ಯಜಮಾನಶಾಹಿ ನಾ ದೂರದರ್ಶನ ವಾರ್ತೆ ಯಜಮಾನನ ಆಡಳಿತ, ಸರ್ವಾಧಿಕಾರಿ ಮಾದರಿ ಆಡಳಿತ. ‘ರಾಜಕೀಯ ಪಕ್ಷಗಳಲ್ಲಿ ಸಿದ್ಧಾಂತಗಳು ಕುಸಿದಾಗ ಆಂತರಿಕ ಪ್ರಜಾಪ್ರಭುತ್ವ ಕುಸಿದು ಯಜಮಾನಶಾಹಿ ಪ್ರವೃತ್ತಿ ಬೆಳೆಯುತ್ತದೆ’. ‘ಶಾಹಿ’ ಪದ ಬಳಸಿ ‘ಆಡಳಿತ ಎಂಬರ್ಥ ಪಡೆಯಲಾಗುತ್ತದೆ. ಮಾದರಿ: ವಸಾಹತುಶಾಹಿ, ನೌಕರಶಾಹ ಇತ್ಯಾದಿ.

ಯಾನಿ ನಾ ಉದಯವಾಣಿ ಪ್ರಯಾಣಿಕ, ಯಾನ ಮಾಡುವವ. ‘ಸ್ಥೈರ್ಯ ಕುಂದದ ಯಾನಿಗಳು’ ವ್ಯಕ್ತಿವಾಚಿಗಳು ಹಲವು ಬಗೆಯಲ್ಲಿ ರೂಪುಗೊಳ್ಳುತ್ತವೆ. ಪ್ರತ್ಯಯಗಳ ಬಳಕೆಯಿಂದ (ಇಕ, ಇಗ, ವಂತ ಇತ್ಯಾದಿ) ಮತ್ತು ಆಂತರಿಕ ಮಾರ್ಪಾಟಿನಿಂದ. ಮೇಲಿನ ಪದ ಆಂತರಿಕ ಮಾರ್ಪಾಟಿನಿಂದ ಆಗಿದೆ. ಮಾದರಿ: ದ್ರೋಹ-ದ್ರೋಹಿ

ಯಾರೋರ್ವರೂ ಉದಯವಾಣಿ ಯಾರೊಬ್ಬರೂ. ‘೧೯೭೧ದಶಂಬರ್ ೧೭ರ ಯುದ್ಧ ಸ್ಥಂಭದ ರೇಖೆಯನ್ನು ಜಮ್ಮು ಕಾಶ್ಮೀರದಲ್ಲಿ ಏಕಪಕ್ಷೀಯವಾಗಿ ಯಾರೋರ್ವರೂ ವಿಚಲಿತಗೊಳಿಸಬಾರದು….’ ಓರ್ವ ಮತ್ತು ಒಬ್ಬ ಸಮಾನಾರ್ಥಕಗಳು. ಆದರೆ ‘ಯಾರೊಬ್ಬರು’ ಬಳಕೆಯಲ್ಲಿದೆ. ಇಲ್ಲಿ ‘ಓರ್ವ’ ಪದ ಬಳಸಲಾಗಿದೆ. ಮಾದರಿ: ಪ್ರತಿಯೊಬ್ಬರು =ಪ್ರತಿಯೋರ್ವರು; ಇನ್ನೊಬ್ಬ= ಇನ್ನೊರ್ವ.

ಯುದ್ಧಖೋರ ನಾ ಉದಯವಾಣಿ ಯುದ್ಧ ಹೂಡುವುದರಲ್ಲಿ ಆಸಕ್ತ ಇರುವವನು. ‘ನಾನು ಯುದ್ಧಖೋರ ಎಂಬ ಕಲ್ಪನೆ ಗಡಿಯಾಚೆಗಿದೆ. ಆದರೆ ನಾನು ಈ ಪ್ರದೇಶದಲ್ಲಿ ಶಾಂತಿಯನ್ನು ಬಯಸುತ್ತೇನೆ ಎಂದು ಅವರು ಹೇಳಿದರು.’ ಒಬ್ಬ ವ್ಯಕ್ತಿಯ ಗುಣಸ್ವಭಾವವನ್ನು ಸೂಚಿಸುವಾಗ ಕೋರ ಎಂಬ ಬದ್ದ ರೂಪ ಹತ್ತುತ್ತದೆ. ಲಂಚಕೋರ, ದಗಾಕೋರ. ಆದರೆ ಮೇಲಿನ ಪ್ರಯೋಗದಲ್ಲಿ ‘ಖೋರ’ ಎಂಬ ಪರ್ಸೋ-ಅರೇಬಿಕ್ ಪ್ರತ್ಯವನ್ನೇ ಬಳಸಲಾಗಿದೆ.

ಯುವಕಾವಸ್ಥೆ ನಾ ತುಷಾರ ತಾರುಣ್ಯ, ಯೌವನ. ‘ಚಿಕ್ಕ ವಯಸ್ಸು, ಯುವಕಾಸ್ಥೆ, ಮದುವೆ, ಭವಿಷ್ಯ ಮೊದಲಾದವುಗಳ ಬಗ್ಗೆ ಗಂಡು ಹೆಣ್ಣಿನ ಸಂಬಂಧಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಚರ್ಚಿಸಿದ್ದಾರೆ’. ಮನುಷ್ಯನ ನಾಲ್ಕು ಅವಸ್ಥೆಗಳನ್ನು ಹೇಳುವಾಗ ಬಾಲ್ಯ, ಯೌವನ ಇತ್ಯಾದಿ ಹೇಳಲಾಗುತ್ತದೆ. ಯೌವನ ಪದ ಸ್ತ್ರೀ-ಪುರುಷ ಲಿಂಗಗಳಲ್ಲಿಯೂ ಬಳಸಬಹುದಾದ ಪದ. ಆದರೆ ಯುವಕಾವಸ್ಥೆಯಲ್ಲಿ ಕೇವಲ ಪುಲ್ಲಿಂಗ ಸೂಚನೆ ಮಾತ್ರ ಸಿಗುತ್ತದೆ ಎಂದು ಭಾವಿಸಲಾಗುತ್ತದೆ. ಏಕೆಂದರೆ ಈಗ ಸ್ಪಷ್ಟ ಸೂಚನೆಗೆ ಎಲ್ಲೆಡೆಯೂ ಯುವಕರೂ-ಯುವತಿಯರೂ ಎಂದೇ ಬಳಸಲಾಗುತ್ತಿದೆ.

ಯುದ್ಧಸ್ತಂಭನ ನಾ ಉದಯವಾಣಿ ಯುದ್ಧನಿಲ್ಲಿಸುವುದು. ‘ಅದರ ಪರಿಸಮಾಪ್ತಿಯಾಗಿ ೧೯೪೯ ಜನವರಿ ೧೯ರಂದು ಯುದ್ಧ ಸ್ತಂಭನ (ಸೀಸ್‌ಫೈರ್ ಲೈನ್) ರೇಖೆ ಎಳೆಯುವ ಸಂದರ್ಭ ನಮ್ಮ ಪರವಾಗಿ ಸಹಿ ಹಾಕಿದ….’. ಇಂಗ್ಲಿಶಿನ ‘ಸೀಸ್‌ಫೈರ್’ಗೆ ಸಂವಾದಿಯಾಗಿ ಕದನ ವಿರಾಮ ಎಂಬ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಅದರ ಸಮಾನಾರ್ಥಕ ಪದವಾಗಿ ಮೇಲಿನ ಪ್ರಯೋಗ ಬಂದಿದೆ.

 

ರಗಳೆರಾಜ ನಾ ಲಂಕೇಶ್‌ಪತ್ರಿಕೆ ಕಿರಿಕಿರಿ ಮನುಷ್ಯ; ರಗಳೆಗೆ ಹೆಸರಾದ ವ್ಯಕ್ತಿ. ‘ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಗಳೂರಿನಲ್ಲಿ ಬಿಜೆಪಿಯ ರಸಿಕಶೀಖಾಮಣಿ-ರಗಳೆರಾಜ ಧನಂಜಯಕುಮಾರ್ ಅತೀ ಪ್ರಯಾಸದಿಂದ ಅನಿರೀಕ್ಷಿತವಾಗಿ ಗೆದ್ದಿದ್ದಾರೆ’. ಸಾಮಾನ್ಯವಾಗಿ ‘ರಾಜ’ ಪದವನ್ನು ಇನ್ನೊಂದು ಗುಣವಾಚಕದೊಡನೆ (ಮಹಾರಾಜ, ಯುವರಾಜ) ರಾಜಾಡಳಿತಕ್ಕೆ ಸಂಬಂಧಿಸಿದಂತೆ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅರಮನೆಯಿಂದ ಹೊರಗೂ ಸಹಾ ಈ ಪದದ ಬಳಕೆ ಆಗುತ್ತಿದೆ. ಉದಾ:ಪ್ರಣಯರಾಜ, ರಸಿಕರಾಜ, ಇಲ್ಲೆಲ್ಲಾ ಗುಣವಾಚಕಗಳೂ ಸಹಾ ಇತ್ಯಾತ್ಮಕ ಆಗಿರುವುದನ್ನು ಗಮನಿಸಬಹುದು. ಆದರೆ ಮೇಲಿನ ಉದಾಹರಣೆಯಲ್ಲಿ ನೇತ್ಯಾತ್ಮಕ ಗುಣವಾಚಕದೊಂದಿಗೆ ‘ರಾಜ’ ಉಪಯೋಗಿಸಲಾಗಿದೆ.

ರಕ್ಷಣೋದ್ಯಮ ನಾ ಕನ್ನಡ ಪ್ರಭ ರಕ್ಷಣಾ ಕೆಲಸಗಳಿಗೆ ಉಪಯೋಗಿಸುವ ವಸ್ತುಗಳನ್ನು ಉತ್ಪಾದಿಸುವ ಸಂಸ್ಥೆ. ‘ರಕ್ಷಣೋದ್ಯಮ ಸಿಬ್ಬಂದಿ ಸಂಪು’. ‘ಪ್ರವಾಸೋದ್ಯಮ’ ಮಾದರಿಯಲ್ಲಿ ಸಂಸ್ಕೃತ ಸಂಧಿನಿಯಮಕ್ಕನುಗುಣವಾಗಿ ಸೃಷ್ಟಿಸಿದ ಪದ.

ರೈತಸ್ನೇಹಿ ನಾ ಕನ್ನಡ ಪ್ರಭ ರೈತರಿಗೆ ಸಹಾಯವಾಗುವಂತಹುದು. ‘… ಸರ್ಕಾರ ಈಗಿರುವ ಆಮದು ನೀತಿಯನ್ನು ಮರುಪರಿಶೀಲಿಸಿ ಅದನ್ನು ‘ರೈತಸ್ನೇಹಿ’ ಆಮದು ನೀತಿಯನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.’ ಇಂಗ್ಲಿಶಿನ ‘ಫ್ರೆಂಡ್ಲಿ’ ಎಂಬ ಪದ ಈಗ ಇಂಗ್ಲೀಶಿನಲ್ಲಿ ಹೊಸ ಪದಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಅದರ ನೇರಾನುವಾದ ಮಾಡಿ ಕನ್ನಡದಲ್ಲಿಯೂ ಕೆಲವು ಪದಗಳು ಬಂದಿವೆ(ಪರಿಸರ ಸ್ನೇಹಿ). ಇದೇ ಮಾದರಿಯಲ್ಲಿ ಮೇಲಿನ ಪದ ಬಂದಿದೆ.

ರಕ್ಷಿತಾರಣ್ಯ ನಾ ಕನ್ನಡ ಪ್ರಭ ಕಾವಲಿಟ್ಟು ರಕ್ಷಿಸಲಾಗುತ್ತಿರುವ ಕಾಡು. ‘ಸುಳ್ಯದಿಂದ ೧೦ ಕಿ.ಮೀ. ದೂರದಲ್ಲಿರುವ ಆನೆಗುಂದಿ ರಕ್ಷಿತಾರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿರುವ ಪ್ರಕರಣಗಳು ವರದಿಯಾಗಿವೆ.’ ‘ಅಭಯಾರಣ್ಯ’ ಪದಕ್ಕೆ ಸಮಾನಾಂತರವಾಗಿ ಬಂದಿರುವ ಮತ್ತೊಂದು ಪದ.

ರಚನೆದಾರ ನಾ ಸಂಯುಕ್ತ ಕರ್ನಾಟಕ ಸೃಷ್ಟಿಸುವ ವ್ಯಕ್ತಿ; ರಚಿಸುವ ವ್ಯಕ್ತಿ. ‘ಇಂಥಹ ಗೀತೆಗಳ ರಚನೆದಾರರು ಹಾಗು ಗಾಯಕರು ಹೆಚ್ಚಾಗಿ ರಬಕವಿ, ಜಮಖಂಡಿ, ಮಧೋಳ…. ಸಿಗುತ್ತಾರೆ’. ‘ರಚನೆಕಾರ’ ಪದ ಈಗಾಗಲೇ ಬಳಕೆಯಲ್ಲಿದೆ. ಅಲ್ಲದೆ ‘ದಾರ’ ಪ್ರತ್ಯಯವನ್ನು ಸಾಮಾನ್ಯವಾಗಿ ಪರ್ಸೋ ಅರೇಬಿಕ್ ಪದಗಳಿಗೆ ಸೇರಿಸಲಾಗುತ್ತದೆ. ತಹಸೀಲುದಾರ, ಅಮಲುದಾರ ಇತ್ಯಾದಿ ಪದಗಳಲ್ಲಿ ಅಧಿಕಾರವನ್ನು ಹೊಂದಿರುವ ಎಂಬರ್ಥ ಬರುತ್ತದೆ. ಆದರೆ ಇತ್ತೀಚೆಗೆ ದಾರ-ಕಾರ-ಗಾರ ಇವುಗಳ ನಡುವಿನ ವ್ಯತ್ಯಾಸ ಮರೆಯಾಗುತ್ತಿರುವುದು ಗಮನಾರ್ಹ.

ರಣನೀತಿ ನಾ ಸುಧಾ ಯುದ್ಧರಂಗದಲ್ಲಿ ಅನುಸರಿಸಬೇಕಾದ ಮಾರ್ಗ. ‘ದಂಡಿನಲ್ಲಿ ಸೋದರ ಮಾವನೆ?’ ಎಂಬ ರಣನೀತಿಯನ್ನು ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆಗೆ ಇಳಿಸಿತು’. ‘ರಣನೀತಿ’ ಪದ ಇತ್ತೀಚಿಗೆ ಹಿಂದಿ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುತ್ತಿದೆ. ಚುನಾವಣೆಯನ್ನೇ ಒಂದು ರಣರಂಗ ಎಂದು ಭಾವಿಸಿ ಮುಂದೆ ಚುನಾವಣೆಯನ್ನು ಹೇಗೆ ಗೆಲ್ಲಬೇಕು ಎಂಬುದರ ಬಗ್ಗೆ ಯೋಜಿಸುವುದು. ಇದೇ ಈಗ ಕನ್ನಡದಲ್ಲೂ ಬಳಕೆಯಾಗುತ್ತಿದೆ. ಸಮಾನಾರ್ಥಕ ಪದ: ಯುದ್ಧನೀತಿ. ಮಾದರಿ ರೂಪ: ಜಲನೀತಿ, ಆರ್ಥಿಕ ನೀತಿ, ಸಾಮಾಜಿಕ ನೀತಿ ಇತ್ಯಾದಿ.

ರಬ್ಬರೀಕೃತ ಗು ಜಾಹೀರಾತು ರಬ್ಬರಿನಿಂದ ಮಾಡಲಾದ. ‘ಸರಿಯಾದ ಬೆಂಬಲವನ್ನು ಒದಗಿಸಲು ಲಕ್ಷಾಂತರ ರಬ್ಬರೀಕೃತ ಕಾಯರ್‌ಸ್ಪ್ರಿಂಗ್‌ಗಳನ್ನು ಹೊಂದಿದೆ. ‘ಆಂಗ್ಲ ಭಾಷೆಯ ಪದಕ್ಕೆ ‘ಈಕೃತ’ ಪ್ರತ್ಯಯ ಹತ್ತಿಸಿರುವ ಒಂದು ಪ್ರಯೋಗ. ಇತ್ತೀಚೆಗೆ ಇಂತಹ ಪ್ರಯೋಗಗಳು ಹೆಚ್ಚುತ್ತಿವೆ. ಉದಾ: ಕಂಪ್ಯೂಟರೀಕರಣ. ಬ್ಯಾಟುಗಾರ ಇತ್ಯಾದಿ. ಅಲ್ಲದೆ, ರಬ್ಬರಿಗೆ ಕನ್ನಡದಲ್ಲೂ ‘ರಬ್ಬರು’ ಎಂದೇ ಬಳಸಲಾಗುತ್ತದೆ.

ರಸಸಿಕ್ತ ಗು ಪ್ರಜಾವಾಣಿ ರಸಮಯವಾದ. ‘…..ಆಸಕ್ತ ಕೇಳುಗರು ಮುಗ್ಧರಾಗೂ ಹಂಗ ರಸಸಿಕ್ತವಾಗಿ ಹೊಮ್ಮಿದ ನುಡಿಗಳು’. ‘ರಕ್ತಸಿಕ್ತ’ ಮಾದರಿಯನ್ನನುಸರಿಸಿ ಬಂದ ಪದ. ‘ರಕ್ತಸಿಕ್ತ’ದಲ್ಲಿ ರಕ್ತದಿಂದ ತೊಯ್ದ, ಒದ್ದೆಯಾದ ಎಂಬುದಕ್ಕೆ ಭೌತಿಕವಾದ ಆಧಾರವಿದ್ದರೆ ಮೇಲಿನ ಪದದಲ್ಲಿ ಕೇವಲ  ಭಾವನಾಮಯವಾಗಿ ಮಾತ್ರ ಇರುವುದು ಸಾಧ್ಯ.

ರಾಜಕೀಯಸ್ಥ ನಾ ಪ್ರಜಾವಾಣಿ ರಾಜಕೀಯ ವ್ಯವಹಾರದಲ್ಲಿರುವವರು. ‘ವಾಸ್ತವವಾಗಿ ಎಲ್ಲಾ ರಾಜಕೀಯಸ್ಥರೂ ಪಕ್ಷಾತೀತವಾಗಿ….. ಬೇರೆ ಬೇರೆಯಾಗಿ ಶಂಖವನ್ನೂದಿದರು ಎಂದು….’ ‘ಸಂಸಾರಸ್ಥ’, ‘ಮುಖ್ಯಸ್ಥ’ ಮಾದರಿಯನ್ನು ಅನುಸರಿಸಿ ಬಂದಿರುವ ಪದವಾದರೂ ‘ರಾಜಕಾರಣಿ’ ಎಂಬ ಪದ ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ರಾಜಕೀಯಕರಣ ನಾ ಸಂಯುಕ್ತ ಕರ್ನಾಟಕ ರಾಜಕೀಯ ವ್ಯವಹಾರ ಮಾಡುವುದು. ‘ರಾಜ್ಯಪಾಲರ ಹುದ್ದೆಯ ರಾಜಕೀಯಕರಣವಾಗಿದ್ದರೂ ನಾರಾಯಣನ್‌ರಂಥವರು ರಾಷ್ಟ್ರಪತಿಗಳಾಗಿರುವುದರಿಂದ ಸಂವಿಧಾನ…. ….’. ‘ಈಕರಣ’ ಪ್ರತ್ಯಯ ಸೇರಿಸಲಾಗದೆ ಬರೀ ‘ಕರಣ’ ಮಾತ್ರ ಸೇರಿಸಿದ ಉದಾಹರಣೆಗೆ ಮಾದರಿ. ಕೆಲವೊಂದು ಸಂದರ್ಭಗಳಲ್ಲಿ ‘ಈಕರಣ’ ಪ್ರತ್ಯಯ ಸೇರಿಸುವುದು ಸಾಧ್ಯವಾಗುವುದಿಲ್ಲ. ಉದಾ: ಒಂದು: ಹಿಂದೂಕರಣ. ಇಲ್ಲಿ ಕೇವಲ ‘ಕರಣ’ದಿಂದ ‘ಈಕರಣ’ದ ಅರ್ಥ ರೂಪಸಾದೃಶ್ಯದಿಂದ ಲಭಿಸುತ್ತದೆ. ಇಲ್ಲವಾದರೆ ‘ರಾಜಕೀಕರಣ’ ಎನ್ನಬೇಕಾಗುತ್ತದೆ. ಪದದ ಕೊನೆಯಕ್ಷರದ ಹಿಂದಿನ ಸ್ವರ ಈಕಾರಾಂತ ಆಗಿದ್ದರೆ ಅಥವಾ ಉಕಾರಾಂತವಾಗಿದ್ದರೆ ಈಕರಣ ಬಳಕೆ ಸಾಧ್ಯವಿಲ್ಲವೆನಿಸುತ್ತದೆ.

ರಾಜಧಾನಿಗರು ನಾ ಸಂಕ್ರಮಣ ರಾಜಧಾನಿಯಲ್ಲಿ ನೆಲೆ ನಿಂತವರು/ವಾಸಿಸುವ ಜನ. ‘ಈ ರಾಜಧಾನಿಗರ ಅನೇಕ ಹೇಳಿಕೆಗಳಲ್ಲಿ ದಾಸರ ಪದಗಳಲ್ಲಿಯ ಪಲ್ಲವಿಯಂತೆ…’. ‘ಗ’, ‘ಇಗ’ ಪ್ರತ್ಯಯದೊಡನೆ ಅನೇಕ ಪದಗಳನ್ನು ವ್ಯಕ್ತಿವಾಚಕವಾಗಿ ಬಳಸುವುದುಂಟು. ಉದಾ: ಸಂಗಡಿಗ, ದಾಂಡಿಗ, ಕೇಳುಗ, ನೋಡುಗ ಇತ್ಯಾದಿ. ಅದೇ ರೀತಿಯಲ್ಲಿ ಒಂದು ಸ್ಥಳದಲ್ಲಿ ವಾಸಿಸುವವರು ಎಂದು ಸೂಚಿಸಲೂ ‘ಇಗ’ ಬಳಕೆಯಲ್ಲುಂಟು. ಮೇಲಿನದು ಅಂತಹ ಒಂದು ಪ್ರಯೋಗ. ಮಾದರಿ: ಬೆಂಗಳೂರಿಗ, ಮೈಸೂರಿಗ, ಹಳ್ಳಿಗ, ಪಟ್ಟಣಿಗ.

ರಿಸ್ಕುಮಯ ನಾ ಪ್ರಜಾವಾಣಿ ತೊಂದರೆಯಿಂದ ಕೂಡಿರುವ. ‘….ಮಾರುಕಟ್ಟೆಯಲ್ಲಿ ಇವನ್ನು ಮಾರಿ ತಾವು ಕೊಟ್ಟ ಹಣವನ್ನು ಪಡೆದುಕೊಳ್ಳಬೇಕು. ರಿಸ್ಕು ಇದೆ. ವ್ಯವಹಾರವೇ ರಿಸ್ಕುಮಯ’ ಬೇರೆ ಭಾಷೆಯ ಪದಗಳೊಡನೆ ಪದ-ಪ್ರತ್ಯಯ ಸೇರಿಸಿ ಹೊಸ ಪದ ಸೃಷ್ಟಿ ಕನ್ನಡದಲ್ಲೂ ಇದೆ. ಈ ದಿಸೆಯಲ್ಲಿ ಬಂದಿರುವ ಪದ. ಆದರೂ ಇಂತಹ ಪದಗಳನ್ನು ಕೇವಲ ಲಘುಲೇಖನಗಳಲ್ಲಿ ಮಾತ್ರ ಕಾಣಬಹುದು.

ರೂಪದರ್ಶಿತ್ವ ನಾ ರೂಪದರ್ಶಿಯಾಗುವಿಕೆ. ‘…ಅದಕ್ಕೇ ನಾವು ವಿಶ್ವಕಪ್ಪು ಸೋತೆವು ಇತ್ಯಾದಿ ವ್ಯಂಗ್ಯ ಚಿತ್ರಗಳ ನಡುವೆಯೂ ಕ್ರಿಕೆಟ್ಟಿಗರ ರೂಪದರ್ಶಿತ್ವ ಮೂರ್ಖರ ಪೆಟ್ಟಿಗೆಯಲ್ಲಿ ಹಗಲಿರುಳೂ ಸುತ್ತುವಂತಾಯಿತು.’ ‘ರೂಪದರ್ಶಿ’ ಪದದ ಮುಂದುವರಿಕೆಯಾಗಿ ಬಂದಿರುವ ಮೇಲಿನ ಪ್ರಯೋಗಕ್ಕೆ ಮಾದರಿ ದೂರದರ್ಶಿತ್ವ ಇರಬಹುದೇನೋ?

ರೇಖೀಯ ಗು ತರಂಗ ರೇಖೆಗಳಂತಿರುವ; ರೇಖೆಯಾಕಾರದ. ‘ಅವು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುತ್ತವೆ. ಅವುಗಳ ಆಕಾರ ರೇಖೀಯ, ಕಿರಿಯಗಲ ದಾಗಿರುವ ಅವುಗಳ ಬಣ್ಣ ತಿಳಿ ಹಸಿರು’. ಬಹುಶಃ ಇಂಗ್ಲಿಶಿನ ‘ಲೀನಿಯರ್’ ಪದಕ್ಕೆ ಸಂವಾದಿಯಾಗಿ ಬಂದಿರಬೇಕು. ರೇಖೆ, ವೃತ್ತ, ಚೌಕ ಇತ್ಯಾದಿಗಳೊಡನೆ ಸಾಮಾನ್ಯವಾಗಿ ‘ಆಕಾರ’ ಪದ ಬಳಕೆಯಾಗುತ್ತಿದೆ

ರೋಗಸೂಚಕ ಗು ಜಾಹೀರಾತು ರೋಗದ ಸುಳಿವು ನೀಡುವ; ರೋಗವನ್ನು ಸೂಚಿಸುವ. ‘ಹಾನಿಕಾರಕ ರಾಸಾಯನಿಕಗಳು ಮತ್ತು ರೋಗಸೂಚಕ ಕೀಟಾಣುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಂತಹ…’. ‘ಸೂಚಕ’ ಪದಕ್ಕೆ ಸೂಚಿಸುವ, ಸುಳಿವನ್ನು  ನೀಡುವ ಎಂಬರ್ಥವಿದೆ. ಆದರೂ ಪ್ರಯೋಗ ಅಷ್ಟು ಸಮಂಜಸವಾಗಿ ಕಾಣದು. ಏಕೆಂದರೆ ಸುಳಿವನ್ನು ನೀಡುವ ಕೀಟಾಣುಗಳೇ ರೋಗ ತರುವ ಕೀಟಾಣುಗಳಾದ್ದರಿಂದ ರೋಗಕಾರಕ ಪ್ರಯೋಗ ಸೂಕ್ತವಾಗಬಹುದು. ಮಾದರಿ: ಸಂತಾಪಸೂಚಕ, ಶೋಕಸೂಚಕ.

ರೋದಕತೆ ನಾ ತರಂಗ ಪ್ರಲಾಪ, ಅಳುತ್ತಾ ಅಲವತ್ತು ಕೊಳ್ಳುವುದು. ‘ಹೊಟ್ಟೆಗೆ ಇಲ್ಲದ ಪರಿಸ್ಥಿತಿಯಲ್ಲಿ ಮಗಳನ್ನು ಬೇರೊಬ್ಬ ಸೂಕ್ತವರನನ್ನು ಹುಡುಕಿ ಮುವೆ ಮಾಡಲಾಗದ ಅಸಹಾಯಕತೆ. ಆ ಹಾಲುಗಲ್ಲದ ಹಸುಳೆಯನ್ನು ಕಡಲಾಚೆಯ ಕಾಮರೂಪಿ ಮುದುಕನಿಗೆ ಒಪ್ಪಿಸಲಾಗದ ರೋದಕತೆ’. ‘ರೋದನೆ’ ನಾಮಪದದಿಂದ ‘ರೋದಕ’ ಗುಣವಾಚಕ ರೂಪಿಸಿ ‘ತೆ’ ಪ್ರತ್ಯಯ ಸೇರಿಸಿ ಮತ್ತೊಂದು ನಾಮಪದ ರಚಿಸಲಾಗಿದೆ. ಮೇಲಿನ ಪ್ರಯೋಗದಿಂದ ಎರಡು ರೂಪಗಳ ಸೃಷ್ಟಿಯಾಯಿತೆನ್ನಬಹುದು.

 

ಲಂಚಾದಾಯ ನಾ ಕನ್ನಡ ಪ್ರಭ ಲಂಚದ ರೂಪದಲ್ಲಿ ಬರುವ ಆದಾಯ. ‘ಸಣ್ಣಪುಟ್ಟ ಕಛೇರಿಗಳ ಲಂಚಾದಾಯವೇ ಪ್ರತಿದಿನ ಒಂದು ಲಕ್ಷ ರೂಗಳಿಂದಾಗಿ ಆ ಅಧ್ಯಕ್ಷ ಮಹಾಶಯರು ಕನಿಷ್ಟಪಕ್ಷ…’ ಅನೀತಿಯುತವಾದ ಕಾರ್ಯವಾದುದರಿಂದ ಲಂಚವನ್ನು ಆದಾಯವೆಂದು ಎಲ್ಲೂ ಪರಿಗಣಿಸಿಲ್ಲ. ಮೇಲಿನ ಪ್ರಯೋಗದಲ್ಲಿ ಅದೊಂದು ಆದಾಯದ ಮೂಲವೆಂದು ಗಮನಿಸಲಾಗಿದೆ.

ಲಕ್ಷಾನುಲಕ್ಷ ಗು ಜಾಹೀರಾತು ಲಕ್ಷಾಂತರ ಎಂದು ಸೂಚಿಸುವ ಪದ. ‘…ಕೇವಲ ಎರಡು ಕೊಠಡಿಗಳಲ್ಲಿ ಆರಂಭವಾದ ಆಸ್ಪತ್ರೆ, ನೂರು ವರ್ಷಗಳಲ್ಲಿ ಲಕ್ಷಾನುಲಕ್ಷ ನೇತ್ರರೋಗಿಗಳಿಗೆ ಬೆಳಕಾಗಿದೆ.’ ‘ಹಂತಾನುಹಂತ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಅಲ್ಲಿ ಘಟ್ಟವನ್ನು ಕುರಿತು ಹೇಳಿದರೆ ಇಲ್ಲಿ ಲಕ್ಷದ ನಂತರದ ಗಣನೆಯನ್ನು ಹೇಳುತ್ತದೆ. ‘ಲಕ್ಷೋಪಲಕ್ಷ’, ‘ಲಕ್ಷಾಂತರ’ ಪದಗಳೂ ಬಳಕೆಯಲ್ಲಿವೆ.

ಲಗ್ಗೆಗಾರ ನಾ ಉದಯವಾಣಿ (ಕಾಲ್ಚೆಂಡಾಟದಲ್ಲಿ) ಪ್ರತಿಸ್ಪರ್ಧಿಯ ಆವರಣದೊಳಕ್ಕೆ ಚೆಂಡನೊಡನೆ ಮುನ್ನುಗ್ಗುವವನು. ‘ಸದ್ಯ ಎಫ್‌ಸಿ ಕೊಚ್ಚಿ ತಂಡದ ಸದಸ್ಯರಾಗಿರುವ ವಿಜಯನ್ ಲಬುಧಾಬಿಯಲ್ಲಿ ನಡೆದ ಏಶ್ಯ ಕಪ್ ಅರ್ಹತಾ ಕೂಟದಲ್ಲಿ ಐದು ರಾಷ್ಟ್ರಗಳ ಇಬ್ಬರು ಶ್ರೇಷ್ಠ ಲಗ್ಗೆಗಾರರಲ್ಲಿ ಒಬ್ಬರಂದು ಶ್ಲಾಘನೆ ಪಡೆದಿದ್ದಾರೆ, ‘ಗಾರ’ ಪ್ರತ್ಯಯದೊಡೆನ ಬಂದಿರುವ ಪದವಾದರೂ ಕ್ರೀಡೆಯಲ್ಲಿ ಸ್ಪಷ್ಟ ಅರ್ಥವನ್ನು ನೀಡಲಾರದು ಇದೇ ಅರ್ಥದಲ್ಲಿ ‘ಮುನ್ಪಡೆ ಆಟಗಾರ’ ಎಂಬುದಾಗಿ ಬಳಕೆಯಲ್ಲಿದೆ.

ಲೋಡುಗಟ್ಟಲೆ ಗು ಪ್ರಜಾವಾಣಿ ಒಟ್ಟಾದ ಅಳತೆಯನ್ನು ಸೂಚಿಸುವ ಪದ. ‘ಕಂಗೆಟ್ಟು ಹೋದ ಹೊಸದುರ್ಗ ತಾಲ್ಲೂಕಿನ ಕುರುಬರ ಹಳ್ಳಿ… ಮತ್ತೋಡು, ಶೆಟ್ಟಹಳ್ಳಿ ರೈತರು ಲೋಡುಗಟ್ಟಲೆ ತೆಂಗಿನಕಾಯಿಗಳನ್ನು ಒಂದೆಡೆ ರಾಶಿ ಹಾಕಿ ಸುಟ್ಟು….’ ‘ಗಟ್ಟಲೆ’ ಅಂತ್ಯವಾಗುಳ್ಳ ಅನೇಕ ಪದಗಳು ಪ್ರಮಾಣವನ್ನು ಸೂಚಿಸುತ್ತದೆ. ಉದಾ: ವರ್ಷಗಟ್ಟಲೆ, ದಿನಗಟ್ಟಲೆ, ಇತ್ಯಾದಿ. ಆದರೆ ಇಂಗ್ಲಿಶ್ ಪದದೊಡನೆ ‘ಗಟ್ಟಲೆ’ ಒಂದು ಹೊಸಪದ ಸೃಷ್ಟಿಯಾಗಿದೆ. ಇದೇ ರೀತಿಯ ಪದಗಳು ಕ್ವಿಂಟಾಲ್‌ಗಟ್ಟಲೆ, ಟನ್ನುಗಟ್ಟಲೆ.