ಹಗರಣೋದಯ ನಾ ವಿಜಯಕರ್ನಾಟಕ ರಾದ್ಧಾಂತ; ಅವಾಂತರ. ‘ಒಟ್ಟಿನಲ್ಲಿ ಹಗರಣವೆಂಬ ಪಾರ್ಥೇನಿಯಂ ಬೀಜ ಕರಿನೆರಳಿನಲ್ಲಿ ಮೊಳಕೆಯೊಡೆದು ಚಿಗುರುತ್ತಲೇ ಇಡೀ ದೇಶವನ್ನು ಆವರಿಸಿ ಹಗರಣೋಮಯವಾಗಿದೆ.’’ ಹಗರಣ+ಮಯ ಸೇರಿ ಗುಣಸಂಧಿ ನಿಯಮಕ್ಕನುಗುಣವಾಗಿ ರಚನೆ ಮಾಡಲಾಗಿದೆ. ರಾದ್ಧಾಂತಗಳ ಸರಮಾಲೆ ಎನ್ನುವ ಅರ್ಥದಲ್ಲಿ ಬಳಕೆ ಮಾಡಿದಂತಿದೆ.

ಹಗಲಾಯಣ ನಾ ಸುಧಾ ಹಗಲು ಹೊತ್ತಿನ ನೈಟಿಗಳ ಪುರಾಣ. ‘ನೈಟಿಯ ಹಗಲಾಯಣ ಏನು ಅದರ ರಾಮಾಯಣ’!? ಇತ್ತೀಚಿಗೆ ‘ರಾಮಾಯಣ’ ಪದವನ್ನು ಆಧರಿಸಿ ಹಲವಾರು ಪದಗಳನ್ನು ಸೃಷ್ಟಿ ಮಾಡುತ್ತಿರುವುದು ತಿಳಿದಿರುವ ಸಂಗತಿ. ದೀರ್ಘವಾದ ಕಥೆ, ಚರಿತ್ರೆ, ತಿಳಿಸಲು ‘ಆಯಣ’ ಎಂಬುದನ್ನು ಹಚ್ಚಿ ಬಳಸಲಾಗುತ್ತಿದೆ. ಮಾದರಿ : ನಾಮಾಯಣ, ಆಫಿಸಾಯಣ.

ಹಗರಣಕಾರ ನಾ ಕನ್ನಡಪ್ರಭ ಸಮಸ್ಯೆಗಳನ್ನು ಹುಟ್ಟುಹಾಕುವವ. ‘ಕೆಪಿಎಸ್‌ಸಿ ಹಗರಣಕಾರರ ಮೇಲೆ ಕ್ರಮ.’ -ಗಾರ/ಕಾರ ಪ್ರತ್ಯಯವನ್ನು ಹಚ್ಚಿ ಪದ ರಚನೆ ಮಾಡಲಾಗಿದೆ.

ಹದ್ದಾಲಿಕೆ ಸುಧಾ ಕಾಣಿಸದಂತೆ ನೋಡುವುದು. ‘ಕದ್ದಾಲಿಕೆಯಲ್ಲ, ಇದು ಹದ್ದಾಲಿಕೆ!’ ಹದ್ದುಗಳು ಕದ್ದು ನೋಡುವುದಕ್ಕೆ ಹದ್ದಾಲಿಕೆ ಎಂದು ಬಳಕೆ ಮಾಡಲಾಗಿದೆ. ಕದ್ದು ಕೇಳುವುದನ್ನು ಕದ್ದಾಲಿಕೆ ಎಂದರೆ, ಇಲ್ಲಿ ಹದ್ದುಗಳು ಕದ್ದು ಕೇಳುವುದಕ್ಕಿಂತ ಕದ್ದು ನೋಡುವುದು ಅಥವಾ ಯಾರಿಗೂ ಕಾಣಿಸದಂತೆ ನೋಡುವುದಕ್ಕೆ ಹದ್ದಾಲಿಕೆ ಎಂದು ಬಳಕೆ ಮಾಡಲಾಗಿದೆ.

ಹನಿಮುನ್ಸಿಗಳು ನಾ ತುಷಾರ ಹನಿಮೂನು. ‘ಆದರೆ ಬಂದಿದ್ದ ಹನಿಮುನ್ಸಿಗಳು ಅಬ್ಬಾಬ್ಬಾ ಅ ಅವರ ಸೀರೆಯ ಸೆರಗು ಗಂಡನ ತಲೆಗೆ ಗಂಡನ ಕೋಟು ಹೆಂಡತಿಯ ಬೆನ್ನಿಗೆ ಅದೂ ಸಂಯಾಮಿ ಅವಳಿಗಳಂತೆ ಸೊಂಟದ ಹತ್ತಿರ ಮಾತ್ರ ಅಂಟಿಕೊಂಡು ೨ ಜೊತೆ ಕಾಲಿನಿಂದ ಮಾರ್ಚ್ ಫಾಸ್ಟ್ ಮಾಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತ ಬರುತ್ತಿದ್ದರು.’’ ಇಂಗ್ಲಿಶಿನ ಹನಿಮೂನ್ ಪದಕ್ಕೆ ಕನ್ನಡದ ಬಹುವಚನ ಪ್ರತ್ಯಯವಾದ -‘ಗಳು’ ಸೇರಿಸಿ ಬಳಕೆ ಮಾಡಲಾಗಿದೆ.

ಹಠವಾದಿಣಿ ನಾ ವಿಜಯಕರ್ನಾಟಕ ಮೊಂಡುತನ ಮಾಡುವವಳು. ‘ಅಪ್ಪನಿಗೆ ವಿರುದ್ಧವಾಗಿ ಮಾತಾಡುವ ಹಠವಾದಿಣಿ ಈ ನಾಯಕಿ’. ಸ್ತ್ರೀಸೂಚಕವಾಗಿ -ಣಿ ಪ್ರತ್ಯಯ ಬಳಕೆ ಮಾಡಲಾಗಿದೆ. ಹಠವಾದಿ ಪುರುಷವಾಚಕ ಪದವೆಂದು ಪರಿಗಣಿಸಿದಂತಿದೆ.

ಹಣಗಾರ ನಾ ಹೊಸತು ಹಣವಂತ ಹಣ ಇರುವವರು. ‘ಯಾವಾಗ್ ನೋಡಿದ್ರೂ ಐಟಿಬಿಟಿ ಅಂತ ಹಣಗಾರರ‍್ಗೇ ಸವಲತ್ ಕೊಡ್ತದೆ.’ ‘ಹಣ’ವಂತ ಸರಿಯಾದ ರೂಪ. ‘ಹಣಗಾರ’ ಅರ್ಥದ ದೃಷ್ಟಿಯಿಂದ ಗೊಂದಲವನ್ನು ಸೃಷ್ಟಿ ಮಾಡುತ್ತದೆ. ‘ಬಳೆಗಾರ’ ರೂಪದ ಅರ್ಥದ ದೃಷ್ಟಿಯಿಂದ ಬಳಕೆ ಮಾಡುವಾಗೆ ‘ಹಣಗಾರ’ ರೂಪವನ್ನು ಬಳಕೆ ಮಾಡಲು ಸಾಧ್ಯವಿಲ್ಲ.

ಹಣದಾತ ನಾ ಲಂಕೇಶ್ಪತ್ರಿಕೆ ಹಣ ನೀಡುವವನು. ‘ಸಿಡಬ್ಲ್ಯೂಸಿ ಒದಗಿಸುವ ಲಿಖಿತ ದಾಖಲೆಗಳನ್ನು ಕಸದ ಬುಟ್ಟಿಗೆಸೆದು ಹಣದಾತರು ಅದರ ಕಾರ್ಯಕ್ಷೇತ್ರಕ್ಕೆ ಹೋಗಿ ಜನಸಾಮಾನ್ಯರ ಭೇಟಿಯಾದರೆ ಹುಸಿ ಪ್ರಗತಿಯ ಹೂರಣ ಹೊರಬೀಳುತ್ತದೆ.’ ದಾತ ಎಂದರೆ ನೀಡುವವನು -ದಾತ ರೂಪವನ್ನು ಉಳ್ಳವರು ಎಂಬ ವಿಶೇಷ ಅರ್ಥವ್ಯಾಪ್ತಿಯಲ್ಲಿ ಬಳಸಲಾಗಿದೆ. ಮಾದರಿ : ಅನ್ನದಾತ.

ಹಣಬಾಕ ನಾ ಅಗ್ನಿ ಹಣವನ್ನು ನುಂಗಿದವನು. ‘ಹಣಬಾಕರು, ಹೆಣ್ಣುಬಾಕರು ದರ್ಬಾರು ಇಲ್ಲಿ ಪ್ರಾಮಾಣಿಕರ ಓಡಾಟಕ್ಕಿಂತ ಹೆಚ್ಚು ಜರಭರದಿಂದ ನಡೆದಿದೆ. ‘ಹೊಟ್ಟೆಬಾಕ ಮಾದರಿಯನ್ನನುಸರಿಸಿ ಬಂದಿರುವ ಪದ. ಮೇಲಿನ ಉದಾಹರಣೆಯಲ್ಲಿ ‘ಬಾಕ’ ಪದ ‘ನುಂಗು’ವುದಕ್ಕೆ ಸಮಾನವಾಗಿ ಬಳಸಿದಂತಿದೆ.

ಹಣಬಾಕತನ ನಾ ಹಲೋಬೆಂಗಳೂರು ಹಣ ನುಂಗುವ ಸ್ಥಿತಿ. ‘ಡಾ.ಸೈಯಿದಾಳ ಮೋಸ, ವಂಚನೆ, ಹಣಬಾಕತನ ಇಷ್ಟಕ್ಕೆ ಸೀಮಿತವಾಗಿಲ್ಲ.’ ‘ಹೊಟ್ಟೆಬಾಕ’ ಮಾದರಿಯನ್ನು ನುಸರಿಸಿ ಬಂದಿರುವ ಪದ. ‘ಹಣಬಾಕ’ ಪದಕ್ಕೆ ತನ ಪ್ರತ್ಯಯವೊಂದನ್ನು ಸೇರಿಸ ಲಾಗಿದೆ. ಮೇಲಿನ ಉದಾಹರಣೆಯಲ್ಲಿ ‘ಬಾಕ’ ಪದ ನುಂಗುವುದಕ್ಕೆ ಸಮಾನವಾಗಿ ಬಳಸಿದಂತಿದೆ.

ಹಣವಂತಿಕೆ ನಾ ಲಂಕೇಶ್ಪತ್ರಿಕೆ ಹಣ ಇರುವುದು. ‘ಹಣವಂತಿಕೆಯ ವೈಭವಕಂಡು ತನ್ನ ಬದುಕು ಬಂಗಾರವಾಗುತ್ತದೆಂದು ಭಾವಿಸಿದಳು.’ ‘ಬುದ್ದಿವಂತಿಕೆ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ.

ಹಣೆಗೆರೆ ನಾ ಕರ್ಮವೀ ತಲೆಬರಹ. ‘ಇಂತಹ ಒಂದು ಅಭೂತಪೂರ್ವ ಸಮ್ಮೇಳನದ ಹಣೆಗೆರೆ ಅರ್ಥಾತ್ ಹೆಡ್‌ಲೈನ್ಸ್ ಅರ್ಥಾತ್ ಮುಖ್ಯಾಂಶಗಳ ಚುಟುಕಾದ ವರದಿ ಇಲ್ಲಿದೆ.’ ಹೆಡ್‌ಲೈನ್ಸ್‌ಗೆ ಸಂವಾದಿಯಾಗಿ ‘ತಲೆಬರಹ’ ಪದವಿರುವಾಗಲೆ ಹಣೆಗೆರೆ ಎಂದು ಮತ್ತೊಂದು ಪದವನ್ನು ಪ್ರಯೋಗ ಮಾಡಲಾಗಿದೆ.

ಹಫ್ರೋ ನಾ ಪ್ರಜಾವಾಣಿ ತೆರಿಗೆಯನ್ನು ವಸೂಲಿ ಮಾಡುವ ಉದ್ಯಮ. ‘ಹಫ್ತಾವಸೂಲಿ ಮಾಡುವ ರೌಡಿಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಳ್ಳುವುದು ಮಾಮೂಲು ಸುದ್ದಿ. ಆದರೆ ಪೊಲೀಸರ ವಶದಲ್ಲಿದ್ದಾಗಲೇ ರೌಡಿಯೊಬ್ಬ ಹಫ್ತಾವಸೂಲಿ ಮಾಡಿದರೆ…?’. ನಿಜಕ್ಕೂ ಆತ ಹಫ್ರೋಎನ್ನಲಡ್ಡಿಯಿಲ್ಲ. ‘ಹಫ್ತ’ ಪದದೊಡನೆ ಉದ್ಯಮ ಪದ ಸೇರಿ ಸಂಧಿಯಾಗುವಾಗ ಸಂಸ್ಕೃತ ಸಂಧಿಯ ನಿಯಮಗಳನ್ನು ಪಾಲಿಸಿರುವುದು ಗಮನಾರ್ಹ.

ಹರಾಮಿಕೋರ ಹಲೋಬೆಂಗಳೂರು ಕೆಟ್ಟ ಗುಣವನ್ನು ಹೊಂದಿರುವವನು. ‘ಪಿ. ರಾಜಶೇಖರನ್ ಎಂಬ ಹರಾಮಿಕೋರ.’ -ಕೋರ ಎಂಬ ಸಾಧಕ ಪ್ರತ್ಯಯ ಪರ್ಸೋ ಅರಾಬಿಕ್ ಮೂಲದ್ದು. ಹರಾಮಿ ಹಿಂದಿ ಮೂಲದ್ದು.

ಹವ್ಯಾಸೋದ್ಯಮಿ ನಾ ಪ್ರಜಾವಾಣಿ ಆಸಕ್ತಿ ಚಟ. ‘ಕ್ರಿಕೆಟ್ ಎಂಬ ಹವ್ಯಾಸೋದ್ಯಮಿ’ ಹವ್ಯಾಸ+ಉದ್ಯಮಿ ಸೇರಿ ಹವ್ಯಾಸೋದ್ಯಮಿ ಪದ ಬಳಕೆ ಮಾಡಲಾಗಿದೆ. ಹೀಗೆ ಬಳಕೆ ಮಾಡುವಾಗ ಸಂಸ್ಕೃತ ಸಂಧಿನಿಯಮ ಪಾಲಿಸಿದಂತಿದೆ.

ಹಸುರಿನಾಲಯ ನಾ ಪ್ರಜಾವಾಣಿ ಹಸಿರಿನಿಂದ ತುಂಬಿದ ಮನೆ. ‘ಹಸುರಿನಾಲಯ ಈ ನ್ಯಾಯಾಲಯ!’ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿಕೊಂಡು ಸಂಸ್ಕೃತ ಸಂಧಿನಿಯಮಕ್ಕನುಗುಣವಾಗಿ ರಚನೆ ಮಾಡಲಾಗಿದೆ. ಹಸುರು ಹಸಿರು ಕನ್ನಡ ಪದ.

ಹಳ್ಳಿಮುಕ್ಕಿ ನಾ ಉದಯವಾಣಿ ಹಳ್ಳಿಗಮಾರಿ. ‘ಹಾಗೆ ಕೇಳಿದ ನಾಲ್ಕು ವರ್ಷದ ಪುಟ್ಟ ಹುಡುಗಿ ನೋಡಲು ಥೇಟು ಹಳ್ಳಿಮುಕ್ಕಿಯಂತಿದ್ದಳು.’ ‘ಹಳ್ಳಿಮುಕ್ಕ’ ಪುಲ್ಲಿಂಗ ಸೂಚಕ ಪದವಾಗಿರುವುದರಿಂದ ‘ಹಳ್ಳಿಮುಕ್ಕಿ’ ಸ್ತ್ರೀಲಿಂಗ ಸೂಚಕ ಪದವಾಗಿ ಬಳಕೆ ಮಾಡಲಾಗಿದೆ.

ಹಾರುಬೂದಿ ನಾ ಪ್ರಜಾವಾಣಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉಳಿಯುವ ಬೂದಿ. ‘ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆ ಯಾಗುವ ಹಾರುಬೂದಿಯನ್ನು ರೈತರು ಬಳಸಿಕೊಳ್ಳಬೇಕು ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಜ್ಞಾನೇಂದ್ರ ಸಲಹೆ ಮಾಡಿದರು.’ ಇದನ್ನು ಮಂಕುಬೂದಿ ಮಾದರಿಯಲ್ಲಿ ರಚನೆ ಮಾಡಲಾಗಿದೆ. ಇಂಗ್ಲಿಶಿನ ಪದಕ್ಕೆ ಸಂವಾದಿಯಾಗಿ ಬಳಕೆ ಮಾಡಲಾಗಿದೆ.

ಹಿಂದೀಕರಣ ನಾ ಅಗ್ನಿ ಹಿಂದಿ ಭಾಷೆಯನ್ನು ಎಲ್ಲ ಕಡೆ ಬಳಕೆ ಮಾಡುವುದು. ‘ದಿಲ್ಲಿಯಲ್ಲಿ ಅಧಿಕಾರ ಕೇಂದ್ರೀಕರಣ ಎಲ್ಲೆಲ್ಲೂ ಹಿಂದೀಕರಣ.’ -ಈಕರಣ ಪ್ರತ್ಯಯವನ್ನು ಬಳಕೆ ಮಾಡಿ ಪದ ರಚನೆ ಮಾಡಲಾಗಿದೆ.

ಹಿಂದೂತ್ವ ನಾ ಸಂಯುಕ್ತಕರ್ನಾಟಕ ಹಿಂದೂ ಧರ್ಮದ ತತ್ವಗಳು. ‘ಹಿಂದೂತ್ವ ಬಿಟ್ಟರೆ ಕೆಟ್ಟೀರಿ.’ ಬಂಧುತ್ವ ಮಾದರಿಯಲ್ಲಿ ಹಿಂದೂತ್ವ ಪದವನ್ನು ಬಳಕೆ ಮಾಡಲಾಗಿದೆ.

ಹಿಂಸೋನ್ಮಾದ ನಾ ಲಂಕೇಶ್ಪತ್ರಿಕೆ ಮಿತಿ ಮೀರಿದ ಹುಚ್ಚು. ‘ಹಿಂಸೋನ್ಮಾದ ತಣಿಯದೆ ಕುತ್ತಿಗೆ ಒತ್ತಿಸಿ ಕೊಂದುಹಾಕಿದ್ದಾರೆ!!’. ಹಿಂಸೆ ಮತ್ತು ಉನ್ಮದ ಪದಗಳು ಸೇರಿಕೊಂಡು ಪದ ರಚನೆ ಮಾಡಲಾಗಿದೆ. ಸಂಧಿನಿಯಮ ಸಂಸ್ಕೃತ.

ಹುಚ್ಚಾಚಾರ ನಾ ಕನ್ನಡಪ್ರಭ ಹುಚ್ಚತನದಿಂದ ನಡೆದುಕೊಳ್ಳುವ ರೀತಿ. ‘ಕ್ರೀಡೆಗೆ ಕಳಂಕ ತಂದ ಪ್ರೇಕ್ಷಕರ ಹುಚ್ಚಾಚಾರ’. ನಯಚಾರ, ಸದಾಚಾರ ಮಾದರಿಯಲ್ಲಿ ಬಂದಿರುವ ಪದ.

ಹುಳಾಹಾರಿ ನಾ ಪ್ರಜಾವಾಣಿ ಹುಳಗಳನ್ನು ತಿಂದು ಜೀವಿಸುವವನು. ‘ಆ ಮಕ್ಕಳು ಪಾಪ ಅನ್ನದ ಜೊತೆಗೆ ಹುಳಗಳನ್ನು ತಿನ್ನುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊನ್ನೆ ಒಂದೇ ದಿನ ಈ ಹುಳಹಾರಿ ಎಲ್ಲರ ಎದುರಿಗೆ ೨೦೦ ಎರೆ ಹುಳಗಳನ್ನು ಗಬಗಬನೆ ತಿಂದು ಟೀಕಾಕಾರರ ಬಾಯಿ ಮುಚ್ಚಿಸಿ ಬಿಟ್ಟನಂತೆ.’ ಮೇಲಿನ ಪದವನ್ನು ಸಸ್ಯಾಹಾರ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಹೆಂಗಂಡಸು ನಾ ಸುಧಾ ಹೆಂಗಸು ಮತ್ತು ಗಂಡಸು. ‘ನಮ್ಮ ಉತ್ತರ ಕರ್ನಾಟಕದಲ್ಲಿ ಅಪರೂಪದ ಸಂಪ್ರದಾಯಗಳು, ಆಚರಣೆಗಳು ನಡೆಯುತ್ತವೆ. ಕೆಲವಂತೂ ಮೋಜಿನವು, ಇಂಥದ್ದೇ ಒಂದು ವಿಚಿತ್ರ ರಿವಾಜು ಇಲ್ಲಿದೆ’. ‘ಹೆಂಗಂಡಸರ’ ವಿಚಿತ್ರ ಆಚರಣೆ ಇದು.’ ಗಂಡಸರೂ ಅಲ್ಲದ ಹೆಂಗಸರೂ ಅಲ್ಲದವರನ್ನು ಹೆಂಗಡಸರು ಎಂದು ಹೊಸದಾಗಿ ಬಳಕೆ ಮಾಡಲಾಗಿದೆ.’ ಈ ಮಾದರಿ ಜನಕ್ಕೆ ಕೋಜಗಳು ಎಂದು ಜನಪ್ರಿಯವಾಗಿ ಬಳಕೆಯಲ್ಲಿದೆ.

ಹೆಣ್ಣತ್ವ ನಾ ಲಂಕೇಶ್ಪತ್ರಿಕೆ ಹೆಣ್ಣುತನ. ‘ದೀರ್ಘಕಾಲದ ಪರಿಣಾಮ ; ಹೆಣ್ಣು ಮಕ್ಕಳಾದರೆ ತಮ್ಮ ಹೆಣ್ಣತ್ವ ಹಾಳಾಯಿತು.’ ‘ಪುರುಷತ್ವ’ ಮಾದರಿಯಲ್ಲಿ ಪದ ರಚನೆ ಮಾಡಲಾಗಿದೆ. ಸಾಧ್ಯತೆ : ಗಂಡತ್ವ

ಹೆಂಡಾಂತರಕಾರಿ ನಾ ಉದಯವಾಣಿ ಹೆಂಗಸರಿಂದ ಸಂಬಂಧಿಸಬಹುದಾದ ವಿಪತ್ತು. ‘…ಆದರೆ ತರಕಾರಿ ಹೆಚ್ಚು ಕೈಯಲ್ಲಿ ಕಿವಿ ಕತ್ತರಿಸುವುದೇ? ಈ ಹೆಂಡಾಂತರಕಾರಿ ವಿಷಯ ಕೇಳಿ ಗಂಡಂದಿರೆಲ್ಲ ಹೌ ಹಾರಿಯಾರು. ಇದು ವಿಡಾಂಬನಾತ್ಮಕ ಬರಹದಲ್ಲಿ ಪ್ರಯೋಗ ಮಾಡಲಾಗಿದೆ. ಗಂಡಾಂತರಕಾರಿ ಮಾದರಿಯಲ್ಲಿ ರಚನೆ ಮಾಡಲಾಗಿದೆ.

ಹೆಣ್ಣುಡಿ ನಾ ಉದಯವಾಣಿ ಹೆಣ್ಣಿನ ಮಾತು. ‘ಮಹಿಳಾ ದಿನಾಚರಣೆಯಂದು ಈಟಿಯಲ್ಲಿ ಹೆಣ್ಣುಡಿ.’ ಹೆಣ್ಣಿನ ಅಂತರಂಗದ ಮಾತು. ಈ ಅರ್ಥದಲ್ಲಿ ಪ್ರಯೋಗ ಬಳಕೆ ಯಾದಂತಿದೆ. ಮಾದರಿ : ಬೆನ್ನುಡಿ, ಮುನ್ನುಡಿ, ತಾಯ್ನುಡಿ.

ಹೆಣ್ಣುಬಾಕ ನಾ ಲಂಕೇಶ್ಪತ್ರಿಕೆ ಹೆಣ್ಣುಗಳನ್ನು ಇಷ್ಟ ಪಡುವುದನ್ನೇ ಹವ್ಯಾಸವನ್ನಾಗಿ ಮಾಡಿಕೊಂಡಿರುವವ. ‘ದೀಪಕ್ ಸಹಕಾರಿ ಬ್ಯಾಂಕ್‌ನ ಹೆಣ್ಣುಬಾಕ.’ ಯಾವುದಾದರೂ ಕ್ರಿಯೆಯನ್ನು ಅತಿ ಮಾಡಿದಾಗ ಬಾಕ ಕ್ರಿಯಾಪದವನ್ನು ಬಳಸಿ ಪದಗಳನ್ನು ರಚಿಸಲಾಗುತ್ತಿದೆ. ಮಾದರಿ : ಕೊಳ್ಳುಬಾಕ, ದುಡ್ಡುಬಾಕ.

ಹೊಗೆಗಾರ ನಾ ವಿಜಯಕರ್ನಾಟಕ ಧೂಮಪಾನ ಮಾಡುವವನು. ‘ಬದಲಿ ಜಾಹೀರಾತುಗಳನ್ನು ಹೊಸೆಯುವುದು ಹೇಗೆ? ಹೊಗೆಗಾರರನ್ನು ಉಳಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಚರ್ಚೆ ಅವರ ಅಂಗದಲ್ಲೀಗ ನಡೆಯುತ್ತಿದೆ’. ಕನ್ನಡದಲ್ಲಿ ಒಂದು ನಾಮಪದದೊಡನೆ ಕಾರ-ಗಾರ ತದ್ದಿತ ಪ್ರತ್ಯಯದ ಬಳಕೆ ಆಗುತ್ತಿದೆ. ‘ಗಾರ’ ಪ್ರತ್ಯಯ ಒಂದು ನಾಮದೊಡನೆ ಬಂದು ಮತ್ತೊಂದು ನಾಮಪದ ಸೃಷ್ಟಿ ಆಗುತ್ತಿದೆ. ಅಂತಹ ಮಾದರಿಗೆ ಇದೊಂದು ಸೇರ್ಪಡೆ.

ಹೊಟೇಲಿಗ ನಾ ಉದಯವಾಣಿ ಹೊಟೇಲ್ ನಡೆಸುವವ. ‘ಬೆಂಗಳೂರಿನಲ್ಲಿ ಎಂ.ಇ.ಎಸ್ ಸದಸ್ಯರ ಮೇಲೆ ನಡೆಯುವ ಹಲ್ಲೆ ಮುಂಬೈನಲ್ಲಿರುವ ಸಾವಿರಾರು ಕನ್ನಡಿಗರ ಹೊಟೇಲಿಗರ ಬದುಕನ್ನು ಹಾಳು…!’. -‘ಇಗ’ ಪ್ರತ್ಯಯವನ್ನು ಸೇರಿಸಿ ಪದರಚನೆ ಮಾಡಲಾಗಿದೆ.

ಹೋಮಾಚಾರಿ ನಾ ಅಗ್ನಿ ಹೋಮವನ್ನು ಮಾಡುವವ. ‘ಅದರೆ ಅದೇ ಮಾತನ್ನು ಬರೀಸುಳ್ಳು, ಡಂಭಾಚಾರ, ಮೌಡ್ಯದ ಮೇಲೆ ನಿಂತಿರುವ ಪುರೋಹಿತ ಶಾಹಿಗಳ ಕಸುಬುಗಳ ಬಗ್ಗೆ ಹೇಳಲಿಕ್ಕೆ ಸಾಧ್ಯವೆ?. ಈ ಪೂಜಾರಿಗಳು, ವಾಸ್ತುಪಂಡಿತರು, ಹೋಮಾಚಾರಿಗಳು, ಜೋತಿಷಿಗಳು ಬದುಕಿಗೆ ಅವಶ್ಯಕವೆ?. ಹೋಮವನ್ನು ಪಾಲಿಸುವವ ಎಂಬರ್ಥದಲ್ಲಿ ಬಳಕೆ ಮಾಡಲಾಗಿದೆ. ಮಾದರಿ : ಬ್ರಹ್ಮಚಾರಿ.