ಧನಪ್ರಿಯ ಗು ಸುಧಾ ಹಣ ಮಾಡಬಹುದಾದ. ‘ಸರ್ಕಾರಗಳು ಇಂಜನಿಯರಿಂಗ್, ಮೆಡಿಕಲ್ ಮುಂತಾದ ಧನಪ್ರಿಯ ಯೋಜನೆಗಳತ್ತ ಹೆಚ್ಚು ಗಮನಹರಿಸುತ್ತವ. ‘ಜನಪ್ರಿಯ’ ಮಾದರಿಯನ್ನನುಸರಿಸಿ ಬಂದಿರುವ ಪದ. ಇಲ್ಲಿ ಸರ್ಕಾರದ ಯೋಜನೆಗಳನ್ನು ಲೇವಡಿ ಮಾಡಿರುವುದು ಗಮನಾರ್ಹ. ಲಘುಲೇಖನಗಳಲ್ಲಿ ಈ ಮಾದರಿಯ ಪದ ಬಳಕೆ ಹೆಚ್ಚು.

ಧನವೃಷ್ಟಿ ನಾ ಸುಧಾ ಹಣದ ಮಳೆ. ‘ಯಶಸ್ಸು ಕೀರ್ತಿಗಳ ಉಡ್ಡಯನ. ಇನ್‌ಫೋಸಿಸ್ ಸಂಸ್ಥೆ ಧನವೃಷ್ಟಿ ಮಾಡತೊಡಗಿತು.’ ‘ಪುಷ್ಟವೃಷ್ಟಿ’ ಪದದ ಮಾದರಿಯಲ್ಲಿ ಬಂದಿರುವ ಪದ. ಸಮಾನಾರ್ಥದಲ್ಲಿ ಕನ್ನಡದ ‘ಹಣದ ಹೊಳೆ’ಯನ್ನು ಗಮನಿಸಬಹುದು.

ಧರಣಿಕಾರ ನಾ ಸಂಯುಕ್ತ ಕರ್ನಾಟಕ ತಮ್ಮ ಕೋರಿಕೆಯ ಈಡೇರಿಕೆಗಾಗಿ ಪಟ್ಟು ಬಿಡದೆ ಧರಣಿಯಲ್ಲಿ ನಿರತನಾದವರು, ಕುಳಿತಿರುವವರು. ‘ಸ್ಥಳೀಯ ಆಕಾಶವಾಣಿ ಕೇಂದ್ರ ನಿರ್ದೇಶಕ… ಮನವಿ ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದರು. ವಾರ್ತೆ ಪುನರಾರಂಭಸುವ ಬಗ್ಗೆ ಅವರಿಂದ ಸ್ಪಷ್ಟ ಭರವಸೆ ದೊರೆಯದಿದ್ದಾಗ ಕೆಲ ಧರಣಿಕಾರರು ನಿರ್ದೇಶಕರೊಂದಿಗೆ ವಾದಕ್ಕಿಳಿದರು’. ‘ಕಾರ’ ಪ್ರತ್ಯಯ ಸಂಸ್ಕೃತ/ಕನ್ನಡ ಪದಗಳೊಂದಿಗೆ ಬಂದು ಹೊಸ ಪದಗಳ ಸೃಷ್ಟಿಗೆ ಕಾರಣವಾಗುತ್ತದೆ. ಕನ್ನಡದಲ್ಲಿ ಬಳಕೆಯಲ್ಲಿರುವ ಇನ್ನಿತರ ಭಾರತೀಯ ಭಾಷಾ ಪದಗಳೊಂದಿಗೂ ಇಂದು ಬಳಕೆಯಾಗುತ್ತಿದೆ. ಹಿಂದಿಯ ‘ಧರನಾ’ ಕನ್ನಡದಲ್ಲಿ ‘ಧರಣಿ’ ಯಾಗಿ ಮಾರ್ಪಟ್ಟು ‘ಕಾರ’ದೊಂದಿಗೆ ಬಂದಿದೆ. ಸಾಮಾನ್ಯವಾಗಿ ‘ಧರಣಿಯಲ್ಲಿ ನಿರತ’ ಎಂಬುದಾಗಿ ವಿವರಣಾತ್ಮಕವಾಗಿಯೇ ಬಳಕೆಯಾಗುತ್ತಿತ್ತು.

ಧರ್ಮಕಾರಣಿ ನಾ ಸಂಯುಕ್ತ ಕರ್ನಾಟಕ ಧಾರ್ಮಿಕ ಕೆಲಸಗಳನ್ನು ಮಾಡುವವನು; ಧಾರ್ಮಿಕ ವೃತ್ತಿಯಲ್ಲಿರುವವನು. ‘ಹುಟ್ಟು ಸಾವು ಕಾರ್ಯಕ್ರಮ, ವಿವಿಧ ಪೂಜಾಕ್ರಮ, ಶುಭ ಕಾರ್ಯಕ್ರಮ, ವಿವಿಧ ಶೋಧ ಕಾರ್ಯಕ್ರಮ, ಇತ್ಯಾದಿ ಧಾರ್ಮಿಕ ಧರ್ಮಕಾರ್ಯ ಕ್ರಮಗಳನ್ನು ನೆರವೇರಿಸುತ್ತ ಬಂದಿರುವ ಧರ್ಮಕಾರಣಿಗಳು ಸಂಸ್ಕೃತ ಪಂಡಿತರಾಗಿ… ನಿರ್ವಹಿಸುತ್ತಲೇ ಬಂದಿದ್ದಾರೆ’. ರಾಜಕಾರಣದಿಂದ ‘ರಾಜಕಾರಣಿ’ ಹುಟ್ಟಿದಂತೆ ಧರ್ಮಕಾರಣದಿಂದ ‘ಧರ್ಮಕಾರಣಿ’ ಹುಟ್ಟಿದೆ. ಆದರೆ ಅಪೇಕ್ಷಿತ ಅರ್ಥ ಸ್ಫುರಿಸುವುದು ಕಷ್ಟವೇ.

ಧರ್ಮಭರಿತ ಗು ತರಂಗ ಧರ್ಮದಿಂದ ತುಂಬಿರುವಂತಹ. ‘ಯುದ್ಧ, ಹಿಂಸೆ, ಶೋಷಣೆಗಳಿಲ್ಲದ ಧರ್ಮಭರಿತ ಹೊಸ ಸಮಾಜ ಅಸ್ತಿತ್ವಕ್ಕೆ ಬರುತ್ತದೆ’. ‘ಭರಿತ’ ಪದಕ್ಕೆ ತುಂಬಿದ ಎಂಬರ್ಥ. ಆದರೆ ಇದು ಒಂದು ಗೊತ್ತಾದ ರೀತಿಯಲ್ಲಿ ಬಳಕೆಯಾಗುತ್ತದೆ. ಉದಾ: ಸತ್ವಭರತ ಹಣ್ಣು. ಇಲ್ಲಿ ಹಣ್ಣು ಒಂದು ಗೊತ್ತಾದ ಗಾತ್ರವನ್ನು ಸೂಚಿಸಿ ಅದರೊಳಗೆ ತುಂಬಿರುವಂತಹುದನ್ನು ಸೂಚಿಸುತ್ತದೆ.

ಧರ್ಮಾತೀತ  ಗು ಉದಯವಾಣಿ ಧರ್ಮಕ್ಕೆ ಸೇರದ, ಹೊರತಾದ, ಯಾವುದೇ ಧರ್ಮಕ್ಕೆ ಕಟ್ಟು ಬೀಳದ, ಧರ್ಮವನ್ನು ಮೀರಿದ. ‘ಧರ್ಮಾತೀತ ಸಮಾಜ ನಿರ್ಮಾನಕ್ಕೆ ಮುಖ್ಯಮಂತ್ರಿ ಕರೆ’. ‘ಜಾತ್ಯತೀತ’ ಪದದ ಮಾದರಿಯಲ್ಲಿ ಬಂದಿರುವ ಪದ. ಪರಿಸ್ಥಿತಿಯನ್ನು ಅವಲಂಬಿಸಿ ಪದಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಮೇಲಿನ ಪದ ಒಂದು ನಿದರ್ಶನ.

ಧರ್ಮೀಯ ಗು ಸುಧಾ ಧರ್ಮಕ್ಕೆ ಸಂಬಂಧಿಸಿದ. ‘ರಾಷ್ಟ್ರದಲ್ಲಿ ಧರ್ಮೀಯ ಭಾವನೆಗಳನ್ನು ಕೆರಳಿಸಿ, ಸಮಾಜವನ್ನು ಒಡೆದು ಅದರ ರಾಜಕೀಯ ಲಾಭ ಪಡೆದುಕೊಳ್ಳಲು ಕೆಲವು ಶಕ್ತಿಗಳು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿದ ಸಂದರ್ಭದಲ್ಲಿ…’. ‘ಧಾರ್ಮಿಕ’ ಎಂಬ ಪದವೇ ಧರ್ಮದ ಗುಣವಾಚಕವಾಗಿ ಬಳಕೆಯಲ್ಲಿತ್ತು. ‘ಈಯ’ ಪ್ರತ್ಯಯದೊಂದಿದೆ ಬಂದಿರುವ ಈ ಪದ ಕೊಡುವ ಅರ್ಥ ‘ಧರ್ಮವನ್ನು ಅನುಸರಿಸುತ್ತಿರುವವರು’ ಎಂದು. ಉದಾ: ಹಿಂದೂ ಧರ್ಮೀಯರು, ಇಸ್ಲಾಂ ಧರ್ಮೀಯರು. ಪ್ರಾಂತೀಯ; ಜಾತೀಯ ಮಾದರಿಯಲ್ಲಿ ಬಂದಿರುವ ಪದವಾದರೂ, ಈಗಾಗಲೇ ಒಂದು ಅರ್ಥ ಸಾರ್ವತ್ರಿಕವಾಗಿರುವಾಗ ಇನ್ನೊಂದು ಗೊಂದಲಕ್ಕೆಡೆಯಾಗಬಹುದು.

ಧ್ವಜಪಟ ನಾ ಕನ್ನಡ ಪ್ರಭ ಗಾಳಿಯಲ್ಲಿ ತೂಗಿ ಬಿಟ್ಟಿರುವ ಘೋಷಣೆಗಳನ್ನು ಹೊಂದಿರುವ ಬಟ್ಟೆ. ‘ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಅದರ ಅಧ್ಯಕ್ಷೆ ಸೋನಿಯಾಜಿ ಹಾಗೂ ಇತರ ಪದಾಧಿಕಾರಿಗಳಿಗೆ ಸ್ವಾಗತ ಕೋರುವ ಭಿತ್ತಿ ಪತ್ರಗಳು ಹಾಗೂ ಧ್ವಜಪಟ (ಬ್ಯಾನರ್‌)ಗಳು ನಗರದಲ್ಲೆಲ್ಲಾ ರಾರಾಜಿಸುತ್ತಿದ್ದುವು’. ಇಂಗ್ಲಿಷ್‌ನ ‘ಬ್ಯಾನರ್’ ಗೆ ಸಂವಾದಿಯಾಗಿ ತಂದಿರುವ ಪದ ಎಂಬುದು ಪ್ರಯೋಗದಲ್ಲಿ ವ್ಯಕ್ತವಾಗುತ್ತದೆ. ಧ್ವಜದ ರೀತಿಯಲ್ಲಿ ಹಾರಾಡುವ ಹಾಗೆ ಇರುವುದರಿಂದ ಮೇಲಿನ ಪ್ರಯೋಗ ಬಂದಿದೆ.

ಧ್ವನಿದಟ್ಟ ಗು ಪ್ರಜಾವಾಣಿ ಶಕ್ತಿಭರಿತ, ಸತ್ವಯುತ (ಕಾವ್ಯಾರ್ಥದಲ್ಲಿ). ‘ಅವರ ಕೃತಿಗಳೆಲ್ಲವೂ ಜನಸಾಮಾನ್ಯವಾಗಿದ್ದರೂ ವಂಶವೃಕ್ಷ. ನಾಯಿನೆರಳು… ಇವು ಹೆಚ್ಚು ಧ್ವನಿದಟ್ಟವಾಗಿವೆ’. ‘ಧ್ವನಿಪೂರ್ಣ’ ಎಂದು ಅರ್ಥೈಸಲು ಬಳಸಿರುವ ಇನ್ನೊಂದು ಪದ.

ಧೂಳಾವೃತ ಗು ತರಂಗ ಧೂಳಿನಿಂದ ಕೂಡಿದ; ಸುತ್ತುವರಿಯಲ್ಪಟ್ಟ. ‘ವಿಷಾದದ ಸಂಗತಿಯೆಂದರೆ ಧೂಳಾವೃತ ೨೧ ಕಿ.ಮೀ ತಗ್ಗುದಿಣ್ಣೆಯ ಮಣ್ಣಿನ ಹೆದ್ದಾರಿಯನ್ನು ಕ್ರಮಿಸಿ ವಾಹನವನ್ನು ನಿಲ್ಲಿಸಿದೊಡನೆ….’. ‘ಹಿಮಾವೃತ, ‘ಜಲಾವೃತ’ ಮುಂತಾದ ಪದಗಳ ಮಾದರಿಯಲ್ಲಿ ಬಂದಿರುವ ಪದ.

 

ನಕಲೀಕರಣ ನಾ ಪುಸ್ತಕವೊಂದರಲ್ಲಿ ಬಳಕೆ ನಕಲು ಮಾಡುವುದು, ನಕಲು ಗೊಳಿಸುವುದು. ‘ರಾಷ್ಟ್ರೀಯ ಹೋರಾಟದಲ್ಲಿ ನಕಲೀಕರಣ ಮತ್ತು ದೈವೀಕರಣ ಪ್ರಕ್ರಿಯೆಗಳು’. ‘ಈಕರಣ’ ಪ್ರತ್ಯಯ ಹಚ್ಚಿ ಪದ ಸೃಷ್ಟಿ ಹೆಚ್ಚುತ್ತಿದೆ. ಮೇಲಿನ ಪದ ಅದಕ್ಕೊಂದು ಮಾದರಿ.

ನಗರಾರಣ್ಯ ನಾ ಪ್ರಜಾವಾಣಿ ನಗರದೊಳಗೆ ಇರುವ ಕಾಡು. ‘ಈ ಯುವಜನರೇ ಇಲ್ಲಿ ಭಾರತದ ಅತಿದೊಡ್ಡ ನಗರಾರಣ್ಯ ನಿರ್ಮಿಸಲು ಟೊಂಕ ಕಟ್ಟಿದ್ದಾರೆ’. ‘ಅಭಯಾರಣ್ಯ’ ಮಾದರಿಯಲ್ಲಿ ಬಂದಿರುವ ಪದವಾದರೂ ನಗರ ಮತ್ತು ಅರಣ್ಯ ಎಂದು ಅರ್ಥವುಂಟಾಗುವುದೇ ಹೆಚ್ಚು. ಅರಣ್ಯದೊಡನೆ ಇನ್ನಿತರ ಪದಗಳ ಬಳಕೆಯೂ ಆಗಿದೆ. ಉದಾ. ಜನಾರಣ್ಯ. ಅಂದರೆ ಜನರಿಂದ ತುಂಬಿರುವ ಕಾಡು. ಪ್ರದೇಶವಾಚಕದೊಡನೆ ಬಂದಿರುವುದು ಇದೇ ಮೊದಲು.

ನಡಾಂತರ ನಾ ಸಂಯುಕ್ತ ಕರ್ನಾಟಕ ನಡುವೆ; ಮಧ್ಯ. ‘ಹನ್ನೊಂದನೇ ಲೋಕಸಭೆಯನ್ನು ಹನ್ನೆರಡನೇ ಲೋಕಸಭೆಯನ್ನೂ ನಡಾಂತರದಲ್ಲಿ ಹಿಡಿದೆಳೆದು ಬೀಳಿಸಿ ಎನ್ನುವುದು ಜನಾದೇಶವಾಗಿರಲಿಲ್ಲ’. ಆಡುಮಾತಿನಲ್ಲಿ ಬಳಕೆಯಿರುವ ಕೆಲವು ಪದಗಳು ಕೆಲವೊಮ್ಮೆ ಲಿಖಿತರೂಪದಲ್ಲೂ ಬಳಕೆಗೊಳ್ಳುತ್ತವೆ ಎಂಬುದಕ್ಕೆ ಮೇಲಿನ ಪ್ರಯೋಗ ಒಂದು ಉದಾಹರಣೆ. ‘ಮಧ್ಯಂತರ’ ಎಂಬುದು ಲಿಖಿತ ರೂಪ.

ನಡುಪಂಥೀಯ ಗು ಸಂಕ್ರಮಣ ಎರಡು ಧೋರಣೆಗಳ/ಗುಂಪುಗಳ ನಡುವಿನ. ‘….ಗಾಂಧಿಯನ್ನು ನಡುಬೀದಿಯಲ್ಲಿ ನಿಲ್ಲಿಸಿ ಅನಾಥನನ್ನಾಗಿ ಮಾಡಿದ ನಡುಪಂಥೀಯ ಗಾಂಧಿವಾದಿಗಳೇ ತುಂಬಿರುವ ಈ ದೇಶದಲ್ಲಿ….’ ಎಡಪಂಥೀಯ, ಬಲಪಂಥೀಯ ಎಂಬ ಪದಗಳ ಮಾದರಿಯಲ್ಲಿ ಬಂದಿರುವ ಪದ. ಯಾವ ಕಡೆಗೂ ಸೇರದ ಎನ್ನಲು ‘ಅಲಿಪ್ತ’ ಎನ್ನುವ ಪದವೂ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ನಯಾಚಾರ ನಾ ಸುಧಾ ಮೃದುವಾಗಿ ನಡೆದುಕೊಳ್ಳುವ ರೀತಿ ‘ಶಿಕ್ಷಣವೊಂದರಿಂದಲೇ ಮನುಷ್ಯ ತನ್ನ ನಡೆ ನುಡಿ ನಯಾಚಾರಗಳಲ್ಲಿ ನುಣ್ಪನ್ನೂ ಮೃದುತ್ವದ ಪರಿಷ್ಕರಣೆಯನ್ನು ಮೈಗೊಡಸಿಕೊಳ್ಳುತ್ತವೆಂಬುದು ಶುದ್ಧ ಭ್ರಮೆ’. ‘ಸದಾಚಾರ’ ಮಾದರಿಯಲ್ಲಿ ಬಂದಿರುವ ಪದ. ಅರ್ಥ ಸ್ಫುರಿಸುವುದು ಕಷ್ಟ.

ನಮನಶೀಲ ನಾ ಸಂಯುಕ್ತ ಕರ್ನಾಟಕ ಗೌರವಿಸುವ ಗುಣ. ‘ಹೀಗೆ ಬದುಕಿನ ಅನೂಹ್ಯ ಮತ್ತು ಅಸೀಮ ಸ್ವರೂಪಗಳನ್ನು ಕಾರಂತ ಸೃಜನಶೀಲತೆ ಅತ್ಯಂತ ನಮನಶೀಲವಾಗಿ ಒಪ್ಪಿಕೊಂಡಿತು’. ‘ಶೀಲ’ ಪದವನ್ನು ಉಪಯೋಗಿಸಿ ಅನೇಕ ಹೊಸ ಪದಗಳನ್ನು ಸೃಷ್ಟಿಸಲಾಗುತ್ತಿದೆ. ಕ್ರಿಯಾಶೀಲ, ವಿನಯಶೀಲ, ಜಯಶೀಲ ಇತ್ಯಾದಿ. ಅದೇ ಮಾದರಿಯಲ್ಲಿ ಬಂದಿರುವ ಹೊಸ ಪದ.

ನರಹಂತಕತನ ನಾ ಪ್ರಜಾವಾಣಿ ಮನುಷ್ಯರನ್ನು ಕೊಲ್ಲುವ ಗುಣ. ‘ಭವ್ಯಪರಂಪರೆಯ ಸುಂದರ ಪರದೆಯ ಹಿಂದೆ ಎಂಥಹ ರಕ್ತ ಪಿಪಾಸು ನರಹಂತಕತನ ಅಡಗಿದೆ ಎಂಬುದನ್ನು ತೋರಿಸುವಂತೆ ಆಗಬೇಕು’. -ತನ ಪ್ರತ್ಯಯ ಹಚ್ಚಿ ಪ್ರಯೋಗಿಸುತ್ತಿರುವ ಪದಗಳಲ್ಲಿ ಇದು ಒಂದು. ಮಾದರಿ: ಒಳ್ಳೆಯತನ, ಸಿರಿತನ

ನಸುಗಂಪನ ನಾ ಸುಧಾ ಸ್ವಲ್ಪಮಟ್ಟಿನ ನಡುಗುವಿಕೆ. ‘ಎದೆಯ ಡಾವ್ ಡಾವ್‌ನೆ ಹಾರುತ್ತಿತ್ತು. ತೊಡೆಗಳು ನಸುಗಂಪನಕ್ಕೊಳಗಾಗಿದ್ದವು’. ‘ನಸು’ ವಿಶೇಷಣವನ್ನುಳ್ಳ (ಅರ್ಥ:ಸ್ವಲ್ಪ, ತುಸು) ಅನೇಕ ಪದಗಳು ಬಳಕೆಯಲ್ಲಿವೆ. ನಸುಗೆಂಪು, ನಸುನಗೆ ಇತ್ಯಾದಿ. ಮೇಲಿನ ಪದ ಸಂದಿನಿಯಮಕ್ಕನುಗುಣವಾಗಿ (ಆದೇಶಸಂಧಿ) ಬಂದಿರುವ ಹೊಸ ಪದ.

ನಾಗರಿಕತನ ನಾ ಉದಯವಾಣಿ ಸುಸಂಸ್ಕೃತಿ. ‘ಇದುವರೆಗೆ ಚರ್ಚಿಸಿದ ನಡವಳಿಕೆಗಳೆಲ್ಲಾ ತಪ್ಪು, ನಾಗರಿಕತನಕ್ಕೆ ಶೋಭೆಯಲ್ಲ ಎಂದು ಹೇಳಿ ತಿದ್ದುವವರು ಯಾರಿದ್ದಾರೆ? ‘ನಾಗರಿಕ’ ಪದಕ್ಕೆ ‘ತೆ’ ಪ್ರತ್ಯಯ ಸೇರಿಸಿ ನಾಗರಿಕತೆ ಎಂಬುದಾಗಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಆದರೆ ಇತ್ತೀಚೆಗೆ ತೆ, ತನ, ತ್ವ ಪ್ರತ್ಯಯಗಳ ನಡುವಿನ ವ್ಯತ್ಯಾಸವನ್ನು ಗಮನಿಸದೆ ಪದ ಸೃಷ್ಟಿ ಆಗುತ್ತಿವೆ.

ನಾಡಾಭಿಮಾನ ನಾ ತರಂಗ ದೇಶದ ಮೇಲಿನ ಪ್ರೀತಿ, ಹೆಮ್ಮೆ ಇತ್ಯಾದಿ. ‘…. ವ್ಯಕ್ತಿಗಳ ಚಿತ್ರ ಮತ್ತು ಅವರ ಸಂಕ್ಷಿಪ್ತ ಪರಿಚಯ ಹಾಗೂ ಕನ್ನಡ ಜಾಗೃತಿಯ ಉಕ್ತಿಗಳು ಇಲ್ಲಿ ನೋಡುಗರ ಗಮನ ಸೆಳೆಯುತ್ತವೆ. ಭಾಷಾಭಿಮಾನ ಮತ್ತು ನಾಡಾಭಿಮಾನ ಎಂಬುದು ಕೇವಲ ಭಾಷಣಗಳಿಗೇ…’. ಕನ್ನಡ ಸಂಸ್ಕೃತ ಪದಗಳನ್ನು ಬಳಸಿ ಬಂದಿರುವ ಪದ. ಅರಿಸಮಾಸ ಸರಿಯಲ್ಲ ಎಂದಿದ್ದರೂ ಈಗ ನಡೆಯುತ್ತಿದೆ. ಆದರೆ ನಾಡು+ಅಭಿಮಾನ ‘ನಾಡಭಿಮಾನ’ ಎಂದಾಗಬೇಕು. ಬಹುಶಃ ದೇಶಾಭಿಮಾನ ಪದ ಮೇಲಿನ ರಚನೆಗೆ ಕಾರಣವಿರಬಹುದು.

ನಾಮಾಯಣ ನಾ ಪ್ರಜಾವಾಣಿ ಹೆಸರುಗಳ ದೊಡ್ಡ ಪಟ್ಟಿ/ಪುರಾಣ. ‘ನಾಮಾಯಣವು ‘ಎ’ಯಿಂದ ಪ್ರಾರಂಭವಾಗಿ ಒಮ್ಮಿಂದೊಮ್ಮಿಗೆ ‘ಝೆಡ್’ ಗೆ ತಲುಪಿರುವುದನ್ನು ನೋಡಿದರೆ ಇದು ಇಲ್ಲಿಗೇ ಮುಗಿಯಿತೆಂದು ಯಾರೂ ಭಾವಿಸುವಂತಿಲ್ಲ’. ‘ರಾಮಾಯಣ’ ಪದವನ್ನು ಆಧರಿಸಿ ಹಲವಾರು ಪದಗಳನ್ನು ಸೃಷ್ಟಿಮಾಡುತ್ತಿರುವುದು ತಿಳಿದಿದ್ದೇ. ದೀರ್ಘವಾದ ಕತೆ, ಚರಿತ್ರೆ ಎಂದು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಉದಾ. ಗ್ರಾಮಾಯಣ, ಆಫೀಸಾಯಣ ಇತ್ಯಾದಿ. ಹಾಸ್ಯಲೇಖನ, ಲಘುಹರಟೆಗಳಲ್ಲಿ ಇಂತಹ ಪದಗಳನ್ನು ಬಳಸುವುದು ಹೆಚ್ಚು.

ನ್ಯಾಯದರ್ಶಿ ನಾ ೧. ಕರ್ಮವೀರ, ೨. ಪ್ರಜಾವಾಣಿನ್ಯಾಯವಾದಿ, ನ್ಯಾಯ ತೋರುವವನು. ೧.‘ಹೆಸರಾಂತ ನ್ಯಾಯದರ್ಶಿ, ಕೇಂದ್ರ ನಗರಾಭಿವೃದ್ಧಿ ಸಚಿವ…… ಈ ವಿವಾದದಲ್ಲಿ ಭಾರೀ ಗದ್ದಲ ಎಬ್ಬಿಸಿರುವರು. ೨……ಶ್ವೇತಭವನದ ಮಾಜಿ ಸಹಾಯಕಿ ಮೊನಿಕಾ ಲೆವಿನ್ ಸ್ಕಿ ಅವರು ಗುರುವಾರ ನ್ಯಾಯದರ್ಶಿ ಮಂಡಲಿ ಮುಂದೆ… ಅಲ್ಲಗಳೆದಿದ್ದಾರೆ. ಮೊದಲ ಪ್ರಯೋಗದಲ್ಲಿ ವಕೀಲ ಎಂಬರ್ಥದಲ್ಲಿ ಬಳಕೆಯಾಗಿದ್ದರೆ ಎರಡನೆಯ ಪ್ರಯೋಗದಲ್ಲಿ ಬಹುಶಃ ಇಂಗ್ಲಿಶಿನ ‘ಜ್ಯೂರಿ’ ಎಂಬುದರ ಸಂವಾದಿಯಾಗಿ ಬಂದಿದೆ.

ನ್ಯಾಯಾಂಗೀಯ ಗು ಲಂಕೇಶ್ ಪತ್ರಿಕೆ ನ್ಯಾಯಕ್ಕೆ ಸಂಬಂಧಿಸಿದ. ‘ತಮ್ಮ ಸೀನಿಯಾರಿಟಿಯನ್ನು ಧಿಕ್ಕರಿಸಿ ತಮಗೆ ಸಲ್ಲಬೇಕಾದ ಮಾನ್ಯತೆಯನ್ನು ನಿರಾಕರಿಸುತ್ತ ಬಂದ ಮುಖ್ಯಮಂತ್ರಿಗಳ ವಿರುದ್ಧ ಸುದೀರ್ಘ ನ್ಯಾಯಾಂಗೀಯ ಸಮರವನ್ನೇ ದಿನಕರ್ ಸಾರಿದರು’. ‘ಈಯ’ ಪ್ರತ್ಯಯ ಬಳಸಿ ಪದಸೃಷ್ಟಿ ಮಾಡುತ್ತಿದ್ದರೂ ಮೇಲಿನ ಪ್ರಯೋಗದಲ್ಲಿ ‘ಈಯ’ ಬಳಕೆ ಬೇಕಾಗಿಲ್ಲ. ಅಂತಹ ಗುಣವಾಚಕ ರೂಪ ಬೇಕೆಂದಾದರೆ ‘ನ್ಯಾಯಿಕ’ ಸೂಕ್ತವೆನ್ನಬಹುದು. ಮೇಲಿನ ಪ್ರಯೋಗದಲ್ಲಿ ‘ನ್ಯಾಯಾಂಗಕ್ಕೆ ಸಂಬಂಧಿಸಿದ’ ಎಂಬರ್ಥ ಬರುತ್ತದೆ.

ನ್ಯಾಯಾರ್ಜಿತ ಗು ಕನ್ನಡ ಪ್ರಭ ನ್ಯಾಯವಾಗಿ ಸಂಪಾದಿಸಿದ. ‘ರಾಜಾ ಸಾಹೇಬ್ ಶ್ರೀಮಂತ, ಬೆಲೆವೆಣ್ಣುಗಳ ಬೇಟದ ಬೇಟೆಗಾರ. ಷರೀಫ್ ಕುದುರೆಗಾಡಿಯ ಮಾಲಿಕ, ಚಾಲಕ-ಮರ್ಯಾದೆಯಿಂದ ದುಡಿದು ನ್ಯಾಯಾರ್ಜಿತದಿಂದ ಅನ್ನ ಸಂಪಾದಿಸಿ ಖುಷಿಯಾಗಿರುವ ಅಲ್ಪತೃಪ್ತ’. ‘ಪಿತ್ರಾರ್ಜಿತ’, ‘ಕಷ್ಟಾರ್ಜಿತ’ ಮಾದರಿಯಲ್ಲಿ ಬಂದಿರುವ ಪದ. ಸಂಪಾದನೆ ನ್ಯಾಯವಾಗಿಯೂ, ಅನ್ಯಾಯವಾಗಿಯೂ ಆಗಬಹುದಾದ್ದರಿಂದ ಮೇಲಿನ ಪ್ರಯೋಗವನ್ನು ಒಪ್ಪಬಹುದು.

ನಿಗದಿಸು ಕ್ರಿ ಸಂಯುಕ್ತ ಕರ್ನಾಟಕ ನಿರ್ಧರಿಸು. ಗೊತ್ತುಪಡಿಸು. ‘ತೊಗರಿ ಬೇಳೆಗೆ ಬೆಂಬಲ ನಿಗದಿಸಲು ಆಗ್ರಹ. ‘ಇಸು’ ಪ್ರತ್ಯಯ ಬಳಸಿ ಸೃಷ್ಟಿಸಿರುವ ಪದ. ‘ಮಾಡು’ ಎಂಬ ಸಹಾಯಕ ಕ್ರಿಯಾಪದದ ಬದಲಾಗಿ ‘ಇಸು’ ಬಳಸುವುದು ಇದೆಯಾದರೂ ಪ್ರತ್ಯಯವನ್ನು ಹತ್ತಿಸಬೇಕಾಗಿ ಪ್ರಕೃತಿಯ ಕೊನೆಯ ಸ್ವರ ಸಾಮಾನ್ಯವಾಗಿ ‘ಅ’, ‘ಎ’ ಆಗುತ್ತದೆ. ಉದಾ: ನಿಶ್ಚಯ-ನಿಶ್ಚಯಿಸು’ ನಿರ್ಧಾರ-ನಿರ್ಧರಿಸು ಇತ್ಯಾದಿ. ಆದ್ದರಿಂದ ಮೇಲಿನ ಪ್ರಯೋಗದಲ್ಲಿ ಕೇವಲ ‘ಸು’ ಮಾತ್ರ ಸೇರಿಸಿದಂತಾಗಿದೆ. ಸಾಮಾನ್ಯವಾಗಿ ‘ಮಾಡು’, ‘ಗೊಳಿಸು’, ‘ಪಡಿಸು’ ಎಂಬ ಪದಗಳು ಮೇಲಿನ ಪದದ ಜೊತೆ ಬರುತ್ತವೆ. ನಿಗಧಿಗೊಳಿಸು, ನಿಗದಿಪಡಿಸು, ನಿಗದಿಮಾಡು ಹೀಗೆ.

ನಿಗಮಿಕರಣ ನಾ ಪ್ರಜಾವಾಣಿ ‘ನಿಗಮ (ಸಂಸ್ಥೆ) ವನ್ನಾಗಿ ಪರಿವರ್ತಿಸುವುದು. ಸರ್ಕಾರಿ ಇಲಾಖೆಗಳ ಖಾಸಗೀಕರಣ ಮತ್ತು ನಿಗಮಿಕರಣಗೊಳಿಸುವುದರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ತಿಂಗಳ ೨೫ ರಂದು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ’. ಆಡಳಿತ ಅನುಕೂಲಕ್ಕೋಸ್ಕರ ಸರ್ಕಾರದ ವಿವಿಧ ಮಂಡಳಿಗಳನ್ನು ನಿಗಮವನ್ನಾಗಿ ಪರಿವರ್ತಿಸುವ ಕ್ರಿಯೆ ಈಗ ನಡೆಯುತ್ತಿದೆ. ‘ಈಕರಣ’ ಪ್ರತ್ಯಯದೊಂದಿಗೆ ಬಂದ ಪದವಾದರೂ ಕಾಗುಣಿತದ ದೋಷವಿದ್ದು ‘ನಿಗಮೀಕರಣ’ ವಾಗಬೇಕು.

ನಿಗಾವಣೆ ನಾ ಉದಯವಾಣಿ ಗಮನ ಇಡುವುದು; ಲಕ್ಷ್ಯವಿಡುವುದು ಎಚ್ಚರವಹಿಸುವುದು. ‘ಇಷ್ಟು ಜನಸಾಗರವು ಆರ್ಥಿಕತೆ, ಮೂಲಸೌಕರ್ಯಗಳು, ಪರಿಸರ, ಪ್ರಾಥಮಿಕ ಸ್ವಾಸ್ಥ್ಯ ನಿಗಾವಣೆ ಮತ್ತು ಪೌಷ್ಠಿಕ ಆಹಾರ ಪೂರೈಕೆ….’. ‘ನಿಗಾ’ ಎಂಬ ಪರ್ಸೋ-ಅರೇಬಿಕ್ ಪದವನ್ನು ಬಳಸಿಕೊಂಡು ರಚಿಸಿರುವ ಪದ. ಸಾಮಾನ್ಯವಾಗಿ ಇಂತಹ ಪದಗಳು ಕ್ರಿಯಾ ಪದದಿಂದ ಸಾಧಿತವಾಗುತ್ತದೆ. ಆದರೆ ಇಲ್ಲಿ ಕ್ರಿಯಾಪದ ನಿಗಾವಹಿಸು/ನಿಗಾ ಇಡು ಎಂದಾಗುತ್ತದೆ. ಮಾದರಿ: ಚುನಾಯಿಸು-ಚುನಾವಣೆ.

ನಿಗಿನಿಗಿಸು ಕ್ರಿ ಆಂದೋಲನ ಹೊಳೆಯಿಸು, ಪ್ರಜ್ವಲಿಸು. ‘ಅದಾಗದಿದ್ದರೆ ಜೂನ್ ತಿಂಗಳಾಂತ್ಯದ ವೇಳೆಗೆ ಕೆಪಿಸಿಸಿ ಬೂದಿಯಡಿ ಹುದುಗಿಕೊಂಡಿರುವ ಕೆಂಡ ನಿಗಿನಿಗಿಸಲಿದೆ’. ಗುಣವಾಚಕದಿಂದ ಕ್ರಿಯಾರೂಪ ಸಾಧಿಸಲಾಗಿದೆ. ಮಾದರಿ: ಥಳಥಳಿಸು.

ನಿಗೂಢತನ ನಾ ಕನ್ನಡ ಪ್ರಭ ‘ಏಕೋ ಏನೋ ನೆನಪಿನ ಅಥವಾ ಮರೆವಿನ ನಿಗೂಢತನ ಭೀಮೇಶ್ವರರರಾವ್ ಅವರನ್ನು ಕಾಡಿರುವಂತಿದೆ’. ನಿಗೂಢತೆ ಪದ ಈಗಾಗಲೇ ಬಳಕೆಯಲ್ಲಿದೆ. ಇಲ್ಲಿ ಗುಣವಾಚಕ ರೂಪಕ್ಕೆ ‘ತನ’ ಪ್ರತ್ಯಯ ಸೇರಿಸಿ ನಾಮಪದ ಸೃಷ್ಟಿಸಲಾಗಿದೆ.

ನಿಜೀಕರಣ ನಾ ತರಂಗ ಖಾಸಗೀಕರಣ. ನಿಜೀಕರಣ ಖಾಸಗೀಕರಣ (ಪ್ರೈವೆಟೈಸೇಶನ್), ತತ್ಪರಿಣಾಮವಾಗಿ ವಿದೇಶಿ ಹೂಡಿಕೆಗೆ ಪ್ರೋತ್ಯಾಹ……’. ಹಿಂದಿಯ ಪದವೊಂದನ್ನು ಕನ್ನಡಕ್ಕೆ ತಂದಿರುವ ಉದಾಹರಣೆ. ಕನ್ನಡದಲ್ಲಿ ಈಗಾಗಲೇ ‘ಖಾಸಗೀಕರಣ’ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ನಿತ್ರಾಣಿ ನಾ ಜಾಹೀರಾತು ತ್ರಾಣವಿಲ್ಲದವ; ಶಕ್ತಿಯಿಲ್ಲದವ; ಅಶಕ್ತ ‘ಅವಳ ಡ್ಯಾಡಿಯನ್ನು ಸೂಪರ್ ಮ್ಯಾನ್ ಅಥವಾ ಮಿಸ್ಟರ್ ನಿತ್ರಾಣಿಯನ್ನಾಗಿ ಮಾಡುವುದೇ ನಿಮ್ಮ ಅಡಿಗೆ’. ‘ನಿತ್ರಾಣ’ ಬಳಕೆಯಲ್ಲಿರುವ ಪದ. ಮೇಲಿನ ಉದಾಹರಣೆಯಲ್ಲಿರುವ ವಾಕ್ಯ ಬಹುಶಃ ಇಂಗ್ಲಿಶಿನಿಂದ ಭಾಷಾಂತರಗೊಂಡಂತಿದೆ. ಆದ್ದರಿಂದ ಕೇವಲ ನಿಘಂಟಿನೊಳಗಿರುವ ಪದ ಇಲ್ಲಿ ಹೊರಬಂದಿದೆ.

ನಿದ್ರಾಯಣ ನಾ ಕರ್ಮವೀರ ನಿದ್ರೆ ಕುರಿತಾದ ದೀರ್ಘಕತೆ ಪುರಾಣ. ‘ಸದ್ಯಕ್ಕೆ ಇ ನಿದ್ರಾಯಣದಿಂದ ನಮಗೆ ನಿದ್ರೆ ಬಾರದೇ ಇದ್ದರೆ ಅಷ್ಟೇ ಸಾಕು’. ‘ರಾಮಾಯಣ’ ಎಂಬುದನ್ನು ಮಾದರಿಯಾಗಿಟ್ಟುಕೊಂಡು ಅನೇಕ ಪದಗಳು ಸೃಷ್ಟಿಯಾಗುತ್ತಿವೆ.ಉದಾ: ಆಫೀಸಾಯಣ, ಗ್ರಾಮಾಯಣ ಇತ್ಯಾದಿ. ಸಾಮಾನ್ಯವಾಗಿ ಲಲಿತ ಹಾಸ್ಯ ಲೇಖನಗಳಲ್ಲಿ ಇವುಗಳ ಬಳೆ ಇರುತ್ತವೆ.

ನಿದ್ರಾರಾಕ್ಷಸ ನಾ ಪ್ರಜಾವಾಣಿ ಸಾರ್ವಜನಿಕ ಸ್ಥಳಗಳಲ್ಲಿ ನಿದ್ದೆ ಮಾಡುವ ಪ್ರವೃತ್ತಯುಳ್ಳವರು. ‘ಗ್ರಂಥಾಲಯದಲ್ಲಿ ಈಗೀನ ಕಳ್ಳಕಾರಕ, ಪುಸ್ತಕದ ಹುಳಗಳ, ನಿದ್ರಾರಾಕ್ಷಸರ ಹಾವಳಿ ಹೆಚ್ಚಾಗಿರುವುದರಿಂದ….’. ‘ಮುದ್ರಾರಾಕ್ಷಸ’ ಎಂಬ ಪದದ ಮಾದರಿಯಲ್ಲಿ ಬಂದಿರುವ ಪದ. ಸಾಮಾನ್ಯವಾಗಿ ಲಘು ಬರೆಹಗಳಲ್ಲಿ ಇದರ ಬಳಕೆಯನ್ನು ಕಾನಬಹುದು.

ನಿಧಾನತ್ವ ನಾ ಲಂಕೇಶ್ ಪತ್ರಿಕೆ ನಿಧಾನ ಪ್ರವೃತ್ತಿ; ತಾಳ್ಮೆಯ ಗುಣ. ‘….ಇವೆಲ್ಲಕ್ಕಿಂತ ಮುಖ್ಯವಾದದ್ದು. ಇವತ್ತಿನ ರಾಜಕೀಯ ಆರ್ಭಟದಲ್ಲಿ ಆಕೆಯ ವಿಚಿತ್ರ ಮೌನ ಮತ್ತು ಅಧಿಕಾರಕ್ಕಾಗಿ ಅವಸರಪಡದ ನಿಧಾನತ್ವ’. ಗುಣವಾಚಕಗಳಿಂದ ನಾಮರೂಪ ಪಡೆಯುವ ಮಾದರಿಗೆ ಒಂದುಉದಾಹರಣೆ. ಮಾದರಿ: ಪಾಲಕತ್ವ, ತ್ರಿಮೂರ್ತಿತ್ವ, ಉತ್ತರದಾಯಿತ್ವ.

ನಿರ್ಮಾಣಿಕೆ ನಾ ಕನ್ನಡ ಪ್ರಭ ತಯಾರು ಮಾಡುವಿಕೆ. ‘ಕೃಷಿ ಕ್ಷೇತ್ರದಲ್ಲಿ ಭಾರತ ಹಿಂದೆ ಬಿದ್ದಿಲ್ಲದಿದ್ದರೂ ಕೃಷಿ ಉತ್ಪನ್ನಕ್ಕಾಗಿ ಬಳಸುವ ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳ ಕಳಪೆ ನಿರ್ಮಾನ, ನಕಲಿ ನಿರ್ಮಾಣಿಕ ಇರುವುದರಿಂದ…..’. ‘ನಿರ್ಮಾಣ’ ಎಂಬುದೇ ಸಾಕಾಗಿರುವಾಗ ‘ಇಕೆ’ ಪ್ರತ್ಯಯ ಬಳಕೆ ಏಕಾಯಿತೋ ತಿಳಿಯದಾಗಿದೆ.

ನಿರ್ಲಕ್ಷ್ಯಣೀಯ ನಾ ತರಿಸ್ಕರಿಸುವಂಥದ್ದು, ಗಮನಿಸುವಂಥದ್ದಲ್ಲ ‘ಈ ಸಮಾರಂಭದ ಯಶಸ್ಸಿಗೆ ನನ್ನ ಪಾತ್ರ ಗಣನೀಯವಲ್ಲದಿದ್ದರೂ ನಿರ್ಲಕ್ಷ್ಯಣೀಯವಲ್ಲ’. ‘ಈಯ’ ಪ್ರತ್ಯಯ ಹತ್ತಿಸಿದ ಪದಗಳ ಸೃಷ್ಟಿ ಇತ್ತೀಚೆಗೆ ಹೆಚ್ಚುತ್ತಿದೆ. ಆ ಮಾದರಿಯಲ್ಲಿ ಬಂದಿರುವ ಪದ. ಆದರೆ ಇಲ್ಲಿ ‘ಈಯ’ ಪ್ರತ್ಯಯ ಸೇರಿರುವುದು ‘ನಿರ್ಲಕ್ಷ್ಯಣೆ’ ಪದಕ್ಕೆ. ಆದರೆ ಅದು ಬಳಕೆಯಲಿಲ್ಲ ಹಾಗೂ ಅರ್ಥವಿಲ್ಲದ್ದು. ಕೇವ ಪ್ರಾಸಕ್ಕೋಸ್ಕರ ‘ಈಯ’ ಬಳಸಿದಂತಿದೆ. ನಿರ್ಲಕ್ಷ್ಯ ಪದವೇ ಸಾಕಾಗಿತ್ತು.

ನಿರ್ವಸತಿಗ ನಾ ಕನ್ನಡ ಪ್ರಭ ವಸತಿ ಕಳೆದುಕೊಂಡವ; ‘ಅಧಿಕಾರಶಾಹಿ ನಿರ್ಲಕ್ಷ್ಯದಿಂದ ಕೈಗೂಡದ ನಿರ್ವಸತಿಗರ ಕನಸು: ಶಾಸಕರ ಬೇಸರ’. ಗುಣವಾಚಕಕ್ಕೆ (ನಿರ್ವಸಿತ) ಬಹುವಚನ ಪ್ರತ್ಯಯ ‘ರು’ ಸೇರಿಸಿ ವ್ಯಕ್ತಿವಾಚಕವನ್ನು (ನಿರ್ವಸಿತರು) ಸಾಧಿಸಲಾಗುತ್ತಿತ್ತು. ಮೇಲಿನ ಪ್ರಯೋಗದಲ್ಲಿ ‘ಇಗ’ ಪ್ರತ್ಯಯ ಸೇರಿಸಿ ಹೊಸಪದ ರಚನೆ ಸಾಧ್ಯವಾಗಿದೆ.

ನಿರ್ಲವಣ ಗು ತರಂಗ ಉಪ್ಪಿಲ್ಲದಂತೆ ಇರುವ ಉಪ್ಪು ರಹಿತವಾಗಿರುವ. ‘ಸಮುದ್ರದ ನೀರನ್ನು ನಿರ್ಲವಣಗೊಳಿಸಲು ಕಲ್ಲಿದ್ದಲು, ಅನಿಲ ಮತ್ತು ತೈಲಗಳನ್ನು ಬಳಸಲಾಗುತ್ತಿದೆಯಾದರೂ ಅಗತ್ಯ ಬೇಡಿಕೆಯನ್ನು ಪೂರೈಸುವುದು ಇವುಗಳಿಂದ ಸಾಧ್ಯವಾಗುತ್ತಿಲ್ಲ’. ನಿಷೇಧ ಪ್ರತ್ಯಯ ಹಚ್ಚಿದ ಒಂದು ಹೊಸ ಪದ. ‘ಡಿಸೆಲೈನ್’ ಪದದ ಸಂವಾದಿ ಪದ.

ನಿರ್ಲವಣೀಕರಣ ನಾ ತರಂಗ ಲವಣಾಂಶ ಇಲ್ಲದಂತೆ ಮಾಡುವುದು. ‘ಇತ್ತೀಚಿನ ಸಂಶೋಧನೆಯ ಪ್ರಕಾರ ವಿಜ್ಞಾನಿಗಳು ಸಮುದ್ರದ ನೀರನ್ನು ಅಣುಶಕ್ತಿಯಿಂದ ನಿರ್ಲವಣೀಕರಣಗೊಳಿಸಲು ಹೊರಟಿದ್ದಾರೆ. ‘ಡಿಸೆಲೆನೈಸೇಶನ್’ ಪದದ ಸಂವಾದಿ ಪದ. ‘ಈಕರಣ’ ಪ್ರತ್ಯಯ ಹಚ್ಚಿದ ಪ್ರಯೋಗಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇದೊಂದು ಮಾದರಿ.

ನಿರ್ಲಿಪ್ತಿ ನಾ ತರಂಗ ಸಂಬಂಧವಿಲ್ಲದಂತಿರುವುದು; ಅನಾಸಕ್ತಿ. ‘ಈ ನಿರ್ಲಿಪ್ತಿಯೇ ಅವರನ್ನು ವಿಶಿಷ್ಟರನ್ನಾಗಿಸಿದ್ದು’. ನಿರ್ಲಿಪ್ತ ಗುಣವಾಚಕಕ್ಕೆ ‘ತೆ’ ಬಳಸಿ ನಾಮಪದ ರೂಪಿಸುವುದು ಇದುವರೆಗೂ ಇತ್ತು. ಇಲ್ಲಿ ಪದದೊಳಗೆ ಮಾರ್ಪಾಡು ಮಾಡಿ ನಾಮರೂಪ ರಚನೆ ಮಾಡಲಾಗಿದೆ. ಮಾದರಿ: ಅತೃಪ್ತಿ

ನಿರೀಕ್ಷೆಗಣ್ಣು ನಾ ಸುಧಾ ಎದುರು ನೋಡುವ, ಪ್ರತೀಕ್ಷೆ ಮಾಡುವ ನೋಟ. ‘ಅದು ಮುಗಿಯುವುದರ ಒಳಗೆ next ಎಂದು ಮತ್ತೊಂದು ಪ್ರಶ್ನೆಗಾಗಿ ನಿರೀಕ್ಷೆಗಣ್ಣುಗಳಿಂದ ಎದುರು ನೋಡುತ್ತಾರೆ’. ‘ಆಸೆಗಣ್ಣು’, ಮಾದರಿಯಲ್ಲಿ ಬಂದಿರುವ ಪದ. ಆದರೆ ‘ಕಣ್ಣು’ ಪದಕ್ಕಿಂತ ‘ನೋಟ’ ಎಂಬುದನ್ನು ಬಳಸುವುದೇ ಹೆಚ್ಚು ಎಂದು ತೋರುತ್ತದೆ.

ನಿರೂಪಣಾಕರ್ತೆ ನಾ ಲಂಕೇಶ ಪತ್ರಿಕೆ ಸಭೆ ಸಮಾರಂಭಗಳ ಕಾರ್ಯಕ್ರಮಗಳ ನಿರ್ವಹಣೆ ಮಾಡುವಾಕೆ. ‘ನಗರದ ಅನೇಕ ಸಭೆ-ಸಮಾರಂಭಗಳಲ್ಲಿ ನಿರೂಪಣಾಕರ್ತೆಯಾಗಿ, ಸ್ವಚ್ಚ ಕನ್ನಡದ ಇಂಪನ್ನು ನೀಡುವ ಈ ಬೆಳದಿಂಗಳ ಬಾಲೆ, ಈಗ ಚಾಲ್ತಿಯಲ್ಲಿರುವ ಅದೆಷ್ಟೋ ಆಮದು ಗೊಂಬೆಗಳಿಗಿಂತಾ ಒಳ್ಳೆ ನಟಿ’. ಸರಿಯಾದ ಪದಗಳಿದ್ದರೂ ಹೊಸ ಪದ ಸೃಷ್ಟಿಸುವ ರೀತಿಯಲ್ಲಿ ಮೇಲಿನ ಪದಬಂದಿದೆ. ನಿರೂಪಕಿ ಪದ ಈಗಾಗಲೇ ಮೇಲಿನ ಅರ್ಥದಲ್ಲಿ ಬಳಕೆಯಲ್ಲಿದೆ. ಸಾಮಾನ್ಯವಾಗಿ ಪುರುಷವಾಚಕ ಪದಗಳಿಗೆ ಎ,ಇ, ಹೀಗೆ ಸ್ವರ ಸೇರಿಸಿ ಸ್ತ್ರೀವಾಚಕ ಪದಗಳನ್ನು ರಚಿಸಲಾಗುತ್ತದೆ. ಆದರೆ ಇಲ್ಲಿ ‘ನಿರೂಪಣಾಕರ್ತ’ ಬಳಕೆಯಲಿಲ್ಲ ಎಂಬುದನ್ನು ಗಮನಿಸಬಹುದು.

ನಿರೂಪಿಕೆ ನಾ ಮಯೂರ ಕಾರ್ಯಕ್ರಮ ನಿರ್ವಹಿಸುವಳು. ‘ನಿರೂಪಿಕೆಯ ಸುರಕ್ಷಿತ ಬದುಕಿನ ಹಿನ್ನೆಲೆಯಲ್ಲಿ ವಿಧಿ ಹಾಗೂ ಸಮಾಜ ಇವೆರಡರ ಅಪಾಯಗಳನ್ನು ಮುಖಾಮುಖಿ ಆಗಿಸುವ ಇಂದಿರಾಳ ಪಾತ್ರ….’. ಸ್ತ್ರೀವಾಚಕ ಪದಸೃಷ್ಟಿ ಇ, ಎ,ಇಣಿ ಇತ್ಯಾದಿಗಳನ್ನು ಸೇರಿಸಿ ನಡೆಯುತ್ತಿದೆ. ಆದರೆ ಕೆಲವೊಂದು ಪ್ರಸಂಗದಲ್ಲಿ ಉದಾ: ಅಧ್ಯಾಪಕ: ಅಧ್ಯಾಪಕಿಯಾಗಬೇಕಾದ್ದು ‘ಅಧ್ಯಾಪಿಕ’ ಎಂದೂ ಆಗುತ್ತದೆ. ಅದೇ ಧಾಟಿಯಲ್ಲಿ ಬಂದಿರುವಂತಿದೆ ಮೇಲಿನ ಪದ. ಈಗಾಗಲೇ ‘ನಿರೂಪಕಿ’ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು. ‘ನಾಯಿಕೆ’, ‘ಅಧ್ಯಾಪಿಕೆ’ ಮಾದರಿಯ ಪದವಿದು.

ನಿರೋಧಕತೆ ನಾ ಉದಯವಾಣಿ ತಡೆಯುವಿಕೆ. ‘ಎದೆಹಾಲು ಮಕ್ಕಳಲ್ಲಿ ರೋಗ ನಿರೋಧಕತೆಗೆ ಪೂರಕ’. ಗುಣವಾಚಕಕ್ಕೆ ‘ತೆ’ ಪ್ರತ್ಯಯ ಸೇರಿಸಿ ತಂದಿರುವ ನಾಮಪದ. ‘ನಿರೋಧ’ ನಾಮಪದವಿದ್ದರೂ ಕೆಲವೆಡೆ ಬಳಸಲು ಆಗುವುದಿಲ್ಲ.

ನಿರೋಧಕೋಪಾಯ ನಾ ಪ್ರಜಾವಾಣಿ ತಡೆಯುವ ವಿಧಾನ; ಪ್ರತಿರೋಧ ತಂತ್ರ. ‘….ಕೆಲಸಗಾರರಿಗೆ ಸಮವಸ್ತ್ರ, ಕೈಕವಚ….ಶುದ್ಧೀಕೃತ ನೀರು, ಬಾಟಲು, ಪಾತ್ರೆಗಳ ಬ್ಯಾಕ್ಟೀರಿಯಾ ನಿರೋಧಕೋಪಾಯ, ಉಪಕರಣ ಅಳವಡಿಸುವಿಕೆ….’ ‘ನಿವಾರಣೋಪಾಯ’ ಮಾದರಿಯಲ್ಲಿ ಬಂದಿರುವ ಪದ. ಸಂಸ್ಕತದ ಸಂಧಿ ನಿಯಮಗಳಿಗೆ ಅನುಸಾರವಾಗಿ ಬಂದಿದೆ.

ನಿಲುಭಂಗಿ ನಾ ಸುಧಾ ನಿಂತಿರುವಂತಹ ವಿನ್ಯಾಸ-ಮಾದರಿ. ‘ಮೈಸೂರು ಆಕಾಶವಾಣಿ ಭವನದ ಎದುರು ಸ್ಥಾಪಿಸಲಾಗಿರುವ ಈ ಪ್ರತಿಮೆಯು ಪಂಚಲೋಹದಿಂದ ನಿರ್ಮಿತವಾಗಿದೆ. ಆಕರ್ಷಕ ನಿಲುಭಂಗಿಯ ಸೌಮ್ಯವದನದ ಈ ಮೂರ್ತಿಯ ಎತ್ತರ ಹತ್ತು ಅಡಿಗಳು’. ಯಾವುದೇ ವ್ಯಕ್ತಿಯ ಭಾವಭಂಗಿಯನ್ನು ವಿವರಿಸುವಾಗ ವಿವರಣಾತ್ಮಕವಾಗಿಯೇ ಸೂಚಿಸಲಾಗುತ್ತದೆ. ಉದಾ: ಎದೆಮಟ್ಟದ, ಕುಳಿತ, ನಿಂತ, ಇತ್ಯಾದಿ. ಮೇಲಿನ ಪ್ರಯೋಗ ಹೊಸದಾಗಿ ಬಂದಿದೆ. ಅಥವಾ ಇದು ದ್ವಿರುಕ್ತಿಯೋ ತಿಳಿಯದು (ನಿಲು+ಭಂಗಿ)

ನಿಶ್ಯರ್ತ ಗು ಉದಯವಾಣಿ ಯಾವುದೇ ಶರತ್ತಿಲ್ಲದೆ. ‘ತನ್ನ ೧೮ ಮಂದಿ ಎಂ.ಪಿಗಳು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಿಶ್ಯರ್ತ ಬೆಂಬಲ ನೀಡುವವರು’. ‘ಶರತ್ತಿಗೆ’ ನಿಷೇದ ಪೂರ್ವಪ್ರತ್ಯಯ ಹತ್ತಿಸಿ ‘ನಿಶ್ಯಂಕೆ’ ಮಾದರಿಯಲ್ಲಿ ತಂದಿರುವ ಪದ. ಆದರೆ ಈಗಾಗಲೇ ಪರ್ಸೋ-ಅರೇಬಿಕ್ ಭಾಷೆಯ ನಿಷೇಧ ಸೂಚಕ ಪೂರ್ವಪ್ರತ್ಯಯ ‘ಬೇ’ ಉಪಯೋಗಿಸಿ ‘ಬೇಷರತ್’ ಎಂಬುದಾಗಿ ಬಳಸುತ್ತಿರುವುದನ್ನು ಗಮನಿಸಬಹುದು.

ನಿಷ್ಪಕ್ಷವಾದಿ ಗು ಸುಧಾ ಯಾವುದೇ ಪಕ್ಷದ ಪರವಿಲ್ಲದ. ‘ಇನ್ನು ಪ್ರಶಸ್ತಿಗಳು ಯಾವುದೂ ಇಲ್ಲವೇ? ನಿಷ್ಪಕ್ಷವಾದಿ ತೀರ್ಪುಗಾರರು ಇದ್ದಲ್ಲಿ ನಂಗೆ ಎಂದೋ ಬರ್ತೀತ್ತೇನೋ?’. ‘ನಿಷ್ಪಕ್ಷಪಾತಿ’ ಪದಕ್ಕೆ ಸಮಾನಾರ್ಥಕವಾಗಿ ಬಳಸಿರುವ ಹೊಸ ಪ್ರಯೋಗ.

ನಿಷ್ಠಾಂತರಿಸು ಕ್ರಿ ಲಂಕೇಶ ಪತ್ರಿಕೆ ನಿಷ್ಠೆ ಬದಲಿಸು. ‘…. ಲಿಂಗಾಯಿತ ಶಾಸಕರ ನಿಷ್ಠಾಂತರಿಸುವ ಹೆಗಡೇಜಿಯ ತಂತ್ರ ಕೈಕೊಟ್ಟದ್ದರಿಂದ…..’. ಪಕ್ಷಾಂತರ, ಭಾಷಾಂತರ ಮುಂತಾದದ ಪದಗಳ ಮಾದರಿಯಲ್ಲಿ ಬಂದಿರುವ ಪದ. ನಿಷ್ಠೆ ಬದಲಿಸುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆಯ ಬೇಡಿಕೆಗೆ ಅನುಗುಣವಾಗಿ ಹುಟ್ಟಿರುವ ಹೊಸ ಪದ.

ನಿಷ್ಠುರತೆ ನಾ ಸುಧಾ ಕಾಠಿಣ್ಯ, ಬಿರುಸುತನ. ‘ನನಗೆ ಇಷ್ಟ ನಿಜ. ಬದುಕಿನಲ್ಲಿ ದುಃಖವಿರುವಂತೆ ಸಂತೋಷವೂ ಇದೆ. ಹಗೆಯಿರುವಂತೆ ಕೆಳೆ ಇದೆ. ನಿಷ್ಠುರತೆ ವಂಚನೆ ಇರುವಂತೆ ನಯ ಪ್ರಾಮಾಣಿಕತೆ ಇದೆ’. ನಿಷ್ಠುರ ಎಂಬುದು ಗುಣವಾಚಕವೆಂದು ‘ತೆ’ ಪ್ರತ್ಯಯ ಬಳಸಲಾಗಿದೆ. ಆದರೆ ನಿಷ್ಠುರ ನಾಮಪದವೂ ಹೌದು.

ನೀರಳಿಕೆ ನಾ ಉದಯವಾಣಿ ದೇಹದಿಂದ ನೀರು ಅತಿಯಾಗಿ ಹೊರಹೋಗುವುದು/ ದೇಹದಲ್ಲಿ ನೀರಿಲ್ಲದಂತಾಗುವುದು. ‘ಈ ಮೊದಲು ಶೀತಕ್ಕೆ ಕೊರಿಯರ್ ಮದ್ದು ತೆಗೆದುಕೊಂಡಿದ್ದರು. ಅದೂ ಅವರ ನೀರಳಿಕೆಗೆ (ಡಿಹೈಡ್ರೇಶನ್) ಕಾರಣವಿದ್ದೀತು ಎಂದು ಕೊರಿಯರ್ ತರ್ಕಿಸಿದ್ದಾರೆ’. ‘ಅಳಿ’ ಎಂಬ ಪದ ಬಹುಶಃ ಮೇಲಿನ ಪದಸೃಷ್ಟಿಗೆ ಕಾರಣವಿರಬಹುದು. ‘ನೀರ್ಕಳೆತ’ ಎಂಬ ಪದ ಇದೇ ಅರ್ಥದಲ್ಲಿ ಈ ಹಿಂದೆ ಇದೇ ಅಂಕಣದಲ್ಲಿ ಬಳಕೆಯಾಗಿರುವುದನ್ನು ಗಮನಿಸಬಹುದು. ಇಂಗ್ಲಿಶಿನ ‘ಡಿ-ಹೈಡ್ರೇಶನ್’ ಪದಕ್ಕೆ ಸಂವಾದಿಯಾಗಿ ಬಂದಿಎ.

ನೀರ್ಕಳೆತ ನಾ ಜಾಹೀರಾತು ದೇಹದಿಂದ ವಾಂತಿ-ಭೇದಿಯ ಮೂಲಕ ನೀರು ಹೊರಹೋಗುವುದು. ‘…ಓ ಆರ್ ಎಸ್ ಪುಡಿಯನ್ನು ಕುದಿಸಿ ಆರಿಸಿದ ನೀರಿಗೆ ಬೆರೆಸಿ ಕೊಡಬೇಕು ಅಥವಾ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಬೆರೆಸಿದ ನೀರನ್ನು ಆಗಾಗ ಕೊಟ್ಟು ಮಗುವನ್ನು ನೀರ್ಕಳೆತದಿಂದ ರಕ್ಷಿಸಬೇಕು’. ‘ಡಿಹೈಡ್ರೇಶನ್’ ಎಂಬ ಪದಕ್ಕೆ ಸಂವಾದಿಯಾಗಿ ಬಳಸಿರುವ ಕನ್ನಡ ಪದ. ಆದರೂ ಕೇಳಿದೊಡನೆ ಅರ್ಥವಾಗುವುದು ಕಷ್ಟವೇ ಸರಿ.

ನೀತಿಗೇಡು ನಾ ಕನ್ನಡ ಪ್ರಭ ನೀತಿ ಕಳೆದುಹೋಗಿರುವಿಕೆ/ನೀತಿ ಇಲ್ಲಿದಿರುವಿಕೆ. ‘ನೀತಿಗೇಡಿನ ಆಚರಣೆ’. ‘ಮಾನಗೇಡು’, ‘ನಾಚಿಕೆಗೇಡು’ ಮಾದರಿಯಲ್ಲಿ ಬಂದಿರುವ ಪದ.

ನೀರಾಟ ನಾ ಆಕಾಶವಾಣಿ ನೀರಿನಲ್ಲಿ ನಡೆಯುವ ಕ್ರೀಡೆ. ‘೫೩ನೇ ರಾಷ್ಟ್ರೀಯ ನೀರಾಟ ಸ್ಪರ್ಧೆಗಳು ನಾಳೆ ಆರಂಭಗೊಳ್ಳಲಿವೆ’. ಇಂಗ್ಲಿಶಿನ ‘ಆಕ್ವೆಟಿಕ್ ಸ್ಪೋರ್ಟ್ಸ್‌’ ಎಂಬುದಕ್ಕೆ ರೂಪಿಸಿರುವ ಕನ್ನಡ ಪದ. ಅರ್ಥವಾಗಲು ಸ್ವಲ್ಪ ಕಾಲಾವಕಾಶ ಬೇಕಾಗುವುದು. ಜಲಕ್ರೀಡೆ ಬಳಕೆಯಲ್ಲಿದೆ.

ನುಗ್ಗಲು ನಾ ಉದಯವಾಣಿ ನುಗ್ಗುವಿಕೆ. ‘ಟೆನಿಸಿಗೆ ಹೊಸ ಚೈತನ್ಯದ ನುಗ್ಗಲು.’ ‘ನೂಕು’ ಪದದೊಡನೆ ಬರುತ್ತಿದ್ದ ಮೇಲಿನ ಪ್ರಯೋಗ ಈಗ ಸ್ವತಂತ್ರವಾಗಿ ಬಳಕೆಯಾಗಿದೆ. ಕೆಲವೊಂದು ಜೋಡುನುಡಿಗಳಲ್ಲಿ ಎರಡನೇ ಪದಕ್ಕೆ ಯಾವುದೇ ಸ್ಥಾನವಿರುವುದಿಲ್ಲ. ಎರಡೂ ಪದಗಳು ಒಟ್ಟಿಗೆ ಬಂದಾಗ ಮಾತ್ರ ಅರ್ಥ ಇರುತ್ತದೆ.

ನುಗ್ಗೇಶ್ ನಾ ಹಾಯ್ ಬೆಂಗಳೂರ್ ನುಗ್ಗುವ ಗುಣವುಳ್ಳವನು. ‘ಎಲ್ಲಿ ಬೇಕೆಂದರಲ್ಲಿ ನುಗ್ಗುವ ಜಾತಿ ಇರುವುದರಿಂದ ಈ ನಾಮಕರಣ ಎನುತ್ತಾರೆ ಎ.ಎಸ್. ಮೂರ್ತಿ’. ವಿಡಂಬನೆ, ಪ್ರಹಸನಗಳಲ್ಲಿ ವ್ಯಂಗ್ಯವಾಗಿ ಬಳಸಲಾಗುವ ಪದ.

ನುಸುಳುಕಾರ ನಾ ತರಂಗ ಕಳ್ಳತನದಿಂದ ಒಳಬರುವವ. ‘ಭಾರತದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪ್ರದೇಶದಲ್ಲೇ ಇಂಥ ನುಸುಳುಕಾರರನ್ನು ತಯಾರು ಮಾಡುವ ಸೇನಾಶಿಬಿರಗಳಿರುವುದು ಸುಳ್ಳೇ?’ ‘ಕಾರ’, ‘ಗಾರ’ ಪ್ರತ್ಯಯ ಸೇರಿಸಿದರೆ ವ್ಯಕ್ತಿ ಸೂಚಿ ನಾಮಪದಗಳನ್ನು ಸುಲಭವಾಗಿ ಸೃಷ್ಟಿ ಮಾಡಬಹುದೆಂಬ ಅನಿಸಿಕೆ ಮೇಲಿನ ಪದಸೃಷ್ಟಿಗೆ ಕಾರಣ. ಮಾದರಿ: ಆಕ್ರಮಣಕಾರ; ಅತಿಕ್ರಮಣಕಾರ.

ನ್ಯೂನೀಕರಣ ನಾ ಪ್ರಜಾವಾಣಿ ಕಡಿಮೆ ಮಾಡುವಿಕೆ; ಕ್ಷೀಣಗೊಳಿಸುವಿಕೆ. ‘ಇದು ಬಂಡವಾಳ ನ್ಯೂನೀಕರಣ ಅಥವಾ ಕ್ಯಾಪಿಟಲ್ ರಿಡಕ್ಷನ್. ಇದಕ್ಕೆ ಅಧಿನಿಯಮದಲ್ಲಿ ಅವಕಾಶವುಂಟು’. ‘ಈಕರಣ’ ಪ್ರತ್ಯಯ ಹತ್ತಿದ ಒಂದು ಪ್ರಯೋಗ. ಆಂಗ್ಲಭಾಷೆಯ ‘ರಿಡಕ್ಷನ್’ಗೆ ಸಂವಾದಿಯಾಗಿ ಬಳಸಲಾಗಿದೆ. ‘ಐಸೇಶನ್’ ಇಲ್ಲದಿದ್ದರೂ ‘ಈಕರಣ’ ಪ್ರಯೋಗ ನಡೆದಿದೆ.

ನೆನಪುಗಾರ ನಾ ಜಾಹೀರಾತು ಜ್ಞಾಪಿಸುವ, ನೆನಪಿಸುವವ. ‘…. ಟೆಕ್ನಾಲಜಿ ಜೀವನದ ಎಲ್ಲಕ್ಕೂ ಮಿಗಿಲಾದ ನೆನಪುಗಾರ, ಶಾಟ್‌ನಲ್ಲಿ ನಿಮ್ಮ ಸಹಾಯಕ’. ಮಾದರಿ: ಮೀನುಗಾರ, ಈಜುಗಾರ.

ನೆಮ್ಮದಿಭರತಿ ಗು ಜಾಹೀರಾತು ಸುಖವಾದ, ತೊಂದರೆಯಿಲ್ಲದ. ‘ಇದರಿಂದ ನಿಮಗೆ ನೆಮ್ಮದಿಭರಿತ ನಿದ್ರೆ ಬರುತ್ತದೆ’. ‘ಭರಿತ’ ಎಂಬುದಕ್ಕೆ ‘ತುಂಬಿದ’ ಎಂಬರ್ಥವಿದೆ. ‘ಅರ್ಥಭರಿತ’ ‘ಜನಭರಿತ’ ಪದಗಳಲ್ಲಿ ತುಂಬಿರುವುದು ಎಂಬರ್ಥವಿದೆ. ಆದರೆ ಮೇಲಿನ ಪ್ರಯೋಗದಲ್ಲಿ ಹಾಗಾಗುವುದಿಲ್ಲ. ‘ನೆಮ್ಮದಿಯಿಂದ ಕೂಡಿದ’ ಎಂದು ಆಗುವುದು ಸರಿ ಎನ್ನಿಸುತ್ತದೆ.

ನೇಯ್ಗೆಕಾರ ನಾ ಜಾಹೀರಾತು ಬಟ್ಟೆ ನೇಯುವವ. ‘ಪ್ರಸ್ತುತವಾಗುತ್ತಿದೆ ನಿಮ್ಮ ನಿಪುಣ ಸೀರೆ ನೇಯ್ಗೆಕಾರರ ಜಾದು’. ನೇಯ್+ಕಾರ=ನೇಕಾರ. ಈ ರೂಪವೇ ಬಳಕೆಯಲ್ಲಿರುವುದು. ಜಾಹೀರಾತಿನ ಕನ್ನಡ ಬಹಳಷ್ಟು ಭಾಷಾಂತರ ಮಾಡಿದ ಕನ್ನಡವಾದ್ದರಿಂದ ಇಲ್ಲಿ ಮೊದಲು ‘ವೀವಿಂಗ್’ ಎಂಬುದಕ್ಕೆ ಕನ್ನಡ ಪದ ಹುಡುಕಿ ಅದಕ್ಕೆ ‘ಕಾರ’ ಪ್ರತ್ಯಯ ಸೇರಿಸಿದ ಕಾರಣ ಈ ರೂಪ ಬಂದಿದೆ. ಸರಿಯಾದ ರೂಪ ನೇಕಾರ.

ನೆಲಾವರಣ ನಾ ತರಂಗ ನೆಲಭಾಗದ ಸ್ಥಳ. ‘ಹೀಗೆ ಸುಮ್ಮನೆ ಗಿಡಬಳ್ಳಿಗಳನ್ನು ಕಡಿದು ನೋಡಿದಾಗ ಓಹ್, ಕಲಾತ್ಮಕ ನೆಲಾವರಣದೊಳಗಿನ ಈ ಬಾವಿ ಆಶ್ಚರ್ಯ ಹುಟ್ಟಿಸಿತು’. ‘ನೆಲ ಅಂತಸ್ತು, ‘ನೆಲ ಮಾಳಿಗೆ’ ಎಂಬ ಪದಗಳನ್ನು ಗಮನಿಸಿ ಒಳಾವರಣದ ಮಾದರಿಯಲ್ಲಿ ಪದ ಸೃಷ್ಟಿ ಮಾಡಿರಬಹುದು. ಆದರೆ ಇದು ಬಹುಶಃ ನೆಲ ಅಂತಸ್ತು ಅಥವಾ ನೆಲಮಾಳಿಗೆಯಿರಬಹುದೇನೋ?

ನೇತಾರಣಿ ನಾ ಮುಖಂಡತ್ವ ವಹಿಸಿರುವವಳು; ಮುಖ್ಯಸ್ಥೆ. ‘….ಕಾಂಗ್ರೆಸ್ ಪಕ್ಷದ ವರಿಷ್ಠತೆಯ ಚುಕ್ಕಾಣಿ ಹಿಡಿದಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕಿ ರಾಷ್ಟ್ರ ನೇತಾರಣಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸೋಣ’. ಹಿಂದೆ ಅಧಿಕಾರವೆಲ್ಲವೂ ಪುರುಷಪ್ರಧಾನವಾಗಿದ್ದ ಸಂದರ್ಭದಲ್ಲಿ ಅಧಿಕಾರ ಸೂಚಕ ಪದವೆಲ್ಲವೂ ಪುರುಷನನ್ನೇ ಸೂಚಿಸುತ್ತದೆಂದು ಭಾವಿಸಿದ್ದು, ಈಗ ಸ್ತ್ರೀಯರನ್ನು ಸೂಚಿಸುವುದಕ್ಕಾಗಿಯೇ ಪದಸೃಷ್ಟಿ ಮಾಡಲಾಗುತ್ತಿದೆ. ಮೇಲಿನ ಪ್ರಯೋಗದಲ್ಲಿ ‘ನೇತಾರ’ ಪದಕ್ಕೆ ‘ಇಣಿ’ ಸೇರಿಸಲಾಗಿದೆ. ಆದರೆ ಸಂಧಿಯಾಗುವಾಗ ‘ಅ’ ಪೂರ್ವ ಸ್ವರಲೋಪವಾಗಿಲ್ಲ ಉಪಾಧ್ಯ-ಉಪಾಧ್ಯಾಯಿನಿ.

ನೇರಭಾಷಿ ನಾ ಕನ್ನಡ ಪ್ರಭ ಮುಚ್ಚು ಮರೆಯಿಲ್ಲದೆ ಎದುರಿಗೆ ಮಾತನಾಡುವವ, ಖಂಡಿತವಾಗಿ, ಸಾಫ್ ಸೀದಾ. ‘ಕೊರ್ಡಾ ಅವರು ಈ ಸುದ್ದಿಯಿಂದ ದಿಗ್ಭ್ರಮೆಗೊಂಡಿದ್ದಾರೆ. ನಾನು ನೇರಭಾಷಿ, ನನ್ನ ಮಾತನ್ನು ಕೇಳಿ ಎಂದು ಅಂಗಲಾಚಿದ್ದಾರೆ’. ಇದೇ ಅರ್ಥ ಕೊಡುವ ‘ನೇರವಾದಿ’ ಪದ ಪ್ರಯೋಗವಾಗಿದೆ. ‘ಮಿತ ಭಾಷಿ’ ಪದದ ಮಾದರಿಯಲ್ಲಿ ಬಂದಿರುವ ಪದ.

ನೇರವಂತಿಕೆ ನಾ ಸಂಯುಕ್ತ ಕರ್ನಾಟಕ ಇದ್ದುದನ್ನು ಇದ್ದಂತೆ ಹೇಳುವುದು; ಸ್ಪಷ್ಟ, ನೇರ ನಡವಳಿಕೆ. ‘ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರಾದ ಅವರ ವಾದವನ್ನು ನೀವು ಒಪದೇ ಇರಬಹುದು. ಆದರೆ ಅವರ ನೇವಂತಿಕೆ ಮಾತ್ರ ಎಲ್ಲರಿಗೂ ತಿಳಿದ ವಿಚಾರ’. ಸಿರಿವಂತಿಕೆ, ಬುದ್ಧಿವಂತಿಕೆ ಮಾದರಿಯಲ್ಲಿ ಸೃಷ್ಟಿಸಿರುವ ಪದ. ಇಲ್ಲೆಲ್ಲ ‘ಇಕೆ’ ಪ್ರತ್ಯಯವನ್ನು ಸೇರಿಸುವುದು ಸಿರಿವಂತ, ಬುದ್ಧಿವಂತ ರೂಪಕ್ಕೆ. ಆದರೆ ಮೇಲಿನ ಉದಾಹರಣೆಯಲ್ಲಿ ನೇರವಂತ ಎಂಬ ಪದ ಬಳಕೆಯಿಲ್ಲ. ಅದನ್ನು ಸೃಷ್ಟಿಸಿಕೊಂಡು ನಂತರ ‘ಇಕೆ’ ಸೇರಿಸಿರುವಂತಿದೆ. ಇನ್ನೊಂದು ಉದಾ: ಮಡಿವಂತಿಕೆ.

ನೇರವಾದಿ ನಾ ಕರ್ಮವೀರ ಇದ್ದುದನ್ನು ಇದ್ದಂತೆ ಹೇಳುವವನು. ‘ಸ್ವಭಾವತ: ನೇರವಾದಿಯಾದ ಮಮತಾಳಲ್ಲಿನ ಅಸಮಾಧಾನದ ಹೊಗೆ ತೀರಾ ಇತ್ತೀಚಿನದಲ್ಲ’. ಇಂಗ್ಲಿಶಿನ ‘ಸ್ಟ್ರೈಟ್ ಫಾರ‍್ವರ್ಡ್‌’ ಎಂಬುದರ ಸಂವಾದಿ ಪದ. ಇದುವರೆಗೆ ನಿಷ್ಠುರವಾದಿ, ನಿಷ್ಪಕ್ಷಪಾತಿ ಎಂದೆಲ್ಲಾ ಬಳಕೆಯಾಗುತ್ತಿತ್ತು. ಇಂಗ್ಲಿಶಿನ ಎರಡು ಪದಗಳ ನೆರವಿನಿಂದ ಸೃಷ್ಟಿಯಾಗಿರುವ ಹೊಸ ರಚನೆ. ಆದರೆ, ಕೋಮುವಾದಿ, ಮಾರ್ಕ್ಸ್‌‌ವಾದಿ, ಉದಾರವಾದಿ, ಇತ್ಯಾದಿ ಪದಗಳಲ್ಲಿರುವ ‘ವಾದಿ’ಗೂ ಇಲ್ಲಿ ಬಳಸಿರುವ ‘ವಾದಿ’ಗೂ ಬಹಳ ವ್ಯತ್ಯಾಸವಿದೆ. ಒಂದು ತತ್ವ, ಸಿದ್ದಾಂತಗಳ ಅಡಿಯಲ್ಲಿ ಬಂದರೆ, ಇಲ್ಲಿ ಕೇವಲ ವ್ಯಕ್ತಿಯ ಗುಣಸೂಚಕವಾಗಿ ಬಳಕೆಯಾಗಿದೆ.

ನೊಂದಾಣಿಕೆ ನಾ ಜಾಹೀರಾತು ದಾಖಲಿಸುವುದು; ಪಟ್ಟಿ ಮಾಡಿಸುವುದು. ‘ನೊಂದಾಣಿಕೆ ಅರ್ಜಿಗಳನ್ನು ನಿಗಮದ ಕೇಂದ್ರ ಕಚೇರಿಯಿಂದಾಗಲೀ ಅಥವಾ ಜಿಲ್ಲೆಯ ಕೈಮಗ್ಗ ಮತ್ತು ಜವಳಿ…. ಪಡೆಯಬಹುದಾಗಿದೆ. ‘ಇಕೆ’ ಪ್ರತ್ಯಯದೊಡನೆ ಬಂದಿರುವ ಪದ. ಈಗಾಗಲೇ ‘ನೋಂದಣಿ’ ಪದ ಇದೇ ಅರ್ಥದಲ್ಲಿ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಮಾದರಿ: ಹೊಂದಾಣಿಕೆ.

ನೊಣಪ್ರತಿ ನಾ ಕರ್ಮವೀರ ತದ್ರೂಪ ಪ್ರತಿ; ಒಂದೇ ರೀತಿಯಿರುವ ಪ್ರತಿ ನಕಲು. ‘ರೀ ಮೇಕ್ ಅಂದಾಕ್ಷಣ ಅದನ್ನು ಓರೆಗಣ್ಣಿನಿಂದ ನೋಡಬೇಕಾಗಿಲ್ಲ. ಅಂತಹ ಚಿತ್ರ ನೊಣಪ್ರತಿ ಆಗಬೇಕಿಲ್ಲ’. ಹಿಂದಿಯ ‘ಮಕ್ಕಿ ಕಾ ಮಕ್ಕಿ’ ಎಂಬುದರ ಸಂವಾದಿಯಾಗಿ ಬಂದಿರುವ ಪದ. ಆದರೂ ಕನ್ನಡದಲ್ಲಿ ‘ಪಡಿಯಚ್ಚು’ ಎಂಬ ಪದ ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.