೧೧

ಲಾಟೀನು ಆರಿಸಿ ಚಾವಡಿಗೆ ಹೋಗಿ ಮತ್ತೆ ತನ್ನ ತಲೆಗೂದಲನ್ನು ಬಿಚ್ಚಿದ, ಕಟ್ಟಿದ. ‘ಯಾ ಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತಾ’ ಎಂದು ಶಾರದೆಯನ್ನು ನೆನೆಯುತ್ತ ಹಾಡಿಕೊಂಡ. ಮನೆಯ ಎದುರಿದ್ದ ಅಜ್ಜನ ಕಾಲದ ಹಲಸಿನ ಮರದಿಂದ ಒಂಟಿ ಕಾಗೆಯೊಂದು ‘ಕಾ, ಕಾ’ ಎಂದಿತು.

ಏಕಾದಶಿ ದಿನ ಯಾವ ನೆಂಟರು ಬರ್ತಾರೇಂತ ಈ ಕಾಗೆ ಕೂಗ್ತ ಇದೆಯೊ…. ಮುಂಡೆದು ಕಾಗೆ ಕರ್ಕಶವಾಗಿ ಕೂಗುತ್ತಲೇ ಇದೆಯಲ್ಲ. ಬೇರೇನು ಕೆಟ್ಟಸುದ್ದಿಯೊ ಎಂದು ಕೇಶವನಿಗೆ ಕರಕರೆಯಾಯಿತು. ಉಶ್ ಎಂದು ಕಾಗೆಯನ್ನು ಬೆದರಿಸಿದ. ಅಂಗಳಕ್ಕೆ ಇಳಿದು ಬಂದ.

ಸಣ್ಣನೆಯ ಚಳಿಯಲ್ಲಿ ಇಡೀ ಭೂಮಿಯನ್ನೂ ಅಪಾರ ನೀಲಿಯ ಆಕಾಶವನ್ನೂ ಏನೀಗ ಕಾವು ಕೂತು ಆವರಿಸಿಕೊಂಡಿದೆಯೋ, ಅಥವಾ ಏನೂ ಇಲ್ಲವೋ. ಎಚ್ಚರವೆಷ್ಟು ಸತ್ಯವೋ ಕನಸೂ ಅಷ್ಟೆ ಸತ್ಯವೆಂದುಕೊಳ್ಳುವ ಈ ಮೈಯ ಭ್ರಮೆಯೋ. ಗಂಗೆ ಈ ಲೋಕದಿಂದ ಮಾಯವಾಗಿ ಬಿಟ್ಟಳು. ಕನಸಿನಂತೆ. ಈಗ ಇದ್ದವಳು ಮತ್ತೆ ಇರಲಿಲ್ಲ. ಆಕಾಶದ ದಿವ್ಯ ನಿರ್ಲಕ್ಷ್ಯದಲ್ಲಿ ಯಾವುದಕ್ಕೂ ಅರ್ಥವಿಲ್ಲ ಎಂಬ ವಾದ ಕೇಶವನಿಗೆ ನೆನಪಾಯಿತು.

ಛೆ – ಮನುಷ್ಯ ಮಾತ್ರರಾದ ನಾವು ಹಾಗೆನ್ನುವುದೇ ಗರ್ವವಾದೀತು. ಈಗ ಇದ್ದು ಮತ್ತೆ ಇಲ್ಲವಾದ್ದು ಸೊಜಿಗ ತರುತ್ತದೆ; ಯಾಕೆಂದರೆ ನಾವು ಮನುಷ್ಯರು; ಈ ಲೋಕದ ಹಂಗಿನಲ್ಲಿ ಇರಬೇಕಾಗಿ ಬಂದು ಇರುವುದಕ್ಕೆಲ್ಲ ನಾವು ಋಣಿಗಳು.

ಷಡ್ದರ್ಶನಗಳ ಅಧ್ಯಯನದ ಮುಗ್ಧ ಹುಮ್ಮಸ್ಸಿನಲ್ಲಿ ವಾದಿಸಿದ್ದುಂಟು; ತಾನೂ ಈಗ ಇಲ್ಲವೇನೊ. ಇದೇನೆ ಎಂದುಕೊಂಡರೆ ಇದ್ದೇನೆ. ಇಲ್ಲವೆಂದರೆ ಇಲ್ಲ.

ಗೌರಿಗೆ ಅನ್ನಿಸುತ್ತಿರುವುದು ಏನಿರಬಹುದೆಂದು ಊಹಿಸುತ್ತ ಹರಿಯುವ ಇರುವೆಯೊಂದರ ಮಗ್ನತೆಯನ್ನು ಗಮನಿಸಿದ. ಎದುರಾಗುವ ಇರುವೆಗೆ ಏನೊ ಹೇಳುವಂತೆ ಕೊಂಚ ತಂಗಿ ಮೂತಿಗೆ ಮೂತಿ ತಾಗಿಸಿ ಮುಂದುವರಿಯುತ್ತದೆ. ಹರಿಯುತ್ತಿರುವುದೇ ಅದರ ಮಹತ್ ಕಾರ್ಯ. ಬ್ರಹ್ಮಾಂಡದಲ್ಲಿ ಅದು ಇದೆ; ಇದೇನೆ ಅಂತ ತಿಳಿಯುವ ಅಗತ್ಯವಿಲ್ಲದೆ ಇದೆ. ನಮಗೇಕೆ ತಿಳಿಯುವ ಅಗತ್ಯವೋ. ಗೌರಿಗೂ ಸುಮ್ಮನೇ ಇದ್ದುಬಿಡುವುದು ಸಾಧ್ಯವಾಗಿರಬಹುದು; ಏನೂ ಕೇಳದೆ, ಏನೂ ಬೇಡದೆ,

ಸುಮ್ಮನೆ, ಅಂದರೆ, ಬಿಸಿಲಿನಂತೆ ಸುಮ್ಮನೆ, ಗಾಳಿಯಂತೆ ಬೀಸುತ್ತಲೇ ಸುಮ್ಮನೆ, ಆಕಾಶವನ್ನು ಪ್ರತಿಫಲಿಸಿಕೊಳ್ಳುವ ಪುಷ್ಕರಿಣಿಯಂತೆ ಸುಮ್ಮನೆ…ಉಷಸ್ಸಿಗೆ ಎದುರಾಗಿ ದಳ ದಳ ದಳ ಅರಳುವ ಸೂರ್ಯಕಾಂತಿಯಂತೆ ಸುಮ್ಮನೆ. ತಾಯಿಯ ಮೊಲೆ ಹಾಲು ಕುಡಿಯುವ ಕೂಸಿನಂತೆ ಸುಮ್ಮನೆ, ಶೇಷಶಾಯಿಯಂತೆ ಸುಮ್ಮನೆ…

ಜೈನರು ಹೇಳುವ ಗೋಚಾರ ನಿಯಮ ನೆನಪಾಯಿತು. ವನದ ಶೋಭೆ, ಸೌಂದರ್ಯಗಳನ್ನು ಲೆಕ್ಕಿಸದೆ ದನ ತನ್ನ ಮೇವನ್ನು ಹುಡುಕಿಕೊಂಡು ಹೋಗುವಂತೆ ಈ ಲೋಕದಲ್ಲಿ ಬದುಕಬೇಕು ಎನ್ನುತ್ತಾರೆ. ಆದರೆ ಅದು ಸರಿಯಲ್ಲ; ಎಲ್ಲೆಲ್ಲೂ ತಂಗಬೇಕು; ಎಲ್ಲದರಲ್ಲೂ ತನ್ಮಯವಾಗಬೇಕು. ಇದು ಬೇಕು, ಇದು ಬೇಡವೆಂಬ ಹಠವಿಲ್ಲದೆ ಎಲ್ಲವನ್ನೂ ಸ್ವೀಕರಿಸಬೇಕು. ಎಲ್ಲವೂ ಪರಮಾತ್ಮನ ಲೀಲೆಯೆಂದು ಕಾಣಬೇಕು.

ಗೌರಿಗೆ ಈಗ ಮಡಿಯೇ, ಮೈಲಿಗೆಯೇ, ಜಾತಿಯೇ, ಗೋತ್ರವೇ? ಏನಿದೆ? ಈ ಲೋಕಮಾತ್ರ ಇದೆ ಇದೆ ಎನ್ನಿಸುತ್ತ ಹೋದಾಗ, ಈ ಲೋಕವೇ ನಾನು ಎನ್ನಿಸಿದಾಗ, ನನ್ನಲ್ಲೆ ಈ ಲೋಕ ಎನ್ನಿಸಿದಾಗ ಯಾವುದೂ ಇಲ್ಲ, ಎಲ್ಲವೂ ಇದೆ. ತನ್ಮಯವಾಗಿರುವುದೇ, ತುಂಬಿಕೊಂಡುರುವುದೇ ಶೂನ್ಯವಿರಬಹುದು. ಆಕಾಶದ ಮೊಗಚಿದಂತಹ ಬೋಗುಣಿ ಈ ಪೂರ್ಣದ ಅರ್ಧವಿರಬಹುದು. ಈ ಭೂಮಿ ಆ ನಭದ ಇನ್ನೊಂದು ಅರ್ಧ; ಆಸೆಯಿಲ್ಲದ, ಯಾವ ನಿರೀಕ್ಷೆಯೂ ಇಲ್ಲದ ಪ್ರೇಮದಲ್ಲಿ ಎರಡೂ ಕೂಡಿ ಪೂರ್ಣ. ಪೂರ್ಣದಿಂದ ಪೂರ್ಣ ಕಳೆದಾಗ ಅದು ಪೂರ್ಣ.

ಈ ಪೂರ್ಣದ ಮೊಟ್ಟೆಯ ಮೇಲೆ ಕಾವು ಕೂತ ಈಶ್ವರನೊಬ್ಬ ಇದ್ದಾನಲ್ಲ – ಕಾಲನ್ನು ಒತ್ತಿಸಿಕೊಳ್ಳುತ್ತ ಗುರುಗಳಾದ ಸುಬ್ಬಣ್ಣ ಭಟ್ಟರು ಆಪ್ತವಾಗಿ ಹೇಳಿದ್ದು ಹೇಗೆ ನಿಜವಿಲ್ಲದೆ ಇದ್ದೀತು?..ಒಂದೊ ಕಂಡಿರಬೇಕು, ಅಥವಾ ಆಪ್ತ ವಾಕ್ಯದಿಂದ ಸತ್ಯವನ್ನು ಪಡೆದಿರಬೇಕು.

ಹೋದ ಗಂಗೆ ಎಲ್ಲಿ ಹೋದಳು? ಎಲ್ಲಿ ಇದ್ದಳು?

ನಕ್ಷತ್ರದಂತೆ –

ಇವೆ… ಕಾಣಿಸುತ್ತಿಲ್ಲ;

ಯಾವುದೂ ನಿಜವಲ್ಲ…

ಯತ್ ಭಾವಂ ತತ್ ಭವತಿ.

ಛೆ… ಅದು ಉಡಾಫೆಯ ಮಾತು. ಮಾತಿಗಾಗಿ ಮಾತು.

ನಾನು ಸದಾ ಉದರಂಭರಣೆಗಾಗಿ ಆಡುವಂತಹ ಮಾತು.

ಸಾಹುಕಾರರಿಗೆ ಪ್ರಿಯವಾಗಲಿ ಎಂದು ಕೆಲವು ಸಾರಿ ಆಡುವಂತಹ ಭೋಳೆ ಮಾತು. ನಿಜವಲ್ಲ.

ಗುರುಕೃಪೆಯಿದ್ದರೆ ಇರುವ ನಿಜ, ನನಗೆ ತೋರದಂತೆ ಇರುವ ನಿಜ ಭಾವನೆಗೆ ನಿಲುಕೀತು.

ಭಾವಗರ್ವಿಗೆ ತಾನು ಭಾವಿಸಿದಷ್ಟು ಮಾತ್ರ ತನ್ನ ನಿಜ…

ಇದು ನಾನೊ, ಆಕಾಶವೊ ಇರುವೆಯೊ, ಹಾರಿಹೋದ ಕಾಗೆಯೊ…ಭಣಗುಡುವ ಮೌನದಲ್ಲಿ ಎಲ್ಲ ಇದೆ ಎಂದರೆ ಇದೆ, ಇಲ್ಲವೆಂದರೆ ಇಲ್ಲ. ಹೀಗೂ ಅನ್ನಿಸಿರುವುದುಂಟಲ್ಲ. ನಿಜವಾದ ನನ್ನ ಗುರುವನ್ನು ಮರೆತು, ಪೂಜಿಸಬೇಕಾದ್ದನ್ನು ಪೂಜಿಸದೆ, ಇರಬೇಕಾದ ಕ್ಷೇತ್ರದಲ್ಲಿ ಇರದೆ ನಾನು ದೇವತಾ ಮೂಢನೂ ಲೋಕ ಮೂಢನೂ ಪಾಷಂಡಿ ಮೂಢನೂ ಆಗಿಬಿಟ್ಟೆನೆ – ಜೈನರು ಹೇಳುವಂತೆ?

ವಾದಿಸಹೋದರೆ ಎಲ್ಲವೂ ರುಚಿಸಿಬಿಡುತ್ತದೆ ತನಗೆ. ಗೌರಿಯ ಹಾಗೆ ಮೌನದಲ್ಲಿ ಕಾಣಬೇಕು; ಅಥವಾ ಅಕ್ಕು ಹಾಗೆ ಲೋಕಕ್ಕೆ ಬೆವರುತ್ತಲೇ ಇರಬೇಕು..

ಹಿತ್ತಲಿಗೆ ಹೋಗಿ ಕೊಟ್ಟಿಗೆಯ ಅಡ್ಡಗೋಡೆಯ ಮೇಲೆ ಕೂತು ಗೌರಿಗಾಗಿ ಕಾದ. ಇನ್ನೂ ಕಟ್ಟಿಹಾಕದ ಕೌಲಿ ಬಂದು ಯಾವ ಆಸೆಯಿಂದ ತನ್ನನ್ನು ಮೂಸುತ್ತಿದೆಯೊ; ಅದರ ಕಣ್ಣುಗಳು ಮಾತ್ರ ಏನನ್ನೂ ನಿರೀಕ್ಷಿಸದೆ ತನ್ನನ್ನು ನೋಡುತ್ತಿವೆ. ಈ ಮನೆಯಲ್ಲಿ ಅಕ್ಕು ಮಾತ್ರ ಒಂದು ನಿರ್ದಿಷ್ಟ ಗುರಿಯಿಟ್ಟುಕೊಂಡ ತಪಸ್ವಿನಿ; ಕರು ಹಾಕಿದ ದನದಂತೆ ಹಾಯಲು ತಯಾರಾಗಿ ಕಾದಿರುತ್ತಾಳೆ. ಎಲ್ಲವನ್ನೂ ತನ್ನ ಹೊಟ್ಟೆಯಲ್ಲಿ ತುಂಬಿಟ್ಟುಕೊಳ್ಳಲು ಹವಣಿಸುತ್ತಾಳೆ. ಒಲೆಯ ಮೇಲಿಟ್ಟು ಹಾಲಿನಂತೆ ಉಕ್ಕುತ್ತಾಳೆ. ಈ ದನದ ಹಾಗೆ ಲೋಕಕ್ಕೆ ಸುಮ್ಮನೇ ಒಡ್ಡಿಕೊಂಡಿರುವುದನ್ನು ತಿಳಿಯಲಾರಳು, ಪಾಪ….

ಅಕ್ಕು ಮೇಲೆ ಪ್ರೀತಿ ಉಕ್ಕಿತು. ದನದ ಕೊರಳನ್ನು ಅಕ್ಕರೆ ಪಡುತ್ತ ಕೆರೆದ. ಅದು ಇನ್ನಷ್ಟು ಉದ್ದದ ಕತ್ತಾಗಿ ತನಗೆ ಒದಗಲು ಮುಂದಾಯಿತು.

ಶೂನ್ಯವಲ್ಲ, ಇದು ಪ್ರೇಮ – ಯಾವುದೊ ಹಾಡು ನೆನಪಾಗುತ್ತಿದೆ…ಯಾವುದು? ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ಅಪ್ಪನಿಗೆ ಗೊತ್ತಾಗದಂತೆ ಹೋಗಿ ನೋಡಿದ ಅಮರ್ ಭೂಪಾಲಿಯಲ್ಲಿ ಕೇಳಿಸಿಕೊಂಡಿದ್ದು.

ಘನಶ್ಯಾಮಸುಂದರಾ ಶ್ರೀಧರಾ….

ಇಗೋ ಬೆಳಗಾಗುತ್ತಿದೆ ಎನ್ನಿಸಿಬಿಡುತ್ತದೆ ಈ ಹಾಡು ನೆನೆದರೆ,

ಆಚಾರ್ಯರು ಹೇಳುವಂತೆ ಭಗವಂತ ಸಾಕಾರನೇ; ಸುಗುಣನೇ, ಪ್ರೀತಿಯಲ್ಲಿ ಕಂಡಷ್ಟು ಅವನು, ಬೆರಗಿನಲ್ಲಿ ಕಲ್ಪಿಸಿದಂತೆ ಅವನು….

ಕಂಡುದಕ್ಕಿಂತ ಹೆಚ್ಚು ಅವನು

ಅತ್ಯತಿಷ್ಠದ್ದಶಾಂಗುಲಂ.

೧೨

ಗೌರಿ ಗುಡ್ಡ ಇಳಿದು ಬಂದದ್ದೇ ಕೇಶವ ಎದ್ದು ಸ್ನಾನಮಾಡಿ ಜಪಕ್ಕೆ ಕೂತ. ಹೀಗೆ ನಿತ್ಯವೂ ಜಪಕ್ಕೆ ಕೂರುವುದೆಂದರೆ…

ದೇವರ ಎದುರು ಒಂದು ಮಣೆ; ಮಣೆಯೆದುರು ಒಂದು ನೀಲಾಂಜನದಲ್ಲಿ ಅಕ್ಕುವೊ ಗೌರಿಯೊ(ಇವತ್ತು ಅಕ್ಕು) ಹೊತ್ತಿಸಿಟ್ಟ ಚೂಪಾದ ಕುಡಿಯ ಐದು ದೀಪಗಳು. ಮಣೆಯೆದುರು ತಾಮ್ರದ ತಟ್ಟೆ, ಪಂಚಪಾತ್ರೆ, ತಟ್ಟೆಯಲ್ಲಿ ತುಳಸಿ, ತೇದಿಟ್ಟ ಗಂಧ(ಮಧ್ಯಾಹ್ನವೇ ಗೌರಿ ತೇದಿಟ್ಟಿದ್ದು) ಸಾರಿಸಿ ಶುಭ್ರಗೊಳಿಸಿದ ದೇವರ ಮನೆಯ ಸುತ್ತ ಗೌರಿಯೇ ಹಾಕಿದ ರಂಗೋಲೆ. ದಿನಕ್ಕೊಂದು ಬಗೆಯ ರಂಗೋಲೆ. ಈ ಮನೆಯದೇ ಆಗಿದ್ದು ಇದು ಕೊಂಚ ವಿಶಿಷ್ಟವೆಂದು ಭಾವಿಸಿಕೊಳ್ಳಬಹುದಾದಂತೆ ಅಲಂಕೃವಾದ ಭೂಮಿಕೆಯಲ್ಲಿ, ಸಂದರ್ಭಕ್ಕೆ ಸಲ್ಲುವಂತೆ ಕೆಂಪು ರೇಷ್ಮೆಯ ಮಡಿಯುಟ್ಟು ಪೂರ್ವಾಭಿಮುಖನಾಗಿ ಕೂತು ಗಂಧದ ಜ್ವಾಲೆಗಳನ್ನು ಹಣೆಯ ಮೇಲೂ ತೋಳುಗಳ ಮೇಲೂ ಎದೆ ಮತ್ತು ಹೊಟ್ಟೆಗಳ ಮೇಲೂ ಮೂಡಿಸಿ…

ಹೀಗೆ ನಿತ್ಯದ ವ್ಯವಹಾರದಿಂದ ಕೆಲ ಹೊತ್ತು ಹೊರಗಿನವನಾಗಿ, ಮಡಿಯಲ್ಲಿ ಹೊಸಬನಾಗಿ, ಸುಖಾಸನದಲ್ಲಿದ್ದು ಕಣ್ಣುಗಳನ್ನು ಮುಚ್ಚಿ ಆಚಮನಮಾಡಿ…

ಅಪಾರ ಭೂಮಂಡಲದಲ್ಲಿ, ಇಂಥ ಒಂದು ತಾನಿರಬೇಕಾಗಿ ಬಂದ ಪ್ರದೇಶದಲ್ಲಿ, ಅಪಾರ ಕಾಲದಲ್ಲಿ, ತಾನಿರುವ ಇಂಥ ವಾರ ಇಂಥ ತಿಥಿಯ ಒಂದು ಮೂಹೂರ್ತದಲ್ಲಿ, ಇದ್ದೇನೆ ಈಗ ಎಂದು ಗುರುತಿಸಿಕೊಂಡು, ದಶದಿಕ್ಕುಗಳಲ್ಲಿರುವ ದೇವತಾ ಶಕ್ತಿಗಳು ತನ್ನ ಅಂಗಾಂಗಗಳಲ್ಲಿ ನೆಲೆಸಿರುವುದನ್ನು ಜ್ಞಾಪಿಸಿಕೊಂಡು ಅಂಗನ್ಯಾಸಮಾಡಿ, ಪ್ರಾಣದ ಉಸಿರನ್ನು ಏಕಾಗ್ರತೆಯಲ್ಲಿ ಎಳೆದು, ಹಾಗೇ ಬಿಟ್ಟು, ತಾನು ಕೂತಿರುವ ಜಾಗವನ್ನೂ ಹೊತ್ತನ್ನೂ ವಿಶೇಷಗೊಳಿಸಿ ಕೊಳ್ಳುವುದೇ…

ಈ ಅಂಗೀರಸ ಗೋತ್ರೋದ್ಭವನೂ ಋಗ್ವೇದದ ಅಧ್ಯಾಯಿಯೂ ಆದ ಕೇಶವ ಶರ್ಮನ್ ಎಂಬಾತ ಜಪದ ಸಂಕಲ್ಪ ಮಾಡಿ ಹೀಗೆ ಚಕ್ಕಳಮಕ್ಕಳ ಹಾಕಿ ಕೂರುವುದೆಂಬುದಾದರೆ…

ತನ್ನ ಹತ್ತಿರ ಇನ್ನೂ ತುಂಟನ ಬಿಡದ ಈ ಗೌರಿ ಸದಾ ಅಲ್ಲೇ ಇರುವವಳಂತೆ ಜಪಗಿಪದ ಹಂಗಿಲ್ಲದೆ ದೇವರಲ್ಲಿದ್ದಾಳೆ. ಮಹಾ ಮೊಂಡಿ; ಮಾತಿನ ಜಿಪುಣಿ. ತನ್ನ ಗುಟ್ಟು ಹೇಳುವುದಿಲ್ಲ. ಖುಷಿ ಬಂದರೆ ಅಕ್ಕುಗೆ ಗೊತ್ತಾಗದಂತೆ ಡಬ್ಬಿಯಿಂದ ಕೊಬ್ಬರಿ ಕದ್ದು ತನಗೂ ತಿನ್ನಿಸುತ್ತಾಳೆ.

ಹಾಗಿರುವುದು ಕೆಲವರ ಪುಣ್ಯ ವಿಶೇಷ; ತಾನಾದರೋ ಉದ್ದೇಶಪೂರ್ವಕವಾಗಿ ಒಂದು ಕಾಲವನ್ನು, ಒಂದು ಜಾಗವನ್ನು, ಒಂದು ವಿಧಿಯನ್ನು ಸಂಕಲ್ಪ ಮುಖೇನ ನಿಶ್ಚಯಿಸಿಕೊಳ್ಳಬೇಕು; ತತ್ಪರನಾಗಿ ಸೃಷ್ಟಿಸಿಕೊಳ್ಳಬೇಕು. ದೇವರನ್ನು ನೂರೆಂಟು ಗಾಯತ್ರಿಯಲ್ಲಿ ಕೊಂಚಕೊಂಚವಾಗಿ ಗಳಿಸಿಕೊಳ್ಳುತ್ತ ಅಲೆಯುವ ಮನದಲ್ಲಿ ನಿಲ್ಲಿಸಿಕೊಳ್ಳಬೇಕು. ಮತ್ತೆ ವಾದದಲ್ಲಿ ಅನುಮಾನಿಸಬೇಕು. ಮುದದ ಮಾತುಗಾರಿಕೆಯ ಪ್ರವಚನದಲ್ಲಿ ಅವನನ್ನು ಪಡೆದವನಂತೆ ಲೋಕ್ಕೆ ತೋರಬೇಕು.

ಗೌರಿ ತಲೆಯ ಕೂದಲನ್ನು ಗಂಟುಕಟ್ಟಿಕೊಂಡು, ಮೊಣಕಾಲು ಮುಚ್ಚುವಷ್ಟು ತುಂಡುಟ್ಟು ಆಯಾಸದಲ್ಲಿ ತುಂಬ ಮೃದುವಾಗಿರುವಂತೆ ಕಾಣುತ್ತ ದೇವರ ಕೋಣೆಯ ಬಾಗಿಲಿನಲ್ಲಿ ತನ್ನನ್ನೇ ನೋಡುತ್ತ ನಿಂತಿದ್ದಳು. ಜಪ ಮುಗಿದದ್ದೇ ಒಳಗೆ ಹೋಗಿ ಕಾದಾರಿದ ಹಾಲನ್ನು ತಂದು ತನಗೆ ಕುಡಿಯಲು ಕೊಟ್ಟಳು. ತಾನೂ ಕೊಂಚ ಕುಡಿದಳು. ಅಕ್ಕುಗು ಕುಡಿಯುವಂತೆ ಕಣ್ಸನ್ನೆಯಲ್ಲಿ ಬೇಡಿಕೊಂಡಳು. ಒಲ್ಲೆಯೆಂದು ಅಕ್ಕು ಮುಖ ತಿರುಗಿಸಿದಾಗ ‘ಸಾಕು ನಿನ್ನ ಈ ಬಡಿವಾರ’ ಎನ್ನುವಂತೆ ತನ್ನ ಹುಬ್ಬುಗಳನ್ನು ಯಕ್ಷಗಾನದ ಸ್ತ್ರೀವೇಷದಂತೆ ಮೆಲಕ್ಕೆತ್ತಿ, ಸೆರಗುಕಟ್ಟಿ, ಅಂಗೈಗಳನ್ನು ಅಕ್ಕುವಿನ ಮುಖಕ್ಕೆ ಸುಳಿದು ಅವಳನ್ನು ಒಂದು ಹಠದ ಹುಡುಗಿಯೆಂಬಂತೆ ಅಣಕಿಸಿದಳು. ಕೇಶವ ನಗುವುದನ್ನು ನೋಡಿ ಅಕ್ಕು ಮುನಿಸಿಕೊಂಡು ಮುಖ ತಿರುಗಿಸಿದಳು.

ಆಮೇಲೆ ಇಬ್ಬರೂ ಚಾವಡಿಯಲ್ಲಿ ಕಾಲುಚಾಚಿ ಕೂತರು. ಅಕ್ಕುವೂ ತಲೆಯ ಮೇಲೆ ಸೆರಗೆಳೆದು ಅವರ ಎದುರು ಕೂತಳು. ದೈವ ಸನ್ನಿಧಿಯ ಇಂಥ ಸುಖದಲ್ಲಿ ಇಡೀ ಜೀವನವನ್ನು ಇನ್ನೇನೂ ಮಾಡದೇ ಬೇರೇನೂ ಆಗದೇ ಸುಮ್ಮನೇ ಹೀಗೇ ಕಳೆಯಬಹುದೆಂದು ಕೇಶವ ಅಂದುಕೊಂಡ.

೧೩

ಕತ್ತಲಾಗುತ್ತಿದ್ದಂತೆ ಕಂಚಿನ ಒಂದು ಮಿಳ್ಳೆಯಲ್ಲಿ ಗೌರಿ ಕಾದಾರಿದ ಕೆನೆಗಟ್ಟಿದ ಹಾಲನ್ನು ತುಂಬಿಕೊಂಡು ಹಿತ್ತಲಿಗೆ ಇಳಿದಳು. ಗೌರಿಗೂ ಕೇಳಬೇಕು. ಹಾಗೆ – ಅಕ್ಕು ತಮ್ಮಯ್ಯನನ್ನು ದುಗುಡದಲ್ಲಿ ದಿಟ್ಟಿಸಿ ‘ಏಕಾದಶಿಯಾದ್ದರಿಂದ ಇವತ್ತು ಇವಳ ಹಡಬೇ ಬೆಕ್ಕಿಗೆ ಅನ್ನವಿಲ್ಲ’ ಎಂದಳು.

ಕೇಶವ ಲಾಟೀನಿನ ಗಾಜನ್ನು ನಾಜೂಕಾಗಿ ಒರೆಸಿ ಸ್ವಚ್ಛಮಾಡಿದ; ಅದು ಅವನ ಪ್ರೀತಿಯ ನಿತ್ಯದ ಕೆಲಸ. ಹುಡುಗಾಟಿಕೆಯಲ್ಲಿ ತಾನು ಹಂಬಲಿಸಿದ್ದ ಈ ಕೆಲಸಕ್ಕೆ ತಾನು ಅರ್ಹನಾಗಲು ಎಷ್ಟು ವರ್ಷ ಕಾಯಬೇಕಾಯಿತು. ಗಂಗೆಗೂ ಲಾಟೀನು ಒರೆಸಿ ದೀಪ ಹಚ್ಚಬೇಕೆಂದು ಬಹಳ ಆಸೆ. ಅದಕ್ಕೆ ಅಕ್ಕುವಿನ ಅನುಮತಿ ದೊರೆಯದೆ ಅವಳು ಕಾಲವಾದಳು. ಅಕ್ಕುಗೆ ಗೊತ್ತಾಗದಂತೆ ಕೇಶವ ಅವಳಿಗೆ ಒಮ್ಮೆ ಈ ಕೆಲಸವನ್ನು ತನ್ನ ಮುತುವರ್ಜಿಯಲ್ಲಿ ಮಾಡಲು ಬಿಟ್ಟದ್ದುಂಟು. ಮಾವಯ್ಯನಿಗೆ ಈ ಕೆಲಸ ಇಷ್ಟವೆಂದು ಬಲು ನಾಜೂಕಿನ ಕೈಯ ಗೌರಿ ಲಾಟೀನಿನ ಸುದ್ದಿಗೆ ಮಾತ್ರ ಹೋಗಳು.

ಕಡ್ಡಿಗೀರಿ ದೀಪ ಹಚ್ಚಿಯಾದ ಮೇಲೆ ದೀಪವನ್ನು ಕುಗುರುವಷ್ಟು ಸಣ್ಣ ಮಾಡಿ ಚಾವಡಿಯ ಸೂರಿಗೆ ಸಿಕ್ಕಿಸಿದ. ಏನೋ ನಿರೀಕ್ಷೆಯಲ್ಲಿ ಅತ್ತ ಇತ್ತ ಸುತ್ತಾಡಿದ. ಏನೂ ನೀರಿಕ್ಷಿಸುತ್ತಿದ್ದೀನಿ ಎಂದುಕೊಳ್ಳುತ್ತಿದ್ದಾಗ ಮಧ್ಯಾಹ್ನ ಒಂಟಿ ಕಾಗೆ ಮರದ ಮೇಲೆ ಕೂತು ಕರೆದದ್ದು ನೆನಪಾಯಿತು.

ಅಂಗಳದಲ್ಲಿ ಬಂದು ನಿಂತ. ಅಂಗಳದ ತುಂಬ ತುಳಸಿ ಗಿಡಗಳಿದ್ದವು. ಗಾಳಿಯಲ್ಲಿ ಆವರಿಸಿದ ಅವುಗಳ ಔಷಧಗಂಧ ಹಿತವೆನ್ನಿಸಿತು. ತುಳಸಿಯನ್ನು ತಿನ್ನುವುದೆಂದರೆ ಕೇಶವನಿಗೆ ಇಷ್ಟ. ಆದರೆ ಅಕ್ಕು ಕಂಡರೆ ಬೈಯುವಳು. ಜಿತೇಂದ್ರಿಯರಾಗಲು ಸನ್ಯಾಸಿಗಳು ಮಾತ್ರ ತುಳಸಿ ತಿಂದು ತಮ್ಮ ವೀರ್ಯವನ್ನು ಇಂಗಿಸಿಕೊಳ್ಳುತ್ತಾರೆಂದು ಅಕ್ಕು ನಂಬಿಕೆ. ಅವಳ ದೊಡ್ಡ  ಭಯವೆಂದರೆ ಒಂದೋ ಕೇಶವ ಸನ್ಯಾಸಿಯಾಗಿಬಿಡುವುದು ಅಥವಾ ಅನಾಚಾರಿಯಾಗಿ ಬಿಡುವುದು. ಅಕ್ಕು ನೋಡುತ್ತಿಲ್ಲವೆಂದು ತುಳಸಿಯ ಸೊಪ್ಪನ್ನು ಕಿತ್ತು ಬಾಯಿಗೆ ಹಾಕಿಕೊಂಡು ಅದರ ಹಿತವಾದ ಒಗರು ರುಚಿಯನ್ನು ಸವಿಯುತ್ತ ಮುಗುಳ್ನಕ್ಕ. ವಯ್ಯಾರಿ ಜಲಜ ಎಂದರೂ ತುಳಸಿಯಷ್ಟೆ ಅಕ್ಕುಗೆ ದಿಗಿಲು; ಅವಳು ಎಲೆಯಡಿಕೆ ಬೇಡುವ ನೆವದಲ್ಲಿ ತನ್ನ ಎದುರು ಮಾತಿಗೆ ನಿಂತಳೆಂದರೆ ಎಲ್ಲಿದ್ದರೂ, ಮಡಿಯಲ್ಲಿದ್ದರೂ, ಅಕ್ಕು ಹಾಜರು.

ಗೌರಿಯ ಬಗ್ಗೆಯೂ ಅಕ್ಕುಗೆ ಇದೇ ಭಯ; ಎಲ್ಲಿ ಅವಳು ಮದುವೆಯಾಗದೆ ಸನ್ಯಾಸಿಯಾಗಿ ಬಿಡುತ್ತಾಳೊ. ಮೀರಳ ಕಥೆಯನ್ನೊ ಅಕ್ಕಮಹಾದೇವಿಯ ಕಥೆಯನ್ನೊ ತಾನು ಹೇಳ ಹೊರಟರೆ ಅಕ್ಕುಗೆ ಇಷ್ಟವಿಲ್ಲ. ಏನೋ ನೆವವೊಡ್ಡಿ ತನ್ನ ಪ್ರವಚನವನನು ನಿಲ್ಲಿಸಿಬಿಡುವಳು. ಸಾಹುಕಾರರು ಅವರ ಲಿಂಗಾಯತ ಅಭಿಮಾನಿಗಳು ದಾವಣಗೆರೆಯಿಂದ ಬಂದಾಗ ತನ್ನ ಬಾಯಿಂದ ಅಕ್ಕ ಮಹಾದೇವಿಯ ಕಥೆ ಕೇಳಲು ತನ್ನನ್ನು ಅವರ ಮನೆಗೆ ಕರೆಸಿಕೊಂಡದ್ದುಂಟು. ಆಗ ಗೌರಿ ಗಂಗೆಯರೂ ತನ್ನ ಜೊತೆ ಬಂದು ಕಥೆಯನ್ನು ಕೇಳಿಸಿಕೊಂಡರೆಂದೂ ಕೇಳಿಸಿಕೊಂಡದ್ದನ್ನು ಬಲು ಸ್ವಾರಸ್ಯವಾಗಿ ತನಗೆ ಹೇಳಿದರೆಂದೂ ಅಕ್ಕು ಸಿಟ್ಟಾಗಿದ್ದಳು. ‘ಬೆತ್ತಲೆ ಓಡಾಡೊ ಹೆಂಗಸರ ಕಥೆಯನ್ನು ಬೆಳೀತಿರೋ ಹೆಣ್ಣುಮಕ್ಕಳಿಗೆ ಅದೇನು ನೀನು ಹೇಳೋದೊ? ಜಾತಿ ನೀತಿ ನಿನಗೆ ಬೇಡವ?’

ಸಾಹುಕಾರರ ಮನೆಯಲ್ಲಿ ಅವರ ಕಾಂಗ್ರೆಸ್ ಅನುಯಾಯಿಗಳು ಒಂದು ಸಭೆ ಸೇರಿದಾಗ ಮೊದಲೇ ತನಗೆ ಸಾಹುಕಾರರು ಗಾಂಧೀಜಿ ಬರೆದ ಆತ್ಮಚರಿತ್ರೆ ಕೊಟ್ಟು ಓದಿಸಿ, ಅದನ್ನು ಹರಿಕಥೆಗೆ ರೂಪಾಂತರಗೊಳಿಸಿ ರಸವತ್ತಾಗಿ ಹೇಳುವಂತೆ ಮಾಡಿದಾಗಲೂ ಅಕ್ಕು ಅದನ್ನು ಮಕ್ಕಳಿಂದ ಕೇಳಿಸಿಕೊಂಡು ಸಿಟ್ಟಾಗಿದ್ದಳು.

‘ದೇವರಂಥ ಗಾಂಧಿಗೆ ಸರಿಯಾದ್ದು ನಮಗೂ ಸರಿಯ? ಜಾತಿಗೀತಿ ಎಲ್ಲ ಸುಳ್ಳೂಂತ ತಿಳಿದು ನಮ್ಮ ಮಕ್ಕಳು ಬೆಳೀಬೇಕ?’

ಕೇಶವ ಅಕ್ಕುಗೆ ಎದುರಾಡನು; ಸುಮ್ಮನೇ ನಕ್ಕುಬಿಡವನು.

ಅಕ್ಕುಗೆ ಇನ್ನೂ ಹೆಚ್ಚಿನ ಭಯದ ಮೂಲದೆಂದರೆ ಗೌರಿಯ ಮೋಹಹುಟ್ಟಿಸಬಲ್ಲ ರೂಪ; ಗಾಳಿಯಲ್ಲಿ ಅಲೆಯುವ ಯಾವ ಗಂಧರ್ವ ಯಾವ ಗಂಡಸಿನ ಮೈ ಹೊಕ್ಕು ಅವಳಿಗೆ ಗಂಟುಬಿದ್ದುಬಿಡುತ್ತಾನೊ?

ಚಳಿಗಾಲವಾದ್ದರಿಂದ ಬೇಗ ಕತ್ತಲಾಗಿತ್ತು. ಆಕಾಶದಲ್ಲಿ ನಕ್ಷತ್ರಗಳು ಶುಭ್ರವಾಗಿ ಮಿನುಗುತ್ತಿದ್ದವು. ನಿತ್ಯದ ತನ್ನ ಪಂಚಾಂಗದ ಫಲ ಹೇಳುವ ನಕ್ಷತ್ರಗಳು ಲೋಕದ ಹಂಗಿಲ್ಲದಂತೆ ಆಕಾಶದಲ್ಲಿ ಸತ್ಯವಗಿದ್ದವು. ಅಮಾವಾಸ್ಯೆಗೆ ಇನ್ನೂ ನಾಲ್ಕು ರಾತ್ರೆ ಕಾಯಬೇಕಾಗಿದ್ದ ಆಕಾಶ ಬಲು ಸೊಬಗಿನಲ್ಲಿತ್ತು. ಯಾವ ಕೊಂಪೆಯಲ್ಲಿದ್ದರೂ ಅಖಂಡ ವಿಶ್ವದಲ್ಲಿ ತಾನಿದ್ದೇನೆ ಎಂದು ನಿತ್ಯ ತೋರುವ ಆಕಾಶವನ್ನು ದಿಟ್ಟಿಸುತ್ತ ಕೇಶವ ನಿಂತ.

ಇದು ವ್ಯಾದ, ಇದು ಸಪ್ತರ್ಷಿ, ಇದು ನಾಚಿ ಮಿನುಗುವ ಅರುಂಧತಿ, ಇದು ಧ್ರುವ, ಇದು ಹಾಲಿನ ಹೊಳೆ, ಇದು ತ್ರಿಶಂಕು. ಇದು ವಿಶ್ವಾಮಿತ್ರ ಒಡ್ಡಿದ ಕೈ ಎಂದು ಗುರುತಿಸಿಕೊಳ್ಳುತ್ತ ‘ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ’ ಎಂಬ ದಾಸರ ಕೀರ್ತನೆಯನ್ನು ಧಾರವಾಡದ ಶ್ರೀಪತಿದಾಸರು ತಾಳಹಾಕುತ್ತಾ ಕುಣಿದು ಹಾಡಿದ್ದನ್ನು ನೆನೆದ. ಮಂತ್ರಾಲಯದಲ್ಲಿ ಭಿಕ್ಷೆ ಮಾಡಿಕೊಂಡು ಗುರುಗಳಾದ ಸುಬ್ಬಣ್ಣ ಭಟ್ಟರ ಹತ್ತಿರ ಅಷ್ಟಾಧ್ಯಾಯಿಯನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದ ದಿನಗಳು ಅವು.

ಗುರುಗಳಿದ್ದಲ್ಲಿಗೆ ಹೋಗಿ ಎರಡು ದಿನವಿದ್ದು ಅವರ ಪಾದ ಸೇವೆ ಮಾಡಿಬರಬೇಕೆನ್ನಿಸಿತು. ಆದರೆ ಸಾಹುಕಾರರ ಮನೆಯ ಭೂವರಾಹ ಪೂಜೆಯನ್ನು ಒಂದು ದಿನವೂ ತಪ್ಪಿಸುವಂತಿಲ್ಲ. ನಿತ್ಯ ಕನಿಷ್ಠ ಎರಡು ತಪ್ಪಲೆ ಅನ್ನದ ನೈವೇದ್ಯ ಈ ಭೂವರಾಹನಿಗೆ ಆಗಲೇಬೇಕಲ್ಲ. ಈ ಪೂಜೆಯನ್ನು ಒಂದು ವಾರಕ್ಕಾದರೂ ವಹಿಸಿಕೊಡೋಣವೆಂದರೆ ಆಸುಪಾಸಿನಲ್ಲಿ ಒಂದೇ ಒಂದು ವೈದಿಕ ಕುಟುಂಬವಿಲ್ಲ. ಇರುವ ಒಬ್ಬರು ನಾಕು ಮೈಲಿ ದೂರದ ಬಸ್ ನಿಲ್ದಾಣದಲ್ಲಿ ಹೋಟೆಲು ಇಟ್ಟುಬಿಟ್ಟಿದ್ದಾರೆ. ಅವರ ಮಕ್ಕಳು ಚಲ್ಲಣ ತೊಟ್ಟು ಕಾಲೇಜು ಸೇರಿಯಾಗಿದೆ.

ಉಣಗೋಲು ತೆಗೆದ ಶಬ್ದವಾಯಿತು. ತೆಗೆದ ಯಾರೋ ಗೃಹಸ್ಥರು ‘ಶಿವ’ ‘ಶಿವ’ಎನ್ನುತ್ತ ಮತ್ತದನ್ನು ಹಾಕುತ್ತಿದ್ದಾರೆ. ಈ ಸ್ಮಾರ್ತ ಬ್ರಾಹ್ಮಣರು ಯಾರಿರಬಹುದೆಂದು ಊಹಿಸುತ್ತ ‘ಬನ್ನಿ’‘ಬನ್ನಿ’ ಎಂದು ಕತ್ತಲಲ್ಲೇ ಸ್ವಾಗತಿಸಿದ. ಚಾವಡಿಯಲ್ಲಿ ನೇತಿದ್ದ ಲಾಟೀನನ್ನು ತಂದು ಅವರಿಗೆ ಹಿಡಿದು, ‘ಬರೋಣವಾಗಲಿ’ ಎಂದು ಗೌರವ ಪೂರ್ವಕವಾಗಿ ಮತ್ತೆ ಕರೆದ.

ಹೌದು, ಸ್ಮಾರ್ತರೇ, ಘಟ್ಟದ ಕೆಳಗಿನವರೇ. ಜುಟ್ಟಿದೆ, ಕಚ್ಚೆಪಂಚೆಯುಟ್ಟು ಶಾಲು ಹೊದ್ದಿದ್ದಾರೆ. ಕೈಯಲ್ಲೊಂದು ಜೋಳಿಗೆಯಿದೆ. ಸಂಭಾವನೆಗೆಂದು ಬಂದ ಯಾರೋ ವೈದಿಕರು ಈವರೆಗೆ ಅವರನ್ನು ಕಂಡಂತಿಲ್ಲ. ಯಾರೋ ಅಪ್ಪಯ್ಯನ ಕಾಲದ ಶ್ರೋತ್ರಿಯರಿರಬೇಕು.

ಲಾಟೀನಿನ ದೀಪವನ್ನು ದೊಡ್ಡಮಾಡಿ ಬನ್ನಿಯೊಂದು ಮನೆಯ ಹೊಸಿಲು ತೋರಿಸಿದ. ಎತ್ತರದ ಆ ಹೊಸಿಲನ್ನು ದಾಟುವಾಗ ಅವರಷ್ಟು ಈ ಮನೆಯಲ್ಲಿ ಯಾರಿಗೂ ಬಾಗಬೇಕಾಗಿ ಬಂದಿರಲಿಲ್ಲ. ಆರಡಿಗೂ ಎತ್ತರದ ಅಜಾನುಬಾಹು ಎಂದು ಕೇಶವ ಊಹಿಸಿದ.

ಮನೆಯ ಒಳಗೆ ಅಲ್ಲೊಂದು ಇಲ್ಲೊಂದು ಮಣ್ಣಿನ ಹಣತೆಗಳು ಉರಿಯುತ್ತಿದ್ದವು. ಸುಣ್ಣ ಬಳಿದ ಗೋಡೆಗಳ ಪಡಸಾಲೆಯಲ್ಲಿ ಲಾಟೀನಿನಿಂದಾಗಿ, ಹಣತೆಗಳಿಂದಾಗಿ ಅವರ ಮುಖ ಕೊಂಚ ಕಾಣುವಂತಾಯಿತು.

ಕಡುಕಪ್ಪು ಮುಖ; ಕತ್ತಿನ ಸುತ್ತ ರುದ್ರಾಕ್ಷಿ. ದೀಪಕ್ಕೆ ಹೊಳೆಯುವ ಕಣ್ಣುಗಳು. ತನ್ನದರಂತೆಯೇ ತಲೆ ತುಂಬ ಬೆಳೆಸಿಕೊಂಡು ಗಂಟುಹಾಕಿದ ಜುಟ್ಟು. ಕುರುಚಲು ಗಡ್ಡ.

ಸ್ಮಾರ್ತರು,ಆದರೆ ನಮ್ಮ ಸಂಪ್ರದಾಯದವರೇ ಇರಬೇಕು. ದಕ್ಷಿಣ ಕನ್ನಡ ಜಿಲ್ಲೆಯವರೋ ಗೋಕರ್ಣದವರೋ ಇದ್ದಾರು. ಬೇರೆ ಯಾರು ಈ ಮಲೆಯನಾಡಿನ ಕುಗ್ರಾಮಕ್ಕೆ ಈ ಹೊತ್ತಲ್ಲಿ ಬಂದಾರು?

ಕೇಶವ ಇವರು ನಮಸ್ಕಾರಕ್ಕೆ ಅರ್ಹರು ಎಂದು ಗ್ರಹಿಸಿದವನೇ ಲಾಟೀನನ್ನು ಪಕ್ಕದಲ್ಲಿಟ್ಟು ಅವರ ಕಾಲು ಮುಟ್ಟಿ ನಮಸ್ಕರಿಸಿದ. ಬಂದ ಹಿರಿಯರು ಮಂತ್ರೋಕ್ತವಾಗಿ ಅವನನ್ನು ದೀರ್ಘಾಯುವಾಗೆಂದು ಹರಸಿದರು. ಅಕ್ಕು ಹೊರಬಂದು ತಲೆಮೇಲೆ ಸೆರಗು ಎಳೆದು ‘ಬಂದಿರಾ’ ಎಂದು ಸ್ವಾಗತಿಸಿ, ‘ಕಾಲು ತೊಳೆದುಕೊಳ್ಳಿ’ ಎಂದು ಒಳಗೆ ಹೋದಳು. ಗೌರಿ ಆಗಲೇ ಬಚ್ಚಲಿನಿಂದ ಒಂದು ಕೊಡ ಬಿಸಿನೀರನ್ನೂ ತಾಮ್ರದ ಚೊಂಬನ್ನು ಹಿತ್ತಲಿನ ಮೆಟ್ಟಿಲ ಮೇಲೆ ತಂದಿಟ್ಟು ಕಾದಿದ್ದಳು.

ಬಂದವರು ಕಾಲು ತೊಳೆದರು; ಹಿಮ್ಮಡಿಯನ್ನು ಕಲ್ಲಿಗೆ ಉಜ್ಜಿಕೊಳ್ಳುತ್ತ ಆಕಾಶವನ್ನೊಮ್ಮೆ ಎಷ್ಟು ಹೊತ್ತಾಗಿರಬಹುದು ಎಂದು ದಿಟ್ಟಿಸಿ ನೋಡಿದರು. ಅಕ್ಕು ಹಾಕಿದ ಮಣೆಯ ಮೇಲೆ ಪಡಸಾಲೆಯಲ್ಲಿ ಕೂತು ಮೈಮೇಲೆ ಇದ್ದ ಪಾಣಿಪಂಚೆಯಿಂದ ಮುಖವೊರೆಸಿಕೊಂಡು ಶಿವ ಶಿವ ಎಂದು ಪ್ರಸನ್ನರಾಗಿ ಎಲ್ಲರನ್ನೂ ನೋಡಿದರು. ಕೇಶವ ಲಾಟೀನನ್ನು ಅವರ ಎದುರಿಟ್ಟು ತಾನೂ ನೆಲದ ಮೇಲೆ ಕೂತು ಕುಶಲಪ್ರಶ್ನೆ ಮಾಡಿದ:

‘ಎಷ್ಟು ದೂರದಿಂದ ತಾವು ಪ್ರಯಾಣ ಬೆಳಸಿದ್ದೊ?’

‘ಗೋಕರ್ಣ ಬಿಟ್ಟು ವಾರವಾಯಿತು; ನಿನ್ನೆ ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ದೇವರ ದರ್ಶನ ಮಾಡಿ, ನನ್ನ ಪರಿಚಯದವರನ್ನೆಲ್ಲ ಭೇಟಿ ಮಾಡಿ, ಸೀದ ಬಸ್ಸು ಹತ್ತಿ, ಮಂಡಗದ್ದೆಗೆ ಬಂದದ್ದಾಯಿತು. ಸುತ್ತ ಮುತ್ತ ಓಡಾಡಿ ಮಂಡಗದ್ದೆಯ ಪೋಸ್ಟ್‌ಮಾಸ್ಟರ ಮನೆಯಲ್ಲಿ ರಾತ್ರೆ ಕಳೆದು ಬೆಳಗ್ಗೆ ತೂದೂರಿಗೆ ಬಂದು, ಹೊಳೆಯಲ್ಲಿ ಸ್ನಾನಮಾಡಿ, ಅಲ್ಲಿಂದ ನಡೆದು ಸಾಹುಕಾರರ ಮನೆಗೆ ಹೋಗಿ, ಅವರು ಊರಲ್ಲಿ ಇಲ್ಲವೆಂದು ತಿಳಿದು, ಅವರ ಪುಸ್ತಕ ಭಂಡಾರದಲ್ಲಿ ಕೂತು ಓದುತ್ತಿದ್ದು ಮನಸ್ಸನ್ನು ತಣಿಸಿಕೊಂಡದ್ದಾಯಿತು.

ನಮ್ಮದು ಜ್ಯೋತಿಷಿಗಳ ವಂಶ; ನಿಮ್ಮ ತೀರ್ಥರೂಪರಿಗೆ ನನ್ನ ಪರಿಚಯವಿತ್ತು. ಅವರಿಗೂ ಪಂಚಾಂಗ ನಿರ್ಮಾಣದಲ್ಲಿ ಆಸಕ್ತಿ ಇತ್ತಲ್ಲವೆ? ಹಿಂದಿನ ಮಾತು ಇದು. ಪ್ರತಿವರ್ಷ ಸಂಭಾವನೆಗೆಂದು ಈ ಪ್ರಾಂತದಲ್ಲೆಲ್ಲ ನಾವು ಓಡಾಡುವುದಿತ್ತು. ಸಾಹುಕಾರರು ನಮ್ಮನ್ನು ಒಂದು ವಾರ ಇಟ್ಟಿಕೊಂಡು ಭಗವದ್ಗೀತೆಯ ಪಾರಾಯಣ ಮಾಡಿಸಿ ಕಳುಹಿಸುತ್ತಿದ್ದರು. ಹತ್ತು ಹದಿನೈದು ವರ್ಷಗಳ ಹಿಂದಿನ ಮಾತು ಇದು ಎನ್ನಬಹುದು. ಒಳ್ಳೆಯಕಾಲ ಅದು. ಆಗ ನಿಮ್ಮ ತೀರ್ಥರೂಪರ ಪೂಜೆ ಆ ಮನೆಯಲ್ಲಿ. ಭೂವರಾಹನಿಗೆ ಯಾವ ಕಾಲದಿಂದಲೂ ಎರಡು ತಪ್ಪಲೆ ಅನ್ನದ ನೈವೇದ್ಯ ಆ ದೊಡ್ಡ ಮನೆಯಲ್ಲಿ ತಪ್ಪಿದ್ದಲ್ಲ. ಈಗ ನಿಮ್ಮ ಸೇವೆಯಂತೆ ಭೂವರಾಹನಿಗೆ.

ಆಮೇಲಿಂದ ನಾವು – ತಿರುಗಾಡುವ ಹಚ್ಚಲ್ಲವೆ? – ಚಿಕ್ಕಮಂಗಳೂರು ಪ್ರಾಂತ್ಯದ ಅನ್ನದ ರುಚಿ ಹತ್ತಿ ಅಲ್ಲೆಲ್ಲ ಓಡಾಡಿದೆವು. ಈಚೆಗೆ ಎಲ್ಲೆಂದರೆ ಅಲ್ಲಿಗೆ ಬಸ್ಸಿದೆಯಲ್ಲ – ರೈಲೂ ಇದೆಯಲ್ಲ – ಮೈಸೂರು ಬೆಂಗಳೂರು ತುಮಕೂರು ಎಂದು ಅಲೆಯುವುದಾಯಿತು. ನೀವು ಕೂಡ ವಿದ್ಯಾರ್ಜನೆಗೆಂದು ಊರೂರು ಅಲೆದವರು ಎಂದು ಕೇಳಿದ್ದೇನೆ.

ಪ್ರತಿ ವರ್ಷ ದೇವರು ಕೊಟ್ಟದ್ದನ್ನು, ಕೊಟ್ಟಷ್ಟನ್ನು, ಖರ್ಚು ಮಾಡಿ ಬಿಡುವುದು ನಮ್ಮ ರೂಢಿ. ಸಾಲದಾದಾಗ ಹೀಗೆ ಸಂಭಾವನೆಗೆ ಕೈಯಲ್ಲಿ ಜೋಳಿಗೆ ಹಿಡಿದು ಹೊರಟು ಬಿಡುತ್ತೇವೆ. ಅಡಿಕೆಯ ತೋಟವಿದೆ. ಕೊಳೆಯಾಗಿ ಬಿದ್ದು ಉಳಿದಿದ್ದನ್ನು ನನ್ನ ಮಗ ಮಾರಿ ಮನೆಯ ವ್ಯವಹಾರ ನಡೆಸುತ್ತಾನೆ. ಅವನಿಗೆ ಸಿರಸಿಯಿಂದ ಹೆಣ್ಣು ತಂದು ಮದುವೆ ಮಾಡಿಯಾಗಿದೆ. ಒಬ್ಬ ಮಗನೂ ಅವನಿಗೆ ಇದ್ದಾನೆ. ಚುರುಕಾದ ಹುಡುಗ, ಊರಲ್ಲಿದ್ದಾಗ ನನ್ನ ಹೆಗಲ ಮೇಲೇ ವಾಸ್ತವ್ಯ…’

ಅವರು ಸುಖವಾಗಿ ನಗುನಗುತ್ತ ಮಾತಾಡಿದರು. ಮಾತಿನಲ್ಲಿ ಸುಖವಿರುವ ಜನ ಸಿಕ್ಕಿತೆಂದು ಕೇಶವನಿಗೆ ಖುಷಿಯಾಯಿತೆಂದು ಗೌರಿಯೂ ಅಕ್ಕುವೂ ಗಮನಿಸಿ ಒಬ್ಬರನ್ನು ಒಬ್ಬರು ನೋಡಿ ನಕ್ಕರು. ಏಕಾದಶಿ ದಿನ ಅವರು ಫಲಾಹಾರ  ಮಾಡುವವರೋ ಅಲ್ಲವೋ ತಿಳಿಯಲು ಅಕ್ಕು ಕಾತರಳಾಗಿದ್ದಳು. ಆದರೆ ಬಾಯಿ ಬಿಟ್ಟು ಕೇಳುವುದು ಹೇಗೆ?

‘ಸಾಹುಕಾರ ಮಂಜಯ್ಯನವರನ್ನು ನೋಡದೆ ಬಹಳ ವರ್ಷಗಳಾಗಿ ಬಿಟ್ಟವು. ಈ ನಮ್ಮ ಹೊಸ ಸರ್ಕಾರದಲ್ಲಿ ಅವರಿಗೊಂದು ಏನಾದರೂ ಪದವಿಗಿದವಿ ಸಿಕ್ಕೀತೆಂದು ನಮ್ಮ ಪ್ರಾಂತ್ಯದಲ್ಲೆಲ್ಲ ಸುದ್ದಿಯಿತ್ತು. ಜೈಲಿಗೆ ಹೋಗಿ ಬಂದವರಲ್ಲವೆ? ಮಡಿಗಿಡಿ ಬಿಟ್ಟವರಾದರೂ ಮಂಜಯ್ಯ ದೇವತಾಶ್ರದ್ಧೆ ಬಿಡಲಿಲ್ಲ. ಕರ್ಣನಂಥ ಉದಾರಿ ಅವರು. ಅವರನ್ನು ನೋಡೋಣವೆಂದು ಬಂದರೆ ನಿರಾಸೆಯಾಯಿತು. ಶುಶ್ರೂಶೆಗೆಂದು ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ ಎಂದು ಕೇಳಿದೆ. ಅಲ್ಲಿನ ಪಾರುಪತ್ಯೆದಾರರು ನಮ್ಮನ್ನು ಉಪಚರಿಸಿ ಮಡಿಮೈಲಿಗೆಗೆ ಇಲ್ಲಿ ಯಾರೂ ಇಲ್ಲ ಎಂದು ನಿಮ್ಮಲ್ಲಿಗೆ ನಮ್ಮನ್ನು ಕಳುಹಿಸಿದರು. ಯಾಕೆ ಇಷ್ಟು ಮಾತು ಬೆಳೆಸಿದನೆಂದರೆ ನಾನೇನೂ ವೈದಿಕನಾಗಿ ಉಗ್ರಪಂಥಿಯಲ್ಲ. ನಿಮ್ಮ ಅಕ್ಕಯ್ಯ ಅದನ್ನೇ ಕುರಿತು ಚಿಂತಿಸುತ್ತಿರುವಂತೆ ತೋರಿತಾಗಿ ನಾನೇ ಹೇಳಿಕೊಳ್ಳಲು ಮುಂದಾಗಿದ್ದೇನೆ. ಏಕಾದಶಿ ದಿನ ಒಂದಿಷ್ಟು ಅವಲಕ್ಕಿ ಮಜ್ಜಿಗೆಯನ್ನಾದರೂ ಈ ಒಳಗಿನ ಪರಮಾತ್ಮ ಬಯಸುತ್ತಾನೆ.’

ಎಂದು ಹೇಳಿ ಅವರು ಎಷ್ಟು ದಿವ್ಯವಾಗಿ ನಕ್ಕರು ಎಂದು ಕೇಶವನಿಗೆ ಆಶ್ಚರ್ಯವಾದರೆ ಹಸಿದು ಬಂದ ಬ್ರಾಹ್ಮಣನನ್ನು ಕಾಯಿಸಿದೆನಲ್ಲ ಎಂದು ಅಕ್ಕುಗೆ ಸಂಕಟವಾಯಿತು. ಅಕ್ಕುವಿನ ಭಾವನೆಯನ್ನು ಊಹಿಸಿದ ಅವರು ‘ಛೆ, ಛೆ, ಪರವಾಯಿಲ್ಲ. ಹಸಿದಷ್ಟು ರುಚಿ ಹೆಚ್ಚಲ್ಲವೆ?’ ಎಂದು ಮತ್ತೆ ಎಲ್ಲರಿಗೂ ಖುಷಿಯಾಗುವಂತೆ ನಕ್ಕರು. ತನಗಿಂತ ಈ ಬ್ರಾಹ್ಮಣನಿಗೆ ಮಾತೆಂದರೆ ಹೆಚ್ಚು ಮುದವಿರಬೇಕೆಂದು ಕೇಶವ ಕಿವಿಯಾಗಿ ಕೂತ.

‘ನೀವು ದಕ್ಷಿಣ ಕನ್ನಡ ಜಿಲ್ಲೆಯ ವೈಷ್ಣವರಾದರೆ ನಾವು ಅದೇ ಜಿಲ್ಲೆಯ ಸ್ಮಾರ್ತರು. ನಿಮ್ಮ ಅಕ್ಕಯ್ಯನೂ ಅವರ ಸಂಬಂಧದಿಂದಾಗಿ ನನ್ನಂತೆ ಸ್ಮಾರ್ತರೆ. ನಮ್ಮಲ್ಲಿ ಸಂಬಂಧಗಳು ಆಗಬಹುದು; ಒಂದೇ ಸಂಪ್ರದಾಯ ನಮ್ಮದು. ಕೆಲವರು ಮಧ್ವಾಚಾರ್ಯರ ಮಾತೊಗೊ ವಾದಕ್ಕೊ ಮರುಳಾಗಿ ವೈಷ್ಣವರಾದರು, ನಾವಾಗಲಿಲ್ಲ ಅಷ್ಟೆ. ಮಾತು ಬೆಳೆಸಲು ಹೇಳಿದೆ; ವೇದಾಂತಿಗಳಾದ ಕೇಶವಯ್ಯನವರು ಹಸಿದು ಬಂದ ಈ ಬ್ರಾಹ್ಮಣನ ಜೊತೆ ಈಗ ವಾದಕ್ಕೆ ಇಳಿಯಬಾರದು. ತಮಾಷೆಗೆ ಹೇಳೋದು: ಆಚಾರ್ಯರು ದೇಶಾಂತರ ಸುತ್ತಿ ಯಾರು ಯಾರನ್ನೋ ವೈಷ್ಣವರನ್ನಾಗಿ ಪರಿವರ್ತಿಸಿದವರು ಊರು ಮನೆಯಲ್ಲೇ ಯಾಕೆ ಸೋತರು ಅಂತ ನಾವು ನಮ್ಮ ಎದಿರು ವಾದಕ್ಕೆ ಸಿದ್ದರಾಗಿ ಕೂತ ಕೇಶವ ಆಚಾರ್ಯರನ್ನು ಕೇಳಬಹುದೇ?’

ಕೇಶವ ನಗುತ್ತಲೇ ಹೇಳಿದ:

‘ಹಿತ್ತಲು ಗಿಡಮದ್ದಲ್ಲ ಎಂಬ ಗಾದೆಯುಂಟು; ಗಾದೆ ವೇದದ ಸಮಾನ ಎಂದು ನಮ್ಮ ಆಚಾರ್ಯರೂ ಹೇಳಬಹುದಿತ್ತು; ಜಗತ್ತು ಸತ್ಯ ಎಂದ ಆಚಾರ್ಯರು ಸ್ಥಳದ ಮಾತಿಗೂ ಬೆಲೆ ಕೊಟ್ಟಿದ್ದರೆ ಆಶ್ಚರ್ಯವಿಲ್ಲ. ಮಿಥ್ಯಾವಾದದಿಂದ ನಿಮ್ಮಂಥ ಹಿರಿಯರು ಪಾರಾಗುವತನಕ ನೀವು ಇಲ್ಲೇ ಇರಬೇಕೆಂದು ನಮ್ಮ ಪ್ರಾರ್ಥನೆ.’

‘ಓಹೋ ಯಾಕಿರಬಾರದು?’ ಇದು ಉತ್ತರಾದಿ ಮಠದ ಮಾಧ್ವರ ಮನೆಯಲ್ಲವಲ್ಲ. ಉಡುಪಿ ಕೃಷ್ಣನ ಅನುಯಾಯಿಗಳಾದ ತಾವು ಹೇಗೂ ನಮ್ಮಂತೆ ಸುಖ ಪುರುಷರೇ ತಾನೆ?ಮಡಿಗಿಡಿಯೆಂದು ಅಡಿಗಡಿ ಹಾರುವ ಜನ ನೀವಲ್ಲವಲ್ಲ; ನಿಮ್ಮ ಅಕ್ಕಯ್ಯನಂತೂ ನಮ್ಮವರೇ ಆಗಿದ್ದಾರಲ್ಲ. ನಾಳೆಯಿಂದಲೇ ಸುಧಾಪಾಠ ಶುರುವಾಗಿಬಿಡಲಿ.’

ಈ ಸಲಿಗೆಯ ಸುಖದಲ್ಲಿದ್ದಾಗಲೇ ಗೌರಿ ಬಾಳೆಲೆಯಲ್ಲಿ ಅವಲಕ್ಕಿಯನ್ನು ಕೆನೆ ಮೊಸರಿನಲ್ಲಿ ಕಲಿಸಿ ತಂದು ಮಣೆಯೆದರುರು ಇಟ್ಟಿದ್ದಳು.

‘ಈ ಬಾಲೆಯಲ್ಲಿ ಮಂಗಳಗೌರಿಯೇ ನೆಲಸಿದಂತೆ ಕಾಣುತ್ತೆ’

ಗೌರಿಯ ಮುಖವನ್ನು ಪರಮಾಶ್ಚರ್ಯದಿಂದ ಎಂಬಂತೆ ನೋಡುತ್ತ ಅವರು ಆಡಿದ ಮಾತು ತಕ್ಷಣದ ಪ್ರತಿಕ್ರಿಯೆಯಾಗಿತ್ತು. ನಾಚಿದ ಗೌರಿ ಅವರ ಮಾತಿನ ಮೋಡಿಯಿಂದ ಎಲ್ಲರನ್ನೂ ಪಾರುಮಾಡಲೆಂಬಂತೆ ಉಪಚರಿಸಿದಳು.

‘ಸ್ವಲ್ಪ ಉಪ್ಪಿನಕಾಯಿ ಬಡಿಸಲ?’

ತನ್ನಿಂದ ಹಠಾತ್ತನೆ ಹೊರಬಂದ ಮಾತು ಎಲ್ಲರನ್ನೂ ಬೆರಗುಗೊಳಿಸಿದ್ದನ್ನು ಗಮನಿಸಿದ ಅವರು ತಮ್ಮ ಎಂದಿನ ಕುಶಾಲಿನ ಧಾಟಿಯಲ್ಲಿ ಹೇಳಿದರು:

‘ಮಲೆನಾಡಿನ ಉಪ್ಪಿನಕಾಯಿ,ಮಿಡಿ ಉಪ್ಪಿನಕಾಯಿ, ಎಷ್ಟು ವರ್ಷವಾಗಲಿ, ಅದರ ಸೊನೆ ಉಳಿದೇ ಇರುತ್ತೆ, ಬಡಿಸಮ್ಮ.’

ಗೌರಿ ಮುಜುಗರದಿಂದ ಪಾರಾಗಲು ಕೇಳುವುದೇನೊ ಕೇಳಿದ್ದಳು; ಆದರೆ ರಾತ್ರೆ ಹೊತ್ತು ದೊಡ್ಡ ಜಾಡಿಯ ಮುಚ್ಚಳ ತೆರೆದು ಉಪ್ಪಿನಕಾಯನ್ನು ತೆಗೆಯುವುದನ್ನು ಅಕ್ಕು ಒಪ್ಪಳು. ಆದರೆ ಅವಳ ಪುಣ್ಯಕ್ಕೆ ಹಿಂದಿನ ದಿನ ತೆಗೆದಿಟ್ಟ ಉಪ್ಪಿನ ಕಾಯಿಯಲ್ಲಿ ಯಥೇಷ್ಟರಸದ ಜೊತೆ ಮೂರು ಮಿಡಿಗಳೂ ಉಳಿದಿದ್ದವು – ಹೇಗೋ ಕೇಶವನ ಕಣ್ಣಿಂದ ತಪ್ಪಿಸಿಕೊಂಡು ಉಳಿದ ಮಿಡಿಗಳನ್ನು ಗೌರಿ ಸಂತೋಷದಿಂದ ಬಡಿಸಿದಳು.

ಅಕ್ಕು ಸಮಾಧಾನದಲ್ಲಿ ಗಮನಿಸುತ್ತ ಕೂತಿದ್ದಳು; ಈ ಬ್ರಾಹ್ಮಣ ಒಳ್ಳೆ ಏಕಾದಶಿ ದಿನವೇ ಬರಬೇಕೆ? ಪಾಯಸದ ಅಡಿಗೆ ಮಾಡಿ ಬಡಿಸಬಹುದಿತ್ತು. ನಾಳೆ ಒಳ್ಳೆ ದೋಸೆ ಮಾಡಿ ತಿನ್ನಿಸಿದರಾಯಿತು. ಗೌರಿಗಿನ್ನೂ ಯಾಕೆ ಮದುವೆಯಾಗಿಲ್ಲವೆಂದು ಬ್ರಾಹ್ಮಣ ಕೇಳಲಿಲ್ಲವಲ್ಲ – ಸಾಕು. ಹುಡುಗಿ ಅವರಿಗೆ ಇಷ್ಟವಾದಳು; ಲೋಕ ಸಂಚಾರಿಯಾದ ಈ ಬ್ರಾಹ್ಮಣ ಎಲ್ಲಾದರೂ ಗೌರಿಗೆ ವರ ಹುಡುಕಿಯಾನು….

ಬಂದವರ ಹೆಸರನ್ನು ಕೇಶವ ಇನ್ನೂ ಕೇಳಿಯೇ ಇರಲಿಲ್ಲ. ದಣಿದು ಬಂದವರನ್ನು ಬಂದಕೂಡಲೇ ನಿಮ್ಮ ಹೆಸರೇನು, ಬಂದ ಕಾರಣವೇನು ಕೇಳುವುದು ಸದಭಿರುಚಿಯ ವರ್ತನೆಯಲ್ಲ. ಎಲೆಯಲ್ಲಿರುವುದನ್ನು ಮುಗಿಸಿ ತೃಪ್ತಿಯಿಂದ ಅಕ್ಕು ಕಡೆ ನೋಡಿದವರನ್ನು ಕೇಶವ ಕೇಳಿದ:

‘ತಮ್ಮ ನಾಮಧೇಯ ಕೇಳುವುದನ್ನು ಮರೆತುಬಿಟ್ಟೆ’

‘ಕೃಷ್ಣಶಾಸ್ತ್ರಿ… ನಾವು ಸಾಮವೇದಿಗಳು… ಸಾಮವೇದಿಗಳು ಈ ಕಾಲದಲ್ಲಿ ಅಪರೂಪವೆಂದು ನಮಗೆ ಕೊಂಚ ಸೊಕ್ಕು, ಯಾಕೆಂದರೆ ನಮ್ಮ ಸೊಕ್ಕು ನಡೆಯುತ್ತೆ. ನಮ್ಮ ಹೊಟ್ಟೆಯನ್ನ ಸಾಮವೇದ ತುಂಬಿಸುತ್ತ ಇದೆ, ನಮ್ಮ ಪಿತೃಗಳ ದಯೆಯಿಂದ. ನಮ್ಮ ಪೂರ್ವಿಕರು ಕಾಶಿಯಲ್ಲೂ ಕಲಿತು ಬಂದವರೆಂದು ಗೋಕರ್ಣದ ಕೂಪಮಂಡೂಕಗಳಾದ ನಾವು ಸೊಕ್ಕಿ ಹೇಳುವುದು. ಆದರೆ ನಾವು ಉದರಂಭರಣದ ನಿಮಿತ್ತವಾಗಿ ವೇದಮಂತ್ರಗಳನ್ನು ಹೇಳುತ್ತಿದ್ದರೆ, ಗೊತ್ತಿರಬೇಕಲ್ಲವೆ? ಅದೊಂದು ವೇದ ಮಂತ್ರದಲ್ಲೇ ಹಾಸ್ಯ ಮಾಡುವಂತೆ, ಕಪ್ಪೆಗಳು ಹೊಂಡದಲ್ಲಿ ಮಾಡುವ ಸದ್ದಿನಂತೆಯೇ ಇರುತ್ತದೆ…..ನಮ್ಮಂಥವರು ವೇದಕಾಲದಲ್ಲೂ ಇದ್ದರೆಂಬುದೇ ನಮಗೊಂದು ಸಮಾಧಾನ! ಹೆಸರು ಹೇಳಲು ಹೋಗಿ ಪುರಾಣ ಶುರುಮಾಡಿ ಬಿಟ್ಟೆ; ಮನ್ನಿಸಬೇಕು…

ತಮ್ಮ ಹೆಸರು ನಮಗೆ ಗೊತ್ತು. ಎಲ್ಲ ತಿಳಿದೇ ನಾವು ಇಲ್ಲಿ ವಕ್ಕರಿಸಿರೋದು. ನೀವು ನಿಮ್ಮ ತೀರ್ಥರೂಪರ ನಂತರ ಸಾಹುಕಾರರ ಮನೆಯ ಭೂವರಾಹ ಮೂರ್ತಿಯ ಅರ್ಚಕರಾಗಿ ಇಲ್ಲಿಯೇ ನೆಲಸಿದವರು. ‘ನಮ್ಮ ಕೇಶವಯ್ಯನವರು ತಾಳಮದ್ದಲೆಯಲ್ಲಿ ನಿಷ್ಣಾತರು, ಸಂಸ್ಕೃತ ಪಂಡಿತರು, ಮಹಾ ರಸಿಕರು,’ ಇತೋಪ್ಯತಿಶಯವಾಗಿ ಗುಣಗಾನ ಮಾಡಿ ನಮ್ಮನ್ನು ಇಲ್ಲಿಗೆ ಸಾಹುಕಾರರ ಪಾರುಪತ್ಯೆದಾರರು ಕಳುಹಿಸಿದ್ದು, ನಿಮ್ಮನ್ನಷ್ಟೆ ಅಲ್ಲ; ನಿಮ್ಮ ಅಕ್ಕಯ್ಯನವರ ಕೀರ್ತಿಯನ್ನೂ ಕೇಳಿಯೇ ನಾಳೆಯ ದ್ವಾದಶಿ ದೋಸೆಗೆ ಹಸಿದು ಬಂದಿದ್ದೇವೆ. ಇನ್ನೊಂದು ನಿಮಗೆ ಆಶ್ಚರ್ಯದ ವಿಷಯವಾದೀತು; ಹೇಳಿಯೇ ಬಿಡುತ್ತೇನೆ.ನೀವು ಉಡುಪಿ ಮಠದವರಾದ್ದರಿಂದ ನಿಮ್ಮ ಅಕ್ಕಯ್ಯನ ಸಂಬಂಧ ನಮ್ಮ ಕಡೆಯ ಸ್ಮಾರ್ತರಲ್ಲಿ ಆಗೋದು ಸಾಧ್ಯವಾಯಿತು. ಸುತ್ತಿ ಬಳಸಿ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದೇನೆ. ಈ ನಿಮ್ಮ ಅಕ್ಕಯ್ಯ ನಮಗೆ ದೂರದ ಅಂದರೆ ಬಳಕೆ ಕಳೆದುಹೋಗುವಷ್ಟು ದೂರದ, ನೆಂಟರೂ ಆಗಬೇಕು. ಅವರ ಯಜಮಾನರ ಮೊದಲ ಹೆಂಡತಿಯ ಚಿಕ್ಕಪ್ಪನಿಗೆ ನನ್ನ ತಾಯಿಯ ಸೋದರಮಾವನ ಹೆಂಡತಿಯ ತಂಗಿಯನ್ನೇ ತಂದದ್ದು. ಋಣಾನುಬಂಧ ಹೇಗಿದೆ ನೋಡಿ. ಉತ್ತರಾದಿ ಮಠದವರಲ್ಲಿ ಇಂಥ ಸಂಬಂಧಗಳು ಸಾಧ್ಯವೇ ಇಲ್ಲ…ಆಯಿತಾ? ಈ ಬಾಲೆ ನಿಮ್ಮ ಅಕ್ಕನ ಸಾಕು ಮಗಳು; ಹೆಸರು ಗೌರಿಯೆಂದು ಪಾರುಪತ್ಯೆದಾರರು ಹೇಳಿದ್ದರು. ಇವಳು ಸಾಕ್ಷಾತ್ ಮಂಗಳಗೌರಿಯೇ ಎಂದು ನಾನು ಕಣ್ಣಾರೆ ಕಂಡದ್ದಾಯಿತು.

ಯಾಕಿದನ್ನು ಹೇಳುವೆನೆಂದರೆ ನಾನು ದೇವಿಯ ಅರ್ಚಕ; ಅವಳು ಪ್ರಸನ್ನಳಾಗಿ ನಮಗೆ ತೋರುವುದೆಂದರೆ ಕನ್ನಿಕಾರೂಪದಲ್ಲೇ ಎಂದು ನನ್ನ ಮತ. ನಡೆದಾಡುತ್ತ ದಣಿದಿದ್ದೀರಿ ಅನ್ನಿ; ಮೇಲೆ ಕೆಂಡವಾಗಿ ಸೂರ್ಯದೇವ ಉರಿದಿದ್ದಾನೆ. ನಿಮಗೆ ಬಾಯಾರಿದೆ; ಅಗೋ ಆಗ ಕೊಡಪಾನವನ್ನು ಬಲಬಗಲಲ್ಲಿ ಸಿಕ್ಕಿಸಿಕೊಂಡು, ಎಡಗೈಯಲ್ಲಿ ಒಂದು ಲಂಗ ಉಟ್ಟ ಮುದ್ದು ಬಾಲೆಯನ್ನು ನಡೆಸಿಕೊಂಡು ಅವಳು ಪ್ರತ್ಯಕ್ಷಳಾಗುತ್ತಾಳೆ. ಆಳವಾದ ಬಾವಿಯ ತಂಪಾದ ಸಿಹಿನೀರನ್ನು ಅವಳಿಂದ ಬೊಗಸೆ ಬೊಗಸೆ ಪಡೆದು ನೀವು ಕೃತಾರ್ಥರಾಗುತ್ತೀರಿ. ನಿನ್ನೆ ಸಾಹುಕಾರರಲ್ಲಿಗೆ ಬರುವಾಗ ಅವಳು, ಇಚ್ಛಾರೂಪಿಯಲ್ಲವೆ ಅವಳು. ನನಗೆ ಲಜ್ಜೆಯ ನಾರಿಯಾಗಿ ಕಾಣಿಸಿಕೊಂಡಳು. ತುಂಡು ಸೀರೆಯುಟ್ಟು, ಸೆರಗು ಬಿಗಿದು ಕಟ್ಟಿ, ಹಾಳೆಟೊಪ್ಪಿ ತೊಟ್ಟ ತಲೆಯ ಮೇಲೆ ಅವಳು ಹೊತ್ತದ್ದೇನು ಎನ್ನುವಿರಾ? ಒಣಗಿದ ದರಗು; ಕೊಟ್ಟಿಗೆಗೆಂದು ಕಾಡಲ್ಲಿ ಆಯ್ದ ದರಗು. ಥೇಟು ವನದೇವತೆಯೆ – ಅವಳ ಮುಖದ ಕಳೆ ನೋಡಿದರೆ. ತಲೆಯ ಮೇಲೆ ಬುಟ್ಟಿ ಹೊತ್ತು ಕೈ ಬೀಸಿ, ಸೊಂಟಬಳುಕಿ, ಅವಸರವಿಲ್ಲದ ಆಮೋದದಲ್ಲಿ ಅವಳು ನಮ್ಮನ್ನೆಲ್ಲ ಮಾಯಾವಶರನ್ನಾಗಿ ಮಾಡಿರೋದು. ಯಾವ ದೇವಿ ಸರ್ವಭೂತ ಹೃದಯದಲ್ಲೂ ಲಜ್ಜಾರೂಪಿಯಾಗಿ ನೆಲೆಸಿದ್ದಾಳೋ ಅವಳೇ ಇವಳು ಎಂಬ ದೇವೀಸ್ತುತಿಯನ್ನು ನಾನು ನೆನಸುವಂತಾಯಿತು… ದುರದೃಷ್ಟವಶಾತ್ ನನ್ನ ಹೆಂಡತಿಯ ಹೊಟ್ಟೆಯಿಂದ ನನಗೊಂದು ಸ್ತ್ರೀರತ್ನ ದೊರೆಯಲಿಲ್ಲ….’

ಶಾಸ್ತ್ರಿಗಳ ಮಾತು ಕೇಳಿಸಿಕೊಳ್ಳುತ್ತ ಈ ತಮ್ಮಯ್ಯಗೊಬ್ಬ ಸರಿಸಮಾನನಾದ ಮಾತುಗಾರ ಸಿಕ್ಕನೆಂದು ಮುಗುಳ್ನಗುತ್ತ ಅಕ್ಕು ಅವರಿಗೆ ಮಲಗಲು ಹಾಸಿಗೆ ಹಾಸುವ ತಯ್ಯಾರಿಯಲ್ಲಿದ್ದಳು. ಅತಿಥಿಗಳಿಗೆಂದೇ ಮನೆಯಲ್ಲಿ ಸುತ್ತಿಟ್ಟ ಹಾಸಿಗೆಯನ್ನು ಚಾವಡಿಯಲ್ಲಿ ಬಿಚ್ಚಿ, ದಿಂಬಿನ ಹತ್ತಿರ ತಾಮ್ರದ ಚೊಂಬಿನಲ್ಲಿ ಕುಡಿಯುವ ನೀರಿಟ್ಟು ಕೇಶವನಿಗೆ ಕೇಳುವಂತೆ ಹೇಳಿದಳು:

‘ಆಯಾಸವಾಗಿರಬೇಕು. ಮಲಗಲು ಹೇಳು’