೧೯

ಕರಿಯನ ಕೊಲೆಯಾದ ಮೇಲೆ ಗೌರಿ ಗುಡ್ಡದ ಮೇಲೆ ಹೋಗಿರಲಿಲ್ಲ. ಅವಳ ಸುಖವೆಲ್ಲ ಈಗ ಅಕ್ಕಯ್ಯನಿಗೆ ಮಗುವಿನ ಪಾಲನೆಯಲ್ಲಿ ನೆರವಾಗುವುದರಲ್ಲಿ. ಅಥವಾ ಬಚ್ಚಲೊಲೆಯ ಎದುರು ಕೂತು ಗಂಗೆಗೆ ಎಲ್ಲವನ್ನೂ ಒಪ್ಪಿಸುವುದರಲ್ಲಿ. ಅಥವಾ ಮಾತು ಕಡಿಮೆಯಾಗಿಬಿಟ್ಟ ಕೇಶವ ಮಾವನ ವಿಸ್ತೃತಗೊಳ್ಳುತ್ತ ಹೋಗುವ ಅಲಂಕಾರಗಳ ದೇವತಾರ್ಚನೆಯ ಸಂಭ್ರಮಗಳನ್ನು ಕೂತು ನೋಡುವುದರಲ್ಲಿ; ರಂಗೋಲೆ ಹಾಕಲು ಅವನಿಗೆ ಅನುವಾಗುವುದರಲ್ಲಿ. ಲಕ್ಷ್ಮೀ ಪ್ರತಿಷ್ಠಾಪನೆಗೆ ಒಂದು ಬಗೆಯ ರಂಗೋಲೆಯಾದರೆ, ವಿಷ್ಣು ಸಹಸ್ರನಾಮಕ್ಕೇ ಬೇರೆ.

ಗೌರಿಯ ಚಾಚಿದ ಕಾಲಿನ ಮೇಲೆ ಮಗುವನ್ನು ಮಲಗಿಸಿ ಅಕ್ಕು ಅದಕ್ಕೆ ನಿತ್ಯ ಎರೆಯುವುದು. ಕಣ್ಣಿಗೆ ನೀರು ಬೀಳದಂತೆ ಮಗುವಿನ ಮಂಡೆಯನ್ನು ಕೈಗಳಿಂದ ಹಿಡಿದು ಕೂರಿಸಿಕೊಂಡು ನೀರೆರೆಯುವುದನ್ನು ಗೌರಿ ಕಲಿತಿದ್ದಾಳೆಂದು ಅಕ್ಕುಗೆ ಸಂತೋಷ. ಅವಳೇ ಹೆತ್ತು ಸಾಕಬೇಕಾಗಿದ್ದ ವಯಸ್ಸಲ್ಲವೆ? ಆದರೆ ತಾನೇ ಎರೆಯುತ್ತೇನೆಂದು ಗೌರಿ ಹೇಳಿದರೆ ಅಕ್ಕು ಬಿಡಳು. ಮಗುವಿಗೆ ಶೀತವಾದೀತು ಎನ್ನುತ್ತಾಳೆ.

ಗೌರಿ ಒಳಲೆಯಿಂದ ಹಾಲು ಕುಡಿಸಿದರೆ ತೆಪ್ಪಗೆ ಕುಡಿದುಬಿಡುವ ಮಗು, ಅಕ್ಕು ಕುಡಿಸುವಾಗ ಮಾತ್ರ ತರಳೆ ಮಾಡುತ್ತದೆ; ಹಾಲನ್ನು ಥು ಎಂದು ಉಗುಳಿಬಿಡುವುದನ್ನೂ ಕಲಿತುಬಿಟ್ಟಿದೆ. ಆಗ ಅಕ್ಕು ಮಗುವನ್ನು ಬೈಯುವ ಸಂಭ್ರಮ ನೋಡಬೇಕು. ‘ನಾನು ಮುದುಕೀಂತ ಸಸಾರ ಅಲ್ಲವ ನಿನಗೆ. ದೊಡ್ಡವನಾಗು. ನಿನ್ನನ ನೋಡಿಕೋತೇನೆ’ ಎಂದು ಮಗುವಿನ ಕೆನ್ನೆ ಚೂಟುತ್ತಾಳೆ.

ಚಂದ್ರವದನ ಎಲ್ಲರ ಬಾಯಲ್ಲಿ ಈಗ ಚಂದುವಾಗಿಬಿಟ್ಟಿದ್ದಾನೆ. ಮಲಗಿಸಿದಾಗ ಮಗು ಕೌಂಚಿಕೊಳ್ಳಕ್ಕೆ ನೋಡ್ತ ಇದೆಯಲ್ಲವೇ ಎನ್ನುವುದೇ ಎಲ್ಲರೂ ಈಗ ಚರ್ಚಿಸುವ ವಿಷಯ.

‘ಹಚಿ ಕಳ್ಳ ಎಂದರೆ ಚಂದು ನಗತ್ತೆ ನೋಡೆ’

‘ಕೇಶವ ಹಾಡಿದರೆ ಕಣ್ಣು ತಿರುಗಿಸಿ ಹೇಗೆ ಆಲಿಸುತ್ತೆ ನೋಡೇ’ – ಇವೇ ಮಾತುಗಳು ಮನೆಯಲ್ಲಿ ಈಗ.

ದೇವರ ಮನೆಯಿಂದ ಆಂಜನೇಯ ವಿಗ್ರಹವಿದ್ದ ಗಂಟೆಯನ್ನು ಒಂದು ದಿನ ಗೌರಿ ತಂದು ಬಾರಿಸಿದಳು. ಆಗ ಚಂದು ಕೈಕಾಲು ಬಡಿದು ಕೇಕೆಹಾಕಿ ದೊಡ್ಡ ಸುದ್ದಿಯಾದ. ಆಮೇಲಿಂದ ಆಂಜನೇಯ ದೇವರಮನೆ ಸೇರುವುದು ಪೂಜೆಯ ಹೊತ್ತಿಗೆ ಮಾತ್ರ. ಆಗಲೂ ಗಂಟೆಬೇಕೆಂದು ಅವನು ಅತ್ತರೆ, ಮೈಲಿಗೆಯಲ್ಲೂ ಚಂದುಗೆ ದೇವರ ಮನೆಯ ಪ್ರವೇಶದ ಅನುಮತಿ ಅಕ್ಕುವಿನಿಂದ ಸಿಕ್ಕಿಬಿಟ್ಟಿದೆ. ಜಾಗಟೆ ಬಾರಿಸಿದಾಗ ಮಾತ್ರ ಚಂದು ಬೆಚ್ಚುತ್ತಾನೆ.

ಕೇಶವನೋ, ಅಗತ್ಯಕ್ಕಿಂತ ಹೆಚ್ಚು ಆಂಜನೇಯ ಗಂಟೆಯನ್ನು ಎಡಗೈಯಿಂದ ಬಾರಿಸುತ್ತ, ಹಿಡಿದ ಕೈಗೆ ಬಿಸಿತಾಕುವ ತನಕ ಆರತಿಯೆತ್ತುತ್ತಾನೆ. ಪೂಜೆ ಮಾಡುವುದು ದೇವರಿಗೋ, ಚಂದುಗೋ ಎಂಬ ಬೇಧಭಾವವೇ ಈಗ ಮಾವನಿಗೆ ಉಳಿದಿಲ್ಲವೆಂದು ಹೇಳಿ ಅಕ್ಕುವನ್ನು ನೋಡಿ ಗೌರಿ ನಗುತ್ತಾಳೆ.

ಗೌರಿ ಖುಷಿಯಲ್ಲಿ ಗಮನಿಸುವಂತೆ ಮಂಗಳಾರತಿಯ ಉರಿಯುವ ದೀಪದ ಕುಡಿಗಳನ್ನು ನೋಡಿ ಚಂದು ಕೈಯೆತ್ತಿ ಕೇಕೆ ಹಾಕುವ ಅಕ್ಕುವಿನ ನಿರೀಕ್ಷೆಯಲ್ಲೇ ಈಗ ದೇವರಿಗೆ ಮಂಗಳಾರತಿಯಾಗೋದು. ಮಗುವಾಗಿದ್ದಾಗ ಗಂಗೆ ಕಿವಿಯಲ್ಲಿದ್ದ ಬಂಗಾರದ ಚೂರನ್ನೇ ಅಕ್ಕು ವೆಂಕಾಚಾರಿಯನ್ನು ಕರೆಸಿ ಚಂದು ಕಿವಿಚುಚ್ಚಿಸಿ ಹಾಕಿದ್ದಾಳೆ. ಅವತ್ತು ಗಂಗೆಗೆ ಇಷ್ಟವಾದ ಪಾಯಸವನ್ನೇ ಅಕ್ಕು ಮಾಡಿದ್ದು. ಈಗವಳ ಕೈ ಧಾರಾಳವೆಂದು ಮಾವನಿಗೆ ಆನಂದ. ಇಡೀ ಒಂದು ಪೊಟ್ಟಣದಷ್ಟು ದ್ರಾಕ್ಷಿಯನ್ನು ಹಾಕಿ ಅವತ್ತು ಮಾಡಿದ ಪಾಯಸದಲ್ಲಿ ಅರ್ಧಕ್ಕೂ ಹೆಚ್ಚು ಪಾಯಸ ಸೇರಿದ್ದು ಕೇಶವ ಮಾವಯ್ಯನ ಹೊಟ್ಟೆಗೆ. ಗಂಗುವನ್ನು ಎಲ್ಲರೂ ಆಗ ನೆನಸಿಕೊಂಡರು.

ಒಂದು ದಿನ ಹೀಗೆ ಗೌರಿ ತನಗೇ ಅಂದುಕೊಳ್ಳುತ್ತ ಬಚ್ಚಲೊಲೆ ಮುಂದೆ ಕೂತಿದ್ದಾಗ ಮಾವಯ್ಯ ಎದುರುಬಂದು ನಿಂತ. ಗೌರಿಯ ಮುಖವನ್ನು ಕುತೂಹಲದಿಂದ ನೋಡುತ್ತ,

‘ಸಾಹುಕಾರರ ಮಗಳು ನಿನ್ನನ್ನ ನೋಡಬೇಕು ಅಂದರು. ಬರಲಾ ಎಂದರು. ಬನ್ನಿ ಎಂದೆ, ಬೇಕಾದರೆ ಕೂಡಲೇ ಗೌರೀನ್ನೇ ಕಳಿಸ್ತೀನಿ ಎಂದೆ. ಮನೇ ಕಾರು ಇರಲಿಲ್ಲ. ಸಾಹುಕಾರ‍್ರು ಮೊನ್ನೆಯಿಂದ ಬೆಂಗಳೂರಲ್ಲಿದ್ದಾರೆ. ನಾಳೆ ಬಂದುಬಿಟ್ಟು ಮನೇಲೇ ಇರ‍್ತಾರಂತೆ. ಇನ್ನು ಮುಂದೆ ಇಲ್ಲೇ ಅವರಿಗೆ ಶುಶ್ರೂಶೆಯಂತೆ. ಇನ್ನೊಂದು ಕಾರು ಗ್ಯಾರೇಜಿಗೆ ಹೋಗಿದೆಯಂತೆ. ಪಾಪ ಅವರಿಗೆ ಇಷ್ಟುದೂರ ನಡೆದು ಅಭ್ಯಾಸವಿಲ್ಲ ಅಂತ ನೀನೇ ಬರ‍್ತೀಯ ಅಂದುಬಿಟ್ಟೆ. ಸರೀ ತಾನೆ?’ ಎಂದ.

ಗೌರಿ ನಕ್ಕಳು. ಸಾಹುಕಾರರ ಮಗಳಾದರೇನು ನಡೆಯಬಾರದೆ ಎಂದು ಅವಳಿಗೆ ಅನ್ನಿಸಿತ್ತು. ಆದರೆ ಇದನ್ನು ಕೇಳಿ ಅಕ್ಕುಗೆ ಸಂತೋಷವಾಗಿತ್ತು. ಯಾರನ್ನೂ ಮಾತಾಡಿಸುವ ಬಲು ಗರ್ವದ ಹುಡುಗಿ ಅವಳು ಎಂದು ಅಕ್ಕು ಅಂದುಕೊಂಡಿದ್ದಳು. ಹಿಂದೊಂದು ದಿನ ಮನೆಗೆ ಬಂದಾಗಲೂ ಅಷ್ಟೆ; ಸಾಹುಕಾರರು ಬಂದು ಉಪ್ಪಿಟ್ಟು ತಿಂದಿದ್ದರು; ಆದರೆ ಅವಳೊಂದು ತೊಟ್ಟು ಕಾಫಿಬಿಟ್ಟು ಇನ್ನೇನೂ ಮುಟ್ಟಿರಲಿಲ್ಲ.

ಕೇಶವ ಕೇಳಿಸಿಕೊಂಡಂತೆ ಮಂಜಯ್ಯ ಆ ಗಣಪಯ್ಯನ ಪರವಾಗಿ ಸಾಕ್ಷಿ ಹೇಳಲಿಕ್ಕೆ ಹೋಗಿ ಅವಮಾನಿತರಾದ ಮೇಲೆ ಹಿಂದಿನ ಮನುಷ್ಯನೇ ಅಲ್ಲ. ಯಾರಿಗೂ ಮುಖ ತೋರಿಸದೆ ಮನೇಲಿ ಮಲಗಿಯೇ ಇರುತ್ತಿದ್ದರು. ಆಮೇಲಿಂದ ಒಂದಷ್ಟು ದಿನ ಚರಕಾನ್ನ ಗ್ಯಾರೇಜಿಂದ ಹುಡುಕಿ ಹೊರಗೆ ತೆಗೆದು, ಅವರೇ ಅದರ ಧೂಳು ಒರೆಸಿ, ನಡಗುವ ಕೈಯಿಂದ ನೂಲು ತೆಗೀತ ಕೂತಿರುತ್ತಿದ್ದರು. ಭಗವದ್ಗೀತೆ ಓದೋಕೆ ಶುರುಮಾಡಿದರು; ಕೇಶವನ ಹತ್ತಿರ ಓದಿಸಿ ಕೇಳ್ತ ಇದ್ದರು. ಪ್ರತಿದಿನ ತಪ್ಪದೆ ಭೂವರಾಹನ ತೀರ್ಥ ತಗಳ್ಳೋಕೆ ಶುರುಮಾಡಿದರು. ಮಗ ಇಂಗ್ಲೆಂಡಿಂದ ಬರೆದ ಕಾಗದವನ್ನೆಲ್ಲ ಒಂದೊಂದಾಗಿ ತೆಗೆದು ಓದೋರು.

‘ನಾಳೇಂದ ಅಪ್ಪ ಮನೇಲೇ ಇರತಾರಲ್ಲ; ಗೌರೀಂದ ಅವರಿಗೆ ಏನಾದರೂ ಸಹಾಯವಾಗಬೇಕೊ ಏನೊ. ನನ್ನ ನಿತ್ಯ ಮಾತಾಡಿಸತಾರೆ. ಅವರು ಕಳಿಸಿದ ದನ ಹಾಲು ಕೊಡತ್ತ, ಏನು, ಎತ್ತ ಎಲ್ಲ ಕೇಳ್ತಾರೆ. ಸಾಹುಕಾರ‍್ರೆ ಅಷ್ಟು ಮಾತಾಡ್ತ ಇರಲಿಲ್ಲ ನನ್ನ ಹತ್ತಿರ.’

ಕೇಶವ ಚಂದುವನ್ನೆತ್ತಿಕೊಂಡು ಮುದ್ದಿಸುತ್ತ ಹೇಳಿದ.

೨೦

ಇರುವ ಎರಡು ಒಳ್ಳೆ ಸೀರೆಗಳಲ್ಲಿ ಒಂದನ್ನು ಉಟ್ಟು, ಮುಖ ತೊಳೆದು ಕುಂಕುಮವಿಟ್ಟು, ಬಿಗಿಯಾದ ಜಡೆಹಾಕಿ, ಅರ್ಧಗಂಟೆ ಗುಡ್ಡದ ಬುಡದ ದಾರಿಯಲ್ಲಿ ನಡೆದು ಗೌರಿ ಸಾಹುಕಾರರ ಮನೆ ತಲುಪಿದಳು. ಅವಳು ಈ ದೊಡ್ಡ ಪಾಗಾರದ ಮನೆಯನ್ನು ದೂರದಿಂದ ನೋಡಿದ್ದಿದೆ. ಚಿಕ್ಕವಳಿದ್ದಾಗ ಒಮ್ಮೆ, ಮಾವನ ಪ್ರಸಂಗ ಕೇಳಲು ಒಂದೆರಡು ಬಾರಿ, ಒಳಗೆ ನೋಡಿದ್ದುಂಟು. ಆದರೆ ಮಸುಕುಮಸುಕಾದ ನೆನಪು. ಸಾಹುಕಾರರ ಮನೆಯಲ್ಲಿ ಹಬ್ಬ ಹರಿದಿನಗಳು ನಡೆದಾಗ ಪೂಜೆಗೆ ಹೋಗುವ ಕೇಶವ ಮನೆಗೇ ಭಕ್ಷ್ಯ ಭೋಜ್ಯಗಳನ್ನು ತಂದುಕೊಡುತ್ತಿದ್ದ. ಗಂಗೆ ಗೌರಿಯರಿಗೆ ಯಾರ ಮನೆಗೂ ಹೋಗಿ ಊಟಕ್ಕೆ ಕಾದು ಕೂರುವುದೆಂದರೆ ನಾಚಿಕೆ. ಅಕ್ಕುಬೇರೆ ಮಡಿಹೆಂಗಸಾದ್ದರಿಂದ ಎಲ್ಲೂ ಅವಳು ಹೋಗುವುದಿಲ್ಲ.

ಗೌರಿ ಉಯ್ಯಾಲೆಯಿದ್ದ ದೊಡ್ಡ ಪಡಸಾಲೆಗೆ ಹೋಗುತ್ತಿದ್ದಂತೆ ವಿಮಲ ಕಾದಿದ್ದವಳು ಅವಳಿಗೆ ಎದುರಾಗಿ ಬಂದು ನಿಂತು

‘ಬಂದಿರಾ. ಒಳಗೆ ಬನ್ನಿ’ ಎಂದು ಸ್ನೇಹದಲ್ಲಿ ಕೈಹಿಡಿದಳು.

ಗೌರಿಯನ್ನು ಬ್ರಾಹ್ಮಣರಲ್ಲಿ ಅವಳಿಗಿಂತ ಹಿರಿಯರಾದವರು ಬಹುವಚನದಲ್ಲಿ ಕರೆದದ್ದಿಲ್ಲ. ವಿಮಲ ಗೌರಿಗಿಂತ ಐದಾರು ವರ್ಷಗಳಾದರೂ ಹಿರಿಯಳಿರಬೇಕು. ಗೌರಿಗೆ ಬಹುವಚನದಿಂದ ನಾಚಿಕೆಯಾಯಿತೆಂದು ವಿಮಲ ಗಮನಿಸಿದಳು. ತನ್ನ ಕೋಣೆಗೆ ಕರೆದುಕೊಂಡು ಹೋಗಿ ‘ಕೂರಿ’ ಎಂದು ಮೆತ್ತೆ ಹಾಕಿದ ಕುರ್ಚಿ ತೋರಿಸಿದಳು. ತಾನು ಮೇಜಿನ ಪಕ್ಕ ಇನ್ನೊಂದು ಕುರ್ಚಿಯಲ್ಲಿ ಕೂತಳು.

ಕಪ್ಪಾದ ಬೀಟೆಮರದ ಸೂರು ನಾಗಂದಿಗೆಗಳಿದ್ದ ಪುಟ್ಟ ಕೋಣೆಯದು. ಕಿಟಕಿಯಿಂದ ಸುಂದರವಾದ ಗುಲಾಬಿ ತೋಟ ಕಾಣುವಂತಿತ್ತು. ಒಂದು ಗೋಡೆಯ ಪಕ್ಕ, ಗಾಜಿನ ಬೀರುವಿನಲ್ಲಿ ಪುಸ್ತಕಗಳು. ಮೇಜಿನ ಮೇಲೆ ಒಬ್ಬ ಲಕ್ಷಣವಾದ ಮುಖದ ಆಧುನಿಕ ಯುವಕನ ಫೋಟೊ – ಅಣ್ಣಂದಿರಬೇಕು. ಕೋಟ್ ಹಾಕಿ ಟೈ ಕಟ್ಟಿಕೊಂಡಿದ್ದಾನೆ. ಇನ್ನೊಂದು ಅಪ್ಪ ಅಮ್ಮನ ಮದುವೆ ಫೋಟೋ ಇರಬೇಕು. ಅಪ್ಪ ಗಾಂಧಿ ಟೋಪಿಯಲ್ಲಿದ್ದಾರೆ; ಅಮ್ಮ ದೊಡ್ಡ ಕುಂಕುಮದ ರೇಷ್ಮೆ ಸೀರೆಯನ್ನು ಕಚ್ಚೆಹಾಕಿ ಉಟ್ಟ ಹೆಂಗಸು, ಬಲು ಚಿಕ್ಕವಳಂತೆ ಕಾಣುತ್ತಾಳೆ. ಮಗಳ ಮುಖವೇ ತಾಯಿಯದು ಎಂದು ಗೌರಿಗೆ ಅನ್ನಿಸಿತು.

ಯಾವ ಮಾತಿನಲ್ಲದೆ ಕೆಲವು ಕ್ಷಣ ಕಳೆದವು. ತನ್ನನ್ನು ಕರೆಸಿದ್ದು ಯಾಕೆ ಎಂದು ಗೌರಿ ಕೇಳಲೇ ಇಲ್ಲ. ಗಾಢವಾದ ಮೌನದಲ್ಲಿ ಮಾತಿನ ಅಗತ್ಯವೆ ಬೀಳದಂತೆ ಗೌರಿ ವ್ಯಕ್ತಪಡಿಸುವ ಸಹಜವಾದ ಭಾವನೆಗಳ ನಯವನ್ನು ವಿಮಲ ತನ್ನ ವಿದ್ಯಾವಂತರಾದ ಯಾವ ಸ್ನೇಹಿತೆಯಲ್ಲೂ ಕಂಡಿರಲಿಲ್ಲ. ಉಪಚಾರದ ಯಾವ ಮಾತನ್ನೂ ತನ್ನಿಂದ ಆಡಿಸಬೇಕೆಂಬ ನಿರೀಕ್ಷೆಯೇ ಅವಳಲ್ಲ ಕಾಣಲಿಲ್ಲ. ಹೊರಗಿನ ಗುಲಾಬಿ ತೋಟ ಅವಳನ್ನು ಎಷ್ಟು ಖುಷಿಪಡಿಸಿದೆ ಎಂಬುದು ತೋಟವನ್ನೂ ಕೋಣೆಯನ್ನೂ ತನ್ನನ್ನೂ ತುಂಬಿಕೊಂಡಿರುವ ಪ್ರಸನ್ನವಾದ ಅವಳ ಕಣ್ಣುಗಳಿಂದ ತಿಳಿಯಬಹುದಿತ್ತು.

ವಿಮಲ ಕೃತಜ್ಞತೆಯಿಂದ ಹಟಾತ್ತನೆ ಹೇಳಿಬಿಟ್ಟಳು:

‘ಗೌರಿ, ನೀವು ಸಾಕುತ್ತಿರೋದು ನನ್ನ ಕೂಸು’

ಗೌರಿ ಮಾತನ್ನು ಸ್ವೀಕರಿಸಿದಂತೆ ತೋರಿದಳು, ಆದರೆ ಏನೂ ಹೇಳಲಿಲ್ಲ. ಏನೂ ಕೇಳಲಿಲ್ಲ. ಆದರೆ ಕೇಳಿಸಿಕೊಳ್ಳಲು ತೆರೆದಿದ್ದವಳಂತೆ ಕಂಡಳು.

‘ನನ್ನ ಅಪ್ಪ ತುಂಬ ಇಳಿದುಹೋಗಿದಾರೆ. ಅವರಿಗದು ತಿಳೀಬಾರದು. ಅಣ್ಣ ಇನ್ನೇನು ಇಂಗ್ಲೆಂಡಿಂದ ಬಂದುಬಿಡ್ತಾನೆ, ಆಮೇಲೆ…’

‘ಆಮೇಲೆ’ ಎಂದು ಅಂದವಳು, ಅಂದಮೇಲೆ ಹಾಗಂದದ್ದು ತಪ್ಪಾಯಿತೇನೋ ಎಂದು ನರಳಿದಳು. ಆತಂಕಪಡುತ್ತ ಗೌರಿಯ ಮುಖ ನೋಡಿದಳು. ತನಗೆ ಪೂರ್ಣ ಒದಗುವಂತೆ, ಗೌರಿ ತನ್ನನ್ನು ಕಣ್ಣಿಟ್ಟು ಹಿಂದಿನಂತೆಯೇ ನೋಡುತ್ತಿದ್ದಳು.

ಬಿಗಿದು ಕಟ್ಟಿದ ಜಡೆಯಲ್ಲಿ, ಸಾದಾಸೀರೆಯಲ್ಲಿ, ಕುರ್ಚಿಗೆ ಒರಗದಂತೆ ಆರಾಮಾಗಿ ಸ್ಥಿರವಾಗಿ ಕೂತ ಗೌರಿ ತಾನು ಇನ್ನೆಲ್ಲೂ ಕಂಡಿರದ ಚೆಲುವೆಯಾಗಿದ್ದಳು. ಸುಂದರವಾದ ಕಣ್ಣುಗಳನ್ನು ಕೊಂಚಮುಚ್ಚಿದಂತೆ ತೋರುವ ಧ್ಯಾನದಲ್ಲಿರುವ ದೇವತೆಯಂತೆ ಅವಳು ವಿಮಲೆಗೆ ಭಾಸವಾದಳು. ಅವಳ ಹುಬ್ಬುಗಳು ಬಿಲ್ಲಿನಂತೆ ಬಾಗಿ ಅವಳ ಕಣ್ಣಿನ ಶೋಭೆಯನ್ನು ಹೆಚ್ಚಿಸಿದ್ದವು. ಕಣ್ಣಿನ ರೆಪ್ಪೆಗಳು ನೀಳವಾಗಿದ್ದು ಕಣ್ಣಿನ ಚಲನೆಗೆ ವಿಶೇಷವಾದ ಮಾದಕತೆಯನ್ನು ತರುವಂತೆ ಇದ್ದವು. ಮಂದಹಾಸದ ತುಟಿಗಳು ಅವಳ ಮುಖದ ಒಟ್ಟು ಕಾಂತಿಯನ್ನೂ ಮಾದಕತೆಯನ್ನೂ ತಂಪುಗೊಳಿಸುವ ಹಿತದ ಚೆಲುವಿನವು. ಈ ತುಟಿಗಳ ಮೇಲಿನ ಅವಳ ನೀಳವಾದ ಮೂಗು ಅನ್ನಪೂರ್ಣೆಯದು. ಈ ಹುಡುಗಿಗೆ ತಾನೆಷ್ಟು ಚೆಲುವೆ ಎಂಬ ಪರಿವೆಯೇ ಇದೆಯೋ ಇಲ್ಲವೋ. ಅವಳು ಇರುವ ತಾಣವೇ ಸಮಸ್ತಲೋಕವೂ ಇರುವ ತಾಣವೆಂಬಂತೆ ಅವಳು ಇದ್ದಾಳೆ. ಅಪ್ಪ ಬಂಗಾರದ ಖಡ್ಗವನ್ನು ಹರಕೆಯಾಗಿ ಒಪ್ಪಿಸಲು ಹೋದಾಗ ತಾನು ಕಂಡ ಆ ಚೆಲುವೆಯಾದ ದೇವಿಯಂತೆ. ಕೊಲ್ಲೂರಿನ ಮೂಕಾಂಬಿಕೆಯಂತೆ.

ಪ್ರಾಯಶಃ ಗೌರಿಯ ಮನೆಯಲ್ಲಿ ಕನ್ನಡಿಯೇ ಇಲ್ಲವೇನೊ ಎಂದು ವಿಮಲ ಊಹಿಸಿದ್ದು ನಿಜವಾಗಿತ್ತು. ಹಣೆಗಿಟ್ಟ ಕುಂಕುಮ ಸೊಟ್ಟವಾಗಿಲ್ಲ ಎಂದು ಹೇಳುವಷ್ಟು ಪುಟ್ಟವಾದ ಒಂದು ಕನ್ನಡಿ ಮಾತ್ರ ಅವಳ ಮನೆಯ ಚಾವಡಿಯ ಮಣ್ಣಿನ ಗೋಡೆಯಲ್ಲಿ ಯಾವ ಕಾಲದಿಂದಲೋ ಮೆತ್ತಿತ್ತು. ತುದಿಗಾಲಲ್ಲಿ ನಿಂತು ಅದರಲ್ಲಿ ಸ್ನಾನವಾದ ಮೇಲೆ ದಿನಕ್ಕೊಮ್ಮೆ ಅವಳು ಕುಂಕುಮವಿಡುವುದನ್ನು ಮಾತ್ರ ನೋಡಿಕೊಳ್ಳುವುದು. ಅಕ್ಕುವಂತೂ ಕನ್ನಡಿಯಲ್ಲಿ ತನ್ನ ಹಣೆ ನೋಡಿಕೊಳ್ಳಲೇ ಬೇಕಿಲ್ಲವಲ್ಲ. ಉದ್ದಕೂದಲಿನ ಕೇಶವ ತಾಳೆಮದ್ದಲೆಯ ಸೊಗಸುಗಾರನಾದರೂ ಅಕ್ಷತೆಯನ್ನಿಟ್ಟುಕೊಳ್ಳಲೂ ಅವನು ಕನ್ನಡಿಯನ್ನು ಆಶ್ರಯಿಸಿದವನಲ್ಲ. ತೋರು ಬೆರಳಲ್ಲಿ ಕಲಸಿದ ಅಕ್ಷತೆಯನ್ನು ಅದ್ದಿಕೊಂಡು ಮೂಗಿನ ನೇರಕ್ಕದನ್ನು ಹಿಡಿದು ಹಣೆಮೇಲದನ್ನು ಮುಟ್ಟಿಸಿಬಿಡುತ್ತಾನೆ. ಅಲ್ಲದೆ ಕನ್ನಡಿ ಬೇಡವೇ ಬೇಡ ಅವರ ಮನೆಯಲ್ಲಿ. ಒಬ್ಬರಿಗೊಬ್ಬರು ಕನ್ನಡಿ. ಅಕ್ಕು ಗೌರಿಯಿಟ್ಟುಕೊಂಡ ಕುಂಕುಮ ತಿದ್ದುತ್ತಾಳೆ. ಗೌರಿ ಕೇಶವನಿಟ್ಟುಕೊಂಡ ಅಕ್ಷತೆ ತಿದ್ದುತ್ತಾಳೆ. ಗೌರಿಯ ಮುಖನೋಡಿ ಅದು ಚೆನ್ನವೆಂದು ಕಂಡರೆ ಭಾಗವತವೇಷದ ಮೆಚ್ಚಿಕೆಯ ಹಾವಭಾವಗಳನ್ನು ಮಾಡಿ ಕೇಶವ ಹಾಡುತ್ತಾನೆ.

ವಿಮಲಗೆ ಅಚ್ಚರಿಯೆನ್ನಿಸಿದ್ದು ಗೌರಿಯ ಸ್ವಾಸ್ಥ್ಯ. ತನ್ನ ಇಡೀ ಮೈಯ ಕಟ್ಟು ಬಳಕುಗಳಲ್ಲಿ ಸಹಜವಾಗಿ ಪಡೆದಿರುವಂತೆ ತೋರುವ ಅವಳ ಅಂಗಾಂಗಗಳ ಸಾಮರಸ್ಯ. ಗಲಿಬಿಲಿಗೊಳ್ಳದೆ ಅವಳು ನಾಚಿದಾಗ, ಅವಳ ಇಡೀ ಮೈಯಲ್ಲಿ ತೋರುವ ಲಾವಣ್ಯ. ಮೈಯ ಅಂದಚೆಂದವನ್ನೇ ಗೀಳುಮಾಡಿಕೊಂಡವರಲ್ಲಿ ಕಾಣದ ಶೋಭೆ ಇದು. ತನಗಾದರೆ ಮೈಯೆಲ್ಲೋ ಮನಸ್ಸೆಲ್ಲೋ; ತಾವು ಸುಂದರಿಯರೆಂದು ಭಾವಿಸುವ ತನ್ನ ಎಷ್ಟೋ ಗೆಳತಿಯರಿಗೆ ಕೂಡ ಅವರ ಮೈಯೆಲ್ಲೋ, ಮನಸ್ಸೆಲ್ಲೋ.

ಎದುರು ಕೂತವಳು ದೇವಿಯಂತೆ ಎನ್ನಿಸಿ ತನ್ನ ಎಲ್ಲ ಕಥೆಯನ್ನೂ ಮುಚ್ಚುಮರೆಯಿಲ್ಲದ ವಿಮಲ ಹೇಳಿಕೊಂಡಳು. ಆಮೇಲೆ ನಿರಾಳವೆನ್ನಿಸಿ ಸುಮ್ಮನೇ ಕೂತಳು. ಗುಲಾಬಿ ತೋಟವನ್ನು ನೋಡುತ್ತ ಕೂತಿದ್ದ ಗೌರಿ ತಾನು ಹೇಳಲಾರದೆ ಬಿಟ್ಟದ್ದನ್ನೂ ಗ್ರಹಿಸಿದಂತೆ ಕಂಡಳು. ವಿಮಲಳ ಕೈಯನ್ನು ಹಿಡಿದು ಎದ್ದಳು; ನಾಚುತ್ತ ಹೇಳಿದಳು;

‘ಮಗುಚಿಕೊಳ್ಳೋಕೆ ನೋಡ್ತಿದಾನೆ ನಿಮ್ಮ ಚಂದು.’

ಅತ್ತು ಅನುಕಂಪ ಪಡೆಯಬಾರದೆಂಬ ಮನಸ್ಸನ್ನು ಬಿಗಿಹಿಡಿದಿದ್ದ ವಿಮಲ ಗೌರಿ ಹೇಳಿದ್ದು ಕೇಳಿ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತಳು:

‘ಮಗೂನ್ನ ನಾನು ಯಾವಾಗ ನೋಡೋದೊ? ಹಾಲು ಕುಡಿಯುತ್ತ? ನಾನದಕ್ಕೆ ಸರಿಯಾಗಿ ತುಡು ಕೊಟ್ಟೇ ಇಲ್ಲ.’

‘ನಮ್ಮ ಅಕ್ಕು ಕರು ಹಾಕಿದ ಹೆಣ್ಣು ಹುಲಿಯಂತೆ ಮಗೂನ್ನ ಕಾದುಕೊಂಡು ಇದಾಳೆ. ನೀವೂ ಅದರ ಹತ್ತಿರ ಸದ್ಯ ಬರೋಹಾಗಿಲ್ಲ.’

ಹೆದರಿಸುವಂತೆ ಅಕ್ಕುವಿನ ಅಣಕ ಮಾಡಿ ಗೌರಿ ನಕ್ಕಳು – ವಿಮಲ ಹಗುರಾಗುವಂತೆ.

‘ನಿತ್ಯ ಪ್ಲೀಸ್ ನೀವು ಬಂದು ಹೋಗ್ತೀರ? ಮಗೂ ಬಗ್ಗೆ ಮಾತಾಡಿ ಹೋಗ್ತೀರ?’

ಆಗಲಿ ಎನ್ನುವಂತೆ ಗೌರಿ ತಲೆಯಲ್ಲಾಡಿಸಿ ನಕ್ಕಳು. ಅವಳ ನಗುವಿಗೆ ಕಾರಣ ಅವಳು ಮೊದಲ ಬಾರಿಗೆ ಕೇಳಿಸಿಕೊಂಡ, ಆದರೆ ಅವಳಿಗೆ ಓದುವ ಪುಸ್ತಕಗಳಿಂದ ಗೊತ್ತಿರುವ, ‘ಪ್ಲೀಸ್’ ಶಬ್ದ.

‘ನನ್ನ ಸಹಾಯಕ್ಕೆ ಬರ‍್ತೀನಿ ಅಂತ ಒಂದು ಸಣ್ಣ ಸುಳ್ಳನ್ನ ಮನೇಲಿ ಹೇಳಿಬಿಡಿ. ಅದು ನಿಜಾನೂ ಕೂಡ, ನಿಮ್ಮ ಸಹಾಯ ಬೇಕು ನನಗೆ. ಅಪ್ಪ ಇವತ್ತೊ ನಾಳೆಯೊ ಅನ್ನೊ ಹಾಗಿದಾರೆ. ಇವತ್ತು ನಾನು ನಿಮ್ಮನ್ನ ದೇವಿ ಪೂಜೆ ಮಾಡಿ ಅರಸಿನ ಕುಂಕುಮಕ್ಕೆ ಕರೆದಿದ್ದೆ ಅಂತ ಹೇಳಿಬಿಡಿ. ಬಾಗಿನಾನೂ ತರಿಸಿಟ್ಟಿದೀನಿ. ನೀವೇ ನನ್ನ ದೇವಿ ನನ್ನ ಪಾಲಿಗೆ’ ಎಂದು ಕಪಾಟಿನಿಂದ ಹಣ್ಣು ಕಾಯಿ ಒಂದು ರೇಷ್ಮೆಯ ಸೀರೆ ಕಣ ಇವುಗಳನ್ನು ತಟ್ಟೆಯಲ್ಲಿಟ್ಟು ಕೊಟ್ಟಳು.

ಹೊರಟುನಿಂತ ಗೌರಿಗೆ ‘ಇದನ್ನ ಆಮೇಲೆ ಯಾರ ಹತ್ತಿರವಾದರೂ ಕಳಿಸಿಕೊಡಲ? ಈಗಲೇ ಜೊತೇಲಿ ಯಾರನ್ನಾದರೂ ಕಳಿಸಲಿ ಎಂದಳು.

‘ಬೇಡ ತಗೊಂಡೇ ಹೋಗ್ತೀನಿ. ನನಗೊಬ್ಬಳೇ ಈ ಕಾಡುಗಳಲ್ಲಿ ನಡೆದಾಡೋದು ಇಷ್ಟ. ನೀವು ಒಂದಿನ ಜೊತೆಗೆ ಬಂದರೆ ಕರಕೊಂಡು ಹೋಗಿ ನನಗೆ ಇಲ್ಲಿ ಇಷ್ಟವಾದದ್ದನ್ನೆಲ್ಲ ತೋರಿಸ್ತೀನಿ’

ಬೇಡವೆಂದರೂ ಕೇಳದೆ ಮೊದಲನೇ ಬಾರಿಗೆ ವಿಮಲ ಗೌರಿಯ ಜೊತೆಯಲ್ಲಿ ಅವಳೇ ಬಾಗಿನ ಹೊತ್ತು ಅರ್ಧ ದೂರವಾದರೂ ನಡೆದುಬಂದಳು.

ಗುಟ್ಟಿನ ನಿರ್ವಹಣೆಯಲ್ಲಿ ಗೌರಿ ದೇವಿಯೇ ಆಗಿಬಿಟ್ಟಳು; ಮಾವಯ್ಯನಿಗೂ ಹೇಳಿಲಿಲ್ಲ.

* * *

ಮನೆಗೆ ಹಿಂದಕ್ಕೆ ಬಂದ ಮಂಜಯ್ಯ ಹಾಸಿಗೆಯಲ್ಲೇ ಮಲಗಿರಬೇಕಾಗಿ ಬಂದು, ಅಲ್ಲೇ ಎಲ್ಲವೂ ಆಗಬೇಕಾಗಿ ಪರಾಧೀನರಾಗಿ ಬಿಟ್ಟಿದ್ದರು. ಮನೆಗೆ ಒಬ್ಬ ಡಾಕ್ಟರ್ ತೀರ್ಥಹಳ್ಳಿಯಿಂದ ಬಂದು ಹೋಗುತ್ತಿದ್ದರು. ಮಂಜಯ್ಯನ ಅಭಿಮಾನಿಗಳೆಲ್ಲರೂ, ತಾಲೂಕಿನ ಮಂತ್ರಿಗಳೂ ಸಹ ಬಂದುಹೋದರು. ಮಂಜಯ್ಯನಿಗೆ ಅಡ್ವೊಕೇಟ್ ಪರಮೇಶ್ವರಪ್ಪ ಬಂದು ಹೋದರೆಂದು ಸಂತೋಷವಾಗಿರಬೇಕು. ಎಲ್ಲವನ್ನೂ ಕ್ರಮೇಣ ಗೌರಿಗೆ ಹೇಳುತ್ತ ಬಂದ ವಿಮಲಳ ಅಭಿಪ್ರಾಯ ಇದು. ನೀವು ನಮಗೆ ಬೇಕು, ಬೇಗ ಗುಣವಾಗಿ ಎಂದು ಅವರು ಹೇಳಿ ಹೋದರಂತೆ.

ಮನೆಯಲ್ಲಿ ಅಕ್ಕುಗೆ ಮಗುವನ್ನು ಸಾಕಲು ನೆರವು, ವಿಮಲಳ ಮನೆಗೆ ಹೋಗಿ ಅವಳ ತಾಯ್ತನದ ಗುಪ್ತ ಪೋಷಣೆ – ಹೀಗೆ ಗೌರಿಯ ದಿನಗಳು ಕಳೆದವು.

ಚಂದು ಬೆಳಿಗ್ಗೆ ಹಾಲನ್ನು ಕುಡಿದದ್ದೇ ಕಕ್ಕಿ ಕೊಂಡ (ಕಕ್ಕಿದ ಮಕ್ಕಳು ದಕ್ತಾವೇಂತ ಅಕ್ಕು ಹೇಳೋದು);

ಇವತ್ತು ಬಿಕ್ಕಿದ (ಮಕ್ಕಳಿಗೂ ಪೂರ್ವದ್ದೇನೋ ನೆನಪಾಗಿಬಿಡತ್ತೇಂತ ಅಕ್ಕು ಹೇಳೋದು);

ಇವತ್ತಾ? ಸ್ವಲ್ಪ ಭೇದಿ ಮಾಡಿಕೊಂಡ; ವಾಯುವಾಗಿರಬೇಕು ಅಂತ ಅಕ್ಕು ಏನೋ ತೇದು ನೆಕ್ಕಿಸಿದಳು.

ಬೂದೀ ಹೊಂಡದ ನಾಯೀನ್ನ ನೋಡಿ ಕೈ ತಟ್ಟಿ ಗಟ್ಟಿಯಾಗಿ ನಕ್ಕ; ಆದರೆ ಅದು ಹತ್ತಿರ ಬಂದರೆ ಹೆದರ‍್ತಾನೆ;

ಸದಾ ಎತ್ತಿಕೊಂಡಿರು ಅಂತ ಅಕ್ಕೂನ್ನ ಸತಾಯಿಸ್ತಾನೆ; ಮುದ್ದು ಅತಿಯಾಗಿ ಕೆಟ್ಟು ಹೋಗ್ತಿದಾನೆ ಅಂತ ಮುದ್ದಿಸುತ್ತಲೇ ಅಕ್ಕು ಹೇಳ್ತಾಳೆ:

ಮಾವನ ಹಾಡುಗಳೆಂದರೆ ಬಲು ಇಷ್ಟ ಅವನಿಗೆ; ಅದೂ ಯಕ್ಷಗಾನದ ಹಾಡುಗಳು ಅಂದ್ರೆ;

ಮೈಯೆಲ್ಲ ಬಿಸಿಮಾಡಿದ ತೆಂಗಿನ ಎಣ್ಣೆ ಹಚ್ಚಿಸಿಕೊಂಡು ಎರಸಿಕೊಳ್ಳುವುದೆಂದರೆ ಆಸೆ – ಆದರೆ ಅಕ್ಕೂನೇ ಎರೀಬೇಕು;

ಮೈಮೇಲೆ ಬಟ್ಟೆ ಹಾಕಿಸಿಕೊಳ್ಳುವುದೆಂದರೆ ಅವನಿಗೆ ಆಗೇ ಆಗದು – ರಂಪ ಮಾಡ್ತಾನೆ;

ಮಗುಚಿಕೋತಿದಾನೆ ಈಗ, ಆದರೆ ಮಗುಚಿಕೊಂಡು, ಎತ್ತಿಕೋ ಅಂತ ಅಳಕ್ಕೆ ಶುರುಮಾಡ್ತಾನೆ –

ಇತ್ಯಾದಿ ಇತ್ಯಾದಿಯಾಗಿ ಚಂದುವಿನ ಬಾಲಲೀಲೆಗಳನ್ನು ವಿಮಲಳಿಗೆ ಹೇಳುತ್ತ ಎರಡು ತಾಯಂದಿರ ತಾಯ್ತನವನ್ನು ಗೌರಿ ಪೋಷಿಸಿದಳು. ಇಬ್ಬರೂ ಏಕವಚನದ ಸ್ನೇಹಿತೆಯರಾದ ನಂತರ ಎಲ್ಲೋ ಒಂದು ಸಲ ಮಾತ್ರ ಗೌರಿ ಕೇಳಿದ್ದಳು :

‘ಅವರಿಗೂ ಇದನ್ನೆಲ್ಲ ಹೇಳ್ತಿದಿ ತಾನೆ?’

ಇದರಿಂದ ವಿಮಲಗೆ ಸಂತೋಷವೇ ಆಗಿತ್ತು. ಒಂದೇ ಒಂದು ಸಲವಾದರೂ ಗೌರಿ ತನ್ನ ಮತ್ತು ಮಿಂಗೇಲಿಯ ಸಂಬಂಧದ ಬಗ್ಗೆ ಬಡಿವಾರದ ಸಹಾನುಭೂತಿಯನ್ನು ಪ್ರದರ್ಶಿಸಿದವಳಲ್ಲ.

೨೧

ಕೇಶವನಿಗೆ ಪುಟ್ಟೇಗೌಡನೆಂಬ ಸ್ನೇಹಿತನಿದ್ದಾನೆಯಲ್ಲವೆ?. ಮಾಧ್ಯಮಿಕ ಶಾಲೆಯ ತನಕ ಅವನ ಜೊತೆ ಓದಿದ ಏಕವಚನದ ಗೆಳೆಯ. ಹೀಗೆ ವಾರಿಗೆಯವ ಮಾತ್ರವಲ್ಲದೆ ತಾಳಮದ್ದಲೆಯ ಹುಚ್ಚಿನ ಮನುಷ್ಯ. ಏನೇನೋ ಓದಿಕೊಂಡವ. ಆಸು ಪಾಸಿನಲ್ಲಿ ಸಾಹುಕಾರರ ಮನೆ ಬಿಟ್ಟರೆ ಕನ್ನಡದಲ್ಲಿ ಇರುವ ಒಳ್ಳೆಯ ಪುಸ್ತಕಭಂಡಾರವೆಂದರೆ ಅವನದು. ಗೇಣಿದಾರರ ಸಂಘದಲ್ಲಿ ಅವನು ಕ್ರಿಯಾ ಶೀಲ. ಸತ್ಯಾಗ್ರಹ ಮಾಡಿ ಜೈಲಿಗೂ ಹೋದವ. ಚುನಾವಣೆಯಲ್ಲಿ ಸೋಷಲಿಸ್ಟರಿಗೆ ಇವನ ಬೆಂಬಲ. ತನ್ನ ಪಕ್ಷಕ್ಕೆ ವಿರೋಧಿಯಾದರೂ ಹಿಂದೆ ತಾನಾಡುತ್ತಿದ್ದ ಮಾತುಗಳನ್ನು ನೆನಪು ಮಾಡಿಕೊಡುವ ಉಗ್ರ ವಿಚಾರದ, ಆದರೆ ಸೌಮ್ಯ ಸ್ವಭಾವದ ಪುಟ್ಟೇಗೌಡನ ಮೇಲೆ ಮಂಜಯ್ಯನಿಗೂ ಅಭಿಮಾನ; ಗೇಣೀದಾರರ ಪರ ವಾದಿಸುವ ಪುಟ್ಟೇಗೌಡ ಮಂಜಯ್ಯನಿಗೆ ಕೊಡುಬೇಕಾದ ಗೇಣಿ ಉಳಿಸಿಕೊಂಡವನಲ್ಲ. ‘ಎಲ್ಲ ಗೇಣಿದಾರರೂ ನಿನ್ನ ಹಾಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ’ ಎಂದು ಮಂಜಯ್ಯ ಹೇಳಿದರೆ ಎಲ್ಲ ಜಮೀನುದಾರರೂ ನಿಮ್ಮ ಹಾಗಿದ್ದರೆ ಈ ಸಮಾಜದಲ್ಲಿ ಪ್ರಗತಿಯೇ ಆಗುತ್ತಿರಲಿಲ್ಲ ಎಂದು ಅವನು ನಗುತ್ತಾನೆ. ಘರ್ಷಣೆಗಳು ಸಮಾಜದ ಪರಿವರ್ತನೆಗೆ ಅಗತ್ಯ ಎನ್ನುವುದು ಅವನ ತಲೆಯಲ್ಲಿ ಹೊಕ್ಕುಬಿಟ್ಟಿದೆ. ಜಯಪ್ರಕಾಶ ನಾರಾಯಣರು ಬರೆದ ‘ಸಮಾಜವಾದ ಯಾಕೆ?’ ಎನ್ನುವ ಪುಸ್ತಕ ಓದಿದ ದಿನದಿಂದ.

ಕೇಶವನಿಗೂ ಅವನಿಗೂ ನಡುವೆ ಹುರುಪಿನ ವಾಗ್ವಾದಗಳು ನಡೆದಿವೆ. ಮುಖ್ಯವಾಗಿ ಬ್ರಾಹ್ಮಣ್ಯದ ಬಗ್ಗೆ. ಜಾತಿಯ ಆಚಾರಗಳ ಬಗ್ಗೆ. ಕುವೆಂಪುರವರನ್ನು ಓದಿ ಬೆಳೆದವನು ಪುಟ್ಟೇಗೌಡ. ‘ನಿರಂಕುಶಮತಿಗಳಾಗಿ’ ಎಂದು ಕುವೆಂಪು ಯುವಕರಿಗೆ ಕೊಟ್ಟ ಕರೆ ಅವನಿಗೆ ಬಲು ಪ್ರಿಯವಾದ್ದು. ‘ವಿವೇಕಾನಂದರಂತಹ ಬ್ರಾಹ್ಮಣೇತರರಿಂದ ಹಿಂದೂ ಧರ್ಮ ಉಳಿದಿರೋದು, ನಿಮ್ಮ ಮಠದ ಸ್ವಾಮಿಗಳಿಂದಲ್ಲ’ ಎನ್ನುತ್ತಾನೆ ಪುಟ್ಟೇಗೌಡ. ಅವನು ಬಂದಾಗ ಗೌರಿಯಿಂದ ಕಾಫಿ ಮಾಡಿಸುತ್ತಾನೆ ಕೇಶವ. ‘ಬ್ರಾಹ್ಮಣರು ಬಾಯಿಪಾಠ ಮಾಡಿ ಉಳಿಸದಿದ್ದರೆ ಈ ದೇಶದಲ್ಲಿ ಯಾವ ಪೂರ್ವ ಸ್ಮೃತಿಯೂ ಉಳಿದಿರುತ್ತಿರಲಿಲ್ಲ’ ಎಂದು ಕೇಶವ ಹೇಳಿದರೆ ‘ಆಗ ಈ ದೇಶ ಬದಲಾಗೋದು ಸುಲಭವಾಗಿರುತ್ತಿತ್ತೋ ಏನೊ’ ಎನ್ನುತ್ತಾನೆ ಪುಟೇಗೌಡ.

ನಡುಬೈತಲೆಯ ಗುಂಗುರು ಕೂದಲಿನ ಅವನ ನಗುಮುಖ ಗೌರಿಗೆ ಬಹಳ ಪ್ರಿಯವಾದ್ದು. ಎಲ್ಲದರಲ್ಲೂ ಅವನು ಕೊಂಚ ವಿಶೇಷವೆನ್ನಬೇಕು. ಅವನು ತೊಡುವುದು ಕೇಸರಿ ಬಣ್ಣದ ಉದ್ದನೆಯ ಜುಬ್ಬ, ದೊಗಳೆಯಾದ ಪೈಜಾಮ. ಜುಬ್ಬದ ಬಲಕ್ಕೂ ಜೇಬು, ಎಡಕ್ಕೂ ಜೇಬು. ಎಡದ ಜೇಬಿನಲ್ಲಿ ಒಂದು ಪೆನ್ನಿರಲೇಬೇಕು. ಬಲದಲ್ಲಿ ಒಂದು ಡೈರಿ. ಅವನ ಪ್ರಕಾರ ಅದೇ ಅವನ ಪಂಚಾಂಗ. ಕಿಸೆಯಲ್ಲಿ ಏನಾದರೊಂದು ಪುಸ್ತಕವಿರಬೇಕು. ಚೀಲದಲ್ಲಿ ಒಂದು ಪೆಟ್ಟಿಗೆಯಲ್ಲಿ ಅವನ ವೀಳ್ಯದ ಸಾಮಗ್ರಿಗಳು. ಅದನ್ನು ಬಿಚ್ಚುವಾಗ ಗೌರಿ ಎದುರು ಇದ್ದರೆ ಒಂದು ಲವಂಗವನ್ನೂ ಏಲಕ್ಕಿಯನ್ನೂ ಎತ್ತಿ ಅವಳಿಗೆ ಕೊಡುತ್ತಾನೆ.

ಕೇಶವನ ಹತ್ತಿರ ತುಂಟಾಗಿ ಮಾತಾಡುವುದೆಂದರೆ, ಗೌರಿ ಬಿಟ್ಟರೆ, ಪುಟ್ಟೇಗೌಡ ಮಾತ್ರ. ಕುವೆಂಪುನಿಂದ ಕಸಿಗೊಂಡ ಭಾವುಕ ಪುಟ್ಟೇಗೌಡನಾದರೆ, ಕುಮಾರವ್ಯಾಸನಿಂದ ಕಸಿಯಾದವ ಕೇಶವ. ಆ ನಾರಣಪ್ಪನಿಂದ ನೀನು ಕೆಟ್ಟೇಹೋಗಿ ಬಿಟ್ಟಿ, ಭೋಳೆ ಭಟ್ಟನಾಗಿ ಬಿಟ್ಟಿ ಮಾರಾಯ ಎಂದು ಕಿಚಾಯಿಸುತ್ತಲೇ ‘ಊರ್ವಶಿ ಪ್ರಸಂಗಾನ್ನ ಸ್ವಲ್ಪ ಓದಿಬಿಡೋ ಮಾರಾಯ’ ಎಂದು ಕಾಡುತ್ತಾನೆ. ಇಬ್ಬರೂ ಕುಮಾರವ್ಯಾಸನ ಭಕ್ತರೇ. ‘ಕುಮಾರವ್ಯಾಸ ಇಲ್ದೆ ಇಲ್ಲಿನ ಹಾಳು ಮಳೆಗಾಲ ಕಳೆಯೋದು ಹೇಗೋ ಕೇಶವ?’ ಎಂದೇ ಅವನು ಕುಮಾರವ್ಯಾಸನ್ನ ಹೊಗಳೋದು. ‘ನಿನಗವನು ಹಲಸಿನಕಾಯಿ ಹಪ್ಪಳದ ಹಾಗೆ ಅನ್ನು’ ಎಂದು ಕೇಶವ ದೂರಿದರೆ, ‘ಬಿಡೋ ಬಿಡೋ ಕೃಷ್ಣನ್ನ ಕಂಡದ್ದೇ ಈ ನಿನ್ನ ಕವಿ ಒಳ್ಳೆ ಹೊಟ್ಟೆಬಾಕನ ಥರ ಆಡಲ್ವ? ಅವನಿಗೆ ಕೃಷ್ಣನ ರುಚಿ, ನಮಗೆ ಅವನ ರುಚಿ’ ಎಂದು ಪುಟ್ಟೇಗೌಡ ಹೊಗೆಸೊಪ್ಪು ತಿಕ್ಕುತ್ತಾನೆ.

‘ಅಲ್ಲೋ ಕೇಶವ ಭಟ್ಟ. ನೀನು ತಕಲೀಂದ ನೂಲು ತೆಗೀತ ಕೂತಾಗ ನನಗೇನು ಅನ್ನಿಸತ್ತೆ ಹೇಳಿ ಬಿಡಲ? ಒಂದು ಚೂರೂ ಹತ್ತಿ ಗಂಟಾಗದ ಹಾಗೆ ನುಣುಪಾಗಿ ಹತ್ತೀ ಉಂಡೇಂದ ನೀನು ನೂಲು ಹೇಗೆ ತೆಗೀತೀಯೋ ಹಾಗೇ ನಿನ್ನ ಮನಸ್ಸಿಂದ ಮಾತನ್ನ ತೆಗೀತೀಯಲ್ಲ ಮಾರಾಯ. ಈ ವೈಷ್ಣವ ಭಾಗವತರೇ ಹಾಗೆ ಅಂದುಕೋತೀನಿ ನಾನು. ನಿನಗೆ ಅನ್ನಿಸದೇ ಇದ್ದದ್ದನ್ನೂ ಎಲುಬಿಲ್ಲದ ನಾಲಗೆ ಅಂದು ತೋರಿಸಿ ಬಿಡತ್ತೆ. ಮಾತಿನ ನಿಪುಣರಿಗೆ ದೇವರು ಒಲಿಯೋಲ್ಲೋ ಭಟ್ಟ.’

‘ಉಗ್ಗೋವರಿಗೆ ಹಾಗಾದರೆ ದೇವರು ಒಲಿದು ಬಿಡ್ತಾನೇನೋ, ಏಯ್ ದಡ್ಡ ಶಿಖಾಮಣಿ? ನಿನ್ನ ಉಗ್ರಾತಿ ಉಗ್ರ, ಬ್ರಹ್ಮದ್ವೇಷಿ ಶಿವಭಕ್ತನೇ ಅಂತಾನೆ: ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ಗೌಡನ ವ್ಯಂಗ್ಯವನ್ನು ಗ್ರಹಿಸಿಯೂ, ಅವನ ಮಾತಿನ ತೀಟೆಯ ಗುಟ್ಟು ಗೊತ್ತಿರುವ ಕೇಶವ ಅನ್ನುತ್ತಾನೆ.

‘ನಿನ್ನ ಮಟ್ಟಿಗೆ ಹೇಳೋದಾದರೆ, ಅದರ ಮುಂದಿನ ‘ಲಿಂಗ ಮೆಚ್ಚಿ ಅಹುದು, ಅಹುದು ಎನ್ನುವಂತಿರಬೇಕು’ ಅನ್ನೋ ಮಾತನ್ನ ಕೊಂಚ ಬದಲಾಯಿಸಿಕೋ ಬೇಕಾಗತ್ತೆ’

ಕೇಶವ ಖುಷಿಯಾಗಿ ಪುಟ್ಟೇಗೌಡನ ವಾಕ್ ಚಾತುರ‍್ಯದ ಮುಂದಿನ ಮಾತಿಗೆ ಕಾಯುತ್ತಾನೆ. ಈ ಕುಶಾಲಿನ ಹಿಂದೆ ಕೇಶವ ತನ್ನೊಳಗೇ ಪಡುವ ಅಳುಕು ಇದೆ ಎಂಬುದು, ಅಂತರಂಗದ ಗೆಳೆಯರಲ್ಲವೆ?, ಇಬ್ಬರಿಗೂ ಗೊತ್ತು.

‘ನಮ್ಮ ಈ ಭಾಗವತ ಮಾತಾಡಕ್ಕೆ ಶುರುಮಾಡಿದರೆ, ಪೀರಾಂಬರಧಾರಿಯಾದ ಮಹಾ ಮಾತುಗಾರ ವಿಷ್ಣುಗೇ ರೋಸಿ ಹೋಗಿ ಭಕ್ತನ ಮಾತನ್ನ ನಿಲ್ಲಿಸಕ್ಕೆ ಏನು ಹೇಳ್ತಾನೆ ಗೊತ್ತ ಭಟ್ಟ?’

‘ಆ ಭಗವಂತನ ಮಾತನ್ನ ಕೇಳಿಸಿಕೊಂಡಂಥ ಮಾತಿನ ಜಿಪುಣರೂ, ಉಗ್ಗರ ಶಿಖಾಮಣಿಗಳೂ ಆದ ಗೌಡರೇ ಹೇಳಿ ಈ ಪಾಮರನನ್ನ ಅನುಗ್ರಹಿಸಬೇಕು’, ಕೇಶವ ತಕಲಿಯನ್ನು ಜೋರಾಗಿ ತಿರುಗಿಸಿ ನೆಲದ ಮೇಲೆ ಬಿಟ್ಟು ತನ್ನ ಕಿವಿಯಷ್ಟು ದೂರ ನೂಲನ್ನು ಎಳೆದು ಮೆಚ್ಚುಗೆಗಾಗಿ ಗೌಡನ ಮುಖ ನೋಡುತ್ತಾನೆ. ನೋಡು, ಇದು ಲಡ್ಡಲ್ಲ, ಬ್ರಹ್ಮ ಸಂಕಲ್ಪದ ಹುರಿ ಎಂದು ಗೌಡನಿಗೆ ಗೊತ್ತಾಗಲಿ ಎಂದು.

‘ಲಿಂಗ ಮೆಚ್ಚಿ ಶರಣನಿಗೆ ಮೆತ್ತಗೆ ಅಹುದು ಅಹುದು ಎಂದರೆ, ಭಗವಂತ ರೋಸಿ ನಿನಗೆ ಗಟ್ಟಿಯಾಗಿ ಹಾವ್ ದು, ಹಾವ್ ದು ಅಂತಾನೆ’

ಇಬ್ಬರಿಗೂ ಗೊತ್ತಿರುವ ಕನ್ನಡಾ ಜಿಲ್ಲೆಯ ಸೇರೆಗಾರನೊಬ್ಬ ನೆನಪಾಗಿ ಕೇಶವ ತಕಲಿಯನ್ನು ಕೆಳಗಿಟ್ಟು ನಗುತ್ತಾನೆ. ಕಿವಿಯಿಂದ ಕಿವಿಗೆ ಹರಡಿದ್ದ ನಾಟಕದ ಹಾಡೊಂದನ್ನ ಪುಟ್ಟೇಗೌಡನನ್ನು ಇನ್ನಷ್ಟು ಉತ್ತೇಜಿಸಲು ಹಾಡುತ್ತಾನೆ:

‘ಬ್ರಹ್ಮ ದ್ವೇಸಾ/ಮಾಡಿದೋರ ವಂಸ ನಾಸಾ…’

ಉದ್ದೇಶ ಪೂರ್ವಕವಾದ ‘ಸ’ಕಾರ ಪುಟ್ಟೇಗೌಡನ ಮಾಧ್ಯಮಿಕ ಶಾಲೆಯ ದಿನಗಳನ್ನು ನೆನಪಿಸಿ ಕಿಚಾಯಿಸಲೆಂದು.

ಪುಟ್ಟೇಗೌಡನೂ ಹುಡುಗನಾಗಿ ಬಿಡುತ್ತಾನೆ:

‘ಭಟ್ಟಾ ಭಟ್ಟಾ/ಕೋಳೀ ಸುಟ್ಟಾ/ನೆರಮನೆಗೆಲ್ಲ ನಾತಾ ಕೊಟ್ಟಾ’

ಅಕ್ಕಮ್ಮನಿಗೆ ಕೇಳಿಸದ ಪಿಸುಮಾತಿನಲ್ಲಿ ಮಾತ್ರ ಈ ಚೇಷ್ಟೆಗೆ ಅವಕಾಶ; ಗೌರಿಗೂ ಇದು ಕೇಳಿಸಬಾರದು. ‘ಭಟ್ಟಾ, ಭಟ್ಟಾ’ ಎಂದರೆ ಸಾಕು ಮುಂದಿನದು ಗ್ರಹೀತ. ಕೇಶವ ಹೊಡೆಯಲು ಹೋಗುವಂತೆ ಕೈ ಎತ್ತಬೇಕು, ಅಷ್ಟೆ. ಭಂಡತನದ ಸಲಿಗೆಯಲ್ಲಿ ಕೇಶವನ ಹಿನ್ನೋಟದ ಮಡಿ, ಗೌಡನ ಮುನ್ನೋಟದ ಛಲ – ಎರಡೂ ಮಾಯವಾಗಿಬಿಡುತ್ತವೆ.

ಪುಟ್ಟೇಗೌಡನಿಗೆ ಕೇಶವ ಎಲೆಯಡಿಕೆ ಕೊಟ್ಟು, ತಾನೂ ಹಾಕಿಕೊಂಡು ನಗುತ್ತ ಹೇಳುತ್ತಾನೆ:

‘ಮಾರಾಯ, ವಾದಕ್ಕಾಗಿ ಏನದರೂ ಹೇಳೋವ ನೀನು; ಪ್ರತಿವಾದಿ ಭಯಂಕರ, ನಿನಗೂ ಮಾತಿನ ಚಟಾನೇ. ಪುರಾಣ ಹೇಳೋ ಈ ನನ್ನಂತಹ ದಾಸಯ್ಯನ ಹಾಗೇನೇ ಎಂದು ಬಿಡ್ತಿ, ಗೊತ್ತು. ಹೊಟ್ಟೇ ಹೊರಕೊಳ್ಳೋಕೆ ನನಗೆ ಮಾತು ಬೇಕು; ಆದರೆ ಕಾಲತಳ್ಳೋ ಕುಹಕಕ್ಕೆ ನಿನಗೆ ಮಾತುಬೇಕು. ಅಂದರೆ ಅರ್ಥ, ನಾನೂ ನೀನೂ ವಾದ ಮಾಡಿ ಯಾವ ಪುರುಷಾರ್ಥವನ್ನೂ ಸಾಧಿಸಿದ ಹಾಗಾಗಲ್ಲ. ಕಾಫಿ ಕುಡೀತೀಯ ಹೇಳು. ಈ ಬ್ರಾಹ್ಮಣನಿಗೂ ಆಸೆಯಾಗಿದೆ.’

ಚೀಲದಿಂದ ತಾನು ತಂದ ತೆಂಗಿನಕಾಯಿಗಳನ್ನು ‘ಗೌರಮ್ಮಾ’ ಎಂದು ಗೌರಿಗೆ ಕೊಟ್ಟು ‘ಮನೇದು, ಅಕ್ಕಮ್ಮನಿಗೆ ಕೊಡಿ’ ಎಂದು ಹೇಳಿದವನೇ, ಕೇಶವನ ಕಡೆ ತಿರುಗಿ, ಕಣ್ಣು ಮಿಟುಕಿಸಿ, ‘ಭೋಜನಪ್ರಿಯ ಬ್ರಾಂಬ್ರಿಗೆ ಶೂದ್ರನ ದಕ್ಷಿಣೆ’ ಎಂದು ರೇಗಿಸುತ್ತಾನೆ.

ಮರೆಯಲ್ಲಿದ್ದು ಎಲ್ಲ ಮಾತನ್ನೂ ಕೇಳಿಸಿಕೊಂಡು ಸುಖಪಡುವ ಗೌರಿ, ತಾನು ಓದಿದ ಕಾದಂಬರಿಗಳಲ್ಲಿ ಈ ಪುಟ್ಟೇಗೌಡ ಯಾರ ಹಾಗೆ ಎಂದು ಹುಡುಕುತ್ತಾಳೆ. ಅವಳಿ – ಜವಳಿಗಳಾದ ಈ ಗೆಳೆಯರಲ್ಲಿ ಅವಳ ಪಾಲಿಗೆ ಒಬ್ಬ ಕೇಶವ ಗೌಡನಾದರೆ, ಇನ್ನೊಬ್ಬ ಪುಟ್ಟಣ್ಣ ಭಟ್ಟ. ಹಾಗೆಂದು ಒಂದು ದಿನ ಹೇಳಿ ಅವಳು ಇಬ್ಬರನ್ನೂ ನಗಿಸಿದ್ದಾಳೆ.

ಈ ಪುಟ್ಟೇಗೌಡ ಬಂದದ್ದೇ ಕೇಶವನಿಗೆ ಖುಷಿ – ಆರಾಮಾಗಿ ಬಂದು, ಕಾಫಿ ಕುಡಿದು, ಬೇಳೇಸಾರು ಹುಣಿಸೇ ಗೊಜ್ಜಿನ ಪುಳಿಚಾರು ತಿಂದು, ತನ್ನ ಎಲೆಯನ್ನು ತಾನೇ ಎತ್ತಿ, ಆ ಬಗ್ಗೆ ಕೇಶವನನ್ನು ಹಾಸ್ಯಮಾಡಿ, ಆದರೆ ಅಕ್ಕವ್ವನನ್ನು ಗೌರವದಿಂದ ಮಾತಾಡಿಸಿ, ಗೌರಿಯ ಕಾಫಿಯನ್ನು ಹೊಗಳಿ, ಅವನು ಹೋಗುತ್ತಾನೆ. ಯಾವತ್ತಿನಿಂದಲೋ ಅವನು ಗಾಂಧಿಯನ್ನು ಓದಿ ಶುದ್ಧ ಶಾಕಾಹಾರಿಯಾಗಿ ಬಿಟ್ಟಿದ್ದ. ಅವನು ಪೂಜಿಸುವುದು ಪರಮಹಂಸರನ್ನ.

‘ನಾವು ನಾಮಧಾರಿಗೌಡರು ಕಣೋ, ಒಂದು ಕಾಲದಲ್ಲಿ ನಾವು ಜೈನರಿರಬೇಕು. ಬಾಡು ಅಂದ್ರೆ ಆಸೆಪಟ್ಟು ಜಾತಿ ಕಳಕೊಂಡವರು. ಇವತ್ತಿಗೂ ವಿಶೇಷದ ದಿನ ಪಿತೃಗಳಿಗೆ ಜೈನೆಡೆ ಅಂತ ನಾವು ಇಡುತೀವಿ. ಗೊತ್ತ? ವಾದದಲ್ಲಿ ಜೈನರಿಗೆ ಸಮ ಬ್ರಾಂಬ್ರು ಅಲ್ಲವಂತೆ. ಈಗ ಬಿಡು ಜೈನರೂ ಒಂದೆ, ಬ್ರಾಂಬ್ರೂ ಒಂದೆ. ಬ್ರಾಂಬರ ಮಕ್ಕಳೆಲ್ಲ ಮೊಟ್ಟೆ ತಿನ್ನಕ್ಕೆ ಶುರುಮಾಡಿ ಮೊಟ್ಟೆಬೆಲೆ ಗಗನಕ್ಕೇರಿ ಬಿಟ್ಟಿದೆ.’

ಅವತ್ತೊಂದು ದಿನ ಬಂದ ಪುಟ್ಟೇಗೌಡ ಕುಶಾಲಿನ ಯಾವ ಮಾತಿಗೂ ಹೋಗದೆ ಗಂಭೀರವಾಗಿ ಗೇಣಿದಾರರ ಸಂಘದ ಬಗ್ಗೆ ಮಾತಿಗೆ ಶುರುಮಾಡಿದ. ತನ್ನ ಎಲ್ಲ ವಿಚಾರಗಳನ್ನೂ ಅವನು ಕೇಶವನಿಗೆ ಹೇಳಬೇಕು; ತಕಲಿ ತಿರುಗಿಸುತ್ತ ಕೇಶವ ಕೇಳಿಸಿಕೊಳ್ಳಬೇಕು. ಆದರೆ ಅವತ್ತು ಅವನ ಮಾತಿನ ಹಿಂದೆ ಏನೋ ವಿಶೇಷವಿರುವಂತೆ ಕೇಶವನಿಗೆ ಅನ್ನಿಸಿದ್ದರಿಂದ ತಕಲಿಯನ್ನು ಕೆಳಗಿಟ್ಟು ಗೌರಿಗೆ ಹೇಳಿ ಕಾಫಿ ಮಾಡಿಸಿದ. ಗೌರಿಗೂ ಇವತ್ತೇನೋ ವಿಶೇಷವೆನ್ನಿಸಿ ಅವಳೂ ಒಂದು ಮೂಲೆಯಲ್ಲಿ ಕೂತಳು.

ಅಕ್ಕು ಬಾಗಿಲಲ್ಲಿ ಕಾಣಿಸಿಕೊಂಡು, ‘ಹಾಗೇ ಹೋಗಿಬಿಡೋದಲ್ಲ. ಪುಟ್ಟಣ್ಣ ಇವತ್ತು ಗೊಜ್ಜನ್ನವನ್ನು ತಿಂದೇ ಹೋಗೋದು’ ಎಂದಳು. ಅಕ್ಕಮ್ಮನ ಮಾತೆಂದರೆ ಅವನಿಗೆ ಆಜ್ಞೆಯಿದ್ದಂತೆ. ಕವಳಹಾಕಿ ಗೌಡ ಮಾತಿಗೆ ಕೂತ.

ಮಂಜಯ್ಯನಿಂದ ಸುಳ್ಳು ಸಾಕ್ಷ್ಯ ಹೇಳಿಸಿ, ಅವಮಾನಗೊಳಿಸಿ, ಗಣಪಯ್ಯನಂತಹ ಕಟುಕನಿಗೆ ಪರವಾಗಿ ನಿಂತ ಜಮೀನುದಾರರನ್ನೆಲ್ಲ ಮನಸಾರೆ ಹಳಿದ. ಅವನಿಗೆ ತನ್ನ ಜಾತಿಯ ಜಮೀನುದಾರರೆಂದರೆ ಇನ್ನೂ ಹೆಚ್ಚು ಹೇಸಿಗೆ.

‘ಬ್ರಾಹ್ಮಣರು ತಮ್ಮ ಜಾತಿಯಲ್ಲಿ ಬಡವರು ಮನೇಗೆ ಬಂದರೆ, ಅವರು ವಯಸ್ಸಿನಲ್ಲಿ ಹಿರಿಯರಾಗಿದ್ದರೆ ಎಂಥ ಶ್ರೀಮಂತನೂ ಅವನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾನೆ. ಆದರೆ ನಮ್ಮ ಜನ ಮಾತ್ರ ಜಾತಿಯವನಾದರೂ ಅವನ ಬಡವನಾದರೆ ಅವನಿಗೊಂದು ಕಂಬಳಿ ಎಸೆದು ಹೊರಗೆ ಬಿದ್ದುಕಂಡಿರೋ ಎಂದರೆ ಅವ ಕರುಣೆಯ ಮನುಷ್ಯನೇ ಇರಬೇಕೆಂದು ಅರ್ಥ ನೋಡಿ’

ಅಕ್ಕು ಅಡುಗೆ ಮನೆಯಲ್ಲಿ ಹಾಕುವ ಒಗ್ಗರಣೆಯ ವಾಸನೆಯಿಂದ ಪುಟ್ಟೇಗೌಡ ಇನ್ನಷ್ಟು ಉತ್ತೇಜಿತನಾಗಿದ್ದ. ಗೌರಿ ತೊಡೆಯಮೇಲೆ ಮಗುವನ್ನು ಮಲಗಿಸಿಕೊಂಡು ಆಡಿಸುವುದನ್ನು ನೋಡುತ್ತ ಭಾವುಕನಾಗಿಯೂ ಬಿಟ್ಟಿದ್ದ.

‘ಗೊತ್ತ ಕೇಶವ. ಗೌರಮ್ಮನೂ ಇದನ್ನು ಕೇಳಿಸಿಕೊಬೇಕು. ಆ ಗಣಪಯ್ಯನ ಮಗಳು ದುರುಗಪ್ಪ ಎಂಬ ಅಸ್ಪೃಶ್ಯನನ್ನ ಮದುವೆಯಾಗೋಕೆ ಹೊರಟು ಅಷ್ಟೆಲ್ಲ ಅವಾಂತರವಾದ್ದಲ್ಲವೆ? ಆದರೆ ಬಸಿರಾದ ಹುಡುಗಿಯ ಅಮ್ಮನ ಧೈರ್ಯ ಕೇಳಿದಿಯಾ? ಹಲ್ಕಟ್ ಗಣಪಯ್ಯ ಮಗಳ ಗರ್ಭಾನ್ನ ತೆಗೆಸಬೇಕೂಂತ ಏನೇನೋ ಪ್ರಯತ್ನ ಮಾಡಿದನಂತೆ. ಆದರೆ ಆ ಹುಡುಗಿ ಸಾಧ್ಯವೇ ಇಲ್ಲ ಅಂತ ಕೂತು ಬಿಟ್ಟಳಂತೆ ಹಠಹಿಡಿದು. ಅದೇನೂ ದೊಡ್ಡದಲ್ಲ ಈ ಕಾಲದ ಹುಡುಗಿ ಅಂತ ಅನ್ನಬಹುದು ನೀವು. ಆದರೆ ಆಶ್ಚರ್ಯ ಎಂದರೆ ಅವಳ ತಾಯಿ, ಯಮುನಮ್ಮ ಮಗಳಿಗೆ ಬೆಂಬಲವಾಗಿ ನಿಂತು ಮಗಳ ಬಾಣಂತನ ಮಾಡೇ ಬಿಟ್ಟಳಂತೆ. ಕ್ರಾಂತಿಯೆಂದರೆ ಇದು. ಆ ಅಮ್ಮನ ಕಾಲುಮುಟ್ಟಿ ನಮಸ್ಕಾರ ಮಾಡಿ ಬರಬೇಕು ಅಂತ ನನಗೆ ಅನ್ನಿಸಿದೆ. ಒಂದಿನ ಹೋಗೇ ಹೋಗ್ತೀನಿ. ತೀರ್ಥಹಳ್ಳೀಲೆಲ್ಲ ಇದೇ ಸುದ್ದಿ. ಆ ಪ್ರಾರಬ್ದದ ಗಣಪಯ್ಯಗೆ ಗಲ್ಲಿ ಶಿಕ್ಷೆ ಕೊಟ್ಟಿದಾರಂತೆ. ಜೈಲಲ್ಲಿ ಇದ್ದಾನೆ. ಆ ಅಮ್ಮ ಅವನನ್ನ ಹೋಗಿ ನೋಡಿಯೇ ಇಲ್ಲವಂತೆ. ಮನೇನ ಸ್ವಾಧೀನಕ್ಕೆ ತಗೊಂಡು ಅಮ್ಮನೇ ವೈವಾಟನ್ನೆಲ್ಲ ನೋಡಿಕೋತಿದಾರಂತೆ. ಎಲ್ಲ ಗೇಣಿದಾರರ ಬೆಂಬಲ ಖಂಡಿತ ಅವರಿಗಿರುತ್ತೆ; ಇರೋ ಹಾಗೆ ನಾನು ನೋಡಿಕೋತೀನಿ.

ಇನ್ನೂ ಹೆಚ್ಚಿನ ವಿಷಯ ಒಂದಿದೆ; ಹೇಳ್ತೀನಿ. ಆ ಹುಡುಗಿ, ಸರಸ್ವತಮ್ಮ, ನಿಮ್ಮ ಗೌರಮ್ಮನಿಗಿಂತ ಸ್ವಲ್ಪ ದೊಡ್ಡವರಿರಬೇಕು, ಅಷ್ಟ, ದಾವಣಗೆರೇಂದ ದುರುಗಪ್ಪನ ಅಪ್ಪನ್ನ, ಅಂದರೆ ಮೋಚಿಜಾತಿಯ ತನ್ನ ಮಾವನ್ನ, ಕರೆಸಿಕೊಂಡು ಅವನ ಪಾದದ ಮೇಲೆ ಮಗೂನ್ನ ಇಟ್ಟು ನಮಸ್ಕಾರ ಮಾಡಿದಳಂತೆ. ಆ ಹುಡುಗಿ ಒಬ್ಬಳು ದೇವೀನೇ ಇರಬೇಕು ಅನ್ನಿಸ್ತು ನನಗೆ…’

ಕುಡಿಯೆಲೆಯಮೇಲೆ ಅಕ್ಕಮ್ಮ ಬಡಿಸಿದ ದಿಂಡುಮಾವಿನ ಗೊಜ್ಜನ್ನೂ, ಅವನು ತಂದಿದ್ದ ತೊಂಡೇಕಾಯಿಯಿಂದ ಮಾಡಿದ ಪಲ್ಯವನ್ನೂ, ಅವನಿಗೆ ಇಷ್ಟವೆಂದು ಅವನಿಗಾಗಿ ಮಾಡಿದ ಒಗ್ಗರಣೆಯ ಘಮಘಮದ ತಿಳಿಸಾರನ್ನೂ ಯಥೇಷ್ಟ ತಿಂದು, ಅಕ್ಕಮ್ಮ ಕಂಚಿಕಾಯಿಯಿಂದ ಮಾಡಿದ ಉಪ್ಪಿನ ಕಾಯಿಯನ್ನು ಹೊಗಳಿ, ಇನ್ನೊಮ್ಮೆ ಬರುವಾಗ ಕಂಚಿಕಾಯಿಯನ್ನು ತಂದುಕೊಡುವೆನೆಂದು ಹೇಳಿ, ಊಟವಾದ ಮೇಲೆ ಎಲೆಯನ್ನು ಎತ್ತಿ ಗೊಬ್ಬರದ ಗುಂಡಿಗೆ ಎಸೆದು, ಗೋಮಯ ಹಾಕಿ ತಾನು ಊಟ ಮಾಡಿದ ಜಾಗವನ್ನು ಸ್ವಚ್ಛಗೊಳಿಸಿ, ಪೇಟೆಯಿಂದ ಕೊಂಡು ತಂದ ಗಲಿಗಿಚ್ಚಿಯನ್ನು ಮಗುವಿಗೆ ಕೊಟ್ಟು ಪುಟ್ಟೇಗೌಡ ಹೊರಟ. ಕೇಶವನ ಊಟವಾಗಿರಲಿಲ್ಲ. ಚಿಟ್ಟೆಯ ಮೇಲೆ ಊಟಮಾಡಲು ಗೌಡನನ್ನು ಮಾತ್ರ ಕೂರಿಸಿ, ಅವನು ಹೇಗೆ ಒಳಗೆ ಕೂತು ಊಟಮಾಡಿಯಾನು?

ಪುಟ್ಟೇಗೌಡನ ಆವೇಶದ ಮಾತುಗಳನ್ನು ಕೇಳಿಸಿಕೊಳ್ಳುತ್ತ ಗೌರಿ ಥಟ್ಟನೆ ಒಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದಳು.

ಅವನು ಹೋದದ್ದೇ ಸೀರೆ ಸೆರಗನ್ನು ಸೊಂಟಕ್ಕೆ ಕಟ್ಟಿ ಸರಸರನೆ ದೇವನಹಳ್ಳಿಗೆ ನಡೆದಳು.