ಗುಡ್ಡ ಸುತ್ತಿ ಬರುತ್ತೇನೆ ಎಂದು ಗೌರಿ ಇನ್ನೊಂದು ಕಾಲು ದಾರಿಯಲ್ಲಿ ನಡೆದು ಬಿಟ್ಟಳು.

ಕರಿಯ ಕೊಟ್ಟ ಹುಲಿಯುಗರನ್ನು ಧರಿಸಿ ನಾಗರಬನ ಅಲೆಯಬೇಕು, ಅವನು ಬೆರಗಿನಲ್ಲಿ ತನಗೆ ತೋರುತ್ತಿದ್ದುದನ್ನೆಲ್ಲ ಮತ್ತೆನೋಡಬೇಕು, ಅವನು ಕೊಳಲೂದುತ್ತ ಅಲ್ಲಿ ಕೂತು, ತಾನು ಅಷ್ಟು ದೂರ ಅವನು ಹಾಸಿದ ಹುಲ್ಲಿನ ಮೇಲೆ ಸುಮ್ಮನೇ ಮೋಡದಾಟ ನೋಡುತ್ತ ಕೂರುತ್ತಿದ್ದ ಜಾಗದಲ್ಲಿ ಸುಮ್ಮನೇ ಕೂತೆದ್ದು ಬರಬೇಕೆಂದು ಕೆಲವು ಸಾರಿ ಅನ್ನಿಸಿದ್ದರೂ ಆಗಿರಲಿಲ್ಲ. ಕರಿಯನ ಸಾವಿನ ನಂತರ ಅವಳು ಗುಡ್ಡಹತ್ತಿ ಒಬ್ಬಳೇ ಕೂತದ್ದೇ ಇಲ್ಲ.

ಹುಷಾರು ತಪ್ಪಿದ ಮಕ್ಕಳನ್ನೋ, ಹುಟ್ಟಿದ ಕೂಸುಗಳನ್ನೋ ಅವಳಿಂದ ಮುಟ್ಟಿಸಿಕೊಳ್ಳಲು ಹಳ್ಳಿಯ ಜನ ಓಡಿಬರುತ್ತಾರೆ.

ಗೌರಿಗೆ ಇದರಿಂದ ಆಗುವ ಕಸಿವಿಸಿಯನ್ನು ಕೇಶವ ಗಮನಿಸಿದ್ದಾನೆ. ಅಕ್ಕು ಈ ಬೆಳವಣಿಗೆಯಿಂದ ಭೀತಳೇ ಆಗಿದ್ದಾಳೆ ಎನ್ನಬಹುದು. ಇವತ್ತೇನೋ ಘನಶ್ಯಾಮನ ಜೊತೆ ವಾದಿಸಿದ ನಂತರ ಅವಳು ಚಿಂತಾಕ್ರಾಂತಳಾದಂತೆ ಕೇಶವನಿಗೆ ಭಾಸವಾಗಿದೆ; ಪ್ರಾಯಶಃ ಅವಳಿಗೆ ಒಬ್ಬಳೇ ಇರಬೇಕೆನ್ನಿಸಿದೆ.

ಕೇಶವನೊಬ್ಬನೇ ಮನೆಗೆ ಬರುವಾಗ ಸಂಜೆಯಾಗಿತ್ತು. ಕೃಷ್ಣಶಾಸ್ತ್ರಿಗಳು ಚಾವಡಿಯಲ್ಲಿ ಮಣೆಯಮೇಲೆ ಕೂತು ಅಕ್ಕು ಜೊತೆ ಏನೋ ಗಂಭೀರವಾಗಿ ಮಾತಾಡುತ್ತ ಕೂತಂತೆ ಇತ್ತು.

ಕೇಶವ ಬಂದದ್ದೇ ಅವರ ಕಾಲು ಮುಟ್ಟಿ ನಮಸ್ಕರಿಸಿದ.

‘ಅಕ್ಕುಗೆ ಹೇಳಿದಿರ? ಚಿಕ್ಕಸಾಹುಕಾರರ ಅಪ್ಪಣೆಯಾಗಿದೆ, ಇನ್ನು ಮುಂದೆ ಭೂವರಾಹನಿಗೆ ಪೂಜೆ ಇಲ್ಲ, ಅವನಿಗಿನ್ನು ಉಪವಾಸ ಅಂತ? ಅವರ ಭಾಷಣ ಕೇಳಿ ನೀವು ಹೊರಟು ಬಂದ ಮೇಲೆ ಆದದ್ದನ್ನ ಹೇಳಿ ಬಿಡ್ತೀನಿ. ಭೂವರಾಹನಿಗೆ ಇನ್ನು ಮುಂದೆ ಸಾಹುಕಾರ‍್ರು ಉಪವಾಸದ ಶಿಕ್ಷೆ ವಿಧಿಸಿದಾರೆಂದು ಮಾತ್ರಕ್ಕೆ ಈ ಕೇಶವನೆಂಬ ವೈದಿಕ ಬ್ರಾಹ್ಮಣನಿಗೂ ಉಪವಾಸದ ಶಿಕ್ಷೆ ವಿಧಿಸಿದಾರೆ ಅಂತ ಅರ್ಥವಲ್ಲ. ಇನ್ನು ಮುಂದೆ ಈ ಕೇಶವ ಭಟ್ಟ ಮಿಸ್ಟರ್ ಕೇಶವ ಭಟ್ಟ, ಸಾಹುಕಾರ್ ಟ್ರಸ್ಟಿನ ಸೆಕ್ರೆಟರಿ. ಕಾಗದ ಗೀಗದ ಬರಕೊಂಡು ಓಡಾಡೋ ಕೆಲಸದವನು. ಪಾರುಪತ್ಯೆದಾರರಂತೆಯೇ.’

ವಿನೋದದಲ್ಲಿ ಮಾತಾಡುವಂತೆ ಕಂಡರೂ ಕೇಶವ ವಿಷಾದಲ್ಲಿ ಅಂತರ್ಮುಖಿ ಆಗಿದ್ದನ್ನು ಅಕ್ಕು ಗಮನಿಸಿದಳು. ಕೇಶವ ಥಟ್ಟನೆ ಅಕ್ಕು ಕಡೆ ತಿರುಗಿ ಹೇಳಿ:

‘ಅಕ್ಕು ಸಾಹುಕಾರ‍್ರು ಹೇಳಿದ್ರು. ಬೇಕಾದರೆ ಭುವರಾಹ ವಿಗ್ರಹಾನ್ನ ನನಗೆ ಕೊಟ್ಟುಬಿಡ್ತಾರಂತೆ’

‘ಅದನ್ನ ಇಲ್ಲಿ ತಂದು ಏನು ಮಾಡ್ತೀಯ?’

ಅಕ್ಕು ಹೌಹಾರಿದವಳಂತೆ ಕೇಳಿದ್ದಳು.

‘ಯಾಕೆ? ನಿತ್ಯ ಮಾಡತ ಇದ್ದ ಹಾಗೆ ಸ್ವಾಮಿಯ ಪೂಜೇನ್ನ ಮನೆಲೇ ಮಾಡ್ತೀನಿ’

‘ಪ್ರಸಾದಕ್ಕೆ ಎರಡು ತಪ್ಪಲೆ ಅನ್ನಾನ್ನ ಎಲ್ಲಿಂದ ತಂದು ಬೇಯಿಸ್ತಿ?’

‘ಬ್ರಾಹ್ಮಣನಿಗೆ ಉಪನಯನದಲ್ಲಿ ಬೋಧಿಸಿದ ಮಂತ್ರ ಇದೆಯಲ್ಲ, ಭವತಿ ಭಿಕ್ಷಾಂದೇಹಿ. ಬೇಡಿ ಅಕ್ಕಿ ತರ್ತ್ತೀನಿ, ವರಾಹ ಸ್ವಾಮಿಗೆ ಅರ್ಪಿಸ್ತೀನಿ.’

ಸುಮ್ಮನಿದ್ದ ಕೃಷ್ಣಶಾಸ್ತ್ರಿಗಳು ನಗುತ್ತ ಕೇಳಿದರು:

‘ಕೇಶವ ಭಟ್ಟರೆ, ನೀವು ಹೇಳೋದೇನೊ ಸರಿ. ವರಾಹ ಸ್ವಾಮಿಯ ನೈವೇದ್ಯವನ್ನ ಯಾರಿಗೆ ಬಡಿಸ್ತೀರಿ? ಅಷ್ಟು ಜನ ಬ್ರಾಹ್ಮಣರು ಇಲ್ಲಿ ಎಲ್ಲಿದ್ದಾರೆ? ಶಾಲೆಯ ಮಕ್ಕಳಿಗೆ ಅದನ್ನು ಕೊಡೋಕೆ ನಿಮ್ಮ ಸಾಹುಕಾರ‍್ರು ಖಂಡಿತ ಒಪ್ಪಲ್ಲ ಅಲ್ಲವ?’

‘ಊರಿನ ಆಳುಕಾಳುಗಳನ್ನು ಕರೆದು ಅನ್ನ ಬಡಿಸ್ತೀನಿ’.

ಕೃಷ್ಣಶಾಸ್ತ್ರಿಗಳು ಗಟ್ಟಿಯಾಗಿ ನಕ್ಕರು. ಅವರ ನಿಲ್ಲದ ನಗುವನ್ನುಕಂಡು ಕೇಶವ ತಬ್ಬಿಬ್ಬಾಗಿ ಕೇಳಿದ:

‘ಯಾಕೆ ನಗ್ತೀರ?’

‘ಭಟ್ಟರೇ, ನಿಮಗಿದು ಗೊತ್ತಿದೇಂತೆ ತಿಳಿದಿದ್ದೆ. ಕಾಯಕ ಜೀವಿಗಳಾದ ಶೂದ್ರರು ದುಡಿದೇ ತಿನ್ನಬೇಕೆಂಬ ನಿಯಮದವರು. ಸ್ವತಃ ದುಡಿಮೆ ಮಾಡದೇ ಅವರು ಭಿಕ್ಷೆಯಮೇಲೆ ಬದುಕೋಕೆ ಶುರು ಮಾಡಿದ್ರೆ ಅವರ ಆತ್ಮಾಭಿಮಾನವೇ ಕುಂಠಿತವಾಗಿ ಬಿಡತ್ತೆ. ಬ್ರಾಹ್ಮಣರು ಮಾತ್ರ ಭಿಕ್ಷಾನ್ನಕ್ಕೆ ಅರ್ಹರು ಅಂತ ನಮ್ಮ ಸಮಾಜ ಯಾಕೆ ತಿಳಿದುಕೊಂಡು ಬಂದಿತ್ತು ಹೇಳ್ತೀನಿ ಕೇಳಿ. ಒಳ್ಳೆಯ ಕಾಲವೊಂದಿತ್ತು. ಆಗ ಬ್ರಾಹ್ಮಣರು ಇಡೀ ಲೋಕಕ್ಕೆ ಉಪಯುಕ್ತವೆನ್ನಿಸಿದ ವೇದಾಧ್ಯಯನದಲ್ಲಿ ಅಹರ್ನಿಶಿ ನಿರತರಾದವರಾಗಿದ್ದರು. ಈ ವೇದೋಪನಿಷತ್ತುಗಳನ್ನು ಎಷ್ಟೆಲ್ಲ ಪರಕೀಯರ ಆಕ್ರಮಣದ ಕಾಲದಲ್ಲೂ ಬಾಯಲ್ಲಿ ಕಲಿತು ನೆನಪಿನಲ್ಲಿ ಉಳಿಸಿಕೊಂಡು ಬಂದವರು ಯಾರು ಹೇಳಿ? ಬ್ರಾಹ್ಮಣ ಈ ಅಪೌರುಷೇಯ ಮಂತ್ರಗಳನ್ನು ಒಂದಕ್ಷರ ಕೆಡದ ಹಾಗೆ ನೆನಪಿನಲ್ಲಿ ಉಳಿಸಿಕೊಳ್ಳೊ ಕೆಲಸವನ್ನ ಪರಂಪರಾನುಗತವಾಗಿ ಮಾಡ್ತಾನೆ ಅಂತ, ಅದೊಂದು ಉಪಯುಕ್ತವಾದ ಕೆಲಸ ಅಂತ ಸಮಸ್ತರೂ ತಿಳಿದ್ದರಿಂದ, ಬ್ರಾಹ್ಮಣನಿಗೆ ಭಿಕ್ಷೆಯನ್ನು ಸ್ವೀಕರಿಸುವ ಅಧಿಕಾರ ಪ್ರಾಪ್ತವಾದದ್ದು. ಈಗ ಕಾಲ ಬದಲಾಗಿದೆ. ವೇದೋಪನಿಷತ್ತುಗಳು ಪುಸ್ತಕಗಳಲ್ಲಿ ಎಲ್ಲರಿಗೂ ಸಿಗುತ್ತವೆ. ಆದರೂ ಬ್ರಾಹ್ಮಣ ಮಾತ್ರ ಮೈ ಬಗ್ಗಿಸಿ ದುಡೀದೆ, ವೇದಗಳನ್ನೂ ಕಲಿಯದೆ ಭಿಕ್ಷೆಗೆ ಕೈಯೊಡ್ಡಿ ನಗೆಪಾಟಲಿಗೆ ಒಳಗಾಗಿ ಬಿಟ್ಟಿದಾನೆ. ಇದು ಇತಿಹಾಸದ ಸತ್ಯ. ಬ್ರಾಹ್ಮಣ ಜಾತಿಯಿಂದಾಗಿಯೇ ಶ್ರೇಷ್ಠ ಅನ್ನೋ ಕಾಲ ಮುಗೀತು ಅಂತ ತಿಳಿದುಕೊಳ್ಳಿ. ಹಿಂದೆಯೂ ಅವನು ಮಾತ್ರ ಶ್ರೇಷ್ಟ ಅಂದುಕೊಂಡರೂ ಅದು ನಿಜವಾಗಿರಲಿಲ್ಲ. ಎಷ್ಟೋ ಪೂರ್ವಕಾಲದ ಋಷಿಗಳು ಬ್ರಾಹ್ಮಣರೇ ಅಲ್ಲ. ಅದು ಬಿಡಿ. ಭೂವರಾಹ ಹಸಿದಿರ್ತಾನೆ ಅಂತ ನಿಮ್ಮ ಕನಿಕರ ಅವನಿಗೆ ಬೇಕಾಗಿಲ್ಲ. ಎಲ್ಲರನ್ನೂ ಪೊರೆಯೋವನು ಅವನೋ, ಅವನನ್ನು ಪೊರೆಯುವವರು ನಾವೋ?’

ಕೃಷ್ಣ ಶಾಸ್ತ್ರಿಗಳು ಭಾವವಶರಾಗಿ ಮಾತಾಡಿದ್ದರು. ಅಕ್ಕು ಗೌರವದಿಂದ ಅವರ ಮಾತನ್ನು ಕೇಳಿಸಿಕೊಂಡಿದ್ದಳು ಎಂಬುದನ್ನು ಗಮನಿಸಿ ಕೇಶವನಿಗೆ ಖುಷಿಯಾಯಿತು.

ಕೃಷ್ಣಶಾಸ್ತ್ರಿಗಳು ಪದ್ಮಾಸನದಲ್ಲಿ ಮಣೆಯಮೇಲೆ ಕೂತವರು ಮಾತನ್ನು ಮುಂದುವರಿಸಿದರು:

‘ಘನಶ್ಯಾಮ ತಾನೊಬ್ಬ ವಿಚಾರವಾದಿ, ಲೋಕಹಿತಕ್ಕಾಗಿ ತಾನಿದನ್ನು ಮಾಡ್ತಾ ಇದೇನೆ ಅಂತ ತಿಳಿದಿದಾರೆ. ಅವರೊಳಗೊಂದು, ನನಗಂತೂ ಪೂರ್ವಜನ್ಮ ಪುಣ್ಯವಶಾತ್ ಪ್ರಾಪ್ತವಾದ್ದೆಂದೇ ಕಾಣುವ, ದೃಢತೆ ಇರುವಂತೆ ತೋರುತ್ತದೆ. ಇಂಥ ಒಂದು ಶಕ್ತಿಯನ್ನು ಅವರ ಸಾಹುಕಾರಿನ ತಂದಿದೆ ಎನ್ನೋದರಲ್ಲಿ ನಿಜವಿದೆ. ಆದರೆ ಅಷ್ಟು ಮಾತ್ರವಲ್ಲ. ಆ ಶಕ್ತಿಯ ಹಿಂದೆ ನಮ್ಮ ಕಾಲದ ಚರಿತ್ರೆಯ ಪ್ರೇರಣೆಯೂ ಇದೆ. ಪ್ರಕೃತಿಯನ್ನು ಗೆದ್ದು ಮನುಷ್ಯನ ಇಚ್ಛೆಗೆ ಅದನ್ನು ಅಧೀನಗೊಳಿಸಬೇಕೆಂಬ ಮನುಷ್ಯನ ಆಸೆ, ಅಂದರೆ ದುರಾಸೆ, ಕೆಲವು ಸಾರಿತೀಟೆ – ಈ ನಮ್ಮ ಕಾಲದ ಚರಿತ್ರೆಯ ಮೂಲ ಪ್ರೇರಣೆಯಾಗಿದೆ. ಭಗವಂತ ತನ್ನ ಲೀಲೆಯಲ್ಲಿ ಮನುಷ್ಯನ ಭಯಂಕರವಾದ, ಸರ್ವಜೀವಿಗಳಿಗೂ ಆಪತ್ಕಾರಿಯಾದ, ಈ ತೀಟೆಗೂ ಅವಕಾಶ ಮಾಡಿಕೊಡುತ್ತಾನೆ, ಪುರಾಣಗಳಲ್ಲಿ ದಾನವರಿಗೆ ಅವಕಾಶಮಾಡಿಕೊಟ್ಟಂತೆಯೇ. ಇದು ಕೆಲವು ಕಾಲ, ಮಾತ್ರ, ಆದರೆ ಎಷ್ಟು ಕಾಲ ಹೇಳುವಂತಿಲ್ಲ…

ಒಂದು ಬಗೆಯ ರಾವು ಅದು. ಸರ್ವೇಂದ್ರೀಯಗಳ ರಾವು. ಅದು ನೋಡಬೇಕು, ಇದು ನೋಡಬೇಕು ಅನ್ನೋ ಕಣ್ಣಿನ ರಾವು; ಅದು ತಿನ್ನಬೇಕು ಎನ್ನೋ ನಾಲಗೆಯ ರಾವು; ಎಲ್ಲ ಸುಖಗಳನ್ನೂ ಅನುಭವಿಸಬಿಡಬೇಕೆಂಬ ಕಾಮೇಂದ್ರಿಯಗಳ ರಾವು; ಶ್ರವಣ ಸುಖದ ರಾವು, ಘ್ರಾಣಸುಖದ ರಾವು – ಮನುಷ್ಯ ಸರ್ವಭಕ್ಷಕನಾಗಿ ಈ ಭೂದೇವಿಯನ್ನೆ ಹರಿದು ಹರಿದು ತಿನ್ನಲು ಶುರುಮಾಡುತ್ತಾನೆ…

ಪಾಪ, ನಿಮ್ಮ ಚಿಕ್ಕ ಸಾಹುಕಾರಂತಹ ರಾಜಸಿಕ ಗುಣದ ಆದರ್ಶವಾದಿಗಳು ಬಡತನದ ನಿರ್ಮೂಲನ, ಶೋಷಣೆರಹಿತ ಸಮಾಜದ ನಿರ್ಮಾಣ, ಇತ್ಯಾದಿ ಇತ್ಯಾದಿಯಲ್ಲಿ ನಿಜವಾದ ನಂಬಿದವರಾಗಿದ್ದೇ, ಆ ಕಾರಣಕ್ಕಾಗಿಯೇ ಪ್ರಕೃತಿಯನ್ನು ಗೆಲ್ಲಬೇಕೆಂದು ಹೊರಟು, ಪಾಪ, ತಮಗೆ ಗೊತ್ತಿಲ್ಲದಂತೆಯೇ ಒಂದು ದೊಡ್ಡ ಆಸೆಬುರುಕ ಸಮಾಜದ ನಿರ್ಮಾನಕ್ಕೆ ಕಾರಣರಾಗಿಬಿಡುತ್ತಾರೆ. ಚರಿತ್ರೆಯಲ್ಲಿ ಗೂಢವಾಗಿ ಕೆಲಸ ಮಾಡುವ ಶಕ್ತಿಗಳು ಉದಾತ್ತವಾದ ಮುಖವನ್ನೊಡ್ಡಿಯೇ ನಮ್ಮನ್ನು ಒಲಿಸಿಕೊಂಡು ದಾಸ್ಯಕ್ಕೆ ಒಳಪಡಿಸುತ್ತಾವೆ. ನಿಮ್ಮ ಚಿಕ್ಕ ಸಾಹುಕಾರರಂಥ ಹಲವರು, ನಿಜವಾದ ಭಾವುಕ ಪೆದ್ದರು, ಈ ದೇಶದಲ್ಲಿ ಇದ್ದಾರೆ. ಅವರೆಲ್ಲರೂ ಮರಿ ನೆಹರೂಗಳೆ.ಕೋಟಿನಲ್ಲಿ ಗುಲಾಬಿ ಹೂವನ್ನು ಸಿಕ್ಕಿಸಿಕೊಂಡು ನಸುನಗುವ ನೆಹರೂ ನಮ್ಮ ಕಾಲದ ಚರಿತ್ರೆಯಲ್ಲಿ ದುಮುಗುಡುತ್ತಿರುವ ತೀಟೆ ತೆವಲುಗಳ ಆಕರ್ಷಕವಾದ ಪ್ರತೀಕವೇ ಸರಿ…

ವೇದವ್ಯಾಸರು ಹೇಳೋ ಹಾಗೆ ಮೃತ್ಯು ಸದಾ ನನ್ನ ಜುಟ್ಟನ್ನ ಹಿಡಿದಿರುತ್ತೆ ಅನ್ನೋ ಪ್ರಜ್ಞೆಯಿಂದ ಮಾತ್ರ ಹೊಮ್ಮುವ ವೈರಾಗ್ಯದಲ್ಲಿ ಈ ತೆವಲಿನ ನಿರರ್ಥಕತೆ ಹೊಳೆದೀತು; ಹೊಳೀದೇನೇ ಇರಬಹುದೂಂತಲೂ ಅನ್ನಿ. ಧರ್ಮರಾಯ ಯಕ್ಷನಿಗೆ ಹೇಳಲ್ವ? ಪ್ರತಿದಿನವೂ ಜೀವಿಗಳು ಯಮಾಲಯವನ್ನು ಹೊಗುವುದನ್ನು ನೋಡಿಯೂ ನಾವು ಮಾತ್ರ ಸ್ಥಾವರ ಅಂತ ತಿಳಿದುಕೊಂಡು ಇರತೀವಲ್ಲವೆ, ಇದಕ್ಕಿಂತ ಹೆಚ್ಚು ಆಶ್ಚರ್ಯವಾದ್ದು ಏನಿದೆ ಈ ಪ್ರಪಂಚದಲ್ಲಿ –

ನಮ್ಮ  ನೆಹರೂನ್ನೆ ನೋಡಿ ಪರಮ ತ್ಯಾಗದ ಮಹಾತ್ಮರು ಇಂಥವನನ್ನೇ ತಮ್ಮ ಉತ್ತರಾಧಿಕಾರಿ ಎಂದುಕೊಂಡರು. ವಿಪರ್ಯಾಸ ಅಲ್ಲವ ಇದು? ಅಥವಾ ಚರಿತ್ರೆಯ ಉನ್ಮುಖವಾದ ಶಕ್ತಿ ಇಂಥವರಲ್ಲಿ ಮಾತ್ರ ವ್ಯಕ್ತವಾಗಿ ತನ್ನ ಅತಿರೇಕದಲ್ಲೇ ವಿಸರ್ಜನೆ ಗೊಳ್ಳುವುದೋ? ನನಗೆ ಇದೊಂದು ಬೆರಗಿನ ವಿಷಯವೇ ಸರಿ. ಇಡೀ ಈ ಪ್ರಾಂತ್ಯದಲ್ಲಿ ಘನಶ್ಯಾಮರಂಥ ತೇಜಸ್ವಿಯೊಬ್ಬ ನಿಮಗೆ ಕಾಣುತ್ತಾನೊ? ಅಂಥವರ ಮುಖೇನವೇ ಚರಿತ್ರೆ ಕೆಲಸ ಮಾಡಿ, ತನ್ನನ್ನೇ ತಾನು ವಿಸರ್ಜನೆಗೊಳಿಸಿಕೊಳ್ಳುವುದೋ ಏನೋ? ಚರಿತ್ರೆ ಮಾಡೊದೆಲ್ಲ ಒಳ್ಳೇದು ಅಂತ ತಿಳೀಬೇಕಾಗಿಲ್ಲ, ಅಥವಾ ಆಗೋದೆಲ್ಲ ಅನಿವಾರ್ಯಾಂತಲೂ ಅಲ್ಲ. ಹೀಗೆ ಭಾವಿಸುವ ನಮ್ಮಂಥ ಕೆಲವು ಹುಚ್ಚರು ಪ್ರವಾಹಕ್ಕೆ ಎದುರಾಗಿ ಈಜಬೇಕಾಗುತ್ತೆ. ನಾನು ಅಂಥದೇ ಒಂದು ಉದ್ದೇಶದಿಂದ ಈಗ ಓಡಾಡ್ತ ಇದೀನಿ. ಅದೂ ಈ ಚರಿತ್ರೆಯಲ್ಲೇ ಅಂರ್ಗತವಾದ ಉದ್ದೇಶವೆಂದು ತಿಳಿದಿದ್ದೇನೆ.

ಇರಲಿ, ನನ್ನ ಹೊಟ್ಟೆ ತಾಳಹಾಕ್ತ ಇದೆ. ಎಲ್ಲವನ್ನೂ ಊಟವಾದಮೇಲೆ ಹೇಳ್ತೀನಿ. ಈಗ ಸಂಧ್ಯಾವಂದನೆಗೆ ಹೊತ್ತಾಗಿ ಬಿಡ್ತು ಅಲ್ಲವ ಸಾವಿತ್ರಿ?’

ಅಕ್ಕು ಎದ್ದು ಸಂಧ್ಯಾವಂದನೆಗೂ ಊಟಕ್ಕೂ ಸಿದ್ಧಮಾಡಲು ಓಡಾಡಿದಳು. ಸಾಹುಕಾರರ ಮನೆಯವರಿಗೆ ಸಂಧ್ಯಾವಂದನೆಯಂತಹ ತಾಪತ್ರಯಗಳೇ ಇಲ್ಲ. ಮಗುವನ್ನು ಕರೆದುಕೊಂಡು ಜೀಪಲ್ಲಿ ಬರುತ್ತೇವೆಂದು ಹೇಳಿಕಳುಹಿಸಿದ್ದರು. ಕೇಶವ ಹೇಳಿದ್ದ: ‘ಅಕ್ಕು, ಚಿಕ್ಕ ಸಾಹುಕಾರರೂ ಬರ್ತಾರಂತೆ. ನಿನಗವರು ಥ್ಯಾಂಕ್ಸನ್ನು ಖುದ್ದಾಗಿ ಹೇಳಬೇಕಂತೆ’

ಅಕ್ಕು ಗದರಿಸಿದ್ದಳು, ‘ಅಂದರೆ ಏನೋ? ಏನೇನೋ ಹೇಳಿ ನನ್ನ ಹೆದರಿಸಬೇಡ’, ಕೇಶವ ನಕ್ಕಿದ್ದ.

ಸೂರ್ಯ ಮುಳುಗುತ್ತಿದ್ದಂತೆ ಬಂದು, ಚಾವಡಿಯ ಹೊರಗೇ ನಿಂಝತು ‘ಅಕ್ಕು ನಾನು ಹೊರಗೆ’ ಎಂದಳು. ಗುಡ್ಡದಲ್ಲಿ ಅವಳು ಕೂತಿದ್ದಾಗ ಮುಟ್ಟಾಗಿದ್ದಳು. ಮನೆಗೆಲಸವನ್ನೆಲ್ಲ ಹಾಗಾದರೆ ತಾನೇ ಮಾಡಬೇಕಾಗಿಬಂತೆಂದು ಅಕ್ಕು ಲಗುಬಗೆಯಿಂದ ಓಡಾಡಿದಳು. ಚಿಕ್ಕ ಸಾಹುಕಾರ‍್ರು ಬರ‍್ತಾರೆ, ಗೌರಿ ಮುಟ್ಟಾಗಿದ್ದರಿಂದ ಕಾಫಿಯನ್ನೇ ತಾನೇ ಮಾಡಬೇಕು. ಶಾಸ್ತ್ರಿಗಳಿಗೆ ಮಡಿಯಲ್ಲಿ ಊಟ ಸಿದ್ದಮಾಡಬೇಕು. ಚಂದು ಬಂದವನೇ ಎತ್ತಿಕೋ ಅಂತಾನೆ. ಎತ್ತಿಕೊಂಡರೆ ಮತ್ತೆ ಸ್ನಾನ ಮಾಡಿಯೇ ಅಡುಗೆ ಮಾಡಬೇಕು.

ಇದನ್ನೆಲ್ಲ ಗಮನಿಸಿದ ಶಾಸ್ತ್ರಿಗಳು ಸಂಧ್ಯಾವಂದನೆಗೆ ಕೂತವರು ತನ್ನಷ್ಟಕ್ಕೇ ನಕ್ಕರು. ಕೇಶವ ಸಂಧ್ಯಾವಂದನೆ ಮಾಡುತ್ತ ‘ಅಕ್ಕು ಇವತ್ತು ಕಾಫಿನ ನಾನೇ ಮಾಡ್ತೇನೆ’ ಎಂದ. ಅಡುಗೆ ಮನೆಯ ಕಿಟಕಿಯ ಹೊರಗೆ ನಿಂತು ಯಾವುದನ್ನ ಎಷ್ಟು ಹಾಕಿ ಬೆರೆಸಬೇಕು ಇತ್ಯಾದಿಗಳನ್ನು ಗೌರಿಯೇ ಹೇಳಿಕೊಡುವಳೆಂಬ ಭರವಸೆ ಕೇಶವನಿಗೆ.

ದೇವನಹಳ್ಳಿಯಿಂದ ಜೀಪು ಬಂತು. ನಿದ್ದೆ ಮಾಡಲು ಮಗ್ಗುಲಿನಲ್ಲಿ ಅಕ್ಕುವೇ ಇನ್ನೂ ಬೇಕೆಂದು ಚಂದು ಅಳುತ್ತದೆ; ಹಾಗೆಯೇ, ಬೇರೆ ಯಾರಿಂದಲೂ ಅದು ಎರೆಸಿಕೊಳುವುದಿಲ್ಲ. ಗೌರಿ ಕಾಲು ಚಾಚಿ ಅವನನ್ನು ಬೋರಲು ಮಲಗಿಸಿಕೊಳ್ಳಬೇಕು, ಅಕ್ಕು ಬಿಸಿಬಿಸಿ ನೀರನ್ನು ತಾಮ್ರದ ಚಂಬಿನಿಂದ ತೆಗೆದು ಮೇಲಿನಿಂದ ಉಷ್ ಉಷ್ ಎನ್ನುತ್ತ ಸುರಿಯಬೇಕು. ಎರೆಸಿಕೊಳ್ಳುವುದೆಂದರೆ ಬಲು ಖುಷಿ ಚಂದುಗೆ.

ಮಗುವನ್ನು ಎತ್ತಿಕೊಂಡು ವಿಮಲ ಮತ್ತು ವಿಮಲಳ ಜೊತೆ ಘನಶ್ಯಾಮ, ವಿನೋದಿನಿ ಬಂದು ಜೀಪಿನಿಂದ ಇಳಿದರು. ಸಿಗರೇಟು ಸೇದಲೆಂದು ಮಿಂಗೇಲಿ ಜೀಪಿನಲ್ಲೇ ಉಳಿದ. ತಾನು ಹೀಗೆ ಬಂದುಬಿಟ್ಟದ್ದು ಮನೆಯವರಿಗೆ ಹಗುರವಾಗಲಿ ಎಂದು ಘನಶ್ಯಾಮ,

‘ನನ್ನ ಅಳಿಯ ಅಷ್ಟೊಂದು ಹಚ್ಚಿಕೊಂಡಿರುವ ಅಕ್ಕಮ್ಮ ನನ್ನ ನೋಡಿಹೋಗೋಣ ಅಂತ ಬಂದೆ. ಗೌರಿ ಮಾಡುವ ಕಾಫಿಯನ್ನ ನಮ್ಮ ವಿಮಲ ಹೊಗಳ್ತ ಇದ್ದಳು. ಅದನ್ನ ಕುಡಿದು ಹೋಗೋಣಾಂತಲೂ ಬಂದೆ.’ ನಗುತ್ತ ಚಿಟ್ಟೆಯ ಮೇಲೆ ನಿಂತ.

ಅಲ್ಲಿ ಅವನಿಗೆ ಕೂರಲು ಕುರ್ಚಿಯಿಲ್ಲೆಂದು ಕೇಶವ ಒಳಗಿನಿಂದ ಸ್ವಲ್ಪ ಎತ್ತರದ ಮಣೆಯನ್ನೇ ತಂದ. ದೇವರ ಪೂಜೆಗೆ ಕೂರುವಾಗ ಅವನು ಉಪಯೋಗಿಸುವ ಮಣೆಯಿದು.

ಘನಶ್ಯಾಮ ಮಣೆಯ ಮೇಲೆ ಕೂರದೆ ‘ನಾನೇನು ಅಷ್ಟು ಕೆಟ್ಟಿಲ್ಲ’ ಎಂದು ನಕ್ಕು ಚಾಪೆಯಮೇಲೆ ಕೃಷ್ಣಶಾಸ್ತ್ರಿಗಳ ಪಕ್ಕ ಕೂತ.

‘ನನ್ನದೇ ಕಾಫಿ ಇವತ್ತು. ಗೌರಿ ಹೊರಗೆ. ಸಾಹುಕಾರ‍್ರು ಕ್ಷಮಿಸಬೇಕು, ನಾನು ಮಾಡಿದ್ದನ್ನ ಇವತ್ತು ಹೇಗಾದರೂ ಕುಡಿದು ಮತ್ತೊಂದು ದಿನ ಗೌರಿಯ ಕಾಫಿ ಕುಡಿಯಲು ದಯಮಾಡಿಸಬೇಕು’ ಎಂದು ಕೇಶವ ಒಳಗೆ ಹೋಗುವುದನ್ನು ಘನಶ್ಯಾಮ ತಡೆದು,

‘ತಮಾಷೆಗೆ ಹೇಳಿದೆ. ಇನ್ನೊಂದು ದಿನ ಹೇಗೂ ಬರ್ತೀನಿ ಅಲ್ಲವ? ಇದು ಕಾಫಿ ಕುಡಿಯುವ ಹೊತ್ತೂ ಅಲ್ಲ’ ಎಂದ.

ಅಕ್ಕುಗೆ ಘನಶ್ಯಾಮನ ಸೌಜನ್ಯದಿಂದ ಧೈರ್ಯವಾಗಿರಬೇಕು. ದೂರ ನಿಂತು ಮಗುವನ್ನೆತ್ತಿಕೊಂಡವಳು ಹೇಳಿದಳು:

‘ಅಪ್ಪನ ಕರ್ಮವನ್ನ ನೀವು ಮಾಡಲಿಲ್ಲ ಅಂತ ಕೇಳಿದೆ. ಆದರೆ ನಿಮ್ಮ ಅಪ್ಪನಿಗೆ ಹತ್ತಿರದ ಸಂಬಂಧಿಗಳು, ದೂರದ ಸಂಬಂಧಿಗಳು ಇರಲೇ ಬೇಕು. ದೂರದವರಿಗೆ ಮೂರು ದಿನದ ಸೂತಕವಾದರೆ, ಹತ್ತಿರದವರಿಗೆ ಪೂರ್ಣಾವಧಿ ಸೂತಕ – ನಮ್ಮ ವಾಡಿಕೆಯಲ್ಲಂತೂ ಹೀಗೆ. ನಿಮ್ಮ ಅಪ್ಪನೇನೂ ಆತ್ಮಶ್ರಾದ್ಧಮಾಡಿಕೊಂಡು ಸನ್ಯಾಸ ತಗೊಂಡವರಲ್ಲ. ಇಲ್ಲಿ ದೊಡ್ಡವರು ಇದಾರೆ, ನಾನು ಹೇಳಬಾರ‍್ದು. ಈ ಮಗು ನಮ್ಮನೇದು ಅನ್ನಿಸೋದರಿಂದ ನಾನು ಬಾಯಿ ಹಾಕ್ತ ಇದೀನಿ. ನಿಮ್ಮ ಅಪ್ಪನಿಗೆ ಶ್ರಾದ್ಧದ ಎಲ್ಲ ಅಪರಕರ್ಮಗಳನ್ನೂ ಮಾಡದೇ ಹೋದರೆ ಅವರಿಗೆ ಸತ್ತ ಮೇಲೆ ಏನಾಗತ್ತೆ ಏನಾಗಲ್ಲ ನಾನು ಹೇಳಕ್ಕೆ ಹೋಗಲ್ಲ. ಈ ಕಾಲದಲ್ಲಿ ಗರುಡಪುರಾಣ ಯಾರಿಗೆ ಬೇಕಾಗಿದೆ? ಇಂಗ್ಲಿಷ್ ಕಲಿತವರಿಗೆ ಹೇಳೋ ಧೈರ್ಯವೂ ನನಗಿಲ್ಲ…

ಥೂ ನನ್ನ. ಏನೋ ಹೇಳಲಿಕ್ಕೆ ಹೋಗಿ ಏನೇನೋ ಹೇಳ್ತ ಇದೀನಿ. ನನ್ನ ತಮ್ಮಯ್ಯನ ರೋಗ ನನಗೂ ಹತ್ತಿದಹಾಗೆ ಕಾಣತ್ತೆ. ಅದೇ ನಿಮ್ಮ ತಂದೆಗೆ ಸತ್ತಮೇಲೆ ಆಗಬೇಕಾದ ಕರ್ಮಗಳು ಆಗದೇ ಇದ್ದರೆ ಅವರ ಸಂಬಂಧಿಕರ ಸೂತಕ ಮುಗಿಯೋದೇ ಇಲ್ಲ ಅಂತ ನಮ್ಮ ನಂಬಿಕೆ. ನೀವು ನಂಬದೇ ಇರಬಹುದು. ಆದರೆ ಅವರು ತಮ್ಮ ಮನೆಯಲ್ಲಿ ಒಂದು ಪುಣ್ಯ ಕಾರ್ಯ ಮಾಡೋ ಹಾಗಿಲ್ಲ. ಮದುವೆ ಮುಂಜ ಏನೂ ಮಾಡೋ ಹಾಗಿಲ್ಲ.’

ಘನಶ್ಯಾಮ ಯಾವ ಸಂಕೋಚವೂ ಇಲ್ಲದೆ, ಬೇಸರವನ್ನೂ ಪಡದೆ ಹೇಳಿದೆ:

‘ನನ್ನ ಪಕ್ಕದಲ್ಲೊಬ್ಬ ದೊಡ್ಡ ಪಂಡಿತರಿದಾರೆ; ನಿಮ್ಮ ತಮ್ಮಯ್ಯನೂ ದೊಡ್ಡ ಪಂಡಿತರೇ. ಈ ನಮ್ಮ ಸಂಬಂಧಿಗಳು ಹದಿನೈದು ವರ್ಷಗಳ ಕಾಲ ನನ್ನ ಅಪ್ಪನ ವಿರುದ್ಧ ಕೋರ್ಟ್ ಅಲೆದಿದಾರೆ. ಜಮೀನಿನ ಸಂಬಂಧದ ವ್ಯಾಜ್ಯಗಳು ಇವು. ಈ ಜಮೀನುಗಳ ಮೇಲಿನ ನನ್ನ ಹಕ್ಕನ್ನು ಈಗ ನಾನು ಊರಿನಹಿತಕ್ಕಾಗಿ ಒಂದುಟ್ರಸ್ಟ್ ಮಾಡಿ ವರ್ಗಾಯಿಸಿದ್ದೇನೆ. ಅದೇ ನಾನು ನನ್ನ ಅಪ್ಪನ ಸದ್ಗತಿಗಾಗಿ ಮಾಡುವ ಶ್ರಾದ್ಧ. ಇದಕ್ಕಿಂತ ಮಿಗಿಲಾದ ಬೇರೆ ಶುದ್ಧಿಬೇಕಾದರೆ ಅವರು ಮಾಡಿಕೊಳ್ಳಲಿ, ನನ್ನನ್ನ ಜಾತೀಂದ ಹೊರಗೆ ಹಾಕಿ ನಮ್ಮ ಅಪ್ಪನ ಶ್ರಾದ್ಧ ಅವರೇ ಮಾಡಲಿ.’

ಅಕ್ಕು ಏನು ಹೇಳಲೂ ತೋರದೆ ಸುಮ್ಮನಾದಳು. ಶಾಸ್ತ್ರಿಗಳು ಹೇಳಿದರು:

‘ಸಾಹುಕಾರರು ಹೇಳೋದರಲ್ಲಿ ಒಂದು ತರ್ಕವಿದೆ;  ಆದರೆ ತಾರ್ಕಿಕವಾಗಿ ನಾವು ಯೋಚನೆ ಮಾಡಿಯೇ ನಮ್ಮೆಲ್ಲ ಕೆಲಸವನ್ನೂ ಮಾಡಲ್ಲ ಎನ್ನೋದು ಬೇರೆ ಮಾತು. ನಮ್ಮ ಪ್ರಪಂಚವೇ ಬೇರೆ; ಇವರದೇ ಬೇರೆ. ಮಾತಾಡಿ ಒಪ್ಪಿಸೋ ವಿಷಯವಲ್ಲ ಅದು. ಸಾಹುಕಾರರು ಪ್ರಾಮಾಣಿಕವಾಗಿ ತಮ್ಮ ಅಂತಃಸಾಕ್ಷಿಗೆ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಮಾತ್ರ ನಾನು ಹೇಳಬಲ್ಲೆ. ಹೀಗೆ ತಾನು ನಡೆದುಕೊಂಡದ್ದರಿಂದ ಉಳಿದವರಿಗಿಂತ ತಾನು ಮೇಲಾಗಿಬಿಟ್ಟೆ ಎಂದು ಅವರು ಬೀಗದಿದ್ದರೆ ಸರಿ’.

ವಿನೋದಿನಿ ಶಾಸ್ತ್ರಿಗಳ ಮಾತಿನಿಂದ ಸಂತೋಷ ಪಟ್ಟಳೆಂಬುದು ಎದ್ದು ಕಾಣುವಂತಿತ್ತು. ಕಡೆಯಮಾತು ಘನಶ್ಯಾಮನನ್ನು ಕಿಂಚಿತ್ತಾದರೂ ಬಾಧಿಸಿದಂತೆ ತೋರಲಿಲ್ಲೆಂದು ವ್ಯಥೆ ಪಡುವವಳಂತೆ ಅವನನ್ನು ನೋಡಿದಳು. ತಾನು ಹೇಳಬೇಕೆಂಬುದನ್ನು ಹೇಳಲು ಅವನನ್ನು ಒಬ್ಬನೇ ಇರುವಾಗ ಕಾಣಲು ಕಾದಳು.

‘ಶಾಸ್ತ್ರಿಗಳು ಅನುಮಾನಿಸಬೇಕಾಗಿಲ್ಲ. ನನ್ನ ತಂದೆಯವರು ಕೊನೆಕೊನೆಯಲ್ಲಿ ಜನಸೇವೆಯ ಮಾರ್ಗದಿಂದ ದೂರವಾಗಿಬಿಟ್ಟರು. ಅವರು ಮಾತ್ರವಲ್ಲ ಒಂದು ಇಡೀ ಜನಾಂಗ ಸ್ವಾತಂತ್ರ್ಯ ಹೋರಾಟದ ದಾರಿಯಿಂದ ವಿಮುಖವಾಯಿತು. ನಾವೂ ಜನರಿಗಿಂತ ಮೇಲಿನವರು ಅಂತ ತಿಳಿಕೂಡದು; ತಿಳಿದರೆ ನಮ್ಮನ್ನ ಜನ ತಿರಸ್ಕರಿಸುತ್ತಾರೆ.’ ಘನಶ್ಯಾಮ ಮೆಚ್ಚಬೇಕಾದ ಮಾತನ್ನು ಮೆಚ್ಚಿಕೆ ಹುಟ್ಟಿಸುವಂತೆ ಆಡಿದ್ದ.

ಘನಶ್ಯಾಮ ಸಜ್ಜನಿಕೆ ಅವನಿಗೆ ರಾಜಕೀಯದಲ್ಲಿ ತುಂಬ ಯಶಸ್ಸನ್ನು ತರಬಹುದೆಂದು ಶಾಸ್ತ್ರಿಗಳು ಊಹಿಸಿದರು. ಪ್ರಾರಂಭದಲ್ಲಿ ಕಲಿಯುವಾಗ ಲೆಕ್ಕಾಚಾರದ ಎಚ್ಚರಿಕೆಯ ಸಜ್ಜನಿಕೆಯಾದ್ದು ಕ್ರಮೇಣ ಅಭ್ಯಾಸಗತವಾಗಿ ಸಹಜವೆನ್ನಿಸುವಂತೆ ಮೈಗೆ ಅಂಟಿಕೊಂಡು ಬಿಡುತ್ತದೆ. ಮೊದಲು ಹೆಚ್ಚು ನಿಜವಿರುತ್ತದೆ; ಕೊಂಚ ದೇಶಾವರಿಯೂ ಇರುತ್ತದೆ. ಅಮೇಲಾಮೇಲೆ ಎಷ್ಟು ದೇಶಾವರಿ ಎಷ್ಟು ನಿಜ ತನಗೇ ತೋರದಂತೆ ಎಲ್ಲ ಮಾತೂ ಯಶಸ್ಸಿನ ಮಾತಾಗಿಬಿಡುತ್ತದೆ. ಪ್ರಜಾತಂತ್ರದ ಈ ಕಾಲದ ಓಟಿನ ರಾಜಕೀಯದಲ್ಲಂತೂ ಅದೊಂದು ದೊಡ್ಡ ಅಸ್ತ್ರವಾಗಿ ಬಿಡುತ್ತದೆ. ಆದರೆ ಈ ಸಜ್ಜನಿಕೆಯನ್ನು ಭಗವಂತ ಮೆಚ್ಚಲಾರ; ಆಪ್ತವಾದ ದೊಡ್ಡ ಅಸ್ತ್ರವಾಗಿ ಬಿಡುತ್ತದೆ. ಆದರೆ ಈ ಸಜ್ಜನಿಕೆಯನ್ನು ಭಗವಂತ ಮೆಚ್ಚಲಾರ; ಆಪ್ತವಾದ ಸತ್ಯ ಅದರಲ್ಲಿ ಇರುವುದಿಲ್ಲ. ಆಪ್ತವಾದ ಸಖ್ಯವೂ ಇವನಿಗೆ ಸಾಧ್ಯವಾಗದೇನೊ.

ಇಂಥ ಮನುಷ್ಯರಿಗೆ ಒಳಗೆ ಏನು ಅನ್ನಿಸುತ್ತದೆ ಎಂಬುದೇ ಗೊತ್ತಾಗದಂತೆ ಅವರು ‘ಸಲೀಸು’ ಮನುಷ್ಯರಾಗಿ ಬಿಡುತ್ತಾರೆ. ಗೌರವಾನ್ವಿತ ಮಹಾಜನರಾಗಿ ಬಿಡುತ್ತಾರೆ.

ಅಪ್ಪನ ಮಗನೇ ಇವನು. ಈಗಿವನು ಮಾಡುತ್ತಿರುವ ಗೇಣಿಯ ತ್ಯಾಗವೂ ಮುಂದೆ ಇವನಿಗೆ ದೊಡ್ಡ ಆಸ್ತಿಯಾಗಿಬಿಡುತ್ತದೆ. ಕಳೆದುಕೊಂಡದ್ದಕ್ಕಿಂತ ಹೆಚ್ಚನ್ನು ಗಳಿಸುತ್ತಾನೆ; ಹಣವಾಗಿ ಹೋದ್ದು ಅಧಿಕಾರವಾಗಿ ಹಿಂದಕ್ಕೆ ಬರುತ್ತದೆ.

ಆದರೂ ಜನಸಮೂಹದ ಮೇಲೆ ಇವನು ಸ್ಥಾಪಿಸಿಕೊಳ್ಳುವ ಅಧಿಕಾರದಿಂದ ಲೋಕಕ್ಕೆ ಒಳ್ಳೆಯದಾಗಲಿ, ಎಲ್ಲರಲ್ಲೂ ಭಯಹುಟ್ಟಿಸುಂತಹ ಅಸ್ತ್ರವಾಗದಿರಲಿ –

ಎಂದು ಶಾಸ್ತ್ರಿಗಳು ತಮ್ಮೊಳಗೇ ಕಣ್ಣು ಮುಚ್ಚಿ ಪ್ರಾರ್ಥಿಸಿಕೊಂಡರು.

ಅದೂ ಇದೂ ಮಾತಾಡಿ ಘನಶ್ಯಾಮ ಹೊರಡಲು ಎದ್ದು ನಿಲ್ಲುತ್ತಿದ್ದಂತೆ ಕೇಶವ ಕಾಫಿಮಾಡಿ ತಂದಿದ್ದ. ಗೌರಿಗಾಗಿ ಕೂತಲ್ಲಿಂದಲೇ ಕಣ್ಣಿನಲ್ಲಿ ಹುಡುಕುತ್ತ ಘನಶ್ಯಾಮ ಕಾಫಿಕುಡಿದ. ಗೌರಿ  ಎಲ್ಲೂ ಕಾಣಿಸದೆ ಅವನು ಹತಾಶನಾದ್ದನ್ನು ವಿಮಲ ಗಮನಿಸಿದಳು. ಅಣ್ಣನಿಗೆ ಗೌರಿಯಮೇಲೆ ಹುಟ್ಟಿದ ಆಸೆಯಿಂದ ಅವಳಿಗೆ ಸಂತೋಷವಾಗಿತ್ತು.

ಎಲ್ಲ ಹೋದ ಮೇಲೆ ಮಗುವನ್ನು ಕೇಶವನ ಕೈಯಲ್ಲಿಟ್ಟು ಅಕ್ಕು ಸ್ನಾನ ಮಾಡಲು ಹೋದಳು. ಮಡಿಯಲ್ಲಿ ಶಾಸ್ತ್ರಿಗಳಿಗೆ ರಾತ್ರೆಯ ಫಲಾಹಾರವಾಗಬೇಕಲ್ಲವೆ?

೧೦

ಜೀಪಿನಲ್ಲಿ ಹೋಗುವಾಗ ಘನಶ್ಯಾಮ ಸಿಟ್ಟಿನಲ್ಲಿ ಮಾತಾಡಿದ:

‘ಮುಟ್ಟಾದಾಗ ಹೆಂಗಸರು ಹೊರಗೆ ಕೂರಬೇಕು ಎನ್ನೋದು ಎಂಥ ಅಬ್ಸರ್ಡ್ ಕಸ್ಟಮ್ ಅಲ್ಲವ? ಗೌರಿಯಂತಹ ಎಕ್ಸ್‌ಟ್ರಾರ್ಡಿನರಿ ಹುಡುಗಿ ಹೇಗಿದನ್ನ ಸಹಿಸಿಕೊಂಡು ಇದಾಳೊ?’

ವಿಮಲಾನೂ ಸಿಟ್ಟಾಗಿ ಹೇಳಿದಳು:

‘ಅಣ್ಣ, ಈ ಗೌರಿ ಯಾರು ಅಂತ ಗೊತ್ತಿಲ್ಲದೆ ನೀನು ಮಾತಾಡ್ತ ಇದೀಯ. ನಾನೂ ಮುಂಚೆ ಹಾಗೇ ಅಂದುಕೊಂಡಿದ್ದೆ.’

‘ಅಂದರೆ’

‘ಅವಳು ಮಿಸ್ಟೀರಿಯಸ್. ಅವಳನ್ನ ಮೊದಲು ಕಂಡದ್ದೇ ಅವಳಲ್ಲಿ ಏನೋ ನಿಗೂಢವಾದ್ದು ನೆಲಸಿದೆ ಅನ್ನಿಸತ್ತೆ. ನಿನಗೂ ಅನ್ನಿಸಿರಬೇಕು. ಆದರೆ ನೀನು ಇಂಗ್ಲೀಷಲ್ಲಿ ಓದಿರೋ ವಿಚಾರವಾದದ ಪುಸ್ತಕಗಳು ನಿನಗೆ ಅವಳಲ್ಲಿರುವ ತೇಜಸ್ಸಿನ ಗುಟ್ಟು ಏನು ಅನ್ನೋದನ್ನ ತಿಳಿಯೋಕೆ ಬಿಡ್ತ ಇಲ್ಲ.’

ಘನಶ್ಯಾಮನಿಗೆ ರೇಗಿತು:

‘ಇಂಥ ಮಿಸ್ಟಿಕಲ್ ನಾನ್ಸೆನ್ಸನ್ನ ನಾನು ರಾಮಕೃಷ್ಣಾಶ್ರಮದಲ್ಲಿ ಹೈಸ್ಕೂಲ್ ಓದುತ್ತ ಇದ್ದಾಗ ನಂಬಿಕೊಂಡು ಇದ್ದೆ. ಆಮೇಲಿಂದ ಐ ಬಿಗ್ಯಾನ್ ಟು ಗ್ರೋ ಅಪ್. ನನ್ನ ವಂಡರ್ ಫುಲ್ ಸಿಸ್ಟರ್ ತಲೇನ ಈಗೇನು ಹೊಕ್ಕಿದೆ ಗೊತ್ತಾಗ್ತ ಇಲ್ಲ.’

ವಿಮಲ ಗಂಭೀರವಾಗಿ ಅಣ್ಣನ ಜೊತೆ ಮಾತಾಡಲು ನೋಡಿದಳು:

‘ಗೌರಿಯನ್ನ ಅಪ್ಪ ನೋಡಿದ್ದೇ, ಹೇಗೆ, ಏಕ್ – ದಂ ಅಂತಾರಲ್ಲ ಹಾಗೆ, ಬದಲಾಗಿ ಬಿಟ್ಟರು ಗೊತ್ತ?’

‘ಐ ನೋ ದಟ್. ಶಿ ಈಸ್ ವೆರಿ ಲವ್ಲಿ, ವೆರಿ ಸ್ವೀಟ್ – ಅವಳೇನಾದರೂ ಎಜುಕೇಟೆಡ್ ಆಗಿದ್ದರೆ…’

‘ನಿನ್ನ ಹತ್ತಿರ ಮಾತಾಡಿ ಪ್ರಯೋಜನಾ ಇಲ್ಲ. ಯಾವ ಕಿವಿ ಮಾತೂ ನಿನ್ನಂಥ ಸ್ವಪ್ರತಿಷ್ಠೆಯವರಿಗೆ ಕೇಳಿಸೋದು ಇಲ್ಲ. ಯಾವಾಗಲೂ ನಿನ್ನ ಮಾತುಗಳೆ ನಿನಗೆ ಕೇಳಿಸ್ತ ಇರತ್ತೆ.’

ಹೀಗೆ ವಾದ ಎದುರಾದಾಗುವುದನ್ನು ಘನಶ್ಯಾಮ ಇಷ್ಟಪಡುತ್ತಾನೆ. ಇದನ್ನು ತನ್ನ ಹೆಚ್ಚುಗಾರಿಕೆಯೆಂದು ಜನ ತಿಳಿಯುತ್ತಾರೆಂಬುದೂ ಅವನಿಗೆ ಗೊತ್ತಿದೆ.

‘ಆಲ್ ರೈಟ್, ವಿಮಲ ಹೇಳು. ನಿನ್ನ ಬಾಯಿ ಮುಚ್ಚಿಸೋಕೆ ನಾನು ಮಾತಾಡ್ತಿಲ್ಲ. ಗೌರಿ ನನಗೂ ತುಂಬ ಇಷ್ಟವಾಗಿ ಬಿಟ್ಟಿದ್ದಾಳೆ; ಎನಿಗ್ಮಾನೂ ಆಗಿದಾಳೆ’.

‘ನಿನಗೆ ಮಾತ್ರವಲ್ಲ. ಮಡಿ ಅಕ್ಕಯ್ಯನಿಗೂ ಅವಳು ಎನಿಗ್ಮಾನೆ. ನಮಗೆಲ್ಲ ಅವಳೊಂದು ದೇವಿಯಂತೆ ಕಾಣಿಸಿದರೆ ಅವಳ ಅಕ್ಕುಗೆ ಅವಳಲ್ಲೊಂದು ದೆವ್ವ ಹೊಕ್ಕು ಕೂತಿದೆ ಅನ್ನಿಸತ್ತೆ.’

‘ಅವಳ ಅಕ್ಕುಗೆ ಅನ್ನಿಸಿದ್ದೇ ನಿಯರರ್ ಟ್ರೂತ್ ಇರಬಹುದು. ಅದಕ್ಕೊಂದು ಸೈಕಾಲಾಜಿಕಲ್ ಎಕ್‌ಪ್ಲನೇಶನ್ ಇದೆ. ನಮಗೆ ಯಾರಿಗಾದರೂ ಹಾಗಾಗಬಹುದು. ಒಬ್ಬ ವ್ಯಕ್ತಿಯೇ ಇಬ್ಬರ ಹಾಗೆ ವರ್ತಿಸಲಿಕ್ಕೆ ಶುರುಮಾಡಿಬಿಡೋದುಂಟು. ಮನಸ್ಸಿಗೆ ದೊಡ್ಡ ಆಘಾತ ಆದಾಗ ಹಾಗಾಗತ್ತೆ.’

‘ಮೀರಾಗೆ? ಅಕ್ಕಮಹಾದೇವಿಗೆ? ಪರಮಹಂಸರಿಗೆ? ರಮಣರಿಗೆ? ಈ ಎಲ್ಲರೂ ಅಬ್ನಾರ್ಮಲ್ ಹಾಗಾದರೆ. ನಿತ್ಯ ಬೆಳಲಿಗ್ಗೆ ಪೇಪರ್‌ನಲ್ಲಿ ನನ್ನ ಬಗ್ಗೆ ಏನು ಬರೆದಿದಾರೆ ಅಂತ ಕಾದಿರೋ ನಿನ್ನಂಥ ಸ್ವಪ್ರತಿಷ್ಠೆಯವರು ಮಾತ್ರ ನಾರ್ಮಲ್ ಅಲ್ಲವ?’

ವಿಮಲ ನಿಜವಾಗಿಯೂ ಸಿಟ್ಟಾಗಿದ್ದಳು ಅನ್ನೋದನ್ನ ಘನಶ್ಯಾಮ ಊಹಿಸಿದ:

‘ನಿನ್ನ ಮನಸ್ಸಿನಲ್ಲಿ ಇರೋದನ್ನ ಹೇಳು. ಗೌರಿಯಷ್ಟು ನನ್ನ ಮೇಲೆ ಯಾರೂ, ನನಗೆ ಗೊತ್ತಿರೋ ಯಾವ ಹುಡುಗಿಯೂ, ಈ ವರೆಗೆ ಪರಿಣಾಮ ಮಾಡಿಲ್ಲ. ಅದು ಬರೀ ಸೆಕ್ಷುಯಲ್ ಆಕರ್ಷಣೆ ಅಂತ ನಾನೂ ತಿಳಿದುಕೊಂಡಿಲ್ಲ.’

‘ಅವಳೊಬ್ಬ ಮನುಷ್ಯಳೂ ಹೌದು ದೇವಿಯೂ ಹೌದು. ಭೂವರಾಹನ ಪೂಜೇನ ನೂರಾರು ವರ್ಷಗಳಿಂದ ಮಾಡಿಕೊಂಡು ಬಂದಿರೋ, ಕಾಲೆಡವಿದಲ್ಲಿ ದೇವದೇವಿಯರು ಇದಾರೆ ಎಂದು ಭಾವಿಸೋ ಕಾಡು ಬೆಳೆದ ಇಂಥ ಕ್ಷೇತ್ರಗಳಲ್ಲಿ ಮಾತ್ರ ಅಂಥ ವಿಚಿತ್ರವಾದ ಶಕ್ತಿಯೊಂದು ಹುಟ್ಟಿಬರೋದು ಸಾಧ್ಯ. ನೀನು ಬದಲಾಯಿಸಲಿಕ್ಕೆ ಹೊರಟಿರೋ ಈ ಕ್ಷೇತ್ರವೇ ಅವಳಿಗೆ ಜನ್ಮ ಕೊಟ್ಟಿದೆ.’

ಇವಳು ತನಗೆ ಚಿಕ್ಕಂದಿನಿಂದ ಗೊತ್ತಿರೋ ವಿಮಲ ಅಲ್ಲ ಅನ್ನುವ ಹಾಗೆ ಮಾತಾಡಿದ್ದಳು.

‘ಕ್ಷಮಿಸು. ನೀನು ಹೇಳ್ತಿರೋದು ಬುಲ್ ಶಿಟ್. ಇಂಥ ಕ್ಷೇತ್ರಗಳಲ್ಲಿ ಹುಟ್ಟಿದ ಮಕ್ಕಳೇ ವಿನಾಕಾರಣ ಸಾಯೋದು; ದೇವ ಸನ್ನಿಧಿಯಲ್ಲೇ ಹೊಲೆಯರ ಯುಕವರ ಕೊಲೆಯಾಗೋದು; ಭೂವರಾಹನ ನೈವೇದ್ಯಕ್ಕಾಗಿ ಕೊಡಬೇಕಾದ ಗೇಣಿ ಕೊಡಲ್ಲಾಂತ ಬಡವರ ಮನೆಗಳ ಜಪ್ತಿಯಾಗೋದು. ದೇವಿಯಿಂದ ಮುಟ್ಟಿಸಿಕೊಂಡು ಆಮೇಲೆ ಮಲೇರಿಯಾದಿಂದ ಜನ ನರಳಿ ಸಾಯೋದು’.

ವಿಮಲ ಸುಮ್ಮನಿದ್ದು ಕ್ಷಣ ತಡೆದು ಹೇಳಿದಳು:

‘ನಿನಗಿರೋ ಈ ಸಿಟ್ಟು ಗೌರಿಗೂ ಇದೆ. ಗೊತ್ತ ನಿನಗೆ? ಆದರೆ ನಿನ್ನ ಸ್ವಪ್ರತಿಷ್ಠೆಯಿಲ್ಲ ಅವಳಿಗೆ. ಗೌರಿಯೇ ಯಾಕೆ, ಅಷ್ಟೊಂದು ಮಡಿ ಮೈಲಿಗೆಯ ಅಕ್ಕುವೂ ನೀನು ತಿಳಿದಹಾಗೆ ನೀನು ಮಾಡೋಕೆ ಹೊರಟಿರೋ ಉದ್ಧಾರಕ್ಕೆ ಕಾದು ಕೂತಿಲ್ಲ. ನನಗೆ ಅವರು ತಾಯಿ ಇದ್ದ ಹಾಗೆ. ಗೌರಿಗಂತೂ ನೀನು ಮಾಡಹೊರಟಿರುವ ಯಾವ ಕ್ರಾಂತೀದೂ ಅಗತ್ಯವಿಲ್ಲ. ನಾನೂ ನೀನೂ ಬದಲಾಗಿರೋದು ಮಾರ್ಕ್ಸ್‌ನ್ನೋ ರಸೆಲ್ಲನ್ನೋ ಓದಿ; ಈ ಕಾಲದಲ್ಲಿ ಸಲ್ಲೋಕೆ ಅಂತ; ಅದರಿಂದ ಲಾಭ ಆಗುತ್ತೆ ಅಂತ. ಅಥವಾ ನಮ್ಮ ನಮ್ಮ ಸುಖಕ್ಕೇ ಅಂಥ ವಿಚಾರಗಳು ಗೆಲ್ಲೋದು ಅಗತ್ಯ ಅಂತ. ಆದರೆ ಗೌರಿಗೆ ಇಂಥ ಯಾವ ವಿಚಾರಗಳ ಸೊಕ್ಕು ಇಲ್ಲ. ಅವಳಿಗೆ ಜಾತಿ ಸೊಕ್ಕು ಇಲ್ಲ; ಐಶ್ವರ್ಯದ ಸೊಕ್ಕು ಇಲ್ಲ; ತಾನು ಹೆಣ್ಣು ಅನ್ನೋ ಅಳಕು ಕೂಡ ಇಲ್ಲ; ಮುಟ್ಟಾದಾಗ ಹೊರಗೆ ಕೂತು ತನ್ನಷ್ಟಕ್ಕೆ ಸುಖವಾಗಿ ತನ್ನ ಲೋಕದಲ್ಲಿ ಇದ್ದುಬಿಡ್ತಾಳೆ. ನಿನಗಾಗಲೀ ನನಗಾಗಲೀ ಅವಳೇನೂಂತ ತಿಳಿಯೋದು ಸಾಧ್ಯವಿಲ್ಲ. ಈ ಕಾಲದ ಮಾತುಗಳ ಅಬ್ಬರ ನಮ್ಮನ್ನ ಅಷ್ಟು ಕೆಡಿಸಿ ಬಿಟ್ಟಿದೆ.

ಅಷ್ಟೆಲ್ಲ ದೂರ ಹೋಗಿ ಯಾಕೆ ಮಾತಾಡಲಿ? ನನ್ನ ಮದುವೆ ತಪ್ಪು ಅಂತ ಅವಳಿಗೆ ಅನ್ನಿಸಲೇ ಇಲ್ಲ. ಯಾಕೆ ನಮ್ಮ ಅಪ್ಪನೂ ಈ ಮದುವೇನನ್ನ ಒಪ್ಪಿಕೊಂಡಿದ್ದರೆ ಅದಕ್ಕೆ ಕಾರಣ ಈ ದೇವಿಯ ಸಾನ್ನಿಧ್ಯದಲ್ಲಿ ಮಗೂನ್ನ ಅವರಿಗೆ ನಾವು ಒಪ್ಪಿಸಿದ್ದು ಅಂತಾನೇ ನಾಂತೂ ತಿಳಿದಿರೋದು. ಮಿಂಗೇಲಿಯಂತೂ ಗೌರೀನ್ನ ಸಾಕ್ಷಾತ್ ಮೇರಿಯಮ್ಮ ಅಂತಲೇ ಭಾವಿಸಿದಾನೆ.’

ಘನಶ್ಯಾಮನ ಕೊಂಚ ಗಲಿಬಿಲಿಗೊಂಡ ಮುಖವನ್ನು ವಿನೋದಿನಿ ನೋಡಿದಳು. ತನಗೆ ಇದ್ದಕ್ಕಿದ್ದಂತೆ ಪ್ರಿಯವಾಗಿಬಿಟ್ಟವನು ಈ ಅಣ್ಣಯ್ಯ. ಹುಟ್ಟಿದಂದಿನಿಂದ ತಾನು ನೋಡದವನು. ಗೌರಿಯಿಂದಾಗಿ ತಾನೂ ಅಮ್ಮನೂ ರಾಜಾರೋಷವಾಗಿ ಈಮನೆಯವರಾಗುವದು ಸಾಧ್ಯವಾಯಿತು. ಈಗ ಘನಶ್ಯಾಮ ತನ್ನನ್ನು ಒಡಹುಟ್ಟಿದ ಅಣ್ಣನಂತೆಯೇ ನೋಡಿಕೊಳ್ಳುತ್ತಿದ್ದಾನೆ. ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಅಸಾಧ್ಯವಾದ್ದನ್ನು ಕಾಲಾತೀತಳೆನ್ನಿಸುವ ಗೌರಿಯೂ, ಹೊಸಕಾಲದ ಈ ಅಣ್ಣನೂ ಒಟ್ಟಾಗಿ ಸಾಧಿಸಿ ತೋರಿದ್ದಾರೆ. ಅವಳಿಗೆ ಈ ವಾದದಲ್ಲಿ ತಾನು ಹೇಗೆ ಭಾಗವಹಿಸಬಹುದು ತಿಳಿಯಲಿಲ್ಲ.

ಈ ತನ್ನ ಅಣ್ಣ ಘನಶ್ಯಾಮ ಒಟ್ಟಿನಲ್ಲಿ ಬಲು ಆಕರ್ಷಕನಾದ  ಗಂಡಸು. ಆದರೆ ತಾನು ಆಕರ್ಷಕನಾದ ಗಂಡು ಅಂತ ತಾನೇ ತಿಳಿದಹಾಗೆ ನಡಕೋತಾನೆ. ಪೂರಾ ಅಂದರೆ ಪೂರಾ ಬಹಿರಂಗಿ. ಕಲಿತ ಮಾತಿಗೆ ನಿಲುಕಿದ್ದಷ್ಟನ್ನು ಆಕರ್ಷಕವಾಗಿ ಎಷ್ಟು ಆಡಿತೋರುತ್ತಾನೊ ಅಷ್ಟೇ ಈತನೇ? ತಿರುಳೇ ಇಲ್ಲದ ಮನುಷ್ಯನೆ? ಆದರೂ ಎಷ್ಟು ಉದಾರಿ! ಅಪ್ಪ ಸತ್ತು ಇನ್ನೂ ಹನ್ನೆರಡು ದಿನಗಳಾಗಿಲ್ಲ. ಆಗಲೇ ಅವನು ಟ್ರಸ್ಟುಗಿಸ್ಟು ಮಾಡಿ ಮುಗಿಸಿದ್ದು ಅಷ್ಟೇ ಅಲ್ಲ; ಬೊಂಬಾಯಿಯ ಇಲ್ಲಸ್ಟ್ರೇಟಡ್ ವೀಕ್ಲಿಗೆ ಒಂದು ಸಂದರ್ಶನವನ್ನೂ ಕೊಡುವೆನೆಂದಿದ್ದಾನೆ. ಅದು ಪ್ರಕಟವಾಗುವುದಕ್ಕೆ ಎಷ್ಟು ಅವನು ಕಾದಿದ್ದಾನೆ ಎನ್ನುವುದು ಅವಳಿಗೆ ಗೊತ್ತು. ಊರಿಗೆ ಹೇಳುವ ಮುನ್ನ ದೇಶಕ್ಕೆ ತನ್ನನಿರ್ಧಾರ ತಿಳಿಸಿಬಿಟ್ಟಿರುವಾತ ಇವನೇ, ಇಷ್ಟು ಮಾತ್ರವೇ ನನ್ನ ಪ್ರೀತಿಯ ಅಣ್ಣನೇ ಎಂಬುದನ್ನು ನಂಬುವುದು ಅವಳಿಗೆ ಕಷ್ಟ.

ಘನಶ್ಯಾಮ ಕೊಂಚ ಸುಮ್ಮನಿದ್ದು ವಿಮಲಳನ್ನು ಕೇಳಿದ:

‘ಗೌರಿಗೆ ಏನಾದರೂ ಟ್ರಾನ್ಸಫಾರ್ಮಿಂಗ್ ಅನ್ನಬಹುದಾದ ಸ್ಪರಿಚುಯಲ್ ಅನುಭವ ಆಗಿರಬಹುದ?’

‘ಆಗಿದೆ ಅನ್ನಿಸತ್ತೆ. ನಾನು ಒಂದು ದಿನ ಅವಳನ್ನ ಕೇಳಿದೆ. ನಾನುಕುತೂಹಲಕ್ಕೆ ಕೇಳಿದೆ ಅಂತ ಅವಳಿಗೆ ಅನ್ನಿಸಿರಬಹುದು. ಯಾವ ಪ್ರಚಾರಾನೂ ಅವಳಿಗೆ ಬೇಕಾಗಿಲ್ಲ. ಏನೂ ಹೇಳಲಿಲ್ಲ. ‘ಹಸಿದು ಬಂದಿದೀನಿ, ಮರಾಯ್ತಿ ತಿನ್ನಕ್ಕೆ ಏನಾದರೂ ಕೊಡಬಹುದು ಅಂತ ಬಂದ್ರೆ ಏನೇನೋ ಕೇಳ್ತಾಳೆ. ತಾನು ಓದಿಕೊಂಡಿರೋ ಪುಸ್ತಕಗಳಲ್ಲಿ ಯಾರ ಹಾಗೆ ಯಾರಾರು ಇದಾರೆ ಅಂತ ಹೋಲಿಸಿನೋಡೋದೇ ಈ ರಾಜಕುಂಆರಿಯ ಕೆಲಸವಾಗಿಬಿಟ್ಟೆದೆ.’ ಅಂದಳು. ಹಾಸ್ಯಕ್ಕೆ ನನ್ನನ್ನ ಅವಳು ರಾಜಕುಮಾರಿ ಅನ್ನೋದು. ಅವತ್ತು ನೀನು ಮಾತಾಡಿಯಾದ ಮೇಲೆ ಅವಳು ನಮ್ಮ ರಾಜಕುಮಾರರು ಎಷ್ಟು ಚೆನ್ನಾಗಿ ಮಾತಾಡಿದರು ಅಲ್ಲವ ಎಂದು ಬಿಟ್ಟಳು. ಇನ್ನೊಂದು ಸಾರಿ ನಾನೇನೋ ದುಃಖದಲ್ಲಿದ್ದಾಗ ಕೇಳಿದೆ. ಆಗವಳು ನಾಚಿಕೊಂಡಳು. ಕಿವಿ – ಮಾತು ಅನ್ನೋಹಾಗೆ, ಅದರಲ್ಲೇನೂ ಹೆಚ್ಚುಗಾರಿಕೆಯೇ ಇಲ್ಲ ಎನ್ನೋ ಹಾಗೆ, ಅವಳ ತಂಗಿ ಗಂಗಾ ಸತ್ತ ಮೇಲೆ ತನಗೇನೋ ಆಗಿಬಿಡ್ತು ಅಂದಳು. ತಾನು ಪರಮ ಸುಖದಲ್ಲಿದ್ದೇನೆ ಅಂತಲೇ ಅವಳು ತಿಳಿದಿರೋ ಹಾಗೆ ನನಗೆ ಅನ್ನಿಸತ್ತೆ. ತನಗೆ ಆದದ್ದು ಗುಪ್ತವಾಗಿರಬೇಕೆಂದು ಅವಳು ಬಯಸ್ತಾಳೆ. ನಮ್ಮ ಹಾಗೆ ಮಾತಾಡಿಕೊಂಡು ತೋರಿಸಿಕೊಳ್ಳಲ್ಲ. ಲಜ್ಜಾರೂಪಿಯಾದ ದೇವಿ ಅವಳು. ಈಗ ಹಳ್ಳೀಲಿ ಎಲ್ಲರೂ ಅವಳ ಶಕ್ತಿಯನ್ನ ಊಹಿಸಿಬಿಟ್ಟು ಅವಳಿಂದ ಮುಟ್ಟಿಸಿಕೋಬೇಕು ಅಂತ ಬರೋದು ಅವಳಿಗೆ ಇಷ್ಟಾನೇ ಇಲ್ಲ.’

‘ಇಡೀ ದೇಶಕ್ಕೆ ಅಂಥವಳೊಬ್ಬಳು ಬೇಕು ಅಂತ ನಾನು ಅನ್ನೋದು’ ಎಂದು ಘನಶ್ಯಾಮ ಹೇಳಿದ. ಏನಾದರೂ ಹೇಳಬೇಕೆಂದು ಹೇಳಿದ ಈ ಮಾತು ಕೇಳಿ ವಿಮಲಗೆ ಅನ್ನಿಸಿತು: ನನಗೆ ಗೌರಿ ಬೇಕು, ನಾನವಳನ್ನ ಪ್ರೀತಿಸ್ತೀನಿ ಅಂತ ಅಣ್ಣ ಹೇಳಿದ್ರೆ ಅದರಲ್ಲಿ ನಿಜ ಇರ್ತಿತ್ತು. ಸಾರ್ವಜನಿಕವಾದ ಮಾತು ಬಿಟ್ಟು ಇನ್ನೇನೂ ಹೇಳಲಾರದ ಮಾತಿನ ಡಬ್ಬ ಆಗಿಬಿಡ್ತಿದಾನಲ್ಲ ಈ ಅಣ್ಣ ಅಂತ ಬೇಸರವಾಯ್ತು. ವಿಮಲಳ ಒಳಗಿನ ಭಾವನೆಗಳನ್ನು ಊಹಿಸಿದವನಂತೆ ಘನಶ್ಯಾಮ ಹೇಳಿದ:

‘ನೀವಿಬ್ಬರೂ ನಾನು ಯಾಕೆ ಪ್ರಚಾರ ಬಯಸ್ತೀನಿ ಅಂತ ಬೇಸರ ಪಟ್ಟುಕೊಂಡಿರೋದು ನನಗೆ ಗೊತ್ತು. ಹೇಗಿದನ್ನ ನಾನು ನಿಮಗೆ ವಿವರಿಸಲಿ ಗೊತ್ತಾಗ್ತ ಇಲ್ಲ ನನಗೆ. ಮನೆ ಒಳಗೇ ಬೆಳೆದುಬಿಟ್ಟು ನಿಮಗೆ ರಾಜಕೀಯದ ಮಹತ್ವ ತಿಳೀತ ಇಲ್ಲ. ಈ ದೇಶ ಬದಲಾಗಬೇಕು ಅಂದ್ರೆ ಅದಕ್ಕಾಗಿ ರಾಜಕೀಯ ಮಾಡಬೇಕು. ರಾಜಕಾರಣ ಅಂದ್ರೆ ಜನರ ಜೀವನದ ದಿಕ್ಕನ್ನು ಬದಲಾಯಿಸೋದು. ಅಂದ್ರೆ ಅವರು ಯೋಚಿಸುವ ಕ್ರಮವನ್ನು ಬದಲಾಯಿಸೋದು. ಅಂದ್ರೆ ಅವರನ್ನ ಒಲಿಸಿಕೊಳ್ಳೋದು. ಇದಕ್ಕೆ ಪ್ರಚಾರಬೇಕು. ನನಗಾಗಿ ನಾನಿದನ್ನ ಬಯಸಬಾರದು. ಒಂದು ಘನ ಉದ್ದೇಶಕ್ಕಾಗಿ ಮಾಡಬೇಕು. ನನಗೆ ಅಂಥ ಒಂದು ಉದ್ದೇಶ ಇದೆ. ಬನಾರಸ್ಸಿನಲ್ಲಿ ಓದುತ್ತ ಇದ್ದ ದಿನಗಳಿಂದ ಇದು ಬಲವಾಗಿದೆ.’