ಸಂಬಳಿಗ ನಾ ಕರ್ಮವೀರ ವೇತನವನ್ನು ಪಡೆಯುವವನು. ‘ಇಂದು…. ಸರ್ಕಾರ, ಸಾಹುಕಾರ, ಪಾಲುಗಾರ, ಬಳಕೆದಾರ, ಸಂಬಳಿಗ ಉಂಬಳಿಗರಾಗಿದ್ದಾರೆ…’. ‘ಇಗ’ ಪ್ರತ್ಯಯದೊಂದಿಗೆ ಬಂದಿರುವ ಪದ. ಆದರೂ ಅಧಿಕಾರ ಸೂಚಿಸುವ ‘ದಾರ’ ಪ್ರತ್ಯಯದೊಡನೆ ಈ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು. (ಸಂಬಳದಾರ).

ಸಂವಿಧಾನೋಕ್ತ ಗು ಕರ್ಮವೀರ ಸಂವಿಧಾನದಲ್ಲಿ ಹೇಳಿರುವಂತೆ. ‘ಸಂವಿಧಾನೋಕ್ತ ಮಾರ್ಗವಷ್ಟೇ ಬಡ್ತಿ ಆಯ್ಕೆಯಲ್ಲಿ ಕಡೆಯ ಪ್ರಮಾಣವಲ್ಲ.’ ‘ಶಾಸ್ತ್ರೋಕ್ತ’ ಪದದ ಮಾದರಿಯಲ್ಲಿ ಬಂದಿರುವ ಪದ.

ಸಕ್ರಮೀಕರಣ ನಾ ಉದಯವಾಣಿ ಕ್ರಮಬದ್ಧಗೊಳಿಸುವಿಕೆ; ಮಾನ್ಯಮಾಡುವಿಕೆ. ‘ಉಡುಪಿ ಜಿಲ್ಲೆಯಲ್ಲಿ ಅನಧಿಕೃತ ಜಮೀನು ಸಕ್ರಮೀಕರಣಗೊಳಿಸವ ವಿಚಾರದಲ್ಲಿ….’. ‘ಈಕರಣ’ ಪ್ರತ್ಯಯದೊಡನೆ ಬಂದಿರುವ ಇನ್ನೊಂದು ಪದ. ಆದರೆ ಮೇಲಿನ ಪ್ರಯೋಗದಲ್ಲಿ ‘ಈಕರಣ’ದ ಅವಶ್ಯಕತೆಯಿರಲಿಲ್ಲವೆನಿಸುತ್ತದೆ. ‘ಸಕ್ರಮಗೊಳಿಸು’ ಸಾಕು.

ಸಡಕಲು ನಾ ಹಾಯ್ ಬೆಂಗಳೂರು ಕಳಪೆ. ‘….ಆದರೆ ಇಂತಹ ಸಡಕಲು ರಾಜಕೀಯಗಳ ಮಧ್ಯೆ ಬೆಂಗಳೂರಿನ ಗತಿ?’. ಸಡಕಲು ಪದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದಂತೆ ಕಾಣುತ್ತದೆ. ‘ಸಡಕಲು ಎತ್ತಿಗೆ ಬಡಕಲು ಕೋಪ’ ಎನ್ನುವ ಮಾತು ಬಳಕೆಯಲ್ಲಿದೆ.

ಸಡಗರಿಸು ಕ್ರಿ ಸುಧಾ ಸಂಭ್ರಮ ಪಡು. ‘ಅರೆ ಅಮ್ಮೂ, ನಾನೇ ಇವತ್ತು ನಿಮ್ಮನೆಗೆ ಬರೋನ ಅಂತ ಇದ್ದೆ. ನೀನೇ ಬಂದು ಬಿಟ್ಟೆ. ಅರೆ ನಿಂತೆ ಇದ್ದೀಯಲ್ಲ ಕೂತ್ಕೊ ಸಡಗರಿಸಿದ ಅಶೋಕ’. ‘ಸಡಗರಿಸು’ ಪದಕ್ಕೆ ಸಿಂಗರಿಸು, ಅಲಂಕಾರ ಮಾಡು, ಹುರಿಗೊಳಿಸು ಇತ್ಯಾದಿ ಅರ್ಥಗಳಿವೆ. ಆದರೆ ಮೇಲಿನ ಪ್ರಯೋಗದಲ್ಲಿ ಸಂಭ್ರಮಿಸುವ ಅರ್ಥವಿದೆ.

ಸಣಕಲುತನ ನಾ ಪ್ರಜಾವಾಣಿ ದೈಹಿಕವಾಗಿ ತೆಳ್ಳಗಿರುವ ಗುಣ. ‘ಬೆಂಗಳೂರಿನ ನಫೀಸಾ ಜೋಸೆಫಳ ತಾಯಿ, ಅತಿ ಡಯಟಿಂಗ್ ಮಾಡಿ ತನ್ನ ಸಣಕಲುತನವನ್ನು ಕಾಪಾಡಿಕೊಳ್ಳುವ ಮಗಳು ಫ್ಯಾಷನ್‌ಪೆರೇಡ್ ಒಂದರಲ್ಲಿ ನಿಶ್ಯಕ್ತಿಯಿಂದ ಮೂರ್ಛೆ ಹೋದಂತಾದಾಗ….’. ‘ತನ’ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ. ಆದರೆ ‘ಸಣಕಲು’ ಪದಕ್ಕೆ ನೇತ್ಯಾತ್ಮಕ ಅರ್ಥವಿದೆ (ಅಶಕ್ತ; ಬಲಹೀನ). ಆದ್ದರಿಂದ ಇಂಗ್ಲೀಶಿನ ‘ಸ್ಲಿಮ್’ ಪದಕ್ಕೆ ಸಂವಾದಿಯಾಗಲಾರದೇನೋ?

ಸಪಿಂಡೀಕರಣ ನಾ ಆಮಂತ್ರಣ ಪತ್ರಿಕೆಯೊಂದರಲ್ಲಿ ಬಳಕೆ ೧೬-೧೨-೯೭ ಮಂಗಳವಾರ ‘ಧರ್ಮೋದಕ’, ೧೭-೧೨-೯೭ ಬುಧವಾರ ‘ಸಪಿಂಡೀಕರಣ ಹಂಪಿಯಲ್ಲಿ’. ‘ಸಪಿಂಡ’ ಎಂದರೆ ಸಗೋತ್ರ ಎಂದರ್ಥ. ಇಲ್ಲಿ ಯಾರನ್ನು ಸಗೋತ್ರಕ್ಕೆ ಒಳಪಡಿಸಲಾಗುತ್ತದೆ ಎಂಬುದು ತಿಳಿಯುವುದಿಲ್ಲ. ಪಿಂಡಪ್ರದಾನ ಎಂದಿರಬೇಕಿತ್ತೇನೋ? ಆದರೂ ಇತ್ತೀಚೆಗೆ ‘ಈಕರಣ’ ಪ್ರತ್ಯಯ ಹಚ್ಚಿಸಿದ ಪ್ರಯೋಗಗಳು ಬರುತ್ತಿರುವುದಕ್ಕೆ ಇದು ನಿದರ್ಶನ.

ಸಮಗಟ್ಟು ಕ್ರಿ ಮಾತಿನಲ್ಲಿ ಬಳಕೆ ಒಂದೇ ಮಟ್ಟಕ್ಕೆ ತರುವುದು. ‘ಐದು ಚಿನ್ನದ ಪದಕ ಗೆದ್ದು ಹಿಂದಿದ್ದ ದಾಖಲೆ ಸಮಗಟ್ಟಿದರು.’ ‘ಸರಿಗಟ್ಟು’ ಎಂಬುದು ಬಳಕೆಯಲ್ಲಿರುವ ಪದ. ‘ಸಮಗೊಳಿಸು’, ‘ಸಮಮಾಡು’ ಪದಗಳೂ ಬಳಕೆಯಲ್ಲಿವೆ.

ಸಮಜಾಯಿಸಿಕೆ ನಾ ಉದಯವಾಣಿ ವಿವರಿಸಿ ತಿಳಿಸುವುದು, ಸಮಾಧಾನ. ‘ವೇತನ ಏರಿಕೆ ನಿರ್ಧಾರ ದಿಢೀರ್ ಅಲ್ಲ, ಏಕಪಕ್ಷೀಯವೂ ಅಲ್ಲ, ಎಂಬ ಸಮಜಾಯಿಸಿಕೆ ಸರಕಾರದ ತಪ್ಪು ನಿರ್ಧಾರಕ್ಕೆ ನೈತಿಕ ಬಲ ನೀಡುವುದಿಲ್ಲ’. ‘ಸಮಜಾಯಿಸು’ (ತಿಳಿಯಪಡಿಸು, ವಿಶದೀಕರಿಸು) ಎಂಬ ಕ್ರಿಯಾಪದವನ್ನು ನಾಮಪದವನ್ನಾಗಿ ಪರಿವರ್ತಿಸಲು ‘ಇಕೆ’ ಪ್ರತ್ಯಯ ಸೇರಿಸಲಾಗಿದೆ. ಆದರೆ ಸಮಜಾಯಿಷಿ ಎಂಬುವ ಪದ ನಾಮಪದವಾಗಿ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಸಮತೋಲನಯುತ ಗು ಜಾಹೀರಾತು ಸಮತೋಲನದಿಂದ ಕೂಡಿದ. ‘…..ಅತ್ಯಂತ ಸಮರ್ಥ ಮೋಟಾರ್ ಮತ್ತು ಮೋಟಾರಿನ ಒತ್ತಡ ತಗ್ಗಿಸುವ ವಾಯುಚಲನಶೀಲ ಸಮತೋಲನಯುತ ಬ್ಲೇಡ್‌ಗಳಿಗೆ ಕೃತಜ್ಞತೆಗಳು’. ‘ಬಲಯುತ’ ಮಾದರಿಯಲ್ಲಿ ಬಂದಿರುವ ಪದ. ನಾಮಪದಗಳಿಗೆ ‘ಯುಗ’ ಪ್ರತ್ಯಯ ಸೇರಿಸಿ ‘ಕೂಡಿದ’ ಎಂಬರ್ಥ ಪಡೆಯಲಾಗುತ್ತದೆ.

ಸಮದೂಗಿಸು ಕ್ರಿ ಸಂಯುಕ್ತ ಕರ್ನಾಟಕ ಹೊಂದಿಸಿಕೊಂಡು ಹೋಗುವುದು. ‘ಗೃಹಿಣಿಯಾಗಿ ಮತ್ತು ನಟಿಯಾಗಿ ನೂತನ್‌ಬದುಕಿನಲ್ಲಿ ಎರಡನ್ನೂ ಸಮದೂಗಿಸಿಕೊಂಡು ಹೋಗುವುದು ಇತರರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು’. ‘ಸರಿದೂಗಿಸು’ ಬಳಕೆಯಲ್ಲಿರವ ಪದ. ಮೇಲಿನ ಪದವೂ ಸಹಾ ಅದೇ ಅರ್ಥವನ್ನು ಸೂಚಿಸುತ್ತದೆ.

ಸಮೃದ್ಧತೆ ನಾ ಕರ್ಮವೀರ ತುಂಬಿರುವಿಕೆ; ಹೆಚ್ಚಳ. ‘ನಮಗೆ ಗಡಿಯ ಹೊರಗಿನಿಂದ ಬರುವ ಕಿರುಕುಳಗಳು ನಿಂತರೆ ನಮ್ಮ ದೇಶವನ್ನು ಸಮೃದ್ಧತೆಯತ್ತಲೂ, ಶಾಂತಿಯತ್ತಲೂ ನಾವು ಒಯ್ಯಬಲ್ಲೆವು’. ಗುಣವಾಚಕದಿಂದ ನಾಮಪದ ರೂಪಿಸಲು ‘ತೆ’ ಪ್ರತ್ಯಯ ಬಳಿಸಿ ಈಗಾಗಲೇ ಇರುವ ನಾಮಪದಕ್ಕೆ (ಸಮೃದ್ಧಿ) ಇನ್ನೊಂದು ಪದ ಸೃಷ್ಟಿ ಮಾಡಲಾಗಿದೆ.

ಸಮಾಯಾತೀತ ಗು ಜಾಹೀರಾತು ಎಲ್ಲ ಸಮಯಕ್ಕೂ ಹೊಂದುವಂತಹ. ‘ಅಪ್ಪಟ ಚಿನ್ನದ ಜರಿಯ ಈ ಸೀರೆಗಳು ತಮ್ಮ ಸುಂದರ ಹೊದಿಕೆ ಹಾಗೂ ಸಮಯಾತೀತ ಸೊಬಗಿಗೆ ವಿಶ್ವವಿಖ್ಯಾತ’. ಎಲ್ಲ ಕಾಲಕ್ಕೂ ಸಲ್ಲುವ ಎಂಬುದಕ್ಕೆ ‘ಕಾಲಾತೀತ’ ಎಂದು ಬಳಸಲಾಗುತ್ತದೆ ಸೂಚಿಸಿದರೆ, ಮೇಲಿನ ಪ್ರಯೋಗದಲ್ಲಿ ಅಲ್ಪಾವಧಿ ಸೂಚನೆ ಇದೆ ಎನಿಸುತ್ತದೆ.

ಸಮಾಜಸ್ಪಂದಿ ಗು ಸಂಯುಕ್ತ ಕರ್ನಾಟಕ ಸಮಾಜಕ್ಕೆ ಸ್ಪಂದಿಸುವಂತಹ. ‘ಸಮಾಜಸ್ಪಂದಿ ಕವನಗಳು’. ‘ಸಮಾಜಕ್ಕೆ ಸ್ಪಂದಿಸುವ’ ಎಂಬ ಎರಡು ಪದಗಳಿಂದ ಸೃಷ್ಟಿಸಿರುವ ಗುಣವಾಚಕ.’

ಸರದಾರಿಣಿ ನಾ ಮೈಸೂರು ಮಿತ್ರ ಮುಖ್ಯಸ್ಥೆ, ನಾಯಕಿ. ‘ಕನ್ನಡ ಚಿತ್ರರಂಗದಲ್ಲಿ ಪಡ್ಡೆ ಹುಡುಗರ ಸರದಾರಿಣಿಯಾಗಿ ಮೆರೆದ ಜಯಂತಿ, ಮಾಲಾಶ್ರೀ ಬಿಟ್ಟರೆ ಬೇರಾರೂ ಬರಲೇ ಇಲ್ಲ’. ‘ಸರದಾರ’ ಎಂಬ ಪದ ಪುರುಷವಾಚಕವಾಗಿ ಬಳಕೆಯಲ್ಲಿದೆ. ಸಮಾನ್ಯವಾಗಿ ಪುರುಷರೇ ಮುಖಂಡರಾಗಿ ಇರುತ್ತಿದ್ದುದರಿಂದ ಸ್ತ್ರೀವಾಚಕ ಶಬ್ದ ಬಂದಿರಲಿಲ್ಲ. ಈಗ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬಂದಿರುವ ಪದ ಇದಾಗಿದೆ.

ಸರಬರಾಜಿಗ ನಾ ಜಾಹೀರಾತು ಒದಗಿಸುವವರು. ‘ಭದ್ರಾವತಿಯಲ್ಲಿ ತಮ್ಮ ಕಾರ್ಖಾನೆಯ ಕಚ್ಛಾ ಸಾಮಗ್ರಿಗಳ ಯಾರ್ಡ್‌‌ಗೆ ತೊಗಟೆ ಸುಲಿದ ಸುಮಾರು ೧೫೦೦ ಮೆ. ಟನ್ ನಷ್ಟು ಅಕೇಸಿಯಾ ಪಲ್ಪ್ ವುಡ್ ಸರಬರಾಜಿಗೆ ಬೆಳೆಗಾರರು/ಸರಬರಾಜಿಗರಿಂದ ನಿರ್ದಿಷ್ಟ ಫಾರಂನಲ್ಲಿ ಮೊಹರಾದ ಟೆಂಡರುಗಳನ್ನು ಕರೆಯಲಾಗಿದೆ’. ಗ/ಇಗ ಪ್ರತ್ಯಯ ಬಳಸಿ ತದ್ಧಿತಾಂತ ನಾಮರೂಪ ಸೃಷ್ಟಿ ಕನ್ನಡದಲ್ಲಿದೆ. ಆದರೆ ಇಲ್ಲಿ ಸರಬರಾಜುದಾರ ಎಂಬುದಾಗಿ ಈಗಾಗಲೇ ಬಳಕೆಯಾಗುತ್ತಿದೆ. ‘ಇಗ’ ಇರುವ ಪದಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವ ಪದ. ಆದರೆ. ದಾರ ಮತ್ತು ಇಗ ಪರಸ್ಪರ ಬದಲಿಸಲು ಸಾಧ್ಯವಾಗುವುದಿಲ್ಲವೆಂದು ತೋರುತ್ತದೆ. ಆದ್ದರಿಂದ ಮೇಲಿನ ಉದಾಹರಣೆಗೆ ‘ಸರಬರಾಜುದಾರ’ ಸರಿಯೆಂದು ತೋರುತ್ತದೆ.

ಸರ್ವಾಧಿಕಾರಿತನ ನಾ ಸಂಯುಕ್ತ ಕರ್ನಾಟಕ ಎಲ್ಲ ಅಧಿಕಾರಿಗಳ ಹಿಡಿತ. ‘ಕುಲಪತಿಗಳ ಸರ್ವಾಧಿಕಾರಿತನ ಹಾಗೂ ದುಂದುವೆಚ್ಚವನ್ನು ಪ್ರತಿಭಟಿಸಿ ೧೧ ಜನ ಸಿಂಡಿಕೇಟ್ ಸದಸ್ಯರು…’. ‘ತನ’ ಅಥವಾ ‘ತೆ’ ಪ್ರತ್ಯಯ ಹಚ್ಚಿ ಪದಗಳನ್ನು ನಾಮವಾಚಕಗಳನ್ನಾಗಿ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚುತ್ತಿದೆ. ಈ ಮಾದರಿಯಲ್ಲಿ ಬಂದಿರುವ ಪದ. ಮಾದರಿ: ಸಿರಿತನ, ಬಡತನ ‘ಸರ್ವಾಧಿಕಾರತ್ವ’ ಸರಿಯಾದ ರೂಪ.

ಸಲಹಾ ಬೆಲೆ ನಾ ಪ್ರಜಾವಾಣಿ ಸಮಿತಿಯ ಸಲಹೆಯಂತೆ ನಿರ್ದರಿಸಲಾದ ಬೆಲೆ. ‘ಕಬ್ಬಿಗೆ ಸಲಹಾಬೆಲೆ: ಮೈಷುಗರ್ ಅಸಹಾಯಕತೆ’. ಮೇಲಿನ ಪ್ರಯೋಗಕ್ಕೆ ಸಮಾನಾರ್ಥವಾಗಿ ‘ಬೆಂಬಲ ಬೆಲೆ’ ಎಂದು ಇಂಗ್ಲೀಶಿನ ‘ಸಪೋರ್ಟ್‌ಪ್ರೈಸ್’ ಎಂಬುದಕ್ಕೆ ಸಂವಾದಿಯಾಗಿ ಬಳಕೆಯಲ್ಲಿದೆ.

ಸಶಕ್ತೀಕರಣ ನಾ ಪ್ರಜಾವಾಣಿ ಶಕ್ತಿಯುತವನ್ನಾಗಿ ಮಾಡುವುದು. ‘ಮಹಿಳೆಯರಿಗೆ ನೀಡುವ ಮೀಸಲಾತಿಯು ಸಶಕ್ತೀಕರಣ ಪ್ರಕ್ರಿಯೆಯಲ್ಲಿ ವೇಗೋತ್ಕರ್ಷವಾಗಿ ಕೆಲಸ ಮಾಡಬಲ್ಲದು’. ‘ಈಕರಣ’ ಪ್ರತ್ಯಯ ಬಳಕೆಗೆ ಮತ್ತೊಂದು ಸೇರ್ಪಡೆ. ಸಬಲೀಕರಣ ಬಳಕೆಯಲ್ಲಿರುವ ಇನ್ನೊಂದು ಸಮಾನಾರ್ಥಕ ರೂಪ.

ಸಶರ್ತ ಗು ಉದಯವಾಣಿ ಶರತ್ತಿನೊಡನೆ; ಶರತ್ತಿನಿಂದ ಕೂಡಿದ. ‘ಸಿಟಿಬಿಟಿಗೆ ಸಶರ್ತ ಸಮ್ಮತಿ ಸಲ್ಲದು; ಅಟಲ್’. ಪರ್ಸೋ ಅರೇಬಿಕ್ ಪದವಾದ ಶರತ್ತನ್ನು ಸಂಸ್ಕೃತದ ಪೂರ್ವಪ್ರತ್ಯಯದೊಡನೆ ಬಳಸಲಾಗಿದೆ. ಮಾದರಿ : ಸಶಕ್ತ, ಸವಿವರ, ಸಕಾರಣ.

ಸಸ್ಯಜನಿತ ಗು ತರಂಗ ಸಸ್ಯಗಳಿಂದ ಹುಟ್ಟಿದ, ಸಸ್ಯಗಳಿಂದ ತಯಾರಿಸಲಾದ. ‘ಪ್ರಪಂಚದಲ್ಲೇ ಪ್ರಥಮ ಸಸ್ಯಜನಿಕ ಕ್ರಿಮಿನಾಶಕ’. ‘ಜನ್ಯ’ ಎಂಬ ಪದ ಬಳಸಿ ‘ಹುಟ್ಟಿದ’ ಅರ್ಥ ಪಡೆಯಲಾಗುತ್ತಿದೆ. ಉದಾ: ಪ್ರಾಣಿಜನ್ಯ = ಪ್ರಾಣಿಗಳಿಂದ ಹುಟ್ಟಿದುದು. ಇದೇ ಮಾದರಿಯಲ್ಲಿ ‘ಸಸ್ಯಜನ್ಯ’ ಪದವೂ ಇದೆ. ಮೇಲಿನ ಪ್ರಯೋಗಕ್ಕೆ ಮಾದರಿ ಬಹುಶಃ ‘ಜನಜನಿತ’ ಇರಬೇಕು.

ಸಸ್ಯೋತ್ಪನ್ನ ನಾ ಸಂಯುಕ್ತ ಕರ್ನಾಟಕ ಗಿಡ ಅಥವಾ ಬಳ್ಳಿಗಳಿಂದ ತಯಾರಿಸಿದ, ಉತ್ಪಾದಿಸಿದ ವಸ್ತು. ‘…ಈ ವರ್ಷ ೭೦ ಕೋಟಿ ರೂ. ಗುರಿಯನ್ನು ಇಟ್ಟುಕೊಂಡಿದೆ. ಇದರಿಂದ ಹೆಚ್ಚುತ್ತಿರುವ ಸಸ್ಯೋತ್ಪನ್ನ ವೈಯಕ್ತಿಕ ಕಾಳಜಿ ವಸ್ತುಗಳ ಬ್ರಾಂಡುಗಳಲ್ಲಿ…’. ಸಸ್ಯ+ ಉತ್ಪನ್ನ ಎಂಬ ಪದಗಳನ್ನು ಸೇರಿಸಿ ಸಂಧಿ ನಿಯಮಕ್ಕನುಸಾರವಾಗಿ ಬಂದ ಪದ. ಮಾದರಿ : ಹೈನೋತ್ಪನ್ನ.

ಸಹಕಾರಿ ನಾ ಸಂಯುಕ್ತ ಕರ್ನಾಟಕ ಸಹಕರಿಸುವವ; ಒತ್ತಾಸೆ ನೀಡುವವ. ‘ಇದನ್ನು ಮುಂಬಯಿಯಲ್ಲಿ ಛೋಟಾ ಶಕೀಲನ ಸ್ನೇಹಿತನಿಗೆ ತಲುಪಿಸುವುದಿತ್ತು ಎಂದು ೨೮ ವರ್ಷ ವಯಸ್ಸಿನ ದಾವೂದನ ಸಹಕಾರಿ ಅಜೂಜುದ್ದೀನ್ ಪೋಲೀಸರಿಗೆ ತಿಳಿಸಿದ್ದಾನೆ.’ ‘ಸಹಾಯ’ ಮಾಡುವವನು ‘ಸಹಾಯಕ’ನಾದಂತೆ ‘ಸಹಕಾರ’ ನೀಡುವವನು ‘ಸಹಕಾರಿ’ಯಾದ. ಆದರೆ ‘ಸಹಕಾರಿ’ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಸಹಕಾರ ಕ್ಷೇತ್ರ (ಕೋ ಆಪರೇಟಿವ್)ದಲ್ಲಿ ದುಡಿಯುತ್ತಿರುವವರನ್ನು ಸಹ ‘ಸಹಕಾರಿ’ ಎಂದು ಹೇಳಲಾಗುತ್ತದೆ. ಉದಾ: ೧. ಹಿರಿಯ ಸಹಕಾರಿ ಧುರೀಣ ಶ್ರೀ………….ರವರು. ೨. ಈ ಕ್ಷೇತ್ರದ ಏಳ್ಗೆಗೆ ಅಹರ್ನಿಶಿ ದುಡಿದ ಹಿರಿಯ ಸಹಕಾರಿ ಶ್ರೀ………..

ಸಹಪಠ್ಯ ಗು ಪ್ರಜಾವಣಿ ಪಠ್ಯದೊಂದಿಗೆ ಇರುವ. ‘….ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಹಪಠ್ಯ ಚಟುವಟಿಕೆಗಳ ಅಂಗವಾಗಿ ನಡೆಸುತ್ತಿದೆ’. ಪಠ್ಯದೊಳಗೆ ಬರುವ ಮಾಹಿತಿಯನ್ನು ಆಧರಿಸಿ ನಡೆಸುವ ಚಟುವಟಿಕೆಯಾಗಿರಬಹುದು. ಮಾದರಿ: ಸಹಬಾಳ್ವೆ, ಸಹವಾಸ ಇತ್ಯಾದಿ.

ಸಹಮತಿ ನಾ ಕನ್ನಡಪ್ರಭ ಒಪ್ಪಿಗೆ, ಏಕಾಭಿಪ್ರಾಯ. ‘ಈಗ ಈ ನಿಲುವಿಗೆ ಆಳುವ ಕೂಟದ ನೇತೃತ್ ವಹಿಸಿರುವ ಬಿಜೆಪಿ ಹಾಗೂ ಅತ್ಯಂತ ದೊಡ್ಡ ಪ್ರತಿಪಕ್ಷವಾದ ಕಾಂಗ್ರೆಸ್ ತಮ್ಮ ಸಹಮತಿಯನ್ನು ವ್ಯಕ್ತಪಡಿಸಿವೆ’. ಸಮ್ಮತಿ, ಸಹಮತ ಎಂಬ ಎರಡು ಪದಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು ಇವು ಒಟ್ಟಾರೆ ‘ಒಪ್ಪಿಗೆ’ಯನ್ನು ಸೂಚಿಸುತ್ತವೆ. ಮೇಲಿನ ಪ್ರಯೋಗದಲ್ಲಿ ಈ ಎರಡೂ ಪದಗಳ ಅಂಶ ಗೋಚರಿಸುತ್ತದೆ.

ಸಹಸ್ರಮಾನ ನಾ ಕನ್ನಡಪ್ರಭ ಸಾವಿರ ವರ್ಷಗಳ ಅವಧಿ. ‘ಮಗುವಿಗೆ ಹೊಸ ಸಹಸ್ರಮಾನದ ಆಶೀರ್ವಾದ.’ ದಶಮಾನ, ಶತಮಾನ ಮಾದರಿಯನ್ನನುಸರಿಸಿ ಬಂದಿರುವ ಪದ. ಇಂಗ್ಲಿಶಿನ ‘ಮಿಲೆನಿಯಂ’ಗೆ ಸಂವಾದಿಯಾಗಿ ಬಳಸಲಾಗುತ್ತಿದೆ.

ಸಹಾಯಿಸು ಕ್ರಿ ಕನ್ನಡ ಪ್ರಭ ನೆರವು ನೀಡು. ‘…ಅಲ್ಲದೇ ಸುತ್ತಮುತ್ತಲಿನ ತಾಲ್ಲೂಕಿನ ವಿದ್ಯಾರ್ಥಿಗಳಿಗೂ ಸಾಕ್ಷರರಾಗಲು ಸಹಾಯಿಸಿತು’. ‘ಇಸು’ ಪ್ರತ್ಯಯದ ಬಳಕೆ ಮಾಡಿ ಪದಸೃಷ್ಟಿ ಹೊಸದೇನಲ್ಲ. ಆದರೂ ಕೆಲವೊಂದು ನಿಯಮವಿರುವಂತೆ ಕಾಣುತ್ತದೆ. ಉದಾ: ಅನುಕರಣೆ-ಅನುಕರಿಸು; ಚಿತ್ರಣ-ಚಿತ್ರಿಸು ಇತ್ಯಾದಿಗಳನ್ನು ಗಮನಿಸಿದರೆ ಮೇಲಿನ ಪದದಲ್ಲಿ ಸಹಾಯಕ ಕ್ರಿಯಾಪದ ಬಳಕೆ ಮಾಡು ಸೂಕ್ತವೆನಿಸುತ್ತದೆ. ಆದರೂ ಇಂತಹ ಪದಗಳ ರಚನೆ ಇತ್ತೀಚೆಗೆ ಹೆಚ್ಚುತ್ತಿದೆ.

ಸ್ಥಳವಂದಿಗ ನಾ ಸುಧಾ ಅದೇ ಪ್ರದೇಶದವರು, ಸ್ಥಳೀಯ. ‘ಅಂತೆಯೇ ಸ್ಥಳವಂದಿಗರಾದ ಬೆಂಗಳೂರಿನ ನಿವಾಸಿ ನಿವೃತ್ತ ಇಂಜಿನಿಯರ್ ಹಾಗೂ ಲೇಖಕ ಕಾವಕಾನಹಳ್ಳಿ…. ತಮ್ಮ ಸೇವೆಯನ್ನು ಮುಡಿಪಿಟ್ಟಿದ್ದಾರೆ’. ಮೇಲಿನ ಪ್ರಯೋಗಕ್ಕೆ ಬಹುಶಃ ಮಕ್ಕಳೊಂದಿಗ, ಸಂಸಾರವೊಂದಿಗ, ಪದ ಮಾದರಿಯಿರಬೇಕೆನಿಸುತ್ತದೆ. ‘ಒಂದಿಗ’ ಪದ ‘ಹೊಂದಿದವ’ ಎಂಬರ್ಥವನ್ನು ನೀಡುತ್ತದೆ. ಮೇಲಿನ ಪ್ರಯೋಗದಲ್ಲಿ ಅರ್ಥಸ್ಪಷ್ಟತೆಯಿಲ್ಲ.

ಸ್ಮರಣಾನುಭವ ನಾ ಕರ್ಮವೀರ ನೆನಪಿನಲ್ಲಿ ಉಳಿದಿರುವ ಅನುಭವ. ‘ಸ್ವಾತಂತ್ರ್ಯೋತ್ತರ ಗ್ರಾಮ ಭಾರತದೊಳಗಿನ ಬದಲಾವಣೆ ಹಾಗೂ ತಲ್ಲಣಗಳನ್ನು ಗ್ರಾಮವೊಂದರ ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ಸ್ಮರಣಾನುಭವಗಳನ್ನು ಈ ಕಾದಂಬರಿಯಲ್ಲಿ ಗ್ರಹಿಸಿ ನಿರೂಪಿಸಲಾಗಿದೆ’. ಸ್ಮರಣಾ+ಅನುಭವ ಸಂಸ್ಕೃತದ ಸಂಧಿ ನಿಯಮಕ್ಕೆ (ಸವರ್ಣದೀರ್ಘ ಸಂಧಿ) ಅನುಗುಣವಾಗಿ ರೂಪಿತವಾಗಿದೆ.

ಸ್ವಂತೀಕರಿಸು ಕ್ರಿ ಸುಧಾ ತನ್ನದಾಗಿಸಿಕೊಳ್ಳುವುದು. ‘ಸಂಗೀತ, ಚಲನಚಿತ್ರ, ಸಮಾಜ ಸುಧಾರಣೆ, ಗ್ರಾಮೋದ್ಧಾರ, ಶಿಕ್ಷಣ ಪ್ರಯೋಗ ಇವೆಲ್ಲವನ್ನೂ ಸ್ವಂತೀಕರಿಸಿಕೊಂಡು ಬೆಳೆದ ಬರವಣಿಗೆಯ ತ್ರಿವಿಕ್ರಮ ಸ್ವರೂಪ.’ ‘ಈಕರಣ’, ‘ಈಕರಿಸು’ ಹತ್ತಿಸಿ ಪದಪ್ರಯೋಗ ಮಾಡುವುದು ಇತ್ತೀಚೆಗೆ ಬಳಕೆಯಲ್ಲಿದೆ. ಇದೊಂದು ಅಂತಹ ಉದಾಹರಣೆ.

ಸ್ವಚ್ಛೀಕರಿಸು ಕ್ರಿ ಜನಮುಖಿ ಶುಚಿಗೊಳಿಸುವುದು. “ಬ್ಯಾಟರಿ ಹಿಡಿದು ಬಂದವ ಉಗುಳಿದವನ ಕೈಯಲ್ಲಿ ಅದನ್ನು ಸ್ವಚ್ಛೀಕರಿಸಲು ಪೇಪರ್ ನೀಡುತ್ತಾನೆ.’ ‘ಈಕರಿಸು’ ಪ್ರತ್ಯಯ ಬಳಸಿ ತಂದಿರುವ ಪದ. ಈಗಾಗಲೆ ‘ಶುಚೀಕರಿಸು’, ‘ಶುದ್ಧೀಕರಿಸು’ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಸ್ವತಚ್ಚಲಿ ಗು ಪ್ರಜಾವಾಣಿ ಮಾನವನ ಸಹಾಯವಿಲ್ಲದೆ ಚಲಿಸಬಲ್ಲ. ‘ಭಾರತ್ ಅರ್ಥ್ ಮೂವರ್ಸ್ ಸಂಸ್ಥೆಯು ದೇಶೀಯವಾಗಿ ನಿರ್ಮಿಸಿದ ‘ಆರ್ಕ್‌ವೆಲ್ಡಿಂಗ್‌ರೋಬೋ ಸ್ವತಚ್ಛಲಿ ಯಂತ್ರ ಈಚೆಗೆ ಉದ್ಘಾಟನೆಗೊಂಡಿತು’. ಇಂಗ್ಲಿಶಿನ ‘ಆಟೋಮ್ಯಾಟಿಕ್‌’ ಎಂಬುದರ ಸಂವಾದಿ ಪದ. ಆದರೆ ಈಗಾಗಲೇ ‘ಸ್ವಯಂಚಾಲಿತ’ ಎಂಬ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು.

ಸ್ವಭಾವಿ ನಾ ಸಂಯುಕ್ತ ಕರ್ನಾಟಕ ಸ್ವಭಾವವಿರುವ ವ್ಯಕ್ತಿ ‘ಭಾರತೀಯ ಮಹಿಳೆ ಮೇಲ್ನೋಟಕ್ಕೆ ಕೋಮಲೆಯಾಗಿ ಕಂಡರೂ ಅಂತರಂಗದಲ್ಲಿ ಕಠಿಣಸ್ವಭಾವಿ’. ವಸ್ತುವಾಚಕದಿಂದ ವ್ಯಕ್ತಿವಾಚಕವನ್ನು ಪಡೆದಿರುವ ಒಂದು ಬಗೆ. ಮಾದರಿ: ದಾನ-ದಾನಿ. ದಾನಿ ಪದ ಸ್ತ್ರೀವಾಚಿ ಅಲ್ಲ. ಆದರೆ ಸ್ವಭಾವಿಯನ್ನು ಸ್ತ್ರೀವಾಚಿಯನ್ನಾಗಿ ಮಾತ್ರ ಬಳಸಲು ಸಾಧ್ಯವಿರುವಂತಿದೆ.

ಸ್ವಭಾಷಿಗ ನಾ ಸುಧಾ ತನ್ನ ಭಾಷೆಯನ್ನೇ ಆಡುವವನು. ‘ಜೆಕೋ ಸ್ಲಾವಾಕಿಯಾ ಮಾದರಿಯಲ್ಲಿಯೇ ಲಂಕೆಯು ತಮಿಳರಿಗಾಗಿ ಇಬ್ಭಾಗ ಹೊಂದಬೇಕು. ನಾನು ಹೇಳುತ್ತಿರುವುದು ಸ್ವಭಾಷಿಗರ ಮೇಲಿನ ಪ್ರೀತಿಯಿಂದಲ್ಲ’. ‘ಇಗ’ ತದ್ಧಿತ ಪ್ರತ್ಯಯ ಸೇರಿಸಿ ತಂದಿರುವ ನಾಮಪದ. ಆದರೆ ‘ಭಾಷೆ’ಯ ಜೊತೆಯಲ್ಲಿ ಪ್ರತ್ಯಯ ಬಂದಾಗ ‘ಇಕ’ ಪ್ರತ್ಯಯವೂ ಹತ್ತುವುದುಂಟು. ಉದಾ: ಭಾಷಿಕ ಸಮುದಾಯ.

ಸ್ವಸುಖಾಸಕ್ತಿ ನಾ ತರಂಗ ಸ್ವಂತ ಸುಖದ ಅಪೇಕ್ಷೆ. ‘ಯೂರೋಪಿನ ದೇಶಗಳನ್ನು ನೋಡು, ಜನಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ. ಒಂದು ಕಾರಣ ಸ್ವಸುಖಾಸಕ್ತಿ. ಎರಡನೆಯದು ಜೀವೋತ್ಪಾದನಾ ಚೈತನ್ಯದ ಇಳಿಮುಖ’. ‘ಸ್ವಹಿತಾಸಕ್ತಿ’ ಪದದ ಮಾದರಿಯಲ್ಲಿ ಬಂದಿರುವ ಪದ. ಆದರೆ ಸ್ವಹಿತಾಸಕ್ತಿ ತನಗೆ ಸೇರಿದವರ ಹಿತವನ್ನು ಹೇಳಿದರೆ ಮೇಲಿನ ಪ್ರಯೋಗ ಕೇವಲ ತನ್ನದನ್ನು ಮಾತ್ರ ಬಯಸುತ್ತದೆ.

ಸಾಂಕ್ರಾಮಿಸು ಕ್ರಿ ತರಂಗ ಒಬ್ಬರಿಂದ ಒಬ್ಬರಿಗೆ ಹರಡು. ‘ಏಡಿಸ್ ಇಜಿಪ್ಟಿ ಎಂಬ ಸೊಳ್ಳೆಗಳು ಸಾಂಕ್ರಮಿಸುವ ವೈರಸ್‌ನ ಹೆಸರು ಚಿಕನ್‌ಗುನ್ಯಾ’. ‘ಸಾಂಕ್ರಾಮಿಕ’ ಎಂಬ ಗುಣವಾಚಕದ ಆಧಾರದ ಮೇಲೆ ರಚಿಸಿರುವ ಹೊಸ ಕ್ರಿಯಾಪದ.

ಸಾಂತ್ವನಿಸು ಕ್ರಿ ಸುಧಾ ಸಮಾಧಾನ ಮಾಡು. ‘ಹುಡುಗಿ ಮಂಚದ ಮೇಲೆ ಕುಸಿದು ಭೋರೆಂದು ಅಳುವಾಗ ಯಾರೂ ಸಾಂತ್ವನಿಸಲು ಮುಂದಾಗಲಿಲ್ಲ’. ‘ಸಾಂತ್ವನ’ ಸಂಸ್ಕೃತ ಪದಕ್ಕೆ ‘ಇಸು’ ಪ್ರತ್ಯಯ ಸೇರಿಸಿ ಆದ ಪದ. ಆದರೆ ಸಂತೈಸು ಎಂಬ ಪದ ಇದೇ ಅರ್ಥದಲ್ಲಿ ಬಳಕೆಯಲ್ಲಿದೆ. ಮಾದರಿ: ಸಂತೋಷಿಸು; ಸುಖಿಸು ಇತ್ಯಾದಿ.

ಸಾಂದ್ರಮುದ್ರಿಕೆ ನಾ ಪ್ರಜಾವಾಣಿ ಅನೇಕ ವಿಷಯಗಳನ್ನು ಸ್ವಲ್ಪ ಸ್ಥಳದಲ್ಲಿಯೇ ಅಡಕಗೊಳಿಸಲಾದ ತಟ್ಟೆ. ‘ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ತಮ್ಮ ನಿವಾಸ ಅನುಗ್ರಹದಲ್ಲಿ ಇಂದು ಬೆಳಿಗ್ಗೆ ‘ಸಂಸ್ಕೃತಿ ಭಾರತಿ’ಯು ಸಿದ್ಧಪಡಿಸಿರುವ ‘ಭಾಷಿಕಾ’ ಎಂಬ ಸಂಸ್ಕೃತ ಸಾಂದ್ರಮುದ್ರಿಕೆ (ಸಿಡಿರೋಮ್) ಬಿಡುಗಡೆ ಮಾಡಿದರು’. ಕಂಪ್ಯೂಟರ್‌ನಲ್ಲಿ ಬಳಕೆಯಾಗುವ ಪದಗಳನ್ನು ಕನ್ನಡೀಕರಣಗೊಳಿಸುವ ಕ್ರಿಯೆ ನಡೆಯುತ್ತಿದೆ. ಮೇಲಿನ ಪ್ರಯೋಗ ಇಂಗ್ಲಿಶಿನ ಕಾಂಪ್ಟಾಕ್ಟ್‌ಡಿಸ್ಕ್‌ಗೆ ಸಂವಾದಿಯಾಗಿ ಸೃಷ್ಟಿಸಿರುವ ಕನ್ನಡ ಪದ.

ಸಾಂದ್ರೀಕರಣ ನಾ ಸುಧಾ ದಟ್ಟೈಸುವಿಕೆ, ಅಧಿಕವಾಗಿರುವಿಕೆ. ‘ಅಧ್ಯಕ್ಷರಲ್ಲೇ ಸಕಲಾಧಿಕಾರದ ಸಾಂದ್ರೀಕರಣ, ಸಂಸತ್ತನ್ನೇ ಉಡಾಯಿಸುವ ಧಿಮಾಕು.’ ‘ಕೇಂದ್ರೀಕರಣ’ದಂತೆಯೇ ಗೋಚರಿಸಿದರೂ ಸ್ವಲ್ಪ ಭಿನ್ನತೆಯಿರಬಹುದು ಎನಿಸುತ್ತದೆ. ಸಾಂದ್ರೀಕರಣ ಸ್ವಾಭಾವಿಕವೆಂದೂ ಕೇಂದ್ರೀಕರಣ ಕೃತಕ; ಉದ್ದೇಶಪೂರ್ವಕ ಎಂಬುದಾಗಿ ತಿಳಿಯಬಹುದೇ?

ಸಾಂಪ್ರದಾಯಿ ಗು ಪ್ರಜಾವಾಣಿ ಸಂಪ್ರದಾಯವನ್ನು ಪಾಲಿಸುವ, ಸಂಪ್ರದಾಯಕ್ಕೆ ಶರಣಾದ. ‘ಕೇಂದ್ರ ಸರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲುಳಿಯುವಂತೆ ಕೈಗೊಂಡ ಕಾರ್ಯವನ್ನ—- ರವರು ಟೀಕಿಸುತ್ತಾ ಮುಂದೆ ಸಾಂಪ್ರದಾಯಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು…..’. ‘ನಾಮಪದ ಸಂಪ್ರದಾಯದಿಂದ ಸಾಧಿತವಾದ ಗುಣವಾಚಕ.

ಸಾಂವಿಧಾನಿಕತೆ ನಾ ಉದಯವಾಣಿ ಸಂವಿಧಾನಕ್ಕೆ ಅನುಗುಣವಾಗಿರುವುದು. ‘….ವೀರಪ್ಪನ್ ಜತೆ ಸಂಧಾನ ನಡೆಸುವ ರಾಜ್ಯ ಸರಕಾರಗಳು ಕೈಗೊಂಡ ನಿರ್ಧಾರದ ಸಾಂವಿಧಾನಿಕತೆಯನ್ನು ಕೋರ್ಟು ಪರಿಶೀಲಿಸಲಾಗದು ಎಂದು ಸೂಚಿಸಿದರು.’ ಸಂವಿಧಾನದಿಂದ ಸಾಂವಿಧಾನಿಕ ಗುಣವಾಚಕ ರೂಪಿಸಿ ಅದನ್ನು ಪುನಃ ನಾಮಪದ ಮಾಡಲು ‘ತೆ’ ಪ್ರತ್ಯಯ ಹತ್ತಿಸಲಾಗಿದೆ.

ಸಾಬಲ್ಯ ನಾ ಕನ್ನಡ ಪ್ರಭ ಶಕ್ತಿ; ಬಲ. ‘ಹೆಣ್ಣು ಮಕ್ಕಳು ತಮ್ಮ ಆಯ್ಕೆಯನ್ನು ಮುಂದಿಡುವ ಮೂಲಕ….. ಯಾಕೆಂದರೆ ಅವರೂ ಕೂಡಾ ಈಗ ಸಾಕಷ್ಟು ಶೈಕ್ಷಣಿಕವಾಗಿ ಮುಂದುವರೆದಿದ್ದು ಆರ್ಥಿಕ ಸಾಬಲ್ಯ ಹೊಂದಿದ್ದಾರೆ ಎನ್ನುತ್ತಾರೆ.’ ಬಹುಶಃ ‘ಸಾಫಲ್ಯ’ ಪದವನ್ನು ಮಾದರಿಯಾಗಿಟ್ಟುಕೊಂಡು ಸೃಷ್ಟಿಸಿದ ಪದ. ‘ಸಫಲ’ದಿಂದ ‘ಸಾಫಲ್ಯ’ವಾದಂತೆ ಸಬಲ-ಸಾಬಲ್ಯ ಆಗಿದೆ. ಉಪಯುಕ್ತವಾದ ಪದ.

ಸಾಮರ್ಥಿಕೆ ನಾ ಉದಯವಾಣಿ ಯಾವುದಾದರೂ ಕೆಲಸ ಸಾಧಿಸುವ ಯೋಗ್ಯತೆ. ‘ಈಗ ಅದೇ ರೀತಿ ಹಡಗು, ಜಲಾಂತರ್ಗಾಮಿಗಳ ರಚನೆಯಲ್ಲಿ ಪೆಂಗ್ವಿನ್ ಪ್ರಾಣಿಗಳಿಗೆ ಮುನ್ನಡೆವ ಚಲನೆ ನೀಡುವ ಅಲಗು ವ್ಯವಸ್ಥೆ ಬಳಸಿಕೊಂಡರೆ ಚಲಿಸುವ ಸಾಮರ್ಥಿಕೆ ಪಕ್ಕಾ ಆಗುತ್ತದೆಂದು ಅವರು ಕಂಡುಕೊಂಡಿದ್ದಾರೆ’. ‘ಇಕೆ’ ಪ್ರತ್ಯಯ ಹಚ್ಚಿ ನಾಮಪದಗಳನ್ನು ಸಾಧಿಸುವುದು ರೂಢಿಯಲ್ಲಿದೆ. ಉದಾಹರಣೆಗೆ ಬುದ್ಧಿವಂತಿಕೆ, ಸಿರಿವಂತಿಕೆ, ಶ್ರೀಮಂತಿಕೆ ಇತ್ಯಾದಿ. ಆದರೆ ಸಮರ್ಥ ಪದಕ್ಕೆ ‘ಸಾಮರ್ಥ್ಯ’ ಪದ ಈಗಾಗಲೇ ಬಳಕೆಯಲ್ಲಿದೆ. ಆದರೂ ಸಾಮರ್ಥಿಕೆ ಪದ ಬೇಕೆ.

ಸಾರಾಂಶಕ ನಾ ಸಂಕ್ರಮಣ ಸಾರಾಂಶವನ್ನು/ತಿರುಳನ್ನು/ಸಾರವನ್ನು ವಿವರಿಸುವವನು. ‘ವಿಮರ್ಶಕ ಎನ್ನುವುದಕ್ಕಿಂತ ಸಾರಾಂಶಕ ಎನ್ನುವುದೇ ಒಳ್ಳೆಯದು. ಏಕೆಂದರೆ ಇವರ ಬರಹಗಳಲ್ಲಿ ಕೃತಿಯ ಸಾರಾಂಶ ಹಾಗೂ ಕೃತಿಯ ಬಗ್ಗೆ ಅವರಿವರು ಅಲ್ಲಲ್ಲಿ ಹೇಳಿದ ಮಾತುಗಳ ಸಾರಾಂಶಕ್ಕಿಂತ ಹೆಚ್ಚಿನದೇನೂ ಇರುವುದಿಲ್ಲ’. ‘ವಿಮರ್ಶಕ’ ಪದದ ಮಾದರಿಯ ಮೇಲೆ ಬಂದಿರುವ ಪದ. ವಿಮರ್ಶಕನನ್ನು ಲೇವಡಿ ಮಾಡಲು ಹುಟ್ಟು ಹಾಕಿರುವ ಪದ ಎನ್ನಬಹುದು.

ಸಾಲಿಗ ನಾ ಸುಧಾ ಸಾಲಲ್ಲಿ ನಿಂತಿರುವವನು, ಸಾಲಲ್ಲಿರುವವನು. ‘ಎರಡೂ ಪಕ್ಕಗಳಲ್ಲಿ ಕತ್ತಿನ ಮಟ್ಟದವರಿಗೂ ತಗಡುಗಳನ್ನು ಹೊಡೆದು ಮಧ್ಯದಲ್ಲಿ ನುಗ್ಗುವವರಿಂದ ಸಾಲಿಗನಿಗೆ ರಕ್ಷಣೆ ನೀಡಲಾಗಿದೆ. ‘ಸಾಲಿಗ’ ಎಂಬ ಪದಕ್ಕೆ ಸಾಲ ಕೊಟ್ಟವನು ಎಂಬರ್ಥ ಬರುವ ‘ಸಾಲಿಗನು ಬಂದು ಎಳೆವಾಗ’ ಎಂಬ ಸರ್ವಜ್ಞನ ವಚನವೇ ಇದೆ. ಆದರೆ ಇಲ್ಲಿ ಸಾಲಲ್ಲಿ ನಿಂತಿರುವವನು ಎನ್ನುವ ಹೊಸ ಅರ್ಥದೊಂದಿಗೆ ಬಳಕೆಯಾಗಿದೆ. ಈಗಾಗಲೇ ‘ಇಗ’ ಪ್ರತ್ಯಯ ಹಚ್ಚಿದ ಹಲವಾರು ಪದಗಳು ಬಳಕೆಯಲ್ಲಿವೆ ಉದಾಹರಣೆಗೆ ಸಂಗಡಿಗ, ಪ್ರವೇಶಿಗ, ಸಾಲಿಗ. ಆದರೆ ಇವುಗಳೆಲ್ಲಾ ‘ಅ’ ಸ್ವರಾಂತ್ಯ ಪದಗಳು. ಆದರೆ ‘ಉ’ ಸ್ವರಾಂತ್ಯ ಪದಗಳಲ್ಲಿ ಉದಾಹರಣೆಗೆ ಓದು, ಕೇಳು, ನೋಡು ಇಲ್ಲೆಲ್ಲಾ ‘ಗ’ ಪ್ರತ್ಯಯ ಮಾತ್ರ ಸೇರಿ ಓದುಗ, ನೋಡುಗ ಎಂದಾಗಿದೆ. ಆದ್ದರಿಂದ ಇಲ್ಲಿ ಸಾಲು ‘ಉ’ ಸ್ವರಾಂತವಾದ್ದರಿಂದ ಇಲ್ಲಿ ‘ಸಾಲುಗ’ ಎಂದಾಗಬಹುದು.

ಸಾಹಿತ್ಯಕತೆ ನಾ ಪುಸ್ತಕ ಮಾಹಿತಿ ಸಾಹಿತ್ಯದ ಗುಣ. ‘ಸಮಸ್ತ ಜ್ಞಾನವೂ ಒಂದು ಬಗೆಯ ಕಥನವೇ ಎನ್ನುವುದು ನನ್ನ ಶ್ರದ್ಧೆಯ ಒಂದು ಮುಖವಾದರೆ ಅದರ ಇನ್ನೊಂದು ಮುಖ ಎಲ್ಲ ಜ್ಞಾನಗಳನ್ನು ಸಾಹಿತ್ಯ ಮೀಮಾಂಸೆಯ ಪರಿಕರಗಳಿಂದ ಪ್ರವೇಶಿಸಲು ಸಾಧ್ಯ ಎಂಬ ನಿಲುವು’ ಎನ್ನುವ ಡಿ.ಆರ್.ಎನ್. ಸಾಹಿತ್ಯದ ಸಾಹಿತ್ಯಕತೆಯನ್ನು, ವಿಶಿಷ್ಟತೆಯನ್ನು, ಅನನ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ವಾದಿಸುತ್ತಾರೆ.’ ಗುಣವಾಚಕಗಳನ್ನು ‘ತೆ’ ಪ್ರತ್ಯಯದೊಂದಿಗೆ ನಾಮಪದಗಳನ್ನಾಗಿ ಮಾಡಿರುವ ಒಂದು ಉದಾಹರಣೆ. ಮಾದರಿ ರೂಪ: ವಿಶಿಷ್ಟತೆ, ಅನನ್ಯತೆ.

ಸ್ಥಾನಿ ನಾ ತರಂಗ ಸ್ಥಾನದಲ್ಲಿರುವವ. ‘ಭಾರತದ ಅದೃಷ್ಟ ಚೆನ್ನಾಗಿತ್ತು. ಅದು ದ್ವಿತೀಯ ಸ್ಥಾನಿಯಾಗಿ ‘ಸೂಪರ್‌ಸಿಕ್ಸ್‌’ಗೆ ಲಗ್ಗೆ ಹಾಕಿದೆ’. ನಾಮಪದಗಳು ವ್ಯಕ್ತಿಸೂಚಕವಾಗಿ ಮಾರ್ಪಡುವಾಗ ಕೆಲವೊಮ್ಮೆ ಪ್ರತ್ಯಯಗಳನ್ನು ಬಳಸಿದರೆ ಕೆಲವೊಂದು ನಾಮಪದಗಳನ್ನು ಆಂತರಿಕ ಬದಲಾವಣೆಯೊಂದಿಗೆ ವ್ಯಕ್ತಿ ಸೂಚಕ ಪದವನ್ನಾಗಿ ಮಾಡಲಾಗುತ್ತಿದೆ. ಮೊದಲನೆಯಕ್ಕೆ- ಕಾರ, ಗಾರ, ಇತ್ಯಾದಿ, ಎರಡನೆಯದಕ್ಕೆ ಪ್ರವಾಸ-ಪ್ರವಾಸಿ, ಉತ್ಸಾಹ-ಉತ್ಸಾಹಿ ಇತ್ಯಾದಿ. ಮೇಲಿನ ಪದ ಅಂತಹ ಒಂದು ಪ್ರಯತ್ನವಾಗಿದೆ.

ಸ್ಥಾಪನಕರ್ತೆ ನಾ ಲಂಕೇಶ ಪತ್ರಿಕೆ ಆರಂಭಿಸಿರುವಾಕೆ: ನೆಲೆಗೊಳಿಸಿರುವಾಕೆ. ‘ರಜೀವ್ ಗಾಂಧಿ ಮೆಡಿಕಲ್ ವಿ.ವಿ. ದ ಸ್ಥಾಪನಕರ್ತೆ ಹಾಗೂ ಪ್ರಪ್ರಥಮ ಉಪಕುಲಪತಿಯಾಗಿದ್ದು ಇತ್ತೀಚೆಗಷ್ಟೇ ನಿವೃತ್ತಿಯಾದ…..’. ಸ್ಥಾಪನೆ ಮಾಡುವವನು ಸ್ಥಾಪಿಸುವವನು ಸ್ಥಾಪಕ. ‘ಸ್ಥಾಪಕ’ ಪದದ ಸ್ತ್ರೀಲಿಂಗ ರೂಪ ‘ಸ್ಥಾಪಕಿ’. ‘ಕರ್ತ’ ಎಂಬ ಪದವನ್ನು ಉತ್ತರಪದವಾಗಿಟ್ಟುಕೊಂಡು ಪದಗಳೂ ರಚನೆಯಾಗುತ್ತವೆ. ಉದಾ: ಪತ್ರಕರ್ತ; ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಪದವಿದ್ದರೂ ಇನ್ನೊಂದು ಪದಸೃಷ್ಟಿ ಬೇಕೆ?.

ಸ್ವಯಂಚಲಿ ಗು ಪ್ರಜಾವಾಣಿ ತಾನೇ ತಾನಾಗಿ ಕೆಲಸ ಮಾಡುವ; ಸ್ವಯಂಚಾಲಿತ. ‘ಸರಣಿ ಗುಮ್ಮಟಗಳಲ್ಲಿ ನೀರೆತ್ತುವ ಸ್ವಯಂಚಲಿ ಸೈಫನ್‌ಗಳು: ವಿಶ್ವೇಶ್ವರಯ್ಯನವರ ತಂತ್ರಚಳಕದ ನೋಟ’. ‘ಸ್ವಯಂಚಾಲಿತ’ ಬಹುವಾಗಿ ಬಳಕೆಯಲ್ಲಿರುವ ಪದ. ‘ಸ್ವತಃಶ್ಚಲಿ’ ಎಂಬುದೂ ಬಳಕೆಯಲ್ಲಿರುವುದನ್ನು ಈ ಹಿಂದೆ ಗುರುತಿಸಲಾಗಿದೆ. ‘ಚಲಿ’ ಎಂಬುದಕ್ಕೆ ನಡೆಯುವುದು ಎಂಬರ್ಥವಿದೆ.

ಸ್ವಾಡಳಿತ ನಾ ಸಂಯುಕ್ತ ಕರ್ನಾಟಕ ತಮ್ಮದೇ ಆಡಳಿತವಿರುವುದು, ಯಾರ ನಿಯಂತ್ರಣಕ್ಕೂ ಒಳಪಡದ ಅಧಿಕಾರ. ‘ಹೆಚ್ಚಿನ ಸ್ವಾಡಳಿತ ಅಧಿಕಾರವನ್ನು ಜಮ್ಮು-ಕಾಶ್ಮೀರಕ್ಕೆ ನೀಡಿದರೆ ಅಪಾಯವೇನೂ ಇಲ್ಲ ಎಂಬಂತೆ ಕೆಲವು ಪತ್ರಿಕಾ ಲೇಖಕರು….’. ಸ್ವಾನುಭವ (ಸ್ವ+ಅನುಭವ) ಎಂಬುದು ಬಹುಶಃ ಮೇಲಿನ ಪ್ರಯೋಗಕ್ಕೆ ಆಧಾರವಿರಬಹುದು. ಆದರೆ (ಸ್ವಯಂ + ಆಡಳಿತ) ಸ್ವಯಮಾಡಳಿತ ಎಂಬುದು ಸರಿಯಾದ ಪ್ರಯೋಗವಾಗಿ ಬಳಕೆಯಲ್ಲಿದೆ.

ಸ್ವಾಧಿನೀಕರಣ ನಾ ಜಾಹೀರಾತು ವಶಕ್ಕೆ ತೆಗೆದುಕೊಳ್ಳುವ ಕೆಲಸ; ಸ್ವಾಧೀನ ಪಡೆಯುವ ಕ್ರಿಯೆ. ‘ಜಮೀನಿನ ಸ್ವಾಧಿನೀಕರಣ ಹಾಗೂ ಅನಂತರ ಅದರ ವಿಕಾಸದ ಕಾರ್ಯವು ಸಾಕಷ್ಟು ಸಮಯ ಕಳೆಯುವ ಕಾರ್ಯವಾದದರಿಂದ…….’. ‘ಈಕರಣ’ ಪ್ರತ್ಯಯ ಬಳಸಿ ತಂದಿರುವ ಪದ. ಸಾಮಾನ್ಯವಾಗಿ ಅ, ಇ, ಎ ಸ್ವರಗಳನ್ನು ಅಂತ್ಯವಾಗುಳ್ಳ ಪದಗಳಿಗೆ ‘ಈಕರಣ’ ಪ್ರತ್ಯಯ ಹತ್ತಿಸುವುದು ಕಂಡುಬರುತ್ತದೆ. ಆದರೆ ಎಲ್ಲಿ ಅವಶ್ಯಕವಿದೆಯೋ ಅಲ್ಲಿ ಮಾತ್ರ ಪ್ರತ್ಯಯ ಬಳಕೆ ಸರಿ. ಮೇಲಿನ ಉಲ್ಲೇಖದಲ್ಲಿ ‘ಸ್ವಾಧೀನ’ ರೂಪವೇ ಸಾಕಾಗಿತ್ತು. ಬಹುಶಃ ಇಂಗ್ಲಿಶಿನ ‘ಅಕ್ವಿಸಿಷನ್‌’ ಪದ ನೋಡಿ ‘ಐಸೇಶನ್’ ಎಂದು ತಿಳಿದು ರಚಿಸಲಾಗಿರುವ ಪದ.

ಸಿಂಪಡಿಕೆ ನಾ ಪ್ರಜಾವಾಣಿ ಚಿಮುಕಿಸುವುದು. ‘ರಾಸಾಯನಿಕ ವಸ್ತು ಸಿಂಪಡಿಕೆ: ೮ ಕಾರ್ಮಿಕರು ಅಸ್ವಸ್ಥ’. ‘ಸಿಂಪಡಣೆ’ ನಾಮಪದವಿರುವಾಗ ಇನ್ನೊಂದು ನಾಮಪದ ಸೃಷ್ಟಿ ಮಾಡಲಾಗಿದೆ. ಕೆಲವೊಂದು ಪದಗಳನ್ನು ಈ ರೀತಿ ಸೃಷ್ಟಿಸಬಹುದಾದರೂ ಸ್ವಲ್ಪ ಮಾರ್ಪಾಟಿನೊಂದಿಗೆ ಆಗುತ್ತದೆ. ಉದಾ: ಚುನಾವಣೆ-ಚುನಾಯಿಸು-ಚುನಾಯಿಸುವಿಕೆ; ಜಮಾವಣೆ-ಜಮಾಯಿಸು-ಜಮಾಯಿಸುವಿಕೆ. ಅಂದರೆ ಕ್ರಿಯಾಪದದ ನಂತರ ಇಕೆ ಪ್ರತ್ಯಯ ಸೇರಿಸುವುದು ರೂಢಿ. ಹಾಗಾದಾಗ ಮೇಲಿನ ಉಲ್ಲೇಖ ಸಿಂಪಡಿಸುವಿಕೆ ಎಂದಾಗುತ್ತದೆ.

ಸೀಮಾಂತ ನಾ ಸಂಯುಕ್ತ ಕರ್ನಾಟಕ ಸೀಮೆಯುದ್ಧಕ್ಕೂ ಬೆಳೆದವರು. ‘ಜ್ಞಾನ ದಿಗಂತದಲ್ಲಿ ಬಾನಾಡಿಯಾಗಿ ಹಾರಿ, ಬಹು ಎತ್ತರ ತಲುಪಿ ಸಾರ್ಥಕ ಬದುಕು ಬದುಕಿದ ಸೀಮಾಂತರು’. ‘ಸೀಮಾತೀತ’, ನಿಸ್ಸೀಮ ಇತ್ಯಾದಿ ಪದಗಳು ಬಳಕೆಯಲ್ಲಿವೆ. ಮೇಲಿನ ಪದ ಹೊಸದಾಗಿ ಹುಟ್ಟಿದಂತೆ ಕಾಣುತ್ತದೆ.

ಸುಂದರತೆ ನಾ ಸುಧಾ ಜಾಹಿರಾತು ಒಳ್ಳೆಯ ರೂಪ, ಚೆಲುವು. ‘ನನ್ನ ನಲಿದಾಡುವ ಬೆರಳುಗಳಿಗೆ ಸುಂದರತೆಯ ವರ್ಣ ನೀಡಿದೆ ಲಕ್ಮೆಯ ನೇಲ್ ಎನಾಮೆಲ್’. ‘ಸುಂದರ’ ಪದಕ್ಕೆ ‘ಸೌಂದರ್ಯ’ ನಾಮಪದವಾಗುತ್ತದೆ. ಅಲ್ಲದೆ ಸರಿಯಾದ ಪ್ರಯೋಗವು ಹೌದು. ಸುಂದರತೆ ಸರಿಯಾದ ರಚನೆಯಾದರೂ ಪ್ರಯೋಗ ಅಪರೂಪ.

ಸುಡತಿ ನಾ ಆಡು ಮಾತು ಸುಡುವಿಕೆ, ದಹಿಸುವಿಕೆ, ಉರಿಸುವಿಕೆ. ‘ಪ್ರತಿ ತಿಂಗಳ ಎಲೆಕ್ಟ್ರಿಕ್‌ಸುಡತಿ ಬಿಲ್ಲನ್ನು ಆಯಾ ತಿಂಗಳೇ ಕಟ್ಟಿಕೊಂಡರೆ ಒಳ್ಳೆಯದು’. ಏರಿಕೆ; ಹೆಚ್ಚಳ ಅರ್ಥದ ‘ಬಡತಿ ಅಥವಾ ಬಡ್ತಿ’ ಪದದ ಮಾದರಿಯಲ್ಲಿ ಬಳಕೆಗೊಂಡಿರುವ ಪ್ರಯೋಗ. ಮರಾಠಿ ಮೂಲದ ಬಡತಿ ಬಢತೀ ಒಂದೇ ಪದ. ಆದರೆ ‘ಸುಡತಿ’ ರಚನೆಯಲ್ಲಿ ‘ಸುಡು’ ಕ್ರಿಯಾವಾಚಕಕ್ಕೆ – ತಿ ಎಂಬ ಪ್ರತ್ಯಯವನ್ನು ಹಚ್ಚಿರುವುದನ್ನು ಕಾಣುತ್ತೇವೆ. ಉರಿಸುವಿಕೆ, ಸುಡುವಿಕೆ ಅರ್ಥದಲ್ಲಿ ‘ಸುಡುಗೆ ಅಥವಾ ಸುಡಿಗೆ’ ಎಂಬ ಪ್ರಯೋಗಗಳು ಕನ್ನಡದಲ್ಲಿ ದೊರೆಯುತ್ತವೆ.

ಸುದೂರ ನಾ ಹಾಯ್ ಬೆಂಗಳೂರ್ ಕ್ಷೇಮವಾಗಿರುವಷ್ಟು ದೂರ. ‘ಎಲ್ಲ ವಿಪ್ಲವಗಳ ಕಂಪನವಲಯದ ಸುದೂರ ನಿಂತ ಈ ವರ್ಗ ತನ್ನಿಂದಲೇ ಕ್ರಾಂತಿಯಾಗುತ್ತಿದೆ ಎಂಬ ಭ್ರಮೆಯಲ್ಲಿದೆ’. ‘ಸು’ ಪೂರ್ವ ಪ್ರತ್ಯಯವನ್ನು ಬಳಸಿದ ಕನ್ನಡದ ಅನೇಕ ಪದಗಳು ಬಳಕೆಯಲ್ಲಿವೆ. ಸುವಾಸನೆ, ಸುಗುಣ, ಸುಸಮಯ ಇತ್ಯಾದಿ. ಇಲ್ಲೆಲ್ಲ ‘ಒಳ್ಳೆಯ’ ಎಂಬರ್ಥ ಬರುತ್ತದೆ. ಮೇಲಿನ ಉದಾಹರಣೆಯಲ್ಲಿ ಅಪಾಯವಾಗದಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಉದ್ದೇಶ.

ಸುಧಾರಕ ನಾ ಪ್ರಜಾವಾಣಿ ಸುಧಾರಣೆಗೆ ಕಾರಣವಾಗುವ ಅಂಶ/ವಸ್ತು. ‘ಆಗಾಗ ಮಣ್ಣಿನ ರಾಸಾಯನಿಕ ಪರೀಕ್ಷೆ ಮಾಡಿಸುತ್ತಾ, ಯಾವುದಾದರೂ ಅಂಶ ಕೊರತೆಯಾಗಿದೆ ಎಂದು ಕಂಡು ಬಂದರೆ, ಸೂಕ್ತ ಸುಧಾರಕಗಳನ್ನು ಸೇರಿಸಬೇಕು’. ವ್ಯಕ್ತಿವಾಚಕವಾಗಿ (ಮಾದರಿ: ಪರೀಕ್ಷಕ, ಸಂಘಟಕ, ಪ್ರಚಾರಕ, ಮುಂತಾದ ಮಾದರಿಯಲ್ಲಿ) ಬಳಕೆಯಾಗುತ್ತಿದ್ದ ಈ ಪದ ಈಗ ವಸ್ತುವಾಚಕವಾಗಿ ಬಳಕೆಯಾಗಿದೆ. ಬಹುಶಃ ನಿವಾರಕ (ನೋವು ನಿವಾರಕ) ಪದವನ್ನನುಸರಿಸಿ ಬಂದಿರಬಹುದು.

ಸುಯೋಗ್ಯ ಗು ಜಾಹೀರಾತು ಸರಿಯಾದ, ತಕ್ಕುದಾದ. ‘ಸುಯೋಗ್ ಆಕಾರದ ಕಪ್‌ಗಳಿಂದಾಗಿ ದೃಢವಾಗಿದ್ದು ಆರಾಮದಾಯಕ ಆಧಾರ ದೊರೆಯುವುದು’. ಯೋಗ್ಯ ಎಂಬುದು ಇತ್ಯಾತ್ಮಕ ಪದ. ಒಳ್ಳೆಯ, ತಕ್ಕುದಾದ ಎಂಬರ್ಥ ಬರುತ್ತದೆ. ಅಯೋಗ್ಯ ನೇತ್ಯಾತ್ಮಕ. ಇತ್ಯಾತ್ಮಕವನ್ನು ಮತ್ತಷ್ಟು ಒತ್ತಿ ಹೇಳಲು ‘ಸು’ ಉಪಸರ್ಗ ಬಳಕೆಯಾಗಿದೆ.

ಸುಶಕ್ತ ಗು ಉದಯವಾಣಿ ಜಾಹೀರಾತು, ಶಕ್ತಿಯುತವಾದ; ಬಲಯುತವಾದ. ‘ಸುಶಕ್ತ ಗ್ರಾಮಸಭೆಯೆಡೆಗೆ, ಗ್ರಾಮ ಸ್ವರಾಜ್ಯದತ್ತ’. ‘ಸ’ ಮತ್ತು ‘ಸು’ ಉಪಸರ್ಗಗಳನ್ನು ಪದಗಳಿಗೆ ಸೇರಿಸಿ ‘ಒಳ್ಳೆಯ’ ಎನ್ನುವ ಅರ್ಥವನ್ನು ಪಡೆಯಲಾಗುತ್ತದೆ. ‘ಶಕ್ತ’ ಪದಕ್ಕೆ ‘ಸ’ ಉಪಸರ್ಗ ಬಳಕೆ ಈಗಾಗಲೇ ಇದ್ದು ‘ಸು’ ಬಳಕೆ ಅವಶ್ಯಕವಿಲ್ಲ ಎನಿಸುತ್ತದೆ.

ಸುಳ್ಳುಗಾರಿಕೆ ನಾ ಉದಯವಾಣಿ ಸುಳ್ಳು ನುಡಿಯುವಿಕೆ. ‘ಆರ್ಥಿಕ ಪರಿಸ್ಥಿತಿ ಬಗ್ಗೆ ಸುಳ್ಳುಗಾರಿಕೆ; ಸಿಪಿ ಚಿಂತನೆ’. ಸುಳ್ಳು > ಸುಳ್ಳುಗಾರ > ಸುಳ್ಳುಗಾರಿಕೆ. ಇದು ಸರಿಯಿಲ್ಲವಾದರೆ-ಗಾರಿಕೆ ಎಂಬ ಇಡಿ ಪ್ರತ್ಯಯ ಕಲ್ಪಿಸಿಕೊಳ್ಳಬೇಕು. ಬೇಹುಗಾರಿಕೆ, ತೋಟಗಾರಿಕೆ.

ಸುಸ್ಫುಟತೆ ನಾ ಜಾಹೀರಾತು ಸ್ಪಷ್ಟತೆ, ನಿಖರತೆ, ‘ಕ್ವಾಡ್ರಾ ಪಾಯಿಂಟ್‌ಫೋಕಸ್, ಸ್ಪಷ್ಟತೆ, ಬಣ್ಣ ಭಿನ್ನತೆ ಮತ್ತು ಆಳ, ಬಣ್ಣ ಮತ್ತು ಸುಸ್ಫುಟತೆಯನ್ನು ನಾಲ್ಕಾವರ್ತಿ ಅಧಿಕಗೊಳಿಸುತ್ತದೆ’. ಸ್ಫುಟ ಎಂಬುದು ನಾಮಪದ ಆಗಿದ್ದರೂ ಅದಕ್ಕೆ ‘ತೆ’ ಪ್ರತ್ಯಯ ಸೇರಿಸಿ ಮತ್ತೊಮ್ಮೆ ನಾಮಪದ ಮಾಡಿದ ನಂತರ ಸ್ಪಷ್ಟತೆಯನ್ನು ಮತ್ತೊಮ್ಮೆ ನೀಡಲು ‘ಸು’ ಉಪಸರ್ಗ ಸೇರಿಸಲಾಗಿದೆ. ಆದರೂ ಅರ್ಥ ಬೇಗ ಸ್ಫುರಿಸುವುದಿಲ್ಲ.

ಸ್ಥೂಲತನ ನಾ ಜಾಹೀರಾತು ದಪ್ಪಗಾಗುವಿಕೆ. ‘ಹೆಚ್ಚಿನ ಎಣ್ಣೆಯಿಂದಾಗಿ ಬರುವ ಜಡತನ ಮತ್ತು ಸ್ಥೂಲತನದಿಂದ ನಿಮ್ಮನ್ನು ಮುಕ್ತಿಗೊಳಿಸುತ್ತದೆ’. ‘ತನ’ ಪ್ರತ್ಯಯ ಹತ್ತಿದ ಹೊಸಪದ: ಸಾಮಾನ್ಯವಾಗಿ ಇಂತಹ ಕಡೆಗಳಲ್ಲಿ ಸಂಸ್ಕೃತ ಪ್ರತ್ಯಯ ಸೇರಿಸುವುದು ರೂಢಿಯಲ್ಲಿದೆ. ಆದರೆ ಇಲ್ಲಿ ಸಂಸ್ಕೃತಕ್ಕೆ ಕನ್ನಡ ಪ್ರತ್ಯಯ ಬಳಸಿರುವುದನ್ನು ಕಾಣಬಹುದು.

ಸೃಷ್ಟಿಶೀಲ ಗು ಸುಧಾ ಹೊಸದರ ನಿರ್ಮಾಣದಲ್ಲಿ/ರಚನೆಯಲ್ಲಿ ತೊಡಗಿರುವ. ‘ಇಂಥ ಸೃಷ್ಟಿಶೀಲ ಹೊಸ ಹೆಜ್ಜೆ ಎಷ್ಟು ಸಹಾಯಕವಾದೀತು ಕಾದು ನೋಡಬೇಕು’. ‘ಸೃಜನಶೀಲ’ ಪದ ಇದುವರೆಗೆ ಬಳಕೆಯಲ್ಲಿರುವ ಪದ. ‘ಕ್ರಿಯೇಟ್’ ಪದವನ್ನು ‘ಸೃಷ್ಟಿ’ ಎಂದು ನೇರ ಭಾಷಾಂತರಿಸಿ ತಂದಿರುವ ಪದ.

ಸೇಡುಮಾರಿ ನಾ ಪುಸ್ತಕವೊಂದರಲ್ಲಿ ಬಳಕೆ ದೇವತೆಯ ಹೆಸರು. ‘ಸೇಡುಮಾರಿಯರಿಗಿಂತ ತೀರಾ ಭಿನ್ನವಾದ ವರ್ಗಕ್ಕೆ ಸೇರಿದ ಯಕ್ಷಿಣಿಯರು ಬಹು ಸುಂದರವಾದ ದೇವತೆಗಳು’. ಈ ಪದ ಸಾಹಿತ್ಯಿಕ ವಲಯದಲ್ಲಿ ಉಪಯೋಗಗೊಂಡರೆ ಅದಕ್ಕೆ ಒಂದು ವಿಶಿಷ್ಟ ಅರ್ಥ ಬರಬಹುದು. ಅಂದರೆ ಸ್ಯಾಡಿಸ್ಟ್‌ಎಂಬರ್ಥದಲ್ಲಿ ಬಳಕೆಯಾಗಬಹುದು. ಅಂದರೆ ಇಲ್ಲಿ ಕೇವಲ ಸ್ತ್ರೀವಾಚಕ ಮಾತ್ರ ಸಾಧ್ಯವಾಗುತ್ತದೆ.’ ಮದರಿ: ಕೂಗುಮಾರಿ, ಹೆಮ್ಮಾರಿ.

ಸೇವಾವಕಾಶ ನಾ ಜಾಹೀರಾತು ಸೇವೆ ಮಾಡಲು ಇರುವ ಸಂದರ್ಭ ‘…..ಈ ಹಿಂದಿನ ಮೂರು ವರ್ಷಗಳ ಸೇವೆಗೆ ಅವಕಾಶ ಕಲ್ಪಿಸಿ ಇನ್ನು ಮುಂದಿನ ಅವಧಿಗೂ ಮತ್ತೆ ಸೇವಾವಕಾಶ ಕಲ್ಪಿಸಿದ್ದಕ್ಕಾಗಿ….’ ಸಂಸ್ಕೃತದ ಸಂಧಿ ನಿಯಮಕ್ಕೆ ಅನುಗುಣವಾಗಿ ತಂದಿರುವ ಪದ.

ಸ್ನೇಹಾಚಾರ ನಾ ಉದಯವಾಣಿ ಸ್ನೇಹಕ್ಕೆ ಪೂರಕವಾದ ನಡತೆ; ನಿಯಮ. ‘ಅದನ್ನು ಸ್ನೇಹಾಚಾರಗಳಿಂದ ಹಾಗೂ ಸಾಧ್ಯವಾದಷ್ಟು ಆತ್ಮೀಯತೆಯಿಂದ ನೋಡಿಕೊಳ್ಳಲು ಅಮೆರಿಕಾ ಬಯಸುತ್ತದೆ’. ‘ಶಿಷ್ಟಾಚಾರ’ ಮಾದರಿಯಲ್ಲಿ ಬಂದಿರುವ ಪದ. ಇಲ್ಲಿ ಇದೊಂದು ನಿಯಮ, ಕಟ್ಟುಪಾಡು ಅಷ್ಟೇ. ಅದು ಸದ್ವರ್ತನೆ, ಒಳ್ಳೆಯ ಆಚಾರ ಎಂಬರ್ಥ ಬರುವಂತಿಲ್ಲ.

ಸ್ಥೈರ್ಯವಂತ ನಾ ಮಯೂರ ಗಟ್ಟಿ ಮನಸ್ಸು ಉಳ್ಳವ, ದೃಢ ಮನಸ್ಸಿನವ. ‘ಗಣೇಶ ಈ ನಿಟ್ಟಿನಲ್ಲಿ ಜೀವನದಲ್ಲಿ ಎಂಥಹ ಕಷ್ಟ ಬಂದರೂ ಬದುಕಬಲ್ಲೆ ಎನ್ನುವ ಎದೆಗಾರಿಕೆಯನ್ನು ತೋರುವ ಸ್ಥೈರ್ಯವಂತ.’ ಅಂತ ಪ್ರತ್ಯಯದೊಡನೆ ಬಂದಿರುವ ಹೊಸ ಪದ. ಮಾದರಿ ಧೈರ್ಯವಂತ. ಧೈರ್ಯ, ಸ್ಥೈರ್ಯ ಪದಗಳು ಒಟ್ಟೊಟ್ಟಿಗೆ ಬಳಕೆಯಾಗುತ್ತಿದ್ದರೂ, ಧೈರ್ಯವಂತ ಬಂದಂತೆ ಸ್ಥೈರ್ಯವಂತ ಬಂದಿರಲಿಲ್ಲ.

ಸೌಂರಕ್ಷಣೆ ನಾ ಪ್ರಜಾವಾಣಿ ರಕ್ಷಿಸುವುದು. ‘ಬಾದಾಮಿ ಚಾಲುಕ್ಯರು ನಾಡಿನಲ್ಲಿ ವಾಸ್ತುಶಿಲ್ಪ ಮೂರ್ತಿಗಳು ಸೌಂರಕ್ಷಣೆಗಳಿಲ್ಲದೆ ಅವುಗಳು ಬೀದಿಗಳಲ್ಲಿ, ತಿಪ್ಪೆಗುಂಡಿ ಹಾಗೂ ರಸ್ತೆಗಳಲ್ಲಿ ಬಿದ್ದು ಹಾಳಾಗಿ ಹೋಗುತ್ತಿವೆ’. ಮೇಲಿನ ಪದ ಅರ್ಥದಲ್ಲಿ ಸರಿಯಾಗಿಯೇ ಬಳಕೆಯಾಗಿದೆ. ಆದರೆ ಬರೆಹದಲ್ಲಿ ಉಚ್ಚಾರಣೆಯಂತೆ ಬರೆಯಲಾಗಿದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಪದದ ಮೊದಲಕ್ಷರದ ಮುಂದೆ ಅನುಸ್ವಾರವಿದ್ದು ನಂತರ ಅವರ್ಗೀಯ ವ್ಯಂಜನಾಕ್ಷರವಿದ್ದರೆ ಮೊದಲ ಸ್ವರ ಅನುನಾಸಿಕೀಕರಣಗೊಳಿಸಿದ ‘ಔ’ ರೀತಿಯಲ್ಲಿ ಉಚ್ಚರಿಸಲಾಗುತ್ತದೆ. ಮೇಲಿನ ಪದದ ಜೊತೆಗೆ ಸಂಯಮ, ಸಂಪತ್ತು, ಸಂಹಾರ, ಸಂಲಗ್ನ ಸಂವಹನ, ಸಂಶಯಗಳನ್ನು ನೋಡಬಹುದು.

ಸಾರ್ವಭೌಮತೆ ನಾ ಉದಯವಾಣಿ ಪ್ರದೇಶದ ಪೂರ್ಣಾಧಿಕಾರ, ಅಧಿಪತ್ಯ. ‘….ಭಾರತದಲ್ಲಿ ಕಚೇರಿ ತೆರೆಯಲು ಅವಕಾಶ ನೀಡಬಾರದು. ಇದು ದೇಶದ ಸಾರ್ವಭೌಮತೆಯಲ್ಲಿ ರಾಜಿಮಾಡಿಕೊಂಡಂತೆ ಎಂದು….’ ಸಂಸ್ಕೃತ ಪದಗಳೊಡನೆ ಸಾಮಾನ್ಯವಾಗಿ ‘ತ್ವ’ ಪ್ರತ್ಯಯವೇ ಬರುತ್ತದೆ. ಆದರೆ ಇತ್ತೀಚೆಗೆ ‘ತೆ’, ‘ತ್ವ’ಗಳ ಬಳಕೆಯಲ್ಲಿ ಪಲ್ಲಟಗಳಾಗುತ್ತಿರುವುದರಿಂದ ‘ತೆ’ ಪ್ರತ್ಯಯದ ಬಳಕೆ ಹೆಚ್ಚುತ್ತಿದೆ.