ಮಜಾವಾದಿ ನಾ ಉದಯವಾಣಿ ಮೋಜು ಮಾಡುವವ. ‘ಸಮಾಜವಾದಿಗಳು ಇಳಿವಯಸ್ಸಿನಲ್ಲಿ ಮಜಾವಾದಿಗಳು.’ ‘ಸಮಾಜವಾದಿ’ ಎಂದರೆ ಸಮಾಜವಾದವನ್ನು ಅನುಸರಿಸು ವವ ಅಥವಾ ವಾದಿಸುವವ ಎಂಬ ಅರ್ಥವಿದೆ. ಸಮಾಜವಾದಿ ಮಾದರಿಯಲ್ಲಿ ‘ಮಜಾವಾದಿ’ ಪದವನ್ನು ಬಳಕೆ ಮಾಡಲಾಗಿದೆ. ಮೋಜನ್ನು ವಾದಿಸುವವರು ಎಂಬ ಅರ್ಥದಲ್ಲಿ ಬಳಕೆ ಆಗಿಲ್ಲ. ಮಜವನ್ನು ಅನುಭವಿಸುವವರು ಎಂಬ ಅರ್ಥದಲ್ಲಿ ಬಳಕೆ ಮಾಡಲಾಗಿದೆ.

ಮಠದಾತ ನಾ ಲಂಕೇಶಪತ್ರಿಕೆ ಮಠವನ್ನು ನೀಡುವ ವ್ಯಕ್ತಿ. ‘ಇದು ನಮ್ಮಆಸ್ತಿ ಮಠದ ಕುದ್ರುಗೆ ಕರೆಂಟ್ ತರಲು ನಾವು ನಿರಾಕ್ಷೇಪಣಾ ಪತ್ರ(ಎನ್‌ಸಿ) ಕೊಡುವುದಿಲ್ಲ’’ ಎಂದು ಮಠದಾತರು ಹಠ ಹಿಡಿದರು!’. -‘ದಾತ’ ರೂಪವನ್ನು ವಿಶೇಷ ಅರ್ಥವ್ಯಾಪ್ತಿಯಲ್ಲಿ ಬಳಕೆ ಮಾಡಲಾಗಿದೆ. -‘ದಾತ’ ಎಂದರೆ ನೀಡುವವನು. ಮಾದರಿ: ಲಂಚದಾತ.

ಮಠಮಾರಿ ನಾ ಹಲೋಬೆಂಗಳೂರು ಮಠದಲ್ಲಿ ಮೊಂಡುತನ ಮಾಡುವ ವ್ಯಕ್ತಿ. ‘ಮೂಲತಃ ರಾಯಚೂರು ಜಿಲ್ಲೆಯ ಮಠಮಾರಿಯನಾಗಿದ್ದು ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ’ ‘ಹಠಮಾರಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಮಠಕ್ಕೆ ಒಂದು ರೀತಿ ಮಾರಿ ಇದ್ದಾಗೆ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ.

ಮತಗುದುರೆ ನಾ ಕನ್ನಡಪ್ರಭ ಓಟಿನ ಕುದುರೆ. ‘ತಮಿಳುನಾಡಿನಲ್ಲಿ ರಜನಿಯೆಂಬ ಕನ್ನಡದ ಮತಗುದುರೆ’. ‘ಮತಗುದುರೆ’ ಜೂಜುಗುದುರೆ (ರೇಸ್‌ಹಾರ್ಸ್) ಅರ್ಥದಲ್ಲಿ ಮತಗುದುರೆ ಪದವನ್ನು ಬಳಕೆ ಮಾಡಲಾಗಿದೆ.

ಮತದಾನೋತ್ತರ ಗು ಉದಯವಾಣಿ ‘ಮತದಾನ ಅನಂತರದ.’ ‘ಉತ್ತರ ಪ್ರದೇಶ ಚುನಾವಣೆ ವೇಳೆ ಪ್ರತಿಹಂತದಲ್ಲೂ ನಡೆದ ಮತದಾನೋತ್ತರ ಸಮೀಕ್ಷೆ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರಿತು ಎಂದು ಪತ್ರಕರ್ತರೊಡನೆ ಹೇಳಿದ ‘ಧುಮಲ್’. ಆದರೆ ಈ ಫಲಿತಾಂಶ ಮುಂದಿನ ವರ್ಷ ನಡೆಯುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರದು ಎಂದರು. ಸ್ವಾತಂತ್ರೋತ್ತರ, ನವ್ರೋಇತ್ಯಾದಿ ಪದಗಳ ಮಾದರಿಯಲ್ಲಿ ಬಂದಿರುವ ಪದ.

ಮತೇತರ ನಾ ವಿಜಯಕರ್ನಾಟಕ ಮತ ಮತ್ತು ಇತರ, ಮತರಹಿತವಾದ. ‘ಶಾಸಕಾಂಗ ಮತ್ತು ನ್ಯಾಯಾಂಗದಲ್ಲಿ ಮೇಲೆ ಹೆಸರಿಸಲಾಗಿರುವವರು ಪ್ರತಿಜ್ಞೆ ಸ್ವೀಕರಿಸಿ ಅಧಿಕಾರಕ್ಕೆ ಬಂದವರು.’ ಚೆರ್ಕಳಂ ಅಬ್ಲುಲ್ಲ ತನ್ನ ಮತೇತರವಾದವನ್ನು ಜನರಿಗೆ ವಿವರಿಸಲಿ; ಪಕ್ಷೇತರ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಮತವಲ್ಲದ ಎಂಬ ಅರ್ಥವು ಇದೆ.

ಮದ್ಯಸಾರತೆ ನಾ ತರಂಗ ತೀಕ್ಷ್ಣವಾದ ಮದ್ಯವನ್ನು ಬಳಸಿ ಮಾಡುವ ಒಂದು ಬಗೆಯ ದ್ರಾವಣ. ‘ಮದ್ಯಸಾರತೆ ವಿಶ್ವದ್ಯಾಂತ ಮಾನವ ಕುಲಕ್ಕೆ ಬೃಹತ್ ಸವಾಲದ ಸಮಸ್ಯೆ.’ ‘ಮದ್ಯಸಾರ’ ಪದದ ಅರ್ಥಕ್ಕಿಂತ ಮೇಲಿನ ಪದ ಭಿನ್ನವಾದ ಅರ್ಥವನ್ನು ನೀಡುತ್ತಿಲ್ಲ.

ಮದ್ಯಾಧಿಪತಿ ನಾ ಕರ್ಮವೀ ಹೆಂಡ ಮುಂತಾದ ಮಾದಕ ಪಾನಿಯಗಳಿಗೆ ಒಡೆಯ. ‘ಆದರೆ, ಹರಿ ಮದ್ಯಾಧಿಪತಿ, ಕೈಗಾರಿಕೋದ್ಯಮಿ ಹರಿಕೋಡೆ ಕೃಷ್ಣ ೨೦ನೇ ಶತಮಾನದ ವಿಶ್ವವಿಖ್ಯಾತ ಚಿಂತಕ ಜೆ.ಕೃಷ್ಣಮೂರ್ತಿ’. ರಾಜ್ಯಾಧಿಪತಿ ಮತ್ತು ಕೋಟ್ಯಾದಿಪತಿ ಮಾದರಿಯಲ್ಲಿ ಬಂದಿರುವ ಪದ.

ಮದ್ಯೋದ್ಯಮಿ ನಾ ಕರ್ಮವೀ ಹೆಂಡ ಮುಂತಾದ ಮಾದಕ ಪಾನೀಯಗಳನ್ನು ವ್ಯಾಪಾರ ಉದ್ಯಮಿ. ‘ಕೆಲವೇ ವಾರಗಳ ಹಿಂದೆ ಇದೇ ಪತ್ರಿಕೆಗೆ ನೀಡಿದ ಸಂದರ್ಭದಲ್ಲಿ ಮದ್ಯೋದ್ಯಮಿ ಹರಿಖೋಡೆಯವರು ರಾಮಕೃಷ್ಣ ಹೆಗಡೆಯವರ ಬಗ್ಗೆ ಪ್ರಾಸ್ತಾಪಿಸುತ್ತಾ ಅವರು ಸಾಮಾನ್ಯ ಮನುಷ್ಯರಿಗಿಂತ ಮೇಲ್ ಸ್ಥರದಲ್ಲಿ ಇರುವವರೆಂದು ಹೇಳಿದರು’. ಮೇಲಿನ ಪದವನ್ನು ಕೈಗಾರಿಕೋದ್ಯಮಿ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಮಧ್ಯಯ ನಾ ಪ್ರಜಾವಾಣಿ ಮಧ್ಯದ ಬಗೆಗಿನ ಅಧ್ಯಯನ. ‘ನೀರು ಗುಟುಕರಿಸಿದಷ್ಟೇ ವೋಡ್ಕಾವನ್ನು ಗಂಟಲಿಗೆ ಇಳಿಸಿಕೊಂಡ ಈತನ ಚಾಕಚಕ್ಕತೆ ‘ಅಮಲು ದಾರಿಕೆ’ಯ ಗುಟ್ಟಿನ ಬಗ್ಗೆ ‘ಮದ್ಯಯನ’ ನಡೆಸಲು ಅವಕಾಶವಿದೆ!’. ಮೇಲಿನ ಪದವನ್ನು ಅಧ್ಯಯನ ಮಾದರಿಯಲ್ಲಿ ತರಲಾಗಿದೆ. ಇದೊಂದು ಹೊಸರಚನೆ.

ಮನಗಳ್ಳ ನಾ ಸುಧಾ ಮನಸ್ಸಿನಕಳ್ಳ. ‘ಹಲವಾರು ಮೈಗಳ್ಳರು ಕೂಡ; ವಿದ್ಯಾರ್ಥಿಗಳ ಮನಗಳ್ಳ ಚಿತ್ತಪಹಾರಕರಲ್ಲ ಸರ್ಕಾರದ ವಿತ್ತಾ ಪರಿಹಾರಕರಷ್ಟೆ!’ ಕಾಡುಗಳ್ಳ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ

ಮನಸ್ಸಿನಾಟ ನಾ ಪ್ರಜಾವಾಣಿ ಮನಸ್ಸಿನಲ್ಲಿ ಆಡುವ ಆಟ. ‘ಪಾಕಿಸ್ಥಾನ ಮನಸ್ಸಿನಾಟ ಕಲಿಯಬೇಕು!’. ಇತ್ತೀಚಿನ ಆಟ ಎಂಬ ಪದವನ್ನು ಬೇರೆ ಬೇರೆ ಪದಗಳ ಜತೆಗೆ ಸೇರಿಸಿ ಬಳಸಲಾಗುತ್ತಿದೆ. ನೂಕಾಟ. ತಳ್ಳಾಟ ಮತ್ತು ಓಡಾಟ ಇಲ್ಲೆಲ್ಲಾ ‘ಆಟ’ ಕ್ರೀಡೆ ಎಂಬ ರೀತಿಯಲ್ಲಿ ಬಳಕೆಯಾಗಿಲ್ಲ. ಆದರೆ ಮೇಲಿನ ಪದದಲ್ಲೂ ಬಳಕೆಯಾಗಿರುವ ‘ಆಟ’ ಕ್ರೀಡೆಯಲ್ಲಿ ಇದ್ದಂತಿಲ್ಲ. ಒಳಗೊಂದು ಹೊರಗೊಂದು ಎಂಬ ಅರ್ಥದಲ್ಲಿ ಬಳಕೆಯಾದಂತಿದೆ.

ಮರಣಕಾರಕ ನಾ ತರಂಗ ಸಾವನ್ನು ಉಂಟು ಮಾಡುವ. ‘೧೯೯೬ರಲ್ಲಿ ಓಜೊವ್ ಒಂದು ಕೆಟ್ಟ ಅನಿಲವೆಂದಷ್ಟೇ ತಿಳಿಲಾಗಿತ್ತು. ಆದರೆ, ಈಗ ಅದು ಮರಣಕಾರಕವೆಂಬ ಸತ್ಯದ ಅರಿವಾಗಿದೆ.’ ಮಾದರಿ : ವಿಷಕಾರಕ

ಮರಳುಗಾರಿಕೆ ನಾ ಕನ್ನಡಪ್ರಭ ಮರಳಿನ ಕೆಲಸ. ‘ಮರಳುಗಾರಿಕೆ’ ವಿಷಯ ಪರಿಸರ ಸಂರಕ್ಷಣೆಗೆ ಸೇರಿದ್ದು. ಆದರೆ ಮರಳಿಲ್ಲದೆ ಮನೆ ಕಟ್ಟುವುದಾದರೂ ಹೇಗೆ? ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸರ್ಕಾರ ಹುಡುಕಬೇಕು’. ಮರಳು ಪದಕ್ಕೆ ‘ಗಾರ ಮತ್ತು ಇಕೆ’ ಎಂಬ ಪ್ರತ್ಯಯಗಳನ್ನು ಹಚ್ಚಿ ರಚನೆ ಮಾಡಲಾಗಿದೆ. ಮಾದರಿ : ಬೇಹುಗಾರಿಕೆ, ತೋಟಗಾರಿಕೆ.

ಮಲಿನಕರ ನಾ ಸುಧಾ ಕೊಳಕಾದ. ‘ಮಲೀನಕರ ಗಾಳಿ-ಧೂಳು ಇಲ್ಲವೇ ರಸಾಯನಿಕವನ್ನು ಮುಖವಾಡದಲ್ಲಿರುವ ವಸ್ತು ಹೇರಿಕೊಳ್ಳುತ್ತದೆ.’ ಕರ-ಸಾಧಕವನ್ನು ಮಲಿನ ರೂಪಕ್ಕೆ ಹಚ್ಚಿರುವುದು ವಿಶೇಷ. ಮಾದರಿ : ಉಲ್ಲಾಸಕರ, ಲಾಭಕರ, ಸಂತೋಷಕರ.

ಮಹಾತೆರೆ ನಾ ಸುಧಾ ದೊಡ್ಡದಾದ ತೆರೆ. ‘ಏನನ್ಯಾಯ;! ಸಮುದ್ರದ ತಳಕ್ಕಾದರೂ ಸೇರದಿದ್ದರೆ ತಿಮಿಂಗಿಲಗಳು ‘ಡಿಸ್ಕವರಿ’ ಚಾನಲ್ ನಲ್ಲಿ ‘ತಮ್ಮದೇ ಜೀವನ ಚಿತ್ರ ನೋಡಬಹುದಿತ್ತು. ಮಹಾತೆರೆ ಬಂತೆಂದರೆ ಕಿರುತೆರೆಯ ಸ್ಥಿತಿ ಹೇಗಾಗುತ್ತದೆ. ಅಲ್ಲ?’. ಈಗಾಗಲೇ ‘ಕಿರುತೆರೆ’ ಪದ ಬಳಕೆಯಲ್ಲಿರುವುದರಿಂದ ವಿರುದ್ಧಾರ್ಥ ಪದವಾಗಿ ‘ಮಹಾತೆರೆ’ ಬಳಸಲಾಗಿದೆ.

ಮಹಾನಗರೀಕರಣ ನಾ ಬಳಕೆ ಮಹಾನಗರವಾಗಿ ಪರಿವರ್ತನೆ. ದೊಡ್ಡ ದೊಡ್ಡ ನಗರಗಳೆಲ್ಲ ಮಹಾನಗರಗಳಾಗಿ ಪರಿವರ್ತನೆ ಆಗುತ್ತಿರುವುದರ ಅರ್ಥದಲ್ಲಿ ಬಳಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ತ್ರಿಕರಣಗಳ ‘ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಪ್ರಭಾವದಿಂದ ನಗರಗಳೆಲ್ಲ ಮಹಾನಗರಗ ಳಾಗಿ ಪರಿವರ್ತನೆ ಆಗುತ್ತಿರುವುದು ಸಹಜವಾಗಿದೆ. ಆ ಹಿನ್ನಲೆಯಲ್ಲಿ ಬಂದಿರುವ ಪದ.

ಮಹಿಳೀಕರಣ ನಾ ಪ್ರಜಾವಾಣಿ ಮಹಿಳೆ. ‘ದುಡಿಮೆಯ ಮಹಿಳೀಕರಣ.’ ‘ಪೆಮಿನೈಜೇಷನ್ ಗೆ’ ಸಂವಾದಿಯಾಗಿ ‘ಮಹಿಳೀಕರಣ’ ಪದವನ್ನು ಬಳಕೆಮಾಡಲಾಗಿದೆ.

ಮಳೆಕೊಯ್ಲುಗಾರ ನಾ ತರಂಗ ಮಳೆ ನೀರನ್ನು ಸಂಗ್ರಹಿಸುವವ. ‘ವೈದ್ಯರು ರೋಗಿಯನ್ನು ನೋಡಿದರಷ್ಟೇ ಸರಿಯಾದ ಚಿಕಿತ್ಸೆ ಕೊಡಲು ಸಾಧ್ಯವಾಗುವಂತೆ ಮಳೆ ಕೊಯ್ಲುಗಾರರಿಗೆ ಜಾಗ ನೋಡಿದರಷ್ಟೇ ವಿಷಯಕ್ಕೆ ಸರಿಯಾದ ನ್ಯಾಯ ಸಲ್ಲಿಸಲು ಸಾಧ್ಯ.’ ‘ಮಳೆಕೊಯ್ಲು’ ‘ಜಲಕೊಯ್ಲು’ ಈಗಾಗಲೇ ಬಳಕೆಯಾಗಿರುವ ಪದಗಳು. ಅದಕ್ಕೆ ‘ಗಾರ’ ಪ್ರತ್ಯಯ ಹಚ್ಚಿ ಪದರಚನೆ ಮಾಡಲಾಗಿದೆ.

ಮಹಿಳೋದಯ ನಾ ಉದಯವಾಣಿ ವಿವಿಧ ವಲಯಗಳಲ್ಲಿ ಮಹಿಳೆಯ ಅಭಿವೃದ್ದಿ. ‘ಬಡ ಕುಟುಂಬಗಳ ಪೋಷಣೆಗೆ ಆರ್ಥಿಕ ಸಹಾಯ, ಅನಾರೋಗ್ಯ ಪೀಡಿತರ ಶಶ್ರೂಷೆ, ಸೇವಾ ಯೋಜನೆಗಳಿಗೆ ಹಣ ಸಂಗ್ರಹ ಇತ್ಯಾದಿ. ಜವಾಬ್ದಾರಿಗಳನ್ನು ನಿಭಾಯಿಸಲು ಮಹಿಳೆಯರೇ ಕಂಡುಕೊಂಡ ದಾರಿ ಮಹಿಳೋದಯ.’ ಮಹಿಳೆ+ಉದಯ ಎಂಬ ಎರಡು ಪದಗಳು ಸೇರಿ ಸಂಧಿಕ್ರಿಯೆಗೆ ಅನುಗುಣವಾಗಿ ಬಂದಿರುವ ಪದ.

ಮಾರ್ಕ್ಸೀಕರಣ ನಾ ಕರ್ಮವೀ ಮಾರ್ಕ್ಸ್‌ವಾದ ‘ಭಾರತದ ಹೆಮ್ಮೆಯ ಐತಿಹಾಸಿಕ ಪರಂಪರೆ ಮಾರ್ಕ್ಸೀಕರಣಗೊಳ್ಳಬೇಕೋ ಅಥವಾ ಐತಿಹಾಸಿಕ…’ ಮಾರ್ಕ್ಸಜೇಷನ್‌ಗೆ ಸಂವಾದಿಯಾಗಿ ‘ಮಾರ್ಕ್ಸೀಕರಣ’ ಪದವನ್ನು ಬಳಕೆ ಮಾಡಲಾಗಿದೆ.

ಮಾನವೀಕರಣ ನಾ ಅಗ್ನಿ ಮನುಷತ್ವಗೊಳಿಸುವುದು. ಮಾನವನ ಬಾಳಿಗೆ ಸಂಬಂಧಿಸಿದ ‘ಹೀಗಾಗಿ ಅನಂತಮೂರ್ತಿ ಅವರು ತಮ್ಮ ಮೂಲದ ಅನುಭವಗಳನ್ನು ಸೃಜನಶೀಲ ಅಂತಃಕರಣದಲ್ಲಿ ಮಾನವೀಕರಣಗೊಳಿಸಲು ಸಾಧ್ಯವಾಗಿಲ್ಲ.’ ಇತ್ತೀಚೆಗೆ ‘ಈಕರಣ’ ಪ್ರತ್ಯಯದೊಡನೆ ಅನೇಕ ಪದಗಳು ಬಳಕೆಯಾಗುತ್ತಿರು ವುದು ಗಮನಿಸುವಂತಹ ಅಂಶ. ಆ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ.

ಮಾಲಿನ್ಯವಂತರು ನಾ ಅಗ್ನಿ ಮಲಿನಗೊಂಡಿರುವ ವ್ಯಕ್ತಿಗಳು, ಕಲುಷಿತಗೊಂಡಿರುವ ವ್ಯಕ್ತಿಗಳು. ‘ಅಧ್ಯಯನ ಒಂದನ್ನು ಬಿಟ್ಟು ಮಿಕ್ಕೆಲ್ಲ ಅಧ್ವಾನಗಳಲ್ಲಿ ನಿರತರಾಗಿರುವ ಗಂಗೋತ್ರಿಯ ಮಾಲಿನ್ಯವಂತರು ಅಲ್ಲಿನ ಸತ್ ಸಂಪ್ರದಾಯ ವಿದ್ವುತ್ ಪರಂಪರೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.’ ‘ಮಾಲಿನ್ಯ’ ಪದ ಮಾನವೇತರ ಪದಗಳೊಂದಿಗೆ ಬಳಕೆಯಲ್ಲಿದೆ. ಉದಾಹರಣೆಗೆ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಇತ್ಯಾದಿ… ಆದರೆ ವ್ಯಕ್ತಿಗಳಿಗೆ ಅನ್ವಯಿಸಿ ಪ್ರಯೋಗ ಮಾಡಿರಲಿಲ್ಲ. ‘ವಂತ’ ಪುಲ್ಲಿಂಗ ಸೂಚಕ ಪ್ರತ್ಯಯ. ಉದಾಹರಣೆಗೆ ಬುದ್ದಿವಂತ, ಗುಣವಂತ, ಹಣವಂತ, ಬಲವಂತ ಇತ್ಯಾದಿ… ಮಾಲಿನ್ಯವಂತರು ಹೊಸ ರೀತಿಯಲ್ಲಿ ಬಳಕೆಯಾಗಿರುವ ಪದ.

ಮಾಲೀಕಣಿ ನಾ ಕರ್ಮವೀ ಒಡತಿ, ಅಧಿಪತಿ. ‘ನಾಯಿಗಳೇನಾದರೂ ಇಶ್ಯೀ, ಸುಸ್ಸು ಮಾಡಿದರೆ ಮಾಲಿಕರೋ, ಮಾಲಿಕಣೀಯೋ ತಕ್ಷಣ ಶುದ್ಧಗೊಳಿಸಬೇಕು.’ ‘ಮಾಲಿಕ’ ಎಂಬ ಪದ ಪುರುಷವಾಚಕವಾಗಿ ಬಳಕೆಯಲ್ಲಿದೆ. ‘ಮಾಲೀಕಣಿ’ ಸ್ತ್ರೀವಾಚಕವಾಗಿ ಬಳಕೆ ಮಾಡಲಾಗಿದೆ. ಮಾದರಿ : ಪೋಲಿಸಿಣಿ, ಸ್ವಾಗತಕಾರಣಿ ಬಳಕೆಯಲ್ಲಿದೆ.

ಮಿನೌತಣ ನಾ ಲಂಕೇಶ್ಪತ್ರಿಕೆ ಅಲ್ಪ ಭೋಜನ ‘ತಿನ್ನುವವರಿಗೆ ಮಧ್ಯಾಹ್ನ ಮತ್ತು ರಾತ್ರಿ ಮಿನೌತಣ’. ‘ಮಿನಿ’ ಎಂಬ ಇಂಗ್ಲಿಶ್ ಪದಕ್ಕೆ ಔತಣ ಪದ ಸೇರಿಸಿ ಪದ ರಚನೆ ಮಾಡಲಾಗಿದೆ.

ಮೀಟರೀಕರಣ ನಾ ಮೀಟರ್‌ಗೆ ಅಳವಡಿಸುವುದು. ‘ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ವಿತರಣೆಯನ್ನು ಖಾಸಗೀಕರಣಗೊಳಿಸುತ್ತಿದೆ. ಇದರಿಂದ ವಿಪರೀತ ವಿದ್ಯುತ್ ದರ ಏರಿಕೆ, ಮೀಟರೀಕರಣದಂತಹ ಕ್ರಮಗಳು ಸಂಭವಿಸಿದೆ. ‘ಮೀಟರ್ ’ ಎಂಬ ಆಂಗ್ಲ ಪದಕ್ಕೆ ‘ಈಕರಣ’ ಪ್ರತ್ಯಯ ಹಚ್ಚಿ ಮೀಟರೀಕರಣ ಪದ ತರಲಾಗಿದೆ.

ಮಿಶ್ರಜ ನಾ ವಿಜಯಕರ್ನಾಟಕ ಎರಡು ವಿಭಿನ್ನ ಪ್ರಭೇದದ ಜೀವಿಗಳ ಕೂಟದಿಂದ ಹುಟ್ಟಿದ. ‘ಎರಡು ವಿಭಿನ್ನ ಪ್ರಭೇದದ ಜೀವಿಗಳ ಕೂಟದಿಂದ ಹುಟ್ಟಿದ ಹೊಸ ಜೀವಿಯನ್ನು ಮಿಶ್ರಜ (ಹೈಬ್ರಿಡ್) ತಳಿ ಎಂದು ಗುರುತಿಸುತ್ತಾರಲ್ಲವೆ?’. ಕನ್ನಡದಲ್ಲಿ ಮಿಶ್ರತಳಿ ಪದ ಬಳಕೆಯಲ್ಲಿದೆ. ಹೈಬ್ರಿಡ್‌ಗೆ ಸಂವಾದಿಯಾಗಿ ‘ಮಿಶ್ರತಳಿ’ ಪದ ಬಳಕೆಯಲ್ಲಿದೆ. ಸಮನಾರ್ಥಕವಾಗಿ ಮೇಲಿನ ಪದವನ್ನು ಬಳಸಲಾಗಿದೆ.

ಮಿಸ್ಸಮ್ಮ ನಾ ಪ್ರಜಾವಾಣಿ ಸೌಂದರ್ಯ ರಾಣಿ ‘ಮಿಸ್ ಸ್ಪರ್ಧೆಗೆ ಬಂದ ಮಿಸ್ಸಮ್ಮನ ಕೆನ್ನೆ ಗುಳಿಗೆ ಬಿದ್ದವರು. ಮರಿಗುಳಿಗೆಗಳಾಗಿ ಮತ್ತೆ ಮತ್ತೆ ಮಾರ್ಕ್ಸ್‌ನೀಡಿ ಮರೀಬೇಕೆಂದರೆ ಮರೆಯಲಿ ಹ್ಯಾಂಗೆ ಅಂದಾರು.’ ಇಂಗ್ಲೀಶಿನ ‘ಮಿಸ್ ‘ ಪದಕ್ಕೆ ಕನ್ನಡದ ‘ಅಮ್ಮ’ ಸೇರಿಸಿ ಬಳಕೆ ಮಾಡಲಾಗಿದೆ.

ಮುಕಟಧಾರಿಣಿ ನಾ ದಿಕ್ಸೂಚಿ ಕಿರೀಟ ದರಿಸಿರುವವಳು. ‘ಈ ವರ್ಷ ವಿಂಬಲ್ಡನ್ ಮುಕುಟಧಾರಿಣಿಯಾಗಿರುವ ಮರಿಯಾ ಶರಪೋವಾ ಆಟ ಮತ್ತು ಸೌಂದರ್ಯ ಮಾತ್ರವಲ್ಲ, ತೀಕ್ಷ್ಣಮತಿಯನ್ನು ಹೊಂದಿರುವ ಪ್ರಚಂಡ ನವಯುವತಿ.’ ಮುಕಟದಾರ; ಮುಕಟವರ್ಧನ ಮುಂತಾದ ಪುಲ್ಲಿಂಗ ಕೇಂದ್ರಿತ ಪದಗಳನ್ನು ಸ್ತ್ರೀ ಕೇಂದ್ರಿತ ಪದವನ್ನಾಗಿ ‘ಣಿ’ ಪ್ರತ್ಯಯದೊಂದಿಗೆ ಬಳಕೆ ಮಾಡಲಾಗಿದೆ. ಮಾದರಿ : ವಸ್ತ್ರದಾರಿಣಿ.

ಮುಕ್ಕಾಟ ನಾ ಅಗ್ನಿ ಮುಕ್ಕುವ ಕ್ರಿಯೆ. ‘ಶ್ರೀನಿವಾಸ್‌ರ ಲೇಟಿಸ್ಟ್ ಮುಕ್ಕಾಟ ಕಂಡು ಹಿಂದೆ ತಾವು ಆಡಿದ್ದ ಒಳ್ಳೆಯತನದ ದೇಶಾವರಿ ಮಾತುಗಳಿಗೆ ಜನ ತಾವೇ ಪೆಕರು ಬಿದ್ದಿದ್ದಾರೆ.’ ‘ಆಟ’ ಎಂಬ ಪದವನ್ನು ಇತರ ಪದಗಳ ಜೊತೆ ಸೇರಿಸಿ ಅನೇಕ ಪದಗಳನ್ನು ಬಳಸಲಾಗುತ್ತಿದೆ. ಸುಧಾ : ನೂಕಾಟ, ತಳ್ಳಾಟ, ಮುಂತಾದವು. ಇಲ್ಲೆಲ್ಲಾ ‘ಆಟ’ ಕ್ರೀಡೆ ಎಂಬ ರೀತಿಯಲ್ಲಿ ಬಳಕೆಯಾಗುವುದಿಲ್ಲ. ಮುಕ್ಕುವ ಆಟ ಎಂಬಂತೆ ಬಳಕೆಯಾಗದೆ ತಿಂದು ತೇಗುವುದು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ.

ಮುಂದುಳಿದ ನಾ ಉದಯವಾಣಿ ಗಡು ಆಧಾರಿತ ಅಧಿಕಾರದಲ್ಲಿ ಮುಂದುಳಿದಂತಹ ಕಾಲ. ‘ಮುಂದುಳಿದ ಅಧಿಕಾರದ ದಾಹ!’. ಹಿಂದುಳಿದ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ಮುನ್ನುಡಿಗಾರ ನಾ ಸುಧಾ ಮೊದಲ ಮಾತುಗಾರ. ‘ತಾನು ಮುನ್ನುಡಿ ಬರೆದ ಗ್ರಂಥದಲ್ಲಿ  ಕೊರತೆಗಳನ್ನು ಎತ್ತಿ ತೋರಿಸುವುದು ಮುನ್ನುಡಿಗಾರನ ಕೆಲಸವಲ್ಲ’ -ಗಾರ ಪ್ರತ್ಯಯವನ್ನು ಹಚ್ಚಿ ಪದರಚನೆ ಮಾಡಲಾಗಿದೆ. ಸಾಧ್ಯತೆ : ಹಿನ್ನುಡಿಗಾರ, ಬೆನ್ನುಡಿಗಾರ.

ಮುಹಿಂದ ನಾ ವಿಜಯಕರ್ನಾಟಕ ಮುಂದುವರಿದ. ‘ಮುಹಿಂದಮ ಸಂಘಟನೆ ಅಹಿಂದದ ಹೆಸರಿನಲ್ಲಿದ್ದು ಹಿಂದಿನ ಬ್ರಿಟನ್ ಪ್ರಧಾನಿ ಸರ್ ವಿನ್‌ಸ್ಟನ್ ಚರ್ಚಿಲ್ಲರು ನುಡಿದಂತೆ…’ ಅಹಿಂದದ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ಮುಗಾಯಣ ನಾ ಉದಯವಾಣಿ ಮೂಗಿಗೆ ಬರುವ ಕಾಯಿಲೆಗಳ ಪುರಾಣ. ‘ಹೆದರಬೇಡಿ! ಮೂಗು ಕೆಡುವುದು ಎಂಬುದಕ್ಕೆ ‘ನೆಗಡಿ’ ಎಂಬ ಅಂದದ ಪರಿಭಾಷೆಯುಂಟು.’ ಈ ಪ್ರಯೋಗವನ್ನು ಲಘಬರಹದಲ್ಲಿ ಬಳಕೆ ಮಾಡಲಾಗಿದೆ. ದೀರ್ಘವಾದ ಕತೆ, ಚರಿತ್ರೆಯನ್ನು ಸೂಚಸಲು ‘ಆಯಣ’ ಪದವನ್ನು ಬಳಕೆ ಮಾಡಲಾಗುತ್ತದೆ. ‘ರಾಮಾಯಣ’ ಪದವನ್ನು ಆಧರಿಸಿ ಇತ್ತೀಚಿನ ದಿನಗಳಲ್ಲಿ ಹಲವಾರು ಪದಗಳನ್ನು ಸೃಷ್ಟಿಸಲಾಗುತ್ತಿದೆ. ಆ ಗುಂಪಿಗೆ ಇದೊಂದು ಸೇರ್ಪಡೆ.

ಮೂರ್ಖತೆ ನಾ ತರಂಗ ದಡ್ಡತನದ ಗುಣಲಕ್ಷಣಗಳನ್ನು ಹೊಂದಿರುವುದು. ‘ಒಂದು ಕಾಗದ ಕೊಟ್ಟಕೂಡಲೇ ಅವನು ನಿನ್ನನ್ನು ಪ್ರೀತಿಸುತ್ತಾನೆಂದುಕೊಂಡ ನಿನ್ನ ಮೂರ್ಖತೆ…’ ಮೂರ್ಖತನಕ್ಕಿಂತ ಭಿನ್ನವಾದ ಅರ್ಥವೇನೂ ನೀಡುತ್ತಿಲ್ಲ.

ಮೂಡಿತನ ನಾ ವಿಜಯಕರ್ನಾಟಕ, ಮನಸ್ಸಿನ ಸ್ಥಿತಿ. ‘ಅದೇ ಮೂಡಿತನ ಅದೇ ಸಿಡುಕು, ಅದೇ ಜಗಳಗಂಟತನ.’ ಇಂಗ್ಲಿಶಿನ ‘ಮೂಡಿ’ ಪದಕ್ಕೆ ‘ತನ’ ಪ್ರತ್ಯಯ ಹಚ್ಚಿ ಪದ ರಚನೆ ಮಾಡಲಾಗಿದೆ.

ಮೂಲೆಗುಂಪೀಕರಣ ನಾ ತರಂಗ ಮೂಲೆ ಗುಂಪಾಗುವುದು. ‘ಜಾಗತೀಕರಣದ ಈ ದಿನಗಳಲ್ಲಿ ನಾವು ಮೂಲೆಗುಂಪೀಕರಣ ಆಗುವುದು ಖಂಡಿತ.’ ‘ಈಕರಣ’ ಪ್ರತ್ಯಯ ಹಚ್ಚಿ ಈ ಪದ ರಚನೆ ಮಾಡಲಾಗಿದೆ.

ಮೇಯ್ದಾಟ ನಾ ಅಗ್ನಿ ತಿನ್ನುವುದೇ ಕೆಲಸ. ‘ಹುಬ್ಬಳ್ಳಿ ಧಾರವಾಡ ‘ಹುಡಾ’ದಲ್ಲಿ ಎಚ್ಕೆ ಬೀಗ ಬಿ.ಎಸ್.ಪಾಟೀಲರ ಮೆಯ್ದಾಟ. ‘ಮೆಯ್ಯಿ’ ಕ್ರಿಯಾಪದ. ‘ಆಟ’ ನಾಮಪದ ಸೇರಿ ಒಂದು ಸಮಾಸ್ತ ಪದವಾಗಿ ಬಳಕೆ ಮಾಡಲಾಗಿದೆ. ಮಾದರಿ : ಬೈದಾಟ, ನೂಕಾಟ ಓಡಾಟ.

ಮೇಯರ್ಗಿರಿ ನಾ ಲಂಕೇಶ್ಪತ್ರಿಕೆ, ಮೇಯರ್ ವರ್ತನೆಗಳನ್ನು ತೋರುವುದು. ‘ಅಂದರೆ ಮೇಯರ್ ಗಿರಿ ರಬ್ಬರ್ ಸ್ಯಾಂಪ್ ಸ್ಥಿತಿಗೆ ತೀರಾ ಹತ್ತಿರವೆಂದೇ ಇಲ್ಲಿ ಅರ್ಥ.’ ದಿವಾನಗಿರಿ, ಶಭಾಸ್‌ಗಿರಿ ಪದಗಳ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ಮೇಯರಿಣಿ ನಾ ಲಂಕೇಶಪತ್ರಿಕೆ ನಗರಸಭೆಯ ಅಧ್ಯಕ್ಷೆ. ‘ತಮ್ಮಿಂದಾಗದ ಕೆಲಸಕ್ಕೆ ಮೇಯರಿಣಿ ನೇತೃತ್ವದ (ಬಾಕ್ಸ್ ನೋಡಿ) ಶಿಷ್ಯ ಬಣ ಕಳುಹಿಸಿದರು.’ ‘ಮೇಯರ್ ಪದಕ್ಕೆ ಸ್ತ್ರೀ ಸೂಚಕಪ್ರತ್ಯಯವಾದ -‘ಣಿ’ ಸೇರಿಸಿಕೊಂಡು ಪದ ರಚನೆ ಮಾಡಲಾಗಿದೆ. ಮಾದರಿ : ಮಾಸ್ಟರಿಣಿ, ಡಾಕ್ಟರಿಣಿ.

ಮೇಯ್ದಾವಿ ನಾ ಲಂಕೇಶ್ಪತ್ರಿಕೆ ಅಕ್ರಮವಾಗಿ ಹಣವನ್ನು ಗುಳುಂ ಮಾಡುವುದು. ‘ಪ್ರಾಮಾಣಿಕತೆಯ ಬಗ್ಗೆ ಸಾರ್ವಜನಿಕರಿಗೆ ಪುಕ್ಕಟೆ ಸಲಹೆಗಳನ್ನು ಕೊಡುವ ಬಿ.ಎ. ಮೊಯ್ದೀನ್ ಎಂಬ ಮೇಯ್ದಾವಿ….’ ಮಂಗಳೂರಿನ ಡಿಡಿಪಿಐ ಆಗಿದ್ದ ತಿರುಮಲರಾವ್ ಎಂಬ ನಟನೊಬ್ಬನೇ ೩.೮೦ ಕೋಟಿ ರೂಪಾಯಿ ಶಾಲಾ ಸಾಮಗ್ರಿ ಖರೀದಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿಯನ್ನು ಆಶಾ ಮತ್ತು ಜೇಬಿಗೆ ಇಳಿಬಿಟ್ಟಿದ್ದನು. ಇದೇ ಸಂಚಿಕೆಯಲ್ಲಿ ‘ಮೆಯ್ದಾಟ’ ದಾಖಲಿಸಲಾಗಿದೆ. ಮೇಲಿನ ಪ್ರಯೋಗ ಮೆದಾವಿಯಂತೂ ಅಲ್ಲ.

ಮೇಲ್ತೊಟ್ಟಿ ನಾ ವಿಜಯಕರ್ನಾಟಕ ನೀರಿನ ಟ್ಯಾಂಕ್. ‘ಇಲ್ಲಿಯ ಕೆಮ್ಮಣ್ಣು ಕುಣಿ ಗ್ರಾಮದಲ್ಲಿ ನೀರಿನ ಮೇಲ್ತೊಟ್ಟಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ’. ಅಪ್ಪರ್‌ಟ್ಯಾಂಕ್‌ಗೆ ಸಂವಾದಿಯಾಗಿ ಮೇಲ್ತೊಟ್ಟಿ ಪದ ಬಳಕೆ ಮಾಡಲಾಗಿದೆ.

ಮೇಸ್ಟ್ರಮ್ಮ ನಾ ಪ್ರಜಾವಾಣಿ, ಉಪಾಧ್ಯಾಯಿನಿ, ಶಿಕ್ಷಕಿ. ‘ಮುತ್ತಮ್ಮ : ವೈದ್ಯರಿಗೇ ಮೇಷ್ಟ್ರಮ್ಮ!’. ಇಂಗ್ಲೀಶಿನ ‘ಮಾಸ್ಟರ್’ ಪದ ಕನ್ನಡದಲ್ಲಿ ತದ್ಭವಗೊಂಡು ಮೇಸ್ಟ್ರು ಆಗಿದೆ. ಲಿಂಗಭೇದವಿಲ್ಲದೆ ಬಳಕೆಯಲ್ಲಿದೆ. ‘ಮೇಸ್ಟ್ರು’ ಪುಲ್ಲಿಂಗ ಎಂದು ತಿಳಿದು ಸ್ತ್ರೀಲಿಂಗ ಸೂಚಕವಾಗಿ ‘ಮೇಸ್ಟ್ರಮ್ಮ’ ಪದವನ್ನು ಬಳಕೆ ಮಾಡಲಾಗಿದೆ.

ಮೊಟ್ಟೆಗೋಲು ನಾ ಸುಧಾ ಉಪಾಯದ ಜಾಲ. ‘ಅವರನ್ನು ಹಿಡಿದು ಕದ್ದಮಾಲನ್ನು ಮೊಟ್ಟೆಗೋಲು ಹಾಕಲು ಈಗ ವಿವಿಧ ಬಗೆಯ ಜಾಲಗಳನ್ನು ಹೆಣೆಯಲಾಗುತ್ತಿದೆ.’ ಮೊಟ್ಟೆ ಆಕಾರದಲ್ಲಿ ಉಪಾಯದ ಜಾಲಗಳನ್ನು ಹೆಣೆಯುವುದರಿಂದ ಸುಲಭವಾಗಿ ಕಳ್ಳರನ್ನು ಹಿಡಿಯಲು ಸಾಧ್ಯ ಎಂಬ ಅರ್ಥದಲ್ಲಿ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ. ಮಾದರಿ : ಮುಟ್ಟುಗೋಲು.

ಮೊಬಯಲಾಟ ಕ್ರಿ ಕನ್ನಡಪ್ರಭ ಮೊಬೈಲ್ ಪೋನಿನ ಆಟ. ‘ಬುದ್ಧನೀಗ ಬದುಕಿದ್ದರೆ ಮೊಬೈಲ್ ಪೋನ್ ಇಲ್ಲದ ಮನೆಯ ಸಾಸಿವೆ ಕಾಳು ತನ್ನಿ ಎಂದು ತನ್ನ ಶಿಷ್ಯರಿಗೆ ಹೇಳುತ್ತಿದ್ದೇನೋ? ಈ ಮೊಬಯಲಾಟವನ್ನು ಸಾಧ್ಯವಾದಷ್ಟು ತಡೆಗಟ್ಟುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ!’. ಕಲಯುಗದ ಮುಂದಿನ ಅಂದರೆ ಇಂದಿನ ಯುಗ ‘ಮೊಬೈಲ್ ಯುಗ’ ಎಂದು ಹೇಳಬಹುದು. ಎಲ್ಲಿನ ನೋಡಿದರೂ ಮೊಬೈಲ್ ಪೋನುಗಳು ಮಕ್ಕಳ ಆಟದ ಸಾಮಾನುಗಳಂತೆ ಬಳಕೆಯಾಗುತ್ತಿವೆ. ಮೇಲಿನ ಪದವು ಬಯಲಾಟ ಅಥವಾ ಬಯಿಲಾಟ ಮಾದರಿಯಲ್ಲಿ ಬಳಕೆ ಮಾಡಿರಬಹುದು.

ಮೊಬೈಲಾಯಣ ನಾ ಸುಧಾ ಮೊಬೈಲಿನ ಪುರಾಣ. ‘ನೋಟ ಕಾಲಂನಲ್ಲಿ ಮೊಬೈಲಾಯಣ ಬಳಕೆ ಮಾಡಲಾಗಿದೆ. ಎಲ್ಲಿ ನೋಡಿದರೆ ಅಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್. ಮೊಬೈಲ್ ಇಲ್ಲದ ವ್ಯಕ್ತಿಯಿಲ್ಲ. ಇತ್ತೀಚಿಗಂತು ಮೊಬೈಲ್‌ನ ಪರಿಣಾಮದಿಂದ ಅನೇಕ ಪುರಾಣಗಳು ಸೃಷ್ಟಿಯಾಗುತ್ತಿವೆ. ಈ ಹಿನ್ನಲೆಯಿಂದ ಮೇಲಿನ ಪ್ರಯೋಗವನ್ನು ತರಲಾಗಿದೆ.

ಮೋಡಬೀಜಿಸಿದರೂ ಕ್ರಿ ಲಂಕೇಶ್ಪತ್ರಿಕೆ ಮೋಡಬಿತ್ತನೆ. ‘ಅಲ್ಲದೆ, ಮಳೆ ಮನಸ್ಸು ಮಾಡ್ಲಿಲ್ಲಾಂದ್ರೆ ಎಷ್ಟು ಹಸಿರು ಹಾಸಿದ್ರೂ ಅಷ್ಟೇ’. ಎಷ್ಟು ಮೋಡ ಬೀಜಿಸಿದರೂ(cloud-seeding) ಅಷ್ಟೇ. cloud seeding ಪದಕ್ಕೆ ಸಂವಾದಿಯಾಗಿ ಮೋಡ-ಬೀಜಿಸುದರೂ ಪದ ಬಳಕೆ ಮಾಡಲಾಗಿದೆ.

ಮೋಕ್ಷಗಾಮಿ ನಾ ಸುಧಾ ದೇವರೆಡೆಗೆ ಹೋಗುವುದು. ‘ಕೇವಲ ಜ್ಞಾನ ಪಡೆದು ಮೋಕ್ಷಗಾಮಿಯಾಗುತ್ತಾನೆ.’ ತೀವ್ರಗಾಮಿ, ಮಂದಾಗಾಮಿ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ಮೌಢ್ಯಾಸುರ ನಾ ಸುಧಾ ಮೌಢ್ಯತೆಗೆ ಹೆಸರುವಾಸಿಯಾದವ. ಮೌಢ್ಯತೆಯನ್ನು ಪಾಲಿಸುವವ. ‘ಒಂದು ಕಡೆ ಜಾತಿಮತಾಸುರ, ಇನ್ನೊಂದು ಕಡೆ ಮೌಢ್ಯಾಸುರ, ಮಗುದೊಂದು ಕಡೆ ಭ್ರಷ್ಟಾಸುರ ಕಟ್ಟಿಸುತ್ತಿದ್ದಾರಲ್ಲವೆ ಈ ದೇಶದ ಉಸಿರ?! ‘ಬಕಾಸುರ’ ಮಾದರಿಯಲ್ಲಿ ತಂದಿರುವ ಪದ.

ಮ್ಯಾಕ್ಡೊನಾಲ್ಡೀಕರಣ ನಾ ತರಂಗ ಮ್ಯಾಕ್ ಡೊನಾಲ್ಡನ ಛಾಪು ಪ್ರಭಾವ ಮೂಡಿಸುವುದು: ‘ಕಥೆಯನ್ನು ಹೇಳುತ್ತಲೇ ಈ ಕಥೆ ಮ್ಯಾಕ್ ಡೊನಾಲ್ಡೀಕರಣದ ವಿರುದ್ಧ ಹೋರಾಟದಂತೆ ಕಂಡಿದ್ದು ಕೇವಲ ಕಾಕತಾಳೀಯವಲ್ಲ; ವ್ಯಕ್ತಿಯ ಹೆಸರಿನೊಂದಿಗೆ ‘ಈಕರಣ’ ಪ್ರತ್ಯಯ ಬಳಸಿ ತಂದಿರುವ ಪದ. ಮೇಲಿನ ಪದ ಮ್ಯಾಕ್‌ಡೊನಾಲ್ಡ್ಕಿಸೇಶನ್‌ಗೆ ಸಂವಾದಿಯಾಗಿ ಬಳಕೆ ಮಾಡಲಾಗಿದೆ. ಮಾದರಿ: ವೀರಪ್ಪನೀಕರಣ.

ಮ್ಯಾನೇಜರ್ಗಿರಿ ನಾ ಲಂಕೇಶ್ಪತ್ರಿಕೆ ಮ್ಯಾನೇಜರ್ ಪದವಿ. ‘ಶಶಿರೇಖಾಗಿಂತಲೂ ಎಂಟುವರ್ಷ ಕಿರಿಯಳಾದ ಭವಾನಿ ಎಂಬಾಕೆಗೆ ಕಮಲಾನಗರ ಶಾಖೆಯ ಮ್ಯಾನೇಜರ್ ಗಿರಿ -‘ಗಿರಿ’ ಪ್ರತ್ಯಯವನ್ನು ಒಂದು ಅಧಿಕಾರ ಸ್ಥಾನವನ್ನು ಸೂಚಿಸಲು ಬಳಕೆ ಮಾಡಲಾಗುತ್ತಿದೆ. ಮಾದರಿ : ಛೇರ್ಮನ್ ಗಿರಿ.

 

ಯುದ್ಧೋತ್ತರ ನಾ ಉದಯವಾಣಿ ಯುದ್ಧದ ನಂತರ. ‘ಇತ್ತಿಚೆಗೆ ಭಾರತದ ಬೆಂಬಲ ಯಾಚಿಸಿದ ಅಮೇರಿಕ ಯುದ್ಧೊತ್ತರ ಇರಾಕ್‌ನಲ್ಲಿ ಭಾರತಕ್ಕೂ ಒಂದು ಪಾಲು ಕೊಡುವ ಭರವಸೆ ನೀಡಿದೆ.’ ಯುದ್ಧಕ್ಕೆ ‘ಉತ್ತರ’ ಪದ ಸೇರಿಸಿ ರಚನೆ ಮಾಡಲಾಗಿದೆ. ಇನ್ನು ಸ್ವಾತಂತ್ರ್ಯೋತ್ತರ, ಮರಣೋತ್ತರ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ಯುದ್ಧೋತ್ಪಾದ ನಾ ವಿಜಯಕರ್ನಾಟಕ ಯುದ್ಧಗಳು ಸೃಷ್ಟಿಯಾಗುವ ಕ್ರಿಯೆ. ‘ಅಮೇರಿಕಾ ದಂತಹ ದೇಶಗಳು ನೆಲ, ಜಲ, ತೈಲ, ಕುಲಕ್ಕಾಗಿ ಯುದ್ಧೋತ್ಪಾದನೆ’ ಮಾಡುತ್ತಿದ್ದರೆ’…..ಕೆಲವು ದೇಶಗಳು ವಸ್ತುಗಳನ್ನು ಉತ್ಪಾದನೆ ಮಾಡುವ ಮಾದರಿಯಲ್ಲಿ ಯುದ್ಧಗಳನ್ನು ಉತ್ಪಾದನೆ ಮಾಡುತ್ತವೆ ಎಂಬ ಅರ್ಥದಲ್ಲಿ ಮೇಲಿನ ಪದವನ್ನು ಬಳಕೆ ಮಾಡಿದಂತಿದೆ. ಅದರಲ್ಲಿ ಅಮೇರಿಕ ಪ್ರಸಿದ್ದಿ

ಯುದ್ಧೋತ್ಸಾಹಿ ನಾ ಉದಯವಾಣಿ ಯುದ್ಧ ಹೂಡುವುದರಲ್ಲಿ ಆಸಕ್ತಿ ಇರುವವನು. ‘ಯುದ್ಧೋತ್ಸಾಹಿ ಅಮೆರಿಕಾಕ್ಕೆ ಪಾಠ ಕಲಿಸಲು ಆಗ್ರಹ.’ ಯುದ್ಧ ಮತ್ತು ಉತ್ಸಾಹಿ ಪದಗಳೆರಡನ್ನು ಸೇರಿಸಿ ಪದ ರಚನೆ ಮಾಡಲಾಗಿದೆ. ಮಾದರಿ : ಆನಂದ್ದೋತ್ಸಾಹಿ.

ಯುದ್ಧೋತ್ಪಾದಕ ನಾ ಪ್ರಜಾವಾಣಿ ಯುದ್ಧವನ್ನು ಹುಟ್ಟಿಸುವವ. ‘ಲಾಡೆನ್ ಭಯೋತ್ಪಾದಕ ಅಮೇರಿಕಕ್ಕೆ.’ ‘ಬುಷ್ ಯುದ್ಧೋತ್ಪಾದಕ ಪ್ರಪಂಚಕ್ಕೆ.’ ಇದು ಭಯೋತ್ಪಾದಕ ಮಾದರಿಯಲ್ಲಿ ಬಳಕೆ ಮಾಡಲಾಗಿದೆ. 

ರತಿಚೌರ್ಯ ನಾ ಸುಧಾ ಹೆಣ್ತನವನ್ನು ಕದಿಯುವುದು. ‘ಈಗ ಅಮ್ಮ ತನ್ನ ಮಗಳ ಮೇಲೆ ರತಿಚೌರ್ಯದ ದಾವೆ ಹೂಡಿದ್ದಾಳೆ. ಇದು ರತಿಚೌರ್ಯದ ಪ್ರಕರಣ!’. ‘ಕೃತಿಚೌರ್ಯ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ರಕ್ತರಂಜಿತ ನಾ ವಿಜಯಕರ್ನಾಟಕ ಬೇರೆ ಬೇರೆ ಬಣ್ಣಗಳ ರಕ್ತದಿಂದ ಕೂಡಿರುವ ದೃಶ್ಯ. ‘ಬರೀ ರಕ್ತರಂಜಿತ ದೃಶ್ಯಗಳೇ ಜಾಸ್ತಿ. ಬ್ಲ್ಯಾಕ್ ಆಂಡ್ ವೈಟ್ ಟಿವೀನೆ ಇರಬೇಕಿತ್ತು…’ ವರ್ಣರಂಜಿತ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ರತಿಭಟನೆ ನಾ ಸುಧಾ ಸ್ತ್ರೀ ವಿರೋಧ ಚಳುವಳಿ ‘ಗರ್ಲ್‌ಫ್ರೆಂಡ್ ಚಲನಚಿತ್ರ ಅದರ ಬಗ್ಗೆ ಹಲವೆಡೆ ಭುಗಿಲೆದ್ದ ಪ್ರತಿಭಟನೆ.’ (ಅದನ್ನೂ ರತಿಭಟನೆ ಎಂದು ಕರೆಯಬಹುದೆ?) ಮುಂದೆ ಇದಕ್ಕೆ ಸಂವಾದಿಯಾಗಿ ‘ಬಾಯ್ ಫ್ರೆಂಡ್ ’ ಎಂಬ ಚಿತ್ರ ಒಂದು ವೇಳೆ ತಯಾರಾದರೆ! ಸ್ತ್ರೀಯರ ವಿರೋಧ ಚಿಂತನೆಗಳು ಗರ್ಲ್‌ಫ್ರೆಂಡ್ ಚಿತ್ರದಲ್ಲಿರುವುದರಿಂದ ಅದರ ವಿರುದ್ಧ ಪ್ರತಿಭಟನೆ ಎಂದು ಕರೆಯುವುದಕ್ಕಿಂತ ರತಿಭಟನೆ ಎಂದು ಕರೆಯುವುದು ಸೂಕ್ತವಲ್ಲವೇ? ಎಂಬುದು ಮೇಲಿನ ಪದದ ಆಶಯ.

ರಸ್ತೆಫಲಕ ನಾ ಸುಧಾ ರಸ್ತೆಗಳ ಹೆಸರು. ‘ಅಲ್ಲಿನ ರಸ್ತೆಫಲಕಗಳನ್ನೂ ಬ್ರೇಲ್ ಲಿಪಿಯಲ್ಲೇ ಬರೆಯಬೇಕು ಎಂದು ಲೇವಡಿ ಮಾಡುತ್ತಿದ್ದರು’. ‘ನಾಮಫಲಕ’ ಮಾದರಿ ಯಲ್ಲಿ ಪದರಚನೆ ಮಾಡಲಾಗಿದೆ. ರಸ್ತೆ, ಅಂಗಡಿ, ಮನೆ ಮುಂತಾದ ಕಡೆಗಳಲ್ಲಿ ನಾಮಫಲಕ ಹಾಕುವುದು ರೂಢಿ. ಆದರೆ ನಿರ್ದಿಷ್ಟವಾಗಿ ರಸ್ತೆಯಲ್ಲಿ ಹಾಕಿರುವ ಫಲಕಕ್ಕೆ ರಸ್ತೆ ಫಲಕ ಎಂದು ಬಳಕೆ ಮಾಡಲಾಗಿದೆ.

ರಾಜಕಾರಣೋದ್ಯಮ ನಾ ಉದಯವಾಣಿ ರಾಜಕಾರಣವೆ ಒಂದು ಉದ್ಯಮ. ‘ರಾಜಕಾರಣೋ ದ್ಯಮ ಪರ್ವವು! ಕೈಗಾರಿಕೋದ್ಯಮ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ರಾಜ್ಯಾಯಣ ನಾ ಉಷಾಕಿರಣ ರಾಜ್ಯದ ಪುರಾಣ. ‘ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಕುರಿತು ವಿಶ್ಲೇಷಿಸುವಾಗ ಆಡಿರುವ ಮಾತಿದು. ಧೀರ್ಘವಾದ ಕತೆ, ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ ಲಘು ಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ರಾತ್ರಿತನ ನಾ ಅಗ್ನಿ ರಾತ್ರಿಗಳ ಸ್ಥಿತಿ. ‘ಅವನ ಬದುಕಿನಲ್ಲಿ ರಾತ್ರಿಗಳು ತಮ್ಮ ರಾತ್ರಿತನವನ್ನು ಕಳೆದುಕೊಂಡಿದ್ದವು.’ -‘ತನ’ ಪ್ರತ್ಯಯ ಸೇರಿಕೊಂಡು ರಚನೆ ಆಗಿರುವ ಪದ.

ರಿಂಗಾಯಣ ನಾ ತುಷಾರ ದೂರವಾಣಿಗಳ ಪುರಾಣ/ಕತೆ. ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘು ಹರಟೆ ಮುಂತಾದ ಸಂಧರ್ಭಗಳಲ್ಲಿ ಬಳಸಲಾಗುತ್ತಿದೆ. ‘ರಿಂಗ್’ ಎಂಬ ಇಂಗ್ಲೀಶ್ ಪದಕ್ಕೆ ‘ಆಯಣ’ ಪದವನ್ನು ಸೇರಿಸಿ ಪದರಚನೆ ಮಾಡಲಾಗಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ.

ರೀಮೇಕಾಯಣ ನಾ ಅಗ್ನಿ ರೀಮೇಕ್‌ಗಳ ಪುರಾಣ/ಕತೆ. ‘…ಸದ್ಯಕ್ಕೆ ತಮಿಳಿನ ‘ದಳಪತಿ’ ಚಿತ್ರವನ್ನು ರೀಮೇಕ್ ಮಾಡುತ್ತಿರುವ ಓಂ ಆ ಚಿತ್ರದ ರೀಮೇಕಾಯಣ ಮುಗಿದ ತಕ್ಷಣ, ಆತನೇ ನಾಯಕನಾಗಿರುವ ಮಗದೊಂದು ಚಿತ್ರವನ್ನು ಆರಂಭಿಸಲಿದ್ದಾರಂತೆ.’ ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘು ಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ‘ರೀಮೇಕ್’ ಪದಕ್ಕೆ ಆಯಣ ಪದವನ್ನು ಸೇರಿಸಿ ಬಳಕೆ ಮಾಡಲಾಗಿದೆ. ಮಾದರಿ : ಗ್ರಾಮಾಯಣ, ಆಫಿಸಾಯಣ

ರೂಢನಂಬಿಕೆ ನಾ ಸುಧಾ ಪ್ರಸಿದ್ಧವಾದ ನಂಬಿಕೆ. ‘ಏಕೆಂದರೆ ಅಲ್ಲಿನದು ದಟ್ಟವಾಗಿದ್ದರೆ ಅದು ಸಂತಾನಶಕ್ತಿಯ ಸಂಕೇತ ಎಂಬ ರೂಢನಂಬಿಕೆ ಅಲ್ಲಿದೆ!’ ಮೂಡನಂಬಿಕೆ ಮಾದರಿಯಲ್ಲಿ ಬಳಕೆಯಾಗಿದೆ.

ರೂqsಕರಣ ನಾ ತುಷಾರ ಪ್ರಸಿದ್ಧ. ‘ಅದು ನಂಬಿಕೆಯ ಪರಿಧಿಯಲ್ಲಿ ನೆಲೆಸಿ ಪರಂಪರೆಯ ಕಕ್ಷದಲ್ಲಿ ರೂqsಕರಣಗೊಂಡಿದೆ ಎನ್ನಬಹುದು’. ‘ಈಕರಣ’ ಪ್ರತ್ಯಯ ದೊಂದಿಗೆ ಬಂದಿರುವ ಪದವಿದು.

ರೋಡ್ಪತಿ ನಾ ಸುಧಾ ಬೀದಿಗೆ ಒಡೆಯ. ‘ನಿನ್ನೆ ರೋಡ್‌ಪತಿ ಇಂದು ಕರೋಡ್ ಪತಿ.’ ನಿದರ್ಶನದಲ್ಲೇ ಬಳಕೆ ಆಗಿರುವಂತೆ ಇದು ಕರೋಡ್ ಪತಿ ಮಾದರಿಯಲ್ಲಿ ಬಳಕೆ ಮಾಡಲಾಗಿದೆ.

ರೋಷೋತ್ಪಾದಕಿ ನಾ ಪ್ರಜಾವಾಣಿ ಕೋಪವನ್ನು ಹುಟ್ಟಿಸುವವಳು. ‘ಜಯಲಲಿತ ರೋಷೋತ್ಪಾದಕಿ ಕರ್ನಾಟಕಕ್ಕೆ.’ ‘ರೋಷೋತ್ಪಾದಕ’ ಪುಲ್ಲಿಂಗವೆಂದು ಭಾವಿಸಿ ‘ರೋಷೋತ್ಪಾದಕಿ’ ಎಂದು ‘ಇ’ ಕಾರಂತಗೊಳಿಸಿ ರಚನೆ ಮಾಡಲಾಗಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಪದದಾಂತ್ಯ ಪರಿಸರ ‘ಅ’ ಕಾರಂತವಾದರೆ ಪುಲ್ಲಿಂಗವಾಗಿಯೂ, ‘ಇ’ ಕಾರಂತವಾಗಿದ್ದರೆ ಸ್ತ್ರೀಲಿಂಗವಾಗಿರುತ್ತದೆ ಎಂಬ ಸಾಮಾನ್ಯ ನಿಯಮದ ಹಿನ್ನೆಲೆಯಲ್ಲಿ ಈ ಹೊಸ ಪದವನ್ನು ರಚಿಸಲಾಗಿದೆ.

ರೈತಾವತಾರ ನಾ ವಿಜಯಕರ್ನಾಟಕ ರೈತರ ವೇಷದಲ್ಲಿರುವವ. ‘ವಾಚಕರ ವಿಜಯ ಕಾಲಂನಲ್ಲಿ ರೈತಾವತಾರ ಪದ ಬಳಕೆಯಲ್ಲಿದೆ; ಇದು ‘ದಶಾವತಾರ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.