ಮೃಗಯಾ ವ್ಯಾಜದಿನೊರ್ಮೆ ಶಂತನು ತೊೞಲ್ತರ್ಪಃ
ಪಳಂಚಲ್ಕೆತ’ನ್ಮೃಗ ಶಾಬಾಕ್ಷಿಯ ಕಂಪು –
ಕೃಷ್ಣ ಮಧುಪಂಬೋಲ್ ಸೋಲ್ತು,
ಕಂಡೊಲ್ದು,
ನ’ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು –
ನೀಂ ಬಾ ಪೋಪಮ್ ಎಂದಂಗೆ
ಮೆ’ಲ್ಲಗೆ ತತ್ ಕನ್ಯಕೆ ನಾಣ್ಚೆ –
ಬೇಡುವಡೆ ನೀವೆಮ್ಮಯ್ಯನಂ ಬೇಡಿರೇ’ ಎಂಬುದಂಸರಳ ಪಂಪ ಭಾರ
(
ಸಂ: ಡಾ.ಎಲ್. ಬಸವರಾಜು)

ಚಂದುವನ್ನು ರಮಿಸಲು ಈಗ ಹೆಚ್ಚಾಗಿ ಕೇಶವ ತಕಲಿಯನ್ನು ಬುಗುರಿಯಂತೆ ತಿರುಗಿಸಿ ಅದರಲ್ಲಿ ಜನಿವಾರದ ನೂಲನ್ನು ಎಳೆದು ತೋರಿಸುವುದು; ತನ್ನಷ್ಟಕ್ಕೆ ತಾನೇ ನುಡಿದುಕೊಳ್ಳುವುದು:

ಕೃಷ್ಣಶಾಸ್ತ್ರಿಗಳು ನುಡಿದಂತೆ ಅಕ್ಕುಗೆ ತಾಯ್ತನ ಪ್ರಾಪ್ತವಾದ್ದನ್ನು ತಾನು ನೋಡಿಯಾಯಿತು. ಅವರ ಇನ್ನೊಂದು ಭವಿಷ್ಯದ ಪ್ರಕಾರ ದೇವಿಯಾದ ಗೌರಿ ಒಬ್ಬ ಗಂಧರ್ವರೂಪದ ನರನ ಕೈಹಿಡಿದರೂ ಹಿಡಿದಾಳು.

ನರರೂಪ ಧರಿಸಬೇಕಾಗಿ ಬಂದ ಪಾಡಿನಿಂದ ಹಲವು ದೇವಿಯರು ನರಸಂಸರ್ಗದ ಮುಖೇನವೇ ತಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮರ್ತ್ಯಸ್ಥಿತಿಯಿಂದ ಪಾರಾಗಬೇಕಾಗಿ ಬರುವ ಕಥೆಗಳೆಲ್ಲವೂ ಗೊತ್ತಿರುವ ಕೇಶವ ಪುರಾಣದ ಗಂಗೆಯನ್ನೂ, ಜಲದಿವ್ಯದಲ್ಲಿ ಪಾರಾದ ಅಷ್ಟವಸುಗಳನ್ನೂ, ಭಗೀರಥನಿಗೆ ಒಲಿದು ಕೈಲಾಸದಿಂದ ಶಿವನ ಜಟೆಯಿಂದಿಳಿದು ಬಂದ, ತಾನು ಮಿಂದು ಬರಬೇಕೆಂದಿರುವ ಕಾಶಿಯ ಗಂಗೆಯನ್ನೂ, ಮನೆಯಲ್ಲಿದ್ದು ಯಾವುದೋ ದಿವ್ಯ ಮೃಗದ ಬೆನ್ನು ಹತ್ತಿ ಹೊರಟೇ ಹೋದ ಗಂಗೆಯನ್ನೂ, ಉಟ್ಟಸೀರೆ ತೊಟ್ಟ ಕುಪ್ಪಸದಲ್ಲೇ, ಈ ದಯಿನೆಗುಡ್ಡವೆಂಬ ಪುಣ್ಯ ಕ್ಷೇತ್ರದಲ್ಲೇ ದೇವಿಯಾಗಿ ಬಿಟ್ಟ ಗೌರಿಯನ್ನೂ ಕೂಡಿಸಿ ಆಡಿಸಿ ಪುರಾಣಗೊಳಿಸಿಕೊಳ್ಳುತ್ತ ಒಬ್ಬನೇ ಕೂತಾಗ ತನ್ನಷ್ಟಕ್ಕೆ ಮುಗುಳ್ನಗುತ್ತ ಇರುತ್ತಾನೆ. ಈಗ ಗೌರಿ ತನ್ನ ಹಡೆ ಹರಟೆಗೆ ಹೆಚ್ಚಾಗಿ ಸಿಗಳು; ಸಾಹುಕಾರರ ಮಗಳು ವಿಮಲ ಚಂದುವನ್ನು ಒಗ್ಗಿಸಿಕೊಳ್ಳಲು ಹೆಚ್ಚಾಗಿ ಅಕ್ಕು ಜೊತೆ ಇಲ್ಲೇ ಇರುವುದರಿಂದ, ಗೌರಿ ಸಾಹುಕಾರರ ಶುಶ್ರೂಷೆಗೆಂದು ದೇವನ ಹಳ್ಳಿಯಲ್ಲೇ ಹೆಚ್ಚು ಕಾಲ ಕಳೆಯುತ್ತಾಳೆ.

ನಮ್ಮ ಗೌರಿ ಕೈ ಹಿಡಿಯುವ ಗಂಧರ್ವ ಇಲ್ಲೆಲ್ಲಿ ಇದ್ದಾನು? ನಮ್ಮ ಕಾಲದ ಗಂಧರ್ವರಿರುವುದೆಲ್ಲ ಈಗ ಪಟ್ಟಣಗಳಲ್ಲಿ. ವಿಮಾನಗಳಲ್ಲಿ ಖಂಡಾಂತರ ಹಾರಾಡುತ್ತಲೋ, ಸ್ನಾಯುಗಳ ಶಕ್ತಿಯ ಬದಲಾಗಿ, ಸ್ವಿಚ್ಚುಗಳ ಬಲದ ಮೇಲೆ ತಮ್ಮೆಲ್ಲ ಆಸೆಗಳನ್ನು ಫಲಿಸಿಕೊಳ್ಳುತ್ತಲೋ, ಮಹಾಭಾರತದ ಸಂಜಯನಂತೆ ತಾನು ಕೂತಲ್ಲೇ ಇಡೀ ಜಗತ್ತನ್ನು ನೋಡುತ್ತಲೋ, ಆಗ್ನೇಯಾಸ್ತ್ರ, ಬ್ರಹ್ಮಾಸ್ತ್ರಗಳನ್ನೂ ನಾಚಿಸುವ ಅಸ್ತ್ರಗಳಿಂದ ವೈರಿಗಳನ್ನು ಸುಡುತ್ತಲೋ ಇರುವ ಅಂಥ ಗಂಧರ್ವ ಇಲ್ಲೆಲ್ಲಿ ಬಂದಾನ? ಬಂದರೂ ಇಂಥ ಒಂದು ವಿದ್ಯುತ್ ವಿಹೀನವಾದ ಭೂಪ್ರದೇಶದಲ್ಲಿ ಅವನೆಲ್ಲಿ ಇದ್ದಾನು? ಇರದೇ ಹೋದಲ್ಲಿ ಗೌರಿಯಂತಹ ದೇವಿಯರನ್ನು ಸೃಷ್ಟಿಸಬಲ್ಲ, ಭೂವರಾಹನಾದ ಶ್ರೀವಿಷ್ಣು ನೆಲಸಿರುವ, ಈ ಮಲೆನಾಡಿನ ದಯಿನೆ ಗುಡ್ಡವನ್ನು ತೊರೆದು ಈ ನಮ್ಮ ದೇವಿ ಗಂಧರ್ವನ ಕುದುರೆ ಏರಿ ಎಲ್ಲಿಗಾದರೂ ಹೋಗಿಬಿರುವುದು ಸಾಧ್ಯವೆ? ಸಾಧುವೆ?

ಹೀಗೆ ಕೇಶವ ಹಡೆ ಹಡೆಯಾಗಿ ಮಾತಾಡುವ ಭಾಗವತನಂತೆ ತನಗೇ ಆಡಿಕೊಳ್ಳುತ್ತ, ತಕಲಿ ಸುತ್ತುತ್ತ ಕೂರಲು ಕಾರಣವಿತ್ತು. ಗೌರಿಯ ದೇವೀ ಶೋಭೆಯೇ ಒಂದು ದೊಡ್ಡ ಸಮಸ್ಯೆಯಾಗಿ ಬೆಳೆದು ಬಿಡುವುದೆ? ಆ ಮಹಾರಾಯಿತಿ, ಕರಿಯನ ತಾಯಿ, ತಾನೇ ಒಂದು ದೇವಿಯಾಗಿ ಆಗೀಗ ಕಾಣಿಸಿ ಕೊಳ್ಳುವುದಿರಲಿ, ಮೈಮೇಲೆ ಬಂದಾಗಲೆಲ್ಲ ‘ನನಗಿಂತ ದೊಡ್ಡ ದೇವಿ ಇಲ್ಲೇ ಇದಾಳೆ. ಗೌರಮ್ಮನಿಂದ ಮುಟ್ಟಿಸಿಕೊಳ್ಳಿ ನಿಮ್ಮ ಕಷ್ಟಪರಿಹಾರವಾಗಿಬಿಡುತ್ತದೆ’ ಎಂದು ಬಿಡುತ್ತಾಳಂತೆ. ಎಲ್ಲರೂ ಇಗ ಇಲ್ಲಿ ಬರುವವರೇ. ತಮ್ಮ ಮಕ್ಕಳನ್ನು ಗೌರಿಯಿಂದ ಮುಟ್ಟಿಸಿಕೊಂಡು ಹೋಗುವವರೇ. ಗೌರಿದಿದು ಹಿಂಸೆ, ರೇಗುತ್ತಾಳೆ; ಆದರೆ ಕಾಟ ತಡೆಯಲಾರದೆ ಮುಟ್ಟಿಯೂ ಬಿಡುತ್ತಾಳೆ. ಅವಳು ಮುಟ್ಟಾಗಿದ್ದರೂ ‘ಪರವಾಯಿಲ್ಲ, ಅಮ್ಮ ಮುಟ್ಟಿಬಿಡಿ, ಆಮೇಲೆ ಸ್ನಾನ ಮಾಡಿದರಾಯಿತು’ ಎನ್ನುತ್ತಾರೆ. ಮಕ್ಕಳನ್ನಿರಲಿ, ಅವರು ಪೇಟೆಗೆ ಹೋಗಿ ತಂದ ಔಷಧಿಯ ಬಾಟಲಿಯನ್ನೂ ಗೌರಿಯಿಂದ ಮುಟ್ಟಿಸುತ್ತಾರೆ. ಗೌರಿ ಅಡಗಿ ಕೂರುವಂತಾಗಿ ಬಿಟ್ಟಿದೆ. ಯಾರಾದರೂ ಗಂಧರ್ವ ಬಂದು ಅವಳನ್ನು ಹಾರಿಸಿಕೊಂಡಾದರೂ ಹೋಗಲಿ ಎಂದು ಅಕ್ಕು ಕಾಯುವಂತಾಗಿಬಿಟ್ಟಿದೆ. ದೇವತೆಯಾಗಿ ಬಿಡುವ ಪಾಡಿನಷ್ಟು ಕಷ್ಟದ ಪಾಡು ಮತ್ತೊಂದಿಲ್ಲವೇನೊ!

ಈಗ ಹೆಚ್ಚು ಕಾಲ ಮನೆಯಲ್ಲೇ ಇರುವ ವಿಮಲಳೂ ಕೇಶವನ ಮಾತಿಗೆ ತನ್ನ ಮಾತೂ ಕೂಡಿಸಿ ಇನ್ನಷ್ಟು ಬಣ್ಣ ಕಟ್ಟಿ ಗೌರಿಯನ್ನು ಅಕ್ಕುಗೆ ದೇವಿಯೆಂದು ನಂಬಿಸಲು ಹೊರಟಂತಿದೆ. ಹಾಸಿಗೆ ಹಿಡಿದು ಬಿಟ್ಟ ಮಂಜಯ್ಯನನ್ನು ನೋಡಲು ಬಂದವರೆಲ್ಲ ಉಪಚಾರಕ್ಕಾಗಿ ಏನಾದರೂ ಸಮಾಧಾನದ ಮಾತನ್ನು ಆಡಬೇಕಲ್ಲವೆ? ‘ಇವತ್ತು ನೋಡೋಕೆ ನೀವು ಎಷ್ಟೋ ವಸಿ; ಮುಖ ಗೆಲುವಾಗಿರುವಂತೆ ಕಾಣುತ್ತೆ’ ಎಂದರೆ ಮಂಜಯ್ಯ ಮುಖ ತಿರುಗಿಸಿ ಸುಮ್ಮನಿದ್ದು ಬಿಡುತ್ತಾರೆ. ಇನ್ನು ಮುಂದೆ ಯಾವ ಸುಳ್ಳುಗಳನ್ನೂ ಕೇಳಿಸಿಕೊಳ್ಳದಂತೆ ಇದ್ದು ಹೋಗಿಬಿಡಬೇಕೆಂದು ಅವರಿಗೆ ಆಸೆಯಾಗಿರುವುದು ಗೌರಿಗೆ ಮಾತ್ರ ತಿಳಿದಂತಿದೆ. ಸೌಮ್ಯವಾಗಿಯೇ ಅವಳು ಆಡುವ ಒಂದು ಮಾತು, ಪರಿಣಾಮದಲ್ಲಿ ತುಂಡೆರಡು ಎನ್ನುವಂತೆ ಇರುತ್ತದೆ ಅಲ್ಲವೆ?

ಮಂಜಯ್ಯನಿಗೆ ಮಲಗಿದಲ್ಲೇ ಈಗ ಎಲ್ಲ ಆಗಬೇಕು. ಮಲಮೂತ್ರ ವಿಸರ್ಜನೆಗೂ ಎದ್ದು ಹೋಗಲಾರರು. ಅವರ ಆಳುಗಳಲ್ಲಿ ಬಲವಾದವನೊಬ್ಬ ಅವರನ್ನು ಎತ್ತಿ ಕೂರಿಸಿ ಆಸ್ಪತ್ರೆಯಲ್ಲಿ ಮಲಮೂತ್ರ ವಿಸರ್ಜನೆ ಮಡಿಸುವಂತೆ ಮಾಡಿಸುತ್ತಾನೆ. ಒಮ್ಮೆ ತಡೆದುಕೊಳ್ಳಲಾರದೆ ಹಾಸಿಗೆಯಲ್ಲೇ ಅವರ ಮಲವಿಸರ್ಜನೆಯಾಗಿ ಮಂಜಯ್ಯ ಹೇಳಲಾರದೆ ಹೇಸಿಕೊಂಡಿದ್ದರು. ಗೌರಿ ಅವರನ್ನು ನಾರುವುದನ್ನು ಗಮನಿಸಿ, ಮೂಗುಮುಚ್ಚಿಕೊಂಡು ‘ಥೂ’ ಎಂದು ಒಂದು ಮಗುವನ್ನು ಗದರಿಸುವಂತೆ ಅವರನ್ನು ಗದರಿಸಿ, ಅವರನ್ನು ಮುಗ್ಗುಲಾಗಿಸಿ ಹಾಸಿಗೆಯನ್ನೂ ಅವರನ್ನೂ ಶುಚಿಮಾಡಿದ್ದಳು. ಅವರ ಬೆತ್ತಲೆ  ಮೈಮೇಲೆ ಪೌಡರ್ ಹಾಕಿ ಅವರನ್ನು ಗೇಲಿಮಾಡಿದ್ದಳು. ‘ನಿಮಗಿಂತ ಚಂದುನೇ ವಾಸಿ’ ಎಂದದ್ದು ಅಷ್ಟೇ ಅಲ್ಲ; ಮಂಜಯ್ಯ ಘನತೆಯನ್ನು ಮೂತಿ ಮಾಡಿ ಅಣಕಿಸಿದ್ದಳು. ಅವರು ಹುಡುಗನಿದ್ದಾಗ ಯಾರೋ ಜೊತೆಗಾರ ಅವರನ್ನು ಹೀಗೆ ಅಣಕಿಸಿದ್ದಿರಬಹುದು. ಗೌರಿಗೂ ಮಂಜಯ್ಯನಿಗೂ ನಡುವೆ ಬೆಳೆದ ಸಲುಗೆಯನ್ನು ಗಮನಿಸಿದ್ದ ಆಳು ಶೀನಪ್ಪ ‘ಸಾಹುಕಾರ್ರ ಹತ್ತಿರ ಹೀಗೆ ಯಾರಾದ್ರೂ ಈ ಪ್ರಪಂಚದಲ್ಲಿ ಮಾತಾಡಿದ್ದು ಕಂಡವ್ರು ಇದಾರ?’ ಎಂದು ದೇವನಹಳ್ಳಿಯಲ್ಲೇ ಸುದ್ದಿ ಮಾಡಿದ್ದ.

ಈಚೆಗೆ ಗೌರಿ ಮೌನವಾಗಿ ಅವರಿಗೆ ಕೊನೆಗಾಲ ಸಮೀಪಿಸುತ್ತಿದೆಯೆಂದು ಸೂಚಿಸುವ ಸನ್ನೆಗಳು, ಸಹಜವೆಂಬಂತೆ ಅವಳು ದಾಕ್ಷಿಣ್ಯ ಮಾಡದೆ ಆಡಿಬಿಡುವ ಮಾತುಗಳು ಅವರ ಜೀವಕ್ಕೆ ಹಿತವೆನ್ನಿಸುತ್ತವೆ ಎಂಬುದನ್ನು ಅಪ್ಪನ ಸಲಿಗೆಯಿಲ್ಲದ ವಿಮಲ ಗಮನಿಸಿದ್ದಳು. ಒಂದು ದಿನ ಅಪ್ಪನ ಪಕ್ಕ ಕೂತು ಅವರಿಗೆ ಗಟ್ಟಿಯಾಗಿ ಓದುತ್ತಿದ್ದ ಗೌರಿ ಪುಸ್ತಕ ಮಡಚಿಟ್ಟು, ಅವರ ಕಡೆ ನೋಡಿ, ಸುಮ್ಮನೆ ಹೇಳಿಬಿಟ್ಟಳು:

‘ನಿಮ್ಮ ಮಗ ಮುಂದಿನ ವಾರ ಬರ‍್ತಾರಂತೆ. ನಿಮಗೆ ಮಂಗಳೂರಲ್ಲಿ ಒಂದು ಸಂಸಾರ ಇದೆಯಲ್ಲವ? ಅವರನ್ನ ಕರೆಸಿಕೊಳ್ಳಿ’

ಮಂಜಯ್ಯ ಕೃತಜ್ಞತೆಯಿಂದ ಅವಳ ಕೈ ಹಿಡಿದು ಅವಳನ್ನೇ ಅಚ್ಚರಿಯಲ್ಲಿ ನೋಡುತ್ತ ಹೇಳಿದರು:

‘ಕರೆಸು’

ಅಪ್ಪನ ಇನ್ನೊಂದು ಪಕ್ಕದಲ್ಲಿ ಕೂತು ತನ್ನ ಮಾತು ಕೇಳಿಸಿಕೊಂಡು ಬೆರಗಾದ ವಿಮಲಗೆ ಗೌರಿ ಹೇಳಿದಳು:

‘ನಿನ್ನ ಗಂಡನನ್ನು ಮಂಗಳೂರಿಗೆ ಕಳಿಸಿ ಅಪ್ಪನ ಸಂಸಾರಾನ್ನ ಕರೆಸಿಕೊ.’

ವಿಮಲ ಕೂಡಲೆ ಮಿಂಗೇಲಿಯನ್ನು ನೋಡಲು ಎದ್ದು ಹೋದಳು.

ಎಲ್ಲರಿಗೂ ತಿಳಿದಂತೆ ಅವನು ಮಗುವಿನ ಅಪ್ಪ; ಆದರೆ ಕಾನೂನಿನ ಪ್ರಕಾರವಾಗಲೀ ಶಾಸ್ತ್ರೋಕ್ತವಾಗಿಯಾಗಲೀ ಇನ್ನೂ ಗಂಡನಲ್ಲ. ಹೀಗಾಗಿ ಮಿಂಗೇಲಿ ಹಲವು ಅಂತರಗಳ ದೇವನಹಳ್ಳಿ ಮನೆಯಲ್ಲಿ ಇನ್ನೂ ತನ್ನ ಸ್ಥಳ ಯಾವುದೆಂದು ತಿಳಿಯದೆ ಈಗ ಹೆಚ್ಚಾಗಿ ವಿಮಲಳ ರೂಮಿನಲ್ಲೇ ಇರುತ್ತಿದ್ದ. ಅವನ್ನಲ್ಲಿ ಆಗಿರುವ ಒಂದೇ ಬದಲಾವಣೆಯೆಂದರೆ ಅವನು ತನ್ನ ಮೀಸೆಯನ್ನು ಬೋಳಿಸಿಕೊಂಡದ್ದು ಮತ್ತು ಈಗ ಅವನು ಮನೆಯಲ್ಲಿ ಪಂಚೆಯನ್ನು ಉಟ್ಟುಕೊಂಡು ಓಡಾಡುತ್ತಿದ್ದುದು. ಮನೆಯ ಒಬ್ಬ ಸಂಬಂಧಿಯಂತೆ ಪಂಚೆಯುಟ್ಟೇ ಹೋಗಿ ಇಂಜಕ್ಷನ್ ಕೊಡುವ ಡಾಕ್ಟರನ್ನು ಕಾರಿನಲ್ಲಿ ಕರೆತರುತ್ತಿದ್ದ. ಇಂಗ್ಲಿಷಿನಲ್ಲಿ ಮಾತಾಡಲೇ ಬೇಕಾದ ಅನಿವಾರ್ಯವಿಲ್ಲದವನಂತೆ ಹೊರಗಿನವರ ಜೊತೆ ವ್ಯವಹರಿಸುತ್ತಿದ್ದ.

ವಿಮಲನ ಆದೇಶವಾದ್ದೇ ಮಿಂಗೇಲಿ ಲಗುಬಗೆಯಿಂದ ಕಾರು ತೆಗೆದುಕೊಂಡು ಮಂಗಳೂರಿಗೆ ಹೋಗಿ ಸಾಹುಕಾರರ ಇನ್ನೊಂದು ಸಂಸಾರವನ್ನು ಕರೆದುಕೊಂಡು ಬಂದ.

ದೇವನಹಳ್ಳಿಯ ಮನೆಯಲ್ಲಿ ಎಂದೂ ಕಾಲಿರಿಸದ ಮೀನಾಕ್ಷಿ ಮತ್ತು ಮಗಳು ವಿನೋದಿನಿ ಪಡಸಾಲೆ ಹತ್ತಿ ನಿಂತರು. ಆಳೊಬ್ಬ ಅವರ ಟ್ರಂಕನ್ನು ಒಳಗೆ ತಂದ. ಮೀನಾಕ್ಷಿ ಮಂಗಳೂರಿನಿಂದ ತಂದಿದ್ದ ಕಿತ್ತಲೆಹಣ್ಣನ್ನು ತಾನೇ ಚೀಲದಲ್ಲಿ ಹಿಡಿದು ನಿಂತಿದ್ದಳು. ವಿಮಲ ತಾನು ಎಂದೂ ಫೋಟೋಗಳಲ್ಲಿ ಕೂಡ ನೋಡದ, ಆದರೆ ಯಾರೆಂದು ಗೊತ್ತಿರುವ ಇಬ್ಬರನ್ನೂ ಮಿಕಮಿಕ ನೋಡುತ್ತ ನಿಂತಳು.

ಒಬ್ಬಳು ಚಿಕ್ಕ ತಾಯಿಯಾಗಬೇಕು; ಇನ್ನೊಬ್ಬಳು ತಂಗಿಯಾಗಬೇಕು.

ಸಾಹುಕಾರರ ಮಂಗಳೂರಿನ ಹೆಂಚಿನ ಕಾರ್ಖಾನೆಯ ಮ್ಯಾನೇಜರೆಂದು ತನ್ನದೇ ಆದ ಸ್ಥಾನವನ್ನು ಆಸ್ತಿಯ ವಹಿವಾಟಿನಲ್ಲಿ ಪಡೆದಿದ್ದ, ಗತ್ತಿನ ಹೆಂಗಸಿನಂತೆಯೂ ನೋಡುವುದಕ್ಕೆ ಕಾಣುತ್ತಿದ್ದ, ಮೀನಾಕ್ಷಿ ಕೂಡ ಕೈಯಲ್ಲಿ ಹಣ್ಣಿನ ಚೀಲ ಹಿಡಿದು ತಬ್ಬಿಬ್ಬಾಗಿ ಇನ್ನೂ ಕೆಲವು ನಿಮಿಷ ಹಾಗೇ ನಿಂತಿದ್ದಳು – ಫೋಟೋಗಳಲ್ಲಿ ಮಾತ್ರ ತನಗೆ ಗೊತ್ತಿದ್ದ ತನ್ನ ಇನ್ನೊಬ್ಬ ‘ಮಗಳ’ನ್ನು ಹೇಗೆ ಕರೆಯಬೇಕು, ಹೇಗೆ ಮಾತಾಡಿಸಬೇಕು ತಿಳಿಯದವಳಂತೆ.

ವಿನೋದಿನಿ ಪಡಸಾಲೆಯಲ್ಲಿ ನೇತುಹಾಕಿದ್ದ ನಾಯಕರ ಚಿತ್ರಗಳನ್ನು ಸುಮ್ಮನೇ ನೋಡುತ್ತಿದ್ದಳು – ತಾನು ಈ ಮನೆಯವಳು ಅಲ್ಲ ಎಂದು ತಿಳಿದಿದ್ದವಳಂತೆ.

ಹೊಸಿಲಬಳಿ ನಿಂತ ಗೌರಿಯೇ ತನಗೆ ಏನನ್ನಾದರೂ ಸೂಚಿಸಬಹುದೆಂದು ವಿಮಲ ಕಾದವಳಂತೆ ಕಣ್ಣನ್ನು ಎತ್ತುತ್ತ, ತಗ್ಗಿಸುತ್ತ ಎದುರು ನಿಂತ ಪರಿಚಯವಿಲ್ಲದವರನ್ನು, ಆದರೆ ರಕ್ತ ಸಂಬಂಧಿಗಳಾದ ಕುಟುಂಬದವನ್ನು ನೋಡುತ್ತ ನಿಂತಳು.

ಚಿಕ್ಕಮ್ಮ ಎಂದು ಕರೆಸಿಕೊಳ್ಳಬೇಕಾದ ಮೀನಾಕ್ಷಿಯದು ಚೆಲುವಾದ ಮುಖ; ಕೊಂಚ ತೋರವಾದ ಮೈಕಟ್ಟು. ತುರುಬು ಹಾಕಿ ಮಲ್ಲಿಗೆ ಮುಡಿದಿದ್ದಾಳೆ. ಸುಗಂಧ ಪೂಸಿಕೊಂಡು ಅವಳ ಮೈ ದೂರದಿಂದಲೇ ಘಮ ಘಮ ಎನ್ನುತ್ತಿದೆ. ತನ್ನ ಅಮ್ಮನಿಂದ ಪಡೆಯದೇ ಇದ್ದದ್ದನ್ನು ಅಪ್ಪ ಇವಳಿಂದ ಪಡೆದಿರಬೇಕು. ಮನೆಯಲ್ಲಿ ಅಪ್ಪನದೊಂದು ಪ್ರಪಂಚವಾದರೆ, ಹೊರಗೆ ಇನ್ನೊಂದೇ ಅವರ ಪ್ರಪಂಚ ಇದ್ದಿರಬೇಕು.

ಆದರೆ ವಿನೋದಿನ ಮಾತ್ರ ತಾಯಿಯಂತೆ ಇರಲಿಲ್ಲ. ಒಂದು ಸಾದಾ ಬಿಳಿಸೀರೆಯುಟ್ಟು ಗೌರಿಯಂತೆಯೇ ನಡುವೆ ಬೈತಲೆ ತೆಗೆದು ಬಿಗಿಯಾಗಿ ಕಟ್ಟಿದ ಜಡೆಯಲ್ಲಿ ಈ ಎಲ್ಲದರಿಂದ ತಾನು ಸ್ವತಂತ್ರಳು ಎಂದು ತಿಳಿದಿರುವವಳಂತೆ ಕಾಣುತ್ತಾಳೆ. ಅವಳ ಕತ್ತಿನಲ್ಲಿ ಸರವೂ ಇಲ್ಲ. ಕೈಯಲ್ಲಿ ಗಾಜಿನ ಬಳೆಗಳು ಮಾತ್ರ. ಅವಳ ಕಣ್ಣುಗಳು ಅಪ್ಪನವೇ, ಗಂಭೀರವಾಗಿ ತನ್ನೆದುರು ಇರುವವರನ್ನು ದಿಟ್ಟಿಸುವ ಕ್ರಮದಲ್ಲಿ.

ಗೌರಿ ಮಾಡಿದ ಸನ್ನೆ ವಿಮಲಗೆ ಅರ್ಥವಾಗಿರಬೇಕು. ಮೀನಾಕ್ಷಿಯ ಕಾಲನ್ನು ಮುಟ್ಟಿ ನಮಸ್ಕಾರಮಾಡಿ ಮಲೆನಾಡಿನ ಹುಡುಗಿಯಂತೆ ‘ಬಂದಿರಾ’ ಎಂದಳು. ಮೀನಾಕ್ಷಿ ಕಣ್ಣೊರೆಸಿಕೊಂಡು, ಮುಜುಗರದಲ್ಲಿ ತಡವರಿಸಿ ‘ನಿಮ್ಮ’ ಎಂದು, ಆಮೇಲೆ ‘ಅಪ್ಪ ಹೇಗಿದಾರೆ’ ಎಂದಳು. ‘ಎಲ್ಲರ ಗುರುತೂ ಹಿಡೀತಾರೆ. ನಿಮ್ಮನ್ನ ಕರೆಸಕ್ಕೆ ಅವರೇ ಹೇಳಿದ್ದು’ ಎಂದು ವಿಮಲ ಹೇಳಿ, ‘ಬಚ್ಚಲಿಗೆ ಹೋಗಿ ಕಾಲು ತೊಳೆದುಕೊಳ್ಳಿ’ ಎಂದು ಒಳಗೆ ಕರೆದಳು. ವಿನೋದಿನಿಯನ್ನು ಪ್ರೀತಿಯಿಂದ ನೋಡಿ, ಅವಳ ಕೈ ಹಿಡಿದು ‘ವಿನೋದಿನಿ ಅಲ್ಲವ?’ ಎಂದಳು.

ಕೈ ಕಾಲು ತೊಳೆದಾದ ಮೇಲೆ ಮೀನಾಕ್ಷಿಯನ್ನು ಮಂಜಯ್ಯ ಮಲಗಿದ್ದ ರೂಮಿಗೆ ಗೌರಿ ಕರೆದೊಯ್ದಳು. ಕೊಂಚ ನಾರುತ್ತಿದ್ದ ಮಂಜಯ್ಯನ ಸನಿಯದಲ್ಲಿ ಅವರು ಬೊಂಬಾಯಿಯಿಂದ ತಂದುಕೊಟ್ಟ ವಿದೇಶೀ ಸುಗಂಧ ಪೂಸಿಕೊಂಡು ಬಂದಿದ್ದ ಮೀನಾಕ್ಷಿ ನಿಂತಳು. ಏನು ಹೇಳಬೇಕು, ಹೇಳಬಾರದು, ಮಲಗಿದವರನ್ನು ಮುಟ್ಟಬಹುದೊ, ಬಾರದೊ – ತಿಳಿಯದೆ ಮೀನಾಕ್ಷಿ ಪೆಚ್ಚಾಗಿ ನೋಡಿದಳು.

ಅವಳು ನೋಡದ ವೈಭವದ ಮನೆಯಲ್ಲಿ ತನಗೆ ಒಲಿದಾತ ಇರುವ ಪಾಡು ನೋಡಿ ಅವಳಿಗೆ ದುಃಖವಾಯಿತು. ತನ್ನ ಜೊತೆ ಮಲಗಿ ಸುಖಪಟ್ಟ ಮನುಷ್ಯನೊಬ್ಬ ತನ್ನನ್ನು ನೋಡದೆ ಸಾಯಬಹುದಿತ್ತು. ಸ್ಥಿತಿವಂತರ ಪೊಳ್ಳು ಮಾನವಂತಿಕೆಯಿಂದ ಹುಟ್ಟುವ ಪುಕ್ಕಲು ಹೊಲಸೆನ್ನಿಸಿತು. ಒಣಗಿದ ಮುಖದಲ್ಲಿ ಅವರ ಗುಳಿಬಿದ್ದ ಕಣ್ಣುಗಳನ್ನು ಕಂಡು, ತಮ್ಮ ರಹಸ್ಯ ಸಂಬಂಧದ ಮೋಜು – ಮೇಜುವಾನಿಗಳು ನೆನಪಾಗಿ ಹೇಸೆನ್ನಿಸಿತು.

ಅವರಿಗಿಂತ ಸುಮಾರು ಇಪ್ಪತ್ತು ವರ್ಷವಾದರೂ ಕಿರಿಯಳಾದ ಮೀನಾಕ್ಷಿ, ಇಟ್ಟುಕೊಂಡವವನ್ನು  ಒಲಿಸಲೆಂದೇ ಇರುವುದಕ್ಕಿಂತ ಕಿರಿಯಳೆಂಬಂತೆ ಅಲಂಕೃತಳಾಗಿರುತ್ತಿದ್ದ ವಯ್ಯಾರದ ಮೀನಾಕ್ಷಿ – ಈಗ ನಾರುತ್ತಿರುವ ದೇಹದ ಸುತ್ತ ಹರಡುತ್ತಿರುವ ವಿದೇಶೀ ಸುಗಂಧ ಅವರಿಗೆ ಹೇಸಿರಬೇಕು. ‘ಬಂದಿಯಾ’ ಎಂದೂ ಉಪಚಾರಕ್ಕೂ ಕೇಳದೆ ಮುಖ ತಿರುಗಿಸಿಕೊಂಡರು. ಗೌರಿ ಸುಲಭವಾಗಿ, ಏನೂ ಹಿಂದೆಗೆಯದಂತೆ, ಸರಳವಾಗಿ ಮೀನಾಕ್ಷಿಗೆ ಹೇಳಿಬಿಟ್ಟಳು:

‘ಅವರ ಮೂಗಿಗೆ ಈಗ ವಾಸನೆ ಏನೂ ಸಹಿಸಲ್ಲ. ಮೈ ತೊಳೆದುಕೊಂಡು ಸಾದಾ ಸೀರೆಯುಟ್ಟುಕೊಂಡು ಬನ್ನಿ ಅಮ್ಮ.’

ವಿನೋದಿನಿ ಹೆಚ್ಚು ಮಾತಾಡಳು. ತಂದೆಯ ಬಳಿಯಂತೂ ಅವಳಿಗೆ ಸಲಿಗೆಯಿಂದ ನಡೆದುಕೊಂಡು ಗೊತ್ತೇ ಇಲ್ಲ; ವಿಮಲಳಿಗೂ ತಂದೆಯ ಸಲಿಗೆಯಿಲ್ಲದಿದ್ದರೂ ಅವರ ಮಗಳೆಂದುಕೊಂಡೇ ಅವಳು ಬೆಳೆದದ್ದು ಅಲ್ಲವೆ? ತಾಯಿಗೂ ದೂರದಲ್ಲಿದ್ದು ವಿನೋದಿನಿ ಧಾರವಾಡದಲ್ಲಿ ಓದಿ ಬೆಳೆದದ್ದು. ಯಾರ ಮಗಳೆಂಬುದು ಅವಳನ್ನು ಬಾಧಿಸದ ಹಾಗೆ ಮಂಜಯ್ಯ ಅವಳನ್ನು ಓದಿಸಿ ಬೆಳೆಸಿದ್ದರು. ಅವಳ ಸಾದಾ ಸೀದಾ ನಡೆ ನುಡಿಗಳು ತಾಯಿಗೆ ಮುಂಚಿನಿಂದಲೂ ಸಮಸ್ಯೆಯೇ.

ಬಾಲ್ಯದಲ್ಲಿ ಅವಳಿಗೆ ಇಷ್ಟವಾಗಿದ್ದರೂ ಈಗ ಬೆಳೆದಮೇಲೆ ಅವಳು ಮೀನು ತಿನ್ನಳು. ಒಳ್ಳೆಯ ಸೀರೆ ಉಡಳು. ಮುಖಕ್ಕೆ ಸ್ನೋ ಹಚ್ಚಳು. ಕಾಫಿ ಕುಡಿಯಳು. ಸದಾ ಓದುತ್ತ ಕಾಲ ಕಳೆಯುವಳು. ಬಿ.ಎ ಪರೀಕ್ಷೆ ಮುಗಿದ ಮೇಲೆ ಪ್ರೈಮರಿ ಶಿಕ್ಷಕಿಯಾಗಿ ಕೆಲಸ ಮಾಡುವ ಇಚ್ಛೆಯಿಂದ ಅದರ ಟ್ರೈನಿಂಗ್ ಪಡೆದಿದ್ದಳು. ತನಗೆ ಮದುವೆ ಬೇಕಿಲ್ಲವೆಂದೂ ರಾಮಕೃಷ್ಣ ಮಠದ ಸನ್ಯಾಸಿಯಾಗುವ ಇಚ್ಛೆಯಿದೆಯೆಂದೂ ತಾಯಿ ಮೀನಾಕ್ಷಿಗೆ ಹೇಳಿ ಅವಳನ್ನು ಗಾಬರಿಗೊಳಿಸಿದ್ದಳು.

ವಿನೋದಿನಿಗೆ ತನ್ನ ಹೆಸರನ್ನು ಹೇಳಿಕೊಳ್ಳುವುದೇ ಮುಜುಗರದ ವಿಷಯವಾಗಿತ್ತು. ತಾಯಿ ಕೊಟ್ಟ ಹೊಸಕಾಲದ ಹೆಸರು ಅದು – ಕುಲ ಜಾತಿಗಳಿಗೆ ಹೊರತಾದ್ದು. ಹೆಸರನ್ನು ಕೇಳಿದ ಮೇಲೆ ಎಲ್ಲರೂ ಸಾಮಾನ್ಯವಾಗಿ ಪರಮ ಕುತೂಹಲಿಗಳಾಗಿ ಬಿಡುತ್ತಾರೆ. ಇವಳು ಯಾರು, ಯಾವ ಊರವಳು, ಯಾವ ಜಾತಿಯವಳು ಎಂಬುದನ್ನು ಹೇಗಾದರೂ ತಿಳಿಯಬೇಕೆಂದು. ಈ ಹಳ್ಳಿಯಲ್ಲಂತೂ ಆಳುಕಾಳುಗಳು ಈ ವಿನೋದಿನಿ ಎಲ್ಲಿಂದಲೋ ಬಂದವಳೆಂಬಂತೆ, ಯಾರೋ ದೂರದವಳೆಂಬಂತೆ ಹೆಸರನ್ನು ಮರೆತೋ, ಕರೆಯಲು ಬಾರದೆಯೋ ವಿಚಿತ್ರವಾಗಿ ವರ್ತಿಸುತ್ತಾರೆ. ಗೌರಿ ಜೊತೆ ಅವಳ ಮನೆಗೆ ಹೋದಾಗ ಅಕ್ಕು ಎರೆಡರಡುಬಾರಿ ಅವಳ ಹೆಸರು ಕೇಳಿ ತನಗೆ ಗೊತ್ತಿರುವ ಪುರಾಣಗಳಲ್ಲೆಲ್ಲ ಅಂಥ ಒಂದು ಹೆಸರಿಗಾಗಿ ಹುಡುಕುತ್ತಿರುವವಳಂತೆ ಕಂಡಿದ್ದಳು. ವಿನೋದಿನಿಗೆ ಇದರಿಂದ ತುಂಬ ನಾಚಿಕೆಯಾಗಿತ್ತು. ಕೇಶವ ಮಾತ್ರ ಅಕ್ಕುವನ್ನು ಹಾಸ್ಯಮಾಡಿ ಹೇಳಿದ್ದ.

‘ಬಂಗಾಳಿಗಳು ಬರೆಯೋ ಕಥೆಗಳಲ್ಲಿ ಹುಡುಗಿಯೊಬ್ಬಳನ್ನು ವಿನೋದಿನಿ ಅಂತ ಕರೆದರೆ ಅಕ್ಷಮ್ಯ ಕೇಳಿಸಿಕೊಳ್ಳಿ – ಅವಳು ಎಷ್ಟು ರೂಪವತಿ ಎಂಬೋದನ್ನ ವರ್ಣಿಸಬೇಕಾಗಿಯೇ ಇಲ್ಲ. ನುಗೋಕ್ಕೆ ಬಾರದೇ ಇರೋವರನ್ನ ನಮ್ಮ ಕಡೆ ವಿನೋದ ಅಂತ ಕರೀತಾರಲ್ಲ; ಹಾಗಲ್ಲ, ಇವರು ವಿನೋದಿನಿ ಎಂದರೆ ವಿನೋದಿನಿಯೇ’

ಕೇಶವನ ಮಾತು ಕೇಳಿ ಇನ್ನಷ್ಟು ಗಲಿಬಿಲಿಯಾಗಿತ್ತು ವಿನೋದಿನಿಗೆ. ಆದರೆ ನಕ್ಕಿದ್ದಳು.

ವಿನೋದಿನಿಗೆ ಗೌರಿ ತುಂಬ ಇಷ್ಟವಾಗಿ ಬಿಟ್ಟಿದ್ದಳು. ಒಮ್ಮೆ ನೋಡಿದರೆ ಗೌರಿ ಒಬ್ಬ ಪುರಾಣದ ಕನ್ಯೆಯಂತೆ ಕಾಣುವಳು, ಕಿರೀಟ ಮಾತ್ರ ಇಲ್ಲದ ಕನ್ಯೆಯಂತೆ; ಇನ್ನೊಮ್ಮೆ ಕಣ್ವಾಶ್ರಮದ ಋಷಿ ಕನ್ಯೆಯಂತೆ ಕಾಣುವಳು; ಮಗದೊಮ್ಮೆ ಕಾಡಿನಲ್ಲಿ ವಾಸಮಾಡಬೇಕಾಗಿ ಬಂದ ಐತಿಹ್ಯಗಳ ರಾಜಕುಮಾರಿಯಂತೆ ಕಾಣುವಳು. ಒಮ್ಮೆಯಾದರೂ ಗೌರಿ ಎಲ್ಲರಂತೆ ‘ನೀನು ಏನು ಓದಿದೀಯ? ಎಷ್ಟರವರೆಗೆ? ಏನು ಕೆಲಸ ಮಾಡಬೇಕೂಂತ ಇದೀಯ?’ಇಂಥ ಯಾವ ಪ್ರಶ್ನೆಯನ್ನೂ ಕೇಳಿದ್ದಿಲ್ಲ. ಆದರೆ ಮಾತ್ರ ಬಹುಕಾಲದ ಗೆಳೆತನವಿದ್ದವಳಂತೆ ದಿವ್ಯವಾಗಿ ತನ್ನನ್ನು ಕಂಡದ್ದೇ ನಸುನಗುವಳು.

ಹೆಚ್ಚೆಂದರೆ, ‘ನನಗೇನೋ ಕೆಲಸವಿದೆ; ನಿನ್ನ ಅಪ್ಪನ್ನ ಕೊಂಚ ಪುಸಲಾಯಿಸಿ ಗಂಜಿ ಕುಡಿಸ್ತೀಯ’ ಎನ್ನುವಳು. ವಿನೋದಿನಿ ಎಂದೂ ಅಪ್ಪನನ್ನು ಅಪ್ಪ ಎಂದು ಕರೆದವಳಲ್ಲ; ಮಗುವಾಗಿದ್ದಾಗ ಅವರ ತೊಡೆಯ ಮೇಲೂ ಪ್ರಾಯಶಃ ಕೂತವಳಲ್ಲ. ಅಪರೂಪಕ್ಕೆ ಅವಳು ರಜೆಯಲ್ಲಿ ಮನೆಗೆ ಬಂದಾಗ, ಅಷ್ಟೇ ಅಪರೂಪಕ್ಕೆ ಮಂಜಯ್ಯ ಮನೆಗೆ ಬಂದಿದ್ದರೆ ಅವರಿಗೆ ಅವಳು ಕಾಫಿಯನ್ನು ಒಳಗಿನಿಂದ ಅಮ್ಮನ ಇಚ್ಛೆಯ ಮೇರೆಗೆ ತಂದುಕೊಡುವುದುಂಟು. ಅಪ್ಪ ಮನೆಯಲ್ಲಿ ಇದ್ದುದು ಅವಳಿಗೆ ನೆನಪಿಲ್ಲ. ಮಂಗಳೂರಿನ ತಮ್ಮ ಬಂಗಲೆಯಲ್ಲಿ ಇಳಿದಿರುತ್ತಾರೆ. ಅಮ್ಮನೇ ಕಾರಲ್ಲಿ ಫ್ಯಾಕ್ಟರಿ ಕೆಲಸದ ನೆವದಲ್ಲಿ ಅವರ ಬಳಿ ಹೋಗಿದ್ದು ಬರುತ್ತಾಳೆ. ಆಗ ಅಮ್ಮ ಮಾಡಿಕೊಳ್ಳುವ ಶೃಂಗಾರ ಕಂಡು ವಿನೋದಿನಿಗೆ ಹೇಸಿಗೆಯಾಗುತ್ತದೆ.

ತನಗೆ ಯಾವತ್ತೂ ಏನನ್ನೂ ಕಡಿಮೆ ಮಾಡದ, ಎಲ್ಲರಿಗೆ ಗೊತ್ತಿದ್ದೂ ಯಾರೂ ಹಾಗೆಂದು ಗುರುತಿಸದ, ಈ ಅಪ್ಪನನ್ನು ಗೌರಿ ಮಾತ್ರ ತನ್ನ ಎದುರು ‘ನಿಮ್ಮ’ಅಪ್ಪನೆಂದು ಸರಳವಾಗಿಸಹಜವಾಗಿ ಹೇಳುವುದು. ಕಾಫಿಯನ್ನು ಕೊಟ್ಟು ಕಳುಹಿಸುವಾಗಲೂ ತಾಯಿ ಕೂಡ ಹೇಳುತ್ತಿದ್ದುದು,‘ಸಾಹುಕಾರ್ರಿಗೆ ಕೊಟ್ಟು ಬಾ’ ಎಂದು.

ದೇವನಹಳ್ಳಿಯ ಮನೆ ತನೆಗೆ ತೆರೆಯತೊಡಗಿದ ಅವಕಾಶದಲ್ಲಿ ವಿನೋದಿನಿ ಒಂದು ಬೆಳಗ್ಗೆ ಕೇಶವನ ಭೂವರಾಹ ಅರ್ಚನೆಯನ್ನು ಗೌರಿ ಜೊತೆಯೇ ಕೈಮುಗಿದು ನಿಂತು ನೋಡಿದಳು. ದೇವರಿಗೆ ಎತ್ತಿದ ಆರತಿಯನ್ನು ಕೇಶವ ಎದುರುಹಿಡಿದು ನಿಂತ. ಏನೋ ಹಿತವೆನ್ನಿಸಿ ಆರತಿಯ ದೀಪದ ಕುಡಿಗಳ ಮೇಲೆ ತನ್ನ ಅಂಗೈಗಳನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡಳು. ತನ್ನನ್ನು ಮುಟ್ಟಿನಿಂತಿದ್ದ ಗೌರಿ ಮೃದುವಾಗಿ ತಿವಿದು, ‘ನಿನ್ನ ಅಪ್ಪನಿಗೆ ಇವತ್ತು ನೀನೇ ಗಂಜಿ ತಿನ್ನಿಸಬೇಕು. ಎಷ್ಟು ತಿನ್ನಿಸ್ತೀಯ ನೋಡ್ತಿನಿ. ನನಗಿಂತ ಹೆಚ್ಚು ತಿನ್ನಿಸಿದರೆ ನೀನು ಗೆದ್ದಂತೆ’ ಎಂದು ಯಾವತ್ತೂ ಮಾಡದಂತೆ ಚೇಷ್ಟೆ ಮಾಡಿದಳು.

ಮಂಜಯ್ಯ ಅರ್ಧನಿದ್ದೆ ಅರ್ಧ ಎಚ್ಚರದಲ್ಲಿ ಇದ್ದರು. ವಿನೋದಿನಿ ಅವರ ಪಕ್ಕ ನಿಂತು ಎಂದೂ ಹಾಗವರನ್ನು ಕರೆಯದವಳು ‘ಅಪ್ಪ, ಸ್ವಲ್ಪ ಗಂಜೀನ್ನ ಈಗ ನೀವು ಕುಡೀಲೇ ಬೇಕು’ಎಂದಳು. ಗೌರಿಯನ್ನು ನೆನಪು ಮಾಡುವ ಈ ಮಗಳು ತನ್ನನ್ನು ಮೊದಲ ಬಾರಿಗೆ ಅಪ್ಪನೆಂದು ಕರೆದದ್ದು ನಿಧಾನವಾಗಿ ಮಂಜಯ್ಯನ ಮನಸ್ಸಿಗೆ ಇಳಿದಿರಬೇಕು. ಅವರ ಕಣ್ಣುಗಳಲ್ಲಿ ನೀರು ತೇಲಾಡುವುದನ್ನು ಕಂಡು ವಿನೋದಿನಿ, ಅವರನ್ನು ಎಬ್ಬಸಿ, ದಿಂಬಿನ ಮೇಲೆ ಒರಗಿಸಿ ಚಮಚದಲ್ಲಿ ಗಂಜಿಯನ್ನು ಕುಡಿಸಲು ಶುರುಮಾಡಿದಳು. ನಾಲ್ಕು ಚಮಚಕ್ಕೇ ಅವರು ಬೇಡವೆಂದರೂ, ಗೌರಿಯನ್ನು ಅವರಿಗೆ ನೆನಪುಮಾಡುವಂತೆ, ಅವಳಂತೆಯೇ ಕುಶಾಲಿನಲ್ಲಿ ಅವರನ್ನು ಗದರಿಸಿ ಹತ್ತು ಚಮಚ ಕುಡಿಸಿದಳು.

ಮೀನಾಕ್ಷಿಯೂ ತುರುಬಿಲ್ಲದೆ, ಹೂವಿಲ್ಲದೆ, ಅತ್ತರಿಲ್ಲದೆ ಅವರ ಬಳಿ ಈಗ ಸುಳಿದಾಡುವಳು. ರಸ್ತೆ ಮಗ್ಗುಲಿನ ಸಣ್ಣದೊಂದು ಹೋಟೆಲ್ ನಡೆಸುತ್ತಿದ್ದ ವೃದ್ಧಾಪ್ಯದಲ್ಲಿ ನರಳಿ ಸತ್ತ ತನ್ನ ತಂದೆ, ಮನೆಯ ಬಡತನ ಅವಳಿಗೆ ನೆನಪಾಗುವುದು. ಪಕ್ಕದ ಮನೆಯ ತೆಂಗಿನ ಮರದಿಂದ ಬಿದ್ದ ಕಾಯೊಂದನ್ನು ತಾನು ಗುಟ್ಟಾಗಿ ಎತ್ತಿಕೊಂಡು ತಂದದ್ದು, ಅದು ಗೊತ್ತಾಗಿ ಪಕ್ಕದ ಮನೆಯವರು ಎಬ್ಬಿಸಿದ ರಂಪ, ತಾಯಿಗಾದ ಅವಮಾನ ನೆನಪಾಗುವುದು.

ತನ್ನನ್ನು ಮಾತ್ರ ಮಂಜಯ್ಯ ಕರೆಸಿಕೊಂಡಿದ್ದಾರೆ, ಉಳಿದ ಅವರ ಪ್ರೇಯಸಿಯರನ್ನು ಅವರು ನೆನಪು ಮಾಡಿಕೊಂಡಿಲ್ಲ ಎಂಬುದು ಅವಳಿಗೆ ಏನೋ ಸಮಾಧಾನ ತಂದಂತೆ ಇತ್ತು. ಹೆಣ್ಣೆಂದರೆ ಬಾಯಿಬಿಡುತ್ತಿದ್ದ ಖಯಾಲಿಯ ಮನುಷ್ಯ ಮೈಯಲ್ಲಿ ನಾರುತ್ತ, ತನಗೇ ಹೇಸಿಕೊಳ್ಳುತ್ತ ಮಲಗಿರುವುದನ್ನು ಕಂಡು ಮೀನಾಕ್ಷಿಗೆ ದುಃಖವಾಗುವುದು. ಅವರು ಸತ್ತ ಮೇಲೆ ವಿನೋದಿನಿಯೂ ತಾನೂ ಅಂತೂ ಬೀದಿ ಪಾಲಾಗುವುದಿಲ್ಲ. ದೇವನಹಳ್ಳಿ ಮನೆಯ ಧಾರಾಳದಿಂದಲೂ ವಿಮಲಳ ಸೌಜನ್ಯದಿಂದಲೂ ಅವಳಿಗೆ ಇದು ಖಾತ್ರಿಯಾಗಿದೆ. ಅಪ್ಪನಂತೆಯೇ, ಒಳ್ಳೆಯ ಸ್ವಭಾವದ ಮಗಳು, ಅವಳೂ ನೊಂದವಳು ಅಲ್ಲವೆ? ಮಗ ಹೇಗೆ ಅವಳಿಗೆ ಗೊತ್ತಿಲ್ಲ.

ಮಿಂಗೇಲಿಯಂತೂ ಅವಳನ್ನು ತುಳುವಿನಲ್ಲೇ ಮಾತಾಡಿಸಿ ಪ್ರಿಯನಾಗಿದ್ದಾನೆ. ಇನ್ನು ಯಾರಿಗೂ ಈ ಮನೆಯಲ್ಲಿ ತುಳುಬಾರದು – ಕನ್ನಡಾ ಜಿಲ್ಲೆಯಿಂದ ಕೆಲಸಕ್ಕೆ ಬಂದ ಆಳುಕಾಳುಗಳನ್ನು ಬಿಟ್ಟರೆ. ಮೀಂಗೇಲಿಯ ಜೊತೆಗಿನ ಅವಳ ಆಪ್ತತೆ, ತುಳು ತಂದ ಆಪ್ತತೆ, ಇಬ್ಬರನ್ನೂ ಈ ಮನೆಯ ವಾಸ್ತುವಿನಲ್ಲೇ ಇದ್ದ ಮೇಲುಕೀಳುಗಳ ಅಂತರಗಳಿಂದ ಬಿಡುಗಡೆ ಮಾಡಿದೆ. ಜರಿಯಂಚಿನ ಪಂಚೆಯಲ್ಲೂ ಕಾಣಿಸಿಕೊಳ್ಳುತ್ತಿದ್ದ ಮಿಂಗೇಲಿಗೆ ಈಗ ಹೊಸಬರ ಎದಿರು ಇಂಗ್ಲಿಷ್ ಮಾತಾಡಬೇಕಾದ ಅಗತ್ಯ ಬೀಳುತ್ತಿಲ್ಲ.

ಗೌರಿ ಒಂದು ಬೆಳಗ್ಗೆ ಹಜಾರದ ಬಲಭಾಗದಲ್ಲಿದ್ದ ಭೂವರಾಹ ದೇವಾಲಯದಲ್ಲಿ ರಂಗೋಲೆ ಇಡುತ್ತ ಕೂತಿದ್ದಳು. ದೇವನಹಳ್ಳಿಯ ಧಾರ್ಮಿಕಲೋಕದ ಮಡಿಮೈಲಿಗೆಗಳ ನಡಾವಳಿಗಳೇನೆಂದು ತಿಳಿಯದ ವಿನೋದಿನಿ ಅವಳ ಪಕ್ಕ ನಿಂತು, ‘ಸ್ನಾನವಾಗಿದೆ, ನಾನೂ ರಂಗೋಲೆಯಿಡಬಹುದೆ, ನಿಮ್ಮ ಜೊತೆ ಸೇರಿ’ ಎಂದಳು. ಗೌರಿ ಗೆಲುವಾಗಿ ಅವಳ ಕಡೆನೋಡಿ ‘ಓಹೋ, ಇಡಿ’ ಎಂದಳು. ಮತ್ತೆ ಅವಳ ಒದ್ದೆ ಕೂದಲನ್ನು ನೋಡಿ, ‘ಮೊದಲು ತಲೆ ಬಾಚಿಕೊಳ್ಳಿ. ನಾನು ಬಾಚುತೀನಿ, ಆಗಬಹುದ?’ ಎಂದಳು. ವಿನೋದಿನಿಗೆ ತುಂಬ ಖುಷಿಯಾಗಿಬಿಟ್ಟಿತು. ಹೊರಗೆ ಬಂದು ಬಿಸಿಲಿನಲ್ಲಿ ಕೂತಳು. ಸಿಕ್ಕುಬಿಡಿಸುವ ಹಣಿಗೆಯನ್ನು ತಂದು ಗೌರಿ ಅವಳ ಬೆನ್ನಿಗೆ ಊತು ತುಂಬ ಜೋಪಾನವಾಗಿ ವಿನೋದಿನಿಗೆ ಹಿತವಾಗುವಂತೆ ನಿಧಾನವಾಗಿ ಕೂದಲನ್ನು ಚೂರು ಚೂರೇ ಹಣಿಗೆಯಿಂದ ಬಿಡಿಸುತ್ತ ‘ನಿಮ್ಮ ಕೂದಲು ತುಂಬ ಚೆನ್ನಾಗಿದೆ. ನಾನು ಒಂದು ದಿನ ನಮ್ಮಲ್ಲಿ ಸಿಗೋ ಮತ್ತಿ ಸೊಪ್ಪಿನಿಂದ ಕೂದಲನ್ನು ತೊಯ್ಯಿಸಿ ಸೀಗೆ ಹಚ್ಚಿ ಎರೀತೇನೆ’ ಎಂದಳು. ಕೂದಲು ಒಣಗಲಿ ಎಂದು ನೀರು ಜಡೆಹಾಕಿ ಅವಳನ್ನು ರಂಗೋಲೆ ಹಾಕಲು ಕರೆದುಕೊಂಡು ಹೋದಳು.

ವಿನೋದಿನಿ ಸಂಸ್ಕೃತ ಕಲಿತವಳು. ಪದ್ಮಸನದಲ್ಲಿ ರೇಷ್ಮೆ ಮಡಿಯುಟ್ಟುಕೂತಿರುವ, ಸದಾ ನಗುತ್ತಿರುವ ಸ್ನೇಹಮಯ ಕಣ್ಣುಗಳ, ಉದ್ದ ಕೂದಲನ್ನು ಶಿಖೆಯಾಗಿ ಕಟ್ಟಿ ಅದರಲ್ಲಿ ತುಳಸಿ ಮುಡಿದಿರುವ, ಉಪನಿಷತ್ತಿನ ಋಷಿಗಳನ್ನು ನೆನಪಿಗೆ ತರುವ ತೆಜಸ್ಸಿನ ಕೇಶವನ ಸ್ಪಷ್ಟವಾದ ಉಚ್ಚಾರದ ಮಂತ್ರಗಳನ್ನು ಕೇಳಿಸಿಕೊಳ್ಳುವುದು ಅವಳಿಗೆ ಇಷ್ಟ. ಇದನ್ನು ಊಹಿಸದ ಕೇಶವ ಇನ್ನಷ್ಟು ಗಟ್ಟಿಯಾಗಿ, ಸ್ಪಷ್ಟವಾಗಿ ಮಂತ್ರ ಪಠಿಸುತ್ತಾನೆ. ಅದರ ಅರ್ಥಗಳನ್ನೂ ಒಂದೆರಡು ಬಾರಿ ವಿನೋದಿನಿಗೆ ವಿವರಿಸಿದ್ದಾನೆ. ತನ್ನ ಮಾತುಗಳನ್ನು ಕೇಳಿಸಿಕೊಳ್ಳುವ ಅವಳ ತತ್ಪರತೆಯಿಂದ ಖುಷಿಯಾಗಿ ಕೇಶವ ‘ಏ ಗೌರಿ, ನನಗೆ ಹೊಸ ಕಿವಿಗಳು ಸಿಕ್ಕಿವೆ’ ಎಂದರೆ ಗೌರಿ, ‘ಕಿವಿ ಮಾತ್ರ. ಭಾಗವತರೇ ಗೊತ್ತಿರಲಿ, ಅವಳು ರಾಮಕೃಷ್ಣಾಶ್ರಮದ ಸನ್ಯಾಸ ತಗೋವವಳು. ಮುಂದೆ ನೀನು ಅವಳಿಗೆ ನಮಸ್ಕಾರ ಮಾಡಬೇಕಾಗುತ್ತೆ’ ಎಂದು ಗುಟ್ಟಾಗಿ ಹಾಸ್ಯ ಮಾಡುವಳು.