೧೧

ಸಾಹುಕಾರ್ ಮಂಜಯ್ಯನವರ ಲೋಕ ರಾಜಕೀಯದ್ದು; ಅಥವಾ ಆಸ್ತಿಯ ವ್ಯವಹಾರಕ್ಕೆ ಸಂಬಂಧಿಸಿದ್ದು. ಯಾರು ಮಂತ್ರಿಯಾದರು, ಯಾರಾಗಬೇಕು, ಯಾರು ಯಾವುದರ ಛೇರ್ಮನ್ನಾಗಬೇಕು – ಈ ಎಲ್ಲದರಲ್ಲೂ ಮಂಜಯ್ಯನ ಅಭಿಪ್ರಾಯಕ್ಕೆ ಮನ್ನಣೆಯಿದೆಯೆಂದು ಭಾವಿಸಿಕೊಳ್ಳಲು ಅವಕಾಶವಿರುವಂತೆ ದೇಶದ ನಾಯಕರು ಮಂಜಯ್ಯನ ಜೊತೆ ವ್ಯವಹರಿಸುತ್ತಾರೆ. ಸುಮಾರು ನಾಲ್ಕೈದು ಜನರಾದರೂ ಚುನಾವಣೆಯ ಖರ್ಚಿಗಾಗಿ ಮಂಜಯ್ಯನಿಗೆ ಉಪಕೃತರು. ಬ್ರಾಹ್ಮಣ ಸಮುದಾಯದಲ್ಲಿ ಮಂಜಯ್ಯನಿಗೆ ಬೆಂಬಲವಿದೆಯೆಂದು ಚುನಾವಣೆಯಲ್ಲಿ ಇವರನ್ನು ಎಲ್ಲ ಕ್ಷೇತ್ರದವರೂ ಒಮ್ಮೆಯಾದರೂ ತಮ್ಮ ಕ್ಷೇತ್ರದಲ್ಲಿ ಸುತ್ತಾಡಿ ಹೋಗುವಂತೆ ಒತ್ತಾಯಿಸುತ್ತಾರೆ.

ತನ್ನನ್ನು ಒಂದೇ ಒಂದು ಸಾರಿಯಾದರೂ ಮಂತ್ರಿಮಾಡಿಲ್ಲವೆಂಬ ಬೇಸರವನ್ನು ಮಂಜಯ್ಯ ಇಂಥ ತನ್ನ ಉಪಯುಕ್ತತೆಯಿಂದ, ಅದಕ್ಕೆ ಸಿಗುವ ಮೆಚ್ಚಿಗೆಯಿಂದ ಮರೆಯಲು ಯತ್ನಿಸುತ್ತಾರೆ. ತನಗೆ ರಾಜಕೀಯದಲ್ಲಿ ಯಾರೂ ಅಂಥ ವೈರಿಯಿಲ್ಲ ಎನ್ನುವುದು ತನ್ನ ಹೆಚ್ಚುಗಾರಿಕೆಯೆಂದು ತಿಳಿದುಕೊಂಡದ್ದೇ ಮಂಜಯ್ಯನ ರಾಜಕೀಯ ವರ್ಚಸ್ಸು ಬೆಳೆಯದಿರಲು ಕಾರಣವಾಯಿತು ಎಂಬುದು ಮನದಟ್ಟಾಗದಷ್ಟು ಹಳೆಕಾಲದವರು ಅವರು ಆಗಿಬಿಟ್ಟಿದ್ದರು. ರಾಜಕೀಯದಲ್ಲಿ ವೈರ ಕಟ್ಟಿಕೊಳ್ಳಲಾರದವನು ಸ್ನೇಹಿತರನ್ನೂ ಪಡೆದಿರುವುದಿಲ್ಲ ಎಂಬುದು ಗೊತ್ತಾಗುವಷ್ಟರಲ್ಲಿ ಮಂಜಯ್ಯನ ಆರೋಗ್ಯವೂ ಕೆಡಲು ಶುರುವಾಗಿಬಿಟ್ಟಿತ್ತು.

ಅವರ ಒಟ್ಟು ಪತನಕ್ಕೆ ಕಾರಣಗಳು ಹಲವು. ಮುಖ್ಯವಾದ್ದಕ್ಕೆ ಬರುವ ಮೊದಲು ಅವರನ್ನು ಸೈದ್ಧಾಂತಿಕವಾಗಿ ಗಲಿಬಿಲಿಗೊಳ್ಳುವಂತೆಯೂ ಜನಪ್ರಿಯತೆ ಕಳೆದುಕೊಳ್ಳುವಂತೆಯೂ ಯಾವುದು ಮಾಡಿತು ಎಂಬುದನ್ನು ಮೊದಲು ಹೇಳಿಬಿಡಬೇಕು. ಹರಿಜನೋದ್ಧಾರ, ಮೀಸಲಾತಿ, ಊರಿಗೆ ರಸ್ತೆ ಶಾಲೆ ಆಸ್ಪತ್ರೆ ಇತ್ಯಾದಿ ವಿಷಯಗಳಲ್ಲಿ ಅವರು ಸುಲಭವಾಗಿ ತತ್ಕಾಲದ ಸಿದ್ಧಾಂತಕ್ಕೆ ಹೊಂದಿಕೊಂಡು ಕೆಲಸ ಮಾಡುವುದು ಕಷ್ಟದ ವಿಷಯವಾಗಿರಲಿಲ್ಲ. ಅದರಿಂದ ವೈಯಕ್ತಿಕವಾಗಿ ಅವರಾಗಲೀ, ಅವರ ಬೆಂಬಲಿಗ ಬಳಗವಾಗಲೀ ಆರ್ಥಿಕ ನಷ್ಟಕ್ಕೆ ಗುರಿಯಾಗುವ ಪ್ರಮೇಯವಿರಲಿಲ್ಲ. ಪೇಚಿಗಿಟ್ಟುಕೊಂಡದ್ದು ಭೂಹಂಚಿಕೆ ಮತ್ತು ಗೇಣಿ ಸಂಬಂಧದ ವಿಷಯದಲ್ಲಿ.

ಜಮೀನುದಾರರಾಗಿ ಅವರು ಎಲ್ಲರಂತೆ ಕ್ರೂರಿಯಲ್ಲ; ಒಕ್ಕಲೆಬ್ಬಿಸುವುದಾಗಲೀ, ಕೊಡದ ಗೇಣಿಗಾಗಿ ದಾವಾ ಹಾಕಿ ಜಪ್ಪು ಮಾಡಿಸುವುದಾಗಲೀ ಅವರ ಆಡಳಿತದ ಕ್ರಮವಾಗಿರಲಿಲ್ಲ. ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಮದ್ರಾಸಿನಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಮುಖ್ಯಮಂತ್ರಿಯಾಗಿದ್ದ ರಾಜಾಜಿಯವರು, ಮಂತ್ರಮಂಡಲದಲ್ಲಿದ್ದ ರಾಮಕೃಷ್ಣಕಾರಂತರು ಅನುಸರಿಸಿದ ನೀತಿಯನ್ನು ಮಂಜಯ್ಯನೂ ಬಹಳ ವರ್ಷಗಳಿಂದ ಅನುಸರಿಸಿಕೊಂಡು ಬಂದವರು. ತೂಕದ ಕೊಳಗವನ್ನು ಇವರು ಹಿಗ್ಗಿಸಲಿಲ್ಲ. ಒಕ್ಕಲನ್ನು ಕೋರ್ಟಿಗೆ ಅಲೆಸಲಿಲ್ಲ. ಗೇಣಿದಾರ ಕಷ್ಟದಲ್ಲಿದ್ದಾಗ ಒಂದೆರಡು ವರ್ಷ ಅವನ ಬಾಕಿಯ ಮೇಲೆ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಹೇಳಿದರು. ಲೆಕ್ಕವನ್ನು ಸರಿಯಾಗಿಇಟ್ಟರು; ಸುಳ್ಳು ಬರೆದು ನಿರಕ್ಷರರನ್ನು ಪೀಡಿಸಲಿಲ್ಲ. ಜನ ತನ್ನ ಭಯದಲ್ಲಿರಬೇಕಾದರೆ ತಾನೂ ಗೌರವ ಕಾಪಾಡಿಕೊಳ್ಳುವಂತೆ ನಡೆದುಕೊಳ್ಳಬೇಕೆಂಬ ನೀತಿಯನ್ನು ಅನುಸರಿಸಿದರು.

ಅವರಿಗೆ ಆಗದವರು ಅವರ ಧಾರಾಳತನವನ್ನು ವ್ಯಾಖ್ಯಾನಿಸಿದ್ದೇ ಬೇರೆ ಬಗೆಯಲ್ಲಿ. ‘ಮಂಜಯ್ಯನಿಗೇನು? ಜಮೀನಿನಿಂದಲೇ ಅವರ ವಹಿವಾಟುಗಳು ನಡೆಯಬೇಕಾಗಿಲ್ಲ; ಅವರೀಗ ಕಾರ್ಖಾನೆಗಳ ಮಾಲೀಕರು; ಮನೆಗಳಿಂದ ಬಡಿಗೆ ಅವರಿಗೆ ಬರುತ್ತದೆ; ಹೋಟೆಲುಗಳಿಂದ ಪ್ರತಿದಿನ ಸಾವಿರಗಟ್ಟಲೆ ಸಂಪಾದಿಸುತ್ತಾರೆ; ಒಂದು ಸಿನಿಮಾ ಥಿಯೇಟರು ಎಂದರೆ ಸಾಮಾನ್ಯವೆ? ಮಳೆ ಬರಲಿ ಬಾರದಿರಲಿ ಅಲ್ಲಿಯ ಸಂಪಾದನೆಯೇನಾದರೂ ಕಡಿಮೆಯಾಗುವುದುಂಟೆ? ಗೇಣಿಯ ವಿಷಯದಲ್ಲಿ ಅವರು ತೋರುವ ಧಾರಾಳದಿಂದ ರಾಜಕೀಯವಾಗಿ ಅವರಿಗಾದ ಲಾಭ ಸಾಮಾನ್ಯದ್ದೆ? ಮನುಷ್ಯ ಬಲು ಜಾಣ. ಸ್ವಕಾರ್ಯವನ್ನೇ ಸ್ವಾಮಿ ಕಾರ್ಯವೆನ್ನುವುದು ನೀವು ಮಂಜಯ್ಯನಾಗಿದ್ದರೆ ಸುಲಭವೇ. ಆದರೆ ಜಮೀನಿನಿಂದಲೇ ಬದುಕಬೇಕಾದವರು ಮಳೆರಾಯನ ಕೃಪೆಗೆ ಕಾಯಬೇಕು; ಗೇಣಿದಾರ ಮೋಸಮಾಡದಂತೆ ಎಚ್ಚರವಹಿಸಬೇಕು…’

ಹೀಗೆ ಒಳ್ಳೆಯ ಹೆಸರಿನ ಜೊತೆ ಕೆಟ್ಟ ಹೆಸರೂ ಬೆರೆತು ಹೋದ ಮಂಜಯ್ಯನವರೂ ಜಮೀನುದಾರರಿಂದ ಮಾತ್ರವಲ್ಲದೆ ಗೇಣಿದಾರರಿಂದಲೂ ಬೈಸಿಕೊಳ್ಳಬೇಕಾಗಿ ಬಂದದ್ದು ಕ್ರಮೇಣವಾಗಿ ಬೆಳೆದ ಒಂದು ವಿಶೇಷ. ನೀನು ಜಮೀನಿದ್ದವರ ಪರವೊ, ಇರದವರ ಪರವೊ – ಎಂಬುದು ಸರಳವಾಗಿ ಎದುರಿಸಬೇಕಾದ ಪ್ರಶ್ನೆಯಾಗುವಂತೆ ಗೇಣಿದಾರರ ಸಂಘಟನೆ ಬೆಳೆಯುತ್ತ ಹೋಯಿತು. ಉಳುವವನೇ ನೆಲದೊಡೆಯನಾಗಬೇಕು ಎಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಅದರ ತಕ್ಷಣದ ಅಪಾಯವಿಲ್ಲದೆ ಹೇಳುತ್ತಿದ್ದ ಕ್ರಾಂತಿಕಾರಕವಾದ ಮಾತು ಧುತ್ತೆಂದು ಎದುರಾಯಿತು. ಸರ್ಕಾರವೂ ಭೂಸುಧಾರಣೆಯ ಬಗ್ಗೆ ಮಾತಾಡತೊಡಗಿತು. ನೆಹರೂ ಸೋಷಲಿಸ್ಟರಿರಬಹುದೆಂಬುದು, ಅವರನ್ನು ಒಪ್ಪಲಾರದ, ಒಪ್ಪದೇ ಇರಲೂ ಆರದ, ಅವರಿಲ್ಲದೆ ಚುನಾವಣೆ ಗೆಲ್ಲಲಾರದವರ ಆತಂಕವೂ ಆಯಿತು. ಸೋಷಲಿಸ್ಟರು ಮಾತ್ರ ನೆಹರೂರವರನ್ನು ಚೀನಾದ ಚಯಾಂಗ್ ಕೈಶೇಕ್ ಗೆ ಹೋಲಿಸಿ ನಿಂದಿಸಿದರು; ಅವರಲ್ಲೂ ಎರಡು ಬಣಗಳಿದ್ದವು: ನೆಹರೂ ಪರದವರು, ನೆಹರೂ ವಿರೋಧಿಗಳು. ನೆಹರೂ ಧೋರಣೆ ಇಷ್ಟಪಡುವವರು ಕೂಡ ಅವರನ್ನು ಹ್ಯಾಮ್ಲೆಟ್ ಎಂದು ಖೇದಗೊಂಡು ಟೀಕಿಸಿದರು.

ತನ್ನ ಜೊತೆ ಕಾಂಗ್ರೆಸ್ಸಿನಲ್ಲಿದ್ದ ಇನ್ನೊಬ್ಬ ಬ್ರಾಹ್ಮಣನೇ, ಗೋವಿಂದರಾಯನೆಂಬ ಪುಡಾರಿ ರೈತಸಂಘ ಕಟ್ಟಿಬಿಟ್ಟ; ಸಮಾಜವಾದಿಗಳ ಜೊತೆಗೆ ಉಗ್ರಕ್ರಾಂತಿಗಕಾರಕ ಮಾತಿನ ಸ್ಪರ್ಧೆ ನಡೆಸಲು ಶುರುಮಾಡಿದ. ಅವನು ಜಮೀನುದಾರರ ಗುಪ್ತ ಏಜೆಂಟ್ ಎಂಬ ಸೋಷಲಿಸ್ಟರ ಅಪಾವಾದವನ್ನು ಸುಳ್ಳು ಮಾಡಲು ಬಾಯಿಗೆ ಬಂದಂತೆ ಮಾತಾಡುವ ಕ್ರಾಂತಿಕಾರನಾದ. ಆದರೆ ಸೋಷಲಿಷ್ಟರು ಬೆಳೆಯುತ್ತಲೇ ಹೋದರು. ಅವರ ಬೆಳವಣಿಗೆಯನ್ನು ತಡೆಯಲೆಂದು ಇವನು ಗೇಣಿಯನ್ನು ಕೊಡಬೇಕಿಲ್ಲವೆಂದ; ಖಾಲಿಯಿದ್ದ ಜಮೀನನ್ನು ಆಕ್ರಮಣಮಾಡುವ ಭೂಗ್ರಹಣ ಚಳವಳಿ ಪ್ರಾರಂಭಿಸುತ್ತೇವೆಂಬ ಬೆದರಿಕೆ ಹಾಕಿದ.

ಗೇಣೀದಾರರು ನಂಬಿದ್ದು ಮಾತ್ರ ಸೊಷಲಿಸ್ಟರನ್ನು. ಯಾಕೆಂದರೆ ಕಾಂಗ್ರೆಸ್ಸಿನಲ್ಲಿ ಜಮೀನುದಾರರ ಪರವಾದವರೂ ಇದ್ದರು, ಹಾಗೆಯೇ ಗೇಣಿದಾರರ ಪರವಾದವರೂ ಇದ್ದರು. ಸೋಷಲಿಸ್ಟರಲ್ಲಿ ಮಾತ್ರ ಗೇಣೀದಾರರ ಪರವಾದವರು, ಎಲ್ಲ ಜಾತಿಯ ಜನರು ಇದ್ದರು. ಮೊದಲ ಬಾರಿಗೆ ಜಿಲ್ಲೆಯಲ್ಲಿ ಸೋಷಲಿಸ್ಟರು ಚುನಾವಣೆಯಲ್ಲಿ ಗೆದ್ದು ಬಂದರು.

ಜಮೀನುದಾರರೆಲ್ಲ ಗಾಬರಿಗೊಂಡು ಸಭೆ ಮಾಡಿ ಮಂಜಯ್ಯನನ್ನು ಅದರ ಅಧ್ಯಕ್ಷರನ್ನಾಗಿ ಮಾಡಿಕೊಂಡರು. ಬೆಂಗಳೂರಿನಲ್ಲಿ ಮಂತ್ರಿಗಳನ್ನು ಕಂಡುಬರುವ ಓಡಾಟ ಶುರುವಾಯಿತು – ಇಂಥ ಕೆಲಸ ಮಂಜಯ್ಯನಿಗೆ ಮಾತ್ರ ಸಾಧ್ಯತಾನೆ? ಜಮೀನುದಾರರ ನಡುವೆ ಮಂಜಯ್ಯ ಗೇಣಿದಾರರ ಹಿತ ರಕ್ಷಣೆ ಮಾಡಿದವರೆಂಬ ಖ್ಯಾತರೂ ಅಲ್ಲವೆ? ಬೆಮಗಳೂರಿನ ಉಚ್ಚವಲಯಗಳಲ್ಲಿ ತಮ್ಮನ್ನು ಪ್ರತಿನಿಧಿಸಲು ಹರಿಜನಪರ ಹೋರಾಡಿದವರೆಂದೂ ಗೇಣಿದಾರರ ಹಿತರಕ್ಷಕರೆಂದೂ ಮಂಜಯ್ಯನನ್ನು ಅವರ ವೈರಿಗಳೂ ಸಹ ಮುಂದಿಟ್ಟರು. ಸೊರಗುತ್ತಿದ್ದ ತನ್ನ ವರ್ಚಸ್ಸಿಗೆ ಹೀಗೆ ಪ್ರಾಪ್ತವಾದ ಅಧಿಕಾರ ಮತ್ತು ಘನತೆ ಅಗತ್ಯವೆಂದು ಮಂಜಯ್ಯನೂ ತಿಳಿದರು.

ಈ ಓಡಾಟುಗಳು ಮಂಜಯ್ಯನ ತೆವಲುಗಳಿಗೂ ಸಹಾಯಕವಾದವು. ಮಂಗಳೂರಿನ ಅವರ ಹಳೆಯ ಸಂಬಂಧದ ಮೀನಾಕ್ಷಿ ಇಟ್ಟುಕೊಂಡವಳಾದರೂ, ಕಟ್ಟಿಕೊಂಡವಳಷ್ಟೇ ಬಹಿರಂಗಗೊಂಡಿದ್ದಳು. ಅವರ ಹೆಂಚಿನ ಕಾರ್ಖಾನೆಯ ಮ್ಯಾನೇಜರ್ ಕೂಡ ಅವಳು. ಹೀಗೆ ನಿತ್ಯದ ಬದುಕಿಗೆ ಪ್ರಿಯವಾದ ಹೊಂದಿಕೆಯಾಗಿ ಬಿಟ್ಟಿದ್ದು ಅವರ ದೇಹಕ್ಕೆ ಹಳಸಿತು. ಮೀನಾಕ್ಷಿಯಿಂದ ಬಚ್ಚಿಡಬೇಕಾದ ಅಗತ್ಯವಿಲ್ಲದ, ಅವಳಿಗೆ ಬೇಸಾರವಾದರೂ ಅವಳಿಂದ ದೂರವಾಗಬೇಕಾದ ಅಗತ್ಯಬೀಳದ, ಇನ್ನೊಂದು ಹೆಣ್ಣಿನ ಸಂಪರ್ಕವಾಯಿತು. ಈ ತಾರಾದೇವಿ ಚಿಕ್ಕವಳು; ಶೀಘ್ರಲಿಪಿ ಕಲಿತವಳು. ಮಂಜಯ್ಯನಿಗೊಬ್ಬಳು ಪರ್ಸನಲ್ ಅಸಿಸ್ಟೆಂಟ್ ಬೇಕಲ್ಲವೆ? ಅವರ ಜೊತೆ ಅವರ ಮಂಗಳೂರಿನ ಮನೆಯಲ್ಲೇ ಅವಳ ಬಿಡಾರವೂ ಆಯಿತು.

ದೇವನಹಳ್ಳಿಯಲ್ಲೂ ತೀರ್ಥಹಳ್ಳಿಯಲ್ಲೂ ದೊಡ್ಡ ಹಬ್ಬಗಳನ್ನು ಮಾಡಿ ಊರಿನ ದೊಡ್ಡ ಕುಳಗಳಿಗೆ ಜಾತಿಭೇದವಿಲ್ಲದಂತೆ ಕರೆದು ಪಾಯಸ, ಹೋಳಿಗೆ, ಪತ್ರಡೆಗಳ ಊಟ ಹಾಕುತ್ತಿದ್ದವರು ಈಗ ಬೆಂಗಳೂರಿನ ಅಧಿಕಾರಸ್ಥರಾದ ಘನವಂತರನ್ನು ಕರೆದು ಹೋಟೆಲುಗಳಲ್ಲಿ ಪಾರ್ಟಿ ನಡೆಸುವಂತಾಯಿತು. ಪ್ಯಾಂಟುಕೋಟು ಟೈಗಳ ನಡುವೆ, (ಇಂಗ್ಲಿಷ್‌ನಲ್ಲೇ ಹೆಚ್ಚಾಗಿ ಮಾತಾಡುವವರ ಜೊತೆ) ತಲೆಗೂದಲಿಗೆ ಬಣ್ಣ ಹಚ್ಚಿದ, ಕಚ್ಚೆಪಂಚೆಯ ಮೇಲೆ ಸಿಲ್ಕ್ ಜುಬ್ಬ ಧರಿಸಿದ, ಮೇಲೊಂದು ಪಶ್ಮೀನಿನ ಶಾಲು ಹೊದ್ದ, ಗುಂಡಾದ ಬೆಳ್ಳಿ ಕನ್ನಡಕವನ್ನು ತೊಟ್ಟ, ನಗುಮುಖದ ದೇವಹಳ್ಳಿಯ ಮಂಜಯ್ಯನವರು ಕೂತು ಇಂಗ್ಲಿಷಿನಲ್ಲೂ ಮಾತಾಡುತ್ತ ಬೀರ್ ಕುಡಿಯುತ್ತಾರೆಂಬುದುಅ ವರ ವರ್ಚಸ್ಸನ್ನು ಹಳ್ಳಿಯ ಜಮೀನುದಾರರ ನಡುವೆ ಬೆಳೆಸುವ ಸುದ್ದಿಯೇ ಆಯಿತು.

ವಿಪರ್ಯಾಸವೆಂದರೆ ಅವರ ವರ್ಚಸ್ಸು ಹೀಗೆ ಬೆಳೆದಂತೆ ಜಿಲ್ಲೆಯ ಗೇಣಿದಾರರ ನಡುವೆ ಅವರು ಪಡೆದಿದ್ದ ಗೌರವ ಕುಗ್ಗುತ್ತ ಹೋದದ್ದು. ಮತ್ತು ಅವರ ಆರೋಗ್ಯ ಕೆಡುತ್ತ ಹೋದದ್ದು. ಮತ್ತು ಎಂದೂ ಹಿಂದೆ ಕಾಣದಿದ್ದ ಅವರ ದೈವ ಭಕ್ತಿ ಹೆಚ್ಚುತ್ತ ಹೋದದ್ದು. ಪರಿಣಾಮವಾಗಿ, ಕೇಶವನ ಭೂವರಾಹ ಪೂಜೆ ವಿಶೇಷವಾದ ಪೂಜೆಯಾಗುತ್ತ ಹೋಗಿ, ಇನ್ನು ಇನ್ನೂ ಲಂಬವಾಗುತ್ತ ಹೋಗಿ ಕೇಶವನ ಪುರಾಣ ಪ್ರವಚನಗಳಿಎ ವಿರಾಮ ಕಡಿಮೆಯಾಗುತ್ತ ಹೋದದ್ದು.

ದೇವನಹಳ್ಳಿಯ ಮನೆಯ ಆರತಿಯ ಹರಿವಾಣಗಳು ದೊಡ್ಡವಾಗುತ್ತ ಹೋದವು; ಆರತಿಯ ಸಂಖ್ಯೆಯೂ ಹೆ‌ಚ್ಚುತ್ತ ಹೋಯಿತು. ಶಾಲೆಯ ಮಕ್ಕಳಿಗೆ ಈಗ ಪಾಯಸದ್ದೇ ಊಟ. ಶಿವಮೊಗ್ಗದಿಂದ ಹೂವಿನ ಸರಬರಾಜು. ಕೊಲ್ಲೂರಿನ ಮುಕಾಂಬಿಕೆಗೆ ಬಂಗಾರದ ಖಡ್ಗ. ತಿರುಪತಿ ತಿಮ್ಮಪ್ಪನಿಗೆ ನೂರು ಬುಟ್ಟಿ ಲಾಡು. ಕೇಶವನಿಗೆ ಹೊಸ ರೇಷ್ಮೆ ಉತ್ತರೀಯ, ಹೊಸ ರೇಷ್ಮೆ ಪಂಚೆ.

ಪುಟ್ಟೇಗೌಡ ಕೇಶವನನ್ನು ಹಾಸ್ಯಮಾಡಿದ್ದು: ‘ಸಾಹುಕಾರ‍್ರ ಡ್ರೈವರ್‌ಗೂ ಹೊಸ ಖಾಕಿ ಯೂನಿಫಾರಂ, ಕೇಶವ ಶರ್ಮರಿಗೂ ಹೊಸ ಕಾವಿ ಯೂನಿಫಾರಂ, ಭುವರಾಹನಿಗೂ ದೀಪ ಧೂಪದ ಭಡ್ತಿ. ಹಾರವರಕಾಲ ಹಾರುವವರ ಕಾಲವೇ ಆಗಿಬಿಡ್ತಲ್ಲ!’

ಹಾಗೆಯೇ, ರೈತರ ಸಭೆಗಳಲ್ಲಿ ‘ಸಾಹುಕಾರ್ ಮಂಜಯ್ಯನಿಗೆ ಧಿಕ್ಕಾರ’ ಎಂಬ ಕೂಗು. ಶಿವಮೊಗ್ಗದ ಒಂದು ಸಭೆಯಲ್ಲಿ ಅವರ ಪ್ರತಿಕೃತಿಯ ದಹನ. ‘ಸತ್ತ, ಸತ್ತ ಮಂಜಯ್ಯ ಸತ್ತ’ ಎನ್ನುವ ಘೋಷಣೆ, ಕರತಾಡನ.

ಅವರು ಎಲ್ಲರ ಬಾಯಲ್ಲಿ ಹೀಗೆ ಗದ್ದಲವಾಗುತ್ತ ಹೋದಾಗಲೇ, ವಿಮಲಳೂ ಗುಸುಗುಸು ಸುದ್ದಿಯಾದ್ದು. ‘ಪರಂಪರಾನುಗತವಾಗಿ ನಡೆದುಬಂದ ಗ್ರಾಮೀಣ ವ್ಯವಸ್ಥೆಯನ್ನು ತಿರುಗುಮುರುಗು ಮಾಡಿ, ಭೂ ಉತ್ಪನ್ನವನ್ನು ಕಡಿಮೆಯಾಗುವಂತೆ ಮಾಡಕೂಡದು; ನೆಹರೂ ಹೇಳುವ ಸುಖಿರಾಜ್ಯದ ಕಲ್ಪನೆ ಒಂದು ವರ್ಗದ ನಾಶದ ಮುಖೇನ ಸಿದ್ಧಿಸುವುದಲ್ಲ; ಗಾಂಧೀಜಿ ಹೇಳುವುದು ಸರ್ವೋದಯ, ಬರೀ ಒಂದು ವರ್ಗದ ಹಿತವಲ್ಲ; ಭೂಮಾಲೀಕರು ಟ್ರಸ್ಟಿಗಳಾಗಬೇಕೆಂದು ಮಾತ್ರ ಮಹಾತ್ಮರು ಹೇಳಿದ್ದು’. ಇತ್ಯಾದಿ ಇತ್ಯಾದಿ ಪ್ರಚಾರದಲ್ಲಿ ನಿರತರಾಗಿಬಿಟ್ಟಿದ್ದ ಮಂಜಯ್ಯನ ಕಿವಿಗೆ ಇದು ಬೀಳಲಿಲ್ಲ. ಬಿದ್ದಿದ್ದರೂ ಅವರು ನಂಬುತ್ತಿರಲಿಲ್ಲವೇನೊ. ಅವರ ಮುದ್ದಿನ ಮಗಳು ಒಬ್ಬ ಡ್ರೈವರ್ ಜೊತೆ ಸಂಬಂಧಮಾಡುವುದು ಸಾಧ್ಯವೆ? ಮಂಜಯ್ಯನ ಪರ್ಸನಲ್ ಅಸಿಸ್ಟೆಂಟ್ ಮಂಗಳೂರಿನ ಒಬ್ಬ ಡ್ರೈವರನ ಮಗಳೇ ಆಗಿದ್ದಳು ಎಂಬುದು ಮಿಂಗೇಲಿಗೆ ಗೊತ್ತಿದ್ದ ವಿಷಯ.

ಮಂಜಯ್ಯನ ಮಾತಿನ ಗತ್ತು ಕ್ಷೀಣಗೊಳ್ಳುತ್ತ ಹೋದದ್ದೂ ಈ ಅವಧಿಯಲ್ಲೆ. ಯುವತಿಯಾದ ತಾರಾದೇವಿಯ ಅಪ್ಪುಗೆಯಲ್ಲಿ ಸುಪ್ಪತ್ತಿಗೆ ಮೇಲೆ ಪಂಚತಾರಾ ಹೋಟೆಲಲ್ಲೂ ಅವರು ಅನುಭವಿಸುತ್ತಿದ್ದ ಸುಖದ ಏಕಾಗ್ರತೆ ಕಡಿಮೆಯಾಯಿತು. ಯಾರು ಯಾರೋ ಗುಪ್ತ ವೈದ್ಯರ, ಜ್ಯೋತಿಷಿಗಳ ಮೊರೆಹೊಕ್ಕರು. ಮಲೆಯಾಳಿ ಪಂಡಿತನೊಬ್ಬನಿಂದ ಬೆಂಗಳೂರಲ್ಲೆ ಕಾಯಕಲ್ಪ ಮಾಡಿಸಿಕೊಂಡರು. ಅವರ ಬೆಂಗಳೂರಿನ ತಲೆ ಹಿಡುಕ ಹಿಂಬಾಲಕನೊಬ್ಬ ಸುಳ್ಳು ಹೇಳಿ ಇವಳು ಸಿನಿಮಾತಾರೆ ಎಂದು ಕೂದಲಿಗೆ ಬಣ್ಣ ಹಚ್ಚಿದ ಬೆಡಗಿಯೊಬ್ಬಳನ್ನು ಗಂಟು ಹಾಕಿದ. ಅವಳಿಗಾಗಿ ಬೊಂಬಾಯಿಯಲ್ಲಿ ಇದ್ದು, ಬಂದಮೇಲೆ ಪೆನ್ಸಿಲಿನ್ ತೆಗೆದುಕೊಂಡದ್ದಾಯಿತು.

ಮಂಜಯ್ಯನ ಸ್ವಾಸ್ಥ್ಯ ಕೆಡುತ್ತ ಹೋಗಿ ಅವರ ಕಣ್ಣು ಮಂಜಾಯಿತು; ಹಲ್ಲುಗಳು ಸಡಿಲವಾಗಿ ಕೀಳಿಸಿ ಕಟ್ಟಿಸಿಕೊಂಡ ಹೊಸ ದಂತಪಂಕ್ತಿಯಲ್ಲಿ ನಾಲಗೆ ತಿರುಗದಂತಾಯಿತು. ಬಣ್ಣ ಹಚ್ಚುತ್ತಿದ್ದ ಕೂದಲು ನೆತ್ತಿಯಲ್ಲಿ ಕಾಣದಾಯಿತು. ಬಾಲಕನಾಗಿದ್ದಾಗ ಮತ್ತಿ ಸೊಪ್ಪು ಸೀಗೆಯ ಉಪಚಾರದಲ್ಲಿ ಪುಷ್ಕಳವಾಗಿ ಬೆಳೆದಿದ್ದ ತಲೆಗೂದಲು ಅವರದು. ಈ ತಲೆಯ ಮೇಲೆ ಬಿಳಿಯ ಖದ್ದರ್ ಟೋಪಿ ಹಾಕಿ ಗಾಂಧೀಜಿಯ ಪ್ರಾರ್ಥನಾಸಭೆಯಲ್ಲಿ ತೆಗಿಸಿಕೊಂಡ ಹಳೆಯ ಚಿತ್ರದಲ್ಲಿ ಈಗಲೂ ಟೋಪಿಯಿಂದ ಉಕ್ಕುವ ಕೂದಲನ್ನು ಕಾಣಬಹುದು.

ಮಂಜಯ್ಯನನ್ನು ತೀರ ಎಂದರೆ ತೀರ ಕುಗ್ಗಿಸಿದ ಘಟನೆಯೆಂದರೆ ಮುಂದಿನದು.

೧೨

ತೀರ್ಥಹಳ್ಳಿಯ ಹತ್ತಿರದ ಹಳ್ಳಿಯೊಂದರಲ್ಲಿ ಗನಪಯ್ಯ ಎಂಬ ಹೆಸರಿನ ಜಮೀನುದಾರರು ಇದ್ದರು. ಇವರಿಗೊಬ್ಬಳು ವಿಧವೆಯಾದ ಮಗಳು. ಬಾಲವಿಧವೆ. ಆದರೆ ಕೇಶಚ್ಛೇದವಾಗಿರಲಿಲ್ಲ; ಸ್ಕೂಲು ಸೇರಿದ್ದಳು. ಹೆಂಡತಿಯ ಒತ್ತಾಯದಮೇಲೆ, ಆದರೆ ಅವರು ಕೊಚ್ಚಿಕೊಳ್ಳುವಂತೆ, ಮಂಜಯ್ಯನ ಪ್ರೇರಣೆಯಮೇಲೆ ಗಣಪಯ್ಯ ಮಗಳನ್ನು ಸ್ಕೂಲಿಗೆ ಸೇರಿಸಿದ್ದು.

ಮಂಜಯ್ಯ ಗಣಪಯ್ಯನಿಗೆ ತೋರಿಕೆಗೆ, ಹಾಗೂ ಲಾಭಕ್ಕೆ, ಆದರ್ಶವಾದರೂ, ಗಣಪಯ್ಯನ ಸ್ವಭಾವ ಮಂಜಯ್ಯನವರದರಂತೆ ಉದಾರವಲ್ಲ; ಮನೆಯವರ ಬಗ್ಗೆ ಸಹ ಕರುಣೆಯದಲ್ಲ. ಗಣಪಯ್ಯನದು ಕಟುಕ ಮನಸ್ಸು. ‘ಘಾಟಿ ಗಣಪಯ್ಯ’ ‘ಕೋಮಟಿ ಗಣಪಯ್ಯ’ ‘ಜುಗ್ಗು ಗಣಪಯ್ಯ’ ‘ಕಪ್ಪು ಕಟುಕಯ್ಯ’ – ಹೀಗೆ ಅವರನ್ನು ಎಲ್ಲರೂ ಬೆನ್ನಿನಹಿಂದೆ ಕರೆಯೋದು.

ಗಣಪಯ್ಯ ನೋಡಲು ಕಪ್ಪಲ್ಲದಿದ್ದರೂ ಅವರ ಹಣೆಯಮೇಲಿದ್ದ ಒಂದು ದೊಡ್ಡ ಕಪ್ಪು ಮಚ್ಚೆ, ಮತ್ತು ಅವರು ಆಡಿದಂತೆ ಆಗುತ್ತದೆ ಎಂಬ ಆರೋಪಕ್ಕೆ ಕಾರಣವಾದ, ಅವರು ಬಾಯಿತೆರೆದಾಗ ಕಾಣುವ, ಅವರ ನಾಲಗೆಮೇಲಿನ ಕಪ್ಪು ಮಚ್ಚೆ – ಎರಡೂ ಒಟ್ಟಾಗಿ ಅವರ ‘ಕಪ್ಪು ಕಟುಕಯ್ಯ’ ಎಂಬ ಹೆಸರಿಗೆ ಕಾರಣವಾದ್ದು. ಕೊಂಚ ಕುಂಟಿ ನಡೆಯುವ ಗಣಪಯ್ಯನಿಗೆ ‘ಕುಂಟು ಕಟುಕಯ್ಯ’ ಎಂಬ ಹೆಸರೂ ಇದೆ. ಬಲು ಜುಗ್ಗ, ಒಂದು ಆಳಿನ ಸಂಬಳವನ್ನು ಉಳಿಸಲೆಂದು ಅವರು ಯುವಕರಾಗಿದ್ದಾಗ ಅಡಿಕೆ ಮರ ಹತ್ತಿ ಜಾರಿ ಬಿದ್ದು ಕಾಲು ಕುಂಟಾದ್ದು.

ಗಣಪಯ್ಯನೆಂದರೆ ಬಡವರಾದ ಗೇಣೀದಾರರು ಹೆದರುತ್ತಾರೆ; ಅದಕ್ಕೆ ಅಷ್ಟು ಮುಖ್ಯವಲ್ಲದ ಒಂದು ಕಾರಣ ಅವರ ಹತ್ತಿರ ಇದ್ದ ಒಂದು ಬಂದೂಕು. ಎರಡು ನಳಿಗೆಯ ಬಂದೂಕು. ಹುಲಿ ಕಾಟವೆಂದು ನೆವ ಹೇಳಿ ಲೈಸೆನ್ಸ್ ಪಡೆದದ್ದು. ಗಣಪಯ್ಯನ ಅಪ್ಪನ ಕಾಲದಲ್ಲಿ. ಅವರೂ ದುಷ್ಟರೇ. ಆಸ್ತಿಯ ಹಾಗೇ ದುಷ್ಟತನವೂ ಗಣಪಯ್ಯಗೆ ಪಿತ್ರಾರ್ಜಿತ.

ಗಣಪಯ್ಯನೆಂದರೆ ಜನ ಭಯಪಡುವುದಕ್ಕೆ ನಿಜವಾದ ಕಾರಣವೆಂದರೆ ಬಂದೂಕಿಗಿಂತಲೂ ಹೆಚ್ಚಾಗಿ ವಸೂಲಿಗೆಂದು ರಾಜಾರೋಷವಾಗಿ ಅವರು ಛೂ ಬಿಡುವ ಇಬ್ಬರು ಕಟುಕರು. ಗಣಪಯ್ಯನ ಹತ್ತಿರ ಕೆಲಸಕ್ಕೆ ಸೇರಿದಾಗ ಸರಿಯಾಗಿ ಕನ್ಡನ ಮಾತಾಡಲು ಗೊತ್ತಿರದ ಈ ಇಬ್ಬರನ್ನು ಕೊಲ್ಲಾಪುರದಿಂದ ತಂದದ್ದೆಂದೂ, ಸಜಾ ಆಗಿ ಐದು ವರ್ಷ ಬೊಂಬಾಯಿಯ ಜೈಲಲ್ಲಿ ಇದ್ದವರೆಂದೂ ಇಡೀ ತಾಲೂಕಿನಲ್ಲಿ ಪ್ರತೀತಿ. ಒಬ್ಬನಿಗೆ ಆರು ಬೆರಳಿನ ಎಡಗೈ; ಇನ್ನೊಬ್ಬನಿಗೆ ಒಂದು ಕಣ್ಣಿಲ್ಲ. ನೋಡಲು ದೈತ್ಯರು. ಮನೆಯ ಹಿಂದಿನ ಗುಡ್ಡದ ಒಂದು ಗುಡಿಸಲಿನಲ್ಲಿ ಇವರಿಗೆ ಬಿಡಾರ. ದಿನಾ ಅವರಿಗೆ ಕೋಳಿಯ ಊಟವಾಗಲೇ ಬೇಕು; ಕುಡಿಯಲು ಸಾರಾಯಿ ಬೇಕು.

ಪರಮ ಜುಗ್ಗನಾದ ಗಣಪಯ್ಯ ಈ ಇಬ್ಬರ ವಿಷಯದಲ್ಲಿ ಮಾತ್ರ ಧಾರಾಳಿ. ಈ ಇಬ್ಬರ ಹೆಸರೂ ವಿಚಿತ್ರ: ಒಬ್ಬ ಗೊಗ್ಗ, ಇನ್ನೊಬ್ಬ ಕೊಗ್ಗ. ಆರು ಬೆರಳಿನವನು ಗೊಗ್ಗ; ಒಂದು ಕಣ್ಣಿಲ್ಲದವನು ಕೊಗ್ಗ. ಆದರೆ ಯಾರು ಗೊಗ್ಗ, ಯಾರು ಕೊಗ್ಗ – ಗಣಪಯ್ಯಗೆ ಮಾತ್ರ ಗೊತ್ತು.

ಮಗಳು ಮಾತ್ರ ತುಂಬ ರೂಪವತಿ; ಚಿರ ದುಃಖಿಯಾದ ತಾಯಿಯಂತೆಯೇ. ತೆಳ್ಳಗೆ ಬೆಳ್ಳಗೆ ಉದ್ಧವಾಗಿ ಇದ್ದಳು. ಉಳಿದ ಹೈಸ್ಕೂಲ್ ವಿದ್ಯಾರ್ಥಿನಿಯರಿಗಿಂತ ಹೆಚ್ಚುವಯಸ್ಸಿನ, ಆದ್ದರಿಂದ ಹೆಚ್ಚು ಸಂಕೋಚದ, ಮೊದಲನೇ ಕ್ಲಾಸಿನಲ್ಲಿದ್ದಾಗ ಮುಟ್ಟಾಗಿ ತಾನು ಮಾತ್ರ ರಜಹಾಕಿ ಮನೆಯಲ್ಲಿರಬೇಕಾಗಿ ಬರುತ್ತಿತ್ತೆಂದು ತುಂಬ ನಾಚುತ್ತಿದ್ದ ಈ ಸರಸ್ವತಿ ಓದಿನಲ್ಲಿ ಜಾಣೆ. ಅವಳ ಮುದ್ದಾದ ಅಕ್ಷರದಿಂದಾಗಿ ಸ್ಕೂಲಿನಲ್ಲಿ ಪ್ರಸಿದ್ಧೆ. ಮೂರು ಮೈಲಿ ದೂರದಿಂದ ಕಾಡಿನ ಕಾಲು ದಾರಿಯಲ್ಲಿ ಒಂದು ಹಳ್ಳವನ್ನು ದಾಟಿ ಸ್ಕೂಲಿಗೆ ಬರಬೇಕಾಗಿದ್ದುದರಿಂದ ಮಧ್ಯಾಹ್ನದ ಟಿಫನ್ನಿಗೆ ಮನೆಯಿಂದಲೇ ಏನಾದರೂ ಇವಳು ತರುವುದು.

ಲೀಶರ್ ಹೊತ್ತಿನಲ್ಲಿ ಮನೆಯಿಂದ ತಂದ ತಿಂಡಿಯನ್ನು ಮರದ ಕೆಳಗೆ ಒಬ್ಬಳೇ ಕೂತು ತಿನ್ನುತ್ತಿದ್ದ ಸರಸ್ವತಿಯನ್ನು ಒಂದು ದಿನ ಅವಳಿಗೆ ಇಷ್ಟವಾಗಿದ್ದ ಟೀಚರ್ ಒಬ್ಬರು ‘ಏನು ಒಬ್ಬರೇ ಎಲ್ಲವನ್ನೂ ತಿಂದುಬಿಡೋದ’ ಎಂದು ರೇಗಿಸಿದ್ದರು. ಸರಸ್ವತಿ ಖುಷಿಯಾಗಿ ಎದ್ದು ನಿಂತು ಗಡಿಬಿಡಿಯಲ್ಲಿ ಹೇಳಿದಳು:

‘ಎಂಜಲಾಗಿದೆ ಸಾರ್. ಇಲ್ಲದೆ ಇದ್ದರೆ ನಮ್ಮನ್ನು ಕಾವಲೀಲಿ ತಟ್ಟಿಮಾಡಿದ ಈ ಅಕ್ಕಿರೊಟ್ಟಿ ತುಂಬ ರುಚಿಯಾಗಿದೆ. ನಿಮಗೂ ಅರ್ಧ ಕೊಡಬಹುದಿತ್ತು. ನನಗೆ ಹೆಚ್ಚಾಗಿದೆ. ಅಷ್ಟೂ ತಿನ್ನುವಷ್ಟು ಹಸಿವಿಲ್ಲ.’

‘ಅದಕ್ಕೇನು ಕೊಡಿ; ತಿಂತೀನಿ’

ಟೀಚರ್ ಹೀಗೆ ಹೇಳಿಬಿಡುವುದೆ? ಸರಸ್ವತಿ ತುಂಬ ಖುಷಿಪಟ್ಟು ರೊಟ್ಟಿಯಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಚಟ್ನಿ ಹಾಕಿ ಕೊಟ್ಟಳು. ಯಾವ ಮಡಿಮೈಲಿಗೆಯಲ್ಲಾಗಲೀ, ಜಾತಿ ಭೇದದಲ್ಲಾಗಲೀ ನಂಬಿಕೆಯಿರದಿದ್ದ ಈ ಟೀಚರ್ ನಂತಹ ಮನುಷ್ಯನನ್ನು ಅವಳು ಕಂಡೇ ಇರಲಿಲ್ಲ.

ಟೀಚರ್ ಹೆಸರು ದುರುಗಪ್ಪ – ದಾವಣಗೆರೆಯವರು. ಮೈಸರಿಂದ ಓದಿಬಂದವರು. ನೋಡಲು ಕಪ್ಪಗಿದ್ದ ಕಟ್ಟುಮಸ್ತಾದ ಆಳು. ಫ್ರೆಂಚ್ ಕ್ರಾಂತಿ, ಸುಭಾಷ್ ಚಂದ್ರ ಬೋಸ್, ಗರಿಬಾಲ್ಡಿ, ಕುವೆಂಪು, ಕಾರಂತ, ಅನಕೃ, ಶರತ್ ಚಂದ್ರ ಬೋಸ್ – ಈ ಎಲ್ಲರ ಬಗ್ಗೆಯೂ ಹುರುಪಿನಿಂದ ಮಾತಾಡುವ ಟೀಚರ್ ಎಂದು ಎಲ್ಲರಿಗೂ ಇಷ್ಟ.

ಸರಸ್ವತಿಗೆ ಮಾತ್ರ ದುರುಗಪ್ಪ ತುಂಬ ಇಷ್ಟವಾಗಲು ಕಾರಣ ಅವರು ಹಾಡುತ್ತಿದ್ದ ಭಾವಗೀತೆಗಳು – ಭಾವಗೀತೆಗಳ ಅವರ ಆಯ್ಕೆ ಮಾತ್ರವಲ್ಲದೆ ಅವುಗಳನ್ನು ಅವರು ಹಾಡುವ ಕ್ರಮವೂ ಅವಳ ಕಣ್ಣುಗಳಲ್ಲಿ ನೀರು ತರುತ್ತಿತ್ತು. ಬೇಂದ್ರೆಯ ‘ಪುಟ್ಟವಿಧವೆ’ ಪದ್ಯವನ್ನು ಅವರು ಹಾಡುತ್ತಿರಲಿಲ್ಲ; ಭಾವಪೂರ್ವಕವಾಗಿ ಅದನ್ನು ಓದಿದಾಗ ಅವಳು ಯಾರಿಗೂ ಕಾಣದಂತೆ ಕಣ್ಣೊರೆಸಿಕೊಂಡಿದ್ದಳು. ಅವರಿಗೆ ಹಾಡಲು ತುಂಬ ಪ್ರಿಯವಾಗಿದ್ದ ಕವನವೆಂದರೆ ಅಡಿಗರ ‘ನಾವೆಲ್ಲರು ಒಂದೆ ಜಾತಿ’. ಅದನ್ನು ಕೈಯೆತ್ತಿ ಬೀಸುತ್ತ ಉತ್ಕಂಠರಾಗಿ ಅವರು ಹಾಡುತ್ತಿದ್ದರು:

‘ನಾವೆಲ್ಲರು ಒಂದೆ ಜಾತಿ, ಒಂದೆ ಮತ, ಒಂದೆ ಕುಲ
ನಾವು ಮನುಜರು
ನರರನಡುವಿನಡ್ಡ ಗೋಡೆಗಳನು ಕುಟ್ಟಿ ಕೆಡಹುವೆವು
ನಾವು ವಿಲಯ ರುದ್ರರು’

ತಲೆ ತುಂಬ ಗುಂಗುರು ಕೂದಲಿನ, ಎತ್ತಿದ ಬಲಿಷ್ಠರಟ್ಟೆಯ, ಫುಟ್‌ಬಾಲ್ ಆಟವನ್ನು ನಿತ್ಯ ಸಂಜೆ ಆಡಿ ಮಾಟಗೊಂಡ ಕಪ್ಪದ ಮೈಕಟ್ಟಿನ, ಬಿಳಿಪೈಜಾಮ ಬಿಳಿಜುಬ್ಬ ಧರಿಸಿ ನೆಟ್ಟಗೆ ನಿಂತ, ಹೊಳೆಯುವ ಕಣ್ಣುಗಳ ಈ ಯುವಕ ಏರು ಸ್ವರದಲ್ಲಿ ‘ನಾವು ವಿಲಯ ರುದ್ರರು’ ಎಂದು ಘೋಷಿಸಿದಾಗ ಸರಸ್ವತಿಯ ಮೈ ಜುಮ್ಮೆಂದು ಪುಳಕಗೊಳ್ಳುವುದು.

ಬಾಳೆಲೆ ಹರಿದು ರೊಟ್ಟಿಯನ್ನಿಟ್ಟುಕೊಳ್ಳಲು ಕೊಟ್ಟರೆ ಬೇಡವೆಂದು ಬರಿಗೈಯಲ್ಲೇ ಗರಿಗರಿಯಾದ ರೊಟ್ಟಿಯನ್ನು ಎತ್ತಿಕೊಂಡು ತಿನ್ನುತ್ತ ಸರಸ್ವತಿಯ ಜೊತೆ ಗೆಳೆಯನಂತೆ ದುರುಗಪ್ಪ ಮಾತಾಡಿದರು.

‘ನಿಮ್ಮೂರು ಎಷ್ಟು ದೂರ’

‘ಒಳದಾರಿಯಲ್ಲಿ ಕಾಡಿನ ನಡುವೆ ನಡೆದರೆ ಒಂದು ಗಂಟೆ ಸಾಕಾಗತ್ತೆ’

ನೀವೂ ಬರುತ್ತೀರ ನನ್ನ ಜೊತೆ ಒಂದು ದಿನ ಎಂದು ಕೇಳುವ ಧೈರ್ಯವಾಗಲಿಲ್ಲ. ಆದರೆ ದುರುಗಪ್ಪನೇ ಹೇಳಿಬಿಟ್ಟರು:

‘ಇವತ್ತು ನಿಮ್ಮ ಜೊತೆ ನಡೆದು ನಿಮ್ಮನೇ ತನಕ ಬರ‍್ತೀನಿ; ಮನೆಗೆ ಬರಲ್ಲ – ಆಯಿತ?’

ದುರುಗಪ್ಪ ಸ್ನೇಹದಲ್ಲಿ ಮಾತಾಡಿದ್ದರು. ಮನೆಯೊಳಗೆ ಅವರು ಬರುವುದು ಸರಸ್ವತಿಗೆ ಇಷ್ಟವೂ ಇರಲಿಲ್ಲ. ಅಪ್ಪ ಯಾರನ್ನೂ ಸ್ನೇಹದಿಂದ ಮಾತಾಡಿಸಬಲ್ಲ ಮನುಷ್ಯನಲ್ಲ.

ದುರುಗಪ್ಪನವರನ್ನು ಬಹಳ ದಿನಗಳಿಂದ ಅವಳು ಗಮನಿಸಿದ್ದಾಳೆ. ಸ್ಟಾಫ್ ರೂಮಿನಲ್ಲಿ ಒಬ್ಬರೇಕೂತು ಅವರು ಪುಸ್ತಕ ಓದುತ್ತ ತನ್ಮಯವಾಗಿರುವುದನ್ನು ನೋಡಲು ಏನೋ ನೆವದಲ್ಲಿ ಸ್ಟಾಫ್ ರೂಮಿನ ಬಳಿ ಓಡಾಡಿದ್ದಾಳೆ. ಕೆಲವು ಸಾರಿ, ಏನೂ ಮಾಡದೆ ಅವರು ಸುಮ್ಮನೇ ಕೂತಿರುವಾಗ ತಾವು ಹಾಡುವ ಭಾವಗೀತೆಗಳನ್ನು ಒಳಗೇ ಗುನುಗಿಕೊಲ್ಳುತ್ತ ಭಾವವಶ ರಾಗಿರಬಹುದೆಂದು ಅವರ ಒಳಜೀವನವನ್ನು ಊಹಿಸಿಕೊಂಡಿದ್ದಾಳೆ. ಅವರು ತಮ್ಮ ಗುಂಗುರು ಕೂದಲಿಗೆ ಹಚ್ಚುವ ಎಣ್ಣೆ ಯಾವುದು, ಅವರು ಬಳಸುವ ಪೆನ್ನು ಯಾವುದು, ಅವರ ಹತ್ತಿರ ಇರುವ ಜುಬ್ಬಗಳೆಷ್ಟು, ಪೈಜಾಮಗಳೆಷ್ಟು, ಅವರು ತಮ್ಮ ಕಾಂತಿಯುಕ್ತವಾದ ಮೈಗೆ ಸ್ನಾನಮಾಡಿದ ಮೇಲೆ ಎಲ್ಲ ಟೀಚರ್‌ಗಳಂತೆ ಯಾಕೆ ಪೌಡ್ ಬಳಸುವುದಿಲ್ಲ – ಎಲ್ಲವನ್ನೂ ತನ್ನಲ್ಲೇ ಯೋಚಿಸಿದ್ದಾಳೆ.

ವಿಚಿತ್ರವಾದ ಕಾಂತಿಯನ್ನು ಪಡೆದ ಈ ಮನುಷ್ಯನ ಬಗ್ಗೆ ತಿಳಿದಷ್ಟೂ ತಿಳಿಯುವುದು ಉಳಿದಿದೆ ಎಂದು ಅವಳಿಗೆ ಅನ್ನಿಸಿದ್ದು ಒಮ್ಮೆ ಅವರು ಗಣಪತಿ ಹಬ್ಬದಲ್ಲಿ ಕ್ರಾಂತಿಕಾರಕ ಗೀತೆಗಳನ್ನು ಹಾಡಿದ ನಂತರ, ಅಚ್ಚರಿ ಹುಟ್ಟಿಸುವಂತೆ, ಅದೆಷ್ಟು ಇಂಪಾಗಿ, ಎಲ್ಲರಿಗೂ ಕುಣಿಯಬೇಕೆನ್ನಿಸುವಂತೆ ಹಾಡಿದ ಬೇಂದ್ರೆಯ ಒಂದು ಹಾಡು:

‘ಸೊಂಟದ ಮ್ಯಾಲೆ ಕೈ ಇಟುಕೊಂಡು/ ಬಿಂಕದಾಕಿ ಯಾರ ಈಕಿ/ಒಂಕಿ ತೋಳ ತೋರಿಸುತಾಳ / ಸುಂಕದ ಕಟ್ಯವಗ’

ಎಲ್ಲರೂ ಚಪ್ಪಾಳೆ ತಟ್ಟಿದರೂ ಸರಸ್ವತಿ ಮಾತ್ರ ಬೆರಗಾಗಿ ಕೂತುಬಿಟ್ಟಳು. ದುರುಗಪ್ಪ ತನಗೆ ಅತೀತ ಎನ್ನಿಸಿತ್ತು.

ಇನ್ನು ಯಾರಲ್ಲೂ ಅವಳು ದುರುಗಪ್ಪನ ಏಕಾಗ್ರತೆಯ ಪರವಶತೆಯನ್ನು ಕಂಡಿಲ್ಲ. ಒಮ್ಮೊಮ್ಮೆ ಮನೆಯಲ್ಲಿ ಒಬ್ಬಳೇ ಹೂಪೋಣಿಸುವಾಗ, ಅಥವಾ ದೇವರ ಮನೆಯಲ್ಲಿ ದೀಪ ಹಚ್ಚಿ ಅದರ ಎದುರು ತನ್ನ ತಾಯಿ ಕೂತಿರುವಾಗ ಈ ಏಕಾಗ್ರತೆಯನ್ನು ಅವಳು ತಾಯಲ್ಲಿ ಕಂಡಿದ್ದಾಳೆ. ಆದರೆ ಅವಳ ಮಹಾ ದುರುಳ ತಂದೆ ಕೂತಲ್ಲಿ ಕೂತಿರಲಾರದ ಸದಾ ಚಡಪಡಿಸುವ ಮನುಷ್ಯ.

ಸರಸ್ವತಿಗೆ ಮಧ್ಯಾಹ್ನ ಕ್ಲಾಸಲ್ಲಿ ಕೂತಿದ್ದಾಗ ದುರುಗಪ್ಪನವರದೇ ಯೋಚನೆ. ತನ್ನ ಜೊತೆ ತನ್ನ ಇಷ್ಟದ ಟೀಚರ್ ತನಗೆ ಇಷ್ಟವಾದ ಸಂಗತಿಗಳ ಬಗ್ಗೆ ಮಾತಾಡುತ್ತ ನಡೆಯುತ್ತಾರೆ. ಗದ್ದೆದಾಟಿ, ಹಳ್ಳದಾಟಿ, ಕಾಡನ್ನು ಹೊಕ್ಕಮೇಲೆ, ಹತ್ತೇಹತ್ತು ನಿಮಿಷಗಳ ಒಳಗೆ ನರಪ್ರಾಣಿ ಕಣ್ಣಿಗೆ ಬೀಳದೆ ದೈತ್ಯವೃಕ್ಷಗಳ ಮಧ್ಯೆ ನಡೆಯುವಾಗ ತನಗೆ ಪ್ರಿಯವಾದ ಹಕ್ಕಿಗಳನ್ನೂ ಮರಗಿಡಗಳನ್ನೂ ಅವರಿಗೆ ತೋರಿಸಬಹುದು. ಕಾಡಿನ ಕಾಕೆ ಹಣ್ಣನ್ನು ಆಯ್ದು ಅವರಿಗೆ ತಿನ್ನಿಸಬಹುದು. ಅವರು ಹಾಡಿದರೂ ಹಾಡಿಯಾರು. ಆದರೆ ಯಾವ ಹಾಡನ್ನು ಎಂದು ಊಹಿಸುವಾಗ ತನ್ನ ಅತಿಯಾಸೆಯ ಬಗ್ಗೆ ನಾಚಿಕೆಯಾಯಿತು.

ಹಾವಿನಂತೆ ಅಂಕುಡೊಂಕಾಗಿ ಸಾಗುವ ಸವೆದ ಕಿರಿದಾದ ಒಳದಾರಿಗಳಲ್ಲಿ, ಮೊಟ್ಟುಗಳ ಸಂದಿಯಲ್ಲಿ, ದೈತ್ಯವೃಕ್ಷಗಳ ಬುಡದಲ್ಲಿ, ಸಂಜೆಗೆ ತಮ್ಮ ಗೂಡುಗಳಿಗೆ ಮರಳುವ ಪಕ್ಷಿಗಳನ್ನು ನೋಡುತ್ತ, ಒಂದು ನರಹುಳಕ್ಕೆ ಕಾಣಿಸಿಕೊಳ್ಳದಂತೆ, ಮೈಗೆ ಮೈ ತಾಗಿಸಲೇ ಬೇಕಾಗಿ ಬಂದು ತನಗೆ ತುಂಬ ಇಷ್ಟವಾಗಿ ಬಿಟ್ಟ ಬೆವರಿನ ವಾಸನೆಯ ದುರುಗಪ್ಪನ ಜೊತೆ, ಆ ನಿರ್ಮಲವಾದ ಆಕಾಶದ ಅಡಿಯಲ್ಲಿ ಕಾರ್ತಿಕ ಮಾಸದ ಒಂದು ಸಂಜೆ ನಡೆದದ್ದು ಸರಸ್ವತಿಯ ಜೀವನವನ್ನೇ ಬದಲಾಯಿಸಿಬಿಟ್ಟಿತು.

೧೩

ಕೇವಲ ಒಂದು ತಿಂಗಳಲ್ಲಿ ‘ಸಾರ್’ ಆಗಿದ್ದ ದುರುಗಪ್ಪ ಸರಸ್ವತಿಯ ಎಲ್ಲ ಸಂಕೋಚಗಳನ್ನೂ ದಾಟಿ ಅವಳ ಪಾಲಿಗೆ ಪ್ರೀತಿಯ ದುರುಗ ಆಗಿಬಿಟ್ಟ. ತನಗಿಂತ ಸುಮಾರು ಎಂಟು ಹತ್ತು ವರ್ಷಗಳಾದರೂ ಹಿರಿಯನಾಗಿದ್ದ ದುರುಗನ ವಯಸ್ಸಿನ ಯಾವ ಪರಪುರಷನನ್ನೂ ಈವರೆಗೆ ಅವಳು ಏಕವಚನದಲ್ಲಿ ಹೆಸರು ಹಿಡಿದು ಕರೆದದ್ದಿಲ್ಲ. ಅಪರೂಪಕ್ಕೆ ಅವಳು ಹೋಗುವ ಮುಂಜಿ ಮದುವೆಗಳಲ್ಲೂ, ಇನ್ನೊಬ್ಬ ಗಂಡಿನ ಜೊತೆ ಅವಳು ಮಾತಾಡಿದ್ದು ಇಲ್ಲ.

ನಾಡಿನಲ್ಲಿ ವಂಚಿತಳಾದ ಸರಸ್ವತಿ ಕಾಡಿನ ಒಳದಾರಿಗಳಲ್ಲಿ ಸಫಲತೆ ಕಂಡುಕೊಂಡಳು. ಒಳದಾರಿಗಳ ತಿರುವುಮುರಿವುಗಳಲ್ಲಿ, ಹುಲಿಗಳು ತಮ್ಮ ಮರಿಗಳನ್ನು ಹೆತ್ತು ಸಾಕುವಂತಹ ಮೊಟ್ಟುಗಳ ಮರೆಯಲ್ಲಿ, ಗಂಧರ್ವರಂತೆ ಒಬ್ಬರಿಗೊಬ್ಬರು ಕಾದರು, ಸಿಕ್ಕರು. ಕಾಡಿನ ಎಲ್ಲ ಗುಪ್ತ ಸ್ಥಳಗಳನ್ನು ಹುಡುಕಿ, ದಿನಕ್ಕೊಂದು ಹೊಸಜಾಗ ಕಂಡು ಅವುಗಳ ವನಸ್ಪತಿಯ ವೈವಿಧ್ಯದ ವಾಸನೆಯನ್ನು, ತಂಪನ್ನು, ಥರಹೇವಾರಿ ಪಕ್ಷಿ ಕೀಟಗಳ ಕಲಕಲನಾದವನ್ನು, ಹುಲ್ಲೊಳಗೆ ಹುದುಗಿದ ನಾಚಿಕೆ ಮುಳ್ಳುಗಳ ಚುಚ್ಚನ್ನು ತಮ್ಮ ಮೈಗಳಲ್ಲಿ ಪಡೆದರು. ಒಮ್ಮೆ ಒಂದು ಸರ್ಪವನ್ನೂ ಗೊತ್ತಾಗದೆ ಕೆದಕಿ, ದುರುಗಪ್ಪ ಅವಳನ್ನು ಎತ್ತಿಕೊಂಡು ಓಡಿದ್ದ.

ಸರಸ್ವತಿಗೆ ನಿಜವಾಗಿ ದಿಗಿಲಾದ್ದು ಒಮ್ಮೆ ಅವಳು ತನ್ನ ಕತ್ತಿನ ಸರವನ್ನು ಕಳೆದುಕೊಂಡು ಮನೆಗೆ ಬಂದಾಗ, ತಾಯಿಗಿದು ಗೊತ್ತಾಗಲಿಲ್ಲ. ಮಾರನೇ ದಿನ ಅವಳ ಪುಣ್ಯಕ್ಕೆ ಅದು ಕಳಚಿಟ್ಟ ಕಲ್ಲಿನ ಸಂದಿಯಲ್ಲೇ ಇತ್ತು. ನಿತ್ಯ ಮನೆಗೆ ಬಂದವಳು ಸ್ನಾನದ ನೆವದಲ್ಲಿ ಬಚ್ಚಲಿಗೆ ಹೋಗಿ ಮಲಿನವಾದ ಅವಳ ಒಳಲಂಗವನ್ನು ತಾನೇ ಒಗೆದು ಬಿಡುವಳು.

ತಲೆಬಾಚುವಾಗ ಒಮ್ಮೆ ತಾಯಿ, ‘ಇದೇನೇ ನಿನ್ನ ಕೂದಲಲ್ಲಿ ನೆಗ್ಗಿನ ಮುಳ್ಳೊ ನಾಚಿಕೆ ಮುಳ್ಳೊ ಇದೆ; ನಿನ್ನ ಸೀರೆಯಲ್ಲೂ ಒಗೆಯುವಾಗ ಮುಳ್ಳು ಇತ್ತು’ ಎಂದರೆ, ‘ನಿನ್ನೆ ಜಾರಿ ಬಿದ್ದು ಬಿಟ್ಟೆ ಅಮ್ಮ’ ಎಂದಳು. ಹೀಗೆ ಏನಾದರೂ ಸುಳ್ಳಿನ ಮೇಲೆ ಸುಳ್ಳು ಹೇಳಿ ಸರಸ್ವತಿ ಪ್ರತಿ ಭಾನುವಾರವೂ ದುರುಗನನ್ನು ಕೂಡಿದಳು. ಚಿರ ದುಃಖಿಯಾದ ತಾಯಿ ಮಗಳು ಸುಖದಲ್ಲಿ ಮಿನುಗುತ್ತ ಅರಳುವುದನ್ನು ಕಂಡು ತಾನೂ ಸುಖಿಯಾದಳು. ತನ್ನ ಹೊಟ್ಟೆಯಿಂದ ಹುಟ್ಟಿದ್ದು ಇದೊಂದೇ ಎಂದು ತಾಯಿ ಯಮುನಮ್ಮನಿಗೆ ಸರಸ್ವತಿಯೆಂದರೆ ಅವಳ ಬಾಳಿನ ಸರ್ವಸ್ವ.

೧೪

ದುರುಗ ಏನನ್ನೂ ಅವಳಿಂದ ಬಚ್ಚಿಡನು.

ದುರುಗನ ತಂದೆ ಮೋಚಿ; ಮಹಾ ಕುಡುಕ, ಮುಂಗೋಪಿ, ಜಗಳಗಂಟ, ಆದರೆ ಧಾರಾಳಿ; ಓದಿದ ಮಗನೆಂದರೆ ಪರಮ ವ್ಯಾಮೋಹಿ. ‘ನನ್ನ ರಾಜ’ ಎಂದೇ ಅವನು ದುರುಗನನ್ನು ಕರೆಯುವುದು. ದುರುಗ ತನ್ನ ಅಪ್ಪನ ಎಲ್ಲ ನ್ಯೂನತೆಗಳ ಬಗ್ಗೆಯೂ, ಐಲುತನದ ಬಗ್ಗೆಯೂ ಏಕವಚನದಲ್ಲಿ ಸಂಕೋಚವಿಲ್ಲದೆ, ‘ಅದು’ ‘ಇದು’ ಎಂದು ಅಪ್ಪನನ್ನು ವರ್ಣಿಸಿಯೂ, ಮಾತಾಡುವನು; ಬೈಯುವನೋ, ಹೊಗಳುವನೋ, ಇದು ಪ್ರೀತಿಯೋ, ಸಿಟ್ಟೋ ಎಂದು ಗೊತ್ತಾಗದ ರೀತಿಯಲ್ಲಿ ದುರುಗ ತನ್ನ ಅಪ್ಪನ ಬಗ್ಗೆ ಮಾತಾಡುವುದು. ಆದರೆ ಸರಸ್ವತಿ ತನ್ನ ಅಪ್ಪನ ಬಗ್ಗೆ ಹಾಗೆ ಮಾತಾಡಲಾರಳು. ಬಹುವಚನದಲ್ಲಿ ತನ್ನ ಅಪ್ಪನ ದುರುಳತನದ ಬಗ್ಗೆ ಅವಳು ಮಾತಾಡುವುದು. ಆದರೆ ದುರುಗ ‘ಬಿಡೇ ಬಿಡೇ ಅದೇನು ಮಹಾ. ನನ್ನಪ್ಪ ಬಡ್ಡೀದು ಕುಡಿದು ಬಂದು, ಮನೇಲೇ ಕುಡಿದಿರೋ ನನ್ನವ್ವನ ಜೊತೆ ಬಡಿದಾಡೋದನ್ನ, ಕುಡಿದಾಗ ಕೆಲವು ಸಾರಿ ಈ ಮುದಿಗಳ ಮುದ್ದಾಟವನ್ನ ನೋಡಿದ್ರೆ ನೀನೇನು ಅಂತಿದ್ಯೊ?’ ಎಂದು ಅವಳ ಬಾಯಿ ಮುಚ್ಚಿಸುವನು.

ಹೀಗೇ ಆರು ತಿಂಗಳು ಕಳೆದವು. ರಜೆಯಲ್ಲೂ ದುರುಗ ದಾವಣಗೆರೆಗೆ ಹೋಗಲಿಲ್ಲ; ಅಪ್ಪನೇ ಮಗನನ್ನು ನೋಡಲು ಬಂದು, ಹೊಸ ಜಾಗದಲ್ಲಿ ಬೆಳೆದ ಮಗನ ವರ್ಚಸ್ಸನ್ನು ಕಂಡು ಮೆರೆದಿದ್ದ. ಮತ್ತೆ ಮಗನಿಗೆ ತಿಳಿಯದಂತೆ ಗುಟ್ಟಾಗಿ ಸಾರಾಯಿ ಅಂಗಡಿಗೆ ಹೋಗಿ ಕುಡಿದು, ಕುಡಿದಾದ ಮೇಲೆ ಧೈರ್ಯ ಬಂದಂತಾಗಿ, ತಾನು ಯಾರು ಎಂದು ಜೊತೆಯಲ್ಲಿ ಕುಡಿದವರಿಗೆ ಸಾರಲು ಮಗನನ್ನು ಬಾಯಿಗೆ ಬಂದಂತೆ ಕೊಂಡಾಡಿ, ರಸ್ತೆ ಮೇಲೆ ತೂರಾಡಿ, ಪೊಲೀಸರ ಕೈಗೆ ಮಧ್ಯರಾತ್ರೆ ಸಿಕ್ಕಿಬಿದ್ದು ಪೇಟೆಗೆ ಸುದ್ದಿಯಾಗಿದ್ದ. ದುರುಗನೆಂದರೆ ಅಸೂಯೆಪಡುವ ಕೆಲವು ಟೀಚರುಗಳಿಗೆ ಇದರಿಂದ ಖುಷಿಯಾಗಿತ್ತು.

ಈ ನಡುವೆ ಮೈಮರೆತ ಸಂಭ್ರಮದ ಋತುಚಕ್ರದಲ್ಲಿ ಸರಸ್ವತಿಯ ಮುಟ್ಟುನಿಂತಿದ್ದೆ ಭಯಗ್ರಸ್ತಳಾಗಿ ದುರುಗನಿಗೆ ಹೇಳಿಕೊಂಡಳು. ಗಂಡುಗರ್ವದ ದುರುಗನ ಮುಖ ಅರಳಿತು. ಏನನ್ನೋ ಸಾಧಿಸಿ ಗೆದ್ದುಬಿಟ್ಟವನಂತೆ ಅವಳನ್ನು ಎತ್ತಿ, ಹಾರಿಸಿ, ಮಗುವಿನಂತೆ ಹಿಡಿದು, ಬೆರಗಿನಲ್ಲಿ ಅವಳು ಚೀರುವಂತೆ ಮಾಡಿ, ‘ದಮ್ಮಯ್ಯ ಬಿಡಿ’ ಎನ್ನಿಸಿ ಮರದಡಿ ನಿಲ್ಲಿಸಿ ಮುದ್ದಿಸಿದ; ಅವಳ ಆತಂಕದ ಮುಖ ನೋಡಿ, ‘ಇವತ್ತು ಬೇಡವ’ ಎಂದು ಅವಳ ಹೊಟ್ಟೆಯ ಮೇಲೆ ಮೃದುವಾಗಿ ಕೈಯಾಡಿಸಿದ. ‘ಗಂಡಸ್ತನ’ದಲ್ಲಿ ನಂಬಿದ ದುರುಗ ಅವನಾದರೆ, ಅವನನ್ನು ವಶಪಡಿಸಿಕೊಂಡ ಗುಪ್ತ ಸುಖದಲ್ಲಿ ಅರಳಿದ ಹೆಣ್ಣು ಅವಳು. ‘ಯಾಕೆ ಬೇಡ? ಇನ್ನೂ ಅದು ಹೊಟ್ಟೇನ ಒದೀತ ಇಲ್ಲ’ ಎಂದಳು.

ಅವಳಿಗೇನೂ ಹೇಳದೆ, ಅಂದಿನಿಂದಲೇ, ಆತುರದ ದುರುಗಪ್ಪನೆಂದೇ ಅವನ ಗೆಳೆಯರಲ್ಲಿ ಪ್ರಸಿದ್ಧನಾದ ದುರುಗ, ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡ. ತನ್ನನ್ನು ಅನುಮಾನದಿಂದ ನೋಡಲು ತೊಡಗಿದ್ದ ಹೆಡ್‌ಮಾಸ್ಟರರಿಗೆ ಅಪ್ಪನಿಗೆ ಖಾಹಿಲೆ, ಮೂರು ತಿಂಗಳ ರಜ ಬೇಕು, ಸಂಬಳರಹಿತ ರಜೆಯಾದರೂ ಚಿಂತೆಯಿಲ್ಲ, ಎಂದ. ಸಹೋದ್ಯೋಗಿಗಳಿಗೆ ಬೇರೆ ಕೆಲಸ ಹುಡುಕುವೆ, ಅಮಲ್ದಾರನಾಗುವೆ ಎಂದು ಹೇಳಿ ಹೊಟ್ಟೆಗಿಚ್ಚು ಆಗುವಂತೆ ಮಾಡಿದ. ಕೈಯಲ್ಲಿ ಒಂದಿಷ್ಟು ಹಣವಿದ್ದುದರಿಂದ ಮೂರು ತಿಂಗಳ ಸಂಬಳವಿಲ್ಲದ ರಜೆಯನ್ನು ಪಡೆದ. ಅಗತ್ಯವಾದರೆ ತನ್ನ ಕೆಲಸವನ್ನೇ ಬಿಡಲು ತಯ್ಯಾರಾಗಿ ಒಂದು ಸಂಜೆ ಸರಸ್ವತಿಗೆ ಹೇಳಿದ:

‘ನಾಳೆ ಇಲ್ಲಿಂದ ಹೋಗಿಬಿಡೋಣ’

ಸರಸ್ವತಿ ‘ಎಲ್ಲಿಗೆ’ ಎಂದಳು.

‘ಎಲ್ಲಿಗೆ ಅಂತ ಕೇಳಬಾರದು ಅಂತ ನೀನೇ ಅಂತೀಯ… ನನ್ನ ಊರಿಗೆ, ದಾವಣಗೆರೆಗೆ, ಅಪ್ಪನ ಜೊತೆ ಮೆಟ್ಟು ಹೊಲಿದಾದರೂ ನಿನ್ನ ಸಾಕುತೀನಿ’ ಎಂದ.

ಸರಸ್ವತಿ ನಂಬಲಿಲ್ಲ. ಮುಂದೇನೆಂದು ಹೆದರಿದಳು. ಆದರೆ ಎಲ್ಲ ವಿವರವನ್ನೂ ವ್ಯವಹಾರದಲ್ಲಿ ಜಾಣನಾದ ದುರುಗ ಯೋಚಿಸಿ ತಯಾರಾಗಿದ್ದ. ಬಡತನದಲ್ಲಿ ಹೋರಾಡಿ ಬೆಳೆದವನಲ್ಲವೆ? ಓದುವಾಗಲೂ ಮೆಟ್ಟು ಹೊಲಿದವ ದುರುಗ.

ದಾವಣಗೆರೆಯಲ್ಲಿ ಅವನ ಪರಿಚಯದವರೊಬ್ಬರು ಒಂದು ಟ್ಯುಟೋರಿಯಲ್ ನಡೆಸುತ್ತಿದ್ದರು. ಅದರಲ್ಲಿ ತನಗೊಂದು ಕೆಲಸವನ್ನು ಕೇಳಿ ಅವರಿಗೆ ಬರೆದಿದ್ದ. ‘ಬಾ, ನೋಡುವ’ ಎಂದು ಅವರು ಬರೆದಿದ್ದರು. ಈ ಹಣ ಸಾಲದಾದರೆ, ತಂದೆಗೆ ಸಹಾಯ ಮಾಡುವುದೊ ಅಥವಾ ಮೆಟ್ಟು ಮಾರುವ ಒಂದು ಅಂಗಡಿಯನ್ನು ತೆರೆಯುವುದೋ, ಅಂತೂ ಏನನ್ನಾದರೂ ಮಾಡುವುದು ಎಂದುಕೊಂಡಿದ್ದ. ತನ್ನ ಜಾತಿಯ ಎಂ.ಎಲ್.ಎ. ಒಬ್ಬರನ್ನು ಹಿಡಿದು ವರ್ಗ ಮಾಡಿಸಿಕೊಳ್ಳಲು ಪ್ರಯತ್ನವನ್ನೂ ಮಾಡಿದರಾಯಿತು. ತನ್ನಷ್ಟು ಓದಿದವರು ತನ್ನ ಜಾತಿಯಲ್ಲಿ ಕಡಿಮೆಯೇ.

ಯಾಕೆ? ಸರಸ್ವತಿಯನ್ನು ಮದುವೆಯಾಗಿ, ಮಗುವಾದ ಮೇಲೆ ರಾಜಾರೋಷವಾಗಿ ಈ ಊರಿಗೇ ತಿರುಗಿ ಬಂದು ಕೆಲಸ ಮಾಡುವುದಕ್ಕೂ ಅವನು ತಯ್ಯಾರಾಗಿದ್ದ. ಈ ಸಲಹೆಗೆ ಹಿಂದೆಗೆದವಳೆಂದರೆ ಸರಸ್ವತಿ ಮಾತ್ರ.

ಮಾರನೇ ದಿನವೇ ಹೋಗುವುದು ಬೇಡ ಎಂದಳು ಸರಸ್ವತಿ. ಹೀಗೆ ಧಿಡೀರನೆ ತಾನು ಹುಟ್ಟಿಬೆಳೆದ ಮನೆಯನ್ನೂ ತನ್ನ ಪ್ರೀತಿಯ ತಾಯಿಯನ್ನೂ ತೊರೆದು ಹೋಗಿಬಿಡುವುದು ಅವಳಿಗೆ ಸಾಧ್ಯವಿರಲಿಲ್ಲ. ಎರಡು ದಿನಗಳು ಕಳೆಯಲಿ ಎಂದಳು ಸರಸ್ವತಿ. ಆಗಲಿ ಎಂದು ದುರುಗ ಏನೇನು ಮಾಡಬೇಕೆಂದು ವಿವರಿಸಿದ. ನಾಡಿದ್ದು ಭಾನುವಾರ. ತಾವು ಶಿವಮೊಗ್ಗಕ್ಕೆ ಹೋಗುವ ಬಸ್ಸನ್ನು ಗುಡ್ಡದಾಚೆಯಿರುವ ಗಣಪತಿ ಕಟ್ಟೆಯಲ್ಲಿ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಹಿಡಿಯಬೇಕು. ಊರಿನಿಂದ ಮೂರು ಮೈಲಿಯಾಚೆ ಹೋಗಿ ಬಸ್ಸು ಹಿಡಿದರೆ ಯಾರಿಗೂ ಗೊತ್ತಾಗದು. ದುರುಗ ಬೆಳಿಗ್ಗೆ ಹತ್ತು ಗಂಟೆಗೆ ಅವರಿಬ್ಬರೂ ಕೆಲವೊಮ್ಮೆ ಕೂಡುತ್ತಿದ್ದ ನದಿಯ ಬಳಿಯ ಹಾಳುಬಿದ್ದ ಅಗ್ರಹಾರದ ಮುರುಕು ಗುಡಿಯಲ್ಲಿ ಅವಳಿಗೆ ಕಾದಿರುವುದು; ಸರಸ್ವತಿ ಬರಿಗೈಯಲ್ಲಿ ಉಟ್ಟ ಸೀರೆಯಲ್ಲೇ ಈ ಮುರುಕು ಗುಡಿಗೆ ಹತ್ತು ಗಂಟೆಯ ಒಳಗೆ ಬಂದುಬಿಡಬೇಕು. ದುರುಗ ಇನ್ನೂ ಅರ್ಧ ಗಂಟೆ ಮೊದಲೇ ಅವಳಿಗಾಗಿ ಕಾದಿರುತ್ತಾನೆ.

ದುರುಗ ಮೂರು ತಿಂಗಳ ರಜೆಯಲ್ಲಿ ಹೋಗಲಿದ್ದಾನೆ ಎಂದು ತಿಳಿದ ಅವನನ್ನು ಕಂಡರೆ ಆಗದ ಸಹೋದ್ಯೋಗಿಯೊಬ್ಬನಿಗೆ ಸಂಶಯ ಹುಟ್ಟಿಕೊಂಡಿತ್ತು. ಸರಸ್ವತಿಗೂ ಅವನಿಗೂ ಇರುವ ಸ್ನೇಹದ ಬಗ್ಗೆ ಏನೇನೋ ಸುದ್ದಿಗಳು ಈಗಾಗಲೇ ಹುಟ್ಟಿಕೊಂಡಿದ್ದವು. ಲೀಶರ್ ಇದ್ದಾಗಲೆಲ್ಲ ಸ್ಟಾಫ್ ರೂಮಿನಲ್ಲಾದರೆ ಸ್ಟಾಫ್ ರೂಮಿನಲ್ಲಿ, ಇಲ್ಲವಾದರೆ ಹೊರಗೆ ಮರದಡಿಯಲ್ಲಿ ದುರುಗಪ್ಪ ಸರಸ್ವತಿಯ ಜೊತೆಯಿರುವುದು ಎಲ್ಲರ ಕಣ್ಣಿಗೂ ಬಂದಿತ್ತು. ಸರಸ್ವತಿ ಹೆದರುವಳು; ಬೇಡವೆನ್ನುವಳು. ಆದರೆ ದುರುಗಪ್ಪನಿಗೆ ಯಾರ ಲೆಕ್ಕವಿಲ್ಲ.

ಅವಳ ಬಸಿರು ತೆಗೆಸಲೆಂದೇ ದುರುಗ ನಾಪತ್ತೆಯಾಗುತ್ತಿರುವುದು ಎಂದು ಊಹಿಸಿದ ದುರುಗಪ್ಪನ ಸಹೋದ್ಯೋಗಿ ದುರುಗನನ್ನು ಕಣ್ಣಿಟ್ಟು ಕಾಯುವಂತೆ ಸರಸ್ವತಿಯ ಅಪ್ಪನಿಗೆ ಒಂದರ ಮೇಲೊಂದರಂತೆ ಕಾಗದ ಬರೆದಿದ್ದ. ಬರೀ ಹೊಲಸು ಮತುಗಳ ಸಹಿ ಹಾಕದ ಕಾಗದ ಅದು. ಸರಸ್ವತಿಯಲ್ಲಾದ ಬದಲಾವಣೆಗಳನ್ನು ಕಂಡು ಆಶ್ಚರ್ಯಪಟ್ಟಿದ್ದ ಗಣಪಯ್ಯ ಬಹಳ ಹಿಂದೆಯೇ ಮಗಳು ಸ್ನಾನಕ್ಕೆ ಹೋದಾಗ ಅವಳ ಚೀಲದಿಂದ ದುರುಗ ಬರೆದ ಕಾಗದವೊಂದನ್ನು ಕದ್ದು ಓದಿದ್ದ. ಅದೇನೂ ಪ್ರಣಯ ಪತ್ರವಾಗಿರಲಿಲ್ಲ. ಅದೊಂದು ಆವೇಶದ ಕ್ರಾಂತಿಕಾರಿ ಮಾತುಗಳ ಕಾಗದ. ಅದು ಕೊನೆಯಾದದ್ದು ಮಾರ್ಕ್ಸ್‌ನ ಕೆಲವು ಮಾತುಗಳಿಂದ, ಮತ್ತು ‘ಕಟ್ಟುವೆವು ನಾವು’ ಪದ್ಯಗಳ ಸಾಲುಗಳಿಂದ. ಕಾಮ್ರೇಡ್ ಸರಸ್ವತಿಗೆ ಅವಳ ಕಾಮ್ರೇಡ್ ದುರುಗಪ್ಪನ ಕ್ರಾಂತಿಕಾರೀ ಶುಭಾಶಯದ ಕಾಗದ. ಅವರ ಸ್ನೇಹದ ಪ್ರಾರಂಭದ ದಿನಗಳ ಕಾಗದ ಅದು. ಗಣಪಯ್ಯ ಈ ಕಾಗದ ಓದಿ, ಮಗಳನ್ನು ಹೊಡೆದಿದ್ದ. ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುತ್ತೇನೆಂದು ಬೆದರಿಕೆ ಹಾಕಿದ್ದ.

ಆದರೆ ಅನಾಮಧೇಯ ಪತ್ರಗಳು ಬರಲು ಶುರುವಾದ ಮೇಲೆ ಗಣಪಯ್ಯ ಕ್ರೂರವಾಗಿ ಹೊಂಚಲು ಶುರುಮಾಡಿದ. ಅವಳ ಚಲನವಲನಗಳ ಮೇಲೆ ಕಣ್ಣಿಟ್ಟ. ವಿಧವೆಯಾದ ಮಗಳನ್ನು ಹಠಮಾಡಿ ಓದಲು ಕಳುಹಿಸುವಂತೆ ತನ್ನನ್ನು ಒತ್ತಾಯ ಪಡಿಸಿದ್ದ, ಮಗಳ ಮೇಲಿನ ಮೋಹದ ಹೆಂಡತಿಯನ್ನು ಹಾಕಿ ಚಚ್ಚಬೇಕೆಂಬ ಕೋಪವನ್ನು ಅದುಮಿಕೊಂಡು, ತನ್ನ ಇಬ್ಬರು ಕಟುಕ ಭಂಟರನ್ನು ದುರುಗನ ಹಿಂದೆ ಬಿಟ್ಟ. ವೈರವಿಲ್ಲದೆ ಬದುಕು ಸಪ್ಪೆಯೆನ್ನಿಸುವ ಗಣಪಯ್ಯನಿಗೆ ಮನೆಯಲ್ಲೇ ಒಬ್ಬ ವೈರಿ ಸಿಕ್ಕಿದ್ದು ಕುಡುಕನಿಗೆ ಬಿಟ್ಟಿಯಾಗಿ ಸಿಕ್ಕ ಹೆಂಡದಂತಾಗಿ ಬಿಟ್ಟಿತು.

ದುರುಗ ಮತ್ತು ಸರಸ್ವತಿ ಗುಟ್ಟಾಗಿ ಸೇರಿ ಓಡಿಹೋಗುವುದನ್ನು ನಿಶ್ಚಯಮಾಡಿಕೊಂಡದ್ದನ್ನು ದುರುಗನಿಗೆ ಗೊತ್ತಾಗದಂತೆ ಅವನ ಹಿಂದೆಯೇ ಹಲವು ದಿನಗಳ ಕಾಲ ಸುಳಿಯುತ್ತಿದ್ದು, ದನ ಕಾಯುವವರಂತೆ ಕಂಬಳಿಕೊಪ್ಪೆ ಹಾಕಿಕೊಂಡು ಹೊಂಚಿ, ಪೊದೆಯೊಂದರ ಹಿಂದೆ ದರಗಿನಲ್ಲಿ ತೂರಿ ಅಡಗಿಕೂತು, ಈ ಗೊಗ್ಗ ಕೊಗ್ಗ ಕಟುಕರು ದುರುಗ ಆಡಿದ್ದನ್ನು ಕೇಳಿಸಿಕೊಂಡು, ಗಣಪಯ್ಯನಿಗೆ ಹೇಳಿದ್ದರು. ಸರಸ್ವತಿ ದುರುಗರು ಆ ದಿನಕ್ಕೆ ಕಾದಂತೆ ಕಟುಕ ಗಣಪಯ್ಯನೂ ಆ ದಿನಕ್ಕೆ ಕಾದ. ತನ್ನ ರಚ್ಚನ್ನು ತೀರಿಸಿಕೊಳ್ಳುವ ಮುಹೂರ್ತವನ್ನು ಅದರ ಎಲ್ಲ ವಿವರಗಳಲ್ಲೂ ನಿರೀಕ್ಷಿಸುತ್ತ ಕಂಬಳಿ ಕೊಪ್ಪೆ ತೊಟ್ಟು ಕತ್ತಿ ಹಿಡಿದಿದ್ದ ಈ ಕಟುಕರಿಗೆ ಗಣಪಯ್ಯ ಹೀಗೆ ಆದೇಶವಿತ್ತ :

ಮುರುಕು ಗಡಿಯಲ್ಲಿ ಮೊದಲೇ ಹೋಗಿ ಕಾದಿರಬೇಕು. ದುರುಗ ಬಂದದ್ದೇ ಅವನ ಮೇಲೆ ಎರಗಬೇಕು; ಕತ್ತರಿಸಿ ಕೊಲ್ಲಬೇಕು.

ಸರಸ್ವತಿ ಅಲ್ಲಿಗೆ ಬಂದವಳು ಚೂರುಚೂರಾದ ತನ್ನ ಮಿಂಡನನ್ನು ಕಾಣಬೇಕು. ಹಡಬೆ ಮುಂಡೆ ಈ ಸತ್ತ ಬೋಳೀಮಗನನ್ನು ಬಂದು ಕಣ್ಣಾರೆ ನೋಡುವುದನ್ನು ಅವಳನ್ನು ಹುಟ್ಟಿಸಿದ ತಾನು ನೋಡಬೇಕು.