ಹಂಗು ನಾ ಉದಯವಾಣಿ ಅತಂತ್ರ, ಯಾರಿಗೂ ಬಹುಮತವಿಲ್ಲದಿರುವ. ‘ಇನ್ನೊಂದು ಬಾರಿ ‘ಹಂಗಿನ’ ಸಂಸತ್ತು ಅಸ್ತಿತ್ವಕ್ಕೆ ಬಂದರೆ ಭಾರತೀಯ ಆರ್ಥಿಕ ವ್ಯವಸ್ಥೆ….’ ಇಂಗ್ಲಿಶಿನ ‘ಹಂಗ್’ ಎಂಬ ಪದವನ್ನು ಇಡಿಯಾಗಿ ಕನ್ನಡೀಕರಣಗೊಳಿಸಿ (ಲಿಪೀಕರಣ) ಬಳಸಲಾದ ಪದ. ಆದರೆ ಹಂಗು ಎಂಬ ಪದಕ್ಕೆ ಬೇರೆ ಅರ್ಥವಿರುವುದನ್ನು ಗಮನಿಸಬೇಕು.

ಹಗರಣಪ್ರಿಯ ನಾ ತರಂಗ ಹಗರಣವೇ ಇಷ್ಟವಾಗಿರುವವನು. ‘ಹಗರಣಪ್ರಿಯ’ ಕೆಸರಿಯವರ ನಾಯಕತ್ವದಲ್ಲಿ ವಂಚಕರ, ಹಗರಣ ಪ್ರಿಯರ, ಲಾಭಕೋರರ ಒಡ್ಡೋಲಗವಾಗಿ ಬಿಟ್ಟಿದೆ ಕಾಂಗ್ರೆಸ್ ಪಕ್ಷ’. ಶಾಂತಿಪ್ರಿಯ, ಕಲಹಪ್ರಿಯ ಪದಗಳ ಆಧಾರದ ಮೇಲೆ ಬಂದಿರುವ ಪದ. ಆದರೆ ಹಗರಣ ಪ್ರಿಯವಾಗುವುದೆಂದರೇನು? ಇಲ್ಲಿ ಲೇವಡಿ ಮಾಡಲು ಬಳಸಿರಬಹುದು.

ಹಗರಣಿಗ ನಾ ಸುಧಾ ಹಗರಣವನ್ನು ಉಂಟುಮಾಡುವವರು. ಹಗರಣದಲ್ಲಿ ಭಾಗಿಯಾಗಿರುವವರು. ‘ಇತ್ತೀಚಿನ ಎಲ್ಲ ಹಗರಣಗಳಲ್ಲೂ ಆ ಹಗರಣೆಗರಿಗೆ ಯಾವ ಶಿಕ್ಷೆಯೂ ಆಗಿಲ್ಲವಲ್ಲ’. ‘ಇಗ’ ಪ್ರತ್ಯಯವನ್ನೊಳಗೊಂಡ ಪದ ವ್ಯಕ್ತಿಯನ್ನು ಸೂಚಿಸುತ್ತದೆ. ಬೆಂಗಳೂರಿಗ, ಪಯಣಿಗ ಮಾದರಿಯಲ್ಲಿ ಬಂದಿರುವ ಪದ.

ಹಗುರತನ ನಾ ಜಾಹೀರಾತು ದೇಹದ ತೂಕ ಹೆಚ್ಚಾಗದ ಸ್ಥಿತಿ. ‘ಸರಿಯಾದುದನ್ನೇ ತಿನ್ನರಿ: ಹಗುರತನ ಅನುಭವಿಸಿರಿ’. ‘ತನ’ ಪ್ರತ್ಯಯದೊಡನೆ ಬಂದಿರುವ ಪದ. ಆದರೆ ಎಲ್ಲ ಪದಗಳೊಡನೆ ‘ತನ’ ತರುವುದು ಸಾಧುವಲ್ಲ. ವಸ್ತುವಾಚಕಕ್ಕೆ ಅಥವಾ ಗುಣವಾಚಕಕ್ಕೆ ‘ತನ’ ಸೇರಿ ಭಾವನಾಮವಾಗುತ್ತದೆ.

ಹಂಚಣಿಕೆ ನಾ ಸಂಯುಕ್ತ ಕರ್ನಾಟಕ ಹಂಚಿಕೆ. ವಿತರಣೆ. ‘ಖಾಸಗಿ ವಲಯದಿಂದ ಅಭಿವೃದ್ಧಿಯಾಗಬಹುದು. ಆದರೆ ಕಲ್ಯಾಣವಾಗುವುದಿಲ್ಲ… ಬಡವರು ಬಡವರಾಗಿಯೇ ಉಳಿಯುವವರು ನ್ಯಾಯ ಸಮ್ಮತ ಸಂಪತ್ತು ಹಂಚಣಿಕೆ ಸಾಧ್ಯವಾಗುವುದಿಲ್ಲ.’ ‘ಮಾಡಾಣಿಕೆ’ ‘ಹೊಂದಾಣಿಕೆ’ ಮಾದರಿ ಮೇಲಿನ ಪ್ರಯೋಗದ ಸೃಷ್ಟಿಗೆ ಕಾರಣವಿರಬಹುದು. ಹಾಗಾದಾಗ ‘ಹಂಚಾಣಿಕೆ’ ಎಂದಾಗಬೇಕು. ‘ಭಾವಣಿಕೆ’ ಎಂಬ ಪ್ರಯೋಗವಿದೆ. ನಿಷ್ಪತ್ತಿ ತಿಳಿಯದು.

ಹಪಹಪಿಕೆ ನಾ ಕರ್ಮವೀರ ಆತುರ, ಹಂಬಲ. ‘ಆದರೆ ಕಲಿಕೆಯ ಹಪಹಪಿಕೆ ಜ್ಞಾನದಾಹಕ್ಕೆ ವೈರಾಗ್ಯವೆಲ್ಲಿಯದು?’ ಉತ್ತರ ಕರ್ನಾಟಕದ ಕಡೆ ಬಳಕೆಯಲ್ಲಿರುವ ‘ಹಪಾಪಿ’ ಪದವೇ ‘ಹಪಾಹಪಿ’ ಎಂದು ರೂಪುಗೊಂಡು ‘ಇಸು’ ಪ್ರತ್ಯಯದೊಡನೆ ಕ್ರಿಯಾಪದವಾಗಿ ‘ಹಪಾಹಪಿಸು’ ಆಯಿತು. ಆನಂತರ ಕ್ರಿಯಾಪದದಿಂದ ರೂಪುಗೊಂಡು ಪುನಃ ನಾಮಪದವಾಗಿ ಮೇಲಿನ ಪ್ರಯೋಗ ಬಂದಿದೆ.

ಹಿಂಕೊಳ್ಳಿಕೆ ನಾ ಪ್ರಜಾವಾಣಿ ಷೇರು ಹಿಂಕೊಳ್ಳಿಕೆಯಿಂದ ಅನೇಕ ಅನುಕೂಲಗಳುಂಟು!’. ‘ಹಿಂ’ ಪೂರ್ವ ಪ್ರತ್ಯಯ ಸೇರಿಸಿದ ಮತ್ತೊಂದು ರಚನೆ. ಸಾಮಾನ್ಯವಾಗಿ ಇಂಥಲ್ಲಿ ಉತ್ತರಪದದ ಮೊದಲ ವ್ಯಂಜನಕ್ಕೆ ಘೋಷತ್ವ ಬರಬೇಕು. ಉದಾ: ಹಿಂಗಾಲು, ಹಿಂಗಾರು, ಹಿಂದೆಗೆ. ಆದರೆ ಇಲ್ಲಿ ಆ ನಿಯಮ ಪಾಲನೆ ಆಗಿಲ್ಲ.

ಹಿಂದಾಲೋಚನೆ ನಾ ಕನ್ನಡ ಪ್ರಭ ಹಿಂದೆ ನಡೆದುಹೋದ ಘಟನೆಗಳ ನೆನಪು ಮಾಡಿಕೊಳ್ಳುವುದು. ‘ಚಿತ್ರರಂಗದ ಸೋಲು: ಮಾಜಿ ಅಧ್ಯಕ್ಷರ ಹಿಂದಾಲೋಚನೆಗಳು’. ‘ಮುಂದಾಲೋಚನೆ’ ಪದದ ಮಾದರಿಯಲ್ಲಿ ಬಂದಿರುವ ಪದ. ‘ಮುಂದಾಲೋಚನೆ’ ಯಲ್ಲಿ ಮುಂದೆ ನಡೆಯಬಹುದಾದುದನ್ನು ಗಮನವಿಟ್ಟುಕೊಂಡು ನೋಡುವುದು ಎಂದು ಅರ್ಥಬಂದರೆ ಹಿಂದಾಲೊಚನೆಯಲ್ಲಿ ಆ ಅರ್ಥವಿಲ್ಲ. ಹಿಂದಾದ ಘಟನೆಗಳನ್ನು ನೆನಪುಮಾಡಿಕೊಳ್ಳುವುದನ್ನು ‘ಸಿಂಹಾವಲೋಕನ’ ಎಂಬ ಪದದಿಂದ ಗುರ್ತಿಸುವುದನ್ನು ಗಮನಿಸಬಹುದು.

ಹಿಂದಣಿಕೆ ನಾ ಪ್ರಜಾವಾಣಿ ಹಿಂದಿನದನ್ನು ಗಮನಿಸುವುದು. ‘ನಮ್ಮ ಕವಿಗಳು ಕಾವ್ಯ ಪರಂಪರೆಯನ್ನು ಅಭ್ಯಾಸ ಮಾಡಿಲ್ಲ. ಹಾಗೆ ಮಾಡದಿದ್ದರೆ ಗಾಳಿಯಲ್ಲಿ ನಿಂತಂತೆ ಅನ್ನಿಸುತ್ತದೆ. ನೆಲದಲ್ಲಿ ನಿಂತರೆ ನೋಡುವವರಿಗೂ ಹಿತ ಗಾಳಿಯಲ್ಲಿ ನಿಲ್ಲುವುದು ಕಷ್ಟದ ಕೆಲಸ. ಈ ಹಿಂದಣಿಕೆ ಸಾಧ್ಯವಾದರೆ ಮುಂದಾಣಿಕೆ ಸಾಧ್ಯ. ಆಗ ಹೊಂದಾಣಿಕೆ ಕೂಡಾ ಸಾಧ್ಯ’. ‘ಹಿಂದಣ’ ಪದಕ್ಕೆ ‘ಇಕೆ’ ಪ್ರತ್ಯಯ ಸೇರಿಸಿ ಆಗಿರುವ ಪದ. ಹಿಂದಣ ಪದಕ್ಕೆ ‘ಹಿಂದಿನ’ ಎಂದು ಅರ್ಥ ಬಂದರೆ, ಒಟ್ಟು ಶಬ್ದಾರ್ಥ ಹಿಂದಿನದನ್ನು ಗಮನಿಸುವುದು ಎಂದಾಗುತ್ತದೆ. ಮಾದರಿ: ಬರುವಿಕೆ, ಹೋಗುವಿಕೆ.

ಹಿಂದಾಳು ನಾ ಕನ್ನಡ ಪ್ರಭ ಬೆಂಬಲಿಗ, ಬೆಂಬಲ ನೀಡುವವ. ‘ಯಾವತ್ತೂ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿಯೇ ಕೆಲಸ ಮಾಡಿದ ಕಾಂಗ್ರೆಸ್‌ನ ‘ಅಧಿಕಾರದ ದಳ್ಳಾಗಿ ಮತ್ತು ಹಿಂದಾಳುವಾಗಿ’ ಸಿಪಿಎಂ ಕೆಲಸ ಮಾಡುತ್ತಿದೆ……’. ‘ಮುಂದಾಳು’ ಪದವನ್ನು ಗಮನಿಸಿ ತಂದಿರುವ ಪದ. ನೇರವಾಗಿ ಕಾರ್ಯನಿರ್ವಹಿಸದೆ, ಬೇರೊಬ್ಬರನ್ನು ಮುಂದೂಡುವ ಪ್ರವೃತ್ತಿಯನ್ನು ಸೂಚಿಸುವ ಪದವಾಗಿರಬಹುದು.

ಹಿಂದೂಕರಣ ನಾ ಕರಪತ್ರದಲ್ಲಿ ಬಳಕೆ: ಹಿಂದೂ ಸಂಪ್ರದಾಯಕ್ಕೆ ಒಳಗೊಳಿಸುವುದು. ‘ಹಿಂದೂಕರಣವಲ್ಲ ದಲಿತೀಕರಣ’. ‘ಈಕರಣ’ ಪ್ರತ್ಯಯ ಬಳಸಿ ಪದಸೃಷ್ಟಿ ನಡೆಯುತ್ತಿದ್ದರೂ, ಅದೇ ಮಾದರಿಯನ್ನನುಸರಿಸಿ ತರಲು ಹೊರಟಿರುವವರಿಗೆ ಇಲ್ಲಿ ಸಮಸ್ಯೆ ಎದುರಾಗಿದೆ. ಇಲ್ಲಿ ಕೇವಲ ‘ಕರಣ’ ಪ್ರತ್ಯಯ ಬಳಕೆಯಾಗಿದೆಯೇ ಹೊರತು. ‘ಈಕರಣ’ವಲ್ಲ. ಏಕೆಂದರೆ ‘ಅ’, ‘ಎ’ ಮತ್ತು ‘ಇ’ ಹಾಗೂ ಸ್ವರಾಂತ್ಯ ಪದಗಳಿಗೆ ವ್ಯಂಜನಾಂತ ಪದಗಳಿಗೆ ‘ಈಕರಣ’ ಸೇರಿಸುವುದು ಸುಲಭ ಸಾಧ್ಯ. ಆದರೆ ‘ಉ’ ಸ್ವರಾಂತ್ಯ ಪದಗಳಿಗೆ ಸೇರಿಸಲು ಸಾಧ್ಯವಿಲ್ಲ. ಹಾಗಾಗಿ ಮೇಲಿನ ಪ್ರಯೋಗದಲ್ಲಿ ಹಿಂದೂಕರಣವಾಗಿದೆ.

ಹಿಂಪಡೆತ ನಾ ಪ್ರಜಾವಾಣಿ ಹಿಂದಕ್ಕೆ ಪಡೆದುಕೊಳ್ಳುವುದು. ‘ಷೇರು ಹಿಂಪಡೆತ ಆದ ಮೇಲೆ ಕಂಪನಿಯ ಋಣ ಮತ್ತು ಷೇರು ಬಂಡವಾಳ ಎರಡೂ – ಒಂದರ ಪ್ರಮಾಣದಲ್ಲಿರಬೇಕು’. ‘ಹಿಂ’ ಪೂರ್ವಪ್ರತ್ಯಯವಾಗಿ ಬಳಸಿರುವ ರಚನೆ. ಆದರೆ ಅಘೋಷ ವರ್ಣ ‘ಪ’ ಘೋಷವಾಗದೇ ಬಕಾರವಾಗದೇ ಹಾಗೇ ಉಳಿದಿದೆ. ಉದಾ: ಹಿಂ+ಕಾಲು ಹಿಂಗಾಲು, ಹಿಂ+ತೆಗೆ ಹಿಂದೆಗೆ ಇತ್ಯಾದಿಗಳಲ್ಲಿ ಈ ಬದಲಾವಣೆ ಕಾಣಬಹುದು. ಹಿಂಕೊಳ್ಳಿಕೆಯ ಟಿಪ್ಪಣಿಯನ್ನು ಗಮನಿಸಿ.

ಹಿಗ್ಗಲಿಕೆ ನಾ ಲಂಕೇಶ್ ಪತ್ರಿಕೆ ಹಿಗ್ಗಲಿಸುವ ಕ್ರಿಯೆ, ಹಿಗ್ಗಿಸುವುದು. ‘ಭೂಮಿ ತಾಯಿಯಿಂದ ಬೇರ್ಪಟ್ಟ ಮನುಷ್ಯ ಅವಳನ್ನು ಮಲತಾಯಿಯನ್ನಾಗಿಸಿಕೊಳ್ಳುವ ಒಂದೇ ಐಡಿಯಾ ಹಿಗ್ಗಲಿಕೆಗೊಳಗಾಗಿದೆ’.

ಹಿತವರ್ಧಕ ಗು ಕನ್ನಡ ಪ್ರಭ ಒಳಿತನ್ನು ಹೆಚ್ಚಿಸುವ; ಹಿತಕಾಯುವ. ‘ರಾಜ್ಯಮಟ್ಟದ ದೊಂಬರ ಹಿತವರ್ಧಕ ಸಂಘ ಅಸ್ತಿತ್ವಕ್ಕೆ’. ಸಾಮಾನ್ಯವಾಗಿ ‘ಕಲ್ಯಾಣ’ ಪದವನ್ನು ಬಳಸಿ ಮೇಲಿನ ಅರ್ಥ ಪಡೆಯುವ ಪ್ರಕ್ರಿಯೆಯಿದೆ.

ಹೀನಾಯಜಯ ನಾ ಲಂಕೇಶಪತ್ರಿಕೆ ಅತ್ಯಲ್ಪ ಅಂತರದ ಗೆಲುವು. ‘ಆರಂಭದಿಂದಲೂ ಸ್ವಯಂಕೃತಾಪರಾಧದ ಮಹಿಮೆಯಿಂದ ಏದುಸಿರು ಬಿಡುತ್ತಿದ್ದ ಈತ ‘ಕೇವಲ ೬೯೦೭ ಮತಗಳ ಅಂತರದಿಂದ ‘ಹೀನಾಯಜಯ’ ತನ್ನದಾಗಿಸಿಕೊಂಡು ಗೆದ್ದು ಸೋತಿದ್ದಾರೆ’. ‘ಹೀನಾಯ’ ಪದವನ್ನು ‘ಸೋಲು’ ಎಂಬಂಥ ಪದಗಳೊಡನೆ ಬಳಸಲಾಗುತ್ತದೆ. ಆದರೆ ಅಧಿಕ ಅಂಕಗಳಿಸಿ, ಅಂತರದಿಂದ ಗಳಿಸಿದ ಜಯವನ್ನು ‘ಭರ್ಜರಿ ಜಯ’ ಎನ್ನುವಂತೆ ತೀರಾ ಕಡಿಮೆ ಅಂತರಕ್ಕೆ ‘ಹೀನಾಯ ಜಯ’ ಎನ್ನಬಹುದೇನೋ? ಆದರೂ ಪರಸ್ಪರ ಹೊಂದದ ಪದಗಳಂತೆ ಕಾಣುತ್ತದೆ.

ಹೃದಯಾರೆ ಗು ಸಂಯುಕ್ತ ಕರ್ನಾಟಕ ಹೃದಯತುಂಬಿ, ಹೃದಯಪೂರ್ವಕ. ‘ಸಂತೃಪ್ತ ಶಿಕ್ಷಕರು ಮಾತ್ರ ಹೃದಯಾರೆ ಪಾಠ ಮಾಡಬಲ್ಲರು’. ‘ಕೈಯ್ಯಾರೆ’, ‘ಮನಸಾರೆ’ ಮಾದರಿಯಲ್ಲಿ ಬಂದಿರುವ ಹೊಸ ಪದ.

ಹೃದಯಿ ನಾ ಕನ್ನಡ ಪ್ರಭ ತೆರೆದ ಮನಸ್ಸನ್ನು ಹೊಂದಿರುವವರು. ‘ಗಂಗೂಲಿ ತೆರೆದ ಹೃದಯಿ, ನೇರ ನಡಾವಳಿಯ ನಿಷ್ಠುರ ಹರ್ಷ ಬೋಗ್ಲೆ’. ಕೆಲವು ಪದಗಳನ್ನು ಆಂತರಿಕ ಬದಲಾವಣೆಗಳೊಂದಿಗೆ ಇನ್ನೊಂದು ಪದ ಸೃಷ್ಟಿಗೆ ಬಳಸಲಾಗುತ್ತದೆ. ಇಲ್ಲಿ ಪ್ರತ್ಯಯಗಳ ಬಳಕೆ ನಡೆಯುತ್ತದೆ. ವಸ್ತು ವಾಚಕದಿಂದ ವ್ಯಕ್ತಿವಾಚಕ ಮಾಡುವುದೂ ಇದರಲ್ಲಿ ಒಂದು ಬಗೆ’. ಉದಾ. ‘ಮೌನ’ದಿಂದ ‘ಮೌನಿ’ಯಾದಂತೆ ಮೇಲಿನ ಪ್ರಯೋಗದಲ್ಲಿಯೂ ಹೃದಯದಿಂದ ಹೃದಯಿ ಎಂಬ ವ್ಯಕ್ತಿವಾಚಕವನ್ನು ಸೃಷ್ಟಿಸಲಾಗಿದೆ. ‘ಸಹೃದಯಿ’ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಇದಲ್ಲೆ ‘ಹೃದಯವಂತ’ ಎಂಬ ಪದವೂ ಬಳಕೆಯಾಗಿದೆ.

ಹೆಚ್ಚಳಿಕೆ ನಾ ಜಾಹೀರಾತು ಹೆಚ್ಚಾಗುವಿಕೆ, ‘ಹೆಚ್ಚಳ’. ‘ವಿಮೆ ಇಳಿಸಲಾದ ಮೊಬಲಗಿನ ೭೫ ಹೆಚ್ಚಳಿಕೆ ಇದೆ’. ‘ವಿಮೆ ಇಳಿಸಲಾದ ಮೊಬಲಗಿನ ಪ್ರತಿ ಸಾವರಿ ರೂಪಾಯಿಗೆ ರೂ. ೭೫ರ ದರದಲ್ಲಿ ಹೆಚ್ಚಳಿಕೆ ಗ್ಯಾರಂಟಿ ಇದೆ’. ‘ಹೆಚ್ಚಳ’ ಪದಕ್ಕೆ ‘ಇಕೆ’ ಪ್ರತ್ಯಯ ಸೇರಿಸಿರುವಂತಿದೆ. ಆದರೆ ಅಪೇಕ್ಷಿತ ಅರ್ಥ ‘ಹೆಚ್ಚಳ’ ಪದದಿಂದಲೇ ಸಾಧ್ಯವಾಗಿದೆ ಅಲ್ಲವೆ?

ಹೆಬ್ಬಾಸೆ ನಾ ತರಂಗ ಮಹತ್ವಾಕಾಂಕ್ಷೆ; ಉನ್ನತವಾದ ಬಯಕೆ. ‘ಸಾಹಿತ್ಯ ಸೇವೆ ಪ್ರಶಸ್ತಿ ಬಾಚುವ ಹೆಬ್ಬಾಸೆ’. ಇಂಥ ಪದಗಳಲ್ಲಿ ವ್ಯಾಕರಣದ ನಿಯಮದಂತೆ ‘ಹಿರಿಯ’, ‘ದೊಡ್ಡ’ ಎಂಬ ಅರ್ಥ ನೀಡುವ ‘ಪಿರಿದು’ ಶಬ್ದದ ಮುಂದೆ ಬರುವ ಮತ್ತೊಂದು ಪದದ ಆದಿಯಲ್ಲಿ ವ್ಯಂಜನವಿದ್ದರೆ, ಆ ವ್ಯಂಜನದ ದ್ವಿತ್ವ ಒಂದು ಪದರಚನೆಯಾಗುತ್ತದೆ.

ಉದಾ: ಪಿರಿದು+ಬಯಕೆ= ಹೆಬ್ಬಯಕೆ, ಅಂತೆಯೇ ಹೆದ್ದಾರಿ, ಹೆಜ್ಜಾಲ ಇತ್ಯಾದಿ. ಮುಂದಿನ ಪದದ ಆದಿಯಲ್ಲಿ ಸ್ವರವಿದ್ದರೆ ಯಾವ ಬದಲಾವಣೆಯೂ ಇಲ್ಲದೆ ‘ಹಿರಿಯ’ ಎಂಬುದು ಹಾಗೇ ಉಳಿದು ಮುಂದಿನ ಪದ ಸೇರುತ್ತದೆ. ಉದಾ: ಹಿರಿಯ+ಆಸೆ= ಹಿರಿಯಾಸೆ. ಮೇಲಿನ ಪದಪ್ರಯೋಗ ಸರಿಯಾಗಿ ರೂಪುಗೊಂಡಿಲ್ಲ.

ಹೊಣೆತನ ನಾ ಪ್ರಜಾವಾಣಿ ಜವಾಬ್ದಾರಿ. ‘ಸಂವಿಧಾನ ೩೭೧-ಡಿ ವಿಧಿಯ ಪ್ರಕಾರ ಸೌಲಭ್ಯಗಳನ್ನು ಅನುಷ್ಠಾನಕ್ಕೆ ತರುವ ಹೊಣೆತನ ನೇರವಾಗಿ ರಾಜ್ಯ ಸರ್ಕಾರದ್ದಾಗಿದೆ.’ ‘ತನ’ ಪ್ರತ್ಯಯ ಸಾಮಾನ್ಯವಾಗಿ ಗುಣವಾಚಕಗಳಿಗೆ ಹತ್ತಿ ನಾಮಪ್ರಕೃತಿಗಳಾಗುತ್ತವೆ. ಉದಾ: ಸಿರಿತನ, ಬಡತನ, ಸೋಮಾರಿತನ, ಇತ್ಯಾದಿ. ಇಲ್ಲಿ ಹೊಣೆಯೆನ್ನುವುದೇ ನಾಮಪದವಾಗಿರುವಾಗ ‘ತನ’ ಪ್ರತ್ಯಯದ ಅವಶ್ಯಕತೆಯಿಲ್ಲ. ಅಥವಾ ‘ಹೊಣೆಗಾರಿಕೆ’ ಎಂಬುದಾಗಿ ಬಳಕೆಯಾಗಬಹುದು. ಬಹುಶಃ ‘ಹೊಣೆಗೇಡಿತನ’ ಎಂಬ ಪದದ ಮಾದರಿಯಲ್ಲೇನಾದರೂ ಬಂದಿರಬಹುದು. ‘ಹೊಣೆಗೇಡಿ’ ಗುಣವಾಚಕ ಎಂಬುದನ್ನು ಗಮನಿಸಬಹುದು.

ಹೊರದಾರಿ ನಾ ಕನ್ನಡಪ್ರಭ ಹೊರಕ್ಕೆ ಹೋಗುವ ದಾರಿ. ‘ಸುರಕ್ಷಿತ ಹೊರದಾರಿ ಪ್ರಸ್ತಾಪ ಮಂಡಿಸದ ಅಮೆರಿಕ’. ಇಂಗ್ಲೀಶಿನ ‘ಎಗ್ಸಿಟ್’ ಎಂಬ ಪದಕ್ಕೆ ಸಂವಾದಿಯಾಗಿ ರೂಪುಗೊಂಡಿರುವ ಪದ. ಆದರೆ, ಕೂಡಲೇ ಅರ್ಥವಾಗುವುದು ಕಷ್ಟ.

ಹೊರಂಗಡಿ ನಾ ನಾಮಫಲಕದಲ್ಲಿ ಬಳಕೆ ಚಿಲ್ಲರೆಯಾಗಿ ಮಾರಾಟ ಮಾಡುವ ಸ್ಥಳ. ‘….ನಮ್ಮ ಸಂಸ್ಥೆಯ ಹೊರಂಗಡಿಗಳ ಮೂಲಕ ಮಾರಾಟ ಮಾಡುವ ಉತ್ಪಾದನೆಗಳಲ್ಲಿನ ದೋಷ ಇತ್ಯಾದಿಗಳನ್ನು…’ ಇಂಗ್ಲಿಶಿನ ‘ಔಟ್ ಲೆಟ್’ ಎಂಬುದಕ್ಕೆ ಸಂವಾದಿಯಾಗಿ ಬಂದಿರುವ ಪದ.