ಘನಶ್ಯಾಮ ಲಂಡನ್ನಿನಿಂದ ಬೊಂಬಾಯಿಗೆ ವಿಮಾನದಲ್ಲಿ ಬಂದು, ಬೊಂಬಾಯಿಯಿಂದ ಅವತ್ತೇ ಸಿಕ್ಕಿದ ಇನ್ನೊಂದು ವಿಮಾನದಲ್ಲಿ ಬೆಂಗಳೂರು ತಲುಪಿ, ಬೆಂಗಳೂರಿನಲ್ಲಿ ಮಂಜಯ್ಯನಿಗೆ ಬೇಕಾದವರಾದ ಜಿಲ್ಲೆಯ ಮಂತ್ರಿಗಳು ಒತ್ತಾಯಿಸಿ ಕಳುಹಿಸಿದ ಕಾರಿನಲ್ಲಿ ದೇವನಹಳ್ಳಿಗೆ ಬಂದು, ಯಾರೊಡನೆಯೂ ಹೆಚ್ಚು ಮಾತಾಡದೆ, ಸೀದಾ ಹೋಗಿ ಅಪ್ಪನ ಮಂಚದ ಪಕ್ಕ ನಿಂತು, ‘ಅಪ್ಪ, ಬಂದಿದೀನಿ. ಹೇಗೆ ಅನ್ನಿಸ್ತ ಇದೆ ಈಗ’ ಎಂದ.

ಮಂಜಯ್ಯ ಕಣ್ಣು ತೆರೆದರು. ಗೌರಿ ಅವರನ್ನು ಎಬ್ಬಿಸಿ ದಿಂಬಿಗೊರಗಿ ಕೂರಿಸಿ ಮಗನ ಜೊತೆ ಮಾತಾಡಲು ಬಿಟ್ಟು ಹೊರಗೆ ಹೋದಳು. ಮಗನನ್ನು ನೋಡಿದ್ದೇ ಮಂಜಯ್ಯನ ಮುಖ ಅರಳಿದ್ದು ನೋಡಿ, ‘ನಿನ್ನ ಅಣ್ಣನನ್ನು ನೋಡಿದರೆ ಯಾರಾದರೂ ಅರಳಿಬಿಡುತ್ತಾರೆ’ ಎಂದು ವಿಮಲಗೆ ಹೇಳಿ ಗೌರಿ ಅವಳನ್ನು ಸಂತೋಷಪಡಿಸಿದ್ದಳು.

ಮಂಜಯ್ಯನಿಗೆ ಅವರ ಇಪ್ಪತ್ತನೆಯ ವಯಸ್ಸಿನಲ್ಲಿ ಹುಟ್ಟಿದ ಮೊದಲ ಸಂತಾನವಾದ ಈಮುದ್ದಿನ ಮಗ ಘನಶ್ಯಾಮನಿಗೆ ಈಗ ಮುವ್ವತ್ತು ವರ್ಷ. ಅವನು ದೇವನಹಳ್ಳಿಯಲ್ಲಿ ಹೆಚ್ಚು ಕಾಲ ಕಳೆದವನೇ ಅಲ್ಲ. ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ತಣ್ಣೀರು ಸ್ನಾನದ ಬಾಲ್ಯವನ್ನು ಶಿಸ್ತಿನಲ್ಲಿ ಕಳೆದಮೇಲೆ, ಮಹರಾಜ ಕಾಲೇಜಿನಲ್ಲಿ ಬಿ.ಎ., ಬನಾರಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎ. – ಕೇಂಬ್ರಿಜ್‌ನಲ್ಲಿ ಡಾಕ್ಟರೇಟ್ ಮಾಡಿದ ಅವನಿಗೂ ವಿಮಲಳಿಗೂ ಮೂರು ವರ್ಷಗಳ ಅಂತರವಾದರೂ ಇತ್ತು. ವಿಮಲ ಹುಟ್ಟಿ ಹತ್ತು ವರ್ಷಗಳಲ್ಲೇ ತಾಯಿಯನ್ನು ಕಳಕೊಂಡಳು. ಹೀಗಾಗಿ ಮಕ್ಕಳು ದೇವನಹಳ್ಳಿಯಲ್ಲಿ ಬೆಳೆದದ್ದು ಕಡಿಮೆ.

ಅಪ್ಪನಿಗೆ ಮಗನೆಂದರೆ ರಾಜಕುಮಾರನೇ ಇದ್ದಂತೆ. ಯಾಕೆಂದರೆ ತನ್ನ ರಾಜತ್ವದ ಬಯಕೆಯನ್ನು ಈಡೇರಿಸಬಲ್ಲ ಧಿರೋದಾತ್ತನಾಗಿ ಘನಶ್ಯಾಮ ಬೆಳೆದಿದ್ದ. ಸುಖಿ, ಆದರೆ ಕಷ್ಟಪಟ್ಟು ಕೆಲಸ ಮಾಡಬಲ್ಲವ. ಉದಾರಿ, ಆದರೆ ಜಾಣ. ನಿಲುವಿನಲ್ಲಿ ಕಾಣಲು ಬಲು ಸುಂದರ; ಆದರೆ ವೇಷಭೂಷಣಗಳಲ್ಲಿ ಸರಳ. ಯೂರೋಪಿನ ಜ್ಞಾನದಲ್ಲಿ ಪರಮಾಸಕ್ತ, ಆದರೆ ದೇಶಪ್ರೇಮಿ.

ಒಟ್ಟಿನಲ್ಲಿ ಅರವತ್ತರದ ದಶಕದ, ಅಂದರೆ ತನ್ನ ಆ ಕಾಲದ ಕೇಂಬ್ರಿಜ್ ದಿನಗಳ, ಕ್ರಾಂತಿಕಾರಿ ನಿಲುವಿನ ಆದರ್ಶವಾದಿ. ವಿಯಟ್ನಾಮಿನಲ್ಲಿ ಅಮೇರಿಕಾ ನೀತಿಗೆ ವಿರೋಧ, ಜಾತಿಪದ್ಧತಿಗೆ ವಿರೋಧ, ಕಪ್ಪು ಜನರ ಹೋರಾಟಕ್ಕೆ ಬೆಂಬಲ, ಬರ್ಟಾಂಡ್ ರಸೆಲ್ಲಿನ ವಿಚಾರವಾದ್ಯಕ್ಕೆ ನಿಷ್ಠೆ… ಇತ್ಯಾದಿ ಇತ್ಯಾದಿಯಾಗಿ ಕಾಲಕ್ಕೆ ತಕ್ಕ ನಿಲುವಿನವನಾಗಿ ಅವನ ವಾರಿಗೆಯವರಿಗೆ ಪ್ರಿಯನಾದವ.

ಮಂಜಯ್ಯನಿಗೆ ತುಂಬ ಇಷ್ಟವಾದದ್ದೆಂದರೆ ಚಿಕ್ಕಂದಿನಿಂದ ಅವನು ರಾಜಕೀಯದಲ್ಲಿ ಆಸಕ್ತನೆಂಬುದು. ಡಿಬೇಟುಗಳಲ್ಲಿ ಯಾವಾಗಲೂ ಅವನಿಗೆ ಮೊದಲ ಬಹುಮಾನ. ಪ್ರಬಂಧ ರಚನೆಯಲ್ಲೂ ಹೆಸರು ಮಾಡಿದಾತ. ಮೈಸೂರಿನಲ್ಲಿ ಓದುವಾಗ ಕೆಲವು ದಿನ ಕಮ್ಮ್ಯುನಿಸ್ಟರಿಗೂ, ಇನ್ನು ಕೆಲವು ದಿನ ರಾಯಿಸ್ಟರಿಗೂ, ಕೆಲವು ಕಾಲ ಜಯಪ್ರಕಾಶರಿಗೂ ಒಲಿದಿದ್ದು, ಕ್ರಮೇಣ ನೆಹರೂ ನಾಯಕತ್ವದಲ್ಲಿ ಬಲವಾದ ನಂಬಿಕೆಯಿಟ್ಟವನು. ಬನಾರಸ್ಸಿನಲ್ಲಿದ್ದಾಗ ಸಮಾಜವಾದೀ ಒಲವಿನ ಯುವ ಕಾಂಗ್ರೆಸ್ ಗುಂಪಿನಲ್ಲಿ ಮುಖ್ಯನಾದವನು. ತಂದೆಯ ಜಮೀನುದಾರಿ ಒಲವಿನ ಚಟುವಟಿಕೆಗಳನ್ನು ವಿರೋಧಿಸಿದವನು.

ಕೇಂಬ್ರಿಜ್‌ನಲ್ಲಿದ್ದಾಗ ಹಾಗೊಂದು ಪ್ರಬಂಧವನ್ನೂ ಬರೆದು ಅವನು ಪ್ರಕಟಿಸಿದ್ದ. ಇದರಿಂದ ಮಂಜಯ್ಯನಿಗೆ ಹೆಮ್ಮೆಯೇ ಆಗಿತ್ತು. ಮೋತಿಲಾಲರಿಗೆ ವಿರೋಧವಾದ ನಿಲುವಿನ ನೆಹರೂ ಮಾರ್ಗದಲ್ಲೇ ತನ್ನ ಮಗನೂ ನಡೆಯುತ್ತಿದ್ದಾನೆಂದು ಬೀಗುತ್ತಲೇ ತನ್ನ ರಾಜಕೀಯ ಸ್ನೇಹಿತರಿಗೆಲ್ಲ ಅವನು ಬರೆದದ್ದನ್ನು ತೋರಿಸಿದ್ದರು. ತಾನೇನು ಆಗದಿದ್ದರೂ ಮಗನಾದರೂ ಅಧಿಕಾರ ಹಿಡಿದಾನೆಂದು ಕನಸು ಕಟ್ಟಿದ್ದರು. ತನ್ನ ಮಗನಂಥವರಿಗೂ ಅಡ್ಡಿಯಾಗಬಹುದಾದ ಬ್ರಾಹ್ಮಣ ವಿರೋಧಿಯಾದ ಸದ್ಯದ ಜಾತೀಯವಾದೀ ರಾಜಕೀಯವೆಂದರೆ ಮಂಜಯ್ಯನಿಗೆ ಕೋಪ. ಜನಜೀವನದ ಸಮಸ್ಯೆಗಳಲ್ಲಿ ಭಾಗಿಯಾಗಗೊಡದ ಗೊಡ್ಡು ಬ್ರಾಹ್ಮಣ್ಯವೆಂದರೂ ಕೋಪ. ಆದರೂ ಅವರು ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದಾರೆಂದು ಕೇಳಿ ಘನಶ್ಯಾಮ ಸಿಟ್ಟಾಗಿ ಅವರಿಗೆ ಬರೆದಿದ್ದ. ಅವನು ಸಿಟ್ಟಾಗುವುದೂ, ತಾನು ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷನಾಗುವುದೂ – ಎರಡೂ ರಾಜಕೀಯದಲ್ಲಿ ಅನುಕೂಲಕಾರಿ ಯಾದೀತೆಂಬ ವ್ಯವಹಾರಜ್ಞರು ಅವರು.

ಮಗ ಬಂದ ಮೇಲೆ ಅವನು ಎದುರು ನಿಂತಿರಬೇಕು. ಗೌರಿ ತನಗೆ ಗಂಜಿ ತಿನ್ನಿಸಬೇಕು, ಕೈಗುಣದ ಖ್ಯಾತಿಯ ಅವಳೇ ಬಾಯಿಗೆ ಔಷಧಿ ಸುರಿಯಬೇಕು. ವಿನೋದಿನಿ, ಮೀನಾಕ್ಷಿ, ವಿಮಲ – ಒಟ್ಟಾಗಿ ತನ್ನ ಪಕ್ಕದಲ್ಲಿ ನಿಂತಿರಬೇಕ. ಈಗ ದೇವನಹಳ್ಳಿಯಲ್ಲೇ ಅರ್ಧ ದಿನವಾದರೂ ಇರತೊಡಗಿದ್ದ, ರಾತ್ರೆ ಮಾತ್ರ ಅಕ್ಕು ಜೊತೆಗಿರುವ ಚಂದುವಂತೂ ಮಂಜಯ್ಯನಿಗೆ ಕೈಯಾಡಿಸುವ ಹತ್ತಿರದಲ್ಲಿ ಇರಬೇಕು. ಅವನು ಅಳುವುದನ್ನು ನಗುವುದನ್ನು ಕೇಳಿಸಿಕೊಳ್ಳಬೇಕು. ‘ಅಜ್ಜನೂ ಹೇಗೆ ಗಂಜಿ ತಿನ್ನತ್ತೆ ನೋಡು’ ಎಂದು ಗೌರಿ ಮಗುವನ್ನು ರಮಿಸುವುದನ್ನು ಕೇಳಿಸಿಕೊಳ್ಳಬೇಕು. ಆದರೆ ಮಿಂಗೇಲಿ ಅವರ ನಡುವೆ ನಿಂತಿರುವುದನ್ನು ಅವರೂ ಇಚ್ಛಿಸುವುದಿಲ್ಲ, ಮಿಂಗೇಲಿಯೂ ಬಯಸುವುದಿಲ್ಲ.

ಇದನ್ನು ವಿಮಲ ತಿಳಿದು ಮನಸ್ಸಿನಲ್ಲೇ ನರಳುತ್ತಿದ್ದಳು ಎಂಬುದನ್ನು ಊಹಿಸಿ ಘನಶ್ಯಾಮ ಮಿಂಗೇಲಿಯನ್ನು ಕರೆಯುವನು. ಅಳಿಯನಂತೆ ಕಾಣಲು ಅವನು ಪಾಪ ವಿಮಲ ಎತ್ತಿಕೊಟ್ಟ ಒಂದು ಖಾದಿಧ್ರೋತ್ರವನ್ನೂ ಹೊದ್ದು ಕೈ ಮುಗಿದು ನಿಂತಿದ್ದು, ಕೇಶವ ತಂದುಕೊಡುವ ಭೂವರಾಹ ಪ್ರಸಾದವನ್ನೂ ಎಲ್ಲರಂತೆ ಭಕ್ತಿಯಿಂದ ಸ್ವೀಕರಿಸಿ, ಮತ್ತೇನೊ ಕೆಲಸ ನೆನಪಿಸಿಕೊಂಡವನಂತೆ ಜಾರಿಕೊಳ್ಳುವನು. ಘನಶ್ಯಾಮ ಮಾತ್ರ ಪ್ರಸಾದವನ್ನು ಕೊಡಹೋದಾಗ ವಿನಯದಿಂದ ಯಾಕೆ ಬೇಡವೆನ್ನುತ್ತಾನೆ ಎಂಬುದು ಮಿಂಗೇಲಿಗೆ ಆಶ್ಚರ್ಯ. ಅದೊಂದು ಹೊಸಬಗೆಯ ಮಡಿಯಿರಬಹುದೆ? – ಅವನಿಗೆ ತಿಳಿಯದು.

ಅಪ್ಪ ಸಾಯುತ್ತಿದ್ದಾಗಲೂ ಅವನು ಅದೇನೋ ಸ್ವಪ್ರತಿಷ್ಠೆ ಮಾಡುತ್ತಿದ್ದಾನೆ ಎಂದು ಗೌರಿಗೂ ಘನಶ್ಯಾಮನ ವರ್ತನೆಯಿಂದ ಮುಜುಗರವಾಗುವುದು. ಆಳುಕಾಳೆಂದಾಗಲೀ, ಜಾತಿಯಲ್ಲಿ ಮೇಲುಕೀಳೆಂದಾಗಲೀ ಭೇದಮಾಡದಂತೆ ಅವನು ನಡೆದುಕೊಳ್ಳುವ ರೀತಿಯಲ್ಲಿ ಸಜ್ಜನನೂ ನಿಗರ್ವಿಯೂ ಎನ್ನಿಸಿದ್ದ, ನೋಡಲು ಮನೋಹರನೆಂದೂ ಕಾಣುವ ಘನಶ್ಯಾಮನ ಈ ವರ್ತನೆಯ ಅರ್ಥವೇನೆಂದು ಅವಳು ಕೇಶವನನ್ನು ಕೇಳಿದಳು. ಕಾರಂತರನ್ನೂ, ಶಂಬಾ ಜೋಷಿಯವರನ್ನೂ ಓದಿಕೊಂಡಿದ್ದ ಕೇಶವ ಹೇಳಿದ್ದ:

‘ಚಿಕ್ಕ ಸಾಹುಕಾರ‍್ರು ವಿಚಾರವಾದೀಂತ ಕಾಣತ್ತೆ. ದೊಡ್ಡ ಸಾಹುಕಾರ‍್ರೂ ನಮ್ಮ ಹಾಗೆ, ಅಂದರೆ ಬಡವರ ಹಾಗೆ, ದೇವರು ದಿಂಡರು ಅಂತ ನಂಬಿಕೊಂಡು ಕೂತವರಲ್ಲ – ಕಾಲಕ್ಕೆ ಸಲ್ಲುವಂತೆ ಅವರು ಮಾತಾಡ್ತ ಇದ್ದರು. ಮಾತಿಗೆ ಮಾತು ಬೆಳೀತಾ ಹೋಗಿ ಏನು ಬೇಕಾದ್ರು ಅವರ ಬಾಯಿಂದ ಬಂದುಬಿಡ್ತ ಇತ್ತು. ಆದರೆ ದೇವರು ತನ್ನ ಕೈ ಬಿಡಲ್ಲಾಂತ ಸಾಹುಕಾರ‍್ರು ತಿಳಿದವರಂತೆ ನನಗೆ ತೋರ‍್ತಿದ್ದರು. ಪೂಜೆಪುನಸ್ಕಾರಗಳು ಯಥಾವತ್ತಾಗಿ ನಡೆಯೋ ಹಾಗೆ ನೋಡಿಕೋತಿದ್ರು. ಖಾಹಿಲೆ ಅದ್ದೇ ಬದಲಾಗಿ ಬಿಟ್ಟರು; ಕಂಡಕಂಡ ದೇವರಿಗೆ ಹರಕೆ ಹೇಳಿಕೊಳ್ಳೋಕೆ ಶುರು ಮಾಡಿದ್ರು. ಆದರೆ ಚಿಕ್ಕ ಸಾಹುಕಾರ‍್ರಿಗೆ ದೇವರ ಹಂಗಿಲ್ಲ. ಪುರುಷ ಪ್ರಯತ್ನದಿಂದಲೇ ಈ ಜಗತ್ತು ನಡಕೊಂಡು ಹೋಗೋದೂಂತ ತಿಳಿದರೋ ಫರಂಗಿ ಜನರ ಹಾಗೆ ಅವರು. ನೋಡೋಕೂ ಅವರು ಕೆಂಪಗೆ ಹೇಗೆ ಹೋಳೀತಾರೆ ನೋಡಿದಿಯ?’

ಸದ್ಯ ಹತ್ತಿರವಾದವರನ್ನು ಹೆಸರು ಹಿಡಿದು ಕರೆಯದೆ ತನ್ನೊಳಗೆ ಏನನ್ನೋ ಹೇಳಿಕೊಂಡವನಂತೆ ಕೇಶವ ಮಾತಾಡಿದ್ದ. ದೂರುವವನಂತೆ ಕಾಣುವುದು ಅವನಿಗೆ ಬೇಕಿರಲಿಲ್ಲ. ಆದರೆ ಅವನು ಗಲಿಬಿಲಿಗೊಂಡದ್ದು ಗೌರಿಗೆ ಕಾಣುವಂತಿತ್ತು.

ಘನಶ್ಯಾಮನ ವರ್ತನೆಯಿಂದ ಕೇಶವ ಮಾತ್ರವಲ್ಲದೆ ಎಲ್ಲರೂ ಗಲಿಬಿಲಿಗೊಳ್ಳಬೇಕಾಗಿಯೇ ಬಂದದ್ದು ಮಂಜಯ್ಯನ ಸಾವಿನ ನಂತರ.

ಮಗ ಬಂದಮೇಲೆ ಹದಿನೈದು ದಿನ. ಆಗೊಂದು ಈಗೊಂದು ಮಾತಾಡುತ್ತ, ಕಷ್ಟದಲ್ಲಿ ಉಸಿರಾಡುತ್ತ ಅವರು ಬದುಕಿದ್ದರು. ಆಮೇಲೆ ಮಾತು ನಿಂತುಹೋಯಿತು. ಆಮೇಲೆ ಎರಡು ಹಗಲು ಎರಡು ರಾತ್ರೆಗಳ ಕಾಲ ಪಕ್ಕದಲ್ಲಿ ಗೌರಿಯೋ ವಿಮಲಳೋ ವಿನೋದಿನಿಯೋ ಘನಶ್ಯಾಮನೋ – ಅಂತೂ ಯಾರಾದರೊಬ್ಬರು ಕೂತಿರುತ್ತಿದ್ದರು. ಯಾವ ಘಳಿಗೆ ಯಲ್ಲಾದರೂ ಅವರು ಸಾಯಬಹುದೆಂದು ದೇವರ ಗುಡಿಯಲ್ಲಿದ್ದ ಗಂಗಾಜಲವನ್ನು ಗೌರಿ ತಂದು ಅವರ ತಲೆದೆಸೆಯಲ್ಲಿಟ್ಟಳು. ಆಗ ಮಧ್ಯರಾತ್ರೆ. ಇದನ್ನು ಗಮನಿಸಿದ ಘನಶ್ಯಾಮ ಗಂಗಾಜಲವಿದ್ದ ಗಿಂಡಿಯನ್ನು ಹಿಡಿದು ತಿರುಗಿಸಿ ನೋಡಿ ನಸುನಕ್ಕು ‘ಈ ಗಂಗೇನ್ನ ಕುಡಿದರೆ ಬದುಕಿರೋವರೂ ಸಾಯ್ತಾರೆ’ ಎಂದ. ತಂದೆ ನೋಯದಂತೆ ಸಾಯಬೇಕೆಂಬ ಕಳಕಳೆಯ ಘನಶ್ಯಾಮನಿಗೆ ಕೊನೆಗಳಿಗೆಯಲ್ಲಿ ಹೀಗೊಂದು ಹೀಯಾಳಿಸುವ ಮಾತನ್ನು ಯಾಕೆ ಹೇಳಬೇಕಾಗಿ ಬಂತೆಂದು ತಿಳಿಯದೆ ಕನಿಕರದಿಂದ ಅವನನ್ನೆ ನೋಡಿ ಗೌರಿ ಸುಮ್ಮನಾದಳು.

ದಶಮಿ ಇನ್ನೇನು ಕಳೆದು ಏಕಾದಶಿ ಶುರುವಾಗಬೇಕು, ಆಗ ಗೊರಗೊರೆ ಎನ್ನುತ್ತ ಮಂಜಯ್ಯ ಬಾಯಿ ಕಳೆದರು. ಗೌರಿ ಅವರ ಬಾಯಿಗೆ ಸ್ವಲ್ಪ ಗಂಗಾಜಲ ಸುರಿದು, ಗಿಂಡಿಯನ್ನು ಘನಶ್ಯಾಮನ ಕೈಯಲ್ಲಿಟ್ಟು ಉಳಿದ ಮನೆಯವರನ್ನೆಲ್ಲ ಕರೆಯಲು ಹೋದಳು. ನಿದ್ದೆಯಲ್ಲಿದ್ದ ಎಲ್ಲರೂ ಎದ್ದುಬಂದರು. ಘನಶ್ಯಾಮ ಎಡಗೈಯಲ್ಲಿ ಗಿಂಡಿಯನ್ನು ಹಿಡಿದು ಬಲಗೈಯಿಂದ ಅಪ್ಪನ ಹಣೆ ಸವರುತ್ತಿದ್ದ. ಇನ್ನೂ ಗೊರಗುಟ್ಟುತ್ತಿದ್ದ ಅವರ ಬಾಯಿಗೆ ಎಲ್ಲರೂ ಗಂಗಾಜಲ ಸುರಿದರು. ಘನಶ್ಯಾಮ ತಂದೆಯ ಕಣ್ಣುಗಳನ್ನು ಮುಚ್ಚಿದ. ಮೀನಾಕ್ಷಿ ಮೂಲೆಯಲ್ಲಿ ನಿಂತು ಗಟ್ಟಿಯಾಗಿ ಅತ್ತಳು. ಮಿಂಗೇಲಿ ಅವಳನ್ನು ಸಮಾಧಾನ ಪಡಿಸುತ್ತ ನಿಂತ.

ಅವರ ಹೆಣಕ್ಕೆ ಸ್ಮಶಾನದಲ್ಲಿ ಮಗನೇ ಬೆಂಕಿಯಿಕ್ಕಿದ. ಅಪರಕರ್ಮಗಳಿಗೆ ಸಿದ್ಧನಾಗಿ ಬಂದಿದ್ದ ಕೇಶವನಿಗೆ ಅಗ್ನಿಸ್ಪರ್ಶಕ್ಕೆ ಮುನ್ನವೇ, ನಮ್ರತೆಯಿಂದ ಕೈ ಮುಗಿದು, ಅದೇನೂ ಬೇಡವೆಂದು ಬಿಟ್ಟ. ಅಪ್ಪ ಸತ್ತ ಹನ್ನೆರಡನೇ ದಿನ ಮಾತ್ರ, ವೈಕುಂಠ ಸಮಾರಾಧನೆಗೆ ಎನ್ನದೆ, ‘ಸಹ ಪಂಕ್ತಿ ಭೋಜನಕ್ಕೆ’ ಎಂದು ಎಲ್ಲರನ್ನೂ ಊಟಕ್ಕೆ ಕರೆದ. ಎಲ್ಲ ಗೇಣೀದಾರರನ್ನೂ, ಆಳುಕಾಳುಗಳನ್ನೂ ಕರೆದು ‘ಸಹಪಂಕ್ತಿ ಭೋಜನಕ್ಕೆ’ ಅಂಗಳದಲ್ಲೂ, ವಿಶಾಲವಾದ ಪಡಸಾಲೆಯಲ್ಲೂ ಎಲೆ ಹಾಕಿಸಿದ್ದ.

ಎಲ್ಲರೂ ಅಂಗಳದಲ್ಲೇ ಕೂತರು. ಆದರೆ ನಡುನಡುವೆ ಒಂದಿಷ್ಟು ಎಲೆಗಳನ್ನು ಬಿಟ್ಟು, ತಮ್ಮ ತಮ್ಮ ಜಾತಿಯ ಗೌರವಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಕೂತರು. ಸಹಪಂಕ್ತಿ ಭೋಜನವೆಂದು ಕೇಳಿಸಿಕೊಂಡ ವೈದಿಕರಾಗಲೀ, ಬ್ರಾಹ್ಮಣ ಜಮೀನುದಾರರಾಗಲೀ ಊಟಕ್ಕೇ ಬಂದಿರಲಿಲ್ಲ. ಆದ್ದರಿಂದ ಪಡಸಾಲೆಯಲ್ಲಿ ಹಾಕಿದ ಎಲೆಗಳು ಹಾಗೇ ಉಳಿದವು.

ಸಾಹುಕಾರರ ಸಾವಿನ ವರ್ತಮಾನ ಗೊತ್ತಾಗಿ ಬಂದಿದ್ದ ಕೃಷ್ಣಶಾಸ್ತ್ರಿಗಳೂ ಸಿಕ್ಕಿದ ಮೇಲೆ ಹಿಡಿದು ಕೂತದ್ದು ನೋಡಿ ಕೇಶವ ಆಶ್ಚರ್ಯಪಟ್ಟು ಅವರನ್ನು ಅಗ್ರ ಸ್ಥಾನದಲ್ಲಿ ಕೂರಿಸಲು ಓಡಾಡಿದ. ಇದನ್ನು ಕಂಡ ಶಾಸ್ತ್ರಿಗಳು ನಕ್ಕು ಬೇಡವೆಂದರು. ಆದರೆ ಅವರ ಅಕ್ಕಪಕ್ಕ ಕೂತವರೇ ಅವರ ವೇಷವನ್ನೂ ಹಣೆಯನ್ನೂ ನೋಡಿ ತಾವೇ ದೂರಹೋಗಿ ಕೂತರು.

ಊಟವಾದ ಮೇಲೆ ಅಂಗಳದ ಒಂದು ತುದಿಯಲ್ಲಿ ಕೈಯಲ್ಲೊಂದು ಮೈಕನ್ನು ಹಿಡಿದು ಘನಶ್ಯಾಮ ನಿಂತಿದ್ದನ್ನು ಕಂಡು ಬಂದವರೆಲ್ಲಾ ಆಶ್ಚರ್ಯಪಡುವಂತಾಯಿತು. ಸ್ವಾತಂತ್ರ‍್ಯ ದಿನಾಚರಣೆಯ ದಿನ ಮಾತ್ರ ಸಾಹುಕಾರರು ಅಂಗಳದಲ್ಲಿ ಮೈಕ್ ಹಾಕುತ್ತಿದ್ದರು. ಮೈಕ್ ಇಲ್ಲದೆಯೂ ಮಾತಾಡಿದರೆ ಕೇಳಬಹುದಾದಷ್ಟು ದೊಡ್ಡ ಅಂಗಳ ಅದು. ಅಲ್ಲಿ ಊಟಕ್ಕೆ ಸೇರಿದ್ದವರು ಹೆಚ್ಚೆಂದರೆ ಮುನ್ನೂರು ಜನ. ಆಳುಕಾಳುಗಳು, ಅಂತ್ಯಜರು ಎಲ್ಲರ ಜೊತೆ ಊಟಕ್ಕೆ ಕೂರಬಹುದಾಗಿದ್ದರೂ ಕೂರದೆ, ಸಾಹುಕಾರರ ದರ್ಬಾರಿನ ಪಡಸಾಲೆಯಲ್ಲಿ ಯಾರೂ ಕೂರಲೊಲ್ಲದೆ, ಎರಡನೇ ಪಂಕ್ತಿಗೆ ಕಾದಿದ್ದರು.

ನೆರೆದಿದ್ದ ಎಲ್ಲರನ್ನೂ ಎಲೆ ತೆಗೆದು ಸ್ವಚ್ಛಗೊಳಿಸುವ ತನಕ ಕಾದಿರಬೇಕೆಂದು ಘನಶ್ಯಾಮ ಮೈಕಿನಲ್ಲಿ ಕೇಳಿಕೊಂಡ. ಅವನು ಊಟಕ್ಕೆ ಮೊದಲೇ ಮೈಕಿನವರನ್ನು ಕರೆಸಿಕೊಂಡಿದ್ದನೆಂಬುದು ಯಾರಿಗೂ, ಅವನ ತಂಗಿ ವಿಮಲಗೂ ಗೊತ್ತಿರಲಿಲ್ಲ.

ಎಲೆ ಎತ್ತಿ ಸಾರಿಸಿಯಾದ ಮೇಲೆ ಜಮಖಾನವನ್ನು ಆಳುಗಳು ತಂದು ಹಾಕಿದರು. ಎಲ್ಲರೂ ಕೂತು ಮಾತಿಗೆ ಕಾದರು. ಘನಶ್ಯಾಮ ತಂದೆಯಂತೆಯೇ ಒಂದು ಖಾದಿ ಪಂಚೆಯನ್ನುಟ್ಟು ಬಿಳಿ ಜುಬ್ಬವನ್ನು ಹಾಕಿಕೊಂಡು ನಿಂತು ಮಾತಾಡಲು ಶುರುಮಾಡಿದ. ಅವನು ಮಾತಾಡುತ್ತಿದ್ದಂತೆ ಎಲೆಯಡಿಕೆಯ ಹರಿವಾಣಗಳು ಒಬ್ಬರಿಂದೊಬ್ಬರಿಗೆ ಸದ್ದಿಲ್ಲದೆ ಓಡಾಡಿದವು. ಅವನ ಸ್ಪಷ್ಟವಾದ ಉಚ್ಛಾರಣೆಯ ಕನ್ನಡದ ಮಾತುಗಳು ಕೆಲವರಲ್ಲಿ ಅನುಮಾನವನ್ನು ಹುಟ್ಟಿಸಿದರೆ, ಹಲವರಲ್ಲಿ ಅಚ್ಚರಿಗೂ ಮೆಚ್ಚಿಗೆಗೂ ಕಾರಣವಾದವು. ಊಟಕ್ಕೆ ಬಂದವರಲ್ಲಿ ಕೆಲವು ಜನ ಶಿವಮೊಗ್ಗದಿಂದಲೂ ಬೆಂಗಳೂರಿನಿಂದಲೂ ಬಂದ ಪೇಪರಿನವರೆಂದು ಗೊತ್ತಾದ್ದು ಪೇಪರುಗಳಲ್ಲಿ ಸುದ್ದಿಯನ್ನು ಮಾರನೇ ದಿನವೇ ಪತ್ರಿಕೆ ಲಭ್ಯವಿರುವ ಕೆಲವು ಹಳ್ಳಿಯ ಜಮೀನುದಾರರು ಓದಿದಾಗ. ‘ಎಲಾ, ಈ ಘನಶ್ಯಾಮ ತಂದೆ ತೀರಿಕೊಂಡ ಹನ್ನೆರಡು ದಿನಗಳ ಒಳಗೆ ಏನೇನು ತಯಾರಿ ಮಾಡಿಕೊಂಡಿದ್ದನಲ್ಲ!’ ಎಂದು ಎಲ್ಲರೂ ಆಶ್ಚರ್ಯ ಪಟ್ಟವರೇ.

* * *

ಸಾರಾಂಶದಲ್ಲಿ ಅವನು ಹೇಳಿದ್ದು (ಮತ್ತು ಬರೆದು ಪತ್ರಿಕೆಗಳಿಗೆ ಹಂಚಿದ್ದು) ಇಷ್ಟು.

‘ನನ್ನ ತಂದೆಗೆ ನಾನು ನಿಜವಾದ ಶ್ರಾದ್ಧ ಮಾಡುತ್ತಿದ್ದೇನೆಂದು ತಿಳಿದಿದ್ದೇನೆ. ನನಗೆ ಸಂಪ್ರದಾಯಗಳಲ್ಲಿ ನಂಬಿಕೆಯಿಲ್ಲ. ಅವು ನಮ್ಮ ದೇಶವನ್ನು ಹಿಂದುಳಿಯುವಂತೆ ಮಾಡಿವೆ ಮಾತ್ರವಲ್ಲದೆ ಜನರ ಸುಲಿಗೆಗೂ ಈ ಮೂಢ ಸಂಪ್ರದಾಯಗಳು ಕಾರಣವಾಗಿವೆ. ಆದ್ದರಿಂದ ಮೊದಲಾಗಿ ನಾನೇ ಈ ಸಂಪ್ರದಾಯಗಳಿಂದ ಮುಕ್ತನಾಗಿ ನನ್ನ ತಂದೆಗೆ ನಿಜವಾದ ಶ್ರಾದ್ಧ ಮಾಡುವುದೆಂದರೆ, ಸ್ವಾತಂತ್ರ‍್ಯ ಬಂದ ಮೇಲೆ ದಿಕ್ಕು ತಪ್ಪಿದ ನನ್ನ ತಂದೆಯವರ ತಪ್ಪುಗಳನ್ನೆಲ್ಲ ಕೈಲಾದ ಮಟ್ಟಿಗೆ ತಿದ್ದಿಕೊಂಡು ಹೊಸಜೀವನ ನಡೆಸುವುದು ಎಂದು ನನ್ನ ಅಭಿಪ್ರಾಯ.

ಮೊದಲನೆಯದಾಗಿ, ಇಲ್ಲಿರುವ ಹತ್ತು ಎಕರೆ ತೋಟವನ್ನು ಮಾತ್ರ ನನ್ನ ತಂಗಿಯರಿಗೆ ಬಿಟ್ಟುಕೊಡುತ್ತಿದ್ದೇನೆ. ವಿಮಲ ನನ್ನ ಒಡಹುಟ್ಟಿದ ತಂಗಿ; ಇನ್ನೊಬ್ಬಳು ವಿನೋದಿಸಿ ನನ್ನ ತಂದೆಯ ಎರಡನೇ ಸಂಬಂಧದಿಂದ ಹುಟ್ಟಿದವಳು. ನನ್ನ ಮೊದಲು ಒಡಹುಟ್ಟಿದ ತಂಗಿಗೆ ಐದು ಎಕರೆಯಾದ ಉಳಿದ ಐದು ಎಕರೆ, ನನ್ನ ಎರಡನೇ ತಂಗಿಗೆ.

ನನ್ನ ಚಿಕ್ಕಮ್ಮ ಮಂಗಳೂರಿನ ನಮ್ಮ ಹೆಂಚಿನ ಕಾರ್ಖಾನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರಿಗೆ ಈ ಕಾರ್ಖಾನೆಯನ್ನೇ ಬಿಟ್ಟುಕೊಡುತ್ತಿದ್ದೇನೆ.

ನನ್ನ ಒಡಹುಟ್ಟಿದವಳು ಶ್ರೀ ಮೈಕೇಲರನ್ನು ಮದುವೆಯಾಗಿ ತಾಯಿಯಾಗಿದ್ದಾಳೆ. ಶ್ರೀ ಮೈಕೇಲರು ಇನ್ನು ಮುಂದೆ ಶಿವಮೊಗ್ಗದಲ್ಲಿರುವ ನಮ್ಮ ಪೆಟ್ರೋಲ್ ಬಂಕಿನ ಮಾಲೀಕರಾಗಿರುತ್ತಾರೆ.

ಇಷ್ಟು ನಮ್ಮ ಸಂಸಾರಕ್ಕೆ ನಾನು ಮಾಡಬೇಕಾದ ಕರ್ತವ್ಯದ ವಿಷಯವಾಯಿತು. ಮುಂದಿನ ಮಾತು ನಮ್ಮ ಗೇಣೀದಾರರಿಗೆ ಸಂಬಂಧಿಸಿದ್ದು.

ಬಹಳ ಮುಖ್ಯವಾದ್ದು: ನನ್ನ ತಂದೆಯವರು ಎಂದೂ ಗೇಣಿ ವಸೂಲಿಯ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡಿಲ್ಲವಾದರೂ ಕೊನೆಕೊನೆಯಲ್ಲಿ ತನ್ನ ವರ್ಗದ ಹಿತವನ್ನು ಬಿಟ್ಟುಕೊಡಲಾರದೆ ಜಮೀನುದಾರರ ಪರವಾಗಿ ವಕೀಲಿ ಮಾಡಿದರು ಎಂಬುದು. ಗಾಂಧೀಜಿಯವರನ್ನು ಹತ್ತಿರದಿಂದ ಕಂಡಿದ್ದ ಸ್ವಾತಂತ್ರ‍್ಯ ಯೋಧರೊಬ್ಬರು ತಾನು ಹಿಂದೆ ಮಾಡಿದ್ದ ತ್ಯಾಗವನ್ನು ಮರೆತು ಹೀಗೆ ತನ್ನ ವರ್ಗ ಹಿತರಕ್ಷಣೆಗೆ ಮುಂದಾದ್ದು ವರ್ಗ ಸಮಾಜದ ದೃಷ್ಟಿಯಲ್ಲಿ ಸಹಜವೆನ್ನಿಸಿದರೂ ಅವರ ಮಗನಾಗಿ ನನಗೆ ತಪ್ಪೆನ್ನಿಸಿದೆ. ಕೊನೆಯಲ್ಲಿ ನನ್ನ ಪ್ರೀತಿಯ ತಂದೆಯವರು ಕೊಲೆಗಡುಕ ಜಮೀನುದಾರನೊಬ್ಬನ ಪರವಾಗಿ ಸುಳ್ಳು ಸಾಕ್ಷಿ ಹೇಳಬೇಕಾಗಿ ಬಂದು ಅವಮಾನಿತರಾಗಿ ನರಳಿ ನರಳಿ ಸತ್ತರೆಂಬುದು ನನಗೆ ತುಂಬ ದುಃಖ ತಂದಿರುವ ಸಂಗತಿ. ಅದಕ್ಕೆ ಪ್ರಾಯಶ್ಚಿತ್ತವಾಗಿ ನಿಮ್ಮೆಲ್ಲರ ಎದಿರು ಹರಿಜನ ಯುವಕನೊಬ್ಬನನ್ನು ಪ್ರೀತಿಸುವ ಧೈರ್ಯ ತೋರಿದ ಯುವತಿಯ ಕ್ಷಮೆಯನ್ನು ನನ್ನ ತಂದೆಯ ಪರವಾಗಿ ನಾನು ಕೇಳುತ್ತಿದ್ದೇನೆ.

ಇಷ್ಟೇ ಸಾಲದೆಂದು ನಾನು ಇನ್ನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಜಮೀನುದಾರನಾಗಿ ನಾನು ನನ್ನ ಗೇಣೀದಾರರನ್ನು ಮುಕ್ತರನ್ನಾಗಿ ಮಾಡಲಾರೆ. ದಾಖಲೆಯಲ್ಲಿ ಗೇಣೀದಾರನಾದವನೊಬ್ಬ ತನ್ನ ಗೇಣಿಯ ಜಮೀನನ್ನು ಇನ್ನೊಬ್ಬರಿಗೆ ಗೇಣಿಗೆ ಕೊಟ್ಟಿರುತ್ತಾನೆ. ಆದ್ದರಿಂದ ಭೂ ಹಂಚಿಕೆ ಕಾನೂನಿನ ಅಡಿಯಲ್ಲೇ ಜಾರಿಯಾಗತಕ್ಕದ್ದು. ನಿಜವಾಗಿ ಉಳುವಾತ ಜಮೀನಿನ ಒಡೆಯನಾಗತಕ್ಕದ್ದು. ಅಲ್ಲಿಯವರೆಗೆ ಸುಮಾರು ಐನೂರು ಎಕರೆಯಷ್ಟು ವಿಶಾಲವಾದ ನಮ್ಮ ಹೆಸರಿನಲ್ಲಿರುವ ಭೂಮಿಯಿಂದ ಬರುವ ಗೇಣಿ ಈ ವರ್ಷದಿಂದಲೇ ನಾನು ಮಾಡಬೇಕೆಂದಿರುವ ಒಂದು ಟ್ರಸ್ಟಿನ ಅಕೌಂಟಿಗೆ ಸಂದಾಯವಾಗುತ್ತದೆ. ನನ್ನ ತಂಗಿಯರಿಗೆಂದು ನಾನು ಕೊಡುವ ತೋಟವನ್ನು ಬಿಟ್ಟು ಉಳಿದ ಯಾವ ವ್ಯವಸಾಯದ ಭೂಮಿಯನ್ನೂ ನಾನು ನನಗಾಗಿ ಇಟ್ಟುಕೊಳ್ಳುತ್ತಿಲ್ಲ.

ಟ್ರಸ್ಟಿನ ಈ ಹಣದಿಂದ ಊರಲ್ಲಿ ಒಂದು ಆಸ್ಪತ್ರೆಯನ್ನು ಸ್ಥಾಪಿಸಲಿದ್ದೇನೆ; ನನ್ನ ತಂದೆ ನಡೆಸುತ್ತಿದ್ದ ಪ್ರೈಮರಿ ಶಾಲೆಯನ್ನು ಹೈಸ್ಕೂಲಾಗಿಯೂ, ಮುಂದೆ ಕಾಲೇಜಾಗಿಯೂ ಬೆಳೆಸುವ ಉದ್ದೇಶವಿದೆ.

ಪರಂಪರಾನುಗತವಾಗಿ ಈ ಮನೆಯಲ್ಲಿ ನಡೆಯುತ್ತ ಬಂದಿರುವ ಪೂಜೆಪುನಸ್ಕಾರಗಳನ್ನು ಈಗಿಂದೀಗಲೇ ನಿಲ್ಲಿಸುತ್ತಿದ್ದೇನೆ. ಈ ಮನೆಯ ಒಳಭಾಗದ ಕೆಲವು ಕೋಣೆಗಳನ್ನು ಮಾತ್ರ ನಮ್ಮ ಸಂಸಾರದ ಉಪಯೋಗಕ್ಕೆ ಇಟ್ಟುಕೊಂಡು ಭೂವರಾಹ ದೇವಾಲಯವನ್ನೂ ಈ ಮನೆಯ ವಿಶಾಲವಾದ ಮುಂಭಾಗದ ಕಟ್ಟಡಗಳನ್ನೂ ಸಾಂಸ್ಕೃತಿಕ ಕಾರಣಗಳಿಗೆ ಬಳಸಬೇಕೆಂದಿದ್ದೇನೆ.

ನನ್ನ ತಂದೆಯವರು ಬೇಕಾದಷ್ಟು ಸಂಪಾದಿಸಿದ್ದಾರೆ. ಇನ್ನೆಷ್ಟೋ ಅವರು ಮಾಡಿದ ಆಸ್ತಿಯಿದೆ. ಇವೆಲ್ಲವೂ ಪಟ್ಟಣಗಳಲ್ಲಿ ಇವೆ. ನನ್ನ ಜೀವನಕ್ಕೆ ಇದು ಯಥೇಷ್ಟ ಎನ್ನುವಷ್ಟು ಹೆಚ್ಚಾಗಿಯೇ ಇದೆ. ಆದ್ದರಿಂದ ನಾನು ಮಾಡುತ್ತಿರುವುದು ಒಂದು ತ್ಯಾಗ ಎಂಬ ಅಹಂಕಾರ ನನಗಿಲ್ಲ. ಕೆರೆಯ ನೀರನು ಕರೆಗೆ ಚೆಲ್ಲಿ ಎನ್ನುವಂತೆ ನಮ್ಮ ಸಮಾಜದಿಂದ ನಮಗೆ ಬಂದದ್ದನ್ನು ಈ ತಂದೆಯ ಶ್ರಾದ್ಧದಲ್ಲಿ ಸಮಾಜಕ್ಕೆ ಹಿಂದಿರುಗಿಸುತ್ತಿದ್ದೇನೆ.

ಸಮಾಜ ಕ್ರಾಂತಿಯನ್ನು ಅಹಿಂಸಾತ್ಮಕವಾಗಿಯೂ ಶಾಸನಬದ್ಧವಾಗಿಯೂ ಮಾಡಬೇಕೆಂಬ ರಾಜಕಾರಣದಲ್ಲಿ ತೊಡಗುವ ಉದ್ದೇಶ ನನಗಿದೆ. ಅದಕ್ಕೆ ಜನಸಮುದಾಯದ ಬೆಂಬಲ ಬೇಕು. ಇಲ್ಲಿ ನೆರೆದಿರುವ ನನ್ನ ತಂದೆಯ ಹಿತೈಷಿಗಳಾಗಿದ್ದ ನಿಮ್ಮೆಲ್ಲರ ಬೆಂಬಲವನ್ನು ಮೊದಲು ಪ್ರಾರ್ಥಿಸಿ ಪಡೆದು, ಮುಂದುವರಿಯಬೇಕೆಂಬ ಕಾರಣದಿಂದ ಈ ದಿನ ನಿಮ್ಮ ಮುಂದೆ ನಿಂತಿದ್ದೇನೆ.’

ಶ್ರಾದ್ಧದ ದಿನ ಆಡಿದ ಮಾತಿಗೆ ಕೈತಟ್ಟಬೇಕೊ, ಬಾರದೊ ಎಂದು ತಿಳಿಯದೆ ಕೆಲವರು ತಟ್ಟಿದರು ಎಂದು ಸುಮ್ಮನಿದ್ದ ಇನ್ನು ಕೆಲವರು ತಟ್ಟಿದರು.

* * *

ಎಲ್ಲರೂ ಹೋದಮೇಲೆ ಮನೆಯವರನ್ನು ತನ್ನ ರೂಮಿಗೆ ಕರೆದುಕೊಂಡು ಹೋದ. ಕೇಶವನ್ನೂ ಗೌರಿಯನ್ನೂ ಬರುವಂತೆ ಕರೆದ.

ಮಂಜಯ್ಯ ತನ್ನ ಖಾಸಗಿ ಆಫೀಸಾಗಿ ಬಳಸುತ್ತಿದ್ದ ವಿಶಾಲವಾದ, ಕೊರೆದ ಬೀಟೆಮರಗಳ ಕಂಬಗಳ ಮೇಲೆ ನಾಗಂದಿಗೆಯನ್ನು ಸುತ್ತಲೂ ಎತ್ತಿಹಿಡಿದ ಕೋಣೆಯದು. ಘನಶ್ಯಾಮ ಈ ಕೋಣೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದ. ಕೆದರಿದ ಗಡ್ಡ ಮೀಸೆಗಳ ತೋರವಾದ ಸಿಂಹದ ಮುಖದ ಯೂರೋಪಿಯನ್ ಒಬ್ಬನ ಚಿತ್ರ ಯಾರದೆಂದು ಕೇಶವಗಾಗಲೀ, ಗೌರಿಗಾಗಲೀ ಗೊತ್ತಾಗದೆ ಹೋಯಿತು. ಅದೊಂದೇ ಚಿತ್ರ ಕಣ್ಣಿಗೆದ್ದು ಕಾಣುವಂತೆ ಅಲ್ಲಿ ಇದ್ದದ್ದು. ಆದರೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಕಲಿತವರಾದ ವಿಮಲ ಮತ್ತು ವಿನೋದಿನಿಯರಿಗೆ ಹೊಸ ವಿಚಾರದ ಅಣ್ಣನ ಸ್ಫೂರ್ತಿಯ ಸೆಲೆ ತಿಳಿದಂತಾಯಿತು. ಮತ್ತು ಕಪಾಟುಗಳಲ್ಲಿ ಘನಶ್ಯಾಮ ಇಂಗ್ಲೆಂಡಿನಿಂದ ತಂದಿದ್ದ ಆ ಮಹಾನುಭಾವನ ಎಲ್ಲ ದಪ್ಪ ದಪ್ಪ ಪುಸ್ತಕಗಳೂ ಇದ್ದವು. ಅಲ್ಲಿದ್ದ ಕನ್ನಡ ಪುಸ್ತಕಗಳೆಂದರೆ ಕಾರಂತರವು, ಕುವೆಂಪುರವು, ಮತ್ತು ಶ್ರೀರಂಗರವು ಎಂಬುದನ್ನು ಕೇಶವ ಗಮನಿಸಿ ಗೌರಿಗೆ ಬೆರಳುಮಾಡಿ ತೋರಿಸಿದ.

ಅಪ್ಪನ ಕಾಲದಲ್ಲಿ ಕೋಣೆಯ ನಡುವೆ ಇದ್ದ ಸೋಫಾಗಳನ್ನು ಒಂದು ಮೂಲೆಯಲ್ಲಿ ಜೋಡಿಸಿಡಲಾಗಿತ್ತು. ಕೋಣೆಯ ಮಧ್ಯದಲ್ಲೀಗ ಇರುವುದು ಒಂದು ವಿಶಾಲವಾದ ಮೇಜು ಮತ್ತು ಅದರ ಸುತ್ತ ಕುರ್ಚಿಗಳು. ಕೇಶವ, ಗೌರಿ, ಮತ್ತು ವಿನೋದಿನಿ ಈ ಕುರ್ಚಿಗಳಲ್ಲಿ ಕೊರದೆ, ಚಾಪೆಹಾಕಿ ಒರಗುವ ದಿಂಬುಗಳನ್ನಿಟ್ಟ ಒಂದು ಮೂಲೆಯಲ್ಲಿ ಹೋಗಿ ಕೂತದ್ದನ್ನು ಕಂಡ ಮಿಂಗೇಲಿ, ಕೂರಲೆಂದು ಅವನು ಎಳೆದಿದ್ದ ಕುರ್ಚಿಯನ್ನು ಬಿಟ್ಟು, ತಾನೂ ನೆಲದಮೇಲೆ ಹೋಗಿ ಕೂತ. ಮೊದಲೇ ಕುರ್ಚಿ ಎಳೆದು ಕೂತಿದ್ದ ವಿಮಲಳೂ ಎದ್ದುಬಂದು ನೆಲದ ಮೇಲೆ ಕೂತಳು. ಬಹಳಕಾಲ ಇಂಗ್ಲೆಂಡಿನಲ್ಲಿದ್ದು ಬಂದ ಘನಶ್ಯಾಮ ಕಾಲನ್ನು ಮಡಿಚಿಕೂರಲು ಕಷ್ಟಪಡುತ್ತ ನಕ್ಕು ಹೇಳಿದ.

‘ಊರು ಬಿಟ್ಟು ಹೋಗಿ ಎಷ್ಟು ಕೆಟ್ಟುಹೋಗಿದೀನಿ ನೋಡಿ’

ಎಲ್ಲರೂ ಕೂತಾದಮೇಲೆ ನಿಧಾನವಾಗಿ ಘನಶ್ಯಾಮ ಮಾತು ಶುರುಮಾಡಿದ:

‘ನಿಮಗೆಲ್ಲ ಮೊದಲೇ ಹೇಳದೆ ನಾನು ಕೆಲವು ನಿರ್ಧಾರಗಳಿಗೆ ಬಂದುಬಿಟ್ಟೆ. ಕ್ಷಮಿಸಬೇಕು ನೀವು.’

ಯಾರೂ ಮಾತಾಡಲಿಲ್ಲ.

‘ನೀವು ನಿಮ್ಮ ಅಭಿಪ್ರಾಯಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳಬಹುದು’

ಮತ್ತೆ ಎಲ್ಲ ಸುಮ್ಮನೇ ಕೂತಿದ್ದರು. ವಿನೋದಿನಿ ಮಾತ್ರ ಏನೋ ಹೇಳಲು ಹೋಗಿ ಹಿಂದೆಗೆಯುತ್ತಿರುವಂತೆ ಕಂಡಳು. ಘನಶ್ಯಾಮ ಹೇಳಿದ:

‘ವಿನೋದಿನಿ, ಪ್ಲೀಸ್, ಹೇಳು. ಈ ಮನೇಲಿ ನನ್ನಷ್ಟೇ ನಿನಗೂ ಅಧಿಕಾರವಿದೆ’

‘ಹಾಗಾದರೆ ಅಣ್ಣನಾದ ನಿನಗೆ ಬೇಡವಾದ ತೋಟ ನನಗೂ ಬೇಡ. ನೀನು ನಡೆಸೋ ಸ್ಕೂಲಲ್ಲಿ ನನಗೊಂದು ಕೆಲಸ ಕೊಡು. ಹತ್ತು ಎಕರೇನೂ ಅಕ್ಕನಿಗೆ ಇರಲಿ. ಅವಳಿಗೊಂದು ಮಗುವಿದೆಯಲ್ಲ, ಆದ್ದರಿಂದ ಅವಳಿಗೆ ಅದು ಸೇರಲಿ.’

ಅಣ್ಣನ ಜೊತೆ ವಿನೋದಿನಿ ಏಕವಚನದ ಸಲಿಗೆಯನ್ನು ಪಡೆದುಬಿಟ್ಟಿದ್ದಳು.

ವಿಮಲ ಹೇಳಿದಳು:

‘ಈಗ ಅದರ ಮಾತು ಬೇಡ. ನಾನೂ ನೀನೂ ಸೇರಿ ನಿರ್ಧಾರ ಮಾಡೋಣ’

ವಿನೋದಿನಿ ಮುಂದಿನ ಮಾತಿಗೆ ಧೈರ್ಯಮಾಡಿದಳು. ಈ ಮನೆಯ ಒಬ್ಬ ನೌಕರನೆಂದೇ ತಿಳಿದಿದ್ದ ಕೇಶವನಿಗೆ ತಾನು ಹೇಳಲಾರದ್ದನ್ನು ವಿನೋದಿನಿ ಹೇಳುತ್ತಿದ್ದಾಳೆಂದು ಪರಮಾಶ್ಚರ್ಯವಾಯಿತು.

‘ಅಣ್ಣ ಈ ಮನೇ ಭೂವರಾಹ ಪೂಜೆ ನಿಲ್ಲಿಸೋದನ್ನ ನಾನು ಒಪ್ಪಲ್ಲ. ಸುಮಾರು ಐನೂರು ವರ್ಷದ ಒಂದು ಸಂಪ್ರದಾಯವನ್ನ ಮುರಿಯೋ ಹಕ್ಕು ಮಕ್ಕಳಿಗೆ ಇದೆ ಅಂತ ನನಗೆ ಅನ್ನಿಸಲ್ಲ. ಇನ್ನೂ ಒಂದು ಮಾತಿದೆ ನಾನು ಹೇಳೋದು. ನಿತ್ಯ ಈ ಪೂಜೆಯ ಪ್ರಸಾದ ಅಂತ ಎರಡು ತಪ್ಪಲೆ ಅನ್ನ ಶಾಲೆಯ ಮಕ್ಕಳಿಗೆ ಸಿಗುತ್ತಾ ಇದೆ’

ಘನಶ್ಯಾಮ ನಡುವೆ ಬಾಯಿ ಹಾಕಿದ:

‘ವಿನೋದಿನಿ, ಕ್ಷಮಿಸು. ಮಕ್ಕಳಿಗೆ ಮಧ್ಯಾಹ್ನದ ಊಟಾನ್ನ ಖಂಡಿತ ತಪ್ಪಿಸಲ್ಲ. ಅದು ದೇವರ ಅನ್ನದ ಋಣ ಅಂತ ಯಾರಿಗೂ ಅನ್ನಿಸಬಾರದು. ಊರಿನ ಸಾಹುಕಾರರ ಋಣಾಂತಲೂ ಆ ಶಾಲೆಯ ಎಲ್ಲ ವಹಿವಾಟುಗಳೂ ನಡೆಯೋದು. ನೀನು ಅಲ್ಲಿ ಪಾಠಮಾಡ್ತೀಯ ಎನ್ನೋದಾದರೆ ನಿನ್ನನ್ನೇ ಸ್ಕೂಲಿನ ಸೆಕ್ರಟರಿ ಮಾಡಿಬಿಡೋಣ.’

ವಿನೋದಿನಿ ತನ್ನ ಮುಂದಿನ ಮಾತಿನ ಆತುರದಲ್ಲಿದ್ದಳು:

‘ಎಲ್ಲಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ನಾನು ನಿತ್ಯ ಪೂಜೇನ ನೋಡ್ತ ಇದ್ದೀನಿ. ಅದರ ಅರ್ಥ ಗಾಢವಾಗಿದೆ ಅಂತ ನನಗೆ ಅನ್ನಿಸತ್ತೆ. ಕೇಶವ ಪಂಡಿತರಿಗೆ ನನಗಿಂತ ಹೆಚ್ಚು ತಿಳಿದಿದೆ. ಸಾಹುಕಾರ‍್ರ ಮಾತಿಗೆ ಎದುರಾಡಬಾರದು ಅಂತ ಸುಮ್ಮನಿದಾರೆ ಅಷ್ಟೆ’.

ವಿನೋದಿನಿಗೇ ತಾನು ಉಪಯೋಗಿಸಿದ ‘ಸಾಹುಕಾರ‍್ರು’ ಶಬ್ದ ನಗು ತರಿಸಿತು. ಯಾಕೆಂದರೆ ಅಷ್ಟೊಂದು ಕುಶಾಲಿನ ಕೇಶವ, ತಾನೊಬ್ಬಳೇ ಅವನ ಹತ್ತಿರ ಮಾತಾಡುವಾಗಲೂ, ಘನಶ್ಯಾಮವನ್ನು ಕರೆಯೋದು ‘ಚಿಕ್ಕ ಸಾಹುಕಾರ‍್ರು’ ಎಂದೇ.

ಘನಶ್ಯಾಮ ಕೇಶವನ ಮುಖ ನೋಡಿದ. ಕೇಶವ ದಾಕ್ಷಿಣ್ಯಪಡುತ್ತ ಹೇಳಿದ:

‘ನಿಮ್ಮ ತಂಗಿ ತುಂಬ ಓದಿಕೊಂಡಿದಾರೆ. ನಾನು ಹೆಚ್ಚಾಗಿ ಹೇಳೋದೇನೂ ಇಲ್ಲ. ಅದೊಂದು ತುಂಬ ಅರ್ಥ ಇರುವ ಪೂಜೆ. ನಮಗೆ ಅನ್ನ ಕೊಡುವ ಈ ಭೂಮಾತೇನ್ನ ಭಗವಾನ್ ವಿಷ್ಣು ಹಂದಿಯರೂಪದಲ್ಲಿ ಬಂದು ಸರ್ವಾಧಿಕಾರದ ದರ್ಪದ ರಾಕ್ಷಸನಿಂದ ಪಾರುಮಾಡಿ ಎತ್ತಿಕೊಂಡಿರೋದರ ನಿತ್ಯೋಪಾಸನೆ ಈ ನಿಮ್ಮ ಮನೆತನದ ವರಾಹಸ್ವಾಮಿಯ ಪೂಜೆಯಲ್ಲಿದೆ. ತಿಳಿದವರಾದ ನಿಮಗೆ ಹೇಳುವ ಅಗತ್ಯವಿಲ್ಲ. ಅಮೇರಿಕಾದವರ ಆಟಂಬಾಂಬಿನ ರಾಜಕೀಯವನ್ನೂ, ಇಡೀ ಜಗತ್ತನ್ನು ಚಾಪೆಯಂತೆ ಸುತ್ತಿ ತಮ್ಮ ಕಂಕುಳಲ್ಲಿ ಇಟ್ಟುಕೊಳ್ಳಬಹುದೆಂಬ ಅವರ ಹಿರಣ್ಯಾಕ್ಷ ದರ್ಪವನ್ನೂ ನೆಹರೂಕೂಡ ವಿರೋಧಿಸ್ತಾರೆ ಅಂತ ಸಾಹುಕಾರ‍್ರು ಹೇಳಿದ್ದು ಕೇಳೀದ್ದೀನಿ. ಈ ಹಿರಣ್ಯಾಕ್ಷ ಪ್ರವೃತ್ತಿ ಮಾನವ ಸ್ವಭಾವದಲ್ಲಿ ಯಾವತ್ತೂ ಇರೋದೇ. ಅದರ ಸತತ ಸಂಹಾರದ ನಿತ್ಯ ಸಂಕಲ್ಪವೇ ಪೂಜೇಂತ ಅಂದುಕೊಂಡಿದೀನಿ. ಈ ಕಾಲದಲ್ಲಂತೂ ಹಿರಣ್ಯಾಕ್ಷ ಎಲ್ಲೆಲ್ಲೂ ಇದಾನೆ ಅಲ್ವ?’

ಕೇಶವನ ಕೊನೆಯ ಮಾತು ಕೇಳಿಸಿಕೊಳ್ಳುತ್ತ ಧೀರವೂ ದರ್ಪಿಷ್ಠವೂ ಎನ್ನಿಸಿದ ಗೋಡೆಯಮೇಲಿನ ಚಿತ್ರದ ಮೋರೆಯನ್ನು ನೋಡಿ ಗೌರಿ ತನ್ನಲ್ಲೇ ನಸುನಕ್ಕಳು. ಗಡ್ಡ ಮೀಸೆಯವ ಇನ್ನೊಬ್ಬ ಹಿರಣ್ಯಾಕ್ಷನಂತೆ ಅವಳಿಗೆ ಕಂಡಿದ್ದ.

ಘನಶ್ಯಾಮ ಈ ಮಾತುಗಳಿಂದ ಉತ್ತೇಜಿತನಾದ:

‘ಒಪ್ಪಿದೆ. ಬೆಂಗಳೂರಿನಲ್ಲಿರೋ ಡಾಕ್ಟರ್ ರಾಮರಾಯರು ನಮ್ಮ ದೇವತಾವಿಗ್ರಹಗಳ ಬಗ್ಗೆ ತುಂಬ ಚೆನ್ನಾಗಿ ಬರೀತಾರೆ. ನಾನದನ್ನ ಮೆಚ್ಚಿಕೊಂಡಿದೀನಿ. ಆದರೆ ನೀವದರ ಪೂಜೇನ ನಿತ್ಯ ಮಾಡಬೇಕು ಅನ್ನೋದು ಬೇರೆ ವಿಷಯ.’

ಕೇಶವ ಸುಮ್ಮನಾದ್ದನ್ನು ನೋಡಿ ಘನಶ್ಯಾಮನಿಗೆ ನೋವಾಯಿತು. ಪೂಜೆ ಬೇಡವೆಂದರೆ ತನ್ನನ್ನು ಕೆಲಸದಿಂದ ‘ಸಾಹುಕಾರ’ನಾದ ಈ ಘನಶ್ಯಾಮ ವಜಾಮಾಡಿದಂತೆ ಎಂದು ಕೇಶವ ತಿಳಿದಿರಬಹುದು.

‘ಪ್ಲೀಸ್, ತಪ್ಪು ತಿಳಿಯಬೇಡಿ. ಪೂಜೆಗೆ ಅರ್ಥವಿಲ್ಲ ಅಂದರೆ ನಿಮ್ಮ ಸೇವೆಯನ್ನ ನಿರ್ಲಕ್ಷಿಸಿದಂತೆ ಅಂತ ನೀವು ತಿಳಿಯಬಾರದು’.

‘ಛೆ. ನಾನು ಹಾಗೆ ತಿಳಿದಿಲ್ಲ. ಸಾಹುಕಾರ‍್ರಿಗೆ ಇಷ್ಟವಾದ್ದನ್ನ ಮಾಡಿಕೊಂಡಿರೋದು ನನ್ನಂಥವರ ಕೆಲಸ. ಪೂಜೆ ತಪ್ಪಿದರೆ ಹಳ್ಳಿ ಜನಕ್ಕೆ ನಿಮಿತ್ಯ ಹೇಳಿಕೊಂಡು ಬದುಕಬಹುದು. ಅಲ್ಲಿ ಇಲ್ಲಿ ಹೋಗಿ ಪ್ರವಚನಮಾಡಿ ಬದುಕಬಹುದು. ನಿಮಗೆ ಸತ್ಯಾಂತ ತಿಳಿದ ಹಾಗೆ ನೀವು ಸಾಹುಕಾರ‍್ರು ಬದುಕಬೇಕು’.

ಯಾವ ಕಹಿಯಿಲ್ಲದಂತೆ, ಆದರೆ ನಿಷ್ಠುರವಾಗಿಯೇ, ಆಡಿದ ಕೇಶವನ ಈ ಮಾತುಗಳಿಂದ ಘನಶ್ಯಾಮ ತಬ್ಬಿಬ್ಬಾದ.

‘ಕ್ಷಮಿಸಿ, ನಾನು ಹೇಳಕ್ಕೆ ಹೊರಟಿದ್ದೇ ಬೇರೆ. ಪೂಜೆಗಳಲ್ಲ ನಿಮ್ಮನ್ನ ನಾವು ಇಟ್ಟುಕೋಬೇಕಾದ್ದು. ನಿಮ್ಮ ಅಪಾರವಾದ ಸಂಸ್ಕೃತ ಜ್ಞಾನವನ್ನು ನಾವು ಈಗ ಬಳಸಿಕೊಳ್ತ ಇಲ್ಲ. ನನ್ನ ಮನಸ್ಸಿನಲ್ಲಿರೋದನ್ನ ಹೇಳಬಿಡ್ತೀನಿ ಕೇಳಿ. ನನ್ನ ಉದ್ದೇಶ ಇಲ್ಲೊಂದು ತಾಳಮದ್ದಲೆ ಕಲೆಯ ಅಕಾಡಮಿ ಮಾಡಬೇಕು; ಸಂಸ್ಕೃತ ಭಾಷೆಯನ್ನ ಕಲಿಸಬೇಕು; ರಿಲಿಜನ್ನಿಗೆ ಸಂಬಂಧಿಸಿದಂತೆ ರಿಸರ್ಚ್‌ ನಡೀಬೇಕು. ನೀವೇ ಇದನ್ನೆಲ್ಲ ಮಾಡಬೇಕು. ನಿಮ್ಮ ಉಪಕಾರವನ್ನ ನಾನು ಎಂದೂ ಮರೆಯಲ್ಲ.’

ಘನಶ್ಯಾಮನಿಗೆ ತನ್ನಮಾತಿನಲ್ಲಿ ಹೇಗೋ ನುಸುಳಿದ ಇಂಗ್ಲಿಷ್ ಶಬ್ದಗಳಿಂದ ನಾಚಿಕೆಯಿತು. ತಡವರಿಸಿ ಹೇಳಿದ:

‘ನನಗೆ ಇದೊಂದು ದೊಡ್ಡ ಆಶ್ಚರ್ಯ. ಮಡಿವಂತರಾದ ನಿಮ್ಮ ಅಕ್ಕ ನನ್ನ ತಂಗಿಯ ಮಗುವನ್ನ, ಅದರಲ್ಲೂ ಅಂತರ್ಜಾತೀಯವೂ ಅಲ್ಲ, ಅಂತರ್ಮತೀಯ ಸಂಬಂಧದಿಂದ ಹುಟ್ಟಿದ ಮಗುವನ್ನ, ತನ್ನದೂಂತಲೇ ತಿಳಿದು ಸಾಕ್ತಾ ಇದಾರಲ್ಲ – ಅದು ಅದ್ಭುತವಾದ್ದು. ಇದನ್ನು ಕೇಳಿದ ಯಾರಾದರೂ ಒಬ್ಬ ಮಡಿ ಹೆಂಗಸಿಗಿದು ಸಾಧ್ಯ ಅಂದುಕೊಂಡಾರ?’

ಇಷ್ಟು ಹೊತ್ತೂ ಸುಮ್ಮನೇ ಕೂತಿದ್ದ ಗೌರಿ ಯಾವ ಉದ್ವೇಗವನ್ನೂ ತೋರದೇ, ಆದರೆ ಹಂಗಿಸುವಂತೆ, ಅಲ್ಲಿ ಕೂತ ಎಲ್ಲರೂ ಬೆಚ್ಚುವಂತೆ ಹೇಳಿದಳು:

‘ನೀವು ಹೇಳ್ತಿರೋದು ಕೇಳಿದ್ರೆ ಅಂಥ ಒಂದು ಮಗುವನ್ನ ನಿಮ್ಮಂಥ ವಿಚಾರವಾದಿಗಳು ನೋಡಿಕೊಂಡಿದ್ರೆ ಅದೇನೂ ವಿಶೇಷವಾಗ್ತ ಇರಲಿಲ್ಲ; ಆಗ ಅದು ತುಂಬಾನೇ ಸಹಜವಾಗಿ ಇತ್ತು. ಯಾಕೇಂದ್ರ ಇಂಗ್ಲಿಷ್ ಕಲಿತ ನೀವು ತುಂಬಾನೇ ಸಾಚ; ಎಲ್ಲರಿಗಿಂತ  ಮುಂದಿರೋರು. ಆದರೆ ನಮ್ಮ ಅಕ್ಕ ಹಾಗೆ ತಲೆಬೋಳಿಸಿಕೊಂಡ ಮಡಿಹೆಂಗಸೊಬ್ಬಳು ಏನೂ ತಿಳಿಯದ ಮೂಢಳೇ ಇರಬೇಕು ಅಲ್ಲವೆ? ಅಂಥವಳು ಕ್ರೂರಿಯಾಗಿರೋದೇ ಸಹಜ; ಆದರೆ ಹಾಗಾಗದೆ ಅವಳು ಮನುಷ್ಯಳಂತೆ ವರ್ತಿಸಿದಾಳಲ್ಲ ಅದು ಬಹಳ ಅಪರೂಪಾಂತ ನಮ್ಮನ್ನ ಇಲ್ಲಿ ಕೂರಿಸಿಕೊಂಡು ಬೆನ್ನು ತಟ್ಟಿ ಹೊಗಳೋದೇ ನನಗೆ ದರ್ಪದ ಮಾತು ಅನ್ನಿಸತ್ತೆ. ನಿಮ್ಮ ಬಿಳಿಜನ ಇಲ್ಲಿ‌ಬರೋ ಮುಂಚೆ ನಾವೆಲ್ಲ ಕಾಡುಮನುಷ್ಯರಾಗಿದ್ದೆವು ಅಂತ ನೀವು ತಿಳಿದಿರೋಹಾಗಿದೆ.’

ಕೆಂಡದಹಾಗೆ ಸುಡುವ ಈ ಮಾತುಗಳನ್ನು ಕೇಳಿಸಿಕೊಂಡ ಈ ಕ್ಷಣದಿಂದಲೇ, ಘನಶ್ಯಾಮನಿಗೆ ತಂದೆಯ ಶುಶ್ರೂಷೆಯಲ್ಲಿದ್ದಾಗ ಗೌರಿಯನ್ನು ಕಂಡೊಡನೆ ಹುಟ್ಟಿದ್ದ ಅವಳಮೇಲಿನ ಆಸೆ ಇನ್ನಷ್ಟು ಗಾಢವಾದ್ದು. ಅವಳಷ್ಟು ಗೂಢಳೂ ದಿಟ್ಟಳೂ ಗಂಭೀರಳೂ ಆದ ಚೆಲುವೆಯನ್ನು ಅವನು ಕಂಡಿರಲಿಲ್ಲ. ಅವನು ವಿದ್ಯಾರ್ಥಿಯಾಗಿದ್ದಾಗ ಹಲವು ಚೆಲುವೆಯರು ಅವನ ಗೆಳತಿಯರಾಗಿದ್ದರು; ಆದರೆ ಯಾರೂ ಗೌರಿಯಂತೆ ಅವನನ್ನು ಬೆರಗುಗೊಳಿಸಿರಲಿಲ್ಲ. ಲಜ್ಜೆಯದೆಂದು ತೋರುವ ಅವಳ ಮುಖದ ಭಾವ ಈಗ ಸಿಟ್ಟಿನಲ್ಲಿ ಕೆಂಪಾಗಿತ್ತು.

ಆದರೆ ತನ್ನ ಮುಜುಗರ ತೋರದೆ ಘನಶ್ಯಾಮ ವಾದಿಸಿದ:

‘ನಾನು ಹಾಗೆ ಅಂದುಕೊಂಡಿಲ್ಲ. ಪ್ಲೀಸ್, ಕ್ಷಮಿಸಿ. ವಾದಕ್ಕೆ ಹೇಳ್ತೀನಿ ಅಂತ ತಿಳೀಬೇಡಿ. ನಮ್ಮ ಸಾಂಪ್ರದಾಯಿಕ ಸಮಾಜ ಕ್ರೂರವಲ್ಲದೆ ಮತ್ತೇನು? ಈ ಹಳ್ಳೀಲೇ ಒಬ್ಬ ಹರಿಜನ ಯುವಕನ ಕೊಲೆ ಯಾಕಾಯ್ತು? ಆ ಕೊಳಕು ಮನುಷ್ಯ ಗಣಪಯ್ಯನ ಪರವಾಗಿ ನನ್ನ ಅಪ್ಪಯಾಕೆ ಸುಳ್ಳು ಸಾಕ್ಷ್ಯ ಹೇಳಬೇಕಾಗಿ ಬಂತು?’

ವಿನೋದಿನಿ ಖುಷಿಯಲ್ಲೂ ಉಮೇದಿನಲ್ಲೂ ಗೌರಿಯ ಪರವಾಗಿ ವಾದಿಸಿದಳು:

‘ಹೌದಪ್ಪ. ವಿಚಾರವಾದಿಗಳೂ, ವಿಜ್ಞಾನಿಗಳೂ ತುಂಬಿ ತುಳುಕುತಾ ಇರುವ ದೇಶದ ಇಂಗ್ಲಿಷ್ ಜನರು ಈ ನಮ್ಮ ದೇಶಾನ್ನ ಹರಿದು ಹರಿದು ತಿನ್ನಬಹುದು; ಯೆಹೂದ್ಯರನ್ನ ಅಣ್ಣನ ಪ್ರೀತಿಯ ಇನ್ನೊಂದು ದೇಶ ಜೀವಂತ ಸುಟ್ಟುಹಾಕಬಹುದು; ಆಟಂಬಾಂಬನ್ನು ಹಾಕಿ ಮಕ್ಕಳುಮರೀಂತ ನೋಡದೆ ಜಪಾನಿನಲ್ಲಿ ಊರಿಗೆ ಊರನ್ನೇ ಸುಟ್ಟುಹಾಕಬಹುದು; ಅಮೇರಿಕಾದ, ಆಸ್ಟ್ರೇಲಿಯಾದ ಮೂಲನಿವಾಸಿಗಳ ದೇವರನ್ನ, ಭಾಷೆಯನ್ನ, ಇಡೀ ಜೀವನ ಕ್ರಮವನ್ನ ನಾಶಮಾಡಿ ಅವರಿಗೆ ಸೇರಿದ ಭೂಭಾಗವನ್ನೆಲ್ಲ ಆಕ್ರಮಿಸಿಕೊಳ್ಳಬಹುದು. ಆದರೆ ಇಂಥ ದೇಶಗಳ ಕೆಲವು ಬಾಯಿಬಡುಕರು ಹೇಳಿದ್ದೆಲ್ಲ ನಮ್ಮ ಅಣ್ಣನಿಗೆ ನಿಜ. ಆದರೆ ಕಾಡಿನಲ್ಲಿ ಬದುಕಿಕೊಂಡಿದ್ದ ಋಷಿಗಳು ಮಾಡಿದ ವಿಚಾರಗಳೆಲ್ಲ ಅವನಿಗೆ ಅಪ್ರಸ್ತುತ. ಅಲ್ಲಿ ಕಾಣೋದೆಲ್ಲ ಚೆಂದ, ವಿನಾಯಿತಿಗೆ ಅಲ್ಲೊಂದು ಇಲ್ಲೊಂದು ಅವರಿಂದ ತಪ್ಪಾಗಿರಬಹುದು. ಇಲ್ಲಿ ಇರೋದೆಲ್ಲ ಕೊಳಕೇ, ಆದರೆ ವಿನಾಯಿತಿಗೆ ಅಲ್ಲೊಂದು ಇಲ್ಲೊಂದು ಒಳ್ಳೇದು ಆಗಿರಬಹುದು ಅಂತ ನೀನು ಹೇಳೋದು ಅಲ್ಲವ?’

ಘನಶ್ಯಾಮನಿಗೆ ವಿನೋದಿನಿಯ ವೈಚಾರಿಕತೆಯ ರಭಸ ದಂಗು ಬಡಿಸಿತು. ಅವಳು ತಿಳಿದಂತೆ ತಾನು ಯೋಚಿಸುತ್ತಿರುವುದಲ್ಲ ಎಂದು ಅವನು ವಾದಿಸಬಹುದಾಗಿತ್ತು; ಆದರೆ ಅವನ ಎದುರು ದುತ್ತೆಂದು ಎದ್ದ ಪ್ರಶ್ನೇಯೇ ಬೇರೆ. ತನ್ನ ಅಪ್ಪನಿಗೂ ತಾಯಿಗೂ ಇದ್ದ  ಅವಮಾನಕಾರಕರವಾದ ಸಂಬಂಧದಿಂದ ಇವಳು ನಮ್ಮ ಇಡೀ ಸಂಸ್ಕೃತಿಗೆ ವಿರೋಧಿಯಾಗಿರಬೇಕಿತ್ತು. ಅದರ ಬದಲಾಗಿ ಯಾವ ಸತ್ಯ ಇವಳಿಂದ ಇಂಥ ಮಾತುಗಳನ್ನಾಡಿಸುತ್ತಿದೆ?

ಎಲ್ಲರನ್ನೂ ಸುಮ್ಮನೇ ಕೂತು ಬಿಡುವಂತೆ ತಾನು ಹುರುಪಿನಲ್ಲಿ ಮಾತಾಡಿಬಿಟ್ಟೆನೆಂದು ವಿನೋದಿನಿ ನಾಚಿದಳು. ಆದರೆ ಮುಂದುವರಿದಳು, ಸ್ವಲ್ಪ ಮೆತ್ತಗೆ:

‘ಇಲ್ಲಿರೋದೆಲ್ಲ ಸರಿ ಅಂತ ನಾನು ಹೇಳ್ತ ಇಲ್ಲ. ಕ್ರೌರ್ಯ ಸಣ್ಣತನ ಅಸೂಯೆ ದುರಾಸೆ ಎಲ್ಲಿ ಇಲ್ಲ? ವಿಚಾರ ವಿಚಾರ ಅಂತ ಅಣ್ಣ ಹೇಳ್ತಾನೆ ಅಲ್ಲವ? ಅಣ್ಣನ ಕಡೆಯ ಬಿಳಿಜನ ನಮ್ಮ ದೇಶಕ್ಕೆ ಬರೋಕೆ ಮುಂಚೆ ಈ ದೇಶದಲ್ಲಿ ತನ್ನ ಅಪ್ಪ ಯಾರು ಅಂತ ಗೊತ್ತಿಲ್ಲದೇ ಇರೋ ಸತ್ಯಕಾಮ ಜಾಬಾಲಿ ಇದ್ದ; ದೇವರು ಇದಾನೊ ಇಲ್ಲವೊ ಅನ್ನೋದೆ ಅಪ್ರಸ್ತುತ ಅಂತ ತಿಳಿದಿರೋ ಬುದ್ಧ ಇದ್ದ. ಬ್ರಾಹ್ಮಣ ಕನ್ಯೆಗೂ ಹರಿಜನರಿಗೂ ಮದುವೆ ಮಾಡಿಸಿದ ಬಸವ ಇದ್ದ, ಈ ಕಡೆಯವಳೇ ಅನ್ನಬಹುದಾದ ಅಕ್ಕ ಇದ್ದಳು. ಯಾಕೆ ಅಷ್ಟು ದೂರ? ಈ ಊರಲ್ಲೇ ಅಕ್ಕಮ್ಮನೇ ಇದಾರೆ. ಅಣ್ಣ ಹೇಳ್ತಿರೋದೇನೂ ಹೊಸ ವಿಚಾರ, ನಮಗದು ಬೇಡ ಅಂತ ನಾನು ನಿರಾಕರಿಸೋದು ಅಲ್ಲ’.

ಘನಶ್ಯಾಮ ತಂಗಿಯ ಮಾತನ್ನು ಮೆಚ್ಚಿಕೊಂಡೇ ಹೇಳಿದ:

‘ನೀನು ಹೇಳ್ತಿರೋ ಮಾತನ್ನ ನೂರಕ್ಕೆ ನೂರು ಒಪ್ತೀನಿ ಅಂತ ನಾನು ಅಂದು ಬಿಟ್ರೆ ನೀನೇನು ಆಗ ವಾದ ಮಾಡ್ತೀಯ?’

ವಿಮಲ ತನ್ನ ತಂಗಿಯ ಮಾತನ್ನು ತುಂಬ ಇಷ್ಟಪಟ್ಟು, ಅಣ್ಣನ ಮಾತುಗಳನ್ನೂ ಅಷ್ಟೇ ಇಷ್ಟಪಟ್ಟು ಕೇಳಿಸಿಕೊಂಡಳು. ಗೌರಿ ಮಾತ್ರ ಗಂಭೀರವಾಗಿ ಬಿಟ್ಟಿದ್ದಳು.

ಘನಶ್ಯಾಮ ಎದ್ದು ನಿಂತ. ಎಲ್ಲರೂ ಎದ್ದು ನಿಂತರು. ಕೇಶವನ ಹತ್ತಿರ ನಿಂತು ಘನಶ್ಯಾಮ ಮೃದುವಾಗಿ ಹೇಳಿದ:

‘ನಿಮಗೆ ಇಷ್ಟವಿದ್ದರೆ ಭೂವರಾಹ ವಿಗ್ರಹವನ್ನು ನಿಮಗೆ ಕೊಡ್ತೇನೆ. ತಗೊಂಡು ಹೋಗಿ. ಇವತ್ತಿನಿಂದಲೇ ಇಲ್ಲಿ ನೀವು ಟ್ರಸ್ಟಿನ ಸೆಕ್ರಟರಿಯಾಗಿ, ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಶುರು ಮಾಡಬೇಕೂಂತ ಕೇಳೀಕೋತೇನೆ. ಪ್ಲೀಸ್’

‘ಪ್ಲೀಸಾಗಿದೇನೆ, ಸಾಹುಕಾರರ ಇಷ್ಟಾನುಸಾರ ಮಾಡ್ತೇನೆ’ ಅಂತ ಹೇಳಬೇಕೆಂದು ಗಂಟಲಿಗೆ ಬಂದ ಮಾತನ್ನು ಕೇಶವ ತಡೆದುಕೊಂಡ. ವಿನೋದದ ತನ್ನ ಮಾತುಗಾರಿಕೆಗೆ ಇದು ಸಮಯವಲ್ಲೆಂದು ಗೌರಿಯ ಮುಖಭಾವದಿಂದ ಗ್ರಹಿಸಿ ಸುಮ್ಮನಾದ.