ಅಂಕಣಾಧಿಪತಿ ನಾ ಸುಧಾ ಮುಖ್ಯ ಅಂಕಣ ಬರಹಗಾರಕ್ಕೆ ಒಡೆಯ. ‘ಕನ್ನಡ ಪತ್ರಿಕೋದ್ಯಮದಲ್ಲಿ ೫೦ ವರ್ಷ ಸತತವಾಗಿ ಅಂಕಣವನ್ನು ನಡೆಸಿಕೊಂಡು ಬಂದವರು ಬೇರಾರೂ ಇಲ್ಲವೇನೋ? ೫೦ ವರ್ಷದ ಕುಡಿನೋಟದ ಅಂಕಣಾಧಿಪತಿ ಸ್ವಾಮಿಯವರಿಗೆ ವಿನೋದದ ಸುವರ್ಣೋತ್ಸವ ಸಮಾರಂಭದಲ್ಲಿ ಆತ್ಮಿಯ ಸನ್ಮಾನವನ್ನು ಸಂಪಾದಕ ವರ್ಗ ಹಮ್ಮಿಕೊಂಡಿದೆ.’ ಲಕ್ಷಾಧಿಪತಿ; ಕೋಟ್ಯಾಧಿಪತಿ ಮಾದರಿಯಲ್ಲಿ ಬಂದಿರುವ ಪದ.

ಅಂಕೀಕರಣ ನಾ ಕನ್ನಡಗಣಕಪರಿಷತ್ತು ಅಂಕಿಗಳಿಗೆ ಒಳಪಡಿಸುವುದು ‘‘ಕನ್ನಡ ಗಣಕ ಪರಿಷತ್ ಆರಂಭಿಸಿರುವ ಕನ್ನಡ ಮಾಹಿತಿ ಸಂಚಯ ಎಂಬ ಕನ್ನಡ ಮಾಹಿತಿಯ ಆಕರ ಇಷ್ಟರಲ್ಲಿಯೇ ಉದ್ಘಾಟನೆಯಾಗಲಿದೆ. ಈ ಹಿಂದೆ ತಮ್ಮಲ್ಲಿ ಪ್ರಸ್ತಾಪ ಮಾಡಿದಂತೆ ಇದು ಕನ್ನಡದ ಅಂಕೀಕರಣದ ಪ್ರಮುಖ ಹೆಜ್ಜೆಯಾಗಿದೆ.’’ ಇಂಗ್ಲಿಶಿನ ‘digitaizationಗೆ ಸಂವಾದಿಯಾಗಿ ‘ಈಕರಣ’ ಪ್ರತ್ಯಯ ಹಚ್ಚಿ ಬಳಕೆಯಾಗುತ್ತಿದೆ. ‘ಅಂಕಿ’ ಪದವೇ ಸಾಕಾಗಿತ್ತು. ‘ಈಕರಣ’ ಪ್ರತ್ಯಯದ ಬಳಕೆ ಬೇಕಾಗಿರಲಿಲ್ಲ.

ಅಕುಶಲ ನಾ ಹೊಸತು ಸಂತೋಷವಿಲ್ಲದ ‘ಎಲ್ಲ ಕೆಡುಕುಗಳ ಮೂಲವೂ ಸಕಲ ಅಕುಶಲ ವಿಚಾರಗಳೂ ದುಃಖವೆಂದೇ ಕರೆಸಿಕೊಳ್ಳುತ್ತವೆ.’ ‘ಅ’ ಎಂಬ ನಿಷೇಧಾರ್ಥಕ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ಅಕ್ಷರವಂ ನಾ ವಿಜಯಕರ್ನಾಟಕ ಓದು ಬರಹ ಬಲ್ಲವನು. ‘ಕೆಲವು ಕಾಲೇಜುಗಳಲ್ಲಿ ಪ್ರತ್ಯೇಕ ಗ್ರಂಥಪಾಲಕರು ಇರುತ್ತಾರೆ. ಆದರೆ ಇವರು ಹೆಚ್ಚಾಗಿ ಭಡ್ತಿಯಾಗಿ ಮೆಲೇರಿದ ಅರೆ ಅಕ್ಷರವಂತರು!’ಮೇಲಿನ ಪದವನ್ನು ಬುದ್ದಿವಂತ; ಸಿರಿವಂತ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಅಕ್ಷರಸ್ಥ ಪದ ಇರುವಾಗ ಅಕ್ಷರವಂತ ಪದ ರಚನೆ ಬೇಕಾಗಿಲ್ಲ.

ಅಕ್ಷರ ಭಯೋತ್ಪಾದನೆ ನಾ ಅಗ್ನಿ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವುದರ ಮೂಲಕ ಜನರಲ್ಲಿ ಅಘಾತವನ್ನುಂಟು ಮಾಡುವ ಚಟುವಟಿಕೆ. ‘ಈತ ನಡೆಸುತ್ತಿರುವ ಅಕ್ಷರ ಭಯೋತ್ಪಾದನೆಯಿಂದ ನಿಜಕ್ಕೂ ಇವರು ಕಂಗಾಲಾಗಿದ್ದಾರೆ’. ಅಕ್ಷರ ಭಯೋತ್ಪಾದನೆ (ಲಾಂಗ್ವೇಜ್ ಟೆರರಿಸಂ) ಎಂಬ ರಚನೆಯೇ ವಾಕ್ಯದ ಅರ್ಥವನ್ನು ವಿವರಿಸುತ್ತದೆ. ಮಾದರಿ : ಮಾದಕ ಭಯೋತ್ಪಾದನೆ.

ಅಂಗದಾನ ನಾ ಕನ್ನಡಪ್ರಭ ಬೇರೊಬ್ಬರಿಗೆ ದೇಹದಾನ ಮಾಡುವುದು. ‘ಅಂಗದಾನ ಯಾರು ಮಾಡಬಹುದು’ ೧೮ ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರೂ ಕೂಡ ಮಾಡಬಹುದೇ? ಇದನ್ನು ಮತದಾನ, ಅನ್ನದಾನ, ನೇತ್ರದಾನ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಅಡ್ಡಾಟ ಕ್ರಿ ಸುಧಾ ಅಡ್ಡಾಡು, ಅತ್ತಿತ್ತ ಸುಳಿದಾಡು. ‘ಅಪರಿಚಿತರ ನಡುವೆ ಅಡ್ಡಾಟ ಆದರೆ ಹಠ ಬಿಡದ ಪ್ರಯತ್ನ. ಕನ್ನಡದಲ್ಲಿ ಅಡ್ಡಾಡು ಪದ ಬಳಕೆಯಲ್ಲಿದೆ. ‘ಅಡ್ಡಾಟ’ ಬಳಕೆಯಲ್ಲಿ ಇಲ್ಲ. ಸುತ್ತಾಟ-ಸುತ್ತಾಡು, ಕಿತ್ತಾಟ-ಕಿತ್ತಾಡು ಪದಗಳು ಬಳಕೆಯಲ್ಲಿವೆ. ಅದೇ ರೀತಿ ಅಡ್ಡಾಟ-ಅಡ್ಡಾಡು ಆಗಬಹುದು.

ಅಡ್ಡೋಪದೇಶ ನಾ ಅಗ್ನಿ ಮರು ಉಪದೇಶ ಮಾಡುವುದು. ‘ಇದರ ಜೊತೆಗೆ ಒಂದು ಅಡ್ಡೋಪದೇಶವನ್ನು ಹೊಡೆದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ವಾಗ್ದಾಳಿ ನಡೆಸಿರಿ ಎಂದು’. ಅಡ್ಡ+ಉಪದೇಶ ಎಂಬ ಪದಗಳನ್ನು ಸೇರಿಸಿ ಪದ ರಚಿಸಲಾಗಿದೆ. ‘ಅಡ್ಡ’ ಕನ್ನಡ ಪದ. ಇದಕ್ಕೆ ‘ಉಪದೇಶ’ ಎಂಬ ಸಂಸ್ಕೃತ ಪದವನ್ನು ಸೇರಿಸಿ, ಸಂಸ್ಕೃತ ಸಂಧಿ ನಿಯಮಕ್ಕನುಸಾರವಾಗಿ ಬಳಕೆ ಮಾಡಲಾಗಿದೆ.

ಅತಿಳುವಳಿಕೆ ನಾ ಪ್ರಜಾವಾಣಿ ಅರಿವು ಇಲ್ಲದ; \ಳುವಳಿಕೆಯಿಲ್ಲದ. ‘ಅಧ್ಯಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು ಖಂಡಿತಾ ಸರಿ ಅಲ್ಲ ಆದರೆ…. ಆದರೆ…. ಅವರ ಈ ಅತಿಳುವಿಕೆಯ ಈ ಅಪ್ರಾಮಾಣಿಕ ನಿಲುವುಗಳ ಅಭಿವ್ಯಕ್ತಿಗಳು …..’ ‘ತಿಳುವಳಿಕೆ’ ಎಂಬ ನಾಮಪದ ನಿಷೇಧ ರೂಪವನ್ನು ಅರಿವು ಇಲ್ಲದ; ಜ್ಞಾನವಿಲ್ಲದ, ತಿಳುವಳಿಕೆಯಿಲ್ಲದ ಎಂದು ಹೇಳುವುದು ರೂಢಿ. ಆದರೆ ‘ಅ’ ನಿಷೇಧ ಪೂರ್ವಪ್ರತ್ಯಯವನ್ನು ಬಳಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಅದಲಿತ ನಾ ಲಂಕೇಶ್ಪತ್ರಿಕೆ ದಲಿತರಲ್ಲದ ದಲಿತೇತರ. ‘ಆದ್ದರಿಂದಲೇ ದಲಿತ-ಅದಲಿತ ಎಂದು ಯಾವುದೇ ರೀತಿಯ ಜಾತಿ ಕಾರಣ ಮಾಡಿದರೂ ಅದು ರಾಜಕೀಯದಲ್ಲಿ ಧರ್ಮವನ್ನು ಎಳೆದು ತಂದಂತೆಯೇ ಸರಿ;’ ಪದದ ನೇತ್ಯಾತ್ಮಕ ಅರ್ಥ ಪಡೆಯಲು ಬಹು ಸುಲಭಮಾರ್ಗ ‘ಅ’ ಪೂರ್ವ ಪ್ರತ್ಯಯದ ಬಳಕೆಯಾಗಿದೆ. ಮಾದರಿ: ಜಾತ್ಯತೀತ:ಅಜಾತ್ಯತೀತ, ‘ನಾನ್ ದಲಿತ’ ಪದಕ್ಕೆ ಸಂವಾದಿಯಾಗಿ ಮೇಲಿನ ಪದವನ್ನು ರಚನೆ ಮಾಡಲಾಗಿದೆ.

ಅದೂರದೃಷ್ಟಿ ನಾ ಕನ್ನಡಪ್ರಭ ಮುಂದಾಲೋಚನೆ ರಹಿತವಾದ ‘ಸರ್ಕಾರ ಅದೂರ ದೃಷ್ಟಿಯ ಪರಿಣಾಮವಾಗಿ ಆದ ಕೊರತೆಯನ್ನು ತುಂಬಲು ಗ್ರಾಹಕರ ಜೇಬಿಗೆ ಕೈ ಹಾಕುವುದು ಸಮಂಜಸವಾಗಬಾರದು ಎಂದು ಕೆಇಆರ್ ಬಿಯು….’ ‘ದೂರದೃಷ್ಟಿ’ ಎಂಬ ನಾಮಪದಕ್ಕೆ ನಿಷೇಧ ರೂಪವನ್ನು ಸೇರಿಸಿ ಬಳಕೆ ಮಾಡಲಾಗಿದೆ. ದೂರದೃಷ್ಟಿರಹಿತವಾದ, ದೂರದೃಷ್ಟಿಹೀನವಾದ ಎಂದು ಹೇಳುವುದು ರೂಢಿ. ಆದರೆ ‘ಅ’ ನಿಷೇಧ ಪೂರ್ವ ಪ್ರತ್ಯಯವನ್ನು ಬಳಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ಆ ಮಾದರಿಗೆ ಇದೊಂದು ಸೇರ್ಪಡೆ.

ಅದ್ದೂರಿತನ ನಾ ಕರ್ಮವೀ ವೈಭವ ‘ಅಬ್ಬಬ್ಬಾ ಅಮಿತಾಬ್ ಅದ್ಧೂರಿತನ!’ ತನ ಪ್ರತ್ಯಯದೊಂದಿಗೆ ಬಂದಿರುವ ಪದವಿದು..’

ಅಧರ್ಮದರ್ಶಿ ನಾ ಲಂಕೇಶಪತ್ರಿಕೆ ಅಧರ್ಮವನ್ನು ಆಚರಿಸುವವನು. ‘ಮಂದರ್ತಿ ದೇವಳದ ಅಧರ್ಮದರ್ಶಿಗಳು ಒಬ್ಬ ಪ್ರಳಯಾಂತಕ ವಿಪ್ರನನ್ನು ಪಾದ್ರಿಯಾಗಿ ಅಪಾಯಿಂಟ್ ಮಾಡಿಕೊಂಡಿದ್ದಾರೆ. ‘ಅ’ ನಿಷೇದ ಪ್ರತ್ಯಯ ಬಳಸಿ ತಂದಿರುವ ಪದ. ವಿರುದ್ದಾರ್ಥ ಪಡೆಯಲು ಸುಲಭ ಮಾರ್ಗವಿದು.

ಅಧಿಕಾರೀಕರಣ ನಾ ಕನ್ನಡಪ್ರಭ ಅಧಿಕಾರ ಮಾಡುವುದು. ‘ಅಧಿಕಾರೀಕರಣದಿಂದ ಸಂಪೂರ್ಣ ಸಾಕ್ಷರತೆ ಸಾಧನೆ ಅಸಾಧ್ಯವೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ ಅಬ್ರಿಪ್ರಾಯ ಪಟ್ಟರು! ಬ್ಯೂರೋಕ್ರಸಿ ಸಂವಾದಿಯಾಗಿ ಪದವನ್ನು ಬಳಸಿರಬಹುದು. ಇತ್ತೀಚೆಗೆ ‘ಈಕರಣ’ ಪ್ರತ್ಯಯ ಹಚ್ಚಿ ಅನೇಕ ಪದಗಳನ್ನು ಸೃಷ್ಟಿಸಲಾಗುತ್ತಿದೆ. ಆ ಮಾದರಿಗೆ ಇದೊಂದು ಸೇರ್ಪಡೆ.

ಅನಂಟು ನಾ ಪ್ರಜಾವಾಣಿ ಒಬ್ಬರಿಂದ ಒಬ್ಬರಿಗೆ ಸೋಂಕಿನ ಮೂಲಕ ಹರಡುವ ರೋಗ. ‘ಅನಂತ ವ್ಯಾಪ್ತಿಯ ಅನಂಟು ರೋಗಗಳು’ ಮೇಲುನೋಟಕ್ಕೆ ಇದು ನಂಟು ಪದದ ನಿಷೇಧ ರೂಪವನ್ನು ಹೇಳುವಂತೆ ತೋರಿದ್ದರೂ, ಆ ಸಂಬಂಧದಲ್ಲಿ ಮೇಲಿನ ರಚನೆ ಆಗಿಲ್ಲ. ಅಂಟು ಪದಕ್ಕೆ ‘ಅನ್’ ಪ್ರತ್ಯಯವನ್ನು ಸೇರಿಸಿ ಮೇಲಿನ ರಚನೆಯನ್ನು ಪಡೆಯಲಾಗಿದೆ. ಇಲ್ಲಿ ಅಂಟು ಕನ್ನಡ ಪದ, ‘ಅನ್’ ಸಂಸ್ಕೃತದ ಪ್ರತ್ಯಯ. ಹೊಸ ರಚನೆಗಳಲ್ಲಿ ಇದು ಸಾಮಾನ್ಯವಾದ ಸಂಗತಿಯಾಗಿದೆ.

ಅನುರಾಗಿಣಿ ನಾ ವಿಜಯಕರ್ನಾಟಕ ಗಾಡವಾದ ಪ್ರೀತಿಯುಳ್ಳವಳು. ‘ಮಾತನಾಡಿದ್ದು ಧಣಿಯೆ, ಇಲ್ಲಿ ಗಿಣಿಯೇ ಅಥವಾ ಅನುರಾಗಿಣಿಯೇ?’ ‘ಅನುರಾಗಿಪುಲ್ಲಿಂಗ’ ಎಂದು ತಿಳಿದು -ಣಿ ಸ್ತ್ರೀಸೂಚಕ ಪ್ರತ್ಯಯ ಸೇರಿಸಿ ಸ್ತ್ರೀಲಿಂಗವಾಗಿ ಬಳಕೆ ಮಾಡಲಾಗಿದೆ.

ಅನುದ್ವಿಗ್ನ ಗು ಕರ್ಮವೀ ಉದ್ವಿಗ್ನಗೊಳ್ಳದೆ ಇರುವುದು. ‘ನಿಮ್ಮ ಅನುದ್ವಿಗ್ನ, ಸಮಾಧಾನಚಿತ್ತ ನಿಮ್ಮ ಬಹುದೊಡ್ಡ ಆಸ್ತಿ’, ‘ಉದ್ವಿಗ್ನ’ ಪದಕ್ಕಿಂತ ಅರ್ಥದಲ್ಲೇನೂ ಹೊಸತನವಿಲ್ಲ. ತಳಮಳಗೊಳ್ಳದೆ ಇರುವ ಸ್ಥಿತಿಗೆ ಅನುದ್ವಿಗ್ನ ಎಂದು ಬಳಕೆ ಮಾಡಲಾಗಿದೆ.

ಅನಿರ್ಮಲೀಕರಣ ನಾ ಸುಧಾ ನಿರ್ಮಲೀಕರಣ ಇಲ್ಲದ ಸ್ಥಿತಿ. ‘ಅನಿರ್ಮಲೀಕರಣದಲ್ಲಿ ರಾಜ್ಯ ಕಡೆಯ ಸ್ಥಾನದಲ್ಲಿದೆ.’ ಪದದ ನೇತ್ಯಾತ್ಮಕ ಅರ್ಥವನ್ನು ಪಡೆಯಲು ‘ಅ’ ಎಂಬ ಪೂರ್ವ ಪ್ರತ್ಯಯದ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅ ಗುಂಪಿಗೆ ಇದೊಂದು ಸೇರ್ಪಡೆ.

ಅನ್ಯಾಕ್ರಮಣ ನಾ ಕರ್ಮವೀ ಬೇರೆಯವರು ಮಾಡುವ ಆಕ್ರಮಣ. ‘‘ಅಡುಗೆ ಮನೆಗೆ ಅನ್ಯಾಕ್ರಮಣ’’ ‘ಅತಿಕ್ರಮಣ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ‘ಅತಿಕ್ರಮ’ ಕ್ರಮತಪ್ಪುವುದು. ಮೀರುವುದು ಎಂದರ್ಥ. ಆದರೆ ‘ಅನ್ಯಾಕ್ರಮಣ’ ವ್ಯಕ್ತಿವಾಚಕವಾಗಿ ಬಳಕೆಯಾಗಿದೆ.

ಅಭ್ಯರ್ಥಿತ್ವ ನಾ ವಿಜಯಕರ್ನಾಟಕ ಉಮೇದುವಾರಿಕೆ ‘ಡಿಎಂಕೆ ಸಮಾಜವಾದಿ ಪಕ್ಷ ಮುಂತಾದ ಪಕ್ಷಗಳು ಪ್ರಧಾನಿ ಪಟ್ಟಕ್ಕೆ ಸೋನಿಯಾಗಾಂಧಿ ಅವರ ಅಭ್ಯರ್ಥಿತ್ವವನ್ನು ಬೆಂಬಲಿಸಿವೆ. ‘ಅಭ್ಯರ್ಥಿ’ ಪದಕ್ಕೆ ‘ತ್ವ’ ಪ್ರತ್ಯಯ ಸೇರಿಸಿ ಸೃಷ್ಟಿಸಲಾಗಿದೆ. ಪದವೇನೋ ಹೊಸದಾದರೂ ಸುತ್ತಿ ಬಳಸಿ ಹೇಳಲಾಗಿದೆ.

ಅಭಾಗ್ಯವಂತೆ ನಾ ಕನ್ನಡಪ್ರಭ ಭಾಗ್ಯವಂತೆಯಲ್ಲದ. ‘ಬಸಂತ ಮತ್ತು ದೇವಕಿ’ ಅಂತಹ ಅಬಲೆಯರ ಕಣ್ಣೀರು ನಮ್ಮ ಸುಷ್ಮಾ ಸ್ವರಾಜ್, ಶಬನಾ ಆಜ್ಮಿ, ಮಾರ್ಗರೇಟ್ ಆಳ್ವ, ಅಂಬಿಕಾ ಸೋನಿ, ಕಿರಣ್ ಬೇಡಿ ಮುಂತಾದವರ ಕಣ್ಣಿಗೆ ಇನ್ನೂ ಕಂಡಿಲ್ಲವೇ? ಮಹಿಳಾ ಮೀಸಲಾತಿ ಚಳುವಳಿ ಮಾಡುತ್ತಿರುವವರ ಬಳುವಳಿ, ಈ ಅಭಾಗ್ಯವಂತೆಯರ ಸಾಲಿಗೆ ಏನಿದೆ?….! ಪದದ ನೇತ್ಯಾತ್ಮಕ ಅರ್ಥಪಡೆಯಲು ಬಹು ಸುಲಭಮಾರ್ಗ ‘ಅ’ ಪ್ರತ್ಯಯದ ಬಳಕೆ. ಆದರೆ ಇತ್ತೀಚಿನ ದಿನಗಳಲ್ಲಿ ವಿರುದ್ಧ ಅರ್ಥ ಪಡೆಯಲು ಪೂರ್ವ ಪ್ರತ್ಯಯದ ಬಳಕೆ ಹೆಚ್ಚಾಗುತ್ತಿದೆ. ಆ ಗುಂಪಿಗೆ ಇದೊಂದು ಸೇರ್ಪಡೆ.

ಅಮಂಗಳವಾರ ನಾ ಸಂಜೆ ಮಂಗಳಕರವಲ್ಲದ ವಾರ. ‘ಅಮಂಗಳವಾರ ದುರಂತಗಳ ಸರಮಾಲೆ : ೮ ಮಂದಿ ದುರ್ಮರಣ! ನಿಷೇದಾರ್ಥಕ ರೂಪವನ್ನು ಪಡೆಯಲು ‘ಅ’ ಎಂಬ ನಿಷೇದಾರ್ಥಕ ಪ್ರತ್ಯಯವನ್ನು ಸೇರಿಸಿ ಪದರಚನೆ ಮಾಡುವುದು ಸುಲಭವಾದ ಮಾರ್ಗವಾಗಿದೆ.

ಅಮೆರಿಕೀಕರಣ ನಾ ಉದಯವಾಣಿ ಅಮೆರಿಕ ಸಂಸ್ಕೃತಿಗೆ ಒಳಗುಮಾಡುವುದು. ‘ಯಾಕೆಂದರೆ ಜಾಗತೀಕರಣ ಎಂದರೆ ಅಮೆರಿಕೀಕರಣ’ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತದೆ’ ಇತ್ತೀಚಿನ ದಿನಗಳಲ್ಲಿ ದೇಶವನ್ನು, ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ‘ಈಕರಣ’ ಪ್ರತ್ಯಯವನ್ನು ಹಚ್ಚಿ ಪದರಚನೆ ಮಾಡಲಾಗುತ್ತಿದೆ. ಅಲ್ಲದೆ ಮನುಷ್ಯನ ಸ್ವಭಾವವನ್ನು ಪ್ರಭಾವವನ್ನು ಬಿಂಬಿಸಲು ‘ಈಕರಣ’ ಪ್ರತ್ಯಯವನ್ನು ಹಚ್ಚಲಾಗುತ್ತಿದೆ. ಮೇಲಿನ ಪದ ಅಮೆರಿಕಾದ ಸಂಸ್ಕೃತಿಯನ್ನು ಗಮನಿಸಿ ರಚನೆ ಮಾಡಲಾಗಿದೆ. ಮಾದರಿ: ಆಫ್‌ಘಾನಿಸ್ತಾನೀಕರಣ, ಭಾರತೀಕರಣ, ವೀರಪ್ಪನೀಕರಣ.

ಅಯಶಸ್ವಿ ಗು ತರಂಗ ಯಶಸ್ವಿಯಲ್ಲದ. ‘ಅದು ಸ್ವಲ್ಪದರಲ್ಲಿ ಅಯಶಸ್ವಿಯಾದರೂ, ಆರು ಮಂದಿ ಸತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು’. ಪದದ ನೇತ್ಯಾತ್ಮಕ ಅರ್ಥ ಪಡೆಯಲು ಬಹು ಸುಲಭ ಮಾರ್ಗ ‘ಅ’ ಪೂರ್ವ ಪ್ರತ್ಯಯದ ಬಳಕೆ. ಅಂತೆಯೇ ಇತ್ತೀಚಿನ ದಿನಗಳಲ್ಲಿ ವಿರುದ್ದ ಅರ್ಥ ಪಡೆಯಲೂ ‘ಅ’ ಪೂರ್ವ ಪ್ರತ್ಯಯ ಬಳಕೆಯಾಗುತ್ತಿದೆ.

ಅರಸಿಗ ನಾ ಪ್ರಜಾವಾಣಿ ಪ್ರೇಮವನ್ನು ಹುಡುಕುವವನು. ‘ಅಮರ ಪ್ರೇಮದ ಅರಸಿಗ….’ -ಇಗ ಪ್ರತ್ಯಯ ಹಚ್ಚಿ ಪದರಚನೆ ಮಾಡಲಾಗಿದೆ. ಈ ಪ್ರಕ್ರಿಯೆ ಬಹಳ ಹಿಂದಿನಿಂದಲೂ ಎರಡು ನೆಲೆಗಳಲ್ಲಿ ಬಳಕೆಯಾಗುತ್ತಿದೆ. ಒಂದು ಪ್ರದೇಶದಲ್ಲಿ ನೆಲಸಿರುವವರನ್ನು ಸೂಚಿಸುವ ಪದಗಳಿಗೆ ‘ಇಗ’ ಪ್ರತ್ಯಯ ಹಚ್ಚುವುದು. ಉದಾ : ಬೆಂಗಳೂರಿಗ, ಹಳ್ಳಿಗ, ತಮಿಳಿಗ ಎರಡು ವೃತ್ತಿಸೂಚಕ ಪದಗಳಿಗೆ ‘ಇಗ’ ಪ್ರತ್ಯಯ ಹಚ್ಚುವುದು.  ಉದಾ: ಲೆಕ್ಕಿಗ, ಪ್ರವಾಸಿಗ ಮೇಲಿನ ಪದ ಎರಡನೆ ವರ್ಗಕ್ಕೆ ಸೇರುತ್ತದೆ

ಅರಣ್ಯಪಾಲಕ ನಾ ದಿಕ್ಸೂಚಿ ಕಾಡನ್ನು ರಕ್ಷಿಸುವ ವ್ಯಕ್ತಿ. ‘ಆಗದರು ಮುಖ್ಯ ಅರಣ್ಯಪಾಲಕ ರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ‘ರಕ್ಷಕ’ ಮತ್ತು ‘ಪಾಲಕ’ ಪದ ಗಳನ್ನು ಸಮನಾರ್ಥಕವಾಗಿ ಬಳಸಲಾಗುತ್ತಿದೆ. ನಿಜದಲ್ಲಿ ಇವು ಸಮನಾರ್ಥಕಗಳಲ್ಲ. ಡಿಫೆಂಡರ್ ಗೆ ಪಾಲಕಕ್ಕಿಂತ ರಕ್ಷಕ ಹೆಚ್ಚು ಸೂಕ್ತವಾದ ಸಂವಾದಿ ಪದ.

ಅರೆನ್ಯಾಯಿಕ ಗು ವಿಜಯಕರ್ನಾಟಕ ಕಾನೂನಿಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ಸಂಬಂಧ ಪಟ್ಟ. ‘ವಿಚಾರಣೆಗಳಲ್ಲಿ ನಡೆಯುವ ವ್ಯವಧಾನವು ಅರೆನ್ಯಾಯಿಕ ಪೂರ್ಣವಾಗಿ ನ್ಯಾಯಾಲಯಗಳಲ್ಲಿ ನಡೆಯುವಂತೆ ಇರದಿದ್ದರೂ ಅಲ್ಪಮಟ್ಟಿಗಾದರೂ ಈ ರೀತಿ ನಡೆಯಬೇಕಾಗುತ್ತದೆ. ಜೂಡಿಶಿಯಲ್‌ಗೆ ಸಂವಾದಿಯಾಗಿ ರೂಪುಗೊಂಡಿದೆ. ‘ನ್ಯಾಯಿಕ’ ಪದ ಈಗಾಗಲೇ ಬಳಕೆಯಲ್ಲಿದೆ. ‘ಅರೆ’ ಸೇರಿ ಬಳಕೆ ಮಾಡಿರುವುದರಲ್ಲಿ ಹೊಸತನವಿದೆ.

ಅರೆವಾಹಕ ನಾ ಸುಧಾ ಅರ್ಧದಿನ ನಿರ್ವಹಿಸುವ ನಿರ್ವಾಹಕ. ‘ಅರೆವಾಹಕ(ಸೆಮಿಕಂಡಕ್ಟರ್) ಧಾತುಗಳಿಂದ ತಯಾರಿಸಲಾಗುವ’, ‘ಸೆಮಿಕಂಡಕ್ಟರ್ ’ ಇಂಗ್ಲಿಶ್ ಪದಕ್ಕೆ ಕನ್ನಡದಲ್ಲಿ ‘ಅರೆವಾಹಕ’ ಎಂದು ಬಳಕೆ ಮಾಡಲಾಗಿದೆ.

ಅಲಭ್ಯತೆ ನಾ ಪ್ರಜಾವಾಣಿ ಲಭ್ಯತೆಯಿಲ್ಲದ, ದೊರಕದ, ಪ್ರಾಪ್ತಿಯಾಗದ. ಪರೀಕ್ಷೆ ಹತ್ತಿರ ಬರುತ್ತಿರುವ ಈ ದಿನಗಳಲ್ಲಿ ಸೂಚಿತ ಪಠ್ಯಗಳ ಅಲಭ್ಯತೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಬವಣೆ ಅನುಭವಿಸುತ್ತಿ ದ್ದಾರೆ.’ ‘ಲಭ್ಯತೆ’ ನಾಮವಾಚಕವನ್ನು ನಿಷೇದಾರ್ಥಕ ‘ಅ’ ಪೂರ್ವ ಪ್ರತ್ಯಯವನ್ನು ಬಳಸುವುದರೊಂದಿಗೆ ನಿಷೇದಾರ್ಥಕ ನಾಮ ವಾಚಕವನ್ನಾಗಿ ಮಾಡಿಕೊಳ್ಳಲಾಗಿದೆ. ಕನ್ನಡದಲ್ಲಿ ‘ಲಭ್ಯ’ ಎಂದರೆ ಸಾಕು. ‘ತೆ’ ಪ್ರತ್ಯಯ ಹಚ್ಚಿ ನಾಮಪದ ರಚಿಸಲಾಗಿದೆ. ಲಭ್ಯವಿಲ್ಲ, ದೊರೆಯುವುದಿಲ್ಲ. ಮುಂತಾದ ಪದಗಳೇ ಇರುವಾಗ ‘ಅಲಭ್ಯತೆ’ ಪದ ಬೇಕೆ? ಪದಾದಿ ಪರಿಸರಕ್ಕೆ ‘ಅ’ ಪ್ರತ್ಯಯ ಬಳಸಿ ಹೊಸ ಪದ ರಚನೆ ಇತ್ತೀಚೆಗೆ ಹೆಚ್ಚು ಕಾಣಿಸಿಕೊಳ್ಳುತ್ತಿವೆ.

ಅವಿಚಾರವಾದಿ ನಾ ಕರ್ಮವೀ ವಿಚಾರವಾದಿ ಅಲ್ಲದವನು. ‘ಸ್ವಯಂಘೋಷಿತ ಈ ಅವಿಚಾರವಾದಿಗಳು ಖಂಡಿತಾ ಗೋಸುಂಬೆಗಳು’. ಉತ್ತಮ ವಿಚಾರಗಳನ್ನು ವಿರೋಧಿಸುವವನು. ಅಥವಾ ಅಲ್ಲಗಳೆಯುವವನು. ‘ಅ’ ಎಂಬ ನಿಷೇದಾರ್ಥಕ ಪೂರ್ವಪ್ರತ್ಯಯವನ್ನು ಬಳಸಿ ಪದ ರಚನೆ ಮಾಡಲಾಗಿದೆ.

ಅವ್ಯವಹಾರ್ಯತೆ ಗು ಕರ್ಮವೀ ವ್ಯವಹಾರವಿಲ್ಲದ; ಅನುಕ್ರಮವಾದ. ‘ಇದರ ಅವ್ಯವಹಾರ್ಯತೆ ಹಾಗಿರಲಿ; ಈಚೀನ ಅತಿನಾಗರೀಕರಣದಿಂದ ಉದ್ಭವಿಸಿರುವ ಸಮಸ್ಯೆಗಳ ರಾಶಿಯೂ ಈ ಪ್ರಾಜ್ಞ ಲೇಖಕರ ಮನಸ್ಸಿಗೆ ಹೊಳೆಯಲೇ ಇಲ್ಲವಲ್ಲ!’ ಕನ್ನಡದಲ್ಲಿ ‘ಅವ್ಯವಹಾರ’ ಇದೆ ಹೊರತು; ಅವ್ಯವಹಾರ್ಯತೆ ಬಳಕೆಯಲ್ಲಿ ಇಲ್ಲ. ಇದನ್ನು ಅನಿವಾರ್ಯತೆ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಅರ್ಥದ ದೃಷ್ಟಿಯಿಂದ ಹೊಸತನವೇನಿಲ್ಲ.

ಅಶೌಚ ನಾ ಸುಧಾ ಶೌಚವಿಲ್ಲದ. ‘ಪುರಸಭೆಗೆ ಈ ಅಶೌಚ ಸಮುದ್ರ ಪಾಲಾಗುವುದನ್ನು ತಪ್ಪಿಸಲು ಗುಂಡಿಯ ವ್ಯವಸ್ಥೆ ಮಾಡಲು ಕಷ್ಟವೇನಿಲ್ಲ’. ಪದದ ನೇತ್ಯಾತ್ಮಕ ಅರ್ಥವನ್ನು ಪಡೆಯಲು ‘ಅ’ ಪೂರ್ವ ಪ್ರತ್ಯಯದ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅ ಗುಂಪಿಗೆ ಇದೊಂದು ಸೇರ್ಪಡೆ.

ಅಸಾಧನೆ ನಾ ಕನ್ನಡಪ್ರಭ ಸಿದ್ದಿಯನ್ನು ಪಡೆಯದೆ ಇರುವುದು; ಸಾಧಿಸದ. ‘‘…ಎಂದು ಉಚ್ಚರಿಸುತ್ತ ತಮ್ಮ ದೂರದ ಸಂಶೋಧನ ಪಯಣದ ಸಾಧನೆ ಹಾಗೂ ಅಸಾಧನೆಗಳ ಪರಿಚ್ಛೇದ ತೋರಿಸಿದರು’’. ಪದದ ನೇತ್ಮಾತ್ಮಕ ಅರ್ಥ ಪಡೆಯುವುದಕೋಸ್ಕರ ‘ಅ’ ಪೂರ್ವಪ್ರತ್ಯಯದ ಬಳಕೆ ಮಾಡಲಾಗಿದೆ. ಈ ಮಾದರಿ ರಚನೆಗಳು ಹೆಚ್ಚು ಇತ್ತೆಚಿನ ದಿನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ವಿರುದ್ಧಅರ್ಥ ಪಡೆಯಲೂ ‘ಅ’ ಪೂರ್ವಪ್ರತ್ಯಯದ ಬಳಕೆ ಸುಲಭವಾದ ಮಾರ್ಗವಾಗಿದೆ.

ಅಸಾಂಸರ್ಗಿಕ ಗು ಪ್ರಜಾವಾಣಿ ಒಬ್ಬರಿಂದ ಒಬ್ಬರಿಗೆ ಹಬ್ಬಲಾರದ ರೋಗ. ‘…ಇನ್ನೊಂದು ಅಸಾಂಸರ್ಗಿಕ ಅಂದರೆ ಒಬ್ಬರಿಂದ ಒಬ್ಬರಿಗೆ ಹಬ್ಬಲಾರದ ರೋಗ! ಪದದ ನೇತಾತ್ಮಕ ಅರ್ಥ ಪಡೆಯಲು ಇತ್ತೀಚಿನ ದಿನಗಳಲ್ಲಿ ‘ಅ’ ಪೂರ್ವ ಪ್ರತ್ಯಯ ಬಳಕೆಯಾಗುತ್ತಿದೆ. ರಕ್ತಸಂಬಂಧಿಯಲ್ಲದ ರೋಗ.

ಅಸ್ತೋನ್ಮುಖ ನಾ ಲಂಕೇಶ್ಪತ್ರಿಕೆ ಮುಳುಗು. ‘ಇಲ್ಲಿ ಉದಯೋನ್ಮುಖ ಕವಿಗಳು ಅಸ್ತೋನ್ಮುಖ ಕವಿಗಳು!’ ಮೇಲಿನ ಪದವನ್ನು ಉದಯೋನ್ಮುಖ ಮಾದರಿಯಲ್ಲಿ ರಚನೆ ಮಾಡಲಾಗಿದೆ. ‘ಉದಯೋನ್ಮುಖ’ ಪದಕ್ಕೆ ವಿರುದ್ಧವಾಗಿ ಬಳಕೆ ಮಾಡಲಾಗಿದೆ.

ಅಸೌಜನ್ಯ ನಾ ಪ್ರಜಾವಾಣಿ ಒಳ್ಳೆಯತನವಿಲ್ಲದ ವಿನಯರಹಿತವಾದ. ‘‘ಅಸೌಜನ್ಯದ ನಡವಳಿಕೆ’’ ಪದದ ನೇತ್ಯಾತ್ಮಕ ಅರ್ಥ ಪಡೆಯಲು ‘ಅ’ ಪೂರ್ವಪ್ರತ್ಯಯದ ಬಳಕೆ ಮಾಡಲಾಗಿದೆ. ಈ ಮಾದರಿ ರಚನೆಗಳು ಹೆಚ್ಚು ಇತ್ತೀಚಿನ ದಿನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ವಿರುದ್ಧ ಅರ್ಥ ಪಡೆಯಲು ‘ಅ’ ಪೂರ್ವ ಪ್ರತ್ಯಯದ ಬಳಕೆ ಸುಲಭವಾದ ಮಾರ್ಗವಾಗಿದೆ.

ಅರ್ಹತಾ ಪ್ರಭುತ್ವ ನಾ ವಿಜಯಕರ್ನಾಟಕ ಅರ್ಹತೆಯುಳ್ಳ ಪ್ರಜಾಪ್ರಭುತ್ವ. ‘ಆದ ಕಾರಣ ನಾವು ‘ಪ್ರಜಾಪ್ರಭುತ್ವ’ ಎಂಬ ಪದವನ್ನು ಬದಲಿಸಬೇಕಾಗುತ್ತದೆ. ನನ್ನಲ್ಲಿ ಅದಕ್ಕೊಂದು ಪದವಿದೆ ಅರ್ಹತಾಪ್ರಭುತ್ವ’. ಮೆರಿಟೋಕ್ರಸಿ ಪದಕ್ಕೆ ಸಂವಾದಿಯಾಗಿ ಮೇಲಿನ ಪದವನ್ನು ತರಲಾಗಿದೆ. ಮೆರಿಟೋಕ್ರಸಿ ಪದವನ್ನು ಡೆಮೋಕ್ರಸಿ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಅಳಿವಳಿಕೆ ನಾ ಕನ್ನಡಪ್ರಭ ಬುದ್ದಿಯ ಮಟ್ಟ. ‘ಆವೇಶದ ಬರಹದಿಂದಲೂ! ಈ ಕೆಲ ದಿನಗಳಲ್ಲಿ ನಿಮ್ಮ ಅಳಿವಳಿಕೆಯ ಮಟ್ಟವನ್ನು ಹೆಚ್ಚಿಸಿಕೊಂಡಿರುವುದಕ್ಕೆ ನಿಮ್ಮ ಈ ಬರಹವೇ ಸಾಕ್ಷಿ’. ಅಳಿದು ಹೋಗುವ ನಿಮ್ಮ ತಿಳುವಳಿಕೆಯ ಮಟ್ಟ ಹೆಚ್ಚಾಗಿದೆ ಎಂಬರ್ಥದಲ್ಲಿ ಪದ ಬಳಕೆ ಮಾಡಲಾಗಿದೆ. ‘\ಳುವಳಿಕೆ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.