ಡಾಲರ್ ಷಾಹಿ ನಾ ಕನ್ನಡ ಪ್ರಭ ಡಾಲರ್ ವ್ಯವಸ್ಥೆಯ ಆಡಳಿತ. ‘ಇನ್ನು ಕೆಲವರ ದೃಷ್ಟಿಯಲ್ಲಿ ಕ್ಲಿಂಡನ್ ಅವರ ಭೇಟಿ ಭಾರತವನ್ನು ಡಾಲರ್ ಷಾಹಿಯ ತೆಕ್ಕೆಯೊಳಗೆ ತುರುಕುವ ಮೊದಲ ಪ್ರಯತ್ನ’. ‘ಅಧಿಕಾರಶಾಹಿ’ ‘ಸಾಮ್ರಾಜ್ಯಶಾಹಿ’ ಇತ್ಯಾದಿ ಪದಗಳ ಮಾದರಿಯಲ್ಲಿ ಬಂದಿರುವ ಪದ. ಪರೋಕ್ಷವಾಗಿ ಅಮೆರಿಕದ ಆಡಳಿ ವ್ಯವಸ್ಥೆ ಎಂದು ಹೇಳುತ್ತಿದೆ ಮೇಲಿನ ಪ್ರಯೋಗ.

 

ತಂಗುಧಾಮ ನಾ ಕನ್ನಡ ಪ್ರಭ ವಿಶ್ರಾಂತಿ ಪಡೆಯಲು ಉಳಿದುಕೊಳ್ಳಬಹುದಾದಂತಹ ಸ್ಥಳ. ‘ಮಸ್ಸೂರಿ ತಂಗುಧಾಮದ ಸಮೀಪ ಮಂಗಳವಾರ ಒಂದು ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು ಪೈಲಟ್ ಸೇರಿದಂತೆ… ಸತ್ತಿದ್ದಾರೆ.’ ‘ತಂಗುದಾಣ’ ಬಳಕೆಯಲ್ಲಿರುವ ಪದ: ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಮೇಲಿನ ಪ್ರಯೋಗ ಬಳಕೆಗೆ ಬಂದಿದೆ.

ತಂಡೇತರ ಗು ಪ್ರಜಾವಾಣಿ ತಂಡದವರಲ್ಲದ. ‘ರಂಗ ಕಲಾವಿದ, ತಂಡೇತರ ನಿರ್ವಹಣೆ/ಸ್ಥಾಪನಾ ಅನುದಾನ ವಾರ್ಷಿಕ ರೂ….’. ‘ಇತರೆ’ ಪದವನ್ನು ಬಳಸಿ ಅನೇಕ ಪದಗಳ ಸೃಷ್ಟಿ ನಡೆಯುತ್ತಿದೆ. ಉದಾ: ಕಾಂಗ್ರೆಸ್ಸೇತರ, ಬೋಧಕೇತರ ಇತ್ಯಾದಿ. ಇಲ್ಲಿ ನಡೆದಿರುವ ಸಂಧಿ ಪ್ರಕ್ರಿಯೆ ಸರಿಯಾಗಿಯೇ ನಡೆದಿದ್ದರೊ ಕಿವಿಗೆ ಹಿತವೆನಿಸುವುದಿಲ್ಲ.

ತಂತ್ರಚಳಕ ನಾ ಪ್ರಜಾವಾಣಿ ತಾಂತ್ರಿಕ ಜ್ಞಾನದ ಚಮತ್ಕಾರ, ‘ಸರಣಿ ಗುಮ್ಮಟಗಳಲ್ಲಿ ನೀರೆತ್ತುವ ಸ್ವಯಂಚಲಿ ಸೈಫನ್‌ಗಳು ವಿಶ್ವೇಶ್ವರಯ್ಯನವರ ತಂತ್ರಚಳಕದ ನೋಟ’. ‘ಕೈ ಚಳಕ’ ಮಾದರಿಯಲ್ಲಿ ಬಂದಿರುವ ಪದ. ಸಾಮಾನ್ಯವಾಗಿ ‘ಚಳಕ’ ಪದವನ್ನು ಬೇರೆ ಯಾವುದೇ ಪದದೊಂದಿಗೆ ಬಳಸಿರುವುದು ಇದೇ ಮೊದಲು ಎನಿಸುತ್ತದೆ.

ತಾಂತ್ರಜ್ಞಾನಿಕ ಗು ಉದಯವಾಣಿ ತಂತ್ರಜ್ಞಾನಕ್ಕೆ ಸಂಬಂಧಿಸಿದ. ‘ಭೂ ಸಂಯೋಜಕಗಳ ಬಗ್ಗೆ ತಾಂತ್ರಜ್ಞಾನಿಕ ಮಾಹಿತಿಯತ್ತ ಯತ್ನ’. ಸಾಂವಿಧಾನಿಕ ಪದದ ಮಾದರಿಯಲ್ಲಿ ಬಂದಿರುವ ಪದ. ತಾಂತ್ರಿಕ ಎನ್ನುವ ಪದದ ಬಳಕೆಯೂ ಮೇಲಿನ ಅರ್ಥದಲ್ಲೆ ಬರುತ್ತದೆ. ಆದರೂ ತಾಂತ್ರಿಕ ಪದ ಇನ್ನೂ ಕೆಲವು ಅರ್ಥದಗಳಲ್ಲೂ ಬರುವುದರಿಂದ ತಾಂತ್ರಜ್ಞಾನಿಕ ಸರಿಯಾದ ರೂಪವೆನಿಸುತ್ತದೆ.

ತಂತ್ರಾಂಶ ನಾ ಪ್ರಜಾವಾಣಿ ಗಣಕಯಂತ್ರದಲ್ಲಿ ಕಾರ್ಯ ನಿರ್ವಹಿಸಲು ಮಾಡಿರುವ ಯೋಜನೆ. ‘ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ದಾಸ್ ಗುಪ್ತಾ ಮಾತನಾಡಿ ಮುದ್ರಣದಲ್ಲಿ ಇಂಗ್ಲಿಶ್‌ನಂತೆ ಕನ್ನಡದ ಅಕ್ಷರಗಳನ್ನು ಸುಂದರವಾಗಿ ಮೂಡಿಸುವ ಬಗ್ಗೆ ತಂತ್ರಾಂಶ ತಯಾರಕರು ಗಮನಹರಿಸಬೇಕು’. ಮೃದುಗಣಕ, ಮೃದೂಪಕರಣ ಎಂಬ ಪದಗಳನ್ನು ಈಗಾಗಲೇ ಬಳಸಿದ್ದರೂ ಸಹಾ ಯಾವುವೂ ಇಂಗ್ಲಿಶಿನ ‘ಸಾಫ್ಟ್‌ವೇರ್’ ಪದಕ್ಕೆ ಸಂವಾದಿಯಾಗಿ ಅಷ್ಟೇ ಪರಿಣಾಮಕಾರಿಯಾಗಿ ಬಂದಿಲ್ಲವೆಂಬುದನ್ನು ಗಮನಿಸಬಹುದು.

ತಂಪುಕಾರಕ ಗು ತರಂಗ ತಂಪನ್ನುಂಟು ಮಾಡುವ. ‘ಆಯುರ್ವೇದವು ಇದನ್ನು ತಂಪುಕಾರಕ, ಶಕ್ತಿದಾಯಕ, ಮೂತ್ರ ಉತ್ಪತ್ತಿಗೆ ಸಹಕಾರಿ ಹೀಗೆಲ್ಲಾ ವರ್ಣಿಸಿದೆ’. ‘ಕಾರಕ’ ಪ್ರತ್ಯಯಕ್ಕೆ ಉಂಟು ಮಾಡುವ ಎಂಬರ್ಥವಿದೆ. ಆದರೂ ಕೆಲವು ನಾಮಪದಗಳಿಗೆ ‘ದಾಯಕ’ ಪ್ರತ್ಯಯ ಹತ್ತುವುದು. ಉದಾ: ಶಕ್ತಿದಾಯಕ, ಸಂತೋಷದಾಯಕ. ಒಂದು ವೇಳೆ ಬಳಸಬೇಕಾದಾಗ ಉಷ್ಣವನ್ನುಂಟು ಮಾಡುವ, ತಂಪನ್ನುಂಟು ಮಾಡುವ ಎಂದೇ ಬಳಸಲಾಗುತ್ತಿದೆ.

ತಟರಕ್ಷಕ ಗು ಉದಯವಾಣಿ ಸಮುದ್ರದ ದಂಡೆಗಳನ್ನು ಕಾಯುವ. ‘ಕಳೆದ ಕೆಲವು ತಿಂಗಳಿನಿಂದ ಇದಕ್ಕಾಗಿ ಕಾಯುತ್ತಿದ್ದ ಕೇಂದ್ರ ಗುಪ್ತಚಾರ ಇಲಾಕೆಯ ತಟರಕ್ಷಕ ಪಡೆಯ ಕಣ್ಣಿಗೆ ಮಣ್ಣೆರಚಿ ಇಪ್ಪತ್ತು ಕೋಟಿ ರೂಗಳ ಬೆಳ್ಳಿಯನ್ನು ಇಲ್ಲಿ ಹೂತಿಡಲಾಗಿದೆ….’. ‘ಇಂಗ್ಲಿಶಿನಲ್ಲಿರುವ ‘ಕೋಸ್ಟ್ ಗಾರ್ಡ್‌’ ಎಂಬುದರ ನೇರ ಅನುವಾದ ಮಾಡಿ ಸೃಷ್ಟಿ ಮಾಡಿದ ಪದ. ಮಾದರಿ: ಗಡಿರಕ್ಷಕ, ಗೃಹರಕ್ಷಕ.

ತಡರಾತ್ರಿ ನಾ ವಿಜಯ ಕರ್ನಾಟಕ ರಾತ್ರಿಯ ಬಹಳ ಹೊತ್ತಿನ ನಂತರ. ‘ಕಳೆದ ತಡರಾತ್ರಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಈ ಕುರಿತು ನಡೆದ ಸಂಸದರ ಸಭೆಯಲ್ಲಿ ನಿರ್ಧರಿಸಲಾಯಿತು’. ಇಂಗ್ಲಿಶಿನಿಂದ ಕನ್ನಡಕ್ಕೆ ಅನೇಕ ಪದಗಳು ಭಾಷಾಂತರವಾಗಿ ಬರುತ್ತಿದೆ. ಮೇಲಿನ ಪ್ರಯೋಗ ಇಂಗ್ಲಿಶಿನ ‘ಲೇಟ್ ನೈಟ್’ ಎಂಬುದರ ಸಂವಾದಿಯಾಗಿ ಬಂದಿರುವ ಪದ.

ತಡವರಿಕೆ ನಾ ಜಾಹೀರಾತು ತಡೆ ತಡೆದು ಮಾತನಾಡುವುದು. ‘ಸಂಕೋಚವಿಲ್ಲದೆ, ತಡವರಿಕೆಯಿಲ್ಲದೆ ಅತಿ ಸರಳವಾಗಿ ಮಾತಾಡಲು ತೊಡಗಿರಿ’. ‘ತಡವರಿಸು’ ಕ್ರಿಯಾಪದದಿಂದ ಸಾಧಿತವಾದ ನಾಮಪದ. ಇಂತಹ ಕಡೆಗಳಲ್ಲೆಲ್ಲಾ ‘ಇಕೆ’ ಪ್ರತ್ಯಯ ಪದದ ನಂತರವೇ ಸೇರುವುದು ರೂಢಿ. ಉದಾ: ರಾರಾಜಿಸು-ರಾರಾಜಿಸುವಿಕೆ; ಮರೆಸು-ಮರೆಸುವಿಕೆ ಬಿಡಿಸು-ಬಿಡಿಸುವಿಕೆ. ಆ ದೃಷ್ಟಿಯಿಂದ ನೋಡಿದರೆ ತಡವರಿಸುವಿಕೆ ಸರಿಯಾದ ರೂಪವಾಗಬಹುದು.

ತಡೆಕಂಬ ನಾ ಲೋಕಧ್ವನಿ ಅಡ್ಡಿ, ತಡೆ. ‘ಬಿ.ಜೆ.ಪಿ.ಯ ಗೆಲ್ಲುವ ಕುದುರೆ ಓಟಕ್ಕೆ ಮಾರ್ಗರೇಟ್ ಹಾಕಿದ್ದ ತಡೆಕಂಬವನ್ನು ದೇಶಪಾಂಡೆ ಮಜಬೂತ ಆಗಮನ ತೆಗೆದು ಹಾಕಿತೆ…?’ ‘ತಡೆಗೋಡೆ’ ಎಂಬುದು ಬಳಕೆಯಲ್ಲಿರುವ ಪದ. ಅಡ್ಡಗಾಲು, ಅಡ್ಡಗೋಡೆ, ಅಡೆತಡೆ, ಪದಗಳೂ ಸಹ ಬಳಕೆಯಾಗುತ್ತಿವೆ. ‘ತಡೆಕಂಬ’ ಮೇಲಿನ ವಾಕ್ಯದಲ್ಲಿ ಸರಿಯಾದ ಅರ್ಥ ನೀಡಬಲ್ಲುದು ಎಂಬುದು ಸಂದೇಹ.

ತಡೆನೆಗೆತ ಓಟ ನಾ ಸುಧಾ ಅಡ್ಡ ಹಾಕಿರುವ ತಡೆಗಳನ್ನು ಹಾರಿ ಮುಂದೋಡುವ ಓಟ. ‘…ಓಟಗಳ ಸ್ಪರ್ಧೆ ನಡೆಯುತ್ತದೆ. ಎರಡನೆಯ ದಿನ ೧೦೦ ಮೀ. ತಡೆನೆಗೆತ ಓಟ. ಡಿಸ್ಕಸ್ ಎಸೆತ….. ನಡೆಯುತ್ತದೆ’. ‘ಅಡೆ ತಡೆ ಓಟ’ ಎಂಬ ಪದ ಬಳಕೆಯಲ್ಲಿದೆ. ಆದರೆ ಮೇಲಿನ ಪ್ರಯೋಗವೇ, ಓಡುವ ಕ್ರಿಯೆಯನ್ನು ಗಮನಿಸಿದಾಗ, ಸರಿಯಾಗಿ ಅರ್ಥ ಕೊಡುವ ಪದವಾಗಿದ್ದು ಬಳಸಬಹುದಾಗಿದೆ.

ತತ್ವಾಂತರ ನಾ ಲಂಕೇಶ ಪತ್ರಿಕೆ ತತ್ಪ, ಸಿದ್ಧಾಂತಗಳನ್ನು ಬದಲಿಸುವುದು. ‘….ಕೋಮು ಸಾಮರಸ್ಯ ಬೋಧಿಸುವ ಪಕ್ಷದಿಂದ ಕೋಮುವಾದಿ ಪಕ್ಷಕ್ಕೆ ಹಾರಿದರು. ಒಂದೇ ಗಳಿಗೆಯಲ್ಲಿ ತ್ವಾಂತರವಾಯಿತು’. ‘ಪಕ್ಷಾಂತರ’ ಪದವನ್ನು ಮಾದರಿಯಾಗಿಟ್ಟುಕೊಂಡು ರಚಿಸಿದಂತಹ ಪದ.

ತತ್ವಾಕಾಂಕ್ಷಿ ನಾ ಪ್ರಜಾವಾಣಿ ತತ್ವಕ್ಕೆ ಬದ್ದರಾದವರು. ‘ಕೈಕಾಲಿಲ್ಲದವರನ್ನು ಪರಿಗಣಿಸಿದರೆ ನಾವು ಪುಣ್ಯವಂತರೆಂಬ ತತ್ವಾಕಾಂಕ್ಷಿಗಳಾಗಿರುವುದು ಈ ಸಹೋದರಿಯರ ದೊಡ್ಡ ಗುಣ’. ‘ಆಕಾಂಕ್ಷಿ’ ಪದವನ್ನು ಬೇರೊಂದು ಪದದೊಂದಿಗೆ ಬಳಸಿ ಪದಸೃಷ್ಟಿಮಾಡಿದರೂ ಅದಕ್ಕೆ ‘ಅಪೇಕ್ಷೆ, ಬಯಕೆ’ ಎಂಬ ಅರ್ಥ ಬರುತ್ತದೆ. ಆದರೆ ಮೇಲಿನ ಪ್ರಯೋಗದಲ್ಲಿ ಆ ಅರ್ಥವಿಲ್ಲ. ಮಾದರಿ: ಮಹತ್ವಾಕಾಂಕ್ಷಿ.

ತನಿಖೆಗಾರ ನಾ ತರಂಗ ವಿಚಾರಣೆ ನಡೆಸುವವರು. ‘ನ್ಯಾಯಮೂರ್ತಿ ಭರೀಹೋಕ್ ಅವರು ತನಿಖೆಗಾರರಿಗೆ ಪುನರ್ವಿಮರ್ಶಿಸಲು ಆಜ್ಞಾಪಿಸಿರುವುದರಿಂದ ಇದು ಬದಲಾಗಬಹುದೆಂದು ನಾನು ತಿಳಿದಿದ್ದೇನೆ, ಗಾರ ಪ್ರತ್ಯಯದೊಡನೆ ಬಂದಿರುವ ಹೊಸ ಪದ. ಸಾಮಾನ್ಯವಾಗಿ ವಿವರಣೆಯೊಂದಿಗೆ ಬರುತ್ತಿದ್ದುದು (ತನಿಖೆ ಮಾಡುವವರು, ತನಿಖೆ ನಡೆಸುವವರು ಇತ್ಯಾದಿ) ಈಗ ಒಂದೇ ಪದವಾಗಿ ಬಂದಿದೆ.

ತಪ್ಪುಗಾರ ನಾ ತರಂಗ ತಪ್ಪು ಮಾಡಿರುವವ. ‘ಅದೇ ನೆಲೆಯಲ್ಲಿ ಕಾಂಗ್ರೆಸ್ ನಿರ್ವಾಹಕರಿಗೆ ಹಣವನ್ನು ಒದಗಿಸಿದ ವ್ಯಾಪಾರಿಗಳನ್ನೂ ತಪ್ಪುಗಾರರೆಂದು ಪರಿಗಣಿಸಬೇಕು’. ತದ್ಧಿತಾಂತಗಳ ರಚನೆಯಲ್ಲಿ ಭಿನ್ನ ಭಿನ್ನ ಪ್ರತ್ಯಯಗಳು ಬಳಕೆಯಾಗುತ್ತವೆ. ಆದರೂ ಈಗ ಕಾರಗಾರ ಪ್ರಯತ್ಯಯದ ಬಳಕೆ ಹೆಚ್ಚುತ್ತಿದ್ದು. ಮೇಲಿನ ಪ್ರಯೋಗ ಇದಕ್ಕೊಂದು ಉದಾಹರಣೆ. ಆದರೆ ಈಗಾಗಲೇ ತಪ್ಪತಸ್ಥ ಪದ ಬಳಕೆಯಲ್ಲಿರುವುದಿಂದ ಮೇಲಿನ ರಚನೆ ಅನವಶ್ಯಕವೆನಿಸುತ್ತದೆ.

ತಪ್ಪುದಾರ ಗು ಕನ್ನಡ ಪ್ರಭ ತಪ್ಪು ಮಾಡಿರುವ. ‘ನಮ್ಮ ತಪ್ಪುದಾರ ರಾಜಕಾರಣಿಗಳೆಲ್ಲಾ ತಮ್ಮ ವಿರುದ್ಧದ ಆರೋಪಗಳು ನ್ಯಾಯಾಲದಲ್ಲಿ ಸಾಬೀತಾದರೆ ರಾಜಕಾರಣದಿಂದಲೇ ಈಗಾಗಲೇ ಬಳಕೆಯಲ್ಲಿದೆ. ಆದರೂ ದಾರ-ಗಾರ-ಕಾರ ಪ್ರತ್ಯಯದೊಡನೆ ಅನೇಕ ಪದಗಳು ರಚನೆಯಾಗುತ್ತಿರುವುದು ಮೇಲಿನ ಪ್ರಯೋಗ ಮಾದರಿಯಾಗಿಬಹುದು. -ದಾರ ಇದು ಪರ್ಸೋ ಅರೇಬಿಕ್ ಪ್ರತ್ಯಯ. ಸಾಮಾನ್ಯವಾಗಿ ಕನ್ನಡ ಪದಗಳಿಗೆ ಹತ್ತುವುದಿಲ್ಲ.

ತರಂಗಿಸು ಕ್ರಿ ವಿಜಯ ಕರ್ನಾಟಕ ಅಲೆ ಅಲೆಯಾಗಿ ಹೊಮ್ಮುವಂತೆ ಮಾಡು. ‘ವಚನ ಚೈತ್ರದಲ್ಲಿ ಸಮಾಜಮುಖಿಯಾದ ಸ್ವಾಮೀಜಿ, ವಚನತರಂಗದಲ್ಲಿ ಅಂತರ್ಮುಖಿಗಳಾಗಿ ಸಾಮಾಜಿಕ ಚಿಂತನೆಯಲ್ಲಿ ತರಂಗಿಸುತ್ತಾರೆ. ‘ಇಸು’ ಪ್ರತ್ಯಯ ಬಳಸಿ ತಂದಿರುವ ಹೊಸ ಪದ.

ತರಬೇತಿಗಾರ ನಾ ಕನ್ನಡ ಪ್ರಭ ನಿರ್ದಿಷ್ಟ ಕೆಲಸದಲ್ಲಿ ಹೆಚ್ಚು ಶಿಕ್ಷಣ ನೀಡಿ ಸಾಧನೆ ಮಾಡಲು ನೆರವಾಗುವವ. ‘ಪಾಂಡಿಚೇರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಉತ್ಸವದಲ್ಲಿ ಉತ್ತಮ ಪ್ರದರ್ಶನಗಾರ ಹಾಗೂ ಉತ್ತಮ ಯೋಗ ತರಬೇತಿಗಾರ ಪ್ರಶಸ್ತಿಯನ್ನು ಪಡೆದ…’. ‘ತರಬೇತುದಾರ’ ಪದ ಈಗಾಗಲೇ ಬಳಕೆಯಲ್ಲಿದೆ.

ತಲ್ಲಣಕಾರಿ ಗು ಪ್ರಜಾವಾಣಿ ಚಿಂತೆ ಹುಟ್ಟಿಸುವ/ತಳಮಳವನ್ನುಂಟು ಮಾಡುವ. ‘ತಲ್ಲಣಕಾರಿ ಪ್ರಕರಣ’. ‘ಕಾರಿ’ ಪ್ರತ್ಯಯ ಬಳಸಿ ‘ಉಂಟುಮಾಡುವ’ ಎಂಬ ಅರ್ಥ ಪಡೆಯಲಾಗುತ್ತದೆ. ಆದರೂ ‘ತಲ್ಲಣವನ್ನುಂಟು ಮಾಡುವ’ ಎಂದೇ ಬಳಕೆ ನಡೆಯುತ್ತಿತ್ತು. ಮೇಲಿನ ಪ್ರಯೋಗಕ್ಕೆ ಬಹುಶಃ ‘ಆತಂಕಕಾರಿ’ ಪದ ಮಾದರಿಯಾಗಿರಬಹುದು.

ತಾಲಿಬಾನೀಕರಣ ನಾ ಉದಯವಾಣಿ ತಾಲಿಬಾನ್ ಸಂಸ್ಕೃತಿಗೆ ಹೊಂದಿಸುವುದು. ‘ಕಾಶ್ಮೀರದ ತಾಲಿಬಾನೀಕರಣ ಸಾಧ್ಯವಾಗದು’. ಇತ್ತೀಚೆಗೆ ದೇಶವನ್ನು, ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ‘ಈಕರಣ’ ಪ್ರತ್ಯಯದೊಂದಿಗೆ ಪದರಚನೆ ಮಾಡುವುದು ಹೆಚ್ಚಾಗುತ್ತದೆ. ಉದಾ: ಆಫ್‌ಘಾನಿಸ್ತಾನೀಕರಣ, ಭಾರತೀಕರಣ ಇತ್ಯಾದಿ. ಇಷ್ಟೇ ಅಲ್ಲದೆ ಮನುಷ್ಯನ ಸ್ವಭಾವವನ್ನು ಬಿಂಬಿಸುವ ಪದಗಳೂ ಬರುತ್ತಿವೆ. ಉದಾ: ವೀರಪ್ಪನೀಕರಣ. ಮೇಲಿನ ಪದ ತಾಲಿಬಾನ್ ಸಂಸ್ಕೃತಿಯನ್ನು ಗಮನಿಸಿ ಬಂದಿರುವಂತಹದ್ದು.

ತಂತ್ರಜ್ಞಾನಿ ನಾ ಪ್ರಜಾವಾಣಿ ಯಾಂತ್ರಿಕ/ತಾಂತ್ರಿಕ ಜ್ಞಾನವಿರುವವ. ‘ಕಂಪ್ಯೂಟರ್ ತಂತ್ರಜ್ಞಾನದ ಲಾಭವನ್ನು ಕನ್ನಡ ಭಾಷೆಯ ಮೂಲಕವೇ ಪಡೆಯಬಹುದು ಎಂಬುದನ್ನು ತೋರಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ಸಂಘಟನೆಯ ಕಾರ್ಯಕರ್ತರು, ಕಂಪ್ಯೂಟರ್ ತಂತ್ರಜ್ಞಾನಿಗಳು’. ‘ತಂತ್ರಜ್ಞಾನ’ ಎಂಬುದರಿಂದ ರೂಪಿಸಲಾದ ವ್ಯಕ್ತಿವಾಚಕ. ‘ತಂತ್ರಜ್ಞ’ ಪದ ಈಗಾಗಲೇ ಬಳಕೆಯಲ್ಲಿದೆ.

ತಿದ್ದಾವಣೆ ನಾ ಸುಧಾ ಹಸ್ತಪ್ರತಿ ತಿದ್ದುವ ಕೆಲಸ; ತಿದ್ದುವಿಕೆ, ‘ವಾಣಿಜ್ಯ ವ್ಯಾಪಾರಗಳಲ್ಲಿ ತೊಡಗಿದ್ದ ಎಂಟು ಹತ್ತು ಮಾಫಿಯಾ ಕುಟುಂಬಗಳ ಚಿತ್ರಣ ಅದರಲ್ಲಿದೆ. ಸರಿಯಾಗಿ ತಿದ್ದಾವಣೆಯನ್ನು ಕಾಣದ ಕಾದಂಬರಿಯನ್ನು ಪ್ರಕಟಿಸಲು ಪ್ರಕಾಶಕರು ಮುಂದೆ ಬಂದರು.’ ‘ಚುನಾವಣೆ’, ‘ಜಮಾವಣೆ’ ಮಾದರಿಯಲ್ಲಿ ಬಂದಿರುವ ಪದ. ಇವು ಪರ‍್ಸೋ ಅರೇಬಿಕ್ ಪದಗಳು. (ಮೇಲಿನ ಪ್ರಯೋಗದಲ್ಲಿ ತಿದ್ದು ಕನ್ನಡ ಪದವಾಗಿದೆ.) ಇವುಗಳ ಕ್ರಿಯಾರೂಪಗಳೂ ಇವೆ. ಚುನಾಯಿಸು, ಜಮಾಯಿಸು ಇತ್ಯಾದಿ. ಆದರೆ ಮೇಲಿನ ಪ್ರಯೋಗದಿಂದ ‘ತಿದ್ದಾಯಿಸು’ ರೂಪಸಾಧ್ಯವಿಲ್ಲ.

ತಿನ್ನಬಾಕ ನಾ ಲಂಕೇಶ್‌ ಪತ್ರಿಕೆ ಹೆಚ್ಚಾಗಿ ತಿನ್ನುವವನು/ತಿನ್ನುವುದೇ ಹವ್ಯಾಸವಾಗುಳ್ಳವನು. ‘ನಾನು ಹದಿನಾರು ವರ್ಷದವಳಿದ್ದಾಗ ೮೪ ಕೆ.ಜಿ.ಯಷ್ಟು ದಪ್ಪವಾಗಿದ್ದೆ. ಅದು ನಮ್ಮ ಮನೆತನದ ಬಳುವಳಿ. ನಾವೆಲ್ಲ ತಿನ್ನಬಾಕರು’. ‘ಬಾಕ’ ಪದ ಬಳಸಿ ಯಾವುದೇ ಒಂದು ಕ್ರಿಯೆಯನ್ನು ಅತಿಯಾಗಿ ಮಾಡುವುದನ್ನು ಸೂಚಿಸಲಾಗುತ್ತದೆ. ಉದಾ: ಹೊಟ್ಟೆಬಾಕ. ಇದೇ ಮಾದರಿಯಲ್ಲಿ ಬಂದಿರುವ ಪದ. ತಿನ್ನುಬಾಕ ಸರಿಯಾದೀತು.

ತಿರುಪಾಯಿಸು ಕ್ರಿ ಕನ್ನಡ ಪ್ರಭ ತಿರುತಿರುಗಿ ಹಾಕು, ಮತ್ತೆ ಮತ್ತೆ ಹಾಕು. ‘ಚಂದನದವರು ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಮತ್ತೆ ಮತ್ತೆ ತಿರುಪಾಯಿಸಿದರೂ ಒಪ್ಪೆನಿಸುತ್ತದೆಯೇ ಹೊರತು ತಪ್ಪೆನಿಸುವುದಿಲ್ಲ’. ಬಹುಶಃ ಮೇಲಿನ ಪದ ಸಾದೃಶ್ಯ ಸೃಷ್ಟಿ. ‘ಲಪಟಾಯಿಸು’, ‘ಚುನಾಯಿಸು’ ಇತ್ಯಾದಿಗಳನ್ನು ಗಮನಿಸಿ ತಂದಿರುವ ಪದ. ಆದರೆ ನಿವೃತ್ತಿ ಹೇಗೆಂಬುದು ತಿಳಿದು ಬಂದಿಲ್ಲ.(- + ಇಸು)

ತಿರೋಗಾಮಿತನ ನಾ ಕರ್ಮವೀರ ಮೂಲಭೂತವಾಗಿರುವುದ: ‘ಅಂಥ ವ್ಯವಸ್ಥೆ ಅಧಿಕಾರ ಸೂತ್ರ ಹಿಡಿದಾಗ ಜನ ಕಲ್ಯಾಣ, ದೇಶಾಭಿವೃದ್ದಿಗಿಂತ ಭಿನ್ನವಾದ ತಿರೋಗಾಮಿತನ ಹುಚ್ಚೇಳುತ್ತದೆ. ‘ಪುರೋಗಾಮಿ’ ಪದದ ಆಧಾರದ ಮೇಲೆ ‘ತಿರೋಗಾಮಿ’ ಪದ ಸೃಷ್ಟಿಸಿ ‘ತನ’ ಪ್ರತ್ಯಯ ಹಚ್ಚಲಾಗಿದೆ.

ತುಂಡಗಲ ನಾ ಹಾಯ್‌ ಬೆಂಗಳೂರು ಅಗಲ ಚಿಕ್ಕದಾಗಿರುವ. ‘ಆಕೆಯ ತುಂಡಗಲದ (ಪಾಸ್ ಪೋರ್ಟ್‌) ಪೋಟೋ ಕೂಡಾ ಎಲ್ಲೂ ಲಭ್ಯವಿಲ್ಲ. ಅರ್ಥಸ್ಪಷ್ಟತೆಗಾಗಿ ಇಂಗ್ಲಿಶ್‌ನ ಪದವನ್ನೇ ಆವರಣದಲ್ಲಿ ಕೊಟ್ಟಿರುವುದು ಸಹಾಯಕವಾಗಿದೆ. ಇಲ್ಲದಿದ್ದರೆ ಪಾಸ್‌ಪೋರ್ಟ್‌ಎಂದು ತಿಳಿಯಲು ಸಾಧ್ಯವಾಗುವುದಿಲ್ಲ.

ತುಟಿಯಂಟು ನಾ ಮಾತಿನಲ್ಲಿ ಬಳಕೆ ತುಟಿಗಳಿಗೆ ಹಚ್ಚಿಕೊಳ್ಳುವ ಬಣ್ಣ. ‘ತುಟಿಯಂಟೇ ಅಲ್ಲದೆ ಇನ್ನಿತರ ಪ್ರಸಾದನ ಸಾಮಗ್ರಿಗಳೂ ಮುಖವನ್ನು ಅಲಂಕರಿಸಿದ್ದವು.’ ‘ಲಿಪ್‌ಸ್ಟಿಕ್’ ಎಂಬ ಪದಕ್ಕೆ ಸಂವಾದಿಯಾಗಿ ಬಳಸಲಾದ ಪದ.

ತೂಗು ವಿಧಾನಸಭೆ ನಾ ಕನ್ನಡಪ್ರಭ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಸ್ಥಿತಿ. ‘ತೂಗು ವಿಧಾನಸಭೆ ರಚನೆಯಾಗುವ ಲಕ್ಷಣಗಳೇ ಕಾಣುತ್ತಲಿದೆ’. ಇಂಗ್ಲಿಶಿನ ‘ಹಂಗ್‌ಅಸೆಂಬ್ಲಿ’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ನೇರಾನುವಾದ. ‘ಅತಂತ್ರ’ ಎಂಬ ಪದ ಈಗ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ತೃಷಾಪಹಾರಿ ಗು ಸುಧಾ ದಣಿವನ್ನು, ನೀರಡಿಕೆಯನ್ನು ಹೋಗಲಾಡಿಸುವ. ‘ತೃಷಾಪಹಾರಿ ಪೇಯಗಳಲ್ಲಿ ಮಜ್ಜಿಗೆಯು ಪ್ರಮುಖ’. ಸಂಸ್ಕೃತ ಸಂಧಿ ನಿಯಮಾನುಸಾರಿಯಾಗಿ ಬಂದಿರುವ ಹೊಸ ಪದ.

ತೇವಾಂಶಗಳು ಗು ಜಾಹೀರಾತು ತೇವದಿಂದ ಕೂಡಿದ. ‘ತ್ವಮಯಗೆ ಕಾಂತಿ ನೀಡುವ ವಿಟಮಿನ್‌ಗಳು ಅವುಗಳಲ್ಲಿರುವ ಅಪೂರ್ವ ಭೇದಿಸುವಂತಹ ಶಕ್ತಿಯಿಂದಾಗಿ ತ್ವಚೆಯನ್ನು ತೇವಾಂಶಮಯಗೊಳಿಸುತ್ತದೆ.’ ಇಂಗ್ಲಿಶಿನಿಂದ ಭಾಷಾಂತರ ಮಾಡುವಂತಹ ಪದಕ್ಕೆ ಮೇಲಿನ ಪ್ರಯೋಗ ಉದಾಹರಣೆ. ಚರ್ಮ ಒಣಗದಂತೆ ರಕ್ಷಿಸುತ್ತದೆ ಎಂಬುದನ್ನು ಹೇಳುವುದೇ ಮೇಲಿನ ಪ್ರಯೋಗದ ಉದ್ದೇಶ.

 

ದಂತಾರೋಗ್ಯ ನಾ ತರಂಗ ಹಲ್ಲುಗಳು ರೋಗಮುಕ್ತವಾಗಿರುವುದು. ‘ದಂತಾರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಪರಿಣತ ವೈದ್ಯರಿಂದ ತಿಳುವಳಿಕೆ ನೀಡಿಸುವುದು’. ‘ಆರೋಗ್ಯ’ ಪದ ಉತ್ತರಪದವಾಗಿ ಬಳಸಿ ಪದ ಸೃಷ್ಟಿಸಿರುವುದು ಬಹಳ ಕಡಿಮೆ. ಅದರಲ್ಲೂ ದೇಹದ ಅಂಗಗಳೊಡನೆ ಬಂದಿಲ್ಲವೆಂದೇ ಹೇಳಬೆಕು. ಮಾದರಿ: ಅನಾರೋಗ್ಯ, ಜನಾರೋಗ್ಯ.

ದಟ್ಟಣಿಸು ಕ್ರಿ ಪ್ರಜಾವಾಣಿ ಒಂದೆಡೆ ಗುಂಪಾಗಿ ಸೇರು. ‘ಜನದಟ್ಟಣೆಯಲ್ಲೂ ಸಾಗುವ ಯಂತ್ರದ ಈ ಕಾರ್ಯವನ್ನು ನೋಡಲೆಂದೆ ಜನ ಇನ್ನಷ್ಟು ದಟ್ಟಣಿಸುತ್ತಾರೆ’. ‘ದಟ್ಟೈಸು’ ಕ್ರಿಯಾಪದ. ಮೇಲಿನ ಪ್ರಯೋಗಕ್ಕೆ ಬಹುಶಃ ‘ದಟ್ಟಣೆ’ಗೆ ‘ಇಸು’ ಬಳಕೆ ಮಾಡಿರುವುದೇ ಕಾರಣ.

ದಮನಕಾರ ನಾ ಉದಯವಾಣಿ ಅಡಗಿಸಿದವ, ಹತ್ತಿಕ್ಕಿದವ. ‘ದಕ್ಷಿಣ ಆಫ್ರಿಕದ ಭಾರತೀಯ ಸಮುದಾಯದವರು ನಿಷ್ಕರುಣಿಗಳು ಮತ್ತು ಹಿಂದಿನ ದಮನಕಾರರ ಬೆಂಬಲಿಗರು ಎಂಬ ಮಾತನ್ನು… ಆಡಿದ್ದಾರೆ.’-ಕಾರ ನಾಮ ಸಾಧಕ ಪ್ರತ್ಯಯದೊಂದಿಗೆ ಬಂದಿರುವ ಹೊಸ ಪದ. ‘ದಮನಕ’ ಎಂಬ ಪದ ಬಳಕೆಯಾಗಿದೆ.

ದಶಕಾಂತರ ನಾ ಹಾಯ್ ಬೆಂಗಳೂರ್ ಅನೇಕ ದಶಕಗಳಷ್ಟು. ‘….ಆದರೆ ನೆಡುಮಾರನ್ನನ್ನು ತಂದು ರಾಜ್ಯದಾದ್ಯಂತ ರಾಘವೇಂದ್ರ ಸ್ವಾಮಿಯನ್ನಾಗಿ ಮಾಡಿ… ಅದು ತಮ್ಮ ದಶಕಾಂತಗಳ ಇಮೇಜಿಗೆ ತಾವೇ ಬಳಿದುಕೊಳ್ಳುವ ಮಸಿ’. ‘ಅಂತರ’ ಪದವನ್ನು ಕೆಲವೊಂದು ಸಂಖ್ಯಾವಾಚಿ ಪದಗಳೊಂದಿಗೆ ಬಳಸಲಾಗುತ್ತದೆ. ಉದಾ: ಲಕ್ಷಾಂತರ, ಕೋಟ್ಯಂತರ ಇತ್ಯಾದಿ. ಇಲ್ಲೆಲ್ಲಾ ಲಕ್ಷ ಲಕ್ಷ, ಕೋಟಿ ಕೋಟಿ ಎಂಬರ್ಥ ಬರುತ್ತದೆ. ಮೇಲಿನ ಪ್ರಯೋಗವೂ ಇದೇ ಮಾದರಿಯಲ್ಲಿ ಬಂದಿದೆ. ಆದರೆ ‘ದಶಕ’, ‘ಶತಕ’, ‘ಸಹಸ್ರ’ ಪದಗಳೊಡನೆ ‘ಅಂತರ’ ಬಳಕೆಯಾಗಿರಲಿಲ್ಲ ಎಂಬುದನ್ನು ಗಮನಿಸಬಹುದು. ಆದರೆ ಇದರ ಜೊತೆಗೆ ಒಂದು ನಾಮಪದ ಅವಶ್ಯವಿದೆ. ಆದರೆ ಮೇಲಿನ ಪ್ರಯೋಗದಲ್ಲಿ ಕೇವಲ ಪದವೊಂದೇ ಬಳಕೆಯಾಗಿದೆ. ಉದಾ: ಲಕ್ಷಾಂತರ ವರ್ಷ, ಲಕ್ಷಾಂತರ ಜನ ಇತ್ಯಾದಿ. ಮೇಲಿನ ಪ್ರಯೋಗಕ್ಕೆ ‘ದಶಕಾಂತರಗಳಿಂದ’ ಎಂದಾಗ ಏನೂ ಅರ್ಥಬರುವುದಿಲ್ಲ. ಜೊತೆಗೆ ‘ವರ್ಷ’ ಎಂಬುದು ಬಳಕೆಯೂ ಆಗಬೇಕು.

ದಲಿತೆ ನಾ ಕನ್ನಡ ಪ್ರಭ ಶೋಷಣೆಗೆ ಒಳಗಾದ ಮಹಿಳೆ; ಕೆಳವರ್ಗದ ಮಹಿಳೆ. ‘ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿ ಗಳಿಸಿರುವ ಬಡವಿ, ಅನಕ್ಷರಸ್ಥೆ, ದಲಿತೆ ತಿಮ್ಮಕ್ಕನಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ’. ಗುಣವಾಚಕವಾಗಿ ಬಂದ ‘ದಲಿತ’ ಪದ ನಂತರ ಪುಲ್ಲಿಂಗ ಸೂಚಕ ನಾಮಪದವಾಗಿ ಬಳಕೆಯಾಯಿತು. ಈಗ ಸ್ತ್ರೀವಾಚಿ ಪದವಾಗಿ ಮೇಲಿನ ಪ್ರಯೋಗದಲ್ಲಿ ಬಳಕೆಯಾಗಿದೆ.

ದಾಟುಮಾತು ನಾ ಮಾತಿನಲ್ಲಿ ಬಳಕೆ. ಮಾತಿನ ನಡುವೆ ಮಾಡುವ ವಿರಳ ಪ್ರಸ್ತಾಪ. ಇದರ ಬಗ್ಗೆ ಅಲ್ಲಲ್ಲಿ ದಾಟುಮಾತುಗಳೂ ಬಂದಿರಬಹುದು’. ಇಂಗ್ಲಿಶಿನ ‘ಪಾಸಿಂಗ್ ರಿಮಾರ್ಕ್‌’ ಎಂಬುದಕ್ಕೆ ಸಂವಾದಿಯಾಗಿ ಬಂದಂತಹ ಪದ.

ದಾನಿನಾನುತನ ನಾ ಸುಧಾ ದಾನ ನೀಡುವವ ನಾನು ಎಂಬ ಗುಣ. ‘ಅವುಗಳಲ್ಲಿ ದಾನಿನಾನುತನದ ದೊಡ್ಡಸ್ತಿಕೆಯಾಗಲೇ ಬಣ್ಣದ ಬದುಕಿನ ತಳುಕು ಬಳುಕಿನ ತೋರುಗಾಣಿಕೆಯನ್ನಾಗಲೀ ನಾನು ಈತನಕ ಗುರುತಿಸಿಲ್ಲ’. ‘ತನ’ ಪ್ರತ್ಯಯದೊಡನೆ ಬಂದಿರುವ ಪದ.

ದುಬಾರೀಯ ಗು ಜನಮುಖಿ ಹೆಚ್ಚಿನ ಬೆಲೆಯದಾದ. ‘ಟೈಟಾನಿಕ್ ಸಿನಿಮಾದಿಂದ ದುಬಾರೀಯ ಡಾಲ್ಚಿ ಸ್ಟೀರಿಯೋವನ್ನು ಅಳವಡಿಸಿ ಉತ್ತಮ ಗುಣಮಟ್ಟವನ್ನು ಕಾಪಾಡುತ್ತಿರುವ….’. ‘ಈಯ’ ಪ್ರತ್ಯಯದೊಡನೆ ಬಂದಿರುವ ಪದ. ದುಬಾರಿಯದಾದ ಎಂಬರ್ಥಕ್ಕಿಂತ ಹೆಚ್ಚಿನದೇನನ್ನೂ ನೀಡದು.

ದುರಾಕಾಂಕ್ಷೆ ನಾ ಪ್ರಜಾವಾಣಿ ಕೆಟ್ಟ ಬಯಕೆ/ಆಸೆ. ‘ತಾವೇ ಅಧಿಕಾರ ನಡೆಸುವಂತಾಗಲಿ ಎಂಬ ದುರಾಕಾಂಕ್ಷೆ, ಸ್ವಾರ್ಥ ಲೆಕ್ಕಾಚಾರಗಳೇ ಕಾರಣ’. ‘ಮಹತ್ವಾಕಾಂಕ್ಷೆ’ ಮಾದರಿಯಲ್ಲಿ ಬಂದಿರುವ ಪದ. ‘ದುರಾಲೋಚನೆ’ ಪದ ಮೇಲಿನ ಪ್ರಯೋಗಕ್ಕೆ ಹತ್ತಿರ ಎನ್ನಬಹುದು.

ದುರದೃಷ್ಟತೆ ನಾ ಸಂಯುಕ್ತ ಕರ್ನಾಟಕ ದೌಭಾಗ್ಯ. ‘ಈ ಇಬ್ಬರು ಮುಖಂಡರು ಲೋಕಸಭೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ತಮ್ಮ ರಾಜಕೀಯ ಕುಸ್ತಿಯ ಕಣವೆಂದು ಭಾವಿಸಿದ್ದರೆ ಅದಕ್ಕಿಂತ ದುರದೃಷ್ಟತೆ ಬೇರೊಂದಿಲ್ಲ’ ಎನ್ನಬೇಕಾಗುತ್ತದೆ. ‘ಅದೃಷ್ಟ’, ‘ದುರದೃಷ್ಟ’ ಪದಗಳುಂಟು. ಇವು ನಾಮಪದಗಳು. ಆದರೆ ನಾಮಪದಗಳ ಸೃಷ್ಟಿಗೆ ‘ತೆ’ ಪ್ರತ್ಯಯ ಬಳಸುವುದನ್ನು ಗಮನಿಸಿ ಇಲ್ಲಿ ಈ ಪದದ ಸೃಷ್ಟಿ ನಡೆದಿದೆ. ‘ತೆ’ ಅವಶ್ಯಕತೆ ಇಲ್ಲಿ ಇರುವುದಿಲ್ಲ. ‘ದುರದೃಷ್ಟ’ವೇ ಸಾಕು.

ದುರ್ನಡವಳಿಕೆ ನಾ ಸುಧಾ ಕೆಟ್ಟರೀತಿಯಲ್ಲಿ ನಡೆದುಕೊಳ್ಳುವುದು. ‘ಸಂಬಂಧಿಸಿದ ವ್ಯಕ್ತಿಗಳು ಮುಂದೆ ಬಂದು ತಂದೆ ಆದವನ ದುರ್ನಡವಳಿಕೆಯನ್ನು ಸಾಬೀತುಪಡಿಸಿ, ಅದರಿಂದ ಮಗುವಿನ ಹಿತಕ್ಕೆ ಧಕ್ಕೆ ಬಂದಿದೆ…’ ‘ದುರ್ನಡತೆ’ ಪದ ಬಳಕೆಯಲ್ಲಿದೆ. ಇದು ಸಂಸ್ಕೃತದ ಪೂರ್ವಪ್ರತ್ಯಯ ಹಾಗೂ ಕನ್ನಡ ಪದದಿಂದ ರಚನೆಗೊಂಡಿರುವುದು. ಅದರಂತೆಯೇ ಮೇಲಿನ ಪದವೂ ಅರಿಸಮಾಸವಾಗಿದೆ. ದುರ್ನಡತೆ ಇದ್ದಾಗ್ಯೂ ‘ದುರ್ನಡವಳಿಕೆ’ ಪದ ಸೃಷ್ಟಿಗೆ ಕಾರಣ ತಿಳಿದಿಲ್ಲ.

ದುರ್ನಿರ್ವಹಣೆನಾ ಉದಯವಾಣಿ ಸರಿಯಾಗಿ ಆಡಳಿತ ನಡೆಸದಿರುವುದ. ‘…..ಐರೋಪ್ಯ ಕೂಟವಿಂದು ಅತ್ಯಂತ ಗಂಭೀರವಾದ ಸಾಂಸ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದೆ. ಕೂಟದ ಆಡಳಿದ ಮಂಡಳಿಯು ದುನಿರ್ವಹಣೆ ಹಾಗೂ ಪಕ್ಷಪಾತದಿಂದ ವರ್ತಿಸಿದೆ…’. ‘ಮಿಸ್‌ಮ್ಯಾನೇಜ್ ಮೆಂಟ’ಗೆ ಸಂವಾದಿಯಾಗಿ ಬಂದಿರುವ ಪದ. ಈಗಾಗಲೇ ‘ಅಪನಿರ್ವಹಣೆ’ ಎಂಬುದಾಗಿ ಬಳಕೆಯಾಗಿರುವುದನ್ನು ಗಮನಿಸಬಹುದು.

ದುರ್ಬಲೀಕರಣ ನಾ ಸಂಯುಕ್ತ ಕರ್ನಾಟಕ ಬಲಗುಂದಿಸುವುದು; ಸತ್ವಹೀನವನ್ನಾಗಿಸುವುದು. ‘ಧೋರಣೆ ದುರ್ಬಲೀಕರಣ, ಮಿತ್ರನಿಷ್ಠೆಯ ಅಂತಃಕರಣ ಪರಂಪರಾಗತ ದ್ವೇಷ ನಿವಾರಣ….’ ‘ಈಕರಣ’ ಪ್ರತ್ಯಯ ಸೇರಿಸಿ ಹೊಸಪದ ಸೃಷ್ಟಿ ನಡೆಯುತ್ತಿರುವುದಕ್ಕೆ ಇನ್ನೊಂದು ಸೇರ್ಪಡೆ.

ದುರ್ಮಾದರಿ ನಾ ಪ್ರಜಾವಾಣಿ ಅನುಸರಣೆಗೆ ಯೋಗ್ಯವಲ್ಲದ ರೀತಿ. ‘ಅದನ್ನು ಬಿಟ್ಟು ವಿದ್ಯಾರ್ಥಿಗಳ ಪಾಲಿಗೆ ದುರ್ಮಾದರಿಯಾಗುವಂತೆ ವರ್ತಿಸಿ ಅವರ ಭವಿಷ್ಯಕ್ಕೆ ಮುಳ್ಳಾಗುವುದೇ?. ಸರಿಯಾದುದ್ದಲ್ಲದ’ ಕೆಟ್ಟ ಎಂಬರ್ಥ ಬರುವಂತೆ ‘ದುಃ’ ಉಪಸರ್ಗವನ್ನು ಬಳಸಲಾಗುತ್ತದೆ. ಆ ಮಾದರಿಯಲ್ಲೇ ಬಂದಿರುವ ಹೊಸಪದ.

ದುರ್ಲಕ್ಷಿಸು ಕ್ರಿ ಸಂಯುಕ್ತ ಕರ್ನಾಟಕ ಕಡೆಗಣಿಸು, ಕೆಟ್ಟದಾಗಿ ಕಾಣು. ‘…ಹಸಿವಿನ ಬಾಧೆಯಿಂದ ಅನೇಕರು ಸಾಯುವ ಈ ನಾಡಿನಲ್ಲಿ ಅಕ್ಕಿ, ಗೋಧೀ ರಾಶಿ ರಾಶಿಯಾಗಿ ಬಿದ್ದು ಹಾಳಾಗಿದೆಯೆನ್ನುವ ಮಟ್ಟಿಗೆ ಕೇಂದ್ರ ಆಹಾರ ನಿಗಮವು ದುರ್ಲಕ್ಷಿಸಿ ಈ ಆಹಾರ ಧಾನ್ಯಗಳನ್ನು ಅಮೆರಿಕ ಮಾದರಿಯಲ್ಲಿ ಸಮುದ್ರಪಾಲು..’ ಅಪಪ್ರಯೋಗವಿರಬಹುದು ಎನಿಸುತ್ತದೆ. ‘ನಿರ್ಲಕ್ಷಿಸು’ ಸೂಕ್ತ ಪ್ರಯೋಗ. ಒಂದೊಮ್ಮೆ ಸರಿಯಾದ ರೀತಿಯ ಕ್ರಮ ಕೈಗೊಳ್ಳದಿರುವುದು ಎಂದು ಅರ್ಥೈಸಬಹುದೇ?

ದುರ್ಲಾಬಿಗ ನಾ ಕನ್ನಡ ಪ್ರಭ ಕೆಟ್ಟದಾಗಿ ಲಾಭ ಮಾಡಿಕೊಳ್ಳುವವನು. ‘ಈ ಗಟ್ಟಿದನಿ ಪಾಕಿಸ್ತಾನದ ಉದ್ಧಟತನಕ್ಕಷ್ಟೇ ಅಲ್ಲದೆ ಸನ್ನಿವೇಶದ ದುರ್ಲಾಭಿಗರಿಗೂ, ಹಿತಶತ್ರುಗಳಿಗೂ ಎಚ್ಚರಿಕೆಯ ಗಂಟೆ ಎಂಬುದನ್ನು….’. ಕೆಲವೊಮ್ಮೆ ಪದರಚನೆ ವಿಚಿತ್ರವಾಗಿರುತ್ತದೆ. ‘ಇಗ’ ಪ್ರತ್ಯಯದೊಡನೆ ವ್ಯಕ್ತಿವಾಚಿ ನಾಮಪದಗಳು ಸೃಷ್ಟಿಯಾದರೂ ‘ಲಾಬಿಗ’ ಪದ ಇಲ್ಲ. ‘ಲಾಭಬಡುಕ’ ಇದೆ. ನೇತ್ಯಾತ್ಮಕವಾದ ‘ಲಾಭಕೋರ’ ಪದ ಇದೆ. ಆದರೂ ಇಲ್ಲದ ಪದಕ್ಕೆ ಉಪಸರ್ಗ ಸೇರಿಸಿ ತಂದಿರುವ ಈ ಪದ ಇನ್ನೊಂದು ಪದ ಲಾಬಿಗಕ್ಕೂ ದಾರಿ ಮಾಡಿಕೊಡಬಹುದು.

ದುರ್ವಾದ ನಾ ಉದಯವಾಣಿ ಅಸಂಬದ್ಧವಾಗಿ ವಾದಿಸುವುದು. ‘ಆವೇಶ ಮತ್ತು ದುರ್ವಾದಗಳಿಂದ ವಾಸ್ತವತೆಗೂ ಜನಹಿತಕ್ಕೂ ಅನ್ಯಾಯವಾಗುತ್ತದೆ’. ‘ವಾದ’ಕ್ಕೆ ವಿರುದ್ಧವಾಗಿ ‘ವಿವಾದ’ ಬಳಸಲಾಗುತ್ತಿದೆ. ‘ದು’ ಉಪಸರ್ಗದೊಡನೆ ಬಂದಿರುವ ಹೊಸ ಪದ.

ದುಶ್ಕಲ್ಪನೆ ನಾ ಸುಧಾ ಕೆಟ್ಟದ್ದಾಗಿ ಭಾವಿಸುವುದು/ ಊಹಿಸುವುದು. ‘ಕಾಡಿ ಕೂಡಬೇಕು, ಕೂಡಿ ಕಾಡಬಾರದು ಎಂಬ ನಾಣ್ಣುಡಿಯಂತೆ ಸ್ನೇಹದ ಮೊದಲು ಮಥನವಿರಬೇಕು. ಒಮ್ಮೆ ಸ್ನೇಹ ಅಂಕುರಿಸಿತೋ ನಂತರ ಆ ಎಲ್ಲ ದುಶ್ಕಲ್ಪನೆ ನಮ್ಮ ಮನಸ್ಸಿನಿಂದ ಕಿತ್ತೊಗೆಯಬೇಕು’. ಮಾತಾಡುವಾಗ ‘ತಪ್ಪುಕಲ್ಪನೆ’ ಎಂಬುದಾಗಿ ಬಳಕೆಯಾಗುತ್ತಿತ್ತು. ಅದೇ ಅರ್ಥದಲ್ಲಿ ಮೇಲಿನ ಪ್ರಯೋಗ ಬಂದಿರಬಹುದೇ? ಏಕೆಂದರೆ ಕಲ್ಪನೆ ಕೆಟ್ಟದ್ದಾಗಿರಬಹುದೇ? ಸಂಸ್ಕೃತ ಸಂಧಿನಿಯಂದಂತೆ ದುಷ್ಕಲ್ಪನೆ ಆಗಬೇಕು. ನೋ. ದುಷ್ಕೀರ್ತಿ, ದುಷ್ಕಾಲ, ದುಷ್ಕಾರ್ಯ.

ದುಶ್ಯಕುನಕರ ಗು ಸುಧಾ ಕೇಡು ಸೂಚಿಸುವಂತಹ. ‘…ಪ್ರೀತಿ ಅಕ್ಕರೆಯನ್ನು ಅನುದಿನವೂ ಸವಿದು ಹಾಯಾಗಿದ್ದ ಸೂಕ್ಷ ಸಂವೇದಿ ಚೇತನವನ್ನು ದಟ್ಟಡವಿಯ ಧೃತಿಗೆಡಿಸುವ ದುಶ್ಯಕುನಕರ ಮೌನ’. ‘ಅಪಶಕುನ’ ಇದುವರೆಗೆ ಬಳಕೆಲ್ಲಿದ್ದ ಪದ. ಸಂಸ್ಕೃದ ‘ದು’ಪೂರ್ವ ಪ್ರತ್ಯಯ ‘ಕೆಟ್ಟ’ ಎಂಬರ್ಥದಲ್ಲೇ ಬಳಕೆಯಾಗುತ್ತಿದೆ.

ದುಷ್ಕರ್ಮೀಕರಣ ನಾ ಉದಯವಾಣಿ ಪಾತಕ ಪ್ರವೃತ್ತಿ ಬೆಳೆಸುವುದು. ‘…ಯಂತಹ ಭೂಗತ ಜಗತ್ತು ರಾಜಕಾರಣವನ್ನು ಪಾತಕಿಗಳ ಸನಿಹಕ್ಕೆ ತಂದಾಗ ಭಾರತೀಯ ರಾಜಕಾರಣ ದುಷ್ಕರ್ಮೀಕರಣ ಅಥವಾ ಪಾತಕೀಕರಣ (ಕ್ರಿಮಿನಲೈಸೇಶನ್) ಎಂಬ ಒಂದು ಹೊಸ ಶಬ್ದ ಮತ್ತು ಪರಿಕಲ್ಪನೆ ಹುಟ್ಟಿಕೊಂಡಿತು’. ‘ಅಪರಾಧೀಕರಣ’ ಎಂಬ ಪದ ಇದೇ ಅರ್ಥದಲ್ಲಿ ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ದುಸ್ಸಾಹಸಿ ನಾ ಪ್ರಜಾವಾಣಿ ಕೆಟ್ಟ ಸಾಹಸ ಮಾಡುವವ. ‘ಆದರೆ ಅತಿಕ್ರಮಣದ ದುಸ್ವಪ್ನ ಬೇಗ ಹರಿದೀತು. ದುಸ್ಸಾಹಸಿಗಳು ಭಾರಿ ಬೆಲೆ ತೆರುವುದು ಖಂಡಿತ’. ‘ದು’ ಉಪಸರ್ಗದೊಡನೆ ದುಸ್ಸಾಹಸ ಪದ ಬಳಕೆಯಲ್ಲಿತ್ತು. ಆದರಿಂದ ಈಗ ಇನ್ನೊಂದು ವ್ಯಕ್ತಿ ಸೂಚಕ ನಾಮಪದ ಸೃಷ್ಟಿಯಾಗಿದೆ.

ದುಃಖಪೂರ್ಣ ಗು ಸಂಯುಕ್ತ ಕರ್ನಾಟಕ ಶೋಕದಿಂದ ಕೂಡಿದ. ‘ವೀರ ಮರಣವನ್ನಪ್ಪಿದ ಕರ್ನಲ್ ರಾಘವನ್‌ರಿಗೆ ದುಃಖಪೂರ್ಣ ವಿದಾಯ’. ‘ಗೌರವಪೂರ್ಣ’ ಎಂಬ ಪದದ ಮಾದರಿಯಲ್ಲಿ ಬಂದಿರುವ ಪದ.

ದೂಕುಬಂಡಿ ನಾ ಗೋಡೆಯ ಮೇಲಿನ ಬರಹದಲ್ಲಿ ಬಳಕೆ ತಳ್ಳುವ ಗಾಡಿ, ಕೈಗಾಡಿ. ‘ಇಲ್ಲಿ ಯಾರೂ ವಾಹನಗಳನ್ನು, ದೂಕುಬಂಡಿಗಳನ್ನು ನಿಲ್ಲಿಸಬಾರದು’. ನೂಕು ಪದಕ್ಕೆ ಸಮಾನಾರ್ಥಕವಾಗಿ ದೂಕು ಪದ ಪ್ರಯೋಗದಲ್ಲಿದೆ. ಕೈಗಾಡಿಗಳನ್ನು ನೂಕುವುದು ದೂಕುವುದು ಕಡಿಮೆ. ಎಳೆಯವುದೇ ಹೆಚ್ಚು. ಬಹುಶ ಇಲ್ಲಿ ಸೈಕಲ್ ಚಕ್ರದ ಗಾಡಿಯನ್ನು ಗಮನಿಸಿ ಪದ ತಂದಿರಬಹುದು.

ದೂರೀಕರಿಸು ಕ್ರಿ ಕನ್ನಡ ಪ್ರಭ ದೂರಮಾಡು, ದೂರವಿಡು. ‘ಬುದ್ಧಿಜೀವಿಗಳು ಆರಂಭದಲ್ಲಿ ದೂರೀಕರಿಸಿ, ಫ್ರೆಂಚ್ ನಿರ್ದೇಶಕ ತ್ರೂಫೋ ಸಂದರ್ಶನ ನಡೆಸಿದ ಮೇಲೆ ಮತ್ತೂ ಪ್ರಸಿದ್ಧನಾದ….’ ‘ದೂರವಿಡು’ ಎಂದೇ ಪ್ರಯೋಗವಾಗುತ್ತಿದ್ದು ಇತ್ತೀಚೆಗೆ ‘ಈಕರಣ’, ‘ಈಕರಿಸು’ ಪ್ರತ್ಯಯ ಬಳಕೆ ಹೆಚ್ಚಾದಂತೆ ಹೊಸ ಹೊಸ ಪದಗಳನ್ನು ಸೃಷ್ಟಿಸಲಾಗುತ್ತಿದೆ. ಆ ರೀತಿಯಲ್ಲಿ ರೂಪುಗೊಂಡ ಪದ.

ದೃಶ್ಯೀಕರಿಸು ಕ್ರಿ ಕನ್ನಡ ಪ್ರಭ ಚಿತ್ರಗಳು ಕಾಣುವಂತೆ ಸೆರೆಹಿಡಿ. ‘ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರ ಬೇರುಬಿಟ್ಟಿರುವುದು ತಿಳಿಯದ ಸಂಗತಿಯೇನೂ ಅಲ್ಲ. ಆದರೂ ತೆಹಲ್ಕಾದ ಕ್ಯಾಮರಾಗಳು ಅದನ್ನು ದೃಶ್ಯೀಕರಿಸಿದ್ದನ್ನು ಕಂಡಾಗ ದೇಶ ದಿಗ್ಭ್ರಾಂತವಾಯಿತು’. ದೃಶ್ಯಗಳನ್ನು ಚಿತ್ರೀಕರಿಸುವುದು ಸರಿ. ದೃಶ್ಯೀಕರಿಸುವುದು ಆನಂತರದ ಕೆಲಸ. ಮೇಲಿನ ವಾಕ್ಯದಲ್ಲಿ ‘ಚಿತ್ರೀಕರಿಸು’ ಪದ ಅರ್ಥವಿದ್ದಂತಿದೆ.

ದೃಶ್ಯೋಪಕರಣ ನಾ ಸಂಯುಕ್ತ ಕರ್ನಾಟಕ ಚಿತ್ರೀಕರಿಸಲು ಅಗತ್ಯವಾದ ಉಪಕರಣ, ವ್ಯವಸ್ಥೆ. ‘ವಿವಾದಾತ್ಮಕ ಚಲನಚಿತ್ರ ನಿರ್ಮಾಪಕಿ ದೀಪಾ ಮೆಹ್ತಾರವರ ವಾಟರ್ ಚಿತ್ರದ ಚಿತ್ರೀಕರಣಕ್ಕೆ ಆಳವಡಿಸಲಾಗಿದ್ದ ದೃಶ್ಯೋಪಕರಣಗಳನ್ನು ಸಂಘ ಪರಿವಾರಕ್ಕೆ ಸೇರಿದ..’ ಬಹುಶಃ ಇಂಗ್ಲಿಶಿನ ‘ಸೆಟ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರಬಹುದು. ಮಾದರಿ : ಪಾರೋಪಕರಣ, ಪೀಠೋಪಕರಣ ಇತ್ಯಾದಿ. ಸಂಧಿ ನಿಯಮಕ್ಕನುಗುಣವಾಗಿ ರಚಿತವಾದ ಪದ.

ದೋಷಣೀಯ ನಾ ಕನ್ನಡ ಪ್ರಭ ತಪ್ಪಾಗುವಂಥ, ದೋಷವೆನಿಸಿಕೊಳ್ಳುವ. ‘ಇನ್ನು ಇದರ ಬಗ್ಗೆ ತಿಳಿಯದಿದ್ದಾಗ, ಯಾವುದೋ ಅನುವಾದದ ಒಂದು ಶ್ಲೋಕದ ಒಂದು ಚರಣವನ್ನು ತಪ್ಪಾಗಿ ಅರ್ಥೈಸಿಕೊಂಡು ಜನರಿಗೆ ಉಪದೇಶ ನೀಡುವುದು ದೋಷಣೀಯ’. ‘ಈಯ’ ಪ್ರತ್ಯಯದೊಡನೆ ಬಂದಿರುವ ಪದ. ಮಾದರಿ: ಮಾನವೀಯ, ಸಹನೀಯ. ಆದರೆ ‘ಈಯ’ ಪ್ರತ್ಯಯದ ಬಳಕೆ ‘ದೋಷಣ’ ಎಂಬ ಪದಕ್ಕಾಗಿದ್ದು. ಆ ಪದವೇ ಬಳಕೆಯಲ್ಲಿಲ್ಲ ಎಂಬುದನ್ನು ಗಮನಿಸಬಹುದು.

ದ್ರೋಹಾರೋಪಣೆ ನಾ ಕನ್ನಡ ಪ್ರಭ ವಿಶ್ವಾಸಘಾತುಕತನದ ಆರೋಪ ಹೊರಿಸುವುದು. ‘ಅಧ್ಯಕ್ಷ ಕ್ಲಿಂಟನ್ ಅವರ ದ್ರೋಹಾರೋಪಣೆ ಸಂಬಂಧವಾಗಿ ತೀರ್ಪು ನೀಡಬೇಕಿರುವ ನೂರು ಮಂದಿ ಸೆನೆಟ್ ಸದಸ್ಯರು ತೀವ್ರ ರಾಜಕೀಯ ಒತ್ತಡಕ್ಕೆ ಗುರಿಯಾಗುವ ಸಂದರ್ಭ ಹೆಚ್ಚಿದೆ’. ‘ದೋಷಾರೋಪಣೆ’ ಮಾದರಿಯಲ್ಲಿ ಬಂದಿರುವ ಪದ. ದೋಷಾರೂಪ ಪದವು ಎಲ್ಲ ದೋಷಗಳನ್ನು ಒಳಗೊಳ್ಳುವಂತಹದ್ದಾಗಿದೆ. ಇಂತಹುದೇ ಎಂಬುದು ಮೇಲ್ನೋಟಕ್ಕೆ ಗೋಚರಿಸದು. ಒಟ್ಟಿನಲ್ಲಿ ತಪ್ಪು ಹೊರಿಸುವುದು. ಮೇಲಿನ ಪದದ ಉದ್ದೇಶ ಕೇವಲ ‘ದ್ರೋಹ’ವನ್ನು ಮಾತ್ರ ಎತ್ತಿ ಹೇಳುವಂತಹುದಾಗಿದೆ.