೨೧

ಒಂದು ಸಂಜೆ ಕೌಲಿಯನ್ನು ಕೊಟ್ಟಿಗೆಗೆ ತಂದು ಕಟ್ಟಿಯಾದ ಮೇಲೆ ಕರಿಯ ಸೀದ ತನ್ನ ಹಟ್ಟಿಗೆ ಹೋಗದೆ ಗೌರಿಯ ಬೆನ್ನು ಹತ್ತಿ ಗುಡ್ಡಕ್ಕೆ ಬಂದಿದ್ದ. ಅವಳಿಂದ ಅಷ್ಟು ದೂರ ಕೂತು ಹುಲ್ಲು ಕೀಳುತ್ತ ಗೌರಿಯನ್ನೇ ದಿಟ್ಟಿಸುತ್ತಿದ್ದ.

‘ಅದೇನೋ, ನನ್ನ ತಿಂದು ಬಿಡೊ ಹಾಗೆ ನೋಡ್ತ ಇದೀಯಲ್ಲೋ, ಏನಾಗಿದೆ ನಿನಗೆ?’ ಹಿರಿಯಕ್ಕನ ಹಾಗೆ ಗೌರಿ ಗದರಿಸಿದ್ದಳು.

‘ಹೇಳ್ಳ ಅಮ್ಮ – ನನ್ನ ಅವ್ವ, ಹೇಳೋದು ಇದು. ಈ ಗುಡ್ಡದಲ್ಲೊಂದು ದೇವಿ ಇದೆಯಂತೆ. ತಿಂಗಳ ಬೆಳಕಲ್ಲಿ ಅದು ತಲೆಗೂದಲನ್ನ ಒಣಗಿಸಿಕೋತ ಕೂರೋದಂತೆ. ಆಕಾಸದ ಹಾಲನ್ನೇ ಈ ದೇವಿ ಕುಡಿಯೋದಂತೆ. ನನ್ನವ್ವ ಈ ದೇವೀನ ನೋಡಿದಾಳೆ. ನನ್ನವ್ವ ಹೇಳೋದು ನೀವು ಆ ದೇವೀ ಥರಾನೆ ಇರೋದು ಅಂತ. ನಿಮದೊಂದು ಚಿತ್ರಾನ್ನ ನಾನು ಹಟ್ಟಿ ಗೋಡೆ ಮೇಳೆ ಅವ್ವನಿಗೆ ಬಿಡಿಸಿ ಕೊಟ್ಟಿದೀನಿ. ನನ್ನವ್ವ ಅದಕ್ಕೆ ನಿತ್ಯ ಕುಂಕುಮ ಹಚ್ಚುತಾಳೆ’;

ಗೌರಿ ಮುಖ ತಗ್ಗಿಸಿ ಹುಲ್ಲಿನ ಒಳಗೆ ಕಾಣದಂಥೆ ಬೆಳೆದ ಸುಗಂಧಿಯನ್ನು ಹುಡುಕುತ್ತಾ ಕರಿಯನ ಮಾತನ್ನು ಕೇಳಿಸಿಕೊಂಡಳು.

“ನನ್ನವ್ವನ ಮೈಮೇಲೂ ಒಂದು ದೇವಿ ಬರತ್ತೆ, ಇನ್ನೊಂದು ದೇವಿ ಅದು. ಪಾಐಸಾನ್ನ ಅದು ಕುಡಿಯಕ್ಕೆ ಕೇಳತ್ತೆ, ಅದರ ತಲೆ ಕೂದಲು ಕಪ್ಪಾಗಿ ಎದೆ ಮೇಲೆ ಚೆಲ್ಲಿರತ್ತೆ. ನಮ್ಮ ಮನೇನ ಕಾಪಾಡೋ ದೇವಿ ಅದು.’

ಸಂಜೆಯ ತಂಪಲ್ಲಿ ವಿಗ್ರಹದಂತೆ ನಿಂತ ಕರಿಯನ್ನ ಕಣ್ತುಂಬ ನೋಡಿದಳು. ಕೇಶವ ಮತ್ತು ಕರಿಯ – ಈ ಇಬ್ಬರನ್ನು ಮಾತ್ರ  ಗೌರಿ ಹೀಗೆ ಕಣ್ತುಂಬ ನೋಡುವುದು. ಒಬ್ಬ ಪುರಾಣದ ಭಾಗವತ, ಇನ್ನೊಬ್ಬ ಪುರಾಣದ ಕೃಷ್ಣ.

‘ಇನ್ನೂ ಹೊತ್ತಾದರೆ ಈ ದೇವಿಯ ಚರ್ಮಾನ್ನ ಅಕ್ಕು ಎಂಬ ಇನ್ನೊಂದು ದೇವಿ ಸುಲಿದು ಬಿಡ್ತಾಳೆ’.

ಗೌರಿ ನಗುತ್ತ ಎದ್ದಳು.

‘ಮನೇಲಿ ನಿನ್ನವ್ವ ದೇವಿನೂ ಕಾದಿರ‍್ತಾಳೆ, ನಡಿ’ ಎಂದು ಕಿತ್ತ ಸುಗಂಧಿ ಬೇರುಗಳನ್ನು ಸೆರಗಿಗೆ ಕಟ್ಟಿಕೊಂಡು ಸರಸರನೆ ಮನೆಗೆ ಹೋದಳು.

ಕರಿಯ ಇನ್ನೊಂದು ದಿನ ಕಾಡಿನಿಂದ ಕೇದಗೆ ತಂದುಕೊಟ್ಟ. ಏನೋ ಹೇಳುವ ಆತುರದಲ್ಲಿ ಅವನು ಇದ್ದಂತೆ ಕಂಡಿತು. ಅವನ ಸಲುಗೆಯೂ ಹೆಚ್ಚಾಗಿತ್ತು. ಸ್ವಲ್ಪ ಕೂರಿ ಅಮ್ಮ ಎಂದೇ ಮಾತಿಗೆ ಶುರು ಮಾಡಿದ. ಇನ್ನೊಂದು ಸ್ಥಳ ಪುರಾಣ ಇರಬೇಕೆಂದು ಗೌರಿ ಒಂದು ಬಂಡೆಯ ಮೇಲೆ ಕೂತಳು. ತನಗೆ ತಿಳಿಯದ ಹಳ್ಳಿಯ ವಿದ್ಯಮಾನಗಳೆಲ್ಲ ಕರಿಯನಿಗೆ ಗೊತ್ತು.

ಕರಿಯ ಕೆಳಗೆ ಹುಲ್ಲಿನ ಮೇಲೆ ಕೂತು ಕಾರ್ ಡ್ರೈವರ್ ಒಬ್ಬ ಕಾರು ಬಿಡುವಂತೆ ನಟಿಸಿ ಒಂದು ಕಲ್ಲನ್ನೆತ್ತಿ ಅದು ಕಾರಿನ ಡ್ರೈವರ್ ಎಂದು ಸೂಚಿಸುವಂತೆ ನೆಲದ ಮೇಲಿಟ್ಟ. ಈ ಕಾರ್ ಡ್ರೈವರ್ ಬ್ರಾಹ್ಮಣನಲ್ಲವೆಂದು ಸೂಚಿಸಲು ತನ್ನ ಹರಕಲು ಬನೀನಿನ ಮೇಲೆ ಬಲ ಹೆಗಲಿನಿಂದ ಎಡಕಂಕುಳಿಗೆ ಒಂದು ಗೆರೆಯೆಳೆದು ಅಲ್ಲವೆಂದು ಕೈಸನ್ನೆ ಮಾಡಿದ. ಮತ್ತೆ ಮೂಗುಡಿ ಕುಂಕುಮವನ್ನು ತನ್ನ ಮೂಗು ಹಣೆಗಳ ಮೇಲೆ ಸೂಚಿಸಿ ನುಣುಪಾದ ಗುಂಡಾದ ಕಲ್ಲು ಹುಡುಕಿ ಒರಟಾದ ಡ್ರೈವರ್ ಕಲ್ಲಿನ ಪಕ್ಕದಲ್ಲಿಟ್ಟ. ತನ್ನ ಎರಡು ತೋರುಬೆರಳುಗಳನ್ನು ಕೊಂಡಿ ಮಾಡಿ ಸಿಕ್ಕಿಸಿ ಎರಡು ಹಸ್ತಗಳಿಂದ ಎರಡು ಕಲ್ಲುಗಳನ್ನು ಮುಟ್ಟಿ ಮುಟ್ಟಿ ಮತ್ತೆ ತನ್ನ ಹೊಟ್ಟೆ ಮುಟ್ಟಿಕೊಂಡು ಅದು ಉಬ್ಬಿದಂತೆ ನಟಿಸಿ ನಗಲು ಶುರುಮಾಡಿದ್ದ.

ಗೌರಿಗೆ ಅವನ ಹುಡುಗಾಟಿಕೆಯ ಪೋಲಿ ಸನ್ನೆಗಳು ಹೇಸಿಗೆಯೆನ್ನಿಸಿ ಅವನೊಬ್ಬ ಹಡೆ ಎನ್ನುವಂತೆ ಗದರಿಸಿದಳು. ಕರಿಯ ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ಸಣ್ಣವನಾಗಿ ಬಿಟ್ಟಿದ್ದ. ತಾನು ಕಳಕೊಂಡವನನನ್ನು ಅವನ ಪೆಚ್ಚಾದ ಮೋರೆಯಲ್ಲಿ ಹುಡುಕಿದಳು.

೨೨

ಮಾರನೇ ದಿನ ಕರಿಯನಿಗೆ ಕೊಟ್ಟಿಗೆಯ ಮೆಟ್ಟಿಲಿನ ಮೇಲೆ ಎಂದಿನಂತೆ ಇಟ್ಟಿದ್ದ ಮೊಸರಲ್ಲಿ ಕಲಸಿದ ತಂಗಳನ್ನವನ್ನು ಅವನು ಕಣ್ಣೆತ್ತಿ ಸಹ ನೋಡದೆ ಹೊರಟು ಹೋದದ್ದನ್ನು ಗೌರಿ ಗಮನಿಸಿದಳು. ಅವನು ಮುಟ್ಟಿದೇ ಹೋದದ್ದನ್ನುಕಂಡು ಅಕ್ಕು ಅನ್ನವನ್ನು ನಾಯಿಗೆ ಹಾಕಿದಳು. ಅದರ ಮಾರನೇ ದಿನ ಗೌರಿ ಏನೋ ಕೆಲಸ ಜ್ಞಾಪಿಸಿಕೊಂಡವಳಂತೆ ಸೆರಗನ್ನು ತಲೆಗೆ ಹೊದು ಮನೆಯ ಸೂರಿಗೆ ಕಟ್ಟಿದ್ದ ಜೇಡರ ಬಲೆಯನ್ನು ಹಿಡಿ ಸೂಡಿಯಲ್ಲಿ ಗುಡಿಸುತ್ತಿರುವುದನ್ನು ಕಂಡು ಅಕ್ಕುಗೆ ಸಂತೋಷವಾಯಿತು; ತಾನೇ ಕರಿಯನಿಗೆ ತಂಗಳನ್ನ ಇಟ್ಟುಬಂದಳು.

ಅದರ ಮಾರನೇ ದಿನ ಗೌರಿಯೇ ಅವನಿಗೆ ತಂಗಳನ್ನ ಬಡಿಸಿಟ್ಟು ಕಾದಳು. ಅವನ ಮುಖವನ್ನು ನೋಡದೆ ಕೊಟ್ಟಿಗೆಯ ಒಳಗಿದ್ದವನಿಗೆ.

‘ಅನ್ನ ಇಟ್ಟಿದ್ದೀನಿ, ತಗೊ, ಅದೇನು ಅವತಾರ ನಿಂದು’ ಎಂದು ಎಂದಿನ ಸಲಿಗೆಯಲ್ಲಿ ಗದರಿಸಿದಳು. ಮುಖ ತಗ್ಗಿಸಿ ನಿರೀಕ್ಷೆಯಲ್ಲಿ ನಿಂತ ಗೌರಿ ಮುಖವೆತ್ತಿದಾಗ, ತಾನೊಬ್ಬ ಕೊಟ್ಟಿಗೆ ಕೆಲಸದ ಅಳು ಮಾತ್ರ ಎಂದು ಸೂಚಿಸುವಂತೆ ನಿರ್ಭಾವದಲ್ಲಿ ಮುಖತಗ್ಗಿಸಿ, ಎದುರು ಅಷ್ಟು ದೂರದಲ್ಲಿ ಕರಿಯ ವಿಧೇಯವಾಗಿ ನಿಂತಿದ್ದ. ಆಮೇಲೆ ತಂಗಳನ್ನ ಎತ್ತಿಕೊಂಡು ಮರೆಯಲ್ಲಿ ನಿಂತು ತಿಂದು ಹೋಗಿದ್ದ.

ಅದರ ಮಾರನೇ ದಿನ ಬೆಳಗಿನ ಝಾವ ಅಕ್ಕು ಮತ್ತು ಕಏಶವ ಭೂವರಾಹನ ವಿಶೇಷ ಪೂಜೆಗೆಂದು ಹೂಕಟ್ಟುತ್ತ ಚಾವಡಿಯ ಮೇಲೆ ಕೂತಿದ್ದರು. ಗೌರಿಯೂ ಕೂರಬೇಕಿತ್ತು. ಆದರೆ ಕರಿಯನ ಮುಖ ನೋಡುವ ಆಸೆಯಿಂದ ಅವನ ಎಲೆಯನ್ನು ಹಿಡಿದು ನಿಂತಿದ್ದಳು. ಕರಿಯ ಬಂದ. ಆದರೆ ಅವನ ಮುಖ ನೋಡಲಿಲ್ಲ. ದೂರದಿಂದಲೇ ಪರಿಮಳ ಬರುತ್ತಿದ್ದ ಎಲೆಯಲ್ಲಿ ಸುತ್ತಿದ ಕೇದಗೆ ಹೂವನ್ನು Pಅವಳ ಕಾಲು ಬುಡದಲ್ಲಿಟ್ಟು,

‘ತಕಳ್ಳಿ’ ಎಂದು ಕೊಟ್ಟಿಗೆಯ ಒಳಗೆ ಸರ್ರನೆ ಜಾರಿದ್ದ.

ಗೌರಿ ನಸು ನಗುತ್ತಾ ಕೇದಗೆಯನ್ನು ತೆಗೆದುಕೊಂಡು ಅಕ್ಕುಗೆ ಕೊಟ್ಟಳು. ‘ಪ್ರಶಸ್ತ ವಾಯಿತು’ ಎಂದು ಕೇಶವ ಅಕ್ಕುವಿನಿಂದ ಕೇದಗೆಯನ್ನು ತೆಗೆದುಕೊಂಡು,

‘ದೇವರಿಗೆ ಇದನ್ನು ಮುಡಿಸಿ ಪ್ರಸಾದ ತರ‍್ತೇನೆ. ಅಕ್ಕು ಇವತ್ತು ಗೌರಿಗೆ ಕೇದಗೆ ಜಡೆ ಹಾಕು’ ಎಂದ.

‘ಹಾಕಿಸ್ಕೊಬೇಕಲ್ಲ, ನಿನ್ನ ಈ ಮೂದೇವಿ ಸೊಸೆ’ ಎಂದು ಅಕ್ಕು, ಗೊಣಗಿದ್ದಳು.

ಕೇಶವ ಬಾಳೆ ನಾರಿನಲ್ಲಿ ಹೂಗಳನ್ನು ಕಟ್ಟುವುದರಲ್ಲಿ ಬಲು ನಿಪುಣ. ಮಲ್ಲಿಗೆ ಹೂವಿನ ಜೊತೆ ಅಲ್ಲಿ ಇಲ್ಲಿ ಪತ್ರೆ, ಅಲ್ಲೊಂದು ಇಲ್ಲೊಂದು ಕೆಂಡಸಂಪಿಗೆ (ಅದರ ವಾಸನೆಗೆ ತಲೆನೋವು ಬಂದರೂ ಗೌರಿ ಅದು ಇಷ್ಟ) ಹೀವಿನ ಸರವನ್ನು ಗಂಧಯುಕ್ತವೂ, ನೋಡಲು ಚೆಂದವೂ ಆಗುವಂತೆ ಮಾಡುವ ಅವನ ಬೆರಳಿನ ನೈಪುಣ್ಯವನ್ನು ಮೆಚ್ಚುತ್ತ ಗೌರಿ ಮಾವಯ್ಯನ ಹತ್ತಿರ ರಂಗೋಲೆ ಹಾಕಿಸಿ ನೋಡಬೇಕು ಎಂದಳು. ಅಕ್ಕುಗೆ ರೇಗಿತು.

‘ನಿನ್ನ ಮಾವಯ್ಯನಿಗೆ ಈಗ ಲಗ್ನವಾಗಿರಬೇಕಿತ್ತು. ನಿಂದು ಮೊದಲು ಆಗಲಿ ಎಂದು ಮಾಣಿ ಕಾದಿದೆ. ನೀನು ಗುಡ್ಡ ಗಿಡ್ಡ ಸುತ್ತೋದು ಬಿಟ್ಟು ಮನೇಲೆ ಮರ್ಯಾದೆಯಿಂದ ಇದ್ದಿದ್ದರೆ ಯಾರಾದರೂ ನಿನ್ನ ಕೇಳಿಕೊಂಡು ಬರ‍್ತಾ ಇದ್ದರು’.

ಅಕ್ಕು ರಂಜದ ಸರ ಪೋಣಿಸುತ್ತ ಹೇಳುವುದನ್ನೇ ನೂರನೇ ಸಾರಿ ಹೇಳಿದ್ದಳು. ಹೂವಿನ ಕೆಲಸ ಮುಗಿಯುತ್ತಿರುವಂತೆ ಕಂಡದ್ದರಿಂದ ಗೌರಿ ಒಳಗೆ ಹೋದಳು.

ಯಾವತ್ತೂ ಮನೆಯಲ್ಲಿ ಹರಡಿರುವ, ಅದು ಇದೆಯೆಂದು ಗಮನಕ್ಕೆ ಬಾರದಂತೆ ಸತತವಾದ ಒಣಗಿದ ಸುರಗಿ ಹೂವಿನ ಪರಿಮಳ ಗೌರಿಗೆ ಭಾಸವಾಯಿತು. ಕರಿಯ ಎಂದೋ ತಂದುಕೊಟ್ಟಿದ್ದು. ಅದು ಈಗ ಒಣಗೀ ಒಣಗೀ ಒಣಗಿದಂತೆ ಹೆಚ್ಚು ಗಂಧವತಿಯಾಗಿತ್ತು. ಗೋಡೆಗಳು ಕೂಡುವ ಮೂಲೆಯಲ್ಲಿ ಮೊಳೆಯೊಂದರ ಮೇಳೆ ಮಾಲೆ ಮಾಲೆಯಾಗಿ ಜೋತುಬಿದ್ದಿತು. ಕೆಲವು ಮಾಲೆಗಳನ್ನು ಗೌರಿ ತನ್ನ ತಂದೆಯ ಮನೆಯಿಂದ ತಂದ ಪುರಾತನ ಕಾಲದ ಹಿತ್ತಾಳೆ ಟ್ರಂಕಿನಲ್ಲಿದ್ದ ಪುಸ್ತಕಗಳ ಸಂದಿಯಲ್ಲಿ ಇಟ್ಟಿದ್ದಳು. ಬಚ್ಚಲೊಲೆಯ ಎದುರು ಕೂತು ಸುರುಗಿವಾಸನೆಯ ಭಾರತವನ್ನು ಓದುವುದು ಅಂತರಂಗದಲ್ಲಿ ವಾಸನೆಯನ್ನು ಇಳಿಸಿಕೊಂಡಂತೆ.

ಕರಿಯ ಸುರಗಿಯನ್ನು ಆಗೀಗ ತರುತ್ತಲೇ ಇರುತ್ತಾನೆ. ಅದರ ಮರವನ್ನು ಗೌರಿಗೆ ತೋರಿಸಿದ್ದಾನೆ. ಕಾಡಿನಲ್ಲಿ ಅಡಗಿರುವ ವಿಶೇಷವಾದ ಮರಗಳನ್ನು ಪತ್ತೆ ಹಚ್ಚುವುದರಲ್ಲಿ ಅವನು ನಿಸ್ಸಿಮ. ಯಾರ ಕಣ್ಣಿಗೂ ಬೀಳದಿರುವ ಗುಪ್ತವಾದೊಂದು ಜಾಗದಲ್ಲಿ ಇದೋ, ಎಷ್ಟು ಗಮಗಮವೆನ್ನುವ ಕರಿಬೇವಿನ ಮರ, ಅದೋ, ಅದೆಷ್ಟು ಹೂಬಿಟ್ಟು ದುಂಬಿ ಗುಂಯ್ ಎಂದು ಮುತ್ತಿಕೊಂಡ ಕೆಂಡ ಸಂಪಿಗೆ, ಯಾರ ಬಾಯಿಗೂ ಈ ವರೆಗೆ ಸಿಕ್ಕಿದ ಹುಳಿಹುಳಿಯಾದ ಹಸಿರು ಅಮಟೆ, ಎಷ್ಟೊಂದು ಹಕ್ಕಿಗೂಡುಗಳು ಜೋತುಬಿದ್ದ ನೇರಳೆ, ಕಟುವಾದ ಹುಳಿಯ ಕರ್ಪುರವಾಸನೆಯ ದಿಂಡು ಮಾವು – ಎಲ್ಲವೂ ಕರಿಯನ ಕೈಸನ್ನೆ ಕಣ್ಸನ್ನೆಗಳ ಉಮೇದಿನಲ್ಲಿ ಪ್ರತ್ಯಕ್ಷವಾಗಿ ಅಕ್ಕುವಿನ ಅಡುಗೆಗೂ ಕೇಶವನ ಪೂಜೆಗೂ ಒದಗಿ ಬರುತ್ತಿದ್ದವು.

ಯಾವ ಮರದ ಕೆಳಗೆ ಯಾವ ದೇವತೆಯಿದೆ ಎಂಬುದೂ ಕರಿಯನಿಗೆ ಗೊತ್ತು. ಕೇಶವನಿಗೆ ಪುಸ್ತಕಗಳಲ್ಲಿ  ಮತ್ತು ಪೂಜೆಯ ಮನೆಯಲ್ಲಿ ಮಾತ್ರ ದೇವ ದೇವಿಯರಾದರೆ ಕರಿಯನಿಗೆ ಎಲ್ಲೆಲ್ಲೂ ಅವೇ; ಹುತ್ತದಲ್ಲಿ, ಹೊಂಡದಲ್ಲಿ, ಮರದ ಪೊರಟೆಯಲ್ಲಿ, ಸಿಡಿಲಿಗೆ ಸಿಳಿದ ಬಂಡೆಯಲ್ಲಿ, ಸಂಜೆಯಾದರೆ ಸತತ ಚೀರುವ ಜೋಯಿಸ ಹಕ್ಕಿಯಲ್ಲಿ, ಬಿದುರು ಹಿಂಡಲಲ್ಲಿ ಅಡಗಿದ ಕೆಂಗಣ್ಣಿನ ಚೌಡಿಯಲ್ಲಿ, ನಾಗರಬನದ ಹಾವಿನಲ್ಲಿ, ಹುಣ್ಣಿಮೆ ರಾತ್ರೆ ಮಿಂದು ತಲೆಗೆದರಿ ಹಣೆಯ ಮೇಲೆಲ್ಲ ಕುಂಕುಮ ಬಳಿದುಕೊಂಡು ಹೆಂಡಕುಡಿದು ಹಾಡುತ್ತ ಗಬಗಬನೆ ಪಾಯಸ ತಿನ್ನುವ ತಾಯಿಯ ಆವೇಶದ ಮುಖ ಕಣ್ಣುಗಳಲ್ಲಿ.

ಕೇಶವನ ದೇವರಂತೆ ಈ ದೇವ ದೇವಿಯರು ಒಂದೇ ಗುಣದವು ಅಲ್ಲ. ಒಂದೊಂದು ದೇವತೆಗೆ ಒಂದೊಂದು ಗುಣ, ಒಂದೊಂದು ರುಚಿ, ಅದರದೇ ಕಥೆ, ಅದರದೇ ವ್ಯಥೆ. ನರಮನುಷ್ಯನ ಮೇಲೆ ಅವು ಅವಲಂಬಿಗಳು. ಯಾವಾಗಲೂ ಹಸಿದಿರುವಂಥವು. ಕುರಿಕೋಳಿ ಬಲಿಯ ಉಪಚಾರಕ್ಕೂ ಅವು ಒಲಿಯದಂತೆ ತೋರಿದಾಗ ಅವನ ಅಮ್ಮ ಅವುಗಳನ್ನು ಸಿಟ್ಟಿನಲ್ಲಿ ಕೆಲವು ಸಾರಿ ಬೈಯುವುದನ್ನು ಕೇಳಬೇಕು.

ದೇವದೇವಿಯರ ಬಗ್ಗೆ ಕರಿಯ ಮಾತಾಡುವಾಗ ಕೇಶವನಂತೆಯೇ ಸುಳಿಹಿಗಾಗಿ ಹುಡುಕುವಂತೆ ಗೌರಿಯ ಮುಖ ನೋಡುತ್ತಾನೆ, ಅವನಿಗೂ ಅವಳು ಒಂದೋ ದೇವಿ ಅಥವಾ ದೇವಿಯೊಬ್ಬಳ ಸಾನ್ನಿಧ್ಯದಲ್ಲಿ ಇರುವಾಕೆ, ಗೌರಿ ಲೇವಡಿ ಮಾಡಿದಷ್ಟೂ ಇವಳೊಂದು ಲಜ್ಜಾದೇವಿಯೆಂದೇ ಕರಿಯ ಭಾವಿಸುವಂತೆ ತೋರುತ್ತದೆ.

ಸುರಗಿ ಹೂಗಳ ಗೋಡೆಮಾಲೆಯಲ್ಲಿ ಗೌರಿ ನಿಂತು ಅದರ ಸೂಕ್ಷ್ಮವಾದ ಗಂಧವನ್ನು ಮನಸ್ಸಿಗೆ ತಂದುಕೊಂಡಳು. ಚಿಟ್ಟೆಯ ಈ ತುದಿಗೆ ಬಂದು ಕೇಶವನ ಪಕ್ಕದಲ್ಲಿದ್ದ ಕರಿಯ ತಂದುಕೊಟ್ಟ ಕೇದಗೆಯನ್ನು ನೋಡಿದಳು. ಮುಳ್ಳುಮುಳ್ಳಾದ ಅಂಚಿನ, ಹಸಿರು ಸಿಪ್ಪೆಯ, ನುಣುಪಾದ ಮೈಯ, ತುದಿಯಲ್ಲಿ ತುಟಿಬಿರಿಯುವಂಥೆ ಇನ್ನೇನು ಅರಳಲಿದ್ದ ಹಚ್ಚ ಹಳದಿ ಬಣ್ಣದ ಕೇದಗೆಯದು, ಇನ್ನೂ ಬಿರಿಯದೆ ತನಗೆ ತೋರಿದ ವಾಸನೆ ಅವಳ ನೆನಪಿನಿಂದ ಎದ್ದುದೇ ಇರಬೇಕು. ಭೂವರಾಹನ ಮೈಯ ಮೇಲೆ ನಾಳೆ ಅರಳಿ ಅದು ಪ್ರಸಾದವಾಗುತ್ತದೆ.

ಗುಡ್ಡದ ಮೇಲಿನ ಕಾಡಿನಲ್ಲಿ ಎಲ್ಲೋ ರಹಸ್ಯವಾದ ತಂಪಿನಲ್ಲಿ ತನ್ನ ಮೂತಿಯನ್ನೆತ್ತಿ ಕರಿಯನ ಕಣ್ಣಿಗೆ ಬಿದ್ದದ್ದು ಅದು. ಅದರ ಮಾದಕ ವಾಸನೆ ಸರ್ಪಗಳಿಗೆ ಪ್ರಿಯವೆಂದು ಮಾವ ಏನೇನೋ ಕಥೆ ಹೇಳಿದ್ದ. ಕೇದಗೆಯ ನೆವದಲ್ಲಿ. ಇಹದಲ್ಲಿ ದ್ರೌಪದಿಗೆ ಪರದಿಂದ ಕಾಡಿದ ಅಪರೂಪದ ಸೌಗಂಧಿಕವಾದ ವಾಸನೆ; ಮೀನಿನ ವಾಸನೆಯವಳು ಯೋಜನ ಗಂಧಿಯಾದದ್ದು; ಸತ್ಯಭಾಮೆಗೆ ಸ್ವರ್ಗದಲ್ಲಿ ಅರಳುವ ಪಾರಿಜಾತದ ಹಂಬಲ; ವಿಷ್ಣುವಿನ ಹೊಕ್ಕುಳಲ್ಲಿ ಅರಳಿದ ಕಮಲ, ಒಂದು ಮಾತನ್ನಾಡದಂತೆ ಕೈಯಲ್ಲಿನ ತಾವರೆಯನ್ನು ಶಿಷ್ಯನಿಗೆ ಕೊಟ್ಟು ‘ಅರ್ಥವಾಯಿತೆ’ ಎಂದು ಬುದ್ದ ಪ್ರಶ್ನಾರ್ಥಕವಾಗಿ ನೋಡಿದ ಮಾತ್ರಕ್ಕೆ ಶಿಷ್ಯನಿಗೆ ಬೋಧವಾದದ್ದು….

ಗಂಗೆಗೆ ಕೇದಗೆಯಲ್ಲಿ ಜಡೆ ಹೆಣಿಸಿಕೊಳ್ಳುವುದೆಂದರೆ ಆಸೆ. ಅದರ ಬನದಲ್ಲೇ ಬೆಳದಿಂಗಗಳಲ್ಲಿ ತನ್ನ ವಾಸನೆಯನ್ನು ಬಚ್ಚಿಟ್ಟುಕೊಂಡು ಮೂತಿಯನ್ನು ಎತ್ತಿಕೊಂಡಿರುವ ಅದರ ಸೊಕ್ಕಿನ ಹರಿಸಿನ ಬೆದೆಯನ್ನು ನೋಡುವ ಆಸೆ ಗೌರಿಗೆ. ಕರಿಯ ಮಾತ್ರ ಅಲ್ಲಿಗೆ ಕರಿದುಕೊಂಡು ಹೋದಾನು. ಅಷ್ಟೆಲ್ಲ ಮಾತಾಡುವ ಮಾವ ಕಾಡೆಂದರೆ ಕೊಂಚ ಪುಕ್ಕನೇ.

ಸ್ನಾನವಾದ ಮೇಲೆ ಗೌರಿಯ ತಲೆ ಬಾಚುತ್ತ ಅಕ್ಕು ಕೇದಗೆಯನ್ನು ಮುಡಿಸುವೆ ಎಂದಳು. ಈಚೆಗೆ ಗೌರಿ ಎಂದಿನಂತೆ ತನ್ನಿಂದ ತಲೆ ಬಾಚಿಸಿಕೊಂಡು ಬಿಗಿಯಾಗಿ ಜಡೆ ಹಾಕಿಸಿಕೊಳ್ಳುತ್ತಾಳೆಂದು ಅಕ್ಕುಗೆ ನೆಮ್ಮದಿ.

ಗೌರಿ ಕೇದಗೆ ಜಡೆ ಬೇಡವೆಂದಳು.

‘ಅದೇನು ನಿನ್ನ ಬಡಿವಾರ ಇವತ್ತು’ ಅಕ್ಕು ಪ್ರೀತಿಯಿಂದ ಗೌರಿಯ ಕತ್ತು ಗುದ್ದಿದಳು. ತನಗಾಗಿ ಅಕ್ಕು ಭೂವರಾಹನಿಗೆ ಕಳಿಸದೆ ಎತ್ತಿಟ್ಟ ಕೇದಗೆಯದು ಎಂದು ಗೌರಿಗೆ ಹೊಳೆಯಿತು.

‘ಮನೆ ದೇವರಿಗೆ ಮುಡಿಸಿದರಾಯ್ತು’ ಎಂದು ಗೌರಿ ಎದ್ದು ಹೋಗಿ ದೇವರ ಮನೆಯಲ್ಲಿ ಕೇದಗೆಯಿಟ್ಟು ಪ್ರಸಾದವಾಗಿ ಅಲ್ಲಿ ಹರಿವಾಣದಲ್ಲಿದ್ದ ದುಂಡುಮಲ್ಲಿಗೆಯನ್ನು ತಂದು ಮುಡಿಸಿದೆಂದು ಅಕ್ಕುಗೆ ಕೊಟ್ಟಳು.

ಗಂಗೆ ಕೇದಗೆಯ ಜಡೆಯಲ್ಲಿ ಗೌರಿಯ ಎದುರು ಚಿಟ್ಟೆಯ ಮೇಲೆ ನಿಂತಿರುವಂತೆ ಗೌರಿಗೆ ಕಂಡಿತು.

೨೩

ಸಾಹುಕಾರರ ಮೆನಯ ಭೂವರಾಹ ಪೂಜೆ ಮುಗಿಸಿ ಬಂದದ್ದೇ ಕೇಶವ ತಾನಾಗಿಯೇ ಮಾತಾಡಲು ತಡೊಗಿದ್ದ, ಕಥೆಯಮೇಲೊಂದು ಕಥೆ ಹೇಳಿದ. ಅವೆಲ್ಲವೂ ಹಿಂದೆ ಹೇಳಿದ ಕಥೆಗಳೇ. ಅಹಲ್ಯೆಯ ಕಥೆ, ಪುರವಿನ ಕಥೆ. ವಿಶ್ವಾಮಿತ್ರನ ಕಥೆ. ಶಕುಂತಲೆಯ ಕಥೆ, ನಹುಷನ ಕಥೆ, ನರಮನುಷ್ಯನ ತಪಸ್ಸೆಂದರೆ ಈ ಲೋಕದ ವಹಿವಾಟನ್ನು ವಹಿಸಿಕೊಂಡ ದೇವತೆಗಳಿಗೆ ಯಾಕೆ ದಿಗಿಲೊ? (ಕರಿಯನ ದೇವ ದೇವಿಯರಂತೆಯೇ ಕೊಂಚ ಕೇಶವನ ಕಥೆಯ ದೇವ ದೇವಿಯರೂ; ನರಮನುಷ್ಯನ ತಪಸ್ಸಲ್ಲಿ ಬೆಳೆದರೆ ಕೇಶವನ ಕಥೆಯ ದೇವತೆಗಳಿಗೆ ಅಸನಕಂಪ; ಮುಟ್ಟುಚಟ್ಟು ಆದರೆ. ಕೊಡಬೇಕಾದ ಬಲಿ ಕೊಡದಿದ್ದರೆ, ಕರಿಯನ ದೇವತೆಗಳಿಗೆ ಕಡುಕೋಪ) ಪುರಾಣದ ಎಲ್ಲ ದೇವದೇವಿಯರಿಗೂ ತಮ್ಮದೇ ಏನೇನೋ ತೀಟೆ ತೆವಲುಗಳು.

ಋಷಿ ಘೋರ ತಪಸ್ಸಿಗೆ ಕೂತುಬಿಟ್ಟ ಎಂದದ್ದೆ ಶುರುವಾಗಿ ಬಿಡುತ್ತದೆ ದೇವತೆಗಳ ರಾಜಕೀಯ. ನರಮನುಷ್ಯನಾಗಿ ಹುಟ್ಟಿದ ಮೇಲೆ ಮನುಷ್ಯ ಮಾತ್ರನಾಗಿ ಬದುಕಿರಬೇಕೆಂಬುದು ದೇವತಾ ಇಚ್ಛೆಯಿರಬಹುದು; ಅಥವಾ ಅದೊಂದು ಮನುಷ್ಯನ ಮಿತಿಗೆ ಸಮಬಮಧಿಸಿದ ನಿಯಮವಿರಬಹುದು. ತಪವೆಂದರೆ ತಾಪವೇ. ರಾವಣನೊಬ್ಬ ಮಹಾ ತಪಸ್ಸಿಯಲ್ಲಿವೇ? ಅವನು ಪಡುವ ಆಸೆಗೆ ಮಿತಿಯೇ ಇಲ್ಲ. ಸುಂದರವಾದ್ದೆಲ್ಲ ಸ್ವಂತದ ಸ್ವತ್ತೆಂದು ತಿಳಿದ ಲೋಭೀ ಅವನು. ಬ್ರಾಹ್ಮಣನಾದ ರಾವಣ ಹೀಗಾದರೆ ಶೂದ್ರ ಮಂಡೂಕನಿಗೆ ಸಕಾಯ ಸ್ವರ್ಗಕ್ಕೆ ಹೋಗುವ ತೆವಲು, ರಾವಣನ ತೀಟೆಯನ್ನೂ, ಶಂಬೂಕನ ತೆವಲನ್ನೂ ಮನುಷೈರೂಪಿಯಾಗಿ ಅವತರಿಸಿದ ವಿಷ್ಣು ಸಹಿಸನು. ತುಳಸೀದಾಸರಿಗೆ ಅವನು ಮರ‍್ಯಾದಾ ಪುರುಷೋತ್ತಮನಂತೆ.

ದೇವತೆಗಳು ಮಾನವರನ್ನು ಹಿಡಿಯಲೆಂದು ಉಪಯೊಗಿಸುವ ಗಾಳವೆಂದರೆ ಕಾಮ. ಮನುಷ್ಯ ಮತ್ತೆ ಸೃಷ್ಟಿಯಲ್ಲಿ ಸಿಕ್ಕಿಬಿದ್ದು ಪೆಚ್ಚಾಗುವಂತೆ ದೇವತೆಗಳು ಹೂಡುವ ಉಪಾಯಗಳಲ್ಲಿ ಇದೊಂದು ಬಲವಾದ ಅಸ್ತ್ರವೇ. ಗಾಯತ್ರಿಯನ್ನು ಭೂಲೋಕಕ್ಕೆ ತಂದ ವಿಶ್ವಾಮಿತ್ರರನ್ನೂ ಪೀಡಿಸಿತು ಕಾಮ. ಹರಲೋಪಾನಲ ಭಸ್ಮ ಕೇವಲಂ ಅಂತಾನೆ ಕವಿ ಕಾಳಿದಾಸ. ಹಾಗಾಗಿ ಅನಂಗವಾಗಿ ಇನ್ನಷ್ಟು ದೊಡ್ಡ ಪೀಡೆಯಾಗಿ ಬಿಟ್ಟ.

ಅದು ಅವಿದ್ಯೆ, ಮಾಯೆ. ಒಂದು ಉಪನಿಷತ್ತು ಅದೇನು ಹೇಳುತ್ತದೆ ಕೇಶವನಿಗೆ ಅರ್ಥವಾಗಿಲ್ಲ; ಆಚಾರ್ಯರು ಹೇಳುವುದೂ ಅವನಿಗೆ ಸಮ್ಮತವಾಗಿಲ್ಲ. ಯಾಕೆ ಕೇವಲ ವಿದ್ಯೆಯ ಬೆನ್ನು ಹತ್ತಿದರೂ ಅಂಧಕಾರ; ಹಾಗೆಯೇ ಕೇವಲ ಅವಿದ್ಯೆಯ ಬೆನ್ನು ಹತ್ತಿದರೂ ಅಂಧಕಾರ ಎನ್ನುತ್ತದೆ ಈ ಉಪನಿಷತ್ತು? ಗಾಂಧಿಗೆ ಈ ಉಪನಿಷತ್ತು ಪ್ರಿಯವೆಂದು ಸಾಹುಕಾರ್ ಮಂಜಯ್ಯನವರು ಅದರ ಅರ್ಥ ಕೇಳಿದಾಗ ಕೇಶವ ಈ ಭಾಗ ಮಾತ್ರ ತನಗೆ ಸ್ಪಷ್ಟವಾಗಿಲ್ಲ ಎಂದದ್ದು ಇದೆ.

೨೪

ತಾನು ಪಡುತ್ತಿದ್ದುದು ಉತ್ಕಟಗೊಳ್ಳುವ ಸಂಜ್ಞೆಯಾಗಿತ್ತು ಗೌರಿಗೆ. ಆಕಾಶದಲ್ಲಿ ಸಂಜೆ ಬೆಳ್ಳಕ್ಕಿಗಳು ಸಾಲು ಸಾಲಗಿ ಹಾರಿದವು. ಅವು ಹಾರಿದ್ದೇ ದಾರಿ. ಸೆರಿದ್ದೇ ಗೂಡು. ಅಪಾರವಾದ ಅವಕಾಶದಲ್ಲಿ ಕಾಣಿಸಿಕೊಂಡು ಮಾಯವಾಗುವ ಉನ್ಮುಖ ಕತ್ತಿನ ಹಕ್ಕಿಗಳು ಮುಸ್ಸಂಜೆ ಆಕಾಶದ ಕೆಳಗೆ ನಿಂತಿರಬಾರದೆಂದು ಅಕ್ಕು ಗದರಿಸಿದ್ದನ್ನು ಗೌರಿ ಲೆಕ್ಕಿಸಲಿಲ್ಲ.

‘ತಲೆ ಮೇಲೆ ಅಕಾಶ ಏನೂ ಕಳಚಿಬೀಳಲ್ಲ ಅಕ್ಕಮ್ಮ ಬಿದ್ದರೂ ಎಷ್ಟು ಹಗುರಾಗಿದೆ ಆಕಾಶ ನೋಡು ಒಂದೇ ಒಂದು ಮೋಡ ಕೂಡ ಇಲ್ಲ’ ಗೌರಿ ನಗಾಡಿದಳು.

ಕೊಟ್ಟಿಗೆಯಲ್ಲಿ ಇನ್ನೂ ಕಟ್ಟಿ ಹಾಕದೆ ಇದ್ದ ಕೌಲಿ ಕೂರಳ ಗಂಟೆ ಬಾರಿಸಿಕೊಳ್ಳುತ್ತ ವಯ್ಯಾರದಿಂದ ಬಂದು ಮೈ ತಾಗಿಸಿ ನಿಂತಿತು. ಗೌರಿಯ ಮುಂಗೈಯನ್ನು ಅದರ ವರಗು ನಾಲಿಗೆಯಿಂದ ನೆಕ್ಕಿತು. ನೆಕ್ಕುವಾಗ ದನದ ಮೈ ಕೂದಲು ಎದ್ದು ನಿಂತಿದ್ದು ಕಂಡು ಗೌರಿ ಅವರ ಕತ್ತನ್ನು ತುರಿಸಿದಳು. ಕೇರೆ ಹಾವಿರಬೇಕು – ಉದ್ದವಾಗಿ ಸವುರಾಗಿ ಅಂಗಳದಲ್ಲಿ ಸಮಾಧಾನದಲ್ಲಿ ಹರಿದು ಅಲ್ಲಿ ಇಲ್ಲಿ ಹುಡುಕಾಡಿ ಅಲ್ಲೇ ಹಿತ್ತಲಲ್ಲಿದ್ದ ಬಿಲವೊಂದನ್ನು ಹೊಕ್ಕು ಚೂರುಚೂರೇ ಇಳಿಯುತ್ತ ಕೇವಲ ಬಾಲವಾಗಿ ಕಂಡು, ಬಾಲದ ತುದಿ ಮಿಡಿದು ಮಾಯವಾಯಿತು.

‘ಕಟುಬಾಯ್ ಕಟುಬಾಯ್’ ಎಂದು ಅಕ್ಕು ಕೌಲಿಯನ್ನು ಕರೆಯುವಂತೆ ಗೌರಿ ಕರೆದಾಗ ದನ ತಲೆ ತಗ್ಗಿಸಿ ವಿಧೇಯವಾಗಿ ಕೊಟ್ಟಿಗೆಯೊಳಗೆ ಬಂದು ಸ್ವಸ್ಥಾನದಲ್ಲಿ ನಿಂತಿರು. ಅದನ್ನು ಹಗ್ಗದಲ್ಲಿ ಕಟ್ಟಿ, ಸಂಜೆಯ ಹಾಲು ಕರೆದು, ಆಕಾಶಕ್ಕೆ ಹಾಲನ್ನು ತೋರದಂತೆ ಸೆರಗಿನಲ್ಲಿ ಅದನ್ನು ಮುಚ್ಚಿ ಒಳತಂದು ಅಡುಗೆ ಮನೆಯಲ್ಲಿಟ್ಟಳು. ಅಕ್ಕು ಗದರಿಸಿದ್ದು ನೆನಪಾಗಿ, ಮುಗುಳ್ನಕ್ಕು, ಹಾಲಿನ ಪಾತ್ರೆಯ ಮೇಲೊಂದು ಬೋಗುಣಿ ಮುಗುಚಿಟ್ಟು ಬೆಕ್ಕಿನಿಂದ ಭದ್ರ ಮಾಡಿದಳು.

ಸೂರ್ಯ ಮುಳುಗಿಯಾಗಿತ್ತು. ಬೆಳದಿಂಗಳಲ್ಲಿ ಕಾಡು ಗುಡ್ಡ ತೊಯ್ಯುವ ಸೂಚನೆಯಾಯಿತು. ಕೇಶವ ಸ್ನಾನಮಾಡಿ ಸಂಧ್ಯಾವಂದನೆಗೆ ಕೂತ. ಗೌರಿ ಹಿತ್ತಲು ದಾಟಿ ಗುಡ್ಡ ಹತ್ತಿ ನಡೆದುಬಿಟ್ಟಿದ್ದನ್ನು ಅಕ್ಕು ಸೀರೆಯ ಹರಿದ ಸೆರಗಿಗೆ ತೇಪೆ ಹಾಕುತ್ತಾ ಕೂತವಳು ಸಿಟ್ಟಿನಲ್ಲಿ ನೋಡಿದಳು.

೨೫

ಆಕಾಶ ಅರಳಿಸಿಕೊಂಡ ದೊಡ್ಡದೊಂದು ಹೂವಿನಂತಿದ್ದ ಚಂದ್ರನನ್ನು ನೋಡುತ್ತಾ ಗೌರಿ ಗುಡ್ಡೆ ಹತ್ತಿದಳು. ಇಷ್ಟು ಸಮಾಧಾನದ ಆಕಾಶದಲ್ಲಿ ಹೇಗೆ ಮಳೆಗಾಲ ಮಿಂಚಿ ಗುಡುಗಿ ಅಬ್ಬರಿಸುತ್ತದೆ ಎಂದು ನೆನೆದಳು.

ಚಂದ್ರನ ಬೆಳಕನ್ನು ಕುಡಿದು ಸೊಕ್ಕಿದಂತೆ ಈಗ ಕೂಗಿದ್ದು ಯಾವ ಹಕ್ಕಿಯೋ? ಈ ಹಕ್ಕಿಗೆ ಇನ್ನೊಂದು ಹಕ್ಕಿಯ ಅದೇ ಸೊಕ್ಕಿನ ಉತ್ತರ. ಆ ಹಕ್ಕಿ ಎಲ್ಲೋ, ಈ ಹಕ್ಕಿ ಎಲ್ಲೋ, ಮತ್ತದೇ ಪ್ರಶ್ನೆ, ಮತ್ತದೇ ಉತ್ತರ.

ಸ್ವಲ್ಪ ದೂರದಲ್ಲಿ ಒತ್ತಾಗಿ ಬೆಳೆದ ಮರಗಳ ಸಂದಿಯಿಂದ ಕೇಳಿ ಬಂದದ್ದು ನಗುವೇ? ಅದು ಕರಿಯನದೇ? ಆ ಸದ್ದು ನಗುವೆ? ಅಳುವೆ? ಯಾರೋ ಬಿಕ್ಕುತ್ತಿದ್ದಾರೆ?

ಹೌದು ಕರಿಯನೇ ನಗುತ್ತಿರುವುದು. ಆ ನಗುವಿನ ಕುಲುಕು ಅವನದೇ. ಗುರಿಯಿಟ್ಟು ಚಾಟರಿಬಿಲ್ಲಿನಿಂದ ಹೊಡೆದ ಕಲ್ಲಿಗೆ ಮರದಿಂದ ಮಾವಿನ ಹಣ್ಣು ಬಿದ್ದರೆ, ಹೀಗೇ ಗೆಲುವಿನಿಂದ ಅವನು ನಗುವುದು. ಅಥವಾ ತಾನೊಬ್ಬಳೇ ಕೂತಿದ್ದಾಗ, ಬೆನ್ನ ಹಿಂದೆ ಸದ್ದಿಲ್ಲದೆ ಬಂದು ದೂರದಿಂದ ಅವನು ಕೈತಟ್ಟಿದಾಗ, ತಾನು ಬೆಚ್ಚಿದಂತೆ ನಟಿಸಿದಾಗ, ಅವನು ಹೀಗೇ ನಗುವುದು ಹುಡುಗಾಟಿಕೆಯಿಂದ ಹುಟ್ಟಿದ ನಗು ಅದು.

ಮತ್ತೊಂದು ನಗು ಕರಿಯದಲ್ಲ, ಅದು ಹೆಣ್ಣ ದನಿ. ಈಗ ಅದು ನಗುತ್ತಿದೆ, ಮತ್ತೆ ವಯ್ಯಾರದಲ್ಲಿ ಅದು ನರಳುತ್ತಿದೆ.

‘ಥೂ ನಿನ್ನ, ಥೂ ನಿನ್ನ’ಎಂದು ವಯ್ಯಾರದಲ್ಲಿ ನರಳುತ್ತಿರುವುದು ಹಾಳೆ ಟೊಪ್ಪಿಯ ಜಲಜನೇ. ಮಾವನ ಹತ್ತಿರ ಅವಳು ಸೇಳೆಯಲ್ಲಿ ಮಾತಾಡುವುದನ್ನು ಗೌರಿ ಕೇಳಿಸಿಕೊಂಡಿದ್ದಾಳೆ. ಅಕ್ಕು ಹತ್ತಿರ ಎಲೆಯಡಿಕೆಯನ್ನು ಸೆರಗೊಡ್ಡಿ ಅವಳು ಹಾಕಿಸಿಕೊಳ್ಳುವಾಗಲೂ ಅದೇ ಸೇಳೆಯೇ. ಅವಳ ಕೆಂಪು ತುಟಿಗಳಿಂದ ಕಾಣುವ ಮುದ್ದಾದ ಹಲ್ಲುಗಳು, ಆ ಹಲ್ಲುಗಳಿಂದ ಅವಳು ನಾಲಿಗೆ ಕಚ್ಚಿ ವಾರೆಯಾಗಿ ನೋಡುವುದು ಗೌರಿಯ ಕಣ್ಣೀಗೆ ಕಟ್ಟಿತು. ಒಂದಕ್ಕೊಂದು ಸುತ್ತಿಕೊಂಡು ಎಣೆಯಾಡುವ ಹಾವುಗಳು ಬಿಲ್ಲಿನಂತೆ ಸೆಟೆದು, ಮೇಲೆದ್ದು, ದೊಪ್ಪೆಂದು ಬಿದ್ದು, ಒಣಗಿದ ದರಗುಗಳಲ್ಲಿ ಹೊರಳಾಡುತ್ತಾ ಮಾಡುವಂತಹ ಸದ್ದು ಕೇಳತೊಡಗಿದ್ದೇ ಗೌರಿಯ ಮೈ ಜುಮ್ಮೆಂದು ಬೆಳದಿಂಗಳಲ್ಲಿ ಅವಳು ಬೆವೆತು ಬಿಟ್ಟಳು.

ಸರಸರನೆ ಗುಡ್ಡದಿಂದ ಇಳಿದು ಹೋದಳು.

೨೬

ಕೇಶವ ಉಷಸ್ಸಿನ ಮಂತ್ರವನ್ನು ಹೇಳುತ್ತ ಸೂರ್ಯಾಭಿಮುಖವಾಗಿ ತುಳಸಿಯಕಟ್ಟೆಯ ಮುಂದೆ ನಿಂತಿದ್ದ. ಬೆಳಿಗ್ಗೆ ಕೊಟ್ಟಿಗೆ ಕೆಲಸಕ್ಕೆ ಅದೇ ಕರಿಯ ಎಂದಿನಂತೆ ಹಾಜರಾಗಿದ್ದ.

ಪುನಃ ಪುನಃ ಜಾಯಾಮಾನಾ ಪುರಾಣೀ; ಯಾವತ್ತೂ ಅದೇ ಹಾಗೇ ಹಾಜರಾಗಿ, ಹಾಗೇ ಕಾಣುವವಳೇ; ಪಕ್ಷಿಗಳ ರೆಕ್ಕೆಗಳನ್ನು ಎಳೆದು, ಸಿಗಿದು, ಹಿಂಸಿಸುತ್ತಾ ಚೂರು ಚೂರೇ ಸಾಯಿಸುವ ಬೇಡನ ಹೆಂಡತಿಯಂತೆ, ನಿತ್ಯವೂ ನಮ್ಮನ್ನು ಚೂರು ಚೂರೇ ಸಾಯಿಸುತ್ತ ಮುಪ್ಪನ್ನು ತರುವವಳೇ – ಹೀಗೆ ಉಷೆಯನ್ನು ಸ್ತೋತ್ರ ಮಾಡುವಾಗ ಯಾವತ್ತೂ ಕೇಶವ ಚಕಿತನಾಗುತ್ತಾನೆ. ತನಗೆ ಇವತ್ತು ಈ ಮಂತ್ರದ ಕಠೋರವಾದ ಸುಂದರವಾದ ಅರ್ಥವನ್ನು ಮಾವಯ್ಯ ಒಪ್ಪಿಸುತ್ತಿದ್ದಾನೆ ಎನ್ನಿಸಿತು ಗೌರಿಗೆ.

ಉಮೇದಿನಲ್ಲಿ ಕೇಶವ ಮುಂದುವರಿದ.

‘ಆಕಾಶದ ಉಷಸ್ಸಿಗೂ ನಮ್ಮ ಮನೆ ಕೊಟ್ಟಿಗೆಯ ಕೌಲಿಗೂ ವೇದದ ಋಷಿಗಳು ಗಂಟು ಹಾಕಿಬಿಟ್ಟಿದ್ದಾರೆ ನೋಡೇ ಗೌರಿ’ ಎಂದು ಕಣ್ಣು ಮಿಟುಕಿಸಿದ. ‘ಕೆಚ್ಚಲನ್ನು ಕಾಲಗಲಿಸಿ ತೋರುವಂತೆ ಉಷಸ್ಸು ತನ್ನ ವಕ್ಷಸ್ಥಳವನ್ನು ತೋರುತ್ತಾಳಂತೆ ನಮ್ಮ ಋಷಿಗಳಿಗೆ’

ಈ ಮಂತ್ರಗಳ ಅರ್ಥವನ್ನು ವಿನೋದದಲ್ಲಿ ಕೇಶವ ಹಿಂದೆಂದೋ ವಿವರಿಸುತ್ತಿದ್ದುದನ್ನು ಗೌರಿ ನೆನೆದಳು.

ಅವಳು ಆಗ ಬಾಲೆ. ಗಂಗೆಯ ಸ್ನಾನ ಮಾಡಿಸಿದ ನಂತರ ಗೌರಿಗೆ ಸ್ನಾನ ಮಾಡಿಸುವುದು ಕೇಶವನೇ. ಗೌರಿಗೆ ಸ್ನಾನ ಮಾಡಿಸುತ್ತ ಕೇಶವ ಅವಳ ಕೈಗಳನ್ನು ಎತ್ತಿ ಕಂಕುಳನನು ಸೀಗೆ ಹಾಕಿ ಉಜ್ಜುವಾಗ ನಾಚಿದರೆ ಹೇಳುತ್ತಿದ್ದ:

‘ಸ್ನಾನ ಮಾಡಲು ಇಳಿದ ಸ್ತ್ರೀ ಸ್ನಾನದ ನಂತರ ಲಜ್ಜೆಯಿಂದ ಬಳುಕುತ್ತ ಮೇಲೆದ್ದು ಬರುವಂತೆ ಯಾವ ಉಷಾದೇವಿ ಕಾಣುತ್ತಾಳೋ; ಅಕ್ಕು ಹತ್ತಿರ ಜಡೆ ಹಾಕಿಸಿಕೊಂಡು, ಮಲ್ಲಿಗೆ ಮುಡಿದು, ಜರಿಲಂಗ ತೊಟ್ಟು, ಗೆಜ್ಜೆ ಹಾಕಿದ ಕಾಲಲ್ಲಿ ಹೆಜ್ಜೆ ಮೇಲೊಂದು ಹೆಜ್ಜೆ…., ಹೆಜ್ಜೆ ಮೇಲೊಂದು ಹೆಜ್ಜೆ…. ಇಡತಾ, ಬಳುಕುತಾ ವಯ್ಯಾರದಲ್ಲಿ ಯಾವ ಉಷಾದೇವಿ ದಯಪಾಲಿಸುತ್ತಾಳೆ…. ಅರ್ಥಾತ್, ಬರುತ್ತಾಳೋ’

ಆಗ ಗೌರಿ ಚೆಂಬಿನಿಂದ ನೀರನ್ನು ಅಷ್ಟೆತ್ತರದಿಂದ ಜಪ್ಪಿಹೊಯ್ಯುವ ಮಾವಯ್ಯನನ್ನು ಚೂಟಲು ಹೋಗಿದ್ದಳು.

ನಿನ್ನೆ ರಾತ್ರಿ ಅವಳು ಮಾಯವಾಗಿಬಿಟ್ಟಳು.

೨೭

ತುಳಸಿ ಕಟ್ಟೆಯ ಎದುರು ಉಷಸ್ಸನ್ನು ಸ್ತುತಿಸುತ್ತ ತನ್ನ ಬಾಲ್ಯವನ್ನು ನೆನಪು ಮಾಡುತ್ತ ನಿಂತ ಮಾವಯ್ಯನನ್ನು ಮ್ಲಾನೆಯಾಗಿ ಗೌರಿ ನೋಡಿದಳು. ಚುರುಕಾಗಿ ಏನಾದರೂ ಮೈಮರೆಯುವ ಕೆಲಸ ಮಾಡುವುದು ಅಗತ್ಯವೆನ್ನಿಸಿತು. ಚಿಟ್ಟೆಗುಡಿಸಿ, ಹೊಸ ಹಾಳೆ ಕೊಯ್ದು ತಂದು, ಇಡೀ ಚಿಟ್ಟೆಯನ್ನು ಸಗಣಿ ಹಾಕಿ ಸಾರಿಸಿದಳು. ಅಡುಗೆ ಮನೆಗೆ ಹೋಗಿ ಬಣ್ಣದ ಸೌತೆಕಾಯಿಯನ್ನು ಸೂರಿನಿಂದ ಇಳಿಸಿ ಹೆಚ್ಚಿಕೊಟ್ಟಳು. ಕಾಯಿ ತುರಿದು ಚಟ್ನಿ ತಿರುವಿದಳು. ಗುಳ್ಳವನ್ನು ಬೂದಿಯಲ್ಲಿ ಸುಡಲು, ಬಸಿದ ಗಂಜಿಗೆ ಮಜ್ಜಿಗೆ ಬೆರಸಿ ಇಂಗಿನ ಒಗ್ಗರಣೆ ಹಾಕಿ ಸಾರು ಮಾಡಲು, ನಾಗಂದಿಗೆಯಿಂದ ಬೇಕಾದ್ದನ್ನು ತೆಗೆದುಕೊಡಲು ಇಡೀ ದಿನ ಅಕ್ಕುಗೆ ನೆರವಾದಳು. ಮಧ್ಯಾಹ್ನ ಕೂತು ಓದಿದಳು. ಚಿಟ್ಟೆಯ ಮೇಲೆ ಕೂತೇ ಓದಿದಳು ಬಚ್ಚಲೊಲೆಯ ಎದುರು ಕೂತು ಓದಲು ಮನಸ್ಸಾಗಲಿಲ್ಲ. ಸಂಜೆಯಾಯಿತು. ಕತ್ತಲಗುತ್ತಾ ಬಂತು.

ಕೆಲಸದ ಆಳುಗಳು ಸಂಜೆಯಾದ ಮೇಲೆ ಹೊರಗಿನ ಹಂಡೆಯಲ್ಲಿ ನೀರು ಕಾಯಿಸಿ ಮಿಂದು ಆಯಾಸ ಪರಿಹರಿಸಿಕೊಳ್ಳುವುದಲ್ಲವೇ? ಹೀಗೆ ಮಿಂದ ಮೇಲೆ ಅವರು ಹೊರಗೆ ಹೋಗುವುದು ಅಪರೂಪ. ಆದರೆ ಜಲಜ ಮಿಂದು, ಕೈಯಲ್ಲಿ ಕುಂಬಳಕಾಯಿ ಹಿಡಿದು ಹಿತ್ತಲಿಗೆ ಬಂದು ಅಕ್ಕಮ್ಮ ಅಕ್ಕಮ್ಮ ಎಂದು ಮೆತ್ತಗೆ ನಾಚುತ್ತ ಕರೆದಳು. ಗೌರಿಗೆ ಅವಳನ್ನು ಕಂಡು ನಾಚಿಕೆಯಾಯಿತು; ಇವಳೇ ರಾತ್ರೆಯ ಅವಳೆ ಎಂದುಕೊಂಡು ನೋಡಿದಳು.

ನಿಶಾಚರೆಯೆಂದು ಈ ಕ್ಷಣದಲ್ಲಿ ಅನ್ನಿಸಿದರೂ ಅವಳು ಕಾಣಲು ಮಾವಯ್ಯನ ಮಂತ್ರದ ಉಷೆಯೇ. ಅದೇ ಲಜ್ಜೆ, ಅದೇ ಬೆಡಗು ಗಂಟುಹಾಕದೆ ಒಣಗಲೆಂದು ಹೆಗಲ ಮೇಲೆ ಚೆಲ್ಲಿದ ಕೂದಲು, ತಲೆ ಮೇಲೆ ಇರಲಿ ಎಂಬಂತೆ ತುದಿಯಲ್ಲಿ ಕೂರಿಸಿಕೊಂಡ ಹಾಳೆಟೊಪ್ಪಿ, ರವುಕೆ ಹಕದ ಎದೆಗೆ ಬೆನ್ನಿನಿಂದ ಕಟ್ಟಿಕೊಂಡ ಸೆರಗು, ಮೊಣಕಾಲಿನ ತನಕ ಮುಟ್ಟುವ ಸೀರೆ. ಕಾಲಲ್ಲಿ ಕಡಗ, ಎದೆ ಮೇಲೆ ಬಣ್ಣದ ಮಣಿಸರ. ಕೈಮೇಲೆ, ಹಣೆಯ ಮೇಲೆ ಮಚ್ಚೆ.

ಅಕ್ಕುವಿನ ಕಾಲಡಿ ಕುಂಬಳಕಾಯಿಯನ್ನಿಟ್ಟು ‘ತಕಳ್ಳಿ’ ಎಂದು ದೀರ್ಘವಾದ ಮಾತಿಗೆಂಬಂತೆ ಹಿತ್ತಲಲ್ಲಿ ಇದ್ದ ಹಲಸಿನ ಮರಕ್ಕೆ ಒರಗಿ ನಿಂತಳು. ಅವಳ ಶಿಸ್ತಾದ ಮೈಕಟ್ಟಿನಿಂದಾಗಿ ಜಲಜ ಅಷ್ಟು ಎತ್ತರವಲ್ಲದಿದರೂ ಕುಳ್ಳೆನ್ನಿಸದ ಎಣ್ಣೆಗೆಂಉ ಬಣ್ಣದ ಹುಡುಗಿ. ಗೌರಿಗಿಂತ ಒಂದರೆಡು ವರ್ಷ ದೊಡ್ಡವಳಿರಬಹುದು. ಅವಳು ಕೈ ಎತ್ತಿದರೆ ನಿಲುವಂತೆ ಹಿಂಡು ಹಿಂಡಾಗಿ ಮುಳ್ಳು ಮುಳ್ಳಾಗಿ ಅವಳ ತಲೆಯ ಮೇಲೆ ಹಲಸಿನ ಕಾಯಿಗಳೂ ಭಾರವಾಗಿ ಇಳಿಬಿದ್ದಿದ್ದವು.

ಆಗ ತಾನೇ ಉದಿಸಿದ ಚಂದ್ರನ ಬೆಳಕಲ್ಲಿ ನಿಂತು ಜಲಜ, ಹೊತ್ತಲ್ಲದ ಹೊತ್ತಲ್ಲಿ ಏನೇನೋ ಮಾತು ತೆಗೆದಳು. ನಿತ್ಯದ ಮಾತುಗಳು. ತಾನೊಂದು ತ್ರಿಭಂಗಿಯಲ್ಲಿ ನಿಂತ ದೇವತೆಯೆಂಬಂತೆ, ವಿಶೇಷವಾದ್ದು ಏನೂ ಆಗಿಲ್ಲವೆಂಬಂತೆ. ಹಲಸಿನ ಕಾಯಿಗಳ ಪುಷ್ಕಳ ಸನ್ನಿಧಿಯಲ್ಲಿ ನಿಂತ ಜಲಜಳನ್ನು ಮನಸ್ಸಿಗೆ ತಂದುಕೊಳ್ಳುತ್ತ ಗೌರಿ ಅಕ್ಕುಗೆ ಕಾಣದಂತೆ ಒಳಗೆ ಕೂತು ಅವರ ಮಾತು ಕೇಳಿಸಿಕೊಂಡಳು. ಈ ಅಕ್ಕು ಕಣ್ಣಿಗೆ ಊರಲ್ಲಿ ಕಾಣಿಸದೇ ಹೋದ ಸಂದಿ ಮೂಲೆಗಳೇ ಇಲ್ಲವೇನೋ ಎಂದು ಆಶ್ಚರ್ಯವಾಯಿತು ಗೌರಿಗೆ.

ಜಲಜನಿಗೆ ಒಬ್ಬ ಗಂಡನಿದ್ದ. ಅವನು ಅಡಕೆಮರ ಹತ್ತುವುದರಲ್ಲಿ ನಿಸ್ಸೀಮ. ಆದರೆ ಕಾಣಲು ಸಣಕಾಲದ ಅಳು. ಅವಳಿಗಿನ್ನೂ ಯಾಕೆ ಮಕ್ಕಳಾಗಿಲ್ಲವೆಂದು ಅಕ್ಕು ಎಂದೋ ಕೇಳಿದ್ದ ಪ್ರಶ್ನೆಗೆ ಈಗ ನೆನಸಿಕೊಂಡ ಉತ್ತರವಾಗಿ ಅವನ ಬಗ್ಗೆ ಜಲಜ ;ಪರಮ ಗರತಿಯಂತೆ ವಯ್ಯಾರದಲ್ಲಿ ಅಕ್ಕುಗೆ ಹೇಳಿದಳು;

‘ನನಗೆ ಮುಟ್ಟಿನ ದೋಸಾಂತ ಅವರು ಅಂತಾರೆ ಅಕ್ಕಮ್ಮನೋರೆ. ನಿಮಗೇ ಏನಾರೂ ದೋಸ ಇದ್ದೀತು ಮದ್ದು ತಕಳ್ಳಿ ಅಂತ ನಾನಂತೀನಿ’

ಅಕ್ಕು ನಗುವುದನ್ನು ಕಂಡು ಜಲಜಳು ಗಟ್ಟಿಯಾಗಿ ಬಾಯನ್ನು ಕೈಯಿಂದ ಮುಚ್ಚಿಕಪೊಂಡು ನಕ್ಕಳು;

‘ಯಾಕಿರಬಾರ‍್ದು ಅಲ್ವ ಅಕ್ಕಮ್ಮ. ಗಂಜಿಗೆ ಇಷ್ಟಿಷ್ಟು ತುಪ್ಪಹಾಕಿ ತಿನ್ನಿಸಿದರೂ ಯಾಕವರ ಕೈಕಾಲು ಮುಖ ತುಂಬಿಕೊಳ್ಳೋದೇ ಇಲ್ಲ ಹೇಳಿ. ಊಟವಾದ್ದೇ ಗೊರಕೆಹಾಕ್ತ ನಿದ್ದೆ ಮಾಡಿಬಿಡ್ತಾರೆ. ಮಕ್ಕಳೇನು ಆಕಾಸದಿಂದ ಉದರ‍್ತಾವ? ಈ ಹೊಟ್ಟೆ ಒಳಗೆ ಬಿದ್ದು ಬೆಳೀಬೇಕು ಅವು ಅಲ್ವ? ಮರ ಹತ್ತೋ ಮೈಗೆ ಏನೇನೂ ಹತ್ತಲ್ಲ ಅಂತಾರೆ ನಿಜಾನ ಅಮ್ಮ’.

ಒಪ್ಪತ್ತು ಊಟದ, ಮಕ್ಕಳನ್ನು ಹೆರದ ವಿಧವೆ ಅಕ್ಕುಗೆ ಈ ಗರತಿಗೋಳುಗಳಲ್ಲಿ ಇರುವ ಆಸಕ್ತಿ ಕಂಡು ಗೌರಿಗೆ ದಿಗ್ಭ್ರಮೆಯಾಯಿತು.

‘ಮತ್ತೊಂದು ಮಾತು ಅಕ್ಕಮ್ಮನೋರೆ…. ಕೇಳಬಹುದಾ ಬಾರದಾ ತಿಳೀದು….’

ಜಲಜ ಹುಬ್ಬುಗಳನ್ನೆತ್ತಿ ನಾಚುತ್ತ ಮಾತು ಅತಿಯಾಗಬಹುದೇನೋ ಎಂದು ಆಡಬೇಕೆಂದಿರುವ ಮಾತನ್ನು ನೆನಸಿಯೇ ನಾಲಗೆ ಕಚ್ಚುತ್ತ ಅಕ್ಕವನ್ನು ಪಿಸು ಧ್ವನಿಯಲ್ಲಿ ಕೇಳಿದಳು;

‘ಅದೇನೊ ಮದ್ದಿದೆಯಂತಲ್ಲ – ಅದು ಕೇಶವಯ್ಯನೋರಿಗೆ ಗೊತ್ತಿರಬಹುದಾ ಅಂತ ಕೇಳೋಣಾಂತ ಅಂದುಕೋತಾನೇ ಇದ್ದೀನಿ ನಾನು’

‘ಅದೇನೇ ನೀವು ಕೇಳಬೇಕೂಂತ ಇರೋದು? ಅಗಕ್ಕ, ಇಳಿಸಕ್ಕ? ಏನೋ ಒಗಟಿನಲ್ಲಿ ಮಾತಾಡ್ತ ಇದೀಯಲ್ಲ’

‘ಅದೇನೋ ದಪ್ಪಗೆ ಕಳ್ಳಿಗಿಡದ ಥರದ ದಂಟಂತೆ. ಲೋಳಿಸರ ಇರಬಹುದ ಅಕ್ಕಮ್ಮ? ಅದನ್ನ ಹಿಂಡಿದರೆ ಲೋಳಿಯಾದ ಹಾಲು ಬರತ್ತಂತೆ. ಈ ಹಾಲನ್ನ ಆಕಳು ತುಪ್ಪದಲ್ಲಿ ಸೇರಿಸಿ, ಒಂದಷ್ಟು ಜೇನು ಬೆರಸಿ ಹುಣ್ಣಿಮೆ ದಿನ ಕುಡಿಸಿದರೆ..

‘ಕುಡಿಸಿದರೆ?’ ಅಕ್ಕು ಅರ್ಥವಾಗದವಳಂತೆ ಕೇಳಿದಳು. ಆದರೆ ಅಕ್ಕು ಧ್ವನಿಯೂ ಆಪ್ತವಾಗಿತ್ತು, ಉಪಕರಿಸುವಂತಿತ್ತು.

‘ತಂಪಾಗ್ತದಂತೆ, ಮೈತಂಪಾಗ್ದೆ ಅದು ಹೇಗೆ ಸಾಧ್ಯ ಅಕ್ಕಮ್ಮನೋರೆ ನೀವೇ ಹೇಳಿ’.

‘ಅದೂಂದ್ರೆ’ ಅಕ್ಕು ನಗುತ್ತ ಕೇಳಿದಳು, ಜಲಜಳೂ ನಗುತ್ತ ಹೇಳಿದಳು:

‘ನನ್ನನ್ನ ತಮಾಸೆ ಮಾಡ್ತಿದ್ದೀರ ಅಕ್ಕಮ್ಮನೋರೆ ನೀವು, ಅವರು ಪುರಸಾನೇ ಅಲ್ಲ ಅಂತ ನಾನು ಬಾಯಿಬಿಟ್ಟು ಹೇಳಬೇಕೂಂತೀರ ಅಕ್ಕಮ್ಮ. ಇದನ್ನ ನಾನು ಹೇಗೆ ಕೇಶವಯ್ಯನೋರಿಗೆ ಹೇಳಲಿ ಅಂತ ತಾಯೀಂತ ತಿಳಿದು ನಿಮಗೆ ಹೇಳಕೋತಿದೀನಿ ನಾನು. ಕೇಶವಯ್ಯ ಜರಾಕ್ಕೆ ಭೇದಿಗೆ ಮುಟ್ಟಿನ ಕಾಯಿಲೆಗೆ ಔಸ್ತಿ ಕೊಡ್ತರಲ್ಲವ, ಅವರಿಗೆ ಇದೂ ಗೊತ್ತಿರಬಹುದು ಅಂತ ಎಲ್ಲ ಹೇಳ್ತಾರಲ್ಲ ಅಂತ, ಈ ರಾತ್ರೀಲಿ ನೀವೊಬ್ಬರೆ ಸಿಗ್ತೀರೀಂತ, ಒಬ್ಬಳೇ ಹೇಗೆ ಬರೋದೂಂತ, ಕರಿಯನ್ನ ಒಂದಷ್ಟು ಬಾರೊ ಅಂತ ಅಂದು, ಜೊತೆಗೆ ಕರಕೊಂಡು, ದೂರದಲ್ಲಿ ನಿಲ್ಲಿಸಿ ಬಂದಿದ್ದೀನಿ ಅಮ್ಮನೋರೆ….;

ಅಕ್ಕು ಏನೋ ಹೇಳಹೊರಟವಳು ಹಿಂದಕ್ಕೆ ತಿರುಗಿ ಗೌರಿಯನ್ನು ನೋಡಿಬಿಟ್ಟಳು.

‘ಹಾಲಿಗೆ ಹೆಪ್ಪು ಹಾಕಿ ಮುಚ್ಚಿಡು’ ಎಂದಳು.

‘ನಾಳೆ ಬಾ, ಕೇಶವಯ್ಯನ್ನ ಕೇಳಿಟ್ಟಿರ‍್ತೀನಿ. ಅವನಿಗೆ ಗೊತ್ತಿಲೆ ಇದ್ದರೆ ತೀರ್ಥಹಳ್ಳೀಲಿ ಇರೋ ಮಲಯಾಳಿ ಪಂಡಿತರಿಂದ ಮದ್ದು ತಗೋಬಹುದಲ್ಲ’ ಎಂದು ಜಲಜಗೆ ಸಮಾಧಾನ ಹೇಳಿ ಕಳುಹಿಸಿದಳು.