ದಿವ್ಯ = ದಿಬ್ಬ, ದಿಬ್ಯ
brilliant, divine, heavenly, celestial;
charming beautiful, excellent.
2. an ordeal.ರೆವರೆಂಡ್ ಕಿಟ್ಟೆಲ್‌ನ ಕನ್ನಡ – ಇಂಗ್ಲಿಷ್‌ಡಿಕ್ಷನರಿಯಿಂದ
‘ದಾವ್ ಎಂದರೆ ಏನು?’‘ಪ್ರತಿ ನಿತ್ಯದ ಮನಸ್ಸೇ ದಾವ್’

‘ಅದನ್ನು ಪಡೆಯುವುದು ಹೇಗೆ?’

‘ಪಡೆಯಲು ಪ್ರಯತ್ನಿಸಿದಷ್ಟೂ ಅದು ನಿನ್ನಿಂದ ದೂರವಾಗುತ್ತದೆ’

‘ಅದಕ್ಕೆ ಹತ್ತಿರವಾಗದ ಹೇಗದನ್ನು ಅರಿಯಲಿ?’

‘ಅದು ಅರ್ಥವಾಗುವ ಅಥವಾ ಆಗದಿರುವ ವಿಷಯವಲ್ಲ. ಅರ್ಥವಾಗಿದೆ ಎಂದು ತಿಳಿಯುವುದು ಆಕಾಶದಂತೆ ಅನಂತವೂ ಪ್ರಶಾಂತವೂ ಆಗಿರುತ್ತದೆ. ನೀನು ಒಪ್ಪುವುದಕ್ಕಾಗಲೀ, ಭ್ರಾಂತಿ; ಅರ್ಥವಾಗದಿರುವುದು ತಾತ್ಸಾರ. ದಾವ್‌ನನ್ನು ನೀನು ಹೊಂದಿದಾಗ ಅದು ಶುದ್ಧವಾದ ಒಪ್ಪದೇ ಇರುವುದಕ್ಕಾಗಲೀ ಅಲ್ಲಿ ಅವಕಾಶವೇ ಇರಲ್ಲ.’

 – ದಾವ್ ದಾ ಜಿಂಗ್, ಅಕ್ಷರ ಪ್ರಕಾಶನ

 

‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತ ಮೇಲೆ ಅವಳ ಮದುವೆ ಆಗೋತನಕ ನನ್ನನ್ನು ಬೆಳೆಸಿದಳು; ಆ ಮಕ್ಕಳ ಅಮ್ಮ ಸತ್ತ ಮೇಲೆ ಆ ಮಕ್ಕಳನ್ನೂ ಬೆಳೆಸಿದಳು.

ತಕಲಿ ತಿರುಗಿಸುತ್ತ ಕೇಶವ ಅಕ್ಕನನ್ನು ಎದುರಿಗಿಟ್ಟುಕೊಂಡು ಹೀಗೆ ಮಾತು ಶುರುಮಾಡುವುದು. ಎದುರು ಕೂತವರು ನಿಮಿತ್ಯ ಕೇಳಲು ಬಂದ ಯಾರೋ ಅಪರಿಚಿತರು ಎಂದು ಕೇಶವನಿಗೆ ಎಗ್ಗಿಲ್ಲ.

‘ಗಂಡನಿಗೆ – ಈ ಪ್ರಾಂತದ ದೊಡ್ಡ ಜೋಯಿಸರೆಂದೇ ಪ್ರಸಿದ್ಧರು ಅವರು, ಮೈಸೂರಿನಿಂದಲೂ ಅವರ ಹತ್ತಿರ ಜಾತಕ ಬರೆಸಲೆಂದು ಬಂದವರುಂಟು – ಅಂಥ ಗಂಡನಿಗೆ ಇವಳು ಎರಡನೇ ಸಂಬಂಧ. ದೊಡ್ಡಮನೆ ಅವರದ್ದು; ಅವರ ಮನೆ ಕಣಜ ಖಾಲಿಯಾದದ್ದಿಲ್ಲ; ಪರಸ್ಥಳದವರು ಬಂದರೆ ಅವರ ಮನೇಲಿ ಪಾಯಸದ ಊಟ ಬಡಿಸದೇ ಕಳಿಸಿದ್ದಿಲ್ಲ.

ಆಯಿತಾ? ಮೊದಲನೆಯ ಹೆಂಡತಿ – ಅವರು ನನ್ನ ತಾಯಿಯ ಕಡೆಯ ದೂರದ ಸಂಬಂಧ, ಮೂರು ದಿನಗಳ ಸೂತಕದ ಸಂಬಂಧವೆಂದು ಕೇಳಿದೀನಿ – ಎರಡು ಹೆಣ್ಣು ಹೆತ್ತು, ಅಲ್ಲಿ ನೋಡಿ, ಆ ಮರದ ಕೆಳಗೆ ನಿಂತಿದ್ದಾರಲ್ಲ, ಆ ಎರಡು ಹೆಣ್ಣುಗಳನ್ನೇ ಹೆತ್ತು, ಸತ್ತಿದ್ದು. ಪುಣ್ಯಾತಗಿತ್ತಿ: ಕೊಟ್ಟಿಗೆಯ ಕೆಲಸ ಮುಗಿಸಿ, ಸ್ನಾನ ಮಾಡಿ, ದೇವರ ಪೂಜೆಗೆ ಎಲ್ಲ ಅಣಿಮಾಡಿ, ಸ್ನಾನ ಮುಗಿಸಿ ಬಂದ ಗಂಡನಿಗೆ ದೇವರ ಮನೆ ಎದುರು ಬಾಗಿಲಲ್ಲಿ ಕಾದು ಮಣೆ ಹಾಕಿ, ಕರ್ಪೂರ, ಗಂಧ, ಅರಿಸಿನ ಕುಂಕುಮ, ಹರಿವಾಣದಲ್ಲಿ ಹೂವು ಪತ್ರೆ, ಐದು ದೀಪದಕುಡಿಯ ಆರತಿತಟ್ಟೆ, ಪಂಚಪಾತ್ರೆಯಲ್ಲಿ ಗಂಗೋದಕ ಎಲ್ಲ ಓರಣವಾಗಿ ಇದೆಯೇ ಎಂದು ಮತ್ತೊಮ್ಮೆ ಮಗದೊಮ್ಮೆ ಕಣ್ಣು ಹಾಯಿಸಿ ಗಮನಿಸಿ – ಆಯಿತಾ? ಅಡುಗೆ ಮನೆಗೆ ಅವರು ಹೋದರೆಂದರೆ… ಸಾಕ್ಷಾತ್ ಅನ್ನಪೂರ್ಣೆ ಅವರು – ಸಾರಿಸಿ ರಂಗೋಲಿ ಹಾಕಿದ ಶುಭ್ರವಾದ ಕೋಡೊಲೆಯನ್ನು ಕ್ಷಣದಲ್ಲಿ ಹೊತ್ತಿಸಿ, ಅಗ್ನಿಗೆ ಕೈ ಮುಗಿದಾಯಿತೊ, ಆಮೇಲೆ, ಗಂಡನ ಪೂಜೆಯ ಮಂತ್ರಗಳನ್ನು ಕೇಳಿಸಿಕೊಳ್ಳುತ್ತ, ನೈವೇದ್ಯ ಸಿದ್ಧವಾಯಿತ ಎಂದು ಗಂಡನಿಂದ ಕೇಳಿಸಿಕೊಳ್ಳದಂತೆ ಒಂದು ಬಾಳೆಎಲೆಯಲ್ಲಿ ನೈವೇದ್ಯಕ್ಕೆಂದು ಬೇಯಿಸಿದ ಪದಾರ್ಥಗಳನ್ನು ದೇವರಿಗೇ ರುಚಿ ಎನ್ನಿಸಬೇಕು, ಹಾಗೆ ಅಲಂಕರಿಸಿ, ದೇವರ ಮುಂದಿಟ್ಟು, ಅವತ್ತೊಂದು ತ್ರಯೋದಶಿ ದಿನ, ಅಡುಗೆ ಮನೆಯಲ್ಲಿ ಹಾಯೆಂದು ಕೂತ ಪುಣ್ಯಾತಿಗಿತ್ತಿ ಹಾಗೇ ತೂಕಡಿಸಿ, ಮುಚ್ಚಿದ ಕಣ್ಣನ್ನು ಬಿಚ್ಚಲ್ಲ’.

ಹೀಗೇ ಬಾಳಗರೆ ಕೇಶವ ಭಾವುಕವಾಗಿ ತಾನು ಸ್ವತಃ ಕಾಣದ್ದನ್ನು ಕಂಡವನಂತೆಯೇ ವಿವರಿಸುವಾಗ ಅವನ ಅಕ್ಕ ಅಕ್ಕಿ ಆರಿಸುತ್ತ ಕೂತು ಕೇಳಿಸಿಕೊಳ್ಳುತ್ತಾಳೆ.

ಜಗತ್ತಿನಲ್ಲಿ ಯಾರೂ ಹೆಸರು ಹಿಡಿದು ಕರೆಯದ ಈ ಮಡಿಹೆಂಗಸು ಈಗ ಮನೆಯವರಿಗೆ ಏಕವಚನದ ಅಕ್ಕು ಪರರಿಗೆ ಬಹುವಚನದ ಅಕ್ಕಯ್ಯ, ಅಕ್ಕಮ್ಮನೂ ಆಗಿದ್ದಳು. ಯಾವ ಕಾಲದಲ್ಲೋ ಸತ್ತುಹೋಗಿದ್ದ ಅವಳ ಅಪ್ಪ ಅಮ್ಮಂದಿರಿಗೆ ಮಾತ್ರ ಅವಳು ಸಾವಿತ್ರಿ. ಈ ಹೆಸರಿನಿಂದ ಅವಳು ಕರೆಸಿಕೊಂಡು ಅದೆಷ್ಟು ವರ್ಷಗಳೇ ಆಗಿಹೋದವು. ಗಂಡ ಹೇಗೋ ಹೆಸರಿಡಿದು ಕರೆದವನಲ್ಲ. ಅತ್ತೆಯೋ ಮಾವನೋ ಕರೆಯಬಹುದಿತ್ತು ಎಂದು ಅನ್ನುವಂತೆಯೂ ಇಲ್ಲ. ಆ ಪುಣ್ಯಾತ್ಮರನ್ನು ಇವಳು ಕಣ್ಣಾರೆ ಕಂಡವಳೂ ಅಲ್ಲ. ಧಾರೆ ಎರೆಸಿಕೊಂಡದ್ದು ಯಾರೋ ದೂರದ ದೊಡ್ಡಪ್ಪನಿಂದ.

ಹೆಬ್ಬೆರಳು ತೋರುಬೆರಳುಗಳ ಸನ್ನಿಧಿಯಲ್ಲಿ ಮೃದುವಾದ ಹತ್ತಿಯ ಉಂಡೆಯನ್ನೂ ತುಸು ತುಸುವೇ ತಳ್ಳುವ ಕೈಚಳಕ ಖುಷಿ ಕೊಡುತ್ತಿದ್ದಂತೆ, ಬುಗುರಿಯಂತೆ ತಿರುಗುವ ತಕಲಿಯಲ್ಲಿ ಅದು ಹದವಾಗಿ ನೂಲಾಗುವುದನ್ನು ನೋಡುತ್ತ ಕೇಶವ ಅಕ್ಕರೆಯ ತನ್ನ ಮಾತುಗಳ ಮೂಲಾಳಾದ ಅಕ್ಕನ ಮುಖವನ್ನೂ ನೋಡುವುದುಂಟು. ಅಕ್ಕಿಯಲ್ಲಿ ಕಲ್ಲು ಆರಿಸುತ್ತ ಕೂತ ಅಕ್ಕ, ಮುಂದೆ ತನ್ನ ಗುಣಗಾನ ಶುರುವಾಗದಂತೆ, ಎದುರು ಕೂತವರು ಬ್ರಾಹ್ಮಣರಾಗಿದ್ದರೆ ಮಾತ್ರ, ತಮ್ಮನನ್ನು ಅಣಕಿಸುವ ಸಲಿಗೆಯಲ್ಲಿ ಗೊಣಗುತ್ತಾಳೆ. ಈಗ ಅವಳು ಮುಖವೆತ್ತಿ ಗೊಣಗುವಾಗ ಕಣ್ಣಿಟ್ಟು ಕಲ್ಲು ಆರಿಸಬೇಕಿಲ್ಲ; ಅವಳ ಬೆರಳುಗಳಿಗೇ ಕಲ್ಲು ಪತ್ತೆಯಾಗುತ್ತದೆ.

‘ನಮ್ಮ ಕೇಶವನಿಗೆ ಎಲ್ಲಾನೂ ಚೆಂದ; ಅವನ ಕಣ್ಣಿಗೆ ಎಲ್ಲವೂ, ಏನೋ ಅಂತಾರಲ್ಲ ಹಾಗೆ, ಹಾ, ದೂರದ ಬೆಟ್ಟದ ಹಾಗೆ, ನುಣ್ಣಗೆ….ಹೆಂಡತಿ ಸತ್ತ ಮೇಲೆ ನನ್ನಿಂದ ಒಂದು ಗಂಡು ಹುಟ್ಟೀತೆಂದು ಆಸೆ ಪಟ್ಟು ತಾನೇ ಆ ಮಹಾರಾಯರು ಮದುವೆಯಾದ್ದು; ಅಲ್ಲವ, ತಿಳಿದವರು ನೀವು, ಹೇಳಿ? ಯಾವ ಸುಖವನ್ನೂ ಆ ಪುಣ್ಯಾತ್ಮನಿಂದ ನಾನು ಪಡೆಯಲಿಲ್ಲ’.

ಮಂಗಳೂರಿನಲ್ಲಿ ಅವರು ಇಟ್ಟುಕೊಂಡಿದ್ದ ಸೂಳೆಯ ಬಗ್ಗೆ ಅವಳು ಯಾರೊಡನೆಯೂ ಮಾತಾಡುವುದಿಲ್ಲ. ತಾನು ಯಾವ ಸುಖವನ್ನೂ ಗಂಡನಿಂದ ಪಡೆಯಲಿಲ್ಲ ಎಂದು ಹೇಳಿಯಾದ ಮೇಲೆ ಒಂದು ಕ್ಷಣ ಅವಳು ಮೌನವಾಗಿ ಅದನ್ನು ತನಗಾಗಿ ಮಾತ್ರ ನೆನೆದು ಮಾತು ಮುಂದುವರಿಸುತ್ತಾಳೆ.

ತಮಗೆ ಮೊದಲಿನವಳಿಂದ ಹುಟ್ಟಿದ ಆ ಎರಡು ಹೆಣ್ಣುಗಳನ್ನು ಈ ಬಡಪಾಯಿಯ ಮಡಿಲಿಗೆ ಹಾಕಿ, ಒಂಟಿ ಬಾಳಲಾರದವಳನ್ನು ತವರು ಸೇರುವಂತೆ ಮಾಡಿದರು. ಅಷ್ಟೊಂದು ದೈವಭಕ್ತರಾಗಿದ್ದ ಆ ಪುಣ್ಯಾತ್ಮ ಸತ್ತದ್ದೋ ಭಯಂಕರವಾಗಿ, ಯಾರದೋ ಮನೆಗೆ ಶ್ರಾದ್ಧ ಮಾಡಿಸಲೆಂದು ಹೋಗುವಾಗ ಪ್ರವಾಹದಲ್ಲಿ ದೋಣಿ ಮಗುಚಿ ಈಜಲಾರದೆ ಕೈಸೋತು ಅವರು ಹರಿಹರಿ ಎಂದು ಹೋದದ್ದು. ಆ ದೊಡ್ಡ ಮನೆಯಲ್ಲಿ ಎರಡು ಚಿಕ್ಕ ಮಕ್ಕಳ ಜೊತೆ ದೆವ್ವದಂತೆ ಒಂಟಿ ಇರಲಾರದೆ, ಬೇರೆ ಗತಿ ಕಾಣದೆ ತಮ್ಮನ ಮನೆ ಸೇರಿ ಈ ಮಕ್ಕಳನ್ನು ಸಾಕಬೇಕಾಯಿತು, ಎಂದು ಅಕ್ಕನ ಪುರಾಣ ಯಥಾವತ್ ಶುರುವಾಗುತ್ತಿದ್ದಂತೆ,

ತಕಲಿಯನ್ನು ಕೆಳಗಿಟ್ಟು, ಅಕ್ಕ ಹೇಳದೆ ಬಿಟ್ಟಿದ್ದನ್ನು ತನ್ನ ಮೌನದಲ್ಲಿ ಸ್ವೀಕರಿಸಿ, ತನ್ನ ಸೊಂಪಾದ ಜುಟ್ಟನ್ನು ಬಿಚ್ಚಿ, ಸಡಿಲಾಗಿ ಕಟ್ಟಿ ಕೇಶವ ನಗುತ್ತಾನೆ.

‘ಓಹೋ ಹಾಗೋ, ಮಾರಾಯರೇ ಕೇಳಿ, ಪ್ರತಿ ವಾರ ಇವಳು ತನ್ನ ಸವತಿಯ ಮಕ್ಕಳಿಗೆ ಎಣ್ಣೆ ಸ್ನಾನ ತಪ್ಪಿಸಿದವಳಲ್ಲ. ದ್ವಾದಶಿಯ ದೋಸೆ ತಪ್ಪಿಸಿದವಳಲ್ಲ. ಹೋಳಿಗೆ ಮಾಡದ ಹಬ್ಬವಿಲ್ಲ. ಉಪ್ಪಿನಕಾಯಿ ತುಪ್ಪ ಬಡಿಸದ ಗಂಜಿಯಲ್ಲಿ. ನನ್ನ ಈ ದೊಡ್ಡ ಭಾಗವತರಾಟದವರ ಜುಟ್ಟನ್ನೂ ಎಣ್ಣೆ ಹಾಕಿ ಸಿಕ್ಕುಬಿಡಿಸಿ ಬಾಚುವರು ಯಾರು ಕೇಳಿ? ಎರಡು ಮಕ್ಕಳಿಗೂ ಕುಮಾರವ್ಯಾಸನನ್ನು ಬಾಯಿಪಾಠ ಮಾಡಿಸುವುದು ಯಾರು ಕೇಳಿ? ಈ ಮಕ್ಕಳು ಈ ಮನೆ ಬಿಟ್ಟು ಹೋಗುವುದೇ ಕಮ್ಮಿ. ಎಲ್ಲೋ ವರ್ಷಕ್ಕೊಮ್ಮೆ ಯಾರದೋ ಮನೆಯ ಮದುವೆಗೆ ಕರೆದರೆ ಮಾತ್ರ ಹೋಗುವುದು. ಈ ಆಸುಪಾಸಿನಲ್ಲಿ ಹೆಚ್ಚು ಬ್ರಾಹ್ಮಣರಿಲ್ಲ; ಇರುವುದು ಎಂದರೆ ಅದೊಂದೇ ಸಾಹುಕಾರ ಮನೆ. ಅಲ್ಲಿಗೆ ನಿತ್ಯ ಪೂಜೆಗೆ ನಾನು ಮಾತ್ರ ಹೋಗುವುದು. ನಮಗೆ ಅನ್ನದಾತರು ಅವರು. ಏನೋ ಹೇಳಲು ಹೋಗಿ ಮರೆತೇ ಬಿಟ್ಟೆನಲ್ಲ…ಅದೇ, ಮಳೆಗಾಲದಲ್ಲಿ ಸೋರುವ ಈ ಹುಲ್ಲಿನ ನಮ್ಮ ಪೂರ್ವಿಕರ ಮನೆಯಲ್ಲೇ, ಅವಳ ತಂದೆಯ ಮನೆ ಹೆಂಚಿನದು ಎನ್ನಿ, ಬೆಳೆದಿರುವ ನಮ್ಮ ದೊಡ್ಡ ಹುಡುಗಿ ಗೌರಿಗೆ ಗೊತ್ತಿಲ್ಲದ ಹಾಡು ಹಸೆ ಇದೆಯೆ? ಅದನ್ನೆಲ್ಲ ತಾಯಿಗಿಂತ ಹೆಚ್ಚಾಗಿ ಹೇಳಿ ಕೊಟ್ಟದ್ದು ಯಾರು ಕೇಳಿ? ಹೋಗಲಿ ನನಗೇನು ಅಕ್ಕನೊಂದು ಹೊರೆಯೋ? ಪ್ರತಿ ವರ್ಷ ಈ ಮನೆಗೆ ಹುಲ್ಲು ಹೊದೆಸುವ ಖರ್ಚು ಯಾರದು ಕೇಳಿ?’.

ಇವೆಲ್ಲವೂ ಸ್ವಂತ ಸುಖ ಸೌಭಾಗ್ಯದ ಕಥೆಯೇ ಎನ್ನುವಂತೆ ಹಿಗ್ಗಲು ಹವಣಿಸುವ ತಮ್ಮನನ್ನು ಕರುಣೆಯಿಂದ ನೋಡಿ, ತಲೆಯ ಮೇಲೆ ಕಂಪುಸೆರಗನ್ನು ಎಳೆದುಕೊಳ್ಳುತ್ತ, ಮೇಲೇಳುತ್ತ:

‘ನಿಮಿತ್ಯ ಹೇಳಿ ಕಳಿಸು; ಎಷ್ಟು ಹೊತ್ತಾಯ್ತು ಅವರು ಬಂದು; ಪಾನಕ ಮಾಡಿ ತರುವೆ…’ ಎಂದು ಅಕ್ಕ ಯಜಮಾನಿಕೆಯಲ್ಲಿ ಇವನೊಬ್ಬ ಅರಿಯದ ಹುಡುಗ ಎನ್ನುವಂತೆ ತಾಯಿ ತಂದೆಯರನ್ನು ಕಳೆದುಕೊಂಡ ತಮ್ಮನನ್ನು ಗದರಿಸಿದರೆ,

‘ಕವಡೆ ಚೀಲ ಬಿಚ್ಚಲು ಒಳ್ಳೆಯ ಮೂಹೂರ್ತಕ್ಕಾಗಿ ಕಾಯ್ತ ಇದ್ದೀನೇ ಮಹರಾಯಿತಿ’ ಎಂದು, ಹುಲ್ಲಿನ ಮನೆಯಿಂದಾಗಿ ಪರ್ಣಕುಟಿ ನೆನಪಾಗಿ, ಕಿಷ್ಕಂಧೆಯಲ್ಲಿ ರಾಮನ ವನವಾಸದ ಯಾವುದೋ ಕಥೆ ಕೇಶವ ಪ್ರಾರಂಭಿಸುತ್ತಾನೆ. ಬಂದವರಿಗೆ ತಾವು ಬಂದ ಕಾರಣ ಮರೆಯಬೇಕು ಹಾಗೆ.

ಮಕ್ಕಳ ಹೆಸರು ಗಂಗೆ – ಗೌರಿ; ಗಂಗೆಗೆ ಹದಿನೆರಡು ವರ್ಷ, ಗೌರಿಗೆ ಹತ್ತೊಂಬತ್ತೋ ಇಪ್ಪತ್ತೋ ಇದ್ದರೂ ಅಕ್ಕ ಹೇಳುವುದು ಹದಿನೇಳೊ ಹದಿನೆಂಟೊ ಎಂದು – ಅವಳಿಗಿನ್ನೂ ತಾವು ಮದುವೆ ಮಾಡಿಲ್ಲವೆಂದು ಚಿಂತೆ ಅವಳಿಗೆ. ಅವರು ಕೇಶವನ ಮನೆ ಸೇರಿ ಹತ್ತು ವರ್ಷಗಳಾಗಿವೆ. ದೊಡ್ಡವಳು ತಾಯಿಯನ್ನು ಕಳೆದುಕೊಂಡದ್ದು ತನ್ನ ಒಂಬತ್ತನೇ ವಯಸ್ಸಿನಲ್ಲಿ ಇರಬೇಕು. ಆಗ ಹತ್ತಿರವಿದ್ದ ಶಾಲೆಯಲ್ಲಿ ಕಲಿತ ಅಷ್ಟಿಷ್ಟನ್ನು ಈಗ ಅವಳು ತನ್ನ ತಂಗಿಗೆ ಹೇಳಿಕೊಡುತ್ತಾಳೆ. ಒಬ್ಬಳನ್ನು ಬಿಟ್ಟು ಇನ್ನೊಬ್ಬಳು ಇರುವುದೇ ಇಲ್ಲ.

ಅಕ್ಕುವಿನ ಕಣ್ಣು ತಪ್ಪಿಸಿ ಅಮಟೇಮರ ಹುಣೆಸೇ ಮರಗಳನ್ನು ಹತ್ತಿ ಕಾಯಿಗಳನ್ನು ಕಿತ್ತು ತಿನ್ನುವುದು, ಮರದ ಪೊಟರೆಗಳಲ್ಲಿ ಯಾವ ಹಕ್ಕಿ ಎಲ್ಲಿ ಗೂಡುಕಟ್ಟಿದೆ ಹುಡುಕಿ ನಿತ್ಯ ಮರಿಗಳು ಎಷ್ಟೆಷ್ಟು ಬಲಿತಿವೆ ಎಂದು ನೋಡಿಬರುವುದು, ಈ ಮರಿಗಳಿಗೆಲ್ಲ ಮುದ್ದು ಮುದ್ದಾದ ಹೆಸರಿಟ್ಟು ಅವುಗಳ ಬಗ್ಗೆ ಕಥೆ ಕಟ್ಟಿ ಒಬ್ಬರಿಗೊಬ್ಬರು ಹೇಳಿಕೊಂಡು ನಗುವುದು, ಅವುಗಳು ಹಾರಿಹೋದ ದಿನ ತಮ್ಮನ್ನು ಅಕ್ಕು ಬಯ್ಯುವಂತೆ ಅವುಗಳನ್ನು ಬಯ್ಯುವುದು –

ಗಂಗೆ ಗೌರಿಯರು ಹೀಗೆ ತಮ್ಮದೇ ಲೋಕದಲ್ಲಿ ಮಗ್ನರಾಗಿರುವಾಗ ಅಕ್ಕುವಿನ ಗೌರಿಯ ‘ಪೂಜೆ’ ಶುರುವಾಗಿಬಿಡುತ್ತದೆ.

‘ಪ್ರಾಯಕ್ಕೆ ಬಂದು ಈಗಾಗಲೇ ಮದುವೆಯಾಗಿ ಮಕ್ಕಳನ್ನು ಹೆರಬೇಕಾದ ನೀನೇ ಹೀಗೆ ಗಂಡುಬೀರಿಯತೆ ಅಲೆಯುತ್ತ ನಿನ್ನ ತಂಗಿಯನ್ನು ಬೆಳೆಸಿದರೆ ಹೇಗೇ; ನಿನಗಾಗ್ತ ಇರುವ ವಯಸ್ಸನ್ನು ಎಷ್ಟು ದಿನ ನಾನು ಮುಚ್ಚಿಡಲೇ…’

ಅಕ್ಕನ ಇತ್ಯಾದಿ ಮಾತು ಕೇಳಿಸಿಕೊಂಡವರು ಅವಳೊಬ್ಬ ಮುದುಕಿ ಎಂದು ಭಾವಿಸಬೇಕು. ತನ್ನ ಇಪ್ಪತ್ತನೇ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಅವಳಿಗೆ ಈಗ ನಲವತ್ತು ವರ್ಷಕ್ಕಿಂತ ಹೆಚ್ಚಾಗಿಲ್ಲ.(‘ನಿನ್ನ ಈಗಿನ ವಯಸ್ಸಿನಲ್ಲಿ ಅಮ್ಮನಿಗೆ ನೀನು ಹುಟ್ಟಿದ್ದು’ ಎಂದು ಕೇಶವ ಅಕ್ಕಯ್ಯನಿಗೆ ಹಾಸ್ಯ ಮಾಡಲು ಹೇಳುತ್ತಾನೆ.) ಇನ್ನೂ ಮದುವೆಯಾಗದ ಅವಳ ತಮ್ಮ ಕೇಶವನಿಗೆ ಇಪ್ಪತ್ತ ಐದು ವರ್ಷ. (ಹೀಗೆ ಅಕ್ಕು ಬಿಡಿಸಿ ‘ಇಪ್ಪತ್ತ ಐದು’ ಎಂದಾಗಲೆಲ್ಲ ಕೇಶವ ಇನ್ನೊಂದು ವರ್ಷದಲ್ಲಿ ಆದಿ ಶಂಕರರು ಕಾಲವಾದದ್ದು ಎನ್ನುತ್ತಾನೆ.)

ಕೆಲವೊಮ್ಮೆ ವೇದಾಂತಿಯ ಹಾಗೂ, ಕೆಲವೊಮ್ಮೆ ಶುದ್ಧ ಹಡೆಯಂತೆಯೂ ಮಾತಾಡುವ ಈ ತಮ್ಮನಿಗೆ ಇನ್ನೂ ಮದುವೆಯಾಗಿಲ್ಲ. ಅದೊಂದು ಕೊರಗು ಅಕ್ಕುಗೆ. ಹೋಗಲಿ ಅವನು ಗಂಡಸಲ್ಲವ ಎಂದರೆ ಈ ಗೌರಿ ಯಾವತ್ತೋ ಮೈನೆರೆದಳು, ಎಷ್ಟು ದಿನ ಅದನ್ನು ಮುಚ್ಚಿಡುವುದು ಸಾಧ್ಯ? ಬಂದು ಹೋಗುವವರ ಕಣ್ಣಿಗೆ ಹೊಡೆಯುವಂತೆ ಅವಳು ಬೆಳೆದಿದ್ದಾಳೆ. ಆದರೂ ಅವಳಿಗೆ ಮದುವೆಯಾಗಿಲ್ಲ, ಆಯಿತಾ? ಇಷ್ಟು ಬೆಳದು ನಿಂತ ಹುಡುಗಿ ಇನ್ನೂ ಎಳಸು ಎಳಸಾಗಿ ಆಡುತ್ತಾಳೆ. ಚಿಗುರೆಯಂತೆ ಕುಣಿದಾಡುತ್ತಾಳೆ.

ಕೇಶವ ಲಂಗದಲ್ಲಿ ನೋಡಿದ ಹುಡುಗಿ ಈ ಗೌರಿ. ಸ್ನಾನ ಮಾಡುವಾಗ ‘ಮಾವಾ, ಸ್ವಲ್ಪ ಬೆನ್ನು ಉಜ್ಜೊ’ ಎಂದು ನಾಚಿಕೆಯಿಲ್ಲದೆ ಈ ಹುಡುಗಿ, ಗಜ ಗೌರಿಯೇ, ಕೇಶವನನ್ನು ಕರೆದಾಗ ಬಂದು ನಗು ನುಂಗಿ‘ನಾಚಿಕೆಯಿಲ್ಲದ ಗಂಡು ಬೀರಿ’ಎಂದು ಅಕ್ಕು ಗದರಿಸುತ್ತಾಳೆ. ಅಕ್ಕನ ಸಂಚಿಗೆ ಇವೆಲ್ಲವೂ ವಿಘ್ನಗಳೇ. ಮುಂಚಿನಿಂದ ಮಾವನನ್ನು ಬಹುವಚನದಲ್ಲಿ ಕರೆಯಲು ಎಷ್ಟು ಕೇಳಿಕೊಂಡರೂ ಅಕ್ಕನ ಅಣತಿ ನಡೆದಿರಲಿಲ್ಲ. ಹೀಗೆ ಆಟ ಆಡುತ್ತ ತನ್ನ ಜೊತೆ ಬೆಳೆದ ಕೇಶವನನ್ನು ಈ ಗಂಡುಬೀರಿ ಮದುವೆಯಾಗಲು ಒಪ್ಪದಿದ್ದರೆ ಇನ್ನೆಲ್ಲಿ ಅವಳಿಗೆ ಗಂಡು ನೋಡಬೇಕು ತಿಳಿಯದು. ಬಡವರ ಹೆಣ್ಣೆಂದು ಕಂಡವರಿಗೆ ಕೊಟ್ಟು ಮದುವೆ ಮಾಡುವುದು ಸರಿಯೆ?

ಮಾವನ ಮಗಳೇ ಮುತ್ತಿನ ಚೆಂಡೇ ಎಂದು ಒಂದು ಹಸೆ ಹಾಡೇ ಇರುವಾಗ,

ತಮ್ಮ ಜನದಲ್ಲಿ ಅಕ್ಕನ ಮಗಳನ್ನೇ ತಂದುಕೊಳ್ಳುವುದು ರೂಢಿಯಲ್ಲಿರುವಾಗ,

ಇವಳು ಹಾಗೆ ನೋಡಿದರೆ ಸ್ವಂತ ಅಕ್ಕನ ಮಗಳೂ ಅಲ್ಲದಿರುವಾಗ ಜಾತಕ ಕೂಡಿಬರುವಾಗ,

(ಕೇಶವನಿಗೆ ಗೊತ್ತಾಗದಂತೆ ಅಕ್ಕ ಜಾತಕ ನೋಡಿಸಿಯಾಗಿದೆ)

ಕಸ ಮುಸುರೆ, ದನಗಳಿಗೆ ಕಲಕಚ್ಚು, ಬಂದು ಹೋಗುವವರಿಗೆ ಪಾನಕ ಪನಿವಾರ, ಯಾವ ತಿಥಿಯಲ್ಲಿ ಯಾವ ನಕ್ಷತ್ರದಲ್ಲಿ ವಿಶೇಷವಾಗಿ ದೇವರಿಗೆ ಯಾವ ಕಾರ್ಯವಾಗಬೇಕು ಇತ್ಯಾದಿ ದಿನ ಕೆಲಸದಲ್ಲಿ ಮಗ್ನಳಾದ ಅಕ್ಕ ಸತತ ಚಿಂತಿಸುವುದು ಇದನ್ನೇ. ಯಾವತ್ತು ತನಗೆ ಬಾಣಂತನ ಮಾಡುವ ಭಾಗ್ಯ ಒದಗೀತು ಎಂದು. ವಿಧವೆಯಾದ ಮೇಲೆ ರಾತ್ರೆಯ ಊಟಬಿಟ್ಟ ಅಕ್ಕು ಪ್ರತಿ ಶುಕ್ರವಾರ ಉಪವಾಸದ ವ್ರತವನ್ನೂ ಹಿಡಿದಿದಾಳೆ.

ಗೌರಿಯೋ ತಾನೊಂದು ಹೆಣ್ಣು ಎಂಬುದನ್ನೇ ಮನಸ್ಸಿಗೆ ತಂದುಕೊಳ್ಳದೆ ಗಂಗೆಯ ಜೊತೆ ಆಟದಲ್ಲಿ ಮಗ್ನಳು. ಅವರಿಬ್ಬರ ನಡುವೆ ಹಲವು ಭಾಷೆಗಳೇ ಇದ್ದವು. ಯಾರಿಗೂ ತಿಳಿಯದ ಅವರ ಸಂಜ್ಞಾ ಭಾಷೆಯಲ್ಲಿ ಎರಡು ಪ್ರತಿ ಬೆರಳಿಗೂ ಒಂದೊಂದು ಅರ್ಥ. ಮಡಿಸಿ ತೋರಿದರೆ ಒಂದು ಅರ್ಥ, ಬಿಚ್ಚಿ ತೋರಿದರೆ ಒಂದು ಅರ್ಥ. ಎತ್ತಿದ ಒಂದೊಂದು ಹುಬ್ಬಿಗೆ ಒಂದೊಂದು ಅರ್ಥ. ಜಡೆಯನ್ನೆತ್ತಿ ಎಡಭುಜದ ಮೇಲೆ ಬಿಟ್ಟುಕೊಂಡರೆ ಒಂದು ಅರ್ಥ. ಬಲ ಭುಜದ ಮೇಲೆ ಅದನ್ನು ಇಳಿಬಿಟ್ಟರೆ ಇನ್ನೊಂದು ಅರ್ಥ. ಗಿಂಜುವ ಹಲ್ಲಿಗೆ, ತುರಿಸುವ ಕತ್ತಿಗೆ, ಮಿಟುಕುವ ಕಣ್ಣಿಗೆ, ಯಾಕೆ ಕಾಲು ಬೆರಳುಗಳಿಗೂ ಈ ಭಾಷೆ ಬೆಳದಿತ್ತು.

ಇದೂ ಸಾಲದಾದರೆ ಸಭಾಷೆ. ಗೌರಿ ಗಸೌರಸಿ; ಗಂಗೆ ಗಸಂಗಸೆ; ಅಕ್ಕ ಅಸಕಸ್ಕ… ಅಸಕಸ್ಕನಸಿಗಸೆ ಹಸೇಳಸಬಸೇಡಸ ಎಂದರೆ ಅಕ್ಕನಿಗೆ ಹೇಳಬೇಡ…

ಇದರಿಂದ ಅಕ್ಕ ರೋಷಾವೇಷದಲ್ಲಿ ಹೊಡೆಯಬಂದರೆ, ಚೋಟುದ್ದದ ಗಂಗೆ,

‘ಅಕ್ಕಾ ನೀವು ಮಡಿಯಲ್ಲಿದೀರಿ, ಮಸುಟ್ಟಸುವಸಹಸಾಗಸೆ ಇಲ್ಲ’ ಎಂದು ಜೋರಾಗಿ ನಗುವಳು; ಓಡಿ ಹೋಗುವಳು. ಸೀರೆಯುಡಲು ಶುರುಮಾಡಿದ ಗೌರಿಯೂ ಅವಳ ಉದ್ದನೆಯ ಜಡೆಯನ್ನು ಕಪ್ಪು ಸರ್ಪದಂತೆ ಬೆನ್ನ ಮೇಲೆ ಜೋಲಾಡಿಸುತ್ತ ತಂಗಿಯ ಹಿಂದೆ ನಡೆದುಬಿಡುವಳು.

ಗುಡ್ಡದಲ್ಲಿ ನಡೆದಾಡುತ್ತ ಗಂಗೆ ಕೇಳುವಳು.

‘ಗೌರಕ್ಕ, ನಿನಗೆ ಮಾವಯ್ಯ ನಿನ್ನೆ ಹೇಳಿದ ಕಥೆ ಇಷ್ಟವಾಯಿತ?’

ಹಿಂದಿನ ದಿನ ಚಾವಡಿಯಲ್ಲಿ ಒಂದು ತಾಳೆ ಮದ್ದಲೆ ಪ್ರಸಂಗ ನಡೆದಿತ್ತು. ಕೇಶವ ಕಚ – ದೇವಯಾನಿ ಕಥೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದ. ಗೌರಿ ತಲೆಯಾಡಿಸುತ್ತ:

‘ನನಗೆ ಕಚ ಇಷ್ಟಾನೇ ಆಗಲಿಲ್ಲ. ದೇವಯಾನಿಗೆ ಅವ ಮೋಸ ಮಾಡ್ತಾನೆ ಅಲ್ವೇನೆ?’ ಎನ್ನುವಳು.

ಗಂಗೆಗೆ ತನ್ನ ಅಕ್ಕನದು ವೇದವಾಕ್ಯ. ತನಗೂ ಹಾಗೇ ಎನ್ನಿಸಿತ್ತು ಎಂದುಕೊಳ್ಳುವಳು. ಕಾಕೆಯ ಹಣ್ಣನ್ನು ಕೀಳುತ್ತ ನಿಂತ ಅಕ್ಕನಿಗೆ ಇನ್ನು ಏನೋ ಹೇಳಲು ಕಾಯುವಳು. ಗೌರಿ ಒಂದು ಕಾಕೆಯ ಹಣ್ಣನ್ನು ಬಾಯಿಗೆ ಎಸೆದು ರುಚಿನೋಡಿ ಸೆರಗಿನಲ್ಲಿದ್ದ ಎಲ್ಲ ಹಣ್ಣನ್ನೂ ಗಂಗೆಗೆ ಕೊಡುವಳು. ಅರ್ಧ ಮಾತ್ರ ತೆಗೆದುಕೊಂಡು ಉಳಿದರ್ಧದಲ್ಲಿ ಅಕ್ಕನ ಸೆರಗಿನಲ್ಲೇ ಗಂಗೆ ಬಿಡುವಳು. ದೇವಯಾನಿ ರಾಕ್ಷಸರ ಗುರುವಿನ ಮಗಳಲ್ಲವೆ? ಕೇಶವ ಮಾವನೇ ಇನ್ನೊಂದು ಪ್ರಸಂಗದಲ್ಲಿ ವಾದಿಸಿ ಗೆದ್ದದ್ದನ್ನು ಅಕ್ಕನಿಗೆ ನೆನಪು ಮಾಡುವಳು.

‘ರಾಕ್ಷಸರದ್ದು ಯಾವಾಗಲೂ ಯಾಕೆ ತಪ್ಪೂಂತ? ಅವರೂ ಆಸೆಬುರುಕರೇ, ಆದರೆ ದೇವತೆಗಳೂ ಅವರಷ್ಟೇ ಆಸೆಬುರುಕರು ಅಲ್ಲವ? ಯಾರ ದೊಡ್ಡಸ್ತಿಕೆ ಏನಿದೆ ಈ ವ್ಯಾಜ್ಯಗಳಲ್ಲಿ. ಮೋಸಾನ್ನ ಇಬ್ಬರೂ ಮಾಡುವಾಗ ಯಾಕೆ ದೇವರು ದೇವತೆಗಳ ಪರಾನೇ ವಹಿಸೋದು?’

ತಂಗಿಯ ಮಾತನ್ನು ಒಪ್ಪಿ ಗೌರಿ ಹೇಳುವಳು:

‘ಅದಕ್ಕೇ ದೇವರು ಮರ್ಜಿ ತಿಳಿಯೋಕೆ ಆಗಲ್ಲ. ಅವನೇನು ನಮ್ಮ ಮಿತ್ರನೊ ಶತ್ರುವೋ ಹಾಗೆಲ್ಲ ಅರ್ಥವಾಗೋಕೆ?’. ಅಂತ ಕೇಶವಮಾವ ಹೇಳಿ ವಾದದಲ್ಲಿ ನುಣಿಚಿಕೊಳ್ಳೋಕೆ ನೋಡಿದರೆ ಬಿಡಬೇಕಲ್ಲ ವಾದಕ್ಕೆ ಕೂತಿದ್ದ ಪ್ರತಿವಾದಿ ಭಯಂಕರ ಪುಟ್ಟೇಗೌಡರು. ಹೊರಗೆ ಧಡಧಡ ನಡೆದು, ಹೊಗೆಸೊಪ್ಪು ಉಗುಳಿ, ಒಳಗೆ ಬಂದು, ಚಕ್ಕಳಮಕ್ಕಳ ಹಾಕಿ ಕೂತು, ಶುರುಮಾಡಿಬಿಟ್ಟರಲ್ಲ ವಾದಾನ್ನ. ದಗಾಕೋರ ವಿಷ್ಣು ವಾಮನನಾಗಿ ಬಂದು ಬಲಿಗೆ ಮೋಸಮಾಡಿದ್ದು ಸರೀನ? ಇವೆಲ್ಲ ಬ್ರಾಂಬ್ರು ಮಾಡಿಕೊಂಡ ಕಥೆಗಳಲ್ವ?’

ಅಕ್ಕ ತಂಗಿಯರು ಆಡಿಕೊಳ್ಳದ ವಿಷಯವೇ ಇಲ್ಲವೆನ್ನಬಹುದು. ಎರಡು ನಾಯಿಗಳ ಸಂಭೋಗ ನೋಡಿ ಗಂಗೆ ಕೇಳುವಳು,

‘ಇವುಗಳ ಅಂಡು ಯಾಕೆ ಗಂಟು ಹಾಕಿ ಕೊಂಡಿದೆಯೆ? ಪಾಪ, ಬಿಡಿಸಿಕೊಳ್ಳಕ್ಕೆ ಹೋಗಿ ಎಳಕೊಳ್ತಿದಾವೆ. ನೋವಾಗಲ್ವೇನೆ?’

ಎಲ್ಲ ಪ್ರಾಣಿಗಳಿಗೂ ಮಕ್ಕಳಾಗುವುದು ಹೇಗೆ, ಅದರ ಸುಖವೇನು ಕಷ್ಟವೇನು ಇತ್ಯಾದಿ ಗೌರಿ ವಿವರಿಸುವಳು. ಮೈನೆರದಾದ ಮೇಲೆ ಗೌರಿ ತನ್ನ ದೇಹದಲ್ಲಿ ಕುತೂಹಲಿಯಾಗಿ ಮನೆಯಲ್ಲಿ ಇದ್ದ ಪುಸ್ತಕಗಳನ್ನೆಲ್ಲ ಓದಿದ್ದಳು. ಅವಳ ಗತಿಸಿದ ತಂದೆ ಜ್ಯೋತಿಷಿ ಮಾತ್ರವಲ್ಲದೆ ಆಯುರ್ವೇದದ ಪಂಡಿತರೂ ಆಗಿದ್ದರಿಂದ ಅವರ ಮನೆಯಲ್ಲಿ ಆರೋಗ್ಯ ಮಾಹಿತಿಗೆ ಸಂಬಂಧಪಟ್ಟ ಪುಸ್ತಕಗಳೂ, ಗೋಪಾಲಕೃಷ್ಣರಾಯರು ಸಂಪಾದಿಸಿ ತರುತ್ತಿದ್ದ ಕಾಮಜೀವನಕ್ಕೆ ಸಂಬಂಧಿಸಿದ ‘ಕಲಿಯುಗ’ ಪತ್ರಿಕೆಯ ಹಳೆಯ ಸಂಚಿಕೆಗಳೂ ಇದ್ದವು. ಗಂಡ ಸತ್ತ ಮೇಲೆ ಈ ಎಲ್ಲ ಪುಸ್ತಕಗಳನ್ನೂ ತಂದು ಒಂದು ಹಿತ್ತಾಳೆಯ ನುಗ್ಗುನುಗ್ಗಾದ ಪೆಟ್ಟಿಗೆಯಲ್ಲಿ ಅಕ್ಕು ಜೋಪಾನ ಮಾಡಿದ್ದಳು.

ಕೇಶವಮಾವ ಹೇಳಿದ ಇನ್ನೊಂದು ಪ್ರಸಂಗ ಗಂಗೆಗೆ ನೆನಪಾಗುವುದು. ಮಾವನನ್ನು ನಟಿಸಿ ಅಣುಕಿಸುವಂತೆ ಗೌರಿಯ ಬಾಯಿಂದಲೂ ಅದನ್ನು ಮತ್ತೆ ಕೇಳಿಸಿಕೊಳ್ಳಲು ಆಸೆಯಾಗಿ ಅಕ್ಕನನ್ನು ಪೀಡಿಸುವಳು. ಗೌರಿ ಶುರುಮಾಡುವಳು:

ಎರಡು ಮೃಗಗಳಾಗಿ ಒಬ್ಬ ಋಷಿ ಮತ್ತು ಅವನ ಪತ್ನಿ ಕಾಡಿನಲ್ಲಿ ರತಿಕ್ರೀಡೆಯಲ್ಲಿ ತೊಡಗಿದ್ದಾಗ,

(ಮಾವನದಂತೆಯೇ ಕೈಗಳು ಗಾಳಿಯಲ್ಲಿ ಕ್ರೀ ಶಬ್ದದ ದೀರ್ಘಕ್ಕೆ ಸರಿಯಾಗಿ ಅಲೆಯಬೇಕು)

ಮೃಗಯಾ ವಿಹಾರದಲ್ಲಿ,

(ಅಣಕಿಸುವ ಉಮೇದಿನಲ್ಲಿ ಗೌರಿಯ ಎರಡು ದೀರ್ಘಗಳೂ ಮಾವನದಕ್ಕಿಂತ ಸರಿಯಾಗಿ ದೀರ್ಘಿಸುತ್ತವೆ)

ಮೈಮರೆತಿದ್ದ ಪಾಂಡುಮಹಾರಾಜ ಎರಡು ಮೃಗಗಳು ಒಟ್ಟಿಗೇ ಸಿಕ್ಕಲಿ ಎಂದು ಗುರಿ ಮಾಡಿ ಬಾಣಬಿಟ್ಟ. ಬಿಟ್ಟಿದ್ದೇ ಬಾಣ ಅದು ಶರವೇಗದಲ್ಲಿ ಹೋಗಿ ನಾಟಿದ್ದು…

(ಈಗ ಥೇಟು ಮಾವನದಂತೆಯೇ ಗೌರಿಯ ತೋರು ಬೆರಳು ಅಳಿಲೊಂದನ್ನು ತೋರಿ ಅವಳ ಕಣ್ಣು ಚೂಪಾಗುತ್ತವೆ.)

ಗಂಡು ಮೃಗದ ಮುಂಗಾಲುಗಳ ಅಪ್ಪುಗೆಯ ಆವೇಗದಲ್ಲಿ ಸುಖಿಸುತ್ತಿದ್ದ ಹೆಣ್ಣು ಮೃಗವನ್ನೇ. ರತಿಸುಖದ ಉತ್ಕಟತೆಯಲ್ಲಿದ್ದಾಗಲೇ…

(ಪುರಾಣ ಹೇಳುವ ಮಾವನ ಪ್ರವಚನ ಭಂಗಿಯಲ್ಲೇ ಈಗ ಗೌರಿಯ ಕಣ್ಣು ಮುಚ್ಚಿರುತ್ತವೆ)

ಹೆಣ್ಣು ಮೃಗ ಪ್ರಾಣ ಬಿಟ್ಟಿತು. ಬಿಡುವಾಗ ತನ್ನ ನಿಜವಾದ ಮನುಷ್ಯ ರೂಪವನ್ನು ತಾಳಿತು. ಗಾಯಗೊಂಡು ರತಿಭಂಗವಾದ ಗಂಡು ಮೃಗವೂ ತನ್ನ ಮೀಸೆ ಗಡ್ಡಗಳ ನಿಜರೂಪಕ್ಕೆ ಬಂದು ಕಣ್ಣ ಕೆಕ್ಕರಿಸಿ ಪಾಂಡುವನ್ನು ನೋಡಿದಾಗ ಪಾಂಡುವಿಗೆ ಅರಿವಾದ್ದು…ಏನದು ಅರಿವಾದ್ದು?..

(ಪ್ರವಚನದ ಆವೇಶದಲ್ಲಿ ಮಾವ ಪಟಪಟಪಟನೆ ತಾಳ ಕುಟ್ಟುವಂತೆ ಗೌರಿ ಕಲ್ಲುಗಳನ್ನು ಕುಟ್ಟಿ ಹುಬ್ಬೆತ್ತಿ ನಟಿಸಿ ಗಂಗೆಯನ್ನು ನಗಿಸುತ್ತಾಳೆ.)

ಅವರು ಕೇವಲ ನರ ಮನುಷ್ಯ ಮಾತ್ರರಲ್ಲ. ಪರಮ ಪಾವನರಾದ ಋಷಿಗಳು ಎಂದು. ತಿಳಿಯದೆ ತಾನವರನ್ನು ಕೊಂದುಬಿಟ್ಟೆನಲ್ಲಾ ಎಂದು ಪಶ್ಚಾತ್ತಾಪ ಒಂದು ಕಡೆಯಾದರೆ, ಮಹೀಶನಲ್ಲವೆ? ಅವನಿಗೆ ಸಿಟ್ಟೂ ಬರುತ್ತದೆ ಎಂದು ಕುಮಾರವ್ಯಾಸ ಹೇಳ್ತಾನೆ.

ಸಿಟ್ಟಾಗಿ ಏನಂತಾನೆ ರಾಜ?

ಮೃಗವಹರೆ ಮಾನಿಸರ್? ಅಕಟ ಪಾಪಿಗಳಿದೆತ್ತಣ? ತಪವಿದೆತ್ತಣ?

ಹೀಗೆ ಎಂದಾಗ ತಾಪಸ ಕೋಪದಲ್ಲಿ ಬುಸುಗುಟ್ಟಿ ಶಾಪ ಕೊಡುತ್ತಾನೆ:

ಪಾಪಿ ನಾನೋ, ನೀನೋ? ನಿನ್ನಯ ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು.

ಇನ್ನು ತನಗೆ ಎಂದೆಂದೂ ರತಿಸುಖ ಇಲ್ಲೆಂದು ಶೋಕ ತಪ್ತನಾಗಿ, ಜೀತೇಂದ್ರಿಯನಾಗಿ ಬಾಳಲೆಂದು ರಾಜ ಇನ್ನೂ ತರುಣಿಯರಾದ ತನ್ನ ಎರಡು ಹೆಂಡಿರನ್ನೂ ಕಟ್ಟಿಕೊಂಡು ಕಾಡಿಗೆ ಹೋದ…

ಅವನ ನಾರಿಯರು ಮರುಗಿದರಂತೆ: ಹೇಗದನ್ನು ನುಡಿದು ತೋರಿಸುತ್ತಾನೆ ನೋಡಿ ನಮ್ಮ ನಾರಣಪ್ಪ! ಅವನು ಯಾವ ಶಬ್ದಕ್ಕೂ ಅಂಜುವವನಲ್ಲ. ಪಾಕೃತ ಅವನು. ನಮಗೇ ನಾವು ಹೇಗೆ ಅಂದುಕೋತೇವೆ ಈ ಮಹಾಕವಿಗೆ ಗೊತ್ತು. ಶಾಪಕೊಟ್ಟವರು ಋಷಿಗಳಾದರೇನು? ಈ ಹೆಂಗಳೆಯರ ಪಾಲಿಗೆ ಅವರು ಮುದಿಹಾರುವರು.

ಯಾವನೋ ಮದಿಹಾರುವನ ತನಿಬೇಂಟೆ ನಮ್ಮ ಸುಖವನ್ನು ನಾಶಮಾಡಿತಲ್ಲಾ ಎಂದುಕೋತಾರಂತೆ ಅವರು.

ಹೀಗಿರುವಾಗ… ಒಂದಾನೊಂದು ದಿನ ಮಧುಮಾಸ ಪ್ರಾಪ್ತವಾಗಿದೆ… (ಕುಸುಮ ಸಮಯ ಎನ್ನುತ್ತಾನೆ ನಮ್ಮ ಕುಮಾರವ್ಯಾಸ)

ಎಂಥ ಮಧುಮಾಸ ಅದು?

ಯೋಗಿಗೆತ್ತಿದ ಖಡುಗಧಾರೆ, ವಿಯೋಗಿಗೆತ್ತಿದ ಸಬಳ, ವೇದಾಧ್ಯಯನ ನಿರತರಾದವರಿಗೆ ಎದೆ ಶೂಲ, ಆದರೆ ಭೋಗಿಗಳ ಕುಲದೈವವಂತೆ ಈ ಕುಸುಮಸಮಯ…

ಆಯಿತಾ, ಕೇಳು ಜನಮೇಜಯ ಧರಿತ್ರೀಪಾಲ

ಆ ವಸಂತದಳೊಮ್ಮೆ ಮಾದ್ರಿದೇವಿ ವನದೊಳಾಡುತಿರ್ದಳೂ…

ಅವಳನ್ನು ನೋಡಿ ಅರಸ ಬೆರಗಾದಾ….

ಸರ್ವಾಂಗ ಶೃಂಗಾರದ ಈ ತರುಣಿ ಊರ್ವಶಿಯೋ? ರಂಭೆಯೋ? ಶಿವ ಶಿವಾ ಎಂದು ಬೆರಗಾದಾ…

ಆ ಅರಸನ ಪಾಡನ್ನು ಕುಮಾರವ್ಯಾಸ ವರ್ಣಿಸುವುದಾದರೂ ಹೇಗೆ?

ಮನ್ಮಥನ ಹೂಬಾಣ ಐದು ಮಾತ್ರವಲ್ಲ. ರಾಜನ ರೋಮಗಳ ಎಂಟುಕೋಟಿಯಲಿ ಅವು ತೂಗಿ ನೆಟ್ಟಂತಾಗಿ ಅರಸನ ಪ್ರಜ್ಞಾ ಸಾಗರ ಇಳಿದಿಳಿದು ಹೋಯಿತಂತೆ.

ಹಿಂದಾದ್ದನೆಲ್ಲ ಕ್ಷಣ ಮಾತ್ರದಲ್ಲಿ ರಾಜ ಮರೆತು ಬಿಟ್ಟಾ…

ಕುಂತಿಗೆ ತಿಳಿಯದಂತೆ ಮಾದ್ರಿ ಬಳಿ ಮೆಲ್ಲ ಮೆಲ್ಲನೆ ಸಾರಿದಾ…

ಅವಳ ಸೆರಗನ್ನು ಹಿಡಿದೆಳೆದಾ…

ಬೇಡ ಬೇಡವೆಂದು ಕಾಲಿಗೆ ಬಿದ್ದ ತರುಣಿಯ ತುರುಬು ಹಿಡಿದೆತ್ತಿ ಅವಳು ಹೆಣಗುತ್ತಿದ್ದಂತೆ ಒಡನೆ ಝೋಂಪಿಸಿದಾ…

ಶಂಬರಾರಿಯ ಬಾಣವಲ್ಲವೆ? ಅರಿತ ಗಿರಿತನಗಳ ಡೊಂಬಿನ ಆಗಮದ ನೀತಿಗೀತಿಯ ಅದು ಕೊಂಬುದೆ?

ಏನು ಹೇಳ್ತಾನೆ ಕೇಳಿ ನಮ್ಮ ಹಲಗೆ ಬಳಪವಪಡಿಯದೊಂದಗ್ಗಳಿಕೆಯ ಕುಮಾರವ್ಯಾಸ?

ಒತ್ತಂಬರದಿ ಹಿಡಿದು ಅಬಲೆಯನು ಕೂಡಿದನು ಕಳವಳಿಸಿ.

ಅಹಾ ಎಂಥ ಮಾತು! ಕಳವಳಿಸಿ ಕೂಡಿದನು!

ಆ ಸುಖದ ಝೋಂಪಿನಲಿ,

ಕೇಳಿ, ಆ ಸುಖದ ಝೋಂಪಿನಲಿ, ಇಂಥ ಶಬ್ದಗಳೆಂದರೆ ನಮ್ಮ ನಾರಣ್ಣಪ್ಪನಿಗೆ ಬಲು ಪ್ರೀತಿ; ಮತ್ತೆ ಮತ್ತೆ ಬಳಸುತ್ತಾನೆ…

ಮೈ ಮರೆಯಿತು… ಮುಖ ಓಸರಿಸಿತು…. ಕಣ್ಣುಗಳು ಮುಚ್ಚಿಕೊಂಡವು… ತೆಕ್ಕೆ ಸಡಲಿತು… ನಿಟ್ಟುಸಿರು ಸೂಸಿತು… ತರುಣಿಯ ಉರದಲ್ಲಿ ತನ್ನ ಕದಪನಿಟ್ಟು ಹಾಗೆಯೇ ಒರಗಿದನು.

ಅಂದರೆ ಇನ್ನೇನು ಕೊಡಬೇಕು… ಅಷ್ಟರಲ್ಲೇ ಪಾಂಡು ಮಹಾರಾಜ ಪ್ರಾಣವನ್ನು ಬಿಟ್ಟಾ…

(ಅಂದರೇನು ತನಗೆ ತಿಳಿಯದೆಂದು ಗಂಗೆಯ ಪ್ರಶ್ನಾರ್ಥಕ ಕಣ್ಣಿಗೆ ಗೌರಿ ತಾರಮ್ಮಯ್ಯದ ಸನ್ನೆ ಮಾಡುತ್ತಾಳೆ)

ಮಕ್ಕಳನ್ನು ಮಾಡಲು ಋಷಿಗಳು ಯಾಕೆ ಮೃಗಗಳಾಗಿ ಕಾಡಿನಲ್ಲಿ ಕೂಡಬೇಕೆಂದು ಕುತೂಹಲ ಗಂಗೆಗೆ.

‘ಗೌರಕ್ಕ, ಗೌರಕ್ಕ ಈ ನಾಯಿಗಳೂ ವೇಷ ಹಾಕ್ಕೊಂಡ ಋಷಿಗಳು ಇರಬಹುದಲ್ವೇನೆ?’

ತಂಗಿಗೆ ಅರ್ಥವಾಗಲೇಬೇಕೆಂಬ ಹಠ ಗೌರಿಗಿಲ್ಲ. ತಾನು ಓದಿ ತಿಳಿದಿದ್ದನ್ನು ಹೇಳುವಳು:

‘ನೋಡು ಗಂಗಾ, ಈ ಮನಷ್ಯನ ದೇಹದಲ್ಲಿರುವಾಗ ನಮಗೆ ಪರಮ ಸುಖ ಸಾಧ್ಯವಿಲ್ಲಾಂತ ಅಪ್ಪನ ಟ್ರಂಕಿನಲ್ಲಿರೋ ಒಂದು ಪುಸ್ತಕದಲ್ಲಿ ಹೇಳಿದೆ. ಅದಕ್ಕೇ ಮೃಗಗಳಾಗಿ ಋಷಿಗಳು ಕೂಡುವುದಂತೆ. ಮತ್ತೆ ದೇವರನ್ನ ಕಾಣಬೇಕೆಂದರೂ ಈ ದೇಹದಲ್ಲಿರುವಾಗ ಸಾಧ್ಯವಿಲ್ಲಾಂತಲೇ ಕಣ್ಣಮುಚ್ಚಿ ದೇಹಾನ್ನ ಬಿಸಾಕಿ ದೇವರಲ್ಲಿ ಒಂದಾಗೋದಂತೆ – ರಾಮಕೃಷ್ಣ ಪರಮಹಂಸರು ಹಾಗೇ ದೇವರನ್ನ ಕಂಡು ಮಾತೂ ಆಡ್ತಿದ್ದರಂತೆ. ಕುದುರೆಯಾಗಿ, ಬೆಕ್ಕಾಗಿ, ಹಕ್ಕಿಯಾಗಿ, ಹಂದಿಯಾಗಿ, ಮಂಗನಾಗಿ, ಶಂಕರಾಚಾರ್ಯರಿಗೆ ಚಂಡಾಲನೂ ಆಗಿ ಹೇಗೆ ದೇವರು ಪ್ರತ್ಯಕ್ಷನಾಗಿ ಕಾಣಿಸಿಕೊಳ್ತಾನೆ ಹೇಳಕ್ಕೆ ಆಗಲ್ಲೆ ಅಂತ ಕೇಶವಮಾವ ಹೇಳೋದನ್ನ ಪುಟ್ಟೇಗೌಡರುಸತ ವಾದಮಾಡದೆ ಒಪ್ಪಿಕೋತಾರೆ…’

ಗಂಗೆ ಹೂ ಹೂ ಎನ್ನುತ್ತ ಎದುರು ಕಂಡ ಮಾವಿನ ಮರವನ್ನು ಲಂಗ ಮೇಲಕ್ಕೆತ್ತಿ ಕಟ್ಟಿ ಹತ್ತುವಳು. ಗೌರಿ ಜೋಕೆ ಜೋಕೆ ಎನ್ನುತ್ತ ಅವಳು ಎಸೆಯುವ ಮಾವಿನ ಕಾಯಿಗೆ ಸೆರಗೊಡ್ಡಿ ನಿಲ್ಲುವಳು.

ಒಂದು ದಿನ ಗೌರಿಯೂ ಬೆಚ್ಚುವಂತಾಯಿತು. ಥಟ್ಟನೇ ಎರಡು ಹಾವುಗಳು ಒಂದಕ್ಕೊಂದು ಹೆಣೆದುಕೊಂಡು ಎಣೆಯಾಡುವುದನ್ನು ಇಬ್ಬರೂ ಒಟ್ಟಿಗೇ ಕಂಡರು. ಗೌರಿಗೆ ಕಣ್ಣನ್ನು ಆ ದೃಶ್ಯದಿಂದ ಕೀಳಲಾಗಲಿಲ್ಲ. ಯಾರೊ ಋಷಿಗಳಿಗೆ ಅತಿಸುಖದ ಆಸೆಯಿರಬಹುದೆಂದು ಹೇಳಲು ಹೊರಟ ಗಂಗೆ ಅಕ್ಕನ ಮುಖ ನೋಡಿ ಸುಮ್ಮನಾದಳು. ಗೌರಿ ಸಾವರಿಸಿಕೊಂಡು, ಹಾವುಗಳು ಎಣೆಯಾಡುವುದನ್ನು ನೋಡಬಾರದಂತೆ ಕಣೇ, ಎಂದು ತಂಗಿಯನ್ನು ಸರಸರನೆ ಎಳೆದುಕೊಂಡು ಹೋದಳು.

ಒಂದು ದಿನ ಮುಂಜಾನೆ. ಯಾರಿಗೂ ಇನ್ನೂ ಸ್ನಾನವಾಗಿಲ್ಲ. ಗುಡ್ಡದ ಮೇಲೆ ಸಂಜೆ ಕಣ್ಣಿಗೆ ಬಿದ್ದಿದ್ದ. ಆದರೆ ಸಂಜೆ ಕೊಯ್ಯಬಾರದೆಂದು ಬಿಟ್ಟು ಬಂದಿದ್ದ, ಒಂದು ಮೊಟ್ಟಿನ ಸಂದಿಯಲ್ಲಿ ಗುಪ್ತವಾಗಿ ಯಥೇಷ್ಟ ಬೆಳೆದುಕೊಂಡ ಮತ್ತಿಸೊಪ್ಪು ತೆರವು ಹೋದಾಗ ಅದು ಕಾಣಿಸಿತು. ಮತ್ತಿಸೊಪ್ಪಿನ ಬುಡದಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತ ಅದು ಕಾಲು ಚಾಚಿ ಮಲಗಿತ್ತು.

ಜಿಂಕೆಯ ಹಾಗೆ ಕಾಣುವ ಪ್ರಾಣಿ ಅದು. ಅಕ್ಕರೆ ಉಕ್ಕಿ ಗಂಗೆ ಬಿಕ್ಕುತ್ತ ಅದನ್ನು ಮುಟ್ಟಿದಳು. ಅದು ಕಣ್ಣುಗಳನ್ನು ತೆರೆದು ಏದುಸಿರುಬಿಡುತ್ತ ಗುರುತು ಹಿಡಿದಂತೆ ತನ್ನನ್ನು ನೋಡುತ್ತಿದೆಯೆಂದು ಗಂಗೆಗೆ ಭಾಸವಾಗಿ, ತಮ್ಮ ಕೊಟ್ಟಿಗೆಯಲ್ಲಿ ಹುಟ್ಟಿದ ಕರುವನ್ನು ಅಕ್ಕು ಎತ್ತಿಕೊಳ್ಳುವಂತೆ ಎತ್ತಿಕೊಂಡಳು. ಅರ್ಧದೂರ ಗೌರಿ, ಅರ್ಧದೂರ ಗಂಗೆ ಅದನ್ನು ಎತ್ತಿ ಮನೆಗೆ ತಂದರು.

ಮರಿ ನೋವಿನಲ್ಲಿರುವಂತೆ ಕಂಡಿತು – ಅದರ ಏದುಸಿರಿನ ಗಂಟಲಿನಿಂದ ಯಾವ ದನಿಯೂ ಹೊರಡಲಿಲ್ಲ. ಆದರೆ ಅದರ ಬೊಗಸೆ ಕಣ್ಣುಗಳ ನೋಟ ಮಾತ್ರ ತನ್ನ ಜನ್ಮಾಂತರಗಳ ಹಿಂದಿನ ನೆನಪು ಅದಕ್ಕೆ ಥಟ್ಟನೇ ಆಗಿಬಿಟ್ಟಂತೆ ಇತ್ತು.

‘ಮನೆ ಕೆಲಸ ಸಾಲದು ಅಂದ್ರೆ ಇದೊಂದು ಕೆಲಸ ಬೇರೆ ನನಗೆ’ ಎಂದು ಅಕ್ಕು ಬೈಯುತ್ತಲೇ ಅದರ ಶುಶ್ರೂಶೆಗೆ ಮುಂದಾದಳು. ಕೇಶವ ಅದು ಜಿಂಕೆಯ ಮರಿಯಲ್ಲವೆಂದ; ಅದೇನು ತನಗೆ ತಿಳಿಯದೂ ಎಂದ. ಪುಟ್ಟೇಗೌಡನಿಗೆ ತೋರಿಸಿದ, ಬೇಟೆಯ ಹುಚ್ಚಿನ ಪುಟ್ಟೇಗೌಡನೂ ಅದನ್ನು ನೋಡಿ ಆಶ್ಚರ್ಯಪಟ್ಟ. ಮರಿಯ ಮೂತಿ, ಮೂತಿಗಿಂತ ಹೆಚ್ಚಾಗಿ ಅದರ ಕಣ್ಣಿನ ನೋಟ – ಅವನಾದರೂ ಈವರೆಗೆ ಕಂಡ ಯಾವ ಪ್ರಾಣಿಯಲ್ಲೂ ಕಂಡಿರಲಿಲ್ಲ.

ಕೇಶವ ತನಗೆ ಗೊತ್ತಿರುವ ಮದ್ದಗಳನ್ನೆಲ್ಲ ಅರೆದು ಅದಕ್ಕೆ ಕುಡಿಸಿದ. ಮಂತ್ರಿಸಿದ ಯಂತ್ರವೊಂದನ್ನು ಅದರ ಕೊರಳಿಗೆ ಕಟ್ಟಿದ. ನಿತ್ಯ ದೇವರ ತೀರ್ಥ ಕುಡಿಸಿದ.

ದೇವಲೋಕದ ಅತಿಥಿಯೆಂಬಂತೆ ಉಪಚರಿಸಿಕೊಳ್ಳುತ್ತ ಮನೆಯವರ ಅರ್ಧದ ಹಾಲು ಕುಡಿದು ದಿನೇ ದಿನೇ ಅದು ಬೆಳೆಯ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಪುರಾಣವಾಯಿತು.

ಒಂದು ವಾರದ ಉಪಚಾರದಲ್ಲೇ ಅದು ಚೇತರಿಸಿಕೊಂಡಿತ್ತು. ಚೇತರಿಸಿಕೊಂಡಿದ್ದೇ ಈ ಮರಿ ಅತ್ತಿತ್ತ ಸುಳಿದಾಡಿ, ಗಂಗೆ ಗೌರಿಯನ್ನು ಮೂಸಿ, ಒಮ್ಮೆಗೇ ಚಂಗನೆ ಅದೆಷ್ಟು ಎತ್ತರ ಹಾರಿತೆಂದರೆ ಹಿತ್ತಲಿನ ಸೂರು ಅದರ ತಲೆಗೆ ತಾಕಿತು. ಆಮೇಲಿಂದ, ನಿಂತಲ್ಲಿ ನಿಲ್ಲುವ ಮೃಗ ಅದಲ್ಲ. ಗಂಗೆ ಇದನ್ನು ನೋಡಿ ಈ ಲೋಕದಲ್ಲೇ ಉಳಿಯಲಿಲ್ಲ. ಕೇಶವನಂತೂ ಈ ಮರಿ ಲೋಕದ್ದಲ್ಲವೇ ಅಲ್ಲ ಎಂದು ಮನೆಗೆ ಬಂದವರಿಗೆಲ್ಲ ಹೇಳತೊಡಗಿದ. ಕಾಡಿನಲ್ಲಿ ತಪಸ್ಸು ಮಾಡ್ತ ಇರೊ ಋಷಿಯೊಬ್ಬನ ಮಗ ಇದು ಇರಬಹುದಲ್ಲವ ಎಂದರೆ, ಕೇಶವ “ಯಾಕಿರಬಾರದು?” ಎಂದು ಗಂಗೆಯ ಕಲ್ಪನೆಗೆ ಗರಿ ಮೂಡಿಸಿದ.

ಅಕ್ಕಯ್ಯ ಮಾತ್ರ ಇಂಥ ಊಹೆಗಳಿಗೆ ಸೊಪ್ಪು ಹಾಕದಿದ್ದರೂ ಗಾಬರಿಯಾದಳು; ಇದನ್ನು ಸಾಕುವುದು ತಪ್ಪಾದರೆ, ನಮಗೆ ಕೆಟ್ಟದಾದರೆ? ನಮ್ಮದಲ್ಲದ್ದನ್ನು ನಾವು ಬಯಸಬಾರದಲ್ಲವೇ? ಎಂದು ಚಿಂತಿಸುತ್ತ, ಸೀತೆಯನ್ನೇ ಮರುಳುಗೊಳಿಸಿದ ಮಾಯಾಮೃಗದಂತೆ ಇದು ಇರಬಹುದೆಂದು ಶಂಕಿಸುತ್ತ, ಎಳೆಯನಂತೆ ಆಡುವ ತಮ್ಮನನ್ನು ಬೈಯುತ್ತ ಹಾಲು ಅನ್ನ ತಿನ್ನಿಸಿ ಪ್ರಾಣಿಯನ್ನು ಮುದ್ದಿನಲ್ಲೇ ಸಾಕಿದಳು.

ಹೀಗೆ ಚಂಗನೆ ನೆಗೆಯುವ ಪ್ರಾಣಿ ಗಂಗೆಯ ಕೈಯಿಂದ ಹುಲ್ಲು ತಿನ್ನುತ, ಮೂತಿಯೆತ್ತಿದಾಗ ಅವಳ ಪ್ರಕಾರ ಮಾತಾಡುತ್ತ, ಬಾಲನಿಮಿರಿಸಿದಾಗ ನಗುತ್ತ, ಅಂಬೆಗಾಲಿನ ಮಗುವಿನಂತೆ ಬಾಯಿ ಕಳೆದು ಬಾಯಿಗೆ ಮಿಳ್ಳೆಯಿಂದ ಹಾಲು ಸುರಿಸಿಕೊಳ್ಳುತ್ತ, ತುಂಟು ಆಟದಲ್ಲಿ ಅವಳಿಗೆ ಹಾಯುತ್ತ, ಅವಳ ಮಗ್ಗುಲಲ್ಲೇ ರಾತ್ರೆ ಚಾಪೆಯ ಮೇಲೆ ಮಲಗುತ್ತ, ಅವಳ ಕೆನ್ನೆಯನ್ನು ನೆಕ್ಕುತ್ತ ಕೆಲವು ದಿನಗಳ ಮನೆಯ ಸಾಕಿದ ಪ್ರಾಣಿಯಂತಿತ್ತು.

ಅಂಗಳ ದಾಟಲು ಕೂಡ ಗಂಗೆಗಾಗಿ ರತ್ನ ಗಂಧಿ ಬೇಲಿಯ ಬಳಿ ಕಾಯುತ್ತಿದ್ದ ಗೂಢವಾದ ಕಾಡಿನ ಈ ಅತಿಥಿ ಒಂದು ದಿನ ಬೆಳಗ್ಗೆ ಎಲ್ಲರ ಕಣ್ಣಿದಿರಿಗೆ, ದೂರದಲ್ಲಿ ಏನನ್ನೋ ಕಾಣುತ್ತಿರುವಂತೆ ಕಿವಿ ನಿಮಿರಿಸಿ ಕತ್ತೆತ್ತಿ ನೋಡುತ್ತ ನಿಂತೇ ಇದ್ದದ್ದು, ಎಲ್ಲರೂ ನೋಡುನೋಡುತ್ತಿದ್ದಂತೆಯೇ, ಎಳೆಬಿಸಿಲನ್ನು ಕುಡಿದು ಉನ್ಮತ್ತವಾದಂತೆ, ಏನೋ ಥಟ್ಟನೆ ನೆನಪಾಗಿಬಿಟ್ಟಂತೆ, ನಾಗಾಲೋಟದಲ್ಲಿ ಗುಡ್ಡದ ಮೇಲೆ ಕ್ಷಣದಲ್ಲಿ ಓಡಿ ಮಾಯವಾಗಿ ಬಿಟ್ಟಿತು.

* * *

ಗುಡ್ಡದಲ್ಲಿ ಎಲ್ಲೆಲೂ, ದಭೆದಭೆಗಳ ಅಡಿಯಲ್ಲಿ, ಹುಲಿಹೆಜ್ಜೆಗಳ ಜಾಡಿನಲ್ಲಿ, ಬಿದಿರಿನ ಹಿಂಡಲುಗಳಲ್ಲಿ, ಅಬ್ಬರಿಗಳ ಅಂಚಿನಲ್ಲಿ, ತಳದಲ್ಲಿ, ಅಲೆದು ಅಲೆದು ಹುಡುಕಿದ್ದಾಯಿತು; ಗಿರಿಜಾ ಗಿರಿಜಾ ಎಂದು ಗಂಗೆ ಅದನ್ನು ಕೂಗಿ ಕೂಗಿ ಕರೆದದ್ದಾಯಿತು. ಆದರೆ ಕಾಡಿನ ಗೂಢ ಅತಿಥಿ ಮಾಯವಾಗಿ ಬಿಟ್ಟಿದ್ದಳು.

ಗಂಗೆ ಅತ್ತಳು. ಊಟ ಬಿಟ್ಟಳು. ಅತ್ತು ಅತ್ತು ಮಲಗಿದಳು. ಎರಡು ದಿನಗಳಲ್ಲಿ ಅವಳ ಕಣ್ಣುಗಳು ಕೆಂಪಾಗಿ ಮೈಸುಡತೊಡಗಿತು.

ಏರಿದ ಜ್ವರದಲ್ಲಿ ಗಿರಿಜಾ ಗಿರಿಜಾ ಎಂದು ಕಣ್ಮರೆಯಾದ ತನ್ನ ವಸ್ತುವನ್ನು ಕರೆಯುತ್ತಲೇ ಇದ್ದಳು. ಕರೆದು ಕರೆದು ಅವಳ ಗಂಟಲು ಒಣಗಿ ಅವಳ ಮಾತು ನಿಂತಿತು. ಆದರೂ ಸನ್ನೆ ಮಾಡಿ ಕರೆಯುವಳು. ಮೃತ್ಯುಂಜಯ ಜಪಮಾಡುತ್ತ ಕೇಶವ ಇಡೀ ಹಗಲು ಇಡೀ ರಾತ್ರೆ ಅವಳ ಪಕ್ಕದಲ್ಲಿ ಕೂತಿದ್ದ. ಬೆಳಗಾಯಿತು. ಕೋಳಿ ಮೂರು ಸಾರಿ ಕೂಗಿದ್ದು ಕೇಳಿತು.

ಇನ್ನೂ ಆಳದ ನಿದ್ದೆಗೆ ಜಾರುವಾಗ ಶ್ವಾಸವನ್ನು ಎಳೆದುಕೊಳ್ಳುವಂತೆ ಗಂಗೆ ನಿಧಾನ ಎಳೆದುಕೊಂಡಳು; ಮತ್ತೆ ಬಿಟ್ಟಳು. ಎಚ್ಚರವಾಗುವ ಹಕ್ಕಿಗಳ ಸಂಭ್ರಮದ ಚಿಲಿಪಿಲಿಯನ್ನು, ಗೂಡುಬಿಡುವ ರೆಕ್ಕೆಗಳ ಅವಸರವನ್ನು ಆಲಿಸುತ್ತ ಪಕ್ಕದಲ್ಲೇ ಕೂತಿದ್ದ ಗೌರಿ ಹೀಗೇ ಅವಳು ಹೊರಟೇ ಹೋಗಿ ಬಿಟ್ಟಿದ್ದನ್ನು ಅರಿತಳು. ತೆರೆದಿದ್ದ ತಂಗಿಯ ನೀಳವಾದ ರೆಪ್ಪೆಯ ಕಣ್ಣಗಳನ್ನು ಮುಚ್ಚಿದಳು. ಮಾಯವಾದ ದಿವ್ಯ ಮೃಗದ ಕಣ್ಣುಗಳೇ ಅವಳವು. ಎಲ್ಲ ಅತ್ತರೂ ಗೌರಿ ಅಳಲಿಲ್ಲ.