೨೨

ಮಿಂಗೇಲಿ ಪಾಗಾರದ ಒಳಗೆ ಒಂದು ಮರದ ನೆರಳಿನ ಕಲ್ಲು ಬೆಂಚಿನಮೇಲೆ ಕೂತು ಸಿಗರೇಟ್ ಸೇದುತ್ತಿದ್ದ. ಅವನ ಕೈಯಲ್ಲಿ ಒಂದು ಇಂಗ್ಲಿಷ್ ಪೇಪರ್ ಇತ್ತು; ಡಾಕ್ಟರನ್ನು ಬೆಳಿಗ್ಗೆ ತೀರ್ಥಹಳ್ಳಿಯಿಂದ ಕರೆದುಕೊಂಡು ಬರುವಾಗ ಅವನು ತಂದದ್ದು. ಸಾಹುಕಾರರನ್ನು ಪರೀಕ್ಷೆ ಮಾಡಿ ರೋಗಿಯ ಸಮಾಧಾನಕ್ಕಾಗಿ  ಒಂದು ಇಂಜೆಕ್ಷನ್ ಕೊಡಲು ಈ ಡಾಕ್ಟರ್ ಬರುತ್ತಿದ್ದರು. ಮಿಂಗೇಲಿ ಈ ಕ್ರಿಶ್ಚಿಯನ್ ಡಾಕ್ಟರನ್ನು ಒಂದೋ ಕೊಂಕಣಿಯಲ್ಲಿ ಅಥವಾ ಇಂಗ್ಲಿಷಿನಲ್ಲಿ ಮಾತಾಡಿಸುವುದು. ಕೊಂಕಣಿಯಲ್ಲಿ ಮಾತಾಡುವಾಗ ಡಾಕ್ಟರ್ ಡಿಸೋಜರು ಅವನನ್ನು ಮಿಂಗೇಲಿಯೆಂದು ಕರೆಯುವುದು; ಇಂಗ್ಲಿಷಿನಲ್ಲಿ ಮಾತ್ರ ಮಿಂಗೇಲಿ ಅವರ ಬಾಯಲ್ಲಿ ಮಿಸ್ಟರ್ ಮೈಕೇಲ್ ಆಗುತ್ತಿದ್ದ. ಆದ್ದರಿಂದ ಮಿಂಗೇಲಿ ಜನರಿದ್ದಾಗ ಏನಾದರೂ ಮಾಡಿ ಇಂಗ್ಲಿಷಿನಲ್ಲೇ ತನ್ನ ಜೊತೆ ಮಾತಾಡಲು ಪ್ರಯತ್ನಿಸುವುದರ ಬಗ್ಗೆ ಅವರಿಗೆ ಸಹಾನುಭೂತಿ ಇತ್ತು. ಈ ಮನೆಯಲ್ಲಿ ಅವನ ಸ್ಥಾನದ ಬಗ್ಗೆ ಎದ್ದಿರುವ ಗುಪ್ತ ಸಮಸ್ಯೆ ಅವರ ಕಿವಿಗೂ ಬಿದ್ದಿರಲೇಬೇಕು.

ಡಾಕ್ಟರ್ ಡಿಸೋಜರು ಹೊರಬರುತ್ತಿದ್ದಂತೆಯೇ ಗೌರಿ ಪಾಗಾರದ ಒಳಗೆ ಬಂದಿದ್ದಳು. ಮಿಂಗೇಲಿ ಡಾಕ್ಟರನ್ನು ನೋಡಿದ್ದೇ ಎದ್ದು ಸಿಗರೇಟನ್ನು ಕಲ್ಲುಬೆಂಚಿಗೆ ನುರಿದ. ಸ್ವಲ್ಪ ಗಟ್ಟಿಯಾಗಿಯೇ, ತನ್ನನ್ನೇ ಗಟ್ಟಿಗೊಳಿಸಿಕೊಳ್ಳುವವನ ಹಾಗೆ ಸ್ವಲ್ಪ ಅಸಹಜವಾಗಿಯೇ, ‘ಸರ್, ಶಲ್ ವಿ ಗೋ’ ಎಂದ. ‘ಐ ಆರ್ ರೆಡಿ ಟು ಗೋ, ಆರ್ ಯು, ಮಿಸ್ಟರ್ ಮೈಕೇಲ್’ ಎಂದರು ಡಿಸೋಜ. ತನ್ನ ಗಟ್ಟಿ ಧ್ವನಿ ಪ್ರೇರೇಪಿಸಿದ ಗಟ್ಟಿಯಲ್ಲಯೇ ಡಿಸೋಜರೂ ಮಾತಾಡಿದರೆಂದು ಮಿಂಗೇಲಿಗೆ ಖುಷಿಯಾದಂತೆ ಗೌರಿಗೆ ಕಂಡು, ಅವಳು ಕೊಂಚ ಖಿನ್ನಳಾದಳು. ಅವಳಿಗೆ ವಿಮಲಳ ಗುಟ್ಟಿನಿಂದ ಹುಟ್ಟಿಕೊಂಡ ವಾತಾವರಣ ಅಸಹ್ಯವೆನ್ನಿಸಿತ್ತು. ದೊರೆಮನೆಯಂತಹ ದೇವನಹಳ್ಳಿಯ ಮನೆಯನ್ನು ಈ ಗುಟ್ಟು ವಿಕಾರಗೊಳಿಸಿತ್ತು.

ವಿಮಲಗೆ ಗೌರಿಜೊತೆ ಏಕವಚನದಲ್ಲಿ ಮಾತಾಡುವುದು ಸಾಧ್ಯವಾದ ಮೇಲೆ ತನ್ನ ಪ್ರಣಯದ ಎಲ್ಲ ಗೋಳುಗಳನ್ನೂ, ಸಂದಿಗ್ಧಗಳನ್ನೂ ಹೇಳಿಕೊಳ್ಳತೊಡಗಿದ್ದಳು.

ಒಂದು ಸಂಜೆ ಗೌರಿಯ ಜೊತೆ ಮಾವಿನ ಹಣ್ಣು ತಿನ್ನುತ್ತ ವಿಮಲ ಹೇಳಿದಳು:

‘ಈಗ ಎಲ್ಲರಿಗೂ ಗೊತ್ತಾಗಿರಬಹುದು, ಆಳುಗಳಿಗೂ ಸಹ’

ಗೌರಿ ನಗಲು ಶುರುಮಾಡಿದಳು. ನಿಸ್ಸಂಕೋಚವಾಗಿ ಬಾಯಿಗೆ ಬಂದದ್ದನ್ನು ಹೇಳಿಯೇ ಬಿಟ್ಟಳು:

‘ಇದೇನೂ ನಿನ್ನ ಪ್ರಣಯದ ಗೋಳಲ್ಲ; ಇದು ಐಶ್ವರ್ಯದ ಗೋಳು’

ವಿಮಲಗೆ ಈ ಮಾತು ಕೇಳಿ ಇಷ್ಟವಾಗಿತ್ತು. ಗೌರಿ ಹೇಳಿದ್ದು ನಿಜವೆಂದೂ ಅನ್ನಿಸಿತ್ತು.

ಗೌರಿ ತನಗೆ ಅನ್ನಿಸಿದ್ದನ್ನೆಲ್ಲ ಈ ಮಾತಿನ ನಂತರ ಹೇಳಿಬಿಟ್ಟಿದ್ದಳು.

‘ಗೊತ್ತಿದ್ದರೂ ಗೊತ್ತಿಲ್ಲದವರಂತೆ ಈ ಮನೆಯಲ್ಲಿ ಎಲ್ಲರೂ ಬದುಕಬೇಕಾಗಿ ಬಂದಿದೆಯಲ್ಲ – ಅದೇ ಅಸಹ್ಯ ಎನ್ನಿಸತ್ತೆ. ಪಾಪ, ನಿನ್ನ ಗಂಡನಿಗೆ (ಮಿಂಗೇಲಿಯೆನ್ನಬೇಕೊ, ಮೈಕೇಲ್ ಎನ್ನಬೇಕೊ ಗೌರಿಗೆ ತಿಳಿಯದು. ಆದ್ದರಿಂದ ವಿಮಲಳ ಪ್ರಪಂಚದಲ್ಲಿ ಗೌರಿ ಮಾತ್ರ ಅವನನ್ನು ‘ಗಂಡ’ ಎಂದು ಕರೆಯೋದು, ವಿಮಲಳ ಹತ್ತಿರ) ತಾನೆಲ್ಲಿ ಕೂರಬಹುದು, ಎಲ್ಲಿ ಕೂರಬಾರದು ಈ ದೊಡ್ಡ ಮನೆಯಲ್ಲಿ ಎಂದು ತಿಳೀತಾ ಇಲ್ಲ. ಪಾಪ, ಆ ಕಲ್ಲು ಬೆಂಚಿನ ಮೇಲೇ ತೋಟಾನ್ನ ನೋಡ್ತ ಸಿಗರೇಟು ಸೇದ್ತ ಸುಮ್ಮನೇ ಕೂತಿರ‍್ತಾರೆ. ಅವರನ್ನ ನೋಡಿದಾಗ ನನಗೆ ಇಂಥ ಮನೇಲಿ ಹುಟ್ಟಿಬೆಳೆಯೋದೆ ಒಂದು ಶಾಪ ಎನ್ನಿಸಿಬಿಡತ್ತೆ.’

ಗೌರಿ ಹೇಳೋದು ವಿಮಲಗೂ ನಿಜವೆನ್ನಿಸಿತ್ತು. ಪಡಸಾಲೆಯಲ್ಲಿ ಅವನು ಕೂರಲಾರ. ಹೊರಗಿಂದ ಬಂದವರೋ, ಮನೆಯವರೋ ಮಾತ್ರ ಕೂರಬಹುದಾದ ಮೆತ್ತೆ ಹಾಕಿದ ಖುರ್ಚಿಗಳು ಅವು. ಸ್ಥಿರವಾದ ತಾರತಮ್ಯಗಳನ್ನು ಕಣ್ಣಿಗೆ ರಾಚುವಂತೆ ಘೋಷಿಸುವ ಮನೆ ತಮ್ಮದು. ಈಗಿರುವಂತೆ ಅವನು ಪಡಸಾಲೆಯಲ್ಲಿ ಕೂತರೆ, ಅದನ್ನು ಮನೆಯ ಆಫೀಸಿನ ಜನ ಕಂಡರೆ ರಾದ್ಧಾಂತವಾಗಿಬಿಡುವುದು ಖಂಡಿತ.

ಯಾಕೆಂದರೆ, ಮಿಂಗೇಲಿಯೊಬ್ಬ ಜೂನಿಯರ್ ಡ್ರೈವರ್, ಅವನಿಗೆ ಮೇಲಿನವನೊಬ್ಬನಿದ್ದಾನೆ. ಅವನು ತಂದೆಯ ಡ್ರೈವರ್, ಯೂನಿಫಾರಂ ಹಾಕುತ್ತಾನೆ; ಮಿಂಗೇಲಿಗೆ ಅವನೂ, ಪಾರುಪತ್ಯದಾರನೂ ಬಳಸುವುದು ಏಕವಚನ. ತಾನು ಅವನನ್ನು ಮದುವೆಯಾದೆನೆಂದರೆ ಅದು ಬಹುವಚನವಾಗಬೇಕಾಗುತ್ತದೆ. ಇದು ಎಲ್ಲರಿಗೂ ಕಷ್ಟದ ಸಂಗತಿ. ತಾರತಮ್ಯಗಳನ್ನು ಪಾಲಿಸದೆ ಇಲ್ಲಿ ದಿನಗಳನ್ನು ಕಳೆಯುವಂತಿಲ್ಲ.

ಮಿಂಗೇಲಿ ಈ ಕಷ್ಟಗಳನ್ನು ನಿರ್ವಹಿಸಲು ಇಂಗ್ಲಿಷಿನಲ್ಲಿ ಮಾತಾಡುತ್ತಾನೆ; ಸದಾ ಪ್ಯಾಂಟನ್ನೇ ತೊಟ್ಟು ಸಿಗರೇಟು ಸೇದುತ್ತಾನೆ; ಉಳಿದ ಪರಿಚಾರಕರಿಗೆ ಹೊಟ್ಟೆಗಿಚ್ಚಾಗುವಂತೆ ಶಿಸ್ತಾಗಿ ಕಾಣಿಸಿಕೊಳ್ಳುತ್ತಾನೆ. ಮಿತಭಾಷಿಯಾಗಿ ಎಲ್ಲರ ಜೊತೆ ವ್ಯವಹರಿಸುತ್ತಾನೆ. ತನ್ನನ್ನು ಎಲ್ಲಿ ಮನೆಯ ಆಳುಗಳೂ ಏಕವಚನದಲ್ಲಿ ಕರೆದರೊ ಎಂಬ ಭಯದಿಂದ ಎಲ್ಲರನ್ನೂ ಅವನು ಬಹುವಚನದಲ್ಲೇ ಮಾತಾಡಿಸಿ ನಾಟಕೀಯ ವರ್ತನೆಯ ಹಾಸ್ಯಾಸ್ಪದನಾದ ಪಾತ್ರಧಾರಿಯೆಂಬಂತೆ ಕಾಣತೊಡಗಿದ್ದಾನೆ. ಈ ಮನೆಯ ಪ್ರತಿ ಸ್ಥಳವೂ, – ಹೊರಗಿನ ಚಾವಡಿ, ಒಳಗಿನ ಪಡಸಾಲೆ, ಇನ್ನೂ ಒಳಗಿನ ನಡುಮನೆ, ಅಡುಗೆ ಮನೆ ಊಟದ ಮನೆ ಬಚ್ಚಲ ಮನೆ – ಎಲ್ಲವೂ, ಅವರವರ ಅಂತಸ್ತನ್ನು ಮುಗುಮ್ಮಾಗಿ ನಿರ್ಣಯಿಸುವುದರಿಂದ ಮಿಂಗೇಲಿ ನಿತ್ಯ ಊಟ ಮಾಡುವುದು, ಅದೂ ವಿಮಲಳ ತೀರ್ಮಾನದಿಂದಾಗಿ, ಹೊಸದಾಗಿ ಸಿಮೆಂಟಿನಲ್ಲಿ, ಬೆಂಗಳೂರಿನ ಆಧುನಿಕ ಮಿತ್ರರಿಗೆಂದು, ಕಟ್ಟಿಸಿದ ‘ಡೈನಿಂಗ್ ಹಾಲಿ’ನಲ್ಲಿ. ಇಲ್ಲಿ ಆಮ್ಲೆಟ್, ಮೊಟ್ಟೆಸಾರುಗಳನ್ನು ಮಾಡಬಲ್ಲ ‘ಕುಕ್’ ಕೂಡ ಇದ್ದಾನೆ.

ಈ ಮನೆಯಲ್ಲಿ ತಾನು ಮಿಂಗೇಲಿ ಜೊತೆ ಕೂಡಿದ್ದೇ ಇಲ್ಲವೆಂದು ವಿಮಲ ಹೇಳಿ ಗೌರಿಯನ್ನು ನಾಚಿಸಿದ್ದಳು. ಕತ್ತಲಲ್ಲಿ ಕಾಡುದಾರಿಯಲ್ಲಿ ಡ್ರೈವ್ ಮಾಡುವಾಗ ಕಾರಿನಲ್ಲಿ; ಅಥವಾ ಸಿನಿಮಾ ನೋಡಿ ಬಂದು ಶಿವಮೊಗ್ಗದ ತಮ್ಮ ಬಂಗಲೆಯಲ್ಲಿ ಎಲ್ಲ ಶುರುವಾದ್ದು. ಪಾಪ – ಎಲ್ಲರೂ ಮಿಂಗೇಲಿಯೇ ತನ್ನನ್ನು ಕೆಡಿಸಿದ್ದೆಂದು ಹೇಳುತ್ತಾರೆ; ಆದರೆ ಮೇಲು ಬಿದ್ದವಳು ತಾನೇ.

೨೩

ಇವೆಲ್ಲವಕ್ಕೂ ಇವತ್ತು ಗೌರಿ ಪರಿಹಾರತಂದಿದ್ದಳು. ತನ್ನನ್ನು ನೋಡಿದ್ದೇ ಮಗುವಿನ ವಿಷಯ ಕೇಳಲೆಂದು ಒಳಗಿನ ಕೋಣೆಗೆ ಕರೆದುಕೊಂಡು ಹೋದ ವಿಮಲಳಿಗಿಂತ ಕೊಂಚ ದೂರದಲ್ಲಿ ಕುರ್ಚಿ ಎಳೆದು ಕೂತಳು:

‘ಚಂದು ಬಗ್ಗೆ ಮಾತಾಡಕ್ಕೆ ನಾನು ಬಂದಿಲ್ಲ. ನಾವು ಮಾಡತಾ ಇರೊ ಗುಟ್ಟು ಅಸಹ್ಯವಾಗಿ ಬಿಟ್ಟಿದೆ ನನಗೆ’

ಅದನ್ನೊಂದು ಭಾವನೆ ಮಾತ್ರ ಎಂದು ತಿಳಿಯಲು ವಿಮಲ ಯತ್ನಿಸಿದ್ದಳು. ಆದರೆ ಗೌರಿ ಹೇಳಿದಳು:

‘ನಿನಗಾಗದಿದ್ದರೆ ನಾನೇ ನಿನ್ನ ಅಪ್ಪನ ಹತ್ತಿರ ಮಾತಾಡ್ತೇನೆ. ಈಗ್ಲೇ ಹೋಗಿ ಮಾತಾಡ್ತೇನೆ. ಹೇಗೂ ನಾನೆ ಅವರಿಗೆ ಮಾತ್ರೆ ಕೊಟ್ಟು ನೀರು ಕುಡಿಸಬೇಕಲ್ಲ, ಇಲ್ಲಿ ನಾನು ಇದ್ದಾಗ’

ಈ ಕೆಲವು ದಿನಗಳಿಂದ ಗೌರಿ ಮಂಜಯ್ಯನಿಗೆ ತುಂಬ ಹತ್ತಿರದವಳಾಗಿದ್ದಳು. ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುಮ್ಮನೇ ಅವಳನ್ನು ನೋಡುತ್ತ ಅವರು ನಿದ್ದೆ ಹೋಗುವರು. ಅವಳು ಬಾಯಿಗಿಟ್ಟು ರವೆಗಂಜಿಯನ್ನು ತಿನ್ನಿಸಿದಾಗ ಅವರಿಗೆ ತಿನ್ನಬೇಕೆನ್ನಿಸುವುದು. ಅವಳ ‘ಕೈ ಗುಣ’ದಿಂದಾಗಿ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಂದು ಹೇಳುವರು. ದಿಂಬಿಗೊರಗಿಸಿ ಅವರನ್ನು ಕೂರಿಸಿದಾಗ ಸುಮ್ಮನೇ ಅವಳ ಕೈಹಿಡಿದು ಕೂರುವರು. ಅಥವಾ ಅವಳಿಂದ ಏನನ್ನಾದರೂ ಓದಿಸಿ ಕೇಳುವರು.

ಮಂಕಾಗಿ ಕೂತುಬಿಟ್ಟಿದ್ದ ವಿಮಲಳಿಗೆ ಮೃದುವಾಗಿ, ಆದರೆ ಸ್ಪಷ್ಟವಾಗಿ ಗೌರಿ ಹೇಳಿದಳು :

‘ನಿನ್ನ ಅಪ್ಪ ಹೆಚ್ಚು ದಿನ ಉಳಿಯುವುದಿಲ್ಲ ಅನ್ನಿಸತ್ತೆ ನನಗೆ. ಸಾಯೋ ಮುಂಚೆ ಅವರಿಗೆ ನೀನು ಮೊಮ್ಮಗನನ್ನ ತೋರಿಸಬೇಕು. ಸಾಯತಿರೋ ಅವರಿಗೆ ಇದರಿಂದ ಒಳ್ಳೇದೆ ಆಗತ್ತೆ. ಅವರು ಶಾಂತವಾಗಿ ಸಾಯಬಹುದು ಆಗ’

‘ಇನ್ನೊಂದು ವಾರದಲ್ಲಿ ಅಣ್ಣಬರ‍್ತಾನಲ್ಲ – ಆಮೇಲೆ ಅವನನ್ನು ಕೇಳಿ ಹಾಗೇ ಮಾಡೋಣ.’

ಈಗ ಮಾತ್ರ ಎಂದೂ ಸಿಟ್ಟಾಗದ ಗೌರಿ ವಿಮಲನ ಮೇಲೆ ಸಿಟ್ಟಾದಳು:

‘ಏನೋ ಹೇಳತಾರಲ್ಲ. ಕೋಗಿಲೆ ಮೊಟ್ಟೇನ್ನ ಗುಟ್ಟಾಗಿ ಕಾಗೆ ಗೂಡಲ್ಲಿ ಇಟ್ಟು ಮರಿ ಮಾಡ್ಸಿಕೊಳ್ಳತ್ತೆ ಅಂತ. ಪಾಪ – ನಿನ್ನ ಐಶ್ವರ್ಯದ ಸೊಕ್ಕು ನಮ್ಮ ಅಕ್ಕುವನ್ನ ಅವಳು ಬಡವೀ ಅಂತ ಹೀಗೆ ಉಪಯೋಗಿಸಿಕೊಳ್ಳೋದು ಸರಿಯ ಹೇಳು. ತಾನೇ ಹೆತ್ತವಳ ಥರ ನಮ್ಮ ಅಕ್ಕು ನಿನ್ನ ಮಗೂನ್ನ ಹಚ್ಚಿಕೊಂಡಿದ್ದಾಳೆ. ನಿನಗೆ ಅನುಕೂಲವಾದಾಗ, ಉಪಾಯವಾಗಿ ಆ ಮಗೂನ್ನ ನೀನು ಕರಕೊಂಡು ಹೋಗಿ ಸಾಕಬೇಕೂಂತ ಇದೀಯಲ್ಲ – ಅದು ಸರೀನೇ ಅಲ್ಲ, ಹೇಸಿಗೆ ಕೆಲಸ ಅದು. ಕೊಳಕು. ನಿನ್ನ ಅಸಹ್ಯವಾದ ವರ್ತನೇನ್ನ ಹೀಗೆ ಅಂತ ತಿಳಿಯೋದಕ್ಕೆ ಇಷ್ಟು ದಿನ ನನಗೆ ಬೇಕಾಯ್ತಲ್ಲ ಅಂತ ನನ್ನ ಬಗ್ಗೆ ನನಗೇ ಹೇಸಿಗೆಯಾಗಿ ಬಿಟ್ಟಿದೆ…

‘ಈಗ ಎದ್ದೇಳು. ನಡಿ. ಮೊದಲು ಅಕ್ಕುಗೆ ಹೋಗಿ ಹೇಳೋಣ. ಮಿಂಗೇಲೀನ ಒಳ್ಳೆ ಗೂಬೆ ಥರ ಆ ಕಲ್ಲಿನ ಬೆಂಚಿನಮೇಲೆ ಕೂರಿಸಿ ಸಾಕಬೇಡ. ಅವನನ್ನೂ ಕರಕೊಂಡು ಬಾ. ಅಕ್ಕೂನ್ನ ನೋಡಿದ ಮೇಲೆ ಅಪ್ಪನಿಗೆ ಹೋಗಿ ಮಗೂನ್ನ ತೋರಿಸಿ ಎಲ್ಲ ಹೇಳಿಕೊ. ನಾನೂ ಇರ‍್ತೀನಿ ಬೇಕಾದ್ರೆ ನಿನ್ನ ಜೊತೆ’

ವಿಮಲ ಅಳುವುದನ್ನು ಕಂಡು ಗೌರಿ ಸೌಮ್ಯವಾದಳು.

‘ಮಗು ಅಕ್ಕೂನ್ನ ತುಂಬ ಹಚ್ಚಿಕೊಂಡು ಬಿಟ್ಟಿದೆ. ನಿನ್ನನ್ನ ತಾಯಿ ಅಂತ ತಿಳಿದು ಕೊಳ್ಳೋಕೆ ಅದಕ್ಕೆ ಸ್ವಲ್ಪ ದಿನ ಬೇಕು. ಅಲ್ಲಿ ತನಕ ಮಗು ನಮ್ಮನೇಲೇ ಇರಲಿ. ಅಕ್ಕೂನ್ನ ಕೇಳಿಕೊಂಡರೆ ಒಪ್ಪಿಕೋತ್ತಾಳೆ ಅಂತ ನನಗೆ ಗೊತ್ತಿದೆ. ನೀನೇ ಬಂದು ಹೋಗಿ ಅದಕ್ಕೆ ನಿನ್ನ ಅಭ್ಯಾಸವಾಗಲಿ. ಆದರೆ ಈಗಲೇ ಎದ್ದು ಬಾ. ಮಗೂನ್ನ ಎಲ್ಲರ ಎದುರಿಗೆ ಒಪ್ಪಿಕೊಂಡು ನಿಜವಾದ ತಾಯಿಯಾಗು. ಸಾಯೋ ಮುಂಚೆ ನಿನ್ನ ಅಪ್ಪನಿಗೆ ತಾನು ಅಜ್ಜ ಆಗಿರೋದು ಗೊತ್ತಾಗಲಿ.’

ವಿಮಲ ಕಣ್ಣೊರಿಸಿಕೊಂಡು ಎದ್ದು ನಿಂತಳು.

೨೪

ಪೂಜೆ ಮುಗಿಸಿ, ಸಾಹುಕಾರ‍್ರಿಗೆ ಭೂವರಾಹ ಪ್ರಸಾದ ಕೊಟ್ಟು ಹೊರಟುನಿಂತಿದ್ದ ಕೇಶವನ ಕಿವಿಯಲ್ಲಿ ನಡೆದದ್ದನ್ನೆಲ್ಲ ಸೂಕ್ಷ್ಮವಾಗಿ ಹೇಳಿ ತಮ್ಮ ದೈನೆ ಮನೆಗೆ ಕಳುಹಿಸಿದಳು. ವಿಮಲ ಮಿಂಗೇಲಿಗೆ ತಯಾರಾಗುವಂತೆ ಹೇಳಿ, ತಾನೂ ತಯಾರಾಗಲು ಒಂದರ್ಧ ಗಂಟೆ ಬೇಕಾಯಿತು. ಅಕ್ಕುವನ್ನು ನೋಡಲು ಯೋಗ್ಯವಾದ ಸೀರೆಯಾವುದು, ಕುಂಕುಮವಿಟ್ಟು ಹೋಗಬೇಕೊ, ಇಡದೆಯೋ? ಕೈಯಬಳೆ ಹಾಕಿಕೋ ಬೇಕೊ, ಬಾರದೊ?

‘ಥೂ ಹುಚ್ಚಿ, ನೀನು ಇರೋ ಹಾಗೇ ಬಾ. ನಮ್ಮ ಅಕ್ಕೂನ್ನ ಏನೂಂತ ತಿಳಕೊಂಡೀಯ?’ ಎಂದು ಗೌರಿ ಗದರಿಸಿ ಹೊರಡಿಸಿದಳು. ವಿಮಲ ಇರುವುದರಲ್ಲೆಲ್ಲ ಸಾಧಾ ಆಗಿ ಕಾಣುವ ಏಳು ಮಳದ ಸೀರೆಯೊಂದನ್ನು ಶ್ರಮ ಪಟ್ಟು ಹುಡುಕಿ, ಬಾಳೆ ಗಂಟು ಹಾಕಿ ಅದನ್ನು ಉಟ್ಟದ್ದು ನೋಡಿ ಗೌರಿ ನಕ್ಕಳು.

‘ಜೀಪು ತರಲ?’ ಎಂದು ಮಿಂಗೇಲಿ ಕೇಳಿದ. ಜೀಪಿನಲ್ಲಿ ಅಕ್ಕುವನ್ನು ನೋಡಲು ಹೋಗುವುದು ಸರಿಯಲ್ಲ ಎಂದು ವಿಮಲಗೆ ಅನ್ನಿಸಿ ಬೇಡ ಎಂದಳು. ಮಗುವನ್ನು ತಾನೇ ಕೈಯಲ್ಲಿ ಎತ್ತಿಕೊಂಡು ತರಲು ನಡೆದುಹೋಗುವುದೇ ಸರಿಯೆಂದು, ಗೌರಿಯ ಸಿಟ್ಟಿನ ಮಾತುಗಳಲ್ಲಿ ತೊಳೆಸಿಕೊಂಡ ಅವಳ ಮನಸ್ಸಿಗೆ ಅನ್ನಿಸಿತ್ತು. ಇದೇನೂ ಗೊತ್ತಿರದ ಮಿಂಗೇಲಿ ಬಿಳುಚಿಕೊಂಡು ಇಬ್ಬರನ್ನೂ ಹಿಂಬಾಲಿಸಿದ.

ಅಕ್ಕು ಚಾವಡಿ ಮೇಲೆ ನಿಂತು ಕಾಯುತ್ತಿದ್ದಳು. ವಿಮಲ ಸೀದ ಹೋಗಿ ಅಕ್ಕುವಿನ ಕಾಲು ಮುಟ್ಟಿ ನಮಸ್ಕರಿಸಿ ಅಳುತ್ತ ಸೆರಗಿನಿಂದ ಕಣ್ಣುಮುಚ್ಚಿಕೊಂಡಳು. ಮಿಂಗೇಲಿ ಅಂಗಳದಲ್ಲಿ ತನ್ನ ಶೂಗಳನ್ನು ಬಿಚ್ಚಿ ತಾನೇನು ಮಾಡಬೇಕು ತೋಚದೆ ತುಳಸಿಟ್ಟೆಯ ಬಳಿ ನಿಂತಿದ್ದ. ವಿಮಲ ಅವನಿಗೆ ಕಣ್ಸನ್ನೆ ಮಾಡಿ ಚಾವಡಿಯ ಮೇಲೆ ಬಂದು ಅಕ್ಕುಗೆ ನಮಸ್ಕಾರ ಮಾಡುವಂತೆ ಸೂಚಿಸಿದಳು. ಬ್ರಾಹ್ಮಣ ವಿಧವೆಯರ ಮಡಿಯ ಬಗ್ಗೆ ತಿಳಿದಿದ್ದ ಮಿಂಗೇಲಿ ದೂರವೇ ನಿಂತು ತಲೆಬಾಗಿದ. ಅಲ್ಲೇ ಗೋಡೆಗೊರಗಿ ನಿಂತ. ಬಿಗಿಯಾದ ಪ್ಯಾಂಟುಗಳಲ್ಲಿ ಸದಾ ಇರುತ್ತಿದ್ದ ಅವನು ಕುರ್ಚಿಯ ಮೇಲೆ ಮಾತ್ರ ಅನಾಯಾಸವೆಂಬಂತೆ ಕೂರಬಲ್ಲ. ಈ ಮನೆಯಲ್ಲಿ ಕುಕ್ಕುರು ಕಾಲಲ್ಲಿ ಕೂರುವುದು ಸರಿಯೆಂದು ಕಾಣದಿರಬಹುದು ಎಂದು ಯೋಚಿಸುತ್ತಿರುವಾಗಲೇ ಕೇಶವ ಒಂದು ಚಾಪೆಯನ್ನು ಹಾಸಿ ‘ಬನ್ನಿ. ಕೂತುಕೊಳ್ಳಿ’ ಎಂದು ಉಪಚರಿಸುವಂತೆ ಹೇಳಿದ. ಮಿಂಗೇಲಿ ಮಂಡಿಯನ್ನೆತ್ತಿ ಕೂತ.

ಅಕ್ಕು ವಿಮಲಗೆ ಹೇಳಿದಳು:

‘ಚಂದೂನ್ನ ಸ್ನಾನ ಮಾಡಿಸಿ ದೇವರ ಮನೇಲಿ ಮಲಗಿಸಿದೀನಿ. ಕಾಲು ತೊಳೆದು ದೇವರ ಮನೆಗೆ ಹೋಗಿ ನಿಮ್ಮ ಮಗುವನ್ನು ಎತ್ತಿಕೊಳ್ಳಿ’.

ತಬ್ಬಿಬ್ಬಾಗಿ ನಿಂತೇ ಇದ್ದ ವಿಮಲಗೆ ಬಚ್ಚಲುಮನೆ ತೋರಿಸಿದಳು. ವಿಮಲ ಕಾಲು ತೊಳೆದು ಬಂದದ್ದೇ ಅವಳನ್ನು ದೇವರ ಮನೆವರೆಗೆ ಕರೆದುಕೊಂಡು ಹೋಗಿ ತಾನು ದೂರ ನಿಂತಳು.

ದೇವರ ಮನೆಯಲ್ಲಿ ಸ್ನಾನ ಮಾಡಿದ ಮಗು ಹಾಲುನಿದ್ದೆಯಲ್ಲಿದೆ. ನಿದ್ದೆಯಲ್ಲಿ ತನಗೆ ತಾನೇ ನಗುತ್ತಿದೆ. ಮಗುವಿನ ಚಾಪೆಯ ಬಳಿ ಒಂದು ತಟ್ಟೆಯಿದೆ. ತಟ್ಟೆಯಲ್ಲಿ ಬೆಳ್ಳಿಯ ಒಳಲೆಯಿದೆ. ಮಗುವಿನ ಸೀತಕ್ಕೆ ಕೆಮ್ಮಿಗೆ ಭೇದಿಗೆ ವಾಯುವಿಗೆ ಉಷ್ಣಕ್ಕೆ ಅಗತ್ಯವಾದ ಗೋರೋಚನ, ಆ ಕಾಯಿ, ಈ ಕಾಯಿ, ಕಸ್ತೂರಿ ಮಾತ್ರ – ಎಲ್ಲ ಇವೆ. ಮಗುವಿನ ರಕ್ಷೆಗಾಗಿ ಬೆಳ್ಳಿಯಲ್ಲಿ ಕಟ್ಟಿದ ಹುಲಿಯುಗುರು ಇದೆ. ಈ ತಟ್ಟೆಯಲ್ಲೇ ತನಗೊಂದು ಬಾಗಿನವಾಗಿ ಕಣವೂ, ಎಲೆಯಡಿಕೆಯೂ, ಒಂದು ತೆಂಗಿನ ಕಾಯಿಯೂ ಇವೆ. ಅಕ್ಕುವಿನಿಂದ ಸಕೇಶಿಯಾದ ತನಗೆ ಮುತ್ತೈದೆತನವೂ ಪ್ರಾಪ್ತವಾದ್ದರ ಕುರುಹಾಗಿ ಈ ಬಾಗಿನವಿದೆ ಎಂಬುದ ವಿಮಲಗೆ ತಿಳಿಯಿತು. ಅವಳ ಕಣ್ಣು ಒದ್ದೆಯಾಯಿತು. ಬಾಗಿನವನ್ನು ಕಣ್ಣಿಗೊತ್ತಿಕೊಂಡು ದೇವರಿಗೆ ನಮಸ್ಕಾರ ಮಾಡಿದಳು.

ವಿಮಲ ಮಗುವನ್ನು ಸುಮ್ಮನೆ ನೋಡುತ್ತ ಎಷ್ಟು ಹೊತ್ತು ಕಳೆದಳೋ. ಅಕ್ಕು ಸುಮ್ಮನೆ ಚಾವಡಿಯಲ್ಲಿ ಕೂತು ಬಿಟ್ಟಿದ್ದಳು. ಕೇಶವ ಏನೂ ತೋಚದಾಗ ಮಾಡುವಂತೆ ತಕಲಿಯಲ್ಲಿ ನೂಲು ತೆಗೆಯುತ್ತ ಕೂತಿದ್ದ. ವಿಮಲ ಹೊರಬಂದು ಸುಮ್ಮನೇ ನಿಂತಳು. ನಿದ್ದೆಯಲ್ಲಿರುವ ಮಗುವನ್ನು ಅವಳು ಎಬ್ಬಿಸಿರಲಿಲ್ಲ. ಗೌರಿಯನ್ನೇ ಬೇಡುವಂತೆ ನೋಡಿದಳು. ಅವಳಿಗೆ ಅಕ್ಕು ಹತ್ತಿರ ಹೇಗೆ ಮಾತಾಡುವುದು ತಿಳಿಯದು. ಗೌರಿಯೇ ಮುಂದಾದಳು:

‘ಅಕ್ಕು. ಮಂಜಯ್ಯನೋರು ಈಗಲೋ ಆಗಲೋ ಎನ್ನುವ ಹಾಗಿದಾರೆ. ಮೊಮ್ಮಗನ್ನ ಅಜ್ಜ ಸಾಯೋಕೆ ಮುಂಚೆ ನೋಡಬೇಕು. ಅದಕ್ಕೇ ವಿಮಲ ಬಂದಿದಾಳೆ. ಮಗೂನ್ನ ಅವಳು ಈಗ ಕರಕೊಂಡು ಹೋಗಿ ಮಂಜಯ್ಯನ ಆಶೀರ್ವಾದ ಪಡೆದು ಇಲ್ಲಿಗೇ ಮಗೂನ್ನ ತಂದು ಬಿಡು ಅಂತ ನಾನೇ ಅವಳಿಗೆ ಹೇಳಿದೆ. ನಿತ್ಯ ಬಂದು ಅಷ್ಟು ಹೊತ್ತು ಇದ್ದು ಹೋಗು, ಮಗೂಗೆ ನಿನ್ನ ಅಭ್ಯಾಸವಾಗಲಿ ಎಂದೆ. ಸರಿಯ ಅಕ್ಕು?’

ಅಕ್ಕು ತನ್ನ ಕಣ್ಣಿನಲ್ಲಿ ಉಕ್ಕುತ್ತಿದ್ದ ನೀರನ್ನು ತೋರಗೊಡದೆ ಆಗಲಿ ಎಂಬಂತೆ ತಲೆ ಹಾಕಿದಳು. ಗೌರಿ ಕೇಶವನನ್ನು ನೋಡಿ ಹೇಳಿದಳು:

‘ಮಂಜಯ್ಯನ ಹತ್ತಿರ ಮಗೂನ್ನ ಕರಕೊಂಡು ಹೋಗುವಾಗ ನಾನೂ ಜೊತೇಲಿ ಇರ‍್ತೀನಿ ಎಂದಿದೇನೆ. ಮಗು ಎಚ್ಚರವಾದದ್ದೇ ಹೊಸ ಮುಖ ನೋಡಿ ಅತ್ತೀತು ಅಲ್ಲವೆ?’

ಏನೂ ಮಾತಾಡದೆ ಸುಮ್ಮನಿದ್ದ ಅಕ್ಕು ಥಟ್ಟನೇ ಹೇಳಿದಳು:

‘ಹೌದು ನೀನು ಹೋಗಬೇಕು. ಮೂರುಜನ ಹೋಗಬಾರು ಅಂತಾರೆ. ನೀನಿದ್ದರೆ ನಾಕಾಗತ್ತಲ್ಲ. ಅಲ್ಲದೆ ಮಗೂಗೆ ಇನ್ನೊಂದು ಗಂಟೇಲೆ ಹಾಲು ಕುಡಿಸಬೇಕು. ನಾನೋ ನೀನೋ ಕುಡಿಸಬೇಕು; ಇಲ್ದೇ ಇದ್ದರೆ ಕುಡಿಯಲ್ಲ ಚಂದು. ಕೆಟ್ಟು ಕೂತಿದೆ’

ಕೊನೆಯ ಮಾತಾಡಿ ಅಕ್ಕು ನಕ್ಕದ್ದು ನೋಡಿ ಅವಳು ದೇವತೆಯೇ ಎಂದು ಅಲ್ಲಿ ಕೂತವರಿಗೆಲ್ಲ ಅನ್ನಿಸಿತು.

೨೫

ಕೇಶವ ಬಲು ಉಪಾಯದಿಂದ ಅಕ್ಕಯ್ಯನಿಗೆ ಮಗು ಸಾಹುಕಾರರ ಮೊಮ್ಮಗುವೆಂದು ಹೇಳಲು ಹೋಗಿದ್ದಾಗ ಅಕ್ಕು ಅವನ ಮಾತನ್ನು ಅರ್ಧಕ್ಕೇ ನಿಲ್ಲಿಸಿದ್ದಳು.

‘ನನಗೆ ಗೊತ್ತು’ ಎಂದು ತಲೆಯ ಮೇಲೆ ಸೆರಗೆಳೆದು ಅಡುಗೆ ಮನೆಗೆ ಏನೋ ಕೆಲಸ ನೆನಪಿಸಿಕೊಂಡವಳಂತೆ ಹೋಗಿದ್ದಳು. ಆತಂಕಗೊಂಡಾಗ, ಥಟ್ಟನೇ ಸಿಟ್ಟು ಬಂದಾಗ ಹೀಗವಳು ತಲೆಯ ಮೇಲೆ ಸೆರಗೆಳೆದು ಕೊಳ್ಳುವುದು. ಸೆರಗು ತಲೆಯ ಮೇಲೆ ಇದ್ದರೂ ಸಹ ಒಂದು ಸಾರಿ ಅದನ್ನು ಬಲವಾಗಿ ಜಗ್ಗುವಂತೆ ಎಳೆದುಕೊಂಡು ಬಿಡುವುದು ಅವಳ ಅಭ್ಯಾಸ. ಕೇಶವ ಅವಳ ಹಿಂದೆಯೇ ಹೋಗಿ,

‘ನನಗೆ ಗೌರಿ ಇವತ್ತು ಹೇಳೋತನಕ ಗೊತ್ತೇ ಇರಲಿಲ್ಲ. ನಿನಗೆ ಹೇಗೆ ಗೊತ್ತಾಯ್ತು?’ ಎಂದು ತವಕಿಸುತ್ತ ಕೇಳಿದ್ದ.

‘ಮಗೂನ್ನ ನೋಡಿದಾಗಿನಿಂದ ಅನುಮಾನ ಆಗದೇ ಇರತ್ತೇನೋ? ಆ ದುಡ್ಡು, ಆ ತೊಟ್ಟಿಲು, ಆ ಹಾಲಿನ ಡಬ್ಬಿಗಳು, ಆ ಮಗು ಮುಖದ ಮೇಲಿನ ಕಳೆ….. ಗೌರೀನ್ನ ಅಲ್ಲಿಗೆ ನಿತ್ಯ ಕರೆಸಿಕೊಳ್ಳೋಕೆ ಶುರು ಮಾಡಿದ ಮೇಲಿಂದ ಇದ್ದೇ ಇರಬಹುದು ಎಂದುಕೊಂಡೆ. ನಮ್ಮದಲ್ಲದೆ ಇರೋದಕ್ಕೆ ನಾವು ಅತಿ ಆಸೆ ಮಾಡಬಾರದು ಅಂತ ಮೊದಲೇ ಅಂದುಕೊಂಡಿದ್ದೆ.’

ನಿರ್ಭಾವದಲ್ಲಿ ಅಕ್ಕು ಮಾತಾಡೋದು ನೋಡಿ ಕೇಶವನಿಗೆ ಕೊಂಚ ಭಯವೇ ಆಯಿತು. ಅಕ್ಕು ತೀರಾ ಹಚ್ಚಿಕೊಂಡು ಅವಳಿಗೆ ಏನಾದರೂ ಆದರೆ?

‘ಹೀಗೆ ನಿನಗೆ ಮುಂಚಿನಿಂದ ಅನ್ನಿಸಿದ್ದರೆ ನೀನು ಯಾಕೆ ನಮಗೆ ಯಾರಿಗೂ ಹೇಳ್ಳಿಲ್ಲ? ಗೌರೀನ್ನ ನೀನು ಎಲ್ಲ ಕೇಳ್ತೀಯ. ಇದನ್ನ ಯಾಕೆ ಕೇಳಲಿಲ್ಲ.?’

‘ಹೇಗೆ ಕೇಳೋದೊ ಅಷ್ಟು ಮುದ್ದಾಗಿ ಆಡಿಕೊಂಡಿರೋ ಮಗೂನ್ನ ಮನೇಲಿ ಇಟ್ಟುಕೊಂಡು? ಅದರ ಎದುರಿಗೇನೇ? ಅದೊಂದು ಪರದೇಸಿ ಅನ್ನೋ ಥರ?’

ಕೇಶವ ಅಕ್ಕುವಿನ ಕಾಲು ಮುಟ್ಟಿ ನಮಸ್ಕರಿಸಿದ್ದ.

‘ಥೂ ಇದೇನು ನಿನ್ನ ಬಡಿವಾರ’ ಎಂದು ಅಕ್ಕು ಗದರಿಸಿದ್ದಳು.

* * *

ಅಷ್ಟು ದೂರ ಮಿಂಗೇಲಿ, ಇನ್ನಷ್ಟು ದೂರ ಗೌರಿ ನಿದ್ದೆ ಮಾಡುವ ಮಗುವನ್ನೆತ್ತಿ ಕೊಂಡು ನಡೆದರು. ಅದು ಎದ್ದಿದ್ದೇ ಹೊಸ ಮುಖಗಳನ್ನು ನೋಡಿ ಗಟ್ಟಿಯಾಗಿ ಅಳಲು ಶುರುಮಾಡಿತು. ಆದ್ದರಿಂದ ಉಳಿದ ದೂರವನ್ನು ಗೌರಿಯೇ ಎತ್ತಿಕೊಂಡು ನಡೆಯಬೇಕಾಯಿತು, ದೇವನಹಳ್ಳಿ ಮನೆಯ ಪಾಗಾರದ ತನಕ.

ಮನೆಯೊಳಗೆ ತಾಯಿಯೇ ಎತ್ತಿಕೊಂಡು ಹೋಗಬೇಕು ತಾನೆ? ಗೌರಿ ಚಂದುವನ್ನು ವಿಮಲಳ ಕೈಗೆ ಕೊಟ್ಟಳು. ಮಗು ಜೋರಾಗಿಯೇ ಅಳಲು ಶುರುಮಾಡಿತು. ಎಷ್ಟು ಸಂತೈಸಿದರೂ ಅದು ಅಳು ನಿಲ್ಲಿಸಲಿಲ್ಲ.

ಆ ದೊಡ್ಡ ಮನೆಯಲ್ಲಿ ಒಂದು ಮಗು ಅತ್ತಿದ್ದನ್ನು ಕೇಳಿದವರೇ ಇಲ್ಲ. ಆಳು ಕಾಳುಗಳು, ಅಡುಗೆಯವರು, ಪಾರುಪತ್ಯೆದಾರರು, ಮುಸುರೆ ತಿಕ್ಕುವ ಹೆಂಗಸರು – ಎಲ್ಲರೂ ಓಡಿಬಂದು ನೋಡಿದರು.

ತಲೆ ಎತ್ತಿಕೊಂಡಿದ್ದರೂ ಯಾರನ್ನೂ ನೋಡದಂತೆ ಕಣ್ಣಾಡಿಸುತ್ತ ನಿಂತ ಮಿಂಗೇಲಿ, ಅಮ್ಮನವರು, ಮತ್ತು ಗೌರಮ್ಮನವರು. ಅಮ್ಮನವರ ತೆಕ್ಕೆಯಲ್ಲಿ ಮುದ್ದಾದ ಒಂದು ಮಗು. ಎಲ್ಲರಿಗೂ ಗೊತ್ತಿರುವ ಮಗು; ಆದರೆ ಅಲ್ಲಿನ ಹಲವರು ಇನ್ನೂ ನೋಡದೆ ಕುತೂಹಲದಲ್ಲಿ ಕಲ್ಪಿಸಿಕೊಂಡಿದ್ದ ಮಗು. ಅವರು ಕಲ್ಪಿಸಿಕೊಂಡದ್ದಕ್ಕಿಂತಲೂ ಹೆಚ್ಚು ಮುದ್ದಾಗಿ ಕಾಣುವ ಮೈ ಕೈ ತುಂಬಿಕೊಂಡ ಮಗು.

ಅಳುತ್ತಲೇ ಇದ್ದ ಮಗುವನ್ನು ಪಡಸಾಲೆಗೆ ತಂದದ್ದಾಯಿತು. ಮತ್ತೆ ನಡುಮನೆಗೆ, ಮಿಮಗೇಲಿ ಪಡಸಾಲೆಯಲ್ಲೇ ನಿಂತು ಬಿಟ್ಟನೆಂದು ಗಮನಿಸಿ ಗೌರಿ ಹಿಂದಕ್ಕೆ ಬಂದು ಅವನನ್ನು ‘ಒಳಗೆ ಬನ್ನಿ’ ಎಂದು ಗದರಿಸುವಂತೆ ಕರೆದಳು. ಹೀಗೆ ಕರೆಯುವುದನ್ನು ನಿರೀಕ್ಷಿಸಿ ನಿಂತಿದ್ದವನಂತೆ ಕಂಡ ಮಿಂಗೇಲಿ ವಿಧೇಯನಾಗಿ ಗೌರಿಯನ್ನು ಹಿಂಬಾಲಿಸಿದ.

ನಡುಮನೆಯಿಂದ ಒಳಮನೆಗೆ, ಒಳಮನೆಯಿಂದ ಬಲಕ್ಕೆ ತಿರುಗಿ, ಒಂದಷ್ಟು ದೂರ ಒಲಗಿನ ಹೂದೋಟವನ್ನು ಸುತ್ತಿ, ಮಂಜಯ್ಯ ಮಲಗಿದ್ದ ಕೋಣೆಗೆ ಪ್ರವೇಶಿಸುವ ಮುಂಚೆ ಮತ್ತೆ ಮಿಂಗೇಲಿ ನಿಂತು ಬಿಟ್ಟ. ಗೌರಿ ಗದರಿಸುವಂತೆ ನಸುನಕ್ಕು ನೋಡಿ ಅವನಿಗೆ ಸನ್ನೆ ಮಾಡಿದ್ದಾಯಿತು. ಆಳುವ ಮಗು, ಗೌರಿ, ತಾಯಿ, ಮಿಂಗೇಲಿ ವಿಶಾಲವಾದ ಮಂಜಯ್ಯನ ರೂಮಿಗೆ ಹೋಗಿ ಮಂಚದ ಬುಡದಲ್ಲಿ ನಿಂತರು.

ಮಂಜಯ್ಯನವರು ಕಣ್ಣು ಮುಚ್ಚಿ ಮಲಗಿದ್ದರು. ಮಗು ಅಳುವ ಸದ್ದು ಕೇಳಿ ಕಣ್ಣು ಬಿಟ್ಟರು. ಏನೂ ತಿಳಿಯದಂತೆ ತನ್ನ ಎದುರಿನ ದೃಶ್ಯವನ್ನು ದಿಟ್ಟಿಸಿ ನೋಡಿದರು. ಗೌರಿ ಅವರ ತಲೆಯ ಹಿಂದೆ ಇನ್ನೆರಡು ಮೆದುವಾದ ದಿಂಬುಗಳನ್ನಿಟ್ಟು, ಅವನು ಒರಗಿ ಕೂರಲು ಅವರ ಬೆನ್ನಿಗೆ ಕೈಯಿಟ್ಟು ಸಹಾಯ ಮಾಡಿದಳು. ಅವರಿಗೆ ಗಂಜಿ ಕುಡಿಸುವಾಗ ಅವರನ್ನು ಎಬ್ಬಿಸಿ ಕೂರಿಸುವುದನ್ನು ಅವಳು ಕಲಿತಿದ್ದಳು.

ಮಂಜಯ್ಯನಿಗೆ ಅರ್ಥವಾಗಲಿಲ್ಲ. ಈಚೆಗೆ ಅವರು ಎಲ್ಲದರಲ್ಲೂ ಕೊಂಚ ನಿಧಾನ. ಬೇಗ ಮರೆತುಬಿಡುತ್ತಾರೆ.

‘ಇದು ನಿಮ್ಮ ಮೊಮ್ಮಗ. ಇವರು ಈ ಮಗುವಿನ ಅಪ್ಪ’ ಎಂದು ಮಗುವನ್ನೂ ಮಿಂಗೇಲಿಯನ್ನೂ ವಿಮಲ ಅವರಿಗೆ ತೋರಿಸಿದಳು.

‘ಏನು ನನಗೆ ಹೇಳಲೇ ಇಲ್ಲವಲ್ಲ’ ಮಂಜಯ್ಯ ಅಂದರು. ಸದಾಚಾರಕ್ಕಾಗಿ ಅನ್ನುವಂತೆ, ಮುಖದಲ್ಲಿ ನಗು ತೋರಲು ಪ್ರಯತ್ನಿಸುತ್ತ.

ಗೌರಿಗೆ ಅರ್ಥವಾಯಿತು. ಮಂಜಯ್ಯ ಅದು ಮಿಂಗೇಲಿಯ ಮಗುವೆಂದೂ ರಜದಲ್ಲಿ ಊರಿಗೆ ಹೋದಾಗ ಅವನು ಮದುವೆಯಾಗಿ ಪಡೆದದ್ದೆಂದೂ ತಿಳಿದಂತಿತ್ತು.

ವಿಮಲಳನ್ನೂ ಮಿಂಗೇಲಿಯನ್ನೂ ಹೊರಗೆ ಹೋಗುವಂತೆ ಹೇಳಿದಳು. ಅವರು ಹೊರಗೆ ಹೋದ ಮೇಲೆ ಮಂಜಯ್ಯನಿಗೆ ನಿಂಬೆ ಹಣ್ಣಿರರಸ ಕುಡಿಸುತ್ತ ಎಲ್ಲವನ್ನೂ ವಿವರವಾಗಿ ಬಿಡಿಸಿ ಹೇಳಿದಳು. ಆಶ್ಚರ್ಯವೆಂದರೆ ಬಲು ಮೆತ್ತಗಾಗಿಬಿಟ್ಟಿದ್ದ ಮಂಜಯ್ಯ, ಗೌರಿಯ ಅಕ್ಕಯ್ಯ ಮಗುವನ್ನು ಸಾಕಿಕೊಂಡಿದ್ದ ರೀತಿಯನ್ನು ಕೇಳಿಸಿಕೊಂಡು ಕಣ್ಣಿನಿಂದ ನೀರು ಸುರಿಸುತ್ತ,

‘ಮಹಾತ್ಮರಿಗೆ ನಿಮ್ಮ ಅಕ್ಕಯ್ಯ ತುಂಬ ಇಷ್ಟವಾಗ್ತ ಇದ್ದರು’ ಎಂದರು.

ಮಂಜಯ್ಯ ಬಳಲಿ ಮಾತಾಡಿದ್ದರು. ಹೀಗೆ ಬಿಕ್ಕಿ ಹೇಳುವಾಗ ಅವರು ಗೌರಿಯ ಕೈಯನ್ನು ಹಿಡಿದುಕೊಂಡಿದ್ದರು.

ಅತ್ತು ಅತ್ತು ಸುಸ್ತಾಗಿ ನಿದ್ದೆ ಹೋದ ಮಗುವನ್ನೆತ್ತಿಕೊಂಡು ಒಳಬರುವಂತೆ, ಕೋಣೆಯ ಹೊರಗೆ ತಪ್ಪಿತಸ್ಥರಂತೆ ಕೂತಿದ್ದ ಅದರ ತಂದೆ ತಾಯಿಯರನ್ನು ಗೌರಿ ಸನ್ನೆ ಮಾಡಿ ಕರೆದಳು.

ವಿಮಲ ಮಗುವನ್ನು ಅಪ್ಪನ ಪಕ್ಕ ಮಲಗಿಸಿದಳು. ಮಂಜಯ್ಯ ಮಗುವನ್ನು ನೋಡಿದರು. ನಿದ್ದೆ ಹೋದ ಮಗುವನ್ನು ಮೃದುವಾಗಿ ಮುಟ್ಟಿ ಸವರಿದರು. ಅದರ ತಲೆಯ ಮೇಲೆ ಕೈಯಿಟ್ಟರು. ಕಾಲು ಮುಟ್ಟಿ ನಮಸ್ಕರಿಸಿದ ಮಿಂಗೇಲಿಯನ್ನೂ ಮಗಳನ್ನೂ ಆಶೀರ್ವದಿಸುವಂತೆ ಕಣ್ಣುಮುಚ್ಚಿ, ಏನೂ ಹೇಳದೆ ಕೈಯೆತ್ತಿದರು.

ಹೀಗೆ ಆಶೀರ್ವದಿಸಿದವರು ತನ್ನ ಎಂದಿನ ಅಪ್ಪನಲ್ಲ; ಎಷ್ಟೊಂದು ದರ್ಪ ಮತ್ತು ಪ್ರತಿಷ್ಠೆಯ ತಂದೆ ಈಗ ಇಷ್ಟು ಮೆದುವಾಗಿಬಿಡಬೇಕಾಗಿ ಬಂತೆಂದು ವಿಮಲಳಿಗೆ ಅಳುಬಂತು.

* * *