ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆಯು ಮಾಧ್ಯಮಗಳಲ್ಲಿ ಬಹು ಎಚ್ಚರದಿಂದ ಹೊಸ ಹೊಸದಾಗಿ ಬಳಕೆಯಾಗುತ್ತಿದೆ. ಯಾವುದೇ ಜೀವಂತ ಭಾಷೆಯ ಶಬ್ದಸಂಪತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಗಾಗುತ್ತದೆ. ಇದು ಜೀವಂತ ಭಾಷೆಯ ಲಕ್ಷಣ. ಪದಲೋಕ ಎನ್ನುವುದು ತುಂಬಾ ಸ್ವಾರಸ್ಯವಾದುದು. ಅಷ್ಟೇ ಸಂಕೀರ್ಣವಾದುದು. ಬರಹಗಾರರು ಕನ್ನಡದಲ್ಲಿ ತಂತ್ರಜ್ಞಾನದ ಲೋಕವನ್ನು ಪರಿಚಯ ಮಾಡಿಕೊಡಬೇಕಾದರೆ ಭಾಷೆಯ ಬಳಕೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸಮಕಾಲೀನ ಸಂದರ್ಭಕ್ಕೆ ಬೇಕಾದ ಪದಸಂಪತ್ತನ್ನು ನಮ್ಮ ಕನ್ನಡ ಪತ್ರಿಕೆಗಳು ಹೊಸ ಹೊಸದಾಗಿ ಬಳಕೆ ಮಾಡುತ್ತಿವೆ. ಯಾವುದೇ ಕಾಲದಲ್ಲಿರಬಹುದು ನಿಘಂಟುಗಳು ಇಲ್ಲವೆಂದು ಜನಸಾಮಾನ್ಯರು ಮಾತನಾಡುವುದನ್ನು ನಿಲ್ಲಿಸಿಲ್ಲ. ನಿಲ್ಲಿಸುವುದು ಇಲ್ಲ. ಜನಮುಖಿಯಾದ ಭಾಷೆಯಲ್ಲಿ ಪದಸಂಪತ್ತು ಹೆಚ್ಚುತ್ತಾ ಹೋಗುತ್ತದೆ. ಈ ಮಾದರಿ ಬೆಳವಣಿಗೆಯಲ್ಲಿ ನಮ್ಮ ದಿನಪತ್ರಿಕೆಗಳ ಪಾತ್ರ ಹಿರಿದು. ಕನ್ನಡಕ್ಕೆ ಇತ್ತೀಚಿನ ದಿನಗಳಲ್ಲಿ ಎರವಲು ಪದರಾಶಿ ಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ ಭಾಷೆಯಲ್ಲಿನ ಬೆಳವಣಿಗೆ, ಪದಕೋಶಗಳ ಬದಲಾವಣೆ ಅನಿವಾರ್ಯ. ದಾಖಲಾಗಿರುವ ಪದ ಸಂಕಲನದಲ್ಲಿ, ಸಂಯೋಜನೆಯಲ್ಲಿ ಮಿತಿಗಳು ಕಂಡುಬರುವುದು ಸಹಜ. ಇಲ್ಲಿ ಹಳೆಯ ಮಾತುಗಳು ಅನೇಕ. ಹಳೆಯ ಮಾತುಗಳಿಗೆ ಹೊಸ ಅರ್ಥವನ್ನು ನೀಡುವಾಗ ಕೆಲವು ಸಂದರ್ಭದಲ್ಲಿ ವಿಪರೀತಾರ್ಥ ಎನಿಸಬಹುದು. ‘‘ಹೊಸ ಮಾತುಗಳನ್ನು ರಚಿಸಿ ನಾವು ನಮ್ಮ ಬಾಳನ್ನು ಹಸನಾಗಿಸಬೇಕೆಂದು ಎಂ.ಗೋವಿಂದ ಪೈ ಅವರು ಒತ್ತಿ ಹೇಳಿ (ಅನರ್ಥಕೋಶ, ನಾ.ಕಸ್ತೂರಿ ಪು.iv, ೨೦೦೧)ದ್ದಾರೆ.’’ ಈ ಮಾತನ್ನು ಗಮನಿಸಿದಾಗ ಹೊಸ ಹೊಸ ರಚನೆಗಳು ಆಗುತಿವೆ ಎಂದರೆ ಕನ್ನಡ ಭಾಷೆ ಅವಸಾನವಾಗುತ್ತಿದೆ ಎಂಬುದರ ಸಂಕೇತವಲ್ಲ. ಕನ್ನಡ ಭಾಷೆ ತನ್ನ ಪದಕೋಶದ ಬೆಳವಣಿಗೆಗೆ ತೆರೆದುಕೊಳ್ಳುತ್ತಿದೆ ಎಂದರ್ಥ. ತೆರೆದುಕೊಳ್ಳಬೇಕಾದುದು ಸಹಜ.

ಹೊಸರಚನೆಗಳು ಸುಮ್ಮ ಸುಮ್ಮನೆ ಆಗುವುದಿಲ್ಲ. ಅದರ ಹಿಂದೆ ಹಲವು ಕಾರಣ ಗಳಿರುತ್ತವೆ. ಬೇರೆ ಭಾಷಿಕರು ಬಳಕೆ ಮಾಡುವ ವಸ್ತುಗಳು ನಮ್ಮಲ್ಲಿಗೆ ಬಂದಾಗ ಆ ವಸ್ತುಗಳೊಂದಿಗೆ ಆ ವಸ್ತುಗಳಿಗೆ ಬಳಸುತ್ತಿದ್ದ ಪದಗಳು ನಮ್ಮ ಭಾಷೆಯಲ್ಲಿ ಸೇರಿಕೊಳ್ಳುತ್ತವೆ. ಉದಾಹರಣೆಗೆ : ಕ್ರಿಕೆಟ್ ಆಟ ಪರಿಚಯವಾಗಿಲ್ಲದಿದ್ದರೆ ಆ ಆಟವನ್ನು ಕನ್ನಡದಲ್ಲಿ ವಿಶ್ಲೇಷಿಸಲು ಬೌಲಿಗ, ಬ್ಯಾಟಿಗ, ದಾಂಡಿಗ, ಕ್ರಿಕೆಟಿಗ ಮುಂತಾದ ಪದಗಳು ಬಳಕೆಯಲ್ಲಿ ಇರುತ್ತಿರಲಿಲ್ಲ. ಹಾಗೆಯೇ ತಂತ್ರಜ್ಞಾನದ ಪ್ರಭಾವವನ್ನು ಕನ್ನಡದಲ್ಲಿ ವಿಶ್ಲೇಷಿಸಲು ತಂತ್ರಜ್ಞಾನಿ, ತಂತ್ರಜ್ಞಾನಿಗ (ದಿನದಿನ ೨, ಪು.೫೫, ಕನ್ನಡ ವಿಶ್ವವಿದ್ಯಾಲಯ, ಹಂಪಿ) ಮುಂತಾದ ಪದಗಳು ಬಹಳ ಮುಖ್ಯ. ಹೀಗೆ ಹೊಸ ರಚನೆಗಳು ಜನಸಾಮಾನ್ಯರ ಬಳಕೆಯಲ್ಲಿ ಲೋಪವಾಗಿದ್ದರೂ, ನಮ್ಮ ದಿನ ಪತ್ರಿಕೆಗಳು ನಮ್ಮ ನಡುವೆ ಇರುವ ಸಮಾಚಾರಗಳನ್ನು ಆಕರ್ಷಕವಾಗಿ ಹಿಡಿದಿಡಲು ಈ ಮಾದರಿ ಪದಗಳನ್ನು ಬಳಕೆ ಮಾಡುತ್ತಿವೆ. ಈ ರೀತಿಯಾಗಿ ನಮಗೆ ಅಪರಿಚಿತವಾದ ವಸ್ತುಗಳನ್ನು ಸ್ವೀಕರಿಸಿ ಆ ವಸ್ತುಗಳಿಗೆ ಬಳಕೆ ಮಾಡುವ ಹೆಸರುಗಳನ್ನು ನೇರವಾಗಿ ಸ್ವೀಕರಿಸುವುದು ಒಂದು ವಿಧಾನವಾದರೆ, ಮತ್ತೊಂದು ವಿಧಾನದಲ್ಲಿ ಅ ಅಪರಿಚಿತವಾದ ವಸ್ತುಗಳಿಗೆ ನಮ್ಮ ದೇಶಿಯ ನೆಲೆಯ ಅರ್ಥವನ್ನು ನೀಡಿ ಬಳಕೆ ಮಾಡುವುದು. ಅಲ್ಲದೆ ಹೊಸ ಹೊಸ ಕಸುಬುಗಳನ್ನು, ಬೇರೆ ಬೇರೆ ಮಾದರಿಯ ಉದ್ಯೋಗಗಳನ್ನು ಹೆಸರಿಸಬೇಕಾದಾಗ ಹೊಸರಚನೆಗಳು ರಚನೆಯಾಗುವುದುಂಟು. ಉದಾಹರಣೆಗೆ : ಬಿಸಿನೆಸ್ತೋತ್ಸವ. ಕೆಲವರು ಹೊಸರಚನೆಗಳನ್ನು ಎಷ್ಟೊ ಸಂದರ್ಭದಲ್ಲಿ ತಮಷೆಗಾಗಿ ಸದೃಶ ಪದಗಳಾಗಿ ಸೃಷ್ಟಿಮಾಡುತ್ತಾರೆ. ಉದಾಹರಣೆಗೆ : ನ್ಯಾಚುರೋಪತಿ, ಇಂತಹ ರಚನೆಗಳನ್ನು ಪರಿಗಣಿಸಬೇಕೆ? ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಯಾವುದೇ ಪದ ರಚನೆ ಜನಸಾಮಾನ್ಯರಿಗೆ ತಲುಪದಿದ್ದರೆ ಅದು ಎಷ್ಟಿದ್ದರೆ ಏನು ಪ್ರಯೋಜನ ಹೇಳಿ.

ನಮ್ಮಲ್ಲಿ ವಿವಿಧ ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದಂತೆ ಪದಕೋಶಗಳು ಪ್ರಕಟವಾಗಿವೆ. ಅವೇಕೆ? ಜನಮುಖಿಯಾಗುತ್ತಿಲ್ಲ. ಹಾಗಾದರೆ ಈಗಿರುವ ಪದಕೋಶಗಳು ಪಂಡಿತರಿಗೆ ಮಾತ್ರ ಸೀಮಿತವೆ? ಪದಕೋಶಗಳು ಜನಮುಖಿಯಾಗುವ ಬಗೆ ಹೇಗೆ? ನಮ್ಮ ದಿನಪತ್ರಿಕೆಗಳಲ್ಲಿ ಬಳಕೆ ಆಗುತ್ತಿರುವ ಹೊಸರಚನೆಗಳು ಸಮಾಜಮುಖಿಯಾಗಿಲ್ಲವೆ? ನಿಜವಾಗಿಯೂ ದಿನಪತ್ರಿಕೆಗಳಲ್ಲಿ ಬಳಕೆ ಆಗುತ್ತಿರುವ ಪದಗಳು ಜನಮುಖಿಯಾಗಿವೆ ಎಂದೆನಿಸುತ್ತದೆ. ಏಕೆಂದರೆ ದಿನಪತ್ರಿಕೆಗಳನ್ನು ಅಕ್ಷರ ಬಲ್ಲವರು ಎಲ್ಲರು ಗಮನಿಸುತ್ತಾರೆ. ಆದರೂ ಇಲ್ಲಿಯವರೆಗೆ ಯಾರಾದರೂ ಇದು ಒಳ್ಳೆಯ ರಚನೆ, ಇದು ತಪ್ಪುರಚನೆ ಎಂದು ಚಳವಳಿ ಮಾಡಿದ್ದಾರೆಯೆ? ಇಲ್ಲ. ಅಂದ ಮೇಲೆ ದಿನಪತ್ರಿಕೆಗಳಲ್ಲಿ ಬಳಕೆ ಆಗುತ್ತಿರುವ ಹೊಸ ರಚನೆಗಳ ಬಗ್ಗೆ ಜನಸಾಮಾನ್ಯರಿಗೆ ಸಮ್ಮತಿ ಇದೆ ಎಂದಾಯ್ತು ಅಲ್ಲವೆ? ಈ ಹಿನ್ನೆಲೆಯಿಂದ ದಿನಪತ್ರಿಕೆಗಳಲ್ಲಿ ಬಳಕೆ ಆಗುತ್ತಿರುವ ಹೊಸ ರಚನೆಗಳನ್ನು ಅವುಗಳ ಪ್ರಯೋಜನವನ್ನು ಗಮನಿಸಿ ಎರಡು ಮಾದರಿಯಾಗಿ ವರ್ಗೀಕರಿಸಬಹುದು. ಒಂದು. ಸಾಮಾಜಿಕರು ಸರ್ವಕಾಲೀನವಾಗಿ ಬಳಸಬಹುದಾದ ಪದಗಳು. ಎರಡು. ಕನಿಷ್ಠ ನಿರ್ದಿಷ್ಟ ಉದ್ದೇಶವಿಲ್ಲದೆ ಬಳಕೆ ಮಾಡಿರುವ, ಮಾಡುತ್ತಿರುವ ಪದಗಳು. ಮೊದಲನೆಯ ಸಾಲಿಗೆ ಉದಾಹರಣೆಯಾಗಿ ಸರ್ವಕಾಲೀನ, ಪುರುಷವಾದ, ಜಲಚಾರ್ಯ, ಅನಂಟು, ನೆಲವಾಸಿ, ಮಹಾತೆರೆ ಇನ್ನೂ ಪಟ್ಟಿ ಬೆಳೆಸಬಹುದು. ನಮ್ಮ ಉದ್ದೇಶಕ್ಕೆ ಇಷ್ಟು ಸಾಕು. ಎರಡನೆ ಗುಂಪಿನಲ್ಲಿ ಜಾಗತಿಕ ಮತ್ತು ಜಾಗತಿಕತೆ, ಹೊಂದಾಣಿಕೆ ಮತ್ತು ಹೊಂದಾಣಿತ, ಕೊಳ್ಳುಬಾಕ ಮತ್ತು ಕೊಳ್ಳುಬಾಕತನ, ದಿವಾಳಿಕೋರ ಮತ್ತು ದಿವಾಳಿಕೋರತನ, ನೆಲಗಳ್ಳ ಮತ್ತು ನೆಲಗಳ್ಳತನ ಅಂಕೀಕರಣ ಮುಂತಾದ ಪದಗಳನ್ನು ಪಟ್ಟಿ ಮಾಡಬಹುದು.

‘ಅಕ್ಷರಸ್ಥ’ ಪದ ಇರುವಾಗ ‘ಅಕ್ಷರವಂತ’ ಪದ ಬಳಕೆ ಬೇಕಾಗಿಲ್ಲ. ಅದೇ ರೀತಿ ಅರಣ್ಯ ರಕ್ಷಕ ಪದ ಇರುವಾಗ ಅರಣ್ಯಪಾಲಕ ಪದಬೇಕಾಗಿಲ್ಲ. ಇನ್ನು ಪಟ್ಟಿ ಮಾಡಬಹುದು. ‘ಕೊಳ್ಳುಬಾಕ’ ಪದದ ಅರ್ಥಕ್ಕಿಂತ ‘ಕೊಳ್ಳುಬಾಕತನ’ ಪದದ ಅರ್ಥದಲ್ಲಿ ಭಿನ್ನವಾದ ವ್ಯತ್ಯಾಸವಿಲ್ಲ. ಈ ಹಿನ್ನೆಲೆಯಿಂದ ಕೊಳ್ಳುಬಾಕ ಪದವೆ ಸಾಕು. ‘ಕೊಳ್ಳುಬಾಕತನ’ ಎಂಬ ಪ್ರತ್ಯೇಕವಾದ ಪದ ಪ್ರಯೋಗ ಬೇಕಾಗಿಲ್ಲ ಸಂಖ್ಯೆಗಳನ್ನು ತಿಳಿಸಲು ಅಂಕಿ ಪದವೆ ಸಾಕಾಗಿದೆ. ಅಂಕೀಕರಣ ಪದ ಬೇಕಾಗಿಲ್ಲ. ಈ ಮಾದರಿ ಪದಗಳು ಹಲವಾರು  ಬಳಕೆಯಾಗುತ್ತಿವೆ. ಸಮಾಜಮುಖಿಯಾದ ಪದಗಳ ಪ್ರಯೋಗ ಸ್ವಾಗತಾರ್ಹ. ಅದೊಂದು ಸಾಹಸದ ಪ್ರಯತ್ನ. ಈ ಹಿನ್ನೆಲೆಯಿಂದ ಹೊಸ ರಚನೆಗಳ ನಿರ್ಮಾಣ ಎಂದರೆ ಯಾರು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವ ಪ್ರಯತ್ನ ಆಗದೆ, ಅದೊಂದು ಭಾಷಾ ಬೆಳವಣಿಗೆಯ ಪ್ರಕ್ರಿಯೆ ಆಗಬೇಕು.

ಒಂದು ನಿರ್ದಿಷ್ಟ ಭಾಷೆಯ ಪದ ಸಂಪತ್ತು ಹೇಗಿದೆ ಎನ್ನುವುದನ್ನು ಕುರಿತು ಅಧ್ಯಯನ ಮಾಡುವುದು ಅತ್ಯವಶ್ಯಕವಾಗಿದೆ. ನಂತರ ಅದರ ಬೆಳವಣಿಗೆ ಹೇಗೆ ನಡೆದಿದೆ ಎಂಬುದನ್ನು ಅಧ್ಯಯನ ಮಾಡಬಹುದು. ಆ ಬೆಳವಣಿಗೆಯಲ್ಲಿ ಹೊರಗಿನಿಂದ ಪದಸಂಪತ್ತು ಹೇಗೆ ಹರಿದುಬಂದಿದೆ ಎಂಬುದು ಗಮನಿಸುವಂತಹ ಅಂಶ. ಜನ ಜೀವನದಲ್ಲಿ ಹೊಸ ಹೊಸ ಸಂಗತಿಗಳು, ಹೊಸ ಹೊಸ ಆಯಾಮಗಳನ್ನು ಪರಿಚಯ ಮಾಡಿಕೊಡಬೇಕಾದರೆ ಪ್ರಯೋಗದಾರರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಾರೆ. ಅಂತಹ ಪದ ಬಳಕೆಯ ದಾರಿಗಳನ್ನು ಕೆಳಗಿನಂತೆ  ವರ್ಗೀಕರಿಸಬಹುದು.

೧. ಹಿಂದೆ ಇದ್ದ ಕನ್ನಡ ಪದಕ್ಕೆ ಇಂಗ್ಲಿಶ್ ಭಾಷೆಯ ಹೊಸ ಅರ್ಥವನ್ನು ಆರೋಪಿಸುವುದು, ಉದಾಹರಣೆಗೆ : ಮೇಸ್ಟ್ರಮ್ಮ, ಕನ್ನಡಾಂಗ್ಲ.

೨. ಕೆಲವು ಸಂದರ್ಭದಲ್ಲಿ ಹೊಸ ಶಬ್ದಗಳನ್ನೇ ಸೃಷ್ಟಿಸುತ್ತಾರೆ. ಉದಾಹರಣೆಗೆ : ದೂಮಶೂರ

೩. ಸಂಸ್ಕೃತ ಪದಗಳಿಗೆ ಇರುವ ಹಳೆಯ ಅರ್ಥದ ಜತೆಗೆ ಹೊಸ ಅರ್ಥವನ್ನು ಹೊಂದಿಸುವುದು. ಉದಾಹರಣೆಗೆ : ಕೇಶಿರಾಜ (ಕೂದಲಿನ ರಾಜ)

೪. ಇಂಗ್ಲಿಶ್ ಪದಗಳಿಗೆ ಹೊಸದಾಗಿ ಸಂಸ್ಕೃತ ಪದಗಳ ಸಮಾನ ಅರ್ಥವನ್ನು ಹೊಂದಿಸುವುದು. ಉದಾಹರಣೆಗೆ : ಫಿಲ್ಮಾಲಯ

೫. ಹೊಸ ಮಾದರಿಗಳ ಸೃಷ್ಟಿ ಉದಾಹರಣೆಗೆ : ಜನಪಾತ, ಗಂಡತಿ

೬. ಇಂಗ್ಲಿಶ್ ಪದಗಳನ್ನೇ ಕನ್ನಡ ಪ್ರತ್ಯಯಗಳ ಜತೆ ಬಳಕೆ ಮಾಡುವುದು. ಉದಾಹರಣೆಗೆ: ಓನರ್‌ಗಿರಿ, ಗೇಮುವಾದಿ. ಕಾಮಾನ್ಯ ಇಂಗ್ಲಿಶಿನ ಕಾಮನ್ ಪದಕ್ಕೆ ಕನ್ನಡದ ‘ನ್ಯ’ ಸೇರಿಸಿ ಪದರಚನೆ ಮಾಡಲಾಗಿದೆ.

೭. ಇಂಗ್ಲಿಶ್ ಪದಗಳನ್ನು ಅನುವಾದ ಮಾಡುವುದು. ಉದಾಹರಣೆಗೆ : ವೇವ್‌ಫೈಲ್ ಗೆ ಸಂವಾದಿಯಾಗಿ ‘ಗಾಳಿಕಡತ’ ಪದರಚನೆ ಮಾಡಲಾಗಿದೆ.

ಪ್ರತ್ಯಯ ಸಹಿತ ಹೊಸರಚನೆಗಳು

ಕನ್ನಡದಲ್ಲಿ ಬರುವ ಪ್ರತ್ಯಯಗಳೆಲ್ಲವೂ ಪರಪ್ರತ್ಯಯಗಳು. ಅಂದರೆ ನಾಮಪದ, ಕ್ರಿಯಾಪದ ಮತ್ತು ವಿಶೇಷಣಗಳ ಅನಂತರ ಬರುವವುಗಳು. ಹೊಸ ರಚನೆಗಳಲ್ಲಿ ಪೂರ್ವ ಪ್ರತ್ಯಯಗಳು ಬಳಕೆಯಾಗಿವೆ ಎಂದರೆ ಅಂತಹ ರಚನೆಗಳು ಕನ್ನಡಕ್ಕೆ ಎರವಲು ಪದಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ. ಪದಮಧ್ಯ ಪ್ರತ್ಯಯಗಳು ಕಂಡುಬರುವುದಿಲ್ಲ. ಕನ್ನಡದಲ್ಲಿ ಸಾಮಾನ್ಯವಾಗಿ ಕ್ರಿಯಾಪದಗಳಿಂದ ನಾಮಪದಗಳನ್ನು ಸಾಧಿಸುವುದೇ ಜಾಸ್ತಿ. ನಾಮಪದಗಳಿಂದ ಕ್ರಿಯಾಪದಗಳನ್ನು ಸಾಧಿಸಲು ಸಾಧ್ಯವಿದೆಯಾದರೂ ‘ಇಸು’ ಪ್ರತ್ಯಯವನ್ನು ಸೇರಿಸಿ ಸಾಧಿಸಲು ಸಾಧ್ಯ. ಹೊಸ ರಚನೆಗಳಲ್ಲಿ ಪೂರ್ವ ಪ್ರತ್ಯಯಗಳು ಬಳಕೆಯಲ್ಲಿವೆ. ಅಂದರೆ ಅವು ಸಂಸ್ಕೃತ ಮಾದರಿಯನ್ನೇ ಅನುಸರಿಸಿ ಬಂದಿರುವುವು. ಪೂರ್ವಪ್ರತ್ಯಯಗಳಾದ ಅ, ನಿರ್, ವಿ. ಮುಂತಾದವು ಹೊಸರಚನೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಇಂತಿವೆ

೧. ಹೊಸ ರಚನೆಗಳಲ್ಲಿ ‘ಅ’ ಎಂಬ ಪೂರ್ವಪ್ರತ್ಯಯ ಒಂದು ನಾಮಪದದೊಂದಿಗೆ ಬಳಕೆಯಾದಾಗ ಆ ಪದದ ವಿರುದ್ಧಾರ್ಥ ಲಭಿಸುತ್ತದೆ. ಉದಾಹರಣೆಗೆ : ಅದಲಿತ, ಅನಂಟು, ಅದೂರದೃಷ್ಟಿ, ಅತಿಳುವಳಿಕೆ, ಅಸಾಧನೆ, ಅಸೌಜನ್ಯ ಇತ್ಯಾದಿ.

೨. ಕೆಲವು ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಹತ್ತಿಸುವುದರ ಮೂಲಕ ನಾಮಪದಗಳನ್ನು ಸಾಧಿಸಬಹುದಾಗಿದೆ. ಉದಾ: ಮುಕ್ಕಾಟ, ಮೇಯ್ದಾಟ, ಬಿಚ್ಚಾಟ, ನೋಟಕ, ಪೀಡಕ.

೩. ಸಂಸ್ಕೃತದಿಂದ ಸ್ವೀಕರಣ ಪದಗಳಿಗೆ ‘ಇಕ’ ಪ್ರತ್ಯಯವೊಂದು ಬಳಕೆಯಲ್ಲಿದೆ. ಇದು ಹೊಸರಚನೆಗಳಲ್ಲಿ ಬಳಕೆಯಲ್ಲಿರುವುದು ಗಮನಿಸುವಂತಹ ಅಂಶ. ಉದಾ : ಕುಟುಂಬಿಕ, ಕ್ರೀಡೋದ್ದೀಪಕ.

೪. ‘ಇ’ ಕಾರಾಂತ ಕ್ರಿಯಾಪದಕ್ಕೆ ‘ತ’ ಎಂಬ ಪ್ರತ್ಯಯ ಸೇರಿಸಿ ಕೆಲವು ಹೊಸ ರಚನೆಯ ನಾಮಪದಗಳನ್ನು ಸಾಧಿಸಬಹುದು. ಉದಾ : ಥಳಿತ

೫. ಹೊಸ ರಚನೆಗಳಲ್ಲಿ ಸಂಸ್ಕೃತದಿಂದ ಸ್ವೀಕರಣವಾಗಿರುವ ಕೆಲವು ನಾಮಪದಗಳಲ್ಲಿ ‘ತೆ’ ಎಂಬ ಪ್ರತ್ಯಯವೊಂದು ಬಳಕೆಯಲ್ಲಿದೆ. ಉದಾ : ಮೂರ್ಖ-ಮೂರ್ಖತೆ, ಆಹ್ವಾನ – ಆಹ್ವಾನತೆ. ವಿಶೇಷವಾಗಿ ಈ ‘ತೆ’ ಎಂಬ ಪ್ರತ್ಯಯವು ನಾಮಪದಗಳಿಗಲ್ಲದೆ ಕ್ರಿಯಾಪದಗಳಿಗೆ ಹತ್ತುವುದಿಲ್ಲ.

೬. ‘ವಂತ’ಯುಕ್ತ ಪದಗಳು. ಇದು ಉಳ್ಳವನು ಎಂಬ ಅರ್ಥವನ್ನು ನೀಡುವ ಈ ಪ್ರತ್ಯಯವು ಹೊಸ ರಚನೆಗಳ ನಿರ್ಮಾಣದಲ್ಲಿ ಸಹಕಾರಿಯಾಗಿದೆ. ಉದಾಹರಣೆಗೆ: ಅಕ್ಷರವಂತ, ಮಾನವಂತ. ವೀರ್ಯವಂತ.

೭. ಕನ್ನಡದಲ್ಲಿ ನಾಮಪದಯುಕ್ತ ಪದಗಳಿಂದ ನಾಮ ಪದಗಳನ್ನು ಸಾಧಿಸಲು ಕೆಲವು ಪ್ರತ್ಯಯಗಳು ಬಳಕೆಯಲ್ಲಿವೆ. ಸಂಸ್ಕೃತದ ‘ಕಾರ’ ಪ್ರತ್ಯಯವು ಕನ್ನಡದಲ್ಲಿ ‘ಗಾರ’ ಎಂಬ ಪ್ರತ್ಯಯ ಹೊಂದಿರುವ ಹಲವಾರು ಪ್ರತ್ಯಯಯುಕ್ತ ನಾಮಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಉದಾಹರಣೆಗೆ : ಗಾಡಿಗಾರ, ಹೊಗೆಗಾರ, ಸಸ್ಯಾಗಾರ, ಜಗಳಗಾರ, ಪ್ರಾಸಗಾರ, ಆಚರಣೆಗಾರ.

೮. ನಾಮಪದಗಳ ಕೊನೆ ಪರಿಸರದಲ್ಲಿ ‘ಇ’ ಮತ್ತು ‘ಅ’ ಎಂಬೆರಡು ಪ್ರತ್ಯಯಗಳು ಬಂದು ಕೆಲವು ನಾಮಪದಗಳನ್ನು ಸಾಧಿಸಲು ಸಹಾಯಕವಾಗಿವೆ. ಉದಾಹರಣೆಗೆ : ಉದ್ಧಾಟಕ – ಉದ್ಘಾಟಕಿ, ಗಲಭೆಕೋರೊ- ಗಲಭೆಕೋರಿ, ಲಂಚಕೋರ- ಲಂಚಕೋರಿ ಹೀಗೆ ಲಿಂಗ ಭೇದವನ್ನು ಉಂಟುಮಾಡುವ ಕೆಲವಾರು ಪ್ರತ್ಯಯಗಳು ಕನ್ನಡದಲ್ಲಿವೆ. -‘ಗಾರ’ ಪ್ರತ್ಯಯ ಯುಕ್ತ ಪದಗಳು ಪುರುಷವಾಚಕವನ್ನು ಸೂಚಿಸಿದರೆ, ‘\â ಪ್ರತ್ಯಯ ಸ್ತ್ರೀಸೂಚಕ ಪದಗಳನ್ನು ಸೂಚಿಸುತ್ತದೆ. ಉದಾ: ತಪ್ಪುಗಾರ-ತಪ್ಪುಗಾರ್ತಿ. ಉಡುಪುಗಾರ-ಉಡುಪುಗಾರ್ತಿ, ಪ್ರಚಾರಕಾರ-ಪ್ರಚಾರಕಾರ್ತಿ, ಕಣೀರುಗಾರ – ಕಣೀರುಗಾರ್ತಿ, ಬಿಚ್ಚುಗಾರ-ಬಿಚ್ಚುಗಾರ್ತಿ.

೯. ಕನ್ನಡದಲ್ಲಿ ವಸ್ತು, ವಿಷಯ, ಸ್ಥಳ ಸೂಚಿಸುವ ನಾಮಪದಗಳಿಗೆ ‘ಇಗ’ ಪ್ರತ್ಯಯ ಹಚ್ಚಿ ನಾಮಪದಗಳನ್ನು ಸಾಧಿಸಬಹುದು. ಉದಾ : ಬ್ಯಾಟು-ಬ್ಯಾಟಿಗ, ಕುಶಲ-ಕುಶಲಿಗ, ಬೌಲರ್ -ಬೌಲರಿಗ, ನಗರ-ನಗರಿಗ, ಹೋಟೆಲ್ -ಹೋಟೆಲಿಗ, ಟಿಪ್ಪಣಿ-ಟಿಪ್ಪಣಿಗ, ಗ್ರಾಮೀಣ-ಗ್ರಾಮೀಣಿಗ.

೧೦. ಹೊಸ ರಚನೆಗಳಲ್ಲಿ ವ್ಯಕ್ತಿಯ ಗುಣವಿಶೇಷಣ. ಸೂಚಕ ಪದಗಳಿಗೆ -‘ತನ’ ಪ್ರತ್ಯಯವನ್ನು ಹಚ್ಚಿ ನಾಮಪದಗಳನ್ನು ಸಾಧಿಸಬಹುದಾಗಿದೆ. ಉದಾಹರಣೆಗೆ : ತಂದೆ-ತಂದೆತನ, ದಲ್ಲಾಳಿ-ದಲ್ಲಾಳಿತನ, ಜವಾರಿ-ಜವಾರಿತನ, ಮೂಡಿ – ಮೂಡಿತನ, ನಕಲಿ – ನಕಲಿತನ

೧೧. ಕನ್ನಡದಲ್ಲಿ ವಿಶೇಷಣಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸಿ ಕೆಲವು ನಾಮಪದಗಳನ್ನು ಸಾಧಿಸಬಹುದು. ಮನುಷ್ಯರಲ್ಲಿ ದೈಹಿಕವಾಗಿ ಕಂಡುಬರುವ ಕೆಲವು ಗುಣಲಕ್ಷಣಗಳ ಆಧಾರಿತ ಪದಗಳಿಗೆ ‘ಅ’ ಮತ್ತು ‘ಇ’ ಕಾರಾಂತ ಪ್ರತ್ಯಯಗಳನ್ನು ಹಚ್ಚಿ ನಾಮಪದಗಳನ್ನು ಸಾಧಿಸಲು ಸಾಧ್ಯವಿದೆ. ಉದಾ : ದಾರಿದೀಪ – ದಾರಿದೀಪಕ – ದಾರಿದೀಪಕಿ, ಪ್ರೋತ್ಸಾಹ – ಪ್ರೋತ್ಸಾಹಕ – ಪ್ರೋತ್ಸಾಹಕಿ ಹಠವಾದ – ಹಠವಾದಿ – ಹಠವಾದಿಣಿ

೧೨. ಕನ್ನಡದಲ್ಲಿ ಣಿ ಪ್ರತ್ಯಯ ಸ್ತ್ರೀಸೂಚಕ ಪ್ರತ್ಯಯವಾಗಿ ಕೆಲಸ ಮಾಡುತ್ತದೆ. ಈ ಪ್ರತ್ಯಯದ ಬಳಕೆಯಿಂದ ಹಲವಾರು ಹೊಸ ರಚನೆಗಳು ಬಳಕೆಯಲ್ಲಿವೆ. ಉದಾಹರಣೆಗೆ : ಸರ್ವಾಧಿಕಾರಿಣಿ, ಜೀನ್ಸ್‌ಧಾರಿಣಿ, ಬಾಸಿಣೆ, ಪೂಜಾರಿಣಿ, ಹಿತೈಷಿಣಿ, ಮಾಲೀಕಣಿ, ಕೊಲೆಗಾರಿಣಿ, ಛತ್ರಿಧಾರಿಣಿ, ಬಾಂಬಿಣಿ.

೧೩. ‘ಈಕರಣ’ ಪ್ರತ್ಯಯಯುಕ್ತ ಪದಗಳು:ಕನ್ನಡ ಭಾಷೆ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದೆ. ಸಮೂಹ ಮಾಧ್ಯಮಗಳಲ್ಲಿ ಹೊಸ ಹೊಸ ಪದಗಳು ಪ್ರಯೋಗ ಪಡೆದುಕೊಳ್ಳುತ್ತಿವೆ. ಇತ್ತೀಚನ ದಿನಗಳಲ್ಲಿ ಕನ್ನಡದಲ್ಲಿ ಹೇರಳವಾಗಿ ಬಳಕೆಯಾಗುತ್ತಿರುವ ಆಂಗ್ಲ ಭಾಷೆಯ Ization/isation, ಸಂವಾದಿಯಾಗಿ ಈಕರಣ/ಕರಣ ಪ್ರತ್ಯಯ ವಸ್ತು, ವ್ಯಕ್ತಿ, ಪ್ರದೇಶ, ಧರ್ಮ ಸೂಚಿತ ಪದಗಳಿಗೆಲ್ಲ ಹತ್ತುವುದು ಗೊತ್ತಿರುವ ವಿಚಾರವೆ. ಇದು ಹೊಸ ಪದರಚನೆಗೆ ಪ್ರಮುಖವಾದ ಆಕರವಾಗಿದೆ. ಉದಾಹರಣೆಗೆ : ಅಮೆರಿಕೀಕರಣ, ಪ್ರೀತೀಕರಣ, ಅರಣೀಕರಣ, ಮ್ಯಾಕ್ ಡೊನಾಲ್ಡೀಕರಣ, ಗ್ಯಾಸೀಕರಣ, ಬಿಹಾರೀಕರಣ, ಕ್ರೈಸ್ತೀಕರಣ, ಉಪೇಂದ್ರೀಕರಣ.

೧೪. ‘ಉತ್ಸವ’ಯಕ್ತ ಪದಗಳು : ‘ಉತ್ಸವ’ ರಚನೆ ಪ್ರತ್ಯೇಕವಾಗಿ ಬಳಕೆಯಾಗುವುದರಿಂದ ಹೊಸರಚನೆ ನಿರ್ಮಾಣ ಸಾಧ್ಯವಿಲ್ಲ. ಅದು ಮತ್ತೊಂದರ ಜತೆ ಸೇರಿ ಸಂಸ್ಕೃತದ ಗುಣ ಸಂಧಿ ನಿಯಮದಲ್ಲಿ ಹೆಚ್ಚು ಬಳಕೆಯಲ್ಲಿದೆ. ವಿಶೇಷ ಎಂದರೆ ಮೊದಲನೆ ಪದ ಕನ್ನಡವಾಗಿದ್ದು; ಅದಕ್ಕೆ ‘ಉತ್ಸವ’ ಸೇರಿಕೊಂಡು ಸಂಸ್ಕೃತದ ಗುಣ ಸಂಧಿ ನಿಯಮದಲ್ಲಿ ರಚನೆ ಆಗುತ್ತಿರುವುದೇ ಹೆಚ್ಚಾಗಿದೆ. ಉದಾಹರಣೆಗೆ : ಬಿಸಿನೆಸ್ತೋತ್ಸವ, ನಾಯೋತ್ಸವ, ಚುಂಬನೋತ್ಸವ, ಕ್ರಿಕೆಟೋತ್ಸವ.

೧೫.‘ಆಯಣ’ ಪ್ರತ್ಯಯುಕ್ತ ಪದಗಳು : ಹಾಸ್ಯದ ಸಂದರ್ಭ, ಲಘು ಹರಟೆಗಳಲ್ಲಿ ‘ಆಯಣ’ ರಚನೆ ಸೇರಿ ಹೊಸ ಪದರಚನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಂದರೆ ದೀರ್ಘವಾದ ಕತೆ, ಚರಿತ್ರೆ ಎಂದು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ‘ರಾಮಾಯಣ’ ಮಾದರಿಯಲ್ಲಿ ರಚನೆ ಆಗುತ್ತಿದ್ದರೂ, ಅರ್ಥದಲ್ಲಿ ಹೊಸ ರಚನೆ ವಿಶಿಷ್ಟವಾಗಿದೆ. ಉದಾಹರಣೆಗೆ : ದೇವೇಗೌಡಾಯಣ, ರಾಜ್ಯಾಯಣ, ಸಿಂಗಾಯಣ, ಮೂಗಾಯಣ, ಸೀನಾಯಣ, ಸಿನಿಮಾಯಣ.

೧೬. ‘ಉಪಚಾರ’ ಯುಕ್ತ ಪದಗಳು : ‘ಉಪಚಾರ’ ರಚನೆ ಪ್ರತ್ಯೇಕವಾಗಿ ಬಳಕೆಯಾಗು ವುದರಿಂದ ಹೊಸ ರಚನೆ ಸಾಧ್ಯವಿಲ್ಲ. ಅದು ಮತ್ತೊಂದರ ಜತೆ ಸೇರಿ ಸಂಸ್ಕೃತದ ಗುಣ ಸಂಧಿನಿಯಮದಲ್ಲಿ ಹೆಚ್ಚು ಬಳಕೆಯಲ್ಲಿದೆ. ವಿಶೇಷ ಎಂದರೆ ಮೊದಲನೆ ಪದ ಕನ್ನಡವಾಗಿದ್ದರೂ, ಅಥವಾ ಸಂಸ್ಕೃತಯೇತರ ಪದವಾಗಿದ್ದರೂ ಸಂಸ್ಕೃತದ ಗುಣ ಸಂಧಿನಿಯಮವನ್ನಿಟ್ಟುಕೊಂಡು ಪದರಚನೆ ಮಾಡಲಾಗುತ್ತಿದೆ. ಉದಾಹರಣೆಗೆ : ನಾಯಕೋಪಚಾರ, ವೈದ್ಯೋಪಚಾರ.

೧೭. ‘ಉತ್ತರ’ ಪದವನ್ನು ಬಳಕೆ ಮಾಡಿ ಅನೇಕ ಹೊಸ ಪದ ರಚನೆ ಮಾಡಲಾಗಿದೆ. ಅಂದರೆ ಇದು ‘ನಂತರ’ ಎನ್ನುವ ಅರ್ಥದಲ್ಲಿ ಬಳಕೆ ಆಗುತ್ತಿದೆ. ಸಂಸ್ಕೃತ ಸಂಧಿ ನಿಯಮದಲ್ಲಿ ಸಂಸ್ಕೃತೇತರ ಪದಗಳಿಗೆ ಬಳಕೆ ಮಾಡಲಾಗಿದೆ. ಉದಾಹರಣೆಗೆ : ಎತ್ತರೋತ್ತರ, ಯುದ್ಧೋತ್ತರ, ಬೋನನೋತ್ತರ, ಮತದಾನೋತ್ತರ, ದೃಶೋತ್ತರ, ನ್ಯಾಕೋತ್ತರ.

೧೮. -ಕೋರ/ಖೋರ ಯುಕ್ತ ಪದಗಳು : ಈ ಪ್ರತ್ಯಯ ಪರ್ಸೋ ಅರೆಬಿಕ್ ಮೂಲದ್ದು. ಆದರೆ ಇದು ಹೊಸ ರಚನೆಗಳಲ್ಲಿ ಬೇರೆ ಬೇರೆ ಪದಗಳಿಗೆಲ್ಲ ಸೇರಿಸಿ ಬಳಕೆ ಮಾಡಲಾಗುತ್ತದೆ. ಮೂಲತಃ ಇದು ಹೀನಾರ್ಥವನ್ನು ಸೂಚಿಸಲು ಈ ಪ್ರತ್ಯಯವನ್ನು ಬಳಕೆಮಾಡಲಾಗುತ್ತದೆ.ಉದಾಹರಣೆಗೆ : ಲಾಬಿಕೋರ, ಲಾಭಕೋರ, ವಸೂಲಿ ಕೋರ, ಲಾಟರಿಕೋರ, ನಸುಳುಕೋರ, ಸಿನಿಮಾಕೋರ, ಕದನಕೋರ ಇತ್ಯಾದಿ.

೧೯. ಇತರ ಯುಕ್ತ ಪದಗಳು : ನನ್ ಅಥವಾ ನಾನ್ ಪದಕ್ಕೆ ಸಂವಾದಿಯಾಗಿ ‘ಇತರ’ ರಚನೆಯನ್ನು ಬಳಕೆ ಮಾಡಲಾಗುತ್ತಿದೆ. ಕೆಲವರು ಈ ರಚನೆಯನ್ನು ‘ಏತರ’ ಎದು ಸಹ ವರ್ಗೀಕರಿಸುತ್ತಾರೆ. ‘ಇತರ’ ಯುಕ್ತ ಪದಗಳು ಹೊಸ ರಚನೆಗಳಲ್ಲಿ ತುಂಬ ಕಡಿಮೆ.ಉದಾಹರಣೆಗೆ:‘ಮತೇತರ’, ‘ನಾನ್‌ಕನ್ನಡಿಗಾಸ್’ಎಂಬುದನ್ನು ‘ಕನ್ನಡೇತರ’ ಎಂದು ಬಳಕೆ ಮಾಡುವುದು ರೂಢಿ. ‘ಕನ್ನಡೇತರ’ ರಚನೆಯಲ್ಲಿ ಎರಡನೆ ಭಾಗದಲ್ಲಿರುವುದು ‘ಇತರ’ ಅಥವಾ ‘ಏತರ’ ಇವೆರಡರಲ್ಲಿ ಯಾವ ರೂಪ ಇದೆ ಎಂಬುದು ಗೊಂದಲ. ವಾಸ್ತವಾಗಿ ಕನ್ನಡ ಮತ್ತು ಇತರ ಎಂದು ವರ್ಗೀಕರಿಸುವುದು ಸರಿ. ಇದರ ಅರ್ಥ ಕನ್ನಡವಲ್ಲದ ಎಂದು.

೨೦. ‘ತ್ವ’ ಯುಕ್ತ ಪದಗಳು : ವಸ್ತು, ವಿಷಯ, ವ್ಯಕ್ತಿಯ ಮಹತ್ವ ಮತ್ತು ಸ್ಥಿತಿಯನ್ನು ಹೇಳುವಾಗ ತ್ವ ಪ್ರಯವನ್ನು ಹಚ್ಚಲಾಗುವುದು. ಇದು ಕೆಲವೊಮ್ಮೆ -ತನ ಪ್ರತ್ಯಯಕ್ಕಿಂತ ವಿಶೇಷವಾದ ಅರ್ಥವನ್ನು ಕೊಡುವುದಿಲ್ಲ. ಉದಾಹರಣೆಗೆ : ಬುದ್ಧತ್ವ, ಲಿಂಗತ್ವ, ದಲಿತತ್ವ, ಹಿಂದೂತ್ವ, ಹೆಣ್ಣತ್ವ, ಸ್ತ್ರೀತ್ವ, ಕುರ್ಚಿತ್ವ ಇತ್ಯಾದಿ.

೨೧. ಇತ್ತಿಚೀನ ದಿನಗಳಲ್ಲಿ ಮಹಿಳಾ ಪರಚಿಂತನೆ ಚಳವಳಿಗಳ ಪ್ರಭಾವದಿಂದ ಪುರುಷ ಕೇಂದ್ರೀತ ಪದಗಳೆಲ್ಲ ಸ್ತ್ರೀಕೇಂದ್ರಿತ ಪದಗಳಾಗಿ ಬದಲಾಗುತ್ತಿವೆ. ಈ ಪ್ರಕ್ರಿಯೆ ಎಷ್ಟರಮಟ್ಟಿಗೆ ಎಂದರೆ ಪದಗಳೆಲ್ಲವು ಪುರುಷ ಕೇಂದ್ರೀತ ಪದಗಳೆಂದು ತಿಳಿದು ಅಂತಹವುಗಳನ್ನೆಲ್ಲ ಸ್ತ್ರೀ ಕೇಂದ್ರೀತ ಪದಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಉದಾಹರಣೆಗೆ : ಸರ್ವಾಧಿಕಾರಿ, ಸ್ಟಾರ್, ಮೇಯರ್ ಮುಂತಾದ ಸ್ಥಾನಗಳಲ್ಲಿರುವವರು ಹೆಣ್ಣು ಮತ್ತು ಗಂಡು ಇಬ್ಬರು ಆಗಿರಬಹುದು. ಆದರೆ ಬಳಕೆ ಮಾಡುವವರು ಉದ್ದೇಶಪೂರ್ವಕವಾಗಿ ಈ ಪದಗಳೆಲ್ಲವನ್ನು ಪುರುಷ ಕೇಂದ್ರಿತ ಪದಗಳೆಂದು ತಿಳಿದು ಸರ್ವಾಧಿಕಾರಿಣಿ, ಛತ್ರಿಧಾರಿಣಿ, ತ್ಯಾಗಿಣಿ ಎಂದು ಬಳಕೆ ಮಾಡಲಾಗಿದೆ. ಈ ಮಾದರಿ ಪದಗಳನ್ನು ಇನ್ನು ಪಟ್ಟಿ ಮಾಡಬಹುದು. ನಮ್ಮ ಉದ್ದೇಶಕ್ಕೆ ಇಷ್ಟು ಸಾಕು. ಇಂತಹ ಸ್ತ್ರೀಕೇಂದ್ರೀತ ಪದಗಳ ಬಳಕೆ ಕೇವಲ ಕನ್ನಡ ಪದಗಳಿಗೆ ಸೀಮಿತವಾಗದೆ ಕನ್ನಡೇತರ ಪದಗಳಿಗೂ ಸ್ತ್ರೀಸೂಚಕ ಪ್ರತ್ಯಯಗಳಾದ -ಣಿ, -ಇ, -ಎ ಗಳನ್ನು ಹತ್ತಿಸಿ ಹೊಸ ರಚನೆಗಳನ್ನು ಪ್ರಯೋಗ ಮಾಡಲಾಗುತ್ತಿದೆ. ಉದಾ. ಸ್ಟಾರಿಣಿ, ಮೇರಿಣಿ, ಬಾಸಿಣಿ ಇದರಿಂದ ಸ್ತ್ರೀಕೇಂದ್ರಿತ ಪದಗಳ ಸಂಖ್ಯೆ ದಿನದಿನೆ ಹೆಚ್ಚಾಗುತ್ತಿದೆ.

ಕನ್ನಡದಲ್ಲಿ ಸಂಧಿಕಾರ್ಯವನ್ನು ವಿವರಿಸುವಾಗ ಅಧ್ಯಯನದ ಅನುಕೂಲಕ್ಕಾಗಿ ಕನ್ನಡದ ಸಂಧಿಗಳು, ಸಂಸ್ಕೃತ ಸಂಧಿಗಳೆಂದು ಎರಡು ವರ್ಗಗಳಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಕನ್ನಡ ಮತ್ತು ಕನ್ನಡ ಪದಗಳು ಸೇರಿ ಆಗುವ ಸಂಧಿಕಾರ್ಯಕ್ಕೆ ಕನ್ನಡ ಸಂಧಿಕಾರ್ಯ ಎಂದು ಹೆಸರು. ಸಂಸ್ಕೃತ ಮತ್ತು ಸಂಸ್ಕೃತ ಪದಗಳು ಸೇರಿಕೊಂಡು ಆಗುವ ಸಂಧಿಕಾರ್ಯಕ್ಕೆ ಸಂಸ್ಕೃತ ಸಂಧಿಕಾರ್ಯ ಎಂದು ಹೆಸರು. ಆದರೆ ಹೊಸರಚನೆಗಳನ್ನು ರಚಿಸುವಾಗ  ನಿಗದಿತ ಸಂಧಿನಿಯಮಗಳನ್ನು ಮೀರಿ ಹೊಸರಚನೆಗಳನ್ನು ಮಾಡಲಾಗುತ್ತಿದೆ. ಅಂತಹವುಗಳಲ್ಲಿ ಮೊದಲನೆಯ ಪದ ಸಂಸ್ಕೃತವಾಗಿದ್ದು; ಎರಡನೆಯ ಪದ ಕನ್ನಡವಾಗಿರುವುದು ಮತ್ತೊಂದು ವಿಧ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಈ ರೀತಿ ಎರಡು ಬೇರೆ ಬೇರೆ ಭಾಷೆಯ ಮಾದರಿಗಳು ಸೇರಿಕೊಂಡು ಆಗುತ್ತಿರುವ ರಚನೆಗಳನ್ನು ಯಾವ ಭಾಷೆಯ (ಸಂಸ್ಕೃತ ಅಥವಾ ಕನ್ನಡ) ಮಾದರಿಯ ಸಂಧಿ ನಿಯಮವೆಂದು ವಿವರಿಸುವುದು? ಬಳಕೆಯ ನೆಲೆಯಲ್ಲಿ ನೋಡಿದರೆ ಸಂವಹನಕ್ಕೆ ಯಾವುದೇ ಬಗೆಯ ತೊಂದರೆಯು ಆಗುವುದಿಲ್ಲ. ಆದರೆ ರಚನೆಯ ದೃಷ್ಟಿಯಿಂದ ನೋಡಿದರೆ ಇಂತಹ ಮಾದರಿಗಳನ್ನು ಅಧ್ಯಯನಕ್ಕೆ ಒಳಪಡಿಸುವ ಬಗೆ ಹೇಗೆ? ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. ಇಂತಹ ರಚನೆಗಳನ್ನು ಕುರಿತು ಡಾ. ಕೆ.ವಿ.ನಾರಾಯಣ ಅವರು ದಿನದಿನ-೧ರಲ್ಲಿ ಇವುಗಳನ್ನು ಇದು ಕನ್ನಡ ಸಂಧಿ ಇದು ಸಂಸ್ಕೃತದ ಸಂಧಿ ಎಂದು ವಿವರಿಸುವುದಕ್ಕಿಂತ ‘ಊಟೋಪಚಾರ’ ಪದವು ‘ರಾಜೋಪಚಾರ’ದ ಮಾದರಿಯಲ್ಲಿ ರಚನೆಯಾಗಿದೆ ಎಂದು ವಿವರಿಸಿದರೆ ಸಾಕು ಎಂದು ಅಭಿಪ್ರಾಯಪಡುತ್ತಾರೆ.

ಹೊಸ ಪದ ರಚನೆಗಳಲ್ಲಿ ಸಂಧಿ ನಿಯಮ ಕನ್ನಡ ಮತ್ತು ಸಂಸ್ಕೃತದ ಸಂಧಿ ನಿಯಮಕ್ಕನುಗುಣವಾಗಿ ಬದಲಾಗದೆ; ಹೆಚ್ಚಾಗಿ ಒಂದರ ಸಾದೃಶ್ಯತೆಯಿಂದ ನಿರ್ಮಾಣವಾಗುತ್ತಿವೆ. ಉದಾಹರಣೆಗೆ : ಮೊದಲನೆ ಪದ ಕನ್ನಡವಾಗಿದ್ದು; ಎರಡನೆ ಪದ ಸಂಸ್ಕೃತವಾಗಿರುವ ಪದರಚನೆಗಳು ಇವೆ. ಉದಾ : ಆಟೋಪಕರಣ, ಕಾಟಾಚಾರಣೆ, ಲಂಚಾಚಾರ, ಮಳೆಗಾಲೋತ್ಸವ ಇತ್ಯಾದಿ. ಮೊದಲನೆ ಪದ ಸಂಸ್ಕೃತವಾಗಿದ್ದು; ಎರಡನೆ ಪದ ಕನ್ನಡವಾಗಿರುವ ಪದರಚನೆಗಳು ಇವೆ. ಉದಾ : ನಭೋನೋಟ, ಲೀಲಾಟ ಇತ್ಯಾದಿ. ಮೊದಲನೆ ಪದ ಪರ್ಸೋ ಅರೇಬಿಕ್ ಆಗಿದ್ದು. ಎರಡನೆ ಪದ ಸಂಸ್ಕೃತವಾಗಿರುವ ಪದರಚನೆಗಳು ಕೂಡ ಬಳಕೆಯಾಗಿವೆ. ಉದಾ : ಕಾನೂನೋಲಂಘನೆ, ಹಾಗೆಯೇ ಮೊದಲನೆ ಪದ ಇಂಗ್ಲಿಶ್ ರಚನೆಯಿದ್ದು; ಎರಡನೆ ಪದ ಸಂಸ್ಕೃತವಾಗಿರುವ ಪದರಚನೆಗಳು ಇವೆ. ಉದಾ : ಗ್ಯಾಟೋತ್ತರ.

ಮೊದಲನೆ ಪದ ಕನ್ನಡವಾಗಿದ್ದು; ಎರಡನೆ ಪದ ಹಿಂದಿಯಾಗಿರುವ ಪದ ರಚನೆ ಆಗಿವೆ. ಉದಾ : ಸ್ನಾನೋಪರಾಂತ ಮುಂತಾದ ಪದ ರಚನೆಗಳನ್ನು ಗಮನಿಸಿದಾಗ ಸಂಧಿ ನಿಯಮಗಳ ಅನ್ವಯ ಎರಡು ಪದಗಳಲ್ಲಿ ಒಂದು ಕನ್ನಡ ಪದವಾಗಿದ್ದು; ಮತ್ತೊಂದು (ಸಂಸ್ಕೃತ, ಪರ್ಸೋ ಅರೇಬಿಕ್, ಇಂಗ್ಲಿಶ್, ಹಿಂದಿ) ಬೇರೆ ಭಾಷೆಯ ಪದವಾಗಿದ್ದರೆ ಆಗ ಯಾವ ಸಂಧಿ ನಿಯಮವನ್ನು ಅನುಸರಿಸಿ ವಿಶ್ಲೇಷಣೆಗೆ ಒಳಪಡಿಸುವುದು? ಡಿ.ಎನ್. ಶಂಕರಭಟ್ಟರು ಇಂತಹ ಹೊಸರಚನೆಗಳನ್ನು ಗಮನಿಸಿ ಕನ್ನಡದಲ್ಲಿ ಸಂಧಿಕಾರ್ಯ ವಿವರಿಸುವಾಗ ಸಂಸ್ಕೃತ ರಚನೆಗಳಿಗೆ ಒತ್ತು ಕೊಟ್ಟಿರುವ ಮಾದರಿಯಲ್ಲೆ, ಕನ್ನಡದಲ್ಲಿರುವ ಬೇರೆ ಬೇರೆ ಭಾಷೆಗಳ ರಚನೆಗಳಿಗೂ ಒತ್ತು ನೀಡಬೇಕಾಗಿದೆ ಎಂದಿದ್ದಾರೆ. ಮುಂದುವರಿದು ಅವರು ಕನ್ನಡದಲ್ಲಿರುವ ಯಾವುದೇ ಭಾಷೆಯ ರಚನೆಗಳನ್ನು ಕನ್ನಡದ ಲೋಪ, ಆಗಮ ಮತ್ತು ಆದೇಶ ಎಂಬ ಮೂರೇ ಸಂಧಿಗಳಲ್ಲಿ ವಿವರಿಸಲು ಸಾಧ್ಯ ಎಂದಿದ್ದಾರೆ.

ಒಟ್ಟಾರೆ ಹೊಸ ಹೊಸ ರಚನೆಗಳು ಒಂದು ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳ ಸಾಮ್ಯತೆಯ ಮೇಲೆ ಹೊಸ ಪದಗಳನ್ನು ಸೃಷ್ಟಿಸಿ ಬಳಕೆ ಮಾಡಲಾಗುವುದು. ಕೆಲವು ಸಂದರ್ಭದಲ್ಲಿ ಹೊಸ ರಚನೆಗಳು ಹಾಸ್ಯ ವಿನೋದಗಳಿಗೋಸ್ಕರ ಬಳಕೆ ಮಾಡಿದರೂ ಕಾಲಕ್ರಮದಲ್ಲಿ ಸಮ್ಮತವಾಗಬಹುದು. ಕೆಲವು ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ತಲುಪದೆ ಬಳಕೆಯಿಂದ ತಪ್ಪಬಹುದು. ಹೀಗೆ ಹೊಸ ರಚನೆಗಳು ಸೃಷ್ಟಿಯಾಗುವುದಕ್ಕೆ ಹಿಂದಿನ ಪ್ರಯೋಗಗಳು ಆಧಾರವಾಗಿರುವುದರಿಂದ ಈ ಮಾದರಿಯ ನಿರ್ಮಾಣ ಪದಗಳನ್ನು ಸಾದೃಶ್ಯ ಮಾದರಿ ರಚನೆಗಳೆಂದೆ ವರ್ಗೀಕರಿಸಲು ಸಾಧ್ಯ.

ನಿಮ್ಮ ಕೈಯಲ್ಲಿರುವ ಈ ಪದಕಂತೆಯಲ್ಲಿ ೫೭೫ನ್ನು ಈಗ ಸಂಕಲಿಸಿ ದಿನದಿನ ೩ರ ಹೆಸರಿನಲ್ಲಿ ಪ್ರಕಟಿಸುತ್ತಿದ್ದೇವೆ. ಬಳಕೆಯ ನಂತರ ಇದರ ಉಪಯೋಗ ತಿಳಿಯುತ್ತದೆ. ಪದಗಳ ಜತೆ ಆಟ ಆಡಲು, ಪ್ರಸ್ತುತ ವಿದ್ಯಾಮಾನ ಸಂಗತಿಯನ್ನು ಜನ ಸಾಮಾನ್ಯರಿಗೆ ಆಕರ್ಷಕವಾಗಿ ಮುಟ್ಟಿಸಲು ಈ ಮಾದರಿ ಪದಕೋಶ ಪ್ರಯೋಜನಕ್ಕೆ ಬರುತ್ತದೆ. ಪ್ರಸ್ತುತ ಪದಕೋಶವನ್ನು ಅಕಾರಾದಿಯಾಗಿ ಜೋಡಿಸುವುದರ ಜತೆಗೆ, ಹಿನ್ನಿಘಂಟನ್ನು ಕೊಡಲಾಗಿದೆ. ಇದೊಂದು ಹೊಸ ಪ್ರಯೋಗ. ನಮ್ಮ ವಿಭಾಗದಿಂದ ಪ್ರಕಟವಾಗಿರುವ ದಿನದಿನ ೧ರಲ್ಲಿ ಇದನ್ನು ಮಾಡಿ ತೋರಿಸಲಾಗಿದೆ. ಭಾಷಾಧ್ಯಯನ ಮಾಡುವವರಿಗೆ ಸುಲಭವಾಗಿ ಉಪಯೋಗಕ್ಕೆ ಬರಲಿ ಎಂಬ ಕಾರಣದಿಂದ ಈ ಮಾದರಿಯನ್ನು ಅನುಸರಿಸಲಾಗಿದೆ. ಇದೊಂದು ಪದಕಂತೆ. ಸಾಮಾನ್ಯವಾಗಿ ಅಕಾರಾದಿ ಮೊದಲ ಧ್ವನಿಯಿಂದ ಪ್ರಾರಂಭವಾಗುವ ಕ್ರಮಕ್ಕಿಂತ ವಿರುದ್ಧ. ಬದಲು ಪದದ ಅಂತ್ಯ ಧ್ವನಿಯಿಂದ ಪ್ರಾರಂಭವಾಗುತ್ತದೆ. ಅಂದರೆ ಅಕಾರಾದಿಂದ ಕೊನೆಯಾಗುವ ಧ್ವನಿಗಳು, ರಕಾರ, ಣಿಕಾರ, ಈಕರಣ ‘ತ್ವ’, ತನ, ವಂತ, ಉತ್ಸವ ಹೀಗೆ ಕೊನೆಯಾಗುವ ಧ್ವನಿಗಳೆಲ್ಲ ವನ್ನು ಒಂದೇ ಕಡೆ ದಾಖಲಿಸಲಾಗಿದೆ. ಇದರಿಂದ ಪ್ರಯೋಜನ ಇಲ್ಲದೆ ಇಲ್ಲ. ಓದುಗರಿಗೆ ಯಾವ ಮಾದರಿ ಹೊಸ ರಚನೆಗಳು ಹೆಚ್ಚು ಪ್ರಯೋಗ ಆಗಿವೆ; ಆಗುತ್ತಿವೆ ಎಂಬುದು ತಿಳಿಯುತ್ತದೆ. ಜತೆಗೆ ಓದುಗರಿಗೆ ಬೇಕಾದ ಪದಗಳ ವಿವರಣೆಯನ್ನು ಹಿನ್ನಿಘಂಟಿನ ಸಹಾಯದಿಂದ ಸುಲಭವಾಗಿ ಪ್ರವೇಶಿಸಬಹುದು. ಸಾಮಾಜಿಕರು ಇದರ ಪ್ರಯೋಜನ ಪಡೆಯಬಹುದು.

ಪದಸಂಗ್ರಹದಿಂದ ಹಿಡಿದು ವಿಶ್ಲೇಷಣೆ ಹಂತದವರೆಗೂ ಸಲಹೆ ಸೂಚನೆಗಳನ್ನು ನೀಡಿದ ವಿಭಾಗದ ಹಿರಿಯರಾದ ಡಾ. ಕೆ.ವಿ.ನಾರಾಯಣ ಅವರಿಗೆ ವಂದನೆಗಳು. ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರು ಈ ಕೋಶವನ್ನು ಪ್ರಕಟಿಸಲು ಅನುಮತಿ ನೀಡಿ ಅರ್ಥಪೂರ್ಣವಾದ ಮುನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೆ ನನ್ನ ವಂದನೆಗಳು. ತಾವು ಗಮನಿಸಿದ ಪತ್ರಿಕೆಗಳಲ್ಲಿ ಕಂಡದ್ದನ್ನು ಗುರುತು ಮಾಡಿ ಪದ ಸಂಗ್ರಹಕ್ಕೆ ಕಾರಣರಾಗಿರುವ ವಿಭಾಗದ ಮತ್ತೊಬ್ಬ ಹಿರಿಯರಾದ ಡಾ.ಡಿ.ಪಾಂಡುರಂಗಬಾಬು ಅವರಿಗೆ ವಂದನೆಗಳು. ಹಾಗೆಯೇ ನಮ್ಮ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕಕುಮಾರ್ರೆಂಜೀರೆ ಅವರಿಗೆ ಮತ್ತು ವಿಶ್ಲೇಷಣೆ ಯಲ್ಲಿ ಸಹಕರಿಸಿದ ಸಹೋದ್ಯೋಗಿ ಡಾ. ಸಾಂಬಮೂರ್ತಿ ಅವರುಗಳಿಗೆ ವಂದನೆಗಳು.

ಈ ಕೋಶವನ್ನು ಪ್ರಕಟಿಸಲು ಅನುಮತಿ ನೀಡಿದ ಅಧ್ಯಯನಾಂಗದ ನಿರ್ದೇಶಕರಾದ ಡಾ.ಟಿ.ಆರ್ .ಚಂದ್ರಶೇಖರ್ ಅವರಿಗೆ, ಕೋಶವನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ಮಾನ್ಯ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ ವಂದನೆಗಳು. ಇದನ್ನು ಸಿದ್ದಪಡಿಸುವಲ್ಲಿ ಪ್ರತಿಹಂತದಲ್ಲೂ ಸಹಾಯ ಮಾಡಿದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ಬರೆದುಕೊಟ್ಟ ಶ್ರೀ.ಕೆ.ಕೆ.ಮಕಾಳಿಯವರಿಗೆ, ಅಕ್ಷರ ಸಂಯೋಜಿಸಿದ ಶ್ರೀಮತಿ ರಶ್ಮಿಕೃಪಾಶಂಕರ್, ಕಮಲಾಪುರ ಅವರಿಗೆ ಹಾಗೂ ಮುದ್ರಣ ಮಾಡಿದ ಮಿತ್ರರಿಗೆ ನನ್ನ ಕೃತಜ್ಞತೆಗಳು.

ಡಾ.ಪಿ.ಮಹಾದೇವಯ್ಯ