ಒಂದು ಭಾಷೆಯ ಪದಸಂಪತ್ತು ಸಾಕಷ್ಟಿದ್ದರೂ ಹೊಸರಚನೆಗಳು ಬಂದು ಸೇರುತ್ತಲೇ ಇರುತ್ತವೆ. ಸಾಗರಕ್ಕೆ ಅನೇಕ ನದಿಗಳು ಬಂದು ಸೇರುತ್ತಿರುವಂತೆ ಭಾಷೆಯ ಶಬ್ದಸಾಗರ ಹೊಸ ಪದಗಳ ಸೇರುವಿಕೆಯಿಂದ ವಿಸ್ತರಿಸುತ್ತಲೇ ಇರುತ್ತದೆ. ಈ ರೀತಿಯ ಹೊಸಪದಗಳ ಸೇರುವಿಕೆಗೆ ಕಾರಣವಾಗಿ ಆ ಭಾಷೆಯಲ್ಲಿ ಪದ ಸಂಪತ್ತು ಕಡಿಮೆಯೆಂದು ಭಾವಿಸಬೇಕಾಗಿಲ್ಲ.

ವಿಶ್ವ ಇಂದು ಚಿಕ್ಕದಾಗುತ್ತಿದೆ. ದೂರದ ಮಾತು ಹೋಗಿ ಇಂದು ಎಲ್ಲವೂ ಪಕ್ಕದಲ್ಲಿದ್ದಂತೆಯೇ ಇದೆ. ನಮ್ಮ ಅನಿಸಿಕೆಗಳು ಇಂದು ನಿಮಿಷ ಮಾತ್ರದಲ್ಲಿ ಎಲ್ಲಿಗೆ ಬೇಕಾದರೂ ತಲುಪಬಲ್ಲವು, ಮಾಹಿತಿಯನ್ನು ನಾವು ಪಡೆಯಬಹುದು. ಹಾಗಾಗಿ ಇಂದು ಪ್ರಪಂಚವನ್ನು ‘ಗ್ಲೋಬಲ್ ವಿಲೇಜ್’ ಎಂದು ಕರೆಯಲಾಗುತ್ತಿದೆ. ಇದಕ್ಕೆ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ.

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ, ಹೊಸ ಹೊಸ ತಿಳುವಳಿಕೆಗಳು ಮೂಡಿದಂತೆ, ಜ್ಞಾನ ವಿಸ್ತಾರವಾದಂತೆ ಹೊಸ  ಬದಲಾವಣೆಗಳಿಗೆ ಭಾಷೆಯೂ ತೆರೆದುಕೊಳ್ಳಬೇಕಾಗುತ್ತದೆ. ವಸ್ತು-ವಿಷಯಗಳನ್ನು ವಿವರಿಸಲು ಭಾಷೆಯಲ್ಲಿ ಇರುವ ಪದಗಳಿಂದ ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಹೊಸಪದಗಳ ಸೃಷ್ಟಿ ಅನಿವಾರ್ಯವಾಗಬಹುದು.

ಒಂದು ಭಾಷೆಯ ಪದಕೋಶದಲ್ಲಿ ಸಾಮಾನ್ಯ ಪದಗಳೂ, ವಿಶಿಷ್ಟ ಪದಗಳೂ ಇರುತ್ತವೆ. ಮೊದಲನೆಯದು, ಸಾಮಾನ್ಯ ಜನರಾಡುವ ಮಾತಿನಲ್ಲಿ ಬಳಕೆಯಾದರೆ, ಸಾಂದರ್ಭಿಕವಾಗಿ ಬಳಕೆಯಾಗುವ ಗ್ರಾಂಥಿಕ ಪದಗಳು, ಆಡಳಿತಕ್ಕೆ ಸಂಬಂಧಿಸಿದ ಪದಗಳು,ತಾಂತ್ರಿಕ ಪದಗಳು, ವೃತ್ತಿಪದಗಳು ಹೀಗೆ ಅನೇಕವು ವಿಶಿಷ್ಟ ಪದಗಳ ಗುಂಪಿಗೆ ಸೇರುತ್ತವೆ. ದಿನನಿತ್ಯ ಬಳಕೆಯಾಗುವ ಪದಗಳೂ ಕೂಡಾ ಒಂದೇ ತೆರನಾಗಿ ಇಲ್ಲವೆಂಬುದು ತಿಳಿದಿದೆ. ನಗರ ಪ್ರದೇಶ-ಗ್ರಾಮೀಣ, ಶಿಕ್ಷಿತ-ಅಶಿಕ್ಷಿತ, ಪ್ರಾದೇಶಿ-ಸಾಮಾಜಿಕ ಭಿನ್ನಾಂಶಗಳೊಂದಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ಗ್ರಾಂಥಿಕ ಪದಗಳು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವು ವಿದ್ವಾಂಸರ ಶಬ್ದ ಸಂಪತ್ತಿನಲ್ಲಿ ಉಳಿದುಕೊಂಡಿರುವಂತಹ ಪದಗಳು. ಇವುಗಳನ್ನು ಅರ್ಥಮಾಡಿಕೊಳ್ಳಲು ನಿಘಂಟುಗಳು ಬೇಕಾಗಬಹುದು. ಸಾಹಿತ್ಯಕ್ಕೆ ಮೆರುಗನ್ನು ನೀಡಲು, ಔನ್ನತ್ಯವನ್ನು ನೀಡಲು ಇಂತಹ ಪದ ಪ್ರಯೋಗಗಳು ಅವಶ್ಯವಾಗುತ್ತದೆ. ಹಾಗಾಗಿಯೇ ಇಂದು ವಿವಿಧ ಕೃತಿಕಾರದ ಪದಪ್ರಯೋಗ ಕೋಶಗಳು ಬಂದಿವೆ.

ಆಡಳಿತಕ್ಕೆ ಸಂಬಂಧಿಸಿದ ಪದಗಳೇ ಬೇರೆಯಾಗಿರುತ್ತವೆ. ಸಾಮಾನ್ಯ ಪದಗಳನ್ನು ಬಳಸಿದರೂ ಅದಕ್ಕೆ ಒಂದು ನಿಶ್ಚಿತವಾದ ಅರ್ಥವನ್ನು ನೀಡಲಾಗಿರುತ್ತದೆ. ಆಡಳಿತ ಕ್ಷೇತ್ರಕ್ಕೆಂದೇ ರಚಿಸಲಾದ ಪದಗಳೂ ಇರುತ್ತವೆ. ತಂತ್ರಜ್ಞಾನ ಸಾಮಾನ್ಯವಾಗಿ ಇಂಗ್ಲಿಷ್  ಮೂಲಕ ಹರಿದು ಬರುತ್ತಿರುವ ಕಾರಣ ತಾಂತ್ರಿಕ ಪದಕೋಶದಲ್ಲಿ ಇಂಗ್ಲಿಷ್ ಪದಗಳೂ ಶಾಶ್ವತವಾಗಿ ಉಳಿದಿರಬಹುದು. ವಿವಿಧ ವೃತ್ತಿಗಳನ್ನು ಕೈಗೊಂಡಿರುವ ಜನರು ತಮ್ಮದೇ ಆದ ವೃತ್ತಿಪದಗಳನ್ನು ಹೊಂದಿದ್ದು, ವೃತ್ತಿಯಲ್ಲಿ ನಿರತರಾಗಿರುವಾಗ ಅದೇ ಪದಗಳನ್ನು ಬಳಸುತ್ತಾರೆ.

ಇನ್ನು, ಭಾಷೆಗಳ ನಿಕಟ ಸಂಪರ್ಕದಿಂದ ಅಥವಾ ಆಡಳಿತದ ಭಾಷೆಯಾಗಿ ಬಳಕೆಯಾದ ಕಾರಣದಿಂದ ಅನ್ಯಭಾಷೆಯ ಪದಗಳೂ ಪದಕೋಶದಲ್ಲಿ ಮನೆ ಮಾಡಬಹುದು. ಬಹಳ ಕಾಲ ಅದನ್ನು ಬಳಸುತ್ತಾ ಬಂದ ಕಾರಣ, ಅವು ಶಾಶ್ವತವಾಗಿ ನೆಲೆನಿಂತು ಬಿಡುತ್ತವೆ.

ಹೀಗೆ ಹಲವು ರೀತಿಯ ಪದಸಂಗ್ರಹವಿದ್ದರೂ, ಹೊಸ ವಿಷಯಗಳನ್ನು ಹೇಳುವಾಗ ಹೊಸ ಪರಿಭಾಷೆಯ ಅವಶ್ಯಕತೆ ಉಂಟಾಗುವುದು ಅಥವಾ ಅಂತಹದ್ದನ್ನು ಹೇಳಲು ಪದವಿಲ್ಲದಿರುವುದೂ ಹೊಸ ಬದಲಾವಣೆಗೆ ಪೂರಕವಾಗಿ ಬಂದಂತಹ ಪದಗಳು. ಅಂತೆಯೇ ಕೆಲವೊಂದು ಪದಗಳ ರಚನೆಗೆ ಕಾರಣ, ಆ ಭಾಷೆಯಲ್ಲಿ ಅದೇ ಅರ್ಥವನ್ನು ನೀಡಬಲ್ಲ ಪದವಿಲ್ಲದಿರುವುದು. ಉದಾ. ‘ನ್ಯಾಯವಾಗಿ ಸಂಪಾದಿಸಿದ’ ಎಂದು ಹೇಳಲು ಪದವಿಲ್ಲದೆ ‘ನ್ಯಾಯಾರ್ಜಿತ’ ಎಂದು ಸೃಷ್ಟಿಸಲಾಗಿದೆ. ಇಷ್ಟೇ ಅಲ್ಲದೆ ಇತರ ಭಾಷೆಯ ಪ್ರಭಾವವೂ ಪದರಚನೆಗೆ ದಾರಿಮಾಡಿಕೊಡುತ್ತವೆ. ಉದಾ. ಘೋನಾಯಿಸು.

ಹೀಗೆಲ್ಲ ಪದರಚನೆಯಾಗುತ್ತಿದ್ದರೂ ಇವೆಲ್ಲವೂ ಈಗಾಗಲೇ ಇರುವ ಪದಗಳನ್ನು ಕೂಡಿಸಿ, ಪ್ರತ್ಯಯ ಸೇರಿಸಿ, ಅನುವಾದಿಸಿ, ಸೃಷ್ಟಿಸಿದಂತಹವುಗಳೇ. ಅಂದರೆ ಪದಗಳು ಆಯಾ ಭಾಷೆಯದೇ, ವಿಧಾನವೂ ಅಲ್ಲಿನದೇ, ಪ್ರತಿಯೊಂದು ಭಾಷೆಗೂ ಅದರದ್ದೇ ಆದ ನಿಯಮಗಳು ಇರುವಂತೆ ಪದರಚನೆಯಲ್ಲೂ ನಿಯಮಗಳು ಇರುತ್ತವೆ. ಕನ್ನಡದಲ್ಲಿನ ಪದರಚನೆ ನಿಯಮವನ್ನು ಗಮನಿಸಿದಾಗ, ಸಮಾಸ, ಪೂರ್ವಪ್ರತ್ಯಯ ಬಳಕೆ, ಪರಪ್ರತ್ಯಯ ವಿಧಾನ, ಸಾದೃಶ್ಯ ವಿಧಾನ, ಕಲ್ಪನಾತ್ಮಕ ವಿಧಾನಗಳನ್ನು ಅನುಸರಿಸಿ ಪದರಚನೆಗಳಾಗಿರುವುದನ್ನು ಕಾಣಬಹುದು. ಸಮಾಜ ಕ್ರಿಯೆಯಲ್ಲಿ ಎರಡು ಪದಗಳು ಸೇರಿ ಹೊಸಪದ ರಚನೆ (ಇಳಿ+ಬಿಸಿಲು)ಯಾದರೆ, ಪೂರ್ವಪ್ರತ್ಯಯ ಬಳಸಿ ಅಸಾಂಪ್ರದಾಯಿಕ (ಅ+ಸಾಂಪ್ರದಾಯಿಕ), ಮರು ನಿರ್ಮಾನ (ಮರು+ನಿರ್ಮಾಣ), ಪರಪ್ರತ್ಯಯದೊಡನೆ ಸಬಲೀಕರಣ (ಸಬಲ+ಈಕರಣ), ಸಾದೃಶ್ಯ ಮಾದರಿಯಲ್ಲಿ ವಿದ್ಯಾರ್ಥಿ ಇರುವಂತೆ ಶಿಬಿರಾರ್ಥಿ, ಕಲಿಕಾರ್ಥಿ, ಪ್ರವಾಸಾರ್ಥಿ, ಕಲ್ಪನಾತ್ಮಕದಲ್ಲಿ ಮೇಲಿನ ಯಾವುದೂ ವಿಧಾನವನ್ನನುಸರಿಸದೆ, ವಸ್ತುವನ್ನು ಕಾರ್ಯವನ್ನು ಗಮನಿಸಿ (ತಂತ್ರಾಂಶ, ಉಷ್ಣಮಾಪಕ ಇತ್ಯಾದಿ) ಪದರಚನೆ ಮಾಡಬಹುದಾಗಿದೆ.

ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೊಸಪದ, ಹೊಸರಚನೆಗಳನ್ನು ಕನ್ನಡ ವಿಶ್ವವಿದ್ಯಾಲಯದ ಭಾಷಾಭಿವೃದ್ಧಿ ವಿಭಾಗದಿಂದ ಪ್ರಕಟವಾಗುವ ‘ನಮ್ಮ ಕನ್ನಡ’ ಪತ್ರಿಕೆ ‘ದಿನದಿನ’ ಭಾಗದಲ್ಲಿ ದಾಖಲಿಸಲಾಗುತ್ತಿದೆ. ಇದು ಇನ್ನೂ ಮುಂದುವರಿಯುತ್ತಿದೆ. ಹೀಗೆ ಹಲವು ಸಂಚಿಕೆಗಳಲ್ಲಿ ದಾಖಲಿಸಲಾದ ಪದಗಳನ್ನು ಒಂದೆಡೆ ತಂದಿರುವ ಪ್ರಸ್ತುತ ಕೋಶದಲ್ಲಿ ಈ ಮುನ್ನ ರಚನೆಯಾಗಿರುವ ‘ದಿನದಿನ’ದಲ್ಲಿ ಅನುಸರಿಸಲಾದ ವಿಧಾನವನ್ನೇ ಅಂದರೆ, ಮುಖ್ಯರೂಪ, ವ್ಯಾಕರಣ ವರ್ಗ, ಆಕರ, ಅರ್ಥ, ಪ್ರಯೋಗ, ಟಿಪ್ಪಣಿ, ಅನುಸರಿಸಲಾಗಿದೆ. ಆಕರವೆಂದರೆ ಈ ನಮೂದು ಎಲ್ಲಿ ದೊರಕಿತು ಎನ್ನುವುದರ ಸೂಚನೆ. ಅರ್ಥವನ್ನು ನೀಡುವಾಗ ಖಚಿತತೆಗಿಂತ ಸಾಧ್ಯತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಯೋಗದಲ್ಲಿ ಆ ರಚನೆಗೆ ಗೋಚರಿಸುವ ಅರ್ಥವನ್ನು ನೀಡಲಾಗಿದೆ. ಪ್ರಯೋಗವೆಂದರೆ, ಆಕರದಿಂದ ಆಯ್ದ ವಾಕ್ಯ ಅಥವಾ ವಾಕ್ಯಭಾಗ. ಟಿಪ್ಪಣಿಯಲ್ಲಿ ರಚನೆಯ ಹಿಂದಿನ ನಿಯಮ, ಅನುಸರಿಸಿರುವ ಮಾದರಿ, ಇಂಗ್ಲಿಶ್ ಪದದ ಅನುವಾದವೋ, ವ್ಯಾಕರಣ ನಿಯಮಗಳ ಉಲ್ಲಂಘನೆಯಾಗಿದೆಯೇ ಇತ್ಯಾದಿಗಳು ಒಳಗೊಂಡಿವೆ.

ಈ ಕೋಶದಲ್ಲಿ ಸುಮಾರು ೭೦೦ ಕ್ಕೂ ಮಿಕ್ಕು ಪದಗಳಿದ್ದು ಇವುಗಳ ರಚನೆಯನ್ನು ಗಮನಿಸಿದಾಗ ಪೂರ್ವಪ್ರತ್ಯಯ, ಪದಪ್ರತ್ಯಯಗಳನ್ನು ಬಳಸಿದಂತಹ ಹಾಗೂ ಇಂಗ್ಲಿಶಿನಿಂದ ಅನುವಾದ ಮಾಡಿದಂತಹ ರಚನೆಗಳನ್ನು ಮುಖ್ಯವಾಗಿ ಕಾಣಬಹುದು. ಇಂಗ್ಲಿಶಿನ ‘ಐಸೇಶನ್‌’ ಪ್ರಕ್ರಿಯೆ ಬಹಳಷ್ಟು ಪದಗಳ ನಿರ್ಮಾಣಕ್ಕೆ ಕಾರಣವಾಗಿದೆ. ಪ್ರತ್ಯಯಗಳನ್ನು ಬಳಸುವಾಗಲೂ ನಿಯಮಗಳನ್ನು ಮುರಿದಿರುವದೂ ಉಂಟು. ಕನ್ನಡ ಶಬ್ದಕ್ಕೆ ಅನ್ಯದೇಶ್ಯದ ಪ್ರತ್ಯಯ (ಈಕರಣ, ತ್ವ, ತೆ ಇತ್ಯಾದಿ) ಅಥವಾ ಪದವನ್ನು (ನಾಡು + ಅಭಿಮಾನ + ನಾಡಭಿಮಾನ, ಅ+ನೇರ= ಅನೇರ) ಪದರಚನೆ ಮಾಡಿರುವಂತಹದೂ ಇದೆ.

ನನ್ನ ಈ ಪದ ಸಂಗ್ರಹ ಕಾರ್ಯಕ್ಕೆ ಅನೇಕ ವಿಧವಾಗಿ ಸಹಾಯ ನೀಡಿದವರು ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಿ. ನಾರಾಯಣ ಅವರು. ಅವರು ಎಲ್ಲೊ ಕಂಡ, ಕೇಳಿಸಿಕೊಂಡ ಹೊಸಪದಗಳನ್ನು ದಾಖಲಿಸಲು ದಾಖಲಿಸಲು ತಂದುಕೊಡುತ್ತಿದ್ದರು. ಪದರಚನೆಯ ಬಗ್ಗೆ ಚರ್ಚಿಸುತ್ತಿದ್ದರು. ನನ್ನೆಲ್ಲಾ ಕೆಲಸಗಳಲ್ಲೂ ಪ್ರೋತ್ಸಾಹ ನೀಡುತ್ತಿರುವ ಅವರಿಗೆ ನನ್ನ ವಂದನೆಗಳು.

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡರು ಈ ಕೋಶವನ್ನು ಪ್ರಕಟಿಸಲು ಅನುಮತಿ ನೀಡಿ ಮುನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ವಂದನೆಗಳು.

ನಮ್ಮ ವಿಭಾಗದ ಸಹೋದ್ಯೋಗಿ ಮಿತ್ರರಾದ ಡಾ. ಡಿ. ಪಾಂಡುರಂಗಬಾಬು, ಡಾ. ಅಶೋಕ ಕುಮಾರ ರಂಜೇರೆ, ಡಾ. ಮಹದೇವಯ್ಯ ಹಾಗೂ ಹಲವು ಮಿತ್ರರು ಈ ಪದ ಸಂಗ್ರಹ ಕಾರ್ಯದಲ್ಲಿ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ವಂದನೆಗಳು.

ಈ ಕೋಶವನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ಅಧಿಕಾರಿಗಳಿಗೆ, ಇದನ್ನು ಆಗುಮಾಡಲು ಸಹಾಯ ಮಾಡಿದ ಮಿತ್ರ ಶ್ರೀ ಸುಜ್ಞಾನಮೂರ್ತಿಯವರಿಗೆ, ಮುಖಪುಟ ಬರೆದುಕೊಟ್ಟಿರುವ ಶ್ರೀ ಕೆ.ಕೆ. ಮಕಾಳಿಯವರಿಗೆ, ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್, ಕಮಲಾಪುರ ಅವರಿಗೆ ಹಾಗೂ ಮುದ್ರಕರಿಗೆ ನನ್ನ ಕೃತಜ್ಞತೆಗಳು.

ಡಾ. ಸಾಂಬಮೂರ್ತಿ