೧೪

ನಡೆದ ಆಯಾಸವೆಲ್ಲ ಪರಿಹಾರವಾಗುವಂತೆ ಶಾಸ್ತ್ರಿಗಳು ಸುಖನಿದ್ದೆ ಮಾಡಿ, ನಸುಕಿನಲ್ಲಿ ಕೋಳಿಯ ಕೂಗಿಗೇ ಎದ್ದು, ಚೊಂಬು ತೆಗೆದುಕೊಂಡು ಹಿತ್ತಲಿಗೆ ಹೋಗಿ, ಪ್ರಾತರ್ವಿಧಿ ಮುಗಿಸಿ, ಕಾಲು ತೊಳೆದು, ಬಿಸಿನೀರು ಸ್ನಾನಮಾಡಿ, ಜೋಳಿಗೆಯಲ್ಲಿ ತಂದಿದ್ದ ತಮ್ಮ ಕೆಂಪು ಪಟ್ಟಿ ಮಡಿಯುಟ್ಟು ಗೌರಿ ಅಣಿ ಮಾಡಿದ ಜಾಗದಲ್ಲಿ ಕೂತು ಜಪ ಮಾಡಿದರು. ಅಷ್ಟರಲ್ಲೆ ಎಲ್ಲರ ಸ್ನಾನವೂ ಮುಗಿದಿತ್ತು. ಅಕ್ಕು ಆಗಲೇ ಕೋಡೊಲೆಯಲ್ಲಿ ಧಗಧಗ ಉರಿಯುವ ಬೆಂಕಿಯನ್ನೆಬ್ಬಿಸಿ ಬಾಣಲೆಯನ್ನು ಹದವಾಗಿ ಕಾಯಿಸಿ ದೋಸೆ ಹೊಯ್ಯಲು ಶುರುಮಾಡಿದ್ದಳು. ಕಾದ ಕಾವಲಿಯನ್ನು ದೋಸೆಯ ಹಿಟ್ಟು ಸ್ಪರ್ಶಿಸುವಾಗಿನ ಶಾಖಚುಂಬನದ ಶಬ್ದ, ಅದು ಗರಿಯಾಗುತ್ತ ಪಡೆಯುವ ವಾಸನೆ ಏಕಾದಶಿಯ ಹಸಿವಿನಿಂದಾಗಿ ಶಾಸ್ತ್ರಿಗಳಿಗೆ ವಿಶೇಷ ರುಚಿಯ ಆಹ್ವಾನವಾಗುತ್ತು.

ಗೌರಿ ಮಣೆ ಹಾಕಿ ಬಾಳೆಲೆಯಿಟ್ಟು ಕರೆದಳು. ಕೇಶವ ಮತ್ತು ಶಾಸ್ತ್ರಿಗಳು ಮಣೆ ಮೇಲೆ ಕೂತು ಬಿಸಿಬಿಸಿಯಾದ ಗರಿಗರಿಯಾದ ದೋಸೆಗೆ ಕಾದರು. ಅಕ್ಕುವೇ ಖುದ್ದು ದೋಸೆಯನ್ನು ಹೊಯ್ದು, ಅದರ ಮೇಲೆ ಕಾಯಿಸಿದ ತುಪ್ಪಹಾಕಿ, ತೆಂಗಿನ ಕಾಯಿಯ ಚಟ್ನಿಯನ್ನೂ ಮಿಡಿ ಉಪ್ಪಿನಕಾಯಿಯನ್ನೂ ಕುಡಿಯೆಲೆಯೆರಡು ತುದಿಗಳಲ್ಲಿ ಬಡಿಸಿದಳು. ತಿಂದದ್ದು ಹೊಟ್ಟೆಯಲ್ಲಿ ತಂಪೆನ್ನಿಸಲಿ ಎಂದು ಕೆನೆಮೊಸರು, ಎಲೆಯ ಪಕ್ಕದಲ್ಲಿ ಒಂದು ತುದಿಗೆ.

ದೋಸೆಯ ಮೇಲೆ ದೋಸೆ; ಒಂದಾದ ಮೇಲೊಂದು ಹೊಯ್ಯಬೇಕು, ಗರಿಗೊಳ್ಳುವಂತೆ ಮಗುಚಬೇಕು, ಮಡುಚಿ ಸೀದತಂದು ಬಾಳೆಲೆಮೇಲೆ ಬಡಿಸಬೇಕು. ನಾಲ್ಕಕ್ಕೇ ಸಾಕುಸಾಕು ಎಂದು ಆರು ದೋಸೆಯನ್ನಾದರೂ ಶಾಸ್ತ್ರಿಗಳು ತಿನ್ನಲೇಬೇಕಾಯಿತು. ಅಕ್ಕುವನ್ನು ಮನಸಾರೆ ಹೊಗಳುತ್ತ, ದೋಸೆ ಇಷ್ಟು ತೆಳುವಾದ್ದರಿಂದ ಅದರಲ್ಲಿ ತೂತುಗಳೇ ಅಧಿಕವಾದ್ದರಿಂದ ಗರಿಯಾದ್ದು ಬೇಗ ಹೊಟ್ಟೆಯಲ್ಲಿ ಕರಗುವುದರಿಂದ ಯುವಕನಾದ ಕೇಶವ ಇನ್ನೆರಡು ತಿನ್ನಬಹುದೆಂದು ಶಾಸ್ತ್ರಿಗಳೇ ಅವನನ್ನು ಉಪಚರಿಸುತ್ತ ಇದ್ದಾಗ ಇನ್ನೊಂದು ದೋಸೆ, ಗರಿಯಾದ್ದು ತೆಳುವಾದ್ದು, ಮಸ್ತಾದ ತೂತುಗಳಿದ್ದು, ಅವರ ಎಲೆಯ ಮೇಲೆಯೇ  ಪ್ರತ್ಯಕ್ಷವಾಗಿ ಬಿಡುವುದೆ? ಇದು ಉಪಚಾರವಲ್ಲ, ಹಿಂಸೆ ಎಂದು, ಆದರೆ ಅದನ್ನೂ ರುಚಿಸುತ್ತ ಶಾಸ್ತ್ರಿಗಳು ತಿಂದು, ಕೈಸಹ ಊರದಂತೆ ಹಗುರಾಗಿ ಎದ್ದೇಬಿಟ್ಟರು. ಅಕ್ಕು ಸಟ್ಟುಗದಲ್ಲಿ ತಂದ ಇನ್ನೊಂದು ದೋಸೆಯನ್ನು ಮಾತ್ರ ಕೇಶವ ತಿನ್ನಬೇಕಾಯಿತು.

ಕೈ ತೊಳೆದಾದ ಮೇಲೆ ಕೇಶವ ಅಂಜುತ್ತ ಶಾಸ್ತ್ರಿಗಳನ್ನು ಕೇಳಿದ:

‘ತಾವು ಲೋಕ ಸಂಚಾರಿಗಳಲ್ಲವೆ? ಕಾಫಿಯ ಅಭ್ಯಾಸವೇನಾದರೂ ಇದೆಯೆ? ತಾವು ಇದೆ ಎಂದರೆ ತಮ್ಮ ಸಾನ್ನಿಧ್ಯದಿಂದಾಗಿ ನನಗೂ ಅಷ್ಟು ದಕ್ಕೀತೆಂಬ ಸ್ವಾರ್ಥದಿಂದ ನಾನು ಈ ಪ್ರಶ್ನೆಯನ್ನು ಕೇಳುತ್ತಿರುವುದು’

ಕೇಶವ ತುಂಟಾಗಿ ನಕ್ಕು ಕಾಫಿಯ ವಿಷಯ ಹೇಗೆ ಎತ್ತುವುದೆಂದು ತೋಚದೆ ನಿಂತ ಅಕ್ಕು ಕಡೆ ನೋಡಿ ಕಣ್ಣು ಮಿಟುಕಿಸಿದ. ಅಪರೂಪದ ಅತಿಥಿಗಳಿಗಾಗಿ ಮಾತ್ರ ಕಾಫಿ ಮಾಡುವುದುಂಟು ಎಂಬುದರಲ್ಲಿ ನಿಜವೇನೋ ಇತ್ತು.

‘ಓಹೋ, ಕಾಫಿಯಿದ್ದರೆ ಅದನ್ನು ಬೇಡವೆನ್ನುವ ಶ್ರೋತ್ರಿಯ ನಾನೇನೂ ಅಲ್ಲ.’

ಸಾಮಾನ್ಯವಾಗಿ ಪುಟ್ಟೇಗೌಡನಿಗೆ ಕಾಫಿಕೊಡುವಾಗ ತಾನೂ ಅದನ್ನು ಸವಿಯುತ್ತಿದ್ದ ಕೇಶವನಿಗೆ ಖುಷಿಯಾಯಿತು. ಗೌರಿ ಕಡೆ ನೋಡಿದ. ಕಾಫಿ, ಮಾಡುವುದು ಗೌರಿಯ ಕೆಲಸ.

ಕಾಫಿಯ ತಯ್ಯಾರಿ ಬೀಜವನ್ನು ಹುರಿಯುವುದರಿಂದ ಶುರುವಾಯಿತು; ಅದರ ಚಟಪಟ ಮುಗಿದು, ಅದರ ಹುರಿದ ವಾಸನೆ ಮನೆಯೆಲ್ಲ ಹರಡಿ, ಒಂದು ಪುಟ್ಟಗಾಣಕ್ಕೆ ಹುರಿದ ಬೀಜವನ್ನು ಹಾಕಿ ಕೈಯಿಂದ ಸರಸರ ತಿರುಗಿಸಿ ಪುಡಿಮಾಡುವಾಗ ಗೌರಿಯ ಬಳೆ ಸದ್ದೂ ಆಗಿ, ಅದೆಷ್ಟು ಹೊತ್ತೋ ಆದ ಮೇಲೆ, ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಈಗ ಮುಚ್ಚಿಟ್ಟಿರಬೇಕು. ಕಾಫಿ ಇಳಿದ ಮೇಲೆ ಅದಕ್ಕೆಂದೇ ಇರುವ ತೆಳುವಾದ ಬಟ್ಟೆಯಿಂದ ಅದನ್ನು ಸೋಸಿ, ಕಾಯಿಸಿದ ದಪ್ಪಹಾಲನ್ನು ಅದಕ್ಕೆ ಸುರಿದು, ಕಾಫಿಗೆಂದೇ ಕಾದಿಟ್ಟ ಸಕ್ಕರೆಯನ್ನು ಬೆರೆಸಿ ಇನ್ನೇನು ಗೌರಿ ಅದನ್ನು ತರಲಿದ್ದಾಳೆ… ಎಂದುಕೊಳ್ಳುತ್ತ ಕೇಶವ ಶಾಸ್ತ್ರಿಗಳನ್ನು ಮಾತಿನಲ್ಲಿ ತೊಡಗಿಸಿದ್ದ. ಕಾಫಿಯ ಪುಡಿಯ ವಾಸನೆ ಮತ್ತು ಅದರ ತಯ್ಯಾರಿಯ ಶಬ್ದಗಳನ್ನು ಕೇಳುತ್ತಲೇ ಅದರ ಸ್ವಾದವನ್ನು ಊಹಿಸುತ್ತ ಕೂತ ಶಾಸ್ತ್ರಿಗಳು ಕೇಶವನ ಮಾತಿಗೂ ತನ್ನ ಮನಸ್ಸು ಕೊಟ್ಟಿದ್ದರು.

ಮಾತಾಡುತ್ತಿದ್ದುದೂ ಊಟಕ್ಕೆ ಸಂಬಂಧಪಟ್ಟ ಗಂಭೀರವಾದ ವಿಷಯಗಳೆ: ಈಚೆಗೆ ತಮ್ಮ ಜಾತಿಯ ಬ್ರಾಹ್ಮಣರೆಲ್ಲರೂ ಹೋಟೆಲಿಟ್ಟು ಅನ್ನವಿಕ್ರಯ ಮಾಡುತ್ತಿರುವುದು ಧರ್ಮ ಸಮ್ಮತವೆ? ಬಂಗಾಳದ ಬ್ರಾಹ್ಮಣರಿಗೆ ಮೀನಿನ ನಿಷೇಧವಿಲ್ಲಂತೆ ನಿಜವೆ?

ಏನನ್ನಾದರೂ ತಿನ್ನಬಹುದಾದ ಅವಧೂತಪಥ, ಆಡಿನ ಹಾಲು ಕಡಲೇಬೀಜದ ವ್ರತದ ಗಾಂಧೀಜಿ, ನಾಯಿಯ ಮಾಂಸವನ್ನೂ ದುರ್ಭಿಕ್ಷೆಯಲ್ಲಿ ದೇವತೆಗಳಿಗೆ ಅರ್ಪಿಸಲು ತಯಾರಾಗಿದ್ದ ವಿಶ್ವಾಮಿತ್ರ-ಹೀಗೇ ಮಾತು ಹರಿದು ಹೇಗೋ ಧಾರವಾಡದ ಫೇಡ ನೆನಪಾಗಿ, ಶಾಸ್ತ್ರಿಗಳಿಗೆ ಸಂಗೀತಗಾರರೊಬ್ಬರು ನೆನಪಾಗಿ, ಕೇಶವನಿಗೆ ಕರೀಂಖಾನರು ತೀರ್ಥಹಳ್ಳಿಯಲ್ಲಿ ಬಂದು ಹಾಡಿದ್ದನ್ನು ಯಾರೋ ಸಂಗೀತಗಾರರು ವರ್ಣಿಸಿದ್ದು ನೆನಪಾಗಿ, ಕೇಶವನನ್ನು ಹಾಡುವಂತೆ ಶಾಸ್ತ್ರಿಗಳು ಪ್ರೇರೇಪಿಸುತ್ತಿದ್ದಂತೆ ಎರಡು ಕಂಚಿನ ಲೋಟಗಳಲ್ಲಿ, ಅದರ ಅಂಚಿನ ಮೇಲೆ ನೊರೆಗಳು ಗುಳ್ಳೆಯಾಗಿ ಒಡೆಯುವ ಬಿಸಿಬಿಸಿ ಕಾಫಿಯನ್ನು ಗೌರಿ ತಂದಿಟ್ಟಳು. ಶಾಸ್ತ್ರಿಗಳು ತಮ್ಮ ಹೆಗಲಿನ ಮೇಲಿನ ಪಾಣಿ ಪಂಚೆಯಿಂದ ಬಿಸಿ ಲೋಟವನ್ನು ಎತ್ತಿ, ಊದಿ, ಒಂದು ಗುಟುಕು ಕಾಫಿಯನ್ನು ಕಣ್ಣುಮುಚ್ಚಿ ಹೀರಿದರು. ಅವರು ಪಟ್ಟಂತೆ ತೋರಿದ ಹಿತದಿಂದ ಕೃತಾರ್ಥನಾಗಿ ತಾನೂ ಕಾಫಿಯನ್ನು ಹೀರುತ್ತ ಕೇಶವ ಸುಖಿಸಿದ.

ಶಾಸ್ತ್ರಿಗಳು ಆಡಿಬಿಟ್ಟಿದ್ದ ಮಾತಿಗೆ ಹಿಂದಿರುಗಿದರು:

‘ಅನ್ನ ವಿಕ್ರಯದ ಮಾತು ಆಡಿದಿರಿ ಅಲ್ಲವೆ? ಈ ಕಾಲದಲ್ಲಿ ಯಾರು ಶ್ರೋತ್ರಿಯ ರಾಗಲು ತಯ್ಯಾರಿದ್ದಾರೆ ಹೇಳಿ. ನನ್ನ ತಮ್ಮನ ಮಗನೊಬ್ಬ ಬೆಂಗಳೂರಿನಲ್ಲಿ ಹೋಟೆಲಿಟ್ಟು ಚೆನ್ನಾಗಿ ದುಡ್ಡು ಮಾಡಿದ್ದಾನೆ. ಇನ್ನೊಬ್ಬ ಊರಲ್ಲೇ ಬಟ್ಟೆಯಂಗಡಿ ತೆರೆದಿದ್ದಾನೆ; ಅದೂ ವೇದ ಪಾಠವಾದ ಮೇಲೆ. ಕಾಲಾಯ ತಸ್ಮೈನಮಃ ಅನ್ನೋದು ಅದಕ್ಕೇ.’

ಶಾಸ್ತ್ರಿಗಳ ಎದುರು ಗೌರಿ ಎಲೆಯಡಿಕೆ ತಟ್ಟೆಯಿಟ್ಟಳು. ದ್ವಾದಶಿಯ ಬೆಳಗಿನ ಝಾವ ಶಾಶ್ವತವಾದ ಅವಧಿಯದು ಎನ್ನುವಂತೆ ಶಾಸ್ತ್ರಿಗಳು ವೀಳ್ಯದ ಸೇವನೆಯನ್ನು ವಿಧಿವತ್ತಾಗಿ ಪ್ರಾರಂಭಿಸಿದರು. ಒಂದು  ಚಿಗುರಾದ ಎಲೆಯನ್ನು ಮೊದಲು ಎತ್ತಿ ನೋಡಿ ಆರಿಸಿದರು. ಅದರ ತೊಟ್ಟು ತೆಗೆದರು. ಅದರ ಕುಡಿಯನ್ನು ಚಿವುಟಿ ತೆಗೆದರು.  ಚಿವುಟಿದ ತುದಿಯನ್ನು ಹಣೆಗೆ ಒತ್ತಿ ತಂಗಿಸಿದರು. ಅಡಿಕೆಯಲ್ಲಿ ಹಸವೊಂದನ್ನು ಹುಡುಕಿ ಅದನ್ನು ಬಾಯಿಗೆ ಎಸೆದು ಇನ್ನೂ ಗಟ್ಟಿಯಿದ್ದ ಹಲ್ಲಿನಿಂದ ಅಗಿದರು. ಸುಳಿ ಎಲೆಯ ಮೇಲ್ಪದರವನ್ನೇ ಬಲು ಸೂಕ್ಷ್ಮವಾಗಿ ಸುಲಿದರು. ಬೆಣ್ಣೆಯಂತೆ ಮೃದುವಾಗಿದ್ದ ಸುಣ್ಣವನ್ನು ಅದಕ್ಕೆ ಹಚ್ಚಿದರು. ಎಲೆಯನ್ನು ಮುರಿಯದಂತೆ ಜೋಕೆಯಾಗಿ ಮಡಿಸಿ ಬೆರಳಿಗೆ ಸಿಕ್ಕಿಸಿ ಇನ್ನೊಂದು ಅದೇ ಗುಣದ ಎಲೆ ಹುಡುಕಿ ಪರೀಕ್ಷಿಸಿದರು. ಮೆಚ್ಚಿ ಅದೇ ವೀಳ್ಯೋಪಚಾರವನ್ನು ಶುರುಮಾಡಿದರು. ಕೇಶವನ ಮಾತಿಗೆ ಈ ನಡುವೆ ಹೂ ಹೂ ಎನ್ನುತ್ತಿದ್ದರು. ಕೇಶವನೂ ಪುಟ್ಟೇಗೌಡನ ಜೊತೆ ವೀಳ್ಯ ಸೇವಿಸುವವನಾದರೂ ಇನ್ನೂ ತಾನು ಮದುವೆಯಾಗಿ ಗೃಹಸ್ಥ ಧರ್ಮವನ್ನು ಯಥಾವತ್ತಾಗಿ ಸ್ವೀಕರಿಸದಿರುವುದರಿಂದ ಶಾಸ್ತ್ರಿಗಳ ಎದುರು ಸುಮ್ಮನೇ ಕೂತು ಮಾತಾಡುತ್ತಿದ್ದ.

ಶಾಸ್ತ್ರಿಗಳು ಪ್ರಸನ್ನರಾಗಿರುವುದನ್ನು ಗಮನಿಸಿದ ಅಕ್ಕು ಒಳಗೆ ಹೋದಳು. ಗೌರಿ ಬಚ್ಚಲೊಲೆಯಲ್ಲಿ ಮೈ ಕಾಯಿಸಿಕೊಳ್ಳುತ್ತ ಏನೋ ಓದುತ್ತಿರಬೇಕು. ಪ್ರಶಸ್ತವಾದ ಸಮಯ. ಟ್ರಂಕಿನಿಂದ ಗೌರಿಯ ಜಾತಕ ತೆಗೆದು ಶಾಸ್ತ್ರಿಗಳ ಎದುರು ಅದನ್ನು ಇಟ್ಟು ದಾಕ್ಷಿಣ್ಯಪಡುತ್ತ ಹೇಳಿದಳು.

‘ನಮ್ಮ ಹುಡುಗಿಯ ಜಾತಕ ತಾವು ನೋಡಿ ಹೇಳಬೇಕು. ಅವಳಿಗೆ ಅನುರೂಪನಾದ ವರ ನಿಮಗೆ ಗೊತ್ತಿದ್ದರೆ ಕನ್ಯಾಸೆರೆಯಿಂದ ನಾವು ಬಿಡುಗಡೆ ಪಡೆಯುವಂತೆ ತಾವು ಉಪಕಾರ ಮಾಡಬೇಕು’

ವರ ಹೋಟೆಲಿಟ್ಟವ ಆಗಿರಬಾರದು; ಗೌರಿಗೆ ಹೋಟೆಲಿಟ್ಟವರನ್ನು ಮದುವೆಯಾಗುವುದು ಇಷ್ಟವಿಲ್ಲ; ಆದರೆ ವರ ವಿದ್ಯಾವಂತನಾಗಿರಬೇಕು; ತೀರಾ ಮಡಿಗಿಡಿ ಮಾಡುವ ಕುಟುಂಬವಾದರೆ ಈ ನಮ್ಮ ಮಗು ಒಪ್ಪಳು. ಇತ್ಯಾದಿ ಅಕ್ಕು ಹೇಳಲಿಲ್ಲ. ವರ ಇದ್ದಾನೆ ಎಂದು ಆದ ಮೇಲೆ ಮಾತಾಡಿದರಾಯಿತು ಎಂದು ಶಾಸ್ತ್ರಿಗಳ ಎದುರು ಕೂತು ಕಾದಳು.

ಕೇಶವ ಕಂಬಕ್ಕೊರಗಿ ನಿಂತು ಸದ್ಯ ಗೌರಿ ಅಲ್ಲಿಲ್ಲವೆಂದು ಸಮಾಧಾನ ಪಟ್ಟ. ಶಾಸ್ತ್ರಿಗಳು ಜಾತಕ ಪರೀಕ್ಷಿಸಿ, ಕಣ್ಣು ಮುಚ್ಚಿ ಕೈ ಬೆರಳುಗಳಲ್ಲಿ ಎಣಿಸುತ್ತ, ಬಾಯಲ್ಲಿ ತಮಗೇ ಏನೋ ಅಂದುಕೊಳ್ಳುತ್ತ ಕೆಲಹೊತ್ತು ಕಳೆದರು. ಸೊಂಟದಿಂದ ನಸ್ಯದ ಡಬ್ಬಿ ತೆಗೆದು ಒಂದು ಪುಟ್ಟ ಚಿಟಿಕೆಯನ್ನು ಸಶಬ್ದವಾಗಿ ಎರಡು ಮೂಗಿಗೂ ಸೇವಿಸಿ ನಿಧಾನವಾಗಿ ಗಂಭೀರವಾಗಿ ಶುರುಮಾಡಿದರು.

‘ಸುಲಭವಾದ ಜಾತಕವಲ್ಲ; ಜಾತಕವೇಕೆ? ಮುಖದಿಂದಲೇ ತಿಳಿಯುತ್ತೆ – ಮಂಗಳ ಗೌರಿ ಇವಳಲ್ಲಿ ನೆಲೆಸಿದ್ದಾಳೆ. ಮೂರು ಲೋಕಗಳ ವಿದ್ಯಮಾನಗಳನ್ನೂ ಅರಿಯಬಲ್ಲ ಯೋಗ ಪ್ರಾಪ್ತಿಯಾಗಿರುವಂತೆ ತೋರುತ್ತದೆ. ಕಾಲವಾದ ಇವಳ ತಂಗಿಯೇ ವಿದ್ಯಾರೂಪಿಣಿಯಾದ ಶಕ್ತಿಯಾಗಿ ಇವಳಲ್ಲಿ ನೆಲೆಸಿದ್ದಾಳೆ. ಸಾಕ್ಷಾತ್ ಶಿವನೇ ಮನುಷ್ಯರೂಪಿಯಾಗಿ ಹುಟ್ಟಿಬಂದರೆ ಇವಳಿಗೆ ಅನುಕೂಲವಾಗುವ ಜಾತಕ ಪಡೆದಿರುತ್ತಾನೆ. ಪುರುಷ ಗಂಧರ್ವನೊಬ್ಬ ಇವಳಲ್ಲಿ ಅನುರಕ್ತನಾಗಲಿದ್ದಾನೆ; ದನಗಾಹಿಯಾದ ವನದೇವತೆಯೊಂದು ಇವಳಲ್ಲಿ ಮೋಹಿತವಾಗಲಿದೆ. ಇಂಥ ಶಕ್ತಿಗಳ ಸಾನ್ನಿಧ್ಯದಲ್ಲಿ ಇವಳು ಪೂರ್ಣ ಸ್ತ್ರೀಯಾಗಿ ಲೋಕಕ್ಕೆ ಮಂಗಳ ಉಂಟು ಮಾಡಲಿದ್ದಾಳೆ. ಗ್ರಹಗಳ ಗತಿ ಈಗಿರುವಂತೆ ನೋಡಿದರೆ ಇವಳ ವಿಕಾಸಕ್ಕನುಗುಣವಾಗಿ ಗ್ರಹಗಳೇ ತಮ್ಮ ಗತಿಯಲ್ಲಿ ಬದಲಾಗಬಹುದು. ನಿತ್ಯ ಸತ್ತು ಹುಟ್ಟುವ ನಿತ್ಯರಿದ್ದಾರೆ ಎಂದು ಯೋಗಿಗಳು ಒಬ್ಬರು ನನಗೆ ಹೇಳಿದ್ದರು. ಇವಳು ಅಂತಹ ನಿತ್ಯೆ… ಲಜ್ಜಾರೂಪಿಯಾಗಿ ದೇವಿ ಇವಳಲ್ಲಿ ನೆಲೆಸಿರುತ್ತಾಳಾದ್ದರಿಂದ ಇವಳು ಮಾತಾಡಿ ಏನನ್ನೂ ಬಹಿರಂಗಪಡಿಸಳು; ತನ್ನ ಶಕ್ತಿಯನ್ನು ತಾನೇ ಅರಿತವಳಂತೆ ವರ್ತಿಸಳು….

‘ಪುರಾಣದ ಕೆಲವು ಸ್ತ್ರೀರತ್ನಗಳು ಹೇಗೆ ಕೆಲವು ದೈವಿಕ ಶಕ್ತಿಗಳ ಜೊತೆ ಸಂಘರ್ಷಿಸಿ ಲೋಕಕಲ್ಯಾಣಕ್ಕೆ ಕಾರಣರಾದರು – ನಿಮಗೆ ಗೊತ್ತಿದೆ. ಅಹಲ್ಯಾ, ದ್ರೌಪದೀ, ತಾರಾ, ಸೀತಾ, ಮಂಡೋದರೀ – ಈ ಪಂಚಕನ್ಯಾರನ್ನು ನಾವು ನಿತ್ಯ ಸ್ತುತಿ ಮಾಡುತ್ತೇವಲ್ಲವೆ? ದ್ರೌಪದಿಯೊಬ್ಬಳನ್ನು ಬಿಟ್ಟರೆ ಉಳಿದವರು ಸುಮ್ಮನೇ ಇದ್ದಂತೆ ತೋರಿದವರು; ನೊಂದವರು, ಬೆಂದವರು, ಅಹಲ್ಯೆಯಂತೆ ಆಸೆಪಟ್ಟವರು… ಸೃಷ್ಟಿಯ ಲೀಲೆಯನ್ನು ತಮ್ಮ ಮುಖೇನ ವ್ಯಕ್ತಗೊಳಿಸಿದವರು… ಹೀಗೇ ನೋಡಹೋದರೆ ದೇವಿಯರೂ ಶಾಪವಿಮುಕ್ತಿಗಾಗಿ ನರ ಮನುಷ್ಯರನ್ನು ಕೂಡಬೇಕಾಗಿ ಬಂದ ಕಥೆಗಳಿವೆ… ಗಂಗೆಯ ಕಥೆ ಗೊತ್ತಿರಬೇಕು…

‘ನನ್ನ ಮಾತಿನಿಂದ ತಾಯಿ ತೃಪ್ತರಾಗಿಲ್ಲವೆಂದು ನನಗೆ ಗೊತ್ತು. ಮಗಳಿಗೆ ಮದುವೆಯಾಗುತ್ತದೆಯೇ, ಯಾವಾಗ ಎಂಬುದು ತಾಯಿಯ ಪ್ರಶ್ನೆ. ಆಗುತ್ತಾಳೆ ಎಂಬುದು ಉತ್ತರ, ಯಾವಾಗ ಎಂದರೆ ಸದ್ಯ ನನಗದು ತೋರದು. ಅವ್ಯಕ್ತದ ಅಪಾರತೆಯಲ್ಲಿ ಇವಳೊಬ್ಬ ಯಾತ್ರಿಕಳು. ಈ ಯಾತ್ರೆ ಫಲಕಾರಿಯಾಗಬೇಕೆಂಬುದು ದೈವ್ಯೆಚ್ಛೆಯಾಗಿರುವಂತೆ ನನಗೆ ತೋರುತ್ತಿದೆ… ದೈವೇಚ್ಛೆಯೇ ಹಾಗಿರುವಾಗ ನಾವು ಆತಂಕಪಟ್ಟು ಪ್ರಯೋಜನವಿಲ್ಲ. ಈ ಮನೆಯಲ್ಲಿ ಪ್ರತಿನಿತ್ಯ ಎಷ್ಟು ಪುಣ್ಯ ಸಂಚಯವಾಗುತ್ತಿದೆ ಪರಮ ಭಾಗವತರಂತಿರುವ ನಿಮ್ಮ ತಮ್ಮಯ್ಯನಿಂದ, ಮತ್ತು ಪಂಚೇಂದ್ರಿಯಗಳೂ ತಾಯಿಯ ಕರುಳೇ ಆಗಿಬಿಟ್ಟಂತಿರುವ ನಿಮ್ಮಿಂದ ಎಂದರೆ, ಈ ನಿಮ್ಮ ದಿನನಿತ್ಯದ ಪುಣ್ಯ ಸಂಚಯವೇ ನಿಮ್ಮ ಮಗಳ ಒಳಗಿರುವ ದೇವಿಯ ಆಹಾರವಾಗಿದೆ. ನೀವೂ ಇದನ್ನು ನಿಮ್ಮ ಪುಣ್ಯದ ಫಲವೆಂದು ತಿಳಿಯುವುದಿಲ್ಲ. ನಿಮ್ಮ ಮಗಳೂ ಹಾಗದನ್ನು ತಿಳಿಯುವ ಗೋಜಿಗೆ ಹೋಗುವವಳೇ ಅಲ್ಲ. ಆದರೂ ನಿಮ್ಮ ಮನಸ್ಸಿಗಿದನ್ನು ಗೋಚರಿಸುವಂತೆ ಮಾಡಿ ನಾನು ತಪ್ಪು ಮಾಡಿದೆ. ಆದರೆ ಪಿರಿಪಿರಿ ಮಾಡಿಕೊಳ್ಳುವ ನಿಮ್ಮ ಸ್ವಭಾವಗತವಾದ ಸಿಟ್ಟಿನಲ್ಲಿ ನೀವಿದನ್ನು ಮರೆಯುತ್ತೀರಿ; ಹುಡುಕಾಟಿಕೆಯ ಕುಶಾಲಿನಲ್ಲಿ ನಿಮ್ಮ ಮಗಳೂ, ಈ ತಮ್ಮಯ್ಯನೂ ಇದನ್ನು ಮರೆತಿರುತ್ತಾರೆ… ಪರವಾಗಿಲ್ಲ; ವಾಗ್ದೋಷದಿಂದ ನಾನು ಪಾರಾಗಿದ್ದೇನೆ…’

ಅಕ್ಕು ತೆಂಗಿನ ಕಾಯಿ ವೀಳ್ಯವನ್ನು ಹರಿವಾಣದಲ್ಲಿಟ್ಟು ತಂದಳು. ಈ ಹರಿವಾಣದಲ್ಲಿ ಹಳೆಯ ಕಾಲದ ಬೆಳ್ಳಿಯ ಒಂದು ರೂಪಾಯಿ ನಾಣ್ಯವನ್ನೂ ದಕ್ಷಿಣೆಯಾಗಿ ಇಟ್ಟಿದ್ದಳು. ಬಚ್ಚಲೊಲೆಯ ಎದಿರು ಕುಕ್ಕುರುಕಾಲಲ್ಲಿ ಕೂತು ಮೈಕಾಯಿಸಿಕೊಳ್ಳುತ್ತ ಓದುತ್ತಿದ್ದ ಗೌರಿಯನ್ನು ಸಿಟ್ಟಿನಲ್ಲಿ ಕರೆದಳು. ನಗುತ್ತ ಬಂದ ಗೌರಿಗೆ ಹರಿವಾಣ ಕೊಟ್ಟಳು. ಗೌರಿ ಹರಿವಾಣವನ್ನು ಶಾಸ್ತ್ರಿಗಳ ಎದುರಿಟ್ಟು ಕಾಲುಮುಟ್ಟಿ ನಮಸ್ಕಾರ ಮಾಡಿದಳು. ಸುಮಂಗಲಿಯಾಗಿ ಬೇಗ ತಾಯಿಯಾಗು ಎಂದು ಶಾಸ್ತ್ರಿಗಳು ಹರಸಿದರೆಂದು ಅಕ್ಕುಗೆ ಸಮಾಧಾನವಾಯಿತು.

ಶಾಸ್ತ್ರಿಗಳು ತಮ್ಮ ಜೋಳಿಗೆಯಲ್ಲಿ ಫಲತಾಂಬೂಲವನ್ನು ತುಂಬಿಕೊಂಡು ಎದ್ದುನಿಂತರು. ಕೊಂಚ ದೂರದಲ್ಲಿದ್ದ ಬಾಗಿಲನ್ನು ದಾಟಲೆಂದು ಪೂರ್ವಭಾವಿಯಾಗಿ ದೊಡ್ಡ ಜುಟ್ಟಿನ ತಮ್ಮ ತಲೆತಗ್ಗಿಸಿ, ಜೋತುಬಿದ್ದ ಭಾರವಾದ ರುದ್ರಾಕ್ಷಿಸರವನ್ನು ಎದೆಗವಚಿ, ಇನ್ನೇನು ನಡೆಯಲು ತಯಾರಾಗಿದ್ದಂತೆ ಕಂಡ ಆರಡಿ ಎತ್ತರದ ಮಹಾರಾಯರು ಏನೋ ನೆನಪಾದವರಂತೆ ನಿಂತು. ಸೊಂಟದಿಂದ ನಸ್ಯ ತೆಗೆದು ಸೇವಿಸಿದರು. ಕೂತು ‘ಸಾವಿತ್ರಿ’ ಎಂದರು.

ಅಕ್ಕು ಬೆಚ್ಚಿದಳು. ತನ್ನನ್ನು ಹೆಸರು ಹಿಡಿದು ಕರೆದವರೇ ಇಲ್ಲ. ಎಷ್ಟೋ ವರ್ಷಗಳ ಹಿಂದೆ ಲಂಗದಲ್ಲಿದ್ದವಳನ್ನು ಅಪ್ಪನೊ ಅಮ್ಮನೊ ಹೆಸರು ಹಿಡಿದು ಕರೆದದ್ದು ಇದೆ. ತನ್ನಷ್ಟಕ್ಕೆ  ತಾವೇ ಕವಡೆ ಆಡಿಕೊಳ್ಳುವುದರಲ್ಲಿ ನಿಸ್ಸೀಮೆ ಅವಳು ಆಗ. ನಾಲ್ಕು ಕವಡೆಗಳನ್ನು ಒಟ್ಟಾಗಿ ಮೇಲೆ ಹಾರಿಸಿ, ಅಷ್ಟನ್ನೂ ಕೆಳಗೆ ಬೀಳಗೊಡದಂತೆ ಮುಂಗೈ ಮೇಲೆ ಹಿಡಿದು, ಮತ್ತದನ್ನು ಮೇಲೆ ಹಾರಿಸಿ ಅಂಗೈಯಲ್ಲಿ ಹಿಡಿಯುವುದರಲ್ಲಿ ಬಲು ಖುಷಿ ಅವಳಿಗೆ. ‘ಸಾವಿತ್ರಿ’ ಎಂದು ಅಪ್ಪ ಕರೆದದ್ದಾದರೆ, ಅದು ಪ್ರೀತಿಯಲ್ಲಿ – ಎಲೆಯಡಿಕೆ ಹರಿವಾಣದಲ್ಲಿ ಎಂದು ಕೇಳಲು; ಅಮ್ಮ ಕರೆದದ್ದಾದರೆ, ಏನೋ ಕೆಲಸ ಹೇಳಲು ಅಥವಾ ತಲೆಯಾಕೆ ಬಾಚಿಕೊಂಡಿಲ್ಲ ಎಂದು ಗದರಿಸಲು. ಸುಮ್ಮನೇ ಏನೋ ಹೇಳಲು ‘ಸಾವಿತ್ರಿ’ ಎಂದು ಕರೆಸಿಕೊಂಡ ಜ್ಞಾಪಕವಿಲ್ಲ.

‘ಗೊತ್ತು, ನೀವು. ಈಗ ಎಲ್ಲರಿಗೂ ಅಕ್ಕಯ್ಯ ಮಾತ್ರ. ನಾನು ಯಾಕೆ ನಿಮ್ಮನ್ನು ಸಾವಿತ್ರಿ ಎಂದು ಕರೆದೆನೆಂದು ಕೇಳುವಿರೊ? ಹೇಳುತ್ತೇನೆ ಕೇಳಿ. ನಾನು ನಿಮಗಿಂತ ಹಿರಿಯ. ಹಿರಿತನದ ಭಾರವನ್ನೆಲ್ಲ ಹೊರಲು ನೀವೊಬ್ಬರೇ ಇರೋದು ಅಂತ ತಿಳಿದು ನೀವು ತುಂಬ ಬಳಲಿದಂತೆ ತೋರುತ್ತೆ ನನಗೆ. ನಿಮಗಿಂತ ಹಿರಿಯನೊಬ್ಬನಿದ್ದಾನೆಂದು ತಿಳಿದು ನಿಮ್ಮ ಭಾರ ಕೊಂಚ ಹಗುರಾಗಲಿ ಎಂದು ನಾನು ಹೀಗೆ ವಟವಟಿಸುತ್ತಿದ್ದೇನೆ….

ಇನ್ನೊಂದು ಮಾತು. ನೀವು ಹುಟ್ಟಿದ್ದು ಪ್ರಥಮನ ಏಕಾದಶಿ ದಿನವೆಂದು ನಾನು ಹೇಗೆ ಪತ್ತೆ ಮಾಡಿದೆ ನೀವು ಕೇಳಬಾರದು. ಹುಟ್ಟಿದ್ದೇ ತಾಯಿಯ ಹಾಲು ಕುಡಿದು ವ್ರತಭಂಗವಾಗಿದೆ ಎಂದು ನೀವು ಅಂದುಕೊಳ್ಳುವ ಪ್ರಾಣಿ. ಹಾಗೆಂದುಕೊಳ್ಳಬೇಕಾಗಿಲ್ಲ ಎಂದು ಶ್ರೋತ್ರಿಯನಾದ ನಾನು ನನ್ನ ಮಗಳಂತಿರುವ ನಿಮಗೆ ಹೇಳುತ್ತಿದ್ದೇನೆ. ಆಯಿತಾ? ಮುಂದೆ ಕೇಳಿ….

ದೇವಿಯ ಆರಾಧಕನಾದ ನನಗೆ ಮಗಳು ಹುಟ್ಟಲಿಲ್ಲ. ದೇವತಾಶಕ್ತಿಯ ಒಂದಂಶವಾದರೂ ಇಲ್ಲದ ಹೆಣ್ಣಿಲ್ಲವೆಂದೇ ನಾನು ನಂಬಿರೋದು. ನೀವು ನಿಮ್ಮ ಕರ್ಮಕ್ಕೆ ಎಷ್ಟು ಅಂಟಿಕೊಂಡಿದ್ದೀರಿ ಎಂದರೆ, ಛೆ ಪಾಪ, ನಿಮಗೆ ಯಾವ ಕರ್ಮವೂ ಅಂಟಿಕೊಳ್ಳಲಾರದು.

ಏನೋ ಹೇಳಹೋಗಿ ಏನೋ ಹೇಳುತ್ತಿದ್ದೇನೆ. ನೀವು ತಿನ್ನಿಸಿದ ದೋಸೆ ಸ್ವಲ್ಪ ಹೆಚ್ಚಾಗಿ ಒಳಗಿರುವ ಪರಮಾತ್ಮ ಕುಗುರುತ್ತಿದ್ದಾನೆಂದು ತೋರುತ್ತದೆ. ನಗಬೇಡಿ…

ನೀವು ಹುಟ್ಟಿದ್ದ ಪ್ರಥಮನ ಏಕಾದಶಿಯ ಒಂದು ಬುಧವಾರ. ಪುಷ್ಯಾ ನಕ್ಷತ್ರದಲ್ಲಿ, ನಿಮಗೆ ಪುತ್ರ ಸಂತಾನದ ಯೋಗವಿದೆಯೆಂದು ಜ್ಯೋತಿಷ್ಯ ಹೇಳುತ್ತದೆ. ಆದರೆ ಹೇಗೆ ಎಂದು ಕೇಳಬೇಡಿ. ಜ್ಯೋತಿಷ್ಯ ಸುಳ್ಳಾಗುವುದಿಲ್ಲ ಎಂದರೆ ಗಾಬರಿಯಾಗಬೇಡಿ. ಸ್ವಂತದ ಹೊಟ್ಟೆಯಿಂದ ಹುಟ್ಟಿದ್ದು ಮಾತ್ರ ನಿಜ ಶಿಶುವಲ್ಲ; ನಿಮ್ಮಲ್ಲಿ ಮಾತೃಭಾವ ಹುಟ್ಟಿಸುವುದೆಲ್ಲವೂ ನಿಮ್ಮ ಭಾವಲೋಕದ ಶಿಶುಗಳೆ. ನೀವು ಸಾಕಿದ ಎರಡು ಮಕ್ಕಳೂ ನಿಮ್ಮ ಮಕ್ಕಳೇ ಆದರು. ಈ ಪರಮ ಭಾಗವತನಾದ ನಿಮ್ಮ ತಮ್ಮಂದಿರೂ ನಿಮ್ಮ ಶಿಶುವೇ ಆಗಿಬಿಟ್ಟರು.

ಪರಮ ಅನುರಾಗವೇನು, ವೈರಾಗ್ಯವೇನು – ಎರಡೂ ಒಂದೆ ನಿಮಗೆ, ಖಂಡಿತ ನಿಮ್ಮಂತಹ ಹೆಣ್ಣಿಗೆ…’

ಕೃಷ್ಣಶಾಸ್ತ್ರಿಗಳ ಕಣ್ಣುಗಳು ಹೊಳೆಯುತ್ತಿದ್ದವು. ಕತ್ತಿನಲ್ಲಿದ್ದ ರುದ್ರಾಕ್ಷಿ ಸರವನ್ನು ಹಿಡಿದು ಅವರು ಶಿವ ಶಿವ ಎಂದರು. ಅಕ್ಕು ಅವರ ಕಾಲು ಮುಟ್ಟಿ ನಮಸ್ಕರಿಸಿದಳು. ಇನ್ನೊಮ್ಮೆ ತಾನು ಹುಟ್ಟಿಬರದಂತೆ ಹಿರಿಯರ ಆಶೀರ್ವಾದವಾಗಲಿ ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಅವಳ ಆಸೆಯನ್ನು ತಿಳಿದವರಂತೆ ಶಾಸ್ತ್ರಿಗಳು ನಸುನಕ್ಕರು.

ಇನ್ನೊಂದು ಮಾತು ಹುಟ್ಟುವುದು ಸಾಧ್ಯವಿಲ್ಲ ಎನ್ನುವ ಮೌನದಲ್ಲಿ ಶಾಸ್ತ್ರಿಗಳು ಎದ್ದುನಿಂತರು. ತಲೆಬಾಗಿದರು. ಶಾಲು ಹೊದ್ದರು. ಪಾಣಿಪಂಚೆಯನ್ನು ಪೇಟವಾಗಿ ತಲೆಗೆ ಸುತ್ತಿಕೊಂಡು, ಇನ್ನಷ್ಟು ಬಾಗಿ ಹೊಸಲು ದಾಟಿದರು. ಉಣಗೋಲು ತೆಗೆದರು. ಹೊರಗೆ ನಿಂತಿದ್ದ ಪರಮ ಸಾಧು ಕೌಲಿಯನ್ನು ಸವರಿದರು. ಯಾವತ್ತೂ ಯಾರನ್ನೂ ಹಾಯದ, ಕೇವಲ ಅಲಂಕರವಾಗಿದ್ದ ತನ್ನ ಕೋಡುಗಳನ್ನು ಬಾಗಿಸಿ, ಅವರ ತೊಡೆಗಳಿಗೆ ತನ್ನ ಕತ್ತನ್ನು ಉಜ್ಜುತ್ತ ರೋಮಾಂಚನಗೊಂಡ ಹಸುವಿನ ಸ್ಪರ್ಶದಿಂದ ಸುಖಪಡುತ್ತಿರುವಂತೆ ಕಂಡರು. ನೋಡುತ್ತ ನಿಂತ ಕೇಶವನನ್ನು ಕಂಡು ನಸುನಕ್ಕರು. ಮತ್ತೆ ತನ್ನನ್ನು ಅಷ್ಟುದೂರ ಕಳಿಸಲು ಪಾಣಿಪಂಚೆಯನ್ನು ತಲೆಗೆ ಸುತ್ತಿ ತನ್ನ ಹಿಂದೆ ಹೊರಟು ನಿಂತ ಅವನನ್ನು ಕೈಸನ್ನೆಯಲ್ಲಿ ತಡೆದರು. ಪೂರ್ವಾಭಿಮುಖವಾಗಿ ಎಡಹೆಗಲಿಗೆ ಜೋಳಿಗೆ ನೇತು ಹಾಕಿ ಅವರ ವಯಸ್ಸನ್ನು ಊಹಿಸಲಾರದಂತೆ ಸರಸರ ನಡೆದು ಬಿಟ್ಟರು.

ನಾರದರನ್ನು ಕೇಶವ ನೆನೆದ. ಏನಾದರೂ ಮಾತಾಡದೆ ವಿಧಿಯಿಲ್ಲವೆನ್ನಿಸಿ ಬಾಯಿಗೆ ಬಂದದ್ದನ್ನು ಅಕ್ಕುಗೆ ಹೇಳಿದ :

‘ನಾರದರು ಪ್ರತ್ಯಕ್ಷರಾದರೆಂದರೆ ಒಂದೋ ಕಲಹ, ಅಥವಾ ಕಲ್ಯಾಣ, ಕಲ್ಯಾಣಕ್ಕೆ ಪ್ರಚೋದಿಸಿ ಕಲಹ; ಕಲಹ ಪ್ರಚೋದಿಸಿ ಕಲ್ಯಾಣ’.

ತಮ್ಮಯ್ಯನ ಮಾತನ್ನು ಕೇಳಿ ಅಕ್ಕು ಹುಸಿಮುನಿಸನ್ನು ನಟಿಸಿ ನಕ್ಕಳು. ಗೌರಿ ಅವಳ ಹೊಟ್ಟೆಯ ಮೇಲೆ ಕಿವಿಯಿಟ್ಟು ‘ಭಾವ ಶಿಶು ಒದೀತ ಇದೆ’ ಎಂದಳು.

‘ಛಿ, ಇದೆಂಥ ತಮಾಷೆ’ ಎಂದು ಅಕ್ಕು ತನ್ನ ಕೆಂಪು ಸೀರೆಯ  ಸೆರಗನ್ನು ಬೋಳು ತಲೆಯ ಮೇಲೆ ಎಳೆದುಕೊಂಡು ಗೌರಿಯನ್ನು ನೂಕಿದಳು. ಕೋಪಗೊಂಡಂತೆ ಕಾಣಲು ಪ್ರಯತ್ನಿಸಿದರೂ ಗೌರಿಯನ್ನು ಅಪರೂಪದವಳು ಎನ್ನುವಂತೆ ಕೊಂಚ ಬೆರಗಿನಲ್ಲಿ ಅಕ್ಕು ಕಂಡಳೆಂದು ಕೇಶವನಿಗೆ ತೋರಿತು.

೧೫

ಮಳೆಗಾಲ ಶುರುವಾದ್ದೆ ಗುಡ್ಡ ಹತ್ತುವುದಿರಲಿ, ಮನೆಯಿಂದ ಹೊರಹೋಗುವುದೇ ಒಂದು ಸಾಹಸದಂತೆ ಆಗಿಬಿಟ್ಟಿತು. ಕಾಲಿಟ್ಟಲ್ಲಿ ಕೆಸರು; ಕೊಟ್ಟಿಗೆಗೆ ಹೋಗಿ ಹಾಲು ಕರೆದು ಬರಲೂ ಕಂಬಳಿಯಕೊಪ್ಪೆ ಹಾಕಿಕೊಳ್ಳಬೇಕು. ಇಲ್ಲವಾದರೆ ಧಾರಾಕಾರವಾಗಿ ಸುರಿಯುವ ಮಳೆಯ ತಣ್ಣೀರಿನ ಸ್ನಾನ. ಕಾಲುಬೆರಳು ಸಂದಿಯಿಂದ ಪಿಚಕ್ಕೆನ್ನುವ ಕೆಸರು. ಇಡೀ ಆಕಾಶ ನಕ್ಕಂತೆ ಹೊಳವಾಗುವುದುಂಟು; ಆದರೆ ಯಾವ ಹೊತ್ತಲ್ಲಿ ಹೇಳುವಂತಿಲ್ಲ. ನಕ್ಕ ಆಕಾಶ ಇದ್ದಕ್ಕಿದ್ದಂತೆ ಕಪ್ಪಾಗಿ, ಮಿಂಚು ಈ ಕಪ್ಪನ್ನು ಸೀಳಿ, ಕಾಡು ಪ್ರಾಣಿಯೊಂದು ಆಕಾಶದಲ್ಲಿ ಅಲೆಯುವಂತೆ ಗುಡುಗು ಓಡಾಡಿ, ಥಟ್ಟನೇ ಹೀಗೆ ಓಡಾಡಿದ್ದೇ ಕ್ರೂರ ಸಿಡಿಲಾಗಿ ದೂರದ ಬೆಟ್ಟವನ್ನು ಢಿಕ್ಕಿಸಿ ಬಡಿದು, ಏನೂ ತೋರದೆ ಕೂತವರನ್ನು ದಂಗುಬಡಿಸುತ್ತದೆ.

ಕೇಶವ ಜಪಿಸುತ್ತಲೋ ಓದುತ್ತಲೋ ಕೂತು ಕಾಲ ತಳ್ಳುತ್ತಾನೆ. ಅವನ ಮಾತುಗಾರಿಕೆ ಮಳೆಗಾಲದಲ್ಲಿ ಬಂದಾಗಿ ಬಿಡುತ್ತದೆ. ಎಲ್ಲೆಂದರೆ ಅಲ್ಲಿ ಮಾಡಿನ ಹುಲ್ಲಿನಿಂದ ನೀರಿಳಿಯುವುದು ಶುರುವಾದ್ದೆ ಅಕ್ಕುವೂ ಗೌರಿಯೂ ಸೂರಿನಿಂದ ನೀರಿಳಿಯುವಲ್ಲಿ ಮಡಕೆಗಳನ್ನು ಇಟ್ಟು ಸೋರುವ ನೀರನ್ನು ಶೇಖರಿಸಲು ಓಡಾಡುವುದೇ ದಿನದ ಕೆಲಸವಾಗಿ ಬಿಡುತ್ತದೆ.

ಸಾಹುಕಾರರನ್ನು ಕೇಳಿ ಸಾಲ ಪಡೆದು ಮುಂದಿನ ವರ್ಷ ಹೆಂಚು ಹೊದೆಸುವುದೆಂದು ಕೇಶವ ನಿರ್ಧರಿಸಿದ. ಈವರೆಗೆ ಅವನು ಸಾಲ ಮಾಡಿದ್ದಿಲ್ಲ. ಆದರೆ ರಾತ್ರಿ ಮಲಗಿದವರು ಎದ್ದು ಮಲಗಿದ ಹಾಸುಗೆಯನ್ನು ಅವಸರದಲ್ಲಿ ಮಡಿಸಿ, ಚಿಮಣಿ ದೀಪ ಹಚ್ಚಿ ಮಡಕೆಯನ್ನು ಸೋರುವಲ್ಲಿಟ್ಟು, ಸೋರದ ಜಾಗ ಹುಡುಕಿ ಮಲಗಿ ಇನ್ನೇನು ನಿದ್ದೆ ಹೋಗಬೇಕು ಎನ್ನುವಷ್ಟರಲ್ಲಿ ಆ ಜಾಗವೂ ಸೋರುವುದು ಶುರುವಾಗಿ, ಇಡೀ ರಾತ್ರೆ ಒಬ್ಬರಲ್ಲೊಬ್ಬರು ಎದ್ದುಕೂತೇ ಕಾಯುತ್ತಿದ್ದು ಉಳಿದವರು ನಿದ್ದೆ ಹೋಗುವುದು. ಬೆಳಗಾದ ಮೇಲೆ ಹಾಸಿಗೆಯಲ್ಲಿ ನಿದ್ದೆ ಹೋದ ಪುಣ್ಯಾತ್ಮರಿಗೆ ಇದು ಗೊತ್ತಾಗಿ ಯಾಕೆ ಏಳಿಸಲಿಲ್ಲೆಂದು ಬೈಸಿಕೊಳ್ಳುವುದು; ಹೆಚ್ಚಾಗಿ ಹೀಗೆ ಬೈಸಿಕೊಳ್ಳುವುದು ಅಕ್ಕುವಿನಿಂದ ಕೇಶವ.

ದುಡ್ಡು ಉಳಿಸಲೆಂದು ಇಡೀ ಸೂರಿಗೆ ಹೊಸಹುಲ್ಲು ಹೊದಿಸದೆ ಅಲ್ಲಿ ಇಲ್ಲಿ ಮಾತ್ರ ಕೇಶವ ಸೂರನ್ನು ಮಳೆಗಾಲಕ್ಕೆ ರಿಪೇರಿ ಮಾಡಿಸಿದ್ದೇ ಈ ಗೋಳಿಗೆ ಕಾರಣ. ಸೂರಿನ ರಿಪೇರಿಗೆ ಹಣಕೊಡುವುದು ಅಕ್ಕುವಾದ್ದರಿಂದ, ಅವಳಿಗೆ ಗತಿಸಿದ ಗಂಡನ ತೋಟದಿಂದ ಸಾಕಷ್ಟು ಅಡಿಕೆ ಗೇಣಿಯಾಗಿ ಬರುತ್ತಿದ್ದುದರಿಂದ ಅವಳಿಂದ ಕೇಶವ ಚೆನ್ನಾಗಿ ಬೈಸಿಕೊಂಡು ಈ ಮಳೆಗಾಲ ಹೆಂಚು ಹೊದೆಸುವ ನಿರ್ಧಾರಕ್ಕೆ ಬಂದಿದ್ದ.

ಅಕ್ಕು ಹತ್ತಿರ ಇದಕ್ಕೆ ಅಗತ್ಯವಾದಷ್ಟು ರೊಕ್ಕವಿಲ್ಲದಿದ್ದರೂ ಬಂಗಾರವಿತ್ತು. ಪ್ರತಿವರ್ಷ ಗೇಣಿಯಲ್ಲಿ ಬಂದದ್ದನ್ನು ಉಳಿಸೀ ಉಳಿಸೀ ಎರಡು ಹೆಣ್ಣು ಮಕ್ಕಳ ಮದುವೆಗೆ ಬೇಕಾದಷ್ಟು ಒಡವೆ ಮಾಡಿಸಿ ಅವಳು ಇಟ್ಟಿದ್ದಳು. ಗಂಗೆ ಸತ್ತುಹೋದ ಮೇಲೆ ಅವಳಿಗಾಗಿ ಮಾಡಿಸಿಟ್ಟಿದ್ದ ಹಾಗೇ ಇತ್ತು. ಗೌರಿಗೆ ಅದನ್ನೂ ಕೊಡುವುದು ಎಂದುಕೊಂಡಿದ್ದಳು. ಆದರೆ ಅದರಲ್ಲಿ ಸ್ವಲ್ಪವನ್ನು ಮನೆಗೆ ಸೂರಿಗೆ ಹೆಂಚು ಹಾಕಲು ಬಳಸಿದರೆ ತಪ್ಪೇನೂ ಇಲ್ಲ. ನಾಳೆ ಗೌರಿ ಹಡೆಯಲು ಈ ಮನೆಗೇ ಬರಬೇಕಲ್ಲವೇ? ಅವಳು ಸೇರುವ ಮನೆ ಅನುಕೂಲಸ್ಥರದಾಗಿದ್ದರೆ ಸೋರುವ ಶೀತದ ಮನೆಗೆ ಬಾಣಂತನಕ್ಕೆ ಯಾರು ಮಕ್ಕಳನ್ನು ಕಳುಹಿಸಿ ಯಾರು? ‘ಏ ತಮ್ಮಯ್ಯ ಯಾರಿಗೂ ನೀನು ಕೈಯೊಡ್ಡೋದು ಬೇಡ, ಮುಂದಿನ ವರ್ಷ ಹೆಂಚು ನನ್ನ ಖರ್ಚಲ್ಲೇ’ ಎಂದು ಅಧಿಕಾರದ ವಾಣಿಯಲ್ಲಿ ಕೇಶವನ ಬಾಯಿ ಮುಚ್ಚಿಸುವಂತೆ ಅವಳು ಗದರಿಸಿದ್ದಳು.

ಪಕ್ಕದ ಹಳ್ಳಿಯ ಸೊನೆಗಾರ ವೆಂಕಾಚಾರಿಯನ್ನು ಕರೆಸಿ ಒಂದಿಷ್ಟು ಬಂಗಾರ ಮುರಿಸಿ ಮಾರುವ ವಿಚಾರವನ್ನೂ ಅವನಿಗೆ ಹೇಳಿದ್ದಳು. ವೆಂಕಾಚಾರಿಯಲ್ಲಿ ಅವಳಿಗೆ ನಂಬಿಕೆ; ಅಕ್ಕಸಾಲಿ ಸ್ವಂತ ಅಕ್ಕನ ಬಂಗಾರದಲ್ಲೇ ಒಂದು ಚೂರನ್ನಾದರೂ ಕದ್ದೇ ಕದೀಬೇಕು. ಅದು ವೃತ್ತಿ ಧರ್ಮ ಎಂದು ಅಕ್ಕುವೇ ಹೇಳುವುದುಂಟಾದರೂ ವೆಂಕಾಚಾರಿಯಲ್ಲಿ ಅವಳಿಗೆ ನಂಬಿಕೆ. ಅವಳ ಮದುವೆಗೆ ಒಡವೆ ಮಾಡಿಕೊಟ್ಟವ ಅವನು. ಕೇಶವನ ಉಪನಯನದಲ್ಲಿ ಉಡುಗೊರೆಯಾಗಿ ಒಂದು ಬೆಳ್ಳಿಯ ಬಟ್ಟಲನ್ನೂ ಹರಿವಾಣವನ್ನೂ ಅವನು ಕೊಟ್ಟಿದ್ದ. ಅವಳ ತಂದೆ ಅವನ ಮನೆ ಪುರೋಹಿತರು. ಅವನ ಅಪಪ್ನ ಕಾಲದಿಂದ ಈ ಮನೆಯನ್ನು ಕೇಳದೆ ಅವನ ಮನೆಯಲ್ಲಿ ಯಾವ ಪುಣ್ಯ ಕಾರ್ಯವೂ ನಡೆದಿದ್ದಿಲ್ಲ. ಯಾಕೆ? ಒಂದು ಹೆಣ್ಣನ್ನು ತಂದಿಲ್ಲ; ಕೊಟ್ಟಿಲ್ಲ.

ಬಣ್ಣದ ಸೌತೆ ಹುಳಿ, ದಿಂಡುಮಾವಿನ ಗೊಜ್ಜು, ಹಲಸಿನ ಹಪ್ಪಳ, ಹಲಸಿನ ಪಲ್ಯ, ಆ ಕುಡಿ ಈ ಕುಡಿಗಳ ತಂಬಳಿಗಳ ಊಟದಲ್ಲೂ, ಬೆಂಕಿ ಸುಲಭವಾಗಿ ಹೊತ್ತಿಕೊಳ್ಳದೆ ಊದಿ ಊದಿ ಹೊಗೆ ತಿಂದು ಸೆರಗಿನಿಂದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ಕೆಮ್ಮುತ್ತ ಇಡೀ ಹಗಲನ್ನು ಕಳೆಯುವ ಪಾಡಿನಲ್ಲೂ ಮಳೆಗಾಲ ಎಂದು ಮುಗಿಯುವುದೋ ಎಂದು ಕಾದದ್ದಾಯಿತು. ಸಾಹುಕಾರರ ಮನೆಗೆ ನಿತ್ಯ ಭೂವರಾಹ ಪೂಜೆಗೆ ಹೋಗಿಬರುವುದೆಂದರೆ ಇಂಬಳಗಳಿಂದ ಆದಷ್ಟು ಕಡಿಮೆ ಕಚ್ಚಿಸಿಕೊಳ್ಳುವಂತೆ ನಿತ್ಯ ನಡೆದಾಡುವ ದಿವ್ಯ ಕೇಶವನ ಪಾಲಿಗೆ.

ನಿಮಿತ್ಯ ಕೇಳಲು ಯಾರಾದರೂ ಬಂದರೆ, ಕಾರಣ, ಒಂದೋ ದನ ಕೊಟ್ಟಿಗೆ ಸೇರದೆ ಎರಡು ದಿನಗಳಾದವು ಅಥವಾ ಮಗುವಿನ ವಾಂತಿಭೇದಿಗೆ ಒಂದಷ್ಟು ಮದ್ದನ್ನೂ, ಮಂತ್ರಿಸಿದ ತಾಯಿತವನ್ನೂ ಭಟ್ಟರು ಕೊಟ್ಟಾರು ಎಂದು. ಇಂಥ ನಿಮಿತ್ಯಗಳಿಗೆ, ಅದೂ ಮಳೆಗಾಲದಲ್ಲಿ ದಕ್ಷಿಣೆಯಿಲ್ಲ; ಒಂದು ಬಾಳೆ ಗೊನೆಯೊ, ಒಂದು ಕುಂಬಳಕಾಯಿಯೊ, ಒಂದಷ್ಟು ಬಣ್ಣದ ಸೌತೆಯೊ, ಅಥವಾ ಒಂದು ಬುಟ್ಟಿ ತುಂಬಿ ತೊಂಡೆಯೊ – ಅಷ್ಟೇ. ರೊಕ್ಕ ಕೊಟ್ಟು ನಿಮಿತ್ಯ ಕೇಳಲು ಮಳೆಗಾಲ ಮುಗಿಯಬೇಕು; ಅಡಿಕೆ ಮಾರಿರಬೇಕು.

ಹೀಗೆ ಯಥೇಚ್ಛ ಬಂದ ತರಕಾರಿಯನ್ನು ಹಾಗೇ ಆಳುಕಾಳುಗಳಿಗೆ ಕೊಟ್ಟು ಮುಗಿಸಬೇಕು. ಮನೆಯಲ್ಲಿ ಹೋಗಿಬರುವವರು ಮಳೆಗಾಲದಲ್ಲಿ ಕಡಿಮೆ. ಇರುವ ಮೂರು ಜನ ಎಷ್ಟು ತಿಂದು ಮುಗಿಸಿಯಾರು?