ವಂದನಾರ್ಹ ಗು ಕನ್ನಡ ಪ್ರಭ ಹೊಗಳಲು ಅರ್ಹವಾದ. ‘ಮುಖ್ಯ ಮಂತ್ರಿಗಳು ಬೆಂಗಳೂರು ಹೊರವಲಯದ ೧೦೩ ಕೆರೆಗಳಲ್ಲಿ ಹೂಳನ್ನೆತ್ತಿ ಅಂತರ್ಜಲ ಅಭಿವೃದ್ಧಿಪಡಿಸಲು ಕಾರ್ಯಕ್ರಮ ಹಾಕಿಕೊಂಡಿರುವುದು ವಂದನಾರ್ಹ ವಿಷಯ, ‘ಸ್ತುತ್ಯರ್ಹ’ ಎಂಬ ಪದ ಈಗ ಬಳಕೆಯಲ್ಲಿದೆ. ಆದರೆ ಮೇಲಿನ ಪ್ರಯೋಗದ ಅರ್ಥ ಬೇರೆಯೇ ಇರುವಂತಿದೆ.

ವಂಶಕ್ಷಯ ನಾ ಉದಯವಾಣಿ ವಂಶ ಕ್ಷೀಣಿಸುತ್ತಿರುವುದು ಸಂತತಿಯ ಅಳಿವು ‘…ಸಯನೈಡ್ ತಿಸ್ಸಾ ನದಿಯನ್ನು ಕಲುಷಿತಗೊಳಿಸಿದೆ. ಅಲ್ಲಿಯ ಮೀನುಗಳನ್ನು ನುಂಗಿದರೆ ಈಗಾಗಲೇ ವಂಶಕ್ಷಯದಿಂದ ಅಪಾಯ ಎದುರಿಸುತ್ತಿರುವ ಈ ಡೇಗೆಗಳ ಸಂತಾನ ನಾಶವಾಗುವುದರಲ್ಲಿ ಸಂಶಯವಿಲ್ಲ…’ ವಂಶವೇ ಅಳಿದು ಹೋಗುತ್ತಿರುವುದನ್ನು ಸೂಚಿಸಲು ಸೃಷ್ಟಿಸಲಾದ ಹೊಸ ಪದ. ಸಾಮಾನ್ಯವಾಗಿ ಪ್ರಾಣಿ-ಪಕ್ಷಿಗಳನ್ನು ಕುರಿತಂತೆ ಬಳಸಲಾಗುತ್ತದೆ.

ವಕ್ತಾರಿಕೆ ನಾ ಕನ್ನಡ ಪ್ರಭ ಗುಂಪಿನ ಪ್ರತಿನಿಧಿಯಾಗಿ ಮಾತನಾಡುವ ಕೆಲಸ. ‘ಇತ್ತೀಚೆಗೆ ಸಂಯುಕ್ತರಂಗ ವಕ್ತಾರಿಕೆಯನ್ನು ಜನತಾದಳ ಜೈಪಾಲರೆಡ್ಡಿಯವರಿಂದ ಮಾರ್ಕ್ಸ್‌‌ವಾದಿ ಕಮ್ಯುನಿಸ್ಟ್ ನಾಯಕ ಹರಿಕಿಷನ್ ಸಿಂದ್ ಸುರ್ಜಿತ್ ವಹಿಸಿಕೊಂಡಂತಿದೆ.’ ಒಂದು ವೃತ್ತಿಯನ್ನು ಮಾಡುವುದು ಎಂಬರ್ಥದಲ್ಲಿ ಇಕೆ, ಪ್ರತ್ಯಯವನ್ನುಹಚ್ಚಿ ರೂಪಗಳನ್ನು ಸಾಧಿಸುವುದು ರೂಢಿಯಲ್ಲಿದೆ. ಉದಾಹರಣೆಗೆ ಮಾಸ್ತರು- ಮಾಸ್ರಿಕೆ, ಡಾಕ್ಟರ್ – ಡಾಕ್ಟರಿಕೆ, ಶ್ಯಾನುಭೋಗ- ಶ್ಯಾನುಭೋಗಿಕೆ ಇತ್ಯಾದಿ. ಆ ಮಾದರಿಯಲ್ಲೇ ಬಂದಿರುವ ಪದ ವಕ್ತಾರಿಕೆ.

ವಧಾಪಟ್ಟಿ ನಾ ಉದಯವಾಣಿ ಕೊಲ್ಲಬೇಕಾಗಿರುವವರ ಪಟ್ಟಿ. ‘ನಕ್ಸಲರ ವಧಾಪಟ್ಟಿಯಲ್ಲಿ ರಾವ್ ಅವರ ಹೆಸರಿರಲಿಲ್ಲ.’ ಇಂಗ್ಲಿಶಿನ ‘ಹಿಟಲಿಸ್ಟ್‌’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಕನ್ನಡ ರೂಪ.

ವಯೋವೃದ್ಧಾವಸ್ಥೆ ನಾ ಉದಯವಾಣಿ ತುಂಬಾ ವಯಸ್ಸಾದ ಸ್ಥಿತಿ. ‘ಈಗ ಕಾಲಿನ ತೊಂದರೆಯಿಂದ ವಯೋವೃದ್ಧಾವಸ್ಥೆಯಲ್ಲಿ ಶಾರೀರಿಕವಾಗಿ ದುಡಿಯಲು ಸಾಧ್ಯವಾಗದೆ… ವೃದ್ಧಾಶ್ರಮದಲ್ಲಿದ್ದಾರೆ’. ‘ವೃದ್ಧಾಪ್ಯ’ ಎಂಬುದು ಬದುಕಿನ ಅವಸ್ಥೆಗಳಲ್ಲೊಂದು. ಇದೇ ವಯಸ್ಸಾದ, ಮುಪ್ಪಾದ ಎಂಬುದನ್ನು ಸೂಚಿಸುತ್ತದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಸೂಚಿಸಲು ಮೇಲಿನ ಪ್ರಯೋಗ ಬಂದಿದೆ.

ವಸೂಲಿದಾರ ನಾ ಸುಧಾ ಕೊಡಬೇಕಾದ ಹಣ, ತೆರಿಗೆ ಇತ್ಯಾದಿಗಳನ್ನು ಒತ್ತಾಯದಿಂದ ಪಡೆದುಕೊಳ್ಳುವವ. ‘ಕೇವಲ ೧೦೦ ರೂಪಾಯಿಕೊಟ್ಟು ನೊಂದಾಯಿಸಿದರೆ ಮನೆಬಾಗಿಲಿಗೆ ವಸೂಲಿದಾರ ಡಬ್ಬ ಹೊತ್ತು ತರುತ್ತಾರಂತೆ’. -ದಾರ ಪ್ರತ್ಯಯದೊಡನೆ ಬಂದಿರುವ ಹೊಸ ಪದ.

ವರ್ಷಾಶನ ನಾ ಜಾಹೀರಾತು ವರ್ಷಕ್ಕೊಮ್ಮೆ ನೀಡುವ ಹಣ. ‘….ಹಾಗೂ ಮೃತ್ಯುವಶರಾದಾಗ ಬೋನಸ್ ಘೋಷಣಾ ಲಾಭಗಳು ಹಾಗೂ ಒಳ್ಳೆಯ ವರ್ಷಾಶನ ದರಗಳನ್ನು ಅನ್ವಯಿಸುವ ಸಾಧ್ಯತೆ.’ ‘ಮಾಸಾಶನ’ ಮಾದರಿಯಲ್ಲಿ ಬಂದಿರುವ ಪದ. ಆದರೆ ಇಲ್ಲಿ ‘ಆಶನ’ ಎಂಬುದಕ್ಕೆ ಅರ್ಥವಿಲ್ಲ. ಕೇವಲ ಇನ್ನೊಂದು ಪದವನ್ನು ಗಮನಿಸಿ ಹುಟ್ಟು ಹಾಕಲಾದ ಪದ.

ವ್ಯಕ್ತಿಮತ್ತೆ ನಾ ತುಷಾರ ವ್ಯಕ್ತಿತ್ವದ ಮಟ್ಟ. ‘….ಅಧಿಕಾರಾರೂಢ ಪ್ರತಿಷ್ಠಿತರು ಹೆಣ್ಣಿನ ಒಂದು ದೌರ್ಬಲ್ಯಕ್ಕೆ ತುತ್ತಾಗಿ ತಮ್ಮ ವ್ಯಕ್ತಿಮತ್ತೆಯನ್ನು ಕಳೆದುಕೊಳ್ಳಬೇಕಾದಂತಹ ಪ್ರಸಂಗಗಳು….’. ‘ಮತ್ತೆ’ಯನ್ನು ‘ಮಟ್ಟ’ ಸೂಚಿಸುವ ಪದವನ್ನಾಗಿ ಬಳಸಲಾಗುತ್ತಿದೆ. ಉದಾ: ಬುದ್ಧಿಮತ್ತೆ. ಇದೇ ಮಾದರಿಯನ್ನನುಸರಿಸಿ ಬಂದಿರುವ ಪದ. ಇಲ್ಲಿ ಮುಖ್ಯವಾಗಿ ವ್ಯಕ್ತಿತ್ವ ಎಂದು ಅರ್ಥಬರುವುದೇ ಹೆಚ್ಚು.

ವ್ಯಥನೀಯ ಗು ಉದಯವಾಣಿ ವ್ಯಥೆಯಿಂದ ಕೂಡಿದ, ದುಃಖದ. ‘ನೀರಾವರಿ ಯೋಜನೆಗಳ ವ್ಯಥನೀಯ ಕಥೆ’. ‘ಈಯ’ ಪ್ರತ್ಯಯಕ್ಕೆ ‘ಉಂಟು ಮಾಡುವ’ ಎಂಬರ್ಥವಿದೆ. ಮೇಲಿನ ಪ್ರಯೋಗದಲ್ಲಿ ‘ವ್ಯಥೆ’ ಪದಕ್ಕೆ ಬದಲಾಗಿ ‘ವ್ಯಥನ’ ಪದಕ್ಕೆ ಈಯ ಸೇರಿಸಿರುವುದು ಕಾಣುತ್ತದೆ. ಹೇಗೆ ಸಾಧ್ಯವಾಯಿತೋ ತಿಳಿದಿಲ್ಲ. ತಪ್ಪು ಪ್ರಯೋಗ.

ವ್ಯಥಿಸು ಕ್ರಿ ತರಂಗ ದುಃಖಪಡು. ‘ನಾವು ಇಷ್ಟೆಲ್ಲ ವರ್ಷ ಕಾಲೇಜಿನಲ್ಲಿ ಕಲಿತೆವು. ಆದರೂ ಯಾವ ಶಿಕ್ಷಕರೂ ಇದನ್ನು ಹೇಳಲಿಲ್ಲ ಸಾರ್ ಅಂತ ವ್ಯಥಿಸುತ್ತಾರೆ’. ‘ಇಸು’ ಪ್ರತ್ಯಯ ಬಳಸಿದ ಪ್ರಯೋಗ. ಆದರೂ ವ್ಯಥೆಪಡು ಬಳಕೆಯೇ ಹೆಚ್ಚು ಪ್ರಯೋಗದಲ್ಲಿದೆ. ಅಲ್ಲದೆ ಎಲ್ಲ ಪದಗಳಿಗೂ ‘ಇಸು’ ಪ್ರತ್ಯಯ ಬಳಕೆ ಸಾಧುವಲ್ಲ.

ವಾಕ್ಮಾಲಿನ್ಯ ನಾ ಸುಧಾ ಮಾತಿನಿಂದ ಉಂಟಾಗುವ ತೊಂದರೆ-ಕೊರೆಯುವಿಕೆ. ‘ಈ ಬಗೆಯ ವಾಕ್ ಮಾಲಿನ್ಯ ಮುಂದಿನ ತಿಂಗಳುಗಳಲ್ಲಿ ನಮ್ಮನ್ನು ತೀವ್ರವಾಗಿ ಕಾಡಲಿದೆ’. ‘ವಾಕ್’ ಪೂರ್ವಪದವನ್ನು ಹೊಂದಿ ಸಾಕಷ್ಟು ಪದಗಳು ಬಳಕೆಯಲ್ಲಿವೆ. ವಾಗ್ಯುದ್ದ, ವಾಗ್ವೈಭವ, ವಾಕ್ಚಾತುರ್ಯ ಇತ್ಯಾದಿ. ಸಾಮಾನ್ಯವಾಗಿ ಸಂಧಿಯಾಗುವುದೇ ಹೆಚ್ಚು. ಮೇಲಿನ ಪ್ರಯೋಗವೂ ಸಹಾ ವಾಗ್ಮಾಲಿನ್ಯ ಆಗಬಹುದಿತ್ತೇನೋ.

ವಾಕ್ಸಮರ ನಾ ಉದಯವಾಣಿ ಮಾತಿನ ಚಕಮಕಿ. ‘ಕರ್ನಾಟಕ ತಮಿಳುನಾಡು ಸದಸ್ಯರ ವಾಕ್ಸಮರ, ಗದ್ದಲ’, ‘ವಾಕ್’ ಪದದೊಂದಿಗೆ, ಇನ್ನೊಂದು ಪದ ಸೇರಿಸಿ ಸಮಾಸ ಪದ ರಚನೆ ಹೊಸತೇನಲ್ಲ. ಆದರೂ ‘ವಾಗ್ಯುದ್ಧ’ ಹೆಚ್ಚು ಬಳಕೆಯಲ್ಲಿರುವ ಪದ.

ವಾಕಿಂಗ್ದಾರ    ನಾ ಪ್ರಜಾವಾಣಿ ಗಾಳಿ ಸೇವನೆಗೆಂದು, ಆರೋಗ್ಯಕ್ಕೆಂದು ಅಡ್ಡಾಡುವವ ನಡೆಯುವವ. ‘ನಸುಕಿನ ವಾಕ್ ಗೆಂದು ಬಂದವರು…. ನಿಂತೇಬಿಟ್ಟರು. ಅಲ್ಲೀಗ ವಾಕಿಂಗ್‌ದಾರರಿಗೆ ಗಿಡಮೂಲಿಕೆ, ಹಸಿ ತರಕಾರಿಗಳ ರಸ ಉಣಬಡಿಸುತ್ತಿದ್ದಾರೆ…’ ಇಂಗ್ಲಿಶ್ ಪದದೊಂದಿಗೆ ಪರ್ಸೋ ಅರೇಬಿಕ್ ಪ್ರತ್ಯಯ ‘ದಾರ’ ಬಳಸಿ ತಂದಿರುವ ಪದ. ಲಘುಲೇಖನಗಳಲ್ಲಿ ಬಳಕೆ ಸಾಧ್ಯ.

ವಾಗ್ಪಟುತ್ವ ನಾ ಸಂಯುಕ್ತ ಕರ್ನಾಟಕ ಒಳ್ಳೆಯ ಮಾತುಗಾರಿಕೆ, ಮಾತಿನಲ್ಲಿ ಚತುರತೆ. ‘ಸ್ಥಳೀಯ ಜನತೇ ಎದ್ದು ನಿಂತು ರಾಜ್ಯವನ್ನು ಭಾರತಕ್ಕೆ ಸೇರಿಸಲು ಇಚ್ಛಿಸಿ ಜನಾಭಿಮತ ನೀಡಿದಾಗ ಅಲ್ಲಿ ಬಲವಂತದ ಪ್ರಶ್ನೆಯುಂಟಾಗಲಿಲ್ಲವೆಂದು…. ವಾಗ್ಪಟುತ್ವ ತೋರಿದರು’. ಉತ್ತಮವಾಗಿ ಮಾತನಾಡುವವನ್ನು ‘ವಾಗ್ಮಿ’ ಎಂದೂ ಉತ್ತಮ ಮಾತುಗಾರಿಕೆ, ವಾಕ್ಚಾತುರ್ಯವನ್ನು ‘ವಾಗ್ಮಿತೆ’ ಎಂದೂ ಹೇಳಲಾಗಿದೆ. ಮೇಲಿನ ಪ್ರಯೋಗ ‘ವಾಗ್ಮಿತೆ’ಗೆ ಸಮಾನಾರ್ಥಕವಾದ ‘ವಾಕ್ಪಟು’ ಪದಕ್ಕೆ ‘ತ್ವ’ ಪ್ರತ್ಯಯ ಸೇರಿಸಿ ಸೃಷ್ಟಿಸಲಾಗಿದೆ. ಪದವೇನೋ ಹೊಸದಾದರೂ ಸುತ್ತಿ ಬಳಸಿ ಹೇಳಲಾಗಿದೆ. ಅಲ್ಲದೆ ವಾಕ್ಪಟು ಸರಿಯಾದ ರೂಪ.

ವಾರಾನುವಾರ ನಾ ಸಂಕ್ರಮಣ ವಾರದ ನಂತರ ಬರುವ ಮತ್ತೊಂದು ವಾರ. ‘…. ಬಂದವನೆ ಉಶ್ಶಂತ ಕುಂತು ಒಪ್ಪಿಸುತ್ತಾನೆ ವಾರನುವಾರದ ವರದಿ…’ ಪುಂಖಾನುಪುಂಖ, ಕಾಲಾನುಕಾಲ ಮಾದರಿಯ ಪದಗಳ ಆಧಾರದ ಮೇಲೆ ರೂಪಿಸಲಾಗಿರುವ ಹೊಸ ಪದ. ‘ವಾರವಾರದ’ ಎಂಬ ರೂಪವೇ ಸಾಕಲ್ಲವೇ?

ವಾರಿಕ ಗು ಪುಸ್ತಕಮಾಹಿತಿ ವಾರಪತ್ರಿಕೆ. ‘ಕನ್ನಡ ವಾರಿಕಗಳಲ್ಲಿ ಪ್ರಮುಖ ಪತ್ರಿಕೆಯಾದ ‘ತರಂಗ’ದಲ್ಲಿ ಪ್ರಕಟವಾದ ಅಗ್ರಲೇಖನಗಳನ್ನು ಸಂತೋಷಕುಮಾರ ಗುಲ್ವಾಡಿ ‘ಅಂತರಂಗ-ಬಹಿರಂಗ’ವೆಂಬ ಹೆಸರಿನಲ್ಲಿ ಐದು ಸಂಪುಟಗಳನ್ನು ಈಗಾಗಲೇ ಹೊರತಂದಿದ್ದಾರೆ’. ದೈನಿಕ, ಮಾಸಿಕ, ಪಾಕ್ಷಿಕ ಇತ್ಯಾದಿ ರೂಪಗಳ ಆಧಾರದ ಮೇಎ ರಚಿತವಾಗಿರುವ ಪದ. ಈಗಾಗಲೇ ಸಾಪ್ತಾಹಿಕ ಪದ ಬಳಕೆಯಲ್ಲಿದೆ. ಅಲ್ಲದೆ ‘ವಾರಿಕ’ ಸರಿಯಾದ ಅರ್ಥ ನೀಡಬಲ್ಲುದೇ ಎಂಬುದು ಪ್ರಶ್ನೆ.

ವಾಹನೋದ್ಯಮ ನಾ ಪ್ರಜಾವಾಣಿ ವಾಹನಗಳನ್ನು ತಯಾರು ಮಾಡುವ ಉದ್ಯಮ. ‘ಭಾರತದ ವಾಹನೋದ್ಯಮ ನೀತಿ ‘ನಿಯಂತ್ರಿತ ಮತ್ತು ರಕ್ಷಣಾತ್ಮಕ ಎಂದು ಆರೋಪಿಸಿರುವ…. ಆಲೋಚಿಸುತ್ತಿದೆ.’ ಸಣ್ಣ ಪ್ರಮಾಣದ ಉತ್ಪಾದನೆಗೆ ‘ಕೈಗಾರಿಕೆ’ ಎಂದೂ,  ಬೃಹತ್‌ಪ್ರಮಾಣದಲ್ಲಿನ ಬಳಕೆಗೆ ‘ಉದ್ಯಮ’ ಎಂದೂ ಈಗ ಬಳಕೆಯಾಗುತ್ತಿರುವಂತಿದೆ. ಅಲ್ಲದೆ, ವಾಣಿಜ್ಯ-ವ್ಯವಹಾರಕ್ಕೆ ಸಂಬಂಧಿಸಿದುದನ್ನು ‘ಉದ್ಯಮ’ ಎಂದೂ ಕರೆಯಲಾಗುತ್ತಿದೆ. ಮಾದರಿ: ಕೇಂದ್ರೋದ್ಯಮ; ಪ್ರವಾಸೋದ್ಯಮ ಇತ್ಯಾದಿ.

ವ್ಯಾಪಾರೋದ್ಯಮಿ ನಾ ಸಂಯುಕ್ತ ಕರ್ನಾಟಕ ವ್ಯಾಪಾರದ ವಹಿವಾಟನ್ನು ವೃತ್ತಿಯನ್ನಾಗಿಸಿ ಕೊಂಡ ವ್ಯಕ್ತಿ. ‘ಜಾರ್ಜ್ ಡಬ್ಲ್ಯೂ ಬುಶ್ ವೃತ್ತಿಪರ ರಾಜಕಾರಣಿ. ಆದರೆ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು ವ್ಯಾಪಾರೋದ್ಯಮಿಯಾಗಿ.’ ‘ಕೈಗಾರಿಕೋದ್ಯಮಿ’ ಮಾದರಿಯನ್ನನುಸರಿಸಿ ಬಂದಿರುವ ಪದ. ಇಂಗ್ಲಿಶಿನ ‘ಬ್ಯುಸಿನೆಸ್‌ಮನ್’ ಎಂಬುದಕ್ಕೆ ಸಂವಾದಿಯಾಗಿರುವಂತಿದೆ.

ವ್ಯಾಪ್ತಿ ಬಾಹಿರ ನಾ ಕನ್ನಡ ಪ್ರಭ (ಅಧಿಕಾರದ) ಪರಿಧಿಯೊಳಗೆ ಬಾರದ್ದು, ವ್ಯಾಪ್ತಿಯಿಂದ ಹೊರತಾದದ್ದು, ‘ನ್ಯಾ. ಸಲ್ಡಾನಾ ಹೊರಡಿಸಿದ್ದ ೫೬ ಆಜ್ಞೆ ವ್ಯಾಪ್ತಿ ಬಾಹಿರ : ಸಂವಿಧಾನ ಪೀಠದ ಪ್ರಕಟನೆ.’ ‘ನಿಯಮ ಬಾಹಿರ’, ‘ಕಾನೂನು ಬಾಹಿರ’ ಮಾದರಿಯಲ್ಲಿ ಬಂದಿರುವ ಹೊಸ ಪದ.

ವಿಕ್ರಯಗಾರ ನಾ ಜಾಹೀರಾತು ಮಾರಾಟ ಮಾಡುವವ. ‘ಅಧಿಕೃತ ವಿಕ್ರಯಗಾರರು’. ‘ಮಾರಾಟಗಾರ’ ಎಂಬ ಪದ ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ವಿಕ್ರಯೋತ್ತರ ಗು ತರಂಗ ಮಾರಾಟದ ನಂತರ. ‘ಅವಶ್ಯ ಬಿದ್ದಾಗಲೆಲ್ಲಾ ಅದಕ್ಕೆ ಕೂಡಿಬಂದ ವಿಕ್ರಯೋತ್ತರ ಬೆಂಬಲ’, ‘ಮಾರಾಟ’ ಪದ ಹೆಚ್ಚಾಗಿ ಬಳಕೆಗೆ ಬಂದು ‘ವಿ‌ಕ್ರಯ’ ಪದವನ್ನು ಬಹುಪಾಲು ಹೊರದೂಡಿದೆ. ‘ಮಾರಾಟಾನಂತರ’ ಎಂಬುದು ಹೆಚ್ಚು ಬಳಕೆಯಲ್ಲಿರುವ ಪದ. ಸ್ವಾತಂತ್ರ್ಯೋತ್ತರ, ಮರಣೋತ್ತರ ಇತ್ಯಾದಿ ಪದಗಳ ಆಧಾರದ ಮೇಲೆ ರೂಪುಗೊಂಡ ಪದ.

ವಿಜಯವಂತ ನಾ ಸಂಯುಕ್ತ ಕರ್ನಾಟಕ ಗೆಲುವನ್ನು ಪಡೆದಾತ. ಗೆದ್ದವ್ಯಕ್ತಿ. ‘…ಗ್ಯಾರಿ ಕಾಸ್ಟರೋವ್ ರಷ್ಯದಲ್ಲಿರಬಹುದು… ಚೆಸ್ ಪ್ರಶಸ್ತಿ ತಮ್ಮ ಮಿತ್ರ ಕ್ರಾಮ್ನಿಕ್ ಕಪಾಟದಲ್ಲಿ ಭದ್ರಪಡಿಸಿದ್ದೇನೆ ಎಂದು ಹೇಳಬಹುದು. ಆದರೆ ಭಾರತ ಗ್ರಾಂಡ್ ಮಾಸ್ಟರ್ ವಿಶ್ವಸಮರದಲ್ಲಿ ವಿಜಯವಂತರಾಗಿದ್ದಾರೆ.’ ‘ವಂತ’ ತದ್ಧಿತ ಪ್ರತ್ಯಯವಿದ್ದರೂ ವಿಜಯವನ್ನು ಕುರಿತಂತೆ ಹೇಳುವಾಗ ‘ಶಾಲಿ’ ಪ್ರತ್ಯಯವೇ ಬಳಕೆಯಾಗುತ್ತದೆ. ಉದಾ: ಜಯಶಾಲಿ, ವಿಜಯಶಾಲಿ ಎಂಬುದು ಸರಿಯಾದ ಬಳಕೆ.

ವಿತರಣಗಾರಿಕೆ ನಾ ಜಾಹೀರಾತು ವಿತರಣೆ ಮಾಡುವ ಹಕ್ಕು, ಅಧಿಕಾರ. ‘ಅರ್ಜಿದಾರರಿಗೆ ಚಾಲ್ತಿ ಶರ್ತ ಹಾಗೂ ನಿಯಮಗಳನ್ವಯ ವಿತರಣಗಾರಿಕೆ ನೀಡಲಾಗುತ್ತದೆ’. ಇಂಗ್ಲಿಶಿನ ‘ಡಿಸ್ಟ್ರಿಬ್ಯೂಟರ್‌ಶಿಪ್’ ಎಂಬುದಕ್ಕೆ ಸಂವಾದಿಯಾಗಿ ರೂಪಿಸಿರುವ ಕನ್ನಡ ಪದ.

ವಿದ್ಯಾಂಗ ನಾ ಉದಯವಾಣಿ ವಿದ್ಯಾ ಇಲಾಖೆ. ‘ಜಿಲ್ಲಾ ಪಂಚಾಯತ್‌ನ ನಿರ್ಣಯವನ್ನು ಧಿಕ್ಕರಿಸಿ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಪ್ಪು ಮಾಹಿತಿ ನೀಡಿದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರನ್ನು…’. ಸಾಮಾನ್ಯವಾಗಿ ‘ಇಲಾಖೆ’ ಪದವನ್ನು ಬಳಸಲಾಗುತ್ತದೆ. ಆದರೆ, ಇಲ್ಲಿ ನ್ಯಾಯಾಂಗ ಪದವನ್ನು ಗಮನಿಸಿ ಪದ ಸೃಷ್ಟಿ ಮಾಡಲಾಗಿದೆ. ಪ್ರತಿಯೊಂದನ್ನು ಅಂಗ ಎಂದು ಪರಿಗಣಿಸಲು ಸಾಧ್ಯವಾಗದು ಎಂದು ತೋರುತ್ತದೆ.

ವಿದ್ಯಾಸಕ್ತ ನಾ ತರಂಗ ಶಿಕ್ಷಣದ ಬಗ್ಗೆ ಚಿಂತನೆ ಮಾಡುವವರು. ‘ನಮ್ಮ ದೇಶಕ್ಕೊಪ್ಪುವ ಶಿಕ್ಷಣ ಪ್ರಣಾಳಿಕೆ ಎಲ್ಲಿದೆ, ವಿದ್ಯಾಸಕ್ತರು ಎಷ್ಟಿದ್ದಾರೆ.’ ‘ಸೇವಾಸಕ್ತ’, ‘ಕಲಾಸಕ್ತ’ ಮಾದರಿಯಲ್ಲಿ ಬಂದಿದೆ. ಆದರೆ ಮೇಲಿನ ಪದದಲ್ಲಿ ಮೇಲ್ನೋಟಕ್ಕೆ ಸ್ಫುರಿಸುವ ಅರ್ಥವೇ ಬೇರೆ ಎನ್ನಿಸುತ್ತದೆ. ವಿದ್ಯೆಯಲ್ಲಿ ಆಸಕ್ತಿ ಇರುವವ, ವಿದ್ಯಾರ್ಥಿ.

ವಿದೇಶೀತನ ನಾ ಉದಯವಾಣಿ ಪರಕೀಯ, ಹೊರದೇಶದವ. ‘ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾರ ವಿದೇಶೀತನ ಪ್ರಶ್ನಿಸಿದ ಶರದ್ ಪವಾರ್, ಪಿ.ಎ.ಸಂಗ್ಮಾ ಮತ್ತು ತಾರೀಕ್ ಅನ್ವರ್‌ರನ್ನು ಹೈಕಮಾಂಡ್‌…’. ‘ವಿದೇಶೀಯತೆ’ ಪದ ಬಳಕೆಯಲ್ಲಿದೆ. ಆದರೂ ಇತ್ತೀಚೆಗೆ ‘ತನ’ ‘ತೆ’ ಪ್ರತ್ಯಯಗಳ ಬಳಕೆಯಲ್ಲಿ ನಿರ್ದಿಷ್ಟತೆಯಿಲ್ಲದಿರುವುದು ಕಂಡುಬರುತ್ತಿದೆ.

ವಿಧ್ವಂಸಕತೆ ನಾ ಸಂಯುಕ್ತ ಕರ್ನಾಟಕ ಹಾಳುಮಾಡುವಿಕೆ; ನಾಶ ಮಾಡುವಂತಹುದು. ‘ಜಮ್ಮು-ಕಾಶ್ಮೀರ ಪ್ರದೇಶದೊಳಗೆ ವಿಧ್ವಂಸಕತೆ ಹಾಗೂ ತನ್ಮೂಲಕ ಅರಾಜಕತೆಯ ದುರುದ್ದೇಶದಿಂದ ಉಗ್ರಗಾಮಿಗಳನ್ನು ಕಳಿಸಿರುವುದು ನಿರ್ವಿವಾದ.’ ಗುಣವಾಚಕದಿಂದ ನಾಮಪದವನ್ನು ಪಡೆಯಲು ‘ತೆ’ ಪ್ರತ್ಯಯ ಬಳಸಲಾಗಿದೆ. ‘ವಿಧ್ವಂಸಕ’ ನಾಮಪದವೂ ಹೌದು. ಆದರೆ ಗುಣವಾಚಕವಾಗಿ ಬಳಸುವುದು ಹೆಚ್ಚಾದ ಕಾರಣ ‘ತೆ’ ಪ್ರತ್ಯಯ ಬಳಕೆ ಮಾಡಲಾಗಿದೆ.

ವಿನಯಶಾಲೀನತೆ ನಾ ಸುಧಾ ಒಳ್ಳೆಯತನದಿಂದ ಕೂಡಿರುವಿಕೆ. ‘ವಿನಯಶಾಲೀನತೆಯ ಮೊದಲ ಲಕ್ಷಣ ಅಹಂ ವರ್ಜನೆ’. ‘ತೆ’ ಪ್ರತ್ಯಯ ಬಳಸಿ ನಾಮಪದ ಸೃಷ್ಟಿಸಲು ಪ್ರಯತ್ನಿಸಲಾಗಿದೆ. ಆದರೆ ಪ್ರತ್ಯಯವನ್ನು ಹತ್ತಿಸಿರುವ ಪದದ ಬಗ್ಗೆ ಗೊಂದಲವಿದೆ. ‘ವಿನಯಶಾಲೀನ’ ಪದವಿಲ್ಲ. ವಿನಯಶಾಲಿ ಪದಕ್ಕೆ ‘ತೆ’ ಹತ್ತಿಸುವುದು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ ‘ತನ’ ಪ್ರತ್ಯಯ ಹತ್ತಿಸಿದರೆ ಸೂಕ್ತವಾಗುತ್ತಿತ್ತು.

ವಿನಾಶೀಕರಣ ನಾ ಪ್ರಜಾವಣಿ ನಾಶಗೊಳಿಸುವುದು. ‘ಈಗಂತೂ ಎಲ್ಲೆಲ್ಲೂ ‘ಜಾಗತೀಕರಣ’ದ ಮಂತ್ರ. ಈ ಜಾಗತೀಕರಣದ ಫಲ ವಿನಾಶೀಕರಣ ಎಂಬುದರಲ್ಲಿ ಸಂಶಯವಿಲ್ಲ.’ ‘ಈಕರಣ’ ಪ್ರತ್ಯಯವಿರುವ ಮತ್ತೊಂದು ಪದ. ವಿನಾಶ ಎಂಬುದೇ ಸಾಕು. ಆದರೆ ಪ್ರಾಸ ತರುವ ಉದ್ದೇಶದಿಂದ ಈಕರಣ ಸೇರಿಸಿರಬಹುದು. ಮಾದರಿ: ಸರಳೀಕರಣ, ಜಾಗತೀಕರಣ.

ವಿನಿಮಯಿಸು ಕ್ರಿ ಜಾಹೀರಾತು ಒಂದರ ಬದಲಾಗಿ ಇನ್ನೊಂದು ವಸ್ತುವನ್ನು ಪಡೆಯುವುದು. ‘ಧಾವಿಸಿ! ನಿಮ್ಮ ಖಾಲಿಯಾದ ಫಿನಾಲ್ ಬಾಟಲಿ ವಿನಿಮಯಿಸಿ ನಿಮ್ಮ ಸಮೀಪದ ರೀಟೆಲ್ ಅಂಗಡಿಯಲ್ಲಿ….. ಪಡೆಯಿರಿ’. ನಾಮಪದಕ್ಕೆ ‘ಇಸು’ ಪ್ರತ್ಯಯ ಸೇರಿಸಿ ಕ್ರಿಯಾಪದವನ್ನಾಗಿಸಿದ ಮಾದರಿ.

ವಿಪಣೀಕರಣ ನಾ ಉದಯವಾಣಿ ಕ್ರೀಡೆಯಲ್ಲಿ ಹಣದ ಬಾಜಿಯಿಲ್ಲದಂತೆ ಮಾಡುವುದು. ‘ಕ್ರೀಡೆಯ ವಿಪಣೀಕರಣ ಮುಖ್ಯ….’ ಇಂಗ್ಲಿಶಿನ ‘ಮ್ಯಾಚ್ ಫಿಕ್ಸಿಂಗ್‌’ಗೆ ಸಂವಾದಿಯಾಗಿ ‘ಪಣೀಕರಣ’ ಪ್ರಯೋಗವಾದಂತಿದೆ. ‘ಪಣ’ ಎಂಬುದಕ್ಕೆ ಇಲ್ಲಿ ‘ಹಣ’ ಎಂಬರ್ಥ ನೀಡಿ, ‘ವಿ’ ಉಪಸರ್ಗ ವಿರುದ್ಧ ಪದ ಸೃಷ್ಟಿಸಿ ‘ಈಕರಣ’ ಪ್ರತ್ಯಯದೊಂದಿಗೆ ಬಳಸಲಾಗಿದೆ. ಆದರೂ ಅರ್ಥವಾಗುವುದು ಕಷ್ಟ. ‘ಪಣ’ ಎಂಬುದಕ್ಕೆ ಬಾಜಿ ಎಂಬರ್ಥವೂ ಇರುವುದನ್ನು ಗಮನಿಸಬಹುದು. ಈ ಬಗೆಗೆ ಯೋಚಿಸಬೇಕಾಗಿದೆ.

ವಿಭಜನೋತ್ತರ ಗು ಉದಯವಾಣಿ ವಿಭಜನೆಯ ನಂತರದ. ‘ಬೊಳುವಾರರಿಗೆ ವಿಭಜನೋತ್ತರ ಭಾರತದ ಕೋಮು ಸಂಬಂಧದ ಬಗ್ಗೆ ಗುಮಾನಿ’. ‘ಉತ್ತರ’ ಪದದೊಡನೆ ಬಂದಿರುವ ಹೊಸ ಪದ. ಮಾದರಿ: ಸ್ವಾತಂತ್ರ್ಯೋತ್ತರ, ಮರಣೋತ್ತರ.

ವಿಮಾನಾಪರಾಧ ನಾ ಉದಯವಾಣಿ ವಿಮಾನ ಪ್ರಯಾಣದ ಸಂದರ್ಭದಲ್ಲಿ ಹಾಗೂ ವಿಮಾನದ ಮೂಲಕ ನಡೆಯುವ ಅಪರಾಧಗಳು. ‘ವಿಮಾನಾಪರಾಧಗಳು’. ವಿಮಾನ ಅಪಹರಣ, ಮಾದಕ ವಸ್ತುಗಳ ಕಳ್ಳಸಾಗಣೆ, ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ತಂದಿರುವ ಪದ. ಮೇಲ್ನೋಟಕ್ಕೆ ವಿಮಾನವೇ ಅಪರಾಧ ಮಾಡಿದಂತೆ ಗೋಚರಿಸುತ್ತದೆ (ಗಮನಿಸಿ ಬಾಲಾಪರಾಧ). ಬೇರಾವುದೇ ವಾಹನದೊಡನೆ ಅಪರಾಧವನ್ನು ಸೇರಿಸಿ ಪದರಚನೆಯಾಗಿಲ್ಲವೆಂಬುದನ್ನು ಗಮನಿಸಬಹುದು.

ವಿಮಾನಾಪಹಾರಕ ನಾ ಉದಯವಾಣಿ ವಿಮಾನ ಅಪಹರಣ ಮಾಡಿದವ. ‘ವಿಮಾನಾಪಹಾರಕನ ದೋಷಮುಕ್ತಿ’. ‘ವಿಮಾನ ಅಪಹರಣಕಾರ’ ಎಂಬುದೇ ಪ್ರಚಲಿತವಿರುವ ಪ್ರಯೋಗ. ‘ಅಪಹರಣ’ದಿಂದ ‘ಅಪಹಾರಕ’ ಎಂಬ ವ್ಯಕ್ತಿಸೂಚಿ ಪದವನ್ನು ಸೃಷ್ಟಿಸಲಾಗಿದೆ.

ವಿಮಾನಗಳ್ಳ ನಾ ಉದಯವಾಣಿ ವಿಮಾನವನ್ನು ಅಪಹರಿಸಿರುವವನು. ‘ವಿಮಾನಗಳ್ಳರಿಗೆ ನೆರವು ನೀಡಿದ ಚುನಾವಾಲಾನಿಗೆ ಜಾಮೀನು ನಕಾರ’. ‘ಕಳ್ಳ’ ಪದಕ್ಕೆ ಅಪಹರಿಸಿರುವವನು, ಕದ್ದಿರುವವನು ಎಂಬುದಾಗಿ ಅರ್ಥವಿದ್ದರು, ಕಾಣದಂತೆ ಅಪಹರಿಸುವುದನ್ನು ಕಳ್ಳತನ ಎಂಬುದಾಗಿಯೂ ಬಳಕೆಯಲ್ಲಿದೆ. ವಿಮಾನವನ್ನು ಅಪಹರಿಸುವುದನ್ನು ಅಪಹರಣ ಎನ್ನಬಹುದೇ ಹೊರತು ಕಳ್ಳತನ ಎನ್ನಲಾಗದು. ಆದ್ದರಿಂದ ಮೇಲಿನ ಪ್ರಯೋಗ ಸಮಂಜಸವೇ? ಆದರೂ ಈಗಾಗಲೇ ನೆಲಗಳ್ಳ ಎಂಬ ಪದವೂ ಬಳಕೆಯಾಗಿದೆ.

ವಿಮಾನೋಡ್ಡಾಣ ನಾ ಸಂಯುಕ್ತ ಕರ್ನಾಟಕ ವಿಮಾನ ಹಾರಾಟ. ‘….ಅವರ ಪರ ಪ್ರಚಾರಕ್ಕಾಗಿ ಕೇಂದ್ರ ವಿಮಾನೋಡ್ಡಾಣ ಸಚಿವ….’. ‘ವಿಮಾನಯಾನ’ ಎಂಬುದು ಸರಿಯಾದ ಪ್ರಯೋಗ ಉಡ್ಡಯನ ಕೇವಲ ಹಾರಾಟಕ್ಕೆ, ಹಾರಿಸುವುದಕ್ಕೆ ಸೀಮಿತವಾಗಿರುವಂಥದ್ದು. ಉದಾಃ ಉಪಗ್ರಹ ಉಡ್ಡಯನ, ರಾಕೆಟ್ ಉಡ್ಡಯನ ಇತ್ಯಾದಿ.

ವಿರಾಗತ್ವ ನಾ ಕರ್ಮವೀರ ವೈರಾಗ್ಯ. ‘ತಮ್ಮಲ್ಲಿನ ವಿರಾಗತ್ವವನ್ನು ಮತ್ತೊಮ್ಮೆ ಅವರು ಆತ್ಮ ವಿಮರ್ಶೆಗೊಡ್ಡಿಕೊಂಡಿರಲಿಕ್ಕೂ ಸಾಕು’. ಸೂಕ್ತಪದಗಳಿದ್ದರೂ ಒಮ್ಮೊಮ್ಮೆ ಹೊಸ ಪದ ಸೃಷ್ಟಿಸುವುದಕ್ಕೆ ಇದು ಉದಾಹರಣೆ. ‘ವೈರಾಗ್ಯ’ ಪದವಿದ್ದರೂ ವಿರಾಗಕ್ಕೆ ‘ತ್ವ’ ಪ್ರತ್ಯಯ ಸೇರಿಸಿ ನಾಮಪದ ಸೃಷ್ಟಿಸಲಾಗಿದೆ.

ವಿಲಯನ ನಾ ಉದಯವಾಣಿ ಸೇರ್ಪಡೆ; ಐಕ್ಯವಾಗುವಿಕೆ. ‘….ಸಮತಾ ಪಾರ್ಟಿ, ಲೋಕಶಕ್ತಿ, ಬಿಜೆಪಿ ಮತ್ತು ಜನತಾದಳದ ಒಂದು ಗುಂಪು ಏಕಪಕ್ಷವಾಗಿ ವಿಲಯನಗೊಳ್ಳುವ ನಿಟ್ಟಿನಲ್ಲಿ ಇಂದು….’. ‘ವಿಲೀನ’ ಪದಕ್ಕೆ ಪರ್ಯಾಯವಾಗಿ ಬಳಸಿರುವ ಪದ. ಆದರೆ, ನಿಷ್ಪತ್ತಿ ಹೇಗೆ ಎಂಬುದು ತಿಳಿದುಬರುತ್ತಿಲ್ಲ. ‘ವಿಲಯ’ ಎಂಬ ಪದವೊಂದಿದ್ದು ಅದಕ್ಕೆ ನಶ ಎಂಬರ್ಥವಿದೆ.

ವಿಲೀನತೆ ನಾ ಸಂಯುಕ್ತ ಕರ್ನಾಟಕ ಸೇರಿಕೊಳ್ಳುವಿಕೆ, ಐಕ್ಯವಾಗುವಿಕೆ. ‘ಈ ಹಿನ್ನೆಲೆಯಲ್ಲಿ ಸೇವಾ ವಿಲೀನತೆಯನ್ನು ರದ್ದುಗೊಳಿಸಬೇಕೆಂದು ಸಂಘವು ಆಯೋಗವನ್ನು ಒತ್ತಾಯಿಸಿದೆ.’ ‘ತೆ’ ಪ್ರತ್ಯಯ ಬಳಸಿ ಇಂಗ್ಲಿಶಿನ ‘ಅಬ್ಸಾರ್‌ಪ್ಯನ್‌’ ಪದಕ್ಕೆ ಸಂವಾದಿಯಾಗಿ ಬಳಸಿರುವ ಪದ. ಇಂಗ್ಲಿಶಿನ ಇನ್ನೊಂದು ಪದ (ಮರ್ಜರ್)ಕ್ಕೂ ಇದೇ ಆಗಬಹುದು.

ವಿವಿಧೀಕರಿಸು ಕ್ರಿ ಜಾಹೀರಾತು ನಾನಾ ಬಗೆಯಾಗಿ ಮಾಡು; ಹಲವು ವಿಧಗಳಲ್ಲಿ ಮಾಡು. ‘…..ಸಂಸ್ಥಾಪಕರು ಈಗ ತಮ್ಮ ಕಾರ್ಯಕಲಾಪಗಳನ್ನು ಹೊಟೇಲ್, ಸಾರಿಗೆ ಮತ್ತು ಆಹಾರ ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ವಿವಿಧೀಕರಿಸಲು ಪ್ರೋತ್ಸಾಹನೆ ಪಡೆದಿದ್ದಾರೆ’. ‘ಈಕರಿಸು’ ಪ್ರತ್ಯಯ ಬಳಸಿದ ಮತ್ತೊಂದು ಪ್ರಯೋಗ. ಅರ್ಥದ ಬಗ್ಗೆ ಸಂದಿಗ್ಧತೆಯಿದೆ. ಸಾಧ್ಯತೆ; ವಿವಿಧೀಕರಣ.

ವಿಶ್ವಪ್ರಸಿದ್ದೆ ನಾ ಸುಧಾ ಎಲ್ಲೆಡೆಯೂ ಪರಿಚಿತೆ; ಎಲ್ಲರಿಗೂ ತಿಳಿದಿರುವವಳು, ಖ್ಯಾತಳು. ‘ಅಧ್ಯಕ್ಷ ಕೆನಡಿಯ ಪತ್ನಿ, ಈ ಕೆನಡಿಯ ತಾಯಿ, ವಿಶ್ವ ಪ್ರಸಿದ್ಧೆ’. ಸ್ತ್ರೀಲಿಂಗ ಸೂಚಕವಾಗಿ ‘ಎ’ ಪ್ರತ್ಯಯ ಬಳಸಿ ತಂದಿರುವ ಪದ.

ವಿಶ್ವಾಭಿಪ್ರಾಯ ನಾ ಕನ್ನಡ ಪ್ರಭ ಪ್ರಪಂಚದಾದ್ಯಂತದ ಜನರ ಅನಿಸಿಕೆ. ‘ಹಾಗೆಯೇ ಕಟ್ಟಡಗಳನ್ನು ಹೇಗೆ ಉಗ್ರವಾದಿಗಳು ವಿಮಾನ ಡಿಕ್ಕಿ ಹೊಡಿಸಿ ಉರುಳಿಸಿದರು ಎನ್ನುವುದನ್ನು ತೋರಿಸಿ ಇಡೀ ಪ್ರಪಂಚವೇ ಉಗ್ರವಾದಿಗಳ ವಿರುದ್ಧ ಹೋರಾಡಲು ವಿಶ್ವಾಭಿಪ್ರಾಯ ಮೂಡಿಸಿದವು.’ ‘ಜನಾಭಿಪ್ರಾಯ’ ಮಾದರಿಯಲ್ಲಿ ಬಂದಿರುವ ಪದ. ಜನರು, ಪ್ರಜೆಗಳ ಅಭಿಪ್ರಾಯವನ್ನು ಗಮನಿಸಿ ಪದರಚನೆ ಆಗುತ್ತಿತ್ತು. ಮೇಲಿನ ಪ್ರಯೋಗದಲ್ಲಿ ಜನರ ಅಭಿಪ್ರಾಯವೇ ಲಕ್ಷಣಾರ್ಥದಲ್ಲಿ ಬಳಕೆಯಾಗಿದೆ.

ವಿಶೇಷಗಟ್ಟಲೆ ನಾ ತುಷಾರ ವಿಶೇಷವಿರುವ, ಅಧಿಕ್ಯದ. ‘ಮಗುವನ್ನೆತ್ತಿ ಮೆಟ್ಟಿಲಿಳಿದ ಪುಟ್ಟಮ್ಮತ್ತೆ ರಂಗಪ್ಪಯ್ಯನ ಮನೆಗೆ ಖಾಯಂ ಆದಳು. ಎಲ್ಲಿಯವರೆಗೆ ಅಂದರೆ ಅವಳು ವಿಶೇಷಗಟ್ಟಲೆಯ ಅಡುಗೆಗೋ ಊಟಕ್ಕೋ ಇನ್ನೊಬ್ಬರ ಮನೆಗೆ ಹೋದಳೆಂದರೆ….’ ಹೆಚ್ಚುಗಟ್ಟಲೆ ಬಳಕೆಯ ಪದ. ಇಲ್ಲಿ ‘ಎಂದಿನಂತಲ್ಲದ’ ಎಂದು ಸೂಚಿಸಲು ‘ವಿಶೇಷಗಟ್ಟಲೆ’ ಬಳಸಿರುವುದು ಸಾಧ್ಯ. ಬರಿಯ ‘ವಿಶೇಷ’ ಮಾತ್ರ ಮೇಲಿನ ವಾಕ್ಯದಲ್ಲಿ ಸಾಕಿತ್ತು. ನೋಡಿ : ಏನಿವತ್ತು ವಿಶೇಷ? ಹೀಗೆಂದರೆ ಸಂದರ್ಭಾನುಸಾರ ವಿಶೇಷ ಅಡುಗೆ ಎಂಬ ಅರ್ಥವೇ ಬರುತ್ತದೆ.

ವಿಶೇಷೀಕರಣ ನಾ ಪುಸ್ತಕ ಮಾಹಿತಿ ವಿಶೇಷಗೊಳಿಸುವುದು. ‘ಮೇಲ್ವರ್ಗದ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಪರಿಕಲ್ಪನೆಗಳನ್ನು ಪ್ರಶ್ನಿಸಿದ ದಲಿತ-ಬಂಡಾಯ ಲೇಖಕರಾರೂ “ಸೃಜನಶೀಲ”ತೆಯ ವಿಶೇಷೀಕರಣವನ್ನು ಪ್ರಶ್ನಿಸಲಿಲ್ಲ. ಸ್ಪೆಶಲೈಜೇಶನ್ ಪದಕ್ಕೆ ಸಂವಾದಿಯಾಗಿ ಬಳಸಲಾಗಿದೆ. ‘ಈಕರಣ’ ಪ್ರತ್ಯಯ ಹಚ್ಚಿ ಅನೇಕ ಪದಗಳನ್ನು ಸೃಷ್ಟಿಸಲಾಗುತ್ತಿದೆ. ಮಾದರಿ: ನಗರೀಕರಣ, ಸರಳೀಕರಣ.

ವಿಷಾದಾರ್ಹ ನಾ ಉದಯವಾಣಿ ದುಃಖವನ್ನುಂಟು ಮಾಡಬಲ್ಲುದು. ‘….ವರ್ಷದ ಅವಧಿಯಲ್ಲಿ ಕ್ಯಾಥೋಲಿಕ್ ಯಹೂದಿ ಸಂಬಂಧ ಪ್ರಗತಿ ಹೊಂದಿರುವುದರ ಹಿನ್ನೆಲೆಯಲ್ಲಿ ಈ ಕೃತ್ಯ ವಿಷಾದಾರ್ಹ ಎಂದು ಇಸ್ರೇಲ್ ಸರಕಾರ ಹೇಳಿದೆ. ‘ಚಿಂತನಾರ್ಹ’ ‘ಪೂಜಾರ್ಹ’ ಇತ್ಯಾದಿ ಪದಗಳ ಮಾದರಿಯಲ್ಲಿ ಬಂದಿರುವ ಪದ.

ವಿಳಂಬೇಶ್ವರ ನಾ ಸುಧಾ ಅನಗತ್ಯ ತಡ ಮಾಡುವುದು, ನಿಧಾನ ಮಾಡುವುದು. ‘ಕಾನೂನು ‘ವಿಳಂಬೇಶ್ವರ ಪ್ರಸನ್ನ’ವಾಗಿದೆಯಲ್ಲ ಅದಕ್ಕೆ!’. ನಿಧಾನ ಪ್ರವೃತ್ತಿಯನ್ನು ಸೂಚಿಸಲು ಬಳಸಲಾದ ಪದ. ಕಟಕಿಯಾಡಲು ಜೊತೆಗೆ ‘ಈಶ್ವರ’ನನ್ನು ಸಹಾ ಸೇರಿಸಿಕೊಳ್ಳಲಾಗಿದೆ.

ವೀಕ್ಷಣಾರ್ಹ ಗು ಕನ್ನಡ ಪ್ರಭ ನೋಡಬಹುದಾದ, ನೋಡಲು ಯೋಗ್ಯವಾದ. ‘ಚಿತ್ರ ವೀಕ್ಷಣಾರ್ಹವಾದರೂ ಮಹಿಳಾ ಶೋಷಣೆ, ಸಮಾನತೆ ಇವೆಲ್ಲ ಅರ್ಥಹೀನ ಕ್ಲೀಷೆ’. ಸ್ವೀಕಾರಾರ್ಹ, ಅಂಗೀಕಾರಾರ್ಹ ಇತ್ಯಾದಿ ಪದಗಳ ಮಾದರಿಯನ್ನನುಸರಿಸಿ ಬಂದಿರುವ ಪದ.

ವೀರಪ್ಪನೀಕರಣ ನಾ ಉದಯವಾಣಿ ವೀರಪ್ಪನ್ ಛಾಪು ಪ್ರಭಾವ ಮೂಡಿಸುವುದು, ವೀರಪ್ಪನ್ನನ್ನು ಅನುಕರಿಸುವುದು. ‘ರಾಜಕಾರಣದ ಪಾತಕೀಕರಣದ ಮುಂದಿನ ಹಂತವೇ, ರಾಜಕಾರಣದ ವೀರಪ್ಪನೀಕರಣ (ವೀರಪ್ಪನೈಸೇಶನ್). ವ್ಯಕ್ತಿಯ ಹೆಸರಿನೊಂದಿಗೆ ‘ಈಕರಣ’ ಪ್ರತ್ಯಯ ಬಳಸಿ ತಂದಿರುವ ಮೊದಲ ಪದ.

ವ್ಯೂಹೋಪಾಯ ನಾ ಕನ್ನಡ ಪ್ರಭ, ಕಾರ್ಯಸಾಧಿಸಲು ಮಾಡಿರುವ ವ್ಯವಸ್ಥೆ/ಯೋಜನೆ. ‘ಪ್ರತಿಭೆಯ ಜೊತೆಗೆ ಸಂಘಟನೆ ಇತ್ತು, ವ್ಯೂಹೋಪಾಯ ಇತ್ತು’. ‘ತಂತ್ರೋಪಾಯ’, ‘ಮಾರ್ಗೋಪಾಯ’ ಪದಗಳ ಮಾದರಿಯಲ್ಲಿ ಸಂಸ್ಕೃತ ಸಂಧಿ ನಿಯಮಕ್ಕನುಗುಣವಾಗಿ ಬಂದಿರುವ ಪದ.

ವ್ಯಗ್ರಗಾಮಿ ನಾ ಕರ್ಮವೀರ ಉದ್ವೇಗಗೊಳ್ಳುವರು. ‘ಹೆಚ್ಚೆಂದರೆ ಕೆಲವೊಂದು ಗುಂಪು ಪಂಗಡ ಕಟ್ಟಿ ಗಲಾಟೆಯೆಬ್ಬಿಸಿ ಬೀದಿಕಾಳಗಕ್ಕೆ ಇಳಿದು ವ್ಯಗ್ರಗಾಮಿಗಳೋ, ಉಗ್ರಗಾಮಿಗಳೋ ಆಗಿ ಸುತ್ತಲೂ….’ ‘ಉಗ್ರಗಾಮಿ’ ಮಾದರಿಯಲ್ಲಿ ಬಂದಿರುವ ಪದ. ಲಘು ಲೇಖನಗಳಲ್ಲಿ ಇಂತಹ ಪದಗಳ ಬಳಕೆಯನ್ನು ಕಾಣಬಹುದು.

ವೃತ್ಯರ್ಥಿ ನಾ ಕಸ್ತೂರಿ ಉದ್ಯೋಗ ಬಯಸಿ ಬಂದವನು. ‘ರಾಮದುರ್ಗದಿಂದ ಮುಲ್ಕೀ ಪರೀಕ್ಷೆ ಮುಗಿಸಿ ಧಾರವಾಡಕ್ಕೆ ವೃತ್ಯರ್ಥಿಯಾಗಿ ಬಂದು ಸೋದರಮಾವ ಗೋವಿಂದ ಚುಳಕಿ ಅವರ ಆಸರೆ ಪಡೆದರು’. ವಿದ್ಯಾರ್ಥಿ, ಅಭ್ಯರ್ಥಿ ಮೊದಲಾದ ಪದಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾದ ಹೊಸಪದ. ಸಂಧಿ ನಿಯಮಗಳಿಗನುಗುಣವಾಗಿ ಬಂದಿದೆ.

ವೃದ್ಧೀಕರಣ ನಾ ಸಂಯುಕ್ತ ಕರ್ನಾಟಕ ಹೆಚ್ಚಿಸುವುದು, ಬೆಳೆಸುವುದು. ‘ಈ ನಿಟ್ಟಿನಲ್ಲಿ ಕಾರ್ಖಾನೆಯು ಬೀಜ ವೃದ್ಧೀಕರಣವನ್ನು (ಸೀಡ್ ಮಲ್ಟಿಪ್ಲಿಕೇಶನ್) ಕೈಗೊಳ್ಳಲಿದೆ’. ‘ಈಕರಣ’ ಪ್ರತ್ಯಯ ಬಳಸುವ ಪ್ರಕ್ರಿಯೆಗೆ ನಿದರ್ಶನ.

ವೇಗಗೊಳಿಸು ಕ್ರಿ ಪ್ರಜಾವಾಣಿ ತ್ವರಿತಗೊಳಿಸು, ಶೀಘ್ರವಾಗಿ ಮುಗಿಸು. ‘…ಬಿಂಬಿತ ಆಧಾರದ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಜನಗಣತಿ ಇಲಾಖೆಯು ಪ್ರಪ್ರಥಮವಾಗಿ ಅಳವಡಿಸಲಾಗುತ್ತಿದ್ದು ಇದು ಮಾಹಿತಿ ಪರಿಷ್ಕರಣೆ, ಮತ್ತು ಪ್ರಕಟಣೆ ಕಾರ್ಯವನ್ನು ವೇಗಗೊಳಿಸಲಿದೆ’. ಇಂಗ್ಲಿಷಿನ ‘ಸ್ವೀಡ್ ಅಪ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಪದ. ‘ವೇಗಿಸು’ ಎಂಬ ಪದ ಇದೇ ಅರ್ಥದಲ್ಲಿ ಬಳಕೆಯಾಗಿದೆ.

ವೇಗತಡೆ ನಾ ಉದಯವಾಣಿ ವಾಹನಗಳ ವೇಗವನ್ನು ಕಡಿತಗೊಳಿಸಲು ಇರುವ ರಸ್ತೆ ಉಬ್ಬು. ‘ಅವೈಜ್ಞಾನಿಕ ರೀತಿಯಲ್ಲಿ ಹಾಕಿದ ವೇಗ ತಡೆ (ಹಂಪ್ಸ್‌)ಗಳು, ರಸ್ತೆ ಹಾಗೂ ಪಾದಚಾರಿಗಳ ಜಾಗವನ್ನು ಕಬಳಿಸುವ ಅಂಗಡಿ ಮುಂಗಟ್ಟುಗಳೆಲ್ಲವೂ ಗಮನಕ್ಕೆ ಬಂದಾವು.’ ‘ರಸ್ತೆ ಉಬ್ಬು’ ಈಗ ಬಳಕೆಯಾಗುತ್ತಿರುವ ಪದ. ಇಂಗ್ಲಿಶಿನ ‘ಸ್ಪೀಡ್‌ಬ್ರೇಕರ್ಸ್’ಗೆ ಸಂವಾದಿಯಾಗಿ ಬಂದಿರುವ ಕನ್ನಡ ಪದ.

ವೇದನಾಂತಕ ನಾ ಪುಸ್ತಕವೊಂದರಲ್ಲಿ ಬಳಕೆ ನೋವನ್ನು ಮರೆಸುವ. ‘ಯೂರೋಪಿನಲ್ಲಿ ಕಳೆದ ಶತಮಾನದ ಕೆಲವು ಮತಾಂಧರು ಹೆಂಗಸರಿಗೆ ಹೆರಿಗೆಯ ನೋವು ಸಹ್ಯವಾಗುವಂತೆ ವೇದನಾಂತಕ (ಅನೆಸ್ತಿಟಿಕ್) ಕೊಡಕೂಡದು ಎಂಬ ನಿಲುವು ತಾಲಿದ್ದರಂತೆ’. ‘ಅನೆಸ್ತೇಶಿಯಾ’ ಎಂಬುದಕ್ಕೆ ‘ಅರಿವಳಿಕೆ’ ಎಂಬ ಪದ ಬಳಕೆಯಲ್ಲಿದೆ. ಮೇಲಿನ ಪ್ರಯೋಗದಲ್ಲಿನ ಬಳಕೆ ನೋಡಿದಾಗ ‘ಪೆಯಿನ್ ಕಿಲ್ಲರ್’ ಅರ್ಥಕ್ಕೆ ಸರಿ ಹೊಂದುವಂತಿದೆ.

ವೈಭೋಗಿ ನಾ ಹಾಯ್ ಬೆಂಗಳೂರ್ ವೈಭೋಗವನ್ನು ಅನುಭವಿಸುತ್ತಿರುವವನು. ‘…ಐದು ಅಡಿ ಎತ್ತರವಿದ್ದುಕೊಂಡೇ ಆರೂವರೆ ಅಡಿಯ ಅಮಿತಾಬ್ ಬಚ್ಚನ್‌ನಂತೆ ಬದುಕಲು ಹವಣಿಸುವ ವೈಭೋಗಿ’. ‘ಇ’ ಪ್ರತ್ಯಯ ಹಚ್ಚಿ ಅನೇಕ ವ್ಯಕ್ತಿವಾಚಕ ನಾಮಪದಗಳನ್ನು ಮಾಡುವ ರೂಢಿಯಿದೆ. ಮಾದರಿ: ಅನುಭೋಗ-ಅನುಭೋಗಿ.