ಗಂಗೆ ಸತ್ತ ಮೇಲೆ ಗೌರಿಯ ಚರ್ಯೆ ಬದಲಾಗುತ್ತ ಹೋಯಿತು. ಗಂಭೀರಳಾದಳು. ತನ್ನಲ್ಲೇ ಅಡಗಿ ಮೊಗ್ಗಾದಂತೆ ಕಾಣತೊಡಗಿದ ಅವಳು ಬಯ್ಗಳದಲ್ಲೇ ಎಲ್ಲರ ಪಾಲನೆ ಮಾಡುವ ಅಕ್ಕಯ್ಯನಿಗೆ ಸಮಸ್ಯೆಯಾದಳು. ಕೀಟಲೆಗಳ ಮೂಲಕ ರಮಿಸುವ ಕೇಶವನಿಗೆ ರಹಸ್ಯಳಾದಳು.

ಈಗ ನಿಧಾನ ನಡೆಯುವಳು; ಬಿಸಿಲಿನಲ್ಲಿ ತಲೆ ಒಣಗಿಸಿಕೊಳ್ಳುತ್ತ ಎಲ್ಲೋ ಏನೋ ನೋಡುವವಳಂತೆ ನಿಲ್ಲುವಳು. ಜಡೆ ಹಾಕಳು. ಹೂ ಮುಡಿಯಳು, ಸದಾ ಓಡಾಡಿಕೊಂಡೇ ಇರುತ್ತಿದ್ದವಳು ಕೇಶವನ ದೀರ್ಘವಾದ ಪೂಜೆಯ ವೇಳೆಯಲ್ಲಿ ಕಣ್ಣು ಮುಚ್ಚಿ ಕೂತಿರುವಳು. ಅಕ್ಕಯ್ಯನಿಗೆ ಎದುರಾಡಳು. ರಾತ್ರೆ ಊಟವಾದ ಮೇಲೆ ಹಿತ್ತಲಿನಲ್ಲಿ ಮಾಯವಾಗುವಳು. ಹಾಸಿಗೆ ಹಾಸಿಕೊಳ್ಳದೆ ಗಿರಿಜ ಮಲಗುತ್ತಿದ್ದ ಚಾಪೆಯ ಮೇಲೆ ಮಲಗುವಳು.

ಅಕ್ಕು ಏನೇನೋ ಹರಕೆ ಹೇಳಿಕೊಂಡಳು: ಏಳ್ರಾಟದ ಶನಿಗೆ, ಪಶುಪತಿಯಾದ ಶಿವನಿಗೆ, ಸತ್ಯನಾರಾಯಣನಿಗೆ, ಊರಿನ ಮಾರಿಗೆ, ಮನೆಯ ದೇವರಿಗೆ, ಧರ್ಮಸ್ಥಳದ ಮಂಜುನಾಥನಿಗೆ, ಅಣ್ಣಪ್ಪನಿಗೆ, ಅಶ್ವತ್ಥ ವೃಕ್ಷದ ಬುಡದ ನಾಗನಿಗೆ, ತಿರುಪತಿಯ ತಿಮ್ಮಪ್ಪನಿಗೂ – ಗೌರಿಯ ಭ್ರಮೆಯನ್ನು ಕಳೆಯಪ್ಪ, ಅವಳೊಂದು ಗಂಡನ ಮನೆ ಸೇರುವಂತೆ ಕರುಣಿಸಪ್ಪ,ಎಂದು.

ಗೌರಿಗೆ ಭ್ರಮೆ ಇರಬಹುದೆಂದು ಸರ್ಪಗಣ್ಣಿನ ಅಕ್ಕು ತಿಳಿಯಲು ಅವಳದೇ ತರ್ಕದಿಂದ ಹುಟ್ಟಿದ ಕಾರಣವಿತ್ತು. ಗೌರಿಗೆ ಗೊತ್ತಿಲ್ಲದಂತೆ ಒಂದು ಬೆಳದಿಂಗಳಿನ ರಾತ್ರಿ ಅವಳ ಬೆನ್ನ ಹಿಂದೆಯೇ ನಡೆದು ಕಂಡದ್ದು ಶುದ್ಧ ಸಂಸಾರಿಯಾದ ಅವಳಿಗೆ ವಿಚಿತ್ರವೆನ್ನಿಸಿತ್ತು. ಗೌರಿ ಸಂಪಗೆಯ ಮರದ ಅಡಿ ನಿಂತು ತಾನು ಬಡಿಸಿಕೊಂಡು ತಂದ ಹಾಲನ್ನವನ್ನು ಮರದ ಬುಡದಲ್ಲಿಟ್ಟು ಕಾದಳು. ಅಲ್ಲಿಗೊಂದು ಕಪ್ಪು ಬೆಕ್ಕು ಸದ್ದಿಲ್ಲದೆ ಬಂತು. ಅಕ್ಕುಗೆ ಹೆದರಿಕೆಯಾಗುವಂತೆ ಅವಳನ್ನು ಅದು ನೋಡಿತು. ಬೆಕ್ಕು ಮತ್ತು ಗೌರಿ ಎದುರು ಬದಿರಾಗಿ ಏನೋ ಒಬ್ಬರಿಗೊಬ್ಬರು ಹೇಳಿಕೊಳ್ಳುವಂತೆ ಗಹನವಾಗಿ ನಿಂತರು. ಬೆಕ್ಕು ಮತ್ತು ಮನುಷ್ಯ ಪ್ರಾಣಿಯ ಸರ್ವೇಸಾಮಾನ್ಯವಾದ ಅಡುಗೆ ಮನೆ ಒಲೆ ಎದುರಿಗಿನ ಸಮಾಗಮದಂತೆ ಕಾಣಲಿಲ್ಲ. ಹಾಲು ಕದಿಯಲು ನಿತ್ಯ ಬರುವ, ಇಲಿಗಳನ್ನು ಹಿಡಿಯುವ ತಮ್ಮ ಅಕ್ಕರೆಯ ಬೈಗಳದ ಬೆಕ್ಕೂ ಅದಾಗಿರಲಿಲ್ಲ. ಯಾವುದೋ ಗೂಢದಿಂದ ಪತ್ಯಕ್ಷವಾದ ಕಡುಕಪ್ಪು ಬಣ್ಣದ ಬೆಕ್ಕು ಅದಾಗಿತ್ತು. ಅದು ದೆವ್ವ ಎಂದುಕೊಂಡು ನಡುಗುತ್ತ ಅಕ್ಕು ನೋಡಿದಳು. ಗೌರಿ ಹಿಂದಕ್ಕೆ ತಿರುಗಿ ಅಕ್ಕುವನ್ನು ನೋಡಿದರೂ ಏನೂ ಹೇಳದೆ ನಿತ್ಯದ ತನ್ನ ಕೆಲಸವೆಂಬಂತೆ ಬೆಕ್ಕಿನ ಕಡೆ ತಿರುಗಿ ನಿಂತಳು.

ಆಮೇಲೆ ಬೆಕ್ಕು ತುಂಬ ಇಷ್ಟವಾದಂತೆ ಬಾಳೆಲೆಯನ್ನು ನೆಕ್ಕಿ ನೆಕ್ಕಿ ಹಾಲನ್ನವನ್ನು ತಿಂದಿತು. ಕಾಡಿನ ದಿಕ್ಕಿನಲ್ಲಿ ತರಗೆಲೆ ತುಳಿದ ಸದ್ದೂ ಆಗದಂತೆ ಓಡಿತು.

ಇದೇನು, ಎತ್ತ, ಕೇಳಲಾರದೆ ಗೌರಿಯಲ್ಲಿ ಯಾವುದೋ ದೆವ್ವವೋ ದೇವತೆಯೋ ಹೊಕ್ಕಿದೆ ಎಂದು ಭೀತಳಾದ ಅಕ್ಕ ಹಿಂತಿರುಗಿ ನೋಡಿದೆ ಸರಸರನೆ ಮನೆಗೆಬಂದಳು. ಗೌರಿ ಮನೆ ಚಿಟ್ಟೆಯ ಮೆಟ್ಟಿಲು ಹತ್ತುತ್ತ ತುಂಬ ಶಾಂತವಾಗಿ,

‘ಅಕ್ಕು ಯಾಕೆ ಇನ್ನೂ ಮಲಗಿಲ್ಲ. ಹೋಗಿ ಮಲಗು’ ಎಂದಳು. ಅದು ಅವಳ ಎಂದಿನ ಧ್ವನಿಯಾಗಿರಲಿಲ್ಲ. ಅಕ್ಕುವನ್ನು ಏನೂ ಅರಿಯದ ಒಂದು ಮಗುವೋ ಎನ್ನುವಂತೆ ಅವಳು ಕಂಡಂತಿತ್ತು.

ಅಕ್ಕು ಸರಸರನೆ ಅಡುಗೆ ಮನೆಗೆ ಹೋಗಿ ಮುಷ್ಟಿಯಲ್ಲಿ ಒಂದಿಷ್ಟು ಉಪ್ಪು ಪೊರಕೆಯ ಚೂರು ತಂದಳು. ಗೌರಿಯ ಮುಖಕ್ಕೆ ಅದನ್ನು ಸುಳಿದಳು. ಸದಾ ಉರಿಯುವ ಬಚ್ಚಲಿನ ಒಲೆಗೆ ಅದನ್ನು ಎಸೆದು ಸೊಂಟದ ಮೇಲೆ ಕೈಯಿಟ್ಟು ಕಾದಳು. ಅದು ಚಟಪಟಗುಟ್ಟುವುದರಿಂದ ಕೊಂಚ ಸಮಾಧಾನಗೊಂಡು ಜಪಮಾಡುತ್ತಾ ಮಲಗಿದಳು.

ಮಾರನೇ ದಿನದಿಂದ ಅಕ್ಕು ತನಗೆ ತಲೆ ಸುತ್ತಿಬರುತ್ತದೆ ಎಂದು ಮಲಗಿ ಬಿಟ್ಟಳು. ಕೊಟ್ಟಿಗೆ ಕೆಲಸದಿಂದ ಹಿಡಿದು ಅಡಿಗೆ ಇತ್ಯಾದಿ ಎಲ್ಲವನ್ನೂ ಕೇಶವನ ಸಹಾಯವನ್ನೂ ತೆಗೆದುಕೊಳ್ಳದೆ ಗೌರಿಯೆ ಮಾಡುವುದು ನೋಡಿ ಅವಳಿಗೆ ಕಷ್ಟವಾದರೂ ಸಮಾಧಾನವೂ ಆಯಿತು, ಆದರೆ ಯಥಾಪ್ರಕಾರ ಗೌರಿ ಕತ್ತಲಾಗುತ್ತಿದ್ದಂತೆಯೆ ಅದೊಂದು ಪೂರ್ವ ನಿಶ್ಚಿತ ಭೇಟಿ ಎಂಬಂತೆ ಹಿತ್ತಲಿನ ಸಂಪಗೆ ಮರದ ಬುಡದಡಿ ನಡೆದು ಬಿಡುವಳು. ಪ್ರತಿ ಸಂಜೆಯೂ ಅವಳು ಹೊರಗೆ ಹೋಗುವುದನ್ನು ಅಕ್ಕು ಗಮನಿಸಿ ಇನ್ನಷ್ಟು ಆತಂಕಗೊಂಡಳು. ಮದುವೆಯಾಗದ ಹುಡುಗಿಯೆಂಬುದು ದೆವ್ವದ ಕಾಟಕ್ಕೆ ಸುಲಭವಾದ ಕಾರಣವಾಗಿರಬಹುದೆಂದು ಇನ್ನಷ್ಟು ಗಾಬರಿಯಾಯಿತು. ಗಂಡಸರನ್ನು ಮೋಹಿನಿ ಕಾಡುವಂತೆ ಗೌರಿಯನ್ನು ಯಾವುದಾದರೂ ಬ್ರಹ್ಮರಾಕ್ಷಸ ಹಿಡಿದುಬಿಟ್ಟಿದ್ದರೆ ಅವಳ ಮೈ ಇಳಿದುಹೋಗುವುದು ಖಂಡಿತ. ಅವಳ ಗರ್ಭ ಒಣಗಿಹೋಗುವುದು ನಿಶ್ಚಿತ.

ಅಕ್ಕು ಶುಶ್ರೂಶೆಯನ್ನು ಗೌರಿ ಸ್ವಂತ ಮಗಳಂತೆ ಮಾಡಿದಳು. ತನ್ನ ತಂದೆಯ ಕಾಲದಿಂದ ಮನೆಯಲ್ಲಿ ಜೋಪಾನವಾಗಿ ಕಾದಿಟ್ಟ, ಸರ್ವರೋಗ ನಿವಾರಿಣಿಯೆಂದು ಪ್ರಸಿದ್ಧವಾದ ಉಂಡೆಯೊಂದನ್ನು ತೆಯ್ದು, ಜೇನುತುಪ್ಪದಲ್ಲಿ ಅದನ್ನು ಕಲಿಸಿ, ನೆಕ್ಕಿಸಿ, ಬೆನ್ನಿಗೆ ಬಿಸಿನೀರಿನ ಶಾಖಕೊಟ್ಟು ಕೊಂಚ ಹೊತ್ತು ಮಲಗಿಸಿ, ಮತ್ತೆ ಎಬ್ಬಿಸಿ, ಮಣೆಮೇಲೆ ಕೂರಿಸಿ, ‘ನಿನಗೆ ಉಷ್ಣವಾಗಿದೆ’ ಎಂದು ಗದರಿಸಿ, ಪುಸಲಾಯಿಸಿ, ಅವಳ ಬೋಳು ತಲೆಗೆ ತೆಂಗಿನ ಎಣ್ಣೆ ಹಚ್ಚಿ, ಎರೆದು, ಅವಳ ಕಿರಿಕಿರಿಗೆ ಕಿವಿಗೊಡದೆ, ಮತ್ತೇನೋ ಕೆಲಸವಿರುವಂತೆ ಗುಡ್ಡದ ಕಡೆ ನಡೆದುಬಿಡುವುದು. ಅವಳು ಹೊರಹೋದದ್ದೆ ಅಕ್ಕು ತನಗೇನೂ ಆಗಿಲ್ಲವೆಂಬಂತೆ ಎದ್ದು ಕೂತು ತನ್ನ ತಮ್ಮನನ್ನು ಪೀಡಿಸತೊಡಗುವಳು – ಗೌರಿಯನ್ನು ಅವನೇ ಮದುವೆಯಾಗಬೇಕೆಂದು.

* * *

ಮುಂಚಿನಿಂದಲೂ ಅಕ್ಕು ಈ ವಿಷಯವನ್ನು ಬಗೆಬಗೆಯಾಗೆ ಎತ್ತಿದ್ದಿದೆ. ಆದರೆ ಪ್ರತಿಸಾರಿಯೂ ಅದನ್ನೊಂದು ತಮಾಷೆಯೆಂಬಂತೆ ಗೌರಿಯೂ ಗಂಗೆಯೂ ಕೇಶವನೂ ಅಕ್ಕುವನ್ನೇ ಹಾಸ್ಯ ಮಾಡುತ್ತಿದ್ದರು.

‘ಮದುವೆಯಾಗೋ ಹುಡುಗಿ ಮನೆಗೆ ನಾನು ದಿಬ್ಬಣದಲ್ಲಿ ಹೋಗೋದು ಹೇಗೆ ಸಾಧ್ಯವೇ? ಮದುವೆಯಾಗೋ ಹೆಣ್ಣು ಇಲ್ಲೇ ವಕ್ಕರಿಸಿದ್ದಾಗ?’

ಮುಷ್ಟಿ ಮಾಡಿದ ಬಲಗೈಯನ್ನು ಮೇಲಕ್ಕೆತ್ತಿ ಆಡಿಸುತ್ತ ಯಕ್ಷಗಾನದ ವೇಷದಂತೆ ಸವಾಲು ಹಾಕಿ, ಹಿಂದಕ್ಕೆ ಸರಿದು, ಮತ್ತೆ ಮುಂದೆ ಬಂದು ಅಕ್ಕುವಿನ ಮುಖಕ್ಕೆ ಎದುರಾಗಿ ಕೇಶವ ನಿಲ್ಲುವನು. ಮುಖವನ್ನೇ ದಿಟ್ಟಿಸುತ್ತ, ಎತ್ತಿದ ಬಲಮುಷ್ಟಿಯನ್ನು ಭಾವಯುಕ್ತವಾಗಿ ಇಳಿಸಿ, ಎಡ ಅಂಗೈ ಮೇಲೆ ಗುದ್ದುತ್ತ ರಾಗವಾಗಿ ಹೇಳುವನು.

‘ಅಕ್ಕಯ್ಯ ನಾನು ಕಾಶೀಗೆ ಹೊರಟು ನಿಂತಾಗ ನನಗೊಂದು ಕೊಡೇನೂ ಹೊದೆಯಲೊಂದು ಅಂಗವಸ್ತ್ರವನ್ನೂ ಯಥಾವತ್ತಾಗಿ ಕೊಟ್ಟು, “ಕಾಶಿಗೆ ಹೋಗಬೇಡಪ್ಪ, ನಮ್ಮ ಹುಡುಗಿಯ ಪಾಣಿಗ್ರಹಣ ಮಾಡಿ, ಕನ್ಯಾ ಸೆರೆಯಿಂದ ನನ್ನನ್ನು ಬಿಡಿಸಿ ಪುಣ್ಯವಂತನಾಗಪ್ಪ” ಎಂದು ಮತ್ತೆ ಹಿಂದಕ್ಕೆ ನನ್ನ ಸಾಕ್ಷಾತ್ ಅಕ್ಕಯ್ಯನಾದ ನೀನೇ, ಈ ಕೇಶವನಾಮಧೇಯನಾದ ವರಕುಮಾರನನ್ನ ಕರಕೊಂಡು ಬರೋದೇನೆ?’

ಗೌರಿ ತನ್ನ ಎರಡು ಕೈಗಳನ್ನು ಸೊಂಟದ ಮೇಲಿಟ್ಟು ಯಕ್ಷಗಾನದ ಹೆಣ್ಣು ಪಾತ್ರದಂತೆ ವಯ್ಯಾರದಲ್ಲಿ ವಾದಕ್ಕೆ ನಿಲ್ಲುವಳು:

‘ಈ ಮಾವನನ್ನ ಬಹುವಚನದಲ್ಲೇ ಕರೆಯೋಕೆ ನನಗೆ ಬರಲ್ವಲ್ಲೆ ಅಕ್ಕಯ್ಯನೆಂಬ ನಮ್ಮ ದೇವೀ. ಮತ್ತೆ ಭಾಗ್ಯವಂತಳಾಗಬೇಕೆಂದು ನನ್ನ ದೇವಿಯಾದ ನೀವೇ ಬಯಸುವ ನಾನೇನಾದರೂ ಇವನನ್ನ ಮದುವೆ ಆದದ್ದೇ ಆದರೆ ಜುಟ್ಟು ಕತ್ತರಿಸ್ತಾನಾ? ಅಂಗಿ ಹಾಕ್ಕೋತಾನಾ? ಪಟ್ಟಣಗಳ ಬೀದಿಗಳ ಮೇಲೆ ಈ ಗೊಡ್ಡು ವೈದಿಕನ ಜೊತೆ ನಾನು ಹೇಗೆ ಅಡ್ಡಾಡಬಹುದು ಹೇಳು ದೇವಿ?’

‘ದರಿದ್ರ ಬುದ್ಧಿಯ ಹುಡುಗಿ. ಪೇಟೇ ಶೂದ್ರನನ್ನೋ, ಜೈಲಿಗೆ ಹೋಗಿಬಂದು ಮಡಿಮೈಲಿಗೆ ಎಲ್ಲ ಬಿಟ್ಟ ಕಾಂಗ್ರೆಸ್‌ನವನನ್ನೋ ಮದುವೆಯಾಗು ಹಾಗಾದರೆ’

‘ಜೈಲಿಗೆ ಹೋಗಿರೋ ನಮ್ಮ ಸಾಹುಕಾರ್ರಿಗೆ ವಯಸ್ಸಾಗಿ ಬಿಟ್ಟಿದೆಯಲ್ಲೇ ಅಕ್ಕಯ್ಯನೆಂಬ ನಮ್ಮ ದೇವಿ. ಮುದುಕನನ್ನ ಆಗು ಅಂತೀಯ, ಮಂಗಳೂರಿನಲ್ಲಿ ಅವರಿಗೆ ಯಾರೋ ಇದಾರೇಂತ ಈ ಅಧಿಕ ಪ್ರಸಂಗಿಯಾದ ನಿಮ್ಮ ತಮ್ಮನೇ ಹೇಳ್ತಿದ್ದ’.

‘ಈ ಬಜಾರೀನ್ನ ಈ ಪುರೋಹಿತ ಭಟ್ಟ ಮದುವೆಯಾದರೆ. ಗಂಡನನ್ನ ಮಾರಿ ಒಂದು ಮೂಟೆ ಮಂಡಕ್ಕಿ ಕೊಂಡು ಬಿಟ್ಟಾಳು ಅಕ್ಕಯ್ಯ.’ ಅಳು ನಟಿಸುತ್ತ ಕೇಶವ ಸ್ವರೂಪಧಾರಿಯಾಗಿ ಹೇಳುವನು.

ಪುಟ್ಟ ಗಂಗೆಯೂ ಈ ಹಾಸ್ಯದಲ್ಲಿ ಭಾಗಿಯಾಗುವಳು:

‘ಅಕ್ಕಯ್ಯ ಅಕ್ಕಯ್ಯ ದಮ್ಮಯ್ಯ ಕಣೇ ಅಕ್ಕಯ್ಯ, ಮಾವಯ್ಯನನ್ನ ನಾನೇ ಮದುವೆಯಾಗ್ತೇನೇ….ಅವನು ಎಷ್ಟು ಚೆನ್ನಾಗಿ ಬೆನು ಉಜ್ಜುತಾನೆ, ಎಷ್ಟು ಒಳ್ಳೆ ಪೆಟ್ಲು ಮಾಡಿಕೊಡ್ತಾನೆ, ಎಷ್ಟು ಚೆನ್ನಾಗಿ ಹೂ ಕಟ್ತಾನೆ, ಎಷ್ಟು ಜೋರಾಗಿ ಕಾಲನ್ನ ಮೇಲಕ್ಕೆತ್ತಿ ಕೈ ಮೇಲೇನೇ ನಡೀತಾನೆ, ದಾಸರ ಪದ ಹಾಡ್ತಾನೆ. ತನ್ನ ಪಾಣೀ ಪಂಚೆ ಜೊತೆ ನನ್ನ ಲಂಗಾನೂ ಒಗೆದುಕೊಡ್ತಾನೆ ಬೇಕಾದರೆ. ಅಂಟುವಾಳದ ಕಾಯೀನಲ್ಲಿ ಅಲ್ಲ, ಬಾರು ಸೋಪಿನಲ್ಲಿ.’

ಯಾವಾಗಲೋ ಪೇಟೆಯಿಂದ ಬರುವಾಗ ಕೇಶವ ಸೋಪು ಕೊಂಡು ತಂದದ್ದು ಯಾಕೆಂದು ಯಾವ ಅನವಶ್ಯಕ ಖರ್ಚಿಗೂ ಅವಕಾಶಕೊಡದ ಅಕ್ಕು ಪುಕಾರು ಎತ್ತಿದ್ದನ್ನು ಘಾಟಿ ಹುಡುಗಿ ಗಂಗೆ ಕೇಳಿಸಿಕೊಂಡು ಬಿಟ್ಟಿದ್ದಳು. ಅಕ್ಕವೂ ನಗು ತಡೆಯಲಾರದೆ,

‘ಇಷ್ಟು ವಯಸ್ಸಾದರೂ ಮಕ್ಕಳಾಟ ಬಿಡದ ನಿಮ್ಮ ದುರ್ಬುದ್ಧಿಗೆ ಏನನ್ನಲಿ’ ಎಂದು ಬಯ್ಯುತ್ತ ಒಳಗೆ ನಡೆದು ಬಿಡುವಳು.

ಮಾಗಿ ಕಾಲದ ಒಂದು ಏಕಾದಶಿ. ಮನೆಯಲ್ಲಿ ಒಲೆ ಹಚ್ಚಿರಲಿಲ್ಲ. ಅಕ್ಕು ಹಿಂದೆ ಫಲಾಹಾರ ಮಾಡುತ್ತಿದ್ದವಳು ಅವತ್ತು ನೀರನ್ನು ಸಹ ಮುಟ್ಟಿರಲಿಲ್ಲ. ಇನ್ನು ಮುಂದೆ ಉಗುಳನ್ನು ನುಂಗುವುದಿಲ್ಲವೆಂಬ ವ್ರತ ಹಿಡಿದಿದ್ದಳು.

ಆದರೆ ಅಕ್ಕು ಹಿಂದಿನವಾರ ಮಡಿಯಲ್ಲಿ ಕುಟ್ಟಿಟ್ಟಿದ್ದ ಅವಲಕ್ಕಿಯನ್ನು ನೆನಸಿ, ಅದಕ್ಕಷ್ಟು ಮೊಸರನ್ನು ಮಾವಿನಮಿಡಿ ಉಪ್ಪಿನಕಾಯಿಯ ಖಾರವಾದ ರಸವನ್ನೂ ಬೆರಸಿ ಗೌರಿಯೂ ಕೇಶವನೂ ತಿನ್ನುತ್ತ ಊಟದ ಮನೆಯಲ್ಲೇ ಚಾಪೆಯ ಮೇಲೆ ಮಲಗಿಕೊಂಡ ಅಕ್ಕುವಿನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದರು; ಉಪ್ಪಿನಕಾಯಿ ರಸಕ್ಕೆ ಅಕ್ಕುವಿನ ವ್ರತಭಂಗ ಮಾಡುವ ಶಕ್ತಿಯಿರಬಹುದೇ ಎಂಬ ಕೆಟ್ಟ ಕುತೂಹಲದಿಂದ. ಇದರ ಗುಮಾನಿಯಾದ ಅಕ್ಕು ಧೃತಿಗೆಡದೆ ‘ಕಾಯಿಸಿದ ಹಾಲನ್ನ ಮುಚ್ಚಿಟ್ಟಿದೀಯ? ಅಥವಾ ಬೆಕ್ಕಿನ ಬಾಯಿಯ ಪಾಲಾಯ್ತ ಅದು, ನಿನ್ನೆ ಹಾಗೆ?’ ಎಂದು ಮಕ್ಕಳನ್ನು ಗದರಿಸುವಂತೆ ಕೇಳಿದಳು. ಗೌರಿ ಮಾವನ ಮುಖ ನೋಡಿದಳು; ಮಾವ ಹುಬ್ಬುಗಳನ್ನು ಯಕ್ಷಗಾನದ ಹಾಸ್ಯಗಾರ ವೇಷದಂತೆ ವಿಶೇಷವಾಗಿ ಎತ್ತಿ ಮುಖ ಆಡಿಸಿದ. ಅಕ್ಕು ಗಮನಿಸಿದರೂ ಸೊಪ್ಪು ಹಾಕದೆ ಶ್ರೀರಾಮಚಂದ್ರ ಎಂದು ಕಣ್ಣುಮುಚ್ಚಿದಳು.

ಇನ್ನೂ ಸೂರ್ಯ ನೆತ್ತಿಗೇರಿರಲಿಲ್ಲ; ಏಕಾದಶಿಯಾದ್ದರಿಂದ ಅಡುಗೆ ಕೆಲಸವಿಲ್ಲ. ಗುಡ್ಡ ಹತ್ತಿ ಹೋಗಲು ಗೌರಿ ಅಣಿಯಾಗುವುದನ್ನು ಅಕ್ಕಯ್ಯ ಗಮನಿಸಿದಳು. ಸೆರಗನ್ನು ಸೊಂಟಕ್ಕೆ ಸಿಕ್ಕಿಸಿದಳೆಂದರೆ ಗೌರಿಯ ಸರ್ಕೀಟು ಶುರುವಾಯಿತೆಂದು ಅರ್ಥ. ಅವಳು ಮೆಟ್ಟಿಲಿಳಿಯುವುದನ್ನು ಕಾದು ಅಕ್ಕು ಎದೆನೋವೆಂದು ನರಳಿದಳು. ಪರವಾಗಿಲ್ಲ, ಹೋಗಬಹುದೆಂದು ಗೌರಿಗೆ ಕೇಶವ ಕಣ್ಸನ್ನೆ ಮಾಡಿದ. ಗೌರಿ ನಡೆದು ಬಿಟ್ಟಳು.

ಸಾಮಾನ್ಯವಾಗಿ ಅಕ್ಕು ಮಾತು ತಮ್ಮನ ಜೊತೆ, ಅವನು ಒಬ್ಬನೇ ಇದ್ದಾಗ ಶುರುವಾಗುವುದು – ಅವಳ ಕುಪ್ಪುಸವಿಲ್ಲದ ಇನ್ನೂ ಹರೆಯದ ಬೆನ್ನನ್ನು ತೋರುವುದರಿಂದ.

‘ಕಪ್ಪು ಮಚ್ಚೆ ಕಾಣಿಸುತ್ತ ತಮ್ಮಯ್ಯ, ಅದು ಯಮಧರ್ಮರಾಯ ಸದ್ಯವೇ ನಾನು ಬಂದು ನಿನ್ನನ್ನ ಕರಕೊಂಡು ಹೋಗ್ತೇನೆ ಅಂತ ಅವನ ಬೆರಳಲ್ಲಿ ಈ ಬೆನ್ನನ್ನು ಮುಟ್ಟಿ ಸನ್ನೆ ಮಾಡಿ ಹೋಗಿರೋದು. ಯಾವತ್ತು ಆ ಮಾರಾಯ ಬಂದು ಈ ವಿಧವೆಗೆ ಮುಕ್ತಿ ಕೊಡ್ತಾನೋ ಗೊತ್ತಿಲ್ಲ. ಅಷ್ಟರಲ್ಲಿ ನಿಂದೂ ಗೌರೀದೂ ಮದುವೆಯಾಗಿ ಬಿಟ್ಟಿದ್ದರೆ ಸಮಾಧಾನವಾಗಿ ಕಣ್ಣು ಮುಚ್ಚಿ ಯಮಧರ್ಮರಾಯನಿಗೆ ಕರಕೊಂಡು ಹೋಗೋ ಮಾರಾಯ ಎಂದು ಬಿಡ್ತಿದ್ದೆ. ನನಗೆ ಅಂಥ ಪುಣ್ಯ ದಕ್ಕುವ ಹಾಗೆ ಮಾಡಬಾರ್ದ? ಎಂಥ ಕಣ್ಣಿಲ್ಲದ ಮಕ್ಕಳ ಜೊತೆ ನಾನು ಬದುಕಬೇಕಾಯ್ತೊ? ನಾನೇನು ಪಡಕೊಂಡು ಬಂದೆನೊ?’

* * *

ಗೌರಿ ಗುಡ್ಡಹತ್ತಿ ನಡೆದಾದ ಮೇಲೆ ಅಕ್ಕುವಿನ ಈ ಪುರಾಣ ಶುರುವಾದದ್ದೇ ಕೇಶವ ಏನೇನೋ ಮಾಡಿ ಅಕ್ಕು ಕಿರಿಕಿರಿ ಮರೆಯಲು ಪ್ರಯತ್ನಿಸಿದ. ಅವನಿಗೆ ಏನೋ ಹೇಳಬೇಕಿತ್ತು. ಅದು ಅವ್ಯಕ್ತವನ್ನು ಕುರಿತಾದ ಮಾತಾದ್ದರಿಂದ ತನ್ನ ನಿತ್ಯದ ಅಕ್ಕುಗೆ ಹೇಗೆ ಹೇಳುವುದು ಅವನಿಗೆ ತಿಳಿಯದು. ತಾಯಿ ಸತ್ತ ಮೇಲೆ ತನ್ನ ತುರಿಕಜ್ಜಿಯನ್ನು ಬೇವಿನೆಲೆ, ತುಳಸಿಗಳ ಮದ್ದಿನಲ್ಲಿ ಗುಣ ಮಾಡಿದ ಅಕ್ಕಯ್ಯ ಅವಳು. ಅಂಡು ತೊಳೆದವಳು. ಇವತ್ತಿಗೂ ತಾನೊಂದು ಕಜ್ಜಿಬುರುಕ ತಮ್ಮಯ್ಯನೇ ಅವಳ ಪಾಲಿಗೆ.

ಅಕ್ಕುಗೆ ಗೌರಿಯೂ ಪ್ರತಿ ತಿಂಗಳು ಮುಟ್ಟಾಗು, ತನ್ನ ಪಾಲನೆಗೆ ಬಂದ ಸವತಿಯ ಮಗಳು. ಅವಳ ಬಗ್ಗೆ ವಿಶೇಷವಾದ್ದನ್ನು ಅಕ್ಕುಗೆ ಹೇಗೆ ಹೇಳಬಹುದು ಅವನಿಗೆ ತೋಚುವುದಿಲ್ಲ.

ಕೇಶವ ನಾಗಂದಿಗೆಯಿಂದ ಪೂರ್ವಕಾಲದ ತಾಳೆಗರಿಗಳ ಕಟ್ಟನ್ನು ಬಿಚ್ಚಿ ಏನನ್ನು ಹುಡುಕುತ್ತಿದ್ದೇನೆಂದು ತಿಳಿಯದೆ ಹುಡುಕುತ್ತ ಕೂತ. ತಾಳೆಗರಿಗಳನ್ನು ಓದುವ ತಮ್ಮಯ್ಯ, ಸದಾ ಪಗಡೆಯಾಡುವ ಹುಚ್ಚಿನ ಹಡೆಯಾಗಿ ಕಾಣದೆ, ಅಕ್ಕಯ್ಯನಿಗೆ ಕೊಂಚ ವಿಶೇಷವಾಗಿ ಕಾಣುವುದಿತ್ತು ಒಮ್ಮೊಮ್ಮೆ.

ಆಮೇಲೆ ಪಂಚಾಂಗವನ್ನು ಬಿಚ್ಚಿದ. ಕವಡೆಗಳನ್ನು ಚೀಲದಿಂದ ತೆಗೆದ. ಬೆರಳುಗಳಲ್ಲಿ ಏನೇನೋ ಎಣಿಸುತ್ತ ಕೂತ. ಅಕ್ಕಯ್ಯನಿಗೆ ತನ್ನ ತಮ್ಮಯ್ಯ ಗಳಿಸಿಕೊಂಡ ಈ ವಿಶೇಷ ವ್ಯಕ್ತಿತ್ವದ ಚರ್ಯೆಗಳು ಇವತ್ತು ಗಮನಕ್ಕೆ ಬಂದಂತೆ ಕಾಣಲಿಲ್ಲ.

ಕೇಶವ ಪಂಚಾಂಗವನ್ನು ಸುತ್ತಿಟ್ಟು ಮನೆಯ ಹೊರಗೆ ನಡೆದ.

ಕೇಶವ ಮನೆಯಿಂದ ಹೊರಗೆ ಬಂದು ಉಣಗೋಲ ಬಳಿ ನಿಂತ. ಒಳಗಿನಿಂದ ಅಕ್ಕು ನರಳುವುದು ಕೇಳಿಸಿತು, ಕೇಳಿಸಬೇಕೆಂಬುದೇ ಅವಳ ಉದ್ದೇಶವಾದ್ದರಿಂದ ಸುಮ್ಮನೇ ಆಲಿಸುತ್ತಿದ್ದು, ಆಕಾಶದಲ್ಲೊಂದು ಬಿಳಿ ಹೊಟ್ಟೆಯ ಗರುಡ ಕಾಣಿಸಿದಂತಾಗಿ, ಅಂಗೈ ಮುಂಗೈ ತಂದು ಮುದ್ರೆ ಮಾಡಿ, ಎಡಗಣ್ಣು ಮುಚ್ಚಿ, ಬಲಗಣ್ಣಿಗೆ ಮುದ್ರೆ ಹಿಡಿದು ಗರುಡ ವಾಹನವನ್ನು ಸ್ತುತಿಸಿದ.

ಅಗಾಧ ನೀಲಿಯಲ್ಲಿ ಗರುಡ ನಿರಾಯಾಸ ತೇಲುತ್ತಿತ್ತು. ಇರುವಲ್ಲೇ ಮತ್ತೆ ಮತ್ತೆ ಬರುವಂತೆ ಸುತ್ತುತ್ತ, ಬಿಚ್ಚಿದ ರೆಕ್ಕೆಯ ನಿರಾತಂಕದಲ್ಲಿ ವಾಯುದೇವನಿಗೆ ತಾನು ಹೊತ್ತವನನ್ನು ಒಡ್ಡುತ್ತ.

ಕೇಶವ ಶ್ರೀಹರಿ, ಶ್ರೀಹರಿ ಎಂದು ಖುಷಿಗೊಳ್ಳುತ್ತ ಕ್ಷಣದಲ್ಲಿ ಹುಡುಗನಾಗಿಬಿಟ್ಟ. ಬೇಲಿ ಮೇಲಿನ ಕಳ್ಳಿಯ ಎಲೆಯೊಂದನ್ನು ಕಿತ್ತು ಅದನ್ನು ಅದರ ಬೆನ್ನಿನಲ್ಲಿ ಮುರಿದ. ಮುರಿದಲ್ಲಿ ಅಂಟಾದ ಹಾಲು ಜಿನುಗಿತು.

ಗಂಗೆ ಸತ್ತ ಮೇಲೆ ಯಾವ ಆಟವನ್ನೂ ಮನೆಯಲ್ಲಿ ಆಡಿಲ್ಲ. ಪಗಡೆಯಾಡಿಲ್ಲ, ಕವಡೆಯಾಡಿಲ್ಲ, ಚಿನ್ನಿದಾಂಡು ಆಡಿಲ್ಲ, ಸರಿಬೆಸ ಅಡಿಲ್ಲ, ಕಳ್ಳಿಯ ಎಲೆಯಿಂದ ಕನ್ನಡಿ ಮಾಡಿಲ್ಲ. ತಾಯಿ ಸತ್ತ ಮೇಲೆ ಅಕ್ಕುವಿನ ಪಾಲನೆಯಲ್ಲಿ ತಾನು ಕಲಿತ ಆಟಗಳೇ ಇವು.

ಬಲಿತ ಕಳ್ಳಿಯ ಹಾಲು ಯಥೇಚ್ಛ ಜಿನುಗಿದ ನಂತರ ಮುರಿದ ಎಲೆಯ ತುದಿಗಳನ್ನು ಎರಡು ಕೈಗಳ ಬೆರಳುಗಳಲ್ಲಿ ಹಿಡಿದು ನಾಜೂಕಾಗಿ ಮುಂದೆ ತಳ್ಳಿದ. ಗಂಗೆಗಿದು ಬಹಳ ಇಷ್ಟ. ತುದಿಗಾಲಲ್ಲಿ ನಿಂತು ಆತಂಕದಲ್ಲಿ ನೋಡುತ್ತಿದ್ದಾಳೆ ಎನ್ನಿಸಿತು. ಈ ಗಂಗೆಯ ಕಣ್ಣಿಗೆ ಋಷಿಸದೃಶ ಮಾಂತ್ರಿಕತೆಯಲ್ಲಿ, ಜಿನುಗುತ್ತಿದ್ದ ಹಾಲನ್ನು ಕನ್ನಡಿಯಾಗುವಂತೆ, ನಿಧಾನವಾಗಿ, ಅವಳು ತಾಳಿಕೊಳ್ಳಲಾರದ ಸಮಾಧಾನದಲ್ಲಿ ಪುಸಲಾಯಿಸಿದ. ಕಳ್ಳಿ ಕನ್ನಡಿಯಾಯಿತು. ಈ ಪುಟಾಣಿ ಕನ್ನಡಿ ಆಕಾಶದ ಬೆಳಕಿಗೆ ಎದುರಾಗಿ ದಿವ್ಯವಾದ ಬಣ್ಣಗಳನ್ನು ಮೆರೆದು ಗಂಗೆಯ ನೋಟದ ಜಲದಲ್ಲಿ ಪ್ರತಿಬಿಂಬಿತವಾಗುವುದು. ಕೇಶವ ಶ್ರೀಹರಿ ಎಂದುಕೊಂಡು ಬಣ್ಣದ ರೇಖುಗಳನ್ನೇ ದಿಟ್ಟಿಸುತ್ತ ಮೇಲೆ ನೋಡಿದ. ಅರೆ, ಗರುಡ ಇರುವಲ್ಲೇ ಇದ್ದಾನೆ.

ಗೌರಿಯ ಚಿತ್ತದ ಕನ್ನಡಿ ಅವ್ಯಕ್ತವಾದ್ದನ್ನು ಹೀಗೇ ಪ್ರತಿಫಲಿಸಿಕೊಂಡಿರಬಹುದು. ತನಗೆ ಕ್ಷಣಮಾತ್ರವಾದರೆ ಅವಳಿಗೆ ನಿತ್ಯವಾಗಿ. ಅಕ್ಕುಗೆ ಹೇಗಿದನ್ನು ಹೇಳುವುದೆಂದು ಬೆರಗಾಗುತ್ತ ಇನ್ನು ಬೆಳಗಲಾರದಂತೆ ರಾಡಿ ರಾಡಿ ಬಣ್ಣವಾಗಿ ಬಿಟ್ಟ ಕನ್ನಡಿ ನೋಡಿದ. ಏನೂ ಅರಿಯದಾದ.

ಕನ್ನಡಿ ಒಡೆಯಿತು. ಕಳ್ಳಿಯ ಹಾಲು ಕೈಗಂಟದಂತೆ ಜೋಕೆಯಾಗಿ ಗಿಡಿದ ಮೇಲದನ್ನು ಬಿಸಾಕಿ, ಖುಷಿಯಲ್ಲಿ ಜುಟ್ಟನ್ನು ಬಿಚ್ಚಿದ. ಕೂದಲನ್ನು ಕೊಡವಿ ಮತ್ತದನ್ನು ನೆತ್ತಿಯ ಮೇಲೆ ಊರ್ಧ್ವಮುಖಿಯಾಗಿ ನಿಲ್ಲುವಂತೆ ಕಟ್ಟಿದ. ಭಾಗವತರಾಟದ ನಾರದ ಮುನಿ ತಾನೆಂದುಕೊಂಡು ಉಲ್ಲಸಿತನಾಗಿ ಶ್ರೀಹರಿ ಶ್ರೀಹರಿ ಎನ್ನುತ ಒಳಗೆ ಬಂದ. ಅಕ್ಕು ಮಾಧ್ಯಾಹ್ನಿಕದ ನೆನಪು ಮಾಡಿದಳು.

ಚಳಿಗಾಲವಾದ್ದರಿಂದ ಬಲು ಮೋಜಿನಿಂದ ಕೇಶವ ತಲೆಯ ಮೇಲೆ ಬಿಸಿ ನೀರನ್ನು ಹೊಯ್ದುಕೊಳ್ಳಲು ತೊಡಗಿದ. ಹಂಡೆಯಲ್ಲಿ ತಾಮ್ರದ ಚೊಂಬು ಬೇಗ ಬೇಗ ಗುಳುಗುಳು ಗೊಳ್ಳುತ್ತ ಮುಳುಗುವ ಸಂಭ್ರಮದ ಶಬ್ದವನ್ನು ಅಕ್ಕು ಆಲಿಸಿದಳು. ಇಗೋ, ಮೈಯುಜ್ಜಿ ಕೊಳ್ಳುವಾಗ ಭಾಗವತರಾಟದ ಹಾಡನ್ನು ಬೇರೆ ಹಾಡಿಕೊಳ್ಳುತ್ತಿದ್ದಾನೆ. ಗಂಗೆಯ ಸಾವಿನ ನಂತರ ಅವನು ಹೀಗೆ ಖುಷಿಯಲ್ಲಿರುವುದನ್ನು ಅಕ್ಕು ಕಂಡಿಲ್ಲ. ಹಾಡು ಮುಗಿದದ್ದೇ ಗಂಗೇಚೈವ ಸ್ತುತಿ ಶುರುಮಾಡಿಬಿಟ್ಟ. ಸ್ನಾನದ ಪ್ರಾರಂಬದಲ್ಲೇ ಪಂಚ ನದಿಗಳ ಸ್ತುತಿ ಮಾಡಬೇಕಿತ್ತಲ್ಲ – ಏನಿವತ್ತು ವಿಶೇಷ ತಿಳಿಯಲಿಲ್ಲ. ಮಾಣಿಗೇನಾದರೂ ತಲೆ ಕಟ್ಟಿತೆ? ತನ್ನ ಸ್ನಾನಕ್ಕೆ ನೀರುಳಿಸದೇ ಬರುವ ಮಾಣಿಯಲ್ಲ. ಬಚ್ಚಲಿಗೆ ಬೇಕಾದ ನೀರನ್ನೆಲ್ಲ ಸೇದಿ ಎತ್ತಿ ಹಾಕೋದು ನಿತ್ಯ ಕೇಶವ ಗೌರಿಯರೇ.

ಅವನು ಬಾಲನಿದ್ದಾಗ ಅಕ್ಕುವೇ  ಅವನ ಮೈ ಒರೆಸಬೇಕು. ಪಾಣಿ ಪಂಚೆಯಿಂದ ಒರೆಸುವಾಗ ಅವನು ಹಾಯ್ ಹಾಯ್ ಎಂದು ಕುಣಿದಾಡಿದರೆ ಎಲ್ಲೆಲ್ಲೋ ನೋಡಬಾರದ, ನೋಡಲಾರದ ಆಯ ಸ್ಥಳಗಳಲ್ಲಿ ಗಾಯವಾಗಿದೆ ಎಂದು ಅರ್ಥ. ಅವಳ ಕಣ್ಣಿಗೆ ಮಾತ್ರ ಬೀಳುತ್ತಿದ್ದ ಗಾಯಗಳು ಬಿದ್ದದ್ದೇ ಆದರೆ, ಚಡಿಏಟು ನಿಶ್ಚಿತ. ಹೀಗಾಗಿ ಅಕ್ಕ ತಮ್ಮರ ನಡುವಿನ ಗುಟ್ಟುಗಳು ಈ ಗಾಯಗಳು. ಈಗಲೂ ನೆನೆಸಿದರೆ ಅವನನ್ನು ನಾಚಿಸುವ ಗಾಯಗಳು. ಗೌರಿಯನ್ನೂ ನಾಚಿಸುವ ಅವಳ ತುಂಟಾಟದ ಗಾಯಗಳು ಕೇಶವನಿಗೆ ಮಾತ್ರ ಗೊತ್ತಾಗ ಹೋಗಿ ಅಕ್ಕುಗೆ ಈಗ ದಿಕ್ಕು ಕಾಣದಾಗಿದೆ.

ಉಪನಯನವಾಗುವ ತನಕ ಇವ ಮಂಗನೇ. ಹಡಬೆ ನಾಯನ್ನು ಓಣಿ ಓಣಿ ಅಟ್ಟಿ ಓಡಿಸಬೇಕು. ಎಮ್ಮೆಯ ಮೇಲೆ ಕೂತು ಸವಾರಿಯಾಗಬೇಕು. ಚಾಟರಿಬಿಲ್ಲಿನಿಂದ ಗುರಿಯಿಟ್ಟು ಹೊಡೆದು ಮಾವಿನ ಕಾಯಿ ಬೀಳಿಸಬೇಕು. ಕಂಡ ಕಂಡ ಮರ ಹತ್ತಬೇಕು. ಜೋನಿಬೆಲ್ಲ ಕದ್ದು ತಿನ್ನಬೇಕು…ಅಡುಗೆ ಮನೆಯಿಂದ ಕೊಬ್ಬರಿ ಕದಿಯಬೇಕು…

ಆದರೆ ಉಪನಯನವಾದ ನಂತರ ಮಾಣಿ ಎಷ್ಟು ಬದಲಾಗಿಬಿಟ್ಟ. ಮನೆಯಲ್ಲಿ ಕಡುಕೋಪಿ ಅಪ್ಪನಿಂದ ಪೂಜಾವಿಧಿಗಳನ್ನೆಲ್ಲ ಕಲಿತದ್ದೇ ಉಡುಪಿಗೆ ಹೋಗಿ ಮಠದ ಪಂಡಿತ ಸುಬ್ಬಣ್ಣಾಚಾರ್ಯರಿಂದ ಸಂಸ್ಕೃತ ಕಲಿತು ವೇದಪಾರಂಗತನಾದ. ಅಪ್ಪ ಬೇಡವೆಂದರೂ ಕೇಳದೆ ತನ್ನ ತೆವಲಿಗಾಗಿ ಮತ್ತೂರಿಗೆ ಹೋಗಿ ಗಮಕ ಕಲಿತ. ಅಪ್ಪ ಕಾಲವಾದ್ದೇ ಭಾಗವತನಾಗಿ ಊರಿಂದೂರು ಅಲೆದ. ಅವನ ಹುಚ್ಚಿಗೆ ಸಣ್ಣ ಜುಟ್ಟು ಸಾಲದು; ಅವನು ಬಾಲನಿದ್ದಾಗ ತಾನೇ ಮಾಡಿಸಿಕೊಟ್ಟ ಕೆಂಪು ಹರಳಿನ ಒಂಟಿಯೇಬೇಕು ಕಿವಿಗೆ. ಅದೆಷ್ಟು ಚೆನ್ನಾಗಿ ಒಪ್ಪುತ್ತದೆ ಅವನ ಕಿವಿಗೆ. ನೋಡಿದರೆ ಯಾರಾದರೂ ಬಡವರ ಮಾಣಿ ಎನ್ನಲು ಸಾಧ್ಯವೆ? ಒಮ್ಮೆ ಹೇಳಿಕೊಟ್ಟರೆ ಸಾಕು ಏನನ್ನಾದರೂ ಕಲಿತುಬಿಡುವ ಮಾಣಿಯಿದು… ಪಾಪ ಈಗ ಮದುವೆಯಾಗದೆ ಒಣಗುತ್ತಿದೆ. ಹುಡುಗಿಯರ ಜೊತೆ ಚನ್ನೆಮಣೆಯಾಟ, ಸಂಜೆಯಾದರೆ ತಾಳಮದ್ದಲೆ, ನಿಮಿತ್ಯ ಕೇಳಲು ಬಂದವರ ಜೊತೆ ಕಾಡುಹರಟೆ…ಅವನಿಗೆ ಕಾಲ ಹೋದದ್ದೇ ತಿಳಿದಂತೆ ಕಾಣದು. ಪಡಪೋಸಿ ತಿಳಿಯದ ಬೋಳೆಭಟ್ಟ…

ಅಂತ ಅವಳೇನೋ ಅಂದುಕೊಂಡಿರೋದು. ಸೊಗಸುಗಾರ ಗಂಡಿಗೆ ಏನೇನು ತೆವಲಿರುತ್ತೋ – ದೇವರೇ ಕಾಪಡಬೇಕು. ತನ್ನ ಕಣ್ಣಿಗೆ ಬೀಳದ ಸಂಗತಿಯೇ? ಆ ಸೇಳೆಗಾರ್ತಿ ಜಲಜ ಇವನೆಂದರೆ ಕಣ್ಣಲ್ಲೇ ತಿಂದುಬಿಡುವಂತೆ ನೋಡತ್ತೆ. ಇವನೂ ಬಾಯಲ್ಲಿ ಬೆರಳಿಟ್ಟರೆ ಕಚ್ಚಬಾರದ ಮಾಣಿಯೇನಲ್ಲ. ಕಚ್ಚೆ ಹರುಕ ಬ್ರಾಹ್ಮಣರನ್ನು ಅಕ್ಕು ಕಾಣದವಳೇ? ಪೌರೋಹಿತ್ಯದ ನೆವ ಹೇಳಿ ಊರೂರು ಸುತ್ತುತ್ತಿದ್ದ ತನ್ನ ಗಂಡ ಮಹಾರಾಯನನ್ನ ಸ್ನಾನ ಮಾಡಿದ ಹೊರತು, ಎಷ್ಟೇ ಸೇಳೆ ಮಾಡಲಿ, ಮುಟ್ಟಲು ಅವಳು ಬಿಟ್ಟವಳಲ್ಲ. ಮುದಿ ಗಂಡನೇ ಹಾಗಿದ್ದಾಗ, ಪ್ರಾಯಕ್ಕೆ ಬಂದವಕ್ಕೆ ಜಾತಿಯೇ, ನೀತಿಯೇ – ಕನ್ಯಾ ಮಾಸದ ನಾಯಿಗಳಂತೆ ಅವು.

೧೦

ಸ್ನಾನವಾದದ್ದೇ ಕೇಶವ ಜಪಕ್ಕೆ ಕೂತ. ಅಕ್ಕುಗೆ ತಾನು ಅಪರೂಪನಾಗಿ ತೋರಬೇಕು ಎಂದು ದಿನಕ್ಕಿಂತ ಹೆಚ್ಚು ಗಾಯತ್ತಿ ಜಪ ಮಾಡಿದ. ಕತ್ತಲೆಯ ನಡುಮನೆಯಲ್ಲಿ ಅವಳು ನೆಲದ ಮೇಲೆ ಮಲಗಿದ್ದಳು. ಅಕ್ಕು ಸದಾ ತಂಪು ಹುಡುಕುವ ಪ್ರಾಣಿ; ಅವಳು ಮಾಡುವ ಊಟ ಕೂಡ ಆರಿರಬೇಕು. ಚಳಿಗಾಲದಲ್ಲೂ ಸ್ನಾನಕ್ಕೆ ತಣ್ಣೀರು ಬೇಕು. ಈಗ ಹುಷಾರಿಲ್ಲೆಂದು ಗೌರಿಯ ಬಲವಂತಕ್ಕೆ ಬಿಸಿನೀರು ಸ್ನಾನ ಮಾಡುತ್ತಾಳೆ. ಗೌರಿಗಾಗಿ ಹುಷಾರು ಕೆಡಿಸಿಕೊಂಡ ಮೇಲೆ ಅವಳು ಹೇಳಿದಂತೆ ಕೇಳದೆ ವಿಧಿಯಿಲ್ಲವಲ್ಲ.

ಕೇಶವ ಚಾವಡಿಗೆ ಹೋಗಿ ಇರಲಿ ಎಂದು ರಾತ್ರೆ ಮಾತ್ರ ಹಚ್ಚುವ ಲಾಟೀನನ್ನು ಹಾಡು ಹಗಲೇ ಹಚ್ಚಿದ. ಹುಲ್ಲಿನ ಸೂರಿನಿಂದ ಮೇಲೆ ಸೂರ್ಯನಿದ್ದಾನೆಂದು ಮಾತ್ರ ತೋರುವ, ಕಿಟಕಿಯಿಲ್ಲದ, ತಂಪಾದ, ಹಿತವಾದ ಕತ್ತಲಿನ ನಡುಮನೆಗೆ ಬಂದ. ಯಾವುದೇ ಕಾಲದಲ್ಲಿ ಬಾಣಂತಿಯರು ಕಂಬಳಿ ಹೊದ್ದು ಮಲಗುತ್ತಿದ್ದ ಕೋಣೆಯಂತೆ, ಅದು. ತನ್ನ ಕಾಲದಲ್ಲಿ ಗೌರಿಯ ಬಾಣಂತನವನ್ನು ಇಲ್ಲೇ ಮಾಡಬೇಕೆಂದು ಆಸೆ ಅಕ್ಕುಗೆ – ಪಾಪದ ಈ ಅಕ್ಕುಗೆ.

ಅಕ್ಕುವನ್ನು ಅಮ್ಮ ಹೆತ್ತದ್ದು ಅವಳ ತವರಿನಲ್ಲಂತೆ. ತನ್ನನ್ನು ಹೆತ್ತದ್ದು ಮಾತ್ರ ಇಲ್ಲಿಯೇ ಅಂತೆ. ಅಮ್ಮನ ಅಮ್ಮ ಹೆರಿಗೆ ಮಾಡಿಸಲು ಇಲ್ಲಿಗೇ ಬಂದಿದ್ದರಂತೆ…

ಅಕ್ಕುಗೆ ಲಾಟೀನು ಕಂಡು ಆಶ್ಚರ್ಯವಾಯಿತು. ಎಷ್ಟು ಆಶ್ಚರ್ಯವಾಯಿತೆಂದರೆ ಈ ದುಬಾರಿ ಕಾಲದಲ್ಲಿ ಹಗಲಿಗೇ ಯಾಕೆ ಲಾಟೀನೊ ಎಂದು ಬಯ್ಯಲೂ ಬಾಯಿಬರದ ಕಣ್ಣುಜ್ಜಿಕೊಳ್ಳುತ್ತ ಎದ್ದು ಕೂತಳು.

ಮಾತು ಹೇಗೆ ಶುರು ಮಾಡುವುದು ತಿಳಿಯದೆ ಕೇಶವ ‘ತೀರ್ಥ ಕೊಡಲ’ ಎಂದ.

‘ನಿನಗೇನು ತಲೆ ಕೆಟ್ಟಿದೆಯ?’ ನಂದಿನ್ನೂ ಸ್ನಾನ ಆಗಿಲ್ಲ ಅಂತ ಗೊತ್ತಿಲ್ಲವ?’ ಅಕ್ಕು ನಗುತ್ತ ಹೇಳಿದಳು.

ಕೇಶವ ಅವಳ ಎದುರು ದೀರ್ಘ ಸಂಭಾಷಣೆಗೆ ಕೂರುವಂತೆ ಚಕ್ಕಳಮಕ್ಕಳ ಹಾಕಿ ಕೂತದ್ದನ್ನು ಅಕ್ಕು ಗಮನಿಸಿದಳು. ಮಾತೇ ಬಾರದವನಂತೆ ತಡವರಿಸುತ್ತ,

‘ಅಕ್ಕು’ ಎಂದ.

ರಹಸ್ಯವಾದ್ದೇನನ್ನೋ ಹೇಳಲು ಹೊರಟನಂತೆ ಕೇಶವ ಕಂಡ. ತನ್ನ ಗಂಡನ ಮನೆಯಿಂದ ತಂದು ಜೋಪಾನ ಮಾಡಿದ ಹಿತ್ತಾಳೆಯ ಲಾಟೀನಿನ ಮೊಗ್ಗಿನಂತಹ ಬೆಳಕಿನಲ್ಲಿ ತಾನು ಈಚಿನ ದಿನಗಳಲ್ಲಿ ಅವನನ್ನು ನೋಡದಂತೆ ನೋಡಿದಳು. ಇನ್ನೂ ಒದ್ದೆಯಾದ ಜುಟ್ಟು ಬೆನ್ನಿನ ಮೇಲೆ ಚೆಲ್ಲಿದೆ. ಲಂಗೋಟಿಯಲ್ಲದೆ ಬೇರೇನೂ ಮೈಮೇಲೆ ಇಲ್ಲ. ಲಾಟೀನಿನ ಬೆಳಕಲ್ಲಿ ಅವನು ತನ್ನನ್ನು ನೋಡುವ ಕಣ್ಣುಗಳು ಹೊಳೆಯುತ್ತಿವೆ. ನೋಡಲು ಒಳ್ಳೆ ಶುಕಮುನಿಯ ಹಾಗೇ ಕಂಡ ತಮ್ಮಯ್ಯನ ಮೇಲೆ ಅಕ್ಕರೆ ಉಕ್ಕಿತು.

‘ಅದೇನು ಹೇಳೋ ತಮ್ಮಯ್ಯ’ ಎಂದಳು.

ಅವಳ ಅಕ್ಕರೆಯ ದನಿಯಿಂದ ಉತ್ತೇನಿತನಾಗಿ ಒಂದು ದೊಡ್ಡ ಗುಟ್ಟು ಹೇಳುವಂತೆ ಪಿಸುಗುಟ್ಟಿದ:

‘ಅಕ್ಕು, ಅದೀಗ ಬರಿ ನಮ್ಮನೇ ವಸ್ತುವಲ್ಲ; ಈಗದು ದೇವರ ಕೂಸು’

‘ಏನೆಂದಳು ಆ ಗಂಡುಬೀರಿ ನಿನಗೆ?’

ಅಕ್ಕು ಅವನನ್ನು ನೆಲಕ್ಕಪ್ಪಳಿಸುವಂತೆ ಕೇಳಿದ್ದಳು. ಆದರೆ ಕೇಶವ ತನ್ನ ಮಾತಿಗೆ ಸೊಪ್ಪು ಹಾಕದವನಂತೆ ಗಂಭೀರವಾಗಿರುವುದನ್ನು ಕಂಡು  ಅಕ್ಕು ಕೊಂಚ ಸಡಿಲಾಗಿ ಆಪ್ತವಾಗಿ ಹೇಳಿದಳು:

‘ತಂಗಿ ಸತ್ತದ್ದೇ ಅವಳು ಹಾಗಾಗಿರೋದು ಕಣೋ. ಅದೇನೋ ಅವಳನ್ನು ಖಂಡಿತ ಹೊಕ್ಕು ಬಿಟ್ಟಿದೆ. ಗುಡ್ಡದ ಮೇಲೊಂದು ಬಿದಿರು ಹಿಂಡಲು ಇದೆಯಲ್ಲ ಅದರ ಪಕ್ಕ ನಡೆದು ಬರುವಾಗ ನಮ್ಮ ಅಮ್ಮ ಒಂದು ಸಾರಿ ಇದ್ದಕ್ಕಿದ್ದಂತೆ ಎಷ್ಟು ಬೆಚ್ಚಿದ್ದರಂತೆ ಅಂದ್ರೆ ಮೂರು ಹಗಲು ಮೂರು ರಾತ್ರಿ ಅವರಿಗೆ ಬಂದ ಜ್ವರ ಬಿಟ್ಟಿರಲಿಲ್ಲ. ನಮ್ಮ ಅಪ್ಪ ಸುಳಿದು ಹಾಕಿ ಅವಳನ್ನ ಉಳಿಸಿಕೊಂಡದ್ದು ನನಗಿನ್ನೂ ನೆನಪಿದೆ. ಬಿದಿರು ಹಿಂಡಲ್ಲಿ ಒಂದು ಚಾಡಿ ಇದೆ. ಅದಕ್ಕೆ ಮೈಲಿಗೆಯಾಗಿರಬೇಕು. ಗೌರಿಗೇನಾದರೂ ಮುಟ್ಟು ಮೈಲಿಗೆಯನ್ನು ಎಗ್ಗಿದೆಯ? ಅವಳ ಅಪ್ಪನನ್ನು ಬಹಳ ದೊಡ್ಡ ಜೋಯಿಸರು ಅಂತ ನೀನೇನೋ ಹೊಗಳ್ತೀಯ; ನನಗೆ ಗೊತ್ತಿಲ್ದೆ ಇರೋದ ಹೊರಗಿನ ಅವರ ಎಲ್ಲ ವ್ಯವಹಾರ?…ತಂದೆಯ ಮಗಳಲ್ಲವೇ ಅವಳು.’

ಕೇಶವ ಅಕ್ಕುವಿನ ಒಳಗನ್ನು ಮುಟ್ಟಿ ಹುಡುಕುವಂತೆ ಸಂಕಲ್ಪ ಮಾಡಿ ಜಪದಲ್ಲಿ ಕೂರುವಂತೆ ಕೂತಿದ್ದ. ಅವಳ ಮಾತನ್ನು ಕಿವಿಮೇಲೆ ಹಾಕಿಕೊಳ್ಳದೆ ಮುಂದುವರಿದ – ಲಾಟೀನಿನ ದೀಪವನ್ನೆ ನೋಡುತ್ತ. ಯಾರಿಗೋ ಸಂಬಂಧಪಟ್ಟ ವೃತ್ತಾಂತವೆಂಬಂತೆ. ಪ್ರವಚನವಾಗದಂತೆ ಮಾತಾಡುವುದೇನೂ ಅವನಿಗೆ ಸುಲಭವಲ್ಲ.

* * *

ವಾರದ ಹಿಂದೆ ಒಂದು ಸಂಜೆ. ಅವನಿಗೂ ಅವಳು ಎಲ್ಲಿ ಹೋಗುತ್ತಾಳೆಂಬ ಕುತೂಹಲ. ಹಿಂಬಾಲಿಸಿದ. ಅವಳಿಗೆ ತಿಳಿಯದಂತೆ. ಮೊಟ್ಟುಗಳ ಸಂದಿ ಅಡಗುತ್ತ. ಹಕ್ಕಿಯ ಬೆನ್ನಟ್ಟುವ ಮಾಳ ಬೆಕ್ಕಿನಂತೆ. ತಾನೆಲ್ಲಿದೀನಿ, ಎಲ್ಲಿ ಹೋಗ್ತ ಇದೀನಿ ಏನೂ ಗೊತ್ತಿಲ್ಲದವಳಂತೆ ಅವಳು ಕಾಲು ಕೊಂಡಲ್ಲಿ ನಡೀತ ಇದ್ದಳು. ಗಾಳೀಲಿ ತೇಲಿ ಹೋಗೋ ಅಪ್ಸರೆಯ ಥರ. ಏನೋ ಕೆಲಸ ಇಟ್ಟುಕೊಂಡು ನಾವು ಹೋಗ್ತೀವಲ್ಲ, ಆ ಥರಾ ಅಲ್ಲವೇ ಅಲ್ಲ. ಮುಳ್ಳು ಕಲ್ಲು ನೋಡದೆ, ಮುಖಾನ್ನ ಆಕಾಶಕ್ಕೆ ಎತ್ತಿ.

(ತಾನು ಕಂಡದ್ದನ್ನು ಮತ್ತೆ ಕಾಣುತ್ತಿರುವಂತೆ ಕ್ಷಣ ಸುಮ್ಮನಾಗಿ, ಅಕ್ಕು ಮೌನದಿಂದ ಉತ್ತೇಜಿತನಾಗಿ ಮುಂದುವರಿದ)

ಅವಳ ಬೆನ್ನಿಗೆ ಸೂರ್ಯ; ಮುಳುಗುತಾ ಮುಳುಗುತಾ ಇರೋ ಸೂರ್ಯ. ಅವನ ಕಿರಣ ಅವಳ ಕೂದಲ ಮೇಲೆ ಬಿದ್ದು ಹೊಳೀತಿತ್ತು. ಸೊಂಟಕ್ಕೆ  ಸೀರೇ ಸೆರಗು ಸಿಕ್ಕಿಸಿ ನಡೀತ ಇದ್ದವಳು ಒಳ್ಳೆ ವನದೇವತೆ ಹಾಗೆ ಕಾಣ್ತ ಇದ್ದಳು. ಅವಳ ಮುಖದ ಲಾವಣ್ಯ ಭಾಸವಾದಂತಾಗಿ ಅವನು ದಂಗಾದ. ಅದೆಷ್ಟು ದಂಗಾದ ಅಂದರೆ ಅವಳ ಹಿಂದೆ ಕದ್ದು ಹೋಗೋದು ಸಾಧ್ಯವಾಗಲಿಲ್ಲ. ಅಲ್ಲೇ ನಿಂದು ಬಿಟ್ಟ. ಹತ್ತಿರ ಇದ್ದ ಕಲ್ಲುಬಂಡೆಯೊಂದರ ಮೇಲೆ ಕೂತು ಬಿಟ್ಟ. ಪಂಚಾಕ್ಷರಿ ಜಪ ಮಾಡ್ತ ಕೂತ. ಕಣ್ಣು ಮುಚ್ಚಿ ಕೂತ.

ಕಂತುತ್ತಾ ಇದ್ದ ಸೂರ್ಯ ಇನ್ನೇನು ಕಂತಿಬಿಡಬೇಕು. ಅಷ್ಟರಲ್ಲಿ ಅವಳು ಹಿಂದಕ್ಕೆ ಬರೋದು ಕಾಣಿಸಿತು. ಅದೊಂದು ಅಪರೂಪದ ದೃಶ್ಯವೇ ಸರಿ. ಅವಳ ಮುಖ ಸೂರ್ಯನಿಗೆ ಎದುರಾಗಿದೆ. ಅವಳ ಕಣ್ಣುಗಳು ಹೊಳೆಯುತ್ತಿವೆ. ತುಂಬ ಸುಖಪಟ್ಟಂತೆ ಆ ಕಣ್ಣುಗಳು ಕಾಣುತ್ತಿವೆ. ಎಷ್ಟು ತನ್ಮಯವಾಗಿವೆ ಆ ಕಣ್ಣುಗಳು ಎಂದರೆ ಇದು ಒಳಗೆ ಅದು ಹೊರಗೆ ಎನ್ನಿಸದಂತೆ ಅವು ಎಲ್ಲವನ್ನೂ ಕಾಣುತ್ತಿವೆ.

ಹತ್ತಿರ ಬಂದವಳು ವಿಶೇಷವಾದ್ದನ್ನು ನೋಡುವವಳಂತೆ ಹಣೆಗೆ ಕೈಯಡ್ಡ ಮಾಡಿದಳು; ಇಲ್ಲದ ಬಿಸಿಲನ್ನು ನಟಿಸುತ್ತ ಕಣ್ಣುಗಳನ್ನು ಚೂಪಿಸಿ ಕೇಶವನನ್ನು ನೋಡಿದಳು.

‘ಅದೇನು ಮಾಡ್ತ ಇದೀಯೊ ಒಬ್ಬನೆ? ಪಟ್ಟಾಂಗ ಹೊಡೆಯೋಕೆ ಯಾರೂ ಸಿಗಲಿಲ್ವ?’

ಎಂದಿನ ಬಾಲೆಯಂತೆ ಹಾಸ್ಯ ಮಾಡಿದಳು ಎಂದು ಹಗುರಾಯಿತು. ಹೀಗೆ ಪ್ರಸನ್ನಳಾಗಿ ಬಿಟ್ಟವಳನ್ನು ಮುಟ್ಟಿ ಬೆನ್ನು ತಡವಬೇಕು ಎನ್ನಿಸಿತು. ಆದರೆ ಅಷ್ಟು ಸಲಿಗೆ ಸಾಧ್ಯವಾಗದಂತೆ ಅವಳ ಮುಖ ಕಂಡಿತು.

ಅವಳೇ ಕೇಶವನ ಜುಟ್ಟನ್ನು ಹಿಡಿದು ಎಳೆದು ಬಿಡುವುದೆ? ಇಷ್ಟುದ್ದ ಜುಟ್ಟಿನ ತುದಿಯನ್ನು ಬಿಗಿಯಾಗಿ ಹಿಡಿದು ಎಳೆಯುತ್ತ,

‘ಇಗೋ ನಿನ್ನ ಜುಟ್ಟು ನನ್ನ ಕೈಯಲ್ಲಿದೆ – ಜೋಕೆ’ ಎಂದು ಜೋರಾಗಿಯೇ ಎಳೆದಳು.

ಕೇಶವ ಗಂಭೀರವಾಗಿ, ಸ್ವಲ್ಪ ಕೂತುಕೋ ಎಂದು ಬಂಡೆಯ ಮೇಲೆ ತನಗೆ ಎದುರಾಗಿ ಅವಳನ್ನು ಕೂರಿಸಿಕೊಂಡು ಶ್ರೀಹರಿಯನ್ನು ನೆನೆದು ಒಂದು ಕ್ಷಣ ಕಾದು ಕೇಳಿದ:

‘ನಿನಗೀಗ ಕಾಣ್ತ ಇದೆ ಅಲ್ವ?’

ಗೌರಿ ನಾಚಿದಳೆ? ಹಾಗೆನ್ನಿಸುವಂತೆ ನೋಡಿದ್ದಳು

‘ಹಕ್ಕೀಲಿ, ಮರದಲ್ಲಿ, ಝರಿಯಲ್ಲಿ, ನೀರಲ್ಲಿ..’

‘ಅದೇನು ಹೇಳ್ತಿದೀಯೊ?’

ಅದು ನಿರಾಕರಣೆಯ ಪ್ರಶ್ನೆಯಾಗಿರಲಿಲ್ಲ; ಅವಳ ಧ್ವನಿಯಲ್ಲಿ ತುಂಟತನವಿದ್ದರೂ ಗೌರಿ ಅಕ್ಕರೆಯಿಂದ ಮಾವನ ಕೈಹಿಡಿದು ಒತ್ತಿದ್ದಳು. ಗಂಗೆಯ ಹೆಸರನ್ನು ಬಾಯಿ ಬಿಟ್ಟು ಹೇಳಬೇಕಾಗಿ ಬರಲಿಲ್ಲ. ಕೇಶವ ಉತ್ತೇಜಿತನಾಗಿ ಶುಕನ ಕಥೆಯನ್ನು ಮತ್ತೆ ಹೇಳಿದ್ದ. ತನಗೇ ಎನ್ನುವಂತೆ ಯಾಕೆ ಹೇಳಿಕೊಂಡಿದ್ದನೊ? ಅವಳಿಗೇನು ಗೊತ್ತಿರದ ಕತೆಯೇ ಅದು? ತನ್ನ ಮಾತಿನ ಧ್ವನಿ ಮತ್ತು ಸರಣಿಯನ್ನು ಪ್ರವಚನದ ಗತ್ತಿಗೆ ಏರಿಸಿಕೊಂಡಿದ್ದೇ ಏನನ್ನಾದರೂ ಹೇಳುವ ಸ್ವಾತಂತ್ರ್ಯವನ್ನು ಕೇಶವ ಗಳಿಸಿಕೊಂಡಿದ್ದ.

ಗೌರಿಯ ಜೊತೆ ಅಂತಹ ಒಂದು ಒಪ್ಪಂದವೂ ಅವನಿಗಿತ್ತು. ಗಂಗೆಯ ಜೊತೆ ಇನ್ನೂ ಇದು ಹೆಚ್ಚಿತ್ತು. ಅಂತಹ ಏರಿಕೆಯ ಮಾತಿನ ಸ್ವಾತಂತ್ರ್ಯ ಕಿಂಚಿತ್ತಾದರೂ ಅವನಿಗೆ ಇಲ್ಲದೆ ಇದ್ದುದ್ದು ಭಾವ ಜಿಪುಣಿ ಅಕ್ಕು ಜೊತೆ ಮಾತ್ರ.

‘ಈ ಬ್ರಹ್ಮಾಂಡದಲ್ಲಿ ವೈರಾಗ್ಯ ಅನ್ನೋದು ತೋರುವ ಮುನ್ನವೇ ಇನ್ನೂ ಬಾಲಕನಾದ ಶುಕನದಲ್ಲಿ ಅದು ತೋರಿತ್ತು..’

ಅವನ ಕಣ್ಣುಗಳು ಮುಚ್ಚಿದ್ದುವು. ಗೌರಿಯಯ ಕಣ್ಣುಗಳು ಅವನ ಮುಖದ ಮೇಲೆ ನೆಟ್ಟಿರುವ ನಿರೀಕ್ಷೆಯಲ್ಲಿ ಮುಂದಿನ ಮಾತುಗಳು ಹುಟ್ಟಿದ್ದುವು,

‘….ಯಾವ ಕರ್ಮವಾಗಲೀ, ಕಾಷ್ಠ ವ್ಯಸನಗಳಾಗಲೇ ಇನ್ನೂ ತಟ್ಟದ ಬಾಲಕ ಎಲ್ಲವನ್ನೂ ಮೀರಿ ಪರ್ಣಕುಟಿಯಿಂದ ಹೊರಟೇ ಹೋದ. ಆಗ ವೇದವ್ಯಾಸರು, ಎಷ್ಟಾದರೂ ಕವಿ ಹೃದಯವಲ್ಲವೆ ಅವರದು? – ಆದ್ದರಿಂದ ಇನ್ನೂ ವ್ಯಸನಗಳಿಂದ ಪಾರಾಗದ ಮಹಾ ಋಷಿಗಳು, ಎಲ್ಲ ತಂದೆಯರ ಹಾಗೆ ಮಗನಿಗಾಗಿ ಹಲುಬುತ್ತ ‘ಪುತ್ತಾ’ ಎಂದು ಕೂಗುತ್ತ ಪರ್ಣಕುಟಿಯಿಂದ ಹೊರಬಂದರು. ಅವರು ಆರ್ತರಾಗಿ ಹೀಗೆ ಪುತ್ರಾ ಪುತ್ರಾ ಎಂದು ಕೂಗುತ್ತ ದಶದಿಕ್ಕುಗಳಲ್ಲೂ ಬಾಲನಿಗಾಗಿ ಹುಡುಕಾಡುತ್ತಿದ್ದಾಗ ದಿಕ್ಕು ದಿಕ್ಕುಗಳಲ್ಲಿ ಬೆಳೆದು ನಿಂತ ಮರಗಳು, ದೂರದ ಗುಡ್ಡ ಬೆಟ್ಟಗಳು ಪ್ರತಿಧ್ವನಿಸುತ್ತ ಓಗೊಟ್ಟುವಂತೆ. ಹೀಗೆ ಸರ್ವಭೂತ ಹೃದಯದಲ್ಲಿ ಶುಕ ಒಂದಾಗಿರುವುದನ್ನು ತಂದೆಯಾದ ವೇದವ್ಯಾಸರು ಅರಿತರು.

ಈ ಶುಕಮುನಿಯನ್ನು ಭಾಗವತ ಛಾಯಾಶುಕ ಎನ್ನುತ್ತದೆ. ಇದ್ದಾಗಲೂ ಅವನು ಶುಕನ ಛಾಯೆಯೇ; ತ್ರಿಕಾಲ ಜ್ಞಾನಿಗೆ ಈಗ ಇರುವಂತೆ ಕಾಣುವುದೂ, ಮುಂದೆ ಇರದೆ ಇರುವುದೂ ಒಂದೇ ಅಲ್ಲವೆ? ಇರುವುದೂ, ಇಲ್ಲದೇ ಇರುವುದೂ – ಎರಡೂ ಮಾಯೆಯಲ್ಲವೆ?’

ಗೌರಿ ಕೇಶವನ ಕೈಯನ್ನು ಅಕ್ಕರೆಯಿಂದ ಅದುಮಿಕೊಂಡಿದ್ದೇ ನಾಚುತ್ತ ನಕ್ಕಳು:

‘ಶುರುವಾಗಿ ಬಿಟ್ಟಿತಲ್ಲ ಮಾವಯ್ಯನ ಪ್ರಸಂಗ’

* * *

ಗೌರಿ ನಿತ್ಯದವಳಾಗಿದ್ದೇ ಸತ್ಯದವಳಾದ ಈ ಬೆರಗನ್ನು ಅಕ್ಕಯ್ಯನಿಗೆ ತನ್ನ ಮಾತುಗಾರಿಕೆಯೆಂದೇ ತೋರತೊಡಗಿದ ಮಾತುಗಳಲ್ಲಿ ಹೇಳಲಾರದೆ ಹೋಗಿ ಕೇಶವ ಅಷ್ಟೇನೂ ಪೆಚ್ಚಾಗಲಿಲ್ಲ. ಕೊಂಚ ಬೆರಗಿನಲ್ಲಿ, ಹೆಚ್ಚು ಅನುಮಾನದಲ್ಲಿ, ಯಾವ ಭಾವಾವೇಶಕ್ಕೂ ಆಸ್ಪದ ಕೊಡದ ಈ ಮಹಾ ಜಿಪುಣಿ ಅಕ್ಕು ‘ಸಾಕಿನ್ನು ನಿನ್ನ ಪುರಾಣ’ ಎಂದು ತನ್ನ ನೈಜ ಭಾವನೆಯನ್ನು ತೋರಗೊಡದಂತೆ ಮುಖ ತಿರುಗಿಸಿದ್ದಳು. ಆದರೆ ಹಾಗೆ ಅನ್ನುವಾಗ ಅವಳ ಧ್ವನಿಯಲ್ಲಿ ಎಲ್ಲೋ ತನ್ನ ಮಾತಿಗೆ ಅಷ್ಟೊ ಇಷ್ಟೊ ಸಿಕ್ಕವಳಂತೆ ತೋರಿದಳಲ್ಲವೆ?

ಕೇಶವ ಲಾಟೀನಿನ ದೀಪವನ್ನು ಕೊಂಚ ದೊಡ್ಡ ಮಾಡಿದ. ಹೊಗೆಯಾಯಿತು. ಸಣ್ಣ ಮಾಡಿದ. ಇಲ್ಲ ತಮ್ಮಯ್ಯನಿಗೆ ಮಾತೆಂದರೆ ಮುದ ಎಂದಷ್ಟೆ ಈ ಅಕ್ಕುಗೆ ತೋರಿರಬೇಕು.

‘ಲಾಟೀನನ್ನು ಆರಿಸೋ….ಅದೇನು ಆಡ್ತಿದೀಯ ದೀಪದ ಜೊತೆ?’

ಮತ್ತೆ ಅಕ್ಕುಗೆ ಸಣ್ಣ ತಮ್ಮಯ್ಯನಾಗಿಬಿಟ್ಟೆನಲ್ಲ ಎಂದು ಪೆಚ್ಚಾಗಿ ಕೇಶವ ಎದ್ದು ನಿಂತ.