ಪಂಜಾಭೀಕರಣ ನಾ ಸುಧಾ ಪಂಜಾಬ್ ಪ್ರದೇಶಕ್ಕೆ ಒಳಪಡಿಸುವುದು. ‘ಸಂಪ್ರದಾಯಕ್ಕೆ ಮರಳುವ ಜೊತೆಗೆ ಆಡಳಿತದಲ್ಲಿ ಪಂಜಾಬೀಕರಣ, ದೇಶದ ಮೂರು ಅಧಿಕಾರ ಕೇಂದ್ರಗಳನ್ನು ರಾಷ್ಟ್ರಪತಿ, ಪ್ರಧಾನಿ, ಸೈನ್ಯದ ದಂಡನಾಯಕ-ಈಗ ಪಂಜಾಬಿಗಳೇ ಹಿಡಿದಂತಾಗಿದೆ’. ‘ಈಕರಣ’ ಪ್ರತ್ಯಯದ ಬಳಕೆ ಇತ್ತೀಚೆಗೆ ಹೆಚ್ಚಿದ್ದರೂ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಬಳಸುವುದು ಕಡಿಮೆ. ಪಶ್ಚಿಮೀಕರಣ ಎಂಬ ಇಂತಹ ಪದ ಇದೆ. ಆದರೆ ಮೇಲಿನ ಪದದಲ್ಲಿ ಪಂಜಾಬ್ ಪ್ರದೇಶವನ್ನು ಗಮನದಲ್ಲಿಟ್ಟು ಬಳಸಲಾಗಿದೆ. ಇದೇ ಮಾದರಿಯಲ್ಲಿ ಉತ್ತರೀಕರಣ, ಯೂರೋಪೀಕರಣ, ಜಪಾನೀಕರಣ ಬರಬಹುದೇ?

ಪಕ್ಷಪಾತತನ ನಾ ಲೋಕಧ್ವನಿ ಯಾವುದಾದರೂ ಪಕ್ಷದ ಪರವಹಿಸುವುದು. ‘ಇದನ್ನು ನೀಡುವಾಗ ನಾನು ಯಾವುದೇ ಪಕ್ಷಪಾತತನವನ್ನು ಎಸಗಲಿಲ್ಲ’. ‘ಪಕ್ಷಪಾತ’ ಪದವೇ ಅರ್ಥನೀಡಲು ಸಾಕಾಗಿರುವಾಗ ‘ತನ’ಬೇಕೆ? ಆದರೂ ಇತ್ತೀಚೆಗೆ ‘ತನ’ ಪ್ರತ್ಯಯ ಬಳಸುವುದು ಹೆಚ್ಚಾಗುತ್ತಿದೆ.

ಪಕ್ಷೀಯ ನಾ ಉದಯವಾಣಿ ಪಕ್ಷಕ್ಕೆ ಸೇರಿದವ/ಪಕ್ಷದ ಸದಸ್ಯ. ‘ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷಸ್ಥಾನ ಸ್ವೀಕರಿಸಿದ ಸೋನಿಯಾ ಗಾಂಧಿ ಮುಂಬರುವ ಸವಾಲುಗಳನ್ನೆದುರಿಸಿ ವಿಜಯ ಸಾಧಿಸಲು ಪಕ್ಷೀಯರೆಲ್ಲಾ ಒಗ್ಗಟ್ಟಿನಿಂದಿರುವಂತೆ ಕರೆ ನೀಡಿದರಲ್ಲದೆ….’. ತಕ್ಷಣಕ್ಕೆ ಗುಣವಾಚಕವೆಂದೇ ಗೋಚರವಾಗುತ್ತದೆ. ಇದಕ್ಕೆ ಕಾರಣ ‘ಈಯ’ ಪ್ರತ್ಯಯ. ಕ್ಷಾರೀಯ, ಪ್ರಾಂತೀಯ, ದೇಶೀಯ ಇತ್ಯಾದಿಗಳಲ್ಲಿ ಆಯಾ ವಸ್ತು, ವಿಭಾಗಗಳಿಗೆ ಸಂಬಂಧಿಸಿದಂತೆ ಗುಣವಿರುವುದು ಸ್ಪಷ್ಟ. ಹಾಗೆಂದು ಇಲ್ಲಿ ಪಕ್ಷಿಗೆ ಸಂಬಂಧಿಸಿದ ಗುಣ ಎಂಬ ಅರ್ಥೈಸಬಹುದು. ಇನ್ನೊಂದು ‘ಪಕ್ಷೀಯ’ ಪದವನ್ನು ಸಮಾಸಪದಗಳಲ್ಲಿ ಬಳಸುವುದು ರೂಢಿಯಲ್ಲಿದೆ. ಉದಾ: ಏಕಪಕ್ಷೀಯ, ದ್ವಿಪಕ್ಷೀಯ, ತ್ರಿಪಕ್ಷೀಯ ಇತ್ಯಾದಿ. ಆದ್ದರಿಂದ ಅರ್ಥಸ್ಪಷ್ಟತೆಯಿಲ್ಲ ಎನ್ನಬಹುದು.

ಪಥದರ್ಶಿ ನಾ ಉದಯವಾಣಿ ದಾರಿ ತೋರಿಸುವವ. ‘…..ಆದರೆ ಭಾರತ ಸರ್ವಧರ್ಮ ಸಮನ್ವಯತೆಯ ಪಥದರ್ಶಿಯಾಗಿ ಈ ಐವತ್ತು ವರ್ಷಗಳಲ್ಲಿ ಸಾಗಿದೆ’. ‘ಮಾರ್ಗದರ್ಶಿ’ ಎಂಬ ಪದಕ್ಕೆ ಸಮಾನಾರ್ಥವಾಗಿ ಬಂದಿರುವ ಪದ.

ಪಥ್ಯತಜ್ಞ ನಾ ವಿಜಯ ಕರ್ನಾಟಕ ಆರೋಗ್ಯಕ್ಕೆ ತಕ್ಕ ಆಹಾರವನ್ನು ಸೂಚಿಸುವ ಪಂಡಿತ. ಆರೋಗ್ಯಕ್ಕೆ ತಕ್ಕ ಆಹಾರದ ಬಗ್ಗೆ ಸಲಹೆ ನೀಡುವವ. ‘ಪಥ್ಯತಜ್ಞರು ಪುರಾತನ ಆಹಾರ ಪದ್ಧತಿಗಳನ್ನು ಕುರಿತು ಸಂಶೋಧನೆ ನಡೆಸಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳ ಹೋಟೆಲ್ ಮೆನುಕಾರ್ಡ್‌‌ಗಳು ಬದಲಾಗುವ ಸಂಭವವಿದೆ’. ಇಂಗ್ಲಿಶಿನ ‘ಡಯಟಿಶಿಯನ್’ ಎಂಬುದಕ್ಕೆ ಸಂವಾದಿಯಾಗಿ ತಂದಿರುವ ಪದ.

ಪದಾರ್ಪಿಸು ಕ್ರಿ ಕರ್ಮವೀರ ಕಾಲಿಡು, ಪ್ರಾರಂಭಿಸು. ‘ರಾಜಕುಮಾರ್ ಅಭಿನಯದ ‘ಶ್ರೀಕೃಷ್ಣ ಗಾರುಡಿ’ (೧೯೫೮) ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಿಸಿ ಹಲವಾರು ಉತ್ಕೃಷ್ಟ ಚಿತ್ರಗಳನ್ನು ನಿರ್ದೇಶಿಸಿದರು’. ಯಾವುದಾದರೊಂದು ಕ್ಷೇತ್ರದಲ್ಲಿ ಕೆಲಸ ಪ್ರಾರಂಭಿಸಿದಾಗ ‘ಪದಾರ್ಪಣೆ’ ಮಾಡಿದರು ಎಂಬುದಾಗಿ ಪ್ರಯೋಗದಲ್ಲಿದೆ. ಅದರಿಂದ ಹೊಸದಾಗಿ ಸೃಷ್ಟಿಮಾಡಿದ ಕ್ರಿಯಾರೂಪ.

ಪರಜೀವಭಕ್ಷಿ ಗು ಜಾಹೀರಾತು ಇನ್ನೊಂದು ಜೀವಿಯನ್ನು ತಿಂದುಹಾಕುವ. ‘ಒಂದು ಹೆಣ್ಣು ಟ್ರೈಕೋಗ್ರಾಮಾ ಪರಜೀವಭಕ್ಷಿ ಚಿಟ್ಟೆಯು ಸುಮಾರು ೧೦೦ ಕಾಯಿಕೊರಕ ಮೊಟ್ಟೆಗಳನ್ನು ಭಕ್ಷಿಸುತ್ತದೆ’. ‘ಪರತಂತುಜೀವಿ’ ಎಂಬ ಪದ ‘ಬೇರೆಯವರನ್ನಾಶ್ರಯಿಸಿ ಬದುಕುವ ಜಿವಿ’ ಎಂಬರ್ಥ ನೀಡುತ್ತದೆ. ಅದೇ ಮಾದರಿಯಲ್ಲಿ ಬಂದಿರುವ ಪದ. ಆದರೆ ಭಕ್ಷಿ ಪದವಿಲ್ಲ ‘ಭಕ್ಷಕ’ ಎಂಬುದು ಬಳಕೆಯಲ್ಲಿದೆ. ‘ನರಭಕ್ಷಕ’.

ಪರಮೋದ್ರೇಕ ನಾ ಕಸ್ತೂರಿ ಉದ್ರೇಕದಲ್ಲಿ ಅತಿ ಉನ್ನತ ಸ್ಥಿತಿ. ‘ನೀರನ್ನು ನೋಡಿದಾಗ, ಹರಿಯುವ ನೀರಿನ ಶಬ್ದ ಕೇಳಿದಾಗ, ಇಲ್ಲವೆ ನೀರು ಎಂಬ ಶಬ್ದ ಕಿವಿಗೆ ಬಿದ್ದರೂ ಕೂಡ ರೋಗಿ ಪರಮೋದ್ರೇಕದ ಸ್ಥಿತಿಯನ್ನು ತಲುಪುತ್ತಾನೆ’. ‘ಪರಮ’ ಪದಕ್ಕೆ ಶ್ರೇಷ್ಠ ಎಂಬರ್ಥವಲ್ಲದೆ ಅತಿ ಹೆಚ್ಚಿನ, ಬಹಳ ಎಂಬರ್ಥವೂ ಇದೆ. ಮೇಲಿನ ಪದದಲ್ಲಿ ‘ಅತಿ ಹೆಚ್ಚಿನ’ ಎಂಬರ್ಥದಲ್ಲಿ ಬಳಕೆಯಾಗಿದೆ.

ಪರಾನುಕರಣೆ ನಾ ತುಷಾರ ಬೇರೆಯವರನ್ನು ಅನುಸರಿಸುವುದು. ‘ಇಲ್ಲಿ ನಾವು ಗಮನಿಸಬೇಕಾದ ವಿಷಯ ಎಂದರೆ ನಮ್ಮ ಪೂರ್ವಿಕರು ಇಷ್ಟೆಲ್ಲಾ ಯಾವ ಯಂತ್ರಗಳ ಸಹಾಯವಿಲ್ಲದೆ ಕಂಡುಕೊಂಡಿದ್ದರೆಂದರೆ, ಅವರು ಅನುಸರಿಸಿದ ವಿಧಾನವೇನು. ….ಎಂಬುದನ್ನು ಅರಿತು ಹೆಮ್ಮೆಪಡಬೇಕು. ಅದನ್ನು ಬಿಟ್ಟು ಪರಾನುಕರಣೆ ಮಾಡುವುದು ಸೂಕ್ತವಲ್ಲ’. ಅನುಕರಣೆ ಎನ್ನುವುದೇ ಬೇರೆಯದನ್ನು ನೋಡಿ ಎಂದು ಸೂಚಿಸುತ್ತದೆ. ಆದರೂ ವಿವರಣಾತ್ಮಕವಾದ ಪದ (ಇಇತರರ ಅನುಕರಣೆ) ಬಳಕೆಯೇ ಆಗುತ್ತಿದೆ. ಮೇಲಿನ ಪ್ರಯೋಗದಲ್ಲಿ ಒಂದೇ ಪದ ಬಳಕೆಯಾಗಿರುವುದು ವಿಶೇಷವಾಗಿದೆ.

ಪರೋಕ್ಷತೆ ನಾ ಪುಸ್ತಕವೊಂದರಲ್ಲಿ ಬಳಕೆ ಗೋಚರಿಸದಿರುವಿಕೆ ಕಾಣದಿರುವಿಕೆ. ‘ಆದರೆ ರವೀಂದ್ರನಾಥರ ಗೀತಾಂಜಲಿಯೊಳಗಿನ ದೇವರು ಅಮೂರ್ತನಾಗಿರುತ್ತಾನೆ. ಶ್ರಾವಣದಲ್ಲಿ ಭಕ್ತ ಹೊಳೆದಾಟುವಾಗ ದೋಣಿಯಲ್ಲಿ ಅವನ ಜೊತೆಗೇ ಇದ್ದರೂ ಕಣ್ಣಿಗೆ ಕಾಣುವುದಿಲ್ಲ. ದೇವರ ಪರೋಕ್ಷತೆಯೇ ಗೀತದ ವಸ್ತುವಾಗುತ್ತದೆ.’ ‘ತೆ’ ಪ್ರತ್ಯಯ ಭಾಷೆಯನ್ನು ಸುಲಭಗೊಳಿಸಲು ತುಂಬಾ ಸಹಕಾರಿಯಾಗಿದೆ. ಇಂದು ‘ತೆ’ ಪ್ರತ್ಯಯದ ಬಳಕೆ ಹೆಚ್ಚಿ ಗುಣವಾಚಕದಿಂದ ನಾಮಪದ ಸೃಷ್ಟಿ ಬಹಳವಾಗಿ ನಡೆಯುತ್ತಿದೆ. ಮೇಲಿನ ಪ್ರಯೋಗ ಅದಕ್ಕೊಂದು ಉದಾಹರಣೆ.

ಪರಿಸರಾನುಕೂಲಿ ಗು ಉದಯವಾಣಿ ಪರಿಸರಕ್ಕೆ ಹಾನಿಮಾಡದ ಪರಿಸರಕ್ಕೆ ಸಹಾಯಕವಾದ. ‘ಅಂತರ್ಜಲ ವ್ಯವಸ್ಥೆಗೆ ಧಕ್ಕೆ ತರದ ಜನರ ಸ್ವಾಸ್ಥ್ಯಕ್ಕೆ ಅಪಾಯ ಉಂಟು ಮಾಡದೆ ಪರಿಸರಾನುಕೂಲಿ ಗಣಿಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು…’. ಪರಿಸರ ಸ್ನೇಹಿ, ಪರಿಸರ ಸಂಗಾತಿ ಎಂಬುದು ಈಗಾಗಲೇ ಬಳಕೆಯಲ್ಲಿರುವ ಪದಗಳು.

ಪರ್ಯಾವರಣ ಪ್ರಿಯ ಗು ಜಾಹೀರಾತು ಪ್ರಕೃತಿಗೆ ತೊಂದರೆ ಮಾಡದ. ‘ಭವಿಷ್ಯತ್ತಿನಲ್ಲಿ ಬರಬಹುದಾದ ಕಾಯಿದೆಗಳನ್ನು ಲಕ್ಷ್ಯದಲ್ಲರಿಸಿಕೊಂಡೇ ಕಂಪೆನಿಯು ತನ್ನ ಪರ್ಯಾವರಣ ಪ್ರಿಯ ಯೋಜನೆಯನ್ನು ಕೈಗೆತ್ತಿಕೊಂಡಿದೆ, ಇಂಗ್ಲಿಶಿನ ‘ಎನ್ವಿರಾನ್‌ಮೆಂಟ್ ಫ್ರೆಂಡ್ಲಿ’ ಎಂಬುದರ ನೇರಾನುವಾದದಂತಿದೆ. ಈಗಾಗಲೆ ‘ಪರಿಸರ ಸಂಗಾತಿ’ ಎನ್ನುವ ಪದವೂ ಬಳಕೆಯಲ್ಲಿದೆ ಎಂಬುದನ್ನು ಗಮನಿಸಬಹುದು.

ಪಲ್ಲಟಣೆ ನಾ ಕರ್ಮವೀರ ಮಾರ್ಪಾಟು, ವ್ಯತ್ಯಾಸ. ‘ಈ ಶತಮಾನದ ಪ್ರಬಲ ನಿರೀಕ್ಷೆ ಮಾನವ ದೃಷ್ಟಿಯಲ್ಲಿಯೇ ಆಮೂಲಾಗ್ರ ಪಲ್ಲಟಣೆ, ಮೂಲಗಾಮಿಯಾದ ಮನಃ ಪರಿವರ್ತನೆ’. ಬದಲಾವಣೆ ಎಂಬ ಅರ್ಥದಲ್ಲಿ ಪಲ್ಲಟಣೆ ಬಳಕೆ. ಮಾದರಿ : ವಿಚಾರಣೆ, ಸ್ವೀಕರಣೆ, ವಿಸ್ತರಣೆ, ಆಚರಣೆ, ನಿರಾಕರಣೆ. ಆದರೆ ‘ಪಲ್ಲಟ’ ಪದವೇ ಸಾಕು.

ಪ್ರಜರು ನಾ ಸಂಯುಕ್ತ ಕರ್ನಾಟಕ ಯಾವುದೇ ಒಂದು ಪ್ರದೇಶದ ಆಳ್ವಿಕೆಗೆ ಒಳಪಟ್ಟವರು. ‘ಹೈದರಾಬಾದಿನ ಪ್ರಜರಾದ ನಾವು ಭಾರತದ ರಕ್ಷಣೆಯ ಸಲುವಾಗಿ ನಮ್ಮ ಸ್ವಾತಂತ್ರ್ಯದ ಸಲುವಾಗಿ ಗುರಿಮುಟ್ಟುವವರೆಗೂ….’. ಸಂಸ್ಕೃತದ ಪ್ರಜಾ ಕನ್ನಡದಲ್ಲಿ ಪ್ರಜೆಯಾಗುತ್ತದೆ. ಪ್ರಜೆಗಳು ಬಹುವಚನ ರೂಪ. ಆದರೆ ಇಲ್ಲಿ ಬಹುವಚನ ಪ್ರತ್ಯಯ ‘ರು’ ಸೇರಿಸುವ ಸಲುವಾಗಿ ಪ್ರಜೆ-ಪ್ರಜವಾಯಿತೇ? ‘ಪ್ರಜ’ಕ್ಕೆ ಇನ್ನೊಂದು ಅರ್ಥ, ಗಂಡ, ಪತಿ ಎಂದೂ ಉಂಟು.

ಪ್ರಜಾತಂತ್ರೀಕರಣ ನಾ ಪ್ರಜಾವಾಣಿ ಜನಪರಗೊಳಿಸುವುದು. ‘ಕಡಿಮೆ ಆಸನಗಳಿರುವ ವಿಮಾನ ಹಾರಾಟ ಲಾಭದಾಯಕವಾಗುವಂತೆ ಮಾಡಲು ಹಾಗೂ ವಿಮಾನಯಾನದ ಪ್ರಜಾ ತಂತ್ರೀಕರಣದ ಉದ್ದೇಶದಿಂದ ಒಳನಾಡು ವಿಮಾನಯಾನಕ್ಕೆ ತೆರಿಗೆ ಸರಳೀಕರಣ ಮಾಡುವ ಗುರಿ ಇಲಾಖೆಯಾಗಿದೆ’. ‘ಈಕರಣ’ ಪ್ರತ್ಯಯ ಹಚ್ಚಿದ ಮತ್ತೊಂದು ಉದಾಹರಣೆ. ಇಂಗ್ಲೀಶಿನ ‘ಡೆಮಾಕ್ರಟೈಸೇಶನ್‌’ನ ಸಂವಾದಿಯಾಗಿ ಬಂದಿರುವ ಪದ. ಪ್ರಜಾತಾಂತ್ರೀಕರಣ ಎಂದು ಹಿಂದೆ ಬಳಸಲಾಗಿದೆ.

ಪ್ರಭಾವಪ್ರಭುತ್ವೀಕರಣ ನಾ ಪುಸ್ತಕವೊಂದರಲ್ಲಿ ಬಳಕೆ ಪ್ರಭಾವದ ಆಡಳಿತ. ‘ಭಾಷೆ ಈಗ ಪ್ರಭಾಪ್ರಭುತ್ವೀಕರಣಕೊಳ್ಳಗಾಗಿದೆ’. ‘ಪ್ರಜಾಪ್ರಭುತ್ವ’ ಮಾದರಿಯಲ್ಲಿ ಹುಟ್ಟಿಕೊಂಡಿರುವ ಪದ. ಇತ್ತೀಚಿನ ದಿನಗಳಲ್ಲಿ ಪ್ರಭಾವ ಬೀರಿ, ಒತ್ತಡ ತಂದು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಅಂದರೆ ಪ್ರಭಾವಗಳೇ ಇಂದು ಆಡಳಿತ ನಡೆಸುವಷ್ಟಾಗಿದೆ ಎಂಬುದು ಮೇಲಿನ ಪದದ ಬಳಕೆಯ ಅರ್ಥ ಎನ್ನಬಹುದು.

ಪ್ರಜಾಹುತಿ ನಾ ತರಂಗ ಜನರ ಪ್ರಾಣಹಾನಿ, ಪ್ರಜೆಗಳ ಬಲಿ. ‘ಕ್ರಿಯಾತ್ಮಕ ಕೆಲಸಗಳಿಗೆ ಸದುಪಯೋಗವಾಗಬಹುದಾದ ಧನಬಲ, ಜನಬಲಗಳು ಧ್ವಂಸವಾಗುತ್ತಿವೆ. ನಿಷ್ಪಾಪಿ ಪ್ರಜಾಹುತಿಯಾಗುತ್ತಿದೆ. ಕನ್ನಡದಲ್ಲಿ ‘ಜನರ ಆಹುತಿ’ ಎಂಬುದಾಗಿ ಎರಡು ಪದ ಪ್ರಯೋಗವಾಗುತ್ತಿದ್ದುದನ್ನು ಸಂಸ್ಕೃತ ಪದಗಳೊಂದಿಗೆ ಸಂಧಿ ಮಾಡಿ ಸೃಷ್ಟಿಸಿರುವ ಪದ. ಮಾದರಿ: ಪೂರ್ಣಾಹುತಿ

ಪ್ರಜ್ಞಾಪಾತ ನಾ ತುಷಾರ ಅರಿವಿನ ಕುಸಿತ. ‘ಮಾನವನ ಜೀವನವು ಭವ್ಯ ಕಾವ್ಯ’ ಎಂದು ಪ್ರಜ್ಞಾಪಾತದ ಘಟ್ಟವನ್ನು ಕಾಣಿಸುವ ಕಾವ್ಯದಂತೆ ಇಲ್ಲಿನ ಖಂಡ ಕಾವ್ಯ ರಚನೆಗಳು…’ ಹಿಮಪಾತ, ಜಲಪಾತ ಮುಂತಾದ ಪದಗಳ ಮಾದರಿಯ ಮೇಲೆ ಬಂದಿರುವ ಪದ. ಆದರೂ ಅರ್ಥ ಸ್ಪಷ್ಟವಾಗಬೇಕಾದರೆ ಸ್ವಲ್ಪ ಕಷ್ಟವೇ ಅನ್ನಬಹುದು’.

ಪ್ರಜ್ಞಾಶೂನ್ಯತೆ ನಾ ಕನ್ನಡ ಪ್ರಭ ಜ್ಞಾನ ಅಥವಾ ಅರಿವು ಇಲ್ಲದಿರುವಿಕೆ. ‘ಮತಗಳಿಗಾಗಿ ಎಲ್ಲ ರಾಜಕೀಯವನ್ನು ಮಾಡಬಲ್ಲವರು ಕನ್ನಡ ಸಂಸ್ಕೃತಿಯ ಸೆರಗೆಳೆವ ಈ ಕೆಲಸಕ್ಕೆ ಮನಮಾಡುವುದು ಸಾಂಸ್ಕೃತಿಕ ಪ್ರಜ್ಞಾಶೂನ್ಯತೆಯ ಜಾಯಮಾನಕ್ಕೆ ಹೊಸತೇನಲ್ಲ’. ಮೇಲ್ನೋಟಕ್ಕೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಅರ್ಥಸ್ಫುರಿಸಿದರೂ, ವಾಕ್ಯದಲ್ಲಿ ನೋಡಿದಾಗ ಮಾತ್ರ ಭಿನ್ನವಾದ ಅರ್ಥವನ್ನು ನೀಡಬಲ್ಲುದಾಗಿದೆ. ಮಾದರಿ ‘ಅಭಿಮಾನಶೂನ್ಯತೆ’.

ಪ್ರತಿಭಟನಾರ್ಥ ಗು ವಿಜಯ ಕರ್ನಾಟಕ ವಿರೋಧ ಸೂಚಿಸುವ ಸಲುವಾಗಿ. ‘ಮಣಿಪುರದಲ್ಲಿ ಕೇಂದ್ರಾಡಳಿತ ಹೇರಬೇಕೆಂದು ಕೆಲವು ಬಿ.ಜೆ.ಪಿ. ನಾಯಕರು ಒತ್ತಾಯ ಹೇರಿರುವ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ….’. ‘ಸೂಚನಾರ್ಥ’ ಮಾದರಿಯನ್ನನುಸರಿಸಿ ಬಂದಿರುವ ಪದ.

ಪ್ರತಿಮೀಕರಿಸು ಕ್ರಿ ಉದಯವಾಣಿ ಹೋಲಿಸು ‘ಸನ್ನಿವೇಶವನ್ನು ನಾಟಕೀಯವಾಗಿ ಬದಲಿಸದೆ ವಾಸ್ತವಿಕತೆಯನ್ನು ಪ್ರತಿಮೀಕರಿಸುವ ಮಾದರಿಗಾಗಿಯೂ…, ‘ಈಕರಿಸು’ ಪ್ರತ್ಯಯ ಸೇರಿಸಿ ತಂದಿರುವ ಪದ. ಇಂತಹ ಸೃಷ್ಟಿ ಇಂದು ಹೆಚ್ಚಾಗಿ ಕಂಡುಬರುತ್ತಿದೆ.

ಪ್ರತ್ಯೇಕೀಕರಣ ನಾ ಕನ್ನಡಪ್ರಭ ಬೇರ್ಪಡಿಸುವುದು, ಬೇರೆ ಮಾಡುವುದು. ‘ಅದರಂತೆ ಕೋರ್ಟಿನಿಂದ ‘ನ್ಯಾಯಿಕ ಪ್ರತ್ಯೇಕೀಕರಣ’ (ಜ್ಯುಡಿಶಿಯಲ್ ಸಪರೇಶನ್) ಎಂಬ ಆಜ್ಞೆಯನ್ನು ಪಡೆಯಬಹುದು”. ‘ಈಕರಣ’ ಪ್ರತ್ಯಯ ಹತ್ತಿಸಿ ಪಡೆದಂತಹ ಪದ.

ಪ್ರತ್ಯೇಕೀಕರಣ ನಾ ಬೇರೆ ಬೇರೆಯಾಗಿಸುವಿಕೆ, ವಿಂಗಡಿಸುವಿಕೆ. ‘ಪಿಯುಸಿ ಹಾಗೂ ಪದವಿ ಕಾಲೇಜುಗಳು ಪರಸ್ಪರ ಅಭಿವೃದ್ಧಿಗೆ ಪೂರಕವಾಗಿವೆ. ಈಗ ಪ್ರತ್ಯೇಕೀಕರಣದ ಅಸ್ತ್ರ ಪ್ರಯೋಗಿಸಿದರೆ ಎರಡೂ ಕಾಲೇಜುಗಳ ಅಭಿವೃದ್ಧಿ ಕುಂಟಿತಗೊಳ್ಳಲಿದೆ’. ‘ಈಕರಣ’ ಇಂಗ್ಲಿಶಿನ ‘ಐಸೇಶನ್‌’ಗೆ ಸಂವಾದಿಯಾಗಿ ಬಳಕೆಯಾಗಿಲ್ಲ. ಇಂಗ್ಲಿಶಿನ ‘ಬೈಫರ್ಕೇಶನ್’ಗೆ ಸಂವಾದಿಯಾಗಿ ಮೇಲಿನ ಪದ ಬಂದಿರುವಂತಿದೆ.

ಪ್ರಪಾತ ಸಮಾಧಿ ನಾ ಸುಧಾ ಪ್ರಪಾತದಲ್ಲಿ ಮುಚ್ಚಿ ಹೋಗುವುದು. ‘೮,೬೦೦ ಅಡಿ ಎತ್ತರಕ್ಕೆ ಏರುವಾಗ ಆಯ ತಪ್ಪಿದರೆ ಪ್ರಪಾತ ಸಮಧಿ ಖಂಡಿತ’. ‘ಸಮಾಧಿ’ ಎಂದರೆ ಯಾವುದರಿಂದಲಾದರೂ ಮುಚ್ಚಿ ಹೋಗುವುದು ಎಂದರ್ಥವಿದೆ. ಆದರೆ ಮೇಲಿನ ಪ್ರಯೋಗದಲ್ಲಿ ಅಂತಹ ಮುಚ್ಚಿ ಹೋಗುವಂತಹದ್ದಿಲ್ಲ. ಆದರೂ ‘ಸಾವು’ ಬರುವುದನ್ನು ಅನುಲಕ್ಷಿಸಿ ಪದ ಸೃಷ್ಟಿಯಾಗಿರಬಹುದು. ಮಾಧರಿ: ಜಲಸಮಾಧಿ

ಪ್ರಯೋಗೋಪಕರಣ ನಾ ಉದಯವಾಣಿ ಪ್ರಯೋಗಗಳನ್ನು ಕೈಗೊಳ್ಳಲು ಬೇಕಾದ ಸಾಧನ ಸಲಕರಣೆಗಳು. ‘ಇಲ್ಲಿ ಸಸ್ಯಗಳಿಗೆ ಸಂಬಂಧಿಸಿದ ವಿಫುಲ ಜ್ಞಾನಕೋಶವಿದೆ. ಚಿತ್ರ ಮಾಹಿತಿಯಿದೆ ಮಾತ್ರವಲ್ಲ ಸಂಶೋಧನಾ ಪ್ರಯೋಗೋಪಕರಣಗಳಿವೆ’. ‘ಪಾಠೋಪಕರಣ’ ಮಾದರಿಯಲ್ಲಿ ಸಂಸ್ಕೃತ ಸಂಧಿ ನಿಯಮಕ್ಕನುಸಾರವಾಗಿ ಬಂದಿರುವ ಪದ.

ಪ್ರಯೋಜಕತೆ ನಾ ಉದಯವಾಣಿ ಉಪಯುಕ್ತತೆ ಪ್ರಯೋಜನ ‘ಕಾಲಬಾಧಿತವಾಗಿರುವ ಮತ್ತು ಪ್ರಯೋಜನಕತೆ ಕಳೆದುಕೊಂಡಿರುವ ನಾಲ್ಕು ಶಾಸನಗಳನ್ನು ರದ್ದುಗೊಳಿಸುವ ಪ್ರಸ್ತಾವಕ್ಕೂ ಸಮ್ಮತಿಸಲಾಗಿದೆ’. ಪ್ರಯೋಜಕ ಗುಣವಾಚಕವೂ ಹೌದು. ನಾಮಪದವೂ ಹೌದು. ನಾಮಪದವಾಗಿ ಉಪಯುಕ್ತವಾದುದು ಪ್ರಯೋಜನಕಾರಿ ಎಂಬ ಅರ್ಥವಿದೆ. ಆದರೂ ‘ತೆ’ ಬಳಸಿ ನಾಮಪದ ರೂಪಿಸಲಾಗಿದೆ. ಆದರೆ ಇದೇ ಅರ್ಥದಲ್ಲಿ ‘ಪ್ರಯೋಜನ’ ಎಂಬ ಪದವಿದೆಯಲ್ಲ. ಒಂದು ವೇಳೆ ನಿಷೇಧಾರ್ಥದಲ್ಲಿ ಬಳಸಬೇಕಾದರೆ ‘ನಿಷ್ಪ್ರಯೋಜಕ’ ಎಂದು ಬಳಸಬಹುದು.

ಪ್ರವಾಹಕತೆ ನಾ ಜಾಹೀರಾತು ಸಾಗಿಸುವ ಸಾಮರ್ಥ್ಯ; ಹರಿಯುವ ಸಾಮರ್ಥ್ಯ. ‘ಹಲವು ತಂತುಗಳ ಕೇಬಲ್ ಅತ್ಯುತ್ತಮ ಪ್ರವಾಹಕತೆಯನ್ನು ಹೊಂದಿದ್ದು ಅಪವ್ಯಯವನ್ನು ನಿಶ್ಚಯವಾಗಿ ಕಡಿಮೆ ಮಾಡುತ್ತದೆ.’ ಮೇಲಿನ ಪ್ರಯೋಗ ‘ವಾಹಕತೆ’ ಎಂದಿರಬೇಕು ಎನಿಸುತ್ತದೆ. ಜಾಹೀರಾತನ್ನು ಮೊದಲು ಇಂಗ್ಲಿಶಿನಲ್ಲಿ ಸಿದ್ಧಪಡಿಸಿ ಅನಂತರ ಬೇರೆ ಭಾಷೆಗಳಿಗೆ ಭಾಷಾಂತರ ಮಾಡುವುದರಿಂದ ಇಂತಹ ಪದಗಳು ಸೃಷ್ಟಿಯಾಗುತ್ತವೆ. ‘ಕರೆಂಟ್’ ಎಂಬುದಕ್ಕೆ ಹರಿಯುವಿಕೆ-ಪ್ರವಾಹ ಎಂದಿರುವುದನ್ನು ಗಮನಿಸಿ. ಎರಡೂ ಪದಗಳನ್ನು ಮಿಶ್ರಮಾಡಿ ಮೇಲಿನ ಪದ ಸೃಷ್ಟಿಸಿರಬಹುದು.

ಪ್ರಬಲಿಸು ಕ್ರಿ ಆಕಾಶವಾಣಿ ಬಲಗೊಳ್ಳು-ಪ್ರಬಲವಾಗು. ‘ಕರಾವಳಿಯಲ್ಲಿ ಮುಂಗಾರು ಪ್ರಬಲಿಸಿತ್ತು.’ ‘ಇಸು’ ಪ್ರತ್ಯಯ ಬಳಸಿ ಮಾಡಿದ ಪದ ಸೃಷ್ಟಿಗೆ ಒಂದು ಉದಾಹರಣೆ.

ಪೃಥ್ವೀಕರಣ ನಾ ಪ್ರಜಾವಾಣಿ ಇಡೀ ಭೂಮಂಡಲಕ್ಕೆ ಅನ್ವಯಿಸುವುದು. ‘ಜುಲೈ ೧೯೯೧ ರಲ್ಲಿ ಉದ್ಘಾಟಿಸಲಾದ ಆರ್ಥಿಕ ಕಾರ್ಯಕ್ರಮ ಸರಳೀಕರಣ, ಪೃಥ್ವೀಕರಣ, ಸ್ಥಿರೀಕರಣ ೬ ವರ್ಷಗಳ ಅವಧಿಯಲ್ಲಿ ಬಡವರ ಜೀವನ ಪ್ರಮಾಣದ ಮೇಲೆ ಹೊಸ ಆರ್ಥಿಕ ಕಾರ್ಯಕ್ರಮದ ಪರಿಣಾಮವೇನಾಗಿದೆ?’ ಗ್ಲೋಬಲೈಸೇಶನ್ ಎಂಬುದಕ್ಕೆ ಸಂವಾದಿಯಾಗಿ ಬಳಸಿರುವ ಪದ. ‘ಈಕರಣ’ ಪ್ರತ್ಯಯ ಹತ್ತಿಸಿದೆ. ‘ಜಾಗತೀಕರಣ’ ಈಗಾಗಲೇ ಈ ಅರ್ಥದಲ್ಲಿ ಬಳಸಲಾಗುತ್ತಿರುವ ಪದ.

ಪ್ರಸ್ತಾವಾರ್ಹ ಗು ತರಂಗ ಪ್ರಸ್ತಾಪಿಸಲು, ಹೇಳಲು ಯೋಗ್ಯವಾದ. ‘….೩೧೮ರನ್ ವಿಶ್ವದಾಖಲೆ ಜತೆಯಾಟದ ಅನಂತರ ಇಡೀ ಇನ್ನಿಂಗ್ಸ್ ವಿಕೆಟ್ ಹಿಂದೆ ನಿಂತಿದ್ದು ಪ್ರಸ್ತಾವಾರ್ಹ!. ‘ಪ್ರಶ್ನಾರ್ಹ’, ‘ಗಮನಾರ್ಹ’ ಮಾದರಿಯಲ್ಲಿ ಬಂದಿರುವ ಪದ. ಪ್ರಸ್ತಾಪ-ಪ್ರಸ್ತಾವ ಎರಡೂ ಪದ ಬಳಕೆಯಲ್ಲಿದೆ.

ಪಾಠೇತರ ಗು ಉದಯವಾಣಿ ಪಾಠದಿಂದ ಹೊರಗಿನ-ಪಾಠವಲ್ಲದ. ‘ತಮ್ಮ ಲಕ್ಷ್ಮಿನಾರಾಯಣ ಹೊಳ್ಳ ಪಾಠ-ಪಾಠೇತರ ಚಟುವಟಿಕೆಗಳಲ್ಲಿ ಅಸಾಧಾರಣ ಪ್ರತಿಭೆ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ’. ಪಠ್ಯ-ಪಠ್ಯೇತರ ಎಂಬುದಾಗಿ ಮೇಲಿನ ಅರ್ಥದಲ್ಲಿ ಬಳಕೆಯಾಗುವ ಪದ ಈಗಾಗಲೇ ಚಲಾವಣೆಯಲ್ಲಿದೆ. ಪಾಠಕ್ಕೆ ಹಲವಾರು ಅರ್ಥಗಳಿರುವುದರಿಂದ ಪಠ್ಯ ಸೂಕ್ತ ಪದ ಎನಿಸುತ್ತದೆ.

ಪಾದಚಾರಿಣಿ ನಾ ಪ್ರಜಾವಾಣಿ ನಡೆದು ಹೋಗುವ ಹೆಂಗಸು. ‘ಉಪನಗರ ದೇಹಿವಾಲಾದಲ್ಲಿ ಗಲ್ಲಿ ರಸ್ತೆಯೊಂದರಲ್ಲಿ ಒಂದು ಪ್ರಯಾಣಿಕರ ಬಸ್ ಪಾದಚಾರಿಣಿಯೊಬ್ಬಳಿಗೆ ಬಡಿದಾಗ ಜನರು ಕೆರಳಿ ಅದಕ್ಕೆ ಬೆಂಕಿ ಹಚ್ಚಿದರು’. ‘ಪಾದಚಾರಿ’ ಪುಲ್ಲಿಂಗವಾಚಿಯೆಂದು ತಿಳಿದು ರೂಪಿಸಿರುವ ಪದ. ಆದರೆ ಪಾದಚಾರಿ ಎರಡೂ ಲಿಂಗಗಳಲ್ಲಿ ಬಳಸಬಹುದಾದ ಪದ. ಸ್ತ್ರೀಲಿಂಗ ಸೂಚಿಸಬೇಕಾದಾಗ ‘ಮಹಿಳಾ’ ಎಂಬುದನ್ನು ಬಳಸುವುದಿದೆ.

ಪಾನಮತ್ತೆ ನಾ ಕನ್ನಡ ಪ್ರಭ ಅಮಲು ತರುವ ಪಾನೀಯ ಕುಡಿಯುವ ಮಟ್ಟ. ‘ಮನುಷ್ಯರಲ್ಲೂ ಇದೇ ರೀತಿ ಯಾವುದಾದರೂ ಜೀನ್ ಪಾನಮತ್ತೆಗೆ ಕಾರಣವಾಗಿರಬಹುದು ಎಂಬುದು ಇವರ ಊಹೆ’. ‘ಬುದ್ಧಿ ಮತ್ತೆ’ ಪದದ ಮಾದರಿಯಲ್ಲಿ ಬಂದಿರುವ ಪದ. ಮುಖ್ಯವಾಗಿ ಅಧಿಕವಾದಿ ಕುಡಿಯುವ, ಅಥವಾ ಕುಡಿತವನ್ನೇ ಚಟವನ್ನಾಗಿ ಹೊಂದಿರುವ ವ್ಯಕ್ತಿಯ ಕುಡಿಯುವ ಮಟ್ಟವನ್ನು ಕುರಿತು ಹೇಳುವ ಪದವಿರಬಹುದು.

ಪಾರಿಶುದ್ಧ್ಯ ನಾ ಸುಧಾ ಪರಿಶುದ್ಧತೆ. ‘…..ಸೃಜನಾತ್ಮಕ ಕಾರ್ಯ ಎಲ್ಲದರಲ್ಲೂ ಆಸಕ್ತಿ ವಹಿಸಿದ ನಿಟ್ಟೂರರ ಆರಂಭದ ವೃತ್ತಿ ವಕೀಲಿ. ಅದರಲ್ಲೂ ಪಾರಿಶುದ್ಧ್ಯ ಕಾಪಾಡಿಕೊಂಡು ಬಂದ ನಿಟ್ಟೂರರು ಸ್ವಾತಂತ್ರ್ಯ ಹೋರಾಟಗಾರರನೇಕರ ಪರ ವಾದಿಸಿದರು.’ ಗುಣವಾಚಕದಿಂದ ನಾಮಪದ ಸೃಷ್ಟಿ ಹಲವು ಬಗೆಯಲ್ಲಿ ಆಗುತ್ತವೆ. ಅವುಗಳಲ್ಲಿ ಒಂದು ಆಂತರಿಕ ವಿಧಾನ. ಉದಾ : ಉನ್ನತ – ಔನ್ನತ್ಯ, ಸಮರ್ಥ – ಸಾಮರ್ಥ್ಯ. ಇಲ್ಲೆಲ್ಲಾ ಯಾವ ಪ್ರತ್ಯಯದ ಹತ್ತಿಸುವಿಕೆಯಿಲ್ಲದೆ ಪದದೊಳಗಡೆಯೇ ಬದಲಾವಣೆ ಮಾಡಿಕೊಳ್ಳಲಾಗಿದೆ. ಮೇಲಿನ ಪ್ರಯೋಗ ಇದಕ್ಕೊಂದು ಉದಾಹರಣೆ. ಪರಿಶುದ್ಧತೆ ಬಳಕೆಯಲ್ಲಿರುವ ಪರ್ಯಾಯ ರಚನೆ.

ಪಾಶ್ಚಾತ್ಯಕಾರ ನಾ ಉದಯವಾಣಿ ಪಾಶ್ಚಾತ್ಯದೇಶಗಳಿಗೆ ಸೇರಿದವನು. ‘ಕಾಲೇಜು ಪ್ರಾಂಶುಪಾಲರುಗಳು ತಮ್ಮ ವಿದ್ಯಾರ್ಥಿಗೆ ೧೦೦ ಅಂಕ ನೀಡಲೆಂದು ತರಬೇತಿ ಎಂದು ಲಕ್ಷಿಸದೇ ಈ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇವೆ ಎಂಬ ಮೂಲೋದ್ದೇಶ ಹೊಂದಿದಲ್ಲಿ ಯೋಜನೆಯ ಫಲಶ್ರುತಿ ಪಾಶ್ಚಾತ್ಯಕಾರನ ಹೇಳಿಕೆ ಅಳಿಸಲು ಪ್ರಯತ್ನ ನಡೆಸಿದಂತಾದೀತು’. ‘ಕಾರ’ ಪ್ರತ್ಯಯ ಬಳಸಿ ವ್ಯಕ್ತಿಯ ವೃತ್ತಿ ಅಥವಾ ವಿಶೇಷವನ್ನು ಸೂಚಿಸಲು ಬಳೆಗಾರ-ವ್ಯಾಕರಣಕಾರ ಇತ್ಯಾದಿ ಪದ ಸೃಷ್ಟಿ ಮಾಡುತ್ತಿದ್ದರೂ ಪ್ರದೇಶವನ್ನು ಸೂಚಿಸುವ ಪದದೊಂದಿಗೆ ಬಳಕೆಯಾಗಿಲ್ಲ. ಉದಾ: ಉತ್ತರದವ, ದಕ್ಷಿಣದವ, ಭಾರತೀಯ ಸಿಂಹಳೀಯ, ಮದ್ರಾಸಿ, ಬೆಂಗಳೂರಿಗ ಇತ್ಯಾದಿ ಬಳಕೆಯಾಗಿದೆ. ಆದ್ದರಿಂದ ಮೇಲಿನ ಪದದ ಬಳಕೆ ಅಷ್ಟು ಸಮರ್ಪಕವಾಗಿಲ್ಲ ಎನ್ನಬಹುದು.

ಪಾಶ್ಚಿಮಾತ್ಯೀಕರಣ ನಾ ಸಂಯುಕ್ತ ಕರ್ನಾಟಕ ಪಶ್ಚಿಮದ ರಾಷ್ಟ್ರಗಳ ಸಂಸ್ಕೃತಿಯ ಅನುಸರಣೆ. ‘ಶೈಕ್ಷಣಿಕ ಮತ್ತು ಆರೋಗ್ಯ ಸೇವೆಯ ಮೂಲಕ ನಗರ ಪ್ರದೇಶದ ಚರ್ಚ್‌‌ಗಳು ಉದಾರತೆಯ ಮುಖವಾಡ ಧರಿಸಿಕೊಂಡಿವೆ. ಆಧುನಿಕತೆಯೆಂದರೆ ಪಾಶ್ಚಿಮಾತ್ಯೀಕರಣ ಎಂದು ಯುವ ಜನಾಂಗದಲ್ಲಿ ಬಿಂಬಿಸಲು….’. ‘ಈಕರಣ’ ಪ್ರತ್ಯಯದ ಪ್ರಯೋಗ ಇತ್ತೀಚೆಗೆ ಬಹು ಹೆಚ್ಚುತ್ತಿದೆ. ಮೇಲಿನ ಪ್ರಯೋಗ ‘ವೆಸ್ಟರ್ನೈಸೇಶನ್’ ಎಂಬುದಕ್ಕೆ ಸಂವಾದಿಯಾಗಿ ಬಂದಿದೆ.

ಪ್ರಾಥಮಿಕತೆ ನಾ ಜಾಹೀರಾತು ಮೊದಲ ಸ್ಥಾನ, ಪ್ರಾಮುಖ್ಯತೆ. ‘ನಮ್ಮ ಪ್ರಿಯ ಜನರ ಸುರಕ್ಷೆಗೆ ನಾವೆಲ್ಲರೂ ಸರ್ವೋಚ್ಚ ಪ್ರಾಥಮಿಕತೆ ನೀಡುತ್ತೇವೆ’. ‘ಆದ್ಯತೆ’ ಎಂಬ ಅರ್ಥದಲ್ಲಿ ಮೇಲಿನ ಪ್ರಯೋಗ ಬಳಕೆಯಾದಂತಿದೆ.

ಪ್ರಾಧ್ಯಾಪನ ನಾ ಭಾವನಾ ಪ್ರಾಧ್ಯಾಪಕ ವೃತ್ತಿ ‘ದೆಹಲಿ ಮದ್ರಾಸುಗಳಲ್ಲಿ ಪ್ರಾಧ್ಯಾಪನ ಮಾಡಿ ಈಗ ಬೆಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ…. ರಾಜಕೀಯ ಜಿಜ್ಞಾಸು’. ಪದನಾಮ (ಪ್ರಾಧ್ಯಾಪಕ) ದಿಂದ ಕರ್ತವ್ಯ ಸೂಚಿಸುವ (ಪ್ರಾಧ್‌ಆಪನ) ಪದ ಸೃಷ್ಟಿಯಾದಂತಾಗಿದೆ. ‘ಅಧ್ಯಾಪಕ’ನ ಕೆಲಸ ‘ಅಧ್ಯಾಪನ’ ಎಂದಾದಮೇಲೆ ಪ್ರಾಧ್ಯಾಪಕನ ಕೆಲಸ ಪ್ರಾಧ್ಯಾಪನ ಎಂಬುದಾಗಿ ತಪ್ಪಾಗಿ ಕಲ್ಪಿಸಿಕೊಂಡು ಸೃಷ್ಟಿಯಾದ ಪದ.

ಪ್ರಾಯಪೂರ್ವ ಗು ಸಂಯುಕ್ತ ಕರ್ನಾಟಕ ಯುಕ್ತ ವಯಸ್ಸಿಗೆ ಮುನ್ನ. ‘ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಜಾಲಹಳ್ಳಿಯ ಸಮುದಾಯ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಯಪೂರ್ವ ಬಾಲಕಿಯರಿಗೆ ನಾಲ್ಕು ದಿನಗಳ ಜಾಗೃತಿ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಿತ್ತು’. ‘ಹದಿಹರೆಯ’ ಎನ್ನುವ ಪದಕ್ಕೆ ಸಮಾನಾರ್ಥ ಪದವಾಗಿ ಬಂದಿದೆ. ಕಾಲವನ್ನು ಸೂಚಿಸಲು ‘ಪೂರ್ವ’ ಪದ ಬಳಕೆಯಿದ್ದರೂ (ಸ್ವಾತಂತ್ರ್ಯಪೂರ್ವ) ವಯಸ್ಸನ್ನು ಕುರಿತಂತೆ ಬಂದಿರುವ ಮೊದಲ ಪದವಾಗಿದೆ.

ಪ್ರಾಯಾವಸ್ಥೆ ನಾ ಸುಧಾ ಯೌವನ, ಹರೆಯ. ‘ಇದರಿಂದಾಗಿ ಎಲ್ಲಾ ಮರಿಗಳು ಪ್ರಾಯಾವಸ್ಥೆ ತಲುಪುವುದಿಲ್ಲ’. ‘ಅವಸ್ಥೆ’ಗಳನ್ನು ಹೇಳುವಾಗ ಶೈಶವ, ಬಾಲ್ಯ, ಪ್ರೌಢ/ಗೃಹಸ್ಥ, ವಾರ್ಧಕ್ಯ ಎಂಬುದಾಗಿದ್ದುದು ತಿಳಿದಿದೆ. ಪ್ರೌಢಾವಸ್ಥೆಗೆ ಪರ್ಯಾಯವಾಗಿ ಬಂದಿರುವ ಪದವಾಗಿ ಮೇಲಿನ ಪ್ರಯೋಗ ಕಾಣಿಸುತ್ತದೆ. ಯೌವನಾವಸ್ಥೆ ಎಂಬುದಾಗಿಯೂ ಬಳಕೆಯಲ್ಲಿದೆ.

ಪ್ರಾಪ್ಯ ನಾ ಪ್ರಜಾವಾಣಿ ದೊರಕುವುದು; ಸಿಗುವುದು. ‘ವ್ಯಾಪಾರದ ಸರಕುಗಳ ಒತ್ತೆಯ ಮೇಲೂ ಸಾಲ ಪ್ರಾಪ್ಯ’. ಬಹುಶಃ ‘ಲಭ್ಯ’ ಪದವನ್ನು ಮಾದರಿಯಾಗಿಟ್ಟುಕೊಂಡು ರಚಿಸಿರುವ ಪದ. ಪ್ರಾಪ್ತಿ ಪದ ಉದ್ದೇಶಿತ ಅರ್ಥ ನೀಡಬಲ್ಲುದು.

ಪಿಚಕಾರಿಪ್ರಿಯ ನಾ ಉದಯವಾಣಿ ಸಿಕ್ಕ ಸಿಕ್ಕಲಿ ಉಗುಳುವ ಅಭ್ಯಾಸವುಳ್ಳವರು. ‘ಕಂಡಕಂಡಲ್ಲಿ ಉಗುಳುವ ಪಿಚಕಾರಿ ಪ್ರಿಯರು ಕಂಡು ಬರುವುದೇ ಇಲ್ಲ’. ವಿವೇಚನೆ ಇಲ್ಲದೆ ಹಾದಿಯಲ್ಲಿ ಉಗುಳುವವರನ್ನು ಕಂಡು ಲೇವಡಿ ಮಾಡಲು ಬಳಸಿರುವ ಪದ.

ಪಿತೂರಿಕಾರ ನಾ ಸಂಯುಕ್ತ ಕರ್ನಾಟಕ ಒಳಗೊಳಗೆ ಗಲಭೆ, ಗೊಂದಲ ಸೃಷ್ಟಿಸುವವನು. ‘ಕೆಲ ರಾಜಕೀಯ ಪಿತೂರಿಕಾರರಿಂದಲೇ ಮೂರು ವರ್ಷಗಳಿಂದ ವಿಮೋಚನೆ ಉತ್ಸವ ಸಮಿತಿಗೆ ಬಿಜೆಪಿ ಜಾತಿ ಬಣ್ಣ ಇಲ್ಲದ್ದು. ದಿಢೀರನೆ ಜಾತಿ ರಾಜಕೀಯಕ್ಕೆ ತಿರುಗುವಂತೆ ಮಾಡಲಾಯಿತು’. ಸಾಮಾನ್ಯವಾಗಿ ನೇತ್ಯಾತ್ಮಕ ಗುಣಗಳನ್ನು ಹೇಳುವ ಪದಗಳೊಡನೆ ‘ಕೋರ’ ಪ್ರತ್ಯಯ ಬಳಕೆಯಾಗುತ್ತದೆ. ಉದಾ: ದಗಾಕೋರ, ಹಲ್ಲೆಕೋರ.

ಪ್ರೀತ್ಯಾಸ್ಪದ ನಾ ಪ್ರೀತಿಗೆ ದಾರಿ ಮಾಡಿಕೊಡುವಂತಹವರು. ‘…ಹಸಿರು ಎಂದರೆ ವಿಶೇಷ ಬೇಕಾದವರು. ಗುಲಾಬಿ ಎಂದರೆ ಪ್ರೀತ್ಯಾಸ್ಪದರು, ಭೈರಪ್ಪನವರಿಗೆ ಈ ಎಲ್ಲ ವರ್ಗದವರ ಒಡನಾಟ ಬಂದಿದೆ’. ‘ಹಾಸ್ಯಸ್ಪದ’ ಮಾದರಿಯಲ್ಲಿ ಬಂದಿರುವ ಪದವಾದರೂ ‘ಆಸ್ಪದ’ಕ್ಕೆ ಉಳ್ಳ ಅರ್ಥ ಸ್ಫುರಿಸುವುದಿಲ್ಲ. ಪದ ಸರಿಯಾದರೂ ವಾಕ್ಯದಲ್ಲಿ ಸರಿಹೊಂದಿಕೆಯಾಗಿಲ್ಲ.

ಪುಡಿಗಳ್ಳ ನಾ ವಿಜಯ ಕರ್ನಾಟಕ ಸಣ್ಣಪುಟ್ಟ ಕಳ್ಳತನ ಮಾಡುವವ. ‘ಪುಡಿಗಳ್ಳರನ್ನು ಬಂಧಿಸಿ ಲಾಕಪ್‌ನಲ್ಲೇ ಸದೆ ಬಡಿಯುವ ಪೊಲೀಸರು ಡಕಾಯಿತರ ಎದುರಿಗೆ ನತಮಸ್ತಕರು’. ಚಿಕ್ಕ, ಪುಟ್ಟ ಎಂದು ಸೂಚಿಸಲು ‘ಪುಡಿ’ ಎಂಬುದು ಬಳಕೆಯಾಗುತ್ತದೆ. ಉದಾ: ‘ಪುಡಿಗಾಸು’. ಇದೇ ಅರ್ಥದಲ್ಲೇ ‘ಚಿಲ್ಲರೆ’ ಎಂಬುದೂ ಬಳಕೆಯಾಗುತ್ತದೆ. (ಉದಾ: ಚಿಲ್ಲರೆ ಜನ)

ಪುರಾತನತೆ ನಾ ಉದಯವಾಣಿ ಪುರಾತನ ಗುಣವನ್ನು ಹೊಂದಿರುವುದು; ಹಿಂದಿನದನ್ನೇ ಹೊಂದಿರುವುದು. ‘ವಿಂಬಲ್ಡನ್ ಇನ್ನೂ ಓಬೀರಾಯನ ಕಾಲದ ರೀತಿ ನೀತಿಗಳಲ್ಲೇ ಇದೆ. ಇದನ್ನು ಪುರಾತನತೆಯಲ್ಲೇ ಇಟ್ಟುಕೊಳ್ಳಬೇಕೆಂಬುದು ಇಲ್ಲಿನ ಅಧಿಕಾರಿಗಳ ಇರಾದ’. ಗುಣವಾಚಕಕ್ಕೆ ‘ತೆ’ ಪ್ರತ್ಯಯ ಹತ್ತಿಸಿ ಸಾಧಿಸಿ ನಾಮರೂಪ. ಈಗ ಇಂತಹ ಸೃಷ್ಟಿ ಸಾಮಾನ್ಯವಾಗಿದೆ.

ಪುಸ್ತಕಕರ್ತ ನಾ ಉದಯವಾಣಿ ಕೃತಿ ರಚಿಸುವವ, ಲೇಖಕ. ‘ಈ ಲಘುಪ್ರಹಸನವನ್ನೇ ಬಹಳ ದೊಡ್ಡ ಸಂಗತಿ ಎಂಬುದಾಗಿ ಭಾರತೀಯ ಸಂವಿಧಾನದ ಬಗೆಗೆ ಹಲವು ಪುಸ್ತಕಕರ್ತರೂ ನಮೂದಿಸುವುದನ್ನು ಕಂಡಾಗ’. ‘ಗ್ರಂಥಕರ್ತ’ ಪದ ಈಗ ಬಳಕೆಯಲ್ಲಿರುವ ಪದ.

ಪೂರ್ವೋದಾಹರಣೆ ನಾ ಪ್ರಜಾವಾಣಿ ಹಿಂದೆಯೇ ಬಂದಿರುವಂತಹ, ಸೂಚಿಸಿರುವಂತಹ ಮಾದರಿ, ಹೇಳಿಕೆ. ‘ಇಂದಿನ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿಗಳ ರಾಜೀನಾಮೆ ಕೋರುವುದು ವಾಸ್ತಕಿಕವೆನಿಸದು. ಪೂರ್ವೋದಾರಣೆಗಳೂ ಇದನ್ನೆ ಸಮರ್ಥಿಸುತ್ತದೆ’. ಸಂಸ್ಕೃತದ ಸಂಧಿ ನಿಯಮದನ್ವಯ ಬಂದಿರುವ ಹೊಸ ಪದ.

ಪೂರ್ವಾಧಿಕಾರಿ ನಾ ಮೈಸೂರುಮಿತ್ರ ಈ ಹಿಂದೆ, ಮುಂಚೆ ಅಧಿಕಾರದಲ್ಲಿದ್ದವರು. ‘ಸೋನಿಯಾರವರು ತಮ್ಮ ಪೂರ್ವಾಧಿಕಾರಿ ಸೀತಾರಂ ಕೇಸರಿಯವರಿಗಿಂತ ಭಿನ್ನವಾದ ಕಾಂಗ್ರೆಸ್ ಅಧ್ಯಕ್ಷರೇನೂ ಅಲ್ಲ ಎಂಬುದು ಈ ವ್ಯಂಗ್ಯ ಚಿತ್ರದ ಅರ್ಥ.’ ‘ಉತ್ತರಾಧಿಕಾರಿ’ ಪದವನ್ನು ಹಾಗೂ ಅರ್ಥವನ್ನು ಗಮನದಲ್ಲಿಟ್ಟುಕೊಂಡು ಉತ್ತರಕ್ಕೆ ಪೂರ್ವ ವಿರುದ್ಧವೆಂದು ಸೃಷ್ಟಿಸಿರುವ ಪದ. ‘ಪೂರ್ವ’ ಎಂಬುದಕ್ಕೆ ಮೊದಲಿನ, ಮಿಂಚಿನ ಎಂಬ ಅರ್ಥದಲ್ಲಿ ಹಲವು ಪದಗಳು ಬಳಕೆಯಲ್ಲಿವೆ. ಉದಾ: ಪೂರ್ವೇತಿಹಾ (ಆದಿಯಲ್ಲಿ) ಸ್ವಾತಂತ್ರ್ಯಪೂರ್ವ (ಅಂತ್ಯದಲ್ಲಿ) ಇತ್ಯಾದಿ. ಇಂಗ್ಲಿಶಿನ ‘ಪ್ರಿಡಿಸಿಸರ್’ ಎಂಬುದಕ್ಕೆ ಸಂವಾದಿಯಾಗಿ ಬಂದಿದೆ.

ಪೇರಣೆ ನಾ ಕನ್ನಡ ಪ್ರಭ ಒಂದರ ಮೇಲೊಂದು ಹೇರುವುದು; ಜೊಡಿಸುವುದು. ‘ಒಂದು ಒತ್ತಿಟ್ಟಿಗೆ ಮೂರು ಸಾಮಾನ್ಯ ಇಟ್ಟಿಗೆಗಳಿಗೆ ಗಾತ್ರದಲ್ಲಿ ಸಮವೆನ್ನಿಸುವುದರಿಂದ ಇಟ್ಟಿಗೆಗಳ ಪೇರಣೆಯಲ್ಲಿ ಜಾಯಿಂಟುಗಳು ಗಣನೀಯವಾಗಿ ಕಡಿಮೆಯಾಗುತ್ತವೆ’. ‘ಪೇರು’ ಧಾತುವಿಗೆ ಹೇರು, ಹೊರಿಸು ಎಂಬರ್ಥವಿದೆ. ಇದಕ್ಕೆ ‘ಇಸು’ ಸೇರಿಸಿ ಪ್ರೇರಣಾರ್ಥದಲ್ಲಿ ‘ಪೇರಿಸು’ ಪದ ಬಳಕೆಯಲ್ಲಿದೆ. ಇದರಿಂದ ಸೃಷ್ಟಿಯಾದ ನಾಮಪದ. ಮಾದರಿ: ಸಾರಣೆ, ಪ್ರೇರಣೆ, ಇತ್ಯಾದಿ.

ಪೌರತನ ನಾ ಉದಯವಾಣಿ ನಾಗರಿಕನ ಹಕ್ಕುಬಾಧ್ಯತೆ ಹೊಂದಿರುವುದು. ‘ಕೆಲವು ವಿಮರ್ಶಕರ ಅಭಿಪ್ರಾಯದಲ್ಲಿ ಬಹು ಪೌರತನವು ಕೆಲವು ಅಪಾಯಕಾರಿ ಪ್ರವೃತ್ತಿಗೆ ದಾರಿಯಾಗಬಹುದು.’ ‘ತನ’ ಪ್ರತ್ಯಯದ ಬಳಕೆಯ ಮೂಲಕ ಹೊಸ ಪದ ಸೃಷ್ಟಿಗೆ ಉದಾಹರಣೆ. ಇದೇ ಅರ್ಥ ನೀಡುವ ‘ಪೌರತ್ವ’ ಎಂಬುದು ಸಾಕಷ್ಟು ಕಾಲದಿಂದಲೂ ಬಳಕೆಯಲ್ಲಿದೆ.

ಫಲೋದ್ಯಮ ನಾ ತರಂಗ ಹಣ್ಣಿನಿಂದ ತಯಾರಿಸುವ ಉತ್ಪನ್ನಗಳ ವ್ಯಾಪಾರ ವಹಿವಾಟು. ‘ನಮ್ಮ ರಾಜ್ಯದ ಕುಶಾಲನಗರ, ಗೋಣೀಕೊಪ್ಪಗಳಲ್ಲಿ ಅನಾನಸು ಫಲೋದ್ಯಮ ಕಾರ್ಖಾನೆಗಳಿವೆ’. ‘ಪ್ರವಾಸೋದ್ಯಮ’, ‘ತೈಲೋದ್ಯಮ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಇಲ್ಲಿ ಹಣ್ಣು ಬೆಳೆಯುವ ಕ್ರಿಯೆಯಿಲ್ಲದೆ, ಕೇವಲ ಅದರಿಂದ ಆಧಾರಿತವಾದ ವಸ್ತುಗಳ ಉತ್ಪಾದನೆ ಮಾತ್ರಾ ನಡೆಯುವಂಥದ್ದು.