇಣ, ಇನ್ನೊಂದು ಗುಟ್ಕಾ’. ಇಂಗ್ಲಿಶಿನ ಚೂಯಿಂಗ್ ಗಮ್ ಪದದ ಸಂವಾದಿ ಪದ.

ಜಟಾಭಿಷೇಕ ನಾ ತರಂಗ ‘ಶ್ರೀ ಮಹಾಲಿಂಗೇಶ್ವರ ಜಟಾಭಿಷೇಕ ಈ ಕ್ಷೇತ್ರದ ಮತ್ತೊಂದು ವಿಶೇಷ’. ಅಭಿಷೇಕ ಸಾಮಾನ್ಯವಾಗಿ ನೀರು, ಹಾಲು ಇತ್ಯಾದಿಗಳಿಂದ ಆಗುತ್ತದೆ. ಮೇಲಿನ ಪದದಲ್ಲಿ ಅರ್ಥಸ್ಪಷ್ಟತೆಯಿಲ್ಲ. ಜಟೆ ಎಂದರೆ ಕೂದಲು-ಜಡೆ. ಕತ್ತರಿಸಿದ ಕೂದಲು ಮೈಲಿಗೆ. ಅಂದಮೇಲೆ, ಜಟೆಯಿಂದ ಅಭಿಷೇಕವೆಂದೇ? ಒಟ್ಟಿನಲ್ಲಿ ಅರ್ಥ ಅಸ್ಪಷ್ಟ.

ಜನದ್ರೋಹಿ ನಾ ಸುಧಾ ಜನರಿಗೆ ಕೇಡು ಬಯಸುವವರು; ಜನರ ಹಿತಚಿಂತಕರಲ್ಲದವರು. ‘….ಬಾಲಕಾರ್ಮಿಕ ಪದ್ಧತಿ ಇಂಥ ಸಾಮಾಜಿಕ ಅನಿಷ್ಟಗಳ ವಿರುದ್ಧ ಎಂದೂ ದನಿಯೆತ್ತದ ‘ರಾಜದ್ರೋಹಿ’, ‘ದೇಶದ್ರೋಹಿ’ ಮಾದರಿಯನ್ನನುಸರಿಸಿ ಬಂದಿರುವ ಪದ. ದೇಶದ್ರೋಹಿ ಎಂಬಲ್ಲಿ ವಿಶಾಲಾರ್ಥವಿದೆ. ಅದು ದೇಶ/ಜನ ಎರಡನ್ನೂ ಒಳಗೊಳ್ಳುತ್ತದೆ. ಇಲ್ಲಿ ಕೇವಲ ಜನರಿಗೆ ಮಾತ್ರ ದ್ರೋಹವೆಸಗಿದಂತೆ ಕಂಡುಬರುತ್ತದೆ.

ಜನರಂಜಕ ಸುಧಾ ಜನರನ್ನು ರಂಜಿಸುವಂತಹ. ‘ಯೂನಿವರ್ಸಲ್ ಸಬ್ಜಕ್ಟ್‌… ಕಥೆಗೆ ಸಂಬಂಧಿಸಿದಂತೆ ಒಂದು ಎಳೆಯನ್ನೂ ಬಿಟ್ಟುಕೊಡಲಿಲ್ಲ. ಮತ್ತಷ್ಟು ಕೇಳಿದ್ದಕ್ಕೆ ಸಂಗೀತಮಯ, ಜನರಂಜಕ ವಸ್ತು ಎಂದು ಹೊರಮೈ ವಿವರಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು’. ರಂಜಕ=ಮನೋಹರವಾದ ಎಂಬರ್ಥದಲ್ಲಿ ಮನೋರಂಜಕ ಎಂಬ ಪದ ಬಳಕೆಯಲ್ಲಿದೆ. ಇಲ್ಲಿ ಮನಸ್ಸನ್ನು ರಂಜಿಸುವ ಎಂರ್ಥವಾದರೆ, ಮೇಲಿನ ಪ್ರಯೋಗದಲ್ಲಿ ಜನರನ್ನು ರಂಜಿಸುವ ಎಂಬರ್ಥದಲ್ಲಿ ಬಳಕೆಯಾಗಿದೆ. ರಂಜನೆ ಬೇಕಾಗಿರುವುದು ಜನರ ಮನಸ್ಸಿಗೆ, ಆದರೆ ಇಲ್ಲಿ ಬಹುಶಃ ಲಕ್ಷಣಾರ್ಥದಲ್ಲಿ ಬಳಕೆಯಾಗಿರಬೇಕು.

ಜನಹಿತ ಗು ಸುಧಾ ಜನರ ಹಿತವನ್ನು ಬಯಸಿರುವ. ‘ಒಂದು ಜನಹಿತ ಅರ್ಜಿಯನ್ನು ಮುಂದಿಟ್ಟ ಮುಂಬಯಿ ಹೈಕೋರ್ಟ್‌೧೯೯೭ರ ಎನ್‌ಕೌಂಟರ್‌ನ ಪೂರ್ತಿ ಸೂಚಿಯನ್ನು ವಿಚಾರಣೆಗಾಗಿ ಪೊಲೀಸರಿಂದ ಕೇಳಿದ್ದಿದೆ’. ಜನಹಿತ ನಾಮಪದವಾಗಿ ಬಳಕೆಯಲ್ಲಿದೆ (ಲೋಕಕಲ್ಯಾಣ; ಜನರ ಹಿತ). ಮೇಲಿನ ಪ್ರಯೋಗ ‘ಪಬ್ಲಿಕ್ ಇಂಟರೆಸ್ಟ್’ ಎಂಬುದರ ಸಂವಾದಿಯಾಗಿ ಬಂದಿರುವ ಪದ. ನ್ಯಾಯಾಲಯ ವ್ಯಾಪ್ತಿಯಲ್ಲಿ ಬಳಕೆಯಲ್ಲಿದೆ.

ಜನಾಭಿಮತ ನಾ ಸಂಯುಕ್ತ ಕರ್ನಾಟಕ ಜನಗಳ ಒಪ್ಪಿಗೆ, ಸಮ್ಮತಿ. ‘ಸಂವಿಧಾನದ ೩೮ನೇ ತಿದ್ದುಪಡಿ ಸರಿಯಾಗಿತ್ತೆಂದು ಹೇಳಿದ ಅವರು ಸಿಕ್ಕಿಂನಲ್ಲಿ ಸ್ಥಳೀಯ ಜನರೇ ಎದ್ದು ನಿಂತು ರಾಜ್ಯವನ್ನು ಭಾರತಕ್ಕೆ ಸೇರಿಸಲು ಇಚ್ಛಿಸಿ ಜನಾಭಿಮತ ನೀಡಿದಾಗ…’. ‘ಜನಾಭಿಪ್ರಾಯ’, ‘ಪ್ರಜಾಭಿಪ್ರಾಯ’ ಎಂಬ ಪದಗಳು ಹೆಚ್ಚು ಕಡಿಮೆ ಮೇಲಿನ ಅರ್ಥವನ್ನೇ ನೀಡುತ್ತಾ ಬಳಕೆಯಲ್ಲಿವೆ. ಆದರೂ ಹೊಸದಾಗಿ ಬಳಕೆಗೆ ಬಂದಿರುವ ಮೇಲಿನ ಪದಕ್ಕೆ ಸ್ವಾಗತವಿದೆ.

ಜರೂರಾತಿ ನಾ ಪ್ರಜಾವಾಣಿ ಕೂಡಲೆ ಮಾಡಬೇಕಾದುದು; ಅಗತ್ಯವಾಗಿ ಮಾಡಬೇಕಾದುದು. ‘ಮಿತವ್ಯಯದ ಜರೂರಾತಿ’. ಪರ್ಸೋ ಅರೇಬಿಕ್ ಶಬ್ದ ಜರೂರಿ-ಜರೂರು ಪದಕ್ಕೆ ಅತಿ ಪ್ರತ್ಯಯ ಹಚ್ಚಿ ಮೇಲಿನ ರಚನೆಯನ್ನು ಮಾಡಿಕೊಳ್ಳಲಾಗಿದೆ. ಮೂಲರೂಪ ‘ಜರೂರ್’. ಮಾದರಿರೂಪ: ಹಾಜರಾತಿ, ದಾಖಲಾತಿ, ಮಂಜೂರಾತಿ.

ಜಲರೋಧನ ನಾ ಸಂಯುಕ್ತ ಕರ್ನಾಟಕ ನೀರಿನಲ್ಲಿ ಅಳುವುದು/ವ್ಯರ್ಥಪ್ರಯತ್ನ. ‘ಲಾಂಚ್ ಬೇಡಿಕೆ: ಶರಾವತಿ ಮಕ್ಕಳ ಜಲರೋದನ’. ‘ಅರಣ್ಯರೋದನ’ ಪದವನ್ನು ಅನುಸರಿಸಿ ಬಂದಿರುವ ಪದ. ಅದರಂತೆಯೇ ಇಲ್ಲೂ ಸಹಾ ವ್ಯರ್ಥ ಪ್ರಯತ್ನ ಎಂಬುದೇ ಲಕ್ಷಣಾರ್ಥ.

ಜಲಾಭೇದ್ಯ ಗು ಸಂಯುಕ್ತ ಕರ್ನಾಟಕ ನೀರು ಭೇದಿಸಲಾಗದ; ನೀರು ಒಳಹೋಗದ. ‘ವಿದೇಶೀ ತಂತ್ರಜ್ಞಾನದಿಂದ ತಯಾರಾದ ಜಲಾಭೇದ್ಯ ಆಕರ್ಷಕ ವಿನ್ಯಾಸದ ವಿವಿಧ ಗಾತ್ರದ ಫಂಕೀ ಬೀನ್ ಬ್ಯಾಗುಗಳು ಈಗ ಬೆಂಗಳೂರು ಪೇಟೆಗೆ ಕಾಲಿಟ್ಟಿವೆ’. ಇಂಗ್ಲಿಶಿನ ‘ವಾಟರ್ ಫ್ರೂಪ್‌’ ಎಂಬುದಕ್ಕೆ ಸಂವಾದಿಯಾಗಿ ಸಂಸ್ಕೃತದ ಸಂಧಿ ನಿಯಮಕ್ಕೆ ಅನುಗುಣವಾಗಿ ಬಂದಿರುವ ಶಬ್ದ. ಆದರೆ ಅರ್ಥಸ್ಫುರಿಸುವುದು ಕಷ್ಟವೇ.

ಜಲಾಹಾರ ನಾ ಕನ್ನಡ ಪ್ರಭ ನೀರಿನ ರೂಪದ ಆಹಾರ, ನೀರಾಹಾರ. ‘ನಂದಾ ಅವರು ಕಳೆದ ೩ ತಿಂಗಳಿನಿಂದ ಜಲಾಹಾರದಲ್ಲಿ ಬದುಕಿದ್ದರು’. ಸಾಮಾನ್ಯವಾಗಿ ‘ದ್ರವಾಹಾರ’ ಪದ ಬಳಕೆಯಾಗುತ್ತದೆ. ‘ಜಲಾಹಾರ’ ಎಂಬಲ್ಲಿ ಕೇವಲ ನೀರನ್ನು ಮಾತ್ರ ಆಹಾರವಾಗಿ ಸೇವಿಸುವುದು ಎಂಬರ್ಥ ಬರುತ್ತದೆ. ಉದಾಹರಣೆಗೆ ಜಲಪಾನ. ಆದ್ದರಿಂದ ನೀರಾದ ಆಹಾರ ಅಥವಾ ದ್ರವದ ರೂಪದ ಆಹಾರ ಎಂದು ಬಳಸುವುದೇ ಸೂಕ್ತ.

ಜಾಗಾವಕಾಶ ನಾ ತುಷಾರ ನೆಲೆ ನಿಲ್ಲಲು ಕಲ್ಪಿಸಿರುವ ಅನುಕೂಲ. ‘ಪ್ರತಿ ತಿಂಗಳೂ ಬರುತ್ತಿದ್ದ ರಾಶಿ ರಾಶಿ ಪತ್ರಗಳ ರಾಶಿಯಲ್ಲಿ ಒಂದಷ್ಟು ಮಾತ್ರ ಆಯ್ಕೆ ಮಾಡಿ ಉತ್ತರಿಸಲು ಜಾಗಾವಕಾಶವಿತ್ತು…’. ‘ಸ್ಥಳಾವಕಾಶ’ ಬಳಕೆಯಲ್ಲಿಯ ಪದ. ‘ಜಾಗ’ ಅನ್ಯದೇಶ್ಯ ಪರ್ಸೋ ಅರೇಬಿಕ್ ಮೂಲದ್ದು. ಅವಕಾಶ ಸಂಸ್ಕೃತ ಪದ. ಸಂಧಿ ನಿಯಮಕ್ಕೆ ವಿರುದ್ಧ. ಆದರೆ, ಇಂದು ಇಂಥ ಪ್ರಕ್ರಿಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಆದ್ದರಿಂದ ಹೊಸ ರಚನೆಯೆಂದು ಒಪ್ಪಿಕೊಳ್ಳಬಹುದು.

ಜಾಣಗುರುಡುತನ ನಾ ಆಕೃತಿ ಕಂಡರೂ ಕಾಣದಂತೆ ನಟಿಸುವ ಗುಣ. ‘…ಮಂಜುನಾಥರಾಗಲೀ ಅಥವಾ ಈಶ್ವರಪ್ಪನಾಗಲೀ, ಜಗದೀಶ ಶೆಟ್ಟರ್ ಅಗಲೀ ಇಂಥ ವಿಚಾರಗಳ ಬಗ್ಗೆ ಜಾಣಗುರುಡುತನವನ್ನೇಕೆ ತೋರುತ್ತಿದ್ದಾರೆ’. ‘ಜಾಣಕಿವುಡು’ ಎಂಬ ಪದ ಪ್ರಯೋಗದಲ್ಲಿದೆ. ಇದೇ ಮಾದರಿಯನ್ನನುಸರಿಸಿ ‘ಜಾಣಗುರುಡು’ ಪದ ಸೃಷ್ಟಿಸಿ ‘ತನ’ ಹತ್ತಿಸಲಾಗಿದೆ.

ಜಾತ್ಯಂಧ ನಾ ಸಂಯುಕ್ತ ಕರ್ನಾಟಕ ಜಾತಿಯ ಮೋಹಕ್ಕೆ ಒಳಗಾದವರು. ‘ಭಾರತದಲ್ಲೊಂದು ಪುಟ್ಟ ಪಾಕಿಸ್ತಾನವನ್ನೇ ನಿರ್ಮಿಸಹೊರಟಿದ್ದ ಜಾತ್ಯಂಧರ ದಾಂದಲೆ, ದದ್ದುಳಿದುಳಿತ, ಅಟ್ಟಹಾಸ…ಬೇಯಬೇಕಾಯಿತು’. ‘ಮತಾಂಧ’ ಪದದ ಮಾದರಿಯಲ್ಲಿ ಬಂದಿರುವ ಪದ. ಮೇಲಿನ ಪದಕ್ಕೆ ‘ಹುಟ್ಟುಕುರುಡ’ ಎಂಬರ್ಥವೂ ಇದೆ. ಬರಬಹುದು: ಭಾಷಾಂಧ

ಜಾತ್ರೋತ್ಸವ ನಾ ಸಂಯುಕ್ತ ಕರ್ನಾಟಕ ಜಾತ್ರೆ ಹಾಗೂ ಉತ್ಸವ. ರಥೋತ್ಸವ, ರಾಜ್ಯೋತ್ಸವಗಳ ಮಾದರಿಯಲ್ಲಿ ರಚಿತಗೊಂಡಿರುವಪದ. ‘ಮೇಲಿನ ಮಾದರಿಗಳಲ್ಲಿ ರಥ-ಉತ್ಸವ, ರಾಜ್ಯ-ಉತ್ಸವ ಎರಡೂ ಪದಗಳು ಸಂಸ್ಕೃತದವು’. ‘ಜಾತ್ರೋತ್ಸವ’ದಲ್ಲಿನ ಪೂರ್ವಪದ ಜಾತ್ರೆ ಸಂಸ್ಕೃತದ ‘ಯಾತ್ರೆ’ಯ ತದ್ಭವ ರೂಪ.

ಜಾದೂಗಾರಿಕೆ ನಾ ಉದಯವಾಣಿ ಜಾದೂ ಮಾಡುವ ಕಲೆ. ‘ಜಾದೂಗಾರಿಕೆಗೆ ನಾಟಕೀಯ ಆಯಾಮ ನೀಡುವ ಉತ್ಸಾಹದ ಕುದ್ರೋಳಿ ಗಣೇಶ’. ‘ಇಕೆ’ ಪ್ರತ್ಯಯವನ್ನು ಸೇರಿಸಿ ಕಸಬು, ಗುಣ ತಿಳಿಸುವ ಪದಗಳನ್ನು ಸೃಷ್ಟಿಸಲಾಗುತ್ತದೆ. ಇಲ್ಲಿ ಜಾದೂಗಾರನ ಕೆಲಸವನ್ನು ಸೂಚಿಸಲು ‘ಇಕೆ’ ಬಳಸಲಾಗಿದೆ. ಮಾದರಿ: ಮಾಸ್ತರಿಕೆ, ಡಾಕ್ಟರಿಕೆ ಇತ್ಯಾದಿ.

ಜಾರುಏಣಿ ನಾ ಪ್ರಜಾವಾಣಿ (ಮಹಡಿಗಳಿಗೆ) ಹತ್ತಲು ಮತ್ತು ಇಳಿಯಲು ಬಳಸುವ ವಿದ್ಯುಚ್ಛಾಲಿತ ಏಣಿ. ‘…ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಜಾರುಏಣಿ (ಎಸ್ಕಲೇಟರ್) ಅಪಘಾತದಲ್ಲಿ ಬಾಲಕಿಯೊಬ್ಬಳ ದುರ್ಮರಣ…’. ಇಂಗ್ಲಿಶಿನ ಎಸ್ಕಲೇಟರ್ ಪದಕ್ಕೆ ಸಂವಾದಿಯಾಗಿ ಬಳಕೆಯಾಗಿರುವ ಪದ.

ಜಾಲಬಂಧ ನಾ ಸಂಯುಕ್ತ ಕರ್ನಾಟಕ ವ್ಯವಹಾರ ಸಂಪರ್ಕ/ಸಂಬಂಧ ವ್ಯವಸ್ಥೆ. ‘ಆರ್ಥಿಕವಾಗಿ ಪ್ರಬಲವಾದವರು ಮತ್ತು ಉತ್ತಮ ಜಾಲಬಂಧ ಹೊಂದಿರುವವರು ಮೇಲಿನ ವಿಳಾಸಕ್ಕೆ ಬರೆಯತಕ್ಕದ್ದು. ಜಾಲ ಎಂದರೆ ಬಂಧ. ಆದರೂ ಇಲ್ಲಿ ಜಾಲಬಂಧವೆಂದು ರಚಿಸಲಾಗಿದೆ. ನೋಡಿ ಗೂಢಚಾರರ ಜಾಲ, ಕಳ್ಳಸಾಗಣಿದಾರರ ಜಾಲ. ಇಂಗ್ಲೀಶಿನ ‘ನೆಟ್‌ವರ್ಕ್‌’ ಎಂಬುದಕ್ಕೆ ಸಂವಾದಿಯಾಗಿ ಬಳಸಿರುವ ಪದ.

ಜಿದ್ದಾ ಜಿದ್ದು ನಾ ಕನ್ನಡ ಪ್ರಭ ಪೈಪೋಟಿ. ‘ಪುತ್ತೂರು: ನೇರ ಜಿದ್ದಾಜಿದ್ದಿಗೆ ಅಖಾಡ ಸಜ್ಜು’. ಇದೊಂದು ಸಾದೃಶ್ಯ ಸೃಷ್ಟಿ. ‘ಖಡಾಖಡಿ’, ‘ಹಣಾಹಣಿ’ ಮಾದರಿಯ ಪದವನ್ನನುಸರಿಸಿ ಬಂದಿದೆ.

ಜಿಲ್ಲಾದ್ಯಂತ ಗು ಸಂಯುಕ್ತ ಕರ್ನಾಟಕ ಪೂರ್ಣ ಜಿಲ್ಲೆಯಲ್ಲಿ ಜಿಲ್ಲೆಯ ಎಲ್ಲೆಡೆ. ‘ಬಳ್ಳಾರಿ: ಜಿಲ್ಲಾದ್ಯಂತ ರಸ್ತೆ ತಡೆ, ನಾಳೆ ಬಂದ್’. ದೇಶಾದ್ಯಂತ ಎಂಬುದನ್ನು ಆಧರಿಸಿ ಬಂದಿರುವ ಪದ. ಬಹುಶಃ ಇದರ ರಚನೆಗೆ ಕಾರಣ ‘ಜಿಲ್ಲಾ’ ಎಂಬುದಿರಬೇಕು. ಆದರೆ ‘ಜಿಲ್ಲೆ’ ಎಂಬುದು ಸರಿ. ಆದ್ದರಿಂದ ಜಿಲ್ಲೆ+ಆದ್ಯಂತ ‘ಜಿಲ್ಲೆಯಾದ್ಯಂತ’ ಆಗಬೇಕು. ಸರಿಯಾದ ಬಳಕೆಯಲ್ಲ.

ಜೀವನಯಾಪನೆ ನಾ ಲಂಕೇಶ ಪತ್ರಿಕೆ ಬಾಳ್ವೆ ಮಾಡುವುದು, ಜೀವನಸಾಗಿಸುವುದು ‘ಸ್ವಲ್ಪ ಸಮಯ ಮಂಗನನ್ನು ಆಡಿಸಿಕೊಂಡು ಜೀವನಯಾಪನೆ ಮಾಡುತ್ತಿದ್ದ ಗೋವಿಂದ ಭಟ್ಟ..’ ‘ಕಾಲಯಾಪನೆ’ ಮಾದರಿಯಲ್ಲಿ ಬಂದಿರುವ ಪದ.

ಜೈನೀಕರಣ ನಾ ಮಾತಿನಲ್ಲಿ ಬಳಕೆ. ಜೈನ ಧರ್ಮಕ್ಕೆ ಒಳಗು ಮಾಡುವುದು. ‘ಈ ಕೃತಿಗಳನ್ನೆಲ್ಲಾ ಜೈನೀಕರಣ ಕ್ರಿಯೆಗೆ ಒಳಗು ಮಾಡಲಾಗಿದೆ’. ‘ಈಕರಣ’ ಪ್ರತ್ಯಯ ಬಳಸಿ ಸೃಷ್ಟಿಸಿದ ಪದ. ಇತ್ತೀಚೆಗೆ ಧರ್ಮವನ್ನು ಸಂಸ್ಕೃತಿಯನ್ನು ಸೂಚಿಸುವ ಪದದೊಡನೆ ಈಕರಣ ಪ್ರತ್ಯಯ ಬಳಸುವುದು ಹೆಚ್ಚುತ್ತಿದೆ. ಉದಾ. ಇಸ್ಲಾಮೀಕರಣ, ಆಫ್‌ಘಾನಿಸ್ತಾನೀಕರಣ ಇತ್ಯಾದಿ.

ಜೋಗುಳಿಸು ಕ್ರಿಸುಧಾ ಜೋಗುಳ ಹಾಡು. ‘ಈಕೆ ಸಹ್ಯಾದ್ರಿಯ ಕೂಸು, ನೆಲಕಡಲುಗಳ ನಡುವಣ ನೀಳತೊಟ್ಟಿಲಲ್ಲಿ ಮಲಗಿದ ಹಸುಳೆ ಸಹ್ಯಾದ್ರಿಯನ್ನು ಲಾಲಸಿ, ಪಾಲಿಸಿ, ಜೋಗುಳಿಸಿದ ತಾಯಿಯೂ ಹೌದು’. ‘ಇಸು’ ಪ್ರತ್ಯಯ ಒಳಗೊಂಡ ಪದ. ನಾಮ ರೂಪಕ್ಕೆ ‘ಇಸು’ ಸೇರಿಸಿ ಕ್ರಿಯಾರೂಪ ತರುತ್ತಿರುವುದಕ್ಕೆ ಇದೊಂದು ಮಾದರಿ.

ಜ್ಯೋತಿಷಿಗಾರ ನಾ ಸಂಯುಕ್ತ ಕರ್ನಾಟಕ ಜ್ಯೋತಿಷ್ಯ ಶಾಸ್ತ್ರ, ಭವಿಷ್ಯ ಹೇಳುವವ. ‘ರಾಹು-ಕೇತು ಗ್ರಗಳ ಸ್ಥಾನಮಾನ ಮೊದಲಾದ.. ಹೊಸವರ್ಷದ ಭವಿಷ್ಯ ಹೇಳಲಾಗುತ್ತಿದೆ. ಅಂದರೆ ಇನ್ನು ಮೇಲೆ ಶೇರು ಪೇಟೆ ವಹಿವಾಟು ಕುರಿತು ಭವಿಷ್ಯ ಹೇಳುವ ಜ್ಯೋತಿಷಿಗಾರರೂ ಸಿಗುತ್ತಾರೆ’. ಜ್ಯೋತಿಷ್ಯವನ್ನು ಬಲ್ಲವನು ಜ್ಯೋತಿಷಿ ಆಗುತ್ತಾನೆ. ಆದ್ದರಿಂದ ‘ಗಾರ’ ಪ್ರತ್ಯಯದ ಬಳಕೆ ಬೇಕಾಗಿಲ್ಲ.

 

ಟೀಕಾಸ್ಪದ ಗು ಕನ್ನಡ ಪ್ರಭ ಟೀಕೆ ಮಾಡಲು ಅವಕಾಶವಿರುವ ಟೀಕೆಗೆ ದಾರಿ ಮಾಡಿ ಕೊಡುವ, ಟೀಕೆಗೆ ಒಳಗಾಗುವ. ‘ಅದೇ ಯಾಕೆ ಹೆಚ್ಚು ಟೀಕೆಗೆ ಒಳಗಾಗ್ತಾ ಇದೆಯೆಂದರೆ ಅದು ಹೆಚ್ಚು ‘ಟೀಕಾಸ್ಪದ’ ಪಕ್ಷ’. ಶಂಕಾಸ್ಪದ, ಚರ್ಚಾಸ್ಪದ ಪದಗಳ ಮಾದರಿಯಲ್ಲಿ ಬಂದಿರುವ ಹೊಸಪದ.

ಟೀಕಾದಾಳಿ ನಾ ಉದಯವಾಣಿ ತಪ್ಪನ್ನು ಎತ್ತಿ ತೋರಿಸುವ ಮಾತಿನ ಮುತ್ತಿಗೆ. ‘ಉತ್ತರ ಪ್ರದೇಶದ ಕಲ್ಯಾಣಸಿಂಗ್ ಸರಕಾರದ ವಿರುದ್ಧ ಕೂಡ ಅತ್ಯುಗ್ರ ಟೀಕಾದಾಳಿ ಮಾಡಿದ ಸೋನಿಯಾ, ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು…’ ವಾಗ್ದಾಳಿ ಮಾದರಿಯಲ್ಲಿ ಬಂದಿರುವ ಪದ. ‘ಟೀಕಾಸ್ತ್ರ’ ಎಂಬ ಪದದ ಬಳಕೆಯನ್ನು ಗಮನಿಸಬಹುದು.

ಟೆನಿಸ್ಗಾತಿ ನಾ ಉದಯವಾಣಿ ಟೆನಿಸ್ ಆಟ ಆಡುವವಳು. ‘….ಹಿಂಗಿಸ್ ಈ ಶತಮಾನದ ಅತಿ ಕಿರಿಯ ವಯಸ್ಸಿನ ಟೆನಿಸ್‌ಗಾತಿಯೆಂಬ ಹಿರಿಮೆಗೆ ಪಾತ್ರರಾದರು.’ ‘ಗಾರ’ ಪದದ ಸ್ತ್ರೀವಾಚಕ ಪ್ರತ್ಯವನ್ನಾಗಿ ಗಾತಿ, ಗಾರ್ತಿ, ರೂಪ ಬಳಕೆಯಲ್ಲಿದೆ. ಉದಾ: ಆಟಗಾರ: ಆಟಗಾರ್ತಿ. ಆದರೆ ಬೇರೆ ಭಾಷೆಯ ಪದಗಳೊಡನೆ ಬಂದಾಗ ಸ್ವಾರಾಂತ್ಯ ಪದಕ್ಕೆ ಈ ಪ್ರತ್ಯಯಗಳು ಸೇರುವುದು ರೂಢಿ. ಉದಾ: ಬ್ಯಾಟುಗಾರ. ಮೇಲಿನ ಪ್ರಯೋಗದಲ್ಲಿ ವ್ಯಂಜನಾಂತ ಪದಕ್ಕೆ ಸೇರಿಸಿರುವುದನ್ನು ಗಮನಿಸಬಹುದು.

ಟ್ರಿನ್ಗುಟ್ಟುವಿಕೆ ನಾ ಪ್ರಜಾವಾಣಿ ‘ಟ್ರಿನ್‌’ ಎಂದು ಶಬ್ದ ಮಾಡುವಿಕೆ ‘ಮೊಬೈಲ್ ಪೋನ್‌ಗಳ ಟ್ರಿನ್ ಗುಟ್ಟುವಿಕೆ ಇಂದು ಅಂತಿಮವಾಗಿ ವಿಧಾನಪರಿಷತ್ತಿನ ಕೆಲವು ಹಿರಿಯ ಸದಸ್ಯರಿಗೆ ಕಿರಿಕಿರಿ ಉಂಟುಮಾಡಿತು’. ಸಾಮಾನ್ಯವಾಗಿ ಲಘುಲೇಖನಗಳಲ್ಲಿ ಬಳಕೆಯಾಗುವ ಅನುಕರಣವಾಚಿ ಪದ.

ಟೈಧಾರಿ ನಾ ಸುಧಾ ಟೈ ಧರಿಸಿರುವ ವ್ಯಕ್ತಿ ‘… ಸಾಲಾಗಿಟ್ಟ ಕಂಪ್ಯೂಟರುಗಳ ಮುಂದೆ ಚಿಗುರು ಮೀಸೆಯ ಯುವಕರು. ಏನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ಟೈಧಾರಿಯೊಬ್ಬ ಪಟಪಟನೆ ಅಮೆರಿಕನ್ ಇಂಗ್ಲಿಷಿನಲ್ಲಿ…’ ಇಂಗ್ಲಿಶ್ ಪದಗಳೊಡನೆ ಕನ್ನಡ ಸಂಸ್ಕೃತ ಪದಗಳ ಬಳಕೆ ಸಾಮಾನ್ಯವಾಗಿ ನಡೆಯುತ್ತಿದೆ. ಇಂಗ್ಲಿಶ್ ಪದಗಳನ್ನು ಸಾಧ್ಯವಾದೆಡೆಯಲ್ಲೆಲ್ಲಾ ಕನ್ನಡೀಕರಣ (ಕನ್ನಡಕ್ಕೆ ಹೊಂದಿ ಕೊಂಡು) ಗೊಳಿಸಿ ಬಳಸಲಾಗುತ್ತದೆ. ಉದಾ. ಸೂಟಧಾರಿ, ಕೋಟುಧಾರಿ ಇತ್ಯಾದಿ. ಮೇಲಿನ ಪ್ರಯೋಗದಲ್ಲಿ ಯಾವ ಹೊಂದಾಣಿಕೆಯೂ ಇಲ್ಲದೆ ಇಂಗ್ಲಿಶ್ ಪದವನ್ನು ಹಾಗೆಯೇ ಉಳಿಸಿಕೊಂಡು ರಚಿಸಲಾಗಿದೆ.

 

ಠಣಗುಟ್ಟಿಸು ಕ್ರಿ ಲಂಕೇಶ್ ಪತ್ರಿಕೆ ಹಣದಿಂದ/ನಾಣ್ಯದಿಂದ ಶಬ್ದಮಾಡು. ‘ಎಲ್ಲ ಪಕ್ಷಗಳ ಜನರೆದುರಿಗೆ ನಯಾಪೈಸೆಗಳನ್ನು ಠಣಗುಟ್ಟಿಸಿ ಆಕರ್ಷಿಸುತ್ತಿದ್ದಾರಂತಲ್ಲ ಛೆ!’. ಅನುಕರಣ ವಾಚಕದಿಂದ ಕ್ರಿಯಾಪದವನ್ನು ತಂದಿರುವ ಒಂದು ಪ್ರಯೋಗ. ಡವಗುಟ್ಟಿಸು, ಝಣಗುಟ್ಟಿಸು ಬಂದರೂ ಬರಬಹುದು.

ಠಣಾಯಿಸು ಕ್ರಿ ಸುಧಾ ಠಣ್ ಎಂಬ ಶಬ್ದಮಾಡು ‘ಇನ್ನೊಮ್ಮೆ ರಾತ್ರಿ ಮಲಗಬೇಕೆನ್ನುವಾಗ ಪೋನು ಠಣಾಯಿಸಿತು’. ‘ಇಸು’ ಪ್ರತ್ಯಯದೊಡನೆ ಬಂದಿರುವ ಅನುಕರಣವಾಚಕ. ಮೇಲಿನ ವಾಕ್ಯದಲ್ಲಿ ‘ಪೋನು ಠಣಾಯಿಸಿತು’ ಎಂದಿದೆ. ಆದರೆ ಪೋನಿಗೆ ಸಂಬಂಧಿಸಿದ ಶಬ್ದ ಬಳಕೆ ಮಾಡುವಲ್ಲಿ ‘ಟ್ರಿಣ್ ಟ್ರಿಣ್’ ಎಂದು ಬಳಕೆಯಲ್ಲಿದೆ. ಅಲ್ಲದೆ ‘ರಿಂಗಾಯಿತು’, ‘ರಿಂಗಿಸಿತು’ ಎಂಬುದಾಗಿಯೂ ಬಳಕೆಯಲ್ಲಿದೆ. ನಾಣ್ಯದ ಶಬ್ದವನ್ನು ಅನುಕರಿಸುವಾಗ ‘ಠಣ್’ ಶಬ್ದ ಬಳಕೆಯಲ್ಲಿದೆ. ಮೇಲಿನ ಪ್ರಯೋಗದಲ್ಲಿ ‘ಠಣಾಯಿಸು’ ಸರಿಯಾದುದೇ ಎಂಬುದು ಪ್ರಶ್ನೆ.

ಠೇವಣಿಸು ಕ್ರಿ ಉದಯವಾಣಿ ಠೇವಣಿ/ಇಡುಗಂಟು ಇಡು. ‘….ಬಾಕಿ ಹಿನ್ನೆಲೆಯಲ್ಲಿ ಸರಕಾರ ಅವರಿಗೆ ಹಣ ನೀಡದಂತೆ ಹಾಗೂ ಆ ಹಣವನ್ನು ಬ್ಯಾಂಕಿನಲ್ಲಿ ಠೇವಣಿಸುವಂತೆ ಆದೇಶಿಸಲು ವಾದಿ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ್ದಾರೆ’. ‘ಇಸು’ ಪ್ರತ್ಯಯ ಸೇರಿಸಿದ ಒಂದು ಪ್ರಯೋಗ.

ಠೊಣಪಿ ನಾ ಕನ್ನಡಪ್ರಭ ದಪ್ಪನೆಯ ಹೆಂಗಸು. ‘ಠೊಣಪಿಯರಿಗಾಗಿ ಒಂದು ಪ್ರತ್ಯೇಕ ವ್ಯಾಯಾಮಶಾಲೆ’. ‘ಟೊಣಪ’ ಎಂಬ ಪದಕ್ಕೆ ದಷ್ಟಪುಷ್ಟವಾದ ವ್ಯಕ್ತಿ ಎಂಬರ್ಥವಿದೆ. ಆದರೆ ಇಲ್ಲಿ ಕೇವಲ ‘ದಪ್ಪ’ಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನೀಡಿರುವ ಜಾಹೀರಾತು. ಟೊಣಪ ಪದವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನೀಡಿರುವ ಜಾಹೀರಾತು. ಟೊಣಪ ಪದವನ್ನು ‘ಇ’ ಕಾರಾಂತಗೊಳಿಸಿ ಸ್ತ್ರೀಲಿಂಗವನ್ನಾಗಿ ಮಾಡಲಾದ ಶಬ್ದ.