ಬಜಾರಿತನ ನಾ ಕನ್ನಡಪ್ರಭ ಗಯ್ಯಾಳಿ ಗುಣ ಹೊಂದಿರುವ ಸ್ಥಿತಿ. ‘ಬಜಾರಿತನ ಯುವತಿಯರಿಗೆ ಇಷ್ಟ.’ -‘ತನ’ ಪ್ರತ್ಯಯದ ಬಳಕೆ ಗುಣವೊಂದನ್ನು ಹೇಳುತ್ತದೆ. ಮೇಲಿನ ಪ್ರಯೋಗದಲ್ಲಿ ಬಜಾರಿ ಒಂದು ನಾಮಪದ ಅಲ್ಲದೆ ಗುಣವೊಂದರ ಇರುವಿಕೆಯನ್ನು ಸೂಚಿಸುತ್ತದೆ. ಮಾದರಿ : ನೀಚತನ.

ಬಡ್ಡಿಕೋರ ನಾ ಅಗ್ನಿ ಬಡ್ಡಿಯನ್ನು ವಸೂಲಿ ಮಾಡುವವನು. ‘ಬಡ್ಡಿಕೋರ ಶಿಕ್ಷಕರಿಗೆ, ಮೈಗಳ್ಳ ಮೇಷ್ಟ್ರುಗಳ ಕೈಗೆ ಬಿಇಓ ಕಚೇರಿಯ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ.’ -‘ಕೋರ’ ಪ್ರತ್ಯಯವುಳ್ಳ ರೂಪಗಳು ಹೀನಾರ್ಥವನ್ನೇ ಸೂಚಿಸುತ್ತವೆ. ಸಾಮಾನ್ಯವಾಗಿ ಈ ಪ್ರತ್ಯಯವನ್ನು ಪರ್ಸೋ ಅರಾಬಿಕ್ ಮೂಲದ ಪದಗಳಿಗೆ ಹತ್ತಿಸಲಾಗುತ್ತದೆ. ಆದರೆ ಮೇಲಿನ ಪದದಲ್ಲಿ ಕನ್ನಡದ ಪದಕ್ಕೆ ಹತ್ತಿಸಲಾಗಿದೆ.

ಬಯ್ಯೋತ್ಪಾದನೆ ನಾ ತರಂಗ ಬೈಗುಳಗಳ ಹಾವಳಿ ‘ಸಾಧ್ಯವಾದಷ್ಟೂ ಮಟ್ಟಿಗೆ ಬಯ್ಯೋತ್ಪಾದನೆಗೆ ಅಸ್ಪದ ಕೊಡದಿದ್ದರೆ, ಭಯೋತ್ಪಾದನೆಯನ್ನು ನಿರ್ಮೂಲ ಗೊಳಿಸಬಹುದೆಂಬುವುದು ಲೇಖಕರ ಖಾಸಾ ಸಲಹೆ’. ಭಯೋತ್ಪಾದನೆಯ ಮಾದರಿಯಲ್ಲಿ ಈ ಪದ ಸೃಷ್ಟಿ ಆಗಿದೆ.

ಬಳಕೆದಾರವಾದಿ ನಾ ಸುಧಾ ಬಳಕೆದಾರರ ಪರವಾಗಿ ವಾದಿಸುವ ವಕೀಲ. ‘ಬರಹ ಮತ್ತು ಬೋಧನೆಯ ಮುಖಾಂತರ ಬಳಕೆದಾರರಿಗೆ ಮತ್ತು ಬಳಕೆದಾರವಾದಿಗಳಿಗೆ ಉತ್ತಮ ಮಾದರಿಯಾಗಿದ್ದಾರೆ.’ ಇಂಗ್ಲಿಶಿನ ‘consumer Advocates’ ಪದಕ್ಕೆ ಸಂವಾದಿಯಾಗಿ ಬಳಕೆ ಮಾಡಲಾಗಿದೆ.

ಬಾಯಿತನ ಗು ವಿಜಯಕರ್ನಾಟಕ ಇನ್ನೊಬ್ಬರಿಗೆ ಮಾತನಾಡಲು ಅವಕಾಶ ಕೊಡದಂತೆ ಮಾತನಾಡು ವಾದಿಸು. ‘ಈ ಹರಕು ಬಾಯಿತನ ಅವನ ಪ್ಲಸ್ ಪಾಯಿಂಟ್ ಅಂದುಕೊಂಡು ಬಿಟ್ಟಿರುತ್ತಾನೆ.’ ಕನ್ನಡದಲ್ಲಿ ಬಾಯಿಬಡಿ; ಬಾಯಿಬಡಕ ಪದಗಳ ಅರ್ಥಕ್ಕಿಂತ ಭಿನ್ನವಾಗಿ ‘ಬಾಯಿತನ’ ಪದ ಬಳಕೆಯಾಗಿಲ್ಲ. -‘ತನ’ ಪ್ರತ್ಯಯ ಬಳಕೆ ಮಾಡುವುದೆ ಒಂದು ವಿಶೇಷ. -‘ತನ’ ಪ್ರತ್ಯಯದ ಬಳಕೆ ಮತ್ತು ಸ್ಥಿತಿಯನ್ನು ಹೇಳುತ್ತದೆ. ಅಷ್ಟೇ ಬಾಯಿತನ ಅರ್ಥದಲ್ಲೇ ‘ಬಾಯಿಬಲ’ ಬಳಕೆ ಮಾಡಲಾಗಿದೆ.

ಬಾಯುಪಚಾರ ನಾ ಪ್ರಜಾವಾಣಿ ಬಾಯಿಯ ಅಂದರೆ ಮಾತಿನ ಸಂದರ್ಭದಲ್ಲಿ ಮಾಡುವ ಉಪಚಾರ. ‘ಸರ್ಕಾರ ಹೆಚ್ಚು ಶಾರೀರಿಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಭರವಸೆ ನೀಡಿರುವುದಾಗಿ ವರದಿಯಿದೆ. ಇದು ಕೇವಲ ಬಾಯುಪಚಾರವಾಗದೆ ನಿಜಕ್ಕೂ ಜಾರಿಯಲ್ಲಿ ಬರಬೇಕು. ಮಾದರಿ : ಬೀಜೋಪಚಾರ. ವ್ಯವಸಾಯೋಪಚಾರ.

ಬಾಲಿಗ ನಾ ವಿಜಯಕರ್ನಾಟಕ ಕ್ರಿಕೇಟ್ ಆಟದಲ್ಲಿ ಚೆಂಡನ್ನು ಹಾಕುವವನು. ‘ಬೌಲರ್ ಇವನನ್ನು ಬಾಲಿಗ ಎಂದರೆ ಹೇಗೆ? ಮತ್ತು ಬ್ಯಾಟ್ಸ್ ಮನ್ (ಬ್ಯಾಟಿಗ ಎನ್ನುವ ನನಗೆ) ಇಬ್ಬರೂ ಸಹ ಅನವಶ್ಯಕ ಅವಸರವಿಲ್ಲದೆ ತಮ್ಮ ತಮ್ಮ ಪ್ರತಿಭೆಯನ್ನು ಅರಳಿಸಬಹುದು’. -‘ಇಗ’ ಪುರಷವಾಚಿ ನಾಮರೂಪ ಸಾಧಕವನ್ನು ಎಲ್ಲ ಭಾಷೆಯ ಪದಗಳಿಗೂ ಹಚ್ಚುವುದು ಈಚೆಗೆ ಬಳಕೆಯಾಗುತ್ತಿದೆ. ಮಾದರಿ : ವೋಟಿಗ, ಸ್ಪಿನ್ನಿಗ, ಪುಟ್ಬಾಲಿಗ.

ಬಾಂಬಿಣಿ ನಾ ಪ್ರಜಾವಾಣಿ ಬಾಂಬು ಹೊಂದಿರುವವಳು. ‘ಮಲ್ಲಿಕಾ ಶೆರಾವತ್ ಎಂಬ ಬಾಲಿವುಡ್‌ನ ಹೊಸ ಸೆಕ್ಸ್ ಬಾಂಬಿಣಿ ನೇರವಾಗಿ ಶಾಂಘೈ… ಹೊಟ್ಟಿ ಎರಿಸಿಕೊಳ್ಳುತ್ತಿದ್ದಾಳಂತಲ್ಲ.’ ಕನ್ನಡದಲ್ಲಿ ದಾರ-ಗಾರ ಪ್ರತ್ಯಯಗಳು ಪುರುಷವಾಚಕ ಪ್ರತ್ಯಯಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಬಾಂಬ್ ಇಂಗ್ಲಿಶ್ ಪದಕ್ಕೆ ‘ಣಿ’ ಸ್ತ್ರೀಸೂಚಕ ಪ್ರತ್ಯಯ ಸೇರಿಸಿ ಬಳಕೆ ಮಾಡಲಾಗಿದೆ. ಮಾದರಿ : ಪೋಲೀಸಿಣಿ.

ಬಾಣಾಘಾತ ನಾ ಪ್ರಜಾವಾಣಿ ಬಾಣದಿಂದಾಗುವ ತೊಂದರೆ. ‘ಬೇಟೆಗೆಂದು ಬೆನ್ನಟ್ಟಿ ಬಂದ ಅರ್ಜುನನ ಬಾಣಾಘಾತಕ್ಕೆ ಹೆದರಿ ಕಲ್ಲಾಗಿಯೇ…’ ‘ಹೃದಯಾಘಾತ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಬಾಲನಾಯಕ ನಾ ಸುಧಾ ಹುಡುಗ ನಟನಾಗಿರುವುದು. ‘ಬಾಲನಾಯಕ-ಬಾಲಗಾಯಕ ಕನ್ನಡದಲ್ಲಿ ನಟನಿಗೆ ಸಮನಾರ್ಥಕವಾಗಿ ‘ನಾಯಕ’ ಪದ ಬಳಕೆಯಲ್ಲಿದೆ’. ಈಗಾಗಲೇ ‘ಬಾಲನಟ’ ಪದ ಬಳಕೆಯಾಗಿದೆ. ಬಾಲನಾಯಕ ಬಳಕೆಯಾ ದಂತಿಲ್ಲ. ಅದೇ ರೀತಿ ಬಾಲಗಾಯಕ.

ಬಾಲಕಳ್ಳ ನಾ ಕನ್ನಡಪ್ರಭ ಕಿರುವಯಸ್ಸಿನ ಕಳ್ಳ. ‘೨೦೦ ಕಾರುಗಳನ್ನು ಕದ್ದ ಬಾಲಗಳ್ಳರು’ ಸಾಮಾನ್ಯವಾಗಿ ವಯಸ್ಸಿನ ತಾರತಮ್ಯವಿಲ್ಲದೆ ಕಳ್ಳರು’ ಎಂದು ಬಳಕೆ ಮಾಡುವುದು ಸರಿಯಾದ ಕ್ರಮ. ಇಲ್ಲಿ ವಯಸ್ಸನ್ನು ಆಧಾರಿಸಿ ಬಾಲಗಳ್ಳರು ಎಂದು ಬಳಕೆ ಮಾಡಿರುವುದು ಅರ್ಥದಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಎಳೆ ವಯಸ್ಸಿನ ಮಕ್ಕಳು ಕಳ್ಳತನಕ್ಕೆ ಇಳಿದಿದ್ದಾರೆ ಎನ್ನುವುದು ಆಶ್ಚರ್ಯ.

ಬಾಲಾಪಾರಾದಿ ನಾ ಕನ್ನಡಪ್ರಭ ಅಪರಾಧಿ ಸ್ಥಾನದಲ್ಲಿರುವ ಹುಡುಗ.‘ಅಪ್ರಾಪ್ತ ವಯಸ್ಸಿನ ಬಾಲಕ ಅಥವಾ ಬಾಲಕಿಯರು ಅಪರಾಧವೆಸಗಿದರೆ ಅವರನ್ನು ಬಾಲಾಪಾರಾಧಿಗಳು ಎಂದು ಕರೆಯುವುದು ಸಮಂಜಸವಲ್ಲ’. ವಯಸ್ಸಿನ ತಾರತಮ್ಯವಿಲ್ಲದೆ ‘ಅಪರಾಧಿ’ ಪದ ಬಳಕೆಯಲ್ಲಿದೆ. ಮಕ್ಕಳು ಅಪರಾಧ ಮಾಡಿರುವುದರಿಂದ ಬಾಲಾಪರಾಧಿ ಎಂದು ಬಳಕೆ ಮಾಡಲಾಗಿದೆ. ಅದೇ ರೀತಿ ಬಾಲಾರೋಪಿ.

ಬಾಸಿಣಿ ನಾ ಲಂಕೇಶ್ಪತ್ರಿಕೆ ಮುಖ್ಯಸ್ಥೆ, ನಾಯಕಿ, ‘ರಿಜಾಸ್ಟ್ಯಾರ್ ಗುರು ಮಾಧವರಾವ್ ಮತ್ತವನ ಅನಧಿಕೃತ ‘ಬಾಸಿಣಿ’ ಕಲ್ಪನಮ್ಮನ ಅಂದಾರುಂಧಿ ಆಡಳಿತದಿಂದ ಮಾಹೆಯ ನೌಕರರು ಅನ್ಯಾಯ ಹಿಂಸೆಗೆ ತುತ್ತಾಗಿ ಒದ್ದಾಡುತ್ತಿದ್ದಾರೆ.’ ಇಂಗ್ಲಿಶ್ ‘ಬಾಸ್’ ಎಂಬ ಪದ ಪುರುಷ ಮತ್ತು ಸ್ತ್ರೀ ರೂಪಗಳೆರಡರಲ್ಲೂ ಬಳಕೆಯಲ್ಲಿತ್ತು. ಸಾಮಾನ್ಯವಾಗಿ ಪುರುಷರೇ ಮುಖಂಡರಾಗಿ ಇರುತ್ತಿದ್ದು ದರಿಂದ ಸ್ತ್ರೀವಾಚಕ ಶಬ್ದ ಬಂದಿರಲಿಲ್ಲ. ಈಗ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬಂದಿರುವ ಪದ ಇದಾಗಿದೆ.

ಬಿಚ್ಚಪ್ಪ ನಾ ಪ್ರಜಾವಾಣಿ ಅಂಗಾಂಗ ಪ್ರದರ್ಶಿಸುವವ. ‘ಅದು ಅಮೇರಿಕನ್ನರ ಸಂಸ್ಕೃತಿ. ಅಲ್ಲಿ ಬಿಚ್ಚಪ್ಪ, ಬಿಚ್ಚಮ್ಮಗಳೇ ಜಾಸ್ತಿ’. ಕನ್ನಡದ ಗುಣಪದ ‘ಬಿಚ್ಚು’ಗೆ ನಾಮಪದ ‘ಅಪ್ಪ’ ಸೇರಿಸಿ ರಚನೆ ಮಾಡಲಾಗಿದೆ.

ಬಿಚ್ಚುಗಾರ್ತಿ ನಾ ಕರ್ಮವೀ ಅರೆ ಬಟ್ಟೆಯಲ್ಲಿರುವವಳು. ‘ಬಿಚ್ಚುಗಾರ್ತಿಯರ ಸಾಲಿನಲ್ಲಿ ಕೊಯ್ನಾಗುಪ್ಪ.’ ಇಂಗ್ಲಿಶಿನ ‘ನೆಕೆಡ್ ’ ಪದಕ್ಕೆ ‘ಬಿಚ್ಚುಗಾರ್ತಿ’ ಪದವನ್ನು ಬಳಕೆ ಮಾಡಲಾಗಿದೆ. ಇದೆ ಅರ್ಥದಲ್ಲಿ ‘ಬಿಚ್ಚಮ್ಮ’ ಪದ ಈಗಾಗಲೆ ಬಳಕೆ ಆಗಿದೆ.

ಬಿನ್ನಾಣಗಿತ್ತಿತನ ನಾ ಸುಧಾ ಒಯ್ಯಾರಿಯಾಗಿ ನಟಿಸುವ ಸ್ಥಿತಿ. ‘ಈ ನಕಲಿ ಮಹಿಳೆಯರ ಭಿನ್ನಾಣಗಿತ್ತಿತನ, ಥಳುಕು-ಬಳುಕಿಗೆ ಯುವತಿಯರು ನಕ್ಕು ನಲಿಯುತ್ತಾರೆ.’ -ತನ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ಬಿಸಿನೆಸ್ದಾರ ನಾ ಕನ್ನಡಪ್ರಭ ವ್ಯಾಪಾರ ವಹಿವಾಟು ನಡೆಸುವವ. ‘ಬಿಸಿನೆಸ್‌ದಾರರಿಗೆ ಈಗ ಎಲ್ಲೆಲ್ಲೊ ಚಾಲ್ತಿಖಾತೆ’. ಇಂಗ್ಲಿಶ್ ಪದದೊಂದಿಗೆ ಪರ್ಸೊ ಅರಾಬಿಕ್ ಪ್ರತ್ಯಯದಾರ ಬಳಸಿ ತಂದಿರುವ ಪದ. ಮಾದರಿ : ವಾಕಿಂಗ್‌ದಾರ, ಟೆಂಡರ್‌ದಾರ.

ಬಿಸಿನೆಸ್ಸೋತ್ಸವ ನಾ ಲಂಕೇಶ್ಪತ್ರಿಕೆ ಮಾರಾಟದ ಸಂದರ್ಭದಲ್ಲಿ ನಡೆಸುವ ಉತ್ಸವ. ‘ನಾಡಿಗೆ ನಾಡೇ ಬೆಚ್ಚಿಬಿದ್ದಿದೆ. ಉಡುಪಿಯ ಮಾದ್ವಮಠದಲ್ಲಿ ಜರುಗಿದ ಬಿಸಿನೆಸ್ಸೋತ್ಸವದ ಆಡಂಬರ-ಆರ್ಭಟದ ಪರಿ ಕಂಡು ಕೇಳಿ ಪಕ್ಕ ವ್ಯಾಪಾರಸ್ಥರಾದ ಅಷ್ಟ ಮಠಾಧೀಶರ ವಾಣಿಜ್ಯೋದ್ಯಮದ…’ ಪದದ ಅರ್ಥದಲ್ಲಿ ಏನೂ ಹೊಸತನವಿಲ್ಲ. ಆದರೆ ಇಲ್ಲಿಯೂ ಬಿಸಿನೆಸ್ ಎಂಬ ಆಂಗ್ಲ ಪದವನ್ನು ‘ಉತ್ಸವ’ ಸಂಸ್ಕೃತದೊಡನೆ ಸೇರಿಸುವಾಗ ಗುಣಸಂಧಿಯ ನಿಯಮಗಳನ್ನು ಪಾಲಿಸಿರುವುದು ಗಮನಸೆಳೆಯುತ್ತದೆ.

ಬಿಹಾರೀಕರಣ ನಾ ವಿಜಯಕರ್ನಾಟಕ ಬಿಹಾರವನ್ನು ಹೋಲುವಂತೆ ಇರುವುದು. ಬಿಹಾರ ವನ್ನು ಅನುಕರಿಸುವ ಸ್ಥಿತಿಯನ್ನು ತಲುಪುವುದು. ‘ಭಾರತೀಯ ರೈಲ್ವೆಯ ಬಿಹಾರೀಕರಣ.’ ಇತ್ತೀಚಿನ ದಿನಗಳಲ್ಲಿ ವ್ಯಕ್ತಿನಾಮಗಳಿಗೆ ಮತ್ತು ಸ್ಥಳನಾಮಗಳಿಗೆ ‘ಈಕರಣ’ ರೂಪವನ್ನು ಹತ್ತಿಸಿ ಪದ ರಚನೆ ಮಾಡಲಾಗುತ್ತದೆ. ‘ಈಕರಣ’ ಪ್ರತ್ಯಯ ಕನ್ನಡೇತರ ಪದಗಳಿಗೂ ಹತ್ತುತ್ತಿರುವುದು ವಿಶೇಷ.

ಭೀತಿವಾದಿ ನಾ ಉದಯವಾಣಿ ಭಯಪಡಿಸುವುದೇ ಸಹಜವಾದ ಸ್ಥಿತಿ ಎಂದು ವಾದಿಸುವ ವ್ಯಕ್ತಿ. ‘ಪಾಕಿಸ್ಥಾನಿ ಅಧಿಕಾರಿಗಳು ಉಸಾಮಾ ಬಿನ್‌ಲಾಡೆನ್‌ನ ಆರ್ಥಿಕ ಸಲಹೆಗಾರರನ್ನು ಮತ್ತು ಅವನ ಆಲಂ ಖಾಯಿದಾ ಭೀತಿವಾದಿ ಜಾಲದ ಸದಸ್ಯರೆನ್ನಲಾದ ಇನ್ನೊಬ್ಬರನ್ನು ಬಂಧಿಸಿದ್ದಾರೆಂದು ಪೊಲೀಸ್ ಬೇಹುಗಾರ ಅಧಿಕಾರಿಯೊಬ್ಬರು ಇಂದು ತಿಳಿಸಿದರು.’ ಕನ್ನಡದಲ್ಲಿ ‘ಇಸಂಗೆ’ ‘ವಾದ’ವನ್ನು ‘ಇಸ್ಟ್’ಗೆ ‘ವಾದಿ’ಯನ್ನು ಪರ್ಯಾಯವಾಗಿ ಬಳಸುವುದು ರೂಢಿಯಲ್ಲಿದೆ.  ಮಾದರಿ : ಮಾರ್ಕ್ಸ್‌ವಾದಿ, ವಿಚಾರವಾದಿ, ಮೂಲಭೂತವಾದಿ.

ಬುಡಬುಡಿಕೆಗಾg ನಾ ಕರ್ಮವೀ ಬುಡಬಡಿಕೆ ನುಡಿಸುವವನು. ‘ನೆನಪನ್ನು ಕೆದಕಿದಾಗ ಹಾವಾಡಿಗ, ಹಗಲುವೇಷಗಾರ ತಂಬೂರಿ ದಾಸಯ್ಯ, ಬುಡಬುಡಿಕೆಗಾರ’. -ಗಾರ ಪ್ರತ್ಯಯ ಉಳ್ಳವನು. ಪಡೆದಿರುವ ಎನ್ನುವ ಅರ್ಥದಲ್ಲಿ ಬಳಕೆ ಆಗುತ್ತಿದೆ ಎಂದೆನಿಸುತ್ತದೆ. ಬುಡಬುಡಿಕೆ ಅವರು, ಅವನು, ರೂಪಗಳು ಬಳಕೆಯಲ್ಲಿವೆ. -‘ಗಾರ’ ಪ್ರತ್ಯಯದೊಡನೆ ಬಂದಿರುವ ಹೊಸ ಪದ.

ಬುದ್ಧತ್ವ ನಾ ಕರ್ಮವೀ ಬೌದ್ಧಧರ್ಮದ ಬಗೆಗೆ ಅಭಿಮಾನವನ್ನು ಹೊಂದಿರುವುದು. ‘ಬುದ್ಧತ್ವವನ್ನರಿಯದ ಬುದ್ಧುಗಳಿಗೊಂದು ಬೆಳಕಿಂಡಿ.’ ಹಿಂದುತ್ವ ಮಾದರಿಯಲ್ಲಿ ಬಳಕೆ ಆಗಿರುವ ಪದ. ಇಲ್ಲಿ -‘ತ್ವ’ ಪ್ರತ್ಯಯವನ್ನು ‘ಬುದ್ಧ’ ಪದಕ್ಕೆ ಹತ್ತಿಸಲಾಗಿದೆ. ವಾಸ್ತವವಾಗಿ ‘ಬೌದ್ಧತ್ವ’ ಆಗಿರಬೇಕಿತ್ತು.

ಬುಷ್ಮಾಸುರ ನಾ ವಿಜಯಕರ್ನಾಟಕ ಬುಷ್ ಎಂಬ ರಾಕ್ಷಸ. ಗರಮಾ ಗರಂ ಚುಟುಕಾದಲ್ಲಿ ಪ್ರಕಟಗೊಂಡಿರುವ ಪದ. ‘ಭಷ್ಮಾಸುರ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಬೂಟಾಯಣ ನಾ ತರಂಗ ಬೂಟುಗಳ ಪುರಾಣ/ಕತೆ. ‘ಬಿಹಾರದಲ್ಲಿ ಬೂಟಾಯಣ’. ದೀರ್ಘವಾದ ಕತೆ, ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘುಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ಬ್ಲೂಫಿಲಂಕೋರ ನಾ ಲಂಕೇಶ್ಪತ್ರಿಕೆ ಕಾನೂನುಬಾಹಿರವಾಗಿ ಲೈಂಗಿಕ ಚಲನಚಿತ್ರಗಳ ವ್ಯವಹಾರ ನಡೆಸುವವನು. ‘ಬ್ಲೂಫಿಲಂಕೋರ, ಕಾನೂನುಬಾಹಿರ ದುಷ್ಟ ಚಟುವಟಿಕೆ ನಡೆಸುವವರನ್ನು ಸದೆ ಬಡಿದು, ಕೇಸ್ ಜಡಿದು ಅಲುಗಾಡಿಸಿ ದ್ದರು.’ ಅಲೋಕ್ ವ್ಯಕ್ತಿಯ ಗುಣಸ್ವಭಾವವನ್ನು ಸೂಚಿಸುವುದಕ್ಕಾಗಿ ‘ಕೋರ’ ಎಂಬ ಬದ್ಧರೂಪವನ್ನು ಪ್ರಯೋಗ ಮಾಡಲಾಗುತ್ತಿದೆ. ಆದರೆ ಮೇಲಿನ ಪದದಲ್ಲಿ ಇಂಗ್ಲಿಶ್ ಪದಕ್ಕೆ ಕೋರ ಪ್ರತ್ಯಯವನ್ನು ಸೇರಿಸಿ ಬಳಕೆ ಮಾಡಲಾಗಿದೆ.

ಬೆತ್ತಲೆತನ ನಾ ಅಗ್ನಿ ನಗ್ನತೆ, ಬರಿಮೈ. ‘ಬೆತ್ತಲೆ ಪೂಜೆ ಯಾಕೆ ಕೂಡದು ಎಂಬ ಅವರ ವಾದಶಾಸ್ತ್ರದ ಸೌಂದರ್ಯ ಹಾಗೂ ಸಂಸ್ಕೃತಿ ಚಿಂತನೆಯ ವೇಷದಲ್ಲೇ ಹೆಣ್ಣಿನ ಬೆತ್ತಲೆ ತನವನ್ನು ಸಮರ್ಥಿಸುತ್ತದೆ. ‘ಬೆತ್ತಲೆ ಪದವೇ ಅರ್ಥನೀಡಲು ಸಾಕಾಗಿರುವಾಗ -‘ತನ’ ಬೇಕೆ? ಆದರೂ ಇತ್ತೀಚಿಗೆ -‘ತನ’ ಪ್ರತ್ಯಯ ಬಳಸುವುದು ಹೆಚ್ಚಾಗುತ್ತಿದೆ.

ಬೆತ್ತಲೋಟ ನಾ ಸುಧಾ ಬೆತ್ತಲೆಯಾಗಿ ನಡೆಸುವ ಓಟ. ‘ವಾಸ್ತವವಾಗಿ ಮಹಿಳೆಯರೇ ಅಂಥ ಸ್ಪರ್ಧೆ-ಮೇಲಾಟಗಳಿಗೆ ಮುಂದಾಗಬೇಕಲ್ಲವೆ. ಪಶ್ಚಿಮದಲ್ಲಿ? (ನಮ್ಮಲ್ಲೆ ಒಬ್ಬಿಬ್ಬರು ಬೆತ್ತಲೋಟ ಮಾಡಲಿಲ್ಲವೇ?) ಆಶ್ಚರ್ಯ’. ಬೆತ್ತಲೆ + ಓಟ ಸೇರಿ ಸಂಧಿ ನಿಯಮಕ್ಕನುಗುಣವಾಗಿ ರಚನೆ ಮಾಡಲಾಗಿದೆ.

ಬೆಳಗಾವೀಕರಣ ನಾ ಲಂಕೇಶ್ಪತ್ರಿಕೆ ಬೆಳಗಾಂವ ಸಂಸ್ಕೃತಿಗೆ ಹೊಂದಿಸುವುದು. ‘ಬೆಳಗಾಂವ-ಬೆಳಗಾವೀಕರಣ ಮರಾಠಿಗರ ಹೊಸ ತಗಾದೆ.’ ಈಕರಣ ಪ್ರತ್ಯಯ ಹಚ್ಚಿ ಪದ ರಚನೆ ಮಾಡಲಾಗಿದೆ.

ಬ್ರೋಕರ್ಗಿರಿ ನಾ ಅಗ್ನಿ ದಲ್ಲಾಳಿತನ. ‘ಆತನ ಬ್ರೋಕರ್ ಗಿರಿಗಳೇನೇ ಇದ್ದರೂ, ಒಂದಷ್ಟು ಹೊಸತನವನ್ನಾದರೂ ರಾಜಕಾರಣದಲ್ಲಿ ನಿರೀಕ್ಷಿಸಬಹುದು. -‘ಗಿರಿ’ ಪ್ರತ್ಯಯವನ್ನು ಒಂದು ಅಧಿಕಾರಿ ಸ್ಥಾನವನ್ನು ಸೂಚಿಸಲು ಬಳಸಲಾಗುತ್ತದೆ. ಉದಾ: ಛೇರ್ಮನ್‌ಗಿರಿ ಹಿರೋಗಿರಿ ಇತ್ಯಾದಿ… ಆದರೆ ಮೇಲಿನ ಪ್ರಯೋಗವನ್ನು ವಾಕ್ಯದಲ್ಲಿ ಗಮನಿಸಿದಾಗ ಸ್ಥಾನಸೂಚಕ ಪ್ರತ್ಯಯ ಬಳಕೆ ಸರಿಯಿಲ್ಲವೆನಿಸುತ್ತದೆ. ಅಲ್ಲಿ ಗುಣಸೂಚಕ ಪ್ರತ್ಯಯ -‘ತನ’ ಬಳಕೆ ಸೂಕ್ತವಾದುದಾಗಿದೆ ಎನ್ನಬಹುದು.

ಬೋಧೋಪಾಯ ನಾ ಲಂಕೇಶ್ಪತ್ರಿಕೆ ಬೋಧಿಸುವುದು; ಬೋಧನೆ. ‘ಇದೀಗ ಸಾರ್ವಜನಿಕವಾಗೇ ತಿರಸ್ಕರಿಸಿ, ಮೋನು-ಹನೀಫ್‌ರನ್ನು ಕಾಳಜಿಯಿಂದ ಬಹಿರಂಗವಾಗೇ ವಿಚಾರಿಸಿಕೊಂಡು ಅವರ ಚಾಡಿ ಕೇಳಿದ್ದು ಹಿಂದೂ ಜಗಳಗಂಟರಿಗೆ ಬೋಧೋಪಾಯಕ್ಕೊಂದು ನೆಪ ಸಿಕ್ಕಂತಾಗಿತ್ತು.’ ಬೋಧೆ(ಧ) ಮತ್ತು ಉಪಾಯ ಸೇರಿಕೊಂಡು ಬೋಧೋಪಾಯ ಪದ ರಚನೆ ಮಾಡಲಾಗಿದೆ.

ಬೌದ್ದಿಕರ ನಾ ಕನ್ನಡಪ್ರಭ ಬುದ್ದಿವಂತರ ‘ಅದಕ್ಕೆ ಬದಲಾಗಿ ಇತರ ಪಕ್ಷಗಳಂತೆ ಬಿಜೆಪಿಯೂ ಪ್ರತಿಷ್ಠಿತರ ಬೌದ್ದಿಕರ ಹಾಗೂ ಸೆಕ್ಸುಲರ್ ಚಿಂತಕರ ಮನ ಒಲಿಸುವ ಪ್ರಯತ್ನ ನಡೆಸಿತು. ಷಷ್ಠಿ…’! ಬೌದ್ದಿಕ ನಾಮಪದ ಇದರ ಬಹುವಚನ ಬೌದ್ದಿಕರು, ಇದಕ್ಕೆ ಷಷ್ಠಿ ರೂಪ ಹಚ್ಚಿ ಬೌದ್ದಿಕರ ರೂಪ ರಚನೆ ಮಾಡಲಾಗಿದೆ.

ಬಂಜರತೆ ನಾ ಚೆಲುವಕನ್ನಡ ಪಾಳುನೆಲ/ಭೂಮಿ. ‘ಆಧುನಿಕತೆಯ ಮತ್ತು ಪರಂಪರೆಯ ಎಲ್ಲ ವಿಚ್ಛೇದ್ರಕಾರಿ ಪ್ರವೃತ್ತಿಗಳನ್ನು, ಬಂಜರತೆಯನ್ನು ಜನಪದದ ಸಮೃದ್ಧತೆಯಲ್ಲಿ ತೋಯಿಸಿ ಅದಕ್ಕೊಂದು ಹೊಸ ಆಯಾಮವನ್ನು ಕೊಡುತ್ತಾರೆ.’ ಸಾಮಾನ್ಯವಾಗಿ ಚಿತ್ರಿತ, ರಕ್ಷಿತ, ವಿಚಾರಿತ ಮುಂತಾದ ಸಂಸ್ಕೃತ ರೂಪಗಳ ಪದರಚನಾ ನಿಯಮವನ್ನು ಬಂಜರ್ (ಪರ್ಸೋ ಅರಾಬಿಕ್) ರೂಪದೊಡನೆ ಬಳಸಿ ‘ಬಂಜರತೆ’ ರೂಪ ಪಡೆಯಲಾಗಿದೆ.

ಬಂಡಾಯತನ ನಾ ಕನ್ನಡಪ್ರಭ ದಂಗೆ, ಕ್ರಾಂತಿ ಮಾಡುವುದು. ‘ಬಂಡಾಯತನಕ್ಕೆ ಗಟ್ಟಿತನ ಬಂದಿದ್ದೇ ಕುಂವೀಯಿಂದ’. ಬಂಡಾಯ ಪದ ಈಗಾಗಲೇ ಬಳಕೆಯಲ್ಲಿದೆ. ಇದಕ್ಕೆ -‘ತನ’ ಪ್ರತ್ಯಯ ಹಚ್ಚಿ ಬಳಸಲಾಗಿದೆ.

ಬ್ರಹ್ಮಚಾರಿಣಿ ನಾ ಸುಧಾ ಮದುವೆಯಾಗದೆ ಇರುವವಳು. ‘ಮದುವೆಯಾಗದೆ ಬ್ರಹ್ಮಚಾರಿಣಿ ಗಳಾಗಿ ಉಳಿಯುತ್ತಾರೆ ಎಂದರೆ ಅಸೂಯೆಪಡಬೇಕು!’. ‘ಬ್ರಹ್ಮಚಾರಿ’ ಪುಲ್ಲಿಂಗ ಸೂಚಕ ಪದವೆಂದು ತಿಳಿದು ಸ್ತ್ರೀಸೂಚಕ ಪ್ರತ್ಯಯವಾದ -‘ಣಿ’ ಸೇರಿಸಿ ಪದರಚನೆ ಮಾಡಲಾಗಿದೆ.

ಬ್ಯಾಟಿಗ ನಾ ವಿಜಯಕರ್ನಾಟಕ ಕ್ರಿಕೇಟ್ ಆಟದಲ್ಲಿ ಚೆಂಡನ್ನು ಎದುರಿಸುವವನು. ‘ಇವನನ್ನು ಬ್ಯಾಟಿಗ ಎಂದರೆ ಹೇಗೆ) ಮತ್ತು ಬ್ಯಾಟ್ಸಮನ್ (ಬ್ಯಾಟಿಗ ಎನ್ನುವ ಆಸೆ ನನಗೆ) ಇಬ್ಬರೂ ಸಹ ಅನವಶ್ಯಕ ಅವಸರವಿಲ್ಲದೆ ತಮ್ಮ ತಮ್ಮ ಪ್ರತಿಭೆಯನ್ನು ಅರಳಿಸಬಹುದು’. -ಇಗ ಪುರಷವಾಚಿ ನಾಮರೂಪ ಸಾಧಕವನ್ನು ಎಲ್ಲ ಭಾಷೆಯ ಪದಗಳಿಗೂ ಹಚ್ಚುವುದು ಈಚೆಗೆ ಬಳಕೆಯಾಗುತ್ತಿದೆ. ಮಾದರಿ : ಸ್ಪಿನ್ನಿಗ, ಪುಟ್ಬಾಲಿಗ.

ಬ್ಯಾಟ್ದಾರ ನಾ ಪ್ರಜಾವಾಣಿ ಚೆಂಡನ್ನು ಅಟ್ಟಿಸುವವನು. ಬ್ಯಾಟಿಂಗ್ ಮಾಡುವವನು. ‘ಕ್ರಿಕೆಟ್‌ನಲ್ಲಿ ಬ್ಯಾಟ್ ದಾರನೇ ಆಂಡ್ಲಾಕ್ಲೀಸ್, ಬೌಲರ್ ಸಿಂಹ’. -‘ದಾರ’ ಪ್ರತ್ಯಯವನ್ನು ಅನೇಕ ಪದಗಳಲ್ಲಿ ಬಳಸಲಾಗುತ್ತಿದೆ. ಕೆಲವೊಮ್ಮೆ -‘ಗಾರ’ ಪ್ರತ್ಯಯವು ಬರುತ್ತದೆ. ಎಲ್ಲಿ ಯಾವುದು ಬರಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇತ್ತೀಚಿಗೆ ಇಂಗ್ಲೀಷ್ ಪದಗಳ ಜೊತೆಗೆ ಈ ಪ್ರತ್ಯಯಗಳ ಬಳಕೆ ನಡೆಯುತ್ತಿದೆ. ಮಾದರಿ : ಗೋಲುಗಾರ.

ಬೌಲರಿಗ ನಾ ಉದಯವಾಣಿ ಚೆಂಡನ್ನು ಹಾಕುವವನು. ‘ನಮ್ಮ ಬೌಲರಿಗೊಬ್ಬ ಕೋಚ್ ಕೊಡಿ!’ -ಇಗ ಪುರುಷವಾಚಿ ನಾಮರೂಪ ಸಾಧಕವನ್ನು ಎಲ್ಲ ಭಾಷೆಯ ಪದಗಳಿಗೂ ಹಚ್ಚುವುದು ಬಳಕೆಯಾಗುತ್ತಿದೆ. ಈ ರೂಪಗಳು ಲಘುಬರಹಗಳಲ್ಲಿ ಹೆಚ್ಚು ಚಾಲ್ತಿ ಪಡೆಯುತ್ತದೆ. ಮಾದರಿ: ಸ್ಪಿನ್ನಿಂಗ, ವೋಟಿಗ 

ಭದ್ರತೀಕರಣ ನಾ ಸಂಯುಕ್ತಕರ್ನಾಟಕ ಸುರಕ್ಷಿತವಾಗಿ ಇಡುವುದು. ಜೋಪಾನವಾಗಿ ನೋಡಿಕೊಳ್ಳುವುದು. ‘ಗೃಹನಿರ್ಮಾಣ ಹಣಕಾಸಿನಲ್ಲಿ ಸ್ವತ್ತುಗಳನ್ನು ಅಡವು ಇಡುವ ಮೂಲಕ ಭದ್ರತೀಕರಣ ನಡೆಯುವುದು.’ ಆಂಗ್ಲ ಭಾಷೆಯ ‘ಸೆಕ್ಯೂರಿಟಿ’ ಪದಕ್ಕೆ ಸಮಾನವಾಗಿ ಕನ್ನಡದಲ್ಲಿ ‘ಭದ್ರತೆ’ ಪದ ಬಳಕೆಯಲ್ಲಿದೆ. ‘ಈಕರಣ ಪ್ರತ್ಯಯವನ್ನು ಬಳಸಿ ಪದರಚನೆ ವಿಧಾನಕ್ಕೆ ಮತ್ತೊಂದು ನಿದರ್ಶನ. ಮಾದರಿ : ರಾಷ್ಟ್ರೀಕರಣ, ಸ್ಥಳೀಕರಣ, ತೀವ್ರೀಕರಣ.

ಭಯಾರಣ್ಯ ನಾ ಉದಯವಾಣಿ ಅಂಜಿಕೆಯನ್ನುಂಟು ಮಾಡುವ ಅರಣ್ಯ. ‘ದಾಂಡೇಲಿ ಅಭಯಾರಣ್ಯದೊಳಗಿನ ಹಳ್ಳಿಗರ ಪ್ರಶ್ನೆ ‘ಭಯಾರಣ್ಯ’ದಿಂದ ಮುಕ್ತಿ. ಈಗಾಗಲೇ ಜನಪ್ರಿಯವಾಗಿ ‘ಅಭಯಾರಣ್ಯ’ ಪದ ಬಳಕೆಯಲ್ಲಿದೆ. ‘ಭಯಾರಣ್ಯ’ ಒಂದು ಹೊಸ ಪ್ರಯೋಗ.

ಭಯೋತ್ಪಾತ ನಾ ಪ್ರಜಾವಾಣಿ ದರೋಡೆಕಾರರ ಮುತ್ತಿಗೆ ಅಥವ ಹಾವಳಿ. ‘ಭಯೋತ್ಪಾತ ವಿನಾಶ ಸಾಧ್ಯವೆ? ಅಥವಾ ಅಮೇರಿಕದ ಅಹಂಗೆ ದೊಡ್ಡ ಅಘಾತ ಉಂಟು ಮಾಡಿದ ಸೆಪ್ಟೆಂಬರ್ ೧೧ರ ಭಯೋತ್ಪಾದಕ ದಾಳಿ ಈ ಪ್ರಪಂಚದಿಂದಲೇ ಭಯೋತ್ಪಾತವನ್ನು ತೊಡೆದು ಹಾಕುವುದಾಗಿ ಬುಷ್ ಹೇಳುವ ಹಾಗೆ ಮಾಡಿತು’. ಭಯ+ಉತ್ಪಾತ ಸೇರಿ ಭಯೋತ್ಪಾತ ಆಗಿದೆ. ಇಲ್ಲಿ ಗುಣಸಂಧಿ ನಿಯಮಪಾಲಿಸಿದಂತಿದೆ. ಮಾದರಿ : ಉಲ್ಕಪಾತ, ಹಿಮಪಾತ, ಜಲಪಾತ.

ಭರ್ತಿಸಿ ನಾ ಉದಯವಾಣಿ ತುಂಬಿರುವುದು, ತುಂಬುವುದು. ‘ಉಡುಪಿಯ ಬ್ಯಾಂಕೊಂದಕ್ಕೆ ಕೆಲಸ ನಿಮಿತ್ತ ಹೊಗಿದ್ದೆ. ಮಧ್ಯವಯಸ್ಸಿನ ಹಳ್ಳಿಯ ಒಬ್ಬರಿಗೆ ಡಿಮಾಂಡ್ ಡ್ರಾಫ್ಟ್ ಬೇಕಾಗಿತ್ತು. ಫಾರ್ಮ ಭರ್ತಿಸಿ ಸಂಬಂಧಪಟ್ಟ ಗುಮಾಸ್ತರಿಗೆ ನೀಡಿದಾಗ…!’ ಭರ್ತಿ ಪದಕ್ಕೆ ‘ಇಸು’ ಪ್ರತ್ಯಯ ಸೇರಿಸಿದ್ದರಿಂದ ಭರ್ತಿಸಿ ಎಂಬ ಪೂರ್ಣರೂಪ ಪಡೆಯಲಾಗಿದೆ.

ಭವಿಷ್ಯವಾದಿ ನಾ ತರಂಗ ಭವಿಷ್ಯವನ್ನು ವಾದಿಸುವವನು. ‘ಹೊಸ ವರ್ಷ ಪಾದಾರ್ಪಣೆ ಮಾಡಿದೆ. ಭವಿಷ್ಯವಾದಿಗಳಿಗೀಗ ಕೈತುಂಬ ಕೆಲಸ.’ ‘ನ್ಯಾಯವಾದಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಭಿಕ್ಷಾಧೀಶ್ವರ ನಾ ತರಂಗ ಭಿಕ್ಷೆಯ ಒಡೆಯ. ‘ಲಾಟರಿ ಗುಟ್ಟು’ ಒಬ್ಬರು ಲಕ್ಷಾಧಿಪತಿಗಳಾಗ ಬೇಕಾದರೆ, ಸಾವಿರಾರು ಜನ ಭಿಕ್ಷಾಧೀಶ್ವರರಾಗಲೇ ಬೇಕು.’ ಭಿಕ್ಷೆ ಮತ್ತು ಈಶ್ವರ ಪದಗಳು ಸೇರಿ ಪದರಚನೆ ಮಾಡಲಾಗಿದೆ. ‘ಲಕ್ಷಾಧೀಶ್ವರ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಭೂಪದರ್ಶಿ ನಾ ಸುಧಾ ದೊರೆ ಆಕಾರಯುಳ್ಳವವ; ರಾಜಕಾರಣದಲ್ಲಿರುವವ. ‘ಈಚೆಗೆ ಬ್ಯಾಂಕಾಕಿನಲ್ಲಿ ನಡೆದ ರೇಷ್ಮೆ ಫ್ಯಾಶನ್ ಮೇಳದಲ್ಲಿ ಈ ಭೂಪದರ್ಶಿ ತಾನು ತೊಟ್ಟ ರೇಷ್ಮೆ ಪ್ಯಾಂಟಿನ ಪ್ರದರ್ಶನ ಮಾಡುತ್ತಿದ್ದಾನೆ.’ ಮೇಲಿನ ಪದವನ್ನು ‘ರೂಪದರ್ಶಿ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಭೂಮ್ಯಾತೀತ ನಾ ವಿಜಯಕರ್ನಾಟಕ ಭೂಗತ ಚಟುವಟಿಕೆಗಳು. ‘ಕಳೆದ ೫೦ ವರ್ಷಗಳಿಂದ ಬ್ರಿಟನ್‌ನ ಪಶ್ಚಿಮ ಭಾಗ ಭೂಮ್ಯಾತೀತ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.’ ಭೂಮಿಯಾಚೆಗಿನ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕ್ರಿಯೆಗೆ ಭೂಮ್ಯಾತೀತ ಎಂದು ಬಳಕೆ ಮಾಡಲಾಗಿದೆ. ಅಂಡರ್ ವರ್ಲ್ಡ್ ಪದಕ್ಕೆ ಸಂವಾದಿಯಾಗಿ ಭೂಮ್ಯತೀತ ಪದವನ್ನು ಬಳಕೆ ಮಾಡಲಾಗಿದೆ. ಮಾದರಿ : ಜಾತ್ಯಾತೀತ.

ಭೋಗದಾರಿಕೆ ನಾ ಉದಯವಾಣಿ ಭೂಮಿ ಒಡೆತನ ಅನುಭವಿಸುವುದು. ‘ಖರ್ಚುಮಾಡಿ ಈತನಕ ಭೂ ಒಡೆತನ ಅಧಿಬೋಗದಾರಿಕೆಯ ಫಾರಂ ನಂ.೧೦ ದೊರೆಯದ ಭ್ರಮ ನಿರಸಗೊಂಡಿದೆ.’ ಬೋಗ್ಯ, ಭೊಗ್ಯದಾರ, ಪದಗಳು ಬಳಕೆಯಲ್ಲಿದೆ. ಆದರೆ ಭೋಗದಾರಿಕೆ ಬಳಕೆಯಲ್ಲಿ ಇಲ್ಲ. -‘ಇಕೆ’ ಪ್ರತ್ಯಯ ಹಚ್ಚಿ ಪದ ನಿರ್ಮಾಣ ಮಾಡುವುದು ರೂಢಿಯಲ್ಲಿದೆ. ಮಾದರಿ : ತೋಟಗಾರಿಕೆ, ವರದಿಗಾರಿಕೆ.

ಭೋಜನೋತ್ತರ ನಾ ಉದಯವಾಣಿ ಊಟದ ನಂತರ ‘ಬೋಜನೋತ್ತರ ನಿಯಮಗಳು  ಭೋಜನಕ್ಕೆ ‘ಉತ್ತರ’ ಪದ ಸೇರಿಸಿ ಬಂದಿರುವ ಹೊಸ ಪದ. ಇದನ್ನು ಸ್ವಾತಂತ್ರ್ಯೋತ್ತರ. ಮರಣೋತ್ತರ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಭ್ರಷ್ಟಾಸುರ ನಾ ಸುಧಾ ಭ್ರಷ್ಟತೆಗೆ ಹೆಸರುವಾಸಿಯಾದವ. ‘ಒಂದು ಕಡೆ ಜಾತಿಮತಾಸುರ, ಇನ್ನೊಂದು ಕಡೆ ಮೌಢ್ಯಾಸುರ, ಮಗದೊಂದು ಕಡೆ ಭ್ರಷ್ಟಾಸುರ ಕಟ್ಟಿಸುತ್ತಿದ್ದಾರಲ್ಲವೆ. ಈ ದೇಶದ ಉಸಿರ?! ‘ಬಕಾಸುರ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.