೧೬

ಗೌರಿ ಇಡೀ ಮಳೆಗಾಲ ಅಕ್ಕುವಿಗೆ ಕೆಲಸದಲ್ಲಿ ನೆರವಾಗಿ, ಬಿಡುವಾದಾಗ ಏನಾದರೂ ಓದುತ್ತ ಚಿಟ್ಟೆಯ ಮೂಲೆಯಲ್ಲಿ ಕೂತಿರುತ್ತಾಳೆ. ಅಪರೂಪದ ಬಿಸಿಲಿನಲ್ಲಿ ಜಾರಿ ಹೊರಗೆ ಸೂರಿನಿಂದ ತೊಟ್ಟಿಕ್ಕುವ ನೀರು ಜ್ವಲಿಸುವ ಮಣಿಗಳಾಗಿ ಕೆಳಗೆ ಬೀಳುವುದನ್ನು ನೋಡುತ್ತಲೊ, ಎಲ್ಲರ ಕಣ್ಣು ತಪ್ಪಿಸಬೇಕೆಂದರೆ ಬಚ್ಚಲೊಲೆಯ ಎದುರೊ ಕೂತಿರುವ ಗೌರಿ ಈಚೆಗೆ ಅನ್ಯ ಮನಸ್ಕಳಾದಂತೆ ಕೇಶವನಿಗೆ ತೋರುತ್ತದೆ. ಅವಳು ಹೀಗೆ ಒಬ್ಬಳೇ ಇದ್ದಾಗ ಗಂಗೆಯ ಸಾನ್ನಿಧ್ಯ ಅವಳಿಗೆ ಇರುತ್ತದೆಂದು ಕೇಶವನ ನಂಬಿಕೆ. ಆದರೆ ಆ ಬಗ್ಗೆ ಹೇಳಲಾರ, ಕೇಳಲಾರ.

ಗಳಗನಾಥರ ಕಾದಂಬರಿಗಳನ್ನೆಲ್ಲ ಅವಳು ಓದಿ ಮುಗಿಸಿದ್ದಳು. ಗಳಗನಾಥರ ನಂತರ ಸಾಹುಕಾರರ ಮನೆಯಿಂದ ಕೇಶವ ಶರತ್‌ಚಂದ್ರರ ಕಾದಂಬರಿಗಳನ್ನೂ, ಬಂಕಿಂಚಂದ್ರರ ಕಾದಂಬಗಳನ್ನೂ ಓದಲು ತಂದುಕೊಟ್ಟಿದ್ದ. ಅಳಸಿಂಗಾಚಾರ್ಯರ ಮಹಾಭಾರತ ಮತ್ತು ಭಾಗವತದ ಅನುವಾದಗಳು ಹೇಗೂ ಮನೆಯಲ್ಲೇ ಇದ್ದವು. ಕೇಶವನಿಗೂ ಗೊತ್ತಾಗದಂತೆ ಅವಳ ಅಪ್ಪನ ಹಿತ್ತಾಳೆ ಟ್ರಂಕಿನಲ್ಲಿದ್ದ ಗೋಪಾಲಕೃಷ್ಣರಾಯರ ‘ಕಲಿಯುಗ’ ಪತ್ರಿಕೆಗಳನ್ನೆಲ್ಲ ಅವಳು ಗಂಗೆ ಸಾಯುವ ಮುನ್ನವೇ ತಿರುವಿಹಾಕಿಯಾಗಿತ್ತು…

ಅಕ್ಕು ಮುಟ್ಟಾಗುವುದರ ಬಗ್ಗೆ ಹೇಳಬೇಕಾದ್ದನ್ನು ತನ್ನ ಕರ್ತವ್ಯವೆಂದು ಹೇಳಿದ್ದಳು. ಆದರೆ ಗೌರಿಗೆ ಅದೆಲ್ಲವೂ ಓದಿನಿಂದಲೇ ತಿಳಿದಿತ್ತು. ಮುಟ್ಟಿನ ಮುಚ್ಚುಮರೆ, ಆ ಬಗ್ಗೆ ಅಕ್ಕುವಿನ ಸಂಕಟ, ಇಬ್ಬರು ಹೆಂಗಸರೂ ಒಟ್ಟಾಗಿ ಮುಟ್ಟಾಗಿಬಿಟ್ಟರೆ  ಅಡಿಗೆಯನ್ನು ಕೇಶವನೇ ಮಾಡಬೇಕಾದ ಪಾಡು, ಅದನ್ನು ತಿನ್ನಬೇಕಾದ ಪಾಡು – ಬೇಯುವ ಮುಂಚೆ ಅನ್ನ ಬಸಿದು ಅದು ತೀರಾ ಕಾಳಾಗಿ, ಅಥವಾ ತೀರಾ ಬೇಯಿಸಿ ಮುದ್ದೆಯಾಗಿ ಅದನ್ನು ತಿನ್ನಲಾರದೆ, ಬಡಿಸಲಾರದೆ ಪೆಚ್ಚಾದ ಕೇಶವ ಇನ್ನೂ ಯಾಕೆ ಮದುವೆಯಾಗಿಲ್ಲವೆಂದು ಅಕ್ಕುವಿನಿಂದ ಬೈಗಳ ತಿನ್ನುವುದು – ಇವೆಲ್ಲವೂ ಗೋಳೆನ್ನಿಸಿದರೂ ಹೊರಗಾದ ಮೂರು ದಿನ ಬೇಕಾದಷ್ಟು ಕೂತು ಓದಬಹುದೆಂದು ಗೌರಿಗೆ ಖುಷಿ.

ತಾನು ತುಂಬ ಮೆಚ್ಚುವ ಕಾದಂಬರಿಯ ನಾಯಿಕೆಯರು ಯಾಕೆ ಮುಟ್ಟಾಗುವುದೇ ಇಲ್ಲವೆಂದು ಅವಳು ತನಗೆ ತಾನೇ ನಗೆಯಾಡಿಕೊಂಡದ್ದು ಇದೆ. ಗಂಗೆ ಬದುಕಿದ್ದರೆ ಅವಳಿಗೆ ಅದನ್ನು ಹೇಳಿ ನಗಾಡಬಹುದಿತ್ತು.

ಓದುವುದಷ್ಟೇ ಅಲ್ಲ; ಓದಿದದ್ದನ್ನು ಗೌರಿ ಕೇಶವನ ಹತ್ತಿರ ಚರ್ಚಿಸುತ್ತಿದ್ದಳು. ‘ಕಾನೂರು ಹೆಗ್ಗಡತಿ’ ಯನ್ನು ಓದಿದ್ದೇ ಗೌರಿಗೆ ಎದ್ದ ಸಮಸ್ಯೆ ಎಂದರೆ ಎಲ್ಲ ಬ್ರಾಹ್ಮಣರೂ ಅಷ್ಟು ದುಷ್ಟವಾಗಿ ಶೂದ್ರರನ್ನು ನಡೆಸಿಕೊಳ್ಳುತ್ತಾರೆಯೇ ಎಂದು. ತನ್ನ ಮಾವ ಕೇಶವ ಎಷ್ಟು ಸಾಧುಮನುಷ್ಯನೆಂದು ಅವಳಿಗೆ ಗೊತ್ತಿದ್ದರಿಂದ, ತುಂಬ ದರ್ಪದ ಮನುಷ್ಯನೆಂದು ಹೆಸರಾದ ತನ್ನ ತಂದೆ ಹೇಗಿದ್ದರೋ ಎಂದು ಅವಳಿಗೆ ಅನುಮಾನವಾಗಿ, ಅಕ್ಕುವನ್ನೂ ಕೇಶವನನ್ನೂ ತನ್ನ ತಂದೆಯ ಬಗ್ಗೆ ಕೇಳುತ್ತಾಳೆ. ಅವರಿಗೆ ಒಬ್ಬ ಶೂದ್ರ ಹೆಂಗಸಿನ ಜೊತೆ ಸಂಬಂಧವೂ ಇತ್ತೆಂದು ಕಳೇಇದ್ದರಿಂದ ಜಾತಿಭೇದಗಳು ಅವಳಿಗೊಂದು ಸಮಸ್ಯೆಯೇ. ‘ಕಾನೂರು ಹೆಗ್ಗಡತಿ’ಯ ದಟ್ಟವಾದ ಶೂದ್ರ ಪ್ರಪಂಚದಲ್ಲೇ ಊರಿನ ಹಲವರು ಬದುಕುತ್ತಿದ್ದೂ ಅದು ಗೊತ್ತಾಗದಂತೆ ಇರುವುದು ಬ್ರಾಹ್ಮಣರಿಗೆ ಸಾಧ್ಯವೆಂಬುದು ಅವಳಿಗೆ ಸೋಜಿಗ.

ತಮ್ಮ ಮನೆಯ ಹಿತ್ತಲಲ್ಲೇ ಮಡಿಹೆಂಗಸಾದರೂ ಹೆಂಗಸಾದ್ದರಿಂದಲೇ ಅಕ್ಕುಗೆ ಮಾತ್ರ  ಆ ಪ್ರಪಂಚ ಗೊತ್ತಿರುವಂತೆ ಕಾಣುತ್ತದೆ. ತಮ್ಮ ಪ್ರಪಂಚದಿಂದಲೇ ಹುಟ್ಟಿನಿಂದ ‘ಫಣಿಯಮ್ಮ’ ನನ್ನು ಅವಳು ಓದಿ ಅಕ್ಕು ಕಾಲಕ್ಕಾಗಲೇ ಆಗಿರುವ ಬದಲಾವಣೆಗಳ ಬಗ್ಗೆ ಅವಳು ಕೇಶವನ ಜೊತೆ ಮಾತಾಡಿದ್ದಾಳೆ.

‘ಕಾನೂರು ಹೆಗ್ಗಡತಿ’ ಓದಿದನಂತರ ತಮ್ಮ ಮನೆಗೆ ಕಾಗದ ಪತ್ರಗಳನ್ನು ಬರೆಸಲೋ ಓದಿಸಲೋ ಬರುವ ಮಂಡಿ ಮೇಲಿನ ಪಂಚೆಯ ಸಣ್ಣಗೌಡರು, ಕಮಾನು ಗಾಡಿ ಕಟ್ಟಿಸಿಕೊಂಡು ಜರೀಪೇಟದಲ್ಲಿ ಮುಹೂರ್ತ ಕೇಳಲು ಬರುವ ದೊದ್ದ ಗೌಡರು, ಕಾದಂಬರಿಯಲ್ಲಿ ವರ್ಣಿಸಿದ ಥರವೇ ಸೀರೆ ಉಡುವ ಚೆಲುವಾದ ಮೋರೆಯ ಹೆಗ್ಗಡತಿಯರು, ಅವರ ಸೊಂಟದ ಪಟ್ಟಿ, ಬುಗುಡಿ, ಮೂಗುಬಟ್ಟು, ಕೈ ಕಡಗಗಳು; ಇಷ್ಟಿಷ್ಟು ದಪ್ಪದ ಅವರ ಕಾಲು ಬಳೆಗಳು, ಅವರ ಪರಮ ವಯ್ಯಾರದ ರಾಗದ ಮಾತುಗಳು, ಮಾತಿನ ಜೊತಗೇ ಅವರ ಕೈಬಳೆಗಳ ಸಡಗರದ ಸದ್ದು – ಇವೆಲ್ಲವೂ ಗೌರಿಗೆ ಕಾದಂಬರಿಯನ್ನು ಮತ್ತೆ ಓದಿದ ಅನುಭವದಂತೆ. ತಾನು ಖುದ್ದು ಕಂಡವರನ್ನು ಕಾದಂಬರಿಯ ಪಾತ್ರಗಳ ಜೊತೆ, ಯಾರಿಗೂ ತಿಳಿಯದಂತೆ ಗುರುತಿಸಿಕೊಂಡು ಕಲ್ಪಿಸಿಕೊಳ್ಳಬಲ್ಲ ಕಳ್ಳತನ ಅವಳಿಗೆ ತುಂಬ ಪ್ರಿಯವಾದ್ದು.

ಈ ಶೂದ್ರ ಪ್ರಪಂಚದಲ್ಲಿ ತನ್ನನ್ನೂ ಒಬ್ಬ ಸೀತೆಯೆಂಬಂತೆ, ವಾಸುವೆಂಬಂತೆ ತಿಳಿಯಬಹುದೆಂಬುದು ಅವಳ ಒಳಗಿನ ಗುಟ್ಟಾಯಿತು.

ತಾವು ಹುಲ್ಲು ಗುಡಿಸಲಿನಲ್ಲಿ ಬದುಕುವ ಬಡವರಾದರೂ ಮನೆಗೆ ಬಂದು ಪಾನಕವನ್ನಾದರೂ ಕುಡಿದು ಹೋಗುವ ತಮಗಿಂತ ಶ್ರೀಮಂತರಾದ ಗೌಡರು ತಾವು ಕುಡಿದ ಲೋಟವನ್ನು ತೊಳೆದಿಟ್ಟು ಹೋಗುತ್ತಾರೆಂಬುದು ಕಾದಂಬರಿಯಲ್ಲಿ ಅವರನ್ನು ಕಂಡ ಗೌರಿಗೆ ಮುಜುಗರವಾಗುತ್ತದೆ. ಅವರು ತಮ್ಮಲ್ಲೇ ಈ ಬಗ್ಗೆ ಏನು ಮಾತಾಡಿಕೊಳ್ಳಬಹುದು ಎಂಬುದನ್ನು ಊಹಿಸುತ್ತಾಳೆ. ಇನ್ನೂ ಹುಡುಗಾಟಿಕೆಯ ತನ್ನನ್ನು ‘ಚಿಕ್ಕಮ್ಮೋರೆ’ ಎಂದು ಅವರು ಮರ್ಯಾದೆಗೆ ಕರೆಯುತ್ತಾರೆಂಬುದು ತಮಾಷೆಯಾಗಿ ಕಾಣುತ್ತದೆ.

‘ಕಾನೂರು ಹೆಗ್ಗಡತಿ’ಯನ್ನು ಓದಿಯಾದ ಎರಡು ಮೂರು ದಿನ ಗೌರಿಗೆ ಎಲ್ಲೆಲ್ಲೂ ಹೆಂಡದ ಹುಳಿವಾಸನೆಯೇ, ಧಾರಾಕಾರವಾಗಿ ಸುರಿಯುವ ಮಳೆಯೇ, ದಟ್ಟವಾದ ಕಾಡೇ, ಕಾಡಿನ ತುಂಬ ಕದ್ದು ಹೊಂಚುವ ಬೇಟೆಗಾರರೇ?

ಮಡಿಮೈಲಿಗೆಯ ತನ್ನ ಬ್ರಾಹ್ಮಣಲೋಕ ಕಾಣದ್ದನ್ನು ಹೀಗೆ ತನ್ನ ಜೀವ ಒಳಗೊಂಡು ಅಪಾರವಾದ ವಿಸ್ತಾರಪಡೆದಂತೆ ಅನ್ನಿಸಿತ್ತು.

‘ಕಾನೂರು ಹೆಗ್ಗಡತಿ’ಯ ಗೌಡರಂತಹ ಗೌಡರು, ಹೆಗ್ಗಡತಿಯರಂತಹ ಹೆಗ್ಗಡತಿಯರು ಮಾತ್ರ ಅವರ ಮನೆಗೆ ಬರುತ್ತಿದ್ದುದಲ್ಲ. ತನ್ನ ಹಾಗೇ ಸೀರೆ ಉಡುವ, ಆದರೆ ಸಡಿಲವಾದ ಜಡೆ ಹಾಕಿ, ಓರೆಬೈತಲೆ ಬಾಚಿದ ಹುಡುಗಿಯರೂ, ಪ್ಯಾಂಟ್ ಹಾಕಿದ ಹುಡುಗರೂ ತಮ್ಮ ಹಿರಿಯರ ಜೊತೆ ಮುಹೂರ್ತ ಕೇಳಲು ಬರುವುದುಂಟು. ಇವರು ಇಂಗ್ಲಿಷ್ ಕಲಿತವರು. ಮೈಸೂರಿನಲ್ಲೊ ಶಿವಮೊಗ್ಗದಲ್ಲೊ ಓದಿದವರು. ನೆಲದ ಮೇಲೆ ಚಾಪೆ ಹಾಕದರೂ ಕೂರಲು ಇವರಲ್ಲಿ ಕೆಲವರಿಗೆ ಸಂಕೋಚ ಪ್ರಾಯಶಃ, ಕಾಲು ಮಡಚಿ ಕೂತು ಇವರಿಗೆ ಅಭ್ಯಾಸವಿಲ್ಲ. ಒತ್ತಾಯ ಮಾಡಿದರೆ ಕುಕ್ಕುರುಕಾಲಲ್ಲಿ ಕೂರುತ್ತಾರೆ. ಅಥವಾ ಗೋಡೆಗೊರಗಿ ನಿಲ್ಲುತ್ತಾರೆ. ಕಾಲು ಮಡಚಿ ಕೂರದವರ ಜೊತೆ ಕೇಶವ ಪಟ್ಟಾಂಗ ಹೊಡೆಯಲಾರ. ಅಕ್ಕುಗೆ ಅವರನ್ನು ಉಪಚರಿಸುವುದು ಹೇಗೆಂದು ತಿಳಿಯದು. ಅಂಥವರು ಚಿಕ್ಕವರಾದರೂ ಏಕವಚನದಲ್ಲಿ ಮಾತಾಡಿಸಲು ಮುಜುಗರ; ಬಹುವಚನದಲ್ಲಿ ಮಾತಾಡಿಸುವುದು ಚಿಕ್ಕವರಿಗೆ ಶ್ರೇಯಸ್ಸಲ್ಲವೆಂದು ಅಕ್ಕುಗೆ ನಂಬಿಕೆ. ಹೀಗಾಗಿ ನೇರವಾದ ಮಾತೇ ತೋಚದಾಗಿ ‘ಯಾವ ದೂರಿದಿಂದ ಇತ್ತ ಬಂದವರೊ, ಯಾವ ಊರವರೋ, ಇಲ್ಲಿ ಏನು ಕೆಲಸವೋ’ ? ಇತ್ಯಾದಿ ಮಾತುಗಳಲ್ಲೇ ಅವರನ್ನು ಎಷ್ಟು ಹೊತ್ತು ಮಾತಾಡಿಸಲು ಸಾಧ್ಯ?

ಬೆಲ್ಲ ಹಾಕಿದ ಪಾನಕವನ್ನು ಇವರು ಕುಡಿಯರು. ‘ನೀವೇನೂ ಲೋಟ ತೊಳೆದಂತೆ ಬೇಕಿಲ್ಲ; ಗೌರಿ ತೊಳೆದಿಡುತ್ತಾಳೆ’ ಎಂದು ಬಾಯಿಬಿಟ್ಟು ಹೇಗೆ ಹೇಳುವುದು? ಆದರೆ ಇವರು ಹೋಗುವಾಗ ಗೌರಿಗೂ ನಮಸ್ಕಾರ ಹೇಳಿ ಹೋಗುತ್ತಾರೆ.

ಅವರು ಹೋದಮೇಲೆ ಕಾಲ ಈಗ ಬದಲಾಗುತ್ತಿದೆ ಎಂದು ಕೇಶವ ಹೇಳುತ್ತಾನೆ. ಅವರ ಹಾಗೇ ಇಂಗ್ಲೀಷ್ ಕಲಿತ ಸಾಹುಕಾರರ ಮಗಳ ಉದಾಹರಣೆ ಕೊಟ್ಟು ನಮ್ಮ ಗೌರಿಯನ್ನೂ ಇಂಗ್ಲಿಷ್ ಕಲಿಯಲು ಕಳಿಸಬಹುದಿತ್ತು ಎನ್ನುತ್ತಾನೆ. ‘ನಮ್ಮ ಕೈಗೆ ಈ ಹುಡುಗಿ ಈಗ್ಲೇ ಸಿಗ್ತ ಇಲ್ಲ. ಇಂಗ್ಲಿಷ್ ಕಲಿತು ಬಿಟ್ಟಿದ್ದರೆ ಟಿಸ್ ಪುಸ್ ಅಂತ ಯಾರನ್ನೊ ಕಟ್ಟಿಕೊಂಡು ಇರ್ತಿತ್ತು ಈ ಹುಡುಗಿ’ ಎಂದು ಅರ್ಧ ಮೆಚ್ಚುಗೆಯಲ್ಲಿ ಅರ್ಧ ಅನುಮಾನದಲ್ಲಿ ಅಕ್ಕು ಅಂದು ಗೌರಿ ಹಿಡಿದ ಪುಸ್ತಕವನ್ನು ಸಂಶಯದಲ್ಲಿ ನೋಡುತ್ತಾಳೆ. ಕೇಶವ ಅಕ್ಕುವನ್ನು ರೇಗಿಸಲು ಹೇಳುತ್ತಾನೆ.

‘ಗಂಡನಜೊತೆ ವೇದಾಂತದ ಚರ್ಚೆ ಮಾಡೋ ಹೆಂಗಸರು ಉಪನಿಷತ್ತುಗಳಲ್ಲಿ ಬರ‍್ತಾರೆ ಅಕ್ಕು’

‘ಆ ಕಾಲಕ್ಕೆ ಅದು ಸರಿಯಾದರೆ ಈ ಕಾಲಕ್ಕೂ ಸರಿಯ? ನನ್ನ ತಲೇನ ಯಾಕೆ ಹಾಗಾದರೆ ಬೋಳಿಸಿ ಕೂರಿಸಿದಿರಿ’

‘ಬೋಳಿಸಿದ್ದು ನಮ್ಮ ತಪ್ಪು, ಯಾವ ಶಾಸ್ತ್ರದಲ್ಲೂ ತಲೆ ಬೋಳಿಸಬೇಕೂಂತ ಇಲ್ಲ’

‘ಹಾಗಾದರೆ ಕೂದಲನ್ನ ಬೆಳೆಸಿಕೊಂಡು ಬಿಡ್ತೀನೋ ತಮ್ಮಯ್ಯ’

‘ಯಾರು ಬೇಡಾಂದರೆ ಅಕ್ಕಯ್ಯ’

‘ಆಗ ನಿನ್ನ ಹೊಟ್ಟೆಪಾಡು? ಯಾರು ಇಲ್ಲಿಗೆ ನಿಮಿತ್ಯ ಕೇಳಲಿಕ್ಕೆ ಬರ‍್ತಾರೊ ತಮ್ಮಯ್ಯ’

ಯಕ್ಷಗಾನದ ವೇಷಹಾಕಿ ತಮ್ಮಯ್ಯ ಮಾತಾಡಿದಾನೆ ಎನ್ನಿಸಿ ಅದನ್ನು ಮರೆಸಲು ಅಕ್ಕು ಇದೊಂದು ದೊಡ್ಡ ಹಾಸ್ಯವೆಂಬಂತೆ ನಕ್ಕು ಮರೆಸಲು ಯತ್ನಿಸುತ್ತಾಳೆ. ಗೌರಿ ಗಂಭೀರವಾಗಿ ತಮ್ಮ ಮಾತನ್ನು ಆಲಿಸಿದ್ದನ್ನು ಕಂಡು ತುಸ ಬೆಚ್ಚುತ್ತಾಳೆ. ಬಚ್ಚಲೊಲೆಯಲ್ಲಿ ಸುಟ್ಟು ತಂದ ಹಲಸಿನ ಹಪ್ಪಳವನ್ನು ತಿನ್ನಲು ಗೌರಿ ಕೇಶವನಿಗೆ ಕೊಡುತ್ತಾಳೆ; ತಾನೂ ಒಂದು ತಿನ್ನುತ್ತ.

‘ಅಕ್ಕು ಈಗಲೂ ನೋಡಲಿಕ್ಕೆ ಎಷ್ಟು ಚೆನ್ನಾಗಿದಾಳೆ ಅಲ್ಲವೇನೊ ಮಾವಯ್ಯ’ ಎಂದು ನಗುತ್ತಾಳೆ. ಹುಡುಗಾಟಿಕೆ ಅತಿಗೆ ಹೋದೀತೆಂದು ಅಕ್ಕು ಸೀದ ಅಡುಗೆ ಮನೆಗೆ ಹೋಗಿ ಏನಾದರೂ ಮಾಡಬೇಕಾದ ಕೆಲಸವಿದೆಯೆ, ತನಗೆ ಮಾತ್ರವಲ್ಲ, ಗೌರಿಗೂ ಎಂದು ಹುಡುಕುತ್ತಾಳೆ.

೧೭

ಗೌರಿ ತಾನು ಓದುವ ಪುಸ್ತಕದಲ್ಲಿ ಮುಳುಗೇ ಹೋಗುವುದು ಬಚ್ಚಲಿನ ಉರಿಯುವ ಒಲೆಯ ಎದುರು ಕೂತು ಓದುವಾಗ, ಗಂಗೆಯ ತಲೆ ಕೂದಲಿನ ಸಿಕ್ಕು ಬಿಡಿಸುತ್ತ ಓದಿದ್ದನ್ನೆಲ್ಲ ಅವಳಿಗೆ ಹೇಳುವುದೂ ಅಲ್ಲೇ. ಇದನ್ನು ಕೇಶವ ಮಾವ ಊಹಿಸಿದ್ದಾನೆ. ಆದರೆ ಹೌದಾ ಎಂದು ಅವನು ಕೇಳುವುದು ಕೂಡ ಇಲ್ಲವೆಂದು ಗೌರಿ ತನ್ನ ಇನ್ನೊಂದು ಪ್ರಪಂಚವನ್ನು ಅನಾಯಾಸವಾಗಿ ಬಚ್ಚಲೊಲೆಯೆದುರು ಪಡೆಯುತ್ತಾಳೆ. ಬೂದಿ ಹೊಂಡದಲ್ಲಿ ಮಲಗಿ, ಆಗೀಗ ಕಣ್ಣು ತೆರೆದು ಬಾಲವಾಡಿಸುವ ನಾಯಿ ಜೊತೆಗೂ ಅದೀಗ ಮಾತುಂಟು. ಅವಳು ಓದುವ ಕಥೆಗಳ ನಾಯಿಗಳೆಲ್ಲ ಈ ಬೆಚ್ಚನೆಯ ಬೂದಿ ಹೊಂಡದಲ್ಲೇ ಮಲಗಿರುವುದು. ಅವಕ್ಕೇ ಗೌರಿ ಒಲೆಯಲ್ಲಿ ಸುಟ್ಟು ತಿನ್ನುವ ಹಪ್ಪಳದಲ್ಲಿ ಪಾಲುಂಟು; ಹಲಸಿನ ಬೀಜದಲ್ಲಿ ಪಾಲುಂಟು; ಅಕ್ಕುಗೆ ಗೊತ್ತಾಗದಂತೆ ಮುಸುರೆಯಾದರೂ ತಾನೂ ಮುಚ್ಚಿ ತಂದು ತಿನ್ನುವ ಅಕ್ಕಿರೊಟ್ಟಿಯಲ್ಲಿ ಪಾಲುಂಟು.

‘ಮರಳಿ ಮಣ್ಣಿಗೆ’ಯನ್ನು ಇಡಯಾಗಿ ಬಚ್ಚಲೊಲೆಯ ಎದುರೇ ಅವಳು ಓದಿರುವುದು; ಇಡೀ ಕಥೆಯಲ್ಲಿ ಅವಳು ಓದಿರುವುದು ಅಕ್ಕುವನ್ನೇ. ಮಾವಿನಮರ ಹತ್ತಿ, ಮಿಡಿಯನ್ನು ಕೊಯ್ದು, ಸೆರಗಿನಲ್ಲಿ ಕಟ್ಟಿ ತಂದು ಉಪ್ಪಿನಕಾಯಿ ಹಾಕುವ ಕಥೆಯವಳು ಅಡುಗೆ ಮನೆಯಲ್ಲು ನಿಜವಾಗಿ ಉಪ್ಪಿನಕಾಯಿಗೆ ಉಪ್ಪನ್ನು ಕುದಿಸುತ್ತ ಕೂತ ತನ್ನ ಅಕ್ಕುವಾಗಿ ಬಿಟ್ಟು, ಓದುತ್ತ ಕೂತ ತನ್ನನ್ನು ಕೆಲಸದಲ್ಲಿ ನೆರವಾಗುವಂತೆ ಗದರಿಸಿ ಕರೆಯುತ್ತಾಳೆ. ಕಾದಂಬರಿಯನ್ನು ಕೈಯಲ್ಲಿ ಹಿಡಿದೇ.

‘ಅದೇನೇ ಅಕ್ಕು ನಿನ್ನ ಗೋಳು ಒಳ್ಳೆ ಮಾಧ್ಯಹ್ನದ ಹೊತ್ತು’ ಎಂದು ಗೌರಿ ಅವಳಿಗೆ ನೆರವಾಗಲು ನಗುತ್ತ ಹೋಗುತ್ತಾಳೆ.

‘ಅದೇನು ದರಿದ್ರ ಓದೋ ಹುಚ್ಚೇ ನಿಂದು. ನೀನೆಲ್ಲ ನಿನ್ನ ಅಪ್ಪನ ಥರಾನೆ ಬಿಡು. ಪುಸ್ತಕಾನ್ನ ಮಡಿಸಿ ನಾಗಂದಿಗೆ ಮೇಲೆ ಇಟ್ಟು ಬಾ. ಮಿಡೀನ್ನ ಒಂದೊಂದಾಗಿ ಒಣಗಿದ ಪಾಣಿಪಂಚೇಲಿ ಒರೆಸಿ ಇಡು. ಗಾಯವಾದ ಮಿಡೀನ್ನ ಬೇರೆ ಕಡೆ ಇಡು. ಆ ಮೇಲೆ ಜಾಡೀನ್ನ ಶುಭ್ರವಾಗಿ ಒರೆಸಿಡು’

‘ಮಾವಯ್ಯನೋರೇ’ ಎಂದು ಗೌರಿ ಕೇಶವನನ್ನು ಕರೆಯುತ್ತಾಳೆ, ಅಕ್ಕುವನ್ನು ರೇಗಿಸಲು.

‘ಕೇಶವನ್ನ ಯಾಕೆ ಕರೀತೀಯೇ ಗಂಡುಬೀರಿ. ಅವನ ಕೆಲಸ ಅವನು ಮಾಡಲಿ; ನಿನ್ನ ಕೆಲಸ ನೀಡು ಮಾಡು’

‘ಅವನು ಮಾತಾಡ್ತ ಇದ್ದರೆ ಹೊತ್ತು ಹೋದ್ದೇ ಗೋತ್ತಾಗಲ್ಲ ಅಕ್ಕಮ್ಮಯ್ಯ’

‘ಈ ಸಾರಿ ಸಿಕ್ಕ ಮಿಡೀಲಿ ಒಳ್ಳೆ ಸೊನೆ ಇರೋ ಹಾಗೆ ಕಾಣಿಸತ್ತೆ. ಮುಂದಿನ ವರ್ಷ ಕೃಷ್ಣಶಾಸ್ತ್ರಿಗಳು ಬಂದಾಗ ಅವರಿಗೊಂದು ಜಾಡಿ ಕೊಟ್ಟು ಕಳಿಸ್ತೇನೆ’.

ಶಾಸ್ತ್ರಿಗಳು ಇದ್ದಕ್ಕಿದ್ದಂತೆ ಅಕ್ಕುಗೆ ನೆನಪಾದ್ದು ಗೌರಿಗೆ ಮೋಜೆನ್ನಿಸಿತು. ಅವರು ಬಂದು ಹೋದ ಮೇಲೆ ಅಕ್ಕುವಿನಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಗೌರಿಯೂ ಕೇಶವನೂ ಗಮನಿಸಿದ್ದಾರೆ. ಆ ಬಗ್ಗೆ ಮಾತೂ ಆಡಿಕೊಂಡಿದ್ದಾರೆ. ಗೌರಿ ಮದುವೆಯಾಗಿ ಒಂದು ಮಗುವನ್ನು ಬೇಗ ಹೆತ್ತು ತನ್ನನ್ನು ತಾಯಿ ಮಾಡುವ ದಿನಕ್ಕೆ ಅಕ್ಕು ಕಾದಿದ್ದಾಳೆ. ಕಾದಂಬರಿ ಪ್ರಪಂಚದಿಂದ ಕುದುರೆ ಸವಾರನಾದ ಗಂಧರ್ವನೊಬ್ಬ ಬಂದು ತನ್ನನ್ನು ಎತ್ತಿಕೊಂಡು ಹೋಗುವ ಕನಸನ್ನು ಗೌರಿ ಬಚ್ಚಲೊಲೆಯ ಎದಿರು ಗಂಗೆಗೆ ಹೇಳಿಕೊಂಡು ನಗುತ್ತ ನಾಯಿಗೆ ರೊಟಟಿ ಚೂರನ್ನು ಎಸೆದಿದ್ದಾಳೆ.

೧೮

ಈ ನಡುವೆ ಗೌರಿ ತುಂಬ ಗಂಭೀರವಾಗಿ ಬಿಟ್ಟದ್ದು, ‘ಚೋಮನ ದುಡಿ’ಓದುತ್ತ ಮನೆಯ ಚಿಟ್ಟೆಯ ಮೇಲೆ ಕೂತಿದ್ದಗ. ಅದಕ್ಕೆ ಕರಣ ನಿತ್ಯ ಬೆಳಿಗ್ಗೆ ತಮ್ಮ ಕೊಟ್ಟಿಗೆಯಲ್ಲಿ ಸಗಣಿ ಎತ್ತಲೂ, ದನವನ್ನು ಕಾಡಿನಲ್ಲಿ ಮೇಯಿಸಿಕೊಂಡು ಬರಲೂ ಇದ್ದ ಅವಳ ವಾರಿಗೆಯ ಒಬ್ಬ ಹುಡುಗ. ಅವನ ಹೆಸರು ಕರಿಯ – ಹೊಲೇರ ಕರಿಯ. ಯಾಕೆಂದರೆ ಆ ಹೆಸರಿನ ಬೇರೆ ಜಾರಿಯ ಜನರೂ ಇದ್ದರು. ಯಾಕೆ? ಇನ್ನೊಂದು ಹಳ್ಳಿಲ್ಲಿ ಕರಿಯಪ್ಪ ಗೌಡರೆಂಬ ಜಮೀನುದಾರರೂ ಇದ್ದರು. ಕಪ್ಪಣ್ಣಭಟ್ಟರೆಂಬ ಬಿಳಿ ಬ್ರಾಹ್ಮಣರೂ ಇದ್ದರು. ಜನಿವಾರವನ್ನು ತಕಲಿಯಲ್ಲಿ ತಎಗೆಯುತ್ತ ಕೂತ ಕೇಶವನನ್ನು ಕುಶಾಲಾಗಿ ಗೌರಿ ಕೇಳಿದರು:

‘ವೇದ ಪಾರಂಗತರಾದ ಕೇಶವಭಟ್ಟರೇ, ನಿಮ್ಮನ್ನೊಂದು ಪ್ರಶ್ನೆ ಕೇಳಬಹುದೊ?’

‘ನಿಮ್ಮ ಅರ್ಹತೆಗೆ ತಕ್ಕ ಉತ್ತರ ಸಿಕ್ಕೀತು. ಕೇಳಬಹುದು’

‘ಆರ್ಯಪುತ್ರ, ಹೇಳಿ, ಈ ಕರಿಯನನ್ನ ನಾವು ಯಾಕೆ ಮುಟ್ಟಬಾರದು?’

ಅಸ್ಪೃಶ್ಯತೆಯನ್ನು ಕುಶಾಲಿನಲ್ಲಿ ಕೇಲಬಹುದಾದ ಪ್ರಶ್ನೆಯಾಗಿ ಪರಿವರ್ತಿಸಿ ಗೌರಿ ಕೇಶವನನನು ತಬ್ಬಿಬ್ಬಾಗಿ ಮಾಡಿದ್ದಳು. ಇದಕ್ಕೆ ಸಾಂಪ್ರದಾಯಿಕವಾಗಿ ಕೊಡಬಹುದಾದ ಎಲ್ಲ ಸಮಜಾಯಿಷಿಯೂ ಹಾಸ್ಯಸ್ಪದವೆನ್ನುವಂತೆ ಮಾಡಿಬಿಟ್ಟಿದ್ದಳು. ಕೇಶವ ಏನೂ ಉತ್ತರಕೊಡದೆ ಗೌರಿಯ ಒಳತುಮುಲವನ್ನು ಊರಿಸಿದ. ಅವನೂ ‘ಚೋಮನದುಡಿ; ಓದಿದ್ದ; ಆದರೆ  ಯಾರನ್ನೋ ಮುಟ್ಟುವಂತಿಲ್ಲ ಎನ್ನವುದು ಹಾಸ್ಯಾಸ್ಪದವಾದ ವರ್ತನೆಯೆಂದು ಧಿಕ್ಕರಿಸುವಂತೆ. ತಾನು ಶ್ರಮಪಟ್ಟು ಗಳಿಸಿದ ಜ್ಞಾನವನ್ನೆಲ್ಲ ಯಃಕಶ್ಚಿತ್ತಾಗಿ ಕಾಣುವಂತೆ ಅವನು ಓದಿರಲಿಲ್ಲ.

ಅಸ್ಪೃಶ್ಯತೆಗೆ ವಿರೋಧವಾದ ವಿಚಾರಗಳೆಲ್ಲವೂ ಕೇಶವನಿಗೆ ಗೊತ್ತಿತ್ತು. ಗಾಂಧೀಜಿಯನ್ನು ಸಾಹುಕಾರ ಮಂಜಯ್ಯನ ಅಣತಿ ಪ್ರಕಾರ ಓದಿಕೊಂಡು ಮಹಾತ್ಮರ ಜೀವನವನ್ನು ಆಕರ್ಷಕವಾದ ಹರಿಕಥೆ ಮಾಡಿ ಸಾಹುಕಾರರ ಮನೆಯಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ಒಪ್ಪಿಸಿದ್ದ. ಪೂಜೆ ಮುಗಿಸಿ ಹೊರಟ ಕೇಶವನನ್ನು ಒಮ್ಮೆ ಮಂಜಯ್ಯ ನಿಲ್ಲಿಸಿ ಕೇಳಿದ್ದರು.

‘ನೀವು ವೇದಪಾರಂಗತರಲ್ಲವೇ? ಹೇಳಿ. ಅಸ್ಪೃಶ್ಯತೆಯನ್ನು ವೇದ ಎತ್ತಿ ಹಿಡಿಯುತ್ತದೆಯೇ?’

‘ಸ್ಮೃತಿಗಳಲ್ಲಿ ಸಮರ್ಥನೆ ಇದ್ದೀತು, ಶ್ರುತಿಯಲ್ಲಿ ಇಲ್ಲ. ಸ್ಮೃತಿ ಕಾಲಾನುಸಾರ ಬದಲಾಗುವಂಥದ್ದು. ಗಾಂಧೀಜಿ ನಮ್ಮ ಕಾಲದ ಸ್ಮೃತಿಕಾರರಿರಬಹುದು’ ಕೇಶವ ಯೋಚಿಸಿ ಗಂಭೀರವಾಗಿ ಹೇಳಿದ್ದ.

‘ಸರಿಯಾಗಿ ಹೇಳಿದಿರಿ; ಮಹಾತ್ಮರು ಹೇಳಿದ್ದೂ ಇದನ್ನೆ. ಗಂಡ ಸತ್ತ ಮೇಲೆ ಹೆಣ್ಣಿನ ತಲೆ ಬೋಳಿಸಬೇಕೆಂದು ಯಾವ ವೇದಲದಲ್ಲಿ ಹೇಳಿದೆ, ಹೇಳಿ ಶರ್ಮರೆ’

ಶಾಸ್ತ್ರ ವಿಚಾರಕ್ಕೆ ಬಂದ್ದೆ ಸಾಃಉಕಾರರು ತನ್ನನ್ನು ಶರ್ಮ ಎಂದೇ ಕರೆಯುವುದು. ಕೇಳುವ ಪ್ರಶ್ನೆಗೂ ಕೊಡುವ ಉತ್ತರಕ್ಕೂ ಅಧಿಕೃತತ್ವವಿರಲಿ ಎಂದೊ ಏನೊ.

‘ಅದೊಂದು ಆಚರಣೆಯಲ್ಲಿರುವ ಸಂಪ್ರದಾಯ ಅಷ್ಟೆ. ನಾನು ಪ್ರಶ್ನಿಸಲಾರೆ. ವಿಷ್ಣುವಿನ ಅಂಶ ಪಡೆದ ರಾಜರು ಮಾತ್ರ ಸಂಪ್ರದಾಯಗಳನ್ನು ಕಟ್ಟುವವರೂ ಹೌದು, ಕಳೆಯುವವರೂ ಹೌದು, ನಮ್ಮ ಗಾಂಧಿಯುಗದ ರಾಜರೆಂದರೆ ನಿಮ್ಮಂಥವರು. ವಿಷ್ಣುವಿನ ಅಂಶ ನಿಮ್ಮಲ್ಲೂ ಹನುಮಂತಯ್ಯನಂಥವರಲ್ಲೂ ಇದೆ. ನೀವು ಹೇಳಿದಂತೆ ಲೋಕ ನಡೆಯುತ್ತದೆ. ನಡೆಯುವ ಕೆಲಸ ಮಾತ್ರ ನಮ್ಮದು; ಪ್ರಶ್ನಿಸುವ ಕೆಲಸ ನಮ್ಮದಲ್ಲ’

ಹನುಮಂತಯ್ಯನಿಗೆ ವಿರೋಧವಾದ ಬಣದವರು ಈ ಮಂಜಯ್ಯನೆಂಬುದು ಕೇಶವನಿಗೆ ಗೊತ್ತಿಲ್ಲ. ಹನುಮಂತಯ್ಯ ಮೈಸೂರಿನ ಪೇಟ ತೊಡುತ್ತಾರೆ. ಕುಮಾರವ್ಯಾಸನನ್ನು ಕಡಿಮೆ ಬೆಲೆಗೆ ಜನರಿಗೆ ಸಿಗುವಂತೆ ಮಾಡಿದ್ದಾಎರ ಎಂಬ ಕಾರಣದಿಂದ ಮಂಜಯ್ಯನಿಗೆ ಖುಷಿಯಾದೀತೆಂದು ಅವರ ಹೆಸರನ್ನೂ ಕೇಶವ ಸೇರಿಸಿ ಮಾತಾಡಿದ್ದ. ಅನ್ನದಾತರನ್ನು ಸುಖಿಗಳಾಗಿ ಮಾಡುವುದು ವೈದಿಕವೃತ್ತಿಯ ತನ್ನ ಕರ್ತವ್ಯವೆಂದು ಅವನು ತಿಳಿದು ಬೆಳೆದಿದ್ದ.

ಈಗ ಮಾತ್ರ ಗೌರಿಯ ಪ್ರಶ್ನೆ ಎದುರಾದ್ದೇ ಸಾಹುಕಾರರ ಹತ್ತಿರ ಮಾತಾಡಿದ ಲೋಕಾಭಿರಾಮದ ಮಾತುಗಳು ನಿಷ್ಪ್ರಯೋಜಕವೆನ್ನಿಸಿತ್ತು. ಹೊಲೆಯರ ಕರಿಯ ಸಾಕ್ಷಾತ್ತಾಗಿ ಕರಿಕಲ್ಲಿನ ವಿಗ್ರಹದಂತೆ ಎದುರಿಗಿದ್ದ; ಅವನ ಮೇಲೆ ಗೌರಿಯ ಮೆಚ್ಚುಗೆಯಿಂದ ಹೊಳೆಯುವ ಕಣ್ಣುಗಳ ಬೆಳಕಿತ್ತು.

ತಕಲಿಯನ್ನು ಕೆಳಗಿಟ್ಟು ಕೇಶವ ಗಮನಿಸಿದ. ಗೌರಿ ‘ಚೋಮನ ದುಡಿ’ಯನ್ನು ಚಾಪೆಯ ಮೇಲಿಟ್ಟು, ಮೊಣಕಾಲಿನ ಮೇಲೆ ಗದ್ದವನ್ನಿಟ್ಟು, ಕೈಗಳನ್ನು ನೆಲಕ್ಕೂರಿ, ಕರಿಯನನ್ನೇ ನೋಡುತ್ತ ಕೂತಿದ್ದಳು. ಅಂಗಳದಾಚೆಗಿದ್ದ ಕೊಟ್ಟಿಗೆಯ ಹರಕಲು ಹರಕಲಾದ ಹುಲ್ಲಿನ ಮಾಡಿನಿಂದ ಎಳೆಬಿಸಿಲು ಕೋಲುಕೋಲಾಗಿ ಬಿದ್ದು ಸಗಣಿಹೊತ್ತ ಕರಿಯನನ್ನು ಬೆಳಗಿತ್ತು. ಯಾರೋ ಕೊಟ್ಟ ದೊಗಲೆ ಖಾಕಿ ಚಡ್ಡಿಯಲ್ಲೂ, ಹರಕಲು ಬನೀನಿನಲ್ಲೂ ಇದ್ದ ಕರಿಯ ತನ್ನ ಮಾಟವಾದ ಹಲ್ಲುಗಳನ್ನು ತೋರಿಸುತ್ತ ತನ್ನಷ್ಟಕ್ಕೆ ತಾನೇ ನಗುತ್ತಿದ್ದ.

ಹೀಗೆ ನಗಾಡಿಕೊಳ್ಳುತ್ತಿರುವ ತನ್ನನ್ನು ಗೌರಮ್ಮ ನೋಡಿಬಿಟ್ಟರೆಂದು ಕರಿಯನಿಗೆ ನಾಚಿಕೆಯಾಯಿತು. ಅರೆ – ಗೌರಮ್ಮ ನೋಡುವುದನ್ನು ಕೇಶವಯ್ಯನೂ ನೋಡುತ್ತಿದ್ದಾರೆ. ಕರಿಯ ಕೊಟ್ಟಿಗೆಯ ಒಳಗೂ ಹೊರಗೂ ಬುಟ್ಟಿ ಹೊತ್ತು ಕಾಲೂರದಂತೆ ತುದಿಗಾಲಲ್ಲಿ ಚಿಮ್ಮುತ್ತ, ಸಗಣಿ ಹೊತ್ತು ಗೊಬ್ಬರದ ಬುಟ್ಟಿ ಹೊತ್ತು ಕಾಲೂರದಂತೆ ತುದಿಗಾಲಲ್ಲಿ ಚಿಮ್ಮುತ್ತ, ಸಗಣಿ ಹೊತ್ತು ಗೊಬ್ಬರದ ಗುಂಡಿಗೆ ಹಾಕುವುದು ಒಂದು ಆಟವೆಂಬಂತೆ ಎಳೆಬಿಸಿಲಿನ ಅಮೋದದಲ್ಲಿ ನೋಡುವ ಕಣ್ಣುಗಳಿಗೆ ತನ್ನನ್ನು ಒಡ್ಡಿಕೊಂಡ. ಬಿಸಿಲಿನಲ್ಲಿ ಒಂದು ಬಗೆಯಾಗಿ, ನೆರಳಲ್ಲಿ ಒಂದು ಬಗೆಯಾಗಿ ತೋರುವ ಅವನ ಕೃಷ್ಣವರ್ಣ ಚಿಟ್ಟೆಯ ಮೇಲಿನ ತಂಪಿನಲ್ಲಿ ಕೂತು ನೋಡುವ ಕಣ್ಣುಗಳಿಗೆ ಚೆಲುವೆನ್ನಿಸಿತು.

ಹೀಗೆ ಕೊಟ್ಟಿಗೆ ಕೆಲಸವನ್ನು ಅವನು ಮುಗಿಸಿಯಾದ ಮೇಲೆ ಬಾಳೆಲೆಯಲ್ಲಿ ಅಕ್ಕಿಯ ರೊಟ್ಟಿಯನ್ನೋ ತಂಗಳನ್ನವನ್ನೋ, ಅಂತೂ ಆ ದಿನ ಅವರು ತಿಂದಿದ್ದನ್ನು, ಕೊಟ್ಟಿಗೆಯ ಮೆಟ್ಟಿಲಿನ ಮೇಲೆ ಇಟ್ಟು, ದೂರ ಹೋಗಿ, ಸೊಂಟದಮೇಲೆ ಕೈಯಿಟ್ಟು, ಬಿಸಿಲಲ್ಲಿ ನಿಂತು, ತಾನು ಎಲೆಯನ್ನು ಆಸೆಯಿಂದ ಎತ್ತಿಕೊಳ್ಳುವುದನು ನೋಡಲು ಗೌರಮ್ಮ ಕಾಯುತ್ತಿರಬಹುದೆಂದು ಅವನಲ್ಲಿ ಹುಟ್ಟುತ್ತಿದ್ದ ಭರವಸೆಯ ಸುಖವೇ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವ ಅವನ ಲಗುಬಗೆಯ ಎಲ್ಲ ಕ್ರಿಯೆಗಳಲ್ಲೂ ಇರುತ್ತಿತ್ತು. ಇವತ್ತಿನ ಸೂರ್ಯನ ಧಾರಾಳದಲ್ಲಿ ಅದು ಅಧಿಕವಾಗಿತ್ತು.

ಕರಿಯನ ಕೊಟ್ಟಿಗೆ ಕೆಲಸ ಮುಗಿಯುತ್ತಿದ್ದಂತೆ ಮೊಸರು ಹಾಕಿದ ತಂಗಳನ್ನವನ್ನು ಕೊಟ್ಟಿಗೆಯ ಮೆಟ್ಟಲಿನ ಮೇಲೆ ಎಂದಿನಂತೆ ಇಟ್ಟು ಗೌರಿ ಅಂಗಳದ ಬಿಸಿಲಲ್ಲಿ ತುಳಸಿಕಟ್ಟೆಯ ಬಳಿ ಕಾದುಕೂತಳು. ಕರಿಯನಿಗಾಗಿ ಗೌರಿ ಮಿಡಿಯುವ ಬಗೆ ಕಂಡು ಕೇಶವನಿಗೆ ವರ್ಣ ವ್ಯವಸ್ಥೆಯಲ್ಲಿ ಅವನು ಮೆಚ್ಚಿಕೊಂಡಿದ್ದ ಅದರ ಅಚ್ಚುಕಟ್ಟಿನ ಬಗ್ಗೆಯೇ ಅನುಮಾನವಾಯಿತು. ಗೌರಿಯ ಸದ್ಯದ ಕಣ್ಣುಗಳಿಂದ ಕರಿಯನನ್ನ ಕಂಡದ್ದೇ ಅವನನ್ನು ಚೆಲುವ ತಮ್ಮ ಊರಿನ ಸುತ್ತಮುತ್ತ ಇನ್ನೊಬ್ಬನಿಲ್ಲ ಎನ್ನಿಸಿಬಿಟ್ಟಿತು.

ನೀಲಮೇಘಶ್ಯಾಮನೇ ಅವನು. ಗಂಗೆಯ ಸಾವಿನ ನಂತರ ಸರ್ವಭೂತಹೃದಯದಲ್ಲಿ ಶುಕಮುನಿಯಂತೆ ಒಂದಾಗಿ ಹೋದ ಗೌರಿಗೆ ಕರಿಯ ಹೀಗಲ್ಲದೆ ಬೇರೆ ಹೇಗೆ ಕಂಡಾನು? ಲೋಕೋತ್ತರವಾದ ನಿಜದ ದರ್ಶನವಾದ ನಂತರ ವರ್ಣವೆಲ್ಲಿ, ಜಾತಿಯಲ್ಲಿ, ಕಟ್ಟುಕಟ್ಟಳೆಗಳ ಹಂಗೆಲ್ಲಿ?

ಆಕರ್ಷಕವಾದ ಲಜ್ಜೆಯ ತುಂಬ ಚೇಷ್ಟೆಯ ಕರಿಯನ ಕಣ್ಣುಗಳು ಥೇಟು ಕೃಷ್ಣನವು; ದೊಗಳೆ ಚಡ್ಡಿಯನ್ನು ಸೊಂಟಕ್ಕೆ ಬಿಗಿದು ಕಟ್ಟಿದ ಹಗ್ಗಕ್ಕೊಂದು ಕೊಳಲನ್ನೂ ಈ ಕಾಡಿನ ಕೃಷ್ಣ ಸಿಕ್ಕಿಸಿಕೊಂಡಿದ್ದ. ಜೊತೆಗೊಂದು ಅವನ ಪುಂಡಾಟಕ್ಕೆ ಚಾಟರಿಬಿಲ್ಲು ಬೇರೆ.

೧೯

ಕೌಲಿಯೆಂಬ ದನದ ಬಗ್ಗೆ ತುಂಬ ಮಾತುಕಥೆಗಳು ಆಗುವುದುಂಟು ಮನೆಯಲ್ಲಿ ಅಕ್ಕು ಮತ್ತು ಕರಿಯರ ನಡುವೆ. ಕೇಶವ ಪುರಾಣಕಥೆಗಳ ವ್ಯಾಖ್ಯಾನಕಾರನಾದರೆ, ಕರಿಯ ಕೌಲಿಯ ವ್ಯಾಖ್ಯಾನಕಾರ. ಅವಳು ಕೊಡುವ ಹುಲಿಗೂ ಅವನು ಯಾವ ಜಾಗದಲ್ಲಿ ಯಾವ ಯಾವ ದಿನ ಅವಳನ್ನು ಮೇಯಿಸುತ್ತಾನೆಂಬುದಕ್ಕೂ ಸಂಬಂಧವಿದೆ. ಯಾವಾಗ ಅವಳು ಗಬ್ಬವಾಗಬೇಕು, ಆಗಬೇಕಾಗಿ ಬಂದಾಗ ಅವಳ ಮರ್ಜಿಯೇನು, ಇತ್ಯಾದಿಯಾಗಿ ಅವಳ ಗರ್ಭದ ಸ್ಥಿತಿಗತಿಗಳೂ, ಪೂರ್ವೇತಿಹಾಸವೂ ಗೊತ್ತಿರುವುದು ಕರಿಯನಿಗೆ ಮಾತ್ರ. ಎಲ್ಲೋ ಒಮ್ಮೊಮ್ಮೆ ಅವಳು ಸಿಡುಕಿ ಹಾಲಿಳಿಸಲು ತಗಾದೆ ಮಾಡಿದರೆ ಅದಕ್ಕೆ ಕಾರಣವೇನು ಕರಿಯನಿಗೆ ಗೊತ್ತು.

‘ಎಲ್ಲ ಸರಿ – ಆದರೆ ಈ ಕೌಲಿಗೆ ಹುಟ್ಟುವುದೆಲ್ಲ ಗಂಡು ಕರುಗಳೇ’ ಎಂದು ಒಮ್ಮೆ ಅಕ್ಕು ಕರಿಯನಿಗೆ ಹೇಳಿದಳು.

‘ಅದೇನು ನೀವು ಹೇಳೋದು ದೊಡ್ಡಮ್ಮ? ನಿಮ್ಮ ಗೌರಮ್ಮನಿಗೆ ಗಂಡಾದರೆ ಹಾಗಂದೀರ?’

ತನಗೆ ಬಂದ ನಗುವನ್ನು ಅಕ್ಕು ತೋರಳು; ಸಲಿಗೆ ಕೊಟ್ಟರೆ ಅಳು ಮಕ್ಕಳು ತಲೆಮೇಲೆ ಕೂರುತ್ತಾರೆ.

‘ಪುಟ್ಟೇಗೌಡರ ಹೋರೀಜೊತೆ ಈ ಸಾರಿ ಮಾತ್ರ ಕೌಲೀನ ಬಿಡಬೇಡ. ಸಾಹುಕಾರರ ಕೊಟ್ಟಿಗೇಗೆ ತಗೊಂಡು ಹೋಗು’

ಕೌಲಿ ಬಗ್ಗೆ ಯಾರ ಹತ್ತಿರವೇ ಆಗಲಿ ಕರಿಯ ಸಲಿಗೆಯಲ್ಲೇ ಮಾತನಾಡುವುದು;

‘ಆ ಹೋಗಿ ಬಿಡಬೇಕಲ್ಲ; ನಿಮ್ಮ ಹಸ ಕೇಳಬೇಕಲ್ಲ. ಗೌಡರ ಹೋರೀನ ಕಂಡದ್ದೇ ನೆಗದಾಡತ್ತೆ ಈ ನಿಮ್ಮ ಹಸ.’

ಗೌರಿ ಆಲಿಸುತ್ತ ನಿಂತಿರುವುದು ನೋಡಿ ಅಕ್ಕು ಸಿಟ್ಟಾಗಿ

‘ಒಲೇ ಮೇಲೆ ಹಾಲಿಟ್ಟು ಬಂದಿದ್ದೀನಿ. ಉಕ್ಕೀತು, ಉರಿ ಸಣ್ಣ ಮಾಡು’ ಎಂದಳು.

ಅಕ್ಕು ಮತ್ತು ಕರಿಯನ ನಡುವಿನ ಕೌಲಿಪುರಾಣ ಈ ಬಗೆಯಾದರೆ, ಕರಿಯನ ಹತ್ತಿರ ಗೌರಿಯ ಹೆಚ್ಚು ಮಾತೆಲ್ಲವೂ ಈ ಕೌಲಿಯ ಅಂತರಂಗದಲ್ಲಿ ಮೂಡಿ ಮಾಯವಾಗುವ ಚಂಚಲವಾದ ಭಾವನಾ ವಿಶೇಷಗಳ ಬಗ್ಗೆ, ಹಾಲು ಬಣ್ಣದ ಮೈಯ ಕೌಲಿ ಕಾಣಲು ಬಲು ಸೌಮ್ಯ ಸ್ವಭಾವದ ಹಸು, ಆದರೆ ಘಾಟಿ. ಈ ಕೊಟ್ಟಿಗೆಯಲ್ಲೇ ಹುಟ್ಟಿ ಬೆಳೆದವಳು. ಅವಳ ತಾಯಿಯ ತಾಯಿಯ ತಾಯಿಯ ತಾಯಿ ಗೋದಾನವಾಗಿ ಸಾಹುಕಾರರ ಮನೆಯಿಂದ ಬಂದವಳು. ಅವಳ ಸಂತಾನದ ಹಾಳು ಕುಡಿದೇ ಎಲ್ಲ ಬೆಳೆದವರು. ಈ ಕೌಲಿಯ ಕಣ್ಣುಗಳದೇ ಒಂದು ಚೆಂದ.ಮತ್ತವಳ ಕೊಂಬುಗಳು. ಹಾಯಲೆಂದು ಇರುವ ಕೊಂಬುಗಳೇ ಅಲ್ಲವೇನೋ ಎನ್ನುವಂತೆ ಅವು ಹಿಮ್ಮುಖವಾಗಿ ಸುರುಳಿ ಸುತ್ತಿದ್ದವು. ಅವಳ ಹಣೆಯ ಮೇಲೊಂದು ಕರಿಯ ಮಚ್ಚೆ ಬೇರೆ ಗೃಹಸ್ಥ ಬ್ರಾಹ್ಮಣ ಇಟ್ಟುಕೊಂಡ ಅಕ್ಷತೆಯಂತೆ.

ಕರಿಯನೋ ಶ್ರೀರಾಮನಂತೆ ಪೂರ್ವಭಾಷಿ – ಮೊದಲ ಮಾತು ಅವನದೇ;

‘ಮಾರಾಣಿ ಥರ ಈ ನಿಮ್ಮ ಕೌಲಿ. ಎಲ್ಲೂ ನುಗ್ಗಲ್ಲ. ಯಾರ ಹತ್ರಾನೂ ಬೈಸಿಕೊಳ್ಳಲ್ಲ’

‘ನೀನೇನೋ ಹೊಗಳ್ತಿಯಾ. ನನ್ನನ್ನ ಕೇಳು. ಬಲು ಘಾಟಿ ಈ ನಿನ್ನ ಕೌಲಿ. ಅಕ್ಕೂಗೆ  ಕರೆದಷ್ಟು ನನಗೆ ಅವಳು ಕರೆಯಲ್ಲ. ಪೂಸಿ ಹೋಡೀತಾಳೆ.ಕತ್ತನ್ನ ಹಿಂದಕ್ಕೆ ತಿರುಗಿಸಿ ಕರೀತ ಕೂತಿರೋ ನನ್ನ ನೆಕ್ಕಕ್ಕೆ ಶುರುಮಾಡ್ತಾಳೆ. ಶುದ್ದ ಕಳ್ಳಿ’

ಕೊಟ್ಟಿಗೇಲಿ ಈ ಸಂಭಾಷಣೆ ನಡೆಯುವಾಗ ಕೌಲಿ ಬಾಲವನ್ನು ಎತ್ತಿ ಸುಖವಾಗಿ ಉಚ್ಚೆ ಹೊಯ್ಯುತ್ತ ಇಬ್ಬರನ್ನೂ ನೋಡುವಳು. ಕಟ್ಟಿದ ಹಗ್ಗ ಬಿಚ್ಚಿದ ಮೇಲೂ ಸಾತ್ವಿಕ ಶಿಖಾಮಣಿಯಂತೆ ನಿಂತಲ್ಲೇ ನಿಂತಿರುವಳು. ಹೊಗಳಿಸಿಕೊಳ್ಳುವುದೆಂದರೆ ಆಸೆ ಅವಳಿಗೆ.

‘ಅದೇನೇ ನೋಡ್ತಿದೀಯ? ಕರಿಯನ ಜೊತೆ ಹೋಗೋ ಮೇಯಲಿಕ್ಕೆ’

ಗೌರಿ ಹುಸಿಮುನಿಸಿನಲ್ಲಿ ಅಂದದ್ದೆ ಲಗುಬಗೆಯಿಂದ ಕೌಲಿ ಕೊಟ್ಟಿಗೆಯಿಂದ ಹೊರಡುವಳು. ಕರಿಯನೇ ಬಿದಿರನ್ನು ಕೊರೆದು ಅವಳ ಕೊರಳಿಗೊಂದು ಗಂಟೆ ಮಾಡಿದ್ದ ಈ ಗಂಟೆಯನ್ನು ಆಡಿಸುತ್ತಾ ಕೌಲಿ ಮೇಯುವುದು. ಅದನ್ನು ನೋಡುತ್ತಾ ನಿಲ್ಲುವುದು ಗೌರಿಗೆ ಇಷ್ಟ. ಮತ್ತಿಸೊಪ್ಪು ತರುವ ನೆವದಲ್ಲಿ ಒಮ್ಮೊಮ್ಮೆ ಅವಳೂ ಕರಿಯನ ಜೊತೆ ನಡೆದು ಬಿಡುವಳು.

ಒಂದು ದಿನ ಗೌರಿ ಕರಿಯನಿಂದ ಸ್ವಲ್ಪದೂರದಿಂದ ನಡೆಯುತ್ತ ಇದ್ದವಳು ಮರದ ಬೇರೊಂದಕ್ಕೆ ಎಡವಿ ನೋವಾಗಿ ನಿಂತಳು. ಚಿಕ್ಕಮ್ಮನಿಗೆ ನೋವಾದದ್ದು ಕಂಡು ಕರಿಯನೂ ನಿಂತನು. ಗೌರಿ ಉಜ್ಜಿಕೊಳ್ಳುತ್ತಾ ಕೂತ ಕಾಲನ್ನು ಕೌಲಿ ಮೂಸಿತು.

‘ಎಲ್ಲ ಅರ್ಥವಾಗತ್ತೆ ಈ ಲೌಡಿಗೆ’ ಎಂದು ಗೌರಿ ಕೌಲಿಯ ಕತ್ತು ತುರಿಸಿದಳು.

‘ಗುಡ್ಡದ ಮೇಲಿನ ಹಕ್ಕಿಗಳಿಗೂ ಚಿಕ್ಕಮ್ಮ ಅರ್ಥ ಆಗ್ತಾರೆ ಅಂತ ನಮ್ಮ ಹಟ್ಟೀಲಿ ಹೇಳತಾರೆ’

ಕರಿಯ ನಾಚುತ್ತಾ ಬಹಳ ದಿನಗಳಿಂದ ಹೇಳಬೇಕು ಎಂದುಕೊಂಡಿದ್ದನ್ನು ಹೇಳಿದ್ದ. ಗೌರಿ ಎದ್ದು ಮತ್ತೆ ಗೆಲುವಾಗಿ ನಡೆಯುತ್ತಿರುವಂತೆ ತೋರಿದ್ದೆ ಇನ್ನಷ್ಟು ಧೈರ್ಯ ಮಾಡಿದ.

‘ಅಮ್ಮಾವರೆ ನಿಜಾನ? ಸಾಲಾಗಿ ಹರೀವಾಗ ಇರಾಗಳು ಒಂದಕ್ಕೊಂದು ಮಾತಾಡಿಕೋ ತಾವಂತ. ಅವುಗಳ ಬಾಸೆ ತಿಳಿದ ರಾಜನೊಬ್ಬನಿದ್ದನಂತೆ. ಆದರೆ ಅವ ಕೇಳ್ಸಿಕೊಂಡದ್ದನ್ನ ಯಾರಿಗೂ ಹೇಳೋ ಹಾಗಿರ‍್ಲಿಲ್ಲವಂತೆ. ಏನಾದರೂ ಹೇಳಿಬಿಟ್ಟ ಅನ್ನಿ. ಅವನ ತಲೇನೇ ಸಿಡಿದು ಹೋಗ್ತಿತ್ತಂತೆ. ಹೀಗೆ ರಾಜ ಒಬ್ಬನೇ ಕೂತು ಒಂದಾನೊಂದು ದಿನ ಇರಾಗಳ ಸರಸ ಕೇಳ್ಸಿಕೋತ ಇದ್ದಾಗ, ಅರೇ, ಒಬ್ಬನೇ ಕೂತು ಈ ನನ್ನ ಅಪ್ಪ ಯಾಕೆ ತನ್ನಷ್ಟಕ್ಕೆ ನಗ್ತಾನೆ ಅಂತ ಅವನ ಚಂಡಿ ಮಗಳ ಕೈಕಮ್ಮ ಅನ್ನೋ ಗಯ್ಯಾಳೀ ಏನು ಹೇಳು ಏನು ಹೇಳು ಅಂತ ದುಂಬಾಲು ಬಿದ್ದಳಂತೆ. ಮಗಳ ಹಠ ತಡೀಲಾರದೆ ಪಾಪದ ಮಾರಾಜ ಇರಾಗಳು ಗುಟ್ಟುಗುಟ್ಟಾಗಿ ಆಡಿಕೊಂಡ ಮಾತನ್ನ ಹೇಳಿದ್ದೇ ತಡ, ಅವಣ ತಲೆ ಪಳ್ಳಂತ ಸಿಡಿದು ಅವನು ಅಲ್ಲೇ ಸತ್ತು ಬಿದ್ದನಂತೆ. ನಿಜಾನ ಅಮ್ಮಾವರೇ? ನಿಮಗೂ ಹಾಗೇನ? ಯಾರಿಗೂ ಹೇಳೋ ಹಾಗಿಲ್ಲ?

ಗೌರಿ ನಾಚಿ ನಕ್ಕು ಕೈಕೇಯಿ ಕಥೇ ಹೇಳಿದಳು; ತನ್ನ ಗರ್ಭಿಣಿ ತಂಗಿ ಸುಭದ್ರೆಗೆ ಕೃಷ್ಣ ಹೇಳಿದ್ದನ್ನ ಹೊಟ್ಟೇಳಿ ಇದ್ದಾಗಲೇ ಹೂಗುಟ್ಟುತ ಅಭಿಮನ್ಯು ಕೇಳ್ಸಿಕೊಂಡಿದ್ದನ್ನು ಹೇಳಿದಳು. ಕೇಶವನದಿಂದ ತನಗೆ, ತನ್ನಿಂದ ಕರಿಯನಿಗೆ, ಹೀಗೇ ಎಷ್ಟೋ ಕಥೆಗಳು ದಾಟಿದ್ದವು.

ಗುಡ್ಡದ ಮೇಲೊಂದು ದನಗಳು ನೀರು ಕುಡಿಯುವ ಹೊಂಡವಿತ್ತು. ಅದರ ಸುತ್ತ ಸೊಂಪಾಗಿ ಹುಲ್ಲು ಬೆಳೆದಿತ್ತು. ಕಪ್ಪಾದ ಕಾಕೆ ಹಣ್ಣಿನ ಗಿಡಗಳು ಅಲ್ಲಿ ಯಥೇಚ್ಛವಾಗಿದ್ದವು. ತುಂಬೆ ಹೂವಿನ ಗಿಡಗಳಂತೂ ಎಲ್ಲೆಂದರೆ ಅಲ್ಲಿ. ಈ ತಾಣದಲ್ಲಿ ಒಂದು ಕದ್ದಿಂಗಳಿನ ರಾತ್ರೆ ಯಾರಿಗೂ ಗೊತ್ತಗದಂತೆ ಗಂಗೆಯ ಜೊತೆ ಹಾಸಿಗೆಯಿಂದ ಎದ್ದು ಬಂದು ಮಿಣುಕು ಹುಳಗಳ ಮಿಂಚುವ ತೇರುಗಳನ್ನು ಕಂಡು ಮೈಮರೆತದ್ದು ಯಾವ ಹೊತ್ತಿಗಾದರೂ, ಎಲ್ಲಿದ್ದರೂ ಗೌರಿ ಕರೆದಾಗ ಕಾಣಿಸಿಕೊಳ್ಳುವ ದೃಶ್ಯ.

ಈ ಹೊಂಡದ ಹತ್ತಿರವೇ ಒಂದು ಬೂರುಗದ ಮರದಡಿ ಕಂಬಳಿ ಹಾಸಿಕೂತು ಮೇಯುವ ದನಗಳ ಮೇಲೊಂದು ಕಣ್ಣಿಟ್ಟು ಕರಿಯ ಕೊಳಲೂದುತ್ತ ಕಾಲ ಕಳೆಯುವುದು. ತನಗಿಂತ ಕೊಂಚ ದೂರದಲ್ಲಿದ್ದ ಒಂದು ಹಲಸಿನ ಮರದಡಿ, ಅದರ ಉಬ್ಬಿದ ಬೇರಿನ ಮೇಲೆ ಗೌರಿ ಸುಖವಾಗಿ ಕೂರುವಂತೆ ಕರಿಯ ದರಗು ತುಂಬಿ, ಅದರ ಮೇಲೆ ಒಣಗಿದ ಹುಲ್ಲನ್ನು ಹಾಸಿ, ಹುಲ್ಲಿನ ಮೇಲೆ ಹುಲ್ಲಿನದೇ ಒಂದು ಚಾಪೆ ಹಾಕಿರುವನು.

ಕಣ್ಣಳತೆಯಲ್ಲಿರುವ ಇಂಥದೊಂದು ಪುಟ್ಟ ವಿಶ್ವದಲ್ಲಿ ದನಗಳು ಮೇಯುತ್ತಲೋ, ಮೆಲಕುಹಾಕುತ್ತಲೋ, ಬಾಲವಾಡಿಸಿ ನೊಣಗಳನ್ನು ಓಡಿಸುತ್ತಲೋ ಇರುವುದನ್ನು ಏನನ್ನೂ ನೋಡದಿರುವಂಥೆ ನೋಡುತ್ತಾ ಗೌರಿ ಕೂತಿರುವಳು. ಸೂರ್ಯ ನೆತ್ತಿಯ ಮೇಲೆ ಏರುವ ತನಕ. ಮುತ್ತುಗದ ಎಲೆಯ ಮೇಲೆ ಕರಿಯ ತಂದಿಡುವ ಕಾಕೆ ಹಣ್ಣುಗಳನ್ನು ಒಂದೊಂದಾಗಿ ಬಾಯಿಗೆ ಎಸೆದು ತಿಂದು ಮುಗಿಸುವ ತನಕ.

ತುಂಬೆ ಹೂಗಳ ಮೇಲೆಲ್ಲ ಬಣ್ಣಬಣ್ಣದ ಹಗುರಾದ ಚಟ್ಟೆಗಳು. ಬಿಸಿಲಿಗೆ ಹೊಳೆಯುತ್ತ ಗುಂಯ್ ಗುಡುವ ದುಂಬಿ. ಅಲ್ಲೊಂದು ಇಲ್ಲೊಂದು ಕಾಗೆ. ಒಂದೇ ಒಂದು ಗಿಣಿ. ಇಗೋ ಅವಸರ ಅವಸರವಾಗಿ ಬಾಲವನ್ನೆತ್ತಿ ಓಡಾಡುವ ಗಲಿಬಿಲಿಯ ಅಳಿಲು. ಸುಮ್ಮನೇ ಇರುವ ಬಂಡೆಯ ಮೇಲಿನ ಓತಿಕೇತ. ಮೂತಿಯನ್ನು ನೀರಿಗಿಟ್ಟು ನಿಧಾನ ನೀರು ಕುಡಿಯುವ ದನಗಳು. ತಾನೇ ಇಲ್ಲಿನ ಸರ್ವಸ್ವವಾಗಿ ಬಿಟ್ಟಂತೆ ಪರಮ ಸಮಾಧಾನದಲ್ಲಿ ಗೌರಿ ಎದ್ದು ನಿಲ್ಲುವಳು.

೨೦

ಒಂದು ದಿನ, ಅವತ್ತು ದ್ವಾದಶಿಯೆಂದು ಕರಿಯ ಸತ್ತ ಮೇಲೆ ಗೌರಿ ನೆನಪು ಮಾಡಿಕೊಳ್ಳುತ್ತಾಳೆ, ಬೆಳಗಿನ ಹೊತ್ತು. ದನಗಳು ನೀರು ಕುಡಿಯುವ ಹೊಂಡದ ಮೇಲೆ ಸೂರ್ಯ ಕುಣಿಯುತ್ತಿದ್ದ. ಕರಿಯ ದೋಸೆಯನ್ನು ತುಂಬ ಇಷ್ಟಪಟ್ಟು ತಿಂದು ಉಮೇದಿನಲ್ಲಿದ್ದ. ಗೌರಿ ತನ್ನನ್ನು ನೋಡುತ್ತಿರುವುದನ್ನು ಗಮನಿಸಿ ಕೊಳಲೂದುವುದು ನಿಲ್ಲಿಸಿ ಎದುರುಬಂದು ನಿಂತು.

‘ಅಮ್ಮನೋರೆ’ ಎಂದ, ಏಣೋ ಮಾತಿಗೆ ಎಳೆಯಲು ಹವಣಿಸಿದವನಂತೆ.

‘ಅಮ್ಮನೋರೆ ಅಂತ ಕರಿಯೋಕೆ ನಾನೇನು ಮುದುಕಿಯಾ?’

‘ಇನ್ನು ಹ್ಯಾಗೆ ಕರೀಬೇಕೂಂತೀರಿ ಈ ಹೊಲೇರ ಕರಿಯ ನಿಮ್ಮನ್ನ?’

ಕರಿಯ ತುಂಟಾಗಿ ಹೇಳಿದ್ದ. ತನ್ನ ಮಾರಿಗೆಯವನಾದರೂ ಈ ಕರಿಯ ತನಗಿಂತ ತುಂಬ ಚಿಕ್ಕವನಂತೆ ವರ್ತಿಸುತ್ತಿದ್ದ. ಇದೊಂದು ಅಡಿ ಹೇಳದ ಒಪ್ಪಂದದಂತೆ ಇತ್ತು. ಅವನ ನಡುವೆ ಹಾಗೆ ತಾನು ಇರುವುದಕ್ಕಿಂತಲೂ ಚಿಕ್ಕನವಾಗಿ ನಡೆದುಕೊಂಡರೆ ಮಾತ್ರ ಗೌರಿ ಈ ಪರಿಯಲ್ಲಿ ತನ್ನನ್ನು ಇಷ್ಟಪಡುವುದು ಸಾಧ್ಯವೆಂದು ಅವನು ಗ್ರಹಿಸಿದಂತೆ ಇತ್ತು.

‘ನೀವು ಹೊಲೇರಲ್ಲ, ಹರಿಜನರು ಅಂತ ಗಾಂಧಿ ಹೇಳೋದು ನಿನಗೆ ಗೊತ್ತ?’

ಗೌರಿ ತಾನು ಓದಿದ ಚೋಮನ ಕಥೆಯನ್ನು ಕರಿಯನಿಗೆ ಹೇಳಲು ಸಾಧ್ಯವೇ ಎಂದು ಯೋಚಿಸಿದ್ದಳು. ಪುರಾಣದ ಯಾವ ಕಥೆಯನ್ನಾದರೂ, ಶಂಕರಾಚಾರ್ಯರು ಚಾಂಡಾಲ ರೂಪಿಯಾಗಿ ಬಂದ ಶಿವನಿಂದ ಕಲಿತ ಸತ್ಯವನ್ನಾದರೂ ಸಹಜವಾಗಿ ಕರಿಯನಿಗೆ ಹೇಳಬಹುದಾದಂತೆ ಯಾಕೆ ಚೋಮನ ಕಥೆ ಹೇಳಲಾರೆ ಎಂದು ಆಶ್ಚರ್ಯಪಟ್ಟಿದ್ದಳು,

ಕರಿಯನೇ ಮಾತು ಬದಲಾಯಿಸಿದ್ದ,

‘ಗೌರಮ್ಮನೋರೆ, ಒಂದು ವಿಸ್ಯ ಹೇಳ್ತಿನಿ. ಅಕೋ ನೋಡಿ ಅಲ್ಲಿ.’ ಎಂದು ಬೆರಳು ಮಾಡಿ ತೋರಿಸಿದ್ದ.

ಅವನು ತೋರಿದ ದೂರದಲ್ಲಿ ಒಂದು ಮೊಟ್ಟಿನ ಹೊಂದೆ ಜಿಗ್ಗನ್ನು ಹೆಕ್ಕುತ್ತಿರುವ ಹುಡುಗಿಯೊಬ್ಬಳು ಕಂಡಿದ್ದಳು.

‘ಅದು ಶೆಟ್ಟರ ಹುಡುಗಿ, ಗೊತ್ತ ಅಮ್ಮನಿಗೆ? ಜಲಜ ಅಂತ. ಬಾಯಿಗೆ ಇಸ್ಕಳ್ಲಿಕ್ಕೆಂತ ನಿಮ್ಮ ಮನೆಗೆ ಆ ಹುಡುಗಿ ಬಂದೇ ಇರ‍್ತದ. ಆ ಹುಡುಗಿ ಏನು ಹೇಳ್ತು ಗೊತ್ತ?’

ಈ ಕರಿಯ ದೊಡ್ಡ ಸ್ಥಳ ಪುರಾಣಿ. ಗೌರಿ ನಸುನಕ್ಕು, ಪ್ರಶ್ನಾರ್ಥಕವಾಗಿ ಅವನನ್ನು ನೋಡಿದಳು.

‘ಜಲಜ ಅಂದ್ಲು, ನೋಡೋ ಕರಿಯ, ನಾವೆಲ್ಲ ಈ ಗುಡ್ಡಕ್ಕೆ ಬರೋದು ಏನೋ ಕೆಲ್ಸಕ್ಕೇಂತ. ಕಟಿಗೆ ಕಡಿಯೋಕೆ, ಸೊಪ್ಪು ಕೊಯ್ಕೋಕೆ, ದನ ಮೇಯಿಸೋಕೆ’, ಕರಿಯ ನಾಚುತ್ತ ಸೇರಿಸಿದ. ‘ಕಾಡು ಕೋಳಿ ಹಿಡಿಯೋಕೆ, ಹೀಗೇ ಏನಾದರೂ ಹೊಟ್ಟೆ ಹೊರೆದುಕೊಳ್ಳಾಕೆ. ನಿನ್ನ ಅಮ್ಮ ನೋರು ಮಾತ್ರ ಸುಮ್ಮನೇ ಗಡದ್ದಾಗಿ ಕೂತಿರಾಕೆ ಬರ‍್ತಾರೆ. ಗುಡೀಲಿ ದೇವಿ ಥರ. ಅವನ ಹತ್ರ ಗಿಡ – ಮರ ಹಕ್ಕಿ – ಪಕ್ಷಿ ಎಲ್ಲ ಮಾತಾಡ್ತಾವಂತೆ ನಿಜಾನ? ಅವರ ಕಿವೀಲಿ ಎಲ್ಲ ಪ್ರಾಣಿಗಳೂ ಪಿಸುಗುಟ್ಟಿ ತಮ್ಮ ಗುಟ್ಟು ಹೇಳಕೋತಾವಂತೆ ನಿಜಾನ? ಜಲಜಾಗೆ ನಾನು ಏನು ಹೇಳ್ಳಿ ಗೋತ್ತಾಗ್ಲಿಲ್ಲ ಅಮ್ಮೋರೆ, ದೊಡ್ಡೋರ ವಿಸ್ಯ ನಾವು ಮಾತಾಡಬಾರ‍್ದು ಕಣಮ್ಮ ಅಂದು ಬಿಟ್ಟೆ ನಾನು.’

ಗೌರಿ ತನ್ನಷ್ಟಕ್ಕೆ ನಗುತ್ತ ಹೇಳಿದ್ದಳು;

‘ಈಗ ನನಗೇನು ಕಾಣಿಸ್ತ ಇದೆ ಹೇಳು. ನೀಲಿ ಆಕಾಶ, ಹತ್ತಿ ಥರ ಮೋಡ, ಹಣೇಗೆ ಹಣೆ ಕುಟ್ಟಿಕೊಂಡು ಹಾಯ್ತ ಆಡ್ತಿರೋ ಕರುಗಳು, ಸೊಂಟದಲ್ಲಿ ಕೊಳಲು ಸಿಕ್ಕಿಸಿಕೊಂಡಿರೋ ನೀನು, ನಿನ್ನ ತಲೆ ಮೇಲೊಂದು ನವಿಲುಗರಿ ಸಿಕ್ಕಿಸಿಬಿಟ್ಟಿರೆ ಒಬ್ಬ ಕೃಷ್ಣ ಪರಮಾತ್ಮ’.

ಹೀಗೆ ನಕ್ಕವಳು ಹಿಂದಕ್ಕೆ ತಿರುಗಿ ಜಲಜಳನ್ನು ನೋಡದೆ ಹೇಳಿದ್ದಳು;

‘ಮತ್ತೇನು ಕಾಣಿಸ್ತ ಇದೆ ಹೇಳಬಿಡಲ? ಸೊಂಟದ ಮೇಲೆ ಕೈ ಇಟ್ಟುಕೊಂಡು ಜಲಜ ನನ್ನ ಎದುರು ನಿಂತ ನಿನ್ನ ಮುಸುಡೀನೇ ನೋಡ್ತ ಇದಾಳೆ.’

‘ನಿಜಾನೆ, ನಿಮಗೆ ಕಾಣದ್ದು ಇಲ್ಲಿ ಏನೂ ಇಲ್ಲ ಅಮ್ಮನೋರೆ’

‘ಮತ್ತೆ ಅಮ್ಮನೋರೆ ಅಂತೀಯಾ’

ಗೌರಿ ಹೀಗೆ ಗದರಿಸಿದ್ದರಿಂದ ಕರಿಯನಿಗೆ ತನ್ನ ಬಾಲ್ಯವನ್ನು ಅವಳಿಂದ ಮತ್ತೆ ಪಡೆದಂತಾಗಿ ಖುಷಿಯಾಗಿತ್ತು. ಚಾಟರಿ ಬಿಲ್ಲಿನಿಂದ ಗುರಿಯಿಟ್ಟು ಹಲಸಿನ ಮರದ ಕೊಂಬೆಯೊಂದರ ಮೇಲೆ ಕೂತಿದ್ದ ಕಾಗೆಯನ್ನು ಓಡಿಸಿದ್ದ.

* * *

ಇನ್ನೊಂದು ದಿನ ಮತ್ತೆ ಗಾಂಧಿಯ ವಿಷಯ ಎತ್ತಿದಾಗ ಹುಡುಗಾಟಿಕೆಯ ಧಾಟಿಬಿಟ್ಟು ಕರಿಯ ಸಮಸಮವಾಗಿ ಮಾತಾಡಿದ್ದ.

‘ಅದೆಲ್ಲ ಸರಿ ಅಮ್ಮನೋರೆ. ಸಾಹುಕಾರ್ರು ನಮ್ಮ ಹಟ್ಟಿಯವರನ್ನೆಲ್ಲ ಅವರ ಅಂಗಳದಲ್ಲಿ ಸೇರಿಸಿ, ಪೇಟೇಂದ ದೊಡ್ಡವರನ್ನೆಲ್ಲ ಕರೆದು, ಗಾಂಧಿ ಟೋಪಿ ಹಾಕ್ಕೊಂಡು ಕೈಬೀಸ್ತ ಹೇಳಿದ್ದನ್ನೆಲ್ಲ ನಾನೂ ಕೇಳ್ಸಿಕೊಂಡಿದ್ದೀನಿ. ಪೇಟದೋರು, ಟೋಪಿಯೋರು, ಜರಿ ಪಂಚೆಯೋರು, ಜೈಲಿಗೆ ಹೋದೋರು, ಹೋಗದೋರು, ಪ್ಯಾಂಟ್ ಹಾಕಿದ ಈ ದೊಡ್ಡೋರ ಮಕ್ಕಳು ಎಲ್ಲಾರೂ ಇದ್ದರು. ಇಡೀ ತೀರ್ಥಹಳ್ಳಿ ಪೇಟೇನೇ ಇತ್ತು. ಬ್ರಾಂಬ್ರು ಗೌಡರು ದೀವ್ರು ಎಲ್ಲ ಇದ್ರು. ಸಾಹುಕಾರ್ರು ಜೈಲಿಗೆ ಹೋಗಿ ರಾಗಿಬೀಸಿದ್ದನ್ನ ಹೇಳಿದ್ರು. ತಮ್ಮಡಿಗೆ ತಾವೇ ಮಾಡಿಕೊಂಡು ತಿಂದಿದ್ದನ್ನ ಹೇಳಿದ್ರು. ಕದ್ದವರು ಮಾತ್ರ ಜೈಲಿಗೆ ಹೋಗೋದೂಂತ ತಿಳಿದ ನನಗೆ ನಗು ಬಂತು. ಸಾಹುಕಾರ್ರು ಒಳ್ಳೆ ಮನುಷ್ಯ ಅನ್ನಿ. ಸಾಲಗೀಲ ಅಂತ ಬರೆದಿಟ್ಟುಕೊಂಡು ನಮ್ಮ ಹತ್ರ ಜೀತ ಮಾಡಿಸ್ಕಳಲ್ಲ. ಅದರೆ ಯಾರೋ ಗಾಂಧಿ ಹೇಳಿದ್ರು ಅಂತ ನಮ್ಮನ್ನ ಅವರು ಮುಟ್ಟಾರ? ನಾವಾರೂ ಮುಟ್ಟಿಸಕೊಂಡೇವ? ಅವೆಲ್ಲ ಬಾವುಟ ಹಾರಿಸ್ದಾಗ ನಮ್ಮನ್ನೂ ಕರೆದು ಅವರು ಆಡೋ ಮಾತು’.

ತಾನೇ ಅವನನ್ನು ಮುಟ್ಟಿಬಿಡುವಂತೆ ತೀರ ಹತ್ತಿರದಲ್ಲಿ ಗೌರಿ ನಿಂತಿದ್ದಳು. ಕರಿಯ ಉಮೇದಿನಲ್ಲಿ ಮಾತಾಡಲು ತೊಡಗಿದ್ದ.

‘ನಿಜ ಹೇಳ್ಲ ಅಮ್ಮೋರೆ. ತೀರ್ಥಹಳ್ಳೀಲಿ ನಮ್ಮೋರು ಒಬ್ರು ಇಸ್ಕೂಲು ಮೇಸ್ಟ್ರಾಗಿ ಬಂದಿದಾರಂತೆ. ಎಲ್ರೂ ಅವರನ್ನ ಮುಟ್ಟಿಸ್ಕೋತಾರಂತೆ. ಬೇರೆ ಮೇಷ್ಟ್ರು ಬೆತ್ತದಲ್ಲಿ ಲಾತಾ ಬಿಟ್ರೆ ಅವರು ಕೈಯಲ್ಲೇ ತಪರಾಕಿ ಕೊಡ್ತಾರಂತೆ’.

ಹೀಗೆ ಮಾತಾಡಬಲ್ಲ ಈ ಕರಿಯ ಎಂದು ಗೌರಿ ಊಹಿಸಿರಲಿಲ್ಲ; ತೋರುವುದಕ್ಕಿಂತ ಹೆಚ್ಚು ದೊಡ್ಡವನಾಗಿ ಈಗ ಕಂಡ ಕರಿಯನನ್ನು ಅರಿಯಲು ಯತ್ನಿಸುತ್ತ ಗೌರಿ ಅವನ ಮುಂದಿನ ಮಾತನ್ನು ಆಲಿಸಿದಳು.

‘ಅಷ್ಟು ದೂರ ಬೇಡ ಅಮ್ಮೋರೆ. ನಮ್ಮಲ್ಲೇ ತಕಳ್ಳಿ. ಇಲ್ಲಿ ಹಳೆಪೈಕದೋರು, ಸೆಟ್ಟರು, ಬೋವೇರು ಯಾರು ಯಾರೋ ಇದಾರಲ್ಲ ಅವ್ರೂ ನಮ್ಮನ್ನ ಮುಟ್ಟಿಸಿಕೊಳ್ಳಲ್ಲ ಅಂತಾರೆ ಅಷ್ಟೆ, ನಿಮ್ಮನ್ನೆಲ್ಲ ನಂಬಿಸಾಕೆ. ಆದರೆ ಅವರ ಹುಡುಗೇರು ಕಾಡಲ್ಲಿ ಕಟ್ಟಿಗೆ ಕಡಿದು ಹೊರೆ ಮಾಡಿ ತಲೆ ಮೇಲೆ ಹೊರಲಿಕ್ಕೆ ಭಾರವಾದ್ರೆ, ಯಾರೂ ನೋಡ್ದಿದ್ರೆ ನನ್ನನ್ನೇ ಕರೀತಾರೆ. ಮೊಟ್ಟಿನ ಹಿಂದೆ ನಿಂತು ಬಾರೋ ಅಂತಾರೆ. ಕಣ್ಣಿನಲ್ಲಿ ಸನ್ನೆ ಮಾಡ್ತಾರೆ. ಬಾಯೀನ ವಾರೆ ಮಾಡ್ಕೊಂಡು ಏ ಕರಿಯಾ, ಕರಿಯಣ್ಣಾ ಸ್ವಲ್ಪ ತಲೆ ಮೇಲೆ ಇದನ್ನ ಎತ್ತಿಡೊ, ತಿಂದುಹಾಕಲ್ಲ ಹತ್ರಬಾರೋ, ಅಂತಾರೆ. ಜೋನಿ ಬೆಲ್ಲದ ಥರ, ಅದೇಣು ರುಚಿರುಚಿಯಾಗಿ, ಸೀಯಾಗಿ, ಕರಿಯಾ, ಏ ತಮ್ಮಯ್ಯಾ, ಅಂತ ಕರೆಯೋದನ್ನ ಕೇಳ್ಸಿಕೋಬೇಕು ನೀವು. ಅಷ್ಟೇ ಅಲ್ಲ, ಏನೇನೋ ಹಡೆಗಿಡೆ ಮಾತಾಡಿ, ಅದೆಲ್ಲ ನಿಮಗೆ ನಾಣು ಹೇಳಬಾರದು, ನೀನೇ ಸ್ವಲ್ಪ ಹೊತ್ಕೊಂಡು ಬಾರೊ, ಅಷ್ಟು ದೂರ, ಕೊಡುತೀನೋ ಅಂತಾರೆ. ಗೊತ್ತಾಗದೆ ಅವರ ಕಡೆ ನೋಡಿದ್ರೆ, ಬಾಯಿಗೆ ಕೊಡ್ತೀನಿ ಬಾರೊ ಅಂತ ತುಟಿಕಚ್ಚಿ ನಗತಾರೆ. ಅಡಿಕೇನ ಹಲ್ಲಲ್ಲಿ ಕಚ್ಚಿ ತುಂಡು ಮಾಡಿ ಎಂಜಲನ್ನು ಬಾಯಿಗೇ ಇಡ್ತಾರೆ. ಆ ಜಲಜ ಅಂತೂ ಮೈಗೆ ತಾಗಿಸಿಯೇ ಚಿಮ್ಮತಾ ಚಿಮ್ಮತಾ ನಡೆಯೋದು ಮಹಾ ಬಾಯಾಳಿ ಅವಳು’.

ಏಕವಚನದಲ್ಲಿ ಜಲಜಳ ಬಗ್ಗೆ ಮಾತಾಡಿ ಕರಿಯ ನಾಲಗೆ ಕಚ್ಚಿ ನಾಚಿದ್ದ. ಅವತ್ತು ರಾತ್ರಿ ಕನಸಿನಲ್ಲಿ ತಲೆಯ ಮೇಲೆ ನವಿಲುಗರಿ ಸಿಕ್ಕಿಸಿಕೊಂಡು ತನ್ನನ್ನು ಮುಟ್ಟುವಂತೆ ಕರಿಯ ನಿಂತಿದ್ದ. ಇದಾದ ಕೆಲವು ದಿನ ಗೌರಿ  ಕರಿಯನ ಜೊತೆ ಗುಡ್ಡದ ಮೇಲೆ ಕೂತು ಮಾತಾಡುವುದನ್ನು ನಿಲ್ಲಿಸಿದ್ದಳು. ಸಂಜೆಯಾದ ಮೇಲೆ ಅವಳು ಗಉಡ್ಡ ಹತ್ತಿ ಮನೆಗೆ ಹತ್ತಿರದಲ್ಲೇ ಕೂರುವುದು ಅಕ್ಕುವೋ ಕೇಶವನೋ ಕೂಗಿ ಕರೆದರೆ ಕೇಳಿಸಬೇಕು ಎನ್ನುವಷ್ಟು ದೂರದಲ್ಲಿ.