ಲಂಗರುಗಾರ್ತಿ ನಾ ಸುಧಾ ಕಾರ‍್ಯಕ್ರಮ ನಿರೂಪಕಿ. ‘ಬಂಗಾಳೀ ಟಿವಿ ಚಾನೆಲ್ ಒಂದರಲ್ಲಿ ಲಂಗರುಗಾರ್ತಿ(ಆಂಕರ್‌ವುಮನ್) ಆಗಿದ್ದ ತನುಶ್ರೀ ದತ್ತಾ ಈಗ ಲಂಗದಾವಣಿ ಬಿಚ್ಚಿ ತನ್ನ ತನುಸಿರಿಯನ್ನು ಪ್ರದರ್ಶಿಸಲು ಬಂದಿದ್ದಾಳೆ.’ ಆಂಕರ್ವ್ಯುಮನ್‌ಗೆ ಸಂವಾದಿ ಯಾಗಿ ಕನ್ನಡದಲ್ಲಿ ಲಂಗರುಗಾರ್ತಿ ಪದ ಬಳಕೆ ಮಾಡಲಾಗಿದೆ.

ಲಂಚಗಡುಕ ನಾ ಲಂಕೇಶ್ತ್ರಿಕೆ ಲಂಚ ತೆಗೆದುಕೊಳ್ಳುವವನು. ‘ಪರಿಸರ ವಾದಿಗಳ ಕಪ್ಪು ವಾದಗಳ ವಿರುದ್ಧ ಈವರೆಗೆ ಸೈದ್ಧಾಂತಿಕ ಸಂಘರ್ಷ ನಡೆಸದೆ ಏಕಾಏಕಿ ಪರಿಸರವಾದಿಗಳು ವಿದೇಶಿ ಲಂಚಗಡುಕರು ಎಂದು ಚೀರಾಡುವುದು. ಕಾರ್ಮಿಕರ ಬಗೆಗಿನ ನಿಜವಾದ ಕಳಕಳಿಯನ್ನು ವ್ಯಕ್ತಪಡಿಸುವಂಥದಲ್ಲ… ಕೊಲೆಗಡುಕ ಮಾದರಿಯಲ್ಲಿ ಪದೊರಚನೆ ಮಾಡಲಾಗಿದೆ.

ಲಂಚಕೋರಿ ನಾ ಭುವನಸಂಗತಿ ಲಂಚವನ್ನು ನುಂಗುವವಳು. ‘ಲಂಚಕೋರಿ ಯೋಜನಾ ನಿರ್ದೇಶಕಿ ಪದ್ಮ!’. ಒಬ್ಬ ವ್ಯಕ್ತಿಯ ಗುಣಸ್ವಭಾವವನ್ನು ಸೂಚಿಸುವುದಕ್ಕಾಗಿ ‘ಕೋರ್’ಎಂಬ ಬದ್ಧರೂಪವನ್ನು ಹತ್ತಿಸಲಾಗುತ್ತಿದೆ. ‘ಲಂಚಕೋರ’ ಸ್ತ್ರೀಲಿಂಗ ಪದವನ್ನಾಗಿ ಲಂಚಕೋರಿ ಪದವನ್ನು ಬಳಕೆ ಮಾಡಲಾಗಿದೆ.

ಲಂಚದೇವ ನಾ ವಿಜಯಕರ್ನಾಟಕ ಲಂಚವನ್ನು ತೆಗೆದುಕೊಳ್ಳುವವನು. ‘ಲಂಚದೇವ ಸಚಿವ ಜುದೇವ್ ದಿಲ್ಲಿ ರಾಜಕೀಯದಲ್ಲಿ ಮತ್ತೊಂದು ತೆಹಲ್ಕಾ!’. ಸಾದೃಶ್ಯತೆಯಿಂದ ಜುದೇವ್ ಬೇರೆ ಯಾರೂ ಅಲ್ಲ ಅವನೊಬ್ಬ ಲಂಚದೇವ ಎನ್ನುವ ಅರ್ಥದಲ್ಲಿ ಬಳಕೆ ಮಾಡಲಾಗಿದೆ. ಕನ್ನಡದಲ್ಲಿ ಲಂಚಕೋರ, ಲಂಚಕೋರಿ, ಲಂಚಗಾರ, ಲಂಚಿಗ ಮುಂತಾದ ಪದಗಳಿರುವಾಗ ಲಂಚ ಪಡೆದಿರುವ ವ್ಯಕ್ತಿನಾಮದ ಸಾದೃಶ್ಯತೆಯಿಂದಲೆ ಪದರಚನೆ ಮಾಡಿರುವುದು ವಿಶೇಷ.

ಲಂಚಬಾಕತನ ನಾ ಲಂಕೇಶ್ತ್ರಿಕೆ ಲಂಚ ಪಡೆಯುವುದೇ ಒಂದು ಹವ್ಯಾಸವಾಗಿರುವ ಕ್ರಿಯೆ. ‘ಲಂಚಬಾಕತನ’ ಎಂಬ ಕಾಯಿಲೆ’. ‘ಲಂಚ ಎಂಬ ನಾಮಪದಕ್ಕೆ ‘ಬಾಕ’ ‘ತನ’ ಎಂಬ ರೂಪಗಳನ್ನು ಹಚ್ಚಿ ಬಳಕೆ ಮಾಡಲಾಗಿದೆ. -‘ಬಾಕ’ ರೂಪ ಕೇವಲ ವಿವರಣೆಗೆ ಮಾತ್ರ ಸೀಮಿತವಾಗದೆ, ಸಾಮಾಜಿಕವಾದ ವ್ಯಾಖ್ಯಾನವನ್ನು ಕೂಡ ಈ ರೂಪ ಒದಗಿಸುತ್ತದೆ. ‘ಲಂಚಬಾಕ’ ಎಂದಾಗ ಲಂಚವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುವುದು ಸಹನೀಯವಲ್ಲವೆಂಬ ಅರ್ಥ ಕೂಡ ಅಂತರ್ಗತವಾಗಿರುತ್ತದೆ. -‘ತನ’ ಪ್ರತ್ಯಯವನ್ನು ಸಹಜವಾಗಿ ಬಳಕೆ ಮಾಡಲಾಗಿದೆ. ಲಂಚಗುಳಿತನ ಲಂಚಕೋರ್ ತನ ಪದಗಳಿಗಿಂತ ಭಿನ್ನವಾಗಿ ಬಳಕೆಯಾಗಿದೆ. ಹೊಟ್ಟೆಬಾಕ; ಕೊಳ್ಳುಬಾಕ ಪದಗಳು ಬಳಕೆಯಲ್ಲಿವೆ.

ಲಂಚಭರಿತ ನಾ ಕರ್ಮವೀ ಲಂಚಮಯ. ‘ನಮಸ್ಕಾರ ನನ್ನ (ಲಂಚಭರಿತ) ಬಂಧುಗಳೇ, ಸಮ್ಮೇಳನದಲ್ಲಿ ನಿಮ್ಮ ಆಸಕ್ತಿದಾಯಕ ಪಾಲ್ಗೊಳ್ಳುವಿಕೆ ಕಂಡು ಮನಸು ತುಂಬಿ…!’ ‘ಜನ ಭರಿತ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಲಂಚವಾದಿ ನಾ ಕರ್ಮವೀ ಲಂಚದ ಬಗ್ಗೆ ವಾದಿಸುವವನು. ‘ಲಂಚಕೋರುವವರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟರೆ, ಅವರನ್ನು ನಿಂದಿಸಿದರೆ ‘ಲಂಚವಾದಿಗಳ’ ಹಿತಾರಕ್ಷಣಾ ಸಮಿತಿಯ…?’. ‘ನ್ಯಾಯವಾದಿ’ ಮಾದರಿ ಯಲ್ಲಿ ಪದ ರಚನೆ ಮಾಡಲಾಗಿದೆ. ಲಂಚವಾದಿ ಹಿತಾರಕ್ಷಣಾ ಸಮಿತಿ ಕಾನೂನಿಗೆ ಬಾಹಿರವಾದುದು.

ಲಂಚಬುರುಕ ನಾ ಹಲೋಬೆಂಗಳೂರು ಲಂಚವನ್ನು ಆಸೆ ಪಡುವವನು. ‘ಲಂಚಬುರುಕನನ್ನು ಲೋಕಾಯುಕ್ತರು ಬಂಧಿಸಿ ತೋರಿಸುತ್ತಾರೆ.’ ‘ಆಸೆ ಬುರುಕ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಲಂಚರಾಕ್ಷಸ ನಾ ಪ್ರಜಾವಾಣಿ ಲಂಚವನ್ನು ಆಹಾರದ ರೂಪದಲ್ಲಿ ಪಡೆಯುವವ. ‘ಇವರ ಧನದಾಹಕ್ಕೆ ಬಲಿಯಾಗದಂತೆ ಲಂಚರಾಕ್ಷಸನ ಹಸಿವಿಗೆ ಆಹಾರವಾಗದಂತೆ ದುರ್ದೈವಿ ದುಃಖಿಗಳನ್ನು ಯಾರು ರಕ್ಷಿಸುತ್ತಾರೆ?!’. ಲಂಚ ಮತ್ತು ರಾಕ್ಷಸ ಬೇರೆ ಬೇರೆ ಪದಗಳೇ ಸರಿ. ಹಣವನ್ನು ಆಹಾರದ ಮಾದರಿಯಲ್ಲಿ ಕಬಳಿಸುವ ಕ್ರಿಯೆಗೆ ಲಂಚ ರಾಕ್ಷಸ ಎಂದು ಬಳಸಿದಂತಿದೆ.

ಲಂಚಾಸುರ ನಾ ಅಗ್ನಿ ಹೆಚ್ಚು ಲಂಚ ಪಡೆಯುವವನು. ‘ಲಂಚಾಸುರರ ಸಂಹಾರಕ್ಕೆಂದು ಕೊಡಲಿಯೆತ್ತಿ ಹೊರಟ ದಿಗ್ಗಿಜನೊಬ್ಬನ ಅಸ್ತ್ರತ್ಯಾಗದ ದಿನ.’ ‘ಬಕಾಸುರ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಲಂಚಾವತಾರಿ ನಾ ಕರ್ಮವೀ ಲಂಚದ ವೇಷದಾರಿ ‘ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾಗಾಂಧಿ ತಮ್ಮ ಪಕ್ಷದ ‘ಲಂಚಾವತಾರಿ’ಯನ್ನು ಕಂಡರೆ ಸಸ್ಪೆಂಡ್ ಮಾಡುವಂತೆ ಪೋನು ಮಾಡಿದರೆ,…! ‘ಲಂಚಾವತಾರಿ’ ಪದ ಪುರುಷವಾಚಕವಾಗಿ ಬಳಕೆಯಾಗಿದೆ. ಸಾಧ್ಯತೆ : ಲಂಚಾವತಾರಿಣಿ.

ಲಜ್ಜಾತೀತ ನಾ ಪ್ರಜಾವಾಣಿ ನಾಚಿಕೆ ಇಲ್ಲದ, ನಾಚಿಕೆಗೇಡಿ ‘ಲಜ್ಜಾತೀತರು’. ‘ಜಾತ್ಯಾತೀತ’ ಪದದ ಮಾದರಿಯಲ್ಲಿ ಬಂದಿರುವ ಪದ ಸಂದರ್ಭವನ್ನು ಅವಲಂಬಿಸಿ ಪದಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಮೇಲಿನ ಪದ ಒಂದು ನಿದರ್ಶನ. ಏಕೆಂದರೆ ‘ನಾಚಿಕೆಗೇಡಿ’ ಪದದ ಅರ್ಥಕ್ಕಿಂತ ಬೇರೇನೂ ಅರ್ಥ ನೀಡುತ್ತಿಲ್ಲ.

ಲಾಟರಿಕೋರ ನಾ ಲಂಕೇಶ್ಪತ್ರಿಕೆ ಲಾಟರಿಯಲ್ಲಿ ಆಸಕ್ತಿ ಇರುವವನು. ‘ಚಿತ್ರದುರ್ಗದಲ್ಲಿರು ವಷ್ಟು ದಿನ ಮಂತ್ರಿ ರಂಗನಾಥ್ ಗಾಡಫಾದರ್ ಆಗಿದ್ದಾರೆ. ಉಡುಪಿಗೆ ಸಿಂಗಲ್ ನಂಬರ್ ಲಾಟರಿಕೋರರೇ ದುಡ್ಡು ಕೊಟ್ಟು ಹಾಕಿಸಿಕೊಂಡರು.’ ಇತ್ತೀಚೆಗೆ ಒಬ್ಬ ವ್ಯಕ್ತಿಯ ಗುಣ ಸ್ವಭಾವವನ್ನು ಸೂಚಿಸುವುದಕ್ಕಾಗಿ ‘ಕೋರ’ ಎಂಬ ಬದ್ಧರೂಪವನ್ನು ಹತ್ತಿಸಲಾಗುತ್ತಿದೆ. ಕೆಲವು ಪದಗಳಿಗೆ ‘ಖೋರ್’ ಎಂಬ ಪರ್ಸೋ ಅರೇಬಿಕ್ ಪ್ರತ್ಯಯವನ್ನು ಬಳಸಲಾಗಿದೆ. ಮಾದರಿ : ದಗಾಕೋರ, ಲಂಚಕೋರ, ಯುದ್ಧಖೋರ.

ಲಾಡೂಟ ನಾ ಆಂದೋಲನ ಲಾಡಿನ ಊಟ. ‘ಬಾಡೂಟವಲ್ಲ; ಅದು ಲಾಡೂಟ.’ ‘ಬಾಡೂಟ’ ಎಂದರೆ ಅದೊಂದು ವಿಶಿಷ್ಟವಾದ ಊಟವೆ. ಅದಕ್ಕೊಂದು ಊಟದ ಮೀಮಾಂಸೆಯೆ ಇದೆ. ಆದರೆ ‘ಲಾಡೂಟ’ ಎಂದರೆ ಬರಿ ಲಾಡಿನಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಬಾಡೂಟದಲ್ಲಿ ಒಂದು ಸಿಹಿ ತಿಂಡಿಯಾಗಿ ಲಾಡನ್ನು ಬಡಿಸಬಹುದು. ‘ಬಾಡೂಟ’ ಮಾದರಿಯಲ್ಲಿ ತಂದಿರುವ ಪದವಿದು.

ಲಾಭಕೋರ ನಾ ಅಗ್ನಿ ಲಾಭವನ್ನು ಪಡೆಯುವವನು. ‘ಈ ಉನ್ಮಾದವನ್ನು ಲಾಭಕೋರ ದಂಧೆಯನ್ನಾಗಿ ಪರಿವರ್ತಿಸಿಕೊಳ್ಳಲು ಚಿನ್ನ ಮಾರಾಟಗಾರರ ಜಾಲ ಜಾಗೃತವಾಗಿದೆ.’ ‘ಕೋರ’ ಪ್ರತ್ಯಯವುಳ್ಳ ರೂಪಗಳು ಹೀನಾರ್ಥವನ್ನೇ ಸೂಚಿಸುತ್ತವೆ. ‘ಲಾಭ’ ಮತ್ತು ‘ಕೋರ’ ರೂಪಗಳ ಸಂಯೋಜನೆಯಿಂದ ಪಡೆದ ರಚನೆಯಿದು. ಮಾದರಿ : ಲಂಚಕೋರ, ದಗಾಕೋರ, ಹಲಾಲಕೋರ.

ಲಾಬಿಕೋರ ನಾ ವಿಜಯಕರ್ನಾಟಕ ಮೋಸ, ವಂಚನೆ ಮಾಡುವ ವ್ಯಕ್ತಿ. ‘ಲಾಬಿಕೋರರಿಗೆ ವಯಲಾರ್ ಎಚ್ಚರಿಕೆ’. ಕೋರ ಎಂಬ ಸಾಧಕ ಪ್ರತ್ಯಯ ಪರ್ಸೋ ಅರಾಬಿಕ್ ಮೂಲದ್ದು. ಕನ್ನಡದ ಲಾಭ ಪದಕ್ಕೆ ಕೋರ ಪ್ರತ್ಯಯವನ್ನು ಸೇರಿಸಿ ಹೊಸ ಪದ ರಚನೆ ಮಾಡಲಾಗಿದೆ.

ಲಿಂಗತ್ವ ನಾ ವಿಜಯಕರ್ನಾಟಕ ಗಂಡು ಮತ್ತು ಹೆಣ್ಣು. ‘ಲಿಂಗತ್ವ ಕಾರ್ಯಾಗಾರ ಉದ್ಘಾಟನೆ’. ‘ಪುರುಷತ್ವ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಲಿಂಗವನ್ನು ಕುರಿತ ಕಾರ್ಯಗಾರ ಎಂದರೆ ಸಾಕಾಗಿತು. ‘ಲಿಂಗತ್ವ’ ಪದ ಅರ್ಥದಲ್ಲಿ ಹೊಸದೇನು ಹೇಳುವುದಿಲ್ಲ.

ಲೆಪ್ಟೀಕರಣ ನಾ ತರಂಗ ಎಡಪಂಥೀಯ ವಿಚಾರ. ‘ವೈದ್ಯ ಪ್ರಪಂಚವನ್ನು ಅಚ್ಚರಿಯಲ್ಲಿ ಕೆಡವಿದ ಮಹತ್ವದ ಸಂಶೋಧನೆಯೇ ಪ್ಲಾಸ್ಟಿನೇಶನ್ ಅಚ್ಚಕನ್ನಡದಲ್ಲಿ ಇದನ್ನೇ ಲೆಪ್ಟೀಕರಣ ಎನ್ನುತ್ತಾರೆ.’ ಇಂಗ್ಲಿಶಿನ ಪ್ಲಾಸ್ಟಿನೇಶನ್ ಪದಕ್ಕೆ ಸಂವಾದಿಯಾಗಿ ಲೆಷ್ಟೀಕರಣ ಪದವನ್ನು ಪ್ರಯೋಗ ಮಾಡಲಾಗಿದೆ. 

ವಕ್ತಾರಿಣಿ ನಾ ಉದಯವಾಣಿ ಪಕ್ಷ ಅಥವಾ ಸಂಸ್ಥೆಯ ಪರವಾಗಿ ಅಧಿಕೃತವಾಗಿ ಮಾತನಾಡುವವಳು. ‘ಅನಂತ್ ಚುನಾವಣಾ ಸಮಿತಿ ಸದಸ್ಯ. ಸುಷ್ಮಾ ವಕ್ತಾರಿಣಿ ಈಗಾಗಲೇ ಲಿಂಗಭೇದವಿಲ್ಲದೆ’. ‘ವಕ್ತಾರ’ ಪದ ಬಳಕೆಯಲ್ಲಿದೆ. ‘ವಕ್ತಾರ’ ಪದವನ್ನು ಪುಲ್ಲಿಂಗ ಎಂದು ತಿಳಿದು ಸ್ತ್ರೀಲಿಂಗ ಸೂಚಕವಾಗಿ ‘ವಕ್ತಾರಿಣಿ’ ಪದವನ್ನು ಬಳಕೆ ಮಾಡಲಾಗಿದೆ. ಸಾಧ್ಯತೆ : ವಕ್ತಾರೆ.

ವನ ಸಂವರ್ಧನ ನಾ ಕನ್ನಡಪ್ರಭ ಕಾಡನ್ನು ಅಭಿವೃದ್ದಿಪಡಿಸುವುದು. ‘ವನ ಸಂವರ್ಧನ’ ಜತೆ ಒಪ್ಪಂದ ಮುರಿದಿಲ್ಲ, ‘ಜಲ ಸಂವರ್ಧನೆ ಮಾದರಿಯಲ್ಲಿ ತಂದಿರುವ ಪದ.

ವನ್ಯಹಂತಕ ನಾ ಸುಧಾ ಕಾಡಿನಲ್ಲಿ ಪ್ರಾಣಿಗಳನ್ನು ಕೊಲ್ಲುವವನು. ‘ಆಸ್ಟ್ರೇಲಿಯಾದಲ್ಲಿ ಕೂಡ ನಮ್ಮ ದೇಶದ ಹಾಗೆ ವನ್ಯ ಹಂತಕರ ಹಾವಳಿ ಹೆಚ್ಚುತ್ತಿದೆ.’ ‘ನರಹಂತಕ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ವಸೂಲಿಕೋರ ನಾ ಅಗ್ನಿ ಹಣ ಮುಂತಾದುವನ್ನು ಒತ್ತಾಯದಿಂದ ಕೇಳುವುದು. ‘ಈತ ಗದಗ ಜಿಲ್ಲಾ ಉದಯ ಟಿವಿಯ ವರದಿಗಾರನ ವೇಷದ ವಸೂಲಿಕೋರ. ‘ಇಕ್ಕಟ್ಟಿನಲ್ಲಿ ಸಿಲುಕಿಸಿ ಸುಲಿಗೆ ಮಾಡುವವನು ಎಂಬ ಅರ್ಥವಿಲ್ಲಿ ಮುಖ್ಯ. -‘ಕೋರ’ ಪ್ರತ್ಯಯ ಹೀನಾರ್ಥವನ್ನು ಸೂಚಿಸುತ್ತದೆ.

ವಜ್ರಪ್ರಹಾರ ನಾ ಕರ್ಮವೀ ಒತ್ತಾಯದಿಂದ ಮಾಡುವ ದಿನಾಚರಣೆ. ‘ಈಗ ವಜ್ರಪ್ರಹಾರ ದಿನಾಚರಣೆ ಎಂದು ಬೇಕಾದರೆ ಆಚರಿಸಬಹುದೇನೋ!’ ಗದಾಪ್ರಹಾರ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ವಜ್ರಾಂಗಿ ನಾ ಸುಧಾ ಮೈತುಂಬ ವಜ್ರವನ್ನು ಧರಿಸಿರುವವಳು. ‘ಕಳೆದ ವಾರದ ಇದೇ ಅಂಕಣದಲ್ಲಿ ವಜ್ರಾಂಗಿಯನ್ನು ನೋಡಿದ್ದೀರಲ್ಲ’. ‘ಅರ್ಧಾಂಗಿ’ ಮಾದರಿ ಯಲ್ಲಿ ಪದ ರಚನೆ ಮಾಡಲಾಗಿದೆ.

ವಧಾಗಾರ ನಾ ವಿಜಯಕರ್ನಾಟಕ ಕೊಲ್ಲುವವನು. ನೇಣು ಹಾಕುವವನು. ‘ಅನಂತರ ವಧಾಗಾರನ ಸೂಚನೆ ಮೇರೆಗೆ ಆತನ ಸ್ಥಿತಿಯನ್ನು ಕೆಲವು ಸಾಕ್ಷಿಗಳಿಗೆ ತೋರಿಸಲಾಗುತ್ತದೆ’. ‘ಗಾರ’ ಪ್ರತ್ಯಯದೊಡನೆ ಬಂದಿರುವ ಪದ.

ವಸ್ತ್ರೋತ್ಸವ ನಾ ಗೃಹಶೋಭಾ ಉಡುಪುಗಳ ಪ್ರದರ್ಶನ. ‘ಗೃಹಶೋಭಾ ವಸ್ತ್ರೋತ್ಸವ ೨೦೦೨ ವಿಶೇಷಾಂಕ.’ ‘ವಸ್ತ್ರ’ ಮತ್ತು ‘ಉತ್ಸವ’ ಪದಗಳೆರಡನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ವಸ್ತ್ರೋಪಕರಣ ನಾ ಕನ್ನಡಪ್ರ ವಸ್ತ್ರಗಳಿಗೆ ಬಳಸುವ ಉಪಕರಣಗಳು, ‘ಬೆಂಗಳೂರಿನಲ್ಲಿ ವಸ್ತ್ರೋಪಕರಣ ಮೇಳ.’ ಸಾಮಾಗ್ರಿಗಳು. ವಸ್ತ್ರ ಹಾಗೂ ಉಪಕರಣ ಪದಗಳೆರಡನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ವರ್ಷಧಾರಿಣಿ ನಾ ತರಂಗ ಹೊಸವರ್ಷವನ್ನು ಸ್ವಾಗತಿಸುವವಳು. ‘ವರ್ಷಧಾರಿಣಿಯರು ನಾರಿ ನಿನ್ನ ಮಾರಿ ಮ್ಯಾಲ ನಗೀ ನವಿಲು ಕುಣಿಯುತಲಿರಲಿ ಹೀಗೆಂದು ನೀವು ಶುಭ ಕೋರಿದ್ದರೆ ಹೊಸ ವರ್ಷಕ್ಕೆ ರಾಗ-ರಂಗು ಬರುತ್ತಿತ್ತು.’ -‘ಣಿ’ ಸ್ತ್ರೀಸೂಚಕ ಪ್ರತ್ಯಯ ಹಚ್ಚಿ ಪದ ಪ್ರಯೋಗ ಮಾಡಲಾಗಿದೆ. ಸಾಧ್ಯತೆ : ವರ್ಷಧಾರ.

ವರಿಷ್ಠಾಧಿಕಾರತ್ವ ನಾ ಅಗ್ನಿ ಹೆಚ್ಚಿನ ಅಧಿಕಾರ ‘…ಇತ್ಯಾದಿ ಇವರ ಕಾರ್ಯ ವೈಖರಿಯನ್ನು ಅವಲೋಕಿಸಿದರೆ ಈತ ತನ್ನ ವರಿಷ್ಠಾಧಿಕಾರತ್ವವನ್ನೇ ಖಾಸಗಿ ಐಲಾಟಗಳ ಪಾತ್ರವೇನು ಪರಿಗಣಿಸಿದಂತಿದೆ.’ ವರಿಷ್ಠಾಧಿಕಾರ ಸ್ಥಿತಿಯನ್ನೇ ‘ವರಿಷ್ಠಾಧಿಕಾರತ್ವ’ ಸೂಚಿಸಲಾಗುತ್ತಿದೆ. ಅರ್ಥದಲ್ಲೇನೂ ಹೊಸತನವಿಲ್ಲ.

ವಾಹನಸ್ಥ ನಾ ಕನ್ನಡಪ್ರಭ ವಾಹನವನ್ನು ಹೊಂದಿರುವ ವ್ಯಕ್ತಿ. ‘ಏಪ್ರಿಲ್ ೧ ರಿಂದ ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ಶುಲ್ಕ ರದ್ದುಪಡಿಸಿರುವುದು ವಾಹನಸ್ಥರಿಗೆ ಸಮಾಧಾನಕರ ವಿಷಯ ಎನಿಸಿದರೂ ಪಾರ್ಕಿಗ್ ಸಮಸ್ಯೆಗೆ ಅದು ಪರಿಹಾರ ಆಗಲಿಲ್ಲ ಎನ್ನುವುದು ಗೊತ್ತಾಗತೊಡಗಿದೆ.’ ರೂಪಸ್ಥ, ಅಧಿಕಾರಸ್ಥ’ ಮಾದರಿಯಲ್ಲಿ ಬಳಕೆ ಮಾಡಲಾಗಿದೆ. ‘ಅಸ್ಥ’ ಎಂದರೆ ಹೊಂದಿರುವ ಎನ್ನುವ ಅರ್ಥವಿದೆ.

ವಾಗ್ಸಮರ ನಾ ಕನ್ನಡಪ್ರಭ ಮಾತಿನ ಚಕಮಕಿ. ‘ನಗರದ ಓಕಳಿಪುರ ಕೊಳೆಗೇರಿ ಜಾಗದ ವಿಚಾರದಲ್ಲಿ ದೇವೇಗೌಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ವಾಗ್ಸಮರ ‘ಈಗ ಬಿರುಸುಗೊಂಡಿದೆ.’ ವಾಕ್ +ಸಮರ = ವಾಗ್ಸಮರ ಆಗಿದೆ. ಸಂಧಿ ನಿಯಮದಂತೆ ಆದೇಶಸಂಧಿ ಆಗಿದೆ. ಯುದ್ಧ ಎಂದರೆ ಕೇವಲ ಬೌದ್ದಿಕ ಕ್ರಿಯೆ ಆಗಿರದೆ ಅದು ಮಾತಿನ ಕ್ರಿಯೆಯ ಮೂಲಕವು ನಡೆಯಲು ಸಾಧ್ಯ ಎನ್ನುವ ಅರ್ಥದಲ್ಲಿ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ.

ವಾರಸುದಾರಿಣಿ ನಾ ದಿಕ್ಸೂಚಿ ಹಕ್ಕುವುಳ್ಳವಳು. ‘‘ವಿಶ್ವಹಿಂದೂ ಪರಿಷತ್ ನ ನಾಯಕಿಯಾಗಿದ್ದ ರಾಜಮಾತಾ ವಿಜಯ ರಾಜೇಸಿಂಧ್ಯಾ ಅವರ ವಾರಸುದಾರಿಣಿ’’ ವಾರಸುದಾರ ಎಂಬುದು ಪುರುಷವಾಚಕ ಎಂದು ತಿಳಿದು -‘ಣಿ’ ಪ್ರತ್ಯಯ ಹಚ್ಚಿ ಸ್ರೀವಾಚಕ ಶಬ್ದವನ್ನಾಗಿ ಬಳಕೆ ಮಾಡಲಾಗಿದೆ.

ವಿಚಾರಿ ನಾ ಪ್ರಜಾವಾಣಿ ವಿದ್ವಾಂಸ, ಜ್ಞಾನಿ ‘ವಿಚಾರಿಗಳು ಎಲ್ಲ ತ್ಯಾಗಕ್ಕೂ ಸಿದ್ಧ’ ವಿಚಾರವಾದಿ, ವಿಚಾರವಂತ, ಪದಗಳು ಈಗಾಗಲೇ ಬಳಕೆಯಲ್ಲಿವೆ. ವಿಚಾರ ಪದ ವಿಚಾರವಂತ ಮತ್ತು ವಿಚಾರವಾದಿ ಪದಗಳೆರಡರ ಅರ್ಥಕ್ಕಿಂತ ಭಿನ್ನವಾದುದು ಏನಿಲ್ಲ.

ವಿದ್ಯಾಧರ ನಾ ವಿಜಯಕರ್ನಾಟಕ ಹೆಚ್ಚು ಪದವಿಗಳನ್ನು ಹೊಂದಿರುವ ವ್ಯಕ್ತಿ. ‘ಒಟ್ಟು ೫೭ ಡಿಗ್ರಿಗಳನ್ನು ಪಡೆದಿರುವ ಸುಧಾಕರ್ ಒಂದರ್ಥದಲ್ಲಿ ಆಧುನಿಕ ವಿದ್ಯಾಧರ’ ಇದು ವ್ಯಕ್ತಿನಾಮವಾಗಿ ಬಳಕೆಯಲ್ಲಿದೆ. ಆದರೆ ಡಿಗ್ರಿಗಳನ್ನು ಪಡೆದಿರುವ ವ್ಯಕ್ತಿಗೆ ವಿದ್ಯಾಧರ ಎಂದು ಬಳಕೆ ಮಾಡಲಾಗಿದೆ. ಮಾದರಿ : ಇಂದೂಧರ. ಸಾಧ್ಯತೆ:ವಿದ್ಯಾಧರಿಣಿ

ವಿಪ್ರತನ ನಾ ಲಂಕೇಶ್ಪತ್ರಿಕೆ ಬ್ರಾಹ್ಮಣರ ವಿಶಿಷ್ಟ ಗುಣ. ‘ಊರಿಗೆ ಹೋಗಲು ಬಸ್ಸೇರಿ ದಾಗಲೂ ಬಲ್ಲವರ ಸೇರಿಸಿ ಕೊಳ್ಳಬೇಡಿ ಅಂತಾದರ್ಶನದಲ್ಲಿ ಹೇಳಿದ್ದೇನೆ ಎಂದು ವಿಷಕಾರಿ ವಿಪ್ರತನ ತೋರಿಸಿದ್ದಾನೆ. ‘ತನ’ ಪ್ರತ್ಯಯ ಬಳಸಿ ತಂದಿರುವ ಪದ. ಅನ್ಯಭಾಷಾ ಪದದೊಡನೆಯೂ ಕನ್ನಡದ ಪ್ರತ್ಯಯವನ್ನು ಬಳಕೆ ಮಾಡಲಾಗಿದೆ.

ವಿವರಣೆಗಾರ ನಾ ಕರ್ಮವೀ ವಿವರವನ್ನು ನೀಡುವವನು. ‘ಅವರು ರನ್ ಓಡುವಾಗ ಒಬ್ಬ ಹಿಂದು ವಿದೇಶಿ ವೀಕ್ಷಕ ವಿವರಣೆಗಾರರು ಉದ್ಗರಿಸಿದ್ದರು..’ ಉಳ್ಳವನು, ಹೊಂದಿರು ವವನು ಎನ್ನುವ ಅರ್ಥದಲ್ಲಿ -‘ಗಾರ’ ಪ್ರತ್ಯಯವನ್ನು ಬಳಸಲಾಗುತ್ತದೆ. ‘ಕಾಮಿಟೇಟರ್’ ಪದಕ್ಕೆ ಸಂವಾದಿಯಾಗಿ ವಿವರಣೆಗಾರ ಪದವನ್ನು ಬಳಕೆ ಮಾಡಲಾಗಿದೆ.

ವಿವಾದಯಣ ನಾ ವಿಜಯಕರ್ನಾಟಕ ವಿವಾದಗಳ ಪುರಾಣ. ‘ಇದು ವಿವಾದಯಣ’ ಗೊಂದಲಪುರ ಮುಂತಾದ ಕೃತಿಗಳ ಉಗಮಕ್ಕೆ ಕಾರಣವು ಆಗಬಹುದು. ದೀರ್ಘವಾದ ಕತೆ/ಪುರಾಣಗಳನ್ನು ಹೇಳಲು ‘ಆಯಣ’ ಪದವನ್ನು ಬಳಕೆ ಮಾಡಲಾಗುತ್ತದೆ. ‘ರಾಮಾಯಣ’ವನ್ನು ಮಾದರಿಯಾಗಿಟ್ಟುಕೊಂಡು ಪದ ರಚನೆ ಮಾಡಲಾಗಿದೆ.

ವಿವೇಕೋದಯ ನಾ ಕನ್ನಡಪ್ರಭ ವಿವೇಚನೆ ಹುಟ್ಟುವುದು. ‘ಆದರೆ ಒಂದೇ ಒಂದು ಬೇಸರದ ಸಂಗತಿ ಎಂದರೆ ಬಹಳ ವಿಳಂಬವಾಗಿ ಅವರಿಗೆ ವಿವೇಕೋದಯ ವಾದದ್ದು.’ ‘ಜ್ಞಾನೋದಯ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ವಿರಾಮೋದ್ಯಮ ನಾ ಕನ್ನಡಪ್ರಭ ಬಿಡುವಿನ ಕಾಲ ‘ಪುಸ್ತಕಗಳು ವಿರಾಮೋದ್ಯಮದಲ್ಲಿ ಇತರ ಪರ್ಯಾಯ ಸರಕುಗಳಿಂದಾಗಿ ‘ನಿಕೃಷ್ಟ’ ಸರಕುಗಳಾಗಿವೆ.’’ ‘ವಿರಾಮ ಮತ್ತು ಉದ್ಯಮ’ ಪದಗಳನ್ನು ಸೇರಿಸಿ ಸಂಧಿ ನಿಯಮಕ್ಕನುಗುಣವಾಗಿ ಪದವನ್ನು ರಚನೆ ಮಾಡಲಾಗಿದೆ.

ವಿಶ್ವಾಸವರ್ಧಕ ಗು ಪ್ರಜಾವಾಣಿ ವಿಶ್ವಾಸವನ್ನು ಹೆಚ್ಚಿಸುವ, ಹಿತಕಾಯುವ, ‘ವಿಶ್ವಾಸ ವರ್ಧಕ ಕ್ರಮ ನಿಲ್ಲದು’, ‘ವಿಶ್ವಾಸ’ ಪದ ಈಗಾಗಲೇ ಬಳಕೆಯಲ್ಲಿದೆ. ಅರ್ಥದ ದೃಷ್ಟಿಯಿಂದ ಹೊಸದೇನೂ ಇಲ್ಲ. ಮಾದರಿ : ಧ್ವನಿವರ್ಧಕ.

ವಿಹಾರೋತ್ಸವ ನಾ ತರಂಗ ವಿಶ್ರಾಂತಿಯ ಉತ್ಸವ. ‘ಮಾಂಟೆ ವಿಡಿಯೋದಲ್ಲಿ ಫೆಬ್ರವರಿ ಮಾಸಾಂತ್ಯದವರೆಗೂ ನಡೆಯುವ ವಿಹಾರೋತ್ಸವದಲ್ಲಿ ಕುಣಿತದ್ದೇ ಕಾರುಬಾರು’. ವಿಹಾರ ಮತ್ತು ಉತ್ಸವ ಪದಗಳನ್ನು ಸೇರಿಸಿಕೊಂಡು ಪದ ರಚನೆ ಮಾಡಲಾಗಿದೆ.

ವೀರ್ಯವಂತ ನಾ ವಿಜಯಕರ್ನಾಟಕ ವೀರ್ಯವನ್ನು ಹೊಂದಿರುವವನು, ಸಂತಾನೋತ್ಪತ್ತಿ ಶಕ್ತಿಯುಳ್ಳವನು. ‘ಶೌರ್ಯವಂತರ ಕಾಲ ಮುಗಿಯಿತು. ಇನ್ನೇನಿದ್ದರೂ ವೀರ್ಯವಂತರ ಕಾಲ.’ ಶೌರ್ಯವಂತರ ಮಾದರಿಯಲ್ಲಿ ತಂದಿರುವ ಪದ. ಲಘು ಬರಹದಲ್ಲಿ ಬಳಕೆ ಮಾಡಲಾಗಿದೆ.

ವೃತ್ತ್ಯಾತ್ಮಕ ನಾ ಕರ್ಮವೀ ವೃತ್ತಿ; ಕಸಬು. ‘ನನ್ನ ೬ನೇ ವಯಸ್ಸಿನಲ್ಲೇ ಕಾರ್ಯಕ್ರಮ ಕೊಡಲಾರಂಬಿಸಿದೆ. ೧೩ನೇ ವಯಸ್ಸಲ್ಲಿ ವೃತ್ತ್ಯಾತ್ಮಕ ಕಾರ್ಯಕ್ರಮ ಆರಂಭಿಸಿದೆ.’ ನೃತ್ಯಾತ್ಮಕ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಮೂಲತಹ ‘ವೃತ್ತಿ’ ಆರಂಭ ಮಾಡಿರುವುದಕ್ಕೆ ‘ವೃತ್ತ್ಯಾತ್ಮಕ’ ಎಂದು ಬಳಕೆ ಮಾಡಲಾಗಿದೆ.

ವೃದ್ಧಾಲಯ ನಾ ವಿಜಯಕರ್ನಾಟಕ ಮುದಕರು/ಮುದಕಿಯರು ವಾಸಿಸುವ ಮನೆ. ‘ಮುದುಕರಿಗೆ ಮನೇಲಿ ಮ್ಯಾನೇಜು ಮಾಡೋದು ಕಷ್ಟವಾದರೆ old age homes (ವೃದ್ಧಾಲಯಗಳಿಗೆ) ಹೋಗಿರುತ್ತಾರೆ’. ಇಂಗ್ಲಿಶಿನ old age homes ಪದಕ್ಕೆ ಸಂವಾದಿಯಾಗಿ ಬಳಕೆಮಾಡಲಾಗಿದೆ.

ವೈದ್ಯಾಲಯ ನಾ ಕರ್ಮವೀ ಆಸ್ಪತ್ರೆ. ‘ನಮ್ಮ ಸರ್ಕಾರಿ ವೈದ್ಯಾಲಯಗಳೇ ಶೌಚಾಲಯ ಗಳಂತಿರುವುದರಿಂದ ಅವರದೇನು ಮಹಾ ಅನ್ನಬಹುದು?!’ ದೇವಾಲಯ ಮಾದರಿಯಲ್ಲಿ ಬಳಕೆ ಆಗುತ್ತಿರುವ ಪದ.

ವೈನಂಗಡಿ ನಾ ಕರ್ಮವೀ ಮಧ್ಯಪಾನ ಮಾರುವ ಜಾಗ. ‘ಅದರಿಂದಿಳಿದ ಕೋಟು, ಟೋಪಿ, ಸ್ವೆಟರ್ ಧರಿಸಿದ್ದ ವ್ಯಕ್ತಿಗಳಿಬ್ಬರು ಅಡ್ಡಡ್ಡ ಹೆಜ್ಜೆ ಹಾಕುತ್ತಾ ಸನಿಹದಲ್ಲಿದ್ದ ವೈನಂಗಡಿಗೆ ತೆರಳಿ ಹಾಫ್ ಹಾಫ್ ಕೊಂಡರು.’ ಮೇಲಿನ ರಚನೆಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಪದ ಸೇರಿಸಿಕೊಂಡು ರಚನೆ ಮಾಡಲಾಗಿದೆ.

ವೈದ್ಯೋಪಚಾರ ನಾ ಕರ್ಮವೀ ವೈದ್ಯರಿಗೆ ಮಾಡುವ ಉಪಚಾರ. ‘ಬಾದಶಹಾರ ಮಗಳು ಜನ್ಮಾಂಧೆ. ವೈದ್ಯೋಪಚಾರ ಮಂತ್ರ ತಂತ್ರ ಚಿಕಿತ್ಸೆ ನಡೆಸಿದರು.’ ವೈದ್ಯ ಮತ್ತು ಉಪಚಾರ ಪದಗಳು ಸೇರಿಸಿಕೊಂಡು ಪದ ರಚನೆ ಮಾಡಲಾಗಿದೆ.

ವ್ರತಧಾರಿ ನಾ ಹಾಯ್ಬೆಂಗಳೂರು ವ್ರತವನ್ನು ಕೈಗೊಂಡವನು. ‘ಆದರೆ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ವ್ರತಧಾರಿಯಾಗಿ ಶಬರಿಮಲೆಗೆ ಹೋಗುವ ಕಾರಣಗಳಿಂದ ಮನೆಯಿಂದ ದೂರವಾದ ‘ವೇಷಧಾರಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಅರ್ಥದಲ್ಲಿ ವೇಷಧಾರಿಗಿಂತ ಭಿನ್ನವಾಗಿದೆ.

ವೈನೋದಕ ನಾ ಪ್ರಜಾವಾಣಿ ವೈನು ಮತ್ತು ನೀರು. ‘ವೈನೋ, ಯೆಸ್ ನೊ ಎಂದೆಲ್ಲಾ ನಾಜೂಕು ಮಾಡಿ ವೈನೋದಕ ಎತ್ತಿದ್ದು ಮಾತ್ರ ಖರೇನೊ’. ವೈನ್ ಎಂಬ ಇಂಗ್ಲಿಶ್ ಪದಕ್ಕೆ ‘ಉದಕ’ ಎಂಬ ಕನ್ನಡ ಪದ ಸೇರಿ ಸಂಸ್ಕೃತದ ಗುಣಸಂಧಿಯ ನಿಯಮದಲ್ಲಿ ಬಳಕೆ ಮಾಡಲಾಗಿದೆ.

ವ್ಯಕ್ತಿತ್ವವಧೆ ನಾ ಅಗ್ನಿ ವ್ಯಕ್ತಿತ್ವ ಭಂಗ ಬರುವಂತೆ ಮಾಡುವುದು. ‘ಮೂರ್ತಿಯವರು ಲಾಲೂಪ್ರಸಾದ ಯಾದವ್‌ರ ವ್ಯಕ್ತಿತ್ವ ವಧೆ, ತೇಜೋವಧೆಗಳ ಹೇಳಿಕೆ ಮಾಡಿದ್ದರಿಂದ ಅದನ್ನು ಪ್ರತಿಭಟಿಸಿ ದ್ವಾರಕಾನಾಥರು ಬರೆದ ಲೇಖನದಲ್ಲಿ…ಬಂದಿದೆ. ಉದಾಹರಣೆಗೆ ಮೇಲಿನ ಪ್ರಯೋಗವನ್ನು ‘ತೇಜೋವಧೆ’ ಮಾದರಿಯಲ್ಲಿ ರಚನೆ ಮಾಡಲಾಗಿದೆ. ತೇಜೋವಧೆ ಎಂದರೆ ವ್ಯಕ್ತಿತ್ವ ವಧೆ ಅಂತಲೆ ಅರ್ಥ. 

ಶಾಕಿಣಿ ನಾ ಸುಧಾ ಮುಟ್ಟಿದರೆ ಶಾಕ್ ಹೊಡೆಯುವ ಹೆಣ್ಣು ‘ಮುಂಬೈನಲ್ಲಿ ಈಚೆಗೆ ನಡೆದ ಫ್ಯಾಷನ್ ಶೋ ಒಂದರಲ್ಲಿ ಈ ‘ಶಾಕಿಣಿ’ ತೊಟ್ಟ ದಿರಿಸು ಎಲ್ಲರ ಮನಗೆದ್ದಿತು.’ ‘ಶಾಕ್’ ಎಂಬ ಇಂಗ್ಲಿಶ್ ಪದಕ್ಕೆ -ಣಿ ಎಂಬ ಸ್ತ್ರೀಸೂಚಕ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ಶಾಸಕಗಿರಿ ನಾ ಲಂಕೇಶ್ಪತ್ರಿಕೆ ಶಾಸಕನ ವರ್ತನೆಗಳನ್ನು ತೋರುವುದು. ‘ದಿಲ್ಲಿ ಆಸೆಗೆ ಬಿದ್ದು ಪುತ್ತೂರಿನ ಶಾಸಕಗಿರಿ ಬಿಟ್ಟು ಕೊಟ್ಟ ಗೌಡ ಈಗ ಹಳಹಳಿಸುತ್ತಿದ್ದಾನೆ.’ ದಿವಾನಗಿರಿ, ಶಭಾಸ್‌ಗಿರಿ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಶಾಸ್ತ್ರಚಾರ ನಾ ತರಂಗ ಶಾಸ್ತ್ರಕ್ಕೆ ಪೂರಕವಾದ ನಡತೆ, ನಿಯಮ, ‘ಮರಣಕ್ಕೆ ಸಂಬಂಧಿಸಿದಂತೆ ಕೆಲವು ಶಾಸ್ತ್ರಚಾರ (ಫಾರ್ಮಾಲಿಟೀಸ್)ಗಳಿದ್ದವು.’ ‘ಶಿಷ್ಟಚಾರ’ ಮಾದರಿಯಲ್ಲಿ ಬಂದಿರುವ ಪದ. ಇಲ್ಲಿ ಇದೊಂದು ನಿಯಮ ಕಟ್ಟುಪಾಡು ಅಷ್ಟೇ. ಇಷ್ಟವಿರಲಿ ಇಲ್ಲದಿರಲಿ ನಡೆಯಬೇಕಾದ ಕ್ರಮಗಳು ಎಂಬ ಅರ್ಥ.

ಶಾಸ್ತ್ರಿಣಿ ನಾ ಲಂಕೇಶ್ಪತ್ರಿಕೆ ಶಾಸ್ತ್ರಗಳನ್ನು ತಿಳಿದುಕೊಂಡಿರುವ ಹೆಣ್ಣುಮಗಳು. ‘ಇಂತಹ ಸಾಕ್ಷರತ್ ಶಾಸ್ತ್ರಿಣಿಗೆ (ಲೇಡಿ ಸ್ವಾಮೀಜಿ!!) ಚುಂಬಿಸಿ ಅವಳ ದೀರ್ಘ ಪತ್ರವನ್ನು ಓದಿ ಭಂಗಗೊಳಿಸುವ ಸಾಹಸಕ್ಕೆ ಒಂದು ದಿನ ಮನಸ್ಸು ಮಾಡಿದೆ!’. ಸ್ವಾಮಿಜಿ ಪುರುಷವಾಚಕ ಪದವೆಂದು ತಿಳಿದು, ಸ್ತ್ರೀವಾಚಕ ಪದವಾಗಿ ‘ಶಾಸ್ತ್ರಿಣಿ’ ಪದವನ್ನು ಬಳಕೆ ಮಾಡಲಾಗಿದೆ.

ಶೀತಗಾರ ನಾ ಪ್ರಜಾವಾಣಿ ಅತ್ಯಂತ ತಂಪು ಹವೆಯುಳ್ಳ ಜಾಗ ‘ಶೀತಗಾರ ನಿರ್ಮಾಣಕ್ಕೆ ಅಗತ್ಯವಿರುವುದು ಕಡಿಮೆ ಖರ್ಚಿನ ಇಟ್ಟಿಗೆ, ಮರಳು ಬಿದಿರಿನ ಕೋಲು ಮತ್ತು ಗೋಣಿ ಚೀಲ ಇಲ್ಲವೆ ಹುಲ್ಲನ್ನು ಸಹ ಬಳಸಬಹುದು’. ‘ಶವಗಾರ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಶಿಕ್ಷಣೋದ್ಯಮಿ ನಾ ನಮ್ಮ ಶಿಕ್ಷಣ ಕೇಂದ್ರಗಳನ್ನು ಹೊಂದಿರುವ ವ್ಯಕ್ತಿ. ‘ಒಂದನೇ, ತರಗತಿಯಿಂದ ಇಂಗ್ಲಿಷ್ ಕಲಿಕೆ ಜಾರಿಗೆ ತರಲು ಸರ್ಕಾರದ ಮೇಲೆ ನವ ಶಿಕ್ಷಣೋದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳು ಹೇರುತ್ತಿರ ಬಹುದಾದ…’. ‘ಕೈಗಾರಿಕೋದ್ಯಮಿ’ ಮಾದರಿಯನ್ನನುಸರಿಸಿ ಬಂದಿರುವ ಪದ. ಇಂಗ್ಲಿಶಿನ ಎಜ್ಯುಕೇಷನ್‌ಮನ್ ಎಂಬುದಕ್ಕೆ ಸಂವಾದಿಯಾಗಿರುವಂತಿದೆ.

ಶಿರಸ್ತ್ರಾಣಧಾರಿಣಿ ನಾ ವಿಜಯಕರ್ನಾಟಕ ತಲೆಯನ್ನು ಕಾಪಾಡುವ ಸಾಧನವನ್ನು ಹೊಂದಿರುವವಳು. ‘ಹೆಲ್ಮೆಟ್ ಕಡ್ಡಾಯ…! ಮೈಸೂರು ಮಹಾನಗರ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮಾರಾಮಾರಿ ನಡೆದ ಹಿನ್ನಲೆಯಲ್ಲಿ ಜಾತ್ಯಾತೀತ ದಳ ಸದಸ್ಯೆಯರು ಗುರುವಾರ ಪಾಲಿಕೆ ಸಭೆಗೆ ಶಿರಸ್ತ್ರಾಣಧಾರಿಣಿ’ ಯರಾಗಿ ಬಂದಿದ್ದರು.’ ಸ್ತ್ರೀಸೂಚಕ ಪ್ರತ್ಯಯವಾದ -‘ಣಿ’ ಸೇರಿಸಿ ಪದರಚನೆ ಮಾಡಲಾಗಿದೆ.

ಶುದ್ದೀಕೃತ ಗು ತರಂಗ ಶುದ್ಧವಾದ ನೀರು. ‘ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬರುವ ಶುದ್ದೀಕೃತ ನೀರು ಶುದ್ಧವಲ್ಲವೇ ಅಲ್ಲ.’ ‘ಶುದ್ದೀಕರಣ’ ನಾಮರೂಪದಿಂದ ‘ಶುದ್ದೀಕೃತ’ ಗುಣವಾಚಕ ರೂಪವನ್ನು ಪಡೆಯಲಾಗಿದೆ. ಮಾದರಿ : ರಾಷ್ಟ್ರೀಕರಣ/ರಾಷ್ಟ್ರೀಕೃತ, ಚಿತ್ರೀಕರಣ/ಚಿತ್ರೀಕೃತ. 

ಸಂಕಟಕಾರಿ ನಾ ದಿಕ್ಸೂಚಿ ದುಃಖ, ಕಷ್ಟ, ನೋವು ‘ಹೀಗಾಗಿ ತೆರಿಗೆ ಸಂಗ್ರಹ ಸದಾ ಸಂಕಟಕಾರಿ!’. ಸಂಕಟ ಪಡುವವನು; ಸಂಕಟದ ಸ್ಥಿತಿಯಲ್ಲಿರುವವನು ಸಂಕಟಕಾರಿ ಎಂಬ ಅರ್ಥದಲ್ಲಿ ಬಳಕೆ ಮಾಡಲಾಗಿದೆ. ಮಾದರಿ : ಅಪಾಯಕಾರಿ.

ಸರ್ಕಾರೀಕರಣ ನಾ ಪ್ರಜಾವಾಣಿ ದೇವಸ್ಥಾನಗಳನ್ನು ಸರ್ಕಾರಕ್ಕೆ ಒಳಪಡಿಸುವುದು. ‘ದೇವಸ್ಥಾನ ಸರ್ಕಾರೀಕರಣ ಕೈಬಿಡಿ’ ‘ಈಕರಣ’ ಪ್ರತ್ಯಯ ಸೇರಿಸಿ ಬಳಕೆ ಮಾಡಿರುವ ಪದಗಳ ಗುಂಪಿಗೆ ಇದೊಂದು ಸೇರ್ಪಡೆ.

ಸಂಗೀತೋದ್ಯಮಿ ನಾ ಉದಯವಾಣಿ ಸಂಗೀತದ ವ್ಯಾಪಾರಿ. ‘ಹೆಸರಾಂತ ಸಂಗೀತೋದ್ಯಮಿ ಗುಲ್ಯನ್ ಕುಮಾರ್ ಹತ್ಯಗೂ ಕಾರಣನಾದ ಸಲೀಂ, ನಿರ್ಮಾಪಕ ದಿನೇಶ್ ಆನಂದ, ಮುಖೇಶ್ ದುಗ್ಗಲ್‌ರನ್ನೂ ಹತ್ಯಗೊಳಿಸಿದ.’ ಮೇಲಿನ ಪದವನ್ನು ‘ಕೈಗಾರಿಕೋದ್ಯಮಿ’ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಸಂಘಿ ನಾ ಅಗ್ನಿ ಸಂಘ ಪರಿವಾರದ ಕಾರ್ಯಕರ್ತರು. ‘ಸಂಘಿಗಳ ಹುನ್ನಾರವನ್ನು ಗ್ರಹಿಸುವುದು ಕಷ್ಟವಲ್ಲ!’. ಸಂಘ ಪರಿವಾರದವರು ಎಂಬ ಅರ್ಥದಲ್ಲಿ ವ್ಯಕ್ತಿವಾಚಕವಾಗಿ ‘ಸಂಘಿಗಳು ಎಂದು ಬಳಕೆ ಮಾಡಲಾಗಿದೆ.

ಸತತೋದ್ಯೋಗ ನಾ ಕನ್ನಡಪ್ರಭ ವೃತ್ತಿ; ಕೆಲಸ. ‘ಕಲಂಕವಿಲ್ಲದಂತೆ ಪರಿಶುದ್ಧವಾಗಿರುವಂತೆ ಜೀವನ ಸಾಗಿಸುವ ಮುಖ್ಯ ಸಾಧನವೇ ಸತತೋದ್ಯೋಗ’. ಸತತ + ಉದ್ಯೋಗ = ಎಂಬೆರಡು ಪದಗಳು ಸೇರಿ ಸಂಸ್ಕೃತ ಸಂಧಿನಿಯಮಕ್ಕನುಸಾರವಾಗಿ ಬಳಕೆ ಮಾಡಲಾಗಿದೆ.

ಸನ್ಮಾನಿ ನಾ ಕನ್ನಡಪ್ರಭ ಸನ್ಮಾನಕ್ಕೆ ಒಳಗಾಗಿರುವವಳು. ‘ಕನ್ನಡಪ್ರಭದಲ್ಲಿ ಮುಖಪುಟದಲ್ಲಿ ಎಂಟು ಮಂದಿ ಮಹಿಳೆಯರನ್ನು ಸನ್ಮಾನಿಸಿರುವ ಭಾವಚಿತ್ರ ನೀಡಿ ಸನ್ಮಾನಿನಿಯರು’ ಎಂದು ಬಳಕೆ ಮಾಡಲಾಗಿದೆ. ಸನ್ಮಾನ ಎಂಬ ನಾಮಪದವನ್ನು ಸ್ತ್ರೀವಾಚಕ ನಾಮಪದವನ್ನಾಗಿ ಬಳಕೆ ಮಾಡಲಾಗಿದೆ.

ಸಂಪುಟೀಕರಣ ನಾ ಕನ್ನಡಪ್ರಭ ಸಂಪುಟಕ್ಕೆ ಒಳಗು ಮಾಡುವುದು. ‘ಮೊದಲ ಸಂಪುಟದಲ್ಲಿ ನಿರೂಪಿಸಲಾದ ಧರ್ಮ-ದರ್ಶನ…. ಪ್ರಸ್ಥಾಪಕರುಗಳ ವಿವರವಾದ ಪರಿಚಯದ ಮೂಲಕ ಮನಸ್ಸಿಗೆ ಮುಟ್ಟಿಸುವ ಸಂಪುಟೀಕರಣ ಪ್ರಕ್ರಿಯೆಯನ್ನು ಸಾರ್ಥಕವಾಗಿ ನಿರ್ವಹಿಸಲಾಗಿದೆ.’ ಈಕರಣ’ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ಸಮರ್ಥಕ ನಾ ಅಗ್ನಿ ತಾನು ಮಾಡುವ ಕೆಲಸಗಳನ್ನು ಸಮರ್ಥಿಸಿಕೊಳ್ಳುವವ. ‘ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ಸಮರ್ಥಕರು ತಮ್ಮ ಸ್ವಂತದ ಮೋಸ ಅಥವಾ ಪ್ರತಿಗಾಮಿ ಕೃತ್ಯಗಳನ್ನು ಮರೆ ಮಾಚಲು ಇಲ್ಲದ ಪ್ರಗತಿಯ ಗುಪ್ತಾವಾಹಿನಿಯನ್ನು ತೋರಿಸಲು ಪ್ರಯತ್ನಿಸುತ್ತಾರೆ.’ ಸಮರ್ಥನೆ ಮಾಡಿಕೊಳ್ಳುವವನು ‘ಸಮರ್ಥಕ’ ಎಂದು ವ್ಯಕ್ತಿಸೂಚಕವಾಗಿ ಪದ ರಚನೆ ಮಾಡಲಾಗಿದೆ.

ಸಮಾರೋಪಕ ನಾ ಆಹ್ವಾನ ಪತ್ರಿಕೆ ಸಮಾರೋಪ ಭಾಷಣ ಮಾಡುವವ. ವಸ್ತು ಸಂಗ್ರಹಾಲಯ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಇವರು ವಿಚಾರಸಂಕಿರಣದ ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿದ್ದಾರೆ. ಈ ಪದವನ್ನು ‘ಸಮಾರೋಪಕ’ ಏಕವಚನ ಸೂಚಕವಾಗಿ ಬಳಕೆಯಾಗಿದೆ. ಇದಕ್ಕೆ ಬದಲಾಗಿ ‘ಸಮಾರೋಪಕರು’ ಪದ ಬಳಕೆ ಸೂಕ್ತವಾದುದು. ಸಾಧ್ಯತೆ : ಸಮಾರೋಪಕಿ

ಸರದಾರಿಣಿ ನಾ ಉದಯವಾಣಿ ಶೂರೆ. ‘ಸರದಾರನಿಗೊಬ್ಬಳು ಹೊಸ ಸರದಾರಿಣಿ ಕೊನೆಗೂ ಸಿಕ್ಕಿದ್ದಾಳೆ.’ ‘ಸರದಾರ ಎಂಬ ಪುಲಿಂಗ ಸೂಚಕ ಪದಕ್ಕೆ ವಿರುದ್ಧವಾಗಿ ‘ಸರದಾರಿಣಿ’ ಪದ ಬಳಕೆ ಮಾಡಲಾಗಿದೆ. -‘ಣಿ’ ಸ್ತ್ರೀಸೂಚಕ ಪದವಾಗಿ ಬಳಕೆಯಲ್ಲಿರುವುದು ಗಮನಿಸುವಂತಹ ಅಂಶ.

ಸರ್ವಾಭರಣ ನಾ ಸುಧಾ ಮೈತುಂಬಾ ಆಭರಣ ಧರಿಸಿರುವವಳು. ‘ಈಕೆಯನ್ನು ಸರ್ವಾ ಭರಣ ಸುಂದರಿ ಎನ್ನಬಹುದೆನೋ’. ಮೈತುಂಬ ಆಭರಣ ಧರಿಸಿರುವವಳಿಗೆ (ಸುಮಾರು ಅಭರಣದ ಬೆಲೆ ೧೩೫ ಕೋಟಿ ರೂಪಾಯಿ) ಸರ್ವಾಭರಣ ಸುಂದರಿ ಎಂಬ ಅರ್ಥದಲ್ಲಿ ಬಳಕೆ ಮಾಡಲಾಗಿದೆ. ಸರ್ವ+ಆಭರಣ =ಸರ್ವಾಭರಣ ಸವರ್ಣ ದೀರ್ಘಸಂಧಿ. ‘ನಿರಾಭರಣ’ ಪದಕ್ಕೆ ವಿರುದ್ಧವಾಗಿ ಪದ ರಚನೆ ಮಾಡಲಾಗಿದೆ.

ಸರ್ವಾಧಿಕಾರಿಣಿ ನಾ ಲಂಕೇಶ್ಪತ್ರಿಕೆ ಸರ್ವಾಧಿಕಾರ ಹೊಂದಿರುವವಳು. ‘ಈ ಅನಾಥ ಮಕ್ಕಳನ್ನು ಸ್ವಾವಲಂಬನೆಗೆ ತರುವ ಘೋಷಣೆಯ ದಗಲುಬಾಜಿ ಸಂಸ್ಥೆಗೆ ಆರೆಂಟು ಜನರ ಆಡಳಿತ ಮಂಡಳಿಯಿದೆಯಾದರೂ ನಂದನಾ ರೆಡ್ಡಿಯೇ ಸರ್ವಾಧಿಕಾರಿಣಿ.’ ಸ್ತ್ರೀಸೂಚಕವಾಗಿ -‘ಣಿ’ ಪ್ರತ್ಯಯವನ್ನು ಬಳಕೆ ಮಾಡಲಾಗಿದೆ.

ಸಸ್ಯದಾಸೋಹ ನಾ ತರಂಗ ಸಸಿಗಳನ್ನು ದಾನ ಮಾಡುವುದು. ‘ಎಲ್ಲಾ ಮಠಗಳೂ, ಅನ್ನ ದಾಸೋಹ, ಅಕ್ಷರದಾಸೋಹಕ್ಕಷ್ಟೇ ಸೀಮಿತಗೊಂಡರೆ ಆದಿ ಚುಂಚನಗಿರಿ ಮಠ ಒಂದು ಹೆಜ್ಜೆ ಮುಂದೆ ಹೋಗಿ ‘ಸಸ್ಯದಾಸೋಹ’ವನ್ನು ಪ್ರಾರಂಭಿಸಿದೆ. ‘ಅನ್ನದಾನ, ಅಕ್ಷರದಾನ ಮಾಡುವಾಗೆ ಸಸಿಗಳನ್ನು ದಾನಮಾಡುವ ಪ್ರಕ್ರಿಯೆಗೆ ‘ಸಸ್ಯದಾಸೋಹ’ ಎಂದು ಬಳಕೆ ಮಾಡಲಾಗಿದೆ.

ಸಸ್ಯಾಗಾರ ನಾ ಉದಯವಾಣಿ ನರ್ಸರಿ ಎಂಬ ಅರ್ಥದಲ್ಲಿ ಸಸ್ಯೋತ್ಪಾದನಾ ಸ್ಥಳ. ‘ಈ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗದ ಪ್ರದೇಶಗಳ ಅಭಿವೃದ್ದಿ ಮತ್ತು ಸಸ್ಯಾಗಾರ ಸ್ಥಾಪನೆ ಮಾಡಲು ಸಸ್ಯಗಾರ ಸ್ಥಾಪನೆ ಯೋಜನೆ ಹಮ್ಮಿಕೊಂಡಿದೆ.’ ಸಾಮಾನ್ಯವಾಗಿ ಕ್ರಿಯಾದಾತುವಿಗೆ ನಾಮಸಾಧಕ ಪ್ರತ್ಯಯ ಹಚ್ಚಿ ನಾಮರೂಪವನ್ನು ಸಾಧಿಸಿ ಅನಂತರ -‘ಗಾರ’ ಹಚ್ಚುವುದು ಕನ್ನಡದಲ್ಲಿ ಬಳಕೆಯಲ್ಲಿರುವ ನಿಯಮ. ಆದರೆ ಮೇಲಿನ ಪದದಲ್ಲಿ ನಾಮಪದಕ್ಕೆ -‘ಗಾರ’ ಪ್ರತ್ಯಯ ಹಚ್ಚಿ ಮತ್ತೊಂದು ನಾಮಪದ ರಚನೆ ಮಾಡಲಾಗಿದೆ.

ಸಸ್ಯೋಪಯೋಗಿ ನಾ ತರಂಗ ಸಸ್ಯದಿಂದ ಆಗುವ ಪ್ರಯೋಜನ. ‘ಸಸ್ಯೋಪಯೋಗಿ ಉತ್ಪನ್ನಗಳು’. ‘ನಿತ್ಯೋಪಯೋಗಿ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಸಹಾಯದರ್ಶಿ ನಾ ಅಗ್ನಿ ಸಹಾಯಕಳು. ‘ಆಕೆಯ ಹೆತ್ತ ತಾಯಿಯೂ ಅದಕ್ಕೆ ಸಹಾಯವರ್ತಿ ಆಗಿದ್ದಳು ಎನ್ನುವುದು ಮತ್ತೊಂದು ದುರಂತ.’ ಸಮೀಪವರ್ತಿ ಮಾದರಿಯಲ್ಲಿ ಸಹಾಯಕವರ್ತಿ ಪದವನ್ನು ಬಳಕೆ ಮಾಡಲಾಗಿದೆ.

ಸಾಕ್ಷರೋತ್ತರ ನಾ ಹೊಸತು ಸಾಕ್ಷರತೆಯ ನಂತರ. ‘ಆ ವಿಶ್ವಾಸ ನಮಗೆ ಇಲ್ಲವಾದಲ್ಲಿ ಇಲ್ಲಿಯವರೆಗೆ ನಡೆದ ಸಾಕ್ಷರತಾ ಆಂದೋಲನ ಹಾಗೂ ಸಾಕ್ಷರೋತ್ತರ ಕಾರ್ಯಕ್ರಮಗಳು ಸಾಧಿಸಿದಿದ್ದಾದರು ಏನು?’. ಅಕ್ಷರತೆಯ ನಂತರ ಎನ್ನುವ ಅರ್ಥದಲ್ಲಿ ಪದ ಪ್ರಯೋಗ ಮಾಡಲಾಗಿದೆ. ಸಾಕ್ಷರ ಮತ್ತು ಉತ್ತರ ಪದಗಳೆರಡನ್ನು ಸೇರಿಸಿ ಪದ ರಚನೆ ಮಾಡಲಾಗಿದೆ.

ಸಿಂಗಾಯಣ ನಾ ಕನ್ನಡಪ್ರಭ ಸಿಂಗಾಯಣಗೊಳಿಸುವುದು. ‘ರಾಜ್ಯದಲ್ಲಿ ಈಗ ಒಂದು ರೀತಿ ಸಿಂಗಾಯಣ. ಅಂದರೆ ಸಿಂಗ್(ಸಿಂಹ) ಮಯ’. ಮೇಲಿನ ಪದವನ್ನು ಪ್ರಾಣಿ ಸೂಚಕವಾಗಿ ಬಳಕೆ ಮಾಡಿದ್ದಂತಿಲ್ಲ. ವ್ಯಕ್ತಿ ಸೂಚಕವಾಗಿ ಬಳಕೆ ಮಾಡಲಾಗಿದೆ. ರಾಜ್ಯದಲ್ಲಿ ಮುಖ್ಯ ಸ್ಥಾನದಲ್ಲಿ ‘ಸಿಂಗ್’ ವಂಶಸ್ಥರು ಇರುವುದರಿಂದ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ. ದೀರ್ಘವಾದ ಕತೆ, ಚರಿತ್ರೆ, ಪುರಾಣ ಸೂಚಿಸಲು ‘ಆಯಣ’ ಪದವನ್ನು ಬಳಕೆ ಮಾಡಲಾಗುತ್ತಿದೆ.

ಸಿನಾಯಣ ನಾ ಪ್ರಜಾವಾಣಿ ಸೀನುಗಳ ಪುರಾಣ. ‘ಸೀನಾಯಣ ಮುಗಿಸಿ ಕರ ವಸ್ತ್ರದಿಂದ ಮೂಗು ಒರಸಿಕೊಳ್ಳುತ್ತಲೇ ಮಾತಿಗಾರಂಭಿಸಿದರು.’ ‘ರಾಮಾಯಣ’ ಪದವನ್ನು ಆಧರಿಸಿ ಹಲವಾರು ಪದಗಳನ್ನು ಸೃಷ್ಟಿ ಮಾಡುತ್ತಿರುವುದು ತಿಳಿದಿರುವ ವಿಚಾರ. ಆದರೆ ದೀರ್ಘವಾದ ಕತೆ ಚರಿತ್ರೆಗಳನ್ನು ತಿಳಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತದೆ. ಉದಾ : ಗ್ರಾಮಾಯಣ, ಆಫಿಸಾಯಣ, ನಾಮಾಯಣ.

ಸಿನಿಮಾಕೋರ ನಾ ಲಂಕೇಶ್ಪತ್ರಿಕೆ ವಂಚನೆ ಮಾಡುವವ; ಮೋಸ ಮಾಡುವವ; ‘ಅನುಕರಣೆ ಮಾಡಲು ಹೋಗಿ ಸಲ್ಲದ ಅನಾಹುತಗಳಿಗೆ ಕಾರಣರಾದರು ಎಂಬ ಭಯ ಆಹಗ ತೆಲುಗು ಸಿನಿಮಾ ಕೋರ ಹಾವಳಿಯಿಂದ ಕರ್ನಾಟಕದ ಒಟ್ಟಾರೆ ಸಂಸ್ಕೃತಿಯೇ ನಶಿಸಿ ಹೋಗುತ್ತಿದೆಯೆಂಬ ಆಕ್ರೋಶ…. ಗಡಿಭಾಗದ ಕನ್ನಡಿಗರಲ್ಲಿ ಮನೆ ಮಾಡತೊಡಗಿದೆ. ಮಾದರಿ : ಲಂಚಕೋರ, ದಗಾಕೋರ ಸಿನಿಮಾ ಮತ್ತು ಕೋರ ರೂಪಗಳ ಸಂಯೋಜನೆಯಿಂದ ಪಡೆದ ರಚನೆಯಿದು. ಕೋರ ಪ್ರತ್ಯಯವುಳ್ಳ ರೂಪಗಳು ಹೀನಾರ್ಥವನ್ನೇ ಸೂಚಿಸುತ್ತದೆ. ಆ ಪ್ರತ್ಯಯವನ್ನು ಇಂಗ್ಲಿಷ್ ರೂಪದೊಂದಿಗೆ ಸೇರಿಸಿ ಪದ ರಚನೆ ಮಾಡಲಾಗಿದೆ.

ಸಿನಿಮಾಯಣ ನಾ ವಿಜಯಕರ್ನಾಟಕ ಚಲನಚಿತ್ರಗಳ ಪುರಾಣ. ‘ಶಿವರಾಂ ಹೇಳಿದ ಸಿನಿಮಾಯಣ’ ‘ಸಿನಿಮಾ’ ಇಂಗ್ಲಿಶ್ ಪದಕ್ಕೆ ‘ಆಯಣ’ ರೂಪವನ್ನು ಸೇರಿಸಿ ಪದರಚನೆ ಮಾಡಲಾಗಿದೆ. ಸಿನಿಮಾಗಳ ಪುರಾಣ, ಕತೆ, ಚರಿತ್ರೆ ಹೇಳುವುದಕ್ಕೆ ಸಿನಿಮಾಯಣ ಪದವನ್ನು ಪ್ರಯೋಗ ಮಾಡಲಾಗಿದೆ.

ಸುನಿಶ್ಚಿತ ಗು ಜಾಹೀರಾತು ಚೆನ್ನಾಗಿ ಗೊತ್ತಾದ, ನಿಜವಾದ. ‘ಇವು ನಿಮ್ಮ ಹಣಕ್ಕೆ ಅತ್ಯುತ್ತಮ ಮೌಲ್ಯವನ್ನು ಸುನಿಶ್ಚಿತಗೊಳಿಸುತ್ತವೆ.’ ನಿಶ್ಚಿತ ಎಂಬುದನ್ನೇ ಸಾಮಾನ್ಯವಾಗಿ ಗೊತ್ತಾದ ನಿಜವಾದ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಈ ರಚನೆಯಲ್ಲಿ ಅತ್ಯುತ್ತಮ ಮೌಲ್ಯವನ್ನು ಹೊಂದಿರುವ ಎಂಬುದನ್ನು ಸೂಚಿಸಲು ಮತ್ತೆ ‘ಸುನಿಶ್ಚಿತ’ ಎನ್ನಲಾಗಿದೆ. ಇದಕ್ಕೆ ವಿರುದ್ಧ ಪದವಾಗಿ ‘ಅನಿಶ್ಚಿತ’ ರೂಪ ಇದೆ.

ಸೂರ್ಯಾಘಾತ ನಾ ವಿಜಯಕರ್ನಾಟಕ ಸೂರ್ಯನಿಂದ ಉಂಟಾಗುವ ಆಘಾತ. ‘ಅದೂ ಎದೆಯಲ್ಲಿ ಸಂಕಟ ಮಡುಗಟ್ಟಿದ ಹೊತ್ತಲ್ಲಿ. ಅದೂ ಆ ಭಯಂಕರ ‘ಸೂರ್ಯಾಘಾತ’ದಿಂದ, ಬಿಡದ ಕಾಡುವ ಪ್ರೇಮದ ಕಾವಿನಿಂದ…’ ಹೃದಯಾಘಾತ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಸನ್‌ಸ್ಟ್ರೋಕ್‌ಗೆ ಸಂವಾದಿಯಾಗಿ ಬಳಕೆ ಮಾಡಿದೆ.

ಸೇದಕ ನಾ ವಿಜಯಕರ್ನಾಟಕ ಸೇವಿಸುವವನು, ಕುಡಿಯುವವನು. ‘ಬದಲಿ ಜಾಹೀರಾತುಗಳನ್ನು ಹೊಸೆಯುವುದು ಹೇಗೆ ಸೇದಕರನ್ನು ಸೆಳೆಯುವುದು ಹೇಗೆ? ಇಂಗ್ಲೀಶಿನ ಸ್ಮೋಕರ್‌ಗೆ ಸಂವಾದಿಯಾಗಿ ಸೇದಕ ಬಳಕೆಯಾದಂತಿದೆ. ‘ಸೇದುಕ’ ಬಳಕೆ ಸರಿಯಾದದು ಎನಿಸುತ್ತದೆ. ಮೇಲಿನ ಪದದಲ್ಲಿ ಕ್ರಿಯಾಪದಕ್ಕೆ -‘ಕ’ ಪ್ರತ್ಯಯ ಹಚ್ಚಿ ವ್ಯಕ್ತಿವಾಚಕವನ್ನಾಗಿ ಬಳಕೆ ಮಾಡಲಾಗಿದೆ.

ಸೇದುಗ ನಾ ಅಗ್ನಿ ದೂಮಪಾನ ಮಾಡುವವ. ‘ಸಿಗರೇಟ್ ಸೇದುಗರನ್ನು ಹೇಡಿಗಳು, ಅದಕ್ಷರು ಮುಂತಾಗಿ ಟೀಕಿಸಿದ್ದಕ್ಕೆ ನನ್ನ ಅನೇಕ ಸಿಗರೇಟ್ ವ್ಯಾಮೋಹಿ ಮಿತ್ರರುಗಳು ಮುನಿದಿದ್ದಾರೆ.’ ‘ಸೇದುಗ’ ರೂಪ ಓದುಗರೂಪದ ಮಾದರಿಯಲ್ಲಿ ಬಳಕೆ ಮಾಡಲಾಗಿದೆ. ಆಗ ಸೂಚಿತ ಅರ್ಥವೇ ಮುಖ್ಯವಾಗುತ್ತದೆ.

ಸೇವೋತ್ಸಾಹ ನಾ ಲಂಕೇಶ್ಪತ್ರಿಕೆ ಸೇವಿಸುವಿಕೆ. ‘ಅವರ ಕೊನೆಯ ಉಸಿರು ಇರುವವರೆ ವಿಗೂ ಈ ಸೇವೋತ್ಸಾಹದಿಂದ ಹಿಂಜರಿಯುವುದಿಲ್ಲವಂತೆ; ಕನ್ನಡದಲ್ಲಿ ಸೇವೆಗೆ ನಾಲ್ಕು ಅರ್ಥಗಳಿವೆ. ೧.ಊಳಿಗೆ-ಚಾಕರಿ ೨. ಉಪಚಾರ-ಶುಶ್ರೂಷೆ ೩. ಪೂಜೆ-ಉಪಾಸನೆ ೪. ಕುಡಿಯುವಿಕೆ-ಸೇವಿಸುವಿಕೆ ಮೇಲಿನ ಪದ ವ್ಯಂಗ್ಯಾರ್ಥದಲ್ಲಿ ಕುಡುಯುವಿಕೆ, ಸೇವಿಸುವಿಕೆ ಎನ್ನುವ ಅರ್ಥದಿಂದ ಬಳಕೆ ಮಾಡಲಾಗಿದೆ.

ಸೋನಿಯಾಯಣ ನಾ ವಿಜಯಕರ್ನಾಟಕ ಸೋನಿಯಾ ಗಾಂಧಿ ಪುರಾಣ/ಕತೆ. ‘ಸೋನಿಯಾ ಯಣ…’ ‘ಸೋನಿಯಾ ಪುರಾಣ ಕುರಿತು ಹೇಳುವ ಸಂದರ್ಭದಲ್ಲಿ ಮೇಲಿನ ಪದವನ್ನು ಬಳಕೆ ಮಾಡಲಾಗಿದೆ.’ ದೀರ್ಘವಾದ ಕತೆ ಚರಿತ್ರೆಯನ್ನು ಸೂಚಿಸಲು ‘ಆಯಣ’ ಎಂಬುದನ್ನು ಹಚ್ಚಲಾಗುತ್ತಿದೆ. ಹಾಸ್ಯ ಲೇಖನಗಳಲ್ಲಿ, ಲಘುಹರಟೆ ಮುಂತಾದ ಸಂದರ್ಭಗಳಲ್ಲಿ ಬಳಸಲಾಗುತ್ತಿದೆ.

ಸೌದೀಕರಿಸು ನಾ ಉದಯವಾಣಿ ಸೌದಿರಾಷ್ಟ್ರದವರನಾಗಿ ಮಾಡು. ‘ಈ ವರ್ಷದಲ್ಲೆ ಶೇ.೫೦ ಕಾರ್ಮಿಕರನ್ನು ಸೌದೀಕರಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಸ್ವರ್ಣಾಭರಣ ಅಂಗಡಿಗಳಿಗೆ ಸೂಚಿಸಲಾಗಿದೆ ಎಂದು ಸೌದಿಗೃಹ ಸಚಿವ ರಾಜಕುಮಾರ ನಾಯಿಫ್ ತಿಳಿಸಿರುವುದಾಗಿ ಅಲ್ ಮದೀನ ದೈನಿಕ ಹೇಳಿದೆ’. ಸೌದಿರಾಷ್ಟ್ರದೊಂದಿಗೆ ‘ಈಕರಿಸು’ ಪ್ರತ್ಯಯ ಸೇರಿಸಿ ಪದ ರಚನೆ ಮಾಡಲಾಗಿದೆ.

ಸೌಲಭ್ಯದಾv ನಾ ವಿಜಯಕರ್ನಾಟಕ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡುವವನು. ‘ಸಾಲ ನೀಡುವ ಸೌಲಭ್ಯದಾತರಿಗೆ ತಮ್ಮ ವ್ಯಾಪಾರವನ್ನು ನಿರ್ವಹಿಸಲು ಸ್ವಾತಂತ್ರ್ಯ ಇರಬೇಕಾದದ್ದು ನಿಜ.’ ‘ದಾತ’ ಎಂದರೆ ನೀಡುವವನು ಎಂದರ್ಥವಿದೆ. ಅನ್ನದಾತ, ಆಶ್ರಯದಾತ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಸ್ಪರ್ಧಾಂಗಿ ನಾ ಸುಧಾ ಸ್ಪರ್ಧಿಸುವವಳು. ‘ಸೌಂದರ್ಯ ಸ್ಪರ್ಧಾಂಗಿ (ಅರ್ಧಾಂಗಿ?)ಯರು, ರೂಪದರ್ಶಿ ರೂಪಸಿಯರು!….’. ಅರ್ಧಾಂಗಿ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಸ್ಪರ್ಧಾರ್ಥಿ ನಾ ದಿಕ್ಕೂಚಿ ಸ್ಪರ್ಧೆಯನ್ನು ಬಯಸುವವ. ‘ಆ ಕಾರಣ ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ ಕೆಲವು ಮೂಲಭೂತ ಪದಗಳ ಜ್ಞಾನ ಸ್ಪರ್ಧಾರ್ಥಿಗಳಿಗೆ ಇರಬೇಕಾದುದು ಅವಶ್ಯಕ’. ‘ವಿದ್ಯಾರ್ಥಿ’ ಮಾದರಿಯಲ್ಲಿ ಪದರಚನೆ ಮಾಡಲಾಗಿದೆ.

ಸ್ಟಾರ್ಗಿರಿ ನಾ ಲಂಕೇಶ್ತ್ರಿಕೆ ನಾಯಕನ ವರ್ತನೆಗಳನ್ನು ತೋರುವುದು. ‘ಈ ಯಾದಿಯಲ್ಲಿ ಬಾಲಕೃಷ್ಣನೆಂಬ ಬೆಪ್ಪು ತಕ್ಕಡಿ ತನ್ನ ಸ್ಟಾರ್ ಗಿರಿ ಅಹಂನಲ್ಲಿ ತೇಲಾಡಿ ಅಮಾಯಕರಿಬ್ಬರ ಪ್ರಾಣತೆಗೆಯುವ ಮಟ್ಟಕ್ಕೆ ಬಂದನಲ್ಲ ಈತನ ಸೊಕ್ಕು ಎಷ್ಟಿರಬೇಕು.’ ಈಗಾಗಲೇ ಹಿರೋಗಿರಿ ಪದ ಬಳಕೆಯಾಗಿದೆ. ಅದಕ್ಕಿಂತ ಅರ್ಥದಲ್ಲಿ ವ್ಯತ್ಯಾಸವೇನೂ ಇಲ್ಲ. ಮಾದರಿ : ದಿವಾನಗಿರಿ

ಸ್ಟಾರಿಣಿ ನಾ ಕರ್ಮವೀ ಚಿತ್ರೋದ್ಯಮ ವೃತ್ತಿಯಲ್ಲಿರುವ ಹೆಂಗಸು. ‘ಸೂಪರ್ ಸ್ಟಾರಿಣಿಯ ಕೈ ಖಾಲಿ!’. ಸ್ಟಾರ್ ಪದವನ್ನು ಪುಲ್ಲಿಂಗ ರೂಪವೆಂದು ತಿಳಿಯ ಬೇಕೆಂಬ ಒತ್ತಾಯವಿಲ್ಲದಿದ್ದರೂ ಸಾಮಾನ್ಯವಾಗಿ ನಾವು ಅದನ್ನು ಪುಲ್ಲಿಂಗ ರೂಪವೆಂದು ತಿಳಿದು ಅನಂತರ ಸ್ತ್ರೀಲಿಂಗ ರೂಪವನ್ನು ಪಡೆಯಲು ಪ್ರತ್ಯಯಗಳನ್ನು ಹತ್ತಿಸುತ್ತೇವೆ. ಇದೇ ಕ್ರಮ ಮಾಸ್ಟರಣಿ, ಡಾಕ್ಟರಿಣಿ, ರೂಪಗಳಲ್ಲೂ ಬಳಕೆಯಾಗಿದೆ.

ಸ್ಪೀಡಿಸು ಕ್ರಿ ಲಂಕೇಶ್ಪತ್ರಿಕೆ ವೇಗವಾಗಿ ಓಡಿಸುವುದು. ‘ಆದರೆ ಆತನಿಗೆ ಹೊಸದಾರಿ ಆಗಿದ್ದರಿಂದ ಅಂಜುತ್ತ ಅಳುಕುತ್ತಲೇ ಸ್ಪೀಡಿಸುತ್ತಿದ್ದ.’ ಇಂಗ್ಲಿಶಿನ ‘ಸ್ಪೀಡ್’ ಪದಕ್ಕೆ ‘ಇಸು’ ಪ್ರತ್ಯಯವನ್ನು ಹಚ್ಚಲಾಗಿದೆ.

ಸ್ತ್ರೀತ್ವ ನಾ ಸುಧಾ ಸ್ತ್ರೀತನವನ್ನು ಹೊಂದಿರುವುದು. ‘‘ತಮಿಳು ಸ್ತ್ರೀತ್ವದ ಬಗೆಗಿನ ಆಕ್ರಮಣವೆಂಬಂತೆ ಈ ಹೇಳಿಕೆಯನ್ನು ರಾಜಕೀಯ ಪಕ್ಷಗಳು ಅತಿರಂಜಿತಗೊಳಿಸಿ ಬಳಸಿಕೊಳ್ಳುತ್ತಿವೆ.’’ ಸ್ತ್ರೀತನಕ್ಕಿಂತ ಅರ್ಥದಲ್ಲೇನೂ ಹೊಸತನವಿಲ್ಲ. ಪುರುಷತ್ವ ಪದಕ್ಕೆ ವಿರುದ್ಧವಾಗಿ ಪದ ರಚನೆ ಮಾಡಲಾಗಿದೆ.

ಸ್ನೇಹವರ್ಧಕ ನಾ ಪ್ರಜಾವಾಣಿ ಗೆಳೆತನವನ್ನು ವೃದ್ದಿಪಡಿಸುವವ. ‘ಐತಿಹಾಸಿಕ ದೆಹಲಿ ಮತ್ತು ಲಂಡನ್ ನಗರಗಳ ನಡುವಿನ ಸಾಂಸ್ಕೃತಿಕ, ಆರ್ಥಿಕ ಬಾಂಧವ್ಯವನ್ನು ಹೊಸೆಯಲು ‘ಸ್ನೇಹವರ್ಧಕ ಒಪ್ಪಂದವೊಂದಕ್ಕೆ ನಿನ್ನೆ ಸಹಿ ಹಾಕಲಾಗಿದೆ’. ಇದು ಧ್ವನಿ ವರ್ಧಕ, ಕೇಶವರ್ಧಕ ಮಾದರಿಯಲ್ಲಿ ಸೃಷ್ಟಿಸಿರುವ ಪದ.

ಸ್ನೇಹಪಾನ ನಾ ಕನ್ನಡಪ್ರಭ ಗೆಳೆತನ ಅನುಭವಿಸುವುದು. ‘ಸ್ನೇಹಪೂರ್ವಕವಾಗಿ ಪಾನೀಯವನ್ನು ಸ್ವೀಕರಿಸುವುದು’. ‘ಪಂಚಕರ್ಮಕ್ಕೆ ಪೂರ್ವ ತಯಾರಿಯಾಗಿ ಸ್ನೇಹಪಾನ’ ಮೇಲಿನ ಪ್ರಯೋಗವು ಸುರಪಾನ, ಧೂಮಪಾನ, ಮಧ್ಯಪಾನ ಮಾದರಿಯಲ್ಲಿ ಸೃಷ್ಟಿಸಿರುವ ಪದ.

ಸ್ನೇಹಾಲಯ ನಾ ಕನ್ನಡಪ್ರಭ ಗೆಳೆತನದ ಸ್ಥಳ. ‘ಸ್ನೇಹಾಲಯ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ‘ಸೀನು ಸುಬ್ಬ’ ಚಿತ್ರಕ್ಕಾಗಿ ಪ್ರಸಾದ್ ನೃತ್ಯ.’ ಮಾದರಿ: ಪ್ರೇಮಾಲಯ, ದೇವಾಲಯ, ಶಿತಾಲಯ, ತಾರಾಲಯ.

ಸೈನೀಕರಣ ನಾ ದಿಕ್ಸೂಚಿ ಸೈನ್ಯಕ್ಕೆ ಅಧೀನವಾಗುವುದು. ಅದನ್ನು ಅನುಕರಿಸುವುದು, ಮಾರುಹೋಗುವುದು. ‘ಭಜರಂಗದಳದ ಹಾಗೂ ಸಂಘ ಪರಿವಾರದ ಇತರ ಘಟಕಗಳು ಪ್ರತಿಪಾದಿಸುತ್ತಿರುವ ರಾಜಕೀಯ ಹಿಂದೂಕರಣ ಮತ್ತು ಹಿಂದುಗಳ ಸೈನೀಕರಣ ಘೋಷಣೆಗಳು ಸಾವರ್ಕರ್ ಅವರ ಬಳಿವಳಿಗಳು ಆಗಿವೆ.’ ‘ಈಕರಣ’ ಪ್ರತ್ಯಯವನ್ನು ಹಚ್ಚಿ ಬಳಕೆ ಮಾಡುತ್ತಿರುವ ಪಟ್ಟಿಗೆ ಇದೊಂದು ಸೇರ್ಪಡೆ.