೨೮

ಅದರ ಮಾರನೆ ಸಂಜೆಯೇ ಮೀಯುವುದಕ್ಕಿಂತ ಮುಂಚೆಯೇ ಒಂದು ಬುಟ್ಟಿಯ ತುಂಬ ಹರಿವೆಯ ಸೊಪ್ಪನ್ನೂ, ಒಂದಿಷ್ಟು ಕಳಲೆಯನ್ನೂ ಜಲಜ ತಂದಿದ್ದಳು.

‘ಕರಿಯನ ಹತ್ರ ನೋಡ್ದೆ, ಇಸ್ಕಂಡುಬಂದೆ’ ಎಂದು ಕಳಲೆಯನ್ನು ಕೊಟ್ಟು, ಅದೇ ಹಲಸಿನ ಮರದಡಿ ಮಾತಿಗೆ ಕೂತಳು. ಅವಳು ತಲೆ ಮೇಲೆ ಒಂದು ಮಾಲೆ ಸುರಗಿಯನ್ನು ಮುಡಿದಿರುವುದನ್ನೂ, ಜಡೆಯ ತುದಿಯಲ್ಲಿ ಕೇದಗೆಯನ್ನು ಮಡಿಸಿ ಸಿಕ್ಕಿಸಿಕೊಂಡಿರುವುದನ್ನೂ ಹಾಳೆ ಟೊಪ್ಪಿಯನ್ನು ಕೆಳಗೆ ತೆಗೆದಿಟ್ಟು ಅವಳು ಕುತದ್ದೇ ಗೌರಿ ಗಮನಿಸಿದಳು.

ಅವತ್ತು ಬೆಳಿಗ್ಗೆ ಕೊಟ್ಟಿಗೆ ಕೆಲಸಕ್ಕೆ ಬಂದ ಕರಿಯ ‘ಗೌರಮ್ಮನೋರೆ’ ಎಂದು ಎರಡು ಬಾರಿ ಕರೆದಿದ್ದ, ಗೌರಿ ಏನೋ ಕೆಲಸದಲ್ಲಿರುವವಳಂತೆ ಅವನ ಕಡೆ ನೋಡಿರಲಿಲ್ಲ. ಕರಿಯ ನಹೋದಮೇಲೆ ನೋಡಿದರೆ ಮೆಟ್ಟಿಲಮೇಲೆ ಒಂದು ಬುಟ್ಟಿ ತುಂಬ ಸುರಗಿ ಹೂವನ್ನಿಟ್ಟು ಹೋಗಿದ್ದ. ಅವಳ ತಲೆ ಸ್ನಾಕ್ಕೆಂದು ಒಂದಿಷ್ಟು ಮತ್ತಿಸೊಪ್ಪನ್ನೂ ತಂದಿಟ್ಟಿದ್ದ.

ಹೀಗೆ ಪ್ರತಿ ಬೆಳಿಗ್ಗೆ ಕರಿಯನ ಜೊತೆ ಗೌರಿಯದು ಎಷ್ಟು ಬೇಕೊ ಅಷ್ಟೆ ಮಾತು. ಆದರೆ ಪ್ರತಿ ಬೆಳಿಗ್ಗೆ ಏನಾದರೊಂದು ಕಾಡಿನ ಹೂವನ್ನು ಅವನು ತರುವನು. ಒಂದು ದಿನ ಕಣಿಗಲೆ ಹೂವು, ಇನ್ನೊಂದು ದಿನ ಯಾವುದೋ ಕೆರೆಯಲ್ಲಿ ಬೆಳೆದ ತಾವರೆ, ಮತ್ತೊಂದು ದಿನ ಸೀತಾಳದಂಡೆ, ಆ ದಿನಗಳ ಸಂಜೆ ಜಲಜಳ ಮುಡಿಯಲ್ಲೂ ಆ ಹೂಗಳು ಕಾಣಿಸುತ್ತಿದ್ದವು.

ಒಂದು ಸಂಜೆ ನವಿಲುಗಡಿಯನ್ನು ಹಾಳೆಟೋಪಿಯ ಬಿರುಕಿನಲ್ಲಿ ಅವಳು ಸಿಕ್ಕಿಸಿಕೊಂಡಿದ್ದು ನೋಡಿ ಅಕ್ಕು ಚೇಷ್ಟಗೆ ಹೇಳಿದ್ದಳು;

‘ಏನೇ ಜಲಜ, ಇವತ್ತೇನು ನೀನು ದೇವಿಯಾಗಿ ಬಿಟ್ಟಿದ್ದೀಯಾ?  ಔಷಧಿಯಿಲ್ಲದೆ ನಿಂತುಬಿಟ್ತೋ ಹೇಗೆ?’

ಗೌರಿ ನಿತ್ಯ ಕೊಟ್ಟಿಗೆ ಎದುರು ಇಟ್ಟ ಊಟವನ್ನು ಕರಿಯ ಸುಮ್ಮನೇ ತೆಗೆದುಕೊಂಡು ತಿನ್ನುತ್ತಿದ್ದ, ಅವನ ಕಣ್ಣುಗಳು ಎಲ್ಲೂ ಕಾಣದ ಗೌರಿಯನ್ನು ಹುಡುಕುತ್ತಿದ್ದವು.

ಆದರೆ, ಸಂಜೆಯ ತಾವರೆಯಂತೆ ಗೌರಿ ಮೊಗ್ಗಾಗಿ ಮುಚ್ಚಿದಳು.

೨೯

ಅವತ್ತು ದಶಮಿ, ಭುವರಾಹನಿಗೆ ವಿಶೇಷ ಪೂಜೆಯಾಗಬೇಕೆಂದು ಸಾಹುಕಾರರ ಪಾರುಪತ್ಯೆದಾರರು ಹೇಳಿಕಳುಹಿಸಿದ್ದರು. ಮಂಜಯ್ಯನವರು ಮಾರನೇ ದಿನವೊ ಏನೋ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವರಿದ್ದರಂತೆ. ದೇವರ ಪ್ರಸಾದವನ್ನು ಖುದ್ದಾಗಿ ಪಾರುಪತ್ಯೆದಾರರೆ ಶಿವಮೊಗ್ಗದಿಂದ ರೈಲು ಹಿಡಿದು ಹೋಗಿ ಕೊಡುವೆನೆಂದು ಹೇಳಿ ಕಳುಹಿಸಿದ್ದರು. ಕೇಶವ ಬೆಳಿಗ್ಗೆ ಬೇಗ ಎದ್ದು ಪ್ರತಿದಿನಕ್ಕಿಂತ ಹೆಚ್ಚು ಗಾಯತ್ರಿಯನ್ನು ಮಾಡಿ ಅಣಿಯಾಗಿದ್ದ. ಗೌರಿ ಮತ್ತು ಅಕ್ಕು ಕೂತು ರಂಜ ಪೋಣಿಸುತ್ತಿದ್ದರು. ವಿಶೇಷ ಅರ್ಚನೆಗೆಂದು ಸಂಪಗೆಯ ಸರವನ್ನು ಕಟ್ಟಿ ಮುಗಿಸಿಯಾಗಿತ್ತು.

ಅಕ್ಕು ಗೆಲುವಾಗಿದ್ದಳು. ಹುಣ್ಣಿಮೆ ಕಳೆದ ಮೇಲೆ ಗೌರಿ ಗುಡ್ಡವನ್ನು ಸುತ್ತಲು ಹೋಗುತ್ತಿರಲಿಲ್ಲ. ಪ್ರತಿರಾತ್ರೆ ಆ ಹಡಬೆ ಬೆಕ್ಕಿಗೆ ಹಾಲನ್ನ ಇಟ್ಟು ಬರುವುದು ಬಿಟ್ಟರೆ ಅವಳು ಮನೆಗೆಲಸದಲ್ಲಿ ಮಗ್ನಳಾಗಿರುತ್ತಿದ್ದಳು.  ಅಥವಾ ಯಾವುದಾರೊಂದು ಪುಸ್ತಕ ಹಿಡಿದು ಕೂತಿರುತ್ತಿದ್ದಳು. ಅವಳು ಓದುತ್ತಿದ್ದ ಭಾಗವತದ ಕಥೆಗಳನ್ನು ತನಗೂ ಗಟ್ಟಿಯಾಗಿ ಓದಿ ಹೇಳುವಳು; ತಾನದನ್ನು ತೂಕಡಿಸುತ್ತಾ ಕೇಳಿಸಿಕೊಳ್ಳುವುದು, ಎಲ್ಲ ಗೊತ್ತಿರುವ ಕಥೆಗಳೇ. ಶ್ರವಣದ ಪುಣ್ಯಕ್ಕೆಂದು ಕೇಳಿಸಿಕೊಳ್ಳುವುದು ತಾನೆ? ನಡುವೆ ಕೇಶವ ಬಾಯಿ ಹಾಕಿದರೆ ಈ ಕಥೆಗಳಿಗೆಲ್ಲ ವಿಶೇಷವಾದ ಕಳೆ ಪ್ರಾಪ್ತಿಯಾಗುವುದು. ಶ್ರೀ ವಿಷ್ಣು ವರಾಹರೂಪ ತಾಳಿ ಉಗ್ರ ಹೋರಾಟದಲ್ಲಿ ಹಿರಣ್ಯಾಕ್ಷನ ಗರ್ವದಿಂದ ಭೂದೇವಿಯನ್ನು ರಕ್ಷಿಸುವ ಕಥೆಯಂತೂ ಅವನು ಭೂವರಾಹ ಪೂಜೆಯಲ್ಲಿ ಅನುಸರಿಸುವ ಪೂಜಾಕ್ರಮದ ಷೋಡಶೋಪಚಾರಗಳನ್ನೂ, ಅವನು ಸುತ್ತಿ ಎತ್ತುವ ಬಗೆಬಗೆಯ ಆರತಿಗಳ ಸಡಗರವನ್ನೂ ಕಣ್ಣಿಗೆ ಕಟ್ಟಿಸುವಂತಿರುತ್ತಿತ್ತು.

ರಂಜದ ಸರ ಪೋಣಿಸಿ ಕೇಶವನನ್ನು ಕಳುಹಿಸಿಯಾದ ಮೇಲೆ ಉಸ್ಸೆಂದು ಚಾವಡಿ ಮೇಲೆ ಕೂತಿರಲು ಸಾಹುಕಾರರ ಮನೆಯ ಗಾಡಿ ಹೊಡೆಯುವ ಮಹಾಚಾಡಿಕೋರನೆಂದು ಪ್ರಸಿದ್ದವಾದ ತುಕ್ರನೆಂಬುವನೊಬ್ಬ ಓಡೋಡುತ್ತ ಬಂದು ಏದುಸಿರುಬಿಡುತ್ತ ಕಂಬಕ್ಕೊರಗಿ ನಿಂತವನು ಕುಸಿದುಕೂತ. ಅಕ್ಕು ಅವನಿಗೆ ಕುಡಿಯಲು ನೀರು ತಂದುಕೊಟ್ಟು.

‘ಏನು ಸುದ್ದಿ ತಂದಿದಿಯೋ ಮಾರಾಯ’ ಎಂದಳು.

‘ಏನು ಸುದ್ದಿ ನಾಣು ತಂದೇನಮ್ಮ, ಆ ನಿಮ್ಮ ಕೊಟ್ಟಿಗೆ ಕರಿಯ ಸತ್ತೇ ಹೋದ. ಗುಡ್ಡದ ಮೇಲೆ ಅವನ ಹೆಣ ಚೂರು ಚೂರಾಗಿ ಬಿದ್ದಿದೆ.’ ಎಂದು ನೀರನ್ನೆತ್ತಿ ಗಟಗಟನೆ ಗಂಟಲಿಗೆ ಎತ್ತರದಿಂದ ಹೊಯ್ದುಕೊಂಡ.

ನಟ್ಟನಡು ರಾತ್ರೆಯಲ್ಲಿ ಜಲಜಳ ಗಂಡ, ಅಡಿಕೆಮರ ಹತ್ತೊ ಶೀನಪ್ಪ, ಅದೇ ಸಣಕಲ, ರುದ್ರಾವತಾರ ತಾಳಿದವನಂತೆ ರಕ್ತದಲ್ಲಿ ತೊಯ್ದ ಕತ್ತಿಯನ್ನು ಹಿಡಿದು ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದನಂತೆ. ಇಲ್ಲಿಂದ ಓಡೋಡಿ ಹೋಗಿ ಠಾಣೆ ತಲುಪಲು ನಾಲ್ಕು ಗಂಟೆಯಾದರೂ ಅವ ತಗಂಡಿರಬೇಕು. ಜೊಲೇರ ಕರಿಯನ್ನ ಮುಗಿಸಿಬಿಟ್ಟೆ ಎಂದು ಆವೇಶದಲ್ಲಿ ಗಣಮಗನ ಹಾಗೆ ಕಿರುಚಿ ಪೊಲೀಸರಿಗೆ ಹೇಳಕೊಂಡನಂತೆ. ಒಂದೇ ಉಸರಿನಲ್ಲಿ ಹೀಗೆ ಒದರಿಕೊಂಡು ಸುಸ್ತಾಗಿ ಕುಂತು ಬಿಟ್ಟ ಶೀನಪ್ಪನ ಕೈಯಿಂದ ಪೊಲೀಸರು ಕತ್ತೀನ ಮೊದಲು ವಶಕ್ಕೆ ತಗೊಂಡಂತೆ. ಕಡಿಯಾಕೆ ನೀರು ಕೊಟ್ಟರಂಎ. ನೀರು ಕುಡಿದು ಬೊಬ್ಬರ್ಯನ ಹಾಗೆ ಉಸಿರಾಡ್ತ ಶೀಣಪ್ಪ ಕಿಸೆಯಿಂದ ಬೀಡಿ ತೆಗೆದು ಪೊಲೀಸರೆದುರೇ ಧಿಮಾಕಿನಲ್ಲಿ ಕಡ್ಡಿ ಕೆರೆದು ಹಚ್ಚಿದನಂತೆ. ‘ತಕಳ್ಳಿ’ ಎಂದು ಪೊಲೀಸರಿಗೂ ಬೀಡಿ ಕೊಡಲು ಮಾರಾಯ ಹೋಗಿ ಎಲ್ಲಾಂದ್ರೆ ಎಲ್ಲಾ ಹೇಳಿಬಿಟ್ಟನಂತೆ:

‘ಹಾದರಗಿತ್ತಿ ಕಾಲು ಕಿಸಿದು ಮಲಗಿದ್ದು, ಭೋಸುಡಿಮಗ ಅವಳ ಮೇಲೆ ಮಲಗಿ ಮಜಾ ಮಾಡ್ತಿದ್ದ. ಒಂದೇ ಏಟಿಗೆ ಅವನ ಕತ್ತನ್ನ ಕತ್ತರಿಸಿಹಾಕಿ ಬಿಟ್ಟೆ, ಆ ಮುಂಡೇನ್ನೂ ಕತ್ರಿಸಿಬಿಡ್ತ ಇದ್ದೆ. ಓಡಿಹೋಗು ಬಿಟ್ತು ಹಾದರಗಿತ್ತಿ ಮುಂಡೆ….’

ಹೀಗೆ ಹೇಳಿಬಿಟ್ಟು ಶೀನಪ್ಪ ಬೀಡೀನ ಸೇದ್ತಾನೇ ವಿಕಾರವಾಗಿ ನಗತಾನೇ ಇದ್ದನಂತೆ. ಕೈಕೋಳ ಹಾಕಿ ಶೀನಪ್ಪನನ್ನ ಸ್ಥಳಕ್ಕೆ ತಂದು ಮಹಜರು ನಡಸ್ತ ಇರೋವಾಗ್ಲು ಕಂಡವರು ಹೇಳೋದು ಶೀನಪ್ಪ ನಗ್ತಾನೇ ಇದ್ದನಂತೆ.

ಜಲಜ ಪತ್ತೇನೇ ಆಗಿಲ್ಲ. ಎಲ್ಲ ಅಳುಗಳೂ ಎಲ್ಲ ಹೊಲೇರೂ ಗುಡ್ಡದಲ್ಲಿ ಸೇರಿ ನೋಡ್ತಾ ಇದಾರೆ. ಕರಿಯನ ಅವ್ವ ಅಕಾಶಕ್ಕೆ ಕೈಯೆತ್ತಿ ಕಿರುಚುತಾ ಇದಾಳೆ, ದೆವ್ವ ಹಿಡಿದೋಳ ಥರ. ನಮ್ಮ ಸಾಹುಕಾರ್ರು ಇಲ್ದೆ ಇದ್ದಾಗ ಹೀಗಾಗಿಬಿಟ್ಟಿದೆಯಲ್ಲ ಅಂತ ಎಲ್ಲರಿಗೂ ಭಯ ಆಗಿದೆ. ಊರಿಗಿದು ಒಳ್ಳೇದಲ್ಲ. ಪೊಲೀಸರಿಗೆ ಈಗ ಕಾಫಿ ತಿಂಡಿ ಆಗಬೇಕಲ್ಲ. ಅವರನ್ನ ಸಾಹುಕಾರ್ರ ಮನೇಗೆ ಕರಕೊಂಬರಕ್ಕೆ ಅಂತ ಹೋಗತಿದೀನಿ’

ಚಾಡಿ ತುಕ್ರ ಅಂಗಳ ಇಳಿದು ಮೆಟ್ಟು ತುಳಿದು ನಡೆದು ಬಿಟ್ಟ.

೩೦

ಅಕ್ಕುವನ್ನು ಹುಡುಕಿಕೊಂಡು ಮನೆ ಹಿತ್ತಲಿಗೆ ಜನಬರುವುದು ಶುರುವಾಯಿತು. ‘ಜಲಜ ಈ ಥರ ಅಂತ ಯಾರಾದರೂ ತಿಳಿದಿದ್ರ ಅಮ್ಮ’ ಅಂತ ಒಬ್ಬಳು, ‘ನಿಮ್ಮ ಕೊಟ್ಟಿಗೆ ಕೆಲಸ ಮಾಡಿಕೊಂಡು ನಿಮ್ಮನೆ ಕೂಳುಂಡುಕೊಂಡು ಇದ್ದ ಕರಿಯ ಹೀಗೆಂತ ಯಾರೂ ತಿಳಿದಿರಲಿಲ್ಲ ಬಿಡಿಯಮ್ಮ’ ಅಂತ ಇನ್ನೊಬ್ಬಳು. ‘ಕರಿಯಾ ಅಂತ ಕರದರೂ ಅಷ್ಟು ದೂರಾನೇ ನಿಂತು ಅವ ಮಾತಾಡ್ತ ಇದ್ದದ್ದು; ತನ್ನ ನೆರಳು ಹಾಯಕ್ಕು ಬಿಡ್ದಂತೆ ಇದ್ದ ಅಲ್ವೇನಮ್ಮ’ ಅಂತ ಇನ್ನೊಬ್ಬ ಮಾತುಗಾರ್ತಿ – ಎಲ್ಲರೂ ಮಾತಿಗೆ ಶುರು ಮಾಡುವುದು ಹೀಗೆ ಮುಂದಿನ ಮಾತಿನ ಜಾಡನ್ನು ಸೂಚಿಸಿಯೇ.

ಜಲಜಳ ವಾರಿಗೆಯ ಹುಡುಗಿಯೊಬ್ಬಳು ತನ್ನ ಅವಳಿ ಜವಳಿ ಮಕ್ಕಳನ್ನು ಎರಡು ಕಂಕುಳಲ್ಲಿ ಎತ್ತಿಕೊಂಡು ಬಂದು ಹಿತ್ತಲಲ್ಲಿ ಕೂರಿಸಿ,

‘ನಮ್ಮ ಕೇರೀಲಿ ಯಾರೂ ಇವತ್ತು ಒಲೆ ಹಚ್ಚಲ್ಲ ಅಕ್ಕಮ್ಮ. ಈ ಮಕ್ಕಳಿಗೆ ಇನ್ನೂ ನಾನು ಹಾಲು ಉಣಿಸ್ತ ಇದೀನಿ. ಒಂದಿಷ್ಟು ತಂಗಳಿದ್ದರೆ ಕೊಡಿಯಮ್ಮ’ ಎಂದಳು.

ಅಕ್ಕು ಒಳಗೆ ಹೋಗಿ ಒಂದು ಹಾಳೆಯ ತುಂಬ ಅನ್ನವನ್ನೂ, ಮಜ್ಜಿಗೆಯನ್ನೂ ಹಿಂದಿನ ರಾತ್ರೆ ಮಾಡಿ ಉಳಿದ ಸೌತೆಕಾಯಿಯ ಪಲ್ಯವನ್ನು ಹಾಕಿ, ಒಂದಿಷ್ಟು ಕಂಚಿಕಾಯಿಯ ಉಪ್ಪಿನ ಕಾಯಿಯನ್ನು ಮಕ್ಕಳಿಗೆ ಕುಡಿಸುವ ಎದೆಹಾಲಿಗೆ ಒಳ್ಳೆಯದೆಂದು ಬಡಿಸಿ ತಂದು ಅವಳೆದುರು ಇಟ್ಟಳು. ‘ಇಲ್ಲೇ ತಿಂದು ಹೋಗು ಬಚ್ಚಿ’ ಎಂದು ತಾನೂ ಮೆಟ್ಟಿಲ ಮೇಲೆ ಮಾತಿಗೆ ಕೂತಳು.

ಮಕ್ಕಳಿಗೆ ಒಂಬತ್ತು ತಿಂಗಳ ಮೇಲಾಗಿರಬೇಕು. ಸಲೀಸಾಗಿ ನೆಲದ ಮೇಲೆ ಕೂತು ತನ್ನನ್ನು ನೋಡಿ ಕೈಯೆತ್ತಿ ನಗುತ್ತಿವೆ. ಇನ್ನೂ ಮುಂಡೇವು ತಾಯಿಯ ಹಾಲು ಕುಡಿಯುತ್ತಿವೆ. ತಮ್ಮಯ್ಯನಂತೆಯೇ, ಅವನು ಎರಡು ವರ್ಷವಾದರೂ ಅಮ್ಮನ ಮೊಲೆ ಜಗ್ಗುತ್ತಿದ್ದ.

ಬಚ್ಚಿ ಎರಡು ತುತ್ತು ತಿನ್ನುತ್ತಲೇ ಹೊಟ್ಟೆ ತಂಪಾಗಿ ಪ್ರಸನ್ನಳಾಗಿ ಮಾತಿಗೆ ಶುರು ಮಾಡಿದಳು.

‘ಎಲ್ಲೇ ಒಂದು ನವಿಲುಗರಿ ಕಾಣಲಿ, ಓಂದು ಕೇದಗೆ ಅರಳಿದ್ದು ಕಾಣಲಿ, ಎಲ್ಲೇ ಸುರಗಿ ಹೂಬಿಟ್ಟಿದ್ದು, ಕಣ್ಣಿಗೆ ಬೀಳಲಿ ಕರಿಯನಿಗೆ ಈ ನಿಮ್ಮ ಗೌರಮ್ಮನದೇ ನೆನೊಪು. ತಾನೇ ಸರಸರಾಂತ ಕೋತಿಹಾಗೆ ಮರ ಹತ್ತಿ ಕುಯ್ಯಬೇಕು, ತಆನೇ ಇಲ್ಲಿಗೆ ತರಬೇಕು, ಆಯ್ದ. ತಾನೇ ಗೌರಮ್ಮನ ;ಪಾದದ ಬುಡದಲ್ಲಿ ಅದನ್ನ ಇಡಬೇಕು. ಗೌರಮ್ಮಗೆ ಸಂತೋಷ ಅದನ್ನ ಕಣ್ಣಾರೆ ನೋಡಬೇಕು. ಗುಡ್ಡದ ಮೇಲೆ ಹಕ್ಕಿ ಪಕ್ಕಿ ಗಿಡ ಮರ ನೋಡ್ತ ನೀಲು ಆಕಾಶ ನೋಡ್ತ ಗೌರಮ್ಮ ಹೇಗೆ ಸುಮ್ಮನೆ ಕೂತಿರ‍್ತಾರೆ ಅನ್ನೋದನ್ನ ನಮಗೆಲ್ಲ ಹೇಳಬೇಕು. ಹೀಗೆ ಹೇಳ್ಕೋತಾನೇ ಅವನಿಗೆ ಜಲಜಳ ಸಾವಾಸ ಅದ್ದು ಅಂತ ಅಂದುಕೋತೀನಿ ನಾನು….

ಅವನು ಇಡಾ ನಿಗಾದಲ್ಲಿ ಯಾರ ಮನೆ ಹಸಾನೇ ಆಗ್ಲಿ, ಅದೇಷ್ಟೇ ತುಡುಗು ಅದಾಗಿರ‍್ಲಿ, ಇನ್ನೊಬ್ಬರ ಗದ್ದೇಗೆ ನುಗ್ಗಿದ ದೂರು ಯಾರಾದರೂ ಕೇಳಿದ್ದು ಇದೆಯೇ. ನಮ್ಮೂರಿನ ಯಾವ ಹಸಾನ್ನಾಗಲೀ ದೊಡ್ಡೀಲಿ ಕಟ್ಟಿ ಹಾಕಿದ್ದು ಉಂಟ?

ಆ ಜಲಜ ಅದೇನು ಮೋಡಿ ಮಾಡಿದ್ಲೊ, ಯಾವ ದೇವ್ವ, ಅವಳನ್ನ ಹೊಕ್ಕು ಈ ಕೆಲಸ ಮಾಡಿಸ್ತೊ – ಆ ಸಿವನೇ ಬಲ್ಲ.’

ಅಕ್ಕು ಅಳಲು ತೊಡಗಿದಳು. ಬಚ್ಚಿಯೂ ಊಟ ನಿಲ್ಲಿಸಿ ಅತ್ತಳು. ಎರಡು ಮಕ್ಕಳೂ ಅವಳನ್ನು ಹತ್ತಿಕೂತು ಎದೆ ಹುಡುಕಿದವು. ಬಚ್ಚಿ ಸೆರಗನ್ನು ಸರಿಸಿ ಅವಕ್ಕೆ ಡರಡು ಮೊಲೆಗಳನ್ನೂ ತೆರೆದು ಕೊಟ್ಟು ತನ್ನ ಊಟ ಮುಂದುವರಿಸಿದಳು.

ಊಟವಾದ ಮೇಲೆ ಕೊಲೆ ನಡೆದದ್ದು ಎಲ್ಲಿ ಎಂಬ ವೃತ್ತಾಂತ ಶುರುವಾಯಿತು.

‘ಅಲ್ಲೊಂದು ಕಲ್ಕುಟುಕಾಣ ಗುಡಿ ಇಲ್ಲವ? ಸೋಗೆ ಹೊದಿಸಿದ್ದು? ಹಾಗೇ ಮೇಲೆ ಹೋದರೆ ಒಂದು ಬೂರುಗದ ಮರ. ಅದರ ಎಡಾ ತಿರುಗಿ ಹೋದರೆ ಒಂದು ಮಾವಿನ ಮರ. ತುಂಬ ಗಿಣಿ ಬರ‍್ತಾವೆ ಅಂತ ಅಂದನ್ನ ಗಿಣೀಮರ ಅಮತ ಕರಿತಾರೆ. ಅದು ಗಿಣಿಮೂತಿ ಮಾವಿನ ಮರ ಅಲ್ಲ, ಅದು ಬೇರೆ, ಸಾಹುಕಾರ್ರ ಮನೆ ಹತ್ರ ಇರೋದು ಗಿಣಿಮೂತಿ ಮರ. ಅಲ್ಲಿಂದ ಮೇಲೆ ಹೋದರೆ ಚೌಡಿ ಬನ. ಅಲ್ಲಿಂದ ಒಂದು ಜಿಗ್ಗನ್ನೂ ಯಾರೂ ಆರಿಸಿ ತರಲ್ಲ. ಆಯ್ತ? ಅಲ್ಲಿಂದ ಮೇಲೆ ಹೋದರೆ ಬಿದಿರು ಹಿಂಡಲು, ಅಲ್ಲೊಂದು ದೊಡ್ಡ ಹುತ್ತ. ನಾಗಪ್ಪನ ಹುತ್ತ ಅಂತ್ಲೇ ನಾವದನ್ನ ಕರೆಯೋದು. ಅಲ್ಲಿಂದ ಗುಡ್ಡ ಸ್ವಲ್ಪ ಇಳೀಬೇಕು. ಅಲ್ಲೊಂದು ಝರಿ ಹುತ್ತ ಅಂತ್ಲೇ ನಾವದನ್ನ ಕರೆಯೋದು. ಅಲ್ಲಿಂದ ಗುಡ್ಡ ಸ್ವಲ್ಪ ಇಳೀಬೇಕು. ಅಲ್ಲೊಂದು ಝರಿ ಸಿಗತ್ತೆ. ಯಾರು ನೋಡಲ್ಲ ಅಂತ ನಾವು ಹೆಂಗಸರು ಬೇಸಿಗೇಲಿ ಝರಿ ಕೆಳಗೆ ಕೂತು ಮೀಯೋದುಂಟು. ಆ ಝರಿ ಪಕ್ಕದಲ್ಲಿ ಯಾರಿಗೂ ಕಾಣಿಸ್ದ ಒಂದು ಜಾಗ ಉಂಟು ಅಂತ ನಮಗೆ ಗೊತ್ತಾದ್ದು ಕೂಡ ಇವತ್ತೆ. ಸುತ್ತ ಅಷ್ಟು ಹುಲ್ಲು ಬೆಳೆದಿದೆ ಅಲ್ಲಿ. ನರಮನುಷ್ಯ ಕಾಲಿಡದ ಜಾಗ. ಅಲ್ಲೇ ಅಂತೆ. ಅಷ್ಟು ಜಾಗದಲ್ಲೂ ರಕ್ತ ಚಿಮ್ಮಿತ್ತಂತೆ. ಈ ಕಡೆ ರುಂಡವಂತೆ, ಆ ಕಡೆ ಮುಂಡವಂತೆ. ನಾವ್ಯಾರೂ ನೋಡಾಕೆ ಹೋಗ್ನಿಲ್ಲ ಅಮ್ಮ. ಝರಿ ಹತ್ರ ಇಬ್ಬರ ಬಟ್ಟೆ ಬರೆ ಹಾಗೇ ಇತ್ತಂತೆ. ಮುಂಡೇವು ಬಟ್ಟೆಬಿಚ್ಚಿ ಸ್ನಾನ ಮಾಡಿರಬೇಕು. ಬಟ್ಟೇನ ಅಲ್ಲೇ ಬಿಸಾಕಿ ಈ ಜಲಜ ಎಲ್ಲಿ ಓಡಿಹೋಯ್ತೊ ದರಿದ್ರದ್ದು?’

ಬಚ್ಚಿ ಹೊಟ್ಟೆ ತುಂಬ ಉಂಡು, ಸೆರಗು ಮುಚ್ಚಿ ಮಕ್ಕಳಿಗೆ ಇನ್ನಷ್ಟು ಕುಡಿಸುತ್ತ ಕೂತಳು. ಅಕ್ಕು ಒಳಗೆ ಎದ್ದು ಬಂದಳು. ಬಚ್ಚಿಯ ವಿವರಣೆ ಗೌರಿಯ ಕಿವಿಗೂ ಬಿದ್ದಿತ್ತು.

೩೧

ಸುರಗಿ ನೇತು ಹಾಕಿದ ಮೂಲೆಯಲ್ಲಿ ಕೂತು ಗೌರಿ ಆ ಸ್ಥಳದ ಪ್ರತಿಗಿಡವನ್ನೂ, ಮರವನ್ನೂ, ಉಬ್ಬು ತಗ್ಗುಗಳನ್ನೂ, ಝರಿಯನ್ನೂ ಕಂಡಳು. ಇನ್ನು ಅವಳಿಗೆ ಆ ಗುಡ್ಡ ಹಾಗೇ ಉಳಿಯದು. ಸುತ್ತಮುತ್ತಲಿನ ಬಂಡೆಗಳೆಲ್ಲ ಕರಿಯನ ಉದ್ಗಾರಗಳನ್ನು ಕೇಳಿವೆ; ಅವನ ರಕ್ತ ಚಿಮ್ಮುವುದನ್ನು ಕಂಡಿವೆ.

ಆವತ್ತು ಅಕ್ಕು ಅಡಿಗೆ ಮಾಡಲಿಲ್ಲ. ಕೇಶವ ಸಾಹುಕಾರರ ಮನೆಯಲ್ಲಿ ಭೂವರಾಹ ಪೂಜೆ ಮುಗಿಸಿದವನು ಸುದ್ದಿ ಕೇಳಿ ಸೀದ ಮನೆಗೆ ಬಂದಿದ್ದ. ಕೇಶವ ಮತ್ತು ಗೌರಿ ಸುಮ್ಮನೆ ಒಬ್ಬರನ್ನೊಬ್ಬರು ನೋಡಿಕೊಂಡರು.

ಮಧ್ಯಾಹ್ನವಾಗುತ್ತಿದ್ದಂತೆ ಗುಡ್ಡದಲ್ಲಿ ಸೇರಿದ್ದ ಪರವೂರವರು ಬಾಯಾರಿ ಮನೆಗೆ ಬಂದರು. ಅಕ್ಕುವೂ ಕೇಶವನೂ ನೀರು ಸೇದಿ ಸೇದಿ ಅವರಿಗೆ ಕುಡಿಯಲು ಕೊಟ್ಟರು. ಬೇಕಾದವರಿಗೆಂದು ಬಾವಿಯ ಕಟ್ಟೆಯ ಬದಿಯಲ್ಲೇ ಒಂದು ಬಾಳೆಲೆಯ ತುಂಬ ಜೋನಿಬೆಲ್ಲವನ್ನೂ ನೀರಿನ ಜೊತೆ ತೆಗೆದುಕೊಳ್ಳಲೆಂದು ಇಟ್ಟಿದ್ದರು.

ಕೊಲೆ ಬಿಟ್ಟರೆ ಎಲ್ಲರ ಬಾಯಲ್ಲೂ ಸ್ಥಳದ ಭೂತಗಳ ವಿಷಯ. ಅವರು ಕೂಡಿದ ಜಾಗದಲ್ಲಿ ಯಾವು ಯಾವುದೋ ದೆವ್ವಗಳು ನೆಲಸಿದ ಸ್ಥಾನಗಳು. ಅಲ್ಲಿ ಮರಕ್ಕೊಂದು ಚೌಡಿ, ಮೊಟ್ಟಿಗೊಂದು ಭೂತ, ಬನಕ್ಕೊಂದು ನಾಗರ. ಈಗ ಎಲ್ಲ ಮೈಲಿಗೆಯಾಗಿ ಬಿಟ್ಟಿದೆ. ಏನೇನೋ ಶುದ್ಧಿಯಾಗಬೇಕು. ಈ ಕಾರ್ಯಗಳಿಗೆ ಸಾಹುಕಾರರ ಸಹಾಯಬೇಕು. ಝರಿಯ ಪಕ್ಕದಲ್ಲೇ ಬ್ರಹ್ಮ ದೇವತೆಯಿದೆ ಎಂದು ಯಾರೋ ಅಂದರು. ಅದರ ಶುದ್ದಿಗೆ ಕೇಶವಯ್ಯನೇ ಬೇಕು.

ಮನೆಯಸುತ್ತ ಅಲ್ಲಿ ಇಲ್ಲಿ ತಾನೂ ಒಂದು ದೆವ್ವದಂತೆ ಗೌರಿ ತಿರುಗುತ್ತಾ, ನಿರ್ವಿಕಾರದ ಆಕಾಶ ನೋಡುತ್ತಾ ಇಡೀ ದಿನ ಕಳೆದಳು. ಸಂಜೆ ತಣ್ಣೀರಿನಲ್ಲಿ ಸ್ನಾನ ಮಾಡಿದಳು. ಕೂದಲನ್ನು ಹರಡಿಕೊಂಡು ಶುಭ್ರವಾಗಿ ಚಾವಡಿಯಲ್ಲಿ ನಿಂತವಳನ್ನು ನಿಧಾನವಾಗಿ ಏನೋ ಆವರಿಸಿದಂತೆ ಅನ್ನಿಸಿತು.

ಮೂಲೆಯಲ್ಲಿ ಕರಿಯ ತಂದುಕೊಟ್ಟ ಸುರಗಿಯ ಮಾಲೆಗಳು ಮೊಳೆಯಲ್ಲಿ ಜೋತಿದ್ದವು. ಕೆಲವು ಒಣಗಿದ್ದವು; ಇನ್ನು ಕೆಲವು ಒಣಗುತ್ತಾ ಇದ್ದವು. ಅಪೂರ್ವ ಸೂಕ್ಷ್ಮದ ಗಂಧವತಿ ಸುರಗಿ ಒಳಗಿದಷ್ಟೂ ಗಂಧವತಿಯಾಗಿ ಮನಸ್ಸಿನಲ್ಲಿ ಇಳಿದವು. ಗೌರಿಯ ಕಣ್ಣುಗಳು ಹೊಳೆಯುತ್ತ ಪಡೆದ ಶೋಭೆಯನ್ನು ಜಪ ಮುಗಿಸಿ ಹೊರಗೆ ಬಂದ ಕೇಶವ ಕಂಡ.

೩೨

ಕರಿಯನ ಕೊಲೆಯಾಗಿ ಎರಡು ದಿನಗಳಾಗಿದ್ದವು. ಸಾಕ್ಷಿಯಾಗಿ ಬಳಸಲು ಪೊಲೀಸರು ಜಲಜಳನ್ನು ಹುಡುಕುತ್ತಿದ್ದರು.

ಗೌರಿ ಎಂದಿನಂತೆ ರಾತ್ರೆ ಬೆಕ್ಕಿಗೆ ಹಾಲು ಹಾಕಿ, ಸಂಪಗೆ ಮರದ ಬುಡದಲ್ಲಿ ನಿಂತಾಗ ‘ಗೌರಮ್ಮ ಗೌರಮ್ಮ’ ಎಂದು ಮೊಟ್ಟುಗಳ ಸಂದಿಯಿಂದ ಕ್ಷೀಣವಾಗಿ ಕರೆದಂತಾಯಿತು. ಕರಿ ಬೆಕ್ಕು ತಲೆ ಎತ್ತಿ ನೋಡಿ, ಕೊಂಚ ಹಿಂಜರಿದು, ಮತ್ತೆ ಹಾಲಿಗೆ ಬಾಯಿ ಇಟ್ಟಿತು. ಗೌರಿ ಸದ್ದಾದ ಕಡೆ ನಡೆದಳು. ಅಳುತ್ತಿರುವುದು ಯಾರೆಂದು ನೋಡಿದರೆ ಜಲಜಳೇ.

‘ಒಳಗೆ ಬಾ’ ಎಂದು ಗೌರಿ ಕರೆದಳು.

‘ಮೈಮೇಲೆ ಬಟ್ಟೆಯಿಲ್ಲ’ ಎಂದಳು ಜಲಜ.

ಗೌರಿ ಒಳಗೆ ಬಂದು ತನ್ನದೊಂದು ಹಳೆಯ ಸೀರೆಯನ್ನು ಮೊಟ್ಟಿನ ಹಿಂದೆ ಅಡಗಿದ್ದ ಜಲಜಗೆ ಕೊಟ್ಟಳು. ಜಲಜ ತನ್ನ ಸೊಂಟದ ಉಡುದಾರಕ್ಕೆ ಸಿಕ್ಕಸಿದ್ದ ಒಣಗಿದ ಬಾಳೆಲೆಗಳನ್ನು ಬಿಚ್ಚಿ ಗೌರಿಕೊಟ್ಟ ಸೀರೆಯನ್ನು ಸುತ್ತಿಕೊಂಡು ಅಂಜುತ್ತ ನಡುಗುತ್ತ ನಿಂತಲೂ. ಗೌರಿ ಜಲಜಳ ಕೈ ಹಿಡಿದು ಒತ್ತಾಯಿಸಿ ಅವಳನ್ನು ಅಂಗಳಕ್ಕೆ ತಂದಳು.

‘ಅಕ್ಕು ಅಕ್ಕು ಜಲಜ ಇಲ್ಲಿದಾಳೆ ಬಾ ನೋಡು’ ಎಂದು ಕರೆದದ್ದೇ ನಡುಮನೆಯಲ್ಲಿ ಚಾಪೆ ಮೇಲೆ ಮಲಗಿದ್ದ ಅಕ್ಕವೂ, ಲಾಟೀನಿನ ಬೆಳಕಿನಲ್ಲಿ ಓದುತ್ತ ಕೂತ ಕೇಶವನು ಲಾಟೀನು ಹಿಡಿದೇ ಓಡಿ ಹಿತ್ತಲಿಗೆ ಬಂದು ತಲೆಬಾಗಿಸಿ ನಿಂತ ಜಲಜಳನ್ನು ನೋಡಿದರು.

ಅದೊಂದು ದೃಶ್ಯವೇ. ಕೂದಲು ಕೆದರಿದೆ, ಮುಖದ ಮೇಲೂ ಕೈಗಳ ಮೇಲೂ ತರಿದ ಗಾಯಗಳಾಗಿವೆ. ಮುಖ ಹಸಿದು ಬಾಡಿದೆ.

ಪ್ರಾಣಭಯದಿಂದ ಓಡಿಬಂದ ಜಂತುವಿನಂತೆ ಕಂಡ ಜಲಜಳಿಗೆ ಎರಡು ಕೊಡ ಬಿಸಿನೀರು ತಂದಿಟ್ಟು, ‘ಬಾವಿಕಟ್ಟೆ ಹತ್ತಿರ ಸ್ನಾನ ಮಾಡಿ ಬಾ’ ಎಂದು ಅಕ್ಕು ಗದರಿಸಿದಳು. ಅವಳು ಸ್ನಾನಮಾಡಿ ಬರುವುದರಲ್ಲಿ ತುಳಿಸಿಕಟ್ಟೆಯ ಹತ್ತಿರ ಹಿತ್ತಲಲ್ಲಿ ಬಾಳೆಲೆಹಾಕಿ ರಾತ್ರೆ ಊಟದ ನಂತರ ಮಿಕ್ಕಿದ್ದನ್ನೆಲ್ಲ ಅಕ್ಕು ಬಡಿಸಿದ್ದಳು.

‘ಈಗೇನೂ ನಿನ್ನ ಪುರಾಣಬೇಕಾಗಿಲ್ಲ. ಊಟಮಾಡು’ ಎಂದು ಅಕ್ಕು ಮತ್ತೆ ಗದರಿಸಿದ್ದೆ ಜಲಜ ವಿಧೇಯಳಾಗಿ ಹಾಕಿದ್ದನ್ನು ಗಬಗಬನೆ ತಿಂದು ಎಲೆ ಬಿಸಾಕಿ ಕೈತೊಳೆದು ಕುಕ್ಕುರುಕಾಲಲ್ಲಿ ಕೂತು ಮಂಡಿಯಮೇಲೆ ತಲೆಯಿಟ್ಟು ಅಳತೊಡಗಿದಳು.

‘ರಾತ್ರೆ ಇಲ್ಲೇ ಮಲಕ್ಕೊ. ಏನಾದರೂ ನೀನು ಎದ್ದು ಹೋದಿಯೋ ಊರವರು ನಿನ್ನ ಬಡಿದು ಸಾಯಿಸ್ತಾರೆ; ನಿನ್ನ ಅಮ್ಮನಿಗೆ ನಾನು ಹೇಳಿ ಕಳಿಸ್ತೀನಿ. ಪೊಲೀಸರಿಗೆ ನೀನು ಹಾಜರಾಗಬೇಕು; ಅವರು ನಿನ್ನ ಏನೂ ಮಾಡಲ್ಲ. ನಿನ್ನ ಅವ್ವನೇ ನಿನ್ನ ಕರಕೊಂಡು ಹೋಗಲಿ. ಈಗ ಸ್ವಲ್ಪ ತೆಪ್ಪಗಿರು;

ಅಕ್ಕು ಜೋರು ಮಾಡಿದ್ದರಿಂದ ಜಲಜಗೆ ತಾನೊಂದು ತಪ್ಪು ಮಡಿದ ಹುಡಗಿಯೆಂದು ಮಾತ್ರ ಅನ್ನಿಸಿರಬೇಕು. ಎಲ್ಲ ಬೈಗಳಕ್ಕೂ ಹೂ ಹೂ ಎಂದು ಬಿಕ್ಕುತ್ತ ಚಾವಡಿಯಲ್ಲಿ ಒಂದು ಚಾಪೆಯ ಮೇಲೆ ಒರಗಿದಳು. ಹೊಟ್ಟೆಗಷ್ಟು ಬಿದ್ದಿದ್ದರಿಂದ, ಅಕ್ಕುವಿನ ಬೈಗಳದ ಶಿಕ್ಷೆಯೂ ಆಗಿಬಿಟ್ಟಿದ್ದರಿಂದ ಜಲಜ ಗಾಢವಾಗಿ ನಿದ್ದೆ ಮಾಡಿದಳು.

ಬೆಳಗಿನ ಝಾವ ಎಲ್ಲರಿಗಿಂತ ಮೊದಲೇ ಎದ್ದು ಕೊಟ್ಟಿಗೆಗೆ ಹೋದ ಗೌರಿಯ ಹಿಂದೆ ನಿಂತು ಜಲಜ ‘ಗೌರಮ್ಮ’ ಎಂದು ಮೃದುವಾಗಿ ಕರೆದಳು.

ಗೌರಿ ತಿರುಗಿ ನೋಡಿದಾಗ ಜಲಜ ತನ್ನ ಕತ್ತಿನಲ್ಲಿ ಒಂದು ಕೆಂಪು ರೇಷ್ಮೆ ದಾರಕ್ಕೆ ಕಟ್ಟಿದ್ದ ಎರಡು ಹುಲಿಯುಗರನ್ನು ಹೊರ ತೆಗೆದು ತೋರಿಸಿದಳು. ಇಮ್ಮುಖವಾಗಿ ಬೆಳ್ಳಿಯಲ್ಲಿ ಕಟ್ಟಿದ್ದ ದಪ್ಪನೆಯ, ಇನ್ನೂ ಚೂಪು ಉಳಿದ, ಮಾಸಿದ ಉಗುರುಗಳು, ಬಹು ಹಳೆಯವು. ಭಯ ನಿವಾರಣೆಗೆಂದು ಮಕ್ಕಳ ಕತ್ತಿಗೆ ಕಟ್ಟುವ ಉಗುರುಗಳು. ಬಾಲೆಯಾಗಿದ್ದಾಗ ಇಂಥ ಒಂದು ಜೊತೆ ತನ್ನ ಕತ್ತಿನಲ್ಲಿತ್ತು; ಆಮೇಲೆ ಗಂಗೆಯ ಕತ್ತಿನಲ್ಲಿ. ಆದರೆ ಇದಕ್ಕಿಂತ ಅವು ಚಿಕ್ಕವು, ಈಗ ದೇವರ ಮನೆಯಲ್ಲಿರುವ ಒಂದು ಡಬ್ಬಿಯಲ್ಲಿವೆ…. ಮುಂದೆ ಹುಟ್ಟುವ ಮಗುವಿಗೆಂದು ಅಕ್ಕು ರಕ್ಷಿಸಿದ್ದಾಳೆ.

ಜಲಜ ಯಾಕೆ ಹೀಗೆ ಮಾಡುತ್ತಿದ್ದಾಳೆ ಗೌರಿಗೆ ತಿಳಿಯದೆ ಅವಳನ್ನು ಪ್ರಶ್ನಾರ್ಥಕವಾಗಿ ನೋಡಿದಳು.

‘ಕರಿಯ ಕೊಟ್ಟದ್ದು’ ಎಂದಳು ಜಲಜ. ‘ಅವರ ಅಜ್ಜನ ಅಜ್ಜ ಹಿಡಿದಿದ್ದ ಹುಲೀದಂತೆ ಬಾಳ ಹಳೇ ಕಾಲದ್ದಂತೆ. ಬಾಲನಿದ್ದಾಗ ಅವನ ಕತ್ತಲ್ಲಿತ್ತಂತೆ. ಆ ಮೇಲೆ ಅವನ ಅಮ್ಮ ಕರಿಯನ ಮಕ್ಕಳಿಗೆ ಇರಲೀಂತ ಬಚ್ಚಿಟ್ಟಿತ್ತಂತೆ. ನಿಮಗೆ ಕೊಡೂಂತ ಅವನ ಅಮ್ಮನೇ ಕೊಟ್ತಂತೆ. ನಮ್ಮ ಗೌರಮ್ಮ ಊರಿನ ದೇವಿ ಥರ. ಅವರ ಕೊರಳಲ್ಲಿ ಇದಿರಬೇಕು, ಆಮೇಲೆ ನಿನಗೆ ಮಕ್ಕಳಾದ ಮೇಲೆ ಆ ಮಾತಾಯಿ ನಿನ್ನ ಮಗೂಗೆ ಇಕಾ ತಗಾ ಅಂತ ಎತ್ತಿಕೊಟ್ಟರೆ ನಮ್ಮ ಪುಣ್ಯ ಅಂತ ಅವನ ಅಮ್ಮ ಅಂದಿತ್ತಂತೆ. ಕರಿಯ ನಿಮಗೆ ಕೊಡಕ್ಕೇಂತ ತಂದು ನನಗೆ ತೋರಿಸ್ದ. ನನಗೆ ಆಸೆಯಾಯ್ತು. ಒಂದೆರಡು ದಿನ ಹಾಕ್ಕೊಂಡಿರ‍್ತೀನೋ, ದಮ್ಮಯ್ಯ ಅಂತ ಬೇಡಿಕೊಂಡದೆ ಅಂತ ಕೊಟ್ಟಿದ್ದ. ದಿನಾನೂ ಅವ ಕೊಡು ಕೊಡು ಗೌರಮ್ಮನ ಕತ್ತಲ್ಲಿ ನಾನದನ್ನ ನೋಡಬೇಕು ಅಂತಾಣೇ ಇದ್ದ. ಸಆಯೋಕೆ ಮುಂಚೇನೂ ಹೇಳಿದ್ದ. ನಿಮಗಿದನ್ನ ಕೊಟ್ಟರೆ ಅವನ ಕೊನೇ ಆಸೆ ಪೂರೈಸಿದಂತಾಗತ್ತೆ’.

ಉಮ್ಮಳಿಸಿ ಬಂದ ಅಳುವನ್ನು ಜಲಜ ತಡೆದುಕೊಂಡಿದ್ದನ್ನು ನೋಡಿ, ಗೌರಿಗೂ ಉಮ್ಮಳಿಸಿದಂತಾಯ್ತು.

‘ನನಗದು ಬೇಡ. ನಿನ್ನ ವಸ್ತು ನಿನಗೇ ಇರಲಿ’ ಎಂದು ಹೇಳಬೇಕೆಂದುಕೊಂಡಳು.

ಆದರೆ ಏನೂ ಹೇಳಲಾರದೆ ಜಲಜಳ ಬೆಚ್ಚಿದ ಮೃಗದ ಕಣ್ಣುಗಳನ್ನೂ, ಅವಳ ಬತ್ತಿದ ಮುಖವನ್ನೂ ನೋಡಿದಳು. ಅಕ್ಕರೆಯಲ್ಲಿ ತಲೆ ಬಾಗಿಸಿ, ಕತ್ತು ತೋರಿ ಸನ್ನೆ ಮಾಡಿದಳು.

ಮುಟ್ಟಲಾರದ ಸಂಕೋಚದಲ್ಲಿ ಜಲಜ ಗೌರಿಯನ್ನು ಮುಟ್ಟಿ, ಹುಲಿಯುಗುರಿನ ಸರವನ್ನು ಅವಳ ಕೊರಳಲ್ಲಿ ಸುತ್ತಿ ಗಂಟು ಹಾಕಿದಳು. ಕರಿಯನ ಕತ್ತಿನಲ್ಲಿದ್ದು, ಆಮೇಲೆ ಜಲಜಳ ಕತ್ತಿನಲ್ಲಿದ್ದು, ಇಬ್ಬರ ಮೈಯ ಬೆವರಿನಿಂದ ಒದ್ದೆಯಾದ ಸರ. ಅದನ್ನು ಕಟ್ಟುವಾಗ ಜಲಜಲ ಬೆಚ್ಚಗಿನ ಬೆರಳುಗಳು ಅದುರಿದ್ದವು. ಆಲಜ ಗೌರಿಗಿಂತ ಕೊಂಚ ಕುಳ್ಳಿಯುಆದ್ದರಿಂದ ಅವಳ ಉಮ್ಮಳದ ಉಸಿರು ಗೌರಿಯ ಕತ್ತಿನ ಮೇಲೆ ಆಡಿತ್ತು. ಹುರಿ ಮಾಡಿದ ಕೆಂಪು ರೇಷ್ಮೆಯದಾರ ಅಲ್ಲಿ ಇಲ್ಲಿ ನೂಲೆದ್ದರೂ ಗಟ್ಟಿಯಾಗಿತ್ತು.

ಗೌರಿ ಒಳಹೋಗಿ ದೇವರಿಗೆ ದೀಪ ಹಚ್ಚಿ ನಮಸ್ಕಾರ ಮಾಡಿ, ಅದನ್ನು ತನ್ನ ತಂದೆಯ ಹಿತ್ತಾಳೆ ಟ್ರಂಕಿನಲ್ಲಿ ಹರಿದುಹೋದ ಅಳಸಿಂಗರಾಚಾರ್ಯರ ಭಾಗವತವನ್ನು ರಕ್ಷಿಸಲೆಂದು ಇದ್ದ ಚೀಲದಲ್ಲಿಟ್ಟು ಬೀಗ ಹಾಕಿದಳು. ಕೇಶವನಿಗೂ ತಿಳಿಯದ ಗುಟ್ಟಾಗಿ ಉಳಿದದ್ದು ಕರಿಯ ಕೊಟ್ಟ ಈ ಹುಲಿಯು ಗುರು ಮಾತ್ರ.

ಬೆಳಗಾದ ಮೇಲೆ ಹಕ್ಕು ಜಲಜಳ ಅಮ್ಮನನ್ನು ಕರೆಸಿದಳು. ‘ಮಕ್ಕಳನ್ನು ನೀನು ಹೀಗೆ ಬೆಳೆಸೋದ’ ಅಂತ ಅವಳಿಗೆ ಛೀಮಾರಿ ಹಾಖಿ, ‘ಜಲಜನ್ನ ಗುಟ್ಟಾಗಿ ಈಗ ಸೀದ ಪೊಲೀಸ್ ಠಾಣೆಗೆ ಕರಕೊಂಡು ಹೋಗು, ಹಾಗೇ ಬಸ್ ಹಿಡಿದು ಸಿದ ಅವಳ ಅಜ್ಜಿ ಮನೆಗೆ ಕನ್ನಡಾ ಜಿಲ್ಲೆಗೆ ಕರಕೊಂಡು ಹೋಗಿ ಬಿಟ್ಟು ಬಾ’ ಎಂದು ಅವಳ ಖರ್ಚಿಗೆಂದು ತನ್ನ ಹತ್ತು ರೂಪಾಯಿಗಳನ್ನು ಕೊಟ್ಟಳು. ‘ಮಳೆಗಾಲಕ್ಕೆ ಮುಂಚೆ ಇದನ್ನ ನನಗೆ ಕೊಟ್ಟರೆ ಸಾಕು’ ಎಂದಳು.

ಹೀಗೆ ತನಗೊಂದು ದಾರಿ ತೋರಿದಂತಾದ ಮೇಲೆ, ತನ್ನ ಸಮಾಧಾನಕ್ಕೂ ಅಕ್ಕಮನ್ನ ಸಮಾಧಾನಕ್ಕೂ ಹಿತ್ತಲಲ್ಲಿ ಸಿಕ್ಕ ಕೋಲೆಯೊಂದನ್ನು ಎತ್ತಿ ತಂದು ಜಲಜನ ಅಮ್ಮ ಹಿಂದೆ ಮುಂದೆ ನೋಡದೆ ಮಗಳನ್ನು ಹೊಡೆದಳು. ಅಕ್ಕಪಕ್ಕದಲ್ಲಿ ಯಾರಿಗೂ ಕೇಳದಂತೆ, ಅದರ ಅಕ್ಕುಗೆ ಕೇಳುವಂತೆ, ‘ಯಾಕಿದು ನನ್ನ ಹೊಟ್ಟೇಲಿ ಹುಟ್ಟಿತೋ ಬೇವರ್ಸಿ ಹಾದರಗಿತ್ತಿ ಮುಂಡೆ; ಎಂದು ಗೋಗರೆದು, ಅತ್ತು ಸುರಿಯುತ್ತಿದ್ದ ಸಿಂಬಳವನ್ನು ಒರೆಸಿಕೊಂಡು, ಚಳಿಯ ನೆವದಲ್ಲಿ ಕಂಬಳಿಕೊಪ್ಪೆಯಿಂದ ಮುಖ ಮುಚ್ಚಿಕೊಳ್ಳುವಂತೆ ಮಗಳಿಗೆ ಗದರಿಸಿ ಹೇಳಿ ತೀರ್ಥಹಳ್ಳಿಗಿದ್ದ ಮೊದಲ ಬಸ್ಸನ್ನು ಹಿಡಿಯಲು ಒಳದಾರಿಯಲ್ಲಿ ಮಗಳ ಜೊತೆ ಹೊರಟುಹೋದಳು.

* * *