ಕತ್ತಲೆಸೇವೆ ನಾ ಸುಧಾ ರಾತ್ರಿವೇಳೆಯ ಅನೈತಿಕ ಚಟುವಟಿಕೆ. ‘ಪಶ್ಚಿಮದಲ್ಲೂ ಪತಿವ್ರತೆಯರಿದ್ದಾರೆ. (ಬೆತ್ತಲೆ ಸೇವೆ, ಕತ್ತಲೆ ಸೇವೆ ಯಾವ ಸೇವೆಗೂ ಸೀಮಿತವಲ್ಲ) ಈ ಪದವನ್ನು ಬೆತ್ತಲೆಸೇವೆ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಕತ್ತಲೆಯಲ್ಲಿ ನಡೆಯುವುದು ಸೇವೆಯಲ್ಲ. ಅದು ಅನೈತಿಕ ಚಟುವಟಿಕೆ ಎಂದೆ ತಿಳಿಯಬೇಕು. ಅರ್ಥರಹಿತ ಬಳಕೆಯಾಗಿದೆ.

ಕದನಕೋರ ನಾ ಕನ್ನಡಪ್ರಭ ನಾಶಮಾಡುವವನು, ಕೊಲ್ಲುವಿಕೆ. ‘ಪೆಂಟಗಾನ್’ ಎಂಬ ಕದನಕೋರ ವ್ಯವಸ್ಥೆಯ ಆಶ್ರಯ ಪಡೆದಿದ್ದ ಅಂತರರಾಷ್ಟ್ರೀಯ ಕೇಡಿ ಅಹಮದ್ ಚಲಜಿಯಲ್ಲಿ ಇದಕ್ಕೂ ಮುಂಚೆ ಅಮೆರಿಕನ್ ಯಜಮಾನರು ಪ್ರಧಾನಿ ಪಟ್ಟಕ್ಕೆ ಆರಿಸಿದ್ದರು’. ಒಬ್ಬ ವ್ಯಕ್ತಿಯ ನೇತ್ಯಾತ್ಮಕ ಗುಣ ಸ್ವಭಾವವನ್ನು ಸೂಚಿಸುವುದಕ್ಕೆ ‘ಕೋರ’ ಎಂಬ ರೂಪವನ್ನು ಹತ್ತಿಸಲಾಗುತ್ತಿದೆ. ಕದನ ಮತ್ತು ಕೋರ ರೂಪಗಳ ಸಂಯೋಜನೆಯಿಂದ ಪಡೆದಿರುವ ರಚನೆಯಿದು. ‘ಕೋರ’ ಪ್ರತ್ಯಯ ರೂಪ ಹೀನಾರ್ಥವನ್ನೇ ಸೂಚಿಸುತ್ತದೆ.  ಮಾದರಿ : ಲಂಚಕೋರ, ದಗಾಕೋರ.

ಕದನಪೀಡಿತ ನಾ ಪ್ರಜಾವಾಣಿ ಯುದ್ಧದಿಂದ ಕೂಡಿರುವ. ‘ಇದಾದ ನಂತರ ಕೈರೊ ಕದನ ಪೀಡಿತ ಇರಾಕ್‌ಗೆ ಸೇನೆ ಕಳಿಸುವ ವಿಚಾರವೇ ಇಲ್ಲ ಎಂದು ತಿಳಿಸಿತ್ತು.’ ರೋಗಪೀಡಿತ, ಬರಪೀಡಿತ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಕನಸಿಸು ಕ್ರಿ ಅಗ್ನಿ ಕನಸು ಕಾಣು. ‘ನಂಜುಂಡಸ್ವಾಮಿಯವರು ಬದುಕಿದ್ದ ದಿನಗಳಿಂದಲೂ, ಪ್ರಗತಿಪರ ಸಂಘಟನೆಗಳನ್ನು ಒಂದುಗೂಡಿಸುವುದರ ಬಗ್ಗೆಯೇ ಕನಸಿಸುತ್ತಿದ್ದರು.’ ಇತ್ತೀಚಿನ ದಿನಗಳಲ್ಲಿ -‘ಇಸು’ ಬಳಕೆಯನ್ನು ಎಲ್ಲೆಡೆ ಮಾಡುತ್ತಿರುವುದು ಸಹಜವಾಗಿದೆ. -‘ಇಸು’ ಪ್ರತ್ಯಯವಿರುವ ಕೆಲವೊಂದು ಸ್ವತಂತ್ರ ಕ್ರಿಯಾಪದವಾದರೆ ಇನ್ನು ಕೆಲವು ಪ್ರೇರಣಾತ್ಮಕವಾಗಿ ಬಳಕೆ ಆಗುತ್ತಿದೆ. ಮೇಲಿನ ಪ್ರಯೋಗದಲ್ಲಿ ನಾಮ ಪದಕ್ಕೆ -‘ಇಸು’ ಪ್ರತ್ಯಯ ಸೇರಿಸಿ ಕ್ರಿಯಾಪದವಾಗಿ ಬಳಕೆ ಮಾಡಲಾಗಿದೆ.

ಕನಸುಗಳ್ಳ ನಾ ಗೃಹಶೋಭಾ ಕನಸುಗಳನ್ನು ಕದಿಯುವವ. ‘ಅವರ ಕನಸುಗಳನ್ನು ಮಾರಿ, ಬದುಕನ್ನು ಮೂರಾಬಟ್ಟೆ ಮಾಡಿದ ಕನಸುಗಳ್ಳರು ಗಾಂಧಿನಗರದಲ್ಲೇನೂ ಕಡಿಮೆಯಿಲ್ಲ’. ಕನ್ನಡದಲ್ಲಿ ಕನಸಿಗ ಮತ್ತು ಕನಸುಗಾರ ಪದಗಳಿವೆ. ಮೇಲಿನ ಪದವನ್ನು ಕಾಡುಗಳ್ಳ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಕಂಟಕಾಂಗಿ ನಾ ಸುಧಾ ಕಂಟಕವನ್ನು ಹೊಂದಿರುವವಳು. ‘ಅಂತೂ ಕೋಮಲಾಂಗಿಯಾದ ಕಾಮಿನಿ ಅತ್ಯಾಚಾರ ನಿರೋಧಕ ಕವಚವನ್ನು ಧರಿಸಿ ಕಂಟಕಾಂಗಿಯಾಗುತ್ತಾಳೆ!’ ‘ಕೋಮಲಾಂಗಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಕನ್ನಗಳ್ಳ ನಾ ವಿಜಯಕರ್ನಾಟಕ ಕನ್ನದ ಮೂಲಕ ಕದಿಯುವವ. ‘ಕನ್ನಗಳ್ಳನ ಸೆರೆ : ೧೫ ಲಕ್ಷ ರೂ. ಚಿನ್ನ-ಬೆಳ್ಳಿ ವಶ. ವಿವಿಧ ಬಗೆಯ ಕಳ್ಳತನಗಳಲ್ಲಿ ಕನ್ನಗಳತನವೂ ಒಂದು’. ಮನೆಯಗೋಡೆಯನ್ನು ಕೊರೆದು ಕಳ್ಳತನ ಮಾಡುವನನ್ನು ‘ಕನ್ನಗಳ್ಳ’ಎಂದು ಕರೆಯಲಾಗುತ್ತದೆ. ಮೇಲಿನ ಪದವನ್ನು ಅ ಅರ್ಥದಲ್ಲಿ ಬಳಕೆ ಮಾಡಲಾಗಿದೆ.

ಕನ್ನಡಾಂಗ್ಲ ನಾ ಸುಧಾ ಕನ್ನಡ ಮತ್ತು ಇಂಗ್ಲಿಶ್‌ನ್ನು ಅರೆಬರೆಯಾಗಿ ಬಳಸುವುದು. ‘ಮರೆಯಲಾಗದ ಕನ್ನಡಾಂಗ್ಲ ಪತ್ರಕರ್ತ’. ಕನ್ನಡ ಮತ್ತು ಆಂಗ್ಲ ಪದಗಳನ್ನು ಸೇರಿಸಿ ಸವರ್ಣದೀರ್ಘ ಸಂಧಿ ನಿಯಮಕ್ಕನುಗುಣವಾಗಿ ರಚನೆ ಮಾಡಲಾಗಿದೆ.

ಕನ್ಯಾರ್ಥಿ ನಾ ಸುಧಾ ಕನ್ಯಾಯನ್ನು ಹುಡುಕಿಕೊಂಡು ಹೋಗುವವ. ‘ಒಬ್ಬ ಕನ್ಯಾರ್ಥಿಗೆ ಒಬ್ಬ ಕಪಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನೂ ತೋರಿಸಿ…’ ‘ಹುಡುಕುತ್ತಿರು ವವನು, ಬಯಸುವವನು ಎನ್ನುವ ಅರ್ಥವನ್ನು ಪಡೆಯಲು ‘ಅರ್ಥ’ ರೂಪವನ್ನು ಬಳಸಲಾಗುತ್ತದೆ. ಇಲ್ಲಿ ಅದನ್ನು ‘ಕನ್ಯಾ’ ಪದಕ್ಕೆ ಹತ್ತಿಸಲಾಗಿದೆ.

ಕಣ್ಣೀರುಗಾರ್ತಿ ನಾ ಅಗ್ನಿ ಧಾರಾಕಾರವಾಗಿ ಕಣ್ಣೀರು ಸುರಿಸುವವಳು. ‘ಈತನ ಉಪಟಳ ಅತಿಯಾದಾಗ ಮುಖ್ಯ ಕಣ್ಣೀರುಗಾರ್ತಿ ಸುಚಿತ್ರಾ ಧಾರಾವಾಹಿನಿಯಿಂದ ಹೊರಬಿದ್ದಳು. ಇದೊಂದು ಸ್ತ್ರೀಲಿಂಗ ರೂಪ. ಮಾದರಿ : ಲಂಗರುಗಾರ್ತಿ. ಆಟಗಾರ್ತಿ. ಓಟಗಾರ್ತಿ.

ಕಮ್ಯುನಿಷ್ಟೀಕರಣ ನಾ ಸುಧಾ ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಒಳಗಾಗುವುದು. ‘ಶಿಕ್ಷಣದ ಕಮುನಿಷ್ಟೀಕರಣ ಬಯಸುವ ಎಡ ಪಕ್ಷಗಳಿಂದ ಯುಪಿಎ ಸರ್ಕಾರ ಒತ್ತಡಕ್ಕೆ ಸಿಲುಕಿದೆ.’ ಇಂಗ್ಲಿಶಿನ ‘ಕಮುನಿಸ್ಟ್ ’ ಪದಕ್ಕೆ ‘ಈಕರಣ’ ಪ್ರತ್ಯಯ ಸೇರಿಸಿ ಪದ ರಚನೆ ಮಾಡಲಾಗಿದೆ.

ಕಲ್ಲುಗಳ್ಳ ನಾ ಲಂಕೇಶ್ಪತ್ರಿಕೆ ಕಲ್ಲುಗಳನ್ನು ಕದಿಯುವವನು. ‘ಕಲ್ಲುಗಳ್ಳರ ಮೊರೆ ಡೀಕೆ ಸೂರಿ’. ‘ಕಾಡುಗಳ್ಳ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಕಲಾಕೃಷಿ ನಾ ಪ್ರಜಾವಾಣಿ ಕಲೆಗಳ ಕಲಿಕೆ. ‘ನೈಜತೆ, ಬಣ್ಣಗಳ ಸಂಯೋಜನೆ ಒಂದಕ್ಕೊಂದು ಪೂರಕವಾಗಿ ಕಲಾಕೃಷಿ ಖುಷಿ ಕೊಡುತ್ತಿದೆ.’ ‘ಕೃಷಿ’ ಎಂಬ ಪದ ಬೇಸಾಯಕ್ಕೆ ಸಂಬಂಧಪಟ್ಟದ್ದಾದರೂ ಇಂದು ಇನ್ನಿತರ ಕ್ಷೇತ್ರಗಳಲ್ಲಿಯೂ ಬಳಕೆಯಾಗುತ್ತಿದೆ. ಉದಾ. ಸಾಹಿತ್ಯ ಕೃಷಿ. ಈ ಪದವನ್ನು ಅನುಸರಿಸಿ ಮೇಲಿನ ಪ್ರಯೋಗ ಬಂದಿದೆ.

ಕಲಿಕೋಪಕರಣ ನಾ ಪ್ರಜಾವಾಣಿ ಕಲಿಕೆಗೆ ಅಗತ್ಯವಾದ ಉಪಕರಣ. ‘ಈ ಕಲಿಕೋಪಕರಣದಲ್ಲಿ ಇರುವುದು ೩೦ ಸಂಕೇತಗಳಾದರೂ ಇದರಿಂದ ೪೭೫ ಕಾಗುಣಿತ ಸೃಷ್ಟಿ ಸಾಧ್ಯ.’ ಕಲಿಕೆ+ಉಪಕರಣ=ಕಲಿಕೋಪಕರಣ ಎಂದು ಬಳಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತದ ಪದಗಳನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ಸಂಧಿ ನಿಯಮ ಸಂಸ್ಕೃತದ್ದು. ಮಾದರಿ : ಪಾಠೋಪಕರಣ, ಪೀಠೋಪಕರಣ.

ಕಲ್ಲೆಸೆಗಾರ ನಾ ಉದಯವಾಣಿ ಕಲ್ಲುಗಳನ್ನು ಬಿಸಾಡುವವನು. ‘ಗಾಜಾ : ಪ್ಯಾಲಸ್ತೀನಿ ಕಲ್ಲೆಸೆಗಾರರತ್ತ ಇಸ್ರೇಲ್ ಗುಂಡು. ಮೂರು ಬಲಿ!’ ಕ್ರಿಯಾದಾತುವಿಗೆ ನಾಮಸಾಧಕ ಪ್ರತ್ಯಯ ಹಚ್ಚಿ ನಾಮರೂಪವನ್ನು ಸಾಧಿಸಿ ಅನಂತರ -‘ಗಾರ’ ಪ್ರತ್ಯಯ ಹಚ್ಚುವುದು ಕನ್ನಡದಲ್ಲಿ ಬಳಕೆಯಲ್ಲಿರುವ ನಿಯಮ. ಈ ನಿಯಮದಂತೆ ಮೇಲಿನ ಪದವು ‘ಕಲ್ಲೆಸೆತಗಾರ’ ಎಂದಿರಬೇಕಿತ್ತು. ಆದರೆ ‘ಕಲ್ಲೆಸೆಗಾರ’ ಪದದಲ್ಲಿ ನಾಮಸಾಧಕ ಪ್ರತ್ಯಯ ಹಚ್ಚದೆ ನೇರವಾಗಿ -‘ಗಾರ’ ಪ್ರತ್ಯಯವನ್ನು ಹಚ್ಚಲಾಗಿದೆ.

ಕಸನಿರೋಧಕ ನಾ ವಿಜಯಕರ್ನಾಟಕ ಕಸವನ್ನು ನಿರ್ಮೂಲನ ಮಾಡುವ ಪಡೆ. ‘ಬಂಧನದಲ್ಲಿಡುವ ಗುಂಪು. ಹಾಂಗ್‌ಕಾಂಗ್‌ನಲ್ಲಿ ಕಸಬಿಸಾಕುವವರ ವಿರುದ್ಧ ದಾಳಿ ಮಾಡಲು ಕಸ ನಿರೋಧಕ ಪಡೆಯೇ ಇದೆ’. ಈ ಪದವನ್ನು ‘ರೋಗ ನಿರೋಧಕ’ ಮಾದರಿಯಲ್ಲಿ ತರಲಾಗಿದೆ.

ಕಾಂಗ್ರೇಸ್ಸೀಕರಣ ನಾ ವಿಜಯಕರ್ನಾಟಕ ಕಾಂಗ್ರೇಸ್ ಪಕ್ಷವನ್ನೇ ಅನುಕರಿಸುವ ಸ್ಥಿತಿ ತಲುಪುವುದು. ‘ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ವಿ.ವಿ.ತಿದ್ದುಪಡಿ ವಿದೇಯಕ ಕಾಯಿದೆ ರೂಪದಲ್ಲಿ ‘ಜಾರಿಗೆ ಬಂದ ನಂತರ ಅವು ಕಾಂಗ್ರೇಸ್ಸಿಕರಣವಾಗುತ್ತಿವೆ ಎಂದು ಆರೋಪಿಸಿದರು. ‘ಈಕರಣ’ ರೂಪವನ್ನು ಹತ್ತಿಸಿರುವುದು ಪದ ರಚನೆಯ ವಿಧಾನಕ್ಕೆ ಇನ್ನೊಂದು ನಿದರ್ಶನ.

ಕಾನೂನಾಲಯ ನಾ ವಿಜಯಕರ್ನಾಟಕ ಕಾನೂನಿನ ಕಾಯಿದೆ, ನಿಯಮಗಳನ್ನು ಪಾಲಿಸುವ ಮನೆ. ‘ನೂರಾರು ಕಾನೂನುಗಳ ನಡುವೆ, ಸಾಕ್ಷಿಗಳು ವಾದವನ್ನೇ ಪ್ರಮುಖವೆಂದಣಿಸಿ ನೀಡುವ ತೀರ್ಪು ನ್ಯಾಯವಾದೀತಾದರೂ ಹೇಗೆ? ಆದ್ದರಿಂದಲೇ ಇದು ನ್ಯಾಯಾಲಯವಲ್ಲ ಕಾನೂನಾಲಯ ಅಂತ ನಾನು ಹೇಳೋದು’. ಮೇಲಿನ ಪ್ರಯೋಗದಲ್ಲಿ ‘ಕಾನೂನು’ ಪರ್ಸೋ ಅರೇಬಿಕ್ ‘ಆಲಯ’ ಸಂಸ್ಕೃತ ಪದ. ಇವೆರಡು ಸೇರಿ ಸಂಸ್ಕೃತ ಸಂಧಿ ನಿಯಮದಂತೆ ಪದ ರಚನೆಯಾಗಿದೆ. ಮಾದರಿ : ತಾರಾಲಯ.

ಕಾಫಿರೋದ್ಧಾರ ನಾ ಕರ್ಮವೀ ಇಸ್ಲಾಂ ಧರ್ಮದ ಪ್ರಚಾರಕರು. ‘ಇಡೀ ವಿಶ್ವವನ್ನು ಕುರಾನಿನ ಆದೇಶಗಳಿಗೆ ಮಣಿಯುವಂತೆ ಮಾಡುವ ಘನ ಉದ್ದೇಶದಿಂದ ಹೊರಟಿರುವ ಅಲ್ ಕೈದಾ ಇಲ್ಲಿಯವರೆಗೆ ಮಾಡಿರುವ ‘ಕಾಫಿರೋದ್ಧಾರ’ದ ಕೆಲಸಗಳನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು.’ ಕಾಫಿರ್ ಮತ್ತು ಉದ್ಧಾರ ಎರಡು ಪದಗಳು ಸೇರಿಸಿಕೊಂಡು ಪದ ರಚನೆ ಮಾಡಲಾಗಿದೆ. ಪರ್ಶಿಯನ್ ಕಾಫಿರ್ ಸಂಸ್ಕೃತದ ಉದ್ಧಾರ ಪದಗಳು ಸೇರಿಸಿಕೊಂಡು ಸಂಸ್ಕೃತ(ಗುಣಸಂಧಿ) ನಿಯಮದಲ್ಲಿ ಪದ ರಚನೆ ಮಾಡಲಾಗಿದೆ.

ಕಾಮಾನ್ಯ ನಾ ಕನ್ನಡಪ್ರಭ ಸಹಜವಾದುದು. ‘sex scandle ಈಗೀಗ ಬಲು ‘ಕಾಮಾನ್ಯ’. (ಕಾಮ + commen + ಸಾಮಾನ್ಯ = ಕಾಮಾನ್ಯ) ಮೇಲಿನ ಪದವು ಅಂಕುಡೊಂಕು ಕಾಲಂನಲ್ಲಿ ಬಳಕೆಯಾಗಿದೆ. ‘ಸಾಮಾನ್ಯ’ ಮಾದರಿಯಲ್ಲಿ ಇಂಗ್ಲಿಶ್ ಕಾಮನ್ ಪದಕ್ಕೆ ಕನ್ನಡದ ‘ನ್ಯ’ ರೂಪ ಹತ್ತಿಸಿ ಬಳಕೆ ಮಾಡಲಾಗಿದೆ.

ಕಾರ್ಯಾರ್ಜನೆ ನಾ ಕರ್ಮವೀ ಕೆಲಸ, ಉದ್ಯೋಗ, ನೌಕರಿ. ‘ವಿದ್ಯಾರ್ಜನೆ. ಕಾರ್ಯಾರ್ಜನೆ ಆದ ಮೇಲೆ ಮದುವೆ ಯಾಕೆ ಆಗಬಾರದೆಂಬ ಆಲೋಚನೆ ವರನಿಗೂ ಬಂತು!’ ಇದು ವಿದ್ಯಾರ್ಜನೆ, ಜ್ಞಾನಾರ್ಜನೆ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಕಾರ್ಯಾಕ್ರಮಾತ್ಮಕ ನಾ ಲಂಕೇಶ್ಪತ್ರಿಕೆ ಹೋರಾಟದ ಕಾರ್ಯಕ್ರಮ ಸೂಚಿ. ‘ಗೋಕಾಕ್ ಚಳವಳಿ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಅದನ್ನು ಮುಂದುವರಿಸುವ ಕಾರ್ಯಾಕ್ರಮಾತ್ಮಕ ಚೌಕಟ್ಟನ್ನು ಸದರಿ ಹೋರಾಟ ಹೊಂದಿಲ್ಲ!….’ ವಾಕ್ಯದಲ್ಲಿ ಬಳಕೆಯಾಗಿರುವ ಸಂದರ್ಭವನ್ನು ಗಮನಿಸಿದರೆ ‘ಕಾರ್ಯಕ್ರಮ’ ಎಂಬ ರೂಪವೇ ಸಾಕಾಗಿತ್ತು ಎನಿಸುತ್ತದೆ. ಮಾದರಿ : ರಚನಾತ್ಮಕ.

ಕಾಂಕ್ರಿಟೀಕರಣ ನಾ ವಿಜಯಕರ್ನಾಟಕ ಜಲ್ಲಿ, ಮರಳು, ಸಿಮೆಂಟನ್ನು ನೀರಿನಲ್ಲಿ ಕಲಿಸಿ ಮಾಡಿದ ಮಿಶ್ರಣ. ‘ರಸ್ತೆ ಕಾಂಕ್ರಿಟೀಕರಣದಲ್ಲಿ ಗೋಲ್ ಮಾಲ್ ! ಇಂಗ್ಲಿಷಿನ ‘ಐಸೇಶನ್’ಗೆ ಸಂವಾದಿಯಾಗಿ ಕನ್ನಡದಲ್ಲಿ ‘ಈಕರಣ’ ಪ್ರತ್ಯಯ ಬಳಕೆಯಾಗುತ್ತದೆ. ಅಂತಹ ಮಾದರಿಗೆ ಇದೊಂದು ಸೇರ್ಪಡೆ.

ಕಾವ್ರೋನಾ ಅಗ್ನಿ ಕಾವ್ಯರಚನೆಯನ್ನೇ ಮಾಡುವ ಕೆಲಸ. ‘ಅವರು ಬರೆದಿರುವ ಕಾವ್ರೋಮುಕ್ಕಾಲು ಭಾಗದಷ್ಟು ಈ ಉತ್ತರಗಳಿಗಾಗಿ ಮೀಸಲಾಗಿದೆ’: ‘ಕಾವ್ಯ’ ಪದದೊಡನೆ ‘ಉದ್ಯೋಗ’ ಪದ ಸೇರಿ ಸಂಧಿಯಾಗು ವಾಗ ಸಂಸ್ಕೃತ ಸಂಧಿಯ ನಿಯಮಗಳನ್ನು ಪಾಲಿಸಿರುವುದು ಗಮನಾರ್ಹ.

ಕಿವಿಹಿತ್ತಾಳೆತನ ನಾ ಪ್ರಜಾವಾಣಿ ಬೇರೆಯವರ ಮಾತನ್ನು ನಂಬುವ ಗುಣ. ‘ಇನ್ನು ಮುಂದಕ್ಕಾದರೂ ಸದ್ರಿ ಜಿಲ್ಲಾಧಿಕಾರಿ ಕಿವಿ ಹಿತ್ತಾಳೆತನವನ್ನು ಬಿಟ್ಟು ಬಿಡಲಿ. ಈಗಾಗಲೇ ಹಿತ್ತಾಳೆ ಕಿವಿ ಬಳಕೆಯಲ್ಲಿದೆ. ಕಿವಿ ಹಿತ್ತಾಳೆ ಆಗಿರುವುದು ಹಿತ್ತಾಳೆ ಕಿವಿ ಆಗಿರುವುದು ಅರ್ಥದಲ್ಲಿ ಅಷ್ಟೇನೂ ವ್ಯತ್ಯಾಸ ಕಂಡುಬರುವುದಿಲ್ಲ. -‘ತನ’ ಪ್ರತ್ಯಯ ಬಳಸಿ ನಾಮಪದ ರಚಿಸಲಾಗಿದೆ. -‘ತನ’ ಇದು ಗುಣವೊಂದರ ಇರುವಿಕೆಯನ್ನು ಹೇಳುತ್ತದೆ. ಕಿವಿ ಹಿತ್ತಾಳೆ ಅಥವಾ ಹಿತ್ತಾಳೆ ಕಿವಿ ಈ ಪದಗಳೆ ಸಾಕಾಗಿತ್ತು -‘ತನ’ ಪ್ರತ್ಯಯದ ಬಳಕೆ ಅಗತ್ಯವಿಲ್ಲ ಎಂದೆನಿಸುತ್ತದೆ.

ಕೀಟೋಪಚಾರ ನಾ ಪ್ರಜಾವಾಣಿ ಹತ್ತಿಬೆಳೆಗೆ ನೀಡುವ ಉಪಚಾರ. ‘ಹತ್ತಿ ಬೆಳೆಗೆ ಕೀಟೋಪಚಾರ’ ರಚನೆಯ ದೃಷ್ಟಿಯಿಂದ ತುಂಬ ಕುತೂಹಲಕಾರಿ ಪ್ರಯೋಗವಾಗಿದೆ. ಕೀಟ ಮತ್ತು ಉಪಚಾರ ಪದಗಳ ನಡುವೆ ಸಂಧಿಕಾರ್ಯ ಜರುಗಿದೆ. ಬಳಕೆಯಾಗಿರುವ ಸಂಧಿ ನಿಯಮ ಸಂಸ್ಕೃತದ್ದು. ಕೀಟ ಕನ್ನಡ ಪದವೆಂಬುದನ್ನು ಗಮನಿಸಬೇಕು.

ಕುರ್ಚಿತ್ವ ನಾ ಲಂಕೇಶ್ಪತ್ರಿಕೆ ಕುರ್ಚಿ; ಸೀಟು. ‘ರಾಜಕೀಯದ ಅಪರಾಧೀಕರಣ ಇವತ್ತು ನಮ್ಮ ದೇಶದಲ್ಲಿ ಅಸಹ್ಯವೆನಿಸುವುದಿಲ್ಲ. ಆದರೆ ಕುರ್ಚಿತ್ವದ ರಾವು ಬಡಿದ ನಮ್ಮ ರಾಜಕಾರಣಿಗಳು ಮಾತ್ರ ಇಷ್ಟೊಂದು ಸಂವೇದನಾ ಶೂನ್ಯರಾಗಲು ಸಾಧ್ಯ.’ ಇತ್ತೀಚಿಗೆ ನಾಮಪದಗಳಿಗೆ ‘ತ್ವ’ ಪ್ರತ್ಯಯ ಹಚ್ಚಿ ಬಳಕೆ ಮಾಡಲಾಗುತ್ತಿದೆ. ಆ ಗುಂಪಿಗೆ ಇದೊಂದು ಸೇರ್ಪಡೆ.

ಕುಟುಂಬಿಕ ನಾ ತರಂಗ ಮನೆತನ, ಸಂಸಾರ. ‘ಇವೆಲ್ಲಾ ಏಕೋ ಇಂಥ ಒಂದು ಗಂಭಿರ ಪ್ರಕರಣದಲ್ಲಿ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಜನರ, ಅವರ ಹಿತೈಷಿಗಳ ಕುಟುಂಬಿಕರ, ಒಟ್ಟಿನಲ್ಲಿ ಮನುಷ್ಯರ ಚಿಂತೆ, ಆಕ್ರೋಶಕ್ಕೆ ಕಾರಣವಾಗಿದೆ…’ ‘ಕೌಟುಂಬಿಕ’ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ. ಅರ್ಥದಲ್ಲೇನೂ ಹೊಸತನವಿಲ್ಲ.

ಕುಶಲಿಗ ನಾ ವಿಜಯಕರ್ನಾಟಕ ಕ್ಷೇಮ ವಿಚಾರಿಸುವವನು. ‘ಬೆಂಗಳೂರಿನಲ್ಲಿ ನೆಲೆಸಿ ಸಾಧನೆ ಮಾಡಿದವರಿಗೆ ಮಾತ್ರೊಹಾರ, ತುರಾಯಿ ಪ್ರಶಸ್ತಿ, ನಿವೇಶನ ನೀಡುವ ಸರಕಾರ ಹಳ್ಳಿ ಮೂಲೆಗಳಲ್ಲಿರುವ ಕುಶಲಿಗರ ಬಗ್ಗೆ ಯೋಚಿಸುವುದು ಎಂದೋ?’ -‘ಇಗ’ ಪ್ರತ್ಯಯವನ್ನು ಹತ್ತಿಸಲಾಗಿದೆ. ಸಾಧ್ಯತೆ : ಕ್ಷೇಮಿಗ.

ಕುಸಿರೋಗ ನಾ ಲಂಕೇಶ್ಪತ್ರಿಕೆ ಅಡಿಕೆ ಬೆಳೆಯ ಇಳುವರಿ ಕುಗ್ಗುವಿಕೆ. ಬೆಲೆಯಲ್ಲೂ ಕುಸಿತವಾಗುವುದು. ‘ತೆಂಗಿಗೆ ನುಸಿರೋಗವಾದರೆ ಅಡಿಕೆ ಕುಸಿರೋಗ’, ಮೇಲಿನ ಪದ ನುಸಿರೋಗದ ಮಾದರಿಯಲ್ಲಿ ಬಳಕೆಯಾಗಿದೆ.

ಕೂಗುವೀ ನಾ ಸುಧಾ ಹೋರಾಟಗಾರ. ‘ಆದರೆ ನಮ್ಮಲ್ಲಿ ಅಂತಹ ಕೂಗುವೀರರನ್ನು ರಕ್ಷಿಸುವ ಕನಿಷ್ಠ ಪದ್ಧತಿಯೂ ಇಲ್ಲ.’ ಅನ್ಯಾಯ, ಆಕ್ರಮ, ಭ್ರಷ್ಟ ವ್ಯವಸ್ಥೆ ವಿರುದ್ದ ಹೋರಾಡುವಂತಹ ಜನರನ್ನು ಹೋರಾಟಗಾರ ಅಥವಾ ಚಳವಳಿಗಾರ ಎಂದು ಕರೆಯುವುದು ರೂಢಿ. ಇದೆ ಅರ್ಥದಲ್ಲಿ ಮೇಲಿನ ಪದವನ್ನು ರಚನೆ ಮಾಡಲಾಗಿದೆ. ‘ಕೂಗಾಟ’ಮಾಡುವುದರಲ್ಲಿ ವೀರ.

ಕೃಪಾಂಕಿ ನಾ ವಿಜಯಕರ್ನಾಟಕ ವಿಶೇಷ ಅಂಕಗಳಿಗೆ ಒಳಗಾಗಿರುವವನು. ‘ಬಲಿಪಶುಗಳಾಗು ತ್ತಿರುವ ಕೃಪಾಂಕಿಗಳು’. ‘ಕೃಪಾಂಕ’ ಪದವನ್ನು ‘ಕೃಪಾಂಕಿ’ ಎಂದು ‘ಇ’ ಕಾರಾಂತವಾಗಿ ಬಳಕೆ ಮಾಡಲಾಗಿದೆ. ಸಾಮಾನ್ಯ ಪದವೊಂದು ವ್ಯಕ್ತಿ ವಾಚಕವಾಗಿ ಬಳಕೆಯಲ್ಲಿದೆ.

ಕೃಪಾಂಕಿv ನಾ ವಿಜಯಕರ್ನಾಟಕ ವಿಶೇಷ ಅಂಕಗಳಿಗೆ ಒಳಗಾದವರು. ‘ಗ್ರಾಮೀಣ ಕೃಪಾಂಕಿತರು ಸೇವೆ ಇನ್ನೂ ತೂಗಯ್ಯಾಲೆಯಲ್ಲಿ’. ‘ಕೃಪಾಂಕಿ’ ಪದಕ್ಕಿಂತ ಕೃಪಾಂಕಿತ ಪದ ಅರ್ಥದಲ್ಲೇನೂ ಹೊಸದಾಗಿ ನೀಡುತ್ತಿಲ್ಲ…’ ‘ನಾಮಾಂಕಿತ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಕೇಶಿರಾಜ ನಾ ಉದಯವಾಣಿ ಉದ್ದವಾದ ಕೂದಲನ್ನು ಉಳ್ಳವನು. ಕೇಶಿರಾಜನ ಕೇಶಾರ್ಪಣ ‘ಕೇಶಿರಾಜ’ ವ್ಯಕ್ತಿನಾಮವಾಗಿ ಬಳಕೆಯಲ್ಲಿದೆ. ಶಬ್ದಮಣಿ ದರ್ಪಣದ ಕರ್ತೃ. ಆದರೆ ಮೇಲಿನ ಪ್ರಯೋಗವನ್ನು ಉದ್ದವಾದ ಕೂದಲನ್ನು ಹೊಂದಿರುವವನು ಎಂಬರ್ಥದಲ್ಲಿ ಪ್ರಯೋಗ ಮಾಡಲಾಗಿದೆ.

ಕೇರಳೀಕರಣ ನಾ ವಿಜಯಕರ್ನಾಟಕ ಕರ್ನಾಟಕ ಕೇರಳ ದೇಶದ. ‘…. ಅಂತವರ ಹೆಸರಲ್ಲಿ ದ್ವಾರ ನಿರ್ಮಿಸುವ ಯೋಜನೆ ಕೇರಳೀಕರಣದ ಹುನ್ನಾರ ಎಂದು ಅವರು ಬಣ್ಣಿಸಿದರು. ಇತ್ತೀಚಿನ ದಿನಗಳಲ್ಲಿ ವ್ಯಕ್ತಿನಾಮ ಮತ್ತು ಸ್ಥಳನಾಮಗಳಿಗೆ ‘ಈಕರಣ’ ರೂಪವನ್ನು ಹತ್ತಿಸಿ ಪದರಚನೆ ಸಾಕಷ್ಟು ನಡೆದಿದೆ. ನಡೆಯುತ್ತಿದೆ. ಅಂತಹ ವಿಧಾನಕ್ಕೆ ಇನ್ನೊಂದು ನಿದರ್ಶನ.

ಕೈಗಾರಿಕೋದ್ಯಾನ ನಾ ವಿಜಯಕರ್ನಾಟಕ ವಿವಿಧ ಬಗೆಯ ಕೈಗಾರಿಕೆಗಳನ್ನು ಸ್ಥಾಪಿಸಿರುವ ಪ್ರದೇಶ. ‘ಜರ್ಮನಿ’ ಸಹಕಾರದಲ್ಲಿ ಜಾಗತಿಕ ಗುಣಮಟ್ಟದ ‘ಪರಿಸರ ಸ್ನೇಹಿ ಕೈಗಾರಿಕೋದ್ಯಾನ ಸ್ಥಾಪನೆಗೆ ಬಿರುಸಿನ ಯತ್ನ ನಡೆಸಿದೆ. ಕೈಗಾರಿಕೆ ಮತ್ತು ಉದ್ಯಾನ ಎರಡು ಬೇರೆ ಬೇರೆ ಭಾಷೆಯ ಪದಗಳು ಸೇರಿ ಸಂಸ್ಕೃತ ಸಂಧಿ ನಿಯಮಕ್ಕನುಗುಣವಾಗಿ ರಚನೆಯಾಗಿರುವ ಪದ. ‘ಉದ್ಯಾನ’ ಪದವನ್ನು ಸಸ್ಯಗಳಿಗೆ ಮಾತ್ರ ಅನ್ವಯಿಸಿ ಬಳಕೆ ಮಾಡುತ್ತಿರುವುದು ಸರಿ. ಆದರೆ ಪ್ರಾಣಿಯುದ್ಯಾನ, ಕೈಗಾರಿಕೋದ್ಯಾನ ಪದಗಳನ್ನು ಬಳಕೆ ಮಾಡಿರುವುದು ವಿಶಿಷ್ಟವೆನಿಸಿದೆ.

ಕೈಚಾಲಿತ ನಾ ವಿಜಯಕರ್ನಾಟಕ ಕೈ ಸಹಾಯದಿಂದ ಚಲಿಸಲು ಸಾಮರ್ಥ್ಯವುಳ್ಳ. ‘….ಇದಕ್ಕಾಗಿ ಕೆಲವು ಯಾಂತ್ರೀಕ ವ್ಯವಸ್ಥಗಳು, ಕೈಚಾಲಿತ ಉಪಕರಣಗಳು ಬೆಳಕು ಕಂಡಿವೆ. ಕೆಲವೆಡೆ ಯಶಸ್ಸಾಗಿವೆ’. ಮೇಲಿನ ಪದ ‘ಸ್ವಯಂಚಾಲಿತ’ ಮಾದರಿಯಲ್ಲಿ ಬಳಕೆ ಆಗಿರುವಂತಹದು. ಸಾಧ್ಯತೆ : ಕಾಲ್‌ಚಾಲಿತ.

ಕೊಲೆಗಾರಿಣಿ ನಾ ವಿಜಯಕರ್ನಾಟಕ ಕೊಲೆ ಮಾಡುವವಳು. ನೆರೆಹೊರೆಯವರೂ ಕೂಡ ಚಂದಾಳೇ ಕೊಲೆಗಾರಿಣಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೊಲೆಗಾರ ‘ಪುಲ್ಲಿಂಗ’ ಎಂದು ತಿಳಿದು ಸ್ತ್ರೀಲಿಂಗ ರೂಪವಾಗಿ ಕೊಲೆಗಾರಿಣಿ ರೂಪವನ್ನು ತರಲಾಗಿದೆ. ಈಗಾಗಲೇ ಕೊಲೆಗಾರ್ತಿ/ಗಾತಿ ರೂಪಗಳು ಬಳಕೆಯಲ್ಲಿವೆ.

ಕೊಳ್ಳುಬಾಕತನ ನಾ ಸುಧಾ ಕೊಳ್ಳುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವ ಸ್ಥಿತಿ. ‘ಕೊಳ್ಳುಬಾಕತನವನ್ನೇ ಅಭಿವೃದ್ದಿಯೆಂದು ಅರ್ಥೈಸುತ್ತಿರುವ ಪರಿಸ್ಥಿತಿ ಇಂದಿನದು.’ ಕನ್ಸೂಮರ‍್ಗೆ ಸಂವಾದಿ ರೂಪ. ಹಾಗೆ ನೋಡಿದರೆ ಯಾವುದೇ ಕ್ರಿಯೆಯನ್ನು ಅತಿಯಾಗಿ ಮಾಡಿದಾಗ ಆ ಕ್ರಿಯಾಪದವನ್ನು ಬಳಸಿ ಇಂಥ ರೂಪವನ್ನು ರಚಿಸಲು ಸಾಧ್ಯವಿದೆ. ಬಾಕ ರೂಪಗಳು ಕೇವಲ ವಿವರಣೆಗೆ ಮಾತ್ರ ಸೀಮಿತವಲ್ಲ. ಸಾಮಾಜಿಕವಾದ ವ್ಯಾಖ್ಯಾನವನ್ನು ಕೂಡ ಈ ರೂಪಗಳು ಒದಗಿಸುತ್ತವೆ. ಈಗಾಗಲೇ ಕೊಳ್ಳುಬಾಕ ಪದವನ್ನು ದಿನದಿನ-೧ರಲ್ಲಿ ದಾಖಲಿಸಲಾಗಿದೆ.-ತನ ಪ್ರತ್ಯಯವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ಅರ್ಥದಲ್ಲೇನೂ ಹೊಸತನವಿಲ್ಲ.

ಕೋಪೋತ್ಪಾದಕ ನಾ ಪ್ರಜಾವಾಣಿ ಸಿಟ್ಟನ್ನು ಹುಟ್ಟಿಸುವವ. ‘ಮುಷರಫ್ ಕೋಪೋತ್ಪಾದಕ ಭಾರತಕ್ಕೆ’ ಇದು ಭಯೋತ್ಪಾದಕ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಕೋಮುವಾದೀಕರಣ ನಾ ಸಂಯುಕ್ತಕರ್ನಾಟಕ ಜಾತಿಪರವಾಗಿ ವಾದ ಮಾಡುವವರು/ನು. ‘ಕೋಮುವಾದೀಕರಣ ಹಾಗೂ ವ್ಯಾಪರೀಕರಣದ ಹಾದಿ ಹಿಡಿದಿರುವ ಕೇಂದ್ರ ಸರ್ಕಾರದ ಶಿಕ್ಷಣ ನೀತಿಯ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವು ಇದೇ ದಿನಾಂಕ ೨೭ ರಂದು ರಾಜ್ಯದ ವಿಶ್ವವಿದ್ಯಾಲಯಗಳ ಕಾರ್ಯಸೌಧ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ’(ಇಂಗ್ಲಿಶಿನ ಕಮ್ಯುನಲೈಷನ್‌ಗೆ ಸಂವಾದಿಯಾಗಿ ಬಳಕೆ ಆಗಿರುವ ಪದ).‘ಈಕರಣ ಪ್ರತ್ಯಯವನ್ನು ಬಳಸಿ ಕನ್ನಡದಲ್ಲಿ ಈಚೆಗೆ ಇಂತಹ ಬರವಣಿಗೆ ರೂಪಗಳನ್ನು ರಚಿಸಿ ಬಳಸಲಾಗುತ್ತಿದೆ. ಮಾದರಿ : ಉದಾರೀಕರಣ, ಖಾಸಗೀಕರಣ, ವ್ಯಾಪಾರೀಕರಣ.

ಕೋಮೋದ್ರೇಕ ನಾ ಲಂಕೇಶ್ಪತ್ರಿಕೆ ಜಾತೀಯತೆಯನ್ನು ತೀವ್ರವಾಗಿ ಉದ್ದೀಪನಗೊಳಿಸು ವುದು. ‘ಎನ್‌ಡಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತೀವ್ರವಾದ ಹೋರಾಟ ನಡೆಸುವುದಕ್ಕಾಗಲೀ, ಬಿಜೆಪಿ ಪಕ್ಷದ ಕೋಮೊದ್ರೇಕ ತಂತ್ರಗಳನ್ನು ಖಂಡಿಸುವುದ ಕ್ಕಾಗಲೀ…. ಸಾಧ್ಯವಾಗುತ್ತಿಲ್ಲ’, ‘ಬಾವೋದ್ರೇಕ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಕೋಮು + ಉದ್ರೇಕ ಪದಗಳೆರಡು ಸೇರಿ ರಚನೆ ಆಗಿದೆ.

ಕ್ರಿಸ್ತೀಕರಣ ನಾ ವಿಜಯಕರ್ನಾಟಕ ಕ್ರೈಸ್ತಧರ್ಮಮಯ ಮಾಡುವುದು. ಕ್ರೈಸ್ತೀಕರಣ ಗೊಳಿಸುವುದು. ‘ಜಗತ್ತನ್ನು ಕ್ರಿಸ್ತೀಕರಣಗೊಳಿಸಲು ಹೊರಟವರ ಮೂಲ ದಲ್ಲಿಯೇ ಕ್ರಿಶ್ಚಿಯನ್ ಧರ್ಮ, ಅಲುಗಾಡುತ್ತಿದೆ. ಕ್ರೈಸ್ತ ಪದಕ್ಕೆ -ಈಕರಣ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ. ಮಾದರಿ : ಇಸ್ಲಾಮೀಕರಣ, ಹಿಂದೂಕರಣ.

ಕ್ರಿಕೆಟೋತ್ಸವ ನಾ ವಿಜಯಕರ್ನಾಟಕ ಕ್ರಿಕೆಟ್‌ನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಿರುವ ಉತ್ಸವ. ‘ಕ್ರಿಕೆಟೋತ್ಸವ ಹಿಂಸೆ. ೭ ಸಾವು, ೫೦ ಜನ ಗಾಯ.’ ಕ್ರಿಕೆಟ್ ಮತ್ತು ಉತ್ಸವ ಪದಗಳನ್ನು ಸೇರಿಸಿ ಸಂಸ್ಕೃತದ ಸಂಧಿ ನಿಯಮದಲ್ಲಿ ಪದ ರಚನೆ ಮಾಡಲಾಗಿದೆ.

ಕ್ರಿಡಾಕಾರಿಣಿ ನಾ ಕರ್ಮವೀ ಆಟ ಆಡುವವಳು. ಆಟಗಾರ್ತಿ ‘ಕರ್ನಾಟಕದ ಬಗ್ಗೆ ಈ ಕೆಳಗಿರುವ ಕಾಳಜಿಗೆ ಒಂದು ಸಣ್ಣ ಉದಾಹರಣೆ ಎಂದರೆ ವಾಸ್ತವವಾಗಿ ಈಕೆ ಎಡಗೈ ಕ್ರಿಡಾಕಾರಿಣಿ’ ‘ಕ್ರಿಡಾಕಾರ’ ಪದ ಈಗಾಗಲೇ ಬಳಕೆಯಾಗಿದೆ. ಮೇಲಿನ ಪದಕ್ಕೆ ಸ್ತ್ರೀಲಿಂಗ ಪದವನ್ನಾಗಿ ಬಳಕೆ ಮಾಡಲಾಗಿದೆ. ‘ಕ್ರಿಡಾಕಾರ’ ಪದ ಈಗಾಗಲೇ ಬಳಕೆ ಮಾಡಲಾಗಿದೆ. ಮಾದರಿ : ಪಾದಚಾರಿಣಿ

ಕ್ರಿಡಾಕಾರಣಿಗಳು ನಾ ಸಂಯುಕ್ತಕರ್ನಾಟಕ ಕ್ರಿಡಾಪಟುಗಳು. ‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಕ್ರಿಡಾಕಾರಣಿಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು ೨೦೦ ಕ್ರಿಡಾಪಟುಗಳು ಶನಿವಾರದಿಂದ ನಡೆಯಲಿರುವ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಟೆಕ್ಟಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ’. ಲಘು ಬರಹಗಳಲ್ಲಿ ಇಂಥ ಪ್ರಯೋಗಗಳು ಸಾಧ್ಯ ಮಾದರಿ: ರಾಜಕಾರಣಿ.

ಕ್ರೀಡಾಚಟು ನಾ ವಿಜಯಕರ್ನಾಟಕ ಕ್ರೀಡೆಯ ಹವ್ಯಾಸವುಳ್ಳವನು. ‘ನಾನೊಬ್ಬ ಕ್ರೀಡಾಪಟು ಅಲ್ಲ, ಕೇವಲ ಕ್ರೀಡಾಚಟು’. ಕ್ರೀಡಾಪಟು ಮಾದರಿಯಲ್ಲಿ ಬಳಕೆಯಲ್ಲಿದ್ದರೂ; ಕ್ರೀಡೆ ಬಗೆಗೆ ಚಟ ಉಳ್ಳವನು ಚಟು. ಇದೆರ್ಥದಲ್ಲೇ ಕ್ರೀಡಾಚಟು ಬಳಕೆ ಮಾಡಲಾಗಿದೆ.

ಕ್ರಿಡೋದ್ದೀಪಕ ನಾ ಮಲ್ಲಿಗೆ ಕ್ರೀಡಾಪಟುವಿಗೆ ಉದ್ದೀಪನತುಂಬುವ ಮದ್ದು. ‘ಕೂಟದ ಸಂದರ್ಭದಲ್ಲಿ ನಡೆದ ಪರೀಕ್ಷೆಯಲ್ಲಿ ರೈ ಅವರ ಮೂತ್ರದಲ್ಲಿ ನಾರ್ ಆಂಡ್ರೋಸ್ಟೆರಾಲ್ ಎಂಬ ಬಹಿಷ್ಕೃತ ಕ್ರಿಡೋದ್ದೀಪಕ ವಸ್ತು ಕಂಡುಬಂದಿತ್ತು. ಕ್ರೀಡಾ+ಉದ್ದೀಪಕ ಎಂಬ ಎರಡು ಪದಗಳು ಸೇರಿ ಸಂಸ್ಕೃತದ ಸಂಧಿ ಕ್ರಿಯೆಗೆ ಅನುಗುಣವಾಗಿ ಬಂದಿರುವ ಪದ.

ಕ್ರೀಡೋದ್ದೀಪನ ನಾ ಕನ್ನಡಪ್ರಭ ಆಟವನ್ನು ಉದ್ದೀಪನಗೊಳಿಸುವ ಮಾದಕವಸ್ತು. ‘‘ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಕಪ್ಪೆಗಳು ಕ್ರೀಡೋದ್ದೀಪನಗಳನ್ನು ಸೇವಿಸಿ ಉಳಿದ ಸ್ಪರ್ಧಿಗಳಿಗೆ ಮೋಸವೆಸಗುವ ಆಟಗಾರರ ಬಣ್ಣವನ್ನು ಬಯಲಾಗಿಸಬಲ್ಲವು ಎಂಬ ಸುದ್ದಿಯನ್ನು ಬಯೇಸೆನ್ಸರ್ ಮತ್ತು ಬಯೋ ಎಲೆಕ್ಟ್ರಾನಿಕ್ಸ್ ಪತ್ರಿಕೆ ಪ್ರಕಟಿಸಿದೆ.’’ ಕ್ರೀಡೆ + ಉದ್ದೀಪನ ಸೇರಿ ಸಂಧಿ ನಿಯಮಕ್ಕನುಸಾರವಾಗಿ ಪದರಚನೆ ಮಾಡಲಾಗಿದೆ. 

ಖಾ

ಖಾದಿವಾಲಾ ನಾ ವಿಜಯಕರ್ನಾಟಕ ಖಾದಿ ಉಡುಪು ಧರಿಸುವವನು. ‘ದಿನ ಬೆಳಗಾದರೆ, ಸಂವಿಧಾನದ ಬಗ್ಗೆ ಭಾಷಣ ಕೊರೆಯುವ ಖಾದಿವಾಲಾಗಳಿಗೆ ಸಂವಿಧಾನದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ತಿಳಿದಿಲ್ಲವೇನೋ?! ‘ಖಾದಿ’ ಪದಕ್ಕೆ ‘ವಾಲಾ’ ಎಂಬ ಹಿಂದಿ ಪದವನ್ನು ಸೇರಿಸಿಕೊಂಡು ಪದ ರಚನೆ ಮಾಡಲಾಗಿದೆ. ಸಾಧ್ಯತೆ : ಖಾದಿಧಾರಿ, ಖಾದಿಧಾರಿಣಿ. 

ಗಂಡತಿ ನಾ ಕರ್ಮವೀ ಗಂಡಸು. ‘ಹೆಂಡತಿ ಪಳಗಿ ಗಂಡತಿಯಾಗಿರುವುದನ್ನು ಅರಿಯದೆ ಮೊದಲ ರಾತ್ರಿಯ ಮುಗ್ದೆಯನ್ನಾಗಿಯೇ ಕಾಣುವ ಹುಂಬನಾಗಿದ್ದರೆ ಹೇಗೆ? ‘ಹೆಂಡತಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಗಂಡಾಟ ಕ್ರಿ ಪ್ರಜಾವಾಣಿ ಗಂಡುಗಳು ಆಡುವ ಆಟ. ‘ನೆಚ್ಚಿನಾಟದ ಉಯ್ಯಾಲೆ ಮೇಲೆ ಗಂಡಾಟಗಳ ಜೀಕು….’ ಎರಡು ನಾಮಪದಗಳನ್ನು ಸೇರಿಸಿ ರಚನೆ ಮಾಡಲಾಗಿದೆ. ಮಾದರಿ : ಭಂಡಾಟ, ಸಾಧ್ಯತೆ :ಹೆಣ್ಣಾಟ.

ಗಡ್ಡೋಪಾಖ್ಯಾನ ನಾ ತರಂಗ ಗಡ್ಡದ ಪೂರ್ವಕಥೆ. ‘ಗಡ್ಡಬಿಟ್ಟಿರುವ ಹಿಂದಿನ ಉಪಕಥೆ’. ಸದ್ಯಬಳಕೆಯಾಗಿರುವ ರಚನೆಯಲ್ಲಿ ಗಡ್ಡ ಮತ್ತು ಉಪಖ್ಯಾನ ರೂಪಗಳ ನಡುವೆ ಸಂಧಿಕಾರ್ಯ ನಡೆದಿದೆ. ಬಳಕೆಯಾಗಿರುವ ಸಂಧಿ ನಿಯಮ ಸಂಸ್ಕೃತದ್ದು. ಇಲ್ಲಿ ಗಡ್ಡ ಕನ್ನಡ ಪದವೆಂಬುದನ್ನು ಗಮನಿಸಬೇಕು.

ಗಜೋಪಚಾರ ನಾ ಪ್ರಜಾವಾಣಿ ಆನೆಗಳನ್ನು ಉಪಚರಿಸುವ ಜಾಗ. ‘ಕೆಲವರು ತೆಪ್ಪಗಿರದೇ ಮರಿಯಾನೆಗಳನ್ನು ಈ ಗಜೋಪಚಾರದ ಖೆಡ್ಡಾಕ್ಕೆ ಬೀಳಿಸಲು ಹೋಗಿ ಬೆಸ್ತುಬಿದ್ದಿರುವಂತೆ!’ ಸದ್ಯ ಬಳಕೆಯಾಗಿರುವ ರಚನೆಯಲ್ಲಿ ಗಜ ಮತ್ತು ಉಪಚಾರ ರೂಪಗಳ ನಡುವೆ ಸಂಧಿಕಾರ್ಯ ನಡೆದಿದೆ. ಮಾದರಿ : ರಾಜೋಪಚಾರ, ಊಟೋಪಚಾರ.

ಗಾಡಿಗಾರ ನಾ ಪ್ರಜಾವಾಣಿ ಗಾಡಿಯನ್ನು ನಡೆಸುವವನು. ‘ಆ ದೈತ್ಯ ಗಾಡಿಗಾರ ಛಂಗನೆ ಸಂಪತೈಂಗಾರ್ಯರನ್ನು ಅನಾಮತ್ತಾಗಿ ಹೊತ್ತು’ ಏನಾದರೂ ಒಂದನ್ನು ಮಾಡಬಲ್ಲ, ತಯಾರಿಸಬಲ್ಲ ವ್ಯಕ್ತಿಯನ್ನು -ಗಾರ ನಾಮಸಾಧಕ ಪ್ರತ್ಯಯದಿಂದ ಸೂಚಿಸಲಾಗುತ್ತದೆ. ಮೇಲಿನ ಪದವು ಗಾಡಿಯನ್ನು ಹೊಂದಿರುವವನು ಎಂಬ ಅರ್ಥದಲ್ಲಿ ಬಳಕೆಯಾದಂತಿದೆ. ಮಾದರಿ : ಬೇಟೆಗಾರ, ಕೆಲಸಗಾರ.

ಗಾಳಿಕಡತ ನಾ ಪ್ರಜಾವಾಣಿ ಗಾಳಿಯ ತಂತ್ರಾಂಶ. ‘ಕನ್ನಡವು ಧ್ವನಿವಿಜ್ಞಾನಕ್ಕೆ ಸಂಬಂಧಪಟ್ಟ ಭಾಷೆ ಆಗಿರುವುದರಿಂದ ಈ ತಂತ್ರಾಂಶವು ಕನ್ನಡದ ಧ್ವನಿ ಮತ್ತು ವ್ಯಂಜನಗಳನ್ನು ಕೂಡಿಸಿ ‘ವೇವ್ ಫೈಲ್ ’ (ಗಾಳಿಕಡತ) ತಯಾರಿಸುತ್ತದೆ. ಇಂಗ್ಲಿಶಿನ ‘ವೇವ್ ಫೈಲ್ ’ಗೆ ಸಂವಾದಿಯಾಗಿ ಕನ್ನಡದಲ್ಲಿ ‘ಗಾಳಿ ಕಡತ’ ಎಂದು ಪ್ರಯೋಗ ಮಾಡಲಾಗಿದೆ.

ಗುಂಡಾನೆ ನಾ ಕನ್ನಡಪ್ರಭ ಮಧ್ಯದ ಅಮಲಿನಲ್ಲಿರುವ ಆನೆ. ‘ಗುಂಡಾನೆ ಹತ್ತೋಟಿಗೆ ಕಳ್ಳಬಟ್ಟಿ ನಿಯಂತ್ರಣ’ ‘ಗಂಡಾನೆ’ ಮಾದರಿಯಲ್ಲಿ ಬಂದಿರುವ ಪದ. ಗುಂಡು + ಆನೆ ಗುಂಡಾನೆ ಆಗಿದೆ.

ಗುಂಡೋದರಿ ನಾ ಸುಧಾ ಗುಡಾಣದಂತೆ ಹೊಟ್ಟೆಯುಳ್ಳವಳು. ‘ಹೆಂಡತಿ ಗುಂಡೋದರಿ ಯಾಗಿಯೂ ಮಂಡೋದರಿಯಂಥ ಪತಿ ಪರಾಯಣೆಯಾಗುವುದಕ್ಕೆ ಶಕ್ಯ.’ ಮಂಡೋದರಿ ಮಾದರಿಯಲ್ಲಿ ಮೇಲಿನ ಪದವನ್ನು ತರಲಾಗಿದೆ.

ಗುಣಕಾರಿ ಗು ಕನ್ನಡಪ್ರಭ ಸತ್ವ ಭರಿತವಾದ ಗುಣವುಳ್ಳದ್ದು, ಗುಣವನ್ನು ಉಂಟು ಮಾಡುವ. ‘ಹೋಳಿಗೆ, ಕಡುಬು ಇತ್ಯಾದಿ ಸಿಹಿ ಪದಾರ್ಥ ತಯಾರಿಸುವಾಗ ಸಕ್ಕರೆಗಿಂತಲೂ ಬೆಲ್ಲವನ್ನು ಬಳಸುವುದು ಒಳ್ಳೆಯದು. ಬೆಲ್ಲ ಹಲವು ಅಮೂಲ್ಯ ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಅದರಲ್ಲೂ ಒಂದು ವರ್ಷದಷ್ಟು ಹಳೆಯದಾದ ಬೆಲ್ಲ ವಿಶೇಷ ಗುಣಕಾರಿ’ ವಸ್ತುವಿನ ವಿಶೇಷತೆ ತಿಳಿಸಲು ಗುಣಕ್ಕಿಂತ ಭಿನ್ನವಾದುದೇನೂ ಈ ಪದದಲ್ಲಿ ಇಲ್ಲ. ಅಮೂಲ್ಯವಾದ ಪೌಷ್ಟಿಕಾಂಶ ಹೊಂದಿರುವ ವಸ್ತು ಹೆಚ್ಚು ಹಳೆಯದಾದರೂ ಅದರಲ್ಲಿ ಗುಣಕಾರಿ ಗುಣವಿದೆಯೆಂದು ಹೇಳಲಾಗಿದೆ.

ಗುಣಮಾನ ಸುಧಾ ಗುಣಮಟ್ಟ. ‘ನಾನ್ -ಸ್ಟಿಕ್ ಕುಕ್ ವೇರ್ ನಲ್ಲೂ ನಿರಾಲಿ ಚಿನ್ನದ ಗುಣಮಾನ ಸ್ಥಾಪಿಸುತ್ತಿದೆ.’ ಈಗಾಗಲೇ ವಸ್ತುವಿನ ಮೌಲ್ಯವನ್ನು ಅಳೆಯುವಲ್ಲಿ ‘ಗುಣಮಟ್ಟ’ ಪದಕಾರ್ಯ ನಿರ್ವಹಿಸುತ್ತಿದೆ. ‘ಸ್ಥಾನಮಾನ’ ಮಾದರಿಯಲ್ಲಿ ‘ಗುಣಮಾನ’ ಪದವನ್ನು ಬಳಕೆ ಮಾಡಲಾಗಿದೆ.

ಗುಲಾಮೀಕರಣ ನಾ ವಿಜಯಕರ್ನಾಟಕ ಗುಲಾಮ ಸ್ಥಿತಿ ತಲುಪುವುದು. ಗುಲಾಮಿತನಕ್ಕೆ ಒಳಗಾಗುವುದು. ‘ಜಾಗತೀಕರಣ ಇದು ಗುಲಾಮೀಕರಣ’ ವಾಕ್ಯವೇ ಪದದ ಅರ್ಥವನ್ನು ವಿವರಿಸುತ್ತಿದೆ. ‘ಗುಲಾಮ’ ಪದಕ್ಕೆ ‘ಈಕರಣ’ ಪ್ರತ್ಯಯ ಹತ್ತಿಸಿ ಬಳಕೆ ಮಾಡಲಾಗಿದೆ. ಮಾದರಿ : ಜಾಗತೀಕರಣ, ಖಾಸಗೀಕರಣ.

ಗುಳುಮೀಕರಿಸು ಕ್ರಿ ಸುಧಾ ನುಂಗಿ ಹಾಕು. ‘ಎದುರಿಗೆ ಸಿಕ್ಕಿದ್ದನ್ನು ಕ್ಷಣಾರ್ಧದಲ್ಲೇ ಗುಳುಮೀಕರಿಸಲೂ ಸೈ ಎನ್ನುತ್ತಿದ್ದಳಂತೆ ಚೆಲುವೆ ಇವಾಳಾ’ ‘ಈಕರಿಸು’ ಪ್ರತ್ಯಯ ಬಳಕೆ ಮಾಡಲಾಗಿದೆ. ಗುಳುಂಪದ ಈಗಾಗಲೇ ಬಳಕೆಯಲ್ಲಿದೆ.

ಗೇಮುವಾದಿ ನಾ ವಿಜಯಕರ್ನಾಟಕ ಕ್ರೀಡೆಗಳನ್ನು ಬೆಂಬಲಿಸಿ ವಾದಿಸುವವನು. ‘ಕೋಮುವಾದಿಗಳ ಜತೆಗೆ ಗೇಮುವಾದಿಗಳನ್ನು ದೂರ ಮಾಡಿದ್ದಾರೆ’….! ಕನ್ನಡದಲ್ಲಿ ಇಸಂಗೆ ‘ವಾದ’ವನ್ನು ಇಸ್ಟ್‌ಗೆ ವಾದಿಯನ್ನು ಪರ್ಯಾಯವಾಗಿ ಬಳಸುವುದು ರೂಢಿಯಲ್ಲಿದೆ. ಗೇಮ್ ಇಸ್ಟ್‌ಗೆ ಸಂವಾದಿಯಾಗಿ ಮೇಲಿನ ಪ್ರಯೋಗವನ್ನು ತರಲಾಗಿದೆ. ಮಾದರಿ : ಮಾರ್ಕ್ಸ್‌ವಾದಿ.

ಗೊಂದಲಿತ ನಾ ಅಗ್ನಿ ದಿಕ್ಕುತೋಚದ, ಗಲಿಬಿಲಿಯಿಂದ ಕೂಡಿರುವ. ‘ಪಕ್ಷಕ್ಕೆ ಸೇರಬೇಕೆಂದು ತಿಳಿಯದೆ ಗೊಂದಲಿತರಾಗಿದ್ದಾರೆ.’ ಚಿತ್ರಿತ, ರಕ್ಷಿತ, ರೂಪಿತ ಇಂಥ ಮಾದರಿಗಳಲ್ಲಿ ಗೊಂದಲಿತ ಪದವನ್ನು ರಚನೆ ಮಾಡಲಾಗಿದೆ.

ಗೋಪಿತ ನಾ ಪ್ರಜಾವಾಣಿ ಪುಲ್ಲಿಂಗ ಸೂಚಕ ಪದ. ‘ಹಸುವನ್ನು ಗೋಮಾತಾ ಎಂದು ಪರಿಗಣಿಸಿದರೆ, ಹೋರಿಯನ್ನು ಗೋಪಿತ ಎಂದೇಕೆ? ಪರಿಗಣಿಸುವುದಿಲ್ಲ’ ಎಂದು ಸಂಸತ್ ಸದಸ್ಯರೊಬ್ಬರು ಲೋಕಸಭೆಯಲ್ಲಿ ಪ್ರಶ್ನಿಸಿರುವುದು ವರದಿಯಾಗಿದೆ. ಹಿಂದೂ ಧರ್ಮದಲ್ಲಿ ಗೋಮಾತಾ ಪದ ಬಳಕೆಯಲ್ಲಿ ಇರುವುದರಿಂದ ಇದರ ವಿರುದ್ಧ ಪದವಾಗಿ ‘ಗೋಪಿತ’ ಪದ ಬಳಕೆ ಮಾಡಲಾಗಿದೆ.

ಗೇಲಿಸು ನಾ ಅಗ್ನಿ ಅಪಹಾಸ್ಯ ಮಾಡು; ಲೇವಡಿ ಮಾಡು. ‘ದಸಂಸದ ನೈಜ ಪಾತ್ರಗಳನ್ನು ಕೃತೀಕರಿಸಿ ಗೇಲಿಸುವ ಪ್ರಸಂಗ ಮುಂತಾದವು ಅಪ್ರಜ್ಞಾಪೂರ್ವಕವಾಗಿಯೆ ಜಾಣ್ಮೆಯ ಸೂಕ್ಷ್ಮ ಸಂವೇದನೆಯನ್ನು ಬಿತ್ತುತ್ತವೆ!’ ‘ಗೇಲಿ’ ಪದಕ್ಕೆ ‘ಇಸು’ ಪ್ರತ್ಯಯವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ಗೃಹಾಚಾರ ನಾ ಸುಧಾ ತಲೆಮಾರಿನ ಮನೆ. ‘ಇವನ ಗೃಹಾಚಾರ ನೆಟ್ಟಗಿದೆ’. ತಲೆ ಮೇಲೊಂದು ಸೂರು ಇಟ್ಟುಕೊಂಡಿರುವ ವ್ಯಕ್ತಿಯನ್ನು ಕುರಿತು ಮೇಲಿನ ಪದವನ್ನು ಬಳಕೆ ಮಾಡಲಾಗಿದೆ. ‘ಗ್ರಹಾಚಾರ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಗೃಹೋಲಂಘನ ನಾ ಪ್ರಜಾವಾಣಿ ಮನೆಯನ್ನು ಮುರಿಯುವುದು. ‘ದೈತ್ಯದೇಹೀಯ ಗೃಹೋಲಂಘನ!’ ಈ ಪದ ಶಾಸನೋಲಂಘನೆ ಮತ್ತು ಸೀಮೋಲಂಘನೆ ಮಾದರಿಯಲ್ಲಿ ಬಂದಿರುವ ಹೊಸಪದ.

ಗ್ರಾಮೀಣಿಗ ನಾ ಪ್ರಜಾವಾಣಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು. ‘ಭಾರತದಲ್ಲಿ ಸಾವಿರಾರು ಗ್ರಾಮೀಣಿಗರು ಕೆಲಸ ಅರಸಿಕೊಂಡು ನಗರಗಳಿಗೆ ವಲಸೆ ಹೋಗುತ್ತಾರೆ.’ ಗ್ರಾಮೀಣ ಪದಕ್ಕೆ -‘ಇಗ’ ಪ್ರತ್ಯಯವನ್ನು ಹತ್ತಿಸಲಾಗಿದೆ. ಒಂದು; ಪ್ರದೇಶ ಸೂಚಿಸಿ; ಬೆಂಗಳೂರಿಗ, ಹಳ್ಳಿಗ, ಪಟ್ಟಣಿಗ ಇತ್ಯಾದಿ, ಎರಡು; ವೃತ್ತಿ ಸೂಚಿಸಿ; ಲೆಕ್ಕಿಗ, ಪ್ರವಾಸಿಗ ಇತ್ಯಾದಿ. ಮೇಲಿನ ಪ್ರಯೋಗ ಮೊದಲಿನ ವರ್ಗಕ್ಕೆ ಸೇರುವ ಪದ. -‘ಇಗ’ ತದ್ದಿತ ಪ್ರತ್ಯಯ ಸೇರಿಸಿ ತಂದಿರುವ ನಾಮಪದ. ಈಗಾಗಲೇ -‘ಇಗ’ ಪ್ರತ್ಯಯ ಹಚ್ಚಿದ ಹಲವಾರು ಪದಗಳು ಬಳಕೆಯಲ್ಲಿವೆ.

ಗ್ರಾಯಕಮಯತೆ ನಾ ಕರ್ಮವೀ ಕೊಂಡುಕೊಳ್ಳುವ ಪ್ರವೃತ್ತಿ. ‘ಅಧಿಕ ಗ್ರಾಹಕಮಯತೆ ಒಳಹೊಕ್ಕು ಸರ್ವೆ ಅಮೆರಿಕನ್‌ಮಯವಾಗುತ್ತಿದೆ.’ ‘ವಿನಿಮಯತೆ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಗೈಡೋದ್ಯಮಿ ನಾ ಸುಧಾ ಗೈಡುಗಳನ್ನು ಉತ್ಪಾದಿಸುವ ಕಾರ್ಯವನ್ನು ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿ. ‘ಈ ಇಂಗ್ಲೀಷ್ ಕನ್ನಡವನ್ನು ಕನ್ನಡ ಪಠ್ಯಕ್ಕೆ ಗೈಡ್ ಬೇಕು ಎಂದು ಗೈಡೋದ್ಯಮಿಗಳು ತೀರ್ಮಾನಿಸುವುದರಲ್ಲಿ ಆಶ್ಚರ್ಯವಿಲ್ಲ’. ‘ಕೈಗಾರಿ ಕೋದ್ಯಮಿ’ ಮಾದರಿಯಲ್ಲಿ ಸೃಷ್ಟಿಸಿರುವ ಪದ. ಸಂಸ್ಕೃತ ಸಂಧಿನಿಯಮಕ್ಕನು ಗುಣವಾಗಿ ಬಳಕೆ ಮಾಡಲಾಗಿದೆ.

ಗ್ಲೋಬೀಕರಣ ನಾ ಲಂಕೇಶ್ಪತ್ರಿಕೆ ಇಡೀ ಜಗತ್ತಿಗೆ ಅನ್ವಯಿಸುವ ಹಾಗೆ ಮಾಡುವುದು. ‘ಅಮೆರಿಕನ್ ಅಧಿಕಾರ ಶಕ್ತಿಯಾಗಿರುವ ಇಂಗ್ಲಿಷ್ ಕನ್ನಡ ಸಂಸ್ಕೃತಿಯನ್ನು ಸೇರಿದಂತೆ ವಿಶ್ವದ ಎಲ್ಲಾ ಭಾಷೆಗಳ ಮೇಲೂ ಸರ್ವಾಧಿಕಾರ ಚಲಾಯಿಸ್ತಾ ಇದೆ| ಗ್ಲೋಬೀಕರಣ (Golbaligation)….! ಈಕರಣ ಪದೊಭಾಗವನ್ನು ಹಚ್ಚುವ ಇನ್ನೊಂದು ಮಾದರಿ. ಗ್ಲೋಬಲ್ ಎಂಬ ಇಂಗ್ಲಿಶ್ ಪದಕ್ಕೆ ಈಕರಣ ಪ್ರತ್ಯಯ ಹಚ್ಚಿ ಪ್ರಯೋಗ ಆಗಿರುವುದು ವಿಶೇಷ.

ಗ್ಯಾಸೀಕರಣ ನಾ ಕನ್ನಡಪ್ರಭ ಗ್ಯಾಸ್‌ಗೆ ಹೆಚ್ಚು ಒತ್ತು ನೀಡುವುದು. ಗ್ಯಾಸ್‌ಗೆ ಒಳಗಾಗುವುದು. ‘….ಅದರಲ್ಲಿ ಹಾಗೂ ಈಗ ಸಂಗ್ರಹಿಸುತ್ತಿರುವ ‘ಹಸಿರು ತೆರಿಗೆ’ಯಲ್ಲಿ ಕೆಲಭಾಗವನ್ನು ಆಟೋಗಳ ಗ್ಯಾಸೀಕರಣಕ್ಕೆ ನೆರವು ನೀಡಿದರೆ ಬೆಂಗಳೂರಿನ ಮಾಲಿನ್ಯ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ’. ‘ಗ್ಯಾಸ್’ ಆಂಗ್ಲ ಪದಕ್ಕೆ ‘ಈಕರಣ’ ಎಂಬ ಸಂಸ್ಕೃತ ಪ್ರತ್ಯಯ ಹಚ್ಚಿ ಗ್ಯಾಸೀಕರಣ ಎಂಬ ನೂತನ ಪದ ಸೃಷ್ಟಿಸಿ ಬಳಕೆ ಮಾಡಲಾಗಿದೆ. ಇತ್ತೀಚೆಗೆ ‘ಈಕರಣ’ ಪ್ರತ್ಯಯ ದೇಶಿಯ ಪದಗಳಲ್ಲದೆ, ಅನ್ಯದೇಶಗಳ ಪದಗಳ ಮೇಲೂ ಸವಾರಿ ಮಾಡುತ್ತಿದೆ.