ಆಕಾಶೋತ್ಸವ ನಾ ಕನ್ನಡಪ್ರಭ ಆಕಾಶ ಹಾಗೂ ಉತ್ಸವ. ‘ಅವರು ತಾಲೂಕಿನ ಕುಕ್ಕನ ಪಳ್ಳಿಯ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ವಿಜ್ಞಾನ ಶಿಕ್ಷಕರಿಗಾಗಿ ಜರುಗಿದ ‘ಆಕಾಶೋತ್ಸವ ೨೦೦೨ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.’ ರಥೋತ್ಸವ, ರಾಜ್ಯೋತ್ಸವಗಳ ಮಾದರಿಯಲ್ಲಿ ರಚಿತಗೊಂಡಿರುವ ಪದ. ಆಕಾಶೋತ್ಸವ ಪದದಲ್ಲಿ ಆಕಾಶ ಮತ್ತು ಉತ್ಸವ ಎರಡೂ ಪದಗಳು ಸಂಸ್ಕೃತದವು.

ಆಕ್ರಮಣಕೋರತನ ನಾ ದಿಕ್ಸೂಚಿ ದಾಳಿ ನಡೆಸುವ ಸ್ಥಿತಿ. ‘ಆದರೆ ಜಗಳಗಂಟತನ ಮತ್ತು ಆಕ್ರಮ ಕೋರತನಗಳಲ್ಲಿ ಮಾತ್ರ ಹಿರಿಯಣ್ಣ ಬುದ್ದಿಯನ್ನು ಪ್ರದರ್ಶಿಸುವ ಆದೇಶ,….!’ -ಕೋರ ಎಂಬ ಸಾಧಕ ಪ್ರತ್ಯಯ ಪರ್ಸೋ ಅರಾಬಿಕ್ ಮೂಲದ್ದು. ಈ ಪ್ರತ್ಯಯ ವ್ಯಕ್ತಿವಾಚಕವಾಗಿ ಬಳಕೆಯಲ್ಲಿದೆ. ಇದರ ಜತೆಗೆ ತನ ಪ್ರತ್ಯಯವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ‘ಆಕ್ರಮಣಕೋರ’ ಪದಕ್ಕಿಂತ ಬೇರೇನೂ ಆಕ್ರಮಣಕೋರತನ ಪದ ಅರ್ಥದಲ್ಲಿ ನೀಡುತ್ತಿಲ್ಲ ಎಂದೆನಿಸುತ್ತದೆ. ಹಿಂದೆಲ್ಲ ಆಕ್ರಮಣಕಾರವಾಗಿ ಬಳಕೆಯಲ್ಲಿದ್ದು, ನಂತರ ಆಕ್ರಮಣಕೋರವಾಗಿ ಇದೀಗ ಆಕ್ರಮಣಕೋರತನವಾಗಿ ಬಳಕೆಯಾಗಿದೆ.

ಆಂಗ್ಲತ್ವ ನಾ ವಿಜಯ ಕರ್ನಾಟಕ ಇಂಗ್ಲಿಶ್ ಬಗೆಗೆ ಅಭಿಮಾನವನ್ನು ಹೊಂದಿರುವುದು. ‘ಆಂಗ್ಲತ್ವ ತೊಡೆಯೋಣ’. ಆಂಗ್ಲ ಭಾಷೆಯ ಪ್ರಯೋಗವೇ ಸಾಕಾಗಿತ್ತು. ಆಂಗ್ಲ ಪದಕ್ಕೆ ‘ತ್ವ’ ಪ್ರತ್ಯಯ ಸೇರಿಸಿ ರಚಿಸಲಾಗಿದೆ. ಪದವೇನೂ ಹೊಸದಾದರೂ ಸುತ್ತಿ ಬಳಸಿ ಹೇಳಲಾಗಿದೆ. ‘ಕನ್ನಡತನ’ ಇರುವಾಗೆ ‘ಆಂಗ್ಲತನ’ ಬಳಕೆ ಮಾಡಬಹುದಾಗಿದೆ.

ಆಂಗ್ಲೀಕರಣ ನಾ ಲಂಕೇಶ್ಪತ್ರಿಕೆ. ಆಂಗ್ಲ ಭಾಷೆಗೆ ಒಳಗು ಮಾಡುವುದು. ‘ಅರವತ್ತರ ದಶಕದಲ್ಲಿ ದೇಶದ ಎಲ್ಲ ಕಡೆ ಆರಂಭವಾದ (ನವ್ಯರ ಕಾಲ) ಸಾಹಿತ್ಯದ ಪರಿಭಾಷೆ ಆಂಗ್ಲೀಕರಣವಾಗಿಬಿಟ್ಟಿದೆ! ‘ಈಕರಣ’ ಪ್ರತ್ಯಯ ಬಳಸಿ ಸೃಷ್ಟಿಸಿರುವ ಪದ. ಇತ್ತೀಚಿನ ದಿನಗಳಲ್ಲಿ ಭಾಷೆಗಳಿಗೂ ‘ಈಕರಣ’ ಪ್ರತ್ಯಯ ಬಳಸಿ ಪದ ರಚನೆ ಮಾಡಲಾಗುತ್ತಿದೆ. ಆ ಗುಂಪಿಗೆ ಇದೊಂದು ಪದ ಸೇರಿದೆ.

ಆಚರಣೆಗಾರ ನಾ ಲಂಕೇಶ್ಪತ್ರಿಕೆ ಆಚರಿಸುವವ. ‘ಹಿಂದುಳಿದವರ ಮೂಢ ನಂಬಿಕೆಯ ಧನ-ಕನಕದಿಂದ ಸಾಮಾಜಿಕ ಪ್ರತಿಷ್ಠೆ ಕುದುರಿಸಿಕೊಂಡಿರುವ ಅಷ್ಟ ಸನ್ಯಾಸಿಗಳು ಅಸ್ಪೃಶ್ಯತಾ ಆಚರಣೆಗಾರರು!’ -ಗಾರ ಪ್ರತ್ಯಯ ಒಂದು ನಾಮಪದದೊಡನೆ ಬಂದು ಇನ್ನೊಂದು ನಾಮಪದದ ಸೃಷ್ಟಿಗೆ ಕಾರಣವಾಗುತ್ತದೆ. ಮೇಲಿನ ಪದದಲ್ಲಿ ನಾಮಪದದೊಂದಿಗೆ ಸೇರಿ ಬಳಕೆಯಾಗಿದೆ. -ಗಾರ ಸಾಮಾನ್ಯವಾಗಿ ಸಂಸ್ಕೃತಪದಗಳಿಗೆ ಸೇರುವುದಿಲ್ಲ.

ಆರ್ಡರಿಸು ನಾ ಕನ್ನಡಪ್ರಭ ಆಜ್ಞೆ ಮಾಡು. ಆದೇಶ ಮಾಡು. ‘ಕಾಶಿಪತಿ ಮಾಣಿಯನ್ನು ಕೂಗಿ ಕರೆದು ಹಲ್ವ, ದೋಸೆ, ಕಾಫಿ ಆರ್ಡರಿಸಿದಾಗ ಉಳಿದವರು ಅಚ್ಚರಿಯೊಂದಿಗೆ ನಿಟ್ಟಿಸಿರು ಬಿಡುವಂತಾಯಿತು.’ ಬೇರೆ ಭಾಷೆಯ ಪದಗಳೊಡನೆ ಪದ ಪ್ರತ್ಯಯ ಸೇರಿಸಿ ಹೊಸ ಪದವನ್ನು ಸೃಷ್ಟಿಸುವುದು ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇಲ್ಲಿ ‘ಆರ್ಡರ್ ’ ಎಂಬ ಇಂಗ್ಲಿಶ್ ಪದಕ್ಕೆ -‘ಇಸು’ ಎಂಬ ಪ್ರತ್ಯಯ ಸೇರಿಸಿ ಹೊಸದಾಗಿ ಪದರಚನೆ ಮಾಡಲಾಗಿದೆ.

ಆತ್ಮದಹನ ನಾ ಸಂಯುಕ್ತಕರ್ನಾಟಕ ಆತ್ಮಹತ್ಯೆ ಮಾಡಿಕೊಳ್ಳುವ. ‘ಸಾಲದ ಬಾಧೆ : ರೈತನ ಆತ್ಮದಹನ’. ಇಂಗ್ಲಿಶಿನ ಸೂಯಿಸೈಡ್ ಎಂಬುದರ ಸಂವಾದಿಯಾಗಿ ಬಂದಿದೆ. ಆತ್ಮಹತ್ಯೆ ಪದ ಈಗಾಗಲೇ ಬಳಕೆಯಲ್ಲಿದೆ. ಮೇಲಿನ ಪದ ಭೂತದಹನ, ‘ಸಜೀವದಹನ’ ಮಾದರಿಯಲ್ಲಿ ಬಳಸಲಾಗಿದೆ.

ಆದರ್ಶೀಕರಿಸು ನಾ ಲಂಕೇಶ್ಪತ್ರಿಕೆ ಆದರ್ಶವನ್ನಾಗಿ ಮಾಡಿಕೊಳ್ಳುವುದು, ‘ಭ್ರಷ್ಟ ವ್ಯವಸ್ಥೆಯಲ್ಲಿ ಕರ್ತವ್ಯನಿಷ್ಠೆ ಸಹಜವಾಗದೆ ಆದರ್ಶೀಕರಿಸಲ್ಪಡುತ್ತದೆ. ‘ಈಕರಿಸು’ ಹತ್ತಿಸಿ ಪದ ಪ್ರಯೋಗ ಮಾಡುವುದು ಇತ್ತೀಚೆಗೆ ಬಳಕೆಯಲ್ಲಿದೆ. ಇದೊಂದು ಅಂತಹ ಮಾದರಿಗೆ ಸೇರ್ಪಡೆ.

ಆಮ್ಲೀಕರಣ ನಾ ವಿಜಯಕರ್ನಾಟಕ ಆಮ್ಲಮಯ ಮಾಡುವುದು. ‘ಯುರೋಪ್, ಉತ್ತರ ಅಮೆರಿಕ ದೇಶಗಳಲ್ಲಿ ಇಂಥ ಆಮ್ಲೀಕರಣದ ಪ್ರಭಾವ ಕಡಿಮೆ ಮಾಡಲು ವಾರ್ಷಿಕ ೨೦ ಸಾವಿರದ ದಶಲಕ್ಷ….’, ‘ಈಕರಣ’ ಪ್ರತ್ಯಯವನ್ನು ಹಚ್ಚಿ ಪದರಚನೆ ಮಾಡಲಾಗಿದೆ.

ಆರಂಭಿಕೆ ಕ್ರಿ ಅಗ್ನಿ ಪ್ರಾರಂಭ. ‘ಡಾ.ರಾಜ್ ಹಾಕಿಕೊಟ್ಟಿರುವ ಉತ್ತಮ ಆರಂಭಿಕೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಈಗ ಗಾಂಧಿನಗರದ ಮೇಲಿದೆ’. ‘ಆರಂಭ’ ನಾಮಪದಕ್ಕೆ -ಇಕೆ ಪ್ರತ್ಯಯ ಹತ್ತಿಸಲಾಗಿದೆ.ಆರಂಭ ಪದಕ್ಕಿಂತ ಆರಂಭಿಕೆ ಅರ್ಥದಲ್ಲೇನೂ ವಿಶಿಷ್ಟತೆ ಇಲ್ಲ.

ಆಶ್ವಾಸಿತ ನಾ ಪ್ರಜಾವಾಣಿ ಭರವಸೆಯನ್ನು ಮೂಡಿಸುವುದು. ‘ಈ ಯೋಜನೆಯಲ್ಲಿ ಆಕ್ಸಿಡೆಂಟ್ ಬೆನಿಫಿಟ್ ಇದ್ದು,ಇಲ್ಲಿ ಗರಿಷ್ಠ ‘ಆಶ್ವಾಸಿತ ಮೊತ್ತ ರೂಪಾಯಿ ೧೦ ಲಕ್ಷ. ಎಲ್ಲ ಜೀವನ ವಿಮಾ ಯೋಜನೆಗಳು ಸೇರಿ!’ ‘ಆಶ್ವಾಸನೆ ಪದ ಈಗಾಗಲೇ ಬಳಕೆಯಲ್ಲಿ ಇರುವುದರಿಂದ ಆಶ್ವಾಸಿತ ಪದ ಬೇಕೆ? ಮಾದರಿ ಚಿಂತೆ-ಚಿಂತಿತ, ಅನುಮಾನ-ಅನುಮಾನಿತ.

ಆಹ್ವಾನಭರಿತ ಗು ಗೃಹಶೋಭ ಆಹ್ವಾನ, ಕರೆಯುವಿಕೆ. ‘ರೋಮಾಂಚಕ ಹಾಗೂ ಆಹ್ವಾನಭರಿತವಾದ ಒಂದು ವಿಶಿಷ್ಟ ಕೆರಿಯರ್ ಯುವ ಜನಾಂಗಕ್ಕೆ ದೇಶ ಸೇವೆಯ ಒಂದು ಅಮೂಲ್ಯ ಅವಕಾಶವನ್ನು ಒದಗಿಸುತ್ತದೆ.’ ಮೇಲಿನ ಪ್ರಯೋಗವು ‘ಆಸ್ವಾದಭರಿತ’ ಮಾದರಿಯಲ್ಲಿ ತಂದಿರುವ ಪದವಿದು.

ಆಹ್ವಾನಿತೆ ನಾ ಕರ್ಮವೀ ಆಹ್ವಾನಕ್ಕೆ ಅರ್ಹಳಾದವಳು. ‘೨೦೦೭ರಲ್ಲಿ ಬರ್ಲಿನ್ ನಲ್ಲಿ ನಡೆಯಲ್ಲಿರುವ ಅಂತರರಾಷ್ಟ್ರೀಯ ಧ್ವಜ ಸಮ್ಮೇಳನದಲ್ಲಿ ಈಕೆ ವಿಶೇಷ ಆಹ್ವಾನಿತೆ!’, ಕನ್ನಡದಲ್ಲಿ ‘ಅ’ ಕಾರಾಂತ ಪದಗಳೆಲ್ಲ ಪುಲ್ಲಿಂಗವಾದರೆ, ‘ಇ’ ಮತ್ತು ‘ಎ’ ಕಾರಾಂತ ಪದಗಳು ಸ್ತ್ರೀಲಿಂಗಗಳಾಗುತ್ತವೆ ಎಂಬುದು ಒಂದು ಅಭಿಪ್ರಾಯವಿದೆ. ಮೇಲಿನ ಪದವು ಈ ನಿಯಮದಲ್ಲಿ ರಚನೆಯಾದಂತಿದೆ. ಪುರುಷ ಕೇಂದ್ರೀತವಾಗಿ ಈಗಾಗಲೆ ‘ಆಹ್ವಾನಿತ’ ಪದ ಬಳಕೆಯಲ್ಲಿದೆ. 

ಇಳಿಹರೆಯ ನಾ ಸುಧಾ ಪ್ರಾಯದ ನಂತರದ ವಯಸ್ಸು. ‘ದಕ್ಷಿಣ ಅಮೇರಿಕದಲ್ಲಿ ತಾರುಣ್ಯದ ಹಂಬಲ ಇಳಿಹರೆಯದವರನ್ನು ಬಿಟ್ಟಿಲ್ಲ.’ ಪ್ರಾಯ, ಮುಪ್ಪು, ಇಳಿ ವಯಸ್ಸು ಮುಂತಾದ ಪದಗಳು ಇದ್ದರೂ, ಮೇಲಿನ ಪದವನ್ನು ಹೊಸದಾಗಿ ಪ್ರಯೋಗ ಮಾಡಲಾಗಿದೆ.

ಇಷ್ಟಾಚಾರ ನಾ ವಿಜಯಕರ್ನಾಟಕ ಇಷ್ಟವಾದ ವಿಚಾರ. ‘ಇಷ್ಟಾಚಾರ ಬಿಡಿ, ಶಿಷ್ಟಚಾರ ಮರೀಬೇಡಿ’ ‘ಶಿಷ್ಟಾಚಾರ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. 

ಉಗ್ರಗಾಮಿನಿ ನಾ ಸಂಯುಕ್ತಕರ್ನಾಟಕ ಕ್ರೂರತ್ವವನ್ನು ಹೊಂದಿರುವ ವ್ಯಕ್ತಿ. ‘ಸರಸ್ವತಿ ವಾಸ ಸ್ಥಾನವಾದ ಕಾಶ್ಮೀರದಿಂದ ಸರಸ್ವತಿಯನ್ನು ಹೊರಗಟ್ಟಿ, ಅಲ್ಲಿ ಉಗ್ರಗಾಮಿನಿ ಎಂಬ ದುರ್ದೇವತೆಯು ಇಂದು ನೆಲೆಸಿದ್ದು ಅದು ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.’ ಉಗ್ರಗಾಮಿ ಪದವನ್ನು ಪುಲ್ಲಿಂಗ ರೂಪವೆಂದು ತಿಳಿಯಬೇಕೆಂಬ ಒತ್ತಾಯವಿಲ್ಲದಿದ್ದರೂ ಸಾಮಾನ್ಯವಾಗಿ ನಾವು ಅದನ್ನು ಪುಲ್ಲಿಂಗ ರೂಪವೆಂದು ತಿಳಿದು, ಅನಂತರ ಸ್ತ್ರೀಲಿಂಗ ರೂಪವನ್ನು ಪಡೆಯಲು ಪ್ರತ್ಯಯಗಳನ್ನು ಹತ್ತಿಸುತ್ತೇವೆ.

ಉಡುಪುಗಾರ ನಾ ಹಾಯ್ಬೆಂಗಳೂರು ಉಡುಪು ಉಳ್ಳ ವ್ಯಕ್ತಿ. ‘ಡ್ರೆಸ್ ಸೆನ್ಸ್ ಇದೆ ಎಂಬುದನ್ನು Prove ಮಾಡುವಂತಹ ಉಡುಪುಗಾರನಲ್ಲ.’ ಉಳ್ಳವನು, ಪಡೆದಿರುವವನು ಎನ್ನುವ ಅರ್ಥವನ್ನು ನೀಡಲು -‘ಗಾರ’ ಪ್ರತ್ಯಯವನ್ನು ಹತ್ತಿಸಲಾಗುತ್ತದೆ. ಮಾದರಿ : ಬಳೆ ಮಾಡುವವನು ಬಳೆಗಾರ ಆದಂತೆ. ಉಡುಪು ತಯಾರಿಸುವವನು ಉಡುಪುಗಾರ ಆಗಬೇಕು. ಆದರೆ ಮೇಲಿನ ನಿದರ್ಶನದಲ್ಲಿ ಉಡುಪು ಧರಿಸುವವನು ಎಂಬ ಅರ್ಥದಲ್ಲಿ ಬಳಕೆಯಾದಂತಿದೆ.

ಉತ್ತಮೀಕರಣ ನಾ ಜನಪದಕರ್ನಾಟಕ ಅಭಿವೃದ್ದಿ ದಿಕ್ಕಿನತ್ತ ಸಾಗುವುದು. ‘ನಿಮ್ಮ ಈ ಪತ್ರಿಕೆಯ, ಬೆಳವಣಿಗೆಯನ್ನೂ ವೈವಿಧ್ಯತೆಯನ್ನೂ ನೀವೇ ಬರೆದು ನೂರಾರು ಪತ್ರಗಳಲ್ಲಿ ಗಮನಿಸಿದ್ದೇವೆ. ಅದರ ಉತ್ತಮೀಕರಣ ಇನ್ನೂ ನಡೆದಿದೆ.’ ಇಂಗ್ಲೀಶಿನ ‘ಐಸೇಶನ್’ಗೆ ಸಂವಾದಿಯಾಗಿ ‘ಈಕರಣ’ ಪ್ರಯೋಗ ಬಳಕೆಯಲ್ಲಿದೆ.

ಉದ್ಯೋಗದಾತ ನಾ ವಿಜಯಕರ್ನಾಟಕ ಉದ್ಯೋಗ ನೀಡುವವನು. ‘ಉದ್ಯೋಗದಾತರ ಪರವಾಗಿ ಸೂಕ್ತ ವ್ಯಕ್ತಿಗಳನ್ನು ಹುಡುಕಿ ದೊರಕಿಸಿ ಕೊಡುವ ಕಾರ್ಯ ಇದು.’ -‘ದಾತ’ ಎಂದರೆ ನೀಡುವವನು ಎಂದರ್ಥವಿದೆ. ಅನ್ನದಾತ, ಆಶ್ರಯದಾತ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಉದ್ಯೋಗಾರ್ಥಿ ನಾ ಕನ್ನಡಪ್ರಭ ಉದ್ಯೋಗ ಬಯಸುವವನು. ‘ವಿದ್ಯಾರ್ಥಿ ಉದ್ಯೋಗಾರ್ಥಿ ಗಳ ವಾರಪತ್ರಿಕೆ?’ ‘ಅರ್ಥಿ’ ಪದ ಸಾಮಾನ್ಯವಾಗಿ ಏನನ್ನಾದರೂ ಪಡೆಯಲು ಬಯಸುವವರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಉದ್ಯೋಗ ಇಲ್ಲದವ ‘ನಿರುದ್ಯೋಗಿ’ ಪದವಿರುವಾಗಲೇ ‘ಉದ್ಯೋಗಾರ್ಥಿ’ ಹೊಸ ಪದವಾಗಿ ಬಳಕೆಯಲ್ಲಿದೆ. ‘ವಿದ್ಯಾರ್ಥಿ’ ಪದವನ್ನು ಆಧಾರವಾಗಿಟ್ಟು ಕೊಂಡು ಹಲವು ಪದಗಳು ಬಳಕೆಯಾಗುತ್ತಿವೆ.

ಉದ್ಯೋಗಿನಿ ನಾ ಪ್ರಜಾವಾಣಿ ಉದ್ಯೋಗದಲ್ಲಿರುವ ಹೆಣ್ಣು. ‘ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆಯಲು ‘ಉದ್ಯೋಗಿನಿ’ ಯೋಜನೆ ಅಡಿ ಆರ್ಥಿಕ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.’ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪದಗಳು ಪುರುಷರನ್ನು ಸೂಚಿಸುತ್ತವೆಂಬ ತಪ್ಪು ಕಲ್ಪನೆಯಿಂದ ಅದಕ್ಕೆ ಪ್ರತ್ಯಯವನ್ನು ಸೇರಿಸಿ ಸ್ತ್ರೀವಾಚಿಯನ್ನಾಗಿ ಮಾಡಲಾಗುತ್ತದೆ. ಮೇಲಿನ ಪ್ರಯೋಗ ‘ಕಾರ್ಯದರ್ಶಿನಿ’ ಮಾದರಿಯಲ್ಲಿ ಬಳಕೆಯಾಗಿದೆ.

ಉಪೇಂದ್ರೀಕರಣ ನಾ ಲಂಕೇಶ್ಪತ್ರಿಕೆ ಉಪೇಂದ್ರನ ಛಾಪು, ಪ್ರಭಾವ ಮೂಡಿಸುವುದು. ‘ತಾಂತ್ರಿಕತೆ ಮತ್ತು ಉಪೇಂದ್ರೀಕರಣ ಹೊರತಾಗಿ ತಮಿಳು ಮತ್ತು ಕನ್ನಡ ರಕ್ತ ಕಣ್ಣೀರ್‌ಗಳ ಮಧ್ಯ ಅಂಥ ವ್ಯತ್ಯಾಸವೇನಿಲ್ಲ!’ ಉಪೇಂದ್ರ ನೈಸೇಷನ್ ಗೆ ಸಂವಾದಿಯಾಗಿ ಮೇಲಿನ ಪ್ರಯೋಗವನ್ನು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ಹೆಸರಿನೊಂದಿಗೆ ‘ಈಕರಣ’ ಪ್ರತ್ಯಯ ಬಳಸಿ ಪದಗಳನ್ನು ರಚನೆ ಮಾಡಲಾಗುತ್ತಿದೆ. ಮಾದರಿ : ವೀರಪ್ಪನೀಕರಣ

ಉಷ್ಣೋಪಚಾರ ನಾ ಸುಧಾ ಉಷ್ಣದಿಂದ ಮಾಡುವ ಉಪಚಾರ. ‘ಕೆಲವರಿಗೆ ಉದ್ರೇಕವೆ ಆಗದಿರಬಹುದು. ಅವರಿಗೆ ಉಷ್ಣೋಪಚಾರ ಅಗತ್ಯವೇ?’ ಉಷ್ಣ ಮತ್ತು ಉಪಚಾರ ಪದಗಳೆರಡು ಸೇರಿಕೊಂಡು ಪದ ರಚನೆ ಮಾಡಲಾಗಿದೆ. 

ಊರುಗಾರಿಕೆ ನಾ ತುಷಾರ ಊರಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವುದು. ‘ಊರುಗಾರಿಕೆ ಕೆಲಸ, ರಾಜಕೀಯ ಕೆಲಸ, ಸಮಾಜ ಸೇವೆ ಎಂಬ ಹಲವು ಕಾರಣಗಳಿಂದ ತಮ್ಮ ಹಳ್ಳಿಯಲ್ಲಿರುವುದಕ್ಕಿಂತ ಬೆಂಗಳೂರಿನಲ್ಲಿರುವುದೇ ಜಾಸ್ತಿ ಎಂಬುದು ನನಗೆ ಅವರ ಸಂಭಾಷಣೆಯಿಂದ ತಿಳಿಯಿತು.’ ಊರುಗಾರ ಪದಕೆ – ‘ಇಕೆ’ ಪ್ರತ್ಯಯೊಹಚಿ ‘ಊರುಗಾರಿಕೆ’ ಪದವನ್ನು ಬಳಕೆ ಮಾಡಲಾ ಗಿದೆ. ಊರು-ಊರುಗಾರ-ಊರುಗಾರಿಕೆ. 

ಎಡಪಂಥೀಕರಣ ನಾ ಉದಯವಾಣಿ ಎಡಪಂಥದ ವಿಚಾರ. ‘ಶಿಕ್ಷಣದಲ್ಲಿ ಎಡಪಂಥೀಕರಣ ವಾಗುತ್ತಿದೆ’. ‘ಇಂಗ್ಲಿಶಿನ ‘ಐಸೇಶನ್’ಗೆ ಸಂವಾದಿಯಾಗಿ ‘ಈಕರಣ’ ಪ್ರತ್ಯಯವನ್ನು ಬಳಕೆ ಮಾಡಲಾಗುತ್ತಿದೆ. ಸಾಧ್ಯ : ಬಲಪಂಥೀಕರಣ.

ಎಂಪಿಣಿ ನಾ ಲಂಕೇಶ್ಪತ್ರಿಕೆ ಲೋಕಸಭೆಗೆ ಆಯ್ಕೆಯಾಗಿರುವ ಮಹಿಳೆ, ಸಂಸದೆ. ‘ಈ ಸಮಾಜ ಮಂದಿರ ಅಧಿಕೃತವಾಗಿ ಮ್ಯಾಗಿ ಉದ್ಘಾಟಿಸಬೇಕಾಗಿತ್ತು. ಶಿಲಾಫಲಕದಲ್ಲೂ ಸನ್ಮಾನ್ಯ ಎಂಪಿಣಿಯ ಹೆಸರೇ ಇತ್ತು.’ ಎಂ.ಪಿ ಪದವನ್ನು ಪುಲ್ಲಿಂಗ ರೂಪವೆಂದು ತಿಳಿಯಬೇಕೆಂಬ ಒತ್ತಾಯವಿಲ್ಲದಿದ್ದರೂ ಸಾಮಾನ್ಯವಾಗಿ ನಾವು ಅದನ್ನು ಪುಲ್ಲಿಂಗ ರೂಪವೆಂದು ತಿಳಿದು ಅನಂತರ ಸ್ತ್ರೀಲಿಂಗ ರೂಪವನ್ನು ಪಡೆಯಲು ಪ್ರತ್ಯಯಗಳನ್ನು ಹತ್ತಿಸುತ್ತೇವೆ. ಇದೇ ಕ್ರಮ ಮಾಸ್ಟರಿಣಿ, ಡಾಕ್ಟರಿಣಿ, ರೂಪಗಳಲ್ಲೂ ಬಳಕೆಯಲ್ಲಿರುವುದು ಗಮನಿಸುವಂತಹ ವಿಚಾರ.

ಎಸೆಯೋತ್ಸಾಹ ನಾ ಉದಯವಾಣಿ ಬಿಸಾಕುವುದರಲ್ಲಿ ಉತ್ಸಾಹ. ‘ಅಯ್ಯೋ ಆ ಲೇಖನ ಓದಿದಾಗಿನಿಂದ ಇವರಲ್ಲಿ ಒಂದು ರೀತಿಯ ‘ಎಸೆಯೋತ್ಸಾಹ’ ಮೂಡಿಬಿಟ್ಟಿದೆ.’ ಇಲ್ಲಿ ‘ಎಸೆ’ ಎಂಬ ಕನ್ನಡ ಪದಕ್ಕೆ ‘ಉತ್ಸಾಹ’ ಎಂಬ ಸಂಸ್ಕೃತ ಪದವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ಈ ಪ್ರಕ್ರಿಯೆ ಇತ್ತೀಚಿಗೆ ಹೆಚ್ಚು ಕಂಡುಬರುತ್ತಿದೆ. ವಾಸ್ತವವಾಗಿ ಸಂಸ್ಕೃತದ ಗುಣಸಂಧಿ ನಿಯಮಕ್ಕನುಗುಣವಾಗಿ ಪದರಚನೆ ಮಾಡಲಾಗಿದೆ.

ಎಸೆಗಾರಿಕೆ ನಾ ತುಷಾರ ಎಸೆಯುವುದು. ‘ಇದು ವಿಶ್ವ ಮೊಬೈಲ್ ಪೋನ್ ಎಸೆಗಾರಿಕೆ ಚಾಂಪಿಯನ್ ಶಿಫ್ : ಕಿವಿಗಿಟ್ಟುಕೊಳ್ಳಬೇಕಾದ ಉಪಕರಣವನ್ನು ಯಾರು ಅತ್ಯಂತ ಹೆಚ್ಚು ದೂರಕ್ಕೆ ಎಸೆಯುವರೋ ಅವರು ಪ್ರಥಮಸ್ಥಾನಿ’. ಸಾಮಾನ್ಯವಾಗಿ ಕ್ರಿಯಾಧಾತುವಿಗೆ ನಾಮಸಾಧಕ ಪ್ರತ್ಯಯ ಹಚ್ಚಿ ನಾಮರೂಪ ವನ್ನು ಸಾಧಿಸಿ ಅನಂತರ-ಗಾರ ಪ್ರತ್ಯಯ ಹಚ್ಚುವುದು ಕನ್ನಡದಲ್ಲಿರುವ ನಿಯಮ. ಉದಾ : ಉಳುಮೆಗಾರ ಇತ್ಯಾದಿ ಮೇಲೆ ಉಲ್ಲೇಖಿಸಿರುವ ವಾಕ್ಯದಲ್ಲಿ ‘ಎಸೆ’ ಕ್ರಿಯಾಧಾತುವಿಗೆ -ಗಾರ. ಮತ್ತು ಇಕೆ ಪ್ರತ್ಯಯಗಳನ್ನು ಹಚ್ಚಿ ಬಳಕೆ ಮಾಡಲಾಗಿದೆ. ಮಾದರಿ : ಹೊಣೆಗಾರಿಕೆ. 

ಏಜೆಂಟ್ಗಿರಿ ನಾ ವಿಜಯಕರ್ನಾಟಕ ಏಜೆಂಟು. ‘ರಾಜ್ಯಪಾಲರ ಏಜೆಂಟ್‌ಗಿರಿಗೆ ತಡೆ ಅಗತ್ಯ.’ ಡಿ. ರಾಜಾ ‘ಗಿರಿ’ ಪ್ರತ್ಯಯವನ್ನು ಒಂದು ಅಧಿಕಾರ ಸ್ಥಾನವನ್ನು ಸೂಚಿಸಲು ಬಳಕೆ ಮಾಡಲಾಗುತ್ತದೆ. ಮಾದರಿ : ಛೇರ್ಮನ್‌ಗಿರಿ, ಮಂತ್ರಿಗಿರಿ.

 

ಒತ್ತುವರಿದಾರ ನಾ ಉದಯವಾಣಿ ಜಮೀನನ್ನು ಆಕ್ರಮಿಸಿಕೊಂಡಿರುವವನು. ‘ಜಂಟಿ ಸರ್ವೇ : ಒತ್ತುವರಿದಾರರನ್ನು ಒಕ್ಕಲೆಬ್ಬಿಸುವುದಿಲ್ಲ; ಕನ್ನಡದಲ್ಲಿ ನಾಮ ಸಾಧಕ ಪ್ರತ್ಯಯಗಳನ್ನಾಗಿ -ಗಾರ, -ಕಾರ, -ದಾರಗಳನ್ನು ನಾವು ಪ್ರಯೋಗ ಮಾಡುತ್ತ ಬಂದಿದ್ದೇವೆ. -ದಾರ ಪರ್ಸೊ ಅರಾಬಿಕ್ ಮೂಲದ ಹತ್ತಾರು ಪದಗಳಲ್ಲಿ ಬಳಕೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಪದಗಳಿಗೂ  -ದಾರ ಪ್ರತ್ಯಯವನ್ನು ಹತ್ತಿಸಿ ರಚನೆ ಮಾಡಲಾಗುತ್ತಿದೆ. ಅಂತಹ ಮಾದರಿಗೆ ಇದೊಂದು ರಚನೆ ಸೇರಿದೆ. ದಾರ ಸಾಮಾನ್ಯವಾಗಿ ಅಧಿಕಾರವನ್ನು ಮಾಡಿಸುವ ಪ್ರತ್ಯಯ. ಇಲ್ಲಿ ಹಾಗಿಲ್ಲ.

 

ಓನರ್ಗಿರಿ ನಾ ವಿಜಯಕರ್ನಾಟಕ ಮಾಲಿಕನ ವರ್ತನೆಯನ್ನು ತೋರುವುದು. ‘ಮತ್ತೊಂದು ಬಾಡಿಗೆ ಮನೆಗೆ ಹೋದೆವು ನೋಡಿ; ಅಲ್ಲಿ ನಿಜವಾದ ಓನರ್‌ಗಿರಿಯ ಅರಿವಾಯಿತು’. ಇಂಗ್ಲಿಶಿನ ಓನರ್ ಪದಕ್ಕೆ ಕನ್ನಡದ ‘ಗಿರಿ’ ರೂಪವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ ಮಾದರಿ: ಶಭಾಶ್‌ಗಿರಿ, ದಿವಾನಗಿರಿ.

 

ಔದ್ಯೋಗಿಕಾಧರಿತ ಗು ಕನ್ನಡಪ್ರಭ ಉದ್ಯೋಗಕ್ಕೆ ಸಂಬಂಧಿಸಿದ, ಉದ್ಯೋಗವನ್ನು ಆಧರಿಸಿದ. ‘ಔದ್ಯೋಗಿಕಾಧರಿತ ಶಿಕ್ಷಣ ಮಹಿಳೆಯರಿಗೆ ಅವಶ್ಯ’. ‘ಉದ್ಯೋಗಾಧರಿತ’ ಮಾದರಿಯಲ್ಲಿ ಮೇಲಿನ ಪದವನ್ನು ರಚನೆ ಮಾಡಲಾಗಿದೆ.