ಬಂಡವಾಳೀಕರಣ ನಾ ಸಂಯುಕ್ತ ಕರ್ನಾಟಕ ಬಂಡವಾಳ ತುಂಬಿಸುವುದು. ‘ಮೊಟ್ಟ ಮೊದಲನೆಯದಾಗಿ ಪ್ರಸ್ತುತ ಸೂಚ್ಯಂಕದ ರಚನೆ ೧೯೯೪ರಂತೆಯೇ ಇದ್ದರೆ, ಈಗಿನ ಮಾರುಕಟ್ಟೆ ಬಂಡವಾಳೀಕರಣ ಶೇ. ೪೦ರಷ್ಟು ಕಡಿಮೆ ಇರುತ್ತಿತ್ತು’. ‘ಈಕರಣ’ ಪ್ರತ್ಯಯ ಬಳಕೆಗೆ ಉದಾಹರಣೆ.

ಬಡತನೀಕರಣ ನಾ ಸಂಯುಕ್ತ ಕರ್ನಾಟಕ ಬಡವಾಗಿಸುವುದು. ‘ಖಾಸಗೀಕರಣ ನೀತಿಯ ಪರಿಣಾಮವಾಗಿ… ಆಂತರಿಕ ಸಂಪತ್ತನ್ನು ತಮ್ಮ ದೇಶಗಳಿಗೆ ರವಾನಿಸಿ, ಭಾರತದಲ್ಲಿ ಬಡತನೀಕರಣವನ್ನಾರಂಭಿಸುವುವು’. ಇಂಗ್ಲಿಶಿನ ‘ಐಸೇಶನ್’ಗೆ ಸಂವಾದಿಯಾಗಿ ‘ಈಕರಣ’ ಪ್ರತ್ಯಯ ಬಳಕೆಯಾಗುತ್ತಿದೆ. (ಉದಾ: ಪೋಲರೈಸೇಶನ್: ಧ್ರುವೀಕರಣ). ಆದರೂ ಕೆಲವೊಂದು ಬಾರಿ ಇಂಗ್ಲಿಶನ್ನು ಅವಲಂಬಿಸದೆಯೂ ಬಳಕೆಯಾಗುತ್ತಿರುವುದಕ್ಕೆ ಮೇಲಿನ ಪ್ರಯೋಗ ಮಾದರಿ.

ಬಂಡುಗಾರ ನಾ ತರಂಗ ಬಂಡಾಯ ಏಳುವವನು, ಸೆಡ್ಡು ಹೊಡೆದು ನಿಲ್ಲುವವನು. ‘ಯಾರಾದರೂ ಗಮನಿಸುತ್ತಿದ್ದರೆ ಗಮನಿಸಬಹುದು. ಉಳಿದ ಸ್ಥಾನಗಳು ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಾರ್ಟಿ, ಶರದ್ ಪವಾರರ ಬಂಡುಗಾರರು ಮತ್ತು ಇತರರ ಪಾಲಿಗೆ ಹೋಗುವ ನಿರೀಕ್ಷೆಯಿದೆ’. ಬಂಡಾಯ ಏಳುವವನು ಬಂಡಾಯಗಾರ ಆಗಬೇಕು. ಮೇಲಿನ ಪದ ಸೃಷ್ಟಿ ಹೇಗಾಯಿತೆಂಬುದು ತಿಳಿಯುವುದಿಲ್ಲ. ಬಂಡುಗಾರ ಎಂಬುದಕ್ಕೆ ಸಂವಾದಿಯಾಗಿ ಬಂಡುಕೋರ ಎಂಬ ಇನ್ನೊಂದು ಪದ ಬಳಕೆಯಲ್ಲಿದೆ.

ಬಲವಂತಿಕೆ ನಾ ಉದಯವಾಣಿ ಒತ್ತಾಯಪಡಿಸುವುದು. ‘…. ಗೌಡ್ರ ಮನೆಗೆ ಹೋಕುವರ್ಕ್‌ಇಟ್ಟುಕೊಂಡಿದ್ರೂ ನಾವು ಪಟ್ಲೇರ್ ಜನ ಅಂತಂದ್ಮೇಲೆ ಶಾಸಕ ಬಲವಂತಿಕೆ ಎಲ್ಲುಂಟೆಂಬ ಬಗ್ಗೆ…..’. ಬುದ್ದಿವಂತಿಕೆ, ಸಿರಿವಂತಿಕೆ ಪದಗಳ ಮಾದರಿಯಲ್ಲಿ ಬಂದಿರುವ ಪದ. ಆದರೆ ಗೊಂದಲಕ್ಕೆ ಎಡೆಮಾಡಿದೆ. ಮೇಲಿನ ಪ್ರಯೋಗದಲ್ಲಿ ‘ಇಕೆ’ ಯನ್ನು ಬಲವಂತ ಪದಕ್ಕೆ ಸೇರಿಸಲಾಗಿದೆ. ಬಲವಂತ ಎಂದರೆ ಬಲವಾದವನು, ಶಕ್ತಿಯುಳ್ಳವನು ಎಂದೂ ‘ಇಕೆ’ ಸೇರಿದರೆ ಬಲವನ್ನು ಹೊಂದಿರುವುದು ಎಂದಾಗುತ್ತದೆ. ಒಟ್ಟಿನಲ್ಲಿ ಅರ್ಥ ಸ್ಪಷ್ಟತೆಯಿಲ್ಲ.

ಬಹುತಲೆ ನಾ ಸುಧಾ ಅನೇಕ ತಲೆಗಳುಳ್ಳ ‘೨೫ ಕಿಲೋಮೀಟರ್ ಆಚಿನ ಗುರಿಯನ್ನು ಧ್ವಂಸ ಮಾಡಬಲ್ಲ ಬಹುತಲೆಯ ‘ಆಕಾಶ್ ಹಾಗೂ ೨೫೦ ಕಿಲೋ ಮೀಟರ್ ದೂರ ಚಿಮ್ಮಬಲ್ಲ ಪೃಥ್ವಿ’. ‘ಮಲ್ಟಿ’ ಎಂಬ ಪದದ ಸಂವಾದಿಯಾಗಿ ‘ಬಹು’ ಬಳಸಿರುವ ರಚನೆ. ಮಾದರಿ: ಬಹುಸ್ತರ, ಬಹು ಸಂಸ್ಕೃತಿ ಇತ್ಯಾದಿ. ‘ಸಿಡಿತಲೆ’ ಎನ್ನುವ ಪ್ರಯೋಗವನ್ನು ಗಮನಿಸಿ.

ಬಹುದೇಶಿಯ ಗು ಕನ್ನಡ ಪ್ರಭ ಅನೇಕ ದೇಶಗಳಲ್ಲಿ ಅಸ್ತಿತ್ವ ಹೊಂದಿರುವ ‘…ಗಲ್ಲಿಗಳಲ್ಲಿ ಕ್ರಿಕೆಟ್ ಕಲಿತ ಮಂದಿ ಪಂಚತಾರಾ ಹೋಟೆಲುಗಳಲ್ಲಿ ಮಾಲಿಕರಾಗಿ ಬಹುದೇಶಿಯ ಕಂಪೆನಿಗಳ ಬಂಡವಾಳದಾರರಾಗಲು ಶಕ್ತರಾದರು’. ಇಂಗ್ಲಿಶಿನ ‘ಮಲ್ಟಿನ್ಯಾಷನಲ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಕನ್ನಡ ಪದ. ಈಗಾಗಲೇ ‘ಬಹುರಾಷ್ಟ್ರೀಯ’ ಎಂಬ ಪದ ಇದೇ ಅರ್ಥದಲ್ಲಿ ಬಳಕೆಯಲ್ಲಿದೆ.

ಬಹುಮತಿ ನಾ ಉದಯವಾಣಿ ಬಹುಮಾನ. ‘ಸ್ಟೈನ್‌ಲೆಸ್ ಸ್ಟೀಲ್ ಕಾಂಬಿ ಪ್ಯಾಕ್ ಮತ್ತು ಪ್ರೆಶರ್ ಕುಕರ್‌ಗಳ ಮೇಲೆ ಚಿತ್ತಾಕರ್ಷಕ ನಾನ್ -ಸ್ಟಿಕ್ ಬಹುಮತಿಗಳನ್ನು ಪಡೆಯಿರಿ’. ‘ಅವಮತಿ’ ಎಂಬ ಪದವೊಂದಿದೆ. ಅದಕ್ಕೆ ‘ಅವಮಾನ’ ಎಂದು ಅರ್ಥವಿದೆ. ಬಹುಶಃ ಆ ಪದವನ್ನು ಗಮನಿಸಿ ‘ಅವಮಾನ’ ಕ್ಕೆ ವಿರುದ್ಧವಾಗಿ ಬಹುಮಾನ ಎಂದು ತಿಳಿದುಕೊಂಡು ‘ಅವಮತಿ’ಗೆ ವಿರುದ್ಧವಾಗಿ ಈ ಮೇಲಿನ ಪ್ರಯೋಗ ರಚಿತವಾಗಿಬಹುದು.

ಬಾಟಲಿಕೃತ ಗು ಕರ್ಮವೀರ ಶೀಶೆಯೊಳಗೆ ಸೇರಿಸಲಾದ, ತುಂಬಲಾದ. ‘ಜೊತೆಗೆ ಇಂಗಾಲದ ಡೈ ಆಕ್ಸೈಡ್, ಫಾಸ್ಫರಿಕ್ ಆಮ್ಲ, ಕಾರ್ಬೋನಿಕ್ ಆಮ್ಲ, ಇವೇ ಬಾಟಲಿಕೃತ ತಂಪುಪಾನೀಯಗಳ ಜೀವಾಳ’. ಇಂಗ್ಲಿಶಿನ ‘ಐಸ್‌’ಗೆ ಸಂವಾದಿಯಾಗಿ ‘ಈಕೃತ’ ಬಳಕೆಯಾಗುತ್ತಿದೆ. ಮೇಲಿನ ಪ್ರಯೋಗದಲ್ಲಿ ಇಂಗ್ಲೀಶಿನ ಪದದ ಕನ್ನಡ ರೂಪಕ್ಕೆ ಪ್ರತ್ಯಯ ಹತ್ತಿಸಿರುವುದನ್ನು ಕಾಣಬಹುದು. ಹೀಗೆ ಮಾಡುವಾಗಲೂ ಸಾಮಾನ್ಯವಾಗಿ ಬಾಟಲೀಕೃತ ರೂಪವನ್ನು ನಿರೀಕ್ಷಿಸುತ್ತೇವೆ. ಮಾದರಿ: ಕಂಪ್ಯೂಟರೀಕೃತ.

ಬಾಯಿಗತ ಗು ಪ್ರಜಾವಾಣಿ ಬಾಯಿಯ ವಶದಲ್ಲಿರುವ; ಬಾಯಿ ಪಾಠದಂತೆ ಬೇಕೆಂದಾಗ ಹೇಳಲು ಬರುವಂತಹ. ‘ಅವತ್ನಾಲ್ಕೂ ವಿದ್ಯೆಗಳಲ್ಲಿ ಸುಳ್ಳು ಹೇಳುವುದನ್ನು ಬಾಯಿಗತ ಮಾಡಿಕೊಂಡವರಿಗಿಂತ ಉತ್ತಮ ‘ಕಲೆ’ಗಾರರು ಬೇರೊಬ್ಬರಿರಲಾರರು’. ‘ಕರಗತ’ ಮಾದರಿಯನ್ನನುಸರಿಸಿ ಬಂದಿರುವ ಶಬ್ದ. ಆದರೆ, ‘ಕಂಠಗತ’ದಲ್ಲಿ ಬರುವ ಅರ್ಥವೇ ಬೇರೆ. ಅಲ್ಲಿ ವಿಪತ್ತು, ಕೇಡು ಎನ್ನುವ ಅರ್ಥವಿದೆ.

ಬಾಲಕಾರ್ಮಿಕತೆ ನಾ ಆಕಾಶವಾಣಿ ಕಾರ್ಯಕ್ರಮ ಸೂಚಿ. ‘ಮಕ್ಕಳ ದುಡಿಮೆ; ಮಕ್ಕಳಿಂದ ದುಡಿಸಿಕೊಳ್ಳುವಿಕೆ. ೬.೨೦ ಕಾರ್ಮಿಕರಿಗಾಗಿ ಕಾರ್ಯಕ್ರಮ: ಬಾಲಕಾರ್ಮಿಕತೆ. ಅಮಾನವೀಯ ಸಂಸ್ಕೃತಿ. ಎಸ್.ಆರ್. ಲೊಂಡೆ ಅವರೊಡನೆ ಸಂದರ್ಶನ’. ‘ಕಾರ್ಮಿಕ’ ಪದದಿಂದ ಸೃಷ್ಟಿಯಾದ ‘ಬಾಲಕಾರ್ಮಿಕಕ್ಕೆ’ ‘ತೆ’ ಪ್ರತ್ಯಯ ಸೇರಿಸಿ ನಾಮಪದ ರಚನೆ ಮಾಡಲಾಗಿದೆ. ಆದರೆ ಮೂಲಪದದ ನಾಮಪದ ರೂಪ ‘ಕಾರ್ಮಿಕತೆ’ ಸೃಷ್ಟಿಯಾಗಿಲ್ಲ ಎಂಬುದನ್ನು ಗಮನಿಸಬಹುದು.

ಬಾಲಮರಣ ನಾ ಉದಯವಾಣಿ ಬಾಲ್ಯದಲ್ಲೇ, ಸಂಭವಿಸುವ ಮರಣ. ‘ಕೇರಳವು ಗರಿಷ್ಠ ವಿದೇಶೀ ಪಾವತಿಗಳನ್ನು ಪಡೆಯುತ್ತಿದೆ ಹಾಗೂ ಅಲ್ಲಿ ಬಾಲಮರಣಗಳ ಪ್ರಮಾಣವು ಅತ್ಯಂತ ಕಡಿಮೆ’. ‘ಶಿಶು ಮರಣ’ ಎಂಬುದಕ್ಕೆ ಸಮಾನಾರ್ಥವಾಗಿ ಬಂದಿರುವ ಪದ. ಆದರೆ ಬಾಲ ಎಂದರೆ ‘ಹುಡುಗ’ ಎಂದರ್ಥವೂ ಇರುವುದರಿಂದ ಅರ್ಥಸ್ಪಷ್ಟತೆ ಸ್ವಲ್ಪ ಆಡಚಣೆಯಾಗಬಹುದೇನೂ?

ಬಾಳ್ವಿಕೆ ನಾ ತರಂಗ ಜೀವಿಸಿರಬಹುದಾದ ಅವಧಿ; ಬಳಸಬಹುದಾದ ಅವಧಿ. ೧. ‘ಮನುಷ್ಯ ಜಾತಿಯಲ್ಲೇ ರಾಜಕಾರಣಿಗಳು ಅತಿ ಬಾಳ್ವಿಕೆ ಬರುವವರು’. ೨.‘ಈ ರೀತಿ ಇಂಜಿನ್ನಿನ ಬಳಕೆ ಮತ್ತು ಕಾರ್ಯದಕ್ಷತೆಯೂ ಹೆಚ್ಚುತ್ತದೆ’. ‘ಬಾಳುವಿಕೆ’ ರೂಪದಿಂದ ನಿಷ್ಪನ್ನಗೊಂಡಿರುವ ಪದ. ಇದೇ ಪದ ‘ಬಾಳಿಕೆ’ಯಾಗಿ ಈಗಾಗಲೇ ಬಳಕೆಯಲ್ಲಿದೆ.

ಬಿಡಿತನ ನಾ ಸುಧಾ ಬಿಡಿ ಬಿಡಿಯಾಗಿರುವಿಕೆ. ಒಂಟಿಯಾಗಿರುವಿಕೆ, ಒಂದಾಗಿಲ್ಲದಿರುವಿಕೆ. ‘ಜಾತಿ ಮತ ಆಚಾರ ವಿಚಾರಗಳ ನಿಮಿತ್ತ ಬಿಡಿತನದ ಬಿಕ್ಕಟ್ಟಿನಿಂದ ಬೇರ್ಪಟ್ಟವರನ್ನು ಇಡಿತನದ ಬಿಕ್ಕಟ್ಟಿನಲ್ಲಿ ಕಟ್ಟಿ ಏಕಧ್ಯೇಯಿಗಳಾಗಿ ಸೆಣೆಸಲು ಕಾರಣರಾಗಿದ್ದಾರೆ.’ ‘ತನ’ ಪ್ರತ್ಯಯದೊಡನೆ ಬಂದಿರುವ ಹೊಸ ಪ್ರಯೋಗ. ವ್ಯಷ್ಠಿ ಎಂಬುದಕ್ಕೆ ಸಮಾನಾರ್ಥಕವಾಗಿ ಬಳಕೆಯಾಗಿರುವ ಪದ.

ಬಿರುಮಳೆ ನಾ ಕನ್ನಡ ಪ್ರಭ ರಭಸದಿಂದ ಸುರಿಯುವ ಮಳೆ. ‘ಸೋಮವಾರ ರಾತ್ರಿ ಮತ್ತು ಬೆಳಿಗ್ಗೆ ೧೦ ರವರೆಗೆ ಸುರಿದ ಬಿರುಮಳೆಯಿಂದಾಗಿ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲು ನಿಗಧಿಯಾಗಿದ್ದ…..’. ‘ಬಿಱುಮಳೆ’ ಪದ ಕನ್ನಡದಲ್ಲಿದೆ. ಆದರೆ ಬಳಕೆಯಲ್ಲಿ ಇರಲಿಲ್ಲ. ಈಗ ಶಕಟರೇಫದ ಬದಲು ರೇಫೆಯೊಡನೆ ಬಳಕೆಗೆ ಬಂದಂತಾಗಿದೆ. ಆದರೂ ಸಾಮಾನ್ಯವಾಗಿ ಬಿರುಗಾಳಿ, ಬಿರುನುಡಿ ಇತ್ಯಾದಿ ಪದಗಳು ಹೆಚ್ಚು ಬಳಕೆಯಲ್ಲಿವೆ. ಬಿರುಮಳೆ ಇರಲಿಲ್ಲ. ಸುರಿಮಳೆ, ಜಡಿಮಳೆ, ತುಂತುರುಮಳೆ ಪದಗಳು ಹೆಚ್ಚು ಬಳಕೆಯಲ್ಲಿವೆ.

ಬುದ್ಧ್ಯಂಕ ನಾ ಕನ್ನಡ ಪ್ರಭ ಬುದ್ಧಿಮಟ್ಟದ ಸೂಚಿ. ‘ಈ ೭೦೦ ಪ್ರಶ್ನೆಗಳನ್ನು ಈಗಾಗಲೇ ವಿವಿಧ ಸ್ತರಗಳ ಜನರಿಗೆ ವಿವಿಧ ಬುದ್ಧ್ಯಂಕಗಳುಳ್ಳ ಜನರಿಗೆ ನೀಡಿ ಅವರುಗಳಿಂದ ಪಡೆದ ಉತ್ತರಗಳನ್ನು ಆಧರಿಸಿ ಸೂಕ್ತವಾದವುಗಳನ್ನು ಮಾತ್ರ ಆಯ್ದು ಸಂಗ್ರಹಿಸಲಾಗಿದೆ’. ಇಂಗ್ಲಿಶಿನ ‘ಇಂಟೆಲಿಜಂಟ್ ಕೋಶಂಟ್’ ಎಂಬ ಪದದ ಸಂವಾದಿಯಾಗಿ ಬಂದಿರುವ ಪದ. ಈಗಾಗಲೇ ‘ಬುದ್ಧಿಮತ್ತೆ’ ಎಂಬ ಪದವೂ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಬುದ್ಧಿಮಾಲಿನ್ಯ ನಾ ಸಂಯುಕ್ತ ಕರ್ನಾಟಕ ದೋಷದಿಂದ ಕೂಡಿದ ಬುದ್ಧಿ; ಕೆಟ್ಟದ್ದನ್ನು ಯೋಚಿಸುವ ಬುದ್ಧಿ. ‘ವಾಯುಮಾಲಿನ್ಯ, ಜಲಮಾಲಿನ್ಯದ ಕುರಿತು ಮಾತನಾಡುವ ನಾವು ಬುದ್ಧಿಮಾಲಿನ್ಯದ ಬಗ್ಗೆ ಗಮನಹರಿಸುತ್ತಿಲ್ಲ’. ‘ವಾಯುಮಾಲಿನ್ಯ’, ‘ಶಬ್ದಮಾಲಿನ್ಯ’ ಮಾದರಿಯಲ್ಲಿ ಬಂದಿರುವ ಪದ.

ಬುದ್ಧಿಶಾಲಿತನ ನಾ ಸುಧಾ ಚಾತುರ್ಯ, ಚತುರತೆ. ‘ಮಕ್ಕಳನ್ನು ಕೆಲವೇಳೆ ಮುದ್ದಿಸಿ, ಸಂತೋಷಗೊಳಿಸಿ ಹೊಸಕುದುರೆ ಪಳಗಿಸುವಂತೆ ಬುದ್ಧಿಶಾಲಿತನದಿಂದ ಬೆಳೆಸಬೇಕು ಎಂದು ಸೂಕ್ತಿ ಹೇಳುತ್ತದೆ’. ತನ ಪ್ರತ್ಯಯ ಬಳಸಿ ನಾಮರೂಪ ರಚಿಸಲಾಗುತ್ತದೆ. ಬಡತನ, ಸಿರಿತನ ಇತ್ಯಾದಿ. ಇದು ಗುಣವೊಂದರ ಇರುವಿಕೆಯನ್ನು ಹೇಳುತ್ತದೆ. ಮೇಲಿನ ಪ್ರಯೋಗದಲ್ಲಿ ಬುದ್ಧಿಶಾಲಿ ಒಂದು ನಾಮಪದ ಅಲ್ಲದೆ ಗುಣವೊಂದರ ಇರುವಿಕೆಯನ್ನು ಸೂಚಿಸುತ್ತದೆ. ಆದ್ದರಿಂದ ತನ ಅವಶ್ಯವಿಲ್ಲ. ಮೇಲಿನ ಪ್ರಯೋಗ ನೀಡುವ ಅರ್ಥವನ್ನು ಬುದ್ಧಿವಂತಿಕೆ’ಯಿಂದ ಪಡೆಯಬಹುದಾಗಿದೆ.

ಬುರುಡೆತೊಳೆ ಕ್ರಿ ಕನ್ನಡ ಪ್ರಭ ಈಗಾಗಲೇ ಮನಸ್ಸಿನಲ್ಲಿ ಇರುವುದನ್ನು ಹೋಗಲಾಡಿಸಿ ಹೊಸತನ್ನು ತುಂಬುವುದು. ‘ಬಡವರಿಗೆ ಹೆಚ್ಚು ಉದ್ಯೋಗ ಒದಗಿಸುವುದರಲ್ಲಿ ಸ್ವಾತಂತ್ರ್ಯದ ಸಾರ್ಥಕತೆ ಇದೆಯೇ ಹೊರತು ಅಂಥವರನ್ನು ಎಳೆದುಕೊಂಡು ಬಂದು ಬರುಡೆ ತೊಳೆದು ಭಯೋತ್ಪಾದಕತೆ, ಕೊಲೆಪಾತಕತೆ ಸೃಷ್ಟಿಸುವುದರಲ್ಲಿಲ್ಲ ಎನ್ನುವುದನ್ನು ಪಾಕಿಸ್ತಾನಕ್ಕೆ ಅದರ ಮಿತ್ರ ಅಮೆರಿಕಾವು ಒತ್ತಿ ಹೇಳುವ ಇನ್ನೊಂದು ಅವಕಾಶ ಈ ಪ್ರಸಂಗದಿಂದ ಭಾರತಕ್ಕೆ ಒದಗಿದಂತಾಗಿದೆ’. ಇಂಗ್ಲೀಶಿನ ‘ಬ್ರೈನ್ ವಾಶ್’ ಪದಕ್ಕೆ ಸಂವಾದಿಯಾಗಿ ಬಳಕೆಗೆ ಬಂದಿರುವ ಪದ. ಆದರೂ ಇಂಗ್ಲಿಶಿನ ಪದ ನೀಡುವ ಅರ್ಥವನ್ನು ಮೇಲಿನ ಪ್ರಯೋಗದಲ್ಲಿ ಕಾಣವುದು ಕಷ್ಟವೇ.

ಬೆಂಕಿಯುಗಿತ ನಾ ಲಂಕೇಶ್ ಪತ್ರಿಕೆ ಕೋಪಗೊಳ್ಳುವುದು, ರೇಗುವುದು. ‘ಹೊಸಕೋಟೆಯಿಂದ ಆರಂಭವಾದ ಗೌಡರ ಇಂತಹ ಬೆಂಕಿಯುಗಿತ ಮಂಡ್ಯ ಮೈಸೂರುಗಳಲ್ಲೂ ಮುಂದುವರಿಯಿತು’. ‘ಕೆಂಡಕಾರು’ ಎಂಬ ಪದಪುಂಜ ಮೇಲಿನ ಅರ್ಥವನ್ನು ಕೊಡುವಂತಹದ್ದು ಈಗಾಗಲೇ ಬಳಕೆಯಲ್ಲಿದೆ.

ಬೆದರಿಕೆಪ್ರಾಯ ನಾ ಸಂಯುಕ್ತ ಕರ್ನಾಟಕ ಹೆದರಿಕೆ ಹುಟ್ಟಿಸುವಂಥದ್ದು, ಭಯಗೊಳಿಸುವಂಥದ್ದು. ‘ಭಾರತೀಯ ಜನತಾಪಕ್ಷವು ದೇಶದ ಸಮಗ್ರತೆ ಮತ್ತು ಏಕತೆಗೆ ಬೆದರಿಕೆಪ್ರಾಯವಾಗಿದೆ’. ಇದೊಂದು ವಿಚಿತ್ರ ರಚನೆ. ‘ಕಳಂಕಪ್ರಾಯ’, ‘ಮುಕುಟಪ್ರಾಯ’ ಪದಗಳ ಮಾದರಿಯಲ್ಲಿ ಬಂದಿರುವ ಪದ.

ಬೆನ್ನುಗಾಳಿ ನಾ ಪ್ರಜಾವಾಣಿ ಹಿಂದಿನಿಂದ ಬೀಸುವ ಗಾಳಿ. ‘ಬೆನ್ನು ಗಾಳಿಯ ಸಹಾಯವಿಲ್ಲದೆ ಸೋಲ್ ಒಲಿಂಪಿಕ್ಸ್‌ನಲ್ಲಿ ಬೆನ್ ಜಾನ್ಸ್‌ನ್ ೯.೭೯ ಸೆಕೆಂಡ್‌ಗಳಲ್ಲಿ ಓಡಿ ಜಗತ್ತನ್ನೇ ಬೆಕ್ಕಸಬೆರಗಾಗಿಸಿದ್ದೇನೋ ನಿಜ’. ಸಾಮಾನ್ಯವಾಗಿ ಇಂಥ ಕಡೆಗಳಲ್ಲಿ ಸಂಧಿಯಾಗುವುದು ಕಂಡುಬರುತ್ತದೆ. ಉದಾ: ಹಿಂದಿನ ನೆಲೆ-ಹಿನ್ನೆಲೆ; ಮೊದಲ ನುಡಿ-ಮುನ್ನುಡಿ ಇತ್ಯಾದಿ. ಪ್ರಕೃತದಲ್ಲೂ ಸಹ ಬೆಂಗಾಳಿ ಆಗಬಹುದಿತ್ತೆ?

ಬೇಡಿಕಾರ್ಹ ಗು ಕನ್ನಡ ಪ್ರಭ ಬೇಡಿಕೆಯಿರುವ. ‘ಇಷ್ಟೊಂದು ಬೇಡಿಕಾರ್ಹವಾಗಿರುವ ಟಿಸಿಎಚ್ ನ ಪಠ್ಯಕ್ರಮವನ್ನು ಅವಲೋಕಿಸಿದರೆ ತುಂಬಾ ಆಶ್ಚರ್ಯವಾಗುತ್ತದೆ’. ಬೇಡಿಕೆಯುಳ್ಳ ಮತ್ತು ಬೇಡಿಕೆಗೆ ತಕ್ಕ ಎಂಬ ರಚನೆಗಳಲ್ಲಿ ಅಷ್ಟೇನೂ ಅರ್ಥವ್ಯತ್ಯಾಸವಿಲ್ಲ. ಉಲ್ಲೇಖಿತ ವಾಕ್ಯದಲ್ಲಿ ‘ಬೇಡಿಕೆಯುಳ್ಳ’ ಎಂದು ಹೇಳಿದರೆ ಏನೂ ತೊಂದರೆಯಿಲ್ಲ. ಅಲ್ಲದೆ ಬೇಡಿಕೆ>ಬೇಡಿಕಾ ಎಂದಾಗಿಸಿ ಅನಂತರ ಅದಕ್ಕೆ ಅರ್ಹ(ಸಂ) ಸೇರಿಸಿದ್ದು ವಿಚಿತ್ರವಾಗಿದೆ. ಮಾದರಿ ಪ್ರಶ್ನೆ>ಪ್ರಶ್ನಾ>ಪ್ರಶ್ನಾರ್ಹ.

ಬೆನ್ನು ತಟ್ಟಬಲ್ ಗು ಕನ್ನಡ ಪ್ರಭ ಉತ್ತೇಜಿಸುವ, ಪ್ರೋತ್ಸಾಹಿಸುವ. ‘ಕಥಾವಸ್ತುವಿನ ಆಯ್ಕೆಯಲ್ಲಿ ತೋರಿದ ಜಾಣತನವನ್ನು ನಿರೂಪಣೆಯಲ್ಲಿ ತೋರಿಲ್ಲ ಎಂಬ ಅಂಶದ ಹೊರತಾಗಿ ವಿಮೋಚನೆ ಚಿತ್ರ ನಿಜಕ್ಕೂ ಒಂದು ಬೆನ್ನುತಟ್ಟಬಲ್ ಪ್ರಯತ್ನ’. ಇಂಗ್ಲಿಶಿನ ‘ಏಬಲ್’ ಪದವನ್ನು ಕನ್ನಡದ ಕೆಲವು ಪದಗಳೊಡನೆ ಬಳಸುವ ಅಭ್ಯಾಸ ಇತ್ತೀಚಿಗೆ ಪ್ರಾರಂಭವಾಗಿದೆ. ಉದಾಹರಣೆಗೆ ತಿನ್ನಬಲ್ ತಿನ್ನಬಹುದಾದ, ನೋಡಬಲ್ ನೋಡಬಹುದಾದ ಇತ್ಯಾದಿ. ಕೇವಲ ಲಘು ಬರಹಗಳಲ್ಲಿ ಮಾತ್ರ ಇಂತಹ ಪ್ರಯೋಗಗಳನ್ನು ಕಾಣಬಹುದು.

ಬೆವರಿಸು ಕ್ರಿ ಪ್ರಜಾವಾಣಿ ಬೆವರು ಬರುವಂತಾಗು, ಹೆದರುವಂತಾಗು. ‘…ತಮಿಳುನಾಡಿನಲ್ಲಿ ಮತ್ತೊಬ್ಬ ಐಎಎಸ್‌ ಅಧಿಕಾರಿಗೆ ಶಿಕ್ಷೆ ವಿಧಿಸಿರುವುದು ತಮಿಳುನಾಡಿನಲ್ಲಿ ಭ್ರಷ್ಟರನ್ನು ಬೆವರಿಸುತ್ತಿರಬಹುದು’. ಎಲ್ಲೆಡೆಯೂ ‘ಇಸು’ ಬಳಕೆ ಸಾಧುವಲ್ಲ ‘ಇಸು’ ಪ್ರತ್ಯಯವಿರುವ ಕೆಲವೊಂದು ಸ್ವತಂತ್ರ ಕ್ರಿಯಾಪದವಾದರೆ ಇನ್ನು ಕೆಲವು ಪ್ರೇರಣಾತ್ಮಕವಾಗಿ ಬರುವಂತಹುದು. ಮೇಲಿನ ಪ್ರಯೋಗ ಎರಡೂ ವರ್ಗಕ್ಕೆ ಸೇರಿದಂತಹುದು. ಬೆವರು ಪದಕ್ಕೆ ಮತ್ತೊಂದು ಕ್ರಿಯಾಪದದ ಅವಶ್ಯಕತೆ ಇದ್ದೇ ಇದೆ. ಬೆವರು ಸುರಿಸು, ಬೆವರು ಹರಿಸು, ಬೆವರು ಇಳಿಸು ಇತ್ಯಾದಿ. ಇದರ ಇನ್ನೊಂದು ರೂಪ ‘ಬೆವತು ಹೋಗು’.

ಬೇವಫಾಯಿ ನಾ ತರಂಗ ನಂಬಿಕೆದ್ರೋಹ; ವಿಶ್ವಾಸಘಾತುಕತನ. ‘ಅಕ್ಷಯ್, ಬೆಳ್ಳಿ ತೆರೆಯ ಸೋಲು, ಜತೆಗೆ ರವೀನಾಳ ಬೇವಫಾಯಿಯಿಂದ ಹೃದಯ ಒಡೆದುಕೊಂಡ’. ಕನ್ನಡದಲ್ಲಿ ಬೇರೆ ಭಾಷೆಯ ಪದಗಳೂ ಸೇರಿವೆ. ಮೇಲಿ ಉಲ್ಲೇಕ ಹೊಸ ಸೇರ್ಪಡೆ. ಮಾದರಿ: ಬೇನಾಮಿ, ಬೇಬಾಕಿ, ಬೇಬುನಾದಿ ಇತ್ಯಾದಿ.

ಬೇಸಾಯಸ್ತ ನಾ ತುಷಾರ ಬೇಸಾಯ ಮಾಡುವವ/ಆರಂಭಕಾರ. ‘ಅವುಗಳನ್ನು ವರ್ಷಕ್ಕೆರಡು ಬಾರಿ ಬೇಸಾಯಸ್ತರಿಗೆ ಮಾರುವುದರ ಮೂಲಕ ನೂರಿನ್ನೂರು ಸಂಪಾದಿ ಸುತ್ತಿದ್ದ’. ‘ನಂಬಿಕಸ್ತ’ ಮಾದರಿಯಲ್ಲಿ ಬಂದಿರುವ ಪದ. ಆದರೆ ‘ಗಾರ’ ಪ್ರತ್ಯಯದೊಡನೆ ‘ಬೇಸಾಯಗಾರ’, ‘ವ್ಯವಸಾಯಗಾರ’ ಎಂಬುದಾಗಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು.

ಭಕ್ತಾಭಿಮಾನಿ ನಾ ಕನ್ನಡ ಪ್ರಭ ಭಕ್ತಿಯುಳ್ಳವನೂ, ಅಭಿಮಾನವುಳ್ಳವನೂ ಆದ ವ್ಯಕ್ತಿ. ‘ಮನಿಯಾರ್ಡರು ಫಾರಂಗಳನ್ನು ನಮ್ಮ ದೇಶದಲ್ಲಿನ ಮಧ್ಯಮ ಹಾಗೂ ಕೆಳವರ್ಗದವರು ತಮ್ಮ ಬಂಧುಮಿತ್ರರಿಗೆ ಎಂ.ಓ.ಹಣ ಕಳಹಿಸಲು ಉಪಯೋಗಿಸುತ್ತಿದ್ದದ್ದು ಸರ್ವೇಸಾಮಾನ್ಯ. ಭಕ್ತಾಭಿಮಾನಿಗಳು ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಕಾಣಿಕೆಗಳನ್ನು ಕಳುಹಿಸಲು…’. ಭಕ್ತರು ಮತ್ತು ಅಭಿಮಾನಿಗಳು ಎರಡೂ ಭಿನ್ನ ವರ್ಗಗಳು. ಹಾಗಾಗಿ ಒಂದೇ ಪದವಾಗಿ ಬರುವುದು ಸಾಧ್ಯವಲ್ಲ.

ಭಯಾಸ್ತ್ರ ನಾ ಉದಯವಾಣಿ  ಭಯ ಹುಟ್ಟಿಸಲು ಅಗತ್ಯವಾದ ದೂರಗಾಮಿ ಆಯುಧ. ‘ತಾನು ವಿಶ್ವಾಸಾರ್ಹ ಕನಿಷ್ಠ ಪರಮಾಣು ಭಯಾಸ್ತ್ರವನ್ನು ಇರಿಸಿಕೊಳ್ಳುವುದಾಗಿ ಭಾರತ ಇಂದು ಹೇಳಿತು’. ‘ಶಸ್ತ್ರಾಸ್ತ್ರ’, ‘ಟೀಕಾಸ್ತ್ರ’ ಮಾದರಿಯಲ್ಲಿ ಬಂದಿರುವ ಪದ.

ಭರವಸೆದಾರ ಗು ಪ್ರಜಾವಾಣಿ ೧. ಭರವಸೆಯನ್ನು ನೀಡಿದ; ಆಶ್ವಾಸನೆನೀಡಿದ, ೨. ಖಾತರಿ ನೀಡಿದ. ‘ಸತ್ಯಸಂಧ ಭರವಸೆದಾರ ಕಂಪೆನಿಗಳು ನಷ್ಟ ಭರ್ತಿಮಾಡಬೇಕು’. ‘ದಾರ’, ‘ಗಾರ’, ‘ಕಾರ’ ಪದಗಳನ್ನು ಬಳಸಿ ವ್ಯಕ್ತಿವಾಚಕ ನಾಮ ಪದಗಳನ್ನು ನಿರ್ಮಾನ ಮಾಡಲಾಗುತ್ತದೆ. ಆದರೆ ಮೇಲಿನ ಉಲ್ಲೇಖದಲ್ಲಿನ ಬಳಕೆ ಹಾಗಿಲ್ಲ.ಇಂಗ್ಲೀಶಿನ ‘ಗ್ಯಾರಂಟಿ’ ಪದಕ್ಕೆ ಕನ್ನಡದ ಭರವಸೆ ಪದವನ್ನು ಸಮಾನಾಂತರ ಎಂದು ಭಾವಿಸಿ ‘ದಾರ’ ಪ್ರತ್ಯಯ ಸೇರಿಸಿ ಪದ ಸೃಷ್ಟಿಸಲಾಗಿದೆ.

ಭರವೇಗ ನಾ ಜಾಹೀರಾತು ಬಹಳ ವೇಗ. ‘ಮನೋರಂಜನಾ ಮಹಾಮಾರ್ಗದ ಮೇಲೆ ಭರವೇಗದಿಂದ ಸಾಗಲು ಈ ಸಪಾಟಾದ ಮೇಲ್ಮೈಗಳನ್ನೇ ಬಳಸಿರೆಂಬುದು ನಮ್ಮ ಆಗ್ರಹಪೂರ್ವಕ ಸಲಹೆ’. ‘ಶರವೇಗ’ವನ್ನು ಗಮನಿಸಿ ಸೃಷ್ಟಿಸಿರುವ ಪದ. ಆದರೆ ತಪ್ಪು ಸೃಷ್ಟಿ. ಏಕೆಂದರೆ ಶರವೇಗದಲ್ಲಿ ವೇಗದೊಂದಿಗೆ ಇನ್ನೊಂದು ಪದದ(ಶರ) ಹೋಲಿಕೆ ಇತ್ತು, ಅದರಂತೆ ವೇಗ ಎನ್ನಲಾಗಿದೆ. ಆದರೆ, ಭರವೇಗದಲ್ಲಿ ‘ಭರ’ ಎಂದರೂ ವೇಗ ಎಂದೇ ಅರ್ಥ.

ಭಾಷಾನ್ವಯ ಗು ಪ್ರಜಾವಾಣಿ ಭಾಷೆಯ ಆಧಾರದ. ‘ಭಾರತದ ಪ್ರಪ್ರಥಮ ಭಾಷಾನ್ವಯ ಪ್ರಾಂತ್ಯವಾದ ಆಂಧ್ರ ಇಂದು ಜನ್ಮತಾಳಿತು’. ‘ಭಾಷಾವಾರು’ ಹೆಚ್ಚಾಗಿ ಬಳಕೆಯಲ್ಲಿರುವ ಪದ.

ಭಾರತೀಕರಣ ನಾ ಪ್ರಜಾವಾಣಿ ಭಾರತೀಯ ಸಂಸ್ಕೃತಿಗೆ ಒಳಪಡಿಸುವುದು. ‘ಭಾರತೀಕರಣದ ಪ್ರಕ್ರಿಯೆ ಚುರುಕಾಗಿ ಅವರಲ್ಲಿ ಅನೇಕರು ಭಾರತೀಯ ಮಹಿಳೆಯರನ್ನೇ ಮದುವೆಯಾದರು’. ಇಂಗ್ಲಿಶಿನ ‘ಐಸೇಶನ್’ ಗೆ ಸಂವಾದಿಯಾಗಿ ‘ಈಕರಣ’ ಪ್ರಯೋಗ ಬಳಕೆಯಲ್ಲಿದೆ. ಮೇಲಿನ ಪ್ರಯೋಗ ‘ಇಂಡಿಯನೈಸೇಶನ್’ ಪದದ ನೇರ ಅನುವಾದ.

ಭಿನ್ನಮತೀಯತೆ ನಾ ಕನ್ನಡ ಪ್ರಭ ಅಭಿಪ್ರಾಯ ಭೇದವಿರುವುದು, ಸಹಮತವಿಲ್ಲದಿರುವಿಕೆ. ‘…ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜನತಾದಳ ಜಿಲ್ಲಾ ಪಂಚಾಯತ್ ಅಧಿಕಾರವನ್ನು ಉಳಿಸಿ ಕೊಂಡಿತಾದರೂ ಭಿನ್ನಮತೀಯತೆ ಸ್ಪೋಟಗೊಂಡಿತು. ಗುಣವಾಚಕಗಳಿಂದ ನಾಮರೂಪ ಸಾಧಿಸಲು ‘ತೆ’ ಪ್ರತ್ಯಯ ಬಳಸುವುದಕ್ಕೆ ಇದೊಂದು ಉದಾಹರಣೆ. ಮಾದರಿ: ಜಾತೀಯ-ಜಾತೀಯತೆ, ಪ್ರಾಂತೀಯ-ಪ್ರಾಂತೀಯತೆ ಇತ್ಯಾದಿ.

ಭೀತಿವಾದ ನಾ ಉದಯವಾಣಿ ಭಯೋತ್ಪಾದನೆಯ ಪರವಿರುವ ವಾದ. ‘….ಆಲಿಪ್ತ ಶೃಂಗಸಭೆಯಿಂದು ಭೀತಿವಾದದ ವಿರುದ್ಧ ಹೋರಾಡುವ ಕುರಿತು ಜಾಗತಿಕ ಶೃಂಗ ಸಭೆ ಹಾಗೂ ೧೯೯೯ರ ಒಳಗೆ….’. ಭಯೋತ್ಪಾದಕ ಕೃತ್ಯಗಳನ್ನು ಉಂಟುಮಾಡುವ ವ್ಯವಸ್ಥೆಯನ್ನು ಪ್ರತಿಪಾದಿಸುವ ವಾದೆ (ಟೆರರಿಸಂ) ವಿದ್ದಂತೆ ತೋರುತ್ತದೆ. ಮಾದರಿ: ಮಾರ್ಕ್ಸ್‌‌ವಾದ.

ಭೀತಿವಾದ ನಾ ಉದಯವಾಣಿ ಭಯ ಹರಡಬೇಕೆನ್ನುವ ವಾದ. ‘ಭೀತಿವಾದ ವಿರೋಧಿ ನ್ಯಾಯಾಲಯದಲ್ಲಿ ವಿಚಾರಿಸಲ್ಪಡುತ್ತಿರುವಂತಹ ದಾವೆಯ ಕಲಾಪಗಳನ್ನು ಗಮನಿಸುವಂತೆ…’ ಇಂಗ್ಲಿಶಿನ ‘ಟೆರರಿಸಂ’ ಪದಕ್ಕೆ ಸಂವಾದಿಯಾಗಿ ಸೃಷ್ಟಿಸಿರುವ ಪದ. ‘ಭಯೋತ್ಪಾದನೆ’ ಪದ ಇಕ್ಕೆ ಸಮೀಪವಾಗಿ ಬಳಕೆಯಾಗುತ್ತಿದೆ.

ಭೂತಪೂರ್ವ ಗು ಕನ್ನಡ ಪ್ರಭ ಹಿಂದಿನ; ನಿವೃತ್ತಿಹೊಂದಿದ; ಮಾಜಿ. ‘ಈ ಇಡೀ ಕಾಶ್ಮೀರದ ಸಮಸ್ಯೆ ಕುರಿತಾಗಿ ವಿಚಾರ ಮಾಡುವಾಗ ಬುದ್ಧಿವಂತರು ಎನಿಸಿಕೊಂಡವರು…. ಈ ಬುದ್ಧಿವಂತರ ಸಾಲಿಗೆ ಒಬ್ಬ ಭೂತಪೂರ್ವ ವಿದೇಶಾಂಗ ಖಾತೆ ಕಾರ್ಯದರ್ಶಿಯವರೂ ಸೇರಿದ್ದಾರೆ’. ಹಿಂದಿಯಿಂದ ನೇರವಾಗಿ ಕನ್ನಡಕ್ಕೆ ಬಂದಿರುವ ಪದ.

ಭೂಮಂಡಲೀಕರಣ ನಾ ಸುಧಾ ವಿಶ್ವವ್ಯಾಪಿಯನ್ನಾಗಿ ಮಾಡುವುದು. ‘ಆದರೆ ಭೂಮಂಡಲೀಕರಣವೇ ಮರ್ಡೋಕರಂಥ ವ್ಯಕ್ತಿಗಳ ಕೈಗೆ ಸಿಲುಕಿರುವಾಗ, ಹಿರಣ್ಯಾಕ್ಷ ಭೂಗೋಳವನ್ನೇ ಎತ್ತಿಕೊಂಡು ಹೋದಂತೆ ಮರ್ಡೋಕ್ ಮಾಡಿರುವಾಗ, ಯಾರ ಮಾತೂ ನಡೆಯುವುದಿಲ್ಲ’. ಹಿಂದಿಯಲ್ಲಿ ಬಳಕೆಯಲ್ಲಿರುವ ಈ ಪದವನ್ನು ಹಾಗೇ ಕನ್ನಡದಲ್ಲಿ ಬಳಸಲಾಗಿದೆ. ‘ಜಾಗತೀಕರಣ’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ. ಇದಲ್ಲದೆ ಪೃಥ್ವೀಕರಣ, ಭೂಗೋಳೀಕರಣ ಪದಗಳೂ ಇತ್ತೀಚೆಗೆ ಬಳಕೆಗೆ ಬಂದಿವೆ.

ಭೂಮೀಹೀನ ನಾ ಸಂಯುಕ್ತ ಕರ್ನಾಟಕ ಸಾಗುವಳಿ ಭೂಮಿಹೊಂದಿರದ. ‘ಬರೇ ರಾಜ್ಯದ ಚೌಕಟ್ಟಿನೊಳಗೆ ಹಿತ ಸಾಧಿಸುವ ವ್ರತ ಹಿಡಿದ ಚಂದ್ರಬಾಬುವಿನ ತೆಲುಗು ದೇಶದಲ್ಲಿ ಕೋಟ್ಯಂತರ ಭೂಮಿಹೀನ ಶ್ರಮಿಕರಿದ್ದಾರೆ.’ ನಿಷೇದಾರ್ಥ ಪದಗಳನ್ನು ಪೂರ್ವಪ್ರತ್ಯಯಗಳನ್ನು ಬಳಸುವುದರ ಮೂಲಕ ಸೃಷ್ಟಿಸಲಾಗುತ್ತದೆ. ಅಲ್ಲದೆ ನಿಷೇಧ ಸೂಚಿಸುವ ಕೆಲವು ಪದಗಳನ್ನು ರಹಿತ, ಹೀನ, ಶೂನ್ಯ ಇತ್ಯಾದಿ ಬಳಸಿಯೂ ಸೃಷ್ಟಿಸಲಾಗುತ್ತದೆ. ಈಗಾಗಲೇ ‘ರಹಿತ’ ಪದ ಬಳಸಿ ‘ಭೂರಹಿತ’ ಎಂಬುದಾಗಿ ಮೇಲಿನ ಅರ್ಥದಲ್ಲಿ ಬಳಕೆಯಾಗಿದೆ.

ಭೋಗವಾದಿ ನಾ ತರಂಗ ಸುಖವನ್ನು ಅನುಭವಿಸಬೇಕೆಂಬ ತತ್ವ/ಸಿದ್ಧಾಂತದಲ್ಲಿ ನಂಬಿಕೆಯುಳ್ಳವ. ‘ಪಾಶ್ಚಾತ್ಯ ಶೈಲಿಯ ಉಪಭೋಕ್ತೆಯ ವಾದದ ದಾಳಿ ನಮ್ಮೆಲ್ಲ ನೈತಿಕ ಮೌಲ್ಯವನ್ನು ನಾಶಗೊಳಿಸಲಿದೆ. ಹೀಗೆ ವಿಕಸಿತ ಸಮೂಹದ ಭೋಗವಾದಿ  ಸಂಸ್ಕೃತಿಯ ವಿಕೃತಿಗಳು ನಮ್ಮಲ್ಲಿ ಹರಡತೊಡಗಿವೆ’. ಇಂಗ್ಲಿಶಿನ ‘ಇಸಂ’ ಗೆ ಸಂವಾದಿಯಾಗಿ ಕನ್ನಡದಲ್ಲಿ ‘ವಾದ’ ಬಳಕೆಯಾಗುತ್ತಿದೆ. ಉದಾ: ಮಾರ್ಕ್ಸ್‌ವಾದ; ಸಮಾಜವಾದ ಇತ್ಯಾದಿ. ಆದರೂ ‘ಭೋಗವಾದ’ ಬಳಕೆಯಲಿಲ್ಲ. ಅದರಿಂದ ಉತ್ಪನ್ನವಾಗುವ ಭೋಗವಾದಿ ಬಳಕೆಯಾಗಿದೆ ಎಂದ ಮೇಲೆ ‘ಭೋಗವಾದ’ ಪದವೂ ಬಳಕೆಗೆ ಬರಹುದು.