ಚಟಕಾರಿ ನಾ ಕನ್ನಡಪ್ರಭ ಚಟವನ್ನು ಉಂಟು ಮಾಡುವಂತಹ. ‘ಗುಟ್ಕಾದಲ್ಲಿ, ಅಡಿಕೆ ಮತ್ತು ತಂಬಾಕಿನ ಜತೆ ಬೇರೆ ಏನೋ ರಸಾಯನಿಕ ಸೇರಿಸುತ್ತಾರೆ. ಆದ್ದರಿಂದಲೇ ಅದು ಚಟಕಾರಿಯಾಗಿದೆ ಎನ್ನಲಾಗುತ್ತಿದೆ.’ ಮೇಲಿನ ಪದ ‘ಗುಣಕಾರಿ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಚಟಕಾರ ನಾ ಅಗ್ನಿ ಹವ್ಯಾಸವಿರುವವನು, ಚಾಳಿಯನ್ನು ಹೊಂದಿರುವವನು. ‘ವಿಷಯ ಚಟಗಾರರಿಂದ ಚಟಗಾರರಿಗೆ ಹರಡಿ ನಾಲ್ಕು ಜನ ಭಜರಂಗದಳದ ಕಾರ್ಯಕರ್ತ ಗಿರಾಕಿಗಳು ಚೊಲ್ಲು ಸುರಿಸುತ್ತಾ ಬೇಗ ಕತ್ತಲಾಗಲಿ ಎಂದು ‘ಶ್ರೀರಾಮನ ಜಪ ಮಾಡುತ್ತಿದ್ದಾರೆ.’ -‘ಗಾರ’ ಪ್ರತ್ಯಯದೊಡನೆ ಬಂದಿರುವ ಹೊಸಪದ. ಮಾದರಿ : ಕೆಚ್ಚುಗಾರ, ಸಾಧ್ಯತೆ : ಚಟಕಾರಣಿ.

ಚಲಾಯಿತ ನಾ ಪ್ರಜಾವಾಣಿ ಅಧಿಕಾರ ಚಲಾಯಿಸು. ‘ಚುನಾಯಿತ ಪ್ರಜಾಪ್ರಭುತ್ವ ಸರಕಾರ ಅಸ್ವಿತ್ವ ದಲ್ಲಿದ್ದರೂ ಅಧಿಕಾರವೆಲ್ಲ ಚಲಾಯಿತವಾಗುತ್ತಿದ್ದು ರಾಜಮನೆತನ ದವರಿಂದ’ ಚುನಾಯಿತ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ ಚುನಾಯಿತ ಎಂದರೆ ಜನರಿಂದ ಆಯ್ಕೆ. ಆದರೆ ಚಲಾಯಿತ ಏಕ ವ್ಯಕ್ತಿ ಅಧಿಕಾರ ಚಲಾಯಿಸುವುದು. ಚುನಾಯಿತ ಮಾದರಿಯಲ್ಲಿ ರಚನೆ ಆಗಿದ್ದರೂ, ಅರ್ಥದಲ್ಲಿ ವ್ಯತ್ಯಾಸವಿದೆ ಎಂದರೆ.

ಚವಳಿ ನಾ ತರಂಗ ನಾಲ್ಕು. ‘ಅದರಲ್ಲಿ ೧೬ ಬಾರಿ ಅವಳಿ ಮಕ್ಕಳನ್ನು ಏಳು ಬಾರಿ ತ್ರಿವಳಿ ಮಕ್ಕಳನ್ನು ಮತ್ತು ನಾಲ್ಕು ಬಾರಿ ಚವಳಿ(ನಾಲ್ಕು ಮಕ್ಕಳು) ಮಕ್ಕಳನ್ನು ಹೆತ್ತು ದಾಖಲೆ ಸ್ಥಾಪಿಸಿದ್ದಳು.’ ಅವಳಿ ತ್ರಿವಳಿ ಮಾದರಿಯಲ್ಲಿ ‘ಚವಳಿ’ ಪದವನ್ನು ಪ್ರಯೋಗ ಮಾಡಲಾಗಿದೆ.

ಚಿತ್ರಕ ನಾ ಉದಯವಾಣಿ ಚಿತ್ರ ಬಿಡಿಸುವವನು. ‘ಮನಸ್ಸಿನಲ್ಲಿ ಅಮೂರ್ತವಾಗಿದ್ದ ಸಂಗತಿಯೊಂದನ್ನು ಬಣ್ಣದಲ್ಲಿ ಮೂಡಿಸಲು ಚಿತ್ರಕನೊಬ್ಬ ಅಂಗಡಿಯಲ್ಲಿ ಹತ್ತು ಕ್ಯಾನ್‌ವಾಸ್‌ಗಳನ್ನು ಕೊಂಡುತಂದ.’ ಮಾದರಿ : ಅನ್ವೇಷಕ,  ಉಪನ್ಯಾಸಕ, ಮುದ್ರಕ.

ಚಿತ್ರಕಾರಣಿ ನಾ ಲಂಕೇಶ್ಪತ್ರಿಕೆ. ಚಿತ್ರವನ್ನು ಬರೆಯುವವಳು. ‘ಚಿತ್ರಕಾರಣಿಯೊಬ್ಬಳಿಗೆ ಇರುವಂತೆ ತೆಳ್ಳಗಿರುವ ಆಕೆಯ ಕೈ ಬೆರಳುಗಳು ಮಾತ್ರ ಸೊಂಟದಲ್ಲಿ ನೇತಾಡುತ್ತಿರುವ ತಣ್ಣನೆಯ ಬಂದೂಕನ್ನು ಮೆದುವಾಗಿ ಸ್ಪರ್ಶಿಸುತ್ತಿವೆ.’ ಕನ್ನಡದಲ್ಲಿ ‘ಚಿತ್ರಕಾರ’ ಪುಲ್ಲಿಂಗ ಸೂಚಕವಾಗಿ ಬಳಕೆಯಲ್ಲಿರುವುದರಿಂದ ಸ್ತ್ರೀಲಿಂಗ ಸೂಚಕವಾಗಿ ‘ಚಿತ್ರಕಾರಣಿ’ ಪದವನ್ನು ಪ್ರಯೋಗ ಮಾಡಲಾಗಿದೆ. -‘ಣಿ’ ಪ್ರತ್ಯಯ ಸ್ತ್ರೀಸೂಚಕವಾಗಿ ಬಳಕೆಯಾಗುತ್ತಿರುವುದು ಹೆಚ್ಚು ಕಂಡುಬರುತ್ತಿದೆ.

ಚುಂಬನೋತ್ಸವ ನಾ ಉದಯವಾಣಿ ಮುತ್ತುಕೊಡುವ ಉತ್ಸವ. ‘ಮನಿಲಾದಲ್ಲಿ ಚುಂಚನೋತ್ಸವ’ ಚುಂಬನ ಮತ್ತು ಉತ್ಸವ ಪದಗಳು ಸೇರಿ ಸಂಸ್ಕೃತ ಸಂಧಿನಿಯಮಕ್ಕನುಗುಣವಾಗಿ ಪದ ರಚನೆ ಮಾಡಲಾಗಿದೆ. ‘ಉತ್ಸವ’ ಸಂಸ್ಕೃತ ಪದ.

ಚೂಡಿಧಾರಿಣಿ ನಾ ಸುಧಾ ಚೂಡಿದಾರ ಧರಿಸಿರುವವಳು. ‘ಅಮ್ಮನ ಬಗ್ಗೆ ಕಾಳಜಿ ವಹಿಸುವ ಮಕ್ಕಳು ಅಮ್ಮನನ್ನು ಚೂಡಿಧಾರಿಣಿ ಮಾಡಿದ್ದರು.’ ‘ಚೂಡಿದಾರ’ ಪದಕ್ಕೆ -ಣಿ ಸ್ತ್ರೀಲಿಂಗ ಸೂಚಕ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ. 

ಛತ್ರಿಧಾರಿಣಿ ನಾ ಸುಧಾ ಛತ್ರಿಯನ್ನು ಹೊಂದಿರುವವಳು. ‘ಛಳಿ-ಮಳೆ-ಗಾಳಿ ಎಲ್ಲದಕ್ಕೂ ಛತ್ರಿದಾರಿಣಿಯಾಗಿರುವ ಕಾಮಾಕ್ಷಿ ರೇನ್‌ಕೋಟ್ ಕೂಡ ಇಟ್ಟುಕೊಂಡಿದ್ದಳು’. ‘ಛತ್ರಿದಾರ’ ಪುಲ್ಲಿಂಗ ಎಂದು ತಿಳಿದು ಸ್ತ್ರೀಲಿಂಗ ಪ್ರತ್ಯಯವಾದ ‘ಣಿ’ ಹತ್ತಿಸಿ ಪದ ರಚನೆ ಮಾಡಲಾಗಿದೆ. ಮಾದರಿ : ವಸ್ತ್ರಧಾರಿಣಿ.

ಛಾಪಾಸ್ತ್ರ ನಾ ವಿಜಯಕರ್ನಾಟಕ ಛಾಪಕಾಗದದ ಹಗರಣ. ‘ಕೃಷ್ಣ ಅನುಪಸ್ಥಿತಿ ಮತ್ತೆ ಝಳಪಿಸಿದ : ಛಾಪಾಸ್ತ್ರ, ಬ್ರಹ್ಮಾಸ್ತ್ರ ಮತ್ತು ಅಣ್ವಸ್ತ್ರ ಮಾದರಿಯಲ್ಲಿ ರಚನೆ ಮಾಡಲಾಗಿದೆ. 

ಜಗಳಗಾರ ನಾ ಕರ್ಮವೀ ಜಗಳಗಂಟ. ‘ಇದೇ ಮಟ್ಟದ ಬೀದಿ ಜಗಳಗಾರರಿಗೂ ಏನೂ ವ್ಯತ್ಯಾಸ?’ ಏನಾದರೂ ಒಂದನ್ನು ಮಾಡಬಲ್ಲ. ತಯಾರಿಸ ಬಲ್ಲ ವ್ಯಕ್ತಿಯನ್ನು -‘ಗಾರ’ ನಾಮಸಾಧಕ ಪ್ರತ್ಯಯದಿಂದ ಸೂಚಿಸಲಾಗುತ್ತಿದೆ. ‘ಜಗಳಗಾತಿ’ ಪದವನ್ನು ಈಗಾಗಲೇ ಬಳಕೆ ಮಾಡಲಾಗಿದೆ. ಅದಕ್ಕೆ ವಿರುದ್ಧ ಲಿಂಗವಾಗಿ ‘ಜಗಳಗಾರ’ ಪದವನ್ನು ತರಲಾಗಿದೆ. ಮಾದರಿ ಸೇಡುಗಾರ.

ಜನಪಾತ ನಾ ವಿಜಯಕರ್ನಾಟಕ ಅತಿಯಾದ ಜನ ಸಮೂಹ. ‘ಜನಪಾತ? ತೃಣಮೂಲ ಕಾಂಗ್ರೆಸ್‌ನ ‘ಹುತಾತ್ಮರ ರ‍್ಯಾಲಿಯಲ್ಲಿ ಬುಧವಾರ ಪಾಲ್ಗೊಂಡ ಜನ ಸಾಗರವನ್ನು ಉದ್ದೇಶಿಸಿ ಈ ಪದವನ್ನು ಬಳಸಲಾಗಿದೆ. ಇದನ್ನು ಜಲಪಾತ, ಹಿಮಪಾತ ಮಾದರಿಯಲ್ಲಿ ರೂಪಿಸಲಾಗಿದೆ. ಅತಿಯಾದ ಜನ ಸಮೂಹ ಎಂಬ ಅರ್ಥ ಉಲ್ಲೇಖಿತ ವಾಕ್ಯದಲ್ಲಿ ಇದೆ.

ಜನಪದೀಕರಣ ನಾ ಪ್ರಜಾವಾಣಿ ಜನತೆ ದೇಶ ಜನಸಾಮಾನ್ಯರಿಗೆ ಸಂಬಂಧಿಸಿದ : ‘ಮೌಡ್ಯಕ್ಕೆ ಹೊರತಾದ ಜನಪದೀಕರಣದಿಂದ ಮಾತ್ರ ಆಧುನಿಕತೆಯ ವಿಕೃತ ರೂಪಗಳಿರುವ ‘ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಿಗೆ ಸೂಕ್ತ ಉತ್ತರ ಕೊಡಲು ಸಾಧ್ಯ : ‘ಈಕರಣ’ ಪ್ರತ್ಯಯ ಹತ್ತಿಸಿ ತಂದಿರುವ ಹೊಸ ಪದ ರಚನೆ.

ಜನಪೀಡೆ ನಾ ಲಂಕೇಶ್ಪತ್ರಿಕೆ ಜನರಿಂದ ಉಂಟಾಗುವ ತೊಂದರೆ. ‘ಜನಪೀಡೆ ತಪ್ಪಿಸಬಹುದು. ಆದರೆ ಇವರಲ್ಲಿ ಆಡಳಿತಗಾರರಿಗೆ, ಅವರ ಪರ್ಯಾವರ್ಣ ಪಂಡಿತರಿಗೆ, ಅಧಿಕಾರಿ ಗಣಕ್ಕೆ ಕಿಕ್ ಬ್ಯಾಕ್ ಅವಕಾಶವಿಲ್ಲ’. ‘ನುಸಿ ಪೀಡೆ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಜಯಂತೋತ್ಸವ ನಾ ವಿಜಯಕರ್ನಾಟಕ ಜನ್ಮದಿನ ಉತ್ಸವ, ಹುಟ್ಟುಹಬ್ಬ. ‘ಬಾಬು ಜಗಜೀವನರಾಂ – ಅಂಬೇಡ್ಕರ್ ಜಯಂತೋತ್ಸವ ಆಚರಣೆ’ ಜಯಂತಿ+ ಉತ್ಸವ ಸೇರಿ ಜಯಂತೋತ್ಸವ ಆಗಿದೆ. ಇತ್ತೀಚಿನ ದಿನಗಳಲ್ಲಿ ಜಯಂತಿಗಳನ್ನು ಉತ್ಸವದ ಮಾದರಿಯಲ್ಲಿ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಿಂದ ಮೇಲೆ ಉಲ್ಲೇಖಿಸಿದ ಪದವನ್ನು ಬಳಕೆ ಮಾಡಲಾಗಿದೆ.

ಜಲಚೌರ್ಯ ನಾ ಉದಯವಾಣಿ ನೀರನ್ನು ಕದಿಯುವುದು. ‘ಜಲಚೌರ್ಯ ಎಂಬ ಹೊಸ ಬಗೆಯ ಉದ್ದಿಮ’ ‘ಕೃತಿ ಚೌರ್ಯ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಜಲದಾನಿ ನಾ ಸುಧಾ ಗಾಜಿನೊಳಗಿನ ನೀರಿನಲ್ಲಿರುವ ಹೂವು. ‘ರಂಗದ ಮೇಲೆ ಗಾಜಿನ ದೊಡ್ಡ ಜಲದಾನಿ ಇಟ್ಟು ಅದರೊಳಗೆ ಮುಳುಗಿ ನರ್ತನ ಮಾಡುತ್ತಾರೆ.’ ‘ಹೂದಾನಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಜಲಸಾಕ್ಷರತೆ ನಾ ತರಂಗ ಜಲದ ಬಗ್ಗೆ ಅರಿವು ಮೂಡಿಸುವುದು. ‘ಜಲ ಸಾಕ್ಷರತೆ ಎಂಬ ಒಂದು ಪರಿಕಲ್ಪನೆಯಿದೆ.’ ‘ನವಸಾಕ್ಷರತೆ’ ಮಾದರಿಯಲ್ಲಿ ಜಲಸಾಕ್ಷರತೆಯನ್ನು ಸೃಷ್ಟಿ ಮಾಡಲಾಗಿದೆ.

ಜಲಸಾಕ್ಷರ ನಾ ವಿಜಯಕರ್ನಾಟಕ ಜಲದ ಬಗ್ಗೆ ಜಾಗೃತಿ ಮೂಡಿಸುವುದು. ‘ನಾವೆಲ್ಲ ಜಲಸಾಕ್ಷರರೇ ಈ ಸೋರುವ ಶಾಲೆಯಲ್ಲೇ ಓದಿ ಸಾಕ್ಷರರಾಗಿರೋದು….!’ ‘ನವಸಾಕ್ಷರ’ ಮಾದರಿಯಲ್ಲಿ ಜಲಸಾಕ್ಷರ ಪದ ರಚನೆ ಮಾಡಲಾಗಿದೆ.

ಜಲಾತ್ಕಾರ ನಾ ಕರ್ಮವೀ ಮಳೆಯ ಒತ್ತಾಯ. ‘ಶತಾಬ್ದಿಯ ಮಹಾಭಯಾನಕ ಮಳೆ! ಮುಂಬಯಿಯ ನಾಗರಿಕರ ಪ್ರಕಾರ ಇದು ಮಹಾನಗರದಲ್ಲಿ ಜಲಾತ್ಕಾರ!’ ‘ಬಲಾತ್ಕಾರ’ ಮಾದರಿಯಲ್ಲಿ ‘ಜಲಾತ್ಕಾರ’ ಪದವನ್ನು ರಚನೆ ಮಾಡಲಾಗಿದೆ.

ಜಲೋಪಚಾರ ನಾ ತರಂಗ ನೀರಿನಿಂದ ಮಾಡುವ ಉಪಚಾರ. ‘ಸಸಿಗಳಿಗೆ ಜಲೋಪಚಾರ!’ ಜಲ ಮತ್ತು ಉಪಚಾರ ಪದಗಳು ಸೇರಿ ರಚನೆ ಆಗಿದೆ. ಊಟೋಪಚಾರ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಜವಾರಿತನ ನಾ ಪ್ರಜಾವಾಣಿ ದೇಶಿಯತನ. ‘ಭಾಷೆ ಮಡಿವಂತಿಕೆಯನ್ನು ಝೂಡಿಸಿ ಅದರ ಜವಾರಿತನವನ್ನು ಬಯಲು ಮಾಡಿದ ಧೀಮಂತ ಆ ಮನುಷ್ಯ.’ -ತನ ಪ್ರತ್ಯಯ ಹಚ್ಚಿ ಪದ ರಚನೆ ಮಾಡಲಾಗಿದೆ.

ಜಾಗತಿಕತೆ ನಾ ಅಗ್ನಿ ವಿಶ್ವಮಟ್ಟ. ‘….ಬಹುಕಾಲದಿಂದಲೂ ಜಾಗತೀಕರಣವನ್ನು ಜಾಗತಿಕತೆ ಎಂಬರ್ಥದಲ್ಲಿಯೇ ಅರ್ಥೈಸಿ ವಾದ ಮಂಡಿಸುವ ಹಟ ತೋರುತ್ತಿದ್ದಾರೆ.’ ಜಾಗತೀಕರಣ ಪದಕ್ಕಿಂತ ಜಾಗತಿಕತೆ ಅರ್ಥದಲ್ಲೇನು ವ್ಯತ್ಯಾಸವಾಗಿಲ್ಲ.

ಜಾಗೃತೀಕರಣ ನಾ ಉದಯವಾಣಿ ಜಾಗೃತಿಗೊಳಿಸುವಿಕೆ/ಗೊಳ್ಳುವುದು, ಎಚ್ಚರಗೊಳಿಸುವುದು. ‘ಜಾಗತೀಕರಣದ ಪರಿಣಾಮ ಆಗುತ್ತಿದ್ದರೂ ನಮ್ಮಲ್ಲಿ ಜಾಗೃತೀಕರಣ ಆಗದೆ ಇರುವುದು ಎಲ್ಲಕ್ಕಿಂತ ಆತಂಕದ ವಿಷಯ ಎಂದು ಅವರು ಅಭಿಪ್ರಾಯ ಪಟ್ಟರು’’. ತ್ರಿಕರಣಗಳಾದ ‘ಜಾಗತೀಕರಣ, ಖಾಸಗೀಕರಣ, ಬಂಡವಾಳೀಕರಣ’ಗಳ ಪ್ರಭಾವದಿಂದ ನಾವು ಎಚ್ಚರದಿಂದ ಇರಬೇಕು ಎಂಬುದಕ್ಕೆ ‘ಜಾಗೃತೀಕರಣ’ ಪದವನ್ನು ಬಳಸಲಾಗಿದೆ.

ಜಾತ್ರಾರ್ಥಿ ನಾ ಪ್ರಜಾವಾಣಿ ಜಾತ್ರೆಯನ್ನು ಬಯಸುವವನು. ‘ಭಾನುವಾರ ಬೆಳಿಗ್ಗೆ ಎಂಟು ಗಂಟೆಗೆ ಜಾತ್ರಾರ್ಥಿಗಳಿಗೆ ತಾವರೆಯೆಲೆ ಭೋಜನ ಮೊದಲಿಗೆ ಸಂಗಿತ- ವಾದ್ಯ….’ ‘ಅರ್ಥಿ’ ಪದ ಸಾಮಾನ್ಯವಾಗಿ ಏನನ್ನಾದರೂ ಪಡೆಯಲು ಬಯಸುವವರು ಎಂಬ ಅರ್ಥದಲ್ಲಿ ಬಳಕೆ ಮಾಡಲಾಗುತ್ತಿದೆ. ‘ವಿದ್ಯಾರ್ಥಿ’ ಪದವನ್ನು ಮಾದರಿಯಾಗಿಟ್ಟು ಕೊಂಡು ಪದರಚನೆ ಮಾಡಲಾಗಿದೆ.

ಜಾತಿಮತಾಸುರ ನಾ ಸುಧಾ ಜಾತೀಯತೆಯನ್ನು ಪಾಲಿಸುವವನು. ‘ಒಂದು ಕಡೆ ಜಾತಿ ಮತಾಸುರ, ಇನ್ನೊಂದು ಕಡೆ ಮೌಢ್ಯಾಸುರ, ಮಗದೊಂದು ಕಡೆ ಭ್ರಷ್ಟಾಸುರ ಕಟ್ಟಿಸುತ್ತಿದ್ದಾರಲ್ಲವೆ ಈ ದೇಶದ ಉಸಿರ?! ‘ಬಕಾಸುರ’ ಮಾದರಿಯಲ್ಲಿ ತಂದಿರುವ ಪದವಿದು.

ಜಾತೀಕರಣ ನಾ ಲಂಕೇಶ್ಪತ್ರಿಕೆ ಜಾತಿ, ಜಾತಿಯನ್ನು ಪಾಲಿಸುವುದು. ‘‘ವೀರಪ್ಪನ್ ಟಾಸ್ಕ್ ಪೋರ್ಸ್ ಪೊಲೀಸರ ಜಾತೀಕರಣ.’’ ‘ಈಕರಣ’ ಪ್ರತ್ಯಯ ಬಳಕೆಗೆ ಮತ್ತೊಂದು ಉದಾಹರಣೆ. ಆದರೆ ‘ಈಕರಣ’ ಬೇಕೆ? ಮೇಲಿನ ಪದದಲ್ಲಿ ಜಾತಿಯತೆ ಪದವೇ ಸಾಕಲ್ಲವೇ? ‘ಜಾತಿವಾದಿ’ ಪದಕ್ಕಿಂತ ಅರ್ಥದಲ್ಲೇನೂ ವ್ಯತ್ಯಾಸವಾದಂತಿಲ್ಲ.

ಜಾಲಿ ನಾ ವಿಜಯಕರ್ನಾಟಕ ಹುಡುಕುವವ. ‘ವೆಬ್‌ಸೈವ್ ಪ್ರವೇಶಿಸುವ ಜಾಲಿಗರು ಆ ಚಿತ್ರದ ಮೇಲೆ ತಮ್ಮ ಮೌಸ್‌ನ ಕರ್ಸ್‌ರನ್ನು ಕೊಂಡೊಯ್ದು ಕ್ಲಿಕ್ಕಿಸಿದರು’. ವೆಬ್‌ಸೈಟ್‌ನ್ನು ಶೋಧಿಸುವ ವ್ಯಕ್ತಿಗೆ ‘ಜಾಲಿಗ’ ಎಂದು ಬಳಕೆ ಮಾಡಲಾಗಿದೆ. ಅಂದರೆ ಎಲ್ಲೆಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂಬುದನ್ನು ಜಾಲಾಡುವವನನ್ನು ಜಾಲಿಗ ಎಂದು ಬಳಕೆ ಮಾಡಲಾಗಿದೆ.

ಜಿದ್ದಾಟ ನಾ ಉದಯವಾಣಿ ಒಬ್ಬರನೊಬ್ಬರು ವೈಷಮ್ಯದಿಂದ ಕಾದಾಡುವುದು; ದ್ವೇಷ ಸಾಧಿಸುವುದು. ಹಗೆತನ ಬೆಳೆಸಿಕೊಳ್ಳುವುದು. ‘ಇಪ್ಪತ್ತು ಮಂದಿ ಭಯೋತ್ಪಾದ ಕರ ಹಸ್ತಾಂತರಕ್ಕೆ ಸಂಬಂಧಿಸಿದ ಭಾರತ ಮತ್ತು ಪಾಕಿಸ್ಥಾನ ನಡುವೆ ಜಿದ್ದಾಟ ಮುಂದುವರೆದಿರುವಂತೆ ಈಚೆಗೆ ಜಮ್ಮು ಕಾಶ್ಮೀರಕ್ಕೆ ನುಸುಳಿರುವ ಉಗ್ರಗಾಮಿ ಗುಂಪುಗಳ ಸಮಗ್ರ ಯಾದಿಯನ್ನು ತಮಗೆ ಒಪ್ಪಿಸಿ ಎಂದು ಭಾರತವಿಂದು ಪಾಕಿಸ್ಥಾನವನ್ನು ಕೇಳಿತು’. ನೂಕಾಟ, ಒಡಾಟ, ಗುದ್ದಾಟಗಳಂತೆ ಈ ರೂಪವನ್ನು ಪಡೆಯಲಾಗಿದೆ. ಜಿದ್ದು ನಾಮಪದ ರೂಪಕ್ಕೆ ‘ಆಟ’ ಎಂಬ ನಾಮರೂಪ ಸೇರಿ ಹೊಸಪದ ನಿರ್ಮಾಣವಾಗಿದೆ.

ಜೀನ್ಸ್ಧಾರಿಣಿ ನಾ ಲಂಕೇಶ್ಪತ್ರಿಕೆ ಜೀನ್ಸ್ ಉಡುಪು ಧರಿಸುವವಳು. ‘ಜೀನ್ಸ್ ಧಾರಣಿಯಾಗಿ ಹಾಗೂ ಉಳವಿಸ್ವಾಮಿ ಜೊತೆ ಪುಟ್ಟ ಕಾಡಿನಲ್ಲಿ ಮಾತೆ ಬಸವ ರಾಜೇಶ್ವರಿ’, ‘ಜೀನ್ಸ್‌ದಾರ’ ಎಂಬುದು ಪುಲ್ಲಿಂಗ ರೂಪ ಎಂದು ತಿಳಿದು, ಜೀನ್ಸ್ ಧಾರಿಣಿ ಎಂಬ ಸ್ತ್ರೀಸೂಚಕ ಪದ ರಚನೆ ಮಾಡಲಾಗಿದೆ. ಮಾದರಿ: ಸ್ವಾಗತಕಾರಣಿ, ಹಿರೋಯಿಣಿ.

ಜೇನಾಂಬರ ನಾ ಸುಧಾದೇಹದಲ್ಲಿ ಜೇನನ್ನು ಕಟ್ಟಿಸಿಕೊಳ್ಳುವವ. ‘ದಿಗಂಬರ, ಶ್ವೇತಾಂಬರ, ಪೀತಾಂಬರಗಳ ಹಾಗೆ ಈತ ಜೇನಾಂಬರಧಾರಿ!’ ಶ್ವೇತಾಂಬರ. ಪೀತಾಂಬರ ಪದಗಳ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಜೇನು + ಅಂಬರ ಪದಗಳು ಸೇರಿ ರಚನೆ ಆಗಿದೆ.

ಜೇನುತಜ್ಞ ನಾ ವಿಜಯಕರ್ನಾಟಕ ಜೇನು ಸಾಕಾಣಿಕೆ ಮಾಡುವುದರಲ್ಲಿ ಪಾಂಡಿತ್ಯ ಪಡೆದಿರುವನು. ‘ಮರವಿಲ್ಲದ ಕಾಡು, ಹೆಣ್ಣಿಲ್ಲದ ಮನೆ… ಜೇನಿಲ್ಲದ ಊತು… ಬರಡು ಬರಡೆಂದ… ಜೇನುತಜ್ಞ’. ಇಂಗ್ಲಿಶಿನ ಹಾನಿಸ್ಟ್ ಪದಕ್ಕೆ ಸಂವಾದಿಯಾಗಿ ತಂದಿರುವ ಪದ.

ಜೈಲಾಯಣ ನಾ ಪ್ರಜಾವಾಣಿ ಜೈಲುಗಳ ಪುರಾಣ. ‘ದಿನಾಂಕ : ೧೫-೮-೦೩ರಂದು ಸಂಪಾದಕೀಯದಲ್ಲಿ ಬಳಕೆಯಾಗಿದೆ.’ ದೀರ್ಘವಾದ ಕತೆ, ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘು ಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ಜ್ಞಾನೋತ್ತರ ನಾ ಸುಧಾ ಜ್ಞಾನದ ಪೂರ್ವ. ‘ಮೂಢನಂಬಿಕೆಗಳು ಅಶಿಕ್ಷಿತರಲ್ಲಿ ಮಾತ್ರವಲ್ಲ, ಸುಶಿಕ್ಷಿತರಲ್ಲೂ, ‘ವಿದ್ಯಾವಂತರಲ್ಲೂ’ ಮನೆ ಮಾಡಿಕೊಂಡಿದೆ. ಎರಡನೆ ವರ್ಗದಲ್ಲಿ ಮಿಗಿಲಾಗಿಯೇ ಇದೆ ಎನ್ನುವುದು ವಿಶೇಷ. ಇದನ್ನು ‘ಜ್ಞಾನೋತ್ತರ’ ಮೌಢ್ಯ ಎನ್ನುತ್ತಾರೆ. ‘ಸ್ವಾತಂತ್ರೋತ್ತರ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. 

ಟಿ

ಟಿಪ್ಪಣಿಗ ನಾ ಉದಯವಾಣಿ ಟಿಪ್ಪಣಿ ಮಾಡಕೊಳ್ಳುವವ. ‘ಡಾ.ಎ.ಸುಬ್ಬಣ್ಣರೈ ಅವರು ‘ಹಾವೊಳು ಹೂವೆ’ ಎಂಬ ಲೇಖನದಲ್ಲಿ ಟಿಪ್ಪಣಿಗ ಪದ ಬಳಕೆ ಮಾಡಿದ್ದಾರೆ.’ -‘ಇಗ’ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ. ಸಾಧ್ಯತೆ : ಟಪ್ಪಣಿಗಿ. 

ಡೀಲಿಂಗ್ದಾರ ನಾ ಲಂಕೇಶ್ಪತ್ರಿಕೆ ವ್ಯಾಪಾರ ವಹಿವಾಟುಗಳಲ್ಲಿ ಮಧ್ಯಸ್ಥಿಕೆ ವಹಿಸುವವನು. ‘ಮೈಸೂರು ಜಿಲ್ಲೆಯ ಅಬ್ಕಾರಿ ಅಧಿಕಾರಿಗಳಿಗೆ ಮಾಮೂಲಿ ಸಲ್ಲಿಸುವ ಡೀಲಿಂಗ್‌ದಾರನೆ ಮಧ್ಯದ ದೊರೆಯಾಗಿರುವುದರಿಂದ ಸಣ್ಣಪುಟ್ಟ ಮಧ್ಯವರ್ತಕರು ತುಟಿಪಿಟಕ್ಕೆನ್ನದಂತಾಗಿದೆ.’! ಇಂಗ್ಲೀಶ್ ಪದದೊಂದಿಗೆ ಪರ್ಸೋಅರೇಬಿಕ್ ಪ್ರತ್ಯಯ -‘ದಾರ’ ಬಳಸಿ ತಂದಿರುವ ಪದ.

ಡಿಸ್ಟ್ರಿಬ್ಯೂಟರ್ಗಿರಿ ನಾ ಲಂಕೇಶ್ಪತ್ರಿಕೆ ಹಂಚಿಕೆ; ಒಡೆತನ, ‘ಬೆನ್ನಿಗೇ ಸತ್ಯರಾಜ್ ನಟಿಸಿದ ಚೋರ್‌ನ ಡಿಸ್ಟ್ರಿಬ್ಯೂಟರ್ ಗಿರಿ ಖರೀದಿಸಿದ.’ -‘ಗಿರಿ’ ಪ್ರತ್ಯಯವನ್ನು ಒಂದು ಅಧಿಕಾರ ಸ್ಥಾನವನ್ನು ಸೂಚಿಸಲು ಬಳಸಲಾಗುತ್ತದೆ. ಮಾದರಿ : ಛೇರ್ಮನ್ ಗಿರಿ, ಮಂತ್ರಿಗಿರಿ ಇತ್ಯಾದಿ.

ಡುಮ್ಮಣ್ಣಿ ನಾ ಪ್ರಜಾವಾಣಿ ದಪ್ಪನಾದವಳು. ‘ಅಂತೂ ಮಗುವಿಗೆ ಮೂರು ತಿಂಗಳು ತುಂಬಿ ನಮ್ಮದು ಡುಮ್ಮ-ಡುಮ್ಮಿ, ಡುಮ್ಮಣ್ಣ-ಡುಮ್ಮಣ್ಣಿಯರ F at familyಯಾಗಿ ಎಲ್ಲರ ಕಣ್ಣು ತುಂಬುವಂತೆ ಆಗಿತ್ತು.’ ‘ಡುಮ್ಮಣ್ಣ’ ಪದಕ್ಕೆ ವಿರುದ್ಧವಾಗಿ ‘ಡುಮ್ಮಣ್ಣಿ’ ಪದವನ್ನು ಬಳಕೆ ಮಾಡಲಾಗಿದೆ. 

ತಂದೆತನ ನಾ ಉದಯವಾಣಿ ತಂದೆಯ ವಿಶಿಷ್ಟ ಗುಣ. ‘ತಾಯ್ತನ ಎಂಬ ಶಬ್ದವೇ ಬಳಕೆಯಲ್ಲಿದೆಯೇ ಹೊರತು ‘ತಂದೆತನ’ ಎಂಬುದು ಇಲ್ಲ. ‘ಗಂಡಸುತನ’ ಎಂಬುದಿದೆ. ಮಕ್ಕಳ ಜೀವನ ನಿರ್ದೇಶಿಸುವಲ್ಲಿ ತಂದೆಯ ಪಾತ್ರ ಇದ್ದುದು ಅಷ್ಟೇ ಎಂಬ ಇಂದಿನವರೆಗಿನ ಚಿಂತನೆಯನ್ನು ಎತ್ತಿ ಹಿಡಿಯಲು ನಮ್ಮ ಶಬ್ದಕೋಶವೊಂದೇ ಸಾಕಾಗಬಹುದು. ಕನ್ನಡದಲ್ಲಿ ‘ತಾಯ್ತನ’ ಇಂಗ್ಲಿಶಿನಲ್ಲಿ ‘ಮದರ್‌ಹುಡ್’ ಎಂಬ ಶಬ್ದವಿದೆ. ಈ ತಂದೆ ಮಕ್ಕಳನ್ನು ನೋಡಿಕೊಳ್ಳು ವುದನ್ನು ‘ಫಾದರ್‌ಹುಡ್’ ಎಂದು ಕರೆಯಬೇಕಾಗಿದೆ. ಇದು ಕನ್ನಡಕ್ಕೆ ‘ತಂದೆತನ’ ಎಂದು ಅನುವಾದಗೊಳ್ಳಲು ತುಂಬ ವರ್ಷಗಳೇ ಬೇಕಾಗಬಹುದು.

ತಪ್ಪುಗಾರ ನಾ ತರಂಗ ತಪ್ಪುಮಾಡುವವನು. ‘ತ್ವರಿತ ವಿಚಾರಣೆ ನಡೆಸುವ ನ್ಯಾಯಾಲಯ ಗಳನ್ನು ಸ್ಥಾಪಿಸಿ ತಪ್ಪುಗಾರರಿಗೆ ಶಿಕ್ಷೆ ದೊರಕಿಸುವಂತೆ ಮಾಡಲು ಅದಕ್ಕೀಗ ಸದಾವಕಾಶ ಒದಗಿ ಬಂದಿದೆ.’ -‘ಗಾರ’ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ತಮಿಳುತನ ನಾ ಅಗ್ನಿ ತಮಿಳುಭಾಷೆಯ ವಿಶಿಷ್ಟ ಅಭಿಮಾನ. ‘ಅಂತೂ ಈತನ ತಮಿಳು ತನ ರಾಜ್ ಅಪಹರಣದ ಸಂದರ್ಭದಲ್ಲಿ ಕ್ರೂರವಾಗಿ, ಅಮಾನೀಯವಾಗಿ ವರ್ತಿಸಿದ್ದನ್ನು ಕಂಡರೆ…. ಕ್ಷೇಮವೂ ಹೌದು’. ‘ತಮಿಳು’ ಪದಕ್ಕೆ ‘ತನ’ ಪ್ರತ್ಯಯ ಹಚ್ಚಿ ತಂದಿರುವ ಹೊಸ ಪದ ರಚನೆ. ಮಾದರಿ: ಕನ್ನಡತನ

ತಿಂಡಾಟ ನಾ ವಿಜಯಕರ್ನಾಟಕ ತಿನ್ನುವುದೇ ಒಂದು ಕೆಲಸ : ‘ತಿಂಡಿಗಳ ಹೆಸರುಗಳ ತಿಂಡಾಟದಲ್ಲಿ’ ವಾಸ್ತವವಾಗಿ ತಿಂದಾಟ ಆಗಬೇಕಿತ್ತು. ತಿಂಡಿ+ಆಟ=ತಿಂದಾಟ ಆಗುವುದರ ಬದಲು ‘ತಿಂಡಾಟ’ ಎಂದು ಬಳಕೆ ಆಗಿರುವುದು ವಿಶೇಷವಾಗಿದೆ.

ತೀಟೋನ್ಮಾದ ನಾ ಲಂಕೇಶ್ಪತ್ರಿಕೆ ಅತಿಯಾದ ಉನ್ಮಾದ/ ಕೊಬ್ಬು ‘ಆಗಾತನಲ್ಲಿ ಯಾವ ವಿಷಾದದ ಫಿಲಿಂಗೂ ಇರಲಿಲ್ಲ; ಇದ್ದುದ್ದು ತೀಟೋನ್ಮಾದ!!’ ತೀಟೆ ಮತ್ತು ಉನ್ಮಾದ ಪದಗಳೆರಡು ಸೇರಿ ರಚನೆ ಆಗಿದೆ. ಸಂಧಿನಿಯಮ ಸಂಸ್ಕೃತ. (ಗುಣಸಂಧಿ) ‘ತೀಟೆ’ ಕನ್ನಡ ಪದ.

ತೈಲಾಯಣ ನಾ ತರಂಗ ಎಣ್ಣೆಗಳ ಪುರಾಣ. ‘ಕಾಂಗ್ರೆಸ್‌ನ ತೈಲಾಯಣ’, ದೀರ್ಘವಾದ ಕತೆ, ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘುಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ತ್ಯಾಗಿಣಿ ನಾ ಹಾಯ್ಬೆಂಗಳೂರು ತ್ಯಾಗ ಮಾಡುವವಳು, ತ್ಯಾಗಮಯಿ. ‘ಅಲ್ಲಿಗೆ ಪದ್ಮಾವತಿ ಸಂಪೂರ್ಣವಾಗಿ ತ್ಯಾಗಿಣಿಯಾಗಿಬಿಟ್ಟಳು’ -ಣಿ ಎಂಬ ಸ್ತ್ರೀಸೂಚಕ ಪ್ರತ್ಯಯವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ತ್ಯಾಗೋಜಿತ ನಾ ಲಂಕೇಶ ಪತ್ರಿಕೆ ತ್ಯಾಗಕ್ಕೆ ಯೋಗ್ಯವಾದ ತಕ್ಕುದಾದ ಕೆಲಸ. ‘ಇಂತಹ ದಿರೋಚಿತ ಅಥವಾ ತ್ಯಾಗೋಚಿತ ಕೆಲಸಕ್ಕಾಗಿ ಕನ್ನಡಿಗರು ಇದೀಗ ಮಾಜಿ ಮುಖ್ಯಮಂತ್ರಿಗೆ ಕೃತಜ್ಞರಾಗಿರಬೇಕೋ….!’ ‘ತ್ಯಾಗ’ ಮತ್ತು ‘ಉಚಿತ’ ಪದಗಳನ್ನು ಸಂಧಿ ನಿಯಮಕ್ಕನುಗುಣವಾಗಿ ತಂದಿರುವ ಪದ. ನ್ಯಾಯೋಚಿತ ಮಾದರಿಯಲ್ಲಿ ಬಳಕೆ ಮಾಡಲಾಗಿದೆ. 

ಥಳಿತ ನಾ ಕನ್ನಡಪ್ರಭ ಹೊಡೆ. ‘ತಹಸೀಲ್ದಾರ್‌ಗೆ ಥಳಿತ’. ‘ಥಳಿ’ ಕ್ರಿಯಾಧಾತುವಿನಿಂದ ರೂಪಿಸಿದ ನಾಮರೂಪವಿದು. ಮಾದರಿ : ಕೊರೆತ, ಮೊರೆತ, ಹರಿತ.

ಥಿಂಕಿಸು ನಾ ಕರ್ಮವೀ ಯೋಚಿಸು : ಚಿಂತನೆ ಮಾಡು. ‘ಆದರೆ ಐದನೆಯ ವೇದವು ಆಕಸ್ಮಾತ್ತಾಗಿ ರಾಕ್ಷಸರ ಕೈಗೆ ಸಿಕ್ಕಿದರೆ ಭಾರಿ ಡೇಂಜರ್ ಎಂದು ಭಾವಿಸಿ ಅದನ್ನು ತನ್ನ ಸ್ಮರಣೆಯಲ್ಲಿಯೇ ಉಳಿಸಿಕೊಂಡು ಕಾಲ ಕೂಡಿ ಬಂದಾಗ ಇದನ್ನು ಜಗತ್ತಿಗೆ ಬಿಡೋಣ ಎಂದು ಥಿಂಕಿಸಿದ… ‘ಥಿಂಕ್ ’ ಎಂಬ ಇಂಗ್ಲಿಶ್ ಕ್ರಿಯಾಪದಕ್ಕೆ -‘ಇಸು’ ಪ್ರತ್ಯಯವನ್ನು ಹಚ್ಚಿ ನಾಮಪದ ರಚನೆ ಮಾಡಲಾಗಿದೆ. ಮಾದರಿ : ಆರ್ಡರಿಸು.

 

ದಂತದಾರ ನಾ ಸುಧಾ ಹಲ್ಲುಗಳ ಮಧ್ಯದ ಸಂದುಗಳನ್ನು ಸೇರಿಸುವ ದಾರ. ‘ಹಲ್ಲುಗಳ ಮಧ್ಯದ ಸಂದುಗಳನ್ನು ದಂತದಾರದಿಂದ ಸ್ವಚ್ಛಗೊಳಿಸಬೇಕು.’ ದಂತ ವೈದ್ಯಕೀಯದಲ್ಲಿ ಬಳಸುವ ಡೆಂಟಲ್‌ಪ್ಲಾಸ್‌ಗೆ ಸಂವಾದಿಯಾಗಿ ಕನ್ನಡದಲ್ಲಿ ‘ದಂತದಾರ’ ಪದವನ್ನು ಪ್ರಯೋಗ ಮಾಡಲಾಗಿದೆ.

ದಯೋತ್ಪಾದನೆ ನಾ ಲಂಕೇಶ್ಪತ್ರಿಕೆ ಕರುಣೆ, ಕೃಪೆ. ‘ಪೇಜಾವರರು ಎರಡೂ ಕೋಮಿನ ನೇತಾರರು ಸಾಮಾನ್ಯರೆದುರು ಭಯೋತ್ಪಾದನೆ ಬಿಟ್ಟು ದಯೋತ್ಪಾದನೆ ಮಾಡುವಂತೆ ಪ್ರವಚನ ನೀಡಿ ರಾತ್ರಿ ವೇಳೆಗೆ ಉಡುಪಿಗೆ ವಾಪಸಾಗಿದ್ದರು; ದಯೆ ಮತ್ತು ಉತ್ಪಾದನೆ ಪದಗಳೆರಡು ಸೇರಿಸಿ ಪದ ರಚನೆ ಆಗಿದೆ. ಇದು ‘ಭಯೋತ್ಪಾದನೆ’ ಮಾದರಿಯಲ್ಲಿ ಸೃಷ್ಟಿಸಿರುವ ಪದವಾಗಿದೆ.

ದಲ್ಲಾಳಿತನ ನಾ ಅಗ್ನಿ ಮಧ್ಯವರ್ತಿ ಕೆಲಸ. ‘ಇದು ಡಾಲರ್ ಕನ್ನಡಿಗರ ದಲ್ಲಾಳಿತನಲ್ಲದೆ ಬೇರೇನು…? ‘ದಲ್ಲಾ(ಳಾ)ಳಿ’ ಪದ ಈಗಾಗಲೆ ಬಳಕೆಯಲ್ಲಿದೆ. ಇಲ್ಲಿ ನಾಮಪದ ರೂಪಕ್ಕೆ -‘ತನ’ ಪ್ರತ್ಯಯ ಸೇರಿಸಿ ಬಳಕೆ ಮಾಡಲಾಗಿದೆ.

ದಲಿತತ್ವ ನಾ ಅಗ್ನಿ ದಲಿತರ ಬಗೆಗೆ ಅಭಿಮಾನವನ್ನು ಹೊಂದಿರುವುದು. ‘ದಲಿತರ ಬಗ್ಗೆ ಮಾರ್ಕ್ಸ್‌ವಾದಿಗಳು ಬಿಟ್ಟಿ ಭಾಷಣ ಮಾಡಿ ದಲಿತತ್ವವನ್ನು ಮೈದುಂಬಿಸಿ ಕೊಳ್ಳುವಂತೆಯೆ ಕನ್ನಡ ಸಾಹಿತ್ಯದಲ್ಲಿ ಅನೇಕ ಬಗೆಯ ಲೇಖಕರು ದಲಿತತ್ವವನ್ನು ದೇಶಿಯತೆಯನ್ನೂ ನಟಿಸಿದ್ದಾರೆ. ‘ದಲಿತ’ ಪದಕ್ಕೆ ‘ತ್ವ’ ಪ್ರತ್ಯಯ ಸೇರಿಸಿ ರಚಿಸಲಾಗಿದೆ. ಸಾಧ್ಯರೂಪ: ‘ದಲಿತತನ’

ದಾರಿಗಾಲುವೆ ನಾ ತರಂಗ ಕಾಲುವೆ ಮಾದರಿ ದಾರಿ. ‘ಮರದ ಕಾಂಡ ಮತ್ತು ತೊಗಟೆಯ ನಡುವೆ ಬೇರಿನಿಂದ ಮೇಲಕ್ಕೆ ನೀರು ಮತ್ತು ಖನಿಜಗಳನ್ನು ಒಯ್ಯುವ ಹಾಗೂ ಎಲೆಗಳಿಂದ ಕೆಳಗೆ ಆಹಾರ ಸಾಗಿಸುವ ದಾರಿಗಾಲುವೆ ಜಾಲವಿದೆ.’ ಮೇಲಿನ ಪದ ಮರದ ಕಾಂಡ ಮತ್ತು ತೊಗಟೆಯ ನಡುವೆ ಬೇರಿನಿಂದ ನೀರು ಮತ್ತು ದ್ರವ ಪದಾರ್ಥಗಳು ಸರಬರಾಜು ಆಗುವುದಕ್ಕೆ ಕಾಲುವೆ ಮಾದರಿಯ ದಾರಿ ಇದೆ ಎಂದು ಹೇಳುವುದಕ್ಕೆ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ.

ದಾರಿದೀಪಕ ನಾ ವಿಜಯಕರ್ನಾಟಕ ಒಳ್ಳೆಯ ದಾರಿಯನ್ನು ತೋರಿಸುವವನು. ‘ಅವರೆಲ್ಲ ದಾರಿದೀಪಕರಾಗಿ ಸದಾ ಮುನ್ನಡೆಸುತ್ತಾರೆಂಬ ವಿಶ್ವಾಸ ಹೊಂದಿದ್ದರು.’ ದಾರಿದೀಪ ನಾಮಪದವೊಂದು ವ್ಯಕ್ತಿ ವಾಚಕವಾಗಿ ಬಳಕೆಯಾಗಿದೆ. ಮಾದರಿ : ಪ್ರಚಾರಕ, ವಿನಾಶಕ. ಸಾಧ್ಯತೆ : ದಾರಿದೀಪಕಿ.

ದಾಳಿಗಾರ ನಾ ತರಂಗ ಮುತ್ತಿಗೆ ಹಾಕುವವನು. ‘ಆಕ್ರಮಣದ ಬಳಿಕ ದಾಳಿಗಾರ ತಪ್ಪಿಸಿಕೊಳ್ಳುವುದು ಹೇಗೆಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.’ ಉಳ್ಳವನು, ಪಡದಿರುವವನು ಎನ್ನುವ ಅರ್ಥವನ್ನು ನೀಡಲು -ಗಾರ ಪ್ರತ್ಯಯವನ್ನು ಹತ್ತಿಸಲಾಗುತ್ತದೆ. ಅ ಗುಂಪಿಗೆ ಇದೊಂದು ಸೇರ್ಪಡೆ.

ದಿವಾಳಿಕೋರತನ ನಾ ಕೃತಿ ದಟ್ಟದರಿದ್ರನಾಗುವ ಸ್ಥಿತಿ. ‘ಈ ಬಗೆಯ ಸಾಲನೀತಿ’ ಆರ್ಥಿಕ ದಿವಾಳಿಕೋರತನ ಹಾಗೂ ಮೌಲ್ಯಭ್ರಷ್ಟತೆಗೆ ಕಾರಣವಾಗುವುದಿಲ್ಲವೇ?’ -ತನ ಪ್ರತ್ಯಯ ಹಚ್ಚಿ ಪದ ರಚನೆ ಮಾಡಲಾಗಿದೆ. ದಿವಾಳಿಕೋರ ಪದದ ಅರ್ಥಕ್ಕಿಂತ ‘ದಿವಾಳಿಕೋರತನ’ ಪದ ನೀಡುತ್ತಿಲ್ಲ.

ದುರ್ಗುಣಿ ನಾ ವಿಜಯಕರ್ನಾಟಕ ಕೆಟ್ಟ ಗುಣಯುಳ್ಳವಳು. ‘ಸುಗುಣಿಯನ್ನು ಕಂಡಾಗ ಅವನನ್ನು ಅನುಕರಿಸಲು ಯತ್ನಿಸು; ದುರ್ಗುಣಿಯನ್ನು ಕಂಡಾಗ ಅವನಲ್ಲಿರುವ ದುರ್ಗುಣಗಳಲ್ಲಿ ಯಾವುದು ನಿನ್ನಲ್ಲಿರಬಹುದು ಎಂಬುದನ್ನು ಪರೀಕ್ಷಿಸಿ ನೋಡು.’ ‘ದುರ್ಗುಣ’ ಎಂಬ ನಾಮಪದವನ್ನು ಸ್ತ್ರೀಲಿಂಗ ಸೂಚಕ ಪ್ರತ್ಯಯವಾದ -‘ಣಿ’ ಸೇರಿಸಿ ಪದ ರಚನೆ ಮಾಡಲಾಗಿದೆ.

ದುಡ್ಡುಬಾಕ ನಾ ಲಂಕೇಶ್ಪತ್ರಿಕೆ ಹಣಕ್ಕಾಗಿ ಹಪಹಪಿಸುವವನು. ‘ಯೊರೋ ಬೇಕಾರ್ ಸಿನಿಮಾ ಪ್ರೊಡ್ಯೂಸರೋ ಅಥವ ದುಡ್ಡುಬಾಕ ಟಾಕೀಸ್ ಮಾಲಿಕನೋ ಇಂಥದೊಂದು ಬೇಡಿಕೆಯಿಟ್ಟಿದ್ದರೆ ಅದನ್ನು ನಿರ್ಲಕ್ಷಿಸಿ ಸುಮ್ಮನಾಗಬಹು ದಿತ್ತು.’ ಯಾವುದಾದರೂ ಕ್ರಿಯೆಯನ್ನು ಅತಿ ಮಾಡಿದಾಗ ‘ಬಾಕ’ ಕ್ರಿಯಾಪದವನ್ನು ಬಳಸಿ ಪದಗಳನ್ನು ರಚನೆ ಮಾಡಲಾಗುತ್ತಿದೆ. ಮಾದರಿ: ಕೊಳ್ಳುಬಾಕ, ಹೊಟ್ಟೆಬಾಕ.

ದುಡ್ಡೋದ್ಯಮ ನಾ ವಿಜಯಕರ್ನಾಟಕ ಹಣ ಸಂಪಾದಿಸುವುದೇ ಕೆಲಸ. ‘ಪತ್ರಿಕೋದ್ಯಮ ದುಡ್ಯೋದ್ಯಮವಾಗದಿರಲಿ.’ ‘ಪತ್ರಿಕೋದ್ಯಮ’ ಮಾದರಿಯಲ್ಲಿ ರಚನೆ ಮಾಡಲಾಗಿದೆ. ದುಡ್ಡನ್ನು ಸಂಪಾದಿಸುವುದೇ ಒಂದು ಉದ್ಯಮವಾಗಿದೆ ಎಂಬ ಅರ್ಥದಲ್ಲಿ ಬಳಕೆ ಮಾಡಿದಂತಿದೆ. ಪದಗಳೆರಡು ಸೇರಿಸಿ ಪದರಚನೆ ಮಾಡಲಾಗಿದೆ.

ದುರಸ್ತಿದಾರ ನಾ ದಿಕ್ಸೂಚಿ ದುರಸ್ತಿಗೊಳಿಸುವವ. ‘ಹದಿನೈದು ಸೆಕೆಂಡುಗಳಿಗೆ ಮುಂಚೆ ಪಥದಲ್ಲಿನ ದುರಸ್ತಿದಾರರೆಲ್ಲ ಹಿಂದೆ ಸರಿಯುತ್ತಾರೆ.’ -‘ದಾರ’ ಪ್ರತ್ಯಯವನ್ನು ಇತ್ತೀಚೆಗೆ ಅನೇಕ ಪದಗಳಿಗೆ ಹತ್ತಿಸಲಾಗುತ್ತಿದೆ. ಕೆಲವೊಮ್ಮೆ -‘ಗಾರ ಪ್ರತ್ಯಯವನ್ನು ಹತ್ತಿಸಲಾಗುತ್ತಿದೆ. ಈ ಎರಡು ಪ್ರತ್ಯಯಗಳು ಎಲ್ಲಿ ಬರಬೇಕು ಎಂಬುದು ನಿಯಮಬದ್ಧವಾದಂತಿಲ್ಲ. ಸಾಮಾನ್ಯವಾಗಿ -‘ಗಾರ’ ಪ್ರತ್ಯಯವು ಇಂಗ್ಲಿಶ್ ಪದಗಳಿಗೆ ಹೆಚ್ಚು ಹತ್ತುತ್ತದೆ. ‘ದುರಸ್ತಿಗಾರ’ ಬಳಕೆಯಲ್ಲಿದೆ. ದುರಸ್ತಿದಾರ ಬಳಕೆಯಾದಂತಿಲ್ಲ.

ದೂರುದಾರ ನಾ ಲಂಕೇಶ್ಪತ್ರಿಕೆ ಸದಾ ಚಾಡಿ, ದೂರು ಹೇಳುವವನು. ‘ದೂರುದಾರನಾದ ನವೀನ್ ರೈ ತನ್ನ ದೂರಿನಲ್ಲಿ ಪ್ರಕಾಶ್ ಮತ್ತು ಚೇತುವಿನ ಹೆಸರನ್ನು ಉಲ್ಲೇಖಿಸಿದ್ದರೂ ಅವರಿಬ್ಬರನ್ನೂ ಬಂಧಿಸುವ ಇಷ್ಟ ಮಂಗಳೂರಿನ ಯಾವ ಪೊಲೀಸ್ ಅಧಿಕಾರಿಗಳಿಗೂ ಇದ್ದಂತಿರಲಿಲ್ಲ’. ಹಿಂದೆಲ್ಲಾ ಕೇವಲ ಹುದ್ದೆಗಳನ್ನು ಅಥವಾ ಅಧಿಕಾರ ಹೊಂದಿರುವುದನ್ನು ಸೂಚಿಸುತ್ತಿದ್ದ ಈ ಪ್ರತ್ಯಯ. ಉದಾ: ಶೇಕದಾರ, ಸುಬೇದಾರ. ಇತ್ತೀಚೆಗೆ ಬೇರೆ ಪದಗಳಿಗೂ ಬಳಕೆಯಾಗುತ್ತಿದೆ. ಉದಾ : ಸಾಗಣಿಕೆದಾರ, ಟೆಂಡರುದಾರ.

ದೂರೀಕರಣ ಕ್ರಿ ತುಷಾರ ನಿಂದಿಸು, ದೂರುವುದು. ‘ದ್ವೇಷವು ದೂರೀಕರಣ ಸಾಧನೆಯಿಂದ ಅಧ್ಯಾತ್ಮದ ಅರಿವು.’ ‘ಈಕರಣ’ ಪ್ರತ್ಯಯ ಹಚ್ಚಿ ಪದ ಸೃಷ್ಟಿ’ ಮಾಡಲಾಗಿದೆ. ಮೇಲಿನ ಪ್ರಯೋಗ ಅದಕ್ಕೊಂದು ಮಾದರಿ. ‘ದೂರು’ ಪದಕ್ಕಿಂತ ಅರ್ಥದಲ್ಲಿ ‘ದೂರೀಕರಣ’ ಭಿನ್ನವಾದ ಅರ್ಥ ನೀಡುತ್ತಿಲ್ಲ.

ದೇಗುಲೀಕರಣ ನಾ ಪ್ರಜಾವಾಣಿ ದೇಶವನ್ನು ದೇವಾಲಯಮಯಗೊಳಿಸುವುದು. ‘ಸದ್ಯದ ಅಪಾಯ : ಜಾಗತೀಕರಣ-ದೇಗುಲೀಕರಣ.’ ಕನ್ನಡದಲ್ಲಿ ಇತ್ತೀಚೆಗೆ ‘ಈಕರಣ’ ಪ್ರತ್ಯಯದೊಂದಿಗೆ ಅನೇಕ ಪದಗಳು ಬಳಕೆಯಾಗಿರುವುದು ಗಮನಿಸುವಂತಹ ಅಂಶ.

ದೇವೇಗೌಡಾಯಣ ನಾ ಆಂದೋಲನ ದೇವೇಗೌಡರ ಪುರಾಣ. ‘ರಾಜ್ಯ ರಾಜಕೀಯದಲ್ಲಿ ಪ್ರಸ್ತುತ ಹೆಚ್.ಡಿ.ದೇವೇಗೌಡಾಯಣ ಆರಂಗ್ರೇಟಂ ಆಗಿದೆ’ ಎಂದು ಹಿರಿಯ ಸಮಾಜವಾದಿ ನಾಯಕ ಹಾಗೂ ಮಾಜಿ ಶಾಸಕ ವೇದಾಂತ ಹೆಮ್ಮಿಗೆ ಅವರು ಹೇಳಿದ್ದಾರೆ. ದೀರ್ಘವಾದ ಕತೆ, ಚರಿತ್ರೆ ಸೂಚಿಸಲು ‘ಆಯಣ’ ಆಧರಿಸಿ ಹಲವಾರು ಪದಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ ಇತ್ಯಾದಿ. ಹಾಸ್ಯಲೇಖನ, ಲಘುಹರಟೆಗಳಲ್ಲಿ ಇಂತಹ ಪದಗಳನ್ನು ಬಳಸಲಾಗುತ್ತಿದೆ.

ದೃಶ್ಯೋತ್ತರ ನಾ ಕನ್ನಡಪ್ರಭ ದೃಶ್ಯದಲ್ಲಿ ಲಭ್ಯವಾಗುವ ಉತ್ತರ. ‘ಟಿ.ಎನ್ .ಸೀತರಾಮ್ ನಿರ್ದೇಶನದ ಈ ಟಿ.ವಿ.ಮನ್ವಂತರದಲ್ಲಿ ರಾತ್ರಿ ಎಂಟಕ್ಕೆ ದೃಶೋತ್ತರಗಳು.’ ಈ ಪದ ಮರಣೋತ್ತರ. ಚುನಾವಣೋತ್ತರ ಮಾದರಿಯಲ್ಲಿ ಬಳಕೆ ಆಗಿಲ್ಲ. ವಾಕ್ಯದಲ್ಲಿ ಬಳಕೆ ಆಗಿರುವಂತೆ ವೀಕ್ಷಕರಿಗೆ ದೃಶ್ಯದ ಅನಂತರ ಏನೋ ಲಭ್ಯವಾಗುತ್ತದೆ ಎಂಬ ಅರ್ಥವಿಲ್ಲ. ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲೆ ಪ್ರಶ್ನೆಗಳಿಗೆ ಉತ್ತರ ಲಭ್ಯವಾಗುವುದು ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.

ದ್ವಿಚಕ್ರವಾಹನಿಗ ನಾ ಉದಯವಾಣಿ ಎರಡು ಚಕ್ರ ವಾಹನ ನಡೆಸುವವ. ‘ಪ್ರತಿಯೊಬ್ಬರೂ ತಾವು ಕಟ್ಟಿದ ಪ್ರಿಮಿಯಮ್ ಮೊತ್ತದಲ್ಲಿ ಚಾಲಕನೇ ಮಾಲಿಕನಾಗಿರುವ ದ್ವಿಚಕ್ರ ವಾಹನಿಗ ತನಗೂ ಹಾಗೂ ಕಾರು ಮಾಲಿಕನಾದರೆ ತನಗೆ ಮತ್ತು ಪತ್ನಿ ಮಕ್ಕಳಿಗೂ ಪರಿಹಾರ ಸಿಗುತ್ತದೆಂಬ ದೃಢಕಲ್ಪನೆಯಲ್ಲಿ ಇರುತ್ತಾರೆ.’ ಮೇಲಿನ ಪ್ರಯೋಗದಲ್ಲಿ -‘ಇಗ’ ಪ್ರತ್ಯಯ ಸೇರಿಸಿ ಹೊಸಪದ ರಚನೆ ಮಾಡಲಾಗಿದೆ.

ಧ್ವಂಸಾಚರಣೆ ನಾ ವಿಜಯಕರ್ನಾಟಕ ನಾಶ; ಅಳಿವು. ‘ಬಾಬರಿಮಸೀದಿ ದ್ವಂಸಾಚರಣೆ : ಅಯೋಧ್ಯೆ ಶಾಂತ.’ ‘ಧ್ವಂಸ’ ಎನ್ನುವ ರೂಪ ಹೆಚ್ಚಾಗಿ ಬಳಕೆಯಾಲ್ಲಿದೆ. ಅದರ ಅರ್ಥದಲ್ಲಿ ಧ್ವಂಸಾಚರಣೆ ಬಳಕೆಯಲ್ಲಿದೆ. ಧ್ವಂಸ ರೂಪವನ್ನು ಆಚರಣೆ ಪದದೊಂದಿಗೆ ಸೇರಿಸಿ ಧ್ವಂಸಾಚರಣೆ ಪದವನ್ನು ರಚನೆ ಮಾಡಲಾಗಿದೆ’. ಮಾದರಿ: ಹಿಂಸಾಚರಣೆ