ಧರ್ಮಾಘಾತ ನಾ ತರಂಗ ಧರ್ಮದ ಹೆಸರಿನ ಹಿನ್ನೆಲೆಯಲ್ಲಿ ನಡೆಯುವ ಅಘಾತ. ‘ಕಂಚಿ ಶ್ರೀಗಳ ಬಂಧನ ದೇಶಾಧ್ಯಂತ ಲಕ್ಷಾಂತರ ಭಕ್ತರಿಗೆ ಅಘಾತ, ಆಶ್ಚರ್ಯ, ಕಳವಳ ಉಂಟು ಮಾಡಿದೆ ಎಂದು ‘ಧರ್ಮಾಘಾತ’ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿದೆ’. ಮೇಲಿನ ಪದವನ್ನು ಮರ್ಮಾಘಾತ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಧರಣೀಧರ ನಾ ತರಂಗ ಭೂಮಿಯ ಒಡೆಯ. ‘ಆಗ ಕೇಶವನು ಅಲ್ಲ, ನಾನು ಧರಣೀಧರ’ ಎನ್ನುತ್ತಾನೆ’. ‘ವಿದ್ಯಾಧರ’ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ. ಭೂಮಿಯನ್ನು ಹೊಂದಿರುವವನು ಎಂಬ ಅರ್ಥದಲ್ಲಿ ಬಳಕೆಯಾಗಿದೆ.

ಧುರೀಣಿ ನಾ ಹಲೋಬೆಂಗಳೂರು ಪ್ರಮುಖಳು. ‘ಇನ್ನು ನಗರದಲ್ಲಿ ರಾಜ್ಯ ಕೃಷಿಕ ಸಮಾಜ ಸಂಘಟನೆಯ ಹೆಸರಿನಲ್ಲಿ ಸಂಘಟನೆ ಮಾಡುವ ಕೆಲ ಮಹಿಳಾ ಧುರೀಣಿಯರು’. ‘ಧುರೀಣ’ ಪದಕ್ಕೆ ವಿರುದ್ಧವಾಗಿ ‘ಧುರೀಣಿ’ ಪದವನ್ನು ರಚನೆ ಮಾಡಲಾಗಿದೆ. ‘ಧುರೀಣೆ’ ಎಂಬ ಪದ ಈಗಾಗಲೇ ಬಳಕೆಯಲ್ಲಿದೆ.

ಧೂಮಶೂರ ನಾ ಪ್ರಜಾವಾಣಿ ಬೀಡಿ, ಸಿಗರೇಟು ಎಳೆದು ಹೊಗೆ ಬಿಡುವುದರಲ್ಲಿ ಪ್ರವೀಣ. ‘ದಂ’ಎಳೆಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಲೇ ಹೊಗೆ ಬಿಡುವ ಧೂಮಶೂರ ನೆರವನ್ನು ಸಾರಾಸಗಟಾಗಿ ತಳ್ಳಿ ಹಾಕುವ ಅಧ್ಯಯನ ಆಧಾರಿತ ವರದಿಯೊಂದು ಬಂದಿದೆ’. ಮೇಲಿನ ಪದ ‘ದಾನಶೂರ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ನಕಲೀಕರಣ ನಾ ಕನ್ನಡಪ್ರಭ ಡೂಪ್ಲಿಕೇಟ್ ಕೆಲಸಗಳೇ ಪ್ರಧಾನ. ‘ಶಿಕ್ಷಣ ಕ್ಷೇತ್ರಕ್ಕೆ ನುಂಗಲಾರದ ತುತ್ತಾದ ನಕಲೀಕರಣ!’ ಇತ್ತೀಚಿನ ದಿನಗಳಲ್ಲಿ ‘ಈಕರಣ’ ಪ್ರತ್ಯಯದ ಬಳಕೆ ಹೆಚ್ಚುತ್ತಿದೆ. ಕನ್ನಡದಲ್ಲಿ ‘ನಕಲಿ’ ಪದ ಬಳಕೆಯಲ್ಲಿದೆ. ಹಿಂದಿನ ದಿನಮಾನಗಳಲ್ಲಿ ನಕಲಿ ಕೆಲಸ ಇಲ್ಲ ಅಂತಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ‘ನಕಲಿ’ ಮಾಡುವ ಕೆಲಸಗಳು ಪ್ರಧಾನವಾಗಿವೆ. ಅವೊಂದು ಹಿನ್ನೆಲೆಯಲ್ಲಿ ‘ನಕಲೀಕರಣ’ ಪದವನ್ನು ರಚನೆ ಮಾಡಲಾಗಿದೆ.

ನಕಲಿಯುಗ ನಾ ವಿಜಯಕರ್ನಾಟಕ ನಕಲುಗೊಳಿಸುವ ಕಾಲ. ‘ಬಹುಶಃ ಕಲಿಯುಗಾಂತ್ಯ ವಾಗುತ್ತಲಿದ್ದು, ನಕಲಿಯುಗಾರಂಭವಾಗಬಹುದು.’ ಈಗಾಗಲೇ ನಕಲೀಕರಣ ಪದ ಬಳಕೆಯಲ್ಲಿದೆ. ‘ಕಲಿಯುಗ’ ಮಾದರಿಯಲ್ಲಿ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ.

ನಕಲುಗಾರಿಕೆ ಕ್ರಿ ಪ್ರಜಾವಾಣಿ ನಕಲು ಮಾಡುವ ಕೆಲಸ. ‘ಬಹು ಆಯ್ಕೆ ಪ್ರಶ್ನೆ ಹಾಗೂ ‘ನಕಲುಗಾರಿಕೆ’ಯ ವರ್ತುಲದಲ್ಲಿ ಶುಷ್ಕ ವಟುಗುಟ್ಟುವಿಕೆಯಲ್ಲಿ ನರಳ ಬೇಕಷ್ಟೆ.’ ‘ನಕಲುಗಾರ’ ನಾಮಪದಕ್ಕೆ ‘ಇಕೆ’ ಪ್ರತ್ಯಯ ಸೇರಿಸಿ ಕ್ರಿಯಾಪದವನ್ನು ರಚನೆ ಮಾಡಲಾಗಿದೆ.

ನಕಲೀತನ ನಾ ದಿಕ್ಸೂಚಿ ನಕಲು ಮಾಡುವುದು. ನಕಲುಗೊಳಿಸುವುದು. ‘ತಮ್ಮ ಮಾದರಿ ಪರಿಹಾರದಲ್ಲಿ ಕಿಡ್‌ಲ್ಯಾಂಡ್ ಮತ್ತು ಪ್ರೆಸ್ಕಾಟ್ ಅವರು ಹಿಂದೆ ಇದರ ಸಂಖ್ಯಾ ಪರಿಹಾರ ಮತ್ತು ಕಂಪ್ಯೂಟರ್ ನಕಲೀತನವನ್ನು ಉಲ್ಲೇಖಿಸಿದ್ದಾರೆ.’ ‘ನಕಲು’ ಪದಕ್ಕೆ ‘ತನ’ ಪ್ರತ್ಯಯ ಹಚ್ಚಿ ಬಳಕೆ ಮಾಡಲಾಗಿದೆ.

ನಗರಿಗ ನಾ ತರಂಗ ಪಟ್ಟಣದವನು. ‘ಹೊಸ ಲೋಕೇಶನ್‌ಗಳು ಯಾರಿಗೆ ಬೇಡ? ಹೊಸ ಹೊಸ ದೃಶ್ಯ ಕಾವ್ಯಗಳಿಗಾಗಿ ಗಾಂಧಿ ನಗರಿಗರ ಹುಡುಕಾಟ ನಡೆದೇ ಇದೆ. ‘ಇಗ’ ಪ್ರತ್ಯಯವನ್ನು ಹತ್ತಿಸಲಾಗಿದೆ. ಒಂದು ನಾಮಪದದಿಂದ ಮತ್ತೊಂದು ನಾಮಪದವನ್ನು ರಚನೆ ಮಾಡಲಾಗಿದೆ.

ನಗರೀಕೃತ ಗು ಅಗ್ನಿ ಪಟ್ಟಣವಾಗಿ ಮಾರ್ಪಡಿಸುವುದು. ಪಟ್ಟಣ ಜೀವನದ ಪ್ರಭಾವವನ್ನು ಬೀರುವುದು. ‘ಇಂದು ಕ್ಷಿಪ್ರವಾಗಿ ಇಡೀದೇಶ ನಗರೀಕೃತಗೊಳ್ಳುತ್ತಿರುವಾಗ ಗ್ರಾಮಗಳಲ್ಲಿ ಉಳಿದಿರುವ ದಲಿತರಿಗೆ ಶೂದ್ರರೊಡನೆ ಕೇವಲ ಮಾನಸಿಕ ಅಂತರವಲ್ಲ ದೈಹಿಕ ಆತಂಕವೂ ಇದೆ.’ ಇದು ಕನ್ನಡದಲ್ಲಿ ಈಗಾಗಲೇ ನಗರೀಕರಣಕ್ಕಿಂತ ಬೇರೆ ಅರ್ಥವೇನೂ ಕೊಡಲಾರದು. ನಗರೀಕರಣದಿಂದ ನಗರೀಕೃತ ರೂಪವನ್ನು ಪಡೆಯಲು ಸಾಧ್ಯ. ಉದಾ. ರಾಷ್ಟ್ರೀಕರಣ, ರಾಷ್ಟ್ರೀಕೃತ, ಚಿತ್ರೀಕರಣ, ಚಿತ್ರೀಕೃತ ಇತ್ಯಾದಿ.

ನಗ್ನಗಾಮಿ ನಾ ವಿಜಯಕರ್ನಾಟಕ ಚಿತ್ತಲೆ ಮನುಷ್ಯ ‘ಮತ್ತೊಂದಿಷ್ಟು ಸಾವಿರ ನಗ್ನಗಾಮಿಗಳು ಗುಂಡಿ ಬಿಚ್ಚತೊಡಗಬಹುದು.’ ಉಗ್ರಗಾಮಿ ತೀವ್ರಗಾಮಿ, ಮಂದಗಾಮಿ ಮಾದರಿಯಲ್ಲಿ ಬಂದಿರುವ ಪದ. ಲಘು ಬರಹಗಳಲ್ಲಿ ಇಂತಹ ಪದಗಳ ಬಳಕೆಯನ್ನು ಕಾಣಬಹುದು.

ನಗ್ನಿಕೆ ನಾ ಸುಧಾ ಬೆತ್ತಲೆ ಕನ್ಯರೆಯರು, ಬಟ್ಟೆಯನ್ನು ಧರಿಸದೆ ಇರುವವಳು. ‘ಅಂತೂ ಈ ನಗ್ನಿಕೆಯರೇ ನೂತನ ಯುವ ದೇವತೆಗಳೂ.’ ನಗ್ನ ನಗ್ನತೆ ಪದಗಳು ಈಗಾಗಲೇ ಬಳಕೆಯಲ್ಲಿವೆ. ನಗ್ನ ಪದಕ್ಕೆ -‘ಇಕೆ’ ಪ್ರತ್ಯಯವನ್ನು ಹಚ್ಚಿ ಸ್ತ್ರೀಸೂಚಕವಾಗಿ ಬಳಕೆ ಮಾಡಲಾಗಿದೆ.

ನಗ್ನಿಣಿ ನಾ ಸುಧಾ ಉಡುಪು ರಹಿತ ಹೆಣ್ಣು. ‘ಅಂದ ಹಾಗೆ, ಹಲವು ವರ್ಷಗಳ ಹಿಂದೆ ಇಟಲಿಯಲ್ಲಿ ನಾರೀಮಣಿಯೊಬ್ಬಳು ಚುನಾವಣೆಗೆ ನಿಂತು, ನಗ್ನಿಣಿಯಾಗಿ ಪ್ರಚಾರ ಮಾಡಿ ಗೆದ್ದೇ ಬಿಟ್ಟಳು! ‘ನಗ್ನ’ ಪದ ಕನ್ನಡದಲ್ಲಿದೆ. ಅದು ಸ್ತ್ರೀ ಮತ್ತು ಪುರುಷ ಬೇದವಿಲ್ಲದೆ ಬಳಕೆಯಲ್ಲಿದೆ. ಆದರೆ ಮೇಲಿನ ಪದವು ಸ್ತ್ರೀಸೂಚಕವಾಗಿ ಬಳಕೆ ಆಗಿರುವುದು ವಿಶೇಷ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪುರುಷಕೇಂದ್ರಿತ ಪದಗಳು ಸ್ತ್ರೀ ಕೇಂದ್ರಿತ ಪದಗಳಾಗಿ ಬಳಕೆಯಾಗುತ್ತಿವೆ. ಮಾದರಿ : ಸಿಂಹಿಣಿ, ಅಧ್ಯಕ್ಷಣಿ, ಪೋಲೀಸಿಣಿ.

ನಡುವಳಿಗೆ ನಾ ಕನ್ನಡಪ್ರಭ ಸಭೆಯಲ್ಲಿ ಆಗುವ ತೀರ್ಮಾನಗಳು, ಸಭೆಯ ಕಾರ್ಯಕಲಾಪ. ‘ಸ್ವತಃ ಮೇಯರ್ ಸಭಾ ನಡುವಳಿಗೆ ಉಲ್ಲಂಘಿಸಿದರೆ, ಈಗಾಗಲೇ ನಡೆವಳಿ, ನಡಾವಳಿ ರೂಪಗಳು ಬಳಕೆಯಲ್ಲಿವೆ. ‘ನಡುವಳಿಗೆ’ ಅರ್ಥದಲ್ಲೇನೂ ಹೊಸದನ್ನು ಹೇಳುತ್ತಿಲ್ಲ.

ನರಕಾಗೃಹ ನಾ ದಿಕ್ಸೂಚಿ ಪಾಪ ಮಾಡಿದವರನ್ನು ಶಿಕ್ಷಿಸುವ ಮನೆ. ‘ಅಮೇರಿಕದ ಚಿತ್ರಹಿಂಸಾಕಾಂಡ ನರಕಾಗೃಹ ಅಬುಗ್ರೈಬ್.’ ಸಂಸ್ಕೃತದ ನರಕ ಪದದೊಂದಿಗೆ ಸಂಸ್ಕೃತದ ಗೃಹ ಸೇರಿಸಿ ಪದ ರಚನೆ ಮಾಡಲಾಗಿದೆ. ಆದರೆ ಇದು ನರಕಗೃಹ ವಾಗಬೇಕು.

ನಾಗರೀಕರಣ ನಾ ಕರ್ಮವೀ ನಾಗರೀಕತನಕ್ಕೆ ಒಳಗಾಗುವುದು. ‘ನಾಗರೀಕರಣದ ಸೋಗಿನಲ್ಲಿ ನಾವು ಸುರ್ಯೋದಯಕ್ಕೆ ಮುನ್ನ ಏಳುವುದನ್ನು ಮರೆತಿದ್ದೇವೆ.’ ‘ಈಕರಣ’ ಪ್ರತ್ಯಯ ಬಳಸಿ ಸೃಷ್ಟಿಸಿದ ಪದ. ಇತ್ತೀಚಿಗೆ ಧರ್ಮವನ್ನು ಸಂಸ್ಕೃತಿಯನ್ನು ಸೂಚಿಸುವ ಪದಗಳೊಡನೆ ‘ಈಕರಣ’ ಪ್ರತ್ಯಯ ಬಳಸುವುದು ಹೆಚ್ಚುತ್ತಿದೆ. ಉದಾ: ಇಸ್ಲಾಮೀಕರಣ. ಹಿಂದೂಕರಣ

ನಾಡುಗಳ್ಳ ನಾ ಕನ್ನಡಪ್ರಭ ನಾಡನ್ನು ಅಪಹರಿಸುವವನು. ‘ಕೆಲವರು ನಾಡುಗಳ್ಳರ ಸಂತೆಯಲ್ಲಿ ಸರಕಾರ ಹುಡುಕಾಟವೆಂಬ ಕಪಟ ನಾಟಕ ನಿಲ್ಲಿಸಿ ಬೇಗ.’ ಸಾಮಾನ್ಯವಾಗಿ ‘ಕಳ್ಳ’ ಪದಕ್ಕೆ ಕದ್ದಿಯುವವನು, ಅಪಹರಿಸುವವನು ಎಂಬುದಾಗಿ ಅರ್ಥವಿದ್ದರೂ ಯಾರಿಗೂ ಕಾಣದಂತೆ ಅಪಹರಿಸುವುದನ್ನು ಅಪಹರಣ ಎನ್ನಬಹುದೇ ಹೊರತು ಕಳ್ಳತನ ಎನ್ನಲಾಗದು. ಮಾದರಿ : ಕಾಡುಗಳ್ಳ.

ನಾಯಿವನ ನಾ ಕರ್ಮವೀ ನಾಯಿಗಳನ್ನು ಸಂರಕ್ಷಿಸುವ ಸ್ಥಳ. ‘ಚರಿತ್ರಾರ್ಹ ಮ್ಯಾಡಿಸನ್ ಸ್ಕೇರ್ ಬಳಿ ಪಾರ್ಕ್‌ನಲ್ಲಿ ಹದಿನೈದು ವರ್ಷ ಹಿಂದೆ ಜೇಮ್ಸ್ ಡಾಗ್ ರನ್ ಎಂಬ ಮೊದಲ ನಾಯಿವನ’. ‘ಡಾಗ್ ಪಾರ್ಕ್ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ನಾಯಿವನ’ ಎಂದು ಭಾಷಾಂತರಿಸಲಾಗಿದೆ.

ನಾಯೋತ್ಸವ ನಾ ಸುಧಾ ನಾಯಿಗಳ ಜಾತ್ರೆ. ‘‘ಈಗ ಅಲ್ಲಿ ನಾಯಿಪಾಡಲ್ಲ, ಹಾಡು; ನಾಯೋತ್ಸವ.’’ ನಾಯಿ+ಉತ್ಸವ=ನಾಯುತ್ಸವ ಆಗಬೇಕು. ಅಲ್ಲದೆ ನಾಯಿ ಕನ್ನಡ. ‘ಉತ್ಸವ’ ಸಂಸ್ಕೃತ ಪದ ಸೇರಿ ಸಂಸ್ಕೃತದ ಗುಣಸಂಧಿ ನಿಯಮ ಪಾಲಿಸಲಾಗಿದೆ.

ನಾಯಕೋಪಚಾರ ನಾ ಸುಧಾ ನಾಯಕನಿಗೆ ಮಾಡುವ ಉಪಚಾರ. ‘ನಾಯಿಗಳಿಗೆ ನಾಯಕೋಪಚಾರ’. ನಾಯಕ ಮತ್ತು ಉಪಚಾರ ಪದಗಳನ್ನು ಸೇರಿಸಿ ಸಂಸ್ಕೃತದ ಗುಣ ಸಂಧಿ ನಿಯಮಕ್ಕನುಗುಣವಾಗಿ ಪದ ರಚನೆ ಮಾಡಲಾಗಿದೆ.

ನಿದ್ದೆಗೇಡಿ ನಾ ಓಮನಸ್ಸೆ ನಿದ್ದೆಯನ್ನು ಹಾಳು ಮಾಡುವವ. ‘ಪರಮ ಸೋಂಬೇರಿಗಳನ್ನು ನಿದ್ದೆಗೇಡಿಗಳನ್ನಾಗಿಸಿ ತಮಾಷೆ ಮಾಡುವ ಸ್ಯಾಡಿಸ್ಟಿಕ್ ಭೂತ ಅದು’. ‘ಮಾನಗೇಡಿ’, ‘ಬುದ್ದಿಗೇಡಿ’ ಮುಂತಾದ ಪದಗಳ(ಆದೇಶ ಪದದ) ಮಾದರಿಯಲ್ಲಿ ತಂದಿರುವ ಪದ.

ನಿದ್ದ್ಯೋಗಿ ನಾ ಕನ್ನಡಪ್ರಭ ನಿದ್ದೆ ಮಾಡುವುದನ್ನೆ ಉದ್ಯೋಗ ಮಾಡಿಕೊಂಡಿರುವವನು. ‘ವಸ್ತುಸ್ಥಿತಿ ಹೀಗಿರುವಾಗ ಇನ್ನೂ ನಿರುದ್ಯೋಗಿ ಪದವಿಧರರಿಗೆ ಮಾಸಿಕ ನಿದ್ದ್ಯೋಗಿ ಭತ್ಯ ನೀಡುವ ಹಣ ಎಲ್ಲಿಂದ ಬರುತ್ತದೆಂಬುದು ಚಿದಂಬರ ರಹಸ್ಯವೆಂದೇ ತೋರುತ್ತಿದೆ.’ ನಿದ್ದೆ ಮತ್ತು ಉದ್ಯೋಗ ಪದಗಳನ್ನು ಸೇರಿಸಿ ರಚನೆ ಮಾಡಲಾಗಿದೆ. ವಿಶೇಷವಾಗಿ ಕನ್ನಡ ಮತ್ತು ಕನ್ನಡ ಪದಗಳನ್ನು ಸೇರಿಸಿ ಸಂಸ್ಕೃತದ ಸಂಧಿನಿಯಮಕ್ಕನು ಗುಣವಾಗಿ(ಗುಣಸಂಧಿ) ರಚನೆ ಮಾಡಲಾಗಿದೆ.

ನಿದ್ರಾಕಾರಕ ನಾ ಪ್ರಜಾವಾಣಿ ನಿದ್ರೆಯನ್ನು ಉಂಟು ಮಾಡುವ. ‘ಗಂಟೆಗಟ್ಟಲೆ ಮಗು ಅತ್ತು ಅತ್ತು ಸುಸ್ತಾಗುವಂತೆ ಮಾಡುವ ಬದಲು ಕೋಲಿಕ್ ಬಂದಾಗ ನಿದ್ರಾಕಾರಕ ಔಷಧಿ ನೀಡುವುದು ಉಪಯುಕ್ತ.’ ವಿಷಕಾರಕ, ರೋಗಕಾರಕ ಮಾದರಿಯಲ್ಲಿ ಮೇಲಿನ ಪದವನ್ನು ರಚನೆ ಮಾಡಲಾಗಿದೆ.

ನಿದ್ರಾಮಾಲಿನ್ಯ ನಾ ಅಗ್ನಿ ನಿದ್ರೆ ಕುರಿತಾದ ರೋಗ. ‘ಪರಿಸರ ಮಾಲಿನ್ಯ, ಪದಾರ್ಥ ಮಾಲಿನ್ಯ, ನಿದ್ರಾಮಾಲಿನ್ಯ ಮುಂತಾದ ಎಲ್ಲವೂ ಒಟ್ಟುಗೂಡಿ ದೇಹವನ್ನು ತೀವ್ರ ಅನಾರೋಗ್ಯಕ್ಕೆ ದೂಡುತ್ತವೆ.’ ಪರಿಸರ ಮಾಲಿನ್ಯ, ಪದಾರ್ಥ ಮಾಲಿನ್ಯ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ನಿರಪಾಯಕಾರಿ ನಾ ತರಂಗ ಅಪಾಯವಿಲ್ಲದ. ‘ಜಪಾನೀ ಅಧಿಕಾರಿಗಳ ಪಾಲಿಗೆ ಇದೊಂದು ನಿರಪಾಯಕಾರಿ ಒಕ್ಕೂಟ.’ ಅಪಾಯಕಾರಿ ಪದಕ್ಕೆ ವಿರುದ್ಧವಾಗಿ ನಿರಪಾಯಕಾರಿ ಪದವನ್ನು ಪ್ರಯೋಗ ಮಾಡಲಾಗಿದೆ.

ನಿರಾದೇಶ ನಾ ತರಂಗ ಅಪ್ಪಣೆಯಿಲ್ಲದ, ಅದೇಶರಹಿತ. ‘ಸ್ಪುಟ್ನಿಕ್’ ಒಂದು ನಿರಾದೇಶ ಉಪಗ್ರಹ.’ ‘ನಿರಾದೇಶ’ ಪದವನ್ನು ಆದೇಶ ಪದದ ನಿಷೇದಾರ್ಥಕ ರೂಪವಾಗಿ ಬಳಕೆ ಮಾಡಲಾಗಿದೆ.

ನಿರಾಹಾರ ನಾ ತರಂಗ ಆಹಾರವನ್ನು ತೆಗೆದುಕೊಳ್ಳದ ಸ್ಥಿತಿ. ‘‘ಸತತ ಎಂಟು ಗಂಟೆಗಳ ಕಾಲ ನಿರಾಹಾರದ ಅನಂತರ ರಕ್ತ-ಸಕ್ತರೆ ಮಟ್ಟವು…’’ ಡೈಯಟ್‌ಗೆ ಸಂವಾದಿಯಾಗಿ ನಿರಾಹಾರ ಪದವನ್ನು ಬಳಕೆ ಮಾಡಲಾಗಿದೆ.

ನೀರ್ದಾಣ ನಾ ತರಂಗ ನೀರು ಸಂಗ್ರಹವಾಗುವ ಜಾಗ. ‘ವಿಜಯನಗರ ಪಟ್ಟಣಕ್ಕೆ ಹೊರಗಿನ ನಿರ್ದಾಣಗಳಿಂದ ನೀರು ಪೂರೈಸುವ ವ್ಯವಸ್ಥೆ ಇತ್ತು ಎಂಬುದಕ್ಕೆ ಈಗಲೂ ಕಂಡುಬರುವ ಕಲ್ಲಿನ ಕಾಲುವೆಯೇ ಸಾಕ್ಷಿ.’ ತಂಗುದಾಣ ನಿಲ್ದಾಣ ಪದಗಳ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ನೀರುಕೋಟೆ ನಾ ಸುಧಾ ನೀರು ಆವೃತವಾದ ಸ್ಥಳ. ‘ಮೇಲುಕೋಟೆ ಅಲ್ಲ ಅದು ನೀರುಕೋಟೆ’ ಸಮುದ್ರ ಮಟ್ಟದಿಂದ ೩,೬೦೦ ಅಡಿ ಎತ್ತರದಲ್ಲಿರುವ ಮೇಲುಕೋಟೆ ನೀರುಕೋಟೆಯೂ ಹೌದು. ಕೋಟೆ ತುಂಬೆಲ್ಲ ನೀರೆ ತುಂಬಿರುವುದರಿಂದ ‘ನೀರು ಕೋಟೆ ಪದವನ್ನು ಬಳಕೆ ಮಾಡಲಾಗಿದೆ.

ನೀರಕೋಣೆ ನಾ ತರಂಗ ನೀರನ್ನು ಸಂಗ್ರಹಿಸಿಡುವ ಜಾಗ. ‘ಭೂಗತ ಗಜಗಾತ್ರದ ನೀರಕೋಣೆ ಅಥವ ಟಂಕಾದ ಬಗೆಗಿನ ಕುತೂಹಲಕಾರಿ ವಿವರಗಳು ಗುಜರಾತಿನ ನೀರ ತಿಜೋರಿ ಟಾಂಕದಲ್ಲಿವೆ.’ ಇಂಗ್ಲಿಶಿನ ಟ್ಯಾಂಕ್‌ಗೆ ಸಂವಾದಿ ಯಾಗಿ ಕನ್ನಡದಲ್ಲಿ ‘ನೀರಕೋಣೆ’ ಎಂದು ಭಾಷಾಂತರಿಸಲಾಗಿದೆ.

ನೀರವನಿತೆ ನಾ ಸುಧಾ ಮಧ್ಯ ಸೇವಿಸುವ ಹೆಂಗಸರು. ‘ಅದಕ್ಕೇ ತಮ್ಮ ತೋಳಿನಲ್ಲೇ ಎತ್ತರೆತ್ತರದ ಪಾವಟಿಗೆ ನಿರ್ಮಿಸಿದರು. ಈ ನೀರವನಿತೆಯರು.’ ನೀರ ಮತ್ತು ವನಿತೆ ಎರಡು ಬೇರೆ ಬೇರೆ ಪದಗಳೇ. ಮಧ್ಯ ಸೇವಿಸುವ ಹೆಂಗಸರು ಎಂಬ ಅರ್ಥದಲ್ಲಿ ‘ನೀರವನಿತೆ’ ಎಂದು ಪ್ರಯೋಗ ಮಾಡಲಾಗಿದೆ.

ನೀರಾಹಾರ ನಾ ಸುಧಾ ನೀರೆ ಆಹಾರವಾಗಿರುವುದು. ‘ಉತ್ತರ ಕ್ವೀನ್ಸ್ ತಿಂಡಿನ ಟಾನ್ಸ್ ವಿಲ್ಲೆಯ ಬಳಿ ಒಬ್ಬಾಕೆ ಕಾರುಸಹಿತ ಕಮರಿಗೆ ಬಿದ್ದು, ಎಂಟು ದಿವಸ ತೊರೆಯ ನೀರನ್ನು ಕುಡಿದು ಬದುಕಿದ್ದಳೆಂದು ಈಚೆಗೊಂದು ಪತ್ರಿಕಾ ವಾರ್ತೆ.’ ನೀರು ಮತ್ತು ಆಹಾರ ಪದಗಳು ಸೇರಿಕೊಂಡು ಸಂಸ್ಕೃತದ ಸವರ್ಣದೀರ್ಘ ಸಂಧಿ ನಿಯಮಕ್ಕನುಗುಣವಾಗಿ ರಚನೆ ಮಾಡಲಾಗಿದೆ.

ನೀರುಗಳ್ಳತನ ನಾ ಕನ್ನಡಪ್ರಭ ನೀರನ್ನು ಅಪಹರಿಸುವುದು. ‘ನೀರುಗಳ್ಳತನ’ ಈಗ ನೀರಾವರಿ ಇಲಾಖೆ ಮುಂದಿರುವ ದೊಡ್ಡ ಸವಾಲು.’ ಕಾಡುಗಳ್ಳ ಮಾದರಿಯಲ್ಲಿ ನೀರುಗಳ್ಳ ಬಳಕೆ ಮಾಡಿದ್ದರೂ, ಕನ್ನಡದ ಪ್ರತ್ಯಯ -ತನ ಬಳಸಿ ಗುಣವುಳ್ಳದ್ದು ಎಂಬ ಅರ್ಥ ಬರುವಂತೆ ರಚನೆ ಮಾಡಲಾಗಿದೆ. ಮಾದರಿ: ಸರಗಳ್ಳತನ.

ನೀರೆಚ್ಚರ ನಾ ತರಂಗ ನೀರಿನ ಬಗ್ಗೆ ಜ್ಞಾನ/ಅರಿವು ಮೂಡಿಸುವುದು. ‘ಇಂಥ ನೀರೆಚ್ಚರ ನಮ್ಮ ಮನೆಮನೆಯ ನಲ್ಲಿಗಳಿಂದ ಶುರುವಾಗಬೇಕು…’ ಕಟ್ಟೆಚ್ಚರ ಕಣ್ಣೆಚ್ಚರ, ಮೂಗೆಚ್ಚರ, ಕಿವಿಯೆಚ್ಚರ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ನುಂಗಾಯಣ ನಾ ಸುಧಾ ತಿನ್ನುವುದರ ಪುರಾಣ. ‘ಹಸಿರುವ ಹಾವಿನ ನುಂಗಾಯಣ’!. ದೀರ್ಘವಾದ ಕತೆ, ಚರಿತ್ರೆ ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತದೆ. ಉದಾ : ಗ್ರಾಮಾಯಣ, ಆಫಿಸಾಯಣ. ಇತ್ಯಾದಿ. ಹಾಸ್ಯ ಲೇಖನ ಲಘುಹರಟೆಗಳಲ್ಲಿ ಇಂತಹ ಪದಗಳನ್ನು ಬಳಸುವುದು ಹೆಚ್ಚು.

ನುಂಗಣ್ಣಿ ನಾ ಪ್ರಜಾವಾಣಿ ಕಬಳಿಸುವವಳು. ‘ಬೆರಳ ತೋರಿಸಿದರೆ ಹಸ್ತವನ್ನೇ ನುಂಗುವ ನುಂಗಣ್ಣ ನುಂಗಣ್ಣಿಯರು ಇರುವಾಗ…’ ‘ನುಂಗು’ ಕ್ರಯಾಪದಕ್ಕೆ ‘ಣಿ’ ಸ್ತ್ರೀಸೂಚಕ ಪ್ರತ್ಯಯವನ್ನು ಹಚ್ಚಿ ಪದರಚನೆ ಮಾಡಲಾಗಿದೆ. ಅಂದರೆ ಕ್ರಿಯಾಪದವೊಂದು ನಾಮಪದವಾಗಿದೆ.

ನುಸುಳುಕೋರ ನಾ ಪ್ರಜಾವಾಣಿ ಅಕ್ರಮವಾಗಿ ನುಸುಳುವವ. ‘ಗ್ರಾಮಸ್ಥರು ಜಿಂಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರಿಂದ ಈ ನುಸುಳುಕೋರನಿಗೆ ಮಾತ್ರ ರಾಜ ಮರ್ಯಾದೆ.’ ನುಸುಳು+ಕೋರ ರೂಪಗಳು ಸೇರಿಕೊಂಡು ಪದ ರಚನೆ ಆಗಿದೆ. ‘ಕೋರ’ ಪ್ರತ್ಯಯವುಳ್ಳ ರೂಪಗಳು ಹಿನಾರ್ಥವನ್ನೇ ಕೊಡುತ್ತವೆ. ಮಾದರಿ : ಲಂಚಕೋರ, ದಗಾಕೋರ.

ನೆಲಚರ ಗು ವಿಜಯಕರ್ನಾಟಕ ನೆಲದ ಮೇಲೆ ಚಲಿಸಬಲ್ಲ. ‘‘ಜೀವಶಾಸ್ತ್ರಜ್ಞರ ಪ್ರಕಾರ ಇದೊಂದು ಜೀವಂತ ಪಳೆಯುಳಿಕೆ. ಜಲಚರವಾಗಿದ್ದು. ನೆಲಚರವೂ ಆಗಿ ಬದಲಾದ ಕಶೇರುಕ (ಬೆನ್ನುಮೂಳೆ) ವರ್ಗಕ್ಕೆ ಸೇರಿದ ಜೀವಿಯಾದ ಸಾಲಮಾಂಡರ್ ನೋಡಲು ಹಲ್ಲಿಯ ರೀತಿಯಿದೆ.’’ ಇದು ಜಲಚರ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ನೆಲದಾಹಿ ನಾ ವಿಜಯಕರ್ನಾಟಕ ನೆಲಕಬಳಿಸುವವ. ‘ಸಮಾಜದಲ್ಲಿರುವ ಹುಳುಕನ್ನು, ಕೀಚರಕಕನ್ನು, ನೆಲದಾಹಿಗಳನ್ನು ಅನಾವರಣಗೊಳಿಸುವ ಪತ್ರಿಕಾರಂಗದ ಅಬಾಧಿತ ಸ್ವಾತಂತ್ರ್ಯ ಸಮಾಜದ ಸ್ವಾಸ್ಥಕ್ಕೆ ಅತ್ಯವಶ್ಯಕವಲ್ಲವೆ? ‘ನೆಲದಾಹಿ’ ಒಂದು ಹೊಸಪದ.

ನೆಲಗಳ್ಳತನ ನಾ ಹಲೋಬೆಂಗಳೂರು ಭೂಮಿಯನ್ನು ಕದಿಯುವುದು. ‘ಕುಪ್ಪಂ ಗಣೇಶ ಹಾಗೂ ಸ್ಟ್ಯಾಂಪ್ ವೆಂಡರ್ ರವಿಕುಮಾರ್ ಇವರಿಬ್ಬರ ನೆಲಗಳ್ಳತನವನ್ನು ಇಷ್ಟು ಸಲೀಸಾಗಿ ಮಾಡಲು ಮೂಲ ಪ್ರೇರಕರೆ…’ ‘ಕಾಡುಗಳ್ಳ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ನೆಲಗಳ್ಳ ಪದಕ್ಕೆ -ತನ ಪ್ರತ್ಯಯವನ್ನು ಸೇರಿಸಿ ಬಳಕೆ ಮಾಡಲಾಗಿದೆ.

ನೆಲವಾಸಿ ನಾ ಸುಧಾ ನೆಲದಲ್ಲಿ ವಾಸಿಸುವ. ‘ಆನೆ ಧರೆಯ ಅತಿ ದೈತ್ಯ ನೆಲವಾಸಿ ಪ್ರಾಣಿ.’ ‘ಜಲವಾಸಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ನೋಟಕ ನಾ ಸುಧಾ ನೋಡುವವರು. ‘ನೋಟಕರು ಬೆಚ್ಚುವಂತೆ ಬಿಚ್ಚು ತಜ್ಞೆಯರು ಎನ್ನಲೂಬಹುದು.’ ನೋಟಕ ಪುಲ್ಲಿಂಗ ಸೂಚಕವಾಗಿ ಬಳಕೆಯಲ್ಲಿದೆ. ಸಾಧ್ಯತೆ : ನೋಟಕಿ

ನ್ಯಾಕೋತ್ತರ ನಾ ಸಮೂಹ ಶಿಕ್ಷಣ ಶೋಧಕೃತಿ ನ್ಯಾಕ್ ಸಮಿತಿಯ ನಂತರ. ‘‘ಉನ್ನತ ಶಿಕ್ಷಣ ರಂಗದಲ್ಲಿ ನಾವಿಂದು ‘ನ್ಯಾಕೋತ್ತರ’ ಯುಗದಲ್ಲಿದ್ದೇವೆ.’’ ಉನ್ನತ ಶಿಕ್ಷಣ ವನ್ನು ಮೌಲ್ಯ ಮಾಪನ ಮಾಡುವ ಯುಜಿಸಿ ನೇಮಿಸಿರುವ ಒಂದು ಸಂಸ್ಥೆ(ನ್ಯಾಕ್) ನ್ಯಾಕ್ ಮತ್ತು ಉತ್ತರ ಪದಗಳೆರಡು ಸೇರಿಸಿಕೊಂಡು ಪದ ರಚನೆ ಮಾಡ ಲಾಗಿದೆ.‘ನ್ಯಾಕ್’ ಇಲ್ಲಿಇಂಗ್ಲಿಶ್ ಪದವಾಗಿದೆ. ಸ್ವಾತಂತ್ರೋತ್ತರ, ನವ್ರೋಇತ್ಯಾದಿ ಪದಗಳ ಮಾದರಿಯಲ್ಲಿ ಬಂದಿರುವ ಪದ.

ನ್ಯಾಚುರೋಪತಿ ನಾ ಕರ್ಮವೀ ನೈಸರ್ಗಿಕ ಚಿಕಿತ್ಸೆ. ‘ಅಕಸ್ಮಾತ್ ಅಲೋಪತಿ, ನ್ಯಾಚುರೋಪತಿ ಅಥವಾ ಇನ್ನಾವುದಾದರೂ ‘ಪತಿ’ಯನ್ನು ಅವಲಂಬಿಸಿದ್ದೇ ಆದರೆ ವಾಸಿಯಾಗಲೂ ಒಂದು ವಾರವಾದರೂ ಬೇಕಾಗುತ್ತದೆಯಂತೆ.’ ಸಹಜವಾಗಿ ಅಂದರೆ ಪ್ರಕೃತಿಯಿಂದ ಮಾಡುವ ಚಿಕಿತ್ಸೆ ಎಂಬ ಅರ್ಥದಲ್ಲಿ ಬಳಕೆ ಮಾಡಲಾಗಿದೆ. ಅಲೋಪತಿ, ಹೋಮೀಯೊ ಪತಿ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ನಿಸರ್ಗ ನೀಡಿದ ಪತಿ ಎಂಬ ಅರ್ಥದಲ್ಲಿ ಬಳಕೆ ಮಾಡಲಾಗಿದೆ.

ನ್ಯಾಯದಾತ ನಾ ಲಂಕೇಶ್ಪತ್ರಿಕೆ ಪ್ರಾಮಾಣಿಕವಾದ ವ್ಯಕ್ತಿ; ಯೋಗ್ಯವಾದವನು. ‘ನ್ಯಾಯದಾತರ ರತಿವಿಲಾಸಕ್ಕಿದು ಹೇಳಿ ಮಾಡಿಸಿದ ಜಾಗವಂತರು ಅಲ್ಲವೇ ಅಲ್ಲ ಅನ್ನಿಸಲೇಬೇಕು.’ ಮೇಲಿನ ಪದ ‘ಅನ್ನದಾತ’ ಮಾದರಿಯಲ್ಲಿ ಬಳಕೆ ಮಾಡಿರುವಂತಹದ್ದು. 

ಪಂಚಾಯ್ತಿಕೆ ನಾ ಲಂಕೇಶ್ಪತ್ರಿಕೆ ನ್ಯಾಯ ನಿರ್ಣಯಕ್ಕೆ ರಚಿತವಾದ ಸಮಿತಿ. ‘ಆರಂಭದಿಂದಲೂ ಪೋಲೀಸರು ಹಿಂದೂ ಮುಸ್ಲಿಮ್‌ರ ರಾಜಿ ಪಂಚಾಯ್ತಿಕೆ. ವೀರರ ಮೇಲೆ ಅವಲಂಬಿಸಿ ಕರ್ತವ್ಯ ಚ್ಯುತಿ ಮಾಡಿದರು.’ ಪಂಚಾಯಿತಿ ಪದಕ್ಕೆ -ಇಕೆ ಪ್ರತ್ಯಯವನ್ನು ಸೇರಿಸಿ ಪದವನ್ನು ರಚನೆ ಮಾಡಲಾಗಿದೆ. ಪಂಚಾಯಿತಿ ಪದದ ಅರ್ಥಕ್ಕಿಂತ ಬೇರೇನೂ ವಿಶೇಷವಾದ ಅರ್ಥ ಕೊಡುವುದಿಲ್ಲ.

ಪತ್ಯಾಚಾರ ನಾ ಸುಧಾ ಪತಿ ಪತ್ನಿಯನ್ನು ಬಲಾತ್ಕರಿಸುವುದು. ಪತಿ ಪತ್ನಿ ಮೇಲೆ  ಮಾಡುವ ಅತ್ಯಾಚಾರ. ‘ಪತಿ ಪತ್ನಿಯನ್ನು ಬಲಾತ್ಕರಿಸಿದರೂ ಅದು ಅತ್ಯಾಚಾರವೇ. ಕಾನೂನಿನ ಪ್ರಕಾರ ಅದಕ್ಕೊಂದು ವಿಶೇಷವಾದ ಹೆಸರು ಕೊಡಬಹುದು.’ ‘ಪತ್ಯಾಚಾರ’. ಇದೊಂದು ‘ಅತ್ಯಾಚಾರ’ ಮಾದರಿಯಲ್ಲಿ ಬಂದಿರುವ ಪದ. ‘ಪತಿ+ಅತ್ಯಾಚಾರ ಸೇರಿ ಪತ್ಯಾಚಾರ ಮಾಡಲಾಗಿದೆ.

ಪತ್ನೀಪೀಡಿ ನಾ ಸುಧಾ ಹೆಂಡತಿಯಿಂದ ಹಿಂಸೆಗೆ ಒಳಗಾದವನು. ‘ಆದರೆ ಇಂದು ಹೆಂಡತಿಯೆ ಗಂಡನನ್ನು ಹೊಡೆಯಬಹುದು! ಇಲ್ಲದಿದ್ದರೆ, ಪತ್ನೀಪೀಡಿತ ಸಂಘಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವುದೇಕೆ?.’ ‘ಪತಿಪೀಡಿತ’ ಪದಕ್ಕೆ ವಿರುದ್ದವಾಗಿ ಮೇಲಿನ ಪದವನ್ನು ರಚನೆ ಮಾಡಲಾಗಿದೆ. ಮಾದರಿ: ಪತಿಪೀಡಿತ

ಪತ್ನೀವ್ರತ ನಾ ಅಗ್ನಿ ಪತ್ನಿಗಾಗಿ ಮೀಸಲಾಗಿರುವವನು. ‘ಯಶಸ್ಸಿನ ಹಿಂದೆ-ಮುಂದೆ; ಮತ್ತು ಪತ್ನೀವ್ರತರು.’ ‘ಪತೀವ್ರತೆ’ ಪದಕ್ಕೆ ವಿರುದ್ಧಪದವಾಗಿ ಪತ್ನೀವ್ರತ ಪದವನ್ನು ಸೃಷ್ಟಿಸಲಾಗಿದೆ. ಪತ್ನೀವ್ರತ ಪುರುಷವಾಚಕವಾಗಿ ಬಳಕೆ ಮಾಡಲಾಗಿದೆ.

ಪರಿಹಾರಾಕಾಂಕ್ಷಿ ನಾ ವಿಜಯಕರ್ನಾಟಕ ಪರಿಹಾರವನ್ನು ಬಯಸುವವನು/ಳು. ‘ದೂರವನ್ನೂ ಅದಕ್ಕೆ ತಗಲುವ ಖರ್ಚನ್ನು ಲೆಕ್ಕಿಸದೆ ದೂರಿನ ಅರ್ಜಿಯನ್ನು ಹಿಡಿದು ಪರಿಹಾರಕಾಂಕ್ಷಿ ಗಳಾಗಿ ಜನ ಬಹುಸಂಖ್ಯೆಯಲ್ಲಿ….! ಪರಿಹಾರ ಮತ್ತು ಅಕಾಂಕ್ಷಿ ಪದಗಳನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ಪರಿಹಾರೀಕರಣ ನಾ ವಿಜಯಕರ್ನಾಟಕ ಪರಿಹಾರ ಮಾಡುವುದು. ‘ಪೋಲಿಯೊ ಪರಿಹಾರೀಕರಣ.’ -ಈಕರಣ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ. ಸಮಸ್ಯೆಗೆ ಪರಿಹಾರ ನೀಡಲು ಪರಿಹಾರೀಕರಣ ಪದವನ್ನು ಪ್ರಯೋಗ ಮಾಡಲಾಗಿದೆ. ಪರಿಹಾರಕ್ಕಿಂತ ಪರಿಹಾರೀಕರಣ ಭಿನ್ನವಾದ ಅರ್ಥವೇನೂ ನೀಡುತ್ತಿಲ್ಲ.

ಪರೀಕ್ಷಾಯಣ ನಾ ತರಂಗ ಪರೀಕ್ಷೆಯ ಪುರಾಣ. ದೀರ್ಘವಾದ ಕತೆ, ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘು ಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ಪಕ್ಷಾಂತರಿಸು ಕ್ರಿ ಅಗ್ನಿ ಒಂದು ರಾಜಕೀಯ ಪಕ್ಷದಿಂದ ಮತ್ತೊಂದು ರಾಜಕೀಯ ಪಕ್ಷಕ್ಕೆ ಸೇರುವುದು. ‘ಅದಾಗ ದಳ ಮೆಜಾರಿಟಯಿದ್ದು ಪಂಚಾಯತ್ ಬಾಡಿಯನ್ನೇ ಬಿಜೆಪಿಗೆ ಪಕ್ಷಾಂತರಿಸಿದ ತಿಮ್ಮಪ್ಪಯ್ಯನನ್ನೂ ಗುತ್ತಿಗಾರಿನ ಭಜನ್ ಲಾಲ್ ಅಂತಲು ಕರೆಯುತ್ತಾರೆ.’ -‘ಇಸು’ ಪ್ರತ್ಯಯ ಸೇರಿಸಿಕೊಂಡು ಪ್ರಯೋಗ ಆಗಿದೆ. ಮಾದರಿ : ಭಾಷಾಂತರಿಸು.

ಪಾತಕೀಕರಣ ನಾ ಕನ್ನಡಪ್ರಭ ಪಾಪಕ್ಕೆ ಒಳಗಾಗುವುದು. ‘ಇನ್ನೊಂದು ಅಂಶವೆಂದರೆ, ರಾಜಕೀಯ ಪಾತಕಿಗಳು ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕುರಿತದ್ದು. ರಾಜಕೀಯ ಪಾತಕೀಕರಣ ತಡೆ ವಿಚಾರದಲ್ಲಿ ಸುಪ್ರಿಂಕೋರ್ಟ ಸೂಚಿಸಿದ್ದನ್ನು ಚುನಾವಣಾ ಆಯೋಗ ಕಾರ್ಯರೂಪಕ್ಕೆ ತರುವ ಯತ್ನ ನಡೆಸಿದ್ದು ಸರ್ವಪಕ್ಷಗಳ ತಿರಸ್ಕಾರಕ್ಕೆ ಗುರಿಯಾಗಿದ್ದು ಹಳೆಯ ಕತೆ.’ ಕನ್ನಡದಲ್ಲಿ ‘ಪಾತಕ’ ಪದ ಚಾಲ್ತಿಯಲ್ಲಿದೆ. ಉದಾಹರಣೆಗೆ : ಕೊಲೆಪಾತಕ/ಕಿ ಇತ್ತೀಚಿಗೆ ‘ಈಕರಣ’ ಪ್ರತ್ಯಯ ಹಚ್ಚಿ ಪದ ಸೃಷ್ಟಿಸುವುದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ.

ಪಾದೋಪಕರಣ ನಾ ಕರ್ಮವೀ ತಳಭಾಗವನ್ನು ಭದ್ರವಾಗಿಸುವ ಉಪಕರಣ. ‘ಆ ಸ್ಟೂಲ್ ನಿಜವಾಗಲೂ ಪಿಠೋಪಕರಣವಲ್ಲ ಪಾದೋಪಕರಣ.’ ಕನ್ನಡ ಮತ್ತು ಸಂಸ್ಕೃತ ಪದಗಳ ನಡುವೆ ಸಂಧಿ ನಡೆದಿದೆ. ಅಲ್ಲದೆ ಬಳಕೆಯಾಗಿರುವ ಸಂಧಿನಿಯಮ ಸಂಸ್ಕೃತದ್ದು. (ಗುಣಸಂಧಿ) ಮಾದರಿ : ಆಟೋಪಕರಣ.

ಪಾಸ್ಧಾರಿ ನಾ ತರಂಗ ಪಾಸುಗಳನ್ನು ಹೊಂದಿರುವ ವ್ಯಕ್ತಿ. ‘ಪಾಸ್‌ಧಾರಿಗಳು ಅರ್ಧಗಂಟೆ ತಾವು ಬಯಸಿದ ಹೆಣ್ಣಿನೊಂದಿಗೆ ಏಕಾಂತವಾಸ ಕಳೆಯಬಹುದು ಎಂದು ಪತ್ರಿಕೆ ಹೇಳಿತು.’ ಪಾಸ್‌ಧಾರ ಪದವನ್ನು ಈ ರೀತಿ ಪರಿವರ್ತಿಸಲಾಗಿದೆ. ಹಾಗೆ ನೋಡಿದರೆ ಗುಣವಾಚಕಗಳನ್ನು ನಾಮರೂಪಗಳನ್ನಾಗಿ ಮಾಡುವ ಕ್ರಮವಿದು. ಮಾದರಿ: ಉದಾರ/ಉದಾರಿ, ಸುಖ/ಸುಖಿ, ಉಲ್ಲಾಸ/ಉಲ್ಲಾಸಿ.

ಪೀಡಕ ನಾ ವಿಜಯಕರ್ನಾಟಕ ಆಗಾಗ ಹಿಂಸೆ ಕೊಡುವವನು. ಕಾಡುವ ವ್ಯಕ್ತಿ. ‘ಪೀಡಕ ಕಳೆದ ಎಂಟು ತಿಂಗಳಿಂದ ಭೂಗತನಾಗಿದ್ದ ೬೬ ವರ್ಷದ ಸದ್ದಾಂ ಆಗಾಗ ಅಮೇರಿಕ ಪಡೆಗಳನ್ನು ನಿರ್ನಾಮ ಮಾಡುವಂತೆ ಹೇಳಿಕೆ…!.’ ‘ಪೀಡೆ’ ಪದಕ್ಕೆ ‘ಕ’ ಪ್ರತ್ಯಯ ಸೇರಿಸಿ ಪುರುಷ ವಾಚಕವನ್ನಾಗಿ ಬಳಕೆ ಮಾಡಲಾಗಿದೆ.

ಫಿಲ್ಮಾಲಯ ನಾ ಕನ್ನಡಪ್ರಭ ಚಿತ್ರಮಂದಿರ. ‘ಧರೆಗೆ ಉರುಳಲಿದೆ ಫಿಲ್ಮಾಲಯ.’ ‘ಫಿಲಂ’ ಎಂಬ ಇಂಗ್ಲಿಶ್ ಪದಕ್ಕೆ ಸಂಸ್ಕೃತದ ‘ಆಲಯ’ ಪದವನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ‘ದೇವಾಲಯ’ ಮಾದರಿಯಲ್ಲಿ ರಚನೆ ಆಗಿದೆ.

ಪುಢಾರಿಕೆ ನಾ ಲಂಕೇಶ್ಪತ್ರಿಕೆ ಪುಢಾರಿತನ ಮಾಡುವ ಕೌಶಲ್ಯ. ‘ರಂಗನಾಥ ಅವರು ಇಂಥಾ ಪುಢಾರಿಕೆಗೆಲ್ಲಾ ಒಪ್ಪದವರಾದ್ದರಿಂದ ಇವೆಲ್ಲಾ ನಡೆಯುತ್ತಿಲ್ಲ ನಿಜ’. ಪುಢಾರಿ ಕೆಲಸವನ್ನು ಮಾಡುವವನು ಪುಢಾರಿ. ಈ ರೂಪ ಬಳಕೆಗೆ ಬಂದ ಮೇಲೆ ಪುಡಾರಿ ಮಾಡುವ ಕೆಲಸವನ್ನು ಪುಡಾರಿಕೆ ಎಂದು ಬಳಸಲಾಗಿದೆ. ಈ ರೂಪಕ್ಕೆ ಯಜಮಾನಿಕೆ, ಜಮೀನ್ದಾರಿಕೆ, ಅಮಲ್ದಾರಿಕೆ ಮುಂತಾದ ರೂಪಗಳು ಮಾದರಿಗಳು.

ಪುನರಾವರ್ತನೀಯ ನಾ ಸುಧಾ ಮತ್ತೆ ಮತ್ತೇ ಸಂಭವಿಸುವುದು. ‘ಯಾವುದೇ ನಿಯಮ ಅಥವಾ ಪರಿಣಾಮ ಪುನರಾವರ್ತನೀಯವೇ ಎಂದು ಎರಡೋ ಮೂರೋ ಸಲ ಪರೀಕ್ಷಿಸಿದರೆ ಸಾಲದು.’ ಇಂಗ್ಲಿಶಿನ ರಿಪೀಟಬಲ್‌ಗೆ ಸಂವಾದಿಯಾಗಿ ‘ಪುನರಾವರ್ತ ನೀಯ’ ಎಂದು ಬಳಕೆ ಮಾಡಲಾಗಿದೆ.’ ‘ಪರಿವರ್ತನೀಯ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಪುರಾಣೀಕರಣ ನಾ ಕನ್ನಡಪ್ರಭ ಚರಿತ್ರೆಯನ್ನು ಪುರಾಣಕ್ಕೆ ಒಳಗೊಳಿಸುವುದು. ‘ಭಾರತೀಯ ಮನಸ್ಸು ಕ್ಷಿಪ್ರಗತಿಯಲ್ಲಿ ಚರಿತ್ರೆಯನ್ನು ಪುರಾಣೀಕರಣಗೊಳಿಸುತ್ತಾ ಹೋಗುತ್ತದೆ.’ ‘ಈಕರಣ’ ಪ್ರತ್ಯಯ ಬಳಸಿ ಪದ ಸೃಷ್ಟಿ ನಡೆದಿದೆ. ಇತ್ತೀಚೆಗೆ ‘ಅ’, ‘ಎ’ ಮತ್ತು ‘ಇ’ ಸ್ವರಾಂತ್ಯ ಪದಗಳಿಗೆ ‘ಈಕರಣ’ ಪ್ರತ್ಯಯ ಹಚ್ಚಿ ಬಳಕೆ ಮಾಡುತ್ತಿರುವುದು ಗಮನಿಸುವಂತಹ ವಿಚಾರ.

ಪುರುಷವಾದ ನಾ ಸುಧಾ ಪುರುಷರ ಪರವಾದಿಸುವುದು. ‘ಸ್ತ್ರೀವಾದವನ್ನು ಸಮರ್ಥಿಸಿಕೊಳ್ಳುವ ನೀವು ಪುರುಷವಾದವನ್ನು ವಿರೋಧಿಸುವಿರೇಕೆ?. ‘ಸ್ತ್ರೀವಾದ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಪುಸ್ತಕಾಯಣ ನಾ ಪ್ರಜಾವಾಣಿ ಪುಸ್ತಕ ಕುರಿತಾದ ದೀರ್ಘವಾದ ಪುರಾಣ. ‘ಹಗರಿಬೊಮ್ಮನ ಹಳ್ಳಿಯ ಗುರುಮೂರ್ತಿ ಪೆಂಡಕೂರು ಅವರ ಪುಸ್ತಕ ಪ್ರೇಮವನ್ನು ‘ಮಾಜಿ ವರ್ತಕನ ಪುಸ್ತಕಾಯಣ’ ಎಂದು ಕರೆದರೆ ಹೇಗೆ?’. ಇತ್ತೀಚೆಗೆ ‘ರಾಮಾಯಣ’ ಮಾದರಿಯಲ್ಲಿ ಅನೇಕ ಪದಗಳು ರಚನೆ ಆಗುತ್ತಿವೆ. ಸಾಮಾನ್ಯವಾಗಿ ಲಲಿತ ಹಾಸ್ಯ ಲೇಖನಗಳಲ್ಲಿ ಇವುಗಳ ಬಳಕೆ ಇರುತ್ತವೆ.

ಪುಸ್ತಕೋತ್ಸವ ನಾ ಕನ್ನಡಪ್ರಭ ಪುಸ್ತಕ ಮಾರಾಟ ಕಾರ್ಯಕ್ರಮ. ‘ಕನ್ನಡ ಪುಸ್ತಕ ಪ್ರಾಧಿಕಾರವು ಫೆ. ೨೧ ರಿಂದ ೨೫ರವರೆಗೆ ಗುಲ್ಬರ್ಗದಲ್ಲಿ ಹೈದರಾಬಾದ್ ಕರ್ನಾಟಕ ಪುಸ್ತಕೋತ್ಸವ ಆಯೋಜಿಸಿದೆ. ಪದದ ಅರ್ಥದಲ್ಲಿ ಏನೂ ಹೊಸತನವಿಲ್ಲ. ಆದರೆ ಇಲ್ಲಿ ಪುಸ್ತಕ ಎಂಬ ಪದವನ್ನು ‘ಉತ್ಸವ’ ಎಂಬ ಸಂಸ್ಕೃತ ಪದದೊಡನೆ ಸೇರಿಸುವಾಗ ಗುಣಸಂಧಿಯ ನಿಯಮಗಳನ್ನು ಪಾಲಿಸಿರುವುದು ಗಮನಸೆಳೆಯುತ್ತದೆ.

ಪೂಜಾರಿಣಿ ನಾ ವಿಜಯಕರ್ನಾಟಕ ಪೂಜೆ ಮಾಡುವವಳು. ‘ನಮ್ಮೂರ ಪೂಜಾರಿಣಿಯರು’. ‘ಪೂಜಾರಿ’ ಪದ ಪುಲ್ಲಿಂಗ ಎಂದು ತಿಳಿದು-‘ಣಿ’ ಸ್ತ್ರೀ ಸೂಚಕ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ. ಸಂಸ್ಕೃತದ ‘ಅರ್ಚಕ’ ಪದಕ್ಕೆ ಮುಂದೆ ‘ಅರ್ಚಕಿ’ ಪದವನ್ನು ಬಳಕೆ ಮಾಡಬಹುದು.

ಪೂಜಾಲಯ ನಾ ಉದಯವಾಣಿ ದೇವರನ್ನು ಪೂಜಿಸುವ ಸ್ಥಳ. ‘ಇದಕ್ಕಿಂತ ಕಷ್ಟದ ಕೆಲಸವೆಂದರೆ ಯಾವ ಪೂಜಾಲಯಗಳ ಅಧಿಕಾರವನ್ನು ಸರಕಾರದ ಸುಪರ್ದಿಗೆ ಒಳಪಡಿಸಬೇಕು…’ ‘ಪೂಜೆ’ ಎಂಬ ಪದದಲ್ಲಿ ‘ಎ’ ಕಾರಂತವಾಗಿರುವುದನ್ನು ‘ಅ’ಕಾರ ಸೇರಿಸಿ ಅದಕ್ಕೆ ‘ಆಲಯ’ ಪದವನ್ನು ಸೇರಿಸಿ ‘ಪೂಜಾಲಯ’ ಎಂದು ಬಳಕೆ ಮಾಡಲಾಗಿದೆ. ‘ದೇವಾಲಯ’ ಪದವಿರುವಾಗ ಪೂಜಾಲಯ ಅಗತ್ಯವಿಲ್ಲ ಎನಿಸುತ್ತದೆ.

ಪೂಜೋಪಚಾ ನಾ ತರಂಗ ಪೂಜೆಯಿಂದ ಮಾಡುವ ಉಪಚಾರ. ‘ಪೂಜೋಪಚಾರ ನಡೆದ ಅನಂತರ ಮತ್ತೆ ಕೇಶವನ ಮೆರವಣಿಗೆ ದೇವಾಲಯದ ಕಡೆಗೆ ಹೊರಡುತ್ತದೆ.’ ಪೂಜೆ ಮತ್ತು ಉಪಚಾರ ಸೇರಿ ಆಗಿರುವ ಪದ ರಚನೆಯ ಸಂಧಿ ನಿಯಮ ಸಂಸ್ಕೃತ (ಗುಣಸಂಧಿ). ಪೂಜೆ ಕನ್ನಡ ಪದ.

ಪೊಲೀಸಾಧಿಪತಿ ನಾ ಕನ್ನಡಪ್ರಭ ಪೊಲೀಸ್ ಕಮೀಷನರ್. ‘ಸಾಗರದಲ್ಲಿ ಅಶಾಂತಿಯ ದೇವ್ಸ್ ಎದ್ದಿವೆ ಅಂತಾ ಯಾರೋ ಅಂದಾಜು ಹಾಕಿದರೆಂದು ಪೊಲೀಸಾಧಿಪತಿ ಬೋರ್ಕರ್ ಅದ್ರನ್ನೋ ಕಳಿಸಿ ರಿಪೋರ್ಟ್ ತಗೋಳ್ತೀನಿ…’ ಪೋಲೀಸ್ ಕಮೀಷನರ್ ಪದಕ್ಕೆ ಸಂವಾದಿಯಾಗಿ ಪೊಲೀಸಾಧಿಪತಿ’ ಪದವನ್ನು ಬಳಕೆ ಮಾಡಲಾಗಿದೆ. ಮಾದರಿ: ಕೋಟ್ಯಾಧಿಪತಿ.

ಪ್ರಜಾಪೀಡಕ ನಾ ಪ್ರಜಾವಾಣಿ ಪ್ರಜೆಗಳಿಗೆ ತೊಂದರೆ ಕೊಡುವ/ ಪ್ರಜೆಗಳನ್ನು ಪೀಡಿಸುವವನು. ‘ಇಂದು ಟಿವಿ ಮೂಲಕ ಮಾಡಿದ ಭಾಷಣದಲ್ಲಿ ೪೮ ಗಂಟೆಗೊಳಗಾಗಿ ಇರಾಕ್ ಬಿಟ್ಟು ಹೋಗಿ, ಹಾಗೆ ಮಾಡದಿದ್ದರೆ ಯುದ್ಧ ಎದುರಿಸಿ’ ಎಂದು ಎಚ್ಚರಿಸಿದ ಬುಷ್ ಎಂಬ ಪ್ರಜಾಪೀಡಕನ ಕತೆ ಮುಗಿಯಿತು’ ಎಂದು ಉದ್ಧಾರಿಸಿದ್ದಾರೆ.’ ಹೆಣ್ಣುಪೀಡಕ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಪ್ರಚಾರಕರ್ತ ನಾ ಲಂಕೇಶ್ಪತ್ರಿಕೆ ಪ್ರಚಾರದ ಕಾರಣಕರ್ತ, ‘ಹೆಚ್ಚು ಸಿನಿಮಾಗಳ ಪ್ರಚಾರಕರ್ತರಾಗಿ ಸೇವೆ ಸಲ್ಲಿಸಿದ ಕೀರ್ತಿ ಡಿ.ವಿ.ಸುಧೀಂದ್ರ ಅವರದು.’ ‘ಪತ್ರಕರ್ತ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಪ್ರತಿಭಟನಾಕೋರ ನಾ ಲಂಕೇಶ್ಪತ್ರಿಕೆ ಪ್ರತಿಭಟನೆ ಮಾಡುವ ವ್ಯಕ್ತಿ. ‘ಪ್ರತಿಭಟನಾಕೋರ ಮುತ್ತುರಾಜ್‌ಸ್ವಾಮಿಯ ಕಾಲಿಗೆ ಬಿದ್ದ ಫೋಟುಗಳು ಮರುದಿನದ ಪತ್ರಿಕೆಗಳಲ್ಲಿ ಅಚ್ಚಾಗಿತ್ತು.’ -‘ಕೋರ ಎಂಬ ಸಾಧಕ ಪ್ರತ್ಯಯ ಪರ್ಸೋ ಅರಾಬಿಕ್ ಮೂಲದ್ದು. ಅದನ್ನಿಲ್ಲಿ ‘ಪ್ರತಿಭಟನೆ’ ಪದಕ್ಕೆ ಹತ್ತಿಸಿ ಹೊಸ ರೂಪವೊಂದನ್ನು ರಚನೆ ಮಾಡಲಾಗಿದೆ. -‘ಕೋರ’ ಪ್ರತ್ಯಯಕ್ಕಿರುವ ತಿರಸ್ಕಾರ ಸೂಚಕತೆಯನ್ನು ಬಳಸಿಕೊಳ್ಳಲು ಈ ರೂಪವನ್ನು ಪಡೆದುಕೊಂಡಂತೆ ತೋರುತ್ತದೆ. ಮಾದರಿ: ಲಂಚಕೋರ, ದಗಾಕೋರ, ದೌರ್ಜನ್ಯಕೋರ.

ಪ್ರದಾನಿಸಿ ನಾ ಸುಧಾ ಪ್ರಧಾನವಾಗಿ. ‘ಈ ಹಿನ್ನೆಲೆಯಲ್ಲಿ ಮೊಟ್ಟ ಮೊದಲಿಗೆ ಆನುಭವ ಮಂಟಪವೆಂಬ ಸಂಸತ್ತಿನ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತಂದು ಮಹಿಳೆಯರಿಗೆ ಅಲ್ಲಿ ಸ್ಥಾನ ಪ್ರಧಾನಿಸಿ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿ…! ‘ಪ್ರಧಾನ’ ಪದಕ್ಕಿಂತ ಅರ್ಥದಲ್ಲೇನೂ ವ್ಯತ್ಯಾಸ ಕಂಡುಬರುತ್ತಿಲ್ಲ.

ಪ್ರತಿಭಾತ್ಮಕ ನಾ ಕನ್ನಡಪ್ರಭ ವಿಶೇಷ ಪ್ರಜ್ಞೆ. ‘ಈ ನೀತಿ ಪ್ರಜಾಸತ್ತಾತ್ಮಕ, ಪ್ರತಿಭಾತ್ಮಕ, ಪ್ರಯೋಗ ಶೀಲವಾಗಿರಬೇಕು’. ಸದ್ಯ ಬಳಕೆಯಲ್ಲಿರುವ ಗುಣಾತ್ಮಕ. ಪರಿಮಾಣಾತ್ಮಕ ಮಾದರಿಗಳ ಮೇಲೆ ಈ ರೂಪ ಬಳಕೆಯಾಗಿದೆ. ಇಲ್ಲಿ ಬಳಕೆಯಾದ ಆತ್ಮಕ ಪದ ‘ವ್ಯೂ’ ಎಂಬರ್ಥದಲ್ಲಿ (ದೃಷ್ಟಿ, ಮನನ) ಬಳಕೆಯಾಗಿದೆ. ‘ಪ್ರತಿಭಾತ್ಮಕ’ ಎಂದರೆ ಪ್ರತಿಭೆ ಎಂಬುದು ರೂಪದ ಅರ್ಥ.

ಪ್ರಾರ್ಥನಾತ್ಮಕ ನಾ ಲಂಕೇಶ್ಪತ್ರಿಕೆ ಪ್ರಾರ್ಥಿಸು. ‘ಮಳೆಯೇ ಇಲ್ಲ! ಛೆ, ಪ್ರಾರ್ಥನಾತ್ಮಕವಾಗಿ, ಭಾವನಾತ್ಮಕವಾಗಿ ಅಥವಾ ಮೆಟ್ಟಾಫಿಸಿನ ಮೇಲಿನ ಮೂಢನಂಬಿಕೆ, ಅಂಧ ಶ್ರದ್ಧೆಯಿಂದ ಕೈಕಟ್ಟಿ ಕೂರುವುದೇ ತಪ್ಪು ಎಂದೆನಿಸಿತು.’ ಸದ್ಯ ಬಳಕೆಯಲ್ಲಿರುವ ಗುಣಾತ್ಮಕ, ಪರಿಮಾಣಾತ್ಮಕ ಮಾದರಿಗಳ ಮೇಲೆ ಈ ರೂಪ ಬಳಕೆಯಾಗಿದೆ. ಇಲ್ಲಿ ಬಳಕೆಯಾದ ‘ಆತ್ಮಕ’ ಪದ ‘ವ್ಯೂ’ ಎಂಬರ್ಥದಲ್ಲಿ (ದೃಷ್ಟಿ, ಮನನ) ಬಳಕೆಯಾಗಿದೆ. ‘ಪ್ರಾರ್ಥನೆ’ ಮತ್ತು ‘ಪ್ರಾರ್ಥನಾತ್ಮಕ’ ಪದಗಳ ನಡುವೆ ಅಷ್ಟೇನೂ ಅರ್ಥದಲ್ಲಿ ವ್ಯತ್ಯಾಸವಿಲ್ಲ.

ಪ್ರಾಣಿಪಾತಕಿ ನಾ ಕರ್ಮವೀ ಪ್ರಾಣಿಗಳನ್ನು ಹತ್ಯೆ ಮಾಡುವವನು. ‘ಈ ಪ್ರಾಣಿ ಪಾತಕಿಗಳಲ್ಲಿ ಮಾತ್ರ ಯಾವ ಭೇದವೂ ಇಲ್ಲ!’ ‘ಕೊಲೆಪಾತಕಿ’ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಸಾಧ್ಯತೆ : ಪ್ರಾಣಿಪಾತಕ

ಪ್ರಾಣಿಪೀಡಕ ನಾ ಕರ್ಮವೀ ಪ್ರಾಣಿಗಳನ್ನು ಕೊಲೆಮಾಡುವವನು/ಪೀಡಿಸುವವನು. ‘ಆಗಾಗ ಬಟ್ಟೆ ಹಾಕಿಕೊಂಡು ಎಲ್ಲರನ್ನೂ ಬೆರಗುಗೊಳಿಸುವ ಪ್ರಾಣಿಪೀಡಕ ಸಲ್ಮಾನ್‌ಖಾನ್ ಎಂಬ ನಟ…’ ‘ಹೆಣ್ಣುಪೀಡಕ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಸಾಧ್ಯತೆ : ಪ್ರಾಣಿಪೀಡಕಿ

ಪ್ರಾಸಗಾg ನಾ ಅಗ್ನಿ ಪದ್ಯದ ನಿಯತ ಸ್ಥಳಗಳಲ್ಲಿ ಬರುವ ನಿಯತಾಕ್ಷರದಲ್ಲಿ ಹಾಡುವವನು. ‘ಹ್ಯಾಟ್ರಿಕ್ ಹಿರೋ ಅಲಂಕಾರ್ ಎಂಬುದೊಂದು ಪ್ರಶಸ್ತಿ ಯನ್ನು ಪ್ರಾಸಗಾರ ಅಪ್ಪ ಹಂಸಲೇಖಾ ಹುಡುಕಿಟ್ಟುಕೊಳ್ಳಬೇಕಾಗು ತ್ತದೇನೋ…’ -ಗಾರ ಪ್ರತ್ಯಯದೊಡನೆ ಬಂದಿರುವ ಹೊಸ ಪದ.

ಫ್ಯಾನಿಸ್ಟೀಕರಣ ನಾ ಲಂಕೇಶ್ಪತ್ರಿಕೆ ಮತೀಯವಾದಿ. ‘ಸರ್ಕಾರದ ಫ್ಯಾಸಿಸ್ಟೀಕರಣ ಪ್ರವೃತಿ ಇದು’. ‘ಫ್ಯಾಸಿಸ್ಟ್’ ಪದಕ್ಕೆ ‘ಈಕರಣ’ ಪ್ರತ್ಯಯವನ್ನು ಸೇರಿಸಿ ಪದರಚನೆ ಮಾಡಲಾಗಿದೆ.

ಪ್ರಿಂಟಿಸಿ ಕ್ರಿ ಸುಧಾ ಮುದ್ರಿಸಿ. ‘ಅದಕ್ಕಾಗಿ ಸುಲಭ ಉಪಾಯ ಕರಪತ್ರ ಪ್ರಿಂಟಿಸಿ, ದಿನಪತ್ರಿಕೆ ಬಟವಾಡೆ ಮಾಡುವ ಹುಡ್ಗರಿಗೆ ಸ್ವಲ್ಪ ಖರ್ಚಿಗೆ ಕಾಸು ಕೊಟ್ಟು ದಿನ ಪತ್ರಿಕೆಯೊಳಗೆ ಅದನ್ನಿಡುವುದು’. ‘ಪ್ರಿಂಟ್’ ಎಂಬ ಇಂಗ್ಲಿಷ್ ಪದಕ್ಕೆ -ಇಸು ಪ್ರತ್ಯಯವನ್ನು ಸೇರಿಸಿ ‘ಪ್ರಿಂಟಿಸಿ’ ಪದ ರಚನೆ ಮಾಡಲಾಗಿದೆ.

ಪ್ರೀತೀಕರಣ ನಾ ಬಳಕೆ ಎಲ್ಲವು ಪ್ರೀತಿಮಯವಾಗುವುದು. ಲವ್ವೈಷನ್ ಗೆ ಸಂವಾದಿಯಾಗಿ ಪದ ರಚನೆ ಮಾಡಲಾಗಿದೆ. -ಈಕರಣ ಪ್ರತ್ಯಯ ಪದಗಳ ಗುಂಪಿಗೆ ಇದೊಂದು ಸೇರ್ಪಡೆ.

ಫ್ಯೂಡಲ್ತನ ನಾ ಅಗ್ನಿ ಸ್ವಜನ ಪಕ್ಷಪಾತ ಗುಣ ಹೊಂದಿರುವ ಸ್ಥಿತಿ. ‘ಇಷ್ಟೆಲ್ಲಾ ಫ್ಯೂಡಲ್‌ತನ, ಸ್ವಜನ ಪಕ್ಷಪಾತವನ್ನು ಪ್ರೊ.ಹನುಮಯ್ಯ ಮೆರೆಯುತ್ತಿದ್ದರೂ, ಯಾರೂ ಪ್ರಶ್ನಿಸುವವರೇ ಇಲ್ಲವೆ?. ಇಂಗ್ಲಿಶಿನ ಫ್ಯೂಡಲ್ ಪದದೊಂದಿಗೆ ಕನ್ನಡದ -‘ತನ’ ಪ್ರತ್ಯಯವನ್ನು ಬಳಕೆ ಮಾಡಲಾಗಿದೆ.

ಪ್ರೇತತ್ವ ನಾ ಪ್ರಜಾವಾಣಿ ಪಿಶಾಚಿ; ‘ಪ್ರೇತತ್ವ ಹಣೆಪಟ್ಟಿಯಲ್ಲ; ಪಿತೃತ್ವದ ಪಟ್ಟ!’ ‘ಪ್ರೇತ’ ರೂಪಕ್ಕಿಂತ ಪ್ರೇತತ್ವ ರೂಪ ಅರ್ಥದಲ್ಲೇನೂ ವ್ಯತ್ಯಾಸವಿಲ್ಲ. ಮಾದರಿ ಪಾಲಕತ್ವ, ನಾಯಕತ್ವ, ಬಂಧುತ್ವ.