“ಹಸುವನ್ನು ಬಿಟ್ಟು ಬಿಡು, ನನ್ನ ದೇಹವನ್ನೇ ತಿಂದು ತೃಪ್ತಿ ಪಟ್ಟುಕೊ. ನನ್ನ ಸ್ನೇಹಿತನಾದ ನೀನು ಈ ಪ್ರಾರ್ಥನೆಯನ್ನು ನಡೆಸಿಕೊಡು”

ಹೀಗೆ ಒಬ್ಬ ಪರಾಕ್ರಮಶಾಲಿ ಚಕ್ರವರ್ತಿ ಒಂದು ಸಿಂಹವನ್ನು ಬೇಡಿಕೊಂಡ. ಎಷ್ಟು ವಿಚಿತ್ರ!

ಪರಾಕ್ರಮಶಾಲಿಯಾದರೆ ಸಿಂಹವನ್ನು ಏಕೆ ಕೊಲ್ಲಲಿಲ್ಲ? ಅಲ್ಲದೆ, ರಾಜಾಧಿರಾಜನಾಗಿ ವೈಭವದಿಂದ ಸುಖದಿಂದ ಬದುಕುವುದನ್ನು ಬಿಟ್ಟು ಒಂದು ಹಸುವಿಗೋಸ್ಕರ ತನ್ನ ದೇಹವನ್ನೇ ಸಿಂಹಕ್ಕೆ ಒಪ್ಪಿಸುವುದೇಕೆ? ವಿಚಿತ್ರ, ಅಲ್ಲವೆ?

ಆದರೂ-ಎಷ್ಟು ಒಳ್ಳೆಯತನ, ಘನತೆ ಈ ಚಕ್ರವರ್ತಿಯದು! ತುಂಬ ಆಸಕ್ತಿಯನ್ನುಂಟುಮಾಡುವ ಕಥೆ ಇವನದು.

ಪಾವನ ಸೂರ್ಯವಂಶ

ಶ್ರೀರಾಮಚಂದ್ರನ ಹೆಸರನ್ನು ನೀವು ಕೇಳಿದ್ದೀರಲ್ಲವೆ? ಅವನು ಸೂರ್ಯವಂಶದವನು. ಆ ವಂಶದಲ್ಲಿ ಅವನ ಪೂರ್ವಿಕರಲ್ಲಿ ಪ್ರಸಿದ್ಧನಾದ ಒಬ್ಬ ರಾಜ ದಿಲೀಪ.

ಶ್ರೀರಾಮನ ತಂದೆ ದಶರಥ. ದಶರಥನ ತಂದೆ ಅಜ. ಅಜನ ತಂದೆ ರಘು ಮಹಾರಾಜ. ಇವನಿಂದಾಗಿ ಈತನ ವಂಶಕ್ಕೆ ‘ರಘುವಂಶ’ ಎಂಬ ಹೆಸರೂ ಬಂತು. ಈ ರಘುವಿನ ತಂದೆಯೇ ದಿಲೀಪ ಚಕ್ರವರ್ತಿ.

ದಿಲೀಪನಿಗಿಂತ ಹಿಂದೆ ಸೂರ್ಯವಂಶದಲ್ಲಿ ಹಲವರು ಶ್ರೇಷ್ಠ ಮಹಾರಾಜರಿದ್ದರು. ಅವರಲ್ಲಿ ಹರಿಶ್ಚಂದ್ರನು ಸತ್ಯವಂತನೆಂದು ಹೆಸರಾದವನು.

ಸೂರ್ಯವಂಶದ ರಾಜರು ಬಹು ಒಳ್ಳೆಯ ರೀತಿಯಲ್ಲಿ ಬಾಳುತ್ತಿದ್ದರು. ಕೆಟ್ಟ ಕೆಲಸ ಮಾಡದೆ ಪರಿಶುದ್ಧರಾಗಿ ಪ್ರಜೆಗಳ ಸುಖಕ್ಕಾಗಿ ರಾಜ್ಯವಾಳುತ್ತಿದ್ದರು. ಒಳ್ಳೆಯ ಕೆಲಸಕ್ಕೆ ಮಾತ್ರ ಕೈಯಿಡುತ್ತಿದ್ದರು. ಕೈಯಿಟ್ಟಿದ್ದ ಕೆಲಸವನ್ನು ಪೂರ್ಣಗೊಳಿಸದೆ ಅರ್ಧದಲ್ಲಿ ನಿಲ್ಲಿಸುತ್ತಿರಲಿಲ್ಲ. ಇವರದು ಮಹಾ ಪರಾಕ್ರಮ. ದೇವತೆಗಳಿಗೂ ಕೂಡ ಸಹಾಯಕರಾಗಿದ್ದರು. ಲೋಕದ ಹಿತಕ್ಕಾಗಿ ನಿಯಮದಂತೆ ಹಜ್ಞಗಳನ್ನು ಮಾಡುತ್ತಿದ್ದರು. ಬೇಡಿದವರಿಗೆ ದಾನ ಮಾಡುವುದರಲ್ಲಿ ಇವರದು ಎತ್ತಿದ ಕೈ. ಒಳ್ಳೆಯ ರಾಜನೀತಿ ತಿಳಿದವರು. ಸುಳ್ಳನ್ನಾಡರು, ಮೋಸ ಮಾಡರು. ದೇಶದ ಹಿತವನ್ನೇ ತಮ್ಮ ಹಿತವಾಗಿ ತಿಳಿದುಕೊಂಡು ಯಾವಾಗಲೂ ಎಚ್ಚರಿಕೆಯಿಂದ ಇರುತ್ತಿದ್ದರು. ತಾವು ಮಾತ್ರ ಸುಖವಾಗಿರಬೇಕು, ತಮಗೆ ಮಾತ್ರ ಲಾಭವಾಗಬೇಕು ಎಂಬ ಸ್ವಾರ್ಥದವರಲ್ಲ. ಹಣವನ್ನು ಬಹಳವಾಗಿ ಕೂಡಿಸಿ, ಅದನ್ನು ದಾನ ಮಾಡುತ್ತಿದ್ದರು. ಇತರರಿಗೆ ಸಹಾಯ ಮಾಡಲು ವೆಚ್ಚ ಮಾಡುತ್ತಿದ್ದರು. ಅವರ ಮಾತು ಮಿತ ಮತ್ತು ಸತ್ಯ.

ಸೂರ್ಯವಂಶದ ರಾಜರು ವಿಸ್ತಾರವಾದ ರಾಜ್ಯಕ್ಕೆ ಪ್ರಭುಗಳು, ಆದರೂ ಈ ವಂಶದ ರಾಜಕುಮಾರರ ವಿದ್ಯಾಭ್ಯಾಸ ನಡೆಯುತ್ತಿದ್ದ ರೀತಿ ಆಶ್ಚರ್ಯವಾಗುವಂತಹದು. ವಿದ್ಯೆ ಬೇಕು ಎಂದು ಆಸೆಪಡದಿದ್ದರೆ ವಿದ್ಯೆ ಬರುವುದಿಲ್ಲ; ವಿನಯ, ಶ್ರಮ ಇವಿಲ್ಲದಿದ್ದರೆ ವಿದ್ಯೆ ಹತ್ತಿರ ಸುಳಿಯುವುದಿಲ್ಲ ಎಂದು ಸೂರ್ಯವಂಶದ ರಾಜರು ತಮ್ಮ ಮಕ್ಕಳಿಗೆ ಇತರರ ಮಕ್ಕಳಂತೆಯೇ ಶಿಕ್ಷಣ ಕೊಡಿಸುತ್ತಿದ್ದರು. ರಾಜರ ಮಕ್ಕಳೂ ಗುರುಕುಲದಲ್ಲಿ ಇದ್ದು, ಗುರುಗಳ ಸೇವೆ ಮಾಡುತ್ತಿದ್ದರು. ಭಿಕ್ಷೆ ಬೇಡುತ್ತಿದ್ದರು. ಗುರುಗಳಲ್ಲಿ ವಿನಯದಿಂದ ವಿದ್ಯಾಭ್ಯಾಸ ಮಾಡುತ್ತಿದ್ದರು. ತಾನು ಚಕ್ರವರ್ತಿಯ ಮಗ, ಇತರ ವಿದ್ಯಾರ್ಥಿಗಳಿಗಿಂತ ಯಾವ ರೀತಿಯಲ್ಲಾದರೂ ಮೇಲಿನವನು ಎಂಬ ಅಹಂಕಾರವೇ ರಾಜಕುಮಾರನ ಹತ್ತಿರ ಸುಳಿಯುವ ಹಾಗಿರಲಿಲ್ಲ. ದೊಡ್ಡವರಾದ ಮೇಲೆ ಸಮಾಜಕ್ಕೆ ಉಪಕಾರ ಮಾಡುತ್ತಿದ್ದರು. ಮುದುಕರಾದಾಗ ರಾಜ್ಯವನ್ನೇ ಬಿಟ್ಟು ಮುನಿಗಳಂತೆ ಆಶ್ರಮದಲ್ಲಿದ್ದು ಕೊನೆಗೆ ಯೋಗಾಭ್ಯಾಸ ಮಾಡಿ ದೇವರ ಧ್ಯಾನದಲ್ಲೇ ಪ್ರಾಣ ಬಿಡುತ್ತಿದ್ದರು. ಇಂತಹ ಹಿರಿಮೆಯ ಸೂರ್ಯ ವಂಶದವನು ದಿಲೀಪ ಮಹಾರಾಜ.

ಪ್ರಜೆಗಳ ಭಾಗ್ಯ

ದಿಲೀಪನು ರೂಪದಲ್ಲಿ ಗುಣದಲ್ಲಿ ಎಲ್ಲರನ್ನೂ ಮೀರಿಸಿದ್ದನು. ವಿಶಾಲವಾದ ಎದೆ, ಬಲಿಷ್ಠವಾದ ಹೆಗಲು, ರಾಜನಿಗೆ ಒಪ್ಪುವ ಮೈಕಟ್ಟು ಮತ್ತು ಶಕ್ತಿ. ಅವನು ಧೀರ, ಶೂರ, ಚಿಕ್ಕಂದಿನಲ್ಲಿಯೇ ಗುರು ವಸಿಷ್ಠರಿಂದ ವಿದ್ಯೆಕಲಿತು ಬುದ್ಧಿವಂತನೆನೆಸಿದ್ದನು. ತಪ್ಪು ಮಾಡುವವರಿಗೆ ಅವನನ್ನು ನೋಡುವಾಗಲೇ ಭಯವಾಗುತ್ತಿತ್ತು. ಒಳ್ಳೆಯವರಿಗೆ ಅವನು ಸೌಮ್ಯನಾಗಿ ಕಾಣುತ್ತಿದ್ದನು. ಜ್ಞಾನಿ.  ಮಾತು ಮಿತ. ಸಾಮರ್ಥ್ಯವುಳ್ಳವನಾದರೂ ಕ್ಷಮಾಗುಣ ಉಳ್ಳವನು. ದಾನಶೂರನಾದರೂ ಇವನಿಗೆ ಹೊಗಳಿಕೆ ಬೇಕಿರಲಿಲ್ಲ. ಧರ್ಮದಲ್ಲಿ ನಿಷ್ಠೆಯುಳ್ಳವನು.

ಪ್ರಜೆಗಳ ಹಿತವೇ ಅವನ ಜೀವನದ ಉದ್ದೇಶ. ಪ್ರಜೆಗಳಿಂದ ಅವರ ಆದಾಯದ ಆರನೆಯ ಒಂದು ಅಂಶವನ್ನು ಮಾತ್ರ ತೆರಿಗೆಯಾಗಿ ಸ್ವೀಕರಿಸುತ್ತಿದ್ದನು. ಅದನ್ನು ಪ್ರಜೆಗಳ ಹಿತಕ್ಕಾಗಿಯೇ ವೆಚ್ಚಮಾಡುತ್ತಿದ್ದನು. ಅವರಿಗೆಲ್ಲ ದಿಲೀಪನು ತಂದೆಯಂತಿದ್ದನು. ದಿಲೀಪನು ಇಡೀ ರಾಜ್ಯವನ್ನು ಒಂದು ಪಟ್ಟಣದ ಹಾಗೆ ಸುಲಭವಾಗಿ ಆಳುತ್ತಿದ್ದನು.

ದಿಲೀಪನ ಪತ್ನಿ ಮಗಧ ರಾಜವಂಶದ ಸುದಕ್ಷಿಣಾ ದೇವಿ. ಆಕೆ ಎಷ್ಟು ಸುಂದರಿಯೋ ಅಷ್ಟೇ ಒಳ್ಳೆಯವಳು. ಪ್ರಜೆಗಳನ್ನು ಮಕ್ಕಳಂತೆ ಕಾಣುತ್ತಿದ್ದಳು.

ಇಂಥ ರಾಜನನ್ನೂ ರಾಣಿಯನ್ನೂ ಪಡೆದದ್ದು ತಮ್ಮ ಭಾಗ್ಯ ಎಂದು ಪ್ರಜೆಗಳು ಸಂತೋಷಪಡುತ್ತಿದ್ದರು.

ರಾಜರಾಣಿಯರ ಚಿಂತೆ

ಮಹಾರಾಜನಿಗೆ ಹೀಗೆ ಬೇಕಾದಷ್ಟು ಸುಖ ಸಂಪತ್ತುಗಳು. ಆದರೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ತನ್ನ ಜೀವನದಲ್ಲಿ ಸಾಕಷ್ಟು ಕಾಲ ಈಗಲೇ ಕಳೆದಿತ್ತು. ಆದರೆ ತನ್ನ ರಾಜವಂಶವನ್ನು ಬೆಳೆಸುವ ಮಕ್ಕಳೊಬ್ಬರೂ ಇಲ್ಲವಲ್ಲ ಎಂಬುದೇ ಅವನಿಗೆ ಚಿಂತೆ. ಪತ್ನಿಯಾದ ಸುದಕ್ಷಿಣೆಗೂ ಇಂದೊಂದೇ ಚಿಂತೆ. ತನ್ನ ವಯಸ್ಸಿನ ಗೆಳತಿಯರು ತಮ್ಮ ಮಕ್ಕಳನ್ನೆತ್ತಿ ಲಾಲನೆ ಮಾಡುವುದನ್ನು ಕಂಡಾಗ ಅವಳ ದುಃಖ ಹೆಚ್ಚಾಗುತ್ತಿತ್ತು. ಎಷ್ಟು ಕಾಲದಿಂದ ಸೂರ್ಯವಂಶದವರು ಈ ರಾಜ್ಯವನ್ನು ಆಳಿಕೊಂಡು ಬಂದಿದ್ದರು! ತನಗೊಬ್ಬ ಮಗ ಇದ್ದಿದ್ದರೆ! ಅವನಿಗೆ ರಾಜ್ಯವನ್ನು ಚೆನ್ನಾಗಿ ಆಳುವುದನ್ನು ಕಲಿಸಿ, ಮುಪ್ಪಿನಲ್ಲಿ ಸಂತೋಷದಿಂದ ರಾಜ್ಯವನ್ನು ಅವನಿಗೆ ಒಪ್ಪಿಸಿ ತಾವು ತಪಸ್ಸಿಗೆ ಹೋಗಬಹುದಾಗಿತ್ತು. ದೇಶವನ್ನು ಬೆಳಗುವ, ಧರ್ಮದಿಂದ ರಾಜ್ಯವಾಳುವ ಒಬ್ಬ ಗಂಡು ಮಗು ಜನಿಸಿದರೆ ಸಾಕು-ಅವಳ ಸಂತೋಷಕ್ಕೆ. ರಾಣಿಯ ದುಃಖವನ್ನು ಕಂಡು ದಿಲೀಪನಿಗೆ ಇನ್ನೂ ವ್ಯಥೆ.

ಚಿಂತೆಯಲ್ಲಿ ಮುಳುಗಿದ್ದ ರಾಜನಿಗೆ ಒಂದು ಆಲೋಚನೆ ಹೊಳೆಯಿತು. ಮಹಾತ್ಮರಾದ ಋಷಿಗಳ ಆಶೀರ್ವಾದ ಪಡೆಯಬೇಕು ಎಂಬ ಭಾವನೆ ಉಂಟಾಯಿತು. ತನ್ನ ವಂಶಕ್ಕೇ ಗುರುಗಳಾದ ವಸಿಷ್ಠರನ್ನು ಕಂಡು, ಅವರ ಆಜ್ಞೆಯಂತೆ ನಡೆಯಲು ನಿರ್ಧಾರ ಮಾಡಿದ. ರಾಜ್ಯಭಾರವನ್ನು ಮಂತ್ರಿಗಳಿಗೆ ವಹಿಸಿದ. ಪತ್ನಿ ಸುದಕ್ಷಿಣೆಯೊಂದಿಗೆ ಶುಭ ಮುಹೂರ್ತದಲ್ಲಿ ರಥವನ್ನೇರಿ ರಾಜಧಾನಿಯಾದ ಅಯೋಧ್ಯೆಯಿಂದ ವಸಿಷ್ಠ ಮಹರ್ಷಿಗಳ ಆಶ್ರಮದ ಕಡೆಗೆ ಪ್ರಯಾಣ ಹೊರಟ. ಅವನೊಡನೆ ಕೆಲವರು ಪರಿವಾರದವರೂ ಬಂದರು.

ಋಷಿಗಳು

ಹಿಂದಿನ ಕಾಲದಲ್ಲಿ ರಾಜರೆಂದರೆ ದುಷ್ಟರನ್ನು ಶಿಕ್ಷಿಸಿ, ಒಳ್ಳೆಯವರನ್ನು ರಕ್ಷಿಸುವವರು. ಅವರಿಗೆ ಮಾರ್ಗದರ್ಶನ ಮಾಡುವವರು ಋಷಿಗಳು. ಅವರ ವಾಸ ಕಾಡಿನ ಆಶ್ರಮದಲ್ಲಿ. ಅವರು ಉಡುತ್ತಿದ್ದುದು ಕಾವಿ ಬಣ್ಣದ ಬಟ್ಟೆ. ಅವರಿಗೆ ತಮಗಾಗಿ ಏನೂ ಬೇಡ, ಎಂಬುದರ ಗುರುತು ಈ ಬಣ್ಣ. ಸ್ನಾನ-ಜಪ-ತಪಸ್ಸು ಯಜ್ಞಗಳನ್ನು ತಪ್ಪದೆ ಆಚರಿಸುವರು. ಹಣ್ಣುಗಳು, ಗೆಡ್ಡೆ ಗೆಣಸುಗಳೇ ಅವರ ಆಹಾರ. ಮಹಾತಪಸ್ಸಿಗೆ ಕುಳಿತರೆ ಅವುಗಳ ಗೊಡವೆಯೂ ಇಲ್ಲ. ಒಣಗಿದ ಎಲೆಗಳನ್ನು ತಿನ್ನುವುದೂ ಉಂಟು. ಕೆಲವು ವೇಳೆ ನೀರು ಮಾತ್ರ ಸೇವಿಸುವರು. ಗಾಳಿಯನ್ನು ಮಾತ್ರ ಸೇವಿಸಿ ತಪಸ್ಸು ಮಾಡುವುದೂ ಉಂಟು.

ಈ ರೀತಿಯ ಕಷ್ಟದ ಜೀವನ ಯಾವುದಕ್ಕಾಗಿ?

ಋಷಿಗಳಿಗೆ ತಮಗಾಗಿ ಯಾವುದೂ ಬೇಡ. ಅವರಿಗೂ ಅವರ ಪತ್ನಿಯರಿಗೂ ಯಾವ ಸುಖವೂ ಬೇಕಿರಲಿಲ್ಲ. ಋಷಿಗಳು ಲೋಕದ ಹಿತಕ್ಕಾಗಿ ಚಿಂತನೆ ಮಾಡತಕ್ಕವರು. ಅವರ ತಪಸ್ಸು, ಧ್ಯಾನ, ಉಪದೇಶ ಎಲ್ಲವೂ ಜನರ ಉದ್ಧಾರಕ್ಕಾಗಿ. ಹಿಂದಿನ ಕಾಲದಲ್ಲಿ ಋಷಿಗಳು ಗುರುಕುಲಗಳನ್ನು ನಡೆಸುತ್ತಿದ್ದರು. ಯೋಗ್ಯ ಶಿಷ್ಯರಿಗೆ ಉಚಿತವಾಗಿ ಊಟ ವಸತಿಗಳನ್ನು ಕೊಟ್ಟು ವಿದ್ಯೆ ಕಲಿಸುತ್ತಿದ್ದರು. ದೇಶದ ಏಳಿಗೆಯನ್ನು ಮಾಡುವ ಜನಾಂಗವನ್ನು ಅವರು ನಿರ್ಮಿಸುತ್ತಿದ್ದರು. ಬಹಳ ದೊಡ್ಡ ರಾಜರೂ ಕೂಡಾ ಏನಾದರೂ ಸಮಸ್ಯೆ ತಲೆದೋರಿದರೆ, ಅದಕ್ಕೆ ಪರಿಹಾರವೇನೆಂದು ಕೇಳಲು ಋಷಿಗಳ ಬಳಿಗೆ ಬರುತ್ತಿದ್ದರು. ಅವರಿಗೆ ವಂದಿಸಿ, ಸೇವೆ ಮಾಡಿ ಅವರಿಂದ ಉಪದೇಶ ಪಡೆಯುತ್ತಿದ್ದರು. ಋಷಿಗಳ ತಪಸ್ಸಿಗೆ ತೊಂದರೆ ಮಾಡುವ ರಾಕ್ಷಸರನ್ನು ನಾಶ ಮಾಡುತ್ತಿದ್ದರು. ಇತರ ಪ್ರಜೆಗಳು ತಮ್ಮ ಆದಾಯದಲ್ಲಿ ಆರನೆಯ ಒಂದು ಭಾಗವನ್ನು ರಾಜನಿಗೆ ಕೊಡುವರು. ಯಾವ ಆಸ್ತಿಯೂ ಬೇಡದ ಋಷಿಗಳು? ಅವರೂ ಏನನ್ನೂ ಕೊಡದೆ ಇರುತ್ತಿರಲಿಲ್ಲ; ಅವರ ತಪಸ್ಸಿನ ಫಲದ ಆರನೆಯ ಒಂದು ಅಂಶ ರಾಜರಿಗೆ ಸಲ್ಲುತ್ತಿತ್ತು. ಅತಿ ಶ್ರೇಷ್ಠ ಋಷಿಗಳಲ್ಲಿ ವಸಿಷ್ಠರು ಒಬ್ಬರು. ಅವರ ಆಶ್ರಮವಿದ್ದುದು ಅಯೋಧ್ಯಾ ನಗರದಿಂದ ದೂರವಾದ ಕಾಡಿನಲ್ಲಿ.

ರಾಜರಾಣಿಯರಿಬ್ಬರಿಗೂ ತುಂಬ ಉತ್ಸಾಹ-ತಾವು ತಮ್ಮ ವಂಶದ ಗುರುಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು. ಅವರ ರಥದ ವೇಗಕ್ಕೆ ಮಾರ್ಗದ ಎರಡೂ ಬದಿಗಳ ಮರ ಗಿಡ ಬಳ್ಳಿಗಳು ಹಿಂದಿನ ದಿಕ್ಕಿಗೆ ಓಡುವಂತೆ ಕಾಣಿಸಿದವು. ಧೂಪದ ಮರಗಳ ಸುವಾಸನೆಯನ್ನು ಬೀರಿಕೊಂಡು, ಹೂಗಳ ಧೂಳಿನ ಕಣಗಳನ್ನು ಕೆದರಿಕೊಂಡು, ಗಿಡಗಳನ್ನು ಆಲಂಗಿಸಿಕೊಂಡು ತಂಗಾಳಿ ಬೀಸಿತು. ದಿಲೀಪನು ಸುದಕ್ಷಿಣಾದೇವಿಗೆ ಆಶ್ರಮದ ವಿಶೇಷಗಳನ್ನು ವಿವರಿಸುತ್ತ ಬಂದನು. ಸಾಯಂಕಾಲದ ಹೊತ್ತಿಗೆ ಅವರಿಗೆ ವಸಿಷ್ಠಾಶ್ರಮ ಕಾಣಿಸಿತು.

ಆಗ ಹಲವಾರು ಋಷಿಗಳು ಹೋಮಕ್ಕೆ ಸಮಿತ್ತನ್ನು ತರುತ್ತಿದ್ದರು. ಕೆಲವರು ದರ್ಭೆಯನ್ನೂ ಹಣ್ಣುಗಳನ್ನೂ ಹಿಡಿದಿದ್ದರು. ಋಷಿಪತ್ನಿಯರ ಮಕ್ಕಳಂತಿರುವ ಜಿಂಕೆಗಳು ತಮ್ಮ ಆಹಾರದ ಪಾಲಿಗಾಗಿ ಪರ್ಣಶಾಲೆಗಳ ಬಾಗಿಲಲ್ಲಿ ಕಾಯುತ್ತಿದ್ದವು. ಮರಗಳ ಪಾತಿಗಳಿಗೆ ಆಗ ತಾನೇ ನೀರು ಹೊಯ್ದಿದ್ದರಿಂದ ಆ ನೀರನ್ನು ಹಕ್ಕಿಗಳು ಕುಡಿಯುತ್ತಿದ್ದವು. ಕೆಲವು ಜಿಂಕೆಗಳು ಎಲೆಮನೆಯ ಅಂಗಳದಲ್ಲಿ ಮೆಲಕು ಹಾಕುತ್ತಿದ್ದವು. ಇಲ್ಲಿ ನಗರದ ಗದ್ದಲ ಗಲಾಟೆಗಳಿಲ್ಲ. ಧೂಳಿಲ್ಲ, ಓಟವಿಲ್ಲ, ವೇಗವಿಲ್ಲ. ಎಲ್ಲ ಕಡೆ ಶಾಂತಿ. ಆಶ್ರಮದಲ್ಲಿ ಕಾಲಿಡುತ್ತಲೆ ರಾಜರಾಣಿಯರ ಮನಸ್ಸು ಶಾಂತವಾಯಿತು. ಹೊಸದೊಂದು ಲೋಕಕ್ಕೆ ಕಾಲಿಟ್ಟ ಹಾಗಾಯಿತು.

ಪೂಜ್ಯರನ್ನು ವಂದಿಸದಿದ್ದರೆ ಒಳ್ಳೆಯದಾಗುವುದಿಲ್ಲ

ವಸಿಷ್ಠರ ಆಶ್ರಮ ಸಿಕ್ಕಿತು. ಆಶ್ರಮದೊಳಗೆ ಪರಿವಾರದವರು ಬಂದರೆ ಋಷಿಗಳಿಗೆಲ್ಲ ತೊಂದರೆಯಾದೀತೆಂದು ದಿಲೀಪನು ಅವರನ್ನು ಅಲ್ಲಿಯೇ ನಿಲ್ಲುವಂತೆ ಹೇಳಿದನು. ರಾಜರಾಣಿಯರು ಆಶ್ರಮದ ಒಳಕ್ಕೆ ಹೋದರು. ಅಲ್ಲಿದ್ದ ಮುನಿಗಳು ಇವರಿಬ್ಬರನ್ನೂ ಸತ್ಕರಿಸಿ, ಕುಳ್ಳಿರಲು ಹೇಳಿದರು. ವಸಿಷ್ಠರನ್ನು ರಾಜರಾಣಿಯರು ಕಂಡರು. ಋಷಿಪತ್ನಿಯಾದ ಆರುಂಧತಿಗೂ ವಸಿಷ್ಠರಿಗೂ ಇವರಿಬ್ಬರು ಪಾದ ಮುಟ್ಟಿ ನಮಸ್ಕರಿಸಿ, ಕೈ ಜೋಡಿಸಿ ನಿಂತರು. ಋಷಿದಂಪತಿಗಳು ರಾಜದಂಪತಿಗಳಿಗೆ ಆಶೀರ್ವಾದ ಮಾಡಿದರು.

“ಎಲೈ ದಿಲೀಪನೆ, ನೀವಿಬ್ಬರೂ ದೂರದಿಂದ ಪ್ರಯಾಣ ಮಾಡಿ ಬಂದಿದ್ದೀರಿ. ಬಳಲಿದ್ದೀರಿ. ವಿಶ್ರಾಂತಿ ತೆಗೆದುಕೊಳ್ಳಿ” ಎಂದು ವಸಿಷ್ಠರು ಹೇಳಿದರು. ಅವರಿಗೆ ಹಾಲು ಹಣ್ಣುಗಳನ್ನು ಕೊಟ್ಟು ಉಪಚಾರ ಮಾಡಿದರು.ಆಮೇಲೆ ಮಾತನ್ನು ಮುಂದುವರಿಸಿದರು-

“ನಿನ್ನ ರಾಜ್ಯದಲ್ಲಿ ಎಲ್ಲರೂ ಕುಶಲವೆ? ಮಳೆ ಬೆಳೆ ಸಕಾಲದಲ್ಲಿ ಆಗುತ್ತಿವೆಯೆ? ಧನ ಧಾನ್ಯ ಬೇಕಾದಷ್ಟು ಇದೆಯೆ? ಹಸುಗಳು ಚೆನ್ನಾಗಿವೆಯೆ?”

ರಾಜನು ಉತ್ತರ ಕೊಟ್ಟನು – “ಗುರುವರ್ಯರೇ, ನನ್ನ ರಾಜ್ಯಕ್ಕೆ ಬರುವ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುವ ನೀವು ಇರುವಾಗ ನನಗೇನು ಭಯ? ದುರ್ಭಿಕ್ಷವಾಗಲಿ, ಬರಗಾಲವಾಗಲಿ ನನ್ನ ರಾಜ್ಯಕ್ಕೆ ಬಂದಿಲ್ಲ. ಕಳ್ಳತನ, ಸುಲಿಗೆ, ಕೊಲೆ ಮುಂತಾದ ತೊಂದರೆಗಳೂ ಇಲ್ಲ. ನಿಮ್ಮ ತಪಸ್ಸಿನ ಶಕ್ತಿಯಿಂದ ಮತ್ತು ಆಶೀರ್ವಾದದಿಂದ ನನ್ನ ಬಾಣಗಳಿಗೆ ಶತ್ರುಗಳನ್ನು ಕೊಲ್ಲುವ ಶಕ್ತಿಯಿದೆ, ಆದುದರಿಂದ ಶತ್ರುಗಳ ಭಯವಿಲ್ಲ. ಮಳೆ ಬೆಳೆ ಸಕಾಲದಲ್ಲಿ ಸರಿಯಾಗಿ ಆಗುತ್ತಿವೆ. ಜನರಿಗೆಲ್ಲ ಯಾವ ವಿಪತ್ತೂ ಇಲ್ಲದಿರಲು ನಿಮ್ಮ ಬ್ರಹ್ಮತೇಜವೇ ಕಾರಣ.”

ತಾನು ಬಂದ ಕಾರಣವನ್ನು ವಸಿಷ್ಠರು ತಮ್ಮ ಜ್ಞಾನಶಕ್ತಿಯಿಂದ ತಿಳಿದಿರಬಹುದಾದರೂ ಅವರಿಗೆ ಅದನ್ನು ತಾನೇ ತಿಳಿಸುವುದು ಯೋಗ್ಯ ಎಂದು ದಿಲೀಪನು ಭಾವಿಸಿದನು. “ಗುರುಗಳೇ, ನನ್ನ ರಾಜ್ಯದಲ್ಲಿ ಹೀಗೆ ಎಲ್ಲ ಸುಖ ಸಂಪದ ಇದ್ದರೂ ನನಗೂ ನನ್ನ ಮಡದಿಗೂ ಸಂತೋಷವಿಲ್ಲ. ನನ್ನ ನಂತರ ಈ ರಾಜ್ಯವನ್ನು ಆಳಿ, ಪ್ರಜೆಗಳನ್ನು ಸಂರಕ್ಷಿಸಲು ನನಗೆ ಮಗನಿಲ್ಲ. ನಮ್ಮ ವಂಶದಲ್ಲಿ ಹಿಂದಿನವರು ಗುರುಗಳಾದ ನಿಮ್ಮಿಂದ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಂಡಿದ್ದಾರೆ. ನನಗೆ ನಿಮ್ಮ ಅನುಗ್ರಹ ಬೇಕು” ಎಂದು  ಪ್ರಾರ್ಥಿಸಿದನು.

ಜ್ಞಾನಿಗಳಾದ ವಸಿಷ್ಠರು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದರು. ತನ್ನ ಶಿಷ್ಯನಿಗೆ ಮಕ್ಕಳಾಗದಿರಲು ಕಾರಣವೇನೆಂದು ಯೋಚಿಸಿದರು. ಅವರ ಜ್ಞಾನದೃಷ್ಠಿಗೆ ಕಾರಣ ಹೊಳೆಯಿತು.ಅವರು ಹೀಗೆಂದರು-

ವಸಿಷ್ಠರಿಗೆ ರಾಜರಾಣಿಯರು ನಮಸ್ಕರಿಸಿದರು.

“ಎಲೈ ರಾಜೇಂದ್ರನೇ, ನಿನಗೆ ಮಗನು ಹುಟ್ಟದೆ ಇರಲು ಒಂದು ಕಾರಣವಿದೆ. ಹಿಂದೊಮ್ಮೆ ನೀನು ದೇವೇಂದ್ರನ ಸಹಾಯಕ್ಕಾಗಿ ಸ್ವರ್ಗಲೋಕಕ್ಕೆ ಹೋಗಿದ್ದೆ. ಹಿಂತಿರುಗಿ ಬರುತ್ತಿದ್ದಾಗ ದೇವಲೋಕದ ಕಲ್ಪವೃಕ್ಷದ  ನೆರಳಿನಲ್ಲಿ ಕಾಮಧೇನು ಇತ್ತು. ಅದಕ್ಕೆ ನೀನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಬರಬೇಕಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಕಾಮಧೇನುವನ್ನು ನೀನು ತಿರಸ್ಕರಿಸಿದಂತೆ ಆಗಿದೆ. ಆ ಹಸುವಿಗೆ ಕೋಪ ಬಂದಿದೆ. ತನ್ನನ್ನು ತಿರಸ್ಕರಿಸಿ ಹೋದ ತಪ್ಪಿನಿಂದಾಗಿ ನಿನಗೆ ಮಕ್ಕಳಾಗದೆ ಹೋಗಲಿ, ತನ್ನ ಮಗಳಾದ ನಂದಿನಿಯನ್ನು ಆರಾಧಿಸಿ ಅವಳಿಂದ ಅನುಗ್ರಹ ಪಡೆಯುವವರೆಗೂ ಮಕ್ಕಳು ಹುಟ್ಟದಿರಲಿ ಎಂದು ನಿನಗೆ ಕಾಮಧೇನು ಶಾಪ ಕೊಟ್ಟಿದೆ. ಆ ಶಾಪದ ಮಾತು ನಿನಗೆ ಕೇಳಿಸಿಲ್ಲ. ಪೂಜ್ಯರಾದವರನ್ನು ವಂದಿಸದೆ, ಆದರಿಸದೆ ಇರುವುದರಿಂದ ಯಾರಿಗೂ ಒಳಿತು ಆಗುವುದಿಲ್ಲ.”

ದಿಲೀಪನು ತನ್ನಿಂದಾದ ತಪ್ಪಿಗಾಗಿ ಬಹಳ ವ್ಯಥೆಪಟ್ಟನು. “ಈ ಅಪರಾಧಕ್ಕೆ ಇದುವರೆಗೂ ಚಿಂತೆಯ ರೂಪದಲ್ಲಿ ಶಿಕ್ಷೆಯನ್ನು ನಾವಿಬ್ಬರೂ ಅನುಭವಿಸಿದ್ದೇವೆ ಈಗ ಆ ತಪ್ಪನ್ನು ತಿದ್ದಿಕೊಳ್ಳಬೇಕೆಂದು ನನಗೆ ತವಕವಾಗತ್ತಿದೆ. ತಾವೇ ದಾರಿ ತೋರಿಸಬೇಕು. ನಂದಿನೀ ಗೋಮಾತೆ ಎಲ್ಲಿದ್ದಾಳೆ? ಅವಳ ಅನುಗ್ರಹವನ್ನು ಪಡೆಯುವ ಉಪಾಯವೇನು?” ಎಂದು ಕೇಳಿದನು. ಅದಕ್ಕೆ ವಸಿಷ್ಠ ಹೀಗೆ ಹೇಳಿದರು-

“ಕಾಮಧೇನುವಿನ ಮಗಳಾದ ನಂದಿನೀ ಈಗ ಪಾತಾಳ ಲೋಕದಲ್ಲಿ ಇದ್ದಾಳೆ. ವರುಣನು ಅಲ್ಲಿ ಒಂದು ಯಾಗ ನಡೆಸುತ್ತಿರುವನು. ಆ ಯಾಗಕ್ಕೆ ಬೇಕಾಗುವ ಹಾಲು, ಮೊಸರು, ತುಪ್ಪ ಮುಂತಾದವುಗಳಿಗಾಗಿ ಅವಳನ್ನು ಕೊಂಡುಹೋಗಿದ್ದಾನೆ. ನಮ್ಮ ಆಶ್ರಮದ ಧೇನು ಆಕೆ. ಯಾಗ ಮುಗಿಸಿ ಅವಳು ಈಗ ಇಲ್ಲಿಗೆ ಹಿಂದಿರುಗಬಹುದು. ಅದುವರೆಗೆ ಕಾದಿರು. ಅವಳನ್ನು ನಿತ್ಯವೂ ನೀನು ಮತ್ತು ನಿನ್ನ ಪತ್ನಿ ಇಬ್ಬರೂ ಸೇವೆ ಮಾಡಿ. ಸುಪುತ್ರನು ಜನಿಸುವನು. ವ್ಯಥೆ ಪಡಬೇಡ.”

ಇಗೋ ನಂದಿನೀ, ಗೋವಿನ ಸೇವೆ ಮಾಡು

ಅಷ್ಟರಲ್ಲಿ ನಂದಿನೀ ಎಂಬ ಆ ಹಸು ದೂರದಿಂದ ಬರುವುದು ಕಾಣಿಸಿತು. ಎಳೆಯ ಚಿಗುರಿನಂತೆ ನಯವಾದ ಕಾವಿ ಬಣ್ಣದ ಮೈಯಲ್ಲಿ ಬಿಳಿಯ ರೋಮಗಳಿಂದ ಅದು ಕೂಡಿತ್ತು. ವಸಿಷ್ಠರು ಆ ನಂದಿನಿ ಧೇನುವಿನ ಸೇವೆ ಮಾಡುವ ವ್ರತದ ಕ್ರಮವನ್ನು ಹೀಗೆ ಉಪದೇಶಿಸಿದರು- “ಎಲೈ ದಿಲೀಪನೇ ನಂದಿನಿಯ ಹೆಸರನ್ನು ಹೇಳಿದ ಕೂಡಲೇ ಅದು ಬಳಿಗೆ ಬಂದಿದೆ. ಇದರಿಂದ ನಿನ್ನ ಇಷ್ಟಾರ್ಥ ಬೇಗನೆ ಫಲಿಸುವುದೆಂದು ತಿಳಿದುಕೋ. ಈ ಆಶ್ರಮದಲ್ಲಿ ನೀನು ಪತ್ನೀಸಹಿತ ಮುನಿಗಳಂತೆ ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಈ ಗೋವಿನ ಸೇವೆ ಮಾಡು. ಅದು ನಿಂತಲ್ಲಿ ನಿಂತು, ಹೋದಲ್ಲಿ ಹೋಗಿ ಮಲಗಿದ ಕಡೆ ಮಲಗಿ, ನೀರು ಕುಡಿದಲ್ಲಿ ನೀನು ನೀರು ಕುಡಿ. ನಿನ್ನ ಪತ್ನಿ ಕೂಡ ಗೋವಿನ ಮೇಲೆ ಭಕ್ತಿಯುಳ್ಳವಳಾಗಿ ಅದನ್ನು ಬೆಳಗ್ಗೆ ಗಂಧ ಪುಷ್ಪಗಳಿಂದ ಅರ್ಚಿಸಿ, ಮೇಯಲು ಬಿಡಲಿ. ಸಂಜೆ ಅದು ಬಂದೊಡನೆ ಅರ್ಚಿಸಿ ಆದರಿಸಲಿ. ನಿನಗೆ ನಂದಿನಿಯ ಅನುಗ್ರಹವಾಗುವತನಕ ಅದರ ಸೇವೆ ಮಾಡು. ನಿನ್ನ ಕಾರ್ಯ ನಿರ್ವಿಘ್ನವಾಗಿ ನಡೆಯಲಿ. ನಿನ್ನಂತಹ ಸದ್ಗುಣಿಯೂ ಪ್ರಜೆಗಳಿಗೆ ಹಿತ ಮಾಡುವವನೂ ಆದ ಮಗನು ಜನಿಸಲ.” ರಾಜನು ಗುರುಗಳ ಅಪ್ಪಣೆಗೆ ತಲೆಬಾಗಿದನು.

ಆಗ ರಾತ್ರಿಯಾದುದರಿಂದ ವಸಿಷ್ಠರು ಮಹಾರಾಜನನ್ನು ನಿದ್ರೆ ಮಾಡಲು ಹೇಳಿದರು. ಅಂದಿನಿಂದಲೇ ದಿಲೀಪನು ತನ್ನ ಪತ್ನಿಯೊಡನೆ ಗೋವಿನಸೇವೆ ಮಾಡಲಿದ್ದುದರಿಂದ ಇಬ್ಬರೂ ಗುರುಗಳ ಸೂಚನೆಯಂತೆ ಕಂದಮೂಲಗಳನ್ನು ತಿಂದರು. ಋಷಿಗಳ ಎಲೆಮನೆಯಲ್ಲಿ ದರ್ಭೆಯ ಹಾಸಿನಲ್ಲಿ ಮಲಗಿದರು. ಉಷಃಕಾಲದಲ್ಲಿ ಋಷಿ ಶಿಷ್ಯರು ವೇದ ಪಠಿಸುವುದನ್ನು ಕೇಳಿ ಎಚ್ಚರ ಗೊಂಡರು.

ನಂದಿನಿಯ ರಕ್ಷಕ
ಬೆಳಗಾಗುವುದೇ ತಡ, ಸುದಕ್ಷಿಣಾದೇವಿ ಸುವಾಸನೆಯ ಹೊಸ ಹೂಗಳನ್ನು ತಂದು ನಂದಿನಿಯನ್ನು ಪೂಜಿಸಿದಳು. ರಾಜನು ಕರುವಿಗೆ ಹಾಲು ಕುಡಿಸಿ, ಅದನ್ನು ಕಟ್ಟಿದನು. ನಂದಿನಿಯನ್ನು ಮೇಯಲು ಬಿಟ್ಟನು. ಧೇನುವಿನ ಹಿಂದೆ ಮಹಾರಾಣಿಯೂ ಹೊರಟಳು. ರಾಜನು ಅವಳನ್ನು ಆಶ್ರಮದಲ್ಲಿ ನಿಲ್ಲುವಂತೆ ಹೇಳಿದನು. ಆಮೇಲೆ ನಂದಿನಿಯನ್ನು ಅಪಾಯದಿಂದ ರಕ್ಷಿಸಲು ಕಾವಲಿಗೆ-ಕೀರ್ತಿವಂತ ಮಹಾರಾಜ ದಿಲೀಪನೇ! ರಾಜ ಹೊರಟರೆ ಮೈಗಾವಲಿಗೆ ಹೋಗುವುದು ಅವನ ಸೇವಕರ ಕರ್ತವ್ಯವಲ್ಲವೆ! ಅವರೂ ಹೊರಟರು. ದಿಲೀಪನು “ನೀವು ಯಾರೂ ನನ್ನ ರಕ್ಷಣೆಗಾಗಿ ಬರಬೇಡಿ. ಈ ಹಸುವಿನ ರಕ್ಷಣೆಗೆ ನಾನೇ ಸಾಕು” ಎಂದು ಹೇಳಿ, ಅವರನ್ನು ಹಿಂದಕ್ಕೆ ಕಳುಹಿಸಿದನು.

ತಾನು ಮಹಾರಾಜನಾದರೂ ಹಸುವನ್ನು ಮೇಯಿಸುವುದು ದಿಲೀಪನಿಗೆ ಕೀಳು ಎನಿಸಲಿಲ್ಲ. ಯಾವ ಗೋಪಾಲಕನೂ ಮಾಡುವ ಗೋಸೇವೆಗಿಂತಲೂ ಹೆಚ್ಚಾಗಿ ದಿಲೀಪನು ನಂದಿನಿಯ ಸೇವೆ ಮಾಡಿದನು. ರುಚಿಕರವಾದ ಎಳೆಹುಲ್ಲನ್ನು ಅದರ ಬಾಯಿಗೆ ಕೊಟ್ಟನು. ಅದರ ಮೈ ಮೇಲೆ ಕುಳಿತು ಪೀಡಿಸುವ ನೂಣಗಳನ್ನೂ, ಮಿಡಿತೆ ಮುಂತಾದ ಕೀಟಗಳನ್ನೂ ಓಡಿಸಿದನು. ಹಸು ತನ್ನ ಮನಸ್ಸಿಗೆ ಬಂದ ಕಡೆ ಹೊರಟಿತು. ಅದರ ಹಿಂದೆಯೇ ದಿಲೀಪ. ಅದು ನಿಂತಲ್ಲಿ ನಿಂತನು. ಹೋದ ಕಡೆಗೆ ಹೋದನು. ಮಲಗಿದರೆ ಅಲ್ಲೇ ಕುಳಿತನು. ನೀರು ಕುಡಿದರೆ ಅಲ್ಲೇ ತಾನೂ ನೀರನ್ನು ಕುಡಿದನು. ಹೀಗೆ ಅದರ ನೆರಳಿನಂತೆ ಅನುಸರಿಸಿದನು.

ಒಂದು ಭಯಂಕರವಾದ ಸಿಂಹ ನಂದಿನಿಯ ಮೇಲೆ ಹಾರಿ ಕುಳಿತಿದೆ!

ದಿಲೀಪನಿಗೆ ಈಗ ರಾಜಚಿಹ್ನೆ ಇರಲಿಲ್ಲ. ಕಿರೀಟ, ಬಿಳಿಯ ಕೊಡೆ, ಚಾಮರ, ಭೂಷಣಗಳು ಇರಲಿಲ್ಲ. ಆದರೂ ಅವನ ಕಾಂತಿ ಏನೂ ಕಡಿಮೆಯದಲ್ಲ. ಧೇನುವಿಗೆ ಎಲ್ಲಿ ದುಷ್ಟ ಮೃಗಗಳಿಂದ ವಿಪತ್ತು ಬರುವುದೋ ಎಂದು ನೋಡುತ್ತ ಅವಕ್ಕೆ ಬಾಣ ಹೊಡೆಯಲು ಸಿದ್ಧವಾಗಿಯೇ ಧೇನುವಿನ ಜೊತೆಯಲ್ಲಿದನು.

ಸಂಜೆಯಾಯಿತು. ಬೆಳಕು ಕ್ರಮೇಣ ಹಿಂದು ಹಿಂದಕ್ಕೆ ಸರಿಯುತ್ತಿತ್ತು. ನಂದಿನಿ ತಾನು ಸಂಚರಿಸಿದ ಸ್ಥಳಗಳನ್ನು ಪವತ್ರಗೊಳಿಸಿ, ತನ್ನ ಕಂದನನ್ನು ನೆನೆದುಕೊಂಡು ಆಶ್ರಮದ ಕಡೆಗೆ ಹೊರಟಿತು. ರಾಜನು ಅದರ ಜೊತೆಯಲ್ಲೇ ಇದ್ದನು. ಆಗ ಹಳ್ಳಗಳಿಂದ ಎದ್ದುಬರುವ ಕಾಡುಹಂದಿಗಳು, ತಮ್ಮ ವಾಸದ ಮರಗಳ ಕಡೆಗೆ ಬರುವ ನವಿಲುಗಳು, ಹುಲ್ಲು ನೆಲದಲ್ಲಿರುವ ಕೃಷ್ಣಮೃಗಗಳು ಕಾಣಿಸಿದವು. ಇವುಗಳಿಂದ ಮತ್ತು ಕತ್ತಲಾದುದರಿಂದ ರಾಜನಿಗೆ ಕಾಡೆಲ್ಲವೂ ಕಪ್ಪಾಗಿ ಕಾಣಿಸಿತು. ಮೈಯೆಲ್ಲ ಕಣ್ಣಾಗಿ, ಪವಿತ್ರ ಗೋಮಾತೆಯ ಹಿಂದೆಯೇ ಹೆಜ್ಜೆ ಹಾಕುತ್ತ ದಿಲೀಪನು ನಡೆದನು.

ನಂದಿನಿ ಆಶ್ರಮಕ್ಕೆ ಹಿಂದಿರುಗಿತು. ಸುದಕ್ಷಿಣೆಗೆ ಅದನ್ನು ಕಂಡು ಹಿಗ್ಗು. ಆಕೆ ಅಕ್ಷತೆಯ ಪಾತ್ರೆಯನ್ನು ಹಿಡಿದುಕೊಂಡು ಬಂದಳು. ಗೋವಿನ ಪ್ರದಕ್ಷಿಣೆ ಮಾಡಿದಳು. ನಮಸ್ಕಾರ ಮಾಡಿ, ಅದರ ಎರಡೂ ಕೊಂಬುಗಳ ನಡುವಿಗೆ ಕುಂಕುಮ ಅಕ್ಷತೆಗಳನ್ನಿಟ್ಟು ಪೂಜಿಸಿದಳು. ಕರುವನ್ನು ಕಾಣಲು ಉತ್ಸಾಹದಿಂದ ಬಂದ ನಂದಿನಿಯು ಸುದಕ್ಷಿಣಾದೇವಿಯ ಪೂಜೆಯನ್ನು ಸ್ವೀಕರಿಸಿತು. ಅದರಿಂದ ರಾಜನಿಗೂ ರಾಣಿಗೂ ಬಹು ಸಂತೋಷ. ಅರುಂಧತಿಯೊಡನಿದ್ದ ವಸಿಷ್ಠರನ್ನು ರಾಜನು ವಂದಿಸಿದನು. ತನ್ನ ಸಂಧ್ಯಾಕರ್ಮವನ್ನು ನೆರವೇರಿಸಿದನು. ಕರುವು ಹಾಲುಂಡು ಹಾಲನ್ನು ಕರೆದಾದ ಮೇಲೆ ಧೇನುವಿನ ಸೇವೆಗೆ ಸಿದ್ಧನಾದನು. ಅದಕ್ಕೆ ಮೇವನ್ನು ಹಾಕಿ, ನಂದಾ ದೀಪವನ್ನು ಇಟ್ಟನು. ನಂದಿನಿ ಮಲಗಿತು. ರಾಜರಾಣಿಯರು ಅಲ್ಲಿಯೇ ಕುಳಿತರು. ಅದು ನಿದ್ರಿಸಲು ಇವರಿಬ್ಬರೂ ನಿದ್ರೆಹೋದರು. ಬೆಳಗ್ಗೆ ಅದು ಎದ್ದೊಡನೆ ಇವರೂ ಎದ್ದರು.

ಹೀಗೆ ಇಪ್ಪತ್ತೊಂದು ದಿನ ನಡೆಯಿತು. ರಾಜನು ಹಸುವನ್ನು ನೆರಳಿನಂತೆ ಹಿಂಬಾಲಿಸಿದನು. ಸುದಕ್ಷಿಣೆಯೂ ದಿಲೀಪನೂ ಹಗಲೆನ್ನದೆ ಇರುಳೆನ್ನದೆ ನಂದಿನಿಯ ಸೇವೆಯ ವ್ರತವನ್ನು ನಡೆಸಿದರು.

ಸಿಂಹ!

ಇಪ್ಪತ್ತೆರಡನೆಯ ದಿನ. ಹಸು ಬೇರೊಂದು ದಾರಿಯಲ್ಲಿ ಬೇರೆ ಕಡೆಗೆ ತೆರಳಿತು.

ದಿಲೀಪನು ಆ ದಿನ ಇನ್ನೂ ಜಾಗರೂಕತೆ ವಹಿಸಿದನು. ತಾನು ಹಸುವಿನ ರಕ್ಷಣೆಗೆ ಇರುವಾಗ ಯಾವ ಪ್ರಾಣಿ ಹತ್ತಿರ ಬಂದೀತು? ಅವನಿಗೆ ಯಾವ ದುಷ್ಟಪ್ರಾಣಿಯೂ ಕಾಣಿಸಲಿಲ್ಲೊ. ಸುತ್ತ ನಿಸರ್ಗದ ಚೆಲುವೇ ಚೆಲುವು. ಕಾಲ ಕೆಳಗೆ ಚೆಲುವಾದ ಹಸಿರು, ಕಣ್ಣನ್ನು ಹೊರಳಿಸುವ ಕಡೆ ಹಿತವಾದ ಹಸಿರು, ಮಧ್ಯೆ ಮಧ್ಯೆ ಹಳದಿ, ನೀಲ, ತಿಳಿಗೆಂಪು, ಕುಂಕುಮ ಕೆಂಪು – ಹಲವು ಬಣ್ಣಗಳ, ಹಲವು ವಿನ್ಯಾಸಗಳ ಹೂವುಗಳ ಸುಗಂಧವನ್ನೂ ಮೇಲಿನಿಂದ ಧಾರೆಯಾಗಿ ಬೀಳುತ್ತಿದ್ದ ನೀರಿನ ತುಂತುರನ್ನೂ ಅತ್ತಿತ್ತ ಕೊಂಡೊಯ್ಯುತ್ತಿತ್ತು. ಆ ಗುಡ್ಡ ಗಾಡಿನ ಚೆಲುವು ಅವನ ಮನಸ್ಸನ್ನು ಸೆಳೆಯಿತು. ಅವನು ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ನೋಡುವುದರಲ್ಲೇ ಮುಳುಗಿದನು.

ಬೆಚ್ಚಿಬಿದ್ದು ಎಚ್ಚೆತ್ತ ರಾಜ. ನಂದಿನಿ ‘ಅಂಬಾ, ಅಂಬಾ’ ಎಂದು ಗೋಳಿಡುತ್ತಿದೆ! ಅದರ ಅಳುವಿನ ಧ್ವನಿ ಗುಹೆಗಳಲ್ಲಿ ಮಾರ್ದನಿ ಕೊಡುತ್ತಿದೆ. ತಿರುಗಿ ನೋಡುತ್ತಾನೆ- ಒಂದು ಭಯಂಕರವಾದ ಸಿಂಹ ಈ ನಂದಿನಿಯ ಮೇಲೆ ಹಾರಿ ಕುಳಿತಿದೆ!

ಅರ್ಧ ಕ್ಷಣ ರಾಜ ಬೆಕ್ಕಸ ಬೆರಗಾದ. “ಅಯ್ಯೋ, ಮೈಮರೆತನೆ!” ಎಂದು ಬೆರಳು ಕಚ್ಚಿದ. ಆದರೂ ದಿಲೀಪನೂ ಮಹಾ ಶೂರ. ಬೇಟೆಯಲ್ಲಿ ಅನೇಕ ಸಿಂಹಗಳನ್ನು ಕೊಂದಿದ್ದವನು.  ಈಗ ಸಾಧುವಾದ ಗೋಮಾತೆಯನ್ನು ಕೊಲ್ಲುವ ಸಿಂಹವನ್ನು ಕಂಡು ಅವನಿಗೆ ಬಹಳ ಕೋಪ ಬಂತು. ಎಡಗೈಯಲ್ಲಿ ಬಿಲ್ಲನ್ನು ಹಿಡಿದನು. ಬಾಣಕ್ಕಾಗಿ ಬತ್ತಳಿಕೆಗೆ ತನ್ನ ಬಲಗೈಯನ್ನು ಎತ್ತಿದನು.

ಆದರೆ ಆಶ್ಚರ್ಯ! ಬತ್ತಳಿಕೆಗೆ ಇಟ್ಟ ಅವನ ಕೈಯನ್ನು ಅಲುಗಿಸುವುದಕ್ಕೇ ಸಾಧ್ಯವಾಗಲಿಲ್ಲ. ರಾಜನು ಚಿತ್ರದ ರಾಜನಂತಾದನು. ಅವನಿಗೆ ಮುಂದೆ ಹೆಜ್ಜೆ ಇಡಲಿಕ್ಕೂ ಆಗಲಿಲ್ಲ. ಎಷ್ಟು ಯುದ್ಧಗಳ ವೀರ! ಎಷ್ಟು ಜನ ಶತ್ರುಗಳನ್ನು ಸೋಲಿಸಿದವನು! ಆದರೆ ಈಗ ಕೈಯನ್ನೆತ್ತಲೂ ಬಾರದು. ದಿಲೀಪನು ಒಳಗೊಳಗೆ ಕೋಪದಿಂದ ಕಿಡಿಕಿಡಿಯಾದನು. ಆದರೆ ಮಾಡುವುದೇನು?

ಆಕಳನ್ನು ಬಿಟ್ಟು ಹಿಂದಕ್ಕೆ ಹೋಗು!’

ಮೊದಲೇ ಆಶ್ಚರ್ಯಪಟ್ಟ ರಾಜನಿಗೆ ಮತ್ತೂ ಆಶ್ಚರ್ಯವಾಗುವಂತೆ ಆ ಸಿಂಹ ಮನುಷ್ಯರಂತೆ ಅವನೊಡನೆ ಮಾತಾಡಿತು.

“ಎಲೈ ರಾಜನೇ, ನಿನ್ನ ಶ್ರಮವನ್ನು ಸಾಕುಮಾಡು. ನಿನ್ನ ಸಾಹಸ ಯಾವುದೂ ನನ್ನ ಮುಂದೆ ನಡೆಯದು. ನಿನ್ನ ಒಂದು ಬಾಣವನ್ನೂ ಬಿಡಲಿಕ್ಕೂ ನಿನಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಪ್ರಯೋಗಿಸಿದ್ದರೂ ಅದು ವ್ಯರ್ಥವಾಗುತ್ತಿತ್ತು. ಮರಗಳನ್ನು ಮುರಿಯುವ ಗಾಳಿಗೆ ಬೆಟ್ಟವನ್ನು ಉರುಳಿಸಲು ಸಾಧ್ಯವೇ?”

“ಅಯ್ಯಾ ಮೃಗರಾಜ, ಮನುಷ್ಯರ ಹಾಗೆ ಮಾತಾಡಬಲ್ಲ ನೀನು ಯಾರು?” ಎಂದು ದಿಲೀಪನು ಕೇಳಿದನು. ಸಿಂಹ ತನ್ನ ಮಾತನ್ನು ಮುಂದುವರಿಸಿತು-

“ನಾನು ಶಿವನ ಸೇವಕ. ಕುಂಭೋದರನೆಂದು ನನ್ನ ಹೆಸರು. ಇದೋ ಮುಂದುಗಡೆ ಒಂದು ದೇವದಾರು ಮರ ಇದೆಯಲ್ಲ. ಅದನ್ನು ಪಾರ್ವತೀದೇವಿ ನೀರೆರೆದು ಬೆಳೆಸಿದ್ದಾಳೆ. ತನ್ನ ಮಗನಾದ ಷಣ್ಮುಖನಷ್ಟೇ ಪ್ರೀತಿ ಇಟ್ಟಿದ್ದಾಳೆ. ಆದುದರಿಂದ ಶಿವನಿಗೂ ಆ ಮರದ ಮೇಲೆ ಮಗನಷ್ಟೇ ಪ್ರೀತಿ. ಆದರೆ ಒಂದು ದಿನ ವಿಶೇಷ ಘಟನೆಯೊಂದು ನಡೆಯಿತು. ಒಂದು ಕಾಡಾನೆ ತನ್ನ ಕೆನ್ನೆಯನ್ನು ತುರಿಸಲು ಮರಕ್ಕೆ ಚೆನ್ನಾಗಿ ಉಜ್ಜಿತು. ಆಗ ಆ ಮರದ ತೊಗಟೆ ಎದ್ದು ಹೋಯಿತು. ಮರದ ರಸ ಸೋರ ತೊಡಗಿತು. ಇದನ್ನು ನೋಡಿದ ಪಾರ್ವತಿಗೆ ಬಹಳ ವ್ಯಥೆಯಾಯಿತು. ರಾಕ್ಷಸರ ಪೆಟ್ಟಿನಿಂದ ತನ್ನ ಮಗ ಷಣ್ಮುಖನೇ ಗಾಯಗೊಂಡರೆ ಆಗುವ ವ್ಯಸನದಷ್ಟೇ ಅವಳಿಗೆ ವ್ಯಸನವಾಯಿತು. ಅಂದಿನಿಂದಲೇ ಶಿವನು ನನ್ನನ್ನು ಸಿಂಹವಾಗಿರುವಂತೆ ಮಾಡಿ, ಕಾಡಾನೆಗಳನ್ನು ಹೆದರಿಸಲು ನೇಮಿಸಿದ್ದಾನೆ. ಈ ಪ್ರದೇಶಕ್ಕೆ ಬರುವ ಪ್ರಾಣಿಗಳನ್ನು ಕೊಂದು ತಿನ್ನುವಂತೆಯೂ ಆಜ್ಞೆ ಮಾಡಿದ್ದಾನೆ. ನನಗೀಗ ಊಟದ ಸಮಯ. ಹೊಟ್ಟೆ ಹಸಿದಿದೆ. ಈ ವೇಳೆಗೆ ತಾನಾಗಿಯೇ ಈ ಹಸು ಇಲ್ಲಿಗೆ ಬಂದಿದೆ. ಇದರ ರಕ್ತ ಮಾಂಸಗಳಿಂದ ಹೊಟ್ಟೆ ತುಂಬಿಸಿಕೊಳ್ಳುವೆನು. ನೀನು ಸಂಕೋಚಪಡದೆ ಈ ಆಕಳನ್ನು ಬಿಟ್ಟು ನಿನ್ನ ಗುರುಗಳ ಬಳಿಗೆ ಹೋಗು. ಹಸುವನ್ನು ರಕ್ಷಿಸಲಿಲ್ಲ ಅಂತ ಗುರುಗಳಿಗೆ ಕೋಪ ಬರುತ್ತದೆ ಎಂದು ಹೆದರುತ್ತೀಯೇನೋ! ಹೆದರ ಬೇಡ. ನನಗೆ ಶಿವನ ವರ ಇದೆ ಅಂತ ಗುರುಗಳಿಗೆ ತಿಳಿಯುವುದಿಲ್ಲವೆ? ಆಯುಧದ ಸಹಾಯದಿಂದ ಯಾವುದನ್ನು ಕಾಪಾಡಲು ಸಾಧ್ಯವಿಲ್ಲವೋ ಅದನ್ನು ಕಾಪಾಡದೆ ಇದ್ದುದರಿಂದ ನಿನಗೆ ಅಪಕೀರ್ತಿ ಬಾರದು.”

ನನ್ನನ್ನೇ ತಿಂದುಬಿಡು

ಸಿಂಹವು ಆಡಿದ ಮಾತುಗಳನ್ನು ಕೇಳಿದ ರಾಜನು ತನಗೆ ಶಿವನ ಸಹಾಯವಿಲ್ಲದುದರಿಂದಲೇ ಇಂಥ ಸೋಲುಂಟಾಯಿತೆಂದು ತಿಳಿದುಕೊಂಡನು. ಸಿಂಹದ ಮುಂದೆ ತಾನು ಸೋತೆ ಎಂದು ಅವನಿಗೆ ನಾಚಿಕೆಯಾಗಿತ್ತು. ಈ ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಯಿತು. ಆದರೆ, ಸಿಂಹವು ಹಸುವನ್ನು ಇಲ್ಲಿಯೇ ಬಿಟ್ಟುಹೋಗು, ನನಗೆ ಆಹಾರವಾಗಲಿ ಎನ್ನುತ್ತಿದೆ! ತಾನು ಹಾಗೆ ಹೋಗಬಹುದೆ? ತನ್ನನ್ನು ನೆಚ್ಚಿದ ಹಸುವನ್ನು ಸಿಂಹಕ್ಕೆ ಒಪ್ಪಿಸುವುದೆ? ಗುರುಗಳಿಗೆ ಮುಖ ತೋರಿಸಬಹುದೆ? ಸಿಂಹಕ್ಕೆ ಹೀಗೆ ಹೇಳಿದನು:

“ಎಲೈ ಮೃಗರಾಜನೇ, ಸೋತವನಾದ ನನ್ನ ಮಾತು ನಿನಗೆ ತಮಾಷೆಯಾದಾಗಿ ತೋರಬಹುದು. ಶಿವನ ಸೇವಕನಾದ ನಿನಗೆ ಪ್ರಾಣಿಗಳ ಮನಸ್ಸಿನಲ್ಲಿರುವುದು ತಿಳಿದೀತು.ಶಿವನಿಂದಲೇ ಈ ಲೋಕ ಸೃಷ್ಟಿಯಾಗಿದೆ. ಇದರ ಉಳಿವಿಗೂ ಅಳಿವಿಗೂ ಶಿವನೇ ಕಾರಣನು. ಆದುದರಿಂದ ಶಿವನು ನನಗೆ ಪೂಜ್ಯನು. ಅವನ ಆಜ್ಞೆಗೆ ನಾನು ವಿರೋಧಿಯಲ್ಲ. ಆದರೆ ನಾನು ಗುರುವಿಗೆ ವಿಧೇಯನು. ಯಜ್ಞದಲ್ಲಿ ತೊಡಗಿರುವ ಗುರುವಿನ ಸಂಪತ್ತಾಗಿರುವ ಈ ಗೋವನ್ನು ರಕ್ಷಿಸುವುದು ನನ್ನ ಕರ್ತವ್ಯ. ಅಷ್ಟೇ ಅಲ್ಲ, ಗೋವು ಎಲ್ಲ ಜನರಿಗೂ ಪೂಜ್ಯವಾದುದು, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ. ನನ್ನ ಎದುರಿನಲ್ಲಿ ಇದು ನಾಶವಾಗುವುದನ್ನು ನನಗೆ ನೋಡಲು ಸಾಧ್ಯವಿಲ್ಲ. ಇದರ ಕರು ಅಲ್ಲಿ ಆಶ್ರಮದಲ್ಲಿದೆ. ಕತ್ತಲಾಗುತ್ತ ಬಂದಂತೆ ಅದು ತನ್ನ ತಾಯಿಯನ್ನೇ ಎದುರು ನೋಡುತ್ತಿರುವುದು. ಆದುದರಿಂದ ಈ ಧೇನುವನ್ನು ಬಿಟ್ಟುಬಿಡು. ನಿನ್ನ ಹಸಿವೆಗೆ ಪರಿಹಾರ ಬೇಕಿದ್ದರೆ, ನೀನು ನನ್ನನ್ನೇ ತಿಂದುಬಿಡು.”

ಅಷ್ಟು ಬುದ್ಧಿಹೀನನೇ ನೀನು?’

ದಿಲೀಪನು ಹೀಗೆನ್ನಲು ಸಿಂಹವು ನಸು ನಗುತ್ತ ರಾಜನಿಗೆ ಮತ್ತೆ ಹೀಗೆಂದಿತು-

“ರಾಜನೇ, ಏನು ಆಶ್ಚರ್ಯವಿದು! ನೀನು ಇಡೀ ಭೂಮಂಡಲದ ಅಧಿಪತಿ. ಎಲ್ಲಾ ಸಂಪತ್ತುಗಳಿಂದ ಕೂಡಿದವನು. ಪ್ರಜೆಗಳಿಗೆ ನೀನೆಂದರೆ ಬಹು ಪ್ರೀತಿ. ಈ ಸಣ್ಣ ಸಂಗತಿಗಾಗಿ ಅವನ್ನೆಲ್ಲ ಬಿಡುತ್ತೀಯ, ಅಷ್ಟು ಬುದ್ಧಿಹೀನನೇ ನೀನು? ಈ ಪ್ರಾಣಿಗಾಗಿ ಮರುಗಿ ನೀನು ಸತ್ತರೆ ಬದುಕಿ ಉಳಿಯುವುದು ಒಂದೇ ಒಂದು ಹಸು ಮಾತ್ರ. ನೀನು ಬದುಕಿ ಉಳಿದರೆ ಪ್ರಜೆಗಳನ್ನೆಲ್ಲಾ ತಂದೆಯಂತೆ ಕಾಪಾಡಬಹುದಲ್ಲವೆ? ಈ ಒಂದು ಹಸುವನ್ನು ಕಳೆದುಕೊಂಡುದಕ್ಕಾಗಿ ನಿನ್ನ ಗುರು ಕೋಪಿಸಿಕೊಳ್ಳುವನಾದರೆ, ಕೊಡದ ತುಂಬ ಹಾಲು ಕರೆವ ಕೋಟಿ ಹಸುಗಳನ್ನು ಕೊಟ್ಟು ಅವರ ಕೋಪವನ್ನು ತಣಿಸಲು ನಿನಗೆ ಸಾಧ್ಯವಿದೆ. ಹಾಗೆ ಮಾಡುವುದನ್ನು ಬಿಟ್ಟು ನಿನ್ನ ಪ್ರಾಣವನ್ನೇ ಕೊಡುವುದೇ? ಆದುದರಿಂದ ನಿನ್ನ ದೇಹವನ್ನು ಮೊದಲು ರಕ್ಷಣೆ ಮಾಡಿಕೋ. ಸಂಪತ್ತಿನಲ್ಲಿ ನಿನಗೂ ಇಂದ್ರನಿಗೂ ವ್ಯತ್ಯಾಸವಿಲ್ಲ.”

ನಿನ್ನ ಸ್ನೇಹಿತನಾದ ನನ್ನ ಬೇಡಿಕೆಯನ್ನು ಸಲ್ಲಿಸು

ದಿಲೀಪನು ಒಮ್ಮೆ ನಂದಿನಿಯ ಕಡೆಗೆ ನೋಡಿದನು. ಬೆದರುಗಣ್ಣಿನಿಂದ ಕೂಡಿದ ಧೇನುವನ್ನು ಕಂಡನು. ಪುನಃ ಸಿಂಹಕ್ಕೆ ಹೇಳಿದನು:

“ಎಲೈ ಸಿಂಹವೆ, ಕಷ್ಟಕ್ಕೆ ಸಿಕ್ಕಿದವರನ್ನು ಕಾಪಾಡುವುದು ಕ್ಷತ್ರಿಯನಾದ ನನ್ನ ಧರ್ಮ . ಅದು ಸಾಧ್ಯವಾಗದಿದ್ದರೆ ನನಗೆ ಅರಸುತನ ಏಕೆ? ಪ್ರಾಣವೇಕೆ? ಬೇರೆ ಹಸುಗಳನ್ನು ಕೊಟ್ಟು ವಸಿಷ್ಠರ ಕೋಪವನ್ನು ತಣಿಸಲು ಸಾಧ್ಯವಾಗದು. ಈ ಹಸು ಕಾಮಧೇನುವಿಗಿಂತ ಕಡಿಮೆಯದಲ್ಲ. ಇದಕ್ಕೆ ಸಮಾನವಾದ ಹಸು ಒಂದೂ ಇಲ್ಲ. ನೀನು ಶಿವನ ದೂತನಾದ ಸಾಮರ್ಥ್ಯದಿಂದ ಇದರ ಮೇಲೆ ಎರಗಿದೆ. ಇಲ್ಲವಾದರೆ, ಇದರ ಸಮೀಪ ಬರುವುದಕ್ಕೇ ನಿನಗೆ ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ನನ್ನನ್ನು ತಿಂದು, ಈ ಗೋವನ್ನು ಉಳಿಸು. ಇದರಿಂದ ಹಸಿದ ನಿನಗೆ ಆಹಾರ ಸಿಕ್ಕಿದಂತೆಯೂ ಆಗುವುದು, ಮುನಿಗಳ ಹೋಮಕ್ಕೆ ಸಹಾಯಕವಾದ ಈ ಧೇನು ಬದುಕಿ ಉಳಿದಂತೆಯೂ ಆಗುವುದು. ದೇವದಾರುವನ್ನು ಕಾಯಲು ನೇಮಕಗೊಂಡ ನೀನು ನಿನ್ನ ಕೆಲಸದ ಮಹತ್ವ ತಿಳಿದಿರುವೆ. ಅದೇ ರೀತಿ ಗುರುವಿನ ಧೇನುವನ್ನು ಕಾಯಲು ನೇಮಕಗೊಂಡ ನನ್ನ ಕೆಲಸವೂ ಮಹತ್ವವಾದುದಲ್ಲವೆ? ನನ್ನ ಈ ದೇಹ ಹೋದರೇನು? ಕೀರ್ತಿ ಎಂಬ ದೇಹ ಉಳಿದರೆ ಅದೇ ಸಾಕು ನನಗೆ. ಒಂದು ಕಡೆ ಸೇರುವುದರಿಂಧ, ಮಾತಾಡುವುದರಿಂದ ಸ್ನೇಹವಾಗುದೆಂದು ಬಲ್ಲವರು ಹೇಳುತ್ತಾರೆ. ಅದರಂತೆ ನಮ್ಮೊಳಗೆ ಈಗ ಸ್ನೇಹವುಂಟಾಗಿದೆ. ಹಸುವನ್ನು ಬಿಟ್ಟುಬಿಡು. ನನ್ನ ದೇಹವನ್ನೇ ತಿಂದು ತೃಪ್ತಿಪಟ್ಟುಕೊ. ನಿನ್ನ ಸ್ನೇಹಿತನಾದ ನನ್ನ ಬೇಡಿಕೆಯನ್ನು ಸಲ್ಲಿಸು.” ಹೀಗೆ ಹೇಳಿ, ಸಿಂಹವು ಇನ್ನು ಏನು ಹೇಳುವುದೋ ಎಂದು ರಾಜನು ನೋಡುತ್ತ ನಿಂತನು.

ಸಿಂಹವು “ಹಾಗೆಯೇ ಆಗಲಿ” ಎಂದು ಹೇಳಿ ನಂದಿನಿಯನ್ನು ಬಿಟ್ಟುಕೊಟ್ಟಿತು.

ದಿಲೀಪ ರಾಜನಿಗೆ ಸಿಂಹಕ್ಕೆ ದೇಹವನ್ನು ಅರ್ಪಿಸಬೇಕಲ್ಲ ಎಂದು ಸ್ವಲ್ಪವೂ ದುಃಖವಿಲ್ಲ. ಸಿಂಹದ ಹತ್ತಿರ ಹೋದನು. ಅದರ ಮುಂದೆ ತನ್ನ ತಲೆಯನ್ನು ಬಾಗಿಸಿ, ಅದು ತನ್ನ ಮೇಲೆ ಬೀಳುವುದನ್ನೆ ನಿರೀಕ್ಷಿಸುತ್ತ ನಮ್ರವಾಗಿ ಕುಳಿತನು.

ಇದೇನು?

ಸಿಂಹ ಮೈಮೇಲೆ ಎರಗಲಿಲ್ಲ. ಆಕಾಶದಿಂದ ದೇವತೆಗಳು ಸುರಿಸಿದ ಹೂವುಗಳು ಬಿದ್ದುವು.

ಇದೇನು ಎಂದು ಬೆಕ್ಕಸಬೆರಗಾಗಿ ನೋಡಿದ ರಾಜ. “ಮಗನೇ, ಏಳೇಳು!” ಎಂಬ ಅಮೃತವಾಣಿ ಕೇಳಿಸಿತು. ಆಗ ಸಿಂಹ ಅಲ್ಲಿರಲಿಲ್ಲ. ತಾಯಿಯಂತೆ ಪ್ರೀತಿಯನ್ನು ಬೀರುತ್ತ ನಂದಿನಿ ಧೇನು ನಿಂತಿದ್ದಿತು. ಅದು ದಿಲೀಪನಿಗೆ ಹೀಗೆ ಹೇಳಿತು:

“ಎಲೇ ಮಗನೇ, ಏಳು. ನಿನ್ನ ಪ್ರಾಣಕ್ಕೆ ಅಪಾಯವಿಲ್ಲ. ಈ ಸಿಂಹ ಮಾಯೆಯದು. ನಿನ್ನ ಭಕ್ತಿಯ ಪರೀಕ್ಷೆಗಾಗಿ ಈ ಘಟನೆ ನಡೆಯಿತು. ವಸಿಷ್ಠರ ತಪಸ್ಸಿನ ಮಹತ್ವದಿಂದ ನನಗೆ ಯಮನಿಂದಲೂ ಭಯವಿಲ್ಲ. ನೀನು ಗುರುಗಳಲ್ಲಿ ಭಕ್ತಿಯನ್ನೂ ನನ್ನಲ್ಲಿ ಭಕ್ತಿ ಕರುಣೆಗಳನ್ನೂ ತೋರಿಸಿರುವೆ. ನಿನಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು, ಕೊಡುವೆನು”

ದಿಲೀಪನು ನಂದಿನಿಗೆ ನಮಸ್ಕರಿಸಿದನು. ನಂದಿನಿಗೆ ಅಪಾಯವಿಲ್ಲ ಎಂದು ಅವನಿಗೆ ಸಂತೋಷ, ಜೊತೆಗೆ ಆ ದಿವ್ಯಧೇನುವಿಗೆ ತನ್ನಲ್ಲಿ ಮೆಚ್ಚಿಕೆಯಾಯಿತು ಎಂದು ಸಂಭ್ರಮ. “ಸೂರ್ಯವಂಶವನ್ನು ಬೆಳಗುವವನೂ ಧರ್ಮನಿಷ್ಠನೂ ಆದ ಮಗನೂ ಸುದಕ್ಷಿಣೆಯಲ್ಲಿ ಹುಟ್ಟುವಂತೆ ಕರುಣಿಸು”  ಎಂದನು. ಆಗ ಗೋವು, “ಹಾಗೆಯೇ ಆಗಲಿ. ನೀನು ಎಲೆಯ ದೊನ್ನೆಯಲ್ಲಿ ನನ್ನ ಹಾಲನ್ನು ಕರೆದು ಕುಡಿ. ನಿನ್ನ ಇಷ್ಟ ನೆರವೇರುವುದು” ಎಂದಿತು.

ಆಗ ರಾಜನು “ತಾಯೇ, ನಿನ್ನ ಕೆಚ್ಚಲ ಹಾಲಿನಲ್ಲಿ ಕರು ಕುಡಿದು, ಗುರುಗಳ ಹೋಮದ ವಿಧಿಗೆ ಉಪಯೋಗಿಸಿ ಉಳಿದುದನ್ನು ಮಾತ್ರ ನಾನು ತೆಗೆದು ಕೊಳ್ಳುವೆನು. ಗುರುಗಳ ಅಪ್ಪಣೆ ಪಡೆದು ನಾನೂ ನನ್ನ ಪತ್ನಿಯೂ ಸ್ವೀಕರಿಸುವೆವು” ಎಂದನು. ಧೇನು ಬಹಳ ಸಂತೋಷಪಟ್ಟಿತು. ಅದು ಆಶ್ರಮದ ಕಡೆಗೆ ಹೊರಟಿತು.

ಆಶ್ರಮಕ್ಕೆ ಬಂದೊಡನೆ ದಿಲೀಪನು ತನಗೆ ನಂದಿನಿಯ ಅನುಗ್ರಹ ಆದ ಸಂಗತಿಯನ್ನು ಗುರುಗಳಿಗೆ ಹೇಳಿದನು, ಪತ್ನಿಗೂ ವಿವರಿಸಿದನು. ಆ ಮೇಲೆ  ಕರು ಹಾಲು ಕುಡಿಯಿತು.  ಉಳಿದುದನ್ನು ಹೋಮಕ್ಕಾಗಿ ತೆಗೆದಿಡಲಾಯಿತು. ಮತ್ತೆ ಉಳಿದ ಹಾಲನ್ನು ವಸಿಷ್ಠರ ಅನುಮತಿಯಂತೆ ರಾಜನು ಸ್ವೀಕರಿಸಿದನು. ವಸಿಷ್ಠರು ರಾಜನಿಗೆ ಸುಪುತ್ರನು ಜನಿಸುವಂತೆ ಆಶೀರ್ವದಿಸಿದರು.

ಮರುದಿನ ಬೆಳಗ್ಗೆ ದಿಲೀಪನು ಪತ್ನೀ ಸಮೇತನಾಗಿ ವ್ರತದ ಸಮಾಪ್ತಿಯ ಎಲ್ಲ ಕ್ರಿಯೆಗಳನ್ನೂ ಮಾಡಿದನು.  ಆಶ್ರಮದ ಹೋಮದ ಅಗ್ನಿಗೂ, ವಸಿಷ್ಠರಿಗೂ, ಆರುಂಧತೀ ದೇವಿಗೂ ಕರುವಿನಿಂದ ಕೂಡಿದ ನಂದಿನಿ ಗೋಮಾತೆಗೂ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದನು. ಪತ್ನಿ ಸುದಕ್ಷಿಣೆಯೊಡನೆ ರಥವೇರಿ ಅಯೋಧ್ಯೆಗೆ ಸುಖ ಪ್ರಯಾಣ ಮಾಡಿದನು.

ಆಶೀರ್ವಾದ ಫಲಿಸಿತು

ರಾಜದಂಪತಿಗಳು ಬಂದರೆಂದು ಪ್ರಜೆಗಳಿಗೆ ಹೇಳಲಾಗದಷ್ಟು ಸಂತೋಷ.

ಹೀಗೆ ತಿಂಗಳುಗಳು ಕಳೆಯಲು ಮಹಾರಾಣಿ ಸುದಕ್ಷಿಣೆ ಗರ್ಭಿಣಿಯಾದಳು. ಒಂದು ಶುಭ ದಿನ ಬಂತು. ಅಂದು ಸುದಕ್ಷಿಣಾದೇವಿ ಒಂದು ಗಂಡು ಮಗುವನ್ನು ಹೆತ್ತಳು. ಮಂಗಳ ವಾದ್ಯಗಳು ಮೊಳಗಿದವು. ರಾಜನ ಸಂತೋಷಕ್ಕೆ ಈಗ ಪಾರವಿಲ್ಲ. ಉಡುಗೊರೆಗಳನ್ನು ಎಲ್ಲರಿಗೂ ಕೊಟ್ಟನು. ಬಡಬಗ್ಗರಿಗೆ ಅನ್ನದಾನ ಮಾಡಿದನು, ಒಳ್ಳೆಯ ಬಟ್ಟೆಗಳನ್ನು ಕೊಟ್ಟನು. ಮಗುವನ್ನು ಸ್ವತಃ ನೋಡಿ ಸಂತೋಷಗೊಂಡನು. ರಾಜ್ಯದ ಪ್ರಜೆಗಳಿಗೆಲ್ಲ ಸಂತೋಷ. ತಮ್ಮ ಪ್ರೀತಿಯ ರಾಜರಾಣಿಯರ ಆಸೆ ಫಲಿಸಿತು, ತಮ್ಮ ಮುಂದಿನ ಮಹಾರಾಜ ಜನಿಸಿದ ಎಂದು.

ಆ ವೇಳೆಗೆ ಸರಿಯಾಗಿ ಗುರುಗಳಾದ ವಸಿಷ್ಠರು ತಮ್ಮ ಆಶ್ರಮದಿಂದ ಹೊರಟು ದಿಲೀಪನ ರಾಜಧಾನಿಗೆ ಬಂದರು. ರಾಜನು ಅವರನ್ನು ಎದುರುಗೊಂಡು ವಂದಿಸಿ ಆಸನವಿತ್ತ ಉಪಚರಿಸಿದನು. “ನಿಮ್ಮ ಆಶೀರ್ವಾದ ಫಲಿಸಿದೆ. ನಂದಿನೀ ಧೇನುವಿನ ವರದಿಂದ ಪುತ್ರಸಂತಾನವಾಗಿದೆ” ಎಂಬ ಶುಭವಾರ್ತೆಯನ್ನು ತಿಳಿಸಿದನು. ಆಗ ವಸಿಷ್ಠರು ಗೋಮಾತೆಯ ಮಹಿಮೆಯನ್ನು ವರ್ಣಿಸಿದರು.

“ಗೋವಿನಂತಹ ಪವಿತ್ರವಾದ ಜೀವಿ ಇನ್ನೊಂದಿಲ್ಲ. ಗೋವನ್ನು ಮೇಯಿಸುವುದು, ಸಾಕುವುದು, ಹಾಲು ಕರೆಯುವುದು ಯಾವುದೂ ಕೀಳು ಕೆಲಸವಲ್ಲ. ಗೋವನ್ನು ಶ್ರದ್ಧೆಯಿಂದ ಚೆನ್ನಾಗಿ ನೋಡಿಕೊಳ್ಳಬೇಕು. ಗೋವಿನ ಸೇವೆಯಿಂದ ಧನ ಧಾನ್ಯ ಹೆಚ್ಚಾಗುವುದು. ಆರೋಗ್ಯ ಸುಖಗಳು ಲಭಿಸುವುವು.  ನೀನು ಮಹಾರಾಜನಾಗಿಯೂ ಗೋವಿನ ಸೇವೆ ಮಾಡಲು ಹಿಂಜರಿಯಲಿಲ್ಲ. ಕಾಡಿನಲ್ಲಿ ಅದನ್ನು ಕಾಪಾಡಿದೆ. ಗೋವನ್ನು ಕೊಂದು ತಿನ್ನಲು ಬಂದ ಸಿಂಹಕ್ಕೆ ನಿನ್ನನ್ನೇ ಬಲಿ ಕೊಡಲು ಮುಂದಾದೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ ಇದ್ದೇ ಇದೆ. ಗೋಸೇವೆ ಮಾಡಿ ಇಷ್ಟಾರ್ಥವನ್ನು ಪಡೆದ ನಿನ್ನ ಚರಿತ್ರೆ ಜನತೆಗೆ ಮಾರ್ಗದರ್ಶಕವಾಗಲಿ” ಎಂದು ವಸಿಷ್ಠರು ಮನ ಮೆಚ್ಚಿ ನುಡಿದರು.

ದಿಲೀಪನು ತನ್ನ ಮಗನಿಗೆ ಯಾವ ಹೆಸರಿಡುವುದೆಂದು ಯೋಚಿಸಿದನು. ಶಾಸ್ತ್ರ ತಿಳಿದವನು, ಶತ್ರುಗಳನ್ನು ಯುದ್ಧದಲ್ಲಿ ಜಯಿಸುವವನು ಎಂಬ ಅರ್ಥವನ್ನು ಕೊಡತಕ್ಕ ‘ರಘು’ ಎಂಬ ಹೆಸರನ್ನು ಮಗುವಿಗೆ ಇಟ್ಟನು.

ತಂದೆ ತಾಯಿಯರ ಕಣ್ಮಣಿ

ರಘು ದಿನದಿಂದ ದಿನಕ್ಕೆ ದೊಡ್ಡವನಾದನು. ಅವನ ಆಟಪಾಠ, ಅವನ ಕಳೆ ಎಲ್ಲ ಕಂಡು ತಂದೆ ತಾಯಿಗೆ ಹಿಗ್ಗು. ದಿಲೀಪನು ಅವನಿಗೆ ಕ್ಷತ್ರಿಯರ ಸಂಪ್ರದಾಯದಂತೆ ಉಪನಯನ ಮಾಡಿಸಿ, ವಿದ್ಯೆ ಕಲಿಯಲು ಅವನನ್ನು ಗುರುಕುಲಕ್ಕೆ ಕಳಿಹಿಸಿದನು. ರಘು ಅಲ್ಲಿ ಗುರುಗಳಿಗೆ ವಿಧೇಯನಾಗಿ ಎಲ್ಲ ವಿದ್ಯೆಗಳನ್ನೂ ಕಲಿತನು. ಯುದ್ಧ ವಿದ್ಯೆಯನ್ನೂ ಕಲಿತನು. ಕಲಿತು ಆದಮೇಲೆ ಗುರುಕುಲದಿಂದ ಅರಮನೆಗೆ ಬಂದನು. ದಿಲೀಪನು ತನ್ನ ಮಗನಿಗೆ ಯುವರಾಜ ಪದವಿಯನ್ನು ಕೊಟ್ಟನು.

ಯುವರಾಜ ರಘು

ಇನ್ನು ತಾನು ಮಾಡತಕ್ಕದ್ದು ಯಾವುದು ಎಂದು ದಿಲೀಪನು ಯೋಚಿಸಿದನು. ರಾಜನಾದವನು ಅಶ್ವಮೇಧ ಯಾಗಗಳನ್ನು ಮಾಡಬೇಕು. ಯಾಗದ ಕುದುರೆಯ ಬೆಂಗಾವಲಿಗೆ ಶೂರನಾದ ಕುಮಾರ ರಘು ಇರುವಾಗ ಭಯವೇನಿದೆ? ಒಂದೊಂದಾಗಿಯೇ ತೊಂಬತ್ತೊಂಬತ್ತು ಅಶ್ವಮೇಧ ಯಜ್ಞಗಳನ್ನು ಮಾಡಿ ದಿಲೀಪನು ಕೀರ್ತಿಶಾಲಿಯಾದನು. ಇನ್ನೊಂದು ಯಾಗವನ್ನೂ ಮಾಡಿ ಇಂದ್ರ ಪದವಿ ಪಡೆಯಲು ದಿಲೀಪನು ನಿರ್ಧರಿಸಿದನು. ಅದರಂತೆ ಯಜ್ಞದೀಕ್ಷೆಯನ್ನು ಕೈಗೊಂಡನು. ಯಾಗದ ಕುದುರೆಯನ್ನು ಬೇಕಾದ ದಿಕ್ಕಿಗೆ ಹೋಗಲು ಬಿಟ್ಟನು. ಯುವರಾಜನಾದ ರಘು ಅದರ ರಕ್ಷಣೇಗಾಗಿ ಸೈನ್ಯವನ್ನು ಕೂಡಿಕೊಂಡು ಹೊರಟನು. ಇಂದ್ರನಿಗೆ ಯೋಚನೆಯಾಯಿತು. ನೂರನೆಯ ಯಾಗ ನಡೆಯಿತೆಂದರೆ ದಿಲೀಪನೆ ಇಂದ್ರ! ಈ ಬಾರಿ ಯಾಗ ನಡೆಯದಂತೆ ಮಾಡಲು ಇಂದ್ರನು ಯೋಚಿಸಿದನು. ಯಾರಿಗೂ ಕಾಣದಂತೆ ಅವನು ಬಂದು ಆ ಯಾಗದ ಕುದುರೆಯನ್ನು ಸೆಳೆದುಕೊಂಡು ಹೋದನು. ರಘುವಿನ ಸೈನಿಕರಿಗೆ ಕುದುರೆಯನ್ನು ಕಾಣದೆ ಆಶ್ಚರ್ಯ. ಅವರಿಗೆ ಏನು ಮಾಡುವುದೆಂದು ತಿಳಿಯಲಿಲ್ಲ.

ಆಗ ಅಲ್ಲಿಗೆ ಪ್ರಖ್ಯಾತನಾದ ನಂದಿನೀ ಧೇನು ಬಂತು. ನಂದಿನಿಯ ಸೇವೆ ಮತ್ತು ಆಶೀರ್ವಾದಗಳಿಂದಲೇ ಅಲ್ಲವೆ ದಿಲೀಪನು ರಘುವನ್ನು ಪಡೆದಿದ್ದು! ಇದು ರಘುವಿಗೂ ತಿಳಿದಿತ್ತು. ಅವನು ಆ ಪವಿತ್ರ ಧೇನುವಿನ ಆಗಮನ ಶುಭ ಲಕ್ಷಣವೆಂದು ತಿಳಿದುಕೊಂಡನು. ಅದನ್ನು ವಂದಿಸಿ ಅರ್ಚಿಸಿದನು. ಅದರ ಅನುಗ್ರಹದಿಂದ ಅವನಿಗೆ ಇಂದ್ರನು ಅಶ್ವಮೇಧದ ಕುದುರೆಯನ್ನು ಒಯ್ಯುವುದು ಕಾಣಿಸಿತು. ರಘು ಅವನನ್ನು ಬೆನ್ನಟ್ಟಿದನು. ರಘುವಿಗೂ ಇಂದ್ರನಿಗೂ ಘೋರವಾದ ಯುದ್ಧವಾಯಿತು. ಕೊನಗೆಗೆ ಇಂದ್ರನು ತನ್ನ  ವಜ್ರಾಯುಧವನ್ನು ಪ್ರಯೋಗಿಸಿದನು. ಅದಕ್ಕೂ ಜಗ್ಗದೆ ರಘು ಯುದ್ಧ ಮಾಡುವುದನ್ನು ಕಂಡು ಅವನ ಪರಾಕ್ರಮಕ್ಕೆ ಇಂದ್ರನು ಮೆಚ್ಚಿದನು. ಯುದ್ಧ ನಿಲ್ಲಿಸಿದನು. “ಈ ಕುದುರೆಯನ್ನು ಮಾತ್ರ ಬಿಟ್ಟು ನಿನಗೆ ಬೇಕಾದ ಬೇರೆ ಯಾವುದನ್ನಾದರೂ ಕೇಳು, ಕೊಡುತ್ತೇನೆ” ಎಂದನು. ತಂದೆಯ ಮೇಲೆ ಭಕ್ತಿಯುಳ್ಳವನಾದ ರಘು ಹೀಗೆಂದನು-

“ಎಲೈ ಇಂದ್ರನೆ, ನೀನು ಯಾಗದ ಕುದುರೆಯನ್ನು ಬಿಡುವುದಿಲ್ಲವಾದರೆ ಇದೊಂದು ಅನುಗ್ರಹಿಸು – ನನ್ನ ತಂದೆ ದಿಲೀಪ ಮಹಾರಾಜನು ಈಗಲೂ ಯಜ್ಞದೀಕ್ಷೆಯಲ್ಲಿಯೇ ಇದ್ದಾನೆ. ಅವನದು ಇದು ನೂರನೆಯ ಯಜ್ಞ. ಈ ಯಜ್ಞವನ್ನು ಕೂಡ ಸಾಂಗವಾಗಿ ನೆರವೇರಿಸಿದ ಫಲವನ್ನು ಅವನು ಪಡೆಯುವಂತೆ ಮಾಡು. ಯಜ್ಞ ಮಂಟಪದಲ್ಲಿರುವ ಅವನಿಗೆ ಈ ಸಂಗತಿಯನ್ನು ನೀನು ಸೇವಕರ ಮೂಲಕ ತಿಳಿಸು.”

ರಘುವಿನ ಮಾತಿಗೆ ದೇವೇಂದ್ರನು ಒಪ್ಪಿದನು. ಅವನು ತನ್ನ ಸಾರಥಿಯಾದ ಮಾತಲಿಯನ್ನು ದಿಲೀಪನ ಬಳಿಗೆ ಕಳಹಿಸಿದನು. ರಘು ಕೂಡ ತಂದೆಯ ಬಳಿಗೆ ತೆರಳಿದನು. ದಿಲೀಪನು ಮಾತಲಿಯ ಮೂಲಕ ನಡೆದ ಸಂಗತಿಗಳನ್ನು ತಿಳಿದನು. ಯಾಗ ಪೂರ್ಣಗೊಂಡಿತೆಂದು ದಿಲೀಪನು ಸಂತೋಷಪಟ್ಟನು. ತನ್ನ ಮಗನ ಪರಾಕ್ರಮಕ್ಕೆ ಮೆಚ್ಚಿದನು.

ಸಾರ್ಥಕ ಬಾಳು

ದಿಲೀಪನು ತಾನಿನ್ನು ಮಹಾರಾಜನಾಗಿ ಉಳಿಯಲು ಇಚ್ಛೆಪಡಲಿಲ್ಲ. .ಅನೇಕ ವರ್ಷಗಳ ಕಾಲ ಜನಗಳನ್ನು ಸಂರಕ್ಷಿಸಿದ್ದನು. ದುಷ್ಟರನ್ನು ಶಿಕ್ಷಿಸಿ ಒಳ್ಳೆಯವರಿಗೆ ಆಶ್ರಯವಾಗಿದ್ದು. ಇನ್ನು ರಾಜ್ಯವನ್ನು ತರುಣನಾದ ಮಗನ ಕೈಯಲ್ಲಿಟ್ಟು ತಾನು ಭಗವಂತನ ಧ್ಯಾನದಲ್ಲಿ ಮನಸ್ಸು ಕಳೆಯಲು ತೀರ್ಮಾನಿಸಿದನು. ಮುದುಕನಾದ ಮೇಲೆಯೂ ತನ್ನ ಪದವಿಗೆ ಅಂಟಿಕೊಂಡು ಇರಲು ಅವನಿಗೆ ಮನಸ್ಸಿರಲಿಲ್ಲ. ತನ್ನ ವಂಶದವರು ಅನುಸರಿಸಿದ ಧರ್ಮಕ್ಕೂ ಅದು ಸರಿಯಿಲ್ಲ. ಹಿಂದಿನ ರಾಜರು ಮುಪ್ಪು ಬಂದಾಗ ಮಗನಿಗೆ ಪಟ್ಟಕಟ್ಟಿ ಕಾಡಿಗೆ ತೆರಳಿ ಋಷಿ ಜೀವನ ನಡೆಸುತ್ತಿದ್ದರು. ದಿಲೀಪನಿಗೂ ಜೀವನದ ಗುರಿ ಇದೇ ಆಗಿತ್ತು. ಆದುದರಿಂದ ರಾಜಕುಮಾರನಾದ ಮತ್ತು ಇಷ್ಟರಲ್ಲಿಯೇ ಪ್ರಜೆಗಳ ವಿಶ್ವಾಸವನ್ನು ಗಳಿಸಿದ ರಘುವಿನ ಪಟ್ಟಾಭಿಷೇಕ ಮಾಡಿದನು. ಪತ್ನಿಯಾದ ಸುದಕ್ಷಿಣೆಯೊಡನೆ ಒಂದು ದಿನ ಋಷ್ಯಾಶ್ರಮಕ್ಕೆ ತೆರಳಿದನು.

ದಿಲೀಪನು ಸುದಕ್ಷಿಣೆಯೊಡನೆ ಋಷ್ಯಾಶ್ರಮಕ್ಕೆ ಹೊರಟು ಹೋದನು.

ದಿಲೀಪನು ಬಹು ಪರಾಕ್ರಮಶಾಲಿಯಾದ ಚಕ್ರವರ್ತಿ. ಇತರರನ್ನು ಆಳುವವರು, ಅಧಿಕಾರ ಪಡೆದವರು ಇತರರ ಹಿತಕ್ಕಾಗಿ ಅಧಿಕಾರವನ್ನು ಬಳಸಬೇಕು, ಧರ್ಮಕ್ಕಾಗಿ ಬದುಕಬೇಕು ಎಂಬುದನ್ನು ತನ್ನ ಆಚರಣೆಯಿಂದ ತೋರಿಸಿದನು. ವಯಸ್ಸಾಗುತ್ತಲೆ, ಸಂತೋಷದಿಂದ ಸಿಂಹಾಸನವನ್ನು ಯುವಕ ಮಗನಿಗೆ ಒಪ್ಪಿಸಿ ತಪಸ್ಸಿಗೆ ನಡೆದನು. ಒಪ್ಪಿಕೊಂಡ ಕೆಲಸದಲ್ಲಿ ಅಸಮಾನ ನಿಷ್ಠೆಯನ್ನು ತೋರಿಸಿದನು. ನಂದಿನಿಗಾಗಿ ತನ್ನ ಪ್ರಾಣವನ್ನೇ ಕೊಡಲು ಸಿದ್ಧನಾದನು. ಚಕ್ರವರ್ತಿಯ ಮಗನಾಗಿ ಹುಟ್ಟಿ ಚಕ್ರವರ್ತಿಯಾಗಿ ದೊಡ್ಡವನು ಎನಿಸಿಕೊಂಡ; ಅದಕ್ಕಿಂತ ಹೆಚ್ಚಾಗಿ ತನ್ನ ವಿನಯ, ಕರ್ತವ್ಯನಿಷ್ಠೆ, ತ್ಯಾಗದ ಮನೋಭಾವ ಇವುಗಳಿಂದ ಕೀರ್ತಿವಂತನಾದ. ತನ್ನ ಗುಣಗಳಿಂದ ಎಲ್ಲರ ಹೃದಯಗಳನ್ನು ಗೆದ್ದ; ಇದೆ ಅಲ್ಲವೆ ದೊಡ್ಡತನ?

ದೊಡ್ಡ ಪದವಿಯಲ್ಲಿರುವವರ ಜೀವನ ಹೇಗೆ ಇರಬೇಕೆಂಬುದನ್ನು ದಿಲೀಪನು ಆಚರಿಸಿ ತೋರಿಸಿದನು. ಆದರ್ಶ ಗುಣಗಳ ಮೂರ್ತಿಯಾಗಿ ಮೆರೆದನು. ಎಂದೆಂದಿಗೂ ನೆನಪಿನಲ್ಲಿಡಲು ಯೋಗ್ಯವಾದ ಚರಿತ್ರೆಯುಳ್ಳ ಮಹಾ ಪುರುಷನೆನ್ನಿಸಿದನು.