ಚಳಿಗಾಲ ಮುಗಿದ ನಂತರ ಒಂದು ಪ್ರಾತಃಕಾಲ; ಪೂರ್ವದಲ್ಲಿ ಗುಡ್ಡದ ಮೇಲಿಂದ ಇಣುಕಿದ ಸೂರ್ಯ ಅಕ್ಕು ಮನೆಯನ್ನು ಇನ್ನೇನು ಇಣುಕುವುದರಲ್ಲಿದ್ದ. ಅವತ್ತು ಶುಕ್ಲಪಕ್ಷದ ತದಿಗೆ.

ಅಕ್ಕುವಿನ ಮನೆಯಿರುವುದು ದಯಿನೆಯಲ್ಲಿ. ಅದೊಂದೇ ಮನೆ ದಯಿನೆಯಲ್ಲಿ. ಕೇಶವನನ್ನು ಹಳ್ಳಿಯವರು ದಯಿನೆ ಭಟ್ಟರೆಂದೇ ಕರೆಯುವುದು. ಅವನ ಅಪ್ಪನನ್ನೂ ಅಜ್ಜನನ್ನೂ ಹಾಗೇ ಅವರು ಕರೆದದ್ದು. ಇಲ್ಲಿಂದ ಒಂದರ್ಧ ಮೈಲಿಯಾಚೆ ಗುಡ್ಡದ ಬುಡದಲ್ಲೇ ಕೆರೆಕೊಪ್ಪ – ಅಲ್ಲೊಂದು ಶೀವಪ್ಪನಾಯಕ ಕಟ್ಟಿಸಿದ್ದೆಂಬ ಐತಿಹ್ಯದ, ಎಂದೂ ಅದು ಬತ್ತಿದ್ದನ್ನು ಯಾರೂ ನೋಡದ, ಕೆರೆಯಿದೆ. ಆಳುಗಳ ಗುಡಿಸಲುಗಳು ಇರುವುದು ಈ ಕೆರೆಕೊಪ್ಪದಲ್ಲಿ. ಇನ್ನೊಂದು ದಿಕ್ಕಿನಲ್ಲಿ ಸ್ವಲ್ಪ ಗುಡ್ಡವನ್ನೇರಿ ಹೋಗಬೇಕು, ಇನ್ನೊಂದು ಅರ್ಧ ಮೈಲಿಯಾದರೂ ಹೋಗಬೇಕು – ಅದೇ ಲೋಕಪ್ರಸಿದ್ಧವಾದ ದೇವನಹಳ್ಳಿ. ಅರ್ಧ ಮೈಲಿಯಾದರೂ ಹೋಗಬೇಕು – ಅದೇ ಲೋಕಪ್ರಸಿದ್ಧವಾದ ದೇವನಹಳ್ಳಿ. ಸಾಹುಕಾರ್ ಮಂಜಯ್ಯನವರ ಅರಮನೆಯಂಥ ಮನೆ ಮಾತ್ರ ಇರುವ ಹಳ್ಳಿ ಈ ದೇವನಹಳ್ಳಿ.

ದೇವನ ಹಳ್ಳಿಯಿಂದ ದಯಿನೆಗೆ ಎತ್ತಿನ ಬಂಡಿ ಮತ್ತು ಜೀಪು ಓಡಾಡಬಹುದಾದಂತಹ ಕೊರಕಲು ಬಿದ್ದ ರಸ್ತೆ – ಅಂದರೆ, ರಸ್ತೆಯೆಂಬ ಹೆಸರಿಗೆ ಒಂದು ರಸ್ತೆ – ಇತ್ತು. ಟಾರ್ ಇರಲಿ ಜಲ್ಲಿಯನ್ನೂ ಹಾಕದ ರಸ್ತೆಯಿದು. ಗುಡ್ಡದ ಜಂಬಿಟ್ಟಿಗೆ ಮಣ್ಣಿನಿಂದಾಗಿ ಅದು ಗಟ್ಟಿ. ಮಳೆಗಾಲದಲ್ಲಿ ಅಷ್ಟು ಕೆಸರಾಗುವುದಿಲ್ಲ, ಜಾರುತ್ತದೆ. ದೊಡ್ಡ ರಸ್ತೆಯಿಂದಲೂ ದಯಿನೆಗೆ ಕಾಡಿನಲ್ಲಿ ಒಂದು ಒಳದಾರಿಯಿದೆ; ಗೊತ್ತಿರುವವರಿಗೆ ಮಾತ್ರ ಗೊತ್ತು ಇದು.

ಆದರೆ ಸಾಹುಕಾರ್ ಮಂಜಯ್ಯನವರ ಮನೆಯಿಂದ ಒಂದು ಫರ್ಲಾಂಗ್ ದೂರದಲ್ಲೇ ಆಗುಂಬೆಗೂ ಶಿವಮೊಗ್ಗಕ್ಕೂ ನಡುವಿನ ಈ ದೊಡ್ಡ ಟಾರ್ ರಸ್ತೆಯಿತ್ತು. ಹಾಗೊಂದು ಇಡೀ ಊರಿಗಾಗಿ ರಸ್ತೆಯಿರುವುದೇನೂ ದೊಡ್ಡದಲ್ಲ; ಅದರ ಹತ್ತಿರವೇ ಊರಿನ ಸಾಹುಕಾರರ ಮನೆಯಿರುವುದೂ ವಿಶೇಷವಲ್ಲ. ಆದರೆ ವಿಶೇಷವೆಂದರೆ, ಸಾಹುಕಾರರ ಮನೆ ಬಾಗಿಲಿನಿಂದಲೇ ಈ ರಸ್ತೆ ತಲುಪುವ ಫರ್ಲಾಮಗಿನುದ್ದಕ್ಕೂ ಈ ಹಿಂದೆ ಜಲ್ಲಿ ರಸ್ತೆಯಾಗಿ ಇದ್ದದ್ದು ಈಗ ಟಾರ್ ಆದದ್ದು.

ಪೂರ್ವದಲ್ಲಿ ಅದು ಮಣ್ಣಿನ ರಸ್ತೆ; ಸ್ವಾತಂತ್ರ್ಯ ಬಂದ ಮೇಲ ಜಲ್ಲಿ; ಸಾಹುಕಾರ‍್ರು ಮೇಲ್ಮನೆ ಮೆಂಬರಾದ ಮೇಲೆ ಟಾರು.

ಮಂತ್ರಿಗಳನ್ನು ಕರೆಸಿ ಸಾಹುಕಾರ‍್ರು ಈ ರಸ್ತೆಗೆ ‘ಸತ್ಯಾಗ್ರಹ ರಸ್ತೆ’ ಎಂದು ಹೆಸರಿಡಿಸಿದ್ದರು. ನಲವತ್ತೆರಡರ ಚಳವಳಿಯಲ್ಲಿ ಪೇಟೆಯ ಸತ್ಯಾಗ್ರಹಿಗಳು ಈ ದಾಯಿಯಿಂದ ಬಂದು ಸಾಹುಕಾರ‍್ರ ಆತಿಥ್ಯದಲ್ಲಿ ಸಭೆ ಮಾಡುತ್ತಿದ್ದರು. ಅಂಚೆಯ ನಿಮಿತ್ತವಾಗಿ, ಕಾರಿನಲ್ಲಿ ಪೇಟೆಯಿಂದ ಬರುವ ಹೊಸಬರಿಗೆ ಗುರುತಾಗಿ ‘ಸತ್ಯಾಗ್ರಹ ರಸ್ತೆ’ಯೆಂದು ಬೋರ್ಡಿದ್ದರೂ ಸಹ, ಈ ರಸ್ತೆಯನ್ನು ಹಳ್ಳಿಯವರು ಕರೆಯುವುದು ಮಾತ್ರ ‘ಸಾಹುಕಾರ‍್ರ ರಸ್ತೆ’ ಯೆಂದೇ.

ಸಾಹುಕಾರ‍್ರು ವರ್ಚಸ್ಸಿನ ಜನವೆಂದು ಹಳ್ಳಿಯವರಿಗೆ ಜಂಬ. ತಾಲ್ಲೂಕು ಆಫೀಸಿನಲ್ಲಿ ಏನಾರೂ ಕೆಲಸವಾಗಬೇಕಾದರೆ ನಾವು ದೇವನಹಳ್ಳಿ ಕಡೆಯವರು ಎಂದರೆ ಕೆಲಸ ಸುಲಭವಾಗುತ್ತದೆ.

ಹತ್ತಿರದ ಇನ್ನೊಂದು ಬ್ರಾಹ್ಮಣ ಮನೆಯಾದ ಅಕ್ಕು ಮನೆಯ ಸೂರು ಹುಲ್ಲಿನದಾದರೂ, ಮಳೆಗಾಲದಲ್ಲಿ ಸೋರಿದರೂ, ಹೊಳೆಯುಂತೆ ಉಜ್ಜಿದ ಕಪ್ಪಾದ ತಂಪಾದ ಮಣ್ಣಿನ ನೆಲದ, ಯಾವತ್ತೂ ಸಾರಿಸಿ ರಂಗೋಲೆಯಿಟ್ಟ, ಬಾಗಿಲಿಗೆ ಗಾಜಿನ ಬಳೆಯ ತೋರಣ ಹಾಕಿದ, ಅಂಗಳದಲ್ಲಿ ರಂಗೋಲೆಯಿಕ್ಕಿದ ಈ ಮನೆ ಧಾರಾಳವಾಗಿತ್ತು. ಸುಮಾರು ಐವತ್ತು  ಜನರಿಗೆ ಊಟ ಬಡಿಸುವಷ್ಟಾದರೂ ಧಾರಾಳವಾಗಿತ್ತು. ಇದಕ್ಕೆ ಹೋಲಿಸಿದರೆ, ಸಾಹುಕಾರರ ಮನೆ ಒಂದು ಸಾವಿ ಜನವಾದರೂ ಆರಾಮಾಗಿ ಸಾಲು ಸಾಲಾಗಿ ಕೂತು ಪಂಕ್ತಿ ಭೋಜನ ಮಾಡುವಷ್ಟು ವಿಶಾಲವಾಗಿತ್ತು. ಸಾಹುಕಾರರ ಮಗಳ ಮದುವೆಯಲ್ಲಿ ಇಂಥ ಪಾಯಸದೂಟದ ದೃಶ್ಯ ನೋಡಿದ ಹಳ್ಳಿಯವರು ಸಾಹುಕಾರರ ಮಗನ ಮದುವೆಗೆ ಕಾದಿದ್ದಾರೆ.

ದಯಿನೆಗೆ ಬರುವುದೆಂದರೆ ಭಟ್ಟರನ್ನು ನೋಡಲು ಮಾತ್ರ ಬರುವುದು: ಒಂದೋ ನಿಮಿತ್ಯಕ್ಕೆ; ಹೆಚ್ಚಾಗಿ ಮುಹೂರ್ತಕ್ಕೆ ಮತ್ತು ಮದ್ದಿಗೆ; ಅಥವಾ ಪೂಜೆಗೆ ಕರಿಯಲಿಕ್ಕೆ, ಅಥವಾ ಬಾಯಾರಿದಾಗ ನೀರು ಬೆಲ್ಲಕ್ಕೆ, ಆವಾಗ ಈವಾಗ ಪ್ರಸಂಗ ಕೇಳಲಿಕ್ಕೆಂದು ಊರಿನ ಸಣ್ಣಪುಟ್ಟ ಆಸ್ತಿಯ ಗೌಡರೂ ಅಕ್ಕಸಾಲಿಯೂ, ಬಡಗಿಯೂ, ಕಥೆಯ ತೆವಲಿನ ಆಳು ಮಕ್ಕಳೂ, ಸಾಹುಕಾರರ ಮನೆಯ ವಹಿವಾಟಿನವರೂ ಬರುವುದುಂಟು. ಗಾಡಿಯಲ್ಲೊ ಜೀಪಲ್ಲೊ ಬಂದರೆ ದಾರಿಯ ಎಲ್ಲ ಕೊರಕಲುಗಳೂ ತಮ್ಮ ಇರುವಿಕೆಯನ್ನು ಫರ್ಲಾಂಗು ದೂರದಿಂದಲೇ ಸಾರುತ್ತವೆ. ಬೇಸಗೆಯಲ್ಲಿ ಎಲ್ಲಿಂದ ನಡೆದು ಬಂದರೂ ದರಗು ಮೆಟ್ಟಿದ ಶಬ್ದವಾಗುತ್ತದೆ.

ಅವತ್ತು ದಶಮಿಯ ಪ್ರಾತಃಕಾಲ ಅಂಥ ಯಾವ ಹೆಜ್ಜೆಯ ಶಬ್ದವಾಗಲೀ ಗಾಡಿ ಎತ್ತಿನ ಕೊರಳ ಗಂಟೆಯ ಶಬ್ದವಾಗಲೀ ಆಗಿರಲಿಲ್ಲ. ಅಥವಾ ನಿದ್ದೆಯಲ್ಲಿದ್ದವರಿಗೆ ಕೇಳಿಸಿರಲಿಲ್ಲ. ಎಲ್ಲರಿಗಿಂತ ಮೊದಲು ಯಾವತ್ತೂ ಏಳುವಂತೆ ಅಕ್ಕು ಎದ್ದು, ಚಾಪೆಯ ಮೇಲೆ ಕಾಳು ಚಾಚಿ ಕೂತು, ಮುಖವನ್ನು ಕೈಗಳಿಂದ ಉಜ್ಜಿ, ಮತ್ತೆ ಅಂಗೈಗಳನ್ನು ಒಂದಕ್ಕೊಂದು ಉಜ್ಜಿಕೊಂಡು, ಬೆಚ್ಚಗಾದ ಅಂಗೈಗಳನ್ನು ಕನ್ನಡಿಯಂತೆ ಮುಖದೆದುರು ಹಿಡಿದು. ಯಾವ ಯಾವ ದೇವರಿದ್ದಾರೆ ಎಂದು ಗುರುತಿಸಿಕೊಳ್ಳುವ ಕರದರ್ಶನ ಮಾಡಿ ಬಚ್ಚಲಿಗೆ ನಡೆದಳು.

ಅಯ್ಯೋ ದೇವರೇ ಎಂದು ಕೂಗಿಕೊಂಡಳು. ಬಚ್ಚಲಿನ ಹೊರಗಿನಿಂದ ಮಗು ಅಳುವ ಶಬ್ದವಾಗಿತ್ತು.

ಬಚ್ಚಲತಟ್ಟಿಯನ್ನು ಹಾಗೇ ಮುಚ್ಚಿ, ಬಚ್ಚಲಿನ ಹಿಂಬದಿಗೆ ಒಲೆಯಿರುವಲ್ಲಿ ಓಡಿದಳು.

ಅಲ್ಲೊಂದು ತೊಟ್ಟಿಲು; ತೊಟ್ಟಿಲಲ್ಲಿ ಕಂಬಳಿ ಹೊದೆಸಿದ ಒಂದು ಪುಟ್ಟ ಕೂಸು.

ಹೊರಗಿನಿಂದ ದೊಡ್ಡ ಕುಂಟೆಗಳನ್ನು ತಳ್ಳಿ ಬೆಂಕಿಯನ್ನು ಸದಾ ಉರಿಸುವ, ಈಗ ತೊಟ್ಟಿಲಲ್ಲಿ ಕೂಸನ್ನು ಪ್ರತ್ಯಕ್ಷಗೊಳಿಸಿದ ಈ ಪ್ರದೇಶ ಮನೆಯವರೂ, ಮನೆಯ ಹೊರಗಿನವರೂ ಒಟ್ಟಾಗಿ ಕೂರಬಹುದಾದ್ದು. ಎಲ್ಲರಿಗೂ, ಗೌರಿಗಂತೂ, ತುಂಬ ಆಪ್ತವಾದ ಜಾಗ ಇದು. ಒಳಗಿದ್ದಂತೆಯೇ ಭಾಸವಾಗುವ, ಆದರೆ ಮಡಿ ಮೈಲಿಗೆಯ ಗೋಜಿಲ್ಲದ, ಹೊರಗೂ ಅಲ್ಲದ ಒಳಗೂ ಅಲ್ಲದ ಜಾಗ ಅದು.

ಒಳಗಿಗೆ ಹೊರಗಾದ, ಹೊರಗಿಗೆ ಒಳಗಾದ ಈ ಪ್ರದೇಶವನ್ನು ಗೌರಿ ನಿತ್ಯ ಸಾರಿಸಿ ಸ್ವಚ್ಛ ಮಾಡಿ ಇಡುತ್ತಿದ್ದಳು. ಅಲ್ಲೇ ಅವಳು ಅಕ್ಕು ಕಣ್ಣಿಗೆ ಬೀಳದಂತೆ ಓದುತ್ತ ಕೂರುವುದು. ಹಲಸಿನ ಬೀಜವನ್ನು ಬಿಸಿಯಾದ ಬೂದಿಯಲ್ಲಿ ಮುಚ್ಚಿಟ್ಟು, ಅದು ಕಾದು ಬೆಂದು ಸಿಡಿದಿದ್ದೇ ಹೊರತೆಗೆದು, ಊದಿ, ಕೊಂಚ ತಣ್ಣಗಾಗಲು ಕಾದು ತಿನ್ನುವುದು. ಇಲ್ಲಿಗೆ ಕರಿಯ ಮಾತ್ರ ಬರುವಂತಿರಲಿಲ್ಲ; ಕೆಲಸದ ಆಳುಗಳು, ಏನಾದರೂ ಬಾಯಿಗೆ ಕೊಡಿಯೆಂದು ಬರುವ ಆಳುಗಳು, ಇಲ್ಲಿ ಬರಬಹುದು. ಗೌರಿ ಎಸೆಯುವ ಹಲಸಿನ ಬೀಜಗಳನ್ನು ಸ್ವಲ್ಪ ದೂರದಲ್ಲಿ ಕುಕ್ಕುರು ಕಾಲಲ್ಲಿ ಕೂತು ತಿನ್ನುತ್ತ ಇವರು ಊರಿನ ಆ ಸುದ್ದಿ ಈ ಸುದ್ದಿ ಹರಟುವುದು. ಪೂಜೆ ಮುಗಿದದ್ದೇ ಕೇಶವ ಗೌರಿಯನ್ನು ಬಂದು ಸೇರುವುದು ಅಲ್ಲೇ. ಊಟವಾದ ಮೇಲೆ ಅಕ್ಕು ಸಹ ಮೈಲಿಗೆಯಾಗುವ ಹಿತವಾದ ಸ್ವಾತಂತ್ರ್ಯವನ್ನು ಗಳಿಸುವುದು ಈ ಜಾಗದಲ್ಲೇ.

ಬಚ್ಚಲಿನ ನೀರು ಹರಿದು ಹೋಗುವ ಕೊಂಚ ಆಚೆಯಲ್ಲಿ ಹಸಿರಾದ ತೊಂಡೆ ಚಪ್ಪರ. ಪತ್ರಡೆಗೆ ಪ್ರಶಸ್ತವಾದ ಕೆಸ. ಒಂದು ಕುಂಬಳದ ಬಳ್ಳಿ, ಒಂದು ನಿಂಬೆಗಿಡ. ಅದರಾಚೆ ಒಂದು ಕರಿಬೇವಿನ ಮರ, ಧಾರಾಳವಾಗಿ ಕಾಯಿ ಬಿಟ್ಟ ಸೀಮೆಸೌತೆ. ಚಿಗುರಿದ ಒಂದು ದಾಳಿಂಬೆ. ಇನ್ನೂ ಆಚೆ, ಬೀಸುವ ಗಾಳಿಗೆ ನಾದಗೊಳ್ಳುವ ಸಾಹುಕಾರರ ಮನೆಯಿಂದ ತಂದುನೆಟ್ಟ ಮುಳ್ಳಿಲ್ಲದ ಪರದೇಶಿ ಬಿದಿರಿನ ಹಿಂಡಲು. ಅದರಾಚ ಗುಡ್ಡದ ತಪ್ಪಲು.

ಗುಡ್ಡದಲ್ಲಿ ಹರಿಯುವ ಅಬ್ಬ ನೀರು ದಂಬೆಗಳ ಮುಖಾಂತರ ಹಂಡೆಗೆ ಬಂದು ಸೇರುವಂತೆಯೂ, ಬೇಡದಾಗ ಗಿಡಮರಗಳಿಗೆ ಆಗುವಂತೆಯೂ ಕೇಶವ ವ್ಯವಸ್ಥೆ ಮಾಡಿದ್ದ.

ತೊಂಡೆ ಚಪ್ಪರದಾಚೆ ಬೂದಿಯೊಟ್ಟುವ ಹೊಂಡದಲ್ಲಿ ಯಾವತ್ತೂ ಎರಡು ನಾಯಿಗಳು ಸುಖದಲ್ಲಿ ಮಲಗಿದ್ದು ಜನ ಕಂಡೊಡನೆ ಬಾಲವಾಡಿಸುತ್ತಿದ್ದುವು. ಕೂಸನ್ನು ಯಾರೋ ತಂದಿಡುವಾಗ ಅವು ಬೊಗಳಿರಲಿಲ್ಲ; ಯಾಕೆಂದರೆ ಅವು ಬೊಗಳಿದ್ದೇ ಇಲ್ಲ.

ಹಗಲಲ್ಲು ರಾತ್ರೆಯಲ್ಲೂ ಯಾರಿಗಾದರೂ ಒದಗುವಂತಿದ್ದ ಈ ಜಾಗದ ಬಚ್ಚಲೊಲೆಯ ಹಿತವಾದ ಶಾಖದಲ್ಲಿ ಕೇಶವನೂ ಗೌರಿಯೂ ಅಕ್ಕು ಮಾಡಿದ ಸದ್ದು ಕೇಳಿ ಎದ್ದು ಓಡಿಬಂದು ಕಂಡದ್ದು ಪೇಟೆಯ ಜನ ಬಳಸುವಂತಹ ಹಗುರಾದ ತಗಡಿನ ತೊಟ್ಟಿಲು; ಅದರಲ್ಲೊಂದು ಕೂಸು. ತೊಟ್ಟಿಲಿನ ಪಕ್ಕದಲ್ಲಿ ಅಳುವ ಕೂಸನ್ನೇ ನೋಡುತ್ತ ಅವಾಕ್ಕಾಗಿ ಕೂತ ಅಕ್ಕು.

ಮೂವರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು ಈಗ ತಾನೇ ಹುಟ್ಟಿಬಂದು ಒಬ್ಬರಿಗೊಬ್ಬರುಹೊಸಬರಾಗಿ ಬಿಟ್ಟ ಹಾಗೆ. ಮತ್ತೆ ಕೂಸನ್ನು ನೋಡಿದರು. ಕೂಸು ಅಳುತ್ತಲೇ ಇತ್ತು.

ಕೂಸಿಗೆ ಕಂಬಳಿ ಹೊದೆಸಿದ್ದರಿಂದ ಅದರ ಪುಟಾಣಿ ಕೈಗಳು ಮತ್ತು ಅದರ ಗುಂಡಗಿನ ಮುಖ ಮಾತ್ರ ಕಾಣಿಸುತ್ತಿದೆ. ಕೈ ಎತ್ತಿ ಎತ್ತಿ ಅಳುತ್ತಿದೆ. ಅದರ ತಲೆ ತುಂಬ ಕಪ್ಪು ಕೂದಲಿದೆ. ಹಣೆಯ ಮೇಲೆ ವಿಭೂತಿ ಬೊಟ್ಟಿದೆ. ಕೆನ್ನೆಯ ಮೇಲೆ ಸ್ನಾನದ ನಂತರ ಮಕ್ಕಳಿಗೆ ಇಡುವ ದೃಷ್ಟಿಬೊಟ್ಟಿದೆ. ಹಂಡೆಯ ಕರಿ, ಕಪ್ಪಾಗಿ.

ಅಕ್ಕು ಅಳುವ ಮಗುವನ್ನು ಎತ್ತಿಕೊಂಡಳು. ಬೆನ್ನು ತಟ್ಟಿ ಸಮಾಧಾನ ಪಡಿಸುತ್ತ ಒಲೆಯ ಶಾಖದ ಬೆಚ್ಚಗಿನ ಪರಿಧಿಯಲ್ಲಿ ಓಡಾಡಿದಳು. ಮಗುವಿಗಿನ್ನೂ ತಿಂಗಳು ಮಾತ್ರ ಆಗಿರಬಹುದೆಂದು ಲೆಕ್ಕಿಸದೆ ಏನೇನೋ ಸಮಾಧಾನದ ಮುದ್ದು ಮಾತುಗಳನ್ನು ಆಡಲು ತೊಡಗಿದಳು.

‘ಅಲ್ಲಿ ಬೌ ಬೌ ನೋಡು ಪುಟ್ಟಾ, ತೊಂಡೆ ನೋಡು ಪುಟ್ಟಾ, ಬೆಂಕಿ ನೋಡು ಪುಟ್ಟಾ, ಅಕ್ಕ ನೋಡು ಪುಟ್ಟಾ, ಮಾವ ನೋಡಾ ಪುಟ್ಟಾ’.

ಕೇಶವ ಶ್ರೀಹರಿಯನ್ನು ನೆನೆದ. ಕೃಷ್ಣ ಶಾಸ್ತ್ರಿಗಳನ್ನು ನೆನೆದ. ಬೆರಗಾಗಿ ಅಕ್ಕುವಿನ ಹಿಂದೆ ಮುಂದೆ ‘ಹಚಿ ಕಳ್ಳ, ಹಚಿ ಕಳ್ಳ’ ಎನ್ನುತ್ತ ಕೂಸನ್ನು ರಮಿಸಲು ಯತ್ನಿಸಿದ.

ತೊಟ್ಟಿಲಲ್ಲಿ ಜೋಪಾನವಾಗಿ ಜೋಡಿಸಿಟ್ಟ ಕೆಲವು ಸಾಮಾನುಗಳು ಕಣ್ಣಿಗೆ ಬೀಳುವಂತಿದ್ದವು. ಗೌರಿ ಒಂದೊಂದಾಗಿ ಅವುಗಳನ್ನು ತೆಗೆದಳು.

ಐದು ಗ್ಲಾಕ್ಸೋ ಹಾಲಿನ ಡಬ್ಬ, ಇನ್ನೂ ಬೆಚ್ಚಗಿರುವ ಹಾಲನ್ನು ತುಂಬಿಟ್ಟ ಹಾಲು ಕುಡಿಸುವ ಸೀಸೆ, ಜೊತೆಗೊಂದು ಕಾಗದ. ಕಾಗದಲ್ಲಿ ಗುಂಡಾದ ಅಕ್ಷರದಲ್ಲಿ ಬರೆದದ್ದನ್ನು ಗೌರಿ ಗಟ್ಟಿಯಾಗಿ ಓದಿದಳು.

‘ಈ ಮಗುವನ್ನು ನಿಮ್ಮದೆಂದು ತಿಳಿದು ಸಾಕಿರಿ. ಬೇಕಾಗುವ ಹಾಲಿನ ಖರ್ಚಿಗೆಂದು ಲಕೋಟೆಯ ಒಳಗಿರುವ ಒಂದು ಸಾವಿರ ರೂಪಾಯವನ್ನು ಬಳಸಿಕೊಳ್ಳಿ. ಮನಿಯಾರ್ಡರ್‌ನಲ್ಲಿ ಆಗೀಗ ನಿಮಗೆ ಮಗು ಸಾಕಲು ಬೇಕಾದ ಹಣ ಬರುತ್ತಿರುತ್ತದೆ. ಸಂಕೋಚಪಡುವುದು ಬೇಡ. ಗ್ಲಾಕ್ಸೋ ಹಾಲನ್ನು ಮಾಡುವುದು ಹೇಗೆ’.

ಹಾಲನ್ನು ಯಾವ ಬಿಸಿಯಲ್ಲಿ, ಹೇಗೆ ಕಲಿಸಬೇಕು, ಯಾವ ಬಿಸಿಯಲ್ಲಿ ಕುಡಿಸಬೇಕು ಇತ್ಯಾದಿ ಬರೆದುಕೊನೆಯಲ್ಲಿ ಈ ಒಕ್ಕಣೆಯಿತ್ತು:

‘ನಾನು ಈ ಮಗುವಿನ ತಾಯಿ. ಒಂದು ತಿಂಗಳ ಹಿಂದೆ ಹಸ್ತಾ ನಕ್ಷತ್ರದಲ್ಲಿ ತ್ರಯೋದಶಿ ದಿನ ಹುಟ್ಟಿದ ಈ ಮಗುವನ್ನು ಕಾಪಾಡಲು ದಯಾವಂತರಾದ ನಿಮಗೆ ಕೊಡುತ್ತಿದ್ದೇನೆ. ಕೂಸಿನ ತಾಯಿ ಕಷ್ಟದಲ್ಲಿದ್ದಾಳೆಂದು ಮನ್ನಿಸಿ ಈ ಕೂಸನ್ನು ನೀವು ಸಾಕಬೇಕೆಂದು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ’.

ಪತ್ರ ಓದಿ ಮುಗಿಯುವುದರಲ್ಲೇ ಅಕ್ಕು ಕಾಲು ಮಡಿಸಿ ಕೂತು ಮಗುವಿಗೆ ಬಾಟಲಿನ ಹಾಲನ್ನು ಕುಡಿಸಲು ಶುರುಮಾಡಿಬಿಟ್ಟದ್ದಳು. ‘ಮೊಲೆಯ ಅಭ್ಯಾಸವೇ ಇಲ್ಲವೆಂದು ಕಾಣುತ್ತೆ’ ಎಂದು ಮಗು ಆಸೆಯಾಗಿ ಬಾಟಲಿನಿಂದ ಹಾಲು ಕುಡಿಯುವುದನ್ನು ಸುಖಪಡುತ್ತ ನೋಡಿದಳು.

ಮಗು ಹಾಲು ಕುಡಿದು ಮುಗಿದದ್ದೇ ಅಕ್ಕು ಏಣಿ ಹತ್ತಿ ನಾಗಂದಿಗೆಯಿಂದ ತನ್ನದೊಂದು ಚೆಲ್ಲವನ್ನು ಹುಡುಕಿ ತಂದಳು. ಮಲಯಾಳ ದೇಶದಿಂದ ಗೌರಿಯ ಸೊಗಸುಗಾರ ತಂದೆ ಎಂದೋ ತಂದದ್ದು ಅದು. ಧೂಳು ಕೊಡವಿ ಅದರ ಮುಚ್ಚಳ ತೆಗೆದಳು. ಅದರಿಂದ ಜಾಯಿಕಾಯಿ, ಬಜೆ, ಗೋರೋಚನ ಇತ್ಯಾದಿ ಮಕ್ಕಳ ಔಷಧಿಗಳನ್ನು ಹೊರಗೆ ತೆಗೆದು ದೇವರ ಮನೆಯಲ್ಲಿದ್ದ ಅವರ ಪೂರ್ವ ಕಾಲದ ಏಕಮಾತ್ರ ಬೆಳ್ಳಿಯ ತಟ್ಟೆಯ ಮೇಲೆ ಜೋಡಿಸಿದಳು. ಗಂಗೆ ಗೌರಿಯರು ಮಕ್ಕಳಾಗಿದ್ದಾಗ ಬಳಸಿದ್ದ ಬೆಳ್ಳಿಯ ಒಳಲೆಯನ್ನು ತಿಕ್ಕಿ ತೊಳೆದು ಶುಭ್ರ ಮಾಡಿದಳು.

‘ಡಬ್ಬಿಯ ಹಾಲನ್ನು ಕುಡಿಸಲು ಇದೇನು ಆಸ್ಪತ್ರೆಯೋ’ ಎಂದು ಯಾರನ್ನೋ ಬಯ್ಯುವಂತೆ ಅಂದು, ಗ್ಲಾಕ್ಸೋ ಡಬ್ಬಗಳನ್ನು ಕಷ್ಟಕಾಲಕ್ಕಿರಲಿ ಎಂದು ನಾಗಂದಿಗೆ ಮೇಲೆ ಜೋಡಿಸಿಟ್ಟು ‘ನಮ್ಮ ಕೌಲಿಯ ಹಾಲಿಗಿಂತ ಹೆಚ್ಚೇನುಬೇಕು ಮಗುವಿಗೆ’ ಎಂದು ಗಟ್ಟಿಯಾಗಿ ತನಗೇ ಎನ್ನುವಂತೆ ಹೇಳಿಕೊಂಡು ಗೌರಿಯನ್ನು ಗದರಿಸಿದಳು. ‘ಏನು ನೋಡ್ತ ಸುಮ್ಮನೆ ನಿಂತು ಬಿಟ್ಟಿದೀಯಲ್ಲ. ಹಾಲು ಕರೆಸಿಕೊಂಡು ಬಂದು ಕಾಯಿಸಿಡು’. ಬಲು ಸಡಗರದಲ್ಲಿ ಹುಟ್ಟಿದ ಅಪ್ಪಣೆಯಂತೆ ಕಂಡ ಅಕ್ಕುವಿನ ಮಾತನ್ನು ತಕ್ಷಣ ಪಾಲಿಸುವವಳಂತೆ ಗೌರಿ ಮುಗುಳ್ನಕ್ಕು, ಕೇಶವನನ್ನು ನೋಡಿ ಕಣ್ಣು ಮಿಟುಕಿಸಿ ಚೊಂಬು ತೆಗೆದುಕೊಂಡು ಹಾಲು ಕರೆಯಲು ಕೊಟ್ಟಿಗೆಗೆ ಹೋದಳು.

ಇತ್ತ ಕೇಶವ ತನ್ನ ಸ್ನಾನ ಸಂಧ್ಯಾವಂದನೆ ಮರೆತಂತೆ ಕಂಡಿತು. ಮಗುವನ್ನು ನಗಿಸಲು ಪ್ರಯತ್ನಿಸುತ್ತ ಕೋತಿಯ ಹಾಗೆ ನಟಿಸಲು ತೊಡಗಿದ್ದ. ಹಾಲು ಕರೆದುಕೊಂಡು ಬಂದ ಗೌರಿ ಮಾವ ಮಾಡುವ ಮೂತಿಗಳನ್ನು ಕಂಡು ನಗತೊಡಗಿದಳು. ಹಾಲನ್ನು ಕಂಚಿನ ಪಾತ್ರೆಯಲ್ಲಿ ಕಾಯಿಸಿ ಆರಲು ಇಟ್ಟಳು. ಅಕ್ಕುವಿಗೆ ಮಗುವಿನ ಹಾಲಿನದೇ ಯೋಚನೆ:

‘ನೀವೆಲ್ಲ ಏನು ಬಾಟಲೀಲಿ ಹಾಲು ಕುಡಿದು ಬೆಳೆದವರ? ಬಾಟಲೀಲಿ ಕುಡಿಸಿದರೆ ಮಗು ಹೊಟ್ಟೇಲಿ ಗಾಳಿ ತುಂಬಿಕೊಳ್ಳತ್ತೆ. ಮಕ್ಕಳಿಗೆ ಒಳಲೆಯಿಂದ ಹಾಲು ಹುಯ್ಯೊದೇ ಸೈ – ಬೆಳ್ಳಿಯ ಒಳಲೆಯನ್ನು ಪರೀಕ್ಷಿಸುತ್ತ ಅದನ್ನು ಮೆಚ್ಚಿ ಹೇಳಿದಳು:

‘ನೀವು ಕುಡಿದು ಬೆಳೆದ ಈ ಒಳಲೆ ಇನ್ನು ಈ ಪಾಪನಿಗೆ. ಏ ಕೇಶವ ಜೋಯಿಸ, ಮಗುವಿಗೊಂದು ಪ್ರಶಸ್ತವಾದ ಹೆಸರಿಡೊ. ಹಸ್ತಾ ನಕ್ಷತ್ರದಲ್ಲಿ ತ್ರಯೋದಶಿ ದಿನ ಹುಟ್ಟಿದ್ದಂತೆ. ಎಷ್ಟು ಹೊತ್ತಿಗೂ ಹೇಳಿಲ್ಲ.’

ಕೇಶವ ಪಂಚಾಂಗ ತಂದು ಎಣಿಸುತ್ತ ಕಣ್ಣು ಮುಚ್ಚಿ ಕೂತಿದ್ದು,

‘ಗುಂಡಾಭಟ್ಟ’ ಎಂದ.

ತಮ್ಮಯ್ಯನ ತುಂಟತನ ಅರ್ಥವಾಗಿ, ‘ಹಳೇ ಕಾಲದ ಗೊಡ್ಡು ಹೆಸರು ಬೇಡ. ಇವನು ಚಂದ್ರವದನ’ ಎಂದಳು.

‘ಪ್ರಶಸ್ತವಾದ ಹೆಸರು. ನಕ್ಷತ್ರಕ್ಕೂ ಸರಿಹೋಗತ್ತೆ’ ಎಂದು ಕೇಶವ ಪಂಚಾಂಗ ಮುಚ್ಚಿದ.

ಒಂದು ಗಂಟೆ ಕಳೆದ ಮೇಲೆ, ಗೌರಿ ಕಾಯಿಸಿಟ್ಟ ಹಾಲನ್ನು ಅಕ್ಕು ಮತ್ತೆ ಕಾಯಿಸಿ, ಮಗು ಬಂದ ಪುಣ್ಯಕ್ಕೆಂದು ಉಕ್ಕಿಸಿ, ಆರಿಸಿ, ಅದಕ್ಕೆ ಕೊಂಚ ಕಾದಾರಿದ ನೀರು ಬೆರೆಸಿ, ಒಂದುಬಟ್ಟಲಿನಿಂದ ಇನ್ನೊಂದಕ್ಕೆ ಸುರಿದು ನೊರೆ ಮಾಡಿ, ಹದಮಾಡಿ, ಕಾಲು ಚಾಚಿ ಕೂತಳು. ಕೈಕಾಲು ಬಡಿಯುತ್ತ ಆರೋಗ್ಯವಾಗಿದ್ದ ಮಗುವನ್ನು ಕಾಲಿನ ಮೇಲೆ ಮಲಗಿಸಿಕೊಂಡು ಅದರ ಕಣ್ಣು ಕಿವಿ ಮೂಗು ತಲೆಗೂದಲು ಹುಬ್ಬುಗಳನ್ನು ಮೆಚ್ಚಿಕೊಳ್ಳುತ್ತ ನೋಡಿದಳು. ತನ್ನ ದೃಷ್ಟಿಯಾಗದಿರಲೆಂದು ಮನಸ್ಸಿನಲ್ಲೇ ಮಗುವಿಗೆ ದೃಷ್ಟಿ ಸುಳಿಯುವ ಮಾತುಗಳನ್ನು ಹೇಳಿಕೊಂಡಳು.

‘ಒಳಲೆ ತಾ, ಹಾಲನ್ನೂ ತಾ’ ಎಂದು ಗೌರಿಗೆ ಅಪ್ಪಣೆ ಮಾಡಿದಳು. ಬಾಯಿ ಕಳಿಸಿ ಒಳಲೆಯಿಂದ ಹಾಲು ಸುರಿದರೆ ಕೂಸು ಉಗುಳಿಬುಡುವುದೆ? ‘ಹೊಟ್ಟೆ ಸ್ವಲ್ಪ ಕಾಯಲಿ, ಒಳಲೇಲಿ ಯಾಕೆ ಕುಡಿಯಲ್ಲ ನೋಡ್ತೀನಿ’ ಎಂದು ಚಂದ್ರವದನನನ್ನು ಗೌರಿಯ ತೊಡೆಮೇಲೆ ಮಲಗಿಸಿ ಒಳಗೆ ಹೋದಳು.

ತಾನಿನ್ನೂ ಸ್ನಾನ ಮಾಡಿಲ್ಲವೆಂಬುದನ್ನು ಮರೆತು ದೇವರಿಗೆ ಇನ್ನೊಂದು ದೀಪ ಹಚ್ಚಿದಳು. ‘ಬಂಗಾರದ ಬಳೆ ತೊಡಿಸುತ್ತೇನೆ ತಾಯಿ, ಈ ಮಗುವನ್ನು ರಕ್ಷಿಸು’ ಎಂದು ಮೂಕಾಂಬಿಕೆಗೆ ಹರಕೆ ಹೇಳಿಕೊಂಡಳು. ಲಕೋಟೆಯಲ್ಲಿದ್ದ ಹಣವನ್ನುದೇವರ ಎದುರಿಟ್ಟಳು. ಕೇಶವನನ್ನು ಕರೆದು ಹೇಳಿದಳು:

‘ಮಗೂನ್ನ ಸಾಕೋಕೆ ದುಡ್ಡು ತಗಳ್ಳೋಕೆ ನಾವೇನು ಪರದೇಸಿಗಳ? ಈ ಲಕೋಟೆಯಲ್ಲಿರೋ ಹಣದಿಂದ ಬಂಗಾರದ ಬಳೆ ಮಾಡಿಸಿ ಮೂಕಾಂಬಿಕೆಗೆ ಕಳಿಸು. ತಾಯಿ ಪಾಪಾನೂ ಪರಿಹಾರವಾಗತ್ತೆ; ಮಗೂಗೂ ಒಳ್ಳೇದಾಗತ್ತೆ’.

ದೇವರ ಮನೆಯಿಂದ ಹೊರಬಂದು ಮಗುವನ್ನು ತಾನೇ ಎತ್ತಿಕೊಂಡಳು. ಬಚ್ಚುಬಾಯಲ್ಲಿ ಮಗು ನಕ್ಕಂತೆ ತೋರಿತು. ಒಳಲೆಯಿಂದ ಚೂರು ಹಾಲನ್ನೂ ಕುಡಿಯಿತು.

ಥಟ್ಟನೇ ಸುಮ್ಮನಾಗಿಬಿಟ್ಟಂತೆ ಕಂಡ ಮಗು ಉಚ್ಚೆ ಹೊಯ್ದಿರಬೇಕು. ಅಕ್ಕುಗೆ ಹಿತವಾಗಿ ತನ್ನ ತೊಡೆ ಬಿಸಿಬಿಸಿಯಾದಂತೆನಿಸಿತು. ಇನ್ನು ತನ್ನ ಮಡಿ ಮೈಲಿಗೆಯೆಲ್ಲ ಅಟ್ಟಹತ್ತಿದಂತೆ ಎಂದುಕೊಂಡು ತನ್ನಷ್ಟಕ್ಕೆ ನಕ್ಕಳು. ಗೌರಿಗೂ ಇದು ಅರ್ಥವಾಗಿ ಅವಳೂ ನಕ್ಕಳು. ಮಗುವನ್ನು ಒರೆಸಲು ಒಂದು ಒಣಗಿದ ಬೈರಾಸವನ್ನು ತಂದಳು.

ಈ ಮಗು ಎಲ್ಲಿಯದು, ಹೇಗೆ ಇಲ್ಲಿಗೆ ಬಂತು, ಯಾವ ಜಾತಿಯ ಮಗು – ಯಾವುದೂ ಅಕ್ಕುವನ್ನು ಭಾದಿಸಿರಲಿಲ್ಲ.ಒಂದೇ ಒಂದು ಸಲ ಕೃಷ್ಣಶಾಸ್ತ್ರಿಗಳು ಹೇಳಿದ್ದನ್ನು ನೆನೆದಳು. ಗೌರಿಗೆ ಮುದುವೆಯಾಗಿ ಮಗುವಾಗುತ್ತೆ ಎಂದು ಅವರು ಹೇಳಿದ್ದು ಎಂದು ನಾನು ತಿಳಿದುಕೊಂಡಿದ್ದೆ – ಎಂದಷ್ಟೇ ತನಗೇ ಅಂದುಕೊಳ್ಳುವಂತೆ ಅಂದು, ಅವಳು ಸುಮ್ಮನಾಗಿದ್ದಳು.

ಬಚ್ಚಲೊಲೆಯ ಮುಂದೆ ಪ್ರತ್ಯಕ್ಷವಾದದ್ದು ತನ್ನಲ್ಲಿ ಹುಟ್ಟಿಸಿದ ಬೆರಗನ್ನು ಮತ್ತೆ ಮತ್ತೆ ಕೇಶವನ ಬಾಯಿಂದ ಕೇಳೀ ಸುಖಿಸುವಳು. ಕರ್ಣನನ್ನು ಸೂತ ನದಿ ದಂಡೆಯಮೇಲೆ ಕಂಡ  ಪ್ರಸಂಗವನ್ನು ಹಾವಭಾವಯುಕ್ತವಾಗಿ ಕೇಶವ ಪಠಿಸುವನು:

‘ಅಕ್ಕು ಕೇಳು, ಕುಂತಿ ಅವಳ ಮಗುತನದಲ್ಲಿ ಬೊಂಬೆಯಾಟಕೆ ಮಗುವನೇ ತಹೆನೆಂದು, ಲೋಹಿತಾಂಬರವನ್ನು ಉಟ್ಟು, ಮುನಿ ಕೊಟ್ಟ ಮಂತ್ರವನ್ನು ರಾಗರಸದಲ್ಲಿ ನಾಲಗೆಗೇ ತಂದಳು ಎನ್ನುತ್ತಾನೆ ಕುಮಾರವ್ಯಾಸ. ಅಷ್ಟು ಅವಸರ ಈ ಪೋರಿಗೆ. ಆಗ ಸೂರ್ಯದೇವ ಬಂದೇ ಬಿಟ್ಟಾ… ಪೋರಿಗೆ ಕಿರಣ ಲಹರಿಯ ಹೊಯ್ಲಿನಲ್ಲಿ ದಿಕ್ಕು ತೋರದಾಗಿ ಬಿಟ್ಟಿತು. ಭಯದಲ್ಲಿ ಸೂರ್ಯದೇವನಿಗೆ ಬಿಜಯಂಗೈಯಿರಿ ಎಂದು ಬೇಡಿಕೊಂಡಳು. ಮುನಿಮಂತ್ರದ ಶಕ್ತಿಯೊಂದುಕಡೆ, ದೈವಲೀಲೆಯ ಸಂಕಲ್ಪವೊಂದು ಕಡೆ ಸೂರ್ಯನಿಗೂ ಅದನ್ನು ಧಿಕ್ಕರಿಸುವುದು ಸಾಧ್ಯವೆ? ಕನ್ನಿಕೆಯನ್ನು ಅವನು ಮುಟ್ಟಿಯೇ ಬಿಟ್ಟಾ… ಅವನ ತೂಕದ ಮಗುವೊಂದನ್ನು ಪೋರಿಗೆ ಕೊಟ್ಟೇಬಿಟ್ಟಾ…. ಅವಳ ಮುನ್ನಿನ ಕನ್ನೆತನವನ್ನು ಕೆಡದಂತೆ ಅವಳಿಗೆ ಅನುಗ್ರಹಿಸಿ ಬಿಟ್ಟಾ. ಮತ್ತೆ ಆಕಾಶದ ನಮ್ಮ ಈ ಸೂರ್ಯನೇ ಆಗಿಬಿಟ್ಟ. ಆಮೇಲೆ ಕುತೂಹಲಕ್ಕಾಗಿ ಕಂದನನ್ನ ಹುಟ್ಟಿಸಿಕೊಂಡುಬಿಟ್ಟ ಕನ್ನಿಕೆಯನ್ನ ಹೇಗೆ ವರ್ಣಿಸುತ್ತಾನೆ ಈ ನಮ್ಮಕವಿ, ಕೇಳು. ವೇದವ್ಯಾಸರು ಇದನ್ನ ಹೇಗೆ ವರ್ಣಿಸ್ತಾರೆ ನೋಡಬೇಕೇ ಅಕ್ಕು. ಅವರೂ ಕರ್ಣನ ಹಾಗೆ ಸದ್ಯೋಜಾತರೇ ಅಲ್ಲವ? ಮಹಾಭಾರತದ ಕವಿಯೂ ಅವರೇ, ಮುಖ್ಯ ಪಾತ್ರಗಳಲ್ಲಿ ಒಬ್ಬರಾದವರೂ ಅವರೇ. ಅವರ ತಾಯಿಯೋ ಬೆಸ್ತರವಳು, ಕರ್ಣನ ತಾಯಿಯೋ ಕ್ಷತ್ರಿಯಳು. ಅಲ್ಲವೆ? ಅದಕ್ಕೇನೇ, ಕುಲದ ಸಿರಿಗೆ ಕಳಂಕವಾಗಿ ಕಂಡೀತಲ್ಲ ಎಂಬ ಆಳುಕಿನಲ್ಲಿ, ಜನದಪವಾದದ ಭೀತಿಯಲ್ಲಿ , ಆದರೆ ಸೂರ್ಯತೇಜದ ಮಗುವಿನ ದರ್ಶನದ ಬೆರಗಿನಲ್ಲಿ ಇದ್ದ ಕನ್ನಿಕೆ ಗಂಗಾಜಲದೊಳಗೆ ಮಗುವನ್ನು ಹಾಕಿಬಿಟ್ಟಳಂತೆ. ಸದ್ಯೋಜಾತರಾದ ವೇದವ್ಯಾಸರೋ ಕಮಂಡಲ ಹಿಡಿದೇ ಹುಟ್ಟಿ, ಬೇಕಾದಾಗ ಕರಿ ನನ್ನ ಅಂತ ತಾಯಿಗೆ ಹೇಳಿ, ನಡದೇ ಬಿಟ್ಟವರು. ಕುಮಾರವ್ಯಾಸ ಹೇಳೋದು ಹೀಗೆ: ತಾಯಿಯೇ ಬಲ್ಲಂದದಲಿ ಈ ಮಗುವನ್ನು ಕಾಪಾಡು, ಅಥವಾ ಕೊಲ್ಲು ಎಂದು ಗಂಗೆಯ ಮಡುವಿನಲ್ಲಿ ಕಮಲದಳಾಯತಾಕ್ಷಿ ಕುಮಾರನನ್ನ ಹಾಕಿ ನಡೆದುಬಿಟ್ಟಳೂ, ಅಂತ. ಆಯಿತಾ, ಆಮೇಲೆ ಕೇಳು. ನಮ್ಮ ಕುಮಾರವ್ಯಾಸ ಮಗುವನ್ನು ವರ್ಣಿಸುವ ಸ್ವಾರಸ್ಯವನ್ನ. ಮರಳರಾಶಿಯ ಮೇಲೆ ಕಾಲಲ್ಲಿ ಮರಳನ್ನ ಒದೀತ, ಕೈಗಳನ್ನ ಕೊಡಹುತ, ಭೋಯೆಂದು ಒದರುತ ರವಿಯನೀಕ್ಷಿಸುತ ಇದ್ದನಂತೆ ಈ ಶಿಶುಗಳ ಅರಸ. ಆಕಾಶದಲ್ಲಿ ಹುಟ್ಟಿಸಿದ ನಾಥ; ಕೆಳಗೆ ನದಿಯ ದಂಡೆಯ ಮರಳಿನ ಮೇಲೆ ಈ ಅನಾಥ. ಇದನು ಕಂಡನು, ಅಂದರೆ ಅನಾಥ ಶಿಶುವನ್ನು ಕಂಡನು, ಮುದದ ಮದದಲಿ ಸೂತನೊಬ್ಬನು, ಎನ್ನುತ್ತಾನೆ, ಈ ನಮ್ಮನಾರಣಪ್ಪ, ಗದುಗಿನ ವೀರನಾರಾಯಣನ ಕಿಂಕರ. ಅಲ್ಲಾ – ಅವನು ಹೇಳೋದು, ಇದನು ಕಂಡನು ಸೂತನೊಬ್ಬನು/ಮುದದ ಮದದಲಿ ತನ್ನ ಮರೆದುಬ್ಬಿದನು. ಹೇಗೆ? ಇದೆತ್ತಣ ನಿಧಿಯೊ ಸಿವ ಶಿವ ಎಂದು, ತನ್ನನ್ನು ಮರೆದು, ಉಬ್ಬಿ, ನಿಧಿಯೆಂದು ಸೂತ ಕಂಡದ್ದಂತೆ. ಕಂಡದ್ದು ಏನು? ತರಣಿ ಬಿಂಬದ ಮರಿಯೊ! ಕೌಸ್ತುಭ ವರಮಣಿಯ ಖಂಡದ ಕಣಿಯೊ! ಮರ್ತ್ಯರಿಗೆ ಮಗು ಇವನಲ್ಲ. ಇವನನ್ನು ಇರಿಸಿ ಹೋದ ತಾಯಿ ಯಾರೋ! ಹರ ಹರ ಮಹದೇವಾ ಅವಳು ನಿರ್ಮೋಹಿಯೇ ಇರಬೇಕು ಅಂತ ಸೂತ ಅಂದುಕೊಂಡ ಅಂತ ಕುಮಾರವ್ಯಾಸ ಹೇಳೋದು’.

ಕೊನೆಯ ಮಾತು ಅಕ್ಕುಗೆ ಒಪ್ಪಿಗೆಯಾಗುವುದಿಲ್ಲ. ‘ಕವಿಗಲ್ಲ, ಸೂತನಿಗೆ ಹಾಗೆ ಅನ್ನಿಸಿದ್ದೇ ಅಕ್ಕು’ ಎಂದು ಕೇಶವ ಮತ್ತೆ ವಿವರಿಸುವನು.

ಅಕ್ಕು ಚಾಚಿದ ತನ್ನ ಕಾಲಿನ ಮೇಲೆ ಮಲಗಿದ ಮಗುವನ್ನು ಸವರಿ ನೆಟ್ಟಿಗೆ ಮುರಿಯುತ್ತಾಳೆ.

* * *

ಅವರದೊಂದು ಒಂಟಿ ಬ್ರಾಹ್ಮಣ ಮನೆಯಾದ್ದರಿಂದ ಈ ಕೂಸಿನ ಬಗ್ಗೆ ಯಾರೂ ತಲೆಹಾಕಿ ಮಾತಾಡಲು ಬಂದಿರಲಿಲ್ಲ. ಪಕ್ಕದ ಊರಿನ ಸಾಹುಕಾರರಂತೂ ಶುಶ್ರೂಷೆಗೆಂದು ಬೆಂಗಳೂರು ಸೇರಿದ್ದರಿಂದ, ಈಚೆಗೆ ಅವರಿಗೆ ಕಣ್ಣು ಸಹ ಕಾಣದ್ದರಿಂದ ಅವರ ಕಡೆಯಿಂದ ಯಾವ ಪ್ರಶ್ನೆಯೂ ಏಳುವಂತಿರಲಿಲ್ಲ.

ಅಲ್ಲದೆ ಈಗ ವೈವಾಟೆಲ್ಲವೂ ವಿಧವೆಯಾಗಿ ಮನೆಸೇರಿದ ಸಾಹುಕಾರರ ಮಗಳದು, ಕೇಶವ ಅವಳ ಕಣ್ಣಿಗೆ ಬೀಳುವುದೇ ಅಪರೂಪ. ಎಲ್ಲೋ ಇರುತ್ತಾಳೆ. ಬೆಂಗಳೂರಲ್ಲೋ ಶಿವಮೊಗ್ಗದಲ್ಲೋ ಹೋಗಿ ಏನೇನೋ ಓದಿಬಂದಿದ್ದಾಳೆ. ಅವಳು ಎಲ್ಲ ಹುಡುಗಿಯರಂತೆ ಸೀರೆಯುಟ್ಟು ಕುಂಕುಮವಿಡುತ್ತಾಳೆ; ಎಲ್ಲ ಒಡವೆ ಹಾಕಿಕೊಳ್ಳುತ್ತಾಳೆ. ಇದು ಅವಳ ತಂದೆಯ ಇಚ್ಛೆಮೇಲೆ – ಎಂದೆಲ್ಲ ಮಾತು ಕೇಶವ ಕೇಳಿಸಿಕೊಂಡಿದ್ದಾನೆ.

ಅವಳ ವೈವಾಟು ಶುರುವಾದ ಮೇಲೆ ಕೇಶವನ ಸಂಬಳ ಇದ್ದಕ್ಕಿಂದ್ದಂತೆ ಎರಡರಷ್ಟಾಗಿದೆ, ಅವನು ಬಯಸದೆ. ಇದು ಅವನಿಗೆ ಆಶ್ಚರ್ಯ. ಮನೆಗೆ ಈ ಸಾರಿ ಹೆಂಚು ಹೊದೆಸುವುದು ಸುಲಭವಾಯಿತು ಎಂದಷ್ಟೇ ಅವನಿಗೆ ಹೆಚ್ಚಾದ ವರಮಾನದಿಂದ ಸಿಕ್ಕ ಸಂತೋಷ. ಮಗುವಿಗಾಗಿ ಇನ್ನೊಂದು ಕರೆಯುವ ಹಸುವನ್ನು ಕೊಳ್ಳಬಹುದೆಂದು ಅಕ್ಕುಗೆ ಸಂತೋಷ.

ಸಾಹುಕಾರರ ಕೊಟ್ಟಿಗೆಯಲ್ಲಿ ಹೆಚ್ಚಾದ ಹಸುಗಳನ್ನು ಪೇಟೆಯವರಿಗೆ ಮಾರುವುದುಂಟು. ವ್ಯವಸಾಯದಲ್ಲಿ ಈ ಪ್ರಾಂತ್ಯದಲ್ಲೆಲ್ಲ ತುಂಬ ಆಧುನಿಕರಾದ ಸಾಹುಕಾರರು ಹುಬ್ಬಳ್ಳಿಯಿಂದ ಹೊಸರಾಸುಗಳನ್ನು ತಂದು ಕೊಟ್ಟಿಗೆಯನ್ನು ಬೆಳೆಸಿದ್ದಾರೆ. ಶಿವಮೊಗ್ಗಕ್ಕೂ ತೀರ್ಥಹಳ್ಳೀಗೂ ಅವರು ಬಸ್ಸಿನಲ್ಲಿ ಹಾಲು ಕಳಿಸುತ್ತಾರೆ. ಅವರನ್ನು ಕೇಳಿಕೊಂಡರಾಯಿತು. ಎಂದು ಅಕ್ಕು ಯಾರಿಗೂ ಹೇಳಿದ್ದು ಸಾಹುಕಾರರ ಮಗಳ ಕಿವಿಗೆ ಬಿದ್ದು ಅವಳೇ ಒಂದು ಒಳ್ಳೆಯ ಜಾತಿಯ ಹಸುವನ್ನು ಅಕ್ಕು ಕೊಟ್ಟಿಗೆಗೆ ಕಳಿಸಿ, ಆಳಿನ ಹತ್ತಿರ ಸದ್ಯ ದುಡ್ಡುಕೊಡುವುದು ಬೇಡ, ತಂದೆಯವರು ಬಂದ ಮೇಳೆ ಕೊಟ್ಟರಾಯಿತು ಎಂದು ಹೇಳಿ ಕಳಿಸಿದ್ದಳು.

ಅಕ್ಕು ಅವಳನ್ನು ಮನಸ್ಸಿನಲ್ಲೇ ಹರಸಿದಳು. ಅಪ್ಪನ ಮುದ್ದಿನ ಮಗಳು ಈ ವಿಮಲ. ಮಂಗಳೂರಿನಲ್ಲಿ ಈ ವಿಮಲಳಿಗೆ ಸಂಬಂಧವಾದ್ದು. ಅಲ್ಲಿಯ ಒಬ್ಬ ದೊಡ್ಡ ಸಾಹುಕಾರರ ಮಗನಿಗೆ, ಅವನು ಒಬ್ಬನೇ ಮಗ, ಆಸ್ತಿಗೆಲ್ಲ ಹಕ್ಕುದಾರ – ಅನ್ನೋ ಆಸೇಲಿ ಕೊಟ್ಟು ಮದುವೆಮಾಡಿದ್ದು. ವಿಮಲಳಿಗೆ ಆಗಿನ್ನೂ ಹದಿನೇಳು ತುಂಬಿರಲಿಲ್ಲ. ಮದುವೆಯಾಗಿ ಒಂದು ವರ್ಷದಲ್ಲೇ ಹುಡುಗ, ಅದೇನೋ ಜ್ವರವಂತಲ್ಲ, ಏರತ್ತಂತೆ ಇಳಿದಹಾಗೆ ಆಗತ್ತಂತೆ, ಆದರೆ ಬಿಡೋದೇ ಇಲ್ವಂತಲ್ಲ, ಆ ಜ್ವರ ಆಗಿ, ಆ ಹುಡುಗ, ಪ್ರಸ್ತಕ್ಕಿಂತ ಮುಂಚೇನೇ ಸತ್ತ. ಮಗಳು ಅಪ್ಪನ ಮನೆ ಸೇರಿದಳು.

ಚಿಕ್ಕ ಹುಡುಗಿ, ಮನೆಯಲ್ಲಿ ಕೂತೇನು ಮಾಡವುದು ಎಂದು ಅಪ್ಪ ಮಗಳನ್ನು ಓದಿಸಿದರು. ಗಂಡ ಸತ್ತಿದ್ದರಿಂದ ಏಣೂ ಕಡಿಮೆಯಾಗಿಲ್ಲ ಎನ್ನುವಂತೆ ನೋಡಿಕೊಂಡರು.

ಅವಳ ಅಣ್ಣ, ಘನಶ್ಯಾಮ ಕಾಶಿಯಲ್ಲಿ ತಂದೆಯಂತೆಯೇ ಓದಿ, ಬಂಗಾರದ ಪದಕ ಪಡೆದು ಈಗ ಯಾವುದೋ ಫರಂಗಿಜನರ ದೇಶದಲ್ಲಿ ಓದುತ್ತಿದ್ದಾನಂತೆ. ತನ್ನ ತಂಗಿ ಇನ್ನೊಂದು ಮದುವೆಯಾಗಲೆಂದು ಅವನ ಹಠವಂತೆ. ಅವನು ಎಲ್ಲ ಅಪ್ಪನಂತೆಯೇ, ಇನ್ನೂ ಒಂದು ಹೆಜ್ಜೆ ಮುಂದೆ ಎನ್ನಲೂ ಬಹುದು; ಫರಂಗಿಗಳ ದೇಶದಲ್ಲಿ ಓದುತ್ತಿರೋದು ಅಲ್ಲವ?

ಇಂಥ ವಿವರಗಳೆಲ್ಲ ಹೆಚ್ಚಾಗಿ ತಿಳಿದಿರುವುದು ಅಕ್ಕುಗೆ ಮಾತ್ರ; ಮನೆಯ ಹಿತ್ತಲಲ್ಲಿ ಅವಳು ಮಾಡುವ ಸಂಗ್ರಹ ಅದು. ಆಳು ಹೆಣ್ಣುಮಕ್ಕಳ ಮುಖೇನ. ತನ್ನ ಕಿವಿಗೆ ಬಿದ್ದ ಸುದ್ದಿಗಳನ್ನು ಅಕ್ಕು ಎರಡು ಮೂರು ಹೆಂಗಸರಿಂದ ಪಡೆದು ತಿದ್ದಿ ಪರಿಷ್ಕರಿಸಿಕೊಂಡಿರುತ್ತಾಳೆ. ಅವಳಾಗಿ ಎಂದೂ ಸಾಹುಕಾರರ ಮನೆಗೆ ಹೋದದ್ದಿಲ್ಲ. ವಿಮಲಳನ್ನು ಒಮ್ಮೆ ಮಾತ್ರ ನೋಡಿದ್ದಿದೆ.

ಅತ್ಯಂತ ಅಪರೂಪದ ಭೇಟಿಯಿದು. ಆಳು ಮಕ್ಕಳು ಈಗಲೂ ಆ ಬಗ್ಗೆ ಮಾತಾಡುತ್ತಾರೆ. ಕೇಶವ ಒಮ್ಮೆ ಕನ್ನಡಾ ಜಿಲ್ಲೆಯ ಪ್ರಸಿದ್ಧ ಅರ್ಥಗಾರರಾದ ನಾರಾಯಣ ತಂತ್ರಿಗಳು ತೀರ್ಥಹಳ್ಳಿಗೆ ಯಾವುದೋ ಮದುವೆ ನಿಮಿತ್ತವಾಗಿ ಬರುವರೆಂಬ ಸುದ್ದಿಯನ್ನು ಪುಟ್ಟೇಗೌಡನಿಂದ ತಿಳಿದು, ಅವನೇ ಖುದ್ದಾಗಿ ಪುಟ್ಟೇಗೌಡನ ಜೊತೆಯೇ ಹೋಗಿ ಅವರನ್ನು ಮನೆಗೆ ಬರಮಾಡಿಕೊಂಡು, ನಳೋಪಖ್ಯಾನದ ಪ್ರಸಂಗವನ್ನು ಇಟ್ಟುಕೊಂಡದ್ದನ್ನು ತಿಳಿದೇ ಸಾಹುಕಾರರು ಸೀದ ಬಂದುಬಿಟ್ಟಿದರು – ಹೇಳದೆ, ಕೇಳದೆ, ಅವರ ಜೀಪಲ್ಲಿ. ಕುಚೇಲನ ಮನೆಗೇ ಕೃಷ್ಣ ಬಂದಂತೆ. ಅವರನ್ನು ಮನೆಗೆ ಕರೆಯಲು ಕೇಶವನಿಗೆ ಮುಜುಗರವಾಗಿತ್ತು. ಆದರೂ ದಣಿ ಬಂದು, ಪಾದರಕ್ಷೆಯನ್ನು ಹೊರಗೆ ಬಿಟ್ಟು, ಅವರ ಬೆಳ್ಳಿಯ ಕಟ್ಟಿನ ನಾಗರಬೆತ್ತವನ್ನು ಮೂಲೆಯಲ್ಲಿಟ್ಟು ಎಲ್ಲರಂತೆ ಚಾವಡಿಯಲ್ಲಿ ಕೂತೇಬಿಟ್ಟರು. ಆಗ ರೇಷ್ಮೆ ಸೀರೆಯುಟ್ಟು ಕುಂಕುಮ ಹಚ್ಚಿಕೊಂಡ ಮಗಳನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದಳು. ಅವಳೂ ಹೆಂಗಸರ ಜೊತೆ ಕೂರದೆ ಅಪ್ಪನ ಪಕ್ಕವೇ ಕೂತಳು. ಅಕ್ಕು ಗಲಿಬಿಲಿಗೊಂಡು ಅಪ್ಪ ಮಗಳನ್ನು ಊಟ ಮನೆಗೆ ಕರೆದು ಮಣೆಹಾಕಿ ಕೂರಿಸಿ, ಗೌರಿಯಿಂದ ಕಾಫಿ ಮಾಡಿಸಿ, ಅವಲಕ್ಕಿ ಉಪ್ಪಿಟ್ಟನ್ನು ತಾನೇ ಮಾಡಿ ಬಡಿಸಿ ಉಪಚರಿಸಿದ್ದಳು.

ವಿಮಲ ತುಂಬ ಲಕ್ಷಣೆಯಾದ ಹುಡುಗಿ ಎನ್ನಿಸಿತ್ತು. ಅವಳು ಮತ್ತೆ ಮದುವೆಯಾದರೆ ತಪ್ಪೇನೂ ಇಲ್ಲ, ಹಿತ್ತಲಿಗೆ ಬರುವ ಎಷ್ಟು ಹೆಂಗಸರು ಆಗಿಲ್ಲ ಎಂದು ಅಕ್ಕುಗೆ ಅನ್ನಿಸಿದರೂ ಯಾರೊಡನೆಯೂ, ತಮ್ಮಯ್ಯನೊಡನೆಯೂ ಇದನ್ನು ಹೇಳುವ ಧೈರ್ಯ ಅಕ್ಕು ಮಾಡಿರಲಿಲ್ಲ.

ಕೇಶವನಿಗೆ ಸಾಹುಕಾರರ ಜೊತೆ ವಿಶೇಷವಾದ ಸಂಬಂಧ. ಪೂಜೆಯ ಹೊತ್ತಿಗೆ ಹೋಗುವುದು; ಐನೂರು ವರ್ಷಗಳ ಮೂರ್ತಿಯೆಂದು ಪ್ರಸಿದ್ಧವಾದ ಭುವರಾಹನಿಗೆ ದೀರ್ಘವಾದ ಶಾಸ್ತ್ರಸಮ್ಮತವಾದ ಪೂಜೆಮಾಡುವುದು; ಮುಗಿಸಿ ಹಿಂದಕ್ಕೆ ಬರುವುದು. ಸಾಹುಕಾರರು ಇದ್ದರೆ ಅವರಿಗೆ ಪೂಜೆ ಮುಗಿಸಿ ತೀರ್ಥ ಕೊಡುವುದು.

ಈ ಭೂವರಾಹನಿಗೆ ನಿತ್ಯ ತಪ್ಪದಂತೆ ಎರಡು ತಪ್ಪಲೆ ಅನ್ನದ ವೈವೇದ್ಯ ಸಲ್ಲಬೇಕು. ಸ್ವಾತಂತ್ರ್ಯಯೋಧರೂ, ರಾಷ್ಟ್ರಗತ್ತಿನ ನಾಯಕರೂ ಆದ ಸಾಹುಕಾರರು ಈ ನೈವೇದ್ಯವನ್ನು ತಾವೇ ನಡೆಸುವ ಶಾಲೆಯಲ್ಲಿ ಬಡಮಕ್ಕಳಿಗೆ ಹಂಚುತ್ತಾರೆ. ಅಲ್ಲಿ ಕೆಲಸ ಮಾಡುವ ಉಪಾಧ್ಯಾಯರಿಗೆಲ್ಲ ಮನೆಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ.

ಕೇಶವನಿಗೆ ಅನ್ನ ಬಟ್ಟೆ ಯಾವುದಕ್ಕೂ ಕೊರತೆಯಾಗದಂತೆ ಕೈ ತುಂಬ ಸಂಬಳಕೊಟ್ಟು, ಮನೆಗೆ ಬೇಕಾಗುವಷ್ಟು ಅಕ್ಕಿ ಬೇಳೆಯನ್ನೂ ಕಳಿಸುತ್ತಾರೆ. ವರ್ಷಕ್ಕೊಮ್ಮೆ ಮಳೆಗಾಲಕ್ಕಿಂತ ಮುಂಚೆ ಮನೆಗೆ ಬೇಕಾದಷ್ಟು ಸೌದೆಯನ್ನೂ ತಮ್ಮ ಗಾಡಿಯಲ್ಲೇ ಹೊಡೆಸಿ ಕಳಿಸುತ್ತಾರೆ.

ಪಡಸಾಲೆಯಲ್ಲಿ ಒಮ್ಮೊಮ್ಮೆ ಅವರು ಉಯ್ಯಾಲೆಯಲ್ಲಿ ಕೂತು ಏನನ್ನಾದರೂ ಓದುತ್ತ ಹಗುರಾಗಿ ತೂಗಿಕೊಳ್ಳುತ್ತಿರುವಾಗ ಕೇಶವ ಕಣ್ಣಿಗೆ ಬಿದ್ದಿದ್ದೇ ಆದರೆ, ‘ವ್ಯಾಸಂಗ ಚೆನ್ನಾಗಿ ನಡೆದಿದೆಯೋ’ ಎನ್ನುತ್ತಾರೆ. ಕೇಶವನಿಗೆ ತಾನೊಬ್ಬ ಆಸ್ಥಾನ ವಿದ್ವಾಂಸ, ಕೇವಲ ಪೂಜೆ ಭಟ್ಟನಲ್ಲ ಎನ್ನಿಸಬೇಕು – ಹಾಗೆ.

ಸಾಹುಕಾರರು ಅಜಾನು ಬಾಹು. ಉಡುವುದು ಮಾತ್ರ ಸದಾ ಖದ್ದರೇ. ಕಚ್ಚೆಹಾಕಿದ ಬಿಳಿ ಪಂಚೆ, ಬಿಳಿ ಜುಬ್ಬ, ಮೈ ಮೇಲೆ ಒಂದು ಶಾಲು. ಮನೆಯ ಒಳಗೂ ಹೊರಗೂ ಕಾಲಲ್ಲಿ ಸದಾ ಒಂದು ಬಟ್ಟೆಯ ಶೂ ತೊಟ್ಟಿರಬೇಕು ಅವರು.ಒಳಗೆ ಹಾಕಿಕೊಳ್ಳಲು ಒಂದು ಬಿಳಿಯ ಶೂ, ಹೊರಗಿಗೊಂದು ಕಪ್ಪು ಶೂ. ಹೊರಗೆ ಹೋಗುವಾಗ ತಲೆಯ ಮೇಲೊಂದು ಗರಿಗರಿಯಾಗಿ ಚೂಪಾಗಿ ಮಡಿಸಿದ ಚೆನ್ನಾಗಿ ಇಸ್ತ್ರಿಮಾಡಿದ ಬಿಳಿಟೋಪಿಯನ್ನು ಹಾಕಿಕೊಂಡಿರುತ್ತಾರೆ. ಕೈಯಲ್ಲಿ ಒಂದು ಬೆಳ್ಳಿ ಕಟ್ಟಿದ ನಾಗರ ಬೆತ್ತ ಹಿಡಿದಿರುತ್ತಾರೆ.

ಅವರ ಪಡಸಾಲೆಯಲ್ಲಿ ಹಳದಿಗೊಳ್ಳುತ್ತ ಹೋದ ದೊಡ್ಡ ಚಿತ್ರಗಳಿವೆ. ಕುಸುರಿ ಕೆತ್ತಿದ ಗಂಧದ ಚೌಕಟ್ಟುಗಳಲ್ಲಿ; ಅಥವಾ ಬೀಟೆಮರದ ಚೌಕಟ್ಟುಗಳಲ್ಲಿ. ಪೇಟಸುತ್ತಿ ಹಣೆಗೆ ತಿಲಕವಿಟ್ಟ ಲೋಕಮಾನ್ಯರು, ಬಿಳಿ ರುಮಾಲಿನಲ್ಲೂ ಉದ್ದ ಕೋಟಿನಲ್ಲೂ ಶೋಭಿಸುವ ಗೋಖಲೆಯವರು, ಸೈನ್ಯದ ಉಡುಪಿನ ಧೀರಮುಖದ ಸುಭಾಷರು, ಮೇಲು ಕೋಟಿಗೊಂದು ಗುಲಾಬಿ ಸಿಕ್ಕಿಸಿ ಗಾಂಧಿ ಟೋಪಿಯಲ್ಲಿ ರುವ ತರುಣ ನೆಹರು, ಕ್ಷಾತ್ರ ತೇಜದ ಸನ್ಯಾಸಿ ವಿವೇಕಾನಂದ, ಕುರುಚಲು ಗಡ್ಡದ ಪರಮಹಂಸ. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ನಡುವೆ ಧ್ಯಾನಸ್ಥರಾದ ಗಾಂಧೀಜಿ ಕೂತಿರುವ, ಮೂಲೆಯೊಂದರಲ್ಲಿ ಮಂಜಯ್ಯನೂ ಮುಖತಗ್ಗಿಸಿ ಕೂತಿರುವ, ಒಂದು ಅಪರೂಪದ ಚಿತ್ರ.

ಇದಕ್ಕೊಂದು ಐತಿಹ್ಯವಿದೆ. ಸುಮಾರು ಮುವ್ವತ್ತರ ದಶಕದ ಪ್ರಾರಂಭದಲ್ಲಿ. ತೀರ್ಥಹಳ್ಳಿಗೆ ಗಾಂಧೀಜಿ ಬಂದಾಗ ತೆಗೆದದ್ದು. ಆ ಕಥೆಯನ್ನು ಬಲು ಸ್ವಾರಸ್ಯವಾಗಿ, ಕೇಶವನಿಗಂತೂ ಅವನು ಪಂಡಿತನೆಂದು ಬಲು ಅರ್ಥವತ್ತಾಗಿ, ಮಂಜಯ್ಯ ಹೇಳುವುದನ್ನು ಕೇಳಬೇಕು.