ಶಂಕಾತಂಕ ನಾ ಸಂಯುಕ್ತ ಕರ್ನಾಟಕ ಸಂದೇಹ-ಕಳವಳ-ಕಾತರ ಒಟ್ಟಿಗೆ ಆಗುವುದು. ‘ದೇಶದ ರಾಜಕೀಯ ಚಿತ್ರಣ ಕ್ರಮಕ್ರಮೇಣವಾಗಿ ಸ್ಪಷ್ಟವಾಗುತ್ತಿರುವಂತಿದೆ. ಅಂತೆಯೇ ಶಂಕಾತಂಕಗಳಿಗೂ ಎಡೆಮಾಡಿಕೊಡುತ್ತದೆ’. ಸಮಾಸ ಪ್ರಕ್ರಿಯೆ ಸರಿಯಾಗೇ ಕಂಡುಬಂದರೂ ಬೇರೆ ಬೇರೆ ಪದಗಳಲ್ಲೇ ಶಂಕೆ, ಆತಂಕ ಬರೆದರೆ ಅರ್ಥಸ್ಪಷ್ಟತೆ ಹೆಚ್ಚು.

ಶತಕೋಟಿಪತಿ ನಾ ಸಂಯುಕ್ತ ಕರ್ನಾಟಕ ನೂರುಕೋಟಿ ಬೆಲೆಬಾಳುವ ಆಸ್ತಿಯ ಒಡೆಯ. ‘’ಫೋರ್ಬ್ಸ್‌’ ನಿಯತಕಾಲಿಕವು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ಈ ವಿಷಯ ತಿಳಿದಿದ್ದು ಏಷಿಯಾದಲ್ಲಿ ಒಟ್ಟು ೭೩ ಶತಕೋಟಿಪತಿಗಳು ಇದ್ದಾರೆಂದು ಹೇಳಲಾಗಿದೆ’. ‘ಲಕ್ಷಾಧಿಪತಿ’, ‘ಕೋಟ್ಯಧಿಪತಿ’ ಮಾದರಿಯಲ್ಲಿ ಬಂದಿರುವ ಪದವಾದರೂ ಸಂಖ್ಯೆಯ ನಂತರ ‘ಅಧಿಪತಿ’ಯ ಬದಲು ‘ಪತಿ’ ಮಾತ್ರ ಬಳಕೆಯಾಗಿದೆ. ‘ಬಿಲಿಯನೇರ್’ ಎಂಬ ಇಂಗ್ಲಿಶ್ ಪದಕ್ಕೆ ಸಂವಾದಿಯಾದುದಾಗಿದೆ.

ಶಸ್ತ್ರಾಕ್ರಮಣ ನಾ ಉದಯವಾಣಿ ಆಯುಧಗಳೊಡನೆ ಮೇಲೆ ಬಿದ್ದು ಹೋರಾಡುವುದು; ಶಸ್ತ್ರದೊಡನೆ ಮುಗಿ ಬೀಳುವುದು. ‘ಜೈವಿಕ ಶಸ್ತ್ರಾಕ್ರಮಣ ಸಾಧ್ಯತೆ ನಿಭಾಯಿಸಲು ಪಾಕ್ ಸಿದ್ಧತೆ’. ‘ಆಕ್ರಮಣ’ ಎಂದರೆ ಸುತ್ತುವರಿದು, ಆಕ್ರಮಿಸಿಕೊಂಡು ಹೋರಾಡುವುದು. ಎಂಬರ್ಥವೂ ಇದೆ. ದೇಶ ದೇಶಗಳೊಡನೆ ಹೋರಾಟ ನಡೆಯುವುದು ಶಸ್ತ್ರಸಹಿತವೇ ಆಗಿರುತ್ತದೆ. ಆದ್ದರಿಂದ ‘ಶಸ್ತ್ರ’ ಪದ ಅನವಶ್ಯಕವೆನಿಸುತ್ತದೆ.

ಶಸ್ತ್ರೋಪಕರಣ ನಾ ಉದಯವಾಣಿ ಆಯುಧ ಹಾಗೂ ಅದನ್ನು ಪ್ರಯೋಗಿಸಲು ಬೇಕಾದ ಸಲಕರಣೆಗಳು. ‘…ಪ್ರದರ್ಶನಾಲಯವೊಂದು ನೆಲಸಮವಾದ ಬಳಿಕ ಅಲ್ಲಿ ಜೋಪಾನವಾಗಿ ರಕ್ಷಿಸಿಟ್ಟಿದ್ದ ಹರಪ್ಪ ಕಾಲದ ಕರಕುಶಲ ವಸ್ತುಗಳು, ವಜ್ರಗಳು, ವರ್ಣಚಿತ್ರಗಳು ಹಾಗೂ ಅಪರೂಪದ ಶಸ್ತ್ರೋಪಕರಣಗಳು ನಿರ್ನಾಮವಾಗಿದೆ’. ಸಂಸ್ಕೃತದ ಸಂಧಿ ನಿಯಮಗಳಿಗೆ ಅನ್ವಯವಾಗಿ ಬಂದಿರುವ ಪದ. ಮಾದರಿ : ಯುದ್ಧೋಪಕರಣ.

ಶ್ರಮಭಾರ ನಾ ಕನ್ನಡ ಪ್ರಭ ಕೆಲಸದ ಹೆಚ್ಚಿನ ಹೊರೆ. ‘…ಟೈರ್ ಉತ್ಪಾದನೆ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದ ಅಸಮರ್ಥರನ್ನು ನೇಮಕ ಮಾಡಿಕೊಂಡು ಲಕ್ಷಾಂತರ ರೂ. ವೇತನ ನೀಡುತ್ತಿದೆ. ಕೆಲಸಕ್ಕೆ ತಕ್ಕ ವೇತನ ನೀಡದೇ ಅನಗತ್ಯ ಶ್ರಮಭಾರ ಹಾಕಿ ಕಿರುಕುಳ ನೀಡಲಾಗುತ್ತಿದೆ.’ ಇಂಗ್ಲಿಶಿನ ‘ವರ್ಕ್‌‌ಲೋಡ್’ ಪದಕ್ಕೆ ಸಂವಾದಿಯಾಗಿ ಮೇಲಿನ ಪದ ಬಂದಿರುವಂತಿದೆ.

ಶಾಮಕ ಗು ಉದಯವಾಣಿ ಗುಣಪಡಿಸುವ, ಕಡಿಮೆ ಮಾಡುವ. ‘ಮೂರ್ಚೆ ಬಡಿದ ಬಳಿಕ ಮತ್ತು ಅಂತಿಮ ಪಂದ್ಯ ಶುರುವಾಗಲು ಕೆಲ ತಾಸುಗಳ ಬಾಕಿ ಇರುವಾಗ ರೊನಾಲ್ಡೊ ಶಾಮಕ ಔಷಧವನ್ನು ತೆಗೆದುಕೊಂಡಿದ್ದರೆಂದು ಅವರ ತಂಡದ ವೈದ್ಯರಾದ…’. ‘ಶಾಮಕ’ ಪದ ಸ್ವತಂತ್ರವಾಗಿ ಬಳಕೆಯಲ್ಲಿಲ್ಲ. ಇನ್ನೊಂದು ನಾಮ ಪದದೊಡನೆ ಬರುವುದೇ ಹೆಚ್ಚು. ಉದಾ: ಅಗ್ನಿಶಾಮಕ

ಶಾಮೀಲುದಾರ ನಾ ತರಂಗ ನೆರವಾಗಿರುವವ/ಜೊತೆಯಲ್ಲಿ ಸೇರಿರುವವ. ‘ಥೈಲ್ಯಾಂಡಿನ ‘ಕಾಮಾಯ್‌ಧಿ ಪಿಯಾನೋ ಎಂಬ ಮಹಿಳೆ ಮತ್ತು ಅವಳ ಏಳು ಜನ ಶಾಮೀಲುದಾರರಿಗೆ ಕಳ್ಳತನದಲ್ಲಿ ಹಣ ಹೂಡಿದ ಆರೋಪಕ್ಕಾಗಿ….’. ‘ದಾರ’ ಪ್ರತ್ಯಯ ಇತ್ತೀಚೆಗೆ ಬಹಳವಾಗಿ ಬಳಕೆಯಾಗುತ್ತಿದೆ. ಹಿಂದೆಲ್ಲಾ ಕೇವಲ ಹುದ್ದೆಗಳನ್ನು ಅಥವಾ ಅಧಿಕಾರ ಹೊಂದಿರುವುದನ್ನು ಸೂಚಿಸುತ್ತಿದ್ದ ಈ ಪ್ರತ್ಯಯ (ಸುಬೇದಾರ, ಅಮಲುದಾರ, ಶೇಕದಾರ) ಈಗ ಬೇರೆಯದಕ್ಕೂ ಬಳಕೆಯಾಗುತ್ತಿದೆ. ಉದಾ: ಸಾಗಾಣಿಕೆದಾರ, ಟೆಂಡರುದಾರ.

ಶಾಶ್ವತೀಕರಣ ನಾ ಉದಯವಾಣಿ ಶಾಶ್ವತಗೊಳಿಸುವುದು ಶಾಶ್ವತಗೊಳಿಸುವಿಕೆ. ‘….ಜನಪ್ರತಿನಿಧೀಕರಣ ಜನತಂತ್ರ ವ್ಯವಸ್ಥೆ ಇದು. ಯಾವುದೇ ತುರ್ತು ಪರಿಸ್ಥಿತಿಯ ಕಾರ್ಮೋಡದಲ್ಲೂ ಮುಸುಕಿ ಹೋಗದ ಶಾಶ್ವತೀಕರಣಗೊಂಡ ವ್ಯವಸ್ಥೆ’. ‘ಈಕರಣ’ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ. ಆದರೆ ‘ಈಕರಣ’ ಬೇಕೆ? ಶಾಶ್ವತ ಸಾಕಲ್ಲವೇ?

ಶಾಸನೋಲ್ಲಂಘನೆ ನಾ ಕನ್ನಡ ಪ್ರಭ ಕಾನೂನು ಮುರಿಯುವುದು. ‘ಕನ್ನಡ ನಾಮಫಲಕಗಳ ಹೆಸರಿನಲ್ಲಿ ನಡೆದ ಈ ಶಾಸನೋಲ್ಲಂಘನೆಯನ್ನು ನೋಡಿದಾಗ….’. ಸೀಮೋಲ್ಲಂಘನೆ, ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಬಂದಿರುವ ಹೊಸ ಪದ.

ಶಿಷ್ಯಾರ್ಥಿ ನಾ ಕನ್ನಡ ಪ್ರಭ ಶಿಷ್ಯತ್ವವನ್ನು ಬಯಸಿ ಬಂದವನು, ಅನುಯಾಯಿಯಾಗ ಬಯಸಿದವನು. ‘ಕನಕದಾಸರ ದಾಸದಾಸರ ದಾಸ ಹಿಂದೋಳ ರಾಗದಲ್ಲಿ ಕಲಿಯುವ ದೇವರನಾಮ ಶಿಷ್ಯಾರ್ಥಿಗಳಿಗೆ ಮೊದಲನೇ ಪಾಠ’. ಹೊಸಪದ ರಚನೆ ‘ಅರ್ಥಿ’ ಉತ್ತರ ಪದದೊಡನೆಯೂ ಆಗುತ್ತದೆ. ಉದಾ. ಶಿಬಿರಾರ್ಥಿ, ಶಿಕ್ಷಣಾರ್ಥಿ ಇತ್ಯಾದಿ. ಮೇಲಿನ ಪ್ರಯೋಗಗಳನ್ನು ಒಪ್ಬಹುದಾದುದಾದರೂ, ಮೇಲಿನ ವಾಕ್ಯದಲ್ಲಿ ಅದು ಸೂಕ್ತವಾಗಲಾರದು. ಶಿಕ್ಷಣಾರ್ಥಿ ಸೂಕ್ತಪದ.

ಶೀತಕಾಲೀನ ಗು ಸಂಯುಕ್ತ ಕರ್ನಾಟಕ ಚಳಿಗಾಲಕ್ಕೆ ಸಂಬಂಧಿಸಿದ, ಚಳಿಗಾಲದ. ‘ಇಡೀ ಶೀತಕಾಲೀನ ಅಧಿವೇಶನದಲ್ಲಿ ಅಯೋಧ್ಯೆಯ ಕುರಿತು ಎಬ್ಬಿಸಿದ ಕೋಲಾಹಲ ಶೇ.೫೦ರ ಜನತಾ ಸಂಸತ್ ಸಮಯ ಹಾಳುಮಾಡಿದೆ’. ಕನ್ನಡಕ್ಕೆ ನೇರವಾಗಿ ಬಂದಿರುವ ಪದ. ಕನ್ನಡದಲ್ಲಿ ಚಳಿಗಾಲದ ಅಧಿವೇಶನ ಎಂದು ಬಳಕೆಯಲ್ಲಿದೆ.

ಶೀತಹವೆ ನಾ ತರಂಗ ತಂಪುಹವೆ. ‘ಒಂದು ಸಣ್ಣ ಏರ್‌ಸ್ಟ್ರಿಪ್‌ಸಹಾ ಸಿದ್ದವಾಗಿದೆ. ಅಂದರೆ ಅವರು ಅದಾಗಲೇ ಅಲ್ಲಿನ ಮರಗಟ್ಟಿಸುವ ಶೀತಹವೆಗೆ ಒಗ್ಗಿಕೊಂಡಿರುವಂತಿದೆ’. ಇಂಗ್ಲೀಶಿನ ‘ಕೋಲ್ಡ್‌ವೇವ್‌’ಗೆ ಸಂವಾದಿಯಾಗಿ ಬಂದಿರಬಹುದೇ?

ಶೀತಾಲಯ ನಾ ಕನ್ನಡ ಪ್ರಭ ತಂಪಾಗಿಸುವ ಸ್ಥಳ. ‘ಜಾಸ್ತಿ ಉತ್ಪಾದನೆಯಾದರೆ ಉಗ್ರಾಣಗಳಲ್ಲಿ, ಶೀತಾಲಯಗಳಲ್ಲಿ ಸಂಗ್ರಹಿಸಿ ಮುಂದಿನ ಯೋಜನೆಯಲ್ಲಿ ಸರಿದೂಗಿಸುತ್ತಾರೆ’. ‘ಶೈತ್ಯಾಗಾರ’, ‘ಶೀಥಲೀಕರಣ ಕೇಂದ್ರ’ ಎಂಬ ಪದಗಳು ಈಗಾಗಲೇ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಶಿಲೆಕಲ್ಲು ನಾ ತರಂಗ ದೊಡ್ಡಕಲ್ಲು. ‘ಅದೊಂದು ದಿನ ಪುಣೆಗೆ ಬರುವಾಗ ದಾರಿಯಲ್ಲಿ ಟನ್ ಭಾರದ ದೊಡ್ಡ ದಪ್ಪ ಶಿಲೆಕಲ್ಲು ಬಿದ್ದುಕೊಂಡಿತ್ತು.’ ಇದೊಂದು ದ್ವಿರುಕ್ತಿ. ವಿಶೇಷವಾದ ಅರ್ಥವನ್ನೇನೂ ಕೊಡುವುದಿಲ್ಲ. ಇನ್ನೊಂದು ಪ್ರಯೋಗವೆಂದರೆ ಬಂಡೆಕಲ್ಲು.

ಶಿಸ್ತುಗೇಡಿ ನಾ ಉದಯವಾಣಿ ಶಿಸ್ತಿಲ್ಲದಂತೆ ವರ್ತಿಸುವವರು, ಶಿಸ್ತನ್ನು ಮೀರುವವರು. ‘ಹುರಿಯತ್ ಕಾನ್ಫರೆನ್ಸ್ ಒಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಕ್ಕೆ ಬರುತ್ತಿರುವಂತೆ ಅದರ ಅಧ್ಯಕ್ಷ ಪೊ. ಅಬ್ದುಲ್ ಗನಿಭಟ್ ಶಿಸ್ತುಗೇಡಿಗಳಿಗೆ ಉಗ್ರ ಎಚ್ಚರಿಕೆ ನೀಡಿದ್ದು..’ ‘ನಾಚಿಕೆಗೇಡಿ’, ‘ಹೊಣೆಗೇಡಿ’ ಮಾದರಿಯಲ್ಲಿ ಬಂದರುವ ಪದ.

ಶುಕ್ರಾಚಾರ್ಯತನ ನಾ ಸಂಯುಕ್ತ ಕರ್ನಾಟಕ ಒಂದೆಡೆಗೇ ಸೃಷ್ಟಿ ಬೀರುವ ಗುಣ, ಒಂದನ್ನೇ ಗಮನಿಸುವುದು. ‘ಆದರೆ ಸರಕಾರವು ಸದಾ ಉತ್ಪಾದನೆಗಳನ್ನೇ ಒಂದೆಡೆ ಗಮನಿಸಿಕೊಂಡಿರುವಂತೆ ಪ್ರಸರಣಾ ವಿತರಣಾ ಕಾರ್ಯಗಳತ್ತ ಯಾಕೋ ನೋಟ ಬೀರಿಲ್ಲ. ಈ ಒಕ್ಕಣ್ಣ ಶುಕ್ರಾಚಾರ್ಯತನವು ಜನರಿಗೆ ಕೇಡಾಗಿ ಪರಿಣಮಿಸಿದೆ’. ‘ತನ’ ಪ್ರತ್ಯಯವು ಗುಣವನ್ನು ಸೂಚಿಸಲು ಬಳಕೆಯಾಗುತ್ತದೆ. ಉದಾ: ಸಿರಿತನ, ಬಡತನ ಇತ್ಯಾದಿ. ಮೇಲಿನ ಪ್ರಯೋಗದಲ್ಲಿ ಗುಣವನ್ನು ಸೂಚಿಸಲು ಹೆಸರನ್ನು ಬಳಸಿಕೊಂಡಿರುವುದು ವಿಶೇಷವಾಗಿದೆ.

ಶುಚಿವರ್ಯ ನಾ ಕನ್ನಡಪ್ರಭ ಕೈಬಾಯಿ ಶುದ್ಧವಾಗಿರುವವರು, ಶುದ್ಧಹಸ್ತರು. ‘ಬೋಪೋರ್ಸ್ ಪ್ರಕರಣದಿಂದ ಶುಚಿವರ್ಯ (ಮಿ.ಕ್ಲೀನ್)ರೆನಿಸಿದ್ದ ರಾಜೀವ ಗಾಂಧಿಯವರು ಮಸಿವರ್ಯರಾದರು’. ಮಿ.ಕ್ಲೀನ್ ಎಂಬುದರ ಸಂವಾದಿಯಾಗಿ ತಂದಿರುವ ಕನ್ನಡ ಪದ.

ಶುಚೀಕರಣ ನಾ ತರಂಗ ನೈರ್ಮಲ್ಯ; ಚೊಕ್ಕಟವಾಗಿಡುವಿಕೆ. ‘ಮುಂಬಯಿಯ ಜನರ ದೈವಭಕ್ತಿಯ ಪರಾಕಾಷ್ಠೆ ನಗರಾಭಿವೃದ್ಧಿಗೆ ತೊಡಕಾಗಿದ್ದರೂ, ಮಹಾನಗರದ ಹಲವೆಡೆ ನಗರ ಶುಚೀಕರಣದ ಜವಾಬ್ದಾರಿಯನ್ನು ದೇವರು ವಹಿಸಿಕೊಂಡದ್ದಿದೆ.’ ‘ಶುದ್ಧೀಕರಣ’ ಪದ ಈಗಾಗಲೇ ಬಳಕೆಯಲ್ಲಿದ್ದರೂ ಇವೆರಡರ ಬಳಕೆಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಇಂಗ್ಲಿಶಿನ ‘ಪ್ಯೂರಿಫಿಕೇಶನ್’ ಮತ್ತು ‘ಕ್ಲೀನಿಂಗ್’ ಪದಗಳಲ್ಲಿ ಕಂಡುಬರುವ ವ್ಯತ್ಯಾಸ ‘ಶುದ್ಧಿ’ ಮತ್ತು ‘ಶುಚಿ’ಗಳಲ್ಲಿ ಇರುವಂತಿದೆ. ಒಂದರೊಡನೊಂದು ಬೆರೆತುಹೋಗಿರುವ ಸಂದರ್ಭಗಳಲ್ಲಿ (ಉದಾ: ದ್ರವಪದಾರ್ಥ – ಪೆಟ್ರೋಲಿಯಂ, ನೀರು ಇತ್ಯಾದಿ) ನಡೆಯುವ ಕ್ರಿಯೆ ‘ಶುದ್ಧೀಕರಣ’ ಹಾಗೂ ಕಣ್ಣಿಗೆ ಗೋಚರವಾಗುವ ಇನ್ನಿತರ ಸಂದರ್ಭಗಳಲ್ಲಿ (ನಗರ ಶುಚಿಯಾಗಿಡಿ, ಬಟ್ಟೆ ಶುಚಿಮಾಡುವುದು) ‘ಶುಚೀಕರಣ’ ಬಳಸಬಹುದೆಂದು ಕಾಣುತ್ತದೆ.

ಶುಭ್ರಕ ನಾ ಕನ್ನಡ ಪ್ರಭ ಕೊಳೆ ತೊಳೆಯಲು ಬಳಸುವ ವಸ್ತು. ‘ಈ ಕೇಶಸಾಧನಗಳನ್ನು ಹಾಗೂ ಶುಭ್ರಕವನ್ನು ತಯಾರಿಸುತ್ತಿರುವ… ಅವರು ಎಲ್ಲ ಕಾರ್ಯಗಳಲ್ಲೂ ಹೆಗಲು ಕೊಟ್ಟು ನಿಂತಿದ್ದಾರೆ’. ಶ್ಯಾಂಪೂ ಪದಕ್ಕೆ ಬಂದಿರುವ ಕನ್ನಡ ಪದ. ಆದರೆ ಇದು ಎಲ್ಲ ವಲಯಗಳಲ್ಲಿ ಬಳಸುವ ಶುದ್ಧೀಕರಣಕ್ಕೆ ಉಪಯೋಗಿಸುವ ಪದದಂತಿದೆ. ಆದರೆ ಶ್ಯಾಂಪೂ ನಿರ್ದಿಷ್ಟವಲಯಕ್ಕೆ ಸೀಮಿತವಾಗಿದೆ. ಮಾರ್ಜಕ ಬಳಕೆಯಲ್ಲಿರುವ ಇನ್ನೊಂದು ಪದ.

ಶ್ರೇಯಾಗ್ರರು ನಾ ಛಾಯಾಚಿತ್ರದ ಅಡಿಬರಹ ಗೌರವ, ಕೀರ್ತಿಯ, ತುದಿಯಲ್ಲಿರುವವರು. ‘ಮೈಸೂರು ಮಹಾಜನ ಪದವಿಪೂರ್ವ ಕಾಲೇಜಿನ ಪಿಯೂ ಪರೀಕ್ಷೆ ಶ್ರೇಯಾಗ್ರರು. ‘ಅಗ್ರ’ ಪದವನ್ನು ಪೂರ್ವಪದವನ್ನಾಗಿ ಬಳಸಿದ ‘ಅಗ್ರಗಣ್ಯ’ (ಉತ್ತಮ) ಎಂಬ ಪದವಿದೆ. ಮೇಲಿನ ಪ್ರಯೋಗದಲ್ಲಿ ಅಗ್ರ ಉತ್ತರ ಪದವಾಗಿ ಬಂದಿರುವುದು ಗಮನಾರ್ಹ.

ಶೋಕತೋಪು ನಾ ಪ್ರಜಾವಾಣಿ ದುಃಖದ ಅಥವಾ ಶೋಕದ ಸಂದರ್ಭದಲ್ಲಿ ವಿಶೇಷವಾಗಿ ಮರಣದ ಸಂದರ್ಭದಲ್ಲಿ ಹಾರಿಸುವ, ಹೊಡೆಯುವ ತೋಪು ಅಥವಾ ಗುಂಡು. ‘೨೧ ಮಂದಿ ಪೊಲೀಸರು ಪೊಲೀಸ್ ಬ್ಯಾಂಡಿನಲ್ಲಿ ಮೂಡಿಬಂದ ರಾಷ್ಟ್ರಗೀತೆಯ ನಡುವೆ ಶೋಕ ಸೂಚಿಸಲು ಮೂರು ಭಾರ ‘ಶೋಕತೋಪು’ ಹಾರಿಸಿದರು.’ ಕುಶಾಲತೋಪು ಮಾದರಿಯಲ್ಲಿ ಬಂದಿರುವಂತಹ ಹೊಸ ಪದ. ಸಂತೋಷದ ಸಂದರ್ಭದಲ್ಲಿ ಕುಶಾಲತೋಪುಗಳನ್ನು ಹಾರಿಸುವ ವ್ಯವಸ್ಥೆ ಇದೆ.

ಶೋಭನೀಯ ನಾ ಜಾಹೀರಾತು ಚೆಲುವನ್ನುಂಟು ಮಾಡುವ, ಅಂದವನ್ನು ನೀಡುವ. ‘ಭವ್ಯ ಸಿಲ್ಕ್ ಶೋಭನೀಯ’. ಈಯ ಪ್ರತ್ಯಯದೊಡನೆ ಬಂದಿರುವ ಮೇಲಿನ ಪ್ರಯೋಗದಲ್ಲಿ ಶೋಭನ (ಚೆಂದ, ಸೊಗಸು, ಅಂದ) ಪದಕ್ಕೆ ಈಯ ಸೇರಿಸಲಾಗಿದೆ.

ಶೌರ್ಯತನ ನಾ ಉದಯವಾಣಿ ಪರಾಕ್ರಮ, ಕೆಚ್ಚು. ‘ಪ್ರತಿಬಾರಿಯು ನಮ್ಮ ಮೇಲೆ ಏರಿಬಂದು ತಮ್ಮ ಶೌರ್ಯತನ ಜಾರಿ ಹೋದಾಗಲೆಲ್ಲಾ ಭಾರತದ ಅತಿ ಉದಾರತೆಯ ಕಣಿವೆಗಳ ಮೂಲಕ ಪರಾರಿಯಾಗುತ್ತಲೇ ಇರುವ…’. ‘ಶೂರ’ ನಲ್ಲಿರುವುದು ಶೌರ್ಯ. ಜಾಣನಲ್ಲಿರುವುದು ಜಾಣ್ಮೆ. ಹಾಗಾಗಿ ‘ತನ’ ಸೇರಿಸುವ ಅವಶ್ಯಕತೆಯಿಲ್ಲ.