೧೫

ದುರುಗ ಕೈಯಲ್ಲಿ ತನ್ನ ಟ್ರಂಕನ್ನು ಹಿಡಿದುಕೊಂಡು ಮುರುಕು ಮಂಟಪಕ್ಕೆ ಬೆಳಗ್ಗೆ ಒಂಬತ್ತುವರೆ ಗಂಟೆಗೆ ಸರಿಯಾಗಿ ಬಂದ. ಈ ಸರಸ್ವತಿಯನ್ನು ಹತ್ತು ಗಂಟೆಗೆ ಬಾ ಎಂದರೆ ತಡೆಯಲಾರದೆ ಅವಳು ಒಂಬತ್ತು ಗಂಟೆಗೇ ಬಂದುಬಿಡುವವಳೆಂದು ಅವನಿಗೆ ಕಾತರ. ಬಸುರಿ ಬಳಲಬಾರದು. ದುರುಗ ಒಂದು ಕಲ್ಲಿನ ಮೇಲೆ ಕೂತ. ಏನಾದರೂ ಇಷ್ಟವಾದ ಪುಸ್ತಕ ಓದುತ್ತ ಸರಸ್ವತಿಯ ಜೊತೆ ಈ ಕಲ್ಲಿನ ಮೇಲೇ ಅವನು ಕೂರುವುದು. ಹಾಳುಬಿದ್ದು ಗವ್ವೆನ್ನುವ, ಬಾವಲಿಗಳು ನೇತಾಡುವ, ಹಳಸಿದ ವಾಸನೆಯ ದೇವಸ್ಥಾನಕ್ಕೆ ಎದುರಿನಲ್ಲಿದ್ದ ಮಂಟಪ ಅದು.

ದಾರಿ ಕಳೆಯಲು ಸರಸ್ವತಿಗೆ ಇಷ್ಟವೆಂದು, ತನ್ನ ಕೈ ಚೀಲದಲ್ಲಿ ಹುರಿದ ನೆಲಗಡಲೆ ಕಾಯಿಗಳನ್ನು ತಂದಿದ್ದ. ಜೊತೆಗೆ ಅವಳಿಗೆ ಪ್ರಿಯವಾದ, ಬಸುರಿಯಾದ ಮೇಲೆ ಅವಳು ತುಂಬ ಬಯಸುವ, ಹಳೆಯ ನ್ಯೂಸ್ ಪೇಪರಿನಲ್ಲಿ ಸುತ್ತಿದ ಉಂಡೆ ಬೆಲ್ಲ.

ಅವನಿಗೂ ಹಸಿವಾಗಿತ್ತು. ಎದ್ದ ಮೇಲೆ ಕಾಫಿಯನ್ನೂ ಕುಡಿಯದೆ ಅವನು ಬಂದಿದ್ದ. ಹೊತ್ತು ಕಳೆಯಲು ಒಂದೊಂದಾಗಿ, ನಿಧಾನವಾಗಿ, ಚೀಲದಿಂದ ಕಡಲೇ ಕಾಯಿಯನ್ನು ತೆಗೆದು, ಬೀಜವನ್ನು ಬಿಡಿಸಿ, ಬೆಲ್ಲವನ್ನು ಬಾಯಿಗೆ ಹಾಕಿಕೊಂಡು, ಮೆಲ್ಲತೊಡಗಿದ….

ದಾವಣಗೆರೆಗೆ ಹೋದದ್ದೇ ತನ್ನ ಸೋಷಲಿಸ್ಟ್ ಗೆಳೆಯನೊಬ್ಬನ ಮನೆಯಲ್ಲಿ ಸರಸ್ವತಿಯನ್ನು ಒಂದುವಾರ ಬಿಡುವುದು, ಆಮೇಲೆ ಅವ್ವನನ್ನು ಒಪ್ಪಿಸುವುದು, ಆಮೇಲೆ ತನ್ನ ತಂದೆ ಕುಡಿಯದೇ ಇರುವ ಘಳಿಗೆ ನೋಡಿ ಅವನಿಗೆ ತಾನು ಮದುವೆಯಾಗುವ ವಿಷಯ ಹೇಳುವುದು. ತನ್ನ ಗೆಳೆಯನ ಸಾಕ್ಷಿಯಲ್ಲಿ ರಿಜಿಸ್ಟರ‍್ಡ್ ಮದುವೆಯಾಗುವುದು. ವರ್ಗಕ್ಕೆ ಪ್ರಯತ್ನಿಸುವುದು. ತನ್ನ ಜಾತಿಯ ಅಸೆಂಬ್ಲಿ ಮೆಂಬರನ್ನು ಹಿಡಿದು ಮೂರು ತಿಂಗಳಲ್ಲಿ ವರ್ಗಮಾಡಿಸಿಕೊಳ್ಳಲು ನೋಡುವುದು, ಏನೂ ಆಗದಿದ್ದರೆ ಮೆಟ್ಟು ಹೊಲಿಯುವುದು, ಮಾರುವುದು, ಟ್ಯುಟೋರಿಯಲ್‌ನಲ್ಲಿ ಪಾಠ ಮಾಡುವುದು – ಹೀಗೆ ಯೋಚಿಸುತ್ತ ಬೆಳಗಿನ ಸೂರ್ಯನಿಗೆ ಬೆನ್ನುಹಾಕಿ ಕೂತ ದುರುಗ ಏನೊ ಓಡುವ ಸದ್ದಾಗಿ ಚಿರತೆಯಿರಬಹುದೆಂದು ಮೈಯೆಲ್ಲ ಕಣ್ಣಾಗಿ ಎದ್ದುನಿಂತ.

ಕಟುಕರು ದುರುಗನಿಗಿಂತ ಮುಂಚೆಯೇ, ನಸುಕು ಹರಿಯುವ ಮುನ್ನವೇ, ಅಲ್ಲಿ ಬಂದು ಒಂದು ಮೊಟ್ಟಿನ ಹಿಂದೆ ದರಗಿನಲ್ಲಿ ತೂರಿ ಅಡಗಿದ್ದರು. ಅನ್ಯಮನಸ್ಕನಾಗಿ ಕೂತವನಿಗೆ ದಿಗಿಲಾಗುವಂತೆ ಸದ್ದುಮಾಡಿ, ಅವನು ಎದ್ದೊಡನೆಯೇ, ಓಡಿಬಂದ ಕಟುಕರು ಅವನ ಮೇಲೆಗರಿ ಅವನನ್ನು ಬೀಳಿಸಿದರು.

ದುರುಗ ನಿತ್ಯ ವ್ಯಾಯಾಮ ಮಾಡಿ ಚುರುಕಾಗಿದ್ದ ಬಲಶಾಲಿ, ಕಟುಕರು ಮೈಯನ್ನು ಬೆಳೆಸಿಕೊಂಡು ತಮ್ಮ ಗಾತ್ರದಿಂದ ಮಾತ್ರ ಭಯ ಹುಟ್ಟಿಸುತ್ತಿದ್ದವರು. ಕತ್ತಿ ಹಿಡಿದು ತನ್ನ ಮೇಲೆ ಕೂತವರನ್ನು ಬಲವಾಗಿ ನೂಕಿ ದುರುಗ ಬೀಳಿಸಿದ. ಒಬ್ಬನ ಕತ್ತಿಯನ್ನು ಕಿತ್ತು ದೂರ ಎಸೆದ.

ಇದನ್ನು ಕಂಡದ್ದೇ, ಇನ್ನೊಂದು ಮೊಟ್ಟಿನಲ್ಲಿ ಅಡಗಿ ಕೂತಿದ್ದ ಗಣಪಯ್ಯನಿಗೆ ಕಟುಕರಿಂದ ಇದು ಆಗದ ಕೆಲಸವೆಂದು ದಿಗಿಲಾಯಿತು. ತಾನು ಇರಲಿ ಎಂದು ತಂದಿದ್ದ ಕೋವಿಯನ್ನು ಹಿಡಿದು ಹೊರಗೆ ಓಡಿಬಂದ. ದುರುಗನ ಚುರುಕಾದ ದೇಹದ ಸ್ಥೈರ್ಯವನ್ನೂ, ಏಟಿಗೆ ಸಿಲುಕದಂತೆ ಅದು ಬಳುಕುವ ಎಚ್ಚರವನ್ನೂ ನೋಡಿದ.

ಕಟುಕರಲ್ಲಿ ಒಬ್ಬನ ಕತ್ತಿ ಕೈತಪ್ಪಿ ದೂರಹಾರಿ ಬಿದ್ದಿತ್ತು. ಅದನ್ನು ಅವನು ಹುಲ್ಲಿನಲ್ಲಿ ಎಲ್ಲಿ ಬಿದ್ದಿದೆ ಎಂದು ಬೆಪ್ಪನಂತೆ ಹುಡುಕುತ್ತಿದ್ದ. ಇನ್ನೊಬ್ಬ ದುರುಗನ ಗುಂಗುರು ಕೂದಲನ್ನು ಹಿಡಿದು ಜಗ್ಗುತ್ತ, ಅವನ ಒದೆಯುವ ಕಾಲುಗಳನ್ನು ಕತ್ತಿಯಿಂದ ನುರಿಯಲೆಂದು ಕತ್ತಿಯನ್ನು ಬರಿ ಗಾಳಿಯಲ್ಲಿ ಬೀಸುತ್ತ ಏದುಸಿರು ಬಿಡುತ್ತಿದ್ದ.

ರಾತ್ರೆಯೆಲ್ಲ ಕುಡಿದುಬಂದ ಈ ಒಡ್ಡ ಕಟುಕರು ದುರುಗನನ್ನು ಸಾಯಿಸಲಾರರು ಎಂದು ಗಣಪಯ್ಯನಿಗೆ ಖಾತ್ರಿಯಾಯಿತು. ತನ್ನ ಮಗಳ ಮಿಂಡನ ಶೌರ್ಯ ಕಂಡು ಮೈಮೇಲೆಲ್ಲ ಚೇಳುಗಳು ಹರಿದಂತೆ ಅನ್ನಿಸಿತು.

ದುರುಗ ಗೊಗ್ಗನನ್ನೂ ಇನ್ನೊಂದು ಕ್ಷಣದಲ್ಲಿ ಬೀಳಿಸಿದ. ಅವನ ಕೈಯಲ್ಲಿದ್ದ ಕತ್ತಿಯನ್ನು ಕಿತ್ತು ಬಿಸಾಕಿದ. ಆಮೇಲೆ ಮದಿಸಿದ ಕೊಬ್ಬಿನಲ್ಲಿ ಕತ್ತನ್ನೆತ್ತಿ ತನ್ನನ್ನು ನೋಡಿ, ಈ ತನ್ನ ಮಗಳ ಮಿಂಡ ಅಣುಕಿಸುತ್ತಿದ್ದಾನೆ ಎನ್ನಿಸಿ ಗಣಪಯ್ಯನ ತಲೆ ರೋಷದಲ್ಲಿ ಜುಮ್ಮೆಂದಿತು. ಬಾಯಲ್ಲಿದ್ದ ಹೊಗೆಸೊಪ್ಪನ್ನು ಉಗಿದ. ಒಳಗೆ ಹುಟ್ಟಿಕೊಂಡ ತಾಪದಲ್ಲಿ ಕೈ ನಡುಗುತ್ತಿತ್ತು. ಬಾಯಿ ಒಣಗಿತ್ತು. ಕೋವಿಯನ್ನು ನಡುಗುತ್ತಿದ್ದ ಕೈಗಳಿಂದಲೇ ಎತ್ತಿ, ದುರುಗನ ಹತ್ತಿರ ಓಡಿದ.

ಸರಸ್ವತಿಯ ಅಪ್ಪನನ್ನು ನೋಡಿದ್ದೇ ದುರುಗ ಕ್ಷಣ ಕಂಗಾಲಾದ. ಕೋವಿಯನ್ನು ಕಸಿದುಕೊಳ್ಳಲೆಂಬಂತೆಯೋ, ದಯೆ ಕೋರಲೆಂಬಂತೆಯೋ ಕೈಗಳನ್ನು ಎತ್ತಿ ತನ್ನ ಕಡೆಯೇ ಹೊಡೆದ. ಎಷ್ಟು ಹತ್ತಿರದಿಂದ ಎಂದರೆ, ಕೋವಿಯ ನಳಿಗೆಯ ಮೇಲೆ ದುರುಗನ ಕೈ ಇತ್ತ.

ದುರುಗನ ಎದೆಗೆ ಗುಂಡು ಬಿದ್ದು ರಕ್ತ ಚಿಮ್ಮಿತು. ದುರುಗ ಅಲ್ಲೇ ಕುಸಿದು ಬಿದ್ದ.

ಕೆಳಗೆ ಬಿದ್ದವನನ್ನು ಇಬ್ಬರು ಕಟುಕರೂ ಗಣಪಯ್ಯನಿಗೆ ಸಮಾಧಾನವಾಗಲೆಂದು ಒಬ್ಬ ಕತ್ತಿಯಿಂದ ನುರಿದು, ಇನ್ನೊಬ್ಬ ಕಾಲಿನಿಂದ ಒದ್ದು ಚಿತ್ರಹಿಂಸೆ ಮಾಡಿ ಸಾಯಿಸಿದರು. ದುರುಗ ಹೊರಳಾಡಿ ಚೀರಾಡಿ ಪ್ರಾಣ ಬಿಟ್ಟ.

ತಾನೇ ದುರುಗನನ್ನು ಗುಂಡು ಹಾರಿಸಿ ಕೊಲ್ಲಬೇಕಾಗಿ ಬಂದದ್ದರಿಂದ ಕತ್ತಿಯನ್ನು ಕಳೆದುಕೊಂಡು ಪೆಚ್ಚಾಗಿದ್ದ ಒಕ್ಕಣ್ಣಿನ ಕೊಗ್ಗನ ಮುಖಕ್ಕೆ ‘ಬಿಟ್ಟಿ ಅನ್ನ ತಿಂದು ಕೊಬ್ಬಿದ ಸೂಳೇಮಗನೆ’ ಎಂದು ಗಣಪಯ್ಯ ಕ್ಯಾಕರಿಸಿ ಉಗಿದ. ‘ಸೂಳೇಮಕ್ಳ, ಇಲ್ಲೆ ಕಾದುಕೊಂಡಿರಿ’ ಎಂದು ಕಟುಕರಿಗೆ ಅಪ್ಪಣೆ ಮಾಡಿ, ಮೊಟ್ಟಿನ ಹಿಂದೆ ಹೋಗಿ ಕೋವಿ ಹಿಡಿದು ನಿಂತ. ಇನ್ನಷ್ಟು ಹೊಗೆಸೊಪ್ಪು ತಿಕ್ಕಿ ಬಾಯಲ್ಲಿಟ್ಟುಕೊಂಡು ಕಾದ. ಅವನ ತಾಪ ಶಮನವಾಗಿರಲಿಲ್ಲ.

ಬೆಳಿಗ್ಗೆ ಎದ್ದು, ದೇವರಿಗೆ ದೀಪ ಹಚ್ಚಿ ಕೈಮುಗಿದು, ತವರಿನಲ್ಲಿ ಇದು ತನ್ನ ಕೊನೆಯ ದಿನವೆಂದು, ಬೇರೇನೊ ನೆವಹೇಳಿ, ತಲೆಗೆ ತಾಯಿಯಿಂದ ಎಣ್ಣೆ ಹಚ್ಚಿಸಿಕೊಂಡು ಸ್ನಾನ ಮಾಡಿ, ತಾಯಿ ಕೊಟ್ಟ ಹೂ ಮುಡಿದು, ಮನಸ್ಸಿನಲ್ಲೇ ತಾಯಿಯ ಕಾಲಿಗೆರಗಿ, ಕೊಲ್ಲೂರಿನ ಮೂಕಾಂಬಿಕೆಗೆ ಹರಕೆ ಹೇಳಿಕೊಂಡು, ಉಟ್ಟಸೀರೆಯಲ್ಲೇ ಬಂದ ಸರಸ್ವತಿ ಕಂಡದ್ದು ರಕ್ತದಿಂದ ತೊಯ್ದು ಸತ್ತು ಬಿದ್ದಿದ್ದ ತನ್ನ ಪ್ರಿಯಕರನ ಹೆಣವನ್ನು. ಹೆಣದ ಇಬ್ಬದಿಗೆ ಇಬ್ಬರು ಕಟುಕರನ್ನು. ಮತ್ತು ಬಾಯಲ್ಲಿ ಹೊಗೆಸೊಪ್ಪು ತುಂಬಿಕೊಂಡು, ಕೆಂಪಾದ ಕಣ್ಣುಗಳನ್ನು ಕೆಕ್ಕರಿಸಿ ವಿಕಾರವಾಗಿ ನೋಡುತ್ತಿದ್ದ ಅಪ್ಪನನ್ನು.

೧೬

ಪ್ರಜ್ಞೆ ತಪ್ಪಿ ಬಿದ್ದವಳನ್ನು ಕೊಗ್ಗ ಗೊಗ್ಗರಿಂದ ಎತ್ತಿಸಿಕೊಂಡು ಗಣಪಯ್ಯ ಕೈಬೀಸಿ ನಡೆದು ಮನೆಗೆ ತಂದ. ಮಗಳ ಕೂದಲು ಹಿಡಿದು ದರದರನೆ ಎಳೆದು, ಒಳಮನೆಯಲ್ಲಿದ್ದ ತಾಯಿಯ ಎದುರು ಬಿಸಾಕಿದ.

ಅವತ್ತು ತಾಯಿಯ ಯಮುನಮ್ಮನ ಉಪವಾಸದ ದಿನ. ಅವಳು ಗಂಡ ಮಾಡಿದ ಪಾಪಗಳಿಂದ ಇಡೀ ಮನೆಯೇ ನಾಶವಾಗದೆ ಇರಲೆಂದು ಪ್ರತಿ ವಾರವೂ ಒಂದು ದಿನ ಊಟಮಾಡುತ್ತಿರಲಿಲ್ಲ. ಅವತ್ತು ಅವಳ ಉಪವಾಸ ವ್ರತದ ದಿನ ಮಾತ್ರವಲ್ಲ, ತ್ರಯೋದಶಿ ಬೇರೆ – ಆ ದಿನದ ವಿಶೇಷ ಪೂಜೆಯೂ ಆಗಬೇಕು. ಮಗಳು ಆತುರಪಡುತ್ತ ಏನೋ ಸ್ಕೂಲಿನ ಕೆಲಸವಿದೆಯೆಂದು ಹೋಗಿದ್ದಾಳೆ. ಅವಳ ಇಷ್ಟಾರ್ಥಗಳು ಸಿದ್ಧಿಯಾಗುವಂತೆ ಮೂಕಾಂಬಿಕೆಯಲ್ಲಿ ಕೇಳಿಕೊಳ್ಳಬೇಕು.

ತಲೆಗೆ ಸ್ನಾನ ಮಾಡಿ, ಜ್ವಲಿಸುವ ವಜ್ರದ ಮೂಗುತಿ ದೇವಿಯಲ್ಲಿ ಮನಸ್ಸನ್ನು ಇರಿಸಿ, ಕಣ್ಣು ಮುಚ್ಚಿ ಧ್ಯಾನದಲ್ಲಿ ಕೂತಿದ್ದಳು. ಒಂದು ಲೋಟ ನೀರುಬಿಟ್ಟು ಇನ್ನೇನೂ ಅವಳು ತೆಗೆದುಕೊಂಡಿರಲಿಲ್ಲ.

ಯಮುನ ನೋಡಲು ಸಪುರಾದ ದೇಹದ, ಲಕ್ಷಣವಾದ ಹೆಂಗಸು. ಅವಳ ಕಪ್ಪಾದ ನುಣುಪಾದ ಸೊಂಟದವರೆಗಿನ ಕೂದಲಿನ ಸಮೃದ್ಧಿಯಿಂದ, ದೊಡ್ಡ ಕುಂಕುಮವಿಟ್ಟ ಅವಳ ಮುಖದ ಸಾತ್ವಿಕ ಕಳೆಯಿಂದ ನೆಂಟರಿಷ್ಟರ ನಡುವೆ ಅವಳ ಮುಖದರ್ಶನ ಮಾತ್ರದಿಂದಲೇ ಮಂಗಳವಾಗುವುದೆಂಬ ನಂಬಿಕೆಯಿತ್ತು. ಅವಳ ತವರಿನ ಸಂಬಂಧಿಗಳು ಏನಾದರೂ ಹೆಚ್ಚಿನ ಕೆಲಸ ಹಚ್ಚಿಕೊಂಡಾಗ ನೆವ ತೆಗೆದು ಅವಳ ಮುಖ ನೋಡಿ ಹೋಗುವುದುಂಟು. ಮಗಳು ಸರಸ್ವತಿಯ ಜೊತೆ ಈ ತಾಯಿ ಯಮುನ ನಿಂತರೆ ಅಕ್ಕ ತಂಗಿಯರಂತೆ ಅವರು ಕಾಣುವರು.

ಗಣಪಯ್ಯ ಮಗಳನ್ನು ಅವಳ ಎದುರು ಎಸೆದಿದ್ದೇ ಯಮುನ ಏನೂ ತಿಳಿಯದಾದಳು. ಆಗಷ್ಟೇ ಎಚ್ಚರಾಗಿದ್ದ ಸರಸ್ವತಿ ಅಳುವುದಕ್ಕೂ ತಿಳಿಯದಂತೆ ಬೆಪ್ಪಾಗಿ ಬೆದರಿ ತಾಯಿಯ ಮುಖವನ್ನು ಯಾಚಿಸುವಂತೆ ನೋಡಿದಳು. ಗಣಪಯ್ಯ ಬಾಯಲ್ಲಿ ಹೊಗೆಸೊಪ್ಪಿನ ರಸವನ್ನು ತುಂಬಿಕೊಂಡೇ, ಅದು ಅಂಗಿಯ ಮೇಲೆ ಚೆಲ್ಲದಂತೆ ಗಲ್ಲವನ್ನು ಮೇಲೆತ್ತಿ, ಪಿಶಾಚಿಯಂತೆ ಕಿರುಚುತ್ತ ಕೋವಿಯ ತುದಿಯಿಂದ ಹೆಂಡತಿಯನ್ನು ಹೊಡೆಯಲು ಹೋದ.

ಗಣಪಯ್ಯನ ಆವೇಶ ಇದ್ದಕ್ಕಿದ್ದಂತೆ ಇಳಿಯಲೇ ಬೇಕಾಯಿತು. ಅವನ ಹೆಂಡತಿ ಎಂದೂ ಕೈಯೆತ್ತದಿದ್ದವಳು ಈಗ ಎತ್ತರಬಹುದಾದಂತೆ ತೋರಿತು. ಸೆರಗು ಕಟ್ಟಿ ಸೆಟೆದು ನಿಂತಳು.

‘ನಿನ್ನ ಮಗಳು ಹಾದರಗಿತ್ತಿ ಮುಂಡೆ ಕಣೇ. ನೀನು ಅವಳ ತಲೆಹಿಡಿದಿರಬೇಕು. ನನ್ನ ಹೊಡೆಯೋಕೆ ಬರ‍್ತೀಯೇನೇ’ ಎಂದು ಅವನು ಬಡಬಡಿಸುತ್ತಿದ್ದಂತೆಯೇ, ನಡುಮನೆಯಲ್ಲಿ ಧ್ಯಾನಕ್ಕೆ ಕೂತಿದ್ದ ಯಮುನ ಅಡುಗೆ ಮನೆಗೆ ಓಡಿದಳು. ಅಲ್ಲಿ ಕೈಗೆ ಸಿಕ್ಕ ಮೆಟ್ಟುಕತ್ತಿಯನ್ನೇ ಎತ್ತಿಕೊಂಡು ಬಂದಳು. ಸರಸ್ವತಿ ಎದ್ದುನಿಂತು ತಾಯನ್ನು ತಬ್ಬಿದ್ದಳು.

ಅವಳು ನಡೆದು ಬಂದ ಬಗೆ ಕಂಡು, ಎಂದೂ ಅವಳನ್ನು ಆ ಸ್ವರೂಪದಲ್ಲಿ ನೋಡದಿದ್ದ ಗಣಪಯ್ಯ, ಕೊಂಚ ಅಧೀರನಾದ. ದಡದಡನೆ ಹೊರಗೆ ನಡೆದ. ಮನೆಗೆ ಬೀಗ ಹಾಕಿದ. ಹಿತ್ತಲಿನ ಬಾಗಿಲಿಗೂ ಬೀಗ ಹಾಕಿದ. ಕಟುಕರನ್ನು ಕಾಯಲು ಬಿಟ್ಟು, ಸ್ವಲ್ಪ ಎಲ್ಲ ತಣ್ಣಗಾಗಲಿ ಎಂದು ತೋಟದ ಕಡೆ ನಡೆದ.

೧೭

ಶಿವಮೊಗ್ಗಕ್ಕೆ ಗುಟ್ಟಾಗಿ ಹೋಗಿ ಸರಸ್ವತಿಯ ಬಸಿರು ತೆಗೆಸಬೇಕೆಂದಿದ್ದ ಗಣಪಯ್ಯ ಎರಡೇ ಎರಡು ದಿನಗಳಲ್ಲಿ ಪೊಲೀಸರಿಗೆ ನಡುರಾತ್ರೆಯಲ್ಲಿ ಬಾಗಿಲು ತೆರೆಯಬೇಕಾಯಿತು. ಗೊಗ್ಗ ಕೊಗ್ಗರು ಸಿಕ್ಕಿಬಿದ್ದ ತಪ್ಪೊಪ್ಪಿಕೊಂಡು ನಡೆದದ್ದೆಲ್ಲ ಹೇಳಿದ್ದರು. ಅವರೂ ಕತ್ತಿಸಹಿತ ಕೈಕೋಳದಲ್ಲಿ ಪೊಲೀಸರ ಜೊತೆಗಿದ್ದರು. ಬಂದೂಕಿನ ಸಹಿತ ಗಣಪಯ್ಯನನ್ನು ವಿಚಾರಣೆಗೆ ಪೊಲೀಸರು ಕೈಕೋಳ ಹಾಕಿ ಠಾಣೆಗೆ ಒಯ್ದರು.

ತನ್ನಪ್ಪನ ಶ್ರಾದ್ಧದ ನೆವಹೇಳಿ, ಪೊಲೀಸರಿಗೆ ಬೇಕಾದಾಗಲೆಲ್ಲ ಠಾಣೆಗೆ ಹಾಜರಾಗುತ್ತೇನೆಂದು ಮುಚ್ಚಳಿಕೆ ಬರೆದು ಕೊಟ್ಟು, ಜಾಮೀನಿನ ಆಧಾರದ ಮೇಲೆ ಗಣಪಯ್ಯ ಕೆಲವು ದಿನಗಳ ಮಟ್ಟಿಗೆಂದು ಜೈಲಿಂದ ಹೊರಬಂದು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲ ಪ್ರಯತ್ನಗಳನ್ನೂ ಮಾಡತೊಡಗಿದ.

ಎಲ್ಲ ಜಮೀನುದಾರರ ಮನೆಗಳಿಗೆ ಹೋಗಿ ತನಗೂ ಈ ಕೊಲೆಗೂ ಏನೇನೂ ಸಂಬಂಧವಿಲ್ಲೆಂದು ಗೋಗೆರೆದ. ಅವನು ಸ್ವಭಾವತಃ ಕಟುಕನೆಂದು ಗೊತ್ತಿದ್ದವರೂ ತನ್ನ ಮಾತನ್ನು ನಂಬಿದವರಂತೆ ನೋಡುವುದಕ್ಕಾದರೂ ಕಾಣಬೇಕು – ಅಷ್ಟು ಅತ್ತ. ತಮ್ಮ ನಿಜ ಭಾವನೆ ಕಾಣಗೊಡದಂತೆ ಹೇಸುತ್ತ, ಎಲೆಗೆ ಸುಣ್ಣ ಹಚ್ಚುತ್ತ ಕೇಳಿಸಿಕೊಂಡವರು ಮುಖ ತಗ್ಗಿಸಿ ಹೂ ಹೂ ಎನ್ನುತ್ತ ಕೂತರು. ಯಾರಿಗೂ ಗಣಪಯ್ಯನಲ್ಲಿ ಕರುಣೆ ಹುಟ್ಟಲಿಲ್ಲ. ಆದರೂ ಗಣಪಯ್ಯನಿಗೆ ಗಲ್ಲಾಗದಂತೆ ರಕ್ಷಿಸಲು ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದರು – ಆದರೆ ಒಂದು ‘ಕಂಡೀಶನ್’ ಮೇಲೆ. ಮಂಜಯ್ಯ ಗಣಪಯ್ಯನ ಪರವಾಗಿ ಸಾಕ್ಷಿ ಹೇಳಬೇಕು.

ಗಣಪಯ್ಯನಿಗೆ ಈಗ ಎರಡು ಸಮಸ್ಯೆಗಳು ಎದುರಾದವು. ಮಂಜಯ್ಯನನ್ನು ಸಾಕ್ಷಿ ಹೇಳುವಂತೆ ಒಪ್ಪಿಸುವುದು ಒಂದಾದರೆ, ಸರಸ್ವತಿಯ ಬಸಿರು ತೆಗೆಸುವುದು ಇನ್ನೊಂದು. ತಾನೇ ಹೋಗಿ ಶಿವಮೊಗ್ಗದಲ್ಲಿ ತೆಗೆಸುವಂತಿಲ್ಲ. ಎಲ್ಲರಿಗೂ ಗೊತ್ತಾಗಿ ಕ್ರಿಮಿನಲ್ ಮೊಖದ್ದಮೆ ಬಿಗಡಾಯಿಸಿಕೊಂಡೀತು. ದುರುಗನ ಕೊಲೆಯಲ್ಲಿ ತನ್ನದೇನೂ ಪಾಲಿಲ್ಲವೆನ್ನಲು ಸರಸ್ವತಿ ಬಸಿರಾದ್ದು ಯಾರಿಗೂ ತಿಳಿಯಬಾರದು. ಕೋಪವನ್ನು ಮರ‍್ಯಾದೆಗೆ ಹೆದರಿ ನುಂಗಿಕೊಂಡು ಸುಮ್ಮನಾಗಿ ಬಿಟ್ಟಿದ್ದ ಹೆಂಡತಿಗೆ ಹೇಳಿದ:

‘ನಿನ್ನ ಅಪ್ಪನ ಮನೆಗೆ ಹೋಗಿ, ನಿನ್ನ ಕರಕೊಂಡು ಯಾರಿಗೂ ಗೊತ್ತಾಗದ ಹಾಗೆ ಬೆಂಗಳೂರಿಗೆ ಹೋಗಿ ಅವಳ ಬಸಿರು ತೆಗೆಸು. ಇಲ್ಲದೇ ಹೋದರೆ ನಿನ್ನ ಮಗಳಂತೆ ನೀನೂ ಮುಂಡೆಯಾಗಿ ಬಿಡ್ತೀಯ’

ಆದರೆ ತನ್ನ ಮೌನದಲ್ಲಿ ಚಾಮುಂಡಿಯಂತೆ ಗಟ್ಟಿಯಾಗಿ ಬಿಟ್ಟಿದ್ದ ಹೆಂಡತಿ ತನ್ನ ದನಿಯನ್ನು ಎತ್ತದೆ ಹೇಳಿದಳು:

‘ನಾನು ಮುಂಡೆಯಾದರೂ ಚಿಂತೆಯಿಲ್ಲ. ನನ್ನ ಮಗಳ ಬಾಣಂತನ ನಾನು ಮಾಡೇ ಮಾಡ್ತೀನಿ’

ಗಣಪಯ್ಯ ಹೊಡೆದ, ಬಡಿದ, ಚೀರಿದ, ಕೋವಿಯಲ್ಲಿ ಗುಂಡು ಹಾರಿಸಿ ಸಾಯಿಸಿ ಇನ್ನೊಂದು ಕೊಲೆಮಾಡಿ ಗಲ್ಲಿಗೇರುತ್ತೇನೆ ಎಂದ. (ಮಾತಿಗೆ ಅಂದ; ಆದರೆ ಕೋವಿ ಪೊಲೀಸರ ವಶದಲ್ಲಿತ್ತು.) ಹೆಂಡತಿ ಜಪ್ಪಯ್ಯ ಎನ್ನದೆ, ಸೆರಗು ಕಟ್ಟಿ ಅವನ ಜೊತೆ ಜಗಳಕ್ಕೆ ನಿಂತಳು. ಅವನು ಹೊಡೆದರೆ ತಿರುಗಿ ಹೊಡೆಯಲು ಕೈ ಎತ್ತಿದ್ದಳು. ಅವನು ಚೀರಿದರೆ ಅವಳು ಗರ್ಜಿಸಿದಳು. ಅವನು ಒಮ್ಮೆ ಮೈಮೇಲೆ ಬಂದಾಗ ಸರಸ್ವತಿ ಅಡುಗೆ ಮನೆಯಿಂದ ಮೆಣಸಿನ ಪುಡಿಯನ್ನು ತಂದು ಅವನ ಕಣ್ಣಿಗೆ ತೂರಿದಳು.

ಒಂದು ದಿನ, ಕೊಲೆಯಾಗಿ ಒಂದು ವಾರದಲ್ಲೇ, ಗಣಪಯ್ಯ ಮನೆಯಲ್ಲಿ ಇಲ್ಲದಾಗ ಮಗಳನ್ನು ಕರೆದುಕೊಂಡು ಗೊತ್ತಾಗದಂತೆ ತನ್ನ ತವರಿಗೆ ಹೋಗಿಬಿಟ್ಟಳು.

ಹೀಗೆ ಮನೆಯಲ್ಲಿ ಒಂಟಿಪಿಶಾಚಿಯಾಗಿ ಬಿಟ್ಟ ಗಣಪಯ್ಯ ಮಂಜಯ್ಯನನ್ನು ನೋಡಲು ದೇವನ ಹಳ್ಳಿಗೆ ಹೋದ; ಜೊತೆಯಲ್ಲಿ ಊರಿನ ದೊಡ್ಡೇಗೌಡರನ್ನೂ ಕರಕೊಂಡು ಹೋದ. ಅವನನ್ನು ನಂಬದ ಮಂಜಯ್ಯ ಮುಖಕ್ಕೇ ನಿಮ್ಮನ್ನು ನಾನು ನಂಬುವುದಿಲ್ಲ ಎಂದರು. ತನ್ನ ದರ್ಪದಲ್ಲೂ ಅರೋಗ್ಯದಲ್ಲೂ ಕ್ಷೀಣಿಸತೊಡಗಿದ್ದ ಮಂಜಯ್ಯನಿಗೆ ಈ ಕಟುಕನ ಸಹವಾಸ ಬೇಕಿರಲಿಲ್ಲ. ಗಣಪಯ್ಯ ದಿಢೀರನೆ ಮಂಜಯ್ಯನ ಕಾಲು ಹಿಡಿದು, ಬಿಕ್ಕಿ ಬಿಕ್ಕಿ ಅಳುತ್ತ, ಸಿಂಬಳವನ್ನು ಒರೆಸಿಕೊಳ್ಳುತ್ತ ಹೇಳಿದ:

‘ನನ್ನ ಅಪ್ಪನ ಮೇಲೆ ಆಣೆ ಮಾಡಿ ಹೇಳ್ತೇನೆ. ಈ ದೇಶದ ನಾಯಕರು ನೀವು. ನಮಗೆಲ್ಲರಿಗೂ ತಂದೆ ನೀವು. ಜಾತಿಯ ಒಳಗಿನ ಯಾವುದೋ ರಚ್ಚಿಗೆ ದಾವಣಗೆರೆ ಕಡೆಯವರು ಯಾರೋ, ದುರುಗಪ್ಪನ ಜಾತಿಯವರೇ, ಈ ಕೊಲೆ ಮಾಡಿಸಿದ್ದು. ನನ್ನ ಕಡೆ ಆಳುಗಳಿಗೆ ಅವರೇ ದುಡ್ಡುಕೊಟ್ಟು ಮಾಡಿಸಿದ್ದು. ಊರಲ್ಲಿ ಜಾತಿಯವರ ಹೆಣ್ಣನ್ನ ನಂಬಿಸಿ ಅವರು ಬಸಿರು ಮಾಡಿ ಕೈಬಿಟ್ಟಿದ್ದನಂತೆ. ಸತ್ಯ ಗೊತ್ತಾಗಿಯೇ ಆಗತ್ತೆ. ನನ್ನನ್ನ ಮಾತ್ರ ಪಾರುಮಾಡಿಸಿ, ನಾನು ನಿಷ್ಪಾಪಿ.’

ದೊಡ್ಡೇಗೌಡರು ಹೇಳಿದರು:

‘ಸಾಹುಕಾರ‍್ರೆ ನಿಮಗೆ ನಾನು ಹೇಳಬೇಕೊ? ತಪ್ಪಿತಸ್ಥ ಅಂತ ಪ್ರೂವ್ ಆಗೋ ತನಕ ಕಾನೂನಿನ ಕಣ್ಣಲ್ಲಿ ಯಾರಾದರೂ ನಿರಪರಾಧಿಯೇ ಅಂತಾರೆ – ಅಲ್ಲವ ಹೇಳಿ, ನಮ್ಮೆಲ್ಲರಿಗಿಂತ ಹೆಚ್ಚು ಕಾನೂನು ತಿಳಿದಿರೋರು ಈ ಪ್ರಾಂತ್ಯದಲ್ಲಿ ಯಾರು ಅಂದರೆ ನೀವು, ಹೌದೊ ಅಲ್ಲೋ? ನೀವೇ ಹೇಳಿ. ಕುಲಸ್ಥರು ಬಿಟ್ಟರೆ ಈ ಗಣಪಯ್ಯನಿಗೆ ಕಷ್ಟದಲ್ಲಿ ಯಾರಿದಾರೆ? ಅವರು ಹೇಳೋದು ನಿಜವಾದರೆ ನೋಡಿ, ನೀವೇ ಹೇಳಿ – ಏನೋ ಹೇಳಕ್ಕೆ ಹೊರಟಿದ್ದೆ. ಹೋಗಲಿ ಬಿಡಿ – ಈಚೆಗೆ ಸರ್ಕಾರದ ಕಾನೂನು ಬಳಸಿಕೊಂಡು ಮೇಲಕ್ಕೆ ಬಂದ ಎಸ್ಸಿಗಳನ್ನ ನಾವು ಯಾರೂ ಮಾತಾಡಿಸಕ್ಕೇ ಆಗತಾ ಇಲ್ಲ. ಅದೇನು ಗರ್ವ, ಅದೇನು ಧಿಮಾಕು – ಈ ಕೊಲೆಯಾದ ಮನುಷ್ಯನನ್ನೇ ತಗೊಳ್ಳಿ – ಅವನನ್ನ ಕೊಲೆ ಮಾಡಿದ್ದು ಖಂಡಿತ ತಪ್ಪು ಎನ್ನಿ – ಅಷ್ಟೇನೂ ಅವ ಲಾಯಕ್ಕಾದವನಲ್ಲ ಅಂತಲೂ ನನ್ನ ಕಿವಿಮೇಲೆ ಬಿದ್ದಿತ್ತು ಎನ್ನಿ. ಯಾಕೆ ಹೇಳಕ್ಕೆ ಹೊರಟೆ ಅಂದರೆ, ತಿಳಿದೋರು ನೀವು, ನೀವೇ ಹೇಳಿ, ಹೆಣ್ಣು ಮಕ್ಕಳನ್ನ ಮರ್ಯಾದಸ್ಥರು ಹೇಗೆ ಸ್ಕೂಲಿಗೆ ಕಳಿಸೋದು ಅಂಥ ಭಂಢಗೆಟ್ಟವರು ಮೇಷ್ಟ್ರೇ ಆಗಿ ಬರೋಕೆ ಶುರುವಾಗಿ ಬಿಟ್ಟರೆ? ಏನೋ ಹೇಳತಾರಲ್ಲ – ಬೇಲೀನೇ ಎದ್ದು ಹೊಲ ಮೇದರೆ ಅಂತ”

ನಿರುತ್ಸಾಹಿಗಳಾಗಿ ಬಿಟ್ಟಿದ್ದ ಮಂಜಯ್ಯನಿಗೆ ಗೌಡರ ಹೊಗಳಿಕೆ ಕೇಳಿ ಕೊಂಚ ರಕ್ತ ಚಲಿಸಿದಂತೆ ಆಯಿತು. ಉಯ್ಯಾಲೆ ಮೇಲೆ ಕೂತಿದ್ದವರು ಕಾಫಿ ಮಾಡಿತರುವಂತೆ ಭಟ್ಟರಿಗೆ ಹೇಳಿ,

‘ನನ್ನಿಂದ ಏನು ಸಾಧ್ಯವಪ್ಪ; ಯಾಕೊ ಮೈಯಲ್ಲಿ ಈಚೆಗೆ ಸರಿಯೇ ಇಲ್ಲ. ಓದನ್ನ ಮುಗಿಸಿ ಬಂದುಬಿಡು ಅಂತ ಮೊನ್ನೆ ಶಿವಮೊಗ್ಗೆಗೆ ಹೋಗಿ ಇಂಗ್ಲೆಂಡರಲ್ಲಿರೋ ಮಗನಿಗೆ ಫೋನ್ ಮಾಡಿದೆ’ ಎಂದು ಮಂಜಾಗುತ್ತಿದ್ದ ಕಣ್ಣಿನಿಂದ ಗೌಡರನ್ನು ದಿಟ್ಟಿಸಿದರು. ಸರಿಯಾಗಿ ಏನನ್ನಾದರೂ ನೋಡಲು ಕೂಡ ಕಷ್ಟಪಡಬೇಕಾಗಿ ಬಂದಿದೆ ಈಗ.

‘ಅಂಥದೇನೂ ಮಾಡಬೇಕಾಗಿಲ್ಲ. ಕೊಲೆಯಾದ ದಿನ ಗಣಪಯ್ಯ ಊರಲ್ಲೇ ಇರಲಿಲ್ಲ ಅಂತಾರೆ. ಅದು ಪ್ರೂವ್ ಆಗಬೇಕಲ್ಲ ಕೋರ್ಟಲ್ಲಿ? ನೀವು ಹೇಳಿ ಬಿಟ್ಟರೆ ಆಯಿತು’

‘ಅಂದರೆ?’

‘ನೀವೇ ನಮ್ಮ ತೋಟಗಾರರ ಸಂಘದ ಅಧ್ಯಕ್ಷರಲ್ಲವೆ? ಬೆಂಗಳೂರಲ್ಲಿ ಪ್ರತಿ ತಿಂಗಳು ನಮ್ಮ ಬೋರ್ಡಿನ ಸಭೆ ನಡೆಯುವುದಲ್ಲವೆ? ಡಿಸೆಂಬರ್ ತಿಂಗಳಿನ ಹದಿನಾರನೇ ತಾರೀಖು ಹೇಗೂ ನಮ್ಮ ಸಭೆ ನಡೀತು. ಅದಕ್ಕೊಂದು ವಾರದ ಮುಂಚೆ, ಒಂಬತ್ತನೇ ತಾರೀಖು, ಒಂದು ಸಲಹಾ ಸಮಿತಿಯ ಸಭೆ ನಡೀತು, ಅದರಲ್ಲಿ ಗಣಪಯ್ಯ ವಿಶೇಷ ಆಹ್ವಾನಿತರಾಗಿ ಹಾಜರಾಗಿದ್ದರು ಎಂದರೆ ಆಯಿತು. ಅಗತ್ಯವಾದ ಮಿನಿಟುಗಳನ್ನು ಬರೆದು ಪುಸ್ತಕದಲ್ಲಿ ಈಗಲೇ ಸೇರಿಸಿ ಬಿಟ್ಟಿರೋಣ. ಇದನ್ನೆಲ್ಲ ನಿಮಗೆ ನಾವು ಹೇಳಿಕೊಡಬೇಕ ಸಾಹುಕಾರರೆ? ನೀವೇ ಹೇಳಿ.’ ಎಂದು ದೊಡ್ಡೇಗೌಡರು ಬಿಸಿಬಿಸಿಯಾದ ಕಾಫಿ ಕುಡಿಯುತ್ತ ನಕ್ಕರು.

ಇಂಥ ಎಷ್ಟೋ ಸಾಕ್ಷಿಗಳನ್ನು ಆಸ್ತಿಯ ವ್ಯಾಜ್ಯಗಳಲ್ಲಿ ಹೇಳಿದ ಮಂಜಯ್ಯನವರು ಹಿಂದೆಮುಂದೆ ನೋಡದೆ ಆಗಲಿ ಎಂದು ಬಿಟ್ಟರು. ಗಣಪಯ್ಯನ ಪ್ರಸನ್ನಗೊಂಡ ಹಾಳುಮುಖದ ಮೇಲಿನ ಕಪ್ಪು ಮಚ್ಚೆ ಮಂಜಾಗುತ್ತಿದ್ದ ಕಣ್ಣಿಗೂ ಕಂಡಂತಾಗಿ ಸಾಯಲಿ ಇವ ಎಂದುಕೊಂಡರು. ಗೌಡರು ಬರದಿದ್ದರೆ ಅವನನ್ನು ಮಾತಾಡದೆ ಕಳಿಸಿಬಿಡುತ್ತಿದ್ದರು.

೧೮

ಮಂಜಯ್ಯ ಕಟಕಟೆಯಲ್ಲಿ ನಿಂತು ದೇವರ ಮೇಲೆ ಆಣೆಹಾಕಿ ಸತ್ಯಹೇಳುತ್ತೇನೆ ಅಂದರು. ಬಳಲಿದಂತೆ ಕಂಡರೂ ಮಂಜಯ್ಯನ ಹಾವಭಾವಗಳಲ್ಲಿ ಅವರ ಘನತೆ ಮಾಯವಾಗಿರಲಿಲ್ಲ; ಅವರ ವೇಷಭೂಷಣಗಳಲ್ಲೂ ಎಂದಿನ ಶಿಸ್ತು ಕಾಣುತ್ತಿತ್ತು. ಅವರ ಬಿಳಿ ಖಾದಿ ಟೋಪಿಯ ಗೆರೆ ಕೊಂಚ ಓರೆಯಾಗಿ ಅವರ ಹಣೆಯ ಮೇಲಿರಬೇಕ. ಅವರ ಸಿಲ್ಕ್ ಜುಬ್ಬದ ತೋಳುಗಳು ಉದ್ದವಾಗಿದ್ದು ಮಡಚಿರಬೇಕು. ಖಾದಿ ಪಂಚೆಯ ನೆರಿಗೆಗಳು ಸುಕ್ಕಿರಬಾರದು; ಈಗ ಉಟ್ಟಿರುವಂತಿರಬೇಕು. ಯೋಚಿಸಿ ನಿಧಾನವಾಗಿ ಮಾತಾಡಿದಂತಿರಬೇಕು; ಉಚ್ಚಾರಣೆ ಶುದ್ಧವಾಗಿರಬೇಕು. ಮಂಜಯ್ಯನ ಸಾಕ್ಷಿ ಕೇಳಲು ಅವರಿಗೆ ಆಗುವವರು, ಆಗದವರು ನೂರಾರು ಜನ ಸೇರಿದ್ದರು. ಗೇಣಿದಾರರ ಸಂಘದ ಎಲ್ಲ ನೇತಾರರೂ ಅಲ್ಲಿದ್ದರು – ಮಂಜಯ್ಯ ಈ ಮಟ್ಟಕ್ಕೆ ಇಳಿದಾರೆಂದು ಅವರು ತಿಳಿದಿರಲಿಲ್ಲ; ಅವರಿಗೆ ನಿರಾಸೆಯೇ ಆಗಿತ್ತು.

ಲಾಯರು ಮಂಜಯ್ಯನಿಗೆ ಪರಿಚಿತರೇ. ಸರ್ಕಾರದ ವಕೀಲರಾಗುವುದಕ್ಕಿಂತ ಮುಂಚೆ, ಈ ಚನ್ನಗಿರಿಯ ಪರಮೇಶ್ವರಪ್ಪ ಜಿಲ್ಲೆಯ ಪ್ರಸಿದ್ಧ ಚರ್ಚಾಪಟು; ಸೋಷಲಿಸ್ಟ್ ಪಕ್ಷದ ಯುವನೇತಾರ; ಗೇಣೀದಾರ ಸಂಘಕ್ಕೆ ರೂಪ ಕೊಟ್ಟವರಲ್ಲಿ ಮುಖ್ಯವ್ಯಕ್ತಿ; ಲಕ್ನೋದಲ್ಲಿ ಓದಿಬಂದರು, ಎಮ್. ಎನ್. ರಾಯನ್ನು ಅಮೂಲಾಗ್ರ ಓದಿದವರು, ಶ್ರೀಮಂತ ಕುಟುಂಬಕ್ಕೆ ಸೇರಿದವರು, ಬಡವರಪರ ವಾದಿಸುವವರು, ಜಾತಿಯ ಹೊರಗೆ ಮದುವೆಯಾದವರು. ಇತ್ಯಾದಿ, ಇತ್ಯಾದಿ, ಕಾರಣಗಳಿಂದ ಬಹಳ ಯುವಕರು ಪರಮೇಶ್ವರಪ್ಪನವರ ಮಾತುಗಳನ್ನು ಕೇಳಲು ಬಂದದ್ದೆಂದೂ ಊಹಿಸಬಹುದಿತ್ತು. ನೀಟಾದ ಹೊಸ ಕಪ್ಪು ಕೋಟು ಧರಿಸಿ, ಉದ್ದವಾದ ತಲೆಗೂದಲನ್ನು ಹಿಂದಕ್ಕೆ ಬಾಚಿದ ಅಡ್ವೊಕೇಟ್ ಪರಮೇಶ್ವರಪ್ಪ ತಮ್ಮ ಪ್ರಶ್ನೆಗಳನ್ನು ಸಾವಧಾನವಾಗಿ ಲೋಕಾಭಿರಾಮವಾಗಿ ಶುರುಮಾಡಿದರು:

‘ನೀವೇನೂ ಗೊಡ್ಡು ನಂಬಿಕೆಯವರಲ್ಲ ಎಂದು ಪ್ರಸಿದ್ಧರಾಗಿದ್ದೀರಿ. ಗಾಂಧೀಜಿಯ ನಾಯಕತ್ವದಲ್ಲಿ ಜೈಲಿಗೆ ಹೋದ ಈ ಜಿಲ್ಲೆಯ ನಾಯಕರಲ್ಲಿ ನೀವು ಅಗ್ರರು’.

‘ನನ್ನ ಕೈಲಾದ ಸೇವೆ ಮಾಡಿದ್ದೇನೆ. ನನಗಿಂತ ಹೆಚ್ಚು ತ್ಯಾಗ ಮಾಡಿದವರೂ ಇದ್ದಾರೆ.’

‘ಮಡಿ – ಮೈಲಿಗೆಯನ್ನು ನೀವು ನಂಬುವವರಲ್ಲ. ಅಸ್ಪೃಶ್ಯತೆಗೆ ಮೊದಲಿನಿಂದಲೂ ನೀವು ವಿರೋಧಿ’

‘ನಿಜ – ಅಂಥ ಆಚರಣೆ ಅಮಾನವೀಯವಾದ್ದು’

‘ವಿಧವಾ ವಿವಾಹಕ್ಕೆ ನಿಮ್ಮ ಒಪ್ಪಿಗೆ ಇದೆ.’

‘ಇದೆ’

‘ಅಂತರ್ಜಾತೀಯ ವಿವಾಹಕ್ಕೆ?’

‘ಅದಕ್ಕೂ ಇದೆ. ಆದರೆ ಕಾಮುಕತೆ ಮಾತ್ರ ವಿವಾಹಕ್ಕೆ ಕಾರಣವಾಗಬಾರದು’

‘ಉದಾಹರಣೆಗೆ ಒಬ್ಬ ಬ್ರಾಹ್ಮಣ ಕನ್ಯೆ ಬಾಲವಿಧವೆಯಾಗಿದ್ದು ಅಂತ್ಯಜನನ್ನ ಪ್ರೀತಿಸಿದರೆ?’

‘ಪ್ರೀತಿ ನಿಜವಾಗಿದ್ದರೆ ತಪ್ಪಿಲ್ಲ. ಮಹಾತ್ಮರು ಅಂಥ ಮದುವೆಗಳನ್ನು ಸ್ವಾಗತಿಸಿದ್ದರು’

ಲಾಯರು ತಮ್ಮ ಪ್ರಶ್ನೆಗಳ ರೂಪವನ್ನು ಬದಲಾಯಿಸಿದರು.

‘ನೀವು ಗೊಡ್ಡು ವೈದಿಕರಲ್ಲವೆಂದಾಯಿತು. ಗೊಡ್ಡು ನಂಬಿಕೆಯವರಲ್ಲ ಎಂಬುದೂ ಸರ್ವ ವಿದಿತವಾಗಿದೆ. ಅದರೆ ಮನೆಯಲ್ಲಿ ನಿತ್ಯ ಭೂವರಾಹಪೂಜೆ ನಡೆಯುತ್ತ ಬಂದಿದೆ. ನಾನೂರು ವರ್ಷಗಳಿಂದ ಅಂತ ಅದರ ಐತಿಹ್ಯ. ಭೂವರಾಹ ಪ್ರಸಾದವಾದ ಎರಡು ತಪ್ಪಲೆ ಅನ್ನದ ನಿತ್ಯದ ನೈವೇದ್ಯ ನಿಮ್ಮ ಕಾಲದಲ್ಲಿ ಹೇಗೆ ವಿನಿಯೋಗವಾಗುತ್ತಿದೆ ಈ ಘನ ಕೋರ್ಟಿಗೆ ತಿಳಿಸಬೇಕು’.

ಇದೇನು ಈ ಲಾಯರ್‌ ನಮ್ಮ ಕಡೆಯವನಂತೆಯೇ ವಾದಿಸುತ್ತಾನಲ್ಲ ಎಂದು ಗಣಪಯ್ಯ ಹಿರಿಹಿರಿ ಹಿಗ್ಗುತ್ತ ಕೇಳಿಸಿಕೊಂಡ.

ತಾವು ನಡೆಸುವ ಶಾಲೆಯ ಬಡಮಕ್ಕಳಿಗಾಗಿ ನಿತ್ಯ ಈ ಅನ್ನವನ್ನು ಊಟಕ್ಕೆ ಬಳಸುವುದನ್ನು ವಿನಯದಲ್ಲಿ ಮಂಜಯ್ಯ ಕೋರ್ಟಿಗೆ ನಿವೇದಿಸಿದರು.

‘ನೀವು ಸಾಧಾರಣಾವಾದಿಯಾದ ಗೋಖಲೆ ಪಂಥದವರು ಮಾತ್ರವಲ್ಲದೆ ನಮ್ಮ ಪರಂಪರೆಯ ಅತ್ಯುತ್ತಮ ಆಚರಣೆಗಳಲ್ಲಿ ಶ್ರದ್ಧಾವಂತರೂ ಎಂದಾಯಿತು. ನಿಮ್ಮ ತಂದೆ ತಾಯಿಯ ಶ್ರಾದ್ಧಗಳನ್ನು ತಪ್ಪದೇ ಮಾಡುತ್ತ ಬಂದಿದ್ದೀರಿಯಲ್ಲವೆ?’

‘ಬಂದಿದೀನಿ?’

‘ನಿಮ್ಮ ಪೂರ್ವಿಕರು ಕಟ್ಟಿದ ದೇವನಹಳ್ಳಿಯ ಸ್ವಗೃಹದಲ್ಲೇ ಈ ಶ್ರಾದ್ಧಗಳನ್ನು ನೀವು ಮಾಡುವುದು.’

‘ಹೌದು’

‘ಕಾರ್ಯನಿಮಿತ್ತ ಎಲ್ಲಿದ್ದರೂ ಮನೆಗೆಬಂದೇ ನೀವು ಶ್ರಾದ್ಧ ಮಾಡುವುದು.’

‘ಹೌದು’

‘ಬ್ರಾಹ್ಮಣರಿಗೆ ಮಾತ್ರವಲ್ಲದೆ ಊರಿನ ಹರಿಜನ ಕುಟುಂಬಗಳಿಗೂ ಅವತ್ತು ಅನ್ನದಾನವಾಗಬೇಕು.’

‘ಹೌದು’

‘ಹೋದ ವರ್ಷ ಡಿಸೆಂಬರಿನಲ್ಲಿ ನಿಮ್ಮ ತಂದೆಯ ಶ್ರಾದ್ಧವಾದ್ದು. ಯಾವ ತಾರೀಖೊ?’

‘ತಾರೀಖು ಮರೆತಿದೆ’

ಮಂಜಯ್ಯನಿಗೆ ನಿಜವಾಗಿಯೂ ನೆನಪಾಗಲಿಲ್ಲ. ಈಚೆಗೆ ತುಂಬ ಮರೆವು ಅವರಿಗೆ.

‘ಸಹಜವೇ. ಇದೇ ಮೇ ತಿಂಗಳು. ಐದು ತಿಂಗಳಾಯಿತು. ನೆನಪಾಗಲಾರದು. ಅವತ್ತು ತ್ರಯೋದಶಿ ಎಂಬುದಂತೂ ನಿಮಗೆ ನೆನಪಿದೆ. ನಾವು ವಾರ ನಕ್ಷತ್ರ ನೋಡಿ ಪಿತೃಕಾರ್ಯ ಮಾಡುವುದು ತಾನೆ? ಪ್ರತಿವರ್ಷ ತಾರೀಖು ಬೇರೆಯಾಗುತ್ತೆ.’

‘ಹೌದು ತ್ರಯೋದಶಿ ದಿನ ಚಳಿಗಾಲದಲ್ಲಿ ತಂದೆಯ ಶ್ರಾದ್ಧ.’

ಲಾಯರು ಕನ್ನಡಕವೇರಿಸಿ ತಮ್ಮ ಚೀಲದಿಂದ ಒಂದು ಪಂಚಾಂಗ ತೆಗೆದರು.

‘ನೋಡಿ, ಮಂಜಯ್ಯನವರೇ ಈ ತ್ರಯೋದಶಿ, ನಿಮ್ಮ ತಂದೆಯವರು ಪ್ರತಿವರ್ಷ ಬರುವ ದಿನ, ಕಳೆದ ವರ್ಷದಲ್ಲಿ ಡಿಸೆಂಬರಿನ ಒಂಬತ್ತನೇ ತಾರೀಖು ಎಂದು ನೀವು ಬಳಸುವ ಈ ಪಂಚಾಂಗ ಹೇಳುತ್ತದೆ’.

ಪಂಚಾಂಗವನ್ನು ಹುಡುಕುವಂತೆ ಕನ್ನಡಕ ಏರಿಸಿ ನೋಡಿ, ತಾವು ನೋಡಿದ್ದನ್ನು ಮಂಜಯ್ಯನೂ ನೋಡುವಂತೆ ಕಟಕಟೆಯ ಮೇಲಿದ್ದ ಮಂಜಯ್ಯನಿಗೆ ಕೊಟ್ಟರು. ಮಂಜಯ್ಯ ಅದನ್ನು ಕನ್ನಡಕ ಹಾಕಿಕೊಂಡು ಕಣ್ಣಿಗೆ ಹತ್ತಿರ ಹಿಡಿದು ನೋಡಿ ಹೌದೆಂದರು. ಕೂಡಲೇ ಅದರ ಅರ್ಥ ಮಂಜಯ್ಯನಿಗೆ ಹೊಳೆಯದೇ ಹೋಗಿತ್ತು.

ಲಾಯರಿನ ಧ್ವನಿ ಥಟ್ಟನೇ ಬದಲಾಯಿತು. ಕೋರ್ಟಿನಲ್ಲಿ ಗಣಪಯ್ಯ ಹಾಜರು ಪಡಿಸಿದ ತೋಟಗಾರರ ಸಂಘದ ದಾಖಲೆಯನ್ನು ಮಂಜಯ್ಯನ ಕಣ್ಣಿಗೆ ಒರಟಾಗಿ ಒಡ್ಡುತ್ತ,

‘ಇದು ನಿಮ್ಮ ಸಹಿಯೇ?’ ಎಂದರು.

ಮಂಜಯ್ಯನಿಗೆ ಕ್ರಮೇಣ ಲಾಯರು ಬೀಸಿದ ಬಲೆ ಕಾಣತೊಡಗಿತ್ತು. ಆದರೆ ಕಾಲ ಮಿಂಚಿತ್ತು.  ಅವರ ಮಾತು ನಿಂತಿತು. ಪೆದ್ದಾಗಿ ಲಾಯರನ್ನು ನೋಡಿದರು.

‘ಹೇಗೆ ಸಾಧ್ಯ ಮಂಜಯ್ಯನವರೇ? ನೀವೇ ಹಾಕಿದ ಸಹಿ ನೋಡಿ. ಈ ದಾಖಲೆಯ ಪ್ರಕಾರ ನೀವು. ನಾಡಿನ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ನೀವು, ಕೊಲೆಯ ಆರೋಪವನ್ನು ಹೊತ್ತ ಈ ಗಣಪಯ್ಯನ ಜೊತೆ ಬೆಂಗಳೂರಿನಲ್ಲಿ ಒಂದು ಸಭೆ ನಡೆಸಿದ್ದೀರಿ, ಡಿಸೆಂಬರ್ ಒಂಬತ್ತನೇ ತಾರೀಖು. ಅದು ದುರುಗಪ್ಪನವರ ಕಗ್ಗೊಲೆಯಾದ ದಿನವೇ. ಆದರೆ, ವಿಪರ‍್ಯಾಸವೆಂದರೆ, ಗಣಪಯ್ಯ ಎರಡು ಕಟುಕರನ್ನು ಬಿಟ್ಟು, ಅದು ಸಾಲದೆಂಬಂತೆ ತಾನೇ ಗನ್ನಿನಲ್ಲಿ ಗುರಿಯಿಟ್ಟು ಕೊಲೆಮಾಡಿದ್ದು ಡಿಸೆಂಬರ್ ಒಂಬತ್ತನೇ ತಾರೀಖು, ತ್ರಯೋದಶಿ ದಿನ, ನಿಮ್ಮ ಪೂಜ್ಯ ತಂದೆಯವರ ಶ್ರಾದ್ಧಕರ್ಮ ನಿಮ್ಮ ಹಳ್ಳಿಯಲ್ಲೇ ನಡೆದ ದಿನವೇ – ಎಂದು ನಿಮ್ಮ ಹೋರಾಟದ ಫಲವಾಗಿಯೇ ಅಸ್ಥಿತ್ವಕ್ಕೆ ಬಂದ ಘನಸರ್ಕಾರದ ಪೊಲೀಸರು ಹೇಳುವುದು. ಆದರೆ ಕಗ್ಗೊಲೆಯ ಆರೋಪ ಹೊತ್ತ ಈ ಗಣಪಯ್ಯ ಎಂಬ ಮನುಷ್ಯ ಹರಿಜನೋದ್ಧಾರಕರಾದ ನಿಮ್ಮ ಬೆಂಬಲಪಡೆದು ಹೇಳುವುದಾದರೂ ಏನು? – ‘ಅಲ್ಲವೇ ಅಲ್ಲ, ಹರಿಜನ ಯುವಕನ ಕೊಲೆಯಾದ ದಿನ ನಾನು ಯಾರಲ್ಲೇ ಇರಲಿಲ್ಲ, ತೋಟಗಾರರ ಸಂಘದ ಘನ ಅಧ್ಯಕ್ಷರಾದ ಮಂಜಯ್ಯನವರ ಆಮಂತ್ರಣದ ಮೇರೆಗೆ ಬೆಂಗಳೂರಿನಲ್ಲಿದ್ದೆ, ವುಡ್ ಲ್ಯಾಂಡ್ಸ್ ಹೋಟೆಲಿನಲ್ಲಿ – ಪ್ರಾಯಶಃ ಕಾಫಿ ಕುಡಿಯುತ್ತಲೊ ಕೇಸರಿಬಾತ್ ತಿನ್ನುತ್ತಲೋ ಇರಬಹುದು – ಮೀಟಿಂಗಿನಲ್ಲಿ ಭಾಗವಹಿಸುತ್ತಿದ್ದೆ, ನಾನು ಆ ಕಾರಣದಿಂದ ನಿಷ್ಪಾಪಿ, ನಿರಪರಾಧಿ, ಘನಸರ್ಕಾರದ ಪೊಲೀಸರು ಹೇಳುವುದು ಶುದ್ಧ ಸುಳ್ಳು’ –

ಈ ಘನ ಕೋರ್ಟು ಇದರಿಂದ ಏನು ತಿಳಿಯಬೇಕಪ್ಪ ನೀವೇ ಹೇಳಿ. ಭಗವದ್ಗೀತೆಯ ಮೇಲೆ ಆಣೆಯಿಟ್ಟು ಇಲ್ಲಿ ನಿಂತಿದ್ದೀರಿ. ನೀವೇ ಹೇಳಿ. ಈ ಕೊಲೆಗಡುಕ ಒಂದೋ ಬೆಂಗಳೂರಿನಲ್ಲಿ ಇದ್ದದ್ದು ಸುಳ್ಳು, ಅಥವಾ ನೀವು ಆ ದಿನ ನಿಮ್ಮ ತಂದೆಯ ಶ್ರಾದ್ಧವನ್ನು ಮಾಡಿದ್ದೇ ಸುಳ್ಳು. ಎರಡು ಕಡೆಗಳಲ್ಲೂ ಒಂದೇ ದಿನ ನೀವು ಕಾಣಿಸಿಕೊಳ್ಳಬೇಕೆಂದರೆ ನೀವು ಕೃಷ್ಣಪರಮಾತ್ಮರೇ ಇರಬೇಕು’.

ಮಂಜಯ್ಯನಿಗೆ ಕಣ್ಣುಕತ್ತಲೆ ಕಟ್ಟಿಬಂದಂತಾಯಿತು. ಇಡೀ ಮೈ ನಡುಗಿತು.

‘ಕ್ಷಮಿಸಬೇಕು’ ಎಂದು ಕೈ ಮುಗಿದು ಕಟಕಟೆಯಲ್ಲೇ ಕುಸಿದರು.

ಮಂಜಯ್ಯನಿಂದ ಇಂಥ ಸುಳ್ಳನ್ನು ಹೇಳಿಸಿದನಲ್ಲವೆ ಈ ಕಟುಕ ಗಣಪಯ್ಯ? ಎಂದು ಕೋರ್ಟಿನಲ್ಲಿ ಎಲ್ಲರಿಗೂ ಅನ್ನಿಸುವಂತೆ ಅಡ್ವೊಕೇಟ್ ಪರಮೇಶ್ವರಪ್ಪ ತಾನೇ ಮಂಜಯ್ಯನಿಗೆ ಕೈಕೊಟ್ಟು, ಮೆಲ್ಲನೆ ಅವರನ್ನೆತ್ತಿ, ಕಟಕಟೆಯಿಂದ ಅವರನ್ನು ಹೊರತಂದು, ಅವರ ಗಾಂಧಿ ಟೋಪಿಯನ್ನು ಸರಿಯಾಗಿ ಕೂರಿಸಿ. ಗ್ಲಾಸಿನಲ್ಲಿ ನೀರು ತರಿಸಿ, ಕುಡಿಸಿ, ಎಲ್ಲರೂ ಒಂದು ಕ್ಷಣಮೌನವಾಗಿ ದೊಡ್ಡ ಮನುಷ್ಯನೊಬ್ಬನ ಅಧಃಪತನವನ್ನು ಕರುಣೆಯಲ್ಲೂ ಹೇಸಿಗೆಯಲ್ಲೂ ವೀಕ್ಷಿಸುವಂತೆ ಮಾಡಿದರು.