ಗುಡ್ಡದಮೇಲಿನ ಬಂಗಲೆಯಲ್ಲಿ – ಈಗದು ಆಸ್ಪತ್ರೆ, ಹಿಂದದು ಬಂಗಲೆ, ಇಂಗ್ಲಿಷಿನವರು ಬಂದರೂ ಅಲ್ಲೇ ಇಳಿದುಕೊಳ್ಳುತ್ತ ಇದ್ದದ್ದು ಆಗ – ಗಾಂಧೀಜಿಗೆ ಇಳಿಸುವ ವ್ಯವಸ್ಥೆ ಮಾಡಲಾಗಿತ್ತು. ಚಳಿಗಾಲದ ಒಂದು ಬೆಳಗ್ಗೆ. ಗಾಂಧೀಜಿ ಇಗೋ ಬಂದರೋ, ಕಾರಿನಿಂದ ಇಳಿದರೋ, ಕಾದುನಿಂತ ನಾವೆಲ್ಲರೂ ಒಂದು ತಿಂಗಳಿಂದ ಚರಕದಲ್ಲಿ ನಾವೇ ತೆಗೆದ ಖಾದಿ ನೂಲನ್ನು ಅವರಿಗೆ ಕೊಟ್ಟು, ಪಾದಮುಟ್ಟಿ ನಮಸ್ಕಾರ ಮಾಡಿದ್ದಾಯಿತೊ, ಆಗ ಮಹಾತ್ಮರು ನಮಗೇನು ಕೇಳಿದರು ಊಹಿಸಿ, ಶರ್ಮರೆ. ನಮ್ಮನ್ನು ನೋಡಿ ಬಚ್ಚುಬಾಯಿ ತೆಗೆದು ನಸುನಗುತ್ತ ಕೇಳಿಯೇಬಿಡುವುದೆ? ಎಲ್ಲಿ ಹರಿಜನರ ಕೇರಿಯಿರೋದು? ಅದೂ ನಮ್ಮಂಥ ಬ್ರಾಹ್ಮಣ ಮಹಾಶಯರನ್ನ? ಹೊಲೇರು ಇರೋದು ಎಲ್ಲಿ ಅಂತ? ಮಹಾತ್ಮರು ಕೇಳಿಯೇ ಬಿಟ್ಟರೋ? ಏನು ಮಾಡೋದು ಅಂತ ಗಾಂಧಿಜಿಯನ್ನು ಕರೆಸಿಕೊಂಡ ಕುಲಸ್ಥರಿಗೆಲ್ಲ ಫಚೀತಿಗಿಟ್ಟು ಕೊಂಡಿತು. ದೊಡ್ಡ ಸಮಸ್ಯೆಯಾಯಿತು. ಗಾಂಧಿ ಜೊತೆ ಅವರೂ ಹರಿಜನ ಕೇರಿಗೆ ಹೋಗಬೇಕಾಯಿತಲ್ಲ? ಆಮೇಲ ಪಂಚಗವ್ಯದ ಶುದ್ಧಿಯಾಗದೆ ಅವರು ಸ್ವಗೃಹ ಪ್ರವೇಶ ಮಾಡುವುದುಂಟೆ? ಶೌಚಾದಿಕರ್ಮಗಳಿಗೆ ಅವರು ಅರ್ಹರಾಗಿ ಉಳಿದಾರೆ? ಅವರ ಮಕ್ಕಳನ್ನು ಯಾರು ಮದುವೆಯಾದಾರು? ಪಿತೃಗಳು ಅವರ ಪಿಂಡೋದಕವನ್ನು ಸ್ವೀಕರಿಸಿಯಾರೇನು?

ಗಾಂಧಿಯವರು ವಿಷ್ಣುವಿನ ಅವತಾರವೆಂದು ತಿಲಿಯಲಾರದ ಈ ಮುರ್ಖರು ಹರಿಜನಕೇರಿಗೂ ಹೋದರು; ಗುಟ್ಟಾಗಿ ಪಂಚಗವ್ಯವನ್ನೂ ಮಾಡಿಸಿಕೊಂಡರು. ರೌರವ ನರಕದಿಂದ ಪಾರಾಗಲು!

ಈ ಮಂಜಯ್ಯ ಮಾತ್ರ ಜಪ್ಪೆನ್ನಲಿಲ್ಲ, ಸ್ವಂತ ಅಪ್ಪನ ಮಾತನ್ನೂ ಕೇಳಲಿಲ್ಲ. ಮಕ್ಕಳನ್ನು ಬೀದಿಯಲ್ಲಿ ಪಾಯಖಾನೆಗೆ ಕೂರಿಸುವ ಪೇಟೆಯ ಬ್ರಾಹ್ಮಣರ ಕೇರಿಗಿಂತ ಹರಿಜನರ ಕೇರಿಯೇ ಹೆಚ್ಚು ಶುಚಿಯಾಗಿರುವಾಗ ಅದೇನು ಗಬ್ಬು ಪಂಚಗವ್ಯದ ಶುದ್ದಿ ಎಂದು ಪೇಪರಿಗೆ ಹೇಳಿಕೆಯನ್ನೇ ಅವರು ಕೊಟ್ಟುಬಿಟ್ಟರು.

ಗಾಂಧೀಜಿ ಕಣ್ಣು ಮುಚ್ಚಿ ಕೂತಿರುವ ಈ ಚಿತ್ರದಲ್ಲಿ ಹುಡುಕಿದರೆ ಒಂದು ಮೂಲೆಯಲ್ಲಿ ಮಂಜಯ್ಯನನ್ನು ಕಾಣಬಹುದು. ಅವರಲ್ಲಿ ಒಬ್ಬರ ಮಗ, ಅದೇ ಹಣೆಯಲ್ಲಿ ವಿಭೂತಿ ಇಟ್ಟವರ ಮಗ, ಈಗ ಬಾಟಾ ಶೂ ಕಂಪೆನಿಯ ಮ್ಯಾನೇಜರು; ದೊಡ್ಡ ಗಿರಾಕಿಗಳ ಕಾಲಿಗೆ ಚರ್ಮದ ಪಾದರಕ್ಷೆಯನ್ನ ನಗು ನಗ್ತ ತೊಡಿಸುತ್ತಾನೆ. ಯಾಕೆ ತೊಡಿಸಬಾರದು? ಅವರ ಪಕ್ಕವೇ ಕೊಡೆ ಹಿಡಿದು ಕೂತ ಇನ್ನೊಬ್ಬರ ಮಗ ಬಾಂಬೆಯಲ್ಲಿ ಮಾಂಸದ ಹೋಟಎಲನ್ನು ತೆರೆದಿದ್ದಾನಂತೆ. ಉಡುಪಿಯಲ್ಲಿ ಪರ್ಯಾಯಕ್ಕೆ ಕೂತ ಸ್ವಾಮಿಗಳ ಪಾದಪೂಜೆಯನ್ನು ಮಾಡಿಸಿ ಪುಣ್ಯಕಟ್ಟಿಕೊಂಡಿದ್ದಾನೆ. ಕಾಲಾಯ ತಸ್ಮೈನಮಃ – ಮಂಜಯ್ಯ ತಪ್ಪುಹುಡುಕುವುದಿಲ್ಲ. ಆದರೆ ತಾನು ಆಸ್ತಿವಂತನಲ್ಲದೆ ಇದ್ದಿದ್ದರೆ ಜಾತಿಯಿಂದ ಹೊರಗೆ ಹಾಕಿಬಿಡುತ್ತಿದ್ದರು.

ಮಹಾತ್ಮರು ನಮ್ಮ ಕಾಲದ ಮನು ಇದ್ದಹಾಗೆ, ಸಂಪ್ರದಾಯ ನಾವು ಕಟ್ಟಿಕೊಂಡಂತೆ, ಹಿರಿಯರಾದ ತಮ್ಮಂಥವರು ಹಾಕಿಕೊಟ್ಟಂದೆ – ಎಂದು ಕೇಶವ ಈ ಕಥೆ ಕೇಳಿ ಹೇಳುತ್ತಾನೆ. ಮಂಜಯ್ಯನ ಗತ್ತು ಇಂಥ ಸಂದರ್ಭಗಳಲ್ಲಿ ಸೂಚಿಸುವ ಅಗತ್ಯವನ್ನೂ ಪೂರೈಸುವಂತೆ ವಿಶ್ವಾಮಿತ್ರರ ಕಥೆಯನ್ನು ಹೇಳುತ್ತಾನೆ. ಮಂಜಯ್ಯನದು ವಿಶ್ವಾಮಿತ್ರ ಗೋತ್ರವಲ್ಲವೆ?

ಹೀಗೆ ಇಡೀ ಎಚ್ಚೆತ್ತ ಭಾರತದ ಎಲ್ಲ ಕುರುಹುಗಳನ್ನೂ ಪಡೆದ ಈ ಪಡಸಾಲೆ ಪಾಳೆಗಾರಿಕೆಯ ಜಬರದಸ್ತಿನ ಕಾಲವನ್ನೂ ನೆನಪಿಗೆ ತರುವಂತಿದ್ದುದರಿಂದ ಕೇಶವನಿಗೆ ಈ ಪಡಸಾಲೆಯಲ್ಲಿ ಭೀಮ ದುರ್ಯೋದನರ ಕಾಳಗದ ವಾಗ್ವಾದಗಳನ್ನು ಪ್ರಸಂಗದಲ್ಲಿ ನಡೆಸುವುದು ಬಹು ಪ್ರಿಯ. ಚಂಡೆಮದ್ದಳೆ ಹಿಡಿದು ಕೂತು ಆವೇಶದ ಮಾತುಗಳನ್ನು ಆಡಲು ಆಗೀಗ ಕೇಶವನಿಗೆ ಆಹ್ವಾನ ಬರುವುದುಂಟು. ಈ ಪಡಸಾಲೆಯ ಎಂಥ ಕಂಬಗಳಂಥಹ ಪೂರ್ವಕಾಲದ ಕಂಬಗಳು, ಅದೇನು ತೊಲೆಗಳೇ ಎನ್ನಿಸುವಂತಹ ತೊಲೆಗಳು, ಚಿತ್ರಾರ್ಪಿತವಾದ ಎಂಥ ಭಾರದ ಬಾಗಿಲು, ಅದೇನು ಹೊಸಿಲು – ಇಲ್ಲಿ ಕೂತು ಮದ್ದಲೆ ಬಾರಿಸಿದರೆ ಆಗುಂಬೆಯ ಸಣಕಲು ದೇಹದ ನಾಣಪ್ಪ ಭೀಮ ಪಾತ್ರಧಾರಿಯಾಗಿ ಭೀಮನೇ ಆಗಿಬಿಟ್ಟಿದ್ದ. ಅವನನ್ನು ದುರ್ಯೋಧನ ಪಾತ್ರದಲ್ಲಿ ತಾನು ಸೋಲಿಸಿದ್ದನ್ನು ನೋಡಿ ಸಾಹುಕಾರರು ತುಂಬ ಮೆಚ್ಚಿಕೊಂಡಿದ್ದರು. ಆದರೆ ನಾಣಪ್ಪ ಅತಿಥಿಯಾಗಿ ಬಂದವನಲ್ಲವೆ? ಭೀಮ ಗೆಲ್ಲಲೇಬೇಕಲ್ಲವೆ? ಎಂದು ತಾನು ಸೋಲೊಪ್ಪಿ ಕೊಂಡಿದ್ದೆ.

ಇಲ್ಲಿ ಸಾಹುಕಾರರು ತಮ್ಮ ಬೆಂಗಳೂರಿನ ರಾಜಕೀಯ ಬಳಗದ ಆಹ್ಲಾದಕ್ಕೆಂದು ಮಹಾತ್ಮರ ಬಗ್ಗೆಯೂ ಕೇಶವನಿಂದ ಹರಿಕಥೆ ಮಾಡಿಸಿದ್ದಾರೆ. ಅದರಲ್ಲಿ ತೀರ್ಥಹಳ್ಳಿಗೆ ಗಾಂಧಿ ಆಗಮಿಸಿದ ಪ್ರಸಂಗವನ್ನೂ ಬಳಸಿ ಸಾಹುಕಾರರನ್ನು ಕೇಶವ ಮೆಚ್ಚಿಸಿದ್ದಾನೆ.

ಕೇಶವ ಕೇಳಿದ್ದಿದೆ. ಮಂಜಯ್ಯನ ಅಪ್ಪ ನೋಡಲು ಅಂಥ ಆಳೇನೂ ಅಲ್ಲ. ಆದರೆ ಅವರ ದರ್ಪ ನಡೆಯಲು ಈ ಪಡಸಾಲೆಯಂಥ ಪಡಸಾಲೆಯ ಅಗತ್ಯ ಅವರಿಗಂತೂ ಇತ್ತು.

* * *

ಮಂಜಯ್ಯನವರು ಕಾಶಿ ವಿಶ್ವವಿದ್ಯಾಲಯದಲ್ಲಿ ಓದಿ, ಗಾಂಧಿಜಿಯವರ ಆಶ್ರಮದಲ್ಲಿದ್ದು, ಜೈಲಿಗೆ ಹೋಗಿ, ಚರಕದಿಂದ ನೂಲು ತೆಗೆಯಬಲ್ಲ ಸಮಾಧಾನದವರಾಗಿ ಜನರಿಗೆ ಕಂಡರೂ ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲನ್ನು ತಿಳಿದವರೂ ಇದ್ದರು. ತಮ್ಮ ಆಸ್ತಿಯ ವಹಿವಾಟಿನಲ್ಲಿ ಅವರ ಕುಶಲತೆ, ಅವರ ಬಿಗಿ, ಮತ್ತು ಅವರ ನಯದ ನಡೆ ನುಡಿ – ಎಲ್ಲರ ಮೆಚ್ಚಿಕೆಗೆ, ಮತ್ತು ಸ್ಪರ್ಧಿಗಳ ಅಸೂಯೆಗೆ ಕಾರಣವಾಗಿದ್ದವು. ತಮ್ಮ ಗಳಿಕೆಯನ್ನು ಶೇರುಗಳಲ್ಲೂ, ಕಾರ್ಖಾನೆಗಳಲ್ಲೂ, ಬ್ಯಾಂಕುಗಳಲ್ಲೂ, ಬೆಂಗಳೂರು ಮೈಸೂರುಗಳಲ್ಲಿ ಕಟ್ಟಿಸಿ ನ್ಯಾಯವಾದ ಬಾಡಿಗೆಗೆ ಯೋಗ್ಯರಿಗೆ ನೋಡಿ ಕೊಟ್ಟ ಮನೆಗಳಲ್ಲೂ ಅವರು ತೋರಿದ ಲೌಕಿಕ ವ್ಯವಹಾರದ ವಿವೇಕ ಅಸಾಮಾನ್ಯವಾದದ್ದು. ಶಿವಮೊಗ್ಗದಲ್ಲಿ ಒಂದು ಸಿನೆಮಾ ಮಂದಿರ, ಬೆಂಗಳೂರಿನಲ್ಲಿ ಇನ್ನೊಂದು ಸಿನೆಮಾ ಮಂದಿರ ಅವರಿಗೆ ಇವೆ ಎಂದ ಮೇಲೆ, ಮಂಗಳೂರಿನಲ್ಲಿ ಹೆಂಚಿನ ಕಾರ್ಖಾನೆಯಿದೆ ಎಂದ ಮೇಲೆ ಅವರ ಕಾಲಜ್ಞಾನದ ಬಗ್ಗೆ ಹೆಚ್ಚು ಹೇಳಬೇಕಿಲ್ಲ.

ವಿಧಾನಸೌಧದ ಹತ್ತಿರವಿರುವ ಹೊಸ ಹೋಟೆಲಿನಲ್ಲಿ ಇವರ ಪಾಲೂ ಇದೆ ಎಂಬ ಸುದ್ದಿ ಇದೆ. ಚಿಕ್ಕಮಗಳೂರಿನಲ್ಲಿ ಇವರು ಕೊಂಡ ಕಾಫಿ ತೋಟಕ್ಕೆ ಮಾತ್ರ ಇವರು ಕೊಡಬೇಕಾದ್ದಕ್ಕಿಂತ ಹೆಚ್ಚು ಕೊಟ್ಟು ಮೋಸಹೋದರು ಎನ್ನುವವರೂ ಇದ್ದಾರೆ. ಆದರೆ ಮಂಜಯ್ಯ ಮೋಸಹೋದರೆ ಊರಲ್ಲಿ ಅದೊಂದು ವಿಶೇಷವಾದ ಸುದ್ದಿ. ಅವರನ್ನು ಈ ಪ್ರಾಂತ್ಯದಲ್ಲೆಲ್ಲ ಗಟ್ಟಿಕುಳವೆಂದು ಅವರ ಅಭಿಮಾನಿಗಳು, ಅವರಿಂದ ಉಪಕೃತರು ಹೇಳಿದರೆ, ‘ಹೌದು, ಹೌದು, ಸ್ವಾತಂತ್ರ್ಯ ಬಂದಮೇಲೆ ಇನ್ನೂ ಗಟ್ಟಿಯಾದ ಕುಳ, ರಾಜ್ಯಸಭೆಯ ಸದಸ್ಯರಾದಮೇಲಂತೂ ಭಾರೀ ಗಟ್ಟಿ ಕುಳ. ಆದರೆ ಗಟ್ಟಿಕುಳವಾಗಲು ಎಷ್ಟು ಖರ್ಚಾಗಿರಬಹುದು ಹೇಳಿ’ ಎನ್ನುವ ಅವರಿಗೆ ಆಗದವರೂ ಇದ್ದಾರೆ.

ಒಂದು ಗಂಡನ್ನೂ ಒಂದು ಹೆಣ್ಣನ್ನೂ ಹೆತ್ತ ಇವರ ಹೆಂಡತಿ, ರುಕ್ಮಿಣಿಯಮ್ಮ ತುಂಬ ರೂಪವತಿಯಾಗಿದ್ದ ಮುತ್ತೈದೆ. ಸತ್ತಮೇಲೆ, ಇವರಿಗೆ ಅಷ್ಟೇನೂ ವಯಸ್ಸಲ್ಲ ಆಗ, ಎಲ್ಲರಂತೆ ಇವರು ಇನ್ನೊಂದು ಮದುವೆಯಾಗಬಹುದಿತ್ತು. ಆದರೆ ಆಗಲಿಲ್ಲ. ಎಂಬ ಅಭಿಮಾನಿಗಳ ಹೊಗಳಿಕೆಗೆ ಇವರು ಪಾತ್ರರು. ಆದರೆ ತಂದೆಗಿಂತ ಭಿನ್ನವಲ್ಲ ಎಂದು ಪಿಸುಮಾತಿನಲ್ಲಿ ಹೇಳುತ್ತಾರೆ. ಯಾರಿಗೂ ಅದರಿಂದ ತೊಂದರೆಯಾಗಿಲ್ಲ ಬಿಡಿ ಎಂದೊಂದು ಮಾತನ್ನು ತಮ್ಮ ಟೀಕೆಗೆ ಸೇರಿಸುತ್ತಾರೆ. ಮಂಗಳೂರಿನ ಹೆಂಗಸನ್ನ ಅವರ ಹೆಂಚಿನ ಕಾರ್ಖಾನೆಯ ಮ್ಯಾನೇಜರಾಗಿಯೇ ಅವರು ಮಾಡಿಬಿಟ್ಟಿದಾರೆ. ಇನ್ನೊಬ್ಬಳು, ಅವಳು ಬೆಂಗಳೂರಿನವಳು, ಇವರಿಗೆ ಮಾತ್ರವಲ್ಲದೆ ಇವರ ಆಪ್ತರಿಗೂ ಅಡಿಗೆ ಮಾಡಿ ಬಡಿಸುತ್ತಾಳಂತೆ. ನೋಡಲು ತುಂಬ ಚೆನ್ನಾಗಿದ್ದಾಳಂತೆ. ಅವಳ ಜೊತೆ ಇವರು ಸಿನೆಮಾಕ್ಕೂ ಹೋಗುವುದುಂಟಂತೆ.

ಮಂಜಯ್ಯನ ಇನ್ನೊಂದು ಚಟವೆಂದರೆ ಅವರ ಬಾಲದ ಹುಚ್ಚು; ರೇಸ್ ಕುದುರೆಗಳನ್ನೂ ಅವರು ಸಾಕಿದ್ದಾರೆಂಬ ವದಂತಿಯಿದೆ. ಬೆಂಗಳೂರಿನವಳು ಇವರ ರೇಸ್ ಸಖಿ, ಜೊತೆಯಲ್ಲಿ ಇಬ್ಬರನ್ನೂ ನೋಡಿದವರು ಇದ್ದಾರೆ. ಅವರೂ ರೇಸ್ ಹುಚ್ಚಿನ ಶಿವಮೊಗ್ಗದ ಮಂಡಿ ವರ್ತಕರ ಮಕ್ಕಳು.

ತೀರ್ಥಹಳ್ಳಿಯಲ್ಲಿ ಮಾತ್ರ ಮಂಜಯ್ಯನ ದಿನಚರಿಯೇ ಬೇರೆ. ಸಾಯಂಕಾಲ ಕ್ಲಬ್ಬಿಗೆ ಹೋಗಿ ಇಸ್ಪೀಟು ಆಡುವುದು ಬಿಟ್ಟರೆ ಅವರೊಬ್ಬ ಸಭ್ಯಗೃಹಸ್ಥರು ಮಾತ್ರ. ದೇವನಹಳ್ಳಿಯ ಸ್ವಗೃಹದಲ್ಲೋ ಚಾಚೂ ತಪ್ಪದೆ ಮನೆತನದ ಗೌರವಕ್ಕಾಗಿ ಎಲ್ಲ ಹಬ್ಬ ಹರಿದಿನಗಳನ್ನೂ ಆಚರಿಸುತ್ತಾರೆ. ಅವರು ಸಂಧ್ಯಾವಂದನೆಗೆ ಕೂತದ್ದನ್ನು ಮಾತ್ರ ನೋಡಿದವರಿಲ್ಲ. ಹಬ್ಬಗಳಲ್ಲಿ ಎಲ್ಲ ಜೊತೆ ಕೂತು ಉಣ್ಣುವುದಿಲ್ಲ ಎಂಬ ಆರೋಪ ಅವರ ಮೇಲಿದೆ. ಅಂಥ ಆರೋಪ ಮಾಡುವವರು ಕೇವಲ ವೈದಿಕರಾದ ಹಳೆಯಕಾಲದ ಬ್ರಾಹ್ಮಣರು. ಯಜಮಾನನೇ ಊಟಕ್ಕೆ ಮುಂಚೆ ಪಂಕ್ತಿಯ ಎದುರು ನಿಂತು ಅರ್ಘ್ಯಕೊಟ್ಟು ಉಪಚರಿಸುವುದನ್ನು ನಿರೀಕ್ಷಿಸುವ ಜನ ಅವರು. ಕೈತುಂಬ ದಕ್ಷಿಣೆ ಸಿಗುವುದರಿಂದ ಅವರು ಊಟಕ್ಕೆ ಕರೆದರೆ ಬರುವುದಿಲ್ಲವೆಂದೇನೂ ಹೇಳುವುದಿಲ್ಲ.

ಉಳಿದ ವಿಷಯಗಳಲ್ಲಿ ಮನುಷ್ಯ ಮಾತ್ರ ಧಾರಾಳಿ. ರಾಜನಿದ್ದಂತೆ ತಾನು ಎಂದುಕೊಂಡೇ ಅವರು ಎಲ್ಲರ ಜೊತೆ, ಮುಖ್ಯವಾಗಿ ಅವರ ಪರಿಚಾರಕ ಜೊತೆ, ವರ್ತಿಸುವುದು. ಅಡುಗೆ ಮಾಡುವವನು ಅವರ ಪಾಲಿಗೆ ಪಾಕಶಾಸ್ತ್ರಜ್ಞ. ಏನಾದರೂ ಹೊಸ ಭಕ್ಷ್ಯವನ್ನು ಅವನು ಮಾಡುತ್ತಾನೊ ಎಂದು ವಿಶೇಷ ದಿನಗಳಲ್ಲಿ ಅವನನ್ನು ಪ್ರಶ್ನಿಸುವರು. ತರಬೇತಿಗೆಂದು ಅವನನ್ನು ಮದ್ರಾಸಿನ ಒಂದು ಪ್ರಸಿದ್ದ ಹೋಟೆಲಲ್ಲಿ ಒಂದು ತಿಂಗಳು ಬಿಟ್ಟದ್ದೂ ಉಂಟು. ಭೂವರಾಹ ಪೂಜೆಗೆ ಬರುವ ಕೇಶವ ಅವರ ಪಾಲಿಗೆ ಶಾಸ್ತ್ರಾರ್ಥ ಮಾಡಬಲ್ಲಂತೆ ಸತತ ವ್ಯಾಸಂಗದಲ್ಲಿ ನಿರತನಾದ ಪಂಡಿತ. ಅವನು ಕೇಳಿದ ಪುಸ್ತಕ ತರಿಸಿಕೊಡುತ್ತಾರೆ. ಅವರ ಡ್ರೈವರ್ ಮಂತ್ರಿಗಳ ಕಾರುಚಾಲಕನಂತೆ ಯೂನಿಫಾರಂ ತೊಟ್ಟವನು. ಅವರ ಅಂಗಳದಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ಧ್ವಜ ಹಾರಿಸಲು ಗರುಡಗಂಬದಂತಹ ಎತ್ತರದ ಕಂಬ ನಿಲ್ಲಿಸಿದ್ದಾರೆ. ಅವರು ನಡೆಸುವ ಸ್ಕೂಲಿನ ಮಕ್ಕಳು ಬಂದು ಅವತ್ತು ಜನಗಣಮನ ಹಾಡಬೇಕು. ತಾನೇ ಧ್ವಜಹಾರಿಸಿ ಭಾಷಣ ಮಾಡಬೇಕು. ಮಕ್ಕಳಿಗೆ ಲಾಡು ಹಂಚಬೇಕು.

ಅವರ ಆಧುನಿಕತೆಗೆ, ಅದರ ಜೊತೆ ಹಿತವಾಗಿ ಬೆರೆತಿರುವಂತೆ, ಮದನಮೋಹನ ಮಾಳವೀಯರ ಸನಾತನ ಧರ್ಮದ ನಿಷ್ಠೆಬೇಕು; ಅವರ ಗಾಂಧಿ ಪ್ರೇಮಕ್ಕೆ ನೆಹರೂವರ ಆಧುನಿಕತೆ ಬೇಕು. ಅವರ ಮನೆ ಪೂಜೆಗೆ ವೇದಾಧ್ಯಯನ ಮಾಡಿದ, ಆದರೆ ಗೊಡ್ಡಲ್ಲದ, ಪಂಡಿತ ಬೇಕು; ಕಾರು ನಡೆಸಲು ಇಂಗ್ಲಿಷ್ ಕಲಿತವಬೇಕು. ವಿಧವೆಯಾದ ಮಗಳು ಓದಬೇಕು; ಆದರೆ ಕೆಲಸಮಾಡಬಾರದು. ದೇವನಹಳ್ಳಿಯ ಜನ ಸ್ವತಂತ್ರವಗಿ ಯೋಚಿಸುವುದನ್ನು ಕಲಿಯಬೇಕು, ಮಕ್ಕಳನ್ನು ಶಾಲೆಗೆ ಕಳಿಸಬೇಕು; ಆದರೆ ತನಗೆ ಎದುರಾಡಬಾರದು.

ಅವರ ಖಾಸಗಿ ತೆವಲುಗಳಿಗೂ ಅವರ ಸಂಪ್ರದಾಯ ವಿರೋಧದ ತಾತ್ವಿಕತೆಗೂ ಹೀಗೆಯೇ ಅನುಕೂಲದ ಸಂಬಂಧವಿತ್ತು. ಬೇರೆಯವರ ನೈತಿಕ ಹುಳುಕುಗಳನ್ನು ಅವರು ಅತಿಮಾಡಿ ನೋಡದಿರುವ ಉದಾರ ಧೋರಣೆಯ ರಾಜಕೀಯ ನಿಲುವಿನಲ್ಲಿ ಆತ್ಮ ಸಮರ್ಥನೆಯ ಹುನ್ನಾರವಿತ್ತು.

ದಪ್ಪತೊಲೆಕಂಬಗಳ ಪಡಸಾಲೆಗೂ, ಅಲ್ಲಿ ಉಯ್ಯಾಲೆ ಮೇಲೆ ಅವರು ಸಾದಾಸೀದಾ ಖಾದಿ ತೊಟ್ಟು ಕೂತಿರುವುದಕ್ಕೂ – ಈ ಎರಡರಿಂದಲೂ ಅವರು ಗಳಿಸಿಕೊಳ್ಳುವ ಪ್ರತಿಷ್ಠೆಗೂ ಇರುವ ಸಂಬಂಧಗಳ ನಡುವೆ ಇಡೀ ಚರಿತ್ರೆ ಕೆಲಸಮಾಡಿತ್ತು. ಈ ಚರಿತ್ರೆಯಲ್ಲಿ ಅವರು ಶೇರುದಾರರು. ಆದರೆ ಮೊದಲಬಾರಿ ತನ್ನ ತಂದೆಯನ್ನು ಧಿಕ್ಕರಿಸಿ ಅವರು ಜೈಲಿಗೆ ಹೋದಾಗ ಈ ಲಾಭಗಳ ಮುನ್ಸೂಚನೆಯಿರಲಿಲ್ಲವೆಂದು ಹೇಳದಿದ್ದಲ್ಲಿ ಚರಿತ್ರೆಯ ಇನ್ನೊಂದು ಸತ್ಯಕ್ಕೆ ಅಪಚಾರಮಾಡಿದಂತಾಗುತ್ತದೆ. ಹಾಗೆಯೇ ಗಾಂಧೀಜಿ ಜೊತೆ ಅವರು ಹರಿಜನರ ಕೇರಿಗೆ ಹೋಗಿ, ಹೋಗಿದ್ದಕ್ಕಾಗಿ ಗುಟ್ಟಿನಲ್ಲಿ ಶುದ್ಧ ಮಾಡಿಸಿಕೊಳ್ಳಲದೆ ಊರನ್ನು ಎದುರಿಸಿ ನಿಂತಾಗಲೂ ಹೋಗಿ, ಅವರು ಮುಂದಿನ ಲಾಭ ಯೋಚಿಸಿದವರಲ್ಲ ಎನ್ನದೇ ವಿಧಿಯಿಲ್ಲ – ಅವರ ವೈರಿಗಳು ಕೂಡ.

ಅವರು ತಮ್ಮ ಮಕ್ಕಳನ್ನು ಬೆಳೆಸಿದ ಕ್ರಮಕೂಡ ಶ್ರೀಮಂತರಿಗೆ ಮಾತ್ರ ಸಾಧ್ಯವಾದ್ದು ಎನ್ನುವುದು ಸತ್ಯವಾದರೂ ಎಲ್ಲ ಶ್ರೀಮಂತರೂ ಮಂಜಯ್ಯನಂತೆ ಮಕ್ಕಳನ್ನು ಬೆಳೆಸಿಲ್ಲ.

ಅವರ ಮಗ, ಘನಶ್ಯಾಮ ಹೈಸ್ಕೂಲು ಮುಗಿಯುವತನಕ ಓದಿದ್ದು ನಿತ್ಯ ತಣ್ಣೀರಿನ ಸ್ನಾನವನ್ನೇ ಮಾಡಬೇಕಾದ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ. ಅನಂತರ ಮಗನನ್ನು ತಾನು ಓದಿದ ಕಾಶಿವಿಶ್ವವಿದ್ಯಾಲಯದಲ್ಲೇ ಓದಿಸಬೇಕು; ಅನಂತರ, ಅಪ್ಪನ ಹಠಕ್ಕೆ ತನಗೆ ಬೇಗ ಮದುವೆಯಾಗಿ ಬಿಟ್ಟಿದ್ದರಿಂದ ಸಾಧ್ಯವಾಗದೇ ಹೋದ, ನೆಹರೂ ಓದಿದ ಕೇಂಬ್ರಿಡ್ಜಿಗೇ ಕಳಿಸಬೇಕು.

ಎಷ್ಟೇ ಪ್ರಗತಿಶೀಲ ಉದಾರವಾದಿಯಂತೆ ಮಂಜಯ್ಯ ಮಾತಾಡಿದರೂ, ಮಗಳನ್ನು ಮಾತ್ರ ಅವಳು ಹದಿನೇಳು ತುಂಬುವುದರೊಳಗೆ ಮಂಗಳೂರಿನ ಗೊಡ್ಡು ಸಂಪ್ರದಾಯಸ್ಥ, ಶ್ರೀಮಂತರೊಬ್ಬರ ಮಗನಿಗೆ ಕೊಟ್ಟು ಮದುವೆ ಮಾಡಿದ್ದರು. ಒಂದು ವರ್ಷದೊಳಗೆ ಅವಳು ಗಂಡಸತ್ತು ಮನೆ ಸೇರಿದಳು. ಅವಳು ಇನ್ನೊಂದು ಮದುವೆಯಾಗಬೇಕು ಎಂದು ಇಂಗ್ಲೆಂಡಿನಲ್ಲಿರುವ ಮಗ ವಾದಿಸಿದರೂ ಅಷ್ಟು ಧೈರ್ಯಮಾಡಲು ಮಂಜಯ್ಯನಿಗೆ ಆಗದೇ ಹೋಯಿತು; ಮಗಳು ಗಂಡ ಸತ್ತಮೇಲೆ ತಲೆಬೋಳಿಸದೆ ಕುಂಕುಮವಿಟ್ಟು, ಎಲ್ಲರಂತೆ ಒಡವೆ ಸೀರೆ ತೊಟ್ಟು ಮೈಸೂರಲ್ಲಿ ಬಿ.ಎ. ಮುಗಿಸಿ ಈಗ ಮದ್ರಾಸಲ್ಲಿ ಲಾ ಓದುತ್ತಿದ್ದಾಳೆಂಬುದು ಊರಿನ ಮಟ್ಟಿಗೆ ಕ್ರಾಂತಿಕಾರಿಯಾದ ಘಟನೆಯೇ ಆಗಿತ್ತು. ಇದನ್ನು ದೂರದಲ್ಲಿರುವ ಮಗ ತಿಳಿಯಲಾರ; ತತ್ಪರಿಣಾಮವಾಗಿ ತಾನು ಮಾಡಿಟ್ಟ ಆಸ್ತಿಯ ನಿರ್ವಹಣೆಯಲ್ಲಿ ಮುಂದೆ ಅವನು ವ್ಯವಹಾರಜ್ಞನಾಗಿ ನಡೆದುಕೊಳ್ಳಲಾರದೆ ಹೋದಾನೆಂಬ ಚಿಂತೆ ಮಂಜಯ್ಯನಿಗೆ ಇದೆ.

ವಿಮಲ ಓದಲೆಂದು ಮದ್ರಾಸಿಗೆ ಹೋಗಿ ಆರು ತಿಂಗಳುಗಳಾಗಿವೆ. ಬಿ.ಎ. ಓದಿ ಅವಳು ಮನೆಯಲ್ಲೇ ಕೂತಿರುವುದು ಕಂಡು ಬೇಸರವಾಗಿತ್ತು. ಎಷ್ಟು ಪುಸ್ತಕ ಓದಿಯಾಳು, ಎಷ್ಟು ಹೊತ್ತೆಂದು ಓದಿಯಾಳು? ಇಡೀಪ್ರಾಂತ್ಯದಲ್ಲಿ ಇನ್ನೊಂದಿಲ್ಲವೆಂದೇ ನೋಡಿದ ಪುಣ್ಯವಂತರು ಹೇಳುವ, ಅವರ ಹಿತ್ತಲಿನ ಖಾಸಗಿ ತೋಟದಲ್ಲಿ ಬೆಳೆದ, ಊಟಿಯಿಂದ ತಂದುನೆಟ್ಟ ಗುಲಾಬಿಗಳ ಮಧ್ಯೆ ಕೂತು ಅವಳು ಓದಿಕೊಳ್ಳುವುದು. ಸರ್ಕೀಟು ಬಂದ ದಿವಾನ್ ಮಿರ್ಜಾರವರು ಮಂಜಯ್ಯನ ಮನೆಗೆ ಬಂದಿದ್ದರೆಂದೂ, ಆಗ ಗುಲಾಬಿತೋಟವನ್ನು ಮೆಚ್ಚಿ ಸಾಹುಕಾರರಿಂಗೊಂದು ಧನ್ಯವಾದದ ಪತ್ರ ಬರೆದಿದ್ದರೆಂದೂ ಖ್ಯಾತಿಯಿದೆ.

ಹೀಗೇ ಮಂಜಯ್ಯನ ಅರಮನೆಯಂತಹ ಮನೆ ಬಗ್ಗೆ ಇನ್ನೂ ಎಷ್ಟೋ ಕಥೆಗಳಿವೆ. ಸಾಹುಕಾರರ ಪರಮಾಪ್ತನಾದ ಅಡುಗೆಯ ಐತಾಳರು ಸಹ ಹೋಗಿನೋಡದ ಕೋಣೆಯೊಂದಿದೆ ಎಂದೂ, ಈ ನೆಲಮಾಳಿಗೆಯ ಕೋಣೆಯನ್ನು ಘಟಸರ್ಪವೊಂದು ಕಾಯುತ್ತಿರುವುದೆಂದೂ, ಅಲ್ಲಿರುವ ಬಂಗಾರವನ್ನು ತೆಗೆಯಬೇಕಾದರೆ ಮಂಜಯ್ಯನವರು ಮಧ್ಯರಾತ್ರೆಯಲ್ಲಿ ಒಬ್ಬರೇ ಹಿತ್ತಲಿಗೆ ಬೆತ್ತಲೆ ಹೋಗಿ ನಾಗರಪೂಜೆ ಮಾಡಿಬರಬೇಕೆಂದು ಸಾಹುಕಾರರ ಮನೆಯ ಪರಿಚಾರಕರೇ ಹೇಳುವುದುಂಟು. ಇಂಥ ಎಷ್ಟೋ ಕಥೆಗಳನ್ನು ಕೇಳಿ ತಿಳಿದ ಅಕ್ಕುಮಾತ್ರ ಆ ಮನೆಯನ್ನು ನೋಡಿದ್ದು ಅವಳು ವಿಧವೆಯಾಗುವ ಮುಂಚೆ, ಇನ್ನೂ ಚಿಕ್ಕವಳಾಗಿದ್ದಾಗ. ಇಂಥ ಯಾವ ಕಥೆಗಳಿಗೂ ಕಿವಿಗೊಡದೆ ಬೆಳೆದವರೆಂದರೆ ಗಂಗೆ ಗೌರಿಯರು ಮಾತ್ರ.

ಸಾಹುಕಾರರ ಮಗಳು ವಿಮಲಾಗೆ ಹಿಂದಿ ಸಿನಿಮಾಗಳೆಂದರೆ ಇಷ್ಟ. ಮನೆಯಿಂದ ಶಿವಮೊಗ್ಗದಲ್ಲಿದ್ದ ಥೀಯೇಟರಿಗೆ, ಅಪ್ಪನದೇ ಥಿಯೇಟರು ಅದು, ಕಾರಿನಲ್ಲಿ ಮೂರು ಗಂಟೆಗಳ ಪ್ರಯಾಣ. ಮನೆಯಲ್ಲಿ ಎರಡು ಕಾರುಗಳು ಇವೆ. ಒಂದು ದೊಡ್ಡದು, ಅಪ್ಪನ ಪ್ರಯಾಣಯಕ್ಕೆ, ಇನ್ನೊಂದು ಹಳೆಯ ಕಾಲದ ಮಾರಿಸ್ ಮೈನರ್ – ಮಗಳ ಓಡಾಟಕ್ಕೆ. ಅದರಲ್ಲಿ ವಿಮಲ ವಾರಕ್ಕೊಮ್ಮೆಯಾದರೂ ಹೋಗಿ ಸಿನಿಮಾ ನೋಡಿ ಬರುತ್ತಾಲೆ.

ಕಾರಿಗೊಬ್ಬ ಡ್ರೈವರ್ ಇದ್ದಾನೆ. ಮಂಗಳೂರಿನವನು. ಮಿಂಗೇಲಿ ಎಂದು ಹೆಸರು. ನಿಜವಾದ ಹೆಸರುಮೈಕೇಲ್, ಆದರೆ ಬಾಯಿ ತಿರುಗದ ಊರವರ ಬಾಯಲ್ಲಿ ಇದು ಮಿಂಗೇಲಿಯಾಗಿ ಬಿಟ್ಟಿತೆಂದು ಅವನು ಹೇಲಿಕೊಳ್ಳುವುದು. ಮಿಂಗೇಲಿ ಹೈಸ್ಕೂಲ್ ಮುಗಿಸಿದ್ದಾನೆ; ಅವನ ಸರ್ಟಿಫಕೇಟಿನಲ್ಲಿರುವ ಹೆಸರು ಮೈಕೇಲ್ ಎಂದೇ. ಮಿಂಗೇಲಿ ಇಂಗ್ಲಿಷ್ ಮಾತಾಡಬಲ್ಲ; ಇಲ್ಲವಾದರೆ ಸಾಹಕಾರರ ಮನೆಯ ಡ್ರೈವರ್ ಅವನಾಗುತ್ತಿರಲ್ಲ.

ಮಿಂಗೇಲಿ ಮಾತ್ರ ಯೂನಿಫಾರಂ ಹಾಕಬೇಕಾಗಿಲ್ಲ. ಅದು ವಿಮಲನ ಹಠ; ಅಪ್ಪನ ಮಗಳೆಂದು ತಾನು ಟೌನಿನಲ್ಲಿ ಮೆರೆಯಬಾರದು ಅಲ್ಲವೆ?. ಹೀಗಾಗಿ ಅವನನ್ನು ಬಿಳಿಯ ಶರ್ಟ್, ಕಪ್ಪು ಪ್ಯಾಂಟು, ಹೊಳೆಯುವ ಚರ್ಮದ ಕಪ್ಪು ಶೂಗಳಲ್ಲಿ ಕಂಡವರು ಇವನೊಬ್ಬ ಡ್ರೈವರ್ ಎನ್ನುವಂತಿಲ್ಲ. ಸೊಗಸಾಗಿ ಟ್ರಿಮ್ ಮಾಡಿದ ಮೀಸೆ, ಎಡಬೈತಲೆಯ ಬಾಚಿದ ಕ್ರಾಪು, ಜೇಬಿನಲ್ಲಿ ಸಿಕ್ಕಿಸಿಕೊಂಡ ಸ್ವಾನ್ ಪೆನ್ನುಗಳಿಂದಾಗಿ, ಅವನುಓದುವ ಇಂಗ್ಲಿಷ್ ಪೇಪರಿನಿಂದಾಗಿ ಕಾಲೇಜು ಸ್ಟೂಡೆಂಟಿನಂತೆಯೇ ಅವನು ಕಾಣುವುದು. ಪೇಟೆಯಲ್ಲಿ ಮಾತ್ರವಲ್ಲ, ಊರಲ್ಲೂ ವಿಮಲ ಇವನನ್ನುಕರೆಯುವುದು ಮೈಕ್ ಎಂದು.

ಮಂಜಯ್ಯನ ಇಂಗ್ಲಿಷ್ ಕಾಗದಗಳನ್ನು ಅವನೇ ಟೈಪ್ ಮಾಡುತ್ತಾನೆ – ವಿಮಲನಿಂದ ಕಲಿತದ್ದು, ಅವಳ ಕೋಣೆಯಲ್ಲಿರುವ ಟೈಪ್‌ರೈಟರ್‌ನಲ್ಲಿ.

ಶಿವಮೊಗ್ಗೆಯಲ್ಲಿ ಮಂಜಯ್ಯನ ಗೆಸ್ಟ್‌ಹೌಸ್‌ಇದೆ. ರಾತ್ರೆ ಸಿನಿಮಾ ನೋಡಿ ಅಲ್ಲೇ ಉಳಿದಿದ್ದು, ಗೋಪಿ ಹೋಟೆಲಿನಲ್ಲಿ ಕಾಫಿತಿಂಡಿ ಮುಗಿಸಿ, ಮನೆಗೆ ಬೇಕಾದ ಸಾಮಾನುಗಳನ್ನು ಕೊಂಡು ಮಾರನೇ ದಿನ ಅವರು ಮನೆಗೆ ಬರುವುದು.

ವಿಮಲ ಕುಂಕುಮವಿಟ್ಟುಕೊಳ್ಳುತ್ತಾಳೆ ಎಂಬುದು ಅವಳ ಮಾವನಿಗೆ ಬೇಸರದ ವಿಷಯ. ಆದರೆ ನುಂಗಲಾರದ ಉಗುಳಲಾರದ ಎನ್ನುತ್ತಾರಲ್ಲ ಆ ಬಗೆಯ ಬೇಸರ. ಹೊಸ ಕಾಲವಲ್ಲವೆ? ಕಾಂಗ್ರೆಸ್ ಧುರೀಣರೂ, ಮೇಲ್ಮನೆಯ ಸದಸ್ಯರೂ, ಆಗರ್ಭ ಶ್ರೀಮಂತರೂ, ಮಹಾ ವರ್ಚಸ್ವಿಗಳೂ ಆದ ಮಂಜಯ್ಯನ ಮಗಳಲ್ಲವೆ? ಮಗ ಸತ್ತಿದ್ದರೂ ಈಗಲೂ ಈ ಸಂಬಂಧ ತಾನು ಹೇಳಿಕೊಳ್ಳುವ ವಿಷಯವಲ್ಲವೆ? ಅವರ ಋಣದಲ್ಲಿ ಇಲ್ಲದಿರುವ ಜಮೀನುದಾರರು ಯಾರಿದ್ದಾರೆ?

ವಿಮಲನ ಮಾವ ಗೋಪಾಲರಾಯರು ಸೊಸೆ ಕೇಶಚ್ಛೇದನ ಮಾಡಿಸಿಕೊಳ್ಳಬೇಕೆಂದು ಹೇಳುವುದಿರಲಿ, ಮನಸ್ಸಿನಲ್ಲೂ ಬಯಸಿರಲಿಲ್ಲ. ಆದರೆ ಕುಂಕುಮವಿಡುವುದು, ಜರಿ ಸೀರೆ ಉಡುವುದು ಬ್ರಾಹ್ಮಣಕನ್ಯೆಗೆ ಹೇಳೀಸಿದ್ದಲ್ಲ ಎಂದು ಪೂರ್ವ ಕಾಲದವರಾದ, ಮಂಜಯ್ಯನಷ್ಟು ಊರುತಿರುಗದ ತಾನು ತಿಳಿದಿರುವುದು ಎಂದು ತನ್ನ ಪರಮಾಪ್ತರಲ್ಲಿ ಅವರು ಹೇಳಿಕೊಂಡಿದ್ದಾರೆ. ತನಗೆ ಬೇರೆ ಮಕ್ಕಳಿಲ್ಲಿದಿರುವಾಗ, ಈ ಸೊಸೆಯೇ ತನ್ನ ನಂತರ ಆಸ್ತಿಗೆ ಹಕ್ಕುದಾರಳಾಗಿರುವಾಗ ಮಂಜಯ್ಯನವರು ತಮ್ಮ ದರ್ಪದಲ್ಲಿ ತನ್ನನ್ನು ಮಗಳ ವಿದ್ಯಾಭ್ಯಾಸದ ವಿಷಯದಲ್ಲಾಗಲೀ, ಉಡುಗೆ ತೊಡುಗೆಯ ವಿಷಯದಲ್ಲಾಗಲೀ, ಒಂದೇ ಒಂದು ಮಾತನ್ನು ಕೇಳಲಿಲ್ಲವೆಂದು ಅವರಿಗೆ ಬೇಸರ. ತನ್ನ ಬೀಗರು ಕಾನೂನಿನ ಮನುಷ್ಯನೆಂದು ಎಲ್ಲರಿಗೂ ಗೊತ್ತು; ಆದ್ದರಿಂದ ಅವರಿಗೆ ಗೊತ್ತಿರಬೇಕು, ಮಗಳ ನಿಜವಾದ ಮನೆ ಅವಳು ಸೇರಿದ ಮನೆ, ಇಲ್ಲಿನ ಆಸ್ತಿಯೆಲ್ಲ ಅವಳದೇ ಆಸ್ತಿ ಅಂತ. ಆದರೆ ಅಷ್ಟೆಲ್ಲ ಶ್ರೀಮಂತನಾದರೂ ಕೇವಲ ನಾಲ್ಕೈದು ಲಕ್ಷಗಳ ಮೊಬಲಗಿನ ಮಗಳ ಬಂಗಾರವನ್ನು ಅವಳನ್ನು ಮನೆಗೆ ಕರೆದುಕೊಂಡು ಹೋಗುವಾಗ ಟ್ರಂಕಿಗೆ ತುಂಬಿಸಿ ತೆಗೆದುಕೊಂಡು ಹೋಗಿಬಿಡುವುದೆ? ಅವರ ಅಳಿಯ ಸತ್ತು ಎರಡು ತಿಂಗಳು ಸಹ ಆಗಿರಲಿಲ್ಲ. ಮುಂದೆ ಅವನ ವಾರ್ಷಿಕಕ್ಕೆಂದು ಮಾತ್ರ ಮಗಳನ್ನು ಗಂಡನಮನೆಗೆ ಅವರು ಕಳಿಸಿರುವುದು, ಅಷ್ಟೇ. ಅದೂ ಒಂದು ದಿನದಮಟ್ಟಿಗೆ. ಕಾರ್ಯ ಮುಗಿದದ್ದೇ ಅವಳನ್ನು ಜೊತೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿಬಿಟ್ಟರು.

ತನಗೂ ತನ್ನ ಹೆಂಡತಿಗೂ, ಆ ದಿನ ಸಹ ಕುಂಕುಮವಿಟ್ಟುಕೊಂಡಿದ್ದ ಈ ಮಹರಾಯಿತಿ ಸೊಸೆ ನಮಸ್ಕಾರಮಾಡಿ ಹೋಗಲು ಬಂದಿದ್ದಾಗ ಕೇಳಿಯೇ ಬಿಡಬೇಕೆಂದುಕೊಂಡ ಒಂದು ಮಾತು ಅವರ ನಾಲಗೆಯ ಮೇಲೇ ಇತ್ತು, ‘ಇದೂ ನಿನ್ನ ಮನೆಯಲ್ಲವ? ನಿನ್ನ ಅಪ್ಪ ಹಾಕಿದ ಬಂಗಾರದಜೊತೆ ನಾವು ಹಾಕಿದ್ದನ್ನೂ ನೀನು ತೆಗೆದುಕೊಂಡು ಹೋಗಿಬಿಟ್ಟದ್ದು ಸರಿಯೋ’.

ಆದರೆ ನಯವಾಗಿ ನಗುತ್ತಲೇ ದರ್ಪದಲ್ಲಿ ನಿಂತಿದ್ದ ಮಂಜಯ್ಯನಿದಿರು ಸಣ್ಣ ವಿಷಯಕ್ಕೆ ಜಗಳ ತೆಗೆಯುವುದು ಸರಿಕಾಣಲಿಲ್ಲ.

ಈಗ ತಾನೊಂದು ದತ್ತು ತೆಗೆದುಕೊಂಡರೆ ಈ ಮಂಜಯ್ಯನ ದರ್ಪ ಏನು ಕಿತ್ತೀತು ಎಂಬ ಛಲ ಗೋಪಾಲರಾಯರಲ್ಲಿ ಹುಟ್ಟಿಕೊಂಡಿದೆ.

ಅಕ್ಕುಮಾಡುವ ರುಚಿರುಚಿಯಾದ ಅಡುಗೆಯಲ್ಲಿ ಉಳಿದುಪಳಿದುದಕ್ಕಾಗಿ ಹಿತ್ತಲಿಗೆ ಬಂದು, ‘ಅಕ್ಕವ್ವ ಬಾಯಿಗೇನಾದರೂ ಇದೆಯಾ?’ ಎಂದು ಕೇಳಿ, ಬಾವಿ ಕಟ್ಟೆಯ ಬುಡದಲ್ಲಿ ಕುಕ್ಕರು ಕೂತು, ಹಾಳೆ ಟೋಪಿಯನ್ನು ಕೆಳಗಿಟ್ಟು, ಯಾರು ಹೆತ್ತರು, ಯಾರು ಬಸುರಿ, ಯಾರಿಗೆ ಬಸುರಿ, ಹೇಗೆ ಹೆರಿಗೆಯಾಯಿತು, ಯಾರು ಎಷ್ಟು ತೆರ ಕೊಟ್ಟರು, ಕೊಡುವೆನೆಂದು ಹೇಳಿ ಯಾರು ಮೋಸಮಾಡಿದರು, ಯಾರು ಎಷ್ಟು ಬೆಲೆಗೆ ಯಾವ ಸೀರೆ ಕೊಂಡರು ಇತ್ಯಾದಿ ಇತ್ಯಾದಿ ಊರ ಸುದ್ದಿಯನ್ನೆಲ್ಲ ಅಕ್ಕು ಕಿವಿಗೆ ಮುಟ್ಟಿಸುವ, ಮುಟ್ಟಿಸಿ ಬೈಸಿಕೊಳ್ಳುವ, ಬೈಯುವರೆಂದು ಗೊತ್ತಿದ್ದೂ ಅಕ್ಕವ್ವನಿಗೆ ಇದರಿಂದ ಸಂತೋಷವೂ ಆಗುತ್ತದೆಂದು ತಿಳಿದಿರುವ, ಏನಿಲ್ಲದ್ದರೂ ಅದೂ ಇದೂ ಮಾತಾಡಿ, ಬೆನ್ನು ತೊಡೆ ಸೊಂಟ ಕತ್ತು ಹೊಟ್ಟೆ ಎಲ್ಲೆಲ್ಲಿ ನೋವಾಗುತ್ತಿದೆಯೆಂದು ಕಷ್ಟ ಸುಖಗಳ ಬಗ್ಗೆ ಮಾತಾಡಿ, ದೇವರ ಸೃಷ್ಟಿಯ ವೈಚಿತ್ರ್ಯದ ಬಗ್ಗೆ ಅಕ್ಕುವಿನಿಂದ ಹೌದೆನ್ನಿಸಿಕೊಳ್ಳುವ ಮಾತಾಡಿ, ಕೊಟ್ಟದ್ದನ್ನು ತಿಂದೊ, ಮಗುವಿಗೆಂದು ಬಾಳೆಲೆಯಲ್ಲಿ ಕಟ್ಟಿಕೊಂಡೋ ಹೋಗುವ ಆಳುಮಕ್ಕಳು ಕೂಡ ‘ಈ ಮಗು ಯಾರದು? ಹೇಗೆ ಬಂತು’ ಎಂದು ಕೇಳುವ ಧೈರ್ಯ ಮಾಡಲಿಲ್ಲ. ಅಕ್ಕುವಿನ ಸಂಭ್ರಮ, ಒಳಗಿಂದ ಹೊರಗೆ ಓಡಾಡುವ ಅವಳ ಗಡಿಬಿಡಿ, ಅವಳು ವರ್ಣಿಸುವ ಮಗುವಿನ ಬಾಲಲೀಲೆ ಎಲ್ಲರ ಬಾಯಿಯನ್ನೂ ಮುಚ್ಚಿಸಿಬಿಟ್ಟಿತ್ತು. ಒಂದೇ ಒಂದು ಸಲ ನೆಂಟಸ್ತಿಕೆಯ ಮೇಲೆ ಪರ ಊರಿನಿಂದ ಬಂದ ಕೆಲಸದ ಹೆಣ್ಣೊಬ್ಬಳು, ಅವಳ ಜೊತೆಗಾತಿ ಕಣ್ಣುಮಿಟುಕಿಸಿದ್ದನ್ನು ಗಮನಿಸದೆ, ಕುತೂಹಲಕ್ಕೆ ಮಗು ಯಾವಜಾತಿಯದೊ ಎಂದು ಬಿಟ್ಟಿದ್ದಳು. ಅದು ಬ್ರಾಹ್ಮಣ ಕೂಸು ಎಂದಾದರೂ ಅಕ್ಕವ್ವ ಹೇಳುವರು ಎಂದುಕೊಂಡರೆ, ಅಕ್ಕು ಹೇಳಿದ್ದೇ ಬೇರೆ:

‘ಅದು ದೇವರ ಕೂಸು; ಅದರ ಜಾತಿ ಕುಲ ಗೋತ್ರ ಕೇಳಬಾರದು’ ಎಂದು ನಿರ್ಭಾವದಲ್ಲಿ, ಅದೊಂದು ಕೇಳುವ ಪ್ರಶ್ನೆಯಲ್ಲ, ಗೊತ್ತಿರಬೇಕಾದ ಸಂಗತಿಯೆಂಬಂತೆ ಹೇಳಿ ಬಿಟ್ಟಿದ್ದಳು.

ಆದರೆ ಹಳ್ಳಿಯ ಬಾಯಿ ಮಾತಾಡಿಕೊಂಡಿತು; ಎಲ್ಲ ಬಂದು ಬೀಳುವ ಅಕ್ಕು ಕಿವಯಲ್ಲಿ ಮಾತ್ರ ಈ ಯಾವುದಕ್ಕೂ ಆಸ್ಪದವಿರಲಿಲ್ಲ. ಆರ್ಶಚರ್ಯವೆಂದರೆ ಈ ಕೂಸು ಹುಟ್ಟುವ ಮುಂಚೆಯೇ ಅದರ ಕುಲಾವಿಯನ್ನು ಹಳ್ಳಿಯವರು ಹೊಲಿದಿದ್ದರೂ ಅಕ್ಕು ಕಿವಿಗೆ ಮಾತ್ರ ಅದನ್ನು ಮುಟ್ಟಿಸಿರಲಿಲ್ಲ. ಹಳ್ಳಿಗರ ಬಾಯಲ್ಲಿ ಗರ್ಭಗೊಂಡು ಬೆಳೆಯುತ್ತ ಹೋದ ಈ ಮಗು ಅಕ್ಕುಗೆ ಹೇಗೆ ಹುಟ್ಟುವ ಮುಂಚೆ ನಿಲುಕದೆ ಹೋಯಿತು ಎಂದರೆ, ಇದು ಎಲ್ಲರೂ ಭಯಪಡುವ ದೊಡ್ಡವರ ವಿಚಾರವಾದ್ದರಿಂದ, ಬ್ರಾಹ್ಮಣರ ಮನೆಯ ಗುಟ್ಟಾದ್ದರಿಂದ.

ಮಂಗಳೂರಿನಲ್ಲಿರುವ ತಾಯಿಯ ಮೈಯಲ್ಲಿ ಸೌಖ್ಯವಿಲ್ಲವೆಂದು ಮಿಂಗೇಲಿ, ಸ್ವತಃ ಮೈಯಲ್ಲಿ ಅಷ್ಟು ಸರಿಯಿಲ್ಲದ ಸಾಹುಕಾರರ ಅಪ್ಪಣೆ ಪಡೆದು ಆರುತಿಂಗಳ ಹಿಂದೆ ಪ್ಯಾಂಟು ಶರ್ಟು ಹಾಕಿಕೊಂಡು ಕೈಯಲ್ಲಿ ಚರ್ಮದ ಹೊಸಾ ಟ್ರಂಕನ್ನು ಹಿಡಿದುಕೊಂಡು ಟಪ್ಪಾಲು ಬಸ್ಸಿಗೆ ಕಾದು ನಿಂತಿದ್ದಾಗಲೇ ಸುದ್ದಿ ಕುಡಿಯೊಡೆದಿತ್ತು. ‘ಅಲ್ಲ – ಮಂಗಳೂರಿಗೆ ಹೋಗ್ತೀನೀಂತ  ಶಿವಮೊಗ್ಗ ಕಡೆಗೆ ಹೋಗುವ ಬಸ್ಸನ್ನ ಈ ಮಿಂಗೇಲಿ ಮಾರಾಯ ಯಾಕೆ ಹತ್ತಿದನೊ?’ ಎಂದು ಯಾರೊ ಹೇಳಿದಾಗ, ‘ದಿಕ್ಕು ತಪ್ಪಿದವರ ಕಥೇನೆ ಹಾಗೆ. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗೋದು’ ಎಂದು ಯಾರೊ ಕೊಟ್ಟ ಉತ್ತರ ಎಲ್ಲರನ್ನು ಕರೆದುಕೊಂಡು ಎಲ್ಲಿಗೊ ಇನ್ನಷ್ಟು ಓದಲೆಂದು ಹೊರಟು ಹೋಗಿದ್ದರು. ಮೈ ಕೈ ತುಂಬಿ ಲಕ್ಷಣವಾಗಿ ಕಾಣುತ್ತ ಇದ್ದ, ಯಾರ ಹತ್ತಿರವೂ ಮಾತಾಡದ, ಆದರೆ ತುಂಬ ಕೈ ಧಾರಾಳದ ವಿಮಲಮ್ಮನ ಬಗ್ಗೆ ಸೊಪ್ಪು ತರಲು ಕಾಡಿಗೆ ಹೋಗುವ ಹೆಂಗಸರು ಮಾತಾಡಿಕೊಂಡಿದ್ದರು:

‘ಮದ್ರಾಸಂತೆ. ಎಲ್ಲಿದೆಯೇ ಅದು? ಅಮ್ಮ ಓದಿದ್ದು ಸಾಲದೇನೆ?’

ಸಾಹುಕಾರರ ಮನೆ ಬಗ್ಗೆ ತಮ್ಮ ತಮ್ಮಲ್ಲೂ ಇದಕ್ಕಿಂತ ಹೆಚ್ಚು ಮಾತಾಡುವುದು ಸಂಕೋಚದ ವಿಷಯ ಮಾತ್ರವಲ್ಲದೆ ಅಗತ್ಯವೆಂದೂ ತೋರಿರಲಿಲ್ಲ. ಹೊಗೆಸೊಪ್ಪನ್ನು ಕೆನ್ನೆಯ ಒಳಗೆ ಇಟ್ಟು ಸವಿಯುತ್ತ, ಉಗುಳುತ್ತ, ಅಷ್ಟಿಷ್ಟೇ ಮಾತಿನಲ್ಲಿ ಈ ಆರು ತಿಂಗಳು ತಮಗೇ ಸೂಚಿಸಿಕೊಂಡು, ಆಡಿಕೊಳ್ಳದಂತೆ ಆಡಿಕೊಂಡು, ಆರು ತಿಂಗಳು ಕಾದದ್ದು ಆಯಿತು. ಕಾದದ್ದರ ಫಲವನ್ನೂ ಕಂಡದ್ದಾಯಿತು.

‘ಅದೆಷ್ಟು ಚೆಂದಾನೇ ಆ ಮಗು, ಎಷ್ಟು ಗುಂಡ ಗುಂಡಗೆ ಇದೆಯಲ್ಲೆ, – ತಾಯಿ ಎದೆ ಹಾಲೂ ಇಲ್ಲದೆ ಅದೆಷ್ಟು ಲಕಲಕಾಂತ ಇದೆಯಲ್ಲೇ; ಕಂಡವರನ್ನೆಲ್ಲ ನೋಡಿ ನಗನಗ್ತ ಇರತ್ತಲ್ಲೇ; ಸಾಹುಕಾರರ ಮನೇಲಿ ಅದು ಇದಿದ್ದರೆ ನಮಗೆ ಕಾಣಕ್ಕೆ ಸಿಗ್ತಿತ್ತೇನೇ ಮಾರಾಯ್ತಿ; ತನಗೇ ಹುಟ್ಟಿದ ಹಾಗೆ ಸಾಕ್ತಿದಾರಲ್ಲೇ ಅಕ್ಕವ್ವ. ಇಲ್ಲೇ ಇದ್ದುಕೊಂಡು ಮಗೂನ್ನ ನೋಡದ ಹಾಗೆ ಅದರ ಅಮ್ಮ ಹೇಗಿರೋದು ಸಾಧ್ಯವೆ?’

ಹೀಗೆ ಅಂದುಕೊಳ್ಳದಿರುವವರು ಆ ಹಳ್ಳಿಯ ಸುತ್ತಮುತ್ತ ಇರಲಿಲ್ಲ.

ಸಾಹುಕಾರರು ಬೆಂಗಳೂರಿನಲ್ಲಿ ಆಸ್ಪತ್ರೆ ಸೇರಿಯಾದ ಮೇಲೆ ವಹಿವಾಟು ವಹಿಸಿಕೊಂಡ ವಿಮಲಮ್ಮ ಮಾತ್ರ ಎಲ್ಲೋ ಕೆಲವೇ ಕೆಲವು ಪುಣ್ಯವಂತರಾದ ಆಳು ಹೆಂಗಸರ ಕಣ್ಣಿಗೆ ಗೋಚರವಾಗಿದ್ದಳು. ಅದೂ ಕಾರಿನಲ್ಲಿ ಓಡಾಡುವಾಗ. ಕೊಂಚ ತೋರವಾಗಿದ್ದಾರೆ, ಬಿಳುಚಿಕೊಂಡಿದ್ದಾರೆ ಎಂದು ಅವರನ್ನು ಮಿಂಗೇಲಿ ಪಕ್ಕದಲ್ಲಿ ಕಾರಿನಲ್ಲಿ ಕೂತದ್ದನ್ನು ಕಂಡವರು ಹೇಳಿದ್ದರು. ‘ಅಲ್ಲ, ಸಾಹುಕಾರ‍್ರು ಹಿಂದಿನ ಸೀಟಲ್ಲಿ ಕೂರೋದು; ಆದರೆ ನಮ್ಮ ವಿಮಲಮ್ಮ ಮಾತ್ರ ಡ್ರೈವರ್ ಪಕ್ಕಮುಂದಿನ ಸೀಟಲ್ಲೇ ಕೂರೋದಲ್ಲ’ ಎಂದು ಹೇಳಿ ಸೆರಗಿಂದ ಬಾಯಿಮುಚ್ಚಿಕೊಂಡು ಒಬ್ಬ ವಯ್ಯಾರಿ ನಕ್ಕಿದ್ದಳು.

ಮಗಳ ಬಗ್ಗೆ ಯಾವ ಸಂಶಯವಿಲ್ಲದಂತೆ ಮಂಜಯ್ಯನವರು ತಮ್ಮಲೋಕದಲ್ಲೇ ಇದ್ದು ಬಿಟ್ಟಿದ್ದರು. ಮುದ್ದಿನ ಮಗಳು ಕೇಳಿದ್ದನ್ನು ಅವರು ಇಲ್ಲವೆನ್ನರು. ಮೈಸೂರಲ್ಲಿ ಓದಬೇಕೋ ಮೈಸೂರಲ್ಲಿ, ಮದ್ರಾಸಲ್ಲಿ ಲಾ ಓದಬೇಕೊ ಆಯಿತು ಮದ್ರಾಸಲ್ಲಿ, ಹಾಸ್ಟೆಲಲ್ಲಿ ಇರಬೇಕೊ ಹಾಸ್ಟೆಲಲ್ಲಿ, ಮನೆಮಾಡಿಕೊಂಡು ಇರಬೇಕೊ, ಆಗಲಿ, ಮನೆಯಲ್ಲಿ – ಎಲ್ಲ ವಿಮಲಳ ಇಷ್ಟದಂತೆ. ಈಗ ಮದ್ರಾಸಲ್ಲಿ ಆರು ತಿಂಗಳಿಂದ ಅವಳು ಮನೆ ಮಾಡಿಕೊಂಡು ಅಲ್ಲಿಯ ಹೆಂಗಸೊಬ್ಬಳನ್ನು ಅಡುಗೆಗೆ ಇಟ್ಟುಕೊಂಡಿರುವುದು, ಇದು ತಾನು ಬಯಸಿದಂತೆ ಕೂಡ ಎಂದು ತಂದೆಯ ನಂಬಿಕೆ.

ಒಂದು ಲಾ ಕಾಲೇಜಿಗೆ ವಿಮಲ ಸೇರಿದ್ದೇನೊ ನಿಜವೇ; ಒಂದೆರಡು ತಿಂಗಳು ಕ್ಲಾಸುಗಳಿಗೆ ಹೋಗಿ ರೋಮನ್ ಲಾ ತನಗೆ ಇಷ್ಟವೆಂದು ತಂದೆಗೆ ಹೇಳಿದ್ದರಲ್ಲೂ ನಿಜವಿತ್ತು. ಆದರೆ ಅವಳು ಆಮೇಲಿಂದ ಐಸ್‌ಕ್ರೀಮ್‌ ತಿಂದು ಬರಲ ಸಮುದ್ರದಂಡೆಗೆ ಕಾರು ಮಾಡಿಕೊಂಡು ಹೋಗಿಬರುವುದು ಬಿಟ್ಟರೆ, ದಾಸಪ್ರಕಾಶದಲ್ಲಿ ಆಗೀಗ ಊಟಕ್ಕೆ ಹೋಗಿಬರುವುದು ಬಿಟ್ಟರೆ ಇರುವುದು ಸದಾ ಮನೆಯಲ್ಲಿ; ಇಂಗ್ಲೀಷ್ ರೊಮಾನ್ಸ್‌ಗಳನ್ನು ಓದುತ್ತ. ಅಥವಾ ಮಿಂಗೇಲಿಯ ಜೊತೆ ಸತತವಾಗಿ ವಾದಿಸುತ್ತ, ಜಗಳವಾಡುತ್ತ.

ಅವಳ ಬಾಯಿಗೆ ಮಿಂಗೇಲಿ ಎಣೆಯಲ್ಲ. ಅವಳನ್ನು ಏಕವಚನದಲ್ಲಿ ಕರೆಯುವಷ್ಟು ಮುಂದಾದದ್ದೇ ಅವನು ಈಚೆಗೆ. ಬಹುವಚನ ಪ್ರಯೋಗದಲ್ಲೇ ಅವಳನ್ನು ಮುದ್ದಿಸಿ ಅವನು ಬಸಿರು ಮಾಡಿದ್ದು.

ಜಗಳಕ್ಕೆ ಕಾರಣ ಮತ್ತೇನಿಲ್ಲ; ಅವನು ನಿರೀಕ್ಷಿಸದೇ, ಅಪೇಕ್ಷಿಸದೇ ಆಗಿ ಹೋದ ಅವಳ ಬಸುರು. ಅದನ್ನು ತೆಗೆಸೋಣವೆಂದು ಮಿಂಗೇಲಿ. ಬೇಡವೆಂದು ವಿಮಲ. ತಂದೆಯ ಮಗಳಾದ ತನಗೆ ಏನನ್ನಾದರೂ ನಿರ್ವಹಿಸುವುದು ಸಾಧ್ಯವೆಂಬ ಅಸಾಧಾರಣ ಭರವಸೆ ವೈಧ್ಯವ್ಯದಿಂದ ಪಾರಾಗಿ ಫಲವಂತಳಾದ ಸುಖದ ವಿಮಲಳಿಗೆ, ಇನ್ನು ಆರು ತಿಂಗಳಲ್ಲಿ ಅದು ಹುಟ್ಟುತ್ತದೆ; ಮದ್ರಾಸಿನಲ್ಲೇ ಹುಟ್ಟಿಸಿಕೊಳ್ಳುವುದು. ಅಷ್ಟರಲ್ಲಿ ಅಣ್ಣ ಇಂಗ್ಲೆಂಡಿಂದ ಬರುತ್ತಾನೆ. ಬಂದವನು ಅಪ್ಪನನ್ನು ಒಪ್ಪಿಸುತ್ತಾನೆ. ಅಥವಾ ಏನೋ ಮಾಡುತ್ತಾನೆ.

ತಾನೊಬ್ಬ ಬಡಪಾಯಿ ಡ್ರೈವರ್ ಆದ್ದರಿಂದ ಖಂಡಿತ ಸಾಹುಕಾರರ ಮಗ ಇಂಗ್ಲೆಂಡಿನಲ್ಲಿ ಓದಿದರೂ ತನ್ನನ್ನು ತಂಗಿಯ ಗಂಡನೆಂದು ಒಪ್ಪಿಲೊಳ್ಳಲಾರೆಂದು ಮಿಂಗೇಲಿಗೆ ಸಂಶಯ. ಒಂದು ದಿನ ಅವನು ಬಸುರು ತೆಗೆಸಲೇಬೇಕೆಂದು ಹಠಮಾಡಿಕೂತ. ತಾನು ದೇಶಾಂತರ ಓಡಿಹೋಗುತ್ತೇನೆಂದು ಬೆದರಿಸಿದ. ವಿಮಲ ಅಣ್ಣನಿಗೆ ಫೋನನ್ನು ಬುಕ್ ಮಾಡಿ ಕಾದಳು. ಸಿಕ್ಕಿದ ಅಣ್ಣನಿಗೆ ತನ್ನ ಕಷ್ಟ ತೋಡಿಕೊಂಡಳು. ಅಪ್ಪನ ಆರೋಗ್ಯವೂ ಸರಿಯಾಗಿಲ್ಲ, ಅವರನ್ನು ತಾನು ಎದುರಿಲಾರೆ ಎಂದಳು. ಘನಶ್ಯಾಮ ಸಮಾಧಾನವಾಗಿ ಕೇಳಿಸಿಕೊಂಡ.

‘ನೀನು ಮಾಡಿದ್ದರಲ್ಲಿ ತಪ್ಪಿಲ್ಲ; ಧೈರ್ಯದ ಹುಡುಗನೊಬ್ಬನನ್ನು ನೀನು ಮದುವೆಯಾಗ ಬಹುದಿತ್ತು. ಆದದ್ದು ಆಯಿತು. ಅಪ್ಪನಿಗೆ ನಾನು ಆರು ತಿಂಗಳ ನಂತರ ಬಂದವನು ಎಲ್ಲ ಹೇಳಿ ಸರಿ ಮಾಡುತ್ತೇನೆ. ಮಗು ಬೇಕೆನ್ನಿಸಿದರೆ ಅದನ್ನು ನೀನು ಹೆರಬೇಕು. ಅಥವಾ ಬೇಡವನ್ನಿಸಿದರೆ, ಆ ಹುಡುಗನ ಜೊತೆ ಬಾಳ್ವೆ ಮಾಡಲಾರೆ ಎನ್ನಿಸಿದರೆ ಗರ್ಭ ತೆಗಿಸಿಕೊ. ಮಾತ್ರ ಒಳ್ಳೆಯ ಡಾಕ್ಟರರನ್ನು ಹೋಗಿ ನೋಡು’: ಹೀಗೆ ಘನಶ್ಯಾಮ ಹೇಳಿದ್ದನ್ನು ಕೇಳಿಸಿಕೊಂಡು ಮಿಂಗೇಲಿ ಧೈರ್ಯ ತಂದುಕೊಂಡ.

೧೦

ದಿನ ತುಂಬಿತು. ವಿಮಲ ಮಗುವನ್ನು ಒಂದು ಆಸ್ಪತ್ರೆಯಲ್ಲಿ ಹೆತ್ತಳು. ಇದಾದ ಸುಮಾರು ಒಂದು ತಿಂಗಳ ಒಳಗೆ ಅಪ್ಪನಿಂದ ತಾರು ಬಂತು.

‘ನಾನು ಆಸ್ಪತ್ರೆ ಸೇರಬೇಕಾಗಿದೆ, ನೀನು ಬಂದು ಮನೆ ವ್ಯವಹಾರವನ್ನು ನೋಡಿಕೊಳ್ಳಬೇಕು, ನಿನ್ನ ಅಣ್ಣ ಬಂದಮೇಲೆ ಓದನ್ನು ಮುಂದುವರಿಸಿದರಾಯಿತು’ ಎಂದು.

ವಿಮಲ ಕಾರು ಮಾಡಿಕೊಂಡು ಮಿಂಗೇಲಿಯ ಜೊತೆ ಸೀದ ಬಂದು, ಭದ್ರಾವತಿಯ ಹೋಟೆಲೊಂದರಲ್ಲಿ ಒಂದು ಸಂಜೆ ಗುಪ್ತವಾಗಿ ಕಳೆದು, ಇನ್ನೊಂದು ಕಾರುಮಾಡಿ, ಅದರಲ್ಲಿ ಮಿಂಗೇಲಿ ಇನ್ನೂ ಬೆಳಕು ಹರಿಯುವುದರೊಳಗೆ ಅಕ್ಕುಮನೆಗೆ ಹತ್ತಿರದ ರಸ್ತೆಯನ್ನು ತಲುಪಿ ಕಾರನ್ನು ನಿಂತಿರುವಂತೆ ಏನೊ ಸುಳ್ಳು ಹೇಳಿ, ತೊಟ್ಟಿಲಲ್ಲಿ ಮಗುವನ್ನಿಟ್ಟು, ಅರಣ್ಯದ ಗುಪ್ತ ಒಳದಾರಿಯಲ್ಲಿ ಒಂದು ಮೈಲಿ ದೂರವಾದರೂ ತನ್ನ ತಲೆಯಮೇಲೆ ಮಗುವನ್ನು ಹೊತ್ತು ತಂದು, ಅಕ್ಕು ಮನೆಯ ಬಚ್ಚಲೊಲೆಯ ಮುಂದೆ ಆ ತೊಟ್ಟಿಲನ್ನಿಟ್ಟು, ನಿದ್ದೆಯಲ್ಲಿದ್ದ ಮಗುವಿಗೆ ಬೆಚ್ಚಗೆ ಹೊದೆಸಿ, ತಿರುಗಿ ಹೋಗಿ ಕಾರು ಹತ್ತಿ ತಿರ್ಥಹಳ್ಳಿಗೆ ಹೋಗಿ, ಮಾರನೇ ದಿನ ಮಂಗಳೂರಿನಿಂದ ಸೀದ ಬಂದವನಂತೆ ಬಂದದ್ದು. ವಿಮಲ ಇನ್ನೊಂದು ಕಾರು ಮಾಡಿಕೊಂಡು ಅವನ ಹಿಂದೆಯೇ ದೇವನೂರಿಗೆ ಬಂದದ್ದು.

ವಿಮಲ ಬಂದದ್ದೇ ಮಂಜಯ್ಯನವರು ಬೆಂಗಳೂರಿಗೆ ಹೊರಟರು. ಅವರಿಗೆ ಈಗ ಕಣ್ಣು ಸರಿಯಾಗಿ ಕಾಣದು. ಈ ಆರು ತಿಂಗಳಲ್ಲಿ ಇದು ಮೂರನೇ ಸಾರಿ ಅವರು ಆಸ್ಪತ್ರೆಗೆ ಬೆಂಗಳೂರಿನಲ್ಲಿ ಸೇರುತ್ತಿರುವುದು. ಒಂದು ದೊಡ್ಡ ಅಪರೇಶನ್ ಆದ ಮೇಲೆ ಇನ್ನೊಂದು ಸಣ್ಣ ಆಪರೇಶನ್ ಆಗಿ, ಈಗ ಮತ್ತೆ ಆಸ್ಪತ್ರೆ ಸೇರಬೇಕಾಗಿದೆ ಅವರು.