ಮಗ್ಗಪೂರ್ವ ಗು ಜಾಹೀರಾತು ಮಗ್ಗಕ್ಕೆ ಬರುವ ಮೊದಲು ಅಥವಾ ನೇಯ್ಗೆ ಹಂತಕ್ಕೆ ಬರುವ ಮೊದಲು. ‘ಮಗ್ಗಪೂರ್ವ ಹಾಗೂ ಮಗ್ಗುನಂತರದ ಸೌಲಭ್ಯದ ಘಟಕಗಳನ್ನು ಅಂದರೆ ಸೈಜಿಂಗ್…. ಸ್ಥಾಪಿಸುವುದು’. ‘ಪೂರ್ವ’ ಪದದೊಡನೆ ಅನೇಕ ಪದಗಳು ಸೃಷ್ಟಿಯಾಗುತ್ತಲಿವೆ. ಆದರೆ ಇದುವರೆಗೆ ಒಂದು ಕಾಲವನ್ನು ಹೇಳಲು ಇದನ್ನು ಬಳಸಲಾಗುತ್ತಿತ್ತು. ಉದಾ: ಸ್ವಾತಂತ್ರ್ಯಪೂರ್ವ ಅಂದರೆ ಸ್ವಾತಂತ್ರ್ಯ ಸಿಗುವುದಕ್ಕೆ ಮೊದಲಿನ ದಿನಗಳು ಎಂಬಂತೆ. ಆದರೆ ಇಲ್ಲಿನ ಬಳಕೆ ವಿಶೇಷ ರೀತಿಯದಾಗಿದೆ. ಅಲ್ಲದೆ ಇಂತಹ ಸಮಯಗಳಲ್ಲಿ ಪೂರ್ಣವಾಗಿ, ತಾಯ್ತನಕ್ಕೆ ಪೂರ್ವದಲ್ಲಿ; ಕೋಶಾವಸ್ಥೆಗೆ ಪೂರ್ವದಲ್ಲಿ ಇತ್ಯಾದಿ, ಮಗ್ಗಕ್ಕೆ ಬರುವ ಮೊದಲು ಎಂದೇ ಬಳಸುವುದು ನಡೆದಿತ್ತು.

ಮಠಾಧಿಪತ್ಯ ನಾ ಕನ್ನಡಪ್ರಭ ಮಠದ ಆಡಳಿತದ ಜವಾಬ್ದಾರಿ/ಅಧಿಕಾರ. ‘ಧಾರ್ಮಿಕ ವ್ಯವಹಾರಗಳನ್ನು ಲೌಕಿಕ ವ್ಯಾಪಾರದಿಂದ ಪ್ರತ್ಯೇಕಿಸಿದರೆ ಮಠಾಧಿಪತ್ಯಕ್ಕೆ ಸ್ಪರ್ಧೆ ಇರಲಾರದು’. ‘ರಾಜ್ಯಾಧಿಪತ್ಯ’ ಮಾದರಿಯಲ್ಲಿ ಬಂದಿರುವ ಹೊಸ ಪದ.

ಮಠೋಪಜೀವಿ ನಾ ಸಂಕ್ರಮಣ ಮಠವನ್ನು ಅವಲಂಬಿಸಿ ಬದುಕುವವರು. ‘ಇವರು ಪ್ರಾಧ್ಯಾಪಕರು ಮತ್ತು ಮಠೋಪಜೀವಿಗಳೂ ಹೌದೂ’. ‘ಬುದ್ಧಿಜೀವಿ’, ‘ಪರೋಪ ಜೀವಿ’ ಪದಗಳ ಮಾದರಿಯಲ್ಲಿ ವ್ಯಂಗ್ಯವಾಡಲು ಬಳಕೆ ಮಾಡಿಕೊಂಡಿರುವ ಪದ.

ಮತದಾರಿಣಿ ನಾ ಕನ್ನಡ ಪ್ರಭ ಮತದಾನ ಮಾಡಬಹುದಾದ ಸ್ತ್ರೀ. ‘ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್ ಸ್ಟೇಷನ್‌ನಲ್ಲಿ ಕುರುಡು ಮತದಾರಿಣಿ…. ಮತಪತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು….’. ‘ದಾರ’ ‘ಗಾರ’ ಪ್ರತ್ಯಯಗಳು ಪುರುಷನನ್ನು ಸೂಚಿಸುವುದರಿಂದ ಮಹಿಳೆಯನ್ನು ಸೂಚಿಸಲು ಈಗಾಗಲೇ ಬಳಕೆಯಲ್ಲಿರುವ ಪ್ರತ್ಯಯಗಳನ್ನು ಬಳಸಲಾಗುತ್ತದೆ. ಮೇಲಿನ ಪ್ರಯೋಗದಲ್ಲಿ ‘ಇಣಿ’ ಪ್ರತ್ಯಯ ಬಳಸಲಾಗಿದೆ. ಮಾದರಿ: ಸ್ವಾಗತಕಾರಿಣಿ.

ಮತಗಂಟು ನಾ ಲೋಕಧ್ವನಿ ಒತ್ತಟ್ಟಿಗೆ, ಒಂದೇಕಡೆ ಇರುವ, ಒಂದು ಮೊತ್ತದಲ್ಲಿ ಸಿಗುವ ಮತ. ‘ರೈತ ಹೋರಾಟದ ಹಿನ್ನೆಲೆ, ಹಿಂದುಳಿದ ಮರಾಠಿ ಅಭ್ಯರ್ಥಿ ಎಂಬ ಬಲ, ದಳದ ಮೂಲ ಬಂಡವಾಳದ ಮತಗಂಟು, ಚಕ್ರದ ವ್ಯಾಮೋಹ ಬಿಡಲಾಗದ ಬೇಸಿಕ್ ವರ್ಕರ್ಸ್‌‌ನ್ನು ಹಿಡಿದು ಒಬವ್ವನ ಕಿಂಡಿ ಮೂಲಕ ಕೋಟೆ ನುಸುಳಿ ಧ್ವಜ ಹಾರಿಸುವ ಯತ್ನವನ್ನು ನಡೆಸಿರುವ….’ ವೋಟ್‌ಬ್ಯಾಂಕ್ ಎಂಬುದರ ಸಂವಾದಿ ರೂಪವೇ? ಆದರೂ ಕೇಳಿದೊಡನೆಯೇ ಅರ್ಥಸ್ಪಷ್ಟವಾಗುವುದಿಲ್ಲ.

ಮತಭ್ರಾಂತ ನಾ ಸುಧಾ ಮತಾಂಧತೆಗೆ ಒಳಗಾದವರು. ‘ಚರಿತ್ರೆಯ ಗೋರಿಯನ್ನು ಗೆಬರಿ ಅಸ್ಥಿಪಂಜರ ತೆಗೆದು ಅದಕ್ಕೆ ರಕ್ತ ಮಾಂಸ ತುಂಬುವ ಮತಭ್ರಾಂತರಿಗೆ ನಮ್ಮಲ್ಲಿ ಕೊರತೆ ಇಲ್ಲ’. ‘ಮತಾಂಧ’ ಎನ್ನುವುದಕ್ಕೆ ಪರ್ಯಾಯವಾಗಿ ಬಂದಿರುವ ಪದ. ಮಾದರಿ: ಮತಿಭ್ರಾಂತ. ಇದರಲ್ಲಿ ಇನ್ನೊಂದು ಅರ್ಥವೂ ಸ್ಫುರಿಸಬಹುದು. ಮತಕ್ಕೆ ಇಂಗ್ಲೀಶಿನ ವೋಟ್ ಎಂಬ ಅರ್ಥವನ್ನು ಪರಿಗಣಿಸಿದಾಗ.

ಮತಾಂತರ ನಾ ಸಂಯುಕ್ತ ಕರ್ನಾಟಕ ಮತ ನೀಡುವಿಕೆಯಲ್ಲಾದ ಬದಲಾವಣೆ; ತಮ್ಮ ಪಕ್ಷ ಬಿಟ್ಟು ಬೇರೊಂದು ಪಕ್ಷಕ್ಕೆ ಮತ ನೀಡುವುದು. ‘ಇತ್ತೀಚಿನ ರಾಜ್ಯಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಅಧಿಕಾರರೂಢ ಶಿವಸೇನೆ-ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನಲ್ಲಾದ ಮತಾಂತರವು ಉಭಯ ಪಕ್ಷಗಳನ್ನು ವಿವಂಚನೆಗೆ ಒಳಮಾಡಿರುವುದು ಸ್ವಾಭಾವಿಕ’. ಈಗಾಗಲೇ ‘ಮತಾಂತರ’ ಪದ ಬಳಕೆಯಲ್ಲಿದೆ. ಆದರೆ ಅಲ್ಲಿನ ಅರ್ಥ ಬೇರೊಂದು ಧರ್ಮಕ್ಕೆ ಬದಲಾಯಿಸುವುದು ಎಂದು. ಮೇಲಿನ ಉಲ್ಲೇಖವನ್ನು ಪಕ್ಷಾಂತರ, ತತ್ವಾಂತರ ಮಾದರಿಯಲ್ಲಿ ಬಳಸಲಾಗಿದೆ. ಅರ್ಥ ಸ್ಪಷ್ಟವಾಗುವುದಿಲ್ಲ.

ಮತಿಭ್ರಮಿತ ಗು ಉದಯವಾಣಿ ಬುದ್ಧಿಭ್ರಮಣೆಗೊಳಗಾದ. ‘….ಆಸ್ತಿವಿವಾದಕ್ಕೆ ಸಂಬಂಧಿಸಿದಂತೆ ನಡೆಯಿತೆನ್ನಲಾದ ಮತಿಭ್ರಮಿತ ವ್ಯಕ್ತಿ ಕುಗಾರು ಹೊನ್ನಪ್ಪಗೌಡರ ಕಗ್ಗೊಲೆಯ ಪ್ರಮುಖ ಆರೋಪಿ…..’. ನಾಮವಾಚಕದಿಂದ ಗುಣವಾಚಕವನ್ನು ಪಡೆದಿರುವ ಒಂದು ಮಾದರಿ. ಆದರೂ ಇದುವರೆವಿಗೂ ‘ಮತಿಭ್ರಮಣೆಗೊಳಗಾದ’ ಎಂದೆ ಬಳಕೆಯಾಗುತ್ತಿತ್ತು. ಮಾದರಿ: ಶೋಷಣೆ=ಶೋಷಿತ; ಚುನಾವಣೆ= ಚುನಾಯಿತ.

ಮನೋಚಿತ್ತ ನಾ ಆಕೃತಿ ಮನಸ್ಸು. ‘ಶಾಂತ ಮನೋಚಿತ್ತದ ಈ ಹುಡುಗ ಕ್ರಿಕೆಟ್ ಸೃಷ್ಟಿಸೋ ಟೆನ್ಯನ್‌ಗಳನ್ನು, ಗೊಂದಲಗಳನ್ನು ಎಷ್ಟೋ ಬಾರಿ ಸಮರ್ಥವಾಗಿ ಎದುರಿಸಿ ನಿಂತಿರುವ ಉದಾಹರಣೆಗಳು ಇವೆ’. ಮನಸ್ಸು ಮತ್ತು ಚಿತ್ತ ಎರಡು ಸಮಾನಾರ್ಥಕ ಪದಗಳು ಮೇಲಿನ ಪ್ರಯೋಗ ‘ತಲೆಶಿರೋಭಾರ’ ಎಂಬ ರೀತಿಯಲ್ಲಿ ದ್ವಿರುಕ್ತಿಯಾದಂತಿದೆ.

ಮನಭಂಜನೆ ನಾ ಪ್ರಜಾವಾಣಿ ತಲೆತಿನ್ನುವುದು, ಮನಸ್ಸು ಒಡೆಯುವುದು, ‘ಆದರೆ, ಇಂದಿನ ಗ್ರಾಮೀಣ ಮಟ್ಟದ ಸಿನಿಮಾ ಮಂದಿರಗಳಾಗಲಿ ಆಧುನಿಕ ನಗರ ಸಿನಿಮಾ ಥಿಯೇಟರ್‌ಗಳು ‘ಮನಭಂಜನೆ’ ಯ ಮಂದಿರಗಳಾಗಿರುವುದು ವಿಷಾದನೀಯ’. ಮನರಂಜನೆ ಪದದ ಆಧಾರದಲ್ಲಿ ಕಟಕಿಯಾಡಲು ಬಳಸಿಕೊಂಡಿರುವ ಪದ. ಮನರಂಜನೆ ನೀಡಬೇಕಾದಲ್ಲಿ ಆ ಮನಸ್ಸುನ್ನು ಒಡೆಯುವಂತಹ, ತಲೆ ತಿನ್ನುವ ಕೆಲಸ ಮಾಡುವುದನ್ನು ಸೂಚಿಸಲು ಬಳಸಲಾಗಿರುವ ಪದ.

ಮನೋಜ್ಞಾನ ನಾ ಸುಧಾ ಮನಸ್ಸಿನ ಜ್ಞಾನ. ‘ಹಾಲುಣಿಸುವುದು ತಾಯಿಯ ಮನೋಜ್ಞಾನಕ್ಕೆ ಹಿತಕಾರಿ’. ‘ಮನೋರಂಜನೆ’, ‘ಮನೋವಿಜ್ಞಾನ’ ಮಾದರಿಯಲ್ಲಿ ಬಂದಿರುವ ಪದ.

ಮನೋಮಾಲಿನ್ಯ ನಾ ಹಾಯ್‌ ಬೆಂಗಳೂರ್ ಮಲಿನಗೊಂಡಿರುವ ಮನಸ್ಸು, ನಕಾರಾತ್ಮಕ ಆಲೋಚನೆ. ‘ಪ್ರಳಯದ ಕುರಿತಂತೆ ಪತ್ರಿಕೆಯೊಂದು ಪ್ರಕಟಿಸಿರುವ ಲೇಖನ ಮನಮಾಲಿನ್ಯದ ರೂಪ ಎಂಬ ನಿಲುವು’. ಮಾಲಿನ್ಯ ಪದವನ್ನು ಸಾಮಾನ್ಯವಾಗಿ ಹೊರಗಿನ ವಸ್ತುಗಳಿಗೆ ಅನ್ವಯಿಸಿ ಉಪಯೋಗಿಸಲಾಗುತ್ತಿತ್ತು. ಉದಾಹರಣೆಗೆ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಇತ್ಯಾದಿ. ಮನಸ್ಸನ್ನು ಕುರಿತಂತೆ, ಚಿತ್ತಸ್ವಾಸ್ಥ್ಯ, ಆರೋಗ್ಯಪೂರ್ಣ ಮನಸ್ಸು ಹೀಗೆ ಬಳಸಲಾಗುತ್ತಿದೆ. ಮನೋಮಾಲಿನ್ಯ ಹೊಸ ರೀತಿಯಲ್ಲಿ ಬಳಕೆಯಾದ ಪದ.

ಮರನಾಶಕ ಗು ಪ್ರಜಾವಾಣಿ ಮರಗಳನ್ನು ಹಾಳುಮಾಡುವಂತಹ. ‘ಬಿಳಿ ಇರುವೆ, ಕೊಳೆತ, ಫಂಗಸ್ ಇತರ ಮರನಾಶಕಗಳಿಂದ ಮುಕ್ತ’. ‘ಕೀಟನಾಶಕ’ ಮಾದರಿಯಲ್ಲಿ ಬಂದಿರುವ ಪದ. ಕೀಟನಾಶಕದಲ್ಲಿ ಬೇರೊಂದು ವಸ್ತು ಕೀಟಗಳ ಸಾವಿಗೆ ಕಾರಣವಾದರೆ ಇಲ್ಲಿ ಕೀಟಗಳೇ ಮರದ ಸಾವಿಗೆ ಕಾರಣವಾಗಿದೆ.

ಮರವಡಿಸು ಕ್ರಿ ಪುಸ್ತಕವೊಂದರಲ್ಲಿ ಬಳಕೆ ಮರದಂತೆ ನಿರ್ಜೀವಗೊಳಿಸು. ‘ಆಯಂಫಿಟಮೀನ್ ಮರವಡಿಸುವ ಮಾದಕ ವರ್ಗಕ್ಕೆ ಸೇರಿಲ್ಲ’. ‘ಮರಗಟ್ಟಿಸು’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ. ಮೇಲಿನ ಪದ ‘ಅಳವಡಿಸು’ ಪದದ ಮಾದರಿಯಲ್ಲಿ ಬಂದಿರಬಹುದೇ?

ಮರಹಂತಕ ನಾ ಸಂಯುಕ್ತ ಕರ್ನಾಟಕ ಮರಗಳನ್ನು ಸಾಯಿಸುವವರು. ‘ಗಿಡಮರಗಳನ್ನು ರಾತ್ರೋರಾತ್ರಿ ಕಡಿದು ಸಾಗಾಣಿಕೆ ಮಾಡುವ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಗಿಡಗಳಿಗೆ ಬೆಂಕಿ ಇಟ್ಟು ತಾವೇ ಬೀಳುವಂತೆ ಮಾಡುವಂತಹ ಮರಹಂತಕರೂ ಇಲ್ಲಿದ್ದಾರೆ’. ‘ನರಹಂತಕ’ ಪದದ ಮಾದರಿಯಲ್ಲಿ ಬಂದಿರುವ ಪದ. ಮರವನ್ನು ಕಡಿಯುವುದು ಸಹಾ ಮರಕ್ಕೆ ಸಾವನ್ನು ತರುವಂಥದೇ ಆದರೂ, ಮೇಲಿನ ಪ್ರಯೋಗದಲ್ಲಿ ಅದನ್ನು ‘ಹತ್ಯೆ’ ಎಂಬುದಕ್ಕೆ ಹೋಲಿಸಲಾಗಿದೆ.

ಮರುಕಳಿಕೆ ನಾ ಕನ್ನಡ ಪ್ರಭ ಮತ್ತೆ ಮತ್ತೆ ಬರುವುದು; ಮೊದಲಿನ ಸ್ಥಿತಿಗೆ ಬರುವುದು. ‘ಜಾಫ್ನಾದಲ್ಲಿ ಭೀಕರ ಯುದ್ಧ ಮರುಕಳಿಕೆ: ೪೩೧ ಸಾವು’, ‘ಮರುಕಳಿಸು’ ಕ್ರಿಯಾರೂಪದಿಂದ ತಂದಿರುವ ನಾಮಪದ.

ಮಾಂಸೋದ್ಯಮ ನಾ ಹಾಯ್‌ ಬೆಂಗಳೂರ್ ವ್ಯಭಿಚಾರ್ ‘…. ಆದರೆ ಇಂಥ ಟೆರರಿಸ್ಟ್ ಆಫೀಸರ್ ಎಸಿಪಿ ನರೇಂದ್ರ ಅವರ ದಕ್ಷ ನಿಗಾದ ನಡುವೆಯೂ ತನ್ನ ವಿಪುಲವಾದ ಮಾಂಸೋದ್ಯಮವನ್ನು ನಡೆಸಿಕೊಂಡು ಬರುತ್ತಿರುವ ಭೂಪನೊಬ್ಬನಿದ್ದಾನೆ’. ಮೇಲ್ನೋಟಕ್ಕೆ ಮಾಂಸ ಮಾರಾಟಕ್ಕೆ ಸಂಬಂಧಿಸಿದ ವಹಿವಾಟು ನಡೆಸುವ ಉದ್ಯಮ/ಸಂಸ್ಥೆಯೆಂದು ಅರ್ಥಬರುತ್ತದೆ. ಆದರೆ ಇಲ್ಲಿ ಒಳ ಅರ್ಥ ವ್ಯಭಿಚಾರ/ಸೂಳೆಗಾರಿಕೆ ಎಂಬುದು. ಫ್ಲೆಶ್‌ಟ್ರೇಡ್‌ಗೆ ಸಂವಾದಿ. ಇದು ಉದ್ಯಮ ಎನ್ನುವಷ್ಟರ ಮಟ್ಟಕ್ಕೆ ಬೆಳೆದಿದೆಯೆಂಬುದನ್ನು ಮಾಡಲು ಈ ಪದವನ್ನು ಬಳಸಿದಂತಿದೆ.

ಮಾತಾಳಿ ನಾ ಕನ್ನಡ ಪ್ರಭ ಹೆಚ್ಚು ಮಾತಾಡುವವರು. ‘ಆಜನ್ಮ ‘ಮಾತಾಳಿ’ಗಳು’. ಕನ್ನಡದಲ್ಲಿ ‘ಆಳಿ’ ಪ್ರತ್ಯಯ ಬಳಸಿ ಸಾಧಿತ ನಾಮರೂಪಗಳನ್ನು ಪಡೆಯುವುದುಂಟು. ಉದಾಹರಣೆಗೆ ಓದು+ಆಳಿ=ಓದಾಳಿ (ಯಾವಾಗಲೂ ಓದುವುದರಲ್ಲಿ ತೊಡಗಿರುವವರು, ಓದಿನಲ್ಲಿ ಪ್ರೀತಿ ಉಳ್ಳವರು ಎಂದರ್ಥ), ತಿನ್ನು+ಆಳಿ= ತಿನ್ನಾಳಿ (ಯಾವಾಗಲೂ ತಿನ್ನುವುದರಲ್ಲಿ ಆಸಕ್ತಿಯುಳ್ಳವರು). ಇಂಥದೇ ಇನ್ನೊಂದು ಸಮಾನಾರ್ಥಕ ಪದ ವಾಚಾಳಿ.

ಮಾನೀಕರಣ ನಾ ಪ್ರಜಾವಾಣಿ ಪರಿಗಣಿಸುವಿಕೆ. ‘ಕನ್ನಡ ತಂತ್ರಾಂಶಗಳ ಮಾನೀಕರಣ ಮತ್ತು ಅವುಗಳಿಗೆ ಸೂಕ್ತ ಶಿಷ್ಟ ಪ್ರಮಾಣ ಪತ್ರಗಳನ್ನು ನೀಡುವಿಕೆ’. ‘ಈಕರಣ’ ಪ್ರತ್ಯಯ ದೊಡನೆ ಬಂದಿರುವ ಪದ. ಆದರೂ ಅರ್ಥವಾಗುವುದು ಸ್ವಲ್ಪ ಕಷ್ಟವೇ ಸರಿ.

ಮಾರ್ಗನಕ್ಷೆ ನಾ ಪ್ರಜಾವಾಣಿ ಮುಂದಿನ ದಾರಿ ತೋರಿಸುವ ಸೂಚನಾ ನಕಾಶೆ. ‘ಭಾರತ ಜನಗಣತಿ ೨೦೦೧ ಭಾರತದ ಭವಿಷ್ಯಕ್ಕೆ ಹೊಸ ಮಾರ್ಗನಕ್ಷೆಯಾಗಲಿದೆ’. ಸಾಮಾನ್ಯವಾಗಿ ‘ಮಾರ್ಗಸೂಚಿ’ ಪದ ಬಳಕೆಯಾಗುತ್ತಿದೆ. ಆದರೆ ಮೋಟರ್ ಸೈಕಲ್, ಕಾರ್ ಇತ್ಯಾದಿಗಳ ವೇಗ ಸ್ಪರ್ಧೆಗಳಲ್ಲಿ ಸ್ಪರ್ಧಿಗಳಿಗೆ ದಾರಿ ತೋರಿಸುವ ಸಲುವಾಗಿ ‘ರೋಡ್ ಮ್ಯಾಪ್’ಗಳನ್ನು ನೀಡಲಾಗುತ್ತದೆ. ಮೇಲಿನ ಪ್ರಯೋಗಕ್ಕೆ ಬಹುಶಃ ‘ರೋಡ್ ಮ್ಯಾಪ್’ ಪದ ಕಾರಣವಿರಬಹುದು.

ಮಾರ್ಗಾಧಿಕಾರಿ ನಾ ಕನ್ನಡ ಪ್ರಭ ಚುನಾವಣೆಗೆ ಸಂಬಂಧಿಸಿದಂತೆ ಆ ಮಾರ್ಗದಲ್ಲಿ ಬರುವ ಮತಗಟ್ಟೆಗಳಿಗೆ ಮೇಲ್ವಿಚಾರಣೆ ಮಾಡುವ ಅಧಿಕಾರಿ. ‘ಮಿಣ್ಯಂ ಸುತ್ತಮುತ್ತಲಿನ ೩೦ ಮತಗಟ್ಟೆಗಳಿಗೆ ಮಾರ್ಗಾಧಿಕಾರಿಯಾಗಿದ್ದ ಸಮಗ್ರ ಬಾಲವಿಕಾಸ ಯೋಜನಾಧಿಕಾರಿಯೊಬ್ಬರು ಯಾವುದೇ ಮಾಹಿತಿ ಇಡದೆ ಹೊರಟು ಹೋಗಿದ್ದರು’. ಇಂಗ್ಲಿಶಿನ ‘ರೂಟ್ ಆಫೀಸರ್’ ಎಂಬುದರ ಕನ್ನಡಾನುವಾದ. ಚುನಾವಣೆಗೆ ಸಂಬಂದಿಸಿದಂತೆ ಮಾತ್ರ ಬಳಕೆಯಾಗುವ ಪದ.

ಮಿತವ್ಯಯತೆ ನಾ ಜಾಹೀರಾತು ಹಿತಮಿತವಾಗಿ ಖರ್ಚು ಮಾಡುವುದು. ‘ನಿಮ್ಮಂತಹ ಬಹುದೂರದ ಪಯಣಿಗರಿಗೆ ಬೇಕು ‘ಬೀಡಾಲ್’ ಎಂಬ ಒಂದು ವಿಶ್ವಸ ನೀಯ ಸಂಗಾತಿ. ಮಿತವ್ಯಯತೆಯಲ್ಲಿ ನಿಮ್ಮ ಇಂಜಿನ್‌ನ ಸಂಪೂರ್ಣ ಸಂರಕ್ಷಣೆ ನೀಡುವ ಆಯಿಲ್’. ‘ಮಿತವ್ಯಯ’ ಎಂಬುದೇ ಸಾಕು. ಆದರೂ ಇತ್ತೀಚೆಗೆ ‘ತೆ’ ಪ್ರತ್ಯಯ ಬಳಕೆ ಹೆಚ್ಚುತ್ತಿರುವುದಕ್ಕೆ ಮೇಲಿನ ಪ್ರಯೋಗ ಒಂದು ಉದಾಹರಣೆ.

ಮಿಲಿಟರಿಶಾಹಿ ನಾ ಉದಯವಾಣಿ ಸೈನಿಕ ಅಧಿಕಾರದ ಆಡಳಿತ; ಸೇನೆಯ ಆಡಳಿತ. ‘ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಕ್ಷಣಾರ್ಧದಲ್ಲಿ ಮಿಲಿಟರಿಶಾಹಿ ಅಲ್ಲಿನ ರಾಷ್ಟ್ರೀಯ ಸಂವಿಧಾನವನ್ನು ಕಸದ ಬುಟ್ಟಿಗೆ ಎಸೆದುದನ್ನು….’. “ಶಾಹಿ’ ಪದವನ್ನು ಬೇರೆ ಪದದೊಡನೆ ಬಳಸಿ ಅಂತಹ ಆಡಳಿತ ಎಂಬ ಅರ್ಥವನ್ನು ಪಡೆಯಾಗುತ್ತಿದೆ. ಉದಾ: ಅಧಿಕಾರಶಾಹಿ. ಪುರೋಹಿತಶಾಹಿ ಇತ್ಯಾದಿ. ಅದೇ ಮಾದರಿಯನ್ನನುಸರಿಸಿ ಬಂದಿರುವ ಪದವಾದರು ಮಿಲಿಟರಿ ಆಡಳಿತವನ್ನು ಲಷ್ಕರಿ ಶಾಸನ ಎಂದೂ ಕರೆಯಲಾಗುತ್ತದೆ.

ಮೀರ್ಸಾದಕ್ಗಿರಿ ನಾ ತರಂಗ ಮೋಸ, ವಂಚನೆಯಂತಹ ಕೆಲಸ. ‘ಮೈಸೂರು ಹುಲಿ ಟೀಪು ಸುಲ್ತಾನನನ್ನು ನೇರವಾಗಿ ಸೋಲಿಸಲಕ್ಕೆ ಆಗದೆ ಕೊನೆಗೂ ಬ್ರಿಟಿಷರು ಮೀರ್‌ಸಾದಕ್‌ಗಿರಿ ಮಾಡಿ ೧೭೯೯ರಲ್ಲಿ ಮೋಸದಿಂದ ಕೊಂದರು’. ‘ಗಿರಿ’ ಪ್ರತ್ಯಯವನ್ನು ಒಂದು ಅಧಿಕಾರ ಸ್ಥಾನವನ್ನು ಸೂಚಿಸಲು ಬಳಸಲಾಗುತ್ತದೆ. ಉದಾ: ಛೇರ್ಮನ್ ಗಿರಿ, ಮಂತ್ರಿಗಿರಿ ಇತ್ಯಾದಿ. ಆದರೆ ಮೇಲಿನ ಪ್ರಯೋಗವನ್ನು ವಾಕ್ಯದಲ್ಲಿ ಗಮನಿಸಿದಾಗ, ಸ್ಥಾನಸೂಚಕ ಪ್ರತ್ಯಯ ಬಳಕೆ ಸರಿಯಲ್ಲವೆನಿಸುತ್ತದೆ. ಅಲ್ಲಿ ಗುಣಸೂಚಕ ಪ್ರತ್ಯಯ ‘ತನ’ ಬಳಕೆ ಸೂಕ್ತವಾದುದಾಗಿದೆ ಎನ್ನಬಹುದು. ‘ಮೀರ್ ಸಾದಕತನ =ಮೋಸ, ವಂಚನೆ ಮಾಡುವ ಗುಣ.

ಮುಂಗಂಡು ನಾ ಸುಧಾ ಮುಂಚೆಯೇ ತಿಳಿದು. ‘ಅನುವಂಶೀಯ ಮಾರ್ಪಾಡುಗಳನ್ನು ಮಾಡಿದ ಸಸ್ಯದ ಬೆಳೆ ಮತ್ತು ಆಹಾರೋತ್ಪತ್ತಿಯ ಅಪಾಯವನ್ನು ಮುಂಗಂಡು ಅದಕ್ಕೆ ಪ್ರತಿಭಟನೆ.’ ‘ಮುನ್’ ಪೂರ್ವ ಪ್ರತ್ಯಯದೊಡನೆ ಅನೇಕ ಪದಗಳು ಬಳಕೆಯಲ್ಲಿವೆ. ಮುಂಗಡ, ಮುಂಗಾರು, ಮುಂಗಾಲು ಇತ್ಯಾದಿ. ಅದೇ ಮಾದರಿಯಲ್ಲಿ ಬಂದಿರುವ ಪದ. ಮುಂಗಾಣು, ಮುಂಗಾಣ್ಕೆ ಬಳಕೆಯಲ್ಲಿವೆ. ಕ್ರಿಯಾರೂಪ ಹೊಸದು.

ಮುಂಚಲನಾ ಗು ಉದಯವಾಣಿ ಮುಂದೆ ಹೋಗುವ. ‘ತಡ್ಬೆಗಳು ಬಡಿದಾಗ ತಿರುಗಾಣಿ ಅಲಗುಗಳಿಗಿಂತ ಹೆಚ್ಚು ನೀರನ್ನು ಹಿಂದಕ್ಕೆ ತಳ್ಳತ್ತವೆಯಾದ್ದರಿಂದ ನೌಕೆಗೆ ೧೫ ರಿಂದ ೨೦ಕ್ಕೂ ಅಧಿಕ ಮುಂಚಲನಾ ಶಕ್ತಿ ದೊರೆಯುತ್ತದೆ’. ‘ಮುನ್‌’ ಪೂರ್ವ ಪ್ರತ್ಯಯದದೊಂದಿಗೆ ಹಲವಾರು ಪದಗಳು ಬಳಕೆಯಲ್ಲಿವೆ. ಉದಾಹರಣೆಗೆ ಮುನ್ಸೂಚನೆ, ಮುನ್ನಡೆ. ಆ ಮಾದರಿಯಲ್ಲಿ ಬಂದಿರುವ ಪದ.

ಮುಂತಳ್ಳು ಕ್ರಿ ಪ್ರಜಾವಾಣಿ ಮುಂದೂಕು, ಮುಂದಕ್ಕೆ ಹಾಡು. ‘ಐಸಿಐಸಿಐ’ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದ ಋಣಪತ್ರಗಳನ್ನು ಮುಂತಳ್ಳಬೇಕಾಯಿತು’. ಪೋಸ್ಟ್ ಪೋನ್‌ಗೆ ಸಂವಾದಿ. ‘ಮುನ್’ ಪ್ರತ್ಯಯವಾದರೆ ಸಂಧಿಯ ಪರಿಣಾಮಕವಾಗಿ ತ>ದ ಆಗಬೇಕಿತ್ತು. ಪರಾ: ಮುಂದೋರು, ಹಿಂದೆಗೆತ

ಮುಂದಣಿಕೆ ನಾ ಪ್ರಜಾವಾಣಿ ಮುಂದಿನದರ ಬಗ್ಗೆ ಗಮನವಿರುವುದು. ‘ನಮ್ಮ ಕವಿಗಳು ಕಾವ್ಯ ಪರಂಪರೆಯನ್ನು ಅಭ್ಯಾಸ ಮಾಡಿಲ್ಲ. ಹಾಗೆ ಮಾಡದಿದ್ದರೆ ಗಾಳಿಯಲ್ಲಿ ನಿಂತಂತೆ ಅನಿಸುತ್ತದೆ. ನೆಲದಲ್ಲಿ ನಿಂತರೆ ನೋಡುವವರಿಗೂ ಹಿತ. ಗಾಳಿಯಲ್ಲಿ ನಿಲ್ಲುವುದು ಕಷ್ಟದ ಕೆಲಸ. ಈ ಹಿಂದಣಿಕೆ ಸಾಧ್ಯವಾದರೆ ಮುಂದಣಿಕೆ ಸಾಧ್ಯ. ಆಗ ಹೊಂದಾಣಿಕೆ ಕೂಡಾ ಸಾಧ್ಯ’. ‘ಇಕೆ’ ಪ್ರತ್ಯಯ ಸೇರಿಸಿ ಬಳಸಿರುವ ಪದ. ಮಾದರಿ: ತೇಲುವಿಕೆ, ಆಡುವಿಕೆ ಇತ್ಯಾದಿ.

ಮುಂಬೆಳಗು ನಾ ಕರ್ಮವೀರ ಜಾಹೀರಾತು ಬೆಳಗಿನ ಮುಂಚಿನ ಸಮಯ-ಮುಂಜಾವು. ‘ಸುಂದರವಾದ-ವರ್ಣಮಯ ಪುರವಣಿಗಳೊಂದಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ನಿಮ್ಮ ಮುಂಬೆಳಗಿನ ಅಭ್ಯಾಸವಾಗಿಸಿಕೊಳ್ಳಿ’. ‘ಮುನ್’ ಪೂರ್ವಪ್ರತ್ಯಯದೊಡನೆ ಬಂದಿರುವ ಪದ. ‘ಮುಂಜಾವು’, ‘ಮುಂಜಾನೆ’ ಪದಗಳು ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಮುಕ್ತತೆ ನಾ ಪ್ರಜಾವಾಣಿ ಮುಕ್ತವಾಗಿರುವಿಕೆ, ತೆರೆದ ಮನಸ್ಸು. ‘ಮದುವೆಯ ವಿಷಯದಲ್ಲಿ ಕಳೆದ ಐದು ವರ್ಷಗಳಲ್ಲಿ ಎಷ್ಟೋ ಮುಕ್ತತೆ ಸಾಧಿತವಾಗಿದೆ’. ‘ತೆ’ ಪ್ರತ್ಯಯವನ್ನು ಬಳಸಿ ಗುಣವಾಚಕಗಳ ಭಾವನಾಮಗಳನ್ನು ರೂಪಿಸಲಾಗುತ್ತದೆ. ಇಲ್ಲಿ ಇಂಗ್ಲೀಶಿನ ‘ಓಪನ್‌ನೆಸ್’ ಎಂಬುದಕ್ಕೆ ಮೇಲಿನ ಪದ ಸಂವಾದಿಯಾಗಿ ಬಂದಿರುವಂತಿದೆ.

ಮುಗ್ಗರಿಕೆ ನಾ ಸಂಯುಕ್ತ ಕರ್ನಾಟಕ ತಡವರಿಸಿ ಬೀಳುವುದು. ‘ಅಂದು ಬಜೆಟ್ ಮಂಡನೆಯಾಗುತ್ತಿದ್ದಂತೆ ಶೇರು ಮಾರುಕಟ್ಟೆ ದಿಗಿಲುಗೊಂಡು ಸೂಕ್ಷ್ಮ ಸೂಚ್ಯಂಕ ವ್ಯಾಪಕ ಮುಗ್ಗರಿಕೆ ಕಂಡಿತು’. ‘ಚೇತರಿಕೆ’ಗೆ ವಿರುದ್ಧವಾಗಿ ತಂದಿರುವ ಪದ. ‘ಮುಗ್ಗುರಿಸು’ ಕ್ರಿಯಾಪದದ ನಾಮರೂಪ.

ಮುದ್ರಣದಾರ ನಾ ಸಂಯುಕ್ತ ಕರ್ನಾಟಕ ಜಾಹೀರಾತು ಮುದ್ರಿಸುವವ. ‘೨೦೦೦-೨೦೦೧ನೇ ಸಾಲಿನ ಜಿಲ್ಲಾ ಮಟ್ಟದ ೭ನೇ ತರಗತಿ ಪಬ್ಲಿಕ್ ಪರೀಕ್ಷೆಯ ಉತ್ತರ ಪತ್ರಿಕೆಗಳು ಹಾಗೂ ಲೇಖನ ಸಾಮಾಗ್ರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಕರೆಯಲಾಗಿದೆ. ಮುದ್ರಣದಾರರು ಕಚೇರಿ ವೇಳೆಯಲ್ಲಿ…’. ವಸ್ತುಸೂಚಿ ಪದಗಳಿಂದ ವ್ಯಕ್ತಿ ಸೂಚಿಪದ ನಿರ್ಮಾನ ಕೆಲವೊಂದು ಪದಗಳಲ್ಲಿ ಆಂತರಿಕ ಬದಲಾವಣೆಯಿಂದ ಆಗುತ್ತದೆ. ಇನ್ನು ಕೆಲವು ಪದಗಳಿಗೆ ಪ್ರತ್ಯಯ ಬಂದು ಪದ ನಿರ್ಮಾಣವಾಗುತ್ತದೆ. ಮೇಲಿನ ಪದ ಎರಡನೆಯ ವರ್ಗಕ್ಕೆ ಸೇರುತ್ತದೆ. ಆದರೆ ಮೊದಲ ವರ್ಗಕ್ಕೆ ಸೇರುವ ಪದ (ಮುದ್ರಣ, ಮುದ್ರಕ) ಈಗಾಗಲೇ ಬಳಕೆಯಲ್ಲಿದೆಯಲ್ಲ. ಹಾಗಾಗಿ ಮೇಲಿನ ಪ್ರಯೋಗದ ಅಗತ್ಯವಿಲ್ಲ ಎನ್ನಬಹುದು.

ಮುದ್ರಾಪ್ರಹಾರ ನಾ ಉದಯವಾಣಿ ಮುದ್ರಣದಲ್ಲಿ ಆದ ದೋಷ. ‘ಬಹುತೇಕ ಊರುಗಳ ಹೆಸರು ಇಲ್ಲಿ ತಪ್ಪಾಗಿ ಮುದ್ರಿತವಾಗಿದೆ. ಹಾಸನ ಜಿಲ್ಲೆ ಮೇಲಂತೂ ನಿರ್ದಾಕ್ಷಿಣ್ಯ ಮುದ್ರಾಪ್ರಹಾರ ನಡೆದಿದ್ದು ಜಿಲ್ಲೆಯ ಹೆಸರನ್ನೇ ಅನ್ಸಾನ್ ಆಗಿ ಬದಲಿಸಿದ್ದಾರೆ.’ ಮುದ್ರಣದಲ್ಲಿ ಆದ ದೋಷಕ್ಕೆ ‘ಮುದ್ರಾರಾಕ್ಷಸನ ಹಾವಳಿ’ ಎಂದು ಬಳಕೆಯಿದೆ. ಗದಾಪ್ರಹಾರ, ಲಾಠಿಪ್ರಹಾರ ಪದಗಳು ಮೇಲಿನ ಪ್ರಯೋಗಕ್ಕೆ ಮಾದರಿಯಾಗಿವೆ.

ಮುನ್ನೇರುವಿಕೆ ನಾ ಜಾಹೀರಾತು ಅಭಿವೃದ್ಧಿ, ಮುನ್ನಡೆ. ‘ಕೆವಿಐಸಿ ದೇಶದ ಹಾಗೂ ಅದರ ಪೌರರ ಅಭಿವೃದ್ಧಿ ಮತ್ತು ಮುನ್ನೇರುವಿಕೆಗಾಗಿ ತನ್ನನ್ನು ಸಮರ್ಪಿಸಿಕೊಂಡಿರುವುದಲ್ಲದೆ….ಸಂಸ್ಥೆ ಆಗಿದೆ’. ‘ಏರುವಿಕೆ’ ಎಂಬುದೇ ಅಭಿವೃದ್ಧಿಯನ್ನು ಸೂಚಿಸುತ್ತದೆ. ‘ಮುನ್’ ಪ್ರತ್ಯಯದಿಂದಾಗಿ ಮತ್ತೂ ಒತ್ತು ನೀಡಿದಂತಾಗಿದೆಯೇ?

ಮುಳುಗು ಪಟು ನಾ ಆಕಾಶವಾಣಿ ನೀರಿನಲ್ಲಿ ಮುಳುಗು ಹಾಕುವ ಆಟಗಾರ. ‘ರಾಜ್ಯದ ಮುಳುಗುಪಟು…ಪದ ಸಂಪಾದಿಸಿದ್ದಾರೆ’. ಇಂಗ್ಲಿಶಿನ ‘ಡೈವರ್’ ಎಂಬುದಕ್ಕೆ ಸಂವಾದಿಯಾಗಿ ಬಳಸಿದಂತಿದೆ. ‘ಮುಳುಗುಗಾರ’ ಎಂಬುದು ಬಳಕೆಯಲ್ಲಿದೆ. ಆದರೆ ಮೇಲಿನ ಪ್ರಯೋಗದಲ್ಲಿ ಕ್ರೀಡೆಯ ಸಂದರ್ಭದ ಹಿನ್ನೆಲೆಯಿದೆ. ಮಾದರಿ: ಕ್ರೀಡಾಪಟು.

ಮೂಢತೆ ನಾ ಪ್ರಜಾವಾಣಿ. ದಡ್ಡತನ ತಿಳುವಳಲಿಕೆಯಿಲ್ಲದುದು ‘ಇಂಥ ಮೂಢತೆ ಹೋಗ ಬೇಕಾದರೆ ಪ್ರತಿಯೊಬ್ಬ ಪಾಲಕರೂ ಕನ್ನಡ ಭಾಷೆಯನ್ನು ತಿರಸ್ಕಾರದಿಂದ ನೋಡದೆ….’. ಗುಣವಾಚಕದಿಂದ ನಾಮಪದ ರಚನೆ ಕೆಲವೊಮ್ಮೆ ಆಂತರಿಕ ಬದಲಾವಣೆಯಿಂದ ಕೆಲವೊಮ್ಮೆ ಹೊಸ ಅಕ್ಷರಗಳ ಸೇರ್ಪಡೆಯಿಂದ ಆಗುತ್ತದೆ. ಮೇಲಿನ ಸಂದರ್ಭದಲ್ಲಿ ಮೂಢ ಪದಕ್ಕೆ ಮೌಢ್ಯ ಎಂದಿದ್ದರೂ ‘ತೆ’ ಪ್ರತ್ಯಯ ಸೇರಿಸಿ ಪದಸೃಷ್ಟಿಸಲಾಗಿದೆ. ಇದು ಶ್ರಮವನ್ನು ಸುಲಭಗೊಳಿಸಿಕೊಳ್ಳುವ ಕ್ರಿಯೆಯಷ್ಟೇ.

ಮೃಗಾಸ್ಪತ್ರೆ ನಾ ಕರ್ಮವೀರ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯಶಾಲೆ. ‘ಇದರನ್ವಯ ನಾಯಿಗಳನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಮೃಗಾಸ್ಪತ್ರೆಗೆ ಸಾಗಿಸಬೇಕೆಂದು ನ್ಯಾಯಾಲಯದ ಆದೇಶ ಬಂತು’. ‘ಮೃಗೀಯ’ ಎಂದರೆ ಇಂಗ್ಲೀಶಿನ ‘ಬೀಸ್ಟ್’ ಎಂಬ ಪದದ ಅರ್ಥದಲ್ಲಿ ಬಳಸಲಾಗುತ್ತಿದೆ. ಅದೇ ರೀತಿ ಮೇಲಿನ ಉಲ್ಲೇಕವನ್ನು ನೋಡಿದರೆ, ಕ್ರೂರಪ್ರಾಣಿಗಳ ಆಸ್ಪತ್ರೆ ಎನ್ನುವ ಅರ್ಥಬರುತ್ತದೆ. ಮೃಗ ಎಂದರೆ ಕಾಡುಪ್ರಾಣಿ, ಬೇಟೆಯಾಡುವ ಪ್ರಾಣಿ ಎಂಬರ್ಥವಿದೆ.

ಮೇಜುಗೆಲಸ ನಾ ಪುಸ್ತಕವೊಂದರಲ್ಲಿ ಬಳಕೆ ‘ಬರಿಯ ಮೇಜುಗೆಲಸಕ್ಕಿಂತ ಮಿಗಿಲಾಗಿ ಕಠಿಣವಾದ ಕ್ಷೇತ್ರಕಾರ್ಯವನ್ನು ಆಧರಿಸಿರುವುದು ನಿಬಂಧದ ಒಂದು ವಿಶಷ್ಟತೆಯಾಗಿದೆ’. ಇಂಗ್ಲಿಶಿನ (ಟೇಬ್ಲ ವರ್ಕ್‌) ಎಂಬುದರ ಸಂವಾದಿಯಾಗಿ ಬಳಸಿರುವ ಪದ.

ಮೇಲ್ಮಿತಿ ನಾ ಕನ್ನಡ ಪ್ರಭ ಜಾಹೀರಾತು ಗರಿಷ್ಠ ಪ್ರಮಾಣ. ‘ವಿಮೆ ಇಳಿಸಬಹುದಾದ ಮೊಬಲಗಿಗೆ ಯಾವುದೇ ಮೇಲ್ಮಿತಿ ಇಲ್ಲ’. ಇಂಗ್ಲಿಶಿನ ‘ಹೈಯರ್ ಲಿಮಿಟ್’ ಎಂಬುದರ ಸಂವಾದಿ ಪದವಾಗಿ ರೂಪಿಸಲಾಗಿದೆ. ಮಾದರಿ: ಮೇಲ್ಪದರ

ಮೊಳಗಾಟ ನಾ ಉದಯವಾಣಿ ಧ್ವನಿ ಮಾಡುವಿಕೆ. ‘ಎಐಸಿಸಿ ಕಾರ್ಯದರ್ಶಿ ಮೇ. ಸುಧೀರ್ ಸಾವಂತ್ ಈಗ ರಾಜಕೀಯದ ಗೋಜಲಿನಿಂದ ಮುಕ್ತಿಗೊಂಡು ತೋಪುಗಳ ಮೊಳಗಾಟದ ಕಾರ್ಗಿಲ್ ಮುಂಚೂಣಿಗೆ ಧಾವಿಸುವ ಧಾವಂತದಲ್ಲಿದ್ದಾರೆ, ‘ಓಡಾಟ’ ‘ನೂಕಾಟ’ ಮಾದರಿಯಲ್ಲಿ ಬಂದಿರುವ ಪದ.

ಮೌಲ್ಯಾಂಕನ ನಾ ಜಾಹೀರಾತು ಬೆಲೆ ನಿಗದಿ ಮಾಡುವುದು. ‘ಇತ್ತೀಚೆಗೆ ‘ಎಪಿಲ್‌’ ಸದ್ಯಕ್ಕೆ ತನ್ನಲ್ಲಿರುವ ಟೀಕ್ ಪ್ಲಾಂಟೆಶನ್‌ಗಳ ಮಾರುಕಟ್ಟೆಯ ಮೌಲ್ಯದ ಅಂದಾಜು ಮಾಡಲಿಕ್ಕಾಗಿ ಮೌಲ್ಯಾಂಕನ ಕೆಲಸವನ್ನು ಆರಂಭಿಸಿದೆ’. ಹಿಂದಿಯಲ್ಲಿ ಬಳಕೆಯಲ್ಲಿರುವ ‘ಮೂಲ್ಯಾಂಕನ್’ ಎಂಬ ಪದದಿಂದ ಬಂದಿರುವಂತಿದೆ. ಕನ್ನಡದಲ್ಲಿ ಈಗಾಗಲೇ ‘ಮೌಲ್ಯ ಮಾಪನ’ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು.