೧೧

ವಿನೋದಿನಿಯ ತಾಯಿ ಮಂಗಳೂರಿಗೆ ಹೊರಟುಹೋಗಿದ್ದಳು, ಮಗಳನ್ನು ದೇವನಹಳ್ಳಿಯಲ್ಲೇ ಬಿಟ್ಟು. ಮಗಳು ಈ ಮನೆಯವಳೇ ಆಗಿ ಎಲ್ಲರಿಗೂ ಒಗ್ಗಿ ಕೊಂಡಿರುತ್ತಾಳೆಂದು, ಆಸ್ತಿಯಲ್ಲಿ ಪಾಲು ಪಡೆಯುತ್ತಾಳೆಂದು ಖಾತ್ರಿಯಾಗಿ ಅವಳ ಜೀವಕ್ಕೆ ಹಿತವೆನ್ನಿಸಿತ್ತು. ಮನೆಗೆ ಒಡೆಯನಾದ ಘನಶ್ಯಾಮ ಅವಳನ್ನು ಚಿಕ್ಕಮ್ಮನೆಂದೇ ಕರೆಯುವುದು. ವಿನೋದಿನಿಯನ್ನು, ವಿಮಲಳಂತೆಯೇ ತನ್ನ ಇನ್ನೊಬ್ಬ ತಂಗಿಯೆಂದೇ ತಿಳಿಯುವುದು. ತನ್ನ ಪಾಲಿಗೆ ಬಂದ ಹೆಂಚಿನ ಕಾರ್ಖಾನೆಯನ್ನು ಚೆನ್ನಾಗಿ ನಡೆಸಿ, ಘನಶ್ಯಾಮನನ್ನು ಮೆಚ್ಚಿಸಬೇಕೆಂದು ಒಡೆತನದ ಹುರುಪಿನಲ್ಲಿ ಅವಳು ಹೋಗಿದ್ದಳು. ಮಿಂಗೇಲಿ ಸಾಹುಕಾರರ ಕಾರಿನಲ್ಲೇ ಅವಳನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದ. ತುಳುವಿನಲ್ಲಿ ಮಿಂಗೇಲಿಯೂ ಅವಳೂ ಘನಶ್ಯಾಮನ ಗುಣಗಾನವನ್ನು ದಾರಿಯುದ್ದಕ್ಕೂ ಮಾಡಿದ್ದೇ ಮಾಡಿದ್ದು.

ವಿನೋದಿನಿಗೆ ವಿಮಲನ ಪಕ್ಕದ ರೂಮು. ಅದರಲ್ಲಿ ಅವಳು ತನ್ನ ಪುಸ್ತಕಗಳನ್ನೆಲ್ಲ ಜೋಡಿಸಿಕೊಂಡು ಒಂದು ಮೂಲೆಯಲ್ಲಿ ಪರಮಹಂಸರ ಮತ್ತು ಶಾರದಾ ದೇವಿಯರ ಚಿತ್ರಗಳನ್ನಿಟ್ಟು ಒಂದು ನಂದಾದೀಪವನ್ನು ಹತ್ತಿಸಿ ಉರಿಸುತ್ತಿದ್ದಳು. ಮುಂದಿನ ವಾರದಿಂದ ಕೇಶವ ಪ್ರಾರಂಭಿಸುವ ಸಂಸ್ಕೃತ ಪಾಠಶಾಲೆಯ ಮೊದಲ ವಿದ್ಯಾರ್ಥಿನಿ ಅವಳು.

ಜೀಪಿನಲ್ಲಿ ಮನೆಗೆ ಬರುತ್ತಿದ್ದಾಗ ವಿನೋದಿನಿ ಸೀನುತ್ತಿದ್ದಳು. ‘ಏನೇ ಸೀತ ಆಗ್ತಿದಿಯೇನೇ’ ಎಂದು ವಿಮಲ ಕೇಳಿ, ‘ಅಣ್ಣ, ಇಂಗ್ಲೆಂಡಿಂದ ಬ್ರಾಂಡಿ ತಂದಿದೀಯ?’ ಎಂದಳು. ‘ಎಸ್, ಎರಡು ಬಾಟ್ಲಿಯಿದೆ. ನಮ್ಮ ಅಪ್ಪಟ ಭಾರತೀಯ ತಂಗಿಯರಿಗೆ ವಿದೇಶೀ ಮಾಲು ಬೇಕೋ?’ ಎಂದು ನಗೆಯಾಡಿದ. ‘ನಾನು ಬ್ರಾಂಡಿ ಗೀಂಡಿ ಕುಡಿಯಲ್ಲಪ್ಪ’ ಎಂದಳು ವಿನೋದಿನಿ. ‘ಬ್ರಾಂಡಿ ಔಷಧಿ ಕಣೇ. ಈ ಮಲೆನಾಡಿನ ಬ್ರಾಹ್ಮಣರ ಎಲ್ಲ ಮನೇಲೂ ಇಟ್ಟಿರ್ತಾರೆ. ಬಾಣಂತೀರಿಗೆ ಸೀತ ಆಗಬಾರ್ದು ಅಂತ ನಿತ್ಯ ಒಂದೊಂದು ಚಮಚ ಕೊಡ್ತಾರೆ ಗೊತ್ತ?’ ಎಂದಳು.

ಮನೆಗೆ ಬಂದ ಮೇಲೆ ವಿನೋದಿನಿಯ ರೂಮಿಗೇ ಹೋಗಿ ವಿಮಲ ಬಾಗಿಲು ಹಾಕಿ ಕೂತುಕೊಂಡಳು. ಅವಳಿಗೆ ಹರಟಬೇಕಿತ್ತು. ಬ್ರಾಂಡಿಯನ್ನು ಎರಡು ಗ್ಲಾಸುಗಳಲ್ಲಿ ಹಾಕಿ ಒಂದನ್ನು ವಿನೋದಿನಿಗೆ ಕೊಟ್ಟಳು. ಅವಳು ಬೇಡವೇ ಬೇಡ ಎಂದ ಮೇಲೆ, ಅವಳಿಗೆ ಅರ್ಧ ಚಮಚವನ್ನು ಒತ್ತಾಯಮಾಡಿ ಕುಡಿಸಿ ತಾನೊಂದು ಗ್ಲಾಸು ಹಿಡಿದು ಕುರ್ಚಿ ಎಳೆದು ಕೂತಳು.

‘ಬರೀ ಹಿಂದಿ ಸಿನಿಮಾ ನೋಡ್ತ ಇದ್ದ ನಾನು ಹೇಗೆ ಬದಲಾದ್ದು ಗೊತ್ತ?’ ಎಂದಳು. ವಿಮಲ ಬ್ರಾಂಡಿಯನ್ನು ಸವಿಯುವುದನ್ನು ಕಂಡು ವಿನೋದಿನಿಗೇನೂ ಶಾಕ್ ಆಗಿರಲಿಲ್ಲ. ತನ್ನ ಅಮ್ಮನೇ ಅಪ್ಪನ ಜೊತೆ ಕೂತು ಕುಡಿಯುವುದಿತ್ತೆಂದು ಅವಳಿಗೆ ಗೊತ್ತಿತ್ತು. ಆದ್ದರಿಂದಲೇ ಅವಳಿಗೆ ಬ್ರಾಂಡಿಕುಡಿಯುವುದೆಂದರೆ ಹೇಸಿಗೆ – ಅಷ್ಟೆ. ವಿಮಲಳೂ ಕುಡಿಯಬಹುದು ಎಂದು ಈಗ ಗೊತ್ತಾಗಿ ಸಮಾಧಾನವಾಯಿತು.

‘ಗೌರಿಯನ್ನು ಕಂಡ ನಂತರ ನಾನು ಇಷ್ಟೆಲ್ಲ ಬದಲಾಗಿ ಬಿಟ್ಟಿರೋದು. ಇದಕ್ಕಿಂತ ಮೊದಲು ಕೊಂಚ ಸಿಲ್ಲಿ ನಾನು.’

ವಿನೋದಿನಿ ಅವಳ ಮಾತನ್ನು ಕೇಳಿಸಿಕೊಳ್ಳಲು ಇಷ್ಟಪಟ್ಟವಳಂತೆ ಸುಮ್ಮನೇ ಹಾಸಿಗೆ ಮೇಲೆ ಕಾಲು ಚಾಚಿ, ಶಾಲು ಹೊದ್ದು ಕೂತಳು. ವಿಮಲಳಿಗೆ ಹುರುಪೇರಿತ್ತು:

‘ಮಿಂಗೇಲಿ ಜೊತೆ ಕುಡಿದಿದ್ದೀನಿ ನಾನು. ಆದರೆ ಈ ಮನೇಲಿ ಅಲ್ಲ. ಈ ಮನೇನ ಅಣ್ಣನೂ ಗೌರಿಯೂ ಎಷ್ಟು ಬದಲಾಯಿಸಿ ಬಿಟ್ಟರು, ನೋಡು. ಈಗಿಲ್ಲಿ ಮೇಲೂ ಇಲ್ಲ, ಕೀಳು ಇಲ್ಲ’.

ವಿನೋದಿನಿಯ ಒಪ್ಪಿಗೆಯ ನಗುಮುಖ ಅವಳನ್ನು ಉತ್ತೇಜಿಸಿತು:

‘ಈ ನನ್ನ ಅಣ್ಣ ಸ್ವಲ್ಪ ಬದಲಾದರೆ ಅವನಿಗೆ ಇಷ್ಟವಾದ್ದು ಅವನಿಗೆ ಸಿಗತ್ತೆ. ಗೊತ್ತಾಯ್ತ ನಾನು ಏನು ಹೇಳ್ತ ಇದೀನಿ ಅಂತ’.

‘ನಾನೂ ಊಹಿಸಿದ್ದೆ. ಹಾಗೇನಾದರೂ ಆದರೆ ಎಷ್ಟು ನಮಗೆಲ್ಲ ಒಳ್ಳೇದಾಗತ್ತೆ ಅಲ್ವ?’

ವಿನೋದಿನಿ ಬ್ರಾಂಡಿಯನ್ನು ಅರ್ಧ ಚಮಚ ಮಾತ್ರ ಕುಡಿದು ವಿಮಲಳಷ್ಟೇ ಹುರುಪಿನಲ್ಲಿ ಹೇಳಿದ್ದಳು. ವಿಮಲ ಕುರ್ಚಿಯಿಂದೆದ್ದು ಬಂದು ಹಾಸಿಗೆ ಮೇಲೆ ಅವಳ ಪಕ್ಕ ಕೂತಳು.

‘ಅಣ್ಣನಿಗೆ ಅವಳು ತುಂಬ ಇಷ್ಟವಾಗಿದಾಳೆ. ಆದರೆ ದೇಶ ಸಮಾಜ ಬದಲಾವಣೆ ಪ್ರಗತಿ ಅಂತ ಏನೇನೋ ಮಾತಾಡಿ ಅವಳಿಗೆ ಅಸಹ್ಯವಾಗುವಂತೆ ಮಾಡಿ ಬಿಡ್ತಾನೆ ಅಂತ ಭಯ ನನಗೆ. ಈ ಗೌರಿ ದೇವಿ ಥರ ಅನ್ನೋದು ನಿಜ. ಆದರೆ ಅವಳೇನೂ ಮೂದೇವಿಯಲ್ಲ. ಗಂಡಿನ ಆಸೆ ಅವಳಿಗೂ ಇದೆ ಅಂತ ನನಗೆ ಗೊತ್ತು. ಅವಳ ಹಳೇಕಾಲದ ಪೆಟ್ಟಿಗೆ ತುಂಬ ಏನೇನಿದೆ ಗೊತ್ತ? ನಾವು ಕದ್ದು ಮುಚ್ಚಿ ಇಂಗ್ಲಿಷ್‌ನಲ್ಲಿ ಓದಿದ್ದೆಲ್ಲ ಅಪ್ಪಟ ಕನ್ನಡದಲ್ಲೂ ಇದೆ. ಕಲಿಯುಗ ಅನ್ನೋ ಪತ್ರಿಕೆ ಅದು. ಮೊದಲನೇ ರಾತ್ರಿ ಗಂಡು ಏನು ಮಾಡಬೇಕು ಹೆಣ್ಣು ಏನು ಮಾಡಬೇಕು ಎಲ್ಲ ಇದೆ ಈ ಪತ್ರಿಕೇಲಿ. ಎಲ್ಲ ಗೌರಿ ಓದಿಕೊಂಡಿದಾಳೆ; ನನಗೇ ಬೇಕಾದರೆ ಹೇಳಿಕೊಟ್ಟಾಳು.

ಅಷ್ಟೆಲ್ಲ ಮಡಿ ಮಾಡುವ ಅಕ್ಕು ಕೂಡ ಏನೂಂತ ಅಂದುಕೊಂಡಿದೀಯ? ಅವರಿಗೆ ಈ ಅಸುಪಾಸಿನಲ್ಲಿ ಯಾರು ಯಾರನ್ನ ಇಟ್ಟುಕೊಂಡಿದಾರೆ. ಯಾರು ಯಾರಿಗೆ ಬಸುರಾದರು ಎಲ್ಲ ಗೊತ್ತು. ಅವರ ಹಿತ್ತಲಿಗೆ ಬರೋ ಹೆಂಗಸರು ಎಲ್ಲವನ್ನೂ ಅಕ್ಕುಗೆ ಹೇಳಿಕೊಳ್ತಾರೆ. ಗಂಡಂದಿರನ್ನ ಹೇಗೆ ವಶಪಡಿಸಿಕೊಳ್ಳಬೇಕು ಅನ್ನೋ ಗುಪ್ತ ಸಮಾಲೋಚನೆಯನ್ನೂ ಅಕ್ಕು ಜೊತೆ ಈ ಶೂದ್ರ ಹೆಂಗಸರು ನಡೆಸ್ತಾರೆ. ಆದರೆ ಅಕ್ಕು ಮಾತ್ರ ಎರಡು ಮಡಿ ಸೀರೆ, ದಿನಕ್ಕೊಂದು ಹೊತ್ತು ಊಟ – ಇಷ್ಟರಲ್ಲೇ ತಮ್ಮ ಜೀವನ ಸಾಗಿಸ್ತಾರೆ. ಅದ್ಭುತವಾದ ಹೆಣ್ಣು ಅದು. ಕಾಫಿ ಟೀ ಏನೂ ಕುಡಿಯಲ್ಲ. ಆದರೆ ಗೊತ್ತ? ಅವರಿಗೂ ಒಂದು ನಸ್ಯದ ಚಟವಿತ್ತಂತೆ. ಕೇಶವನ ಹತ್ತಿರ ಅಂಗಡೀಂದ ತರಿಸಿಕೋತ ಇದ್ದರಂತೆ. ಆದರೆ ಗೌರಿ ಏನೋ ಒಂದು ಥರಾ ಆಗಿಬಿಟ್ಟಿದಾಳೆ ಅಂತ ಅವರಿಗೆ ಅನ್ನಿಸಿದ ಮೇಲೆ ನಸ್ಯಾನ್ನೂ ಬಿಟ್ಟುಬಿಟ್ಟರಂತೆ.

ನಮ್ಮ ಅಣ್ಣನ್ನ ಏನಾದರೂ ಈ ಗೌರಿ ಮದುವೆ ಆದರೆ ಅಕ್ಕು ಅಟ್ಟ ಹತ್ತಿ ಕೂತುಬಿಡ್ತಾರೆ. ನಿತ್ಯ ದೇವರಿಗೆ ಅವರು ಕೈ ಮುಗಿದು ಕೇಳಿಕೋಳ್ಳೋದು ಗೌರಿಗೆ ಮದುವೆಯಾಗೋ ಬುದ್ಧೀನ ಕೊಡಪ್ಪ ಅಂತ. ಅವರಂಥ ತಾಯೀನ ನಾನು ನೊಡಿಯೇ ಇಲ್ಲ ಕಣೆ.

ಗೌರೀನೂ ನಮ್ಮ ಹಾಗೆ ಒಂದು ಗಂಡನ್ನು ಕೂಡೋ ಆಸೆ ಪಡೆದಿರಬಹುದು ಅಂತ ನನಗೆ ಬಾಳ ಸಾರಿ ಅನ್ನಿಸಿದೆ ಕಣೆ. ಒಂದೊಂದು ಸಾರಿ ಅವಳು ಒಂಥರಾ ನೋಡ್ತ ನಿಂತಿರತಾಳೆ. ಹೇಗೇಂತ ನನಗೆ ಹೇಳಕ್ಕೆ ಗೊತ್ತಾಗಲ್ಲ. ಗಂಡಿನ ಹೃದಯವನ್ನ ಕುದಿಸಿ ಬಿಡೋ ಹಾಗೆ ಇರತ್ತೆ ಅವಳ ಕಣ್ಣಿನ ನೋಟ. ಮತ್ತೆ ಅವಳ ಹುಬ್ಬಿನ ಮಾಟ ತಿದ್ದಿಟ್ಟ ಹಾಗೆ ಇರತ್ತೆ. ಅವಳ ತುಂಬಿದ ತುಟಿಗಳಲ್ಲಿ ಸದಾ ನೆಲೆಸಿರೋ ಹಾಗೆ ಕಾಣುವ ಮಾದಕವಾದ ಮಂದಹಾಸವಂತೂ ಹುಚ್ಚೇಡಿಸತ್ತೆ. ಮತ್ತೆ ಅವಳ ಕೆನ್ನೆಯ ಹೊಳಪು ನೋಡಿಯ? ಸರಸರಾಂತ ಅವಳು ದೈನೇಂದ ನಮ್ಮ ಮನೇಗೆ ಸೆರಗು ಕಟ್ಟಿ, ಸೊಂಟಕ್ಕೆ ಅದನ್ನ ಸಿಕ್ಕಿಸಿ, ಕೈ ಬೀಸ್ತ, ಗುಡ್ಡ ಹತ್ತಿ ಇಳಿದು, ಬೆವರ್ತಾನೇ ಬಂದವಳು ನಗುನಗ್ತ ಎದುರು ನಿಂತಾಗ? ಅವಳ ಮನೇಲಿ ಸರಿಯಾಗಿ ಮುಖ ಕಾಣುವಂತಹ ಕನ್ನಡಿಸಹಾ ಇಲ್ಲ ಕಣೇ. ನಾನೇ ಒಂದು ಸಾರಿ ನಮ್ಮ ಮನೆ ಕನ್ನಡಿ ಎದುರು ಅವಳನ್ನ ನಿಲ್ಲಿಸಿ, ಅವಳನ್ನೇ ಅವಳಿಗೆ ನಖ ಶಿಖಾಂತ ದರ್ಶನಮಾಡಿಸಿ, ನೀನು ಎಷ್ಟು ಚೆಲುವೇಂತ ನಿನಗೆ ಈಗಾಲದರೂ ಗೊತ್ತಾಯ್ತ ಅಂತ ರೇಗಿಸಿ, ಅವಳನ್ನ ನಾಚಿಸಿ ಬಿಟ್ಟಿದ್ದೆ, ಆಗ ಅವಳು ನಾಚೋದನ್ನ ನೋಡಿ ನನಗೇ ಅವಳನ್ನ ಮುದ್ದಿಸಬೇಕೂಂತ ಅನ್ನಿಸಿಬಿಟ್ಟಿತ್ತು. ಆದರೆ ಅವಳ ಗಾಂಭೀರ್ಯ ಭಾಸವಾಗಿ ಹೆದರಿಬಿಟ್ಟೆ. ಸಾಕ್ಷಾತ್ ದೇವಿಯೇ ನನ್ನ ಎದುರು ನಿಂತಿದಾಳೆ ಅಂತ ಅನ್ನಿಸಿಯೂ ಬಿಟ್ಟಿತ್ತು.

ಆದರೂ ಮತ್ತೊಂದು ವಿಷಯ ಹೇಳ್ತೀನಿ ಕೇಳು.

ನಮ್ಮ ಸಂಬಂಧದ ವಿಷಯವೆಲ್ಲ ಅಪ್ಪನಿಗೆ ಗೊತ್ತಾದಮೇಲೆ, ಗೊತ್ತಾಗೋ ಹಾಗೆ ಮಾಡಿದ್ದೂ ಗೌರಿಯೇ ಅನ್ನು, ಆಗ ನನ್ನ ಗಂಡ, ಮಿಂಗೇಲಿ ಇದಾರಲ್ಲ, ಅವರು – ನಾನೇನೂ ಹೇಳ್ಳಿಲ್ಲ ಅನ್ನು, ಆದರೂ ಮೀಸೆ ಬೋಳ್ಸಿ ಬಿಟ್ಟರು. ಪ್ಯಾಂಟು ಹಾಕೋದು ನಿಲ್‌ಇಲಸಿ ಪಂಚೆ ಉಡೋಕೆ ಶುರುಮಾಡಿದರು. ಗೌರಿ ಆಗ ನನಗೆ ಏನು ಹೇಳಿದಳು ಗೊತ್ತ? ಯಾಕೇ ಮೀಸೆ ಚುಚ್ಚತ್ತೇನೆ? ನಿನ್ನ ಗಂಡ ಮೀಸೇಲಿ ಎಷ್ಟು ಚೆನ್ನಾಗಿ ಕಾಣ್ತ ಇದ್ದ – ಹೀಗೆ ಅಂದುಬಿಡೋದೇನೇ ಅವಳು! ಅವಳಲ್ಲಿ ವೈರಾಗ್ಯಾನೂ ನೆಲಸಿದೆ; ಈ ಲೀಲಾಪ್ರಪಂಚದ ಮಾಯೆಯಲ್ಲಿ ತತ್ಪರಳಾಗಿ ಬಿಡುವ ಶಕ್ತಿಯೂ ಅವಳಿಗಿದೆ.’

ವಿನೋದಿನಿ ನಗು ತಡೆಯಲಾರದೆ ನಗುತ್ತ ‘ಇನ್ನರ್ಧ ಚಮಚ ಕೊಡೆ’ ಎಂದು ಬ್ರಾಂಡಿಯನ್ನು ಇಸಕೊಂಡಳು. ವಿಮಲಳೂ ನಗುತ್ತ, ‘ಅಲ್ಲವೆ? ನೀನೆಂದಾದರೂ ಸಿಗರೇಟು ಸೇದಿದೀಯ? ನನ್ನ ಪ್ರಕಾರ ಕಾಲೇಜಿಗೆ ಹೋಗೋ ಹುಡುಗೇರು ಒಂದಲ್ಲ ಒಂದು ಸಲವಾದರೂ ಕುತೂಹಲಕ್ಕೆ ಸಿಗರೇಟು ಸೇದಿರ್ತಾರೆ’ ಎಂದಳು.

‘ಒಂದೇ ಒಂದು ಸಲ ಸೇದಿ ಒಂದು ಗಂಟೆ ಕೆಮ್ಮಿ ವಾಂತಿ ಮಾಡಿಕೊಂಡಿದೀನಿ ಕಣೆ’ ಎಂದು ವಿನೋದಿನಿ ತನ್ನ ಬಿಗಿಯಾಗಿ ಕಟ್ಟಿದ ಉದ್ದವಾದ ಜಡೆಯನ್ನು ಹೆಗಲಮೇಲೆ ಹಾಕಿಕೊಂಡು ಇನ್ನಷ್ಟು ಹೊತ್ತಿನ ಹರಟೆಗೆ ರೆಡಿಯಿರುವಂತೆ ಕಂಡಳು. ಹೀಗೆ ಒಬ್ಬರಿಗೊಬ್ಬರು ಉಕ್ಕಿ ಒದಗುತ್ತಿದ್ದಾಗ ವಿಮಲ ಥಟ್ಟನೆ ತನ್ನ ಕೊರಳಲ್ಲಿದ್ದ ಒಂದು ನಾಲ್ಕೆಳೆಯ ಹಳೆಯ ಕಾಲದ ಬಂಗಾರದ ಸರವನ್ನು ತೆಗೆದು,

‘ಇದೆಂಥ ವೈರಾಗ್ಯವೇ ನಿನ್ನದು. ಈ ಸರಾನ್ನ ನೀನು ಹಾಕಿಕೋ ಬೇಕು. ನಿರಾಭರಣೆಯಾಗಿ ಕೇಶವರಿಂದ ನೀನು ನವರಸಭರಿತ ಕಾವ್ಯಗಳನ್ನು ಕಲಿಯೋದಾದರೂ ಹೇಗೆ?’ ಎಂದು ಗದರಿಸುವಂತೆ ಮುಖಮಾಡಿ ಅಣಕಿಸುತ್ತ ವಿನೋದಿನಿಯ ಕೊರಳಿಗದನ್ನು ಹಾಕಿ ಹೇಳಿದಳು;

‘ಕಣ್ಣು ಮುಚ್ಚಿ ಬೆಕ್ಕು ಹಾಲು ಕುಡಿಯೋದರಂತೆ. ಅದೇನು ದೀರ್ಘವಾದ ಭೂವರಾಹ ಪೂಜೆಯಪ್ಪ. ದೇವರಿಗೆ ಅದೆಷ್ಟು ಆರತಿಗಳಪ್ಪ. ನಿತ್ಯ ಪ್ರಸಾದವಾಗಿ ಏನೇನೂ ಹೂವುಗಳಪ್ಪ’

ವಿನೋದಿನಿ ನಾಚಿ ಮುಖಮುಚ್ಚಿಕೊಂಡಳು. ವಿಮಲ ಅವಳನ್ನು ಮುತ್ತಿಟ್ಟು,

‘ಏಯ್ ನನ್ನ ಸೋದರಿ, ಕೇಳಿಸಿಕೊ. ನಮ್ಮ ರಾಜಕಾರಣವನ್ನ ನಾವಿನ್ನು ಶುರು ಮಾಡತಕ್ಕದ್ದು. ಹೇಗಾದರೂ ಈ ದೇವಿ ಗೌರಿಯೂ ನಮ್ಮ ರಾಜಕುಮಾರನೂ ಮದುವೆಯಾಗುವಂತೆ ನಾನೂ ನೀನೂ ಕೂಡಿ ಮಸಲತ್ತು ಮಾಡತಕ್ಕದ್ದು. ಆಯಿತ? ಈ ನಮ್ಮ ಶಾರದಾಮಣಿಯೂ, ಆ ಉದ್ದ ಕೂದಲಿನ ಚೆಲುವ ಪರಮಹಂಸನೂ ಒಂದಾಗುವಂತೆ ನಾನೂ ಗೌರಿಯೂ ನಮ್ಮ ರಾಜಕಾರಣ ಮಾಡತಕ್ಕದ್ದು. ಜಾತಿ ಗೀತಿ ಇತ್ಯಾದಿ ಅನಿಷ್ಟ ಸಂಪ್ರದಾಯಗಳನ್ನು ಈ ನಮ್ಮ ಮಹಾ ಕ್ರಾಂತಿಕಾರಿಯಾದ  ಅಣ್ಣ ಅವನ ಘನೋದ್ದೇಶದಲ್ಲಿ ಕೊನೆಗಾಣಿಸುವುದರ ಮುನ್ನವೇ, ಈಗಿಂದೀಗಲೇ, ಅದನ್ನು ಕೊನೆಗಾಣಿಸುವವರು ನಿಜವಾಗಿನಾವು, ಹೆಂಗಸರು. ಏನೂಂತೀಯ?’

ಏನೆನ್ನಬೇಕು ತಿಳಿಯದೆ ವಿನೋದಿನಿ ಇನ್ನೊಂದು ಚಮಚ ಬ್ರಾಂಡಿಯನ್ನು ಕುಡಿದು ನಾಚಿ ಕಂಪಾಗಿದ್ದಳು.

* * *

೧೨

ಕೃಷ್ಣ ಶಾಸ್ತ್ರಿಗಳು ಬಂದು ಒಂದು ವಾರವಾದರೂ ಆಗಿತ್ತು. ಒಂದೊಂದು ದಿನ ಮಂಡಗದ್ದೆ ಯಲ್ಲೊ ಮಾಳೂರಲ್ಲೊ ಇದ್ದು ಬರುವರಾದರೂ ಉಳಿದ ದಿನ ದೈನೆಮನೆಗೇ ಮಲಗಲು ಬರುವರು.

ಈಗವರಿಗೆ, ಅವರ ಹೆಂಡತಿ ಕಾಲವಾದ ಮೇಲೆ, ಸ್ವಗೃಹವೆಂಬುದಿಲ್ಲ. ಜೋಳಿಗೆಯಲ್ಲಿ ಒಂದು ತಾಮ್ರದ ಚೆಂಬು, ಒಂದು ತಾಮ್ರದ ಲೋಟ, ಒಂದು ಉದ್ದರಣೆ, ಒಂದು ತಮ್ಮ ಮನೆತನದ ಪೂಜೆಯ ಶಾಲಿಗ್ರಾಮ, ವರ್ಷಕ್ಕೊಮ್ಮೆ ಹಿತೈಷಿಗಳು ಕೊಡುವ ಜೋಡಿ ಪಂಚೆ, ಶಲ್ಯ, ಚಳಿಗಾಲದಲ್ಲಿ ಹೊದೆಯಲೆಂದು ಅದೆಷ್ಟೋ ವರ್ಷಗಳಿಂದ ಅವರ ಬಳಿಯಿದ್ದ ಈಗ ಮಾಸಿಹೋದ ಜರಿಶಾಲು – ಇಷ್ಟೇ ಅವರ ಮಗ ದುಂಬಾಲು ಬಿದ್ದು ಮಾರಿ, ತುಮಕೂರಿನಲ್ಲಿ ಒಂದು ಹೋಟೆಲು ತೆಗೆದಿದ್ದ. ಅಪ್ಪನನ್ನೂ ತನ್ನ ಜೊತೆ ಬರುವಂತೆ ದುಂಬಾಲು ಬಿದ್ದಿದ್ದ. ಸೊಸೆ ಒಳ್ಳೆಯವಳು. ಆದರೆ ಪುರೋಹಿತರೊಬ್ಬರ ಮಗಳೇ ಆದ ಅವಳಿಗೂ ತನ್ನ ಗಂಡ ಪುರೋಹಿತ ವೃತ್ತಿಯನ್ನೂ, ಪ್ರಯೋಜನಕ್ಕೆ ಬಾರದ ವ್ಯವಸಾಯವನ್ನೂ ಬಿಟ್ಟು ಪೇಟೆ ಸೇರುವುದು ಬೇಕಿತ್ತು. ಮಾವನೂ ಜೊತೆಗಿರಬೇಕೆಂದು ಅವಳಿಗೆ ಆಸೆಯಿತ್ತು. ಸುಮ್ಮನೆ ಮಗನ ಜೊತೆ ಇದ್ದುಬಿಡಬಾರದ ಎಂದು ಎಲ್ಲರೂ ಹೇಳಿದರು. ಆದರೆ ಮಗನ ಜೊತೆ ಹೋಗೇನಾದರೂ ಇದ್ದಿದ್ದರೆ, ಮಗ ದಾಕ್ಷಿಣ್ಯಕ್ಕೆ ಬೇಡವೆಂದರೂ ಹೋಟೆಲಿನ ಗಲ್ಲದ ಮೇಲೆ ಕೂತು ಚಿಲ್ಲದರೆ ಎಣಿಸಬೇಕಾಗಿ ಖಂಡಿತ ಬರುತ್ತಿತ್ತು, ಪೇಟೆಯಲ್ಲಿ ಸುಮ್ಮನೇ ಕೂತು ತಿನ್ನುವುದು ಸಾಧ್ಯವೆ? ಸಾಧುವೆ?

‘ಎಲ್ಲರ ಹಣೆಬರಹ ಓದಬಲ್ಲವನಾದರೂ ನಾನು ಮಾತ್ರ ಈಗಿರುವ ಪುಣ್ಯ ಕ್ಷೇತ್ರವನ್ನು ಹೋಗಿ ಸೇರಿಯೇನೆಂದು ಕನಸಿನಲ್ಲೂ ಕಂಡಿರಲಿಲ್ಲ’ ಎಂದು ಪ್ರಾರಂಭವಾಗಿ, ಕೃಷ್ಣ ಶಾಸ್ತ್ರಿಗಳು ಮಾತ್ರ ವರ್ಣಿಸಬಲ್ಲಂತೆ, ಕೇಶವನ ಕಿವಿಗೆ ಸುಖವಾಗುವಂತೆ ಈಗ ಅವರು ಸೇರಿಕೊಂಡಿರುವ ಕ್ಷೇತ್ರದ ವರ್ಣನೆ ನಡೆಯುತ್ತದೆ. ಇದು ನಡೆಯುವಾಗ ಗೌರಿ ಮಾಡಿ ಕೊಟ್ಟ ಬಿಸಿಬಿಸಿ ಕಾಫಿ ಇಬ್ಬರ ಕೈಯಲ್ಲೂ ಇರುತ್ತದೆ.

* * *

ಈ ಲೋಕದ್ದೇ ಅಲ್ಲ ಎನ್ನಿಸುವ ಕ್ಷೇತ್ರ ಅದು. ಅದು ಇದೆ ಎಂದು ಗೊತ್ತಿದ್ದರೆ ಮಾತ್ರ ಅದು ಇದೆ; ಹೋಗಬೇಕೆನ್ನಿಸುವವರಿಗೆ ಮಾತ್ರ ಅದು ಇದೆ. ಇನ್ನೂ ಮುಖ್ಯವಾದೊಂದು ವಿಷಯವನ್ನು ಈ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ ಅನ್ನಪೂರ್ಣೆಗಾಗಿ ಮಾತ್ರ ಅಲ್ಲಿಗೆ ಹೋದರೆ ಹೋಗಬೇಕು. ಕಣ್ಣಿನ ಸುಖದವರಿಗೆ ಇಡೀ ಕ್ಷೇತ್ರದ ಸೌಂದರ್ಯವೇ ಹತ್ತಂತೆ ದೇವಿಯ ಮೂರ್ತಿ ಕಾಣಿಸಿದರೆ, ನಂಬುವ ಭಕ್ತಾದಿಗಳಿಗೆ ಅಮ್ಮನವರೇ ಹೆತ್ತಂತೆ ಕ್ಷೇತ್ರದ ಸೌಂದರ್ಯ ಭಾಸವಾಗುತ್ತದೆ.

ತುಂಗಾ ನದಿಯ ನಡುವೆ ಅದೊಂದು ಗುಡ್ಡ. ಸುಮಾರು ಮೂರು ದಶಕಗಳ ಕೆಳಗಿನ ಭಾರಿ ಮಳೆಗಾಲದಲ್ಲಿ ಕೂಡ ಈ ಗುಡ್ಡದ ನೆತ್ತಿಯ ಮೇಲಿನ ದೇವಸ್ಥಾನದ ಸುತ್ತ, ಅಂದರೆ ನಲವತ್ತು ಐವತ್ತು ಎಕರೆಯಷ್ಟಾದರೂ ಪ್ರದೇಶ, ಮುಳಿಗಿರಲಿಲ್ಲವೆಂದು ಹಿರಿಯರು ನೆನಪು ಮಾಡಿಕೊಳ್ಳುವರು. ಈಚಿಗೆ ತುಂಗೆಯಲ್ಲಿ ನೀರೇ ಇಲ್ಲವಲ್ಲ; ಮಳೆಯೂ ಕಡಿಮೆಯಾಗಿ ಬಿಟ್ಟಿದೆಯಲ್ಲ.

ಸುತ್ತಲೂ ತುಂಗೆ ಪ್ರದಕ್ಷಿಣೆ ಬರುವ ಈ ಗುಡ್ಡದ ನೆತ್ತಿಯ ಮೇಲೆ ಅನ್ನಪೂರ್ಣೇಶ್ವರಿ ನೆಲಸಿದ್ದಾಳೆ. ಕಡುಕೋಪದ ದುರ್ವಾಸ ಮಹಾಮುನಿ ಮಹಾತಾಯಿಯನ್ನು ಇಲ್ಲಿ ನೆಲಸುವಂತೆ ಒಲಿಸಿಕೊಂಡದ್ದೆಂದು ಐತಿಹ್ಯ. ಇಡೀ ಮಲೆನಾಡಿಗೆ ಅನ್ನ ಕೊಡುವವಳು ಇವಳೇ ಎಂದು ನಂಬಿದವರು ಸುತ್ತಲೂ ಇದ್ದಾರೆ. ಆದರೆ ಅನ್ನಪೂರ್ಣೇವರಿಯ ದರ್ಶನವಾಗಬೇಕೆಂದರೆ ದೋಣಿಯಲ್ಲೇ ಹೋಗಬೇಕು. ಬೇರೆ ಮಾರ್ಗವಿಲ್ಲ. ಯಾವ ಮೋಟಾರು ವಾಹನವೂ ಈ ಗುಡ್ಡದ ಮಣ್ಣಿನ ಮೇಲೆ ಚಲಿಸಿದ್ದಿಲ್ಲ.

ಚಲಿಸಲು ಬಿಡುವುದೂ ಇಲ್ಲ ಅನ್ನಪೂರ್ಣೇಶ್ವರಿಯ ಅರ್ಚಕರಾದ ಸುಬ್ರಹ್ಮಣ್ಯ ಅವಧಾನಿಗಳು. ಈ ಪೂಜೆ ವಂಶಪಾರಂಪರ‍್ಯವಾಗಿ ಅವರಿಗೆ ದಕ್ಕಿದ್ದು. ಯಾವ ಕಾಲದಿಂದಲೋ ಅವರ ವಂಶಸ್ಥರು ಅಲ್ಲಿ ಪೂಜೆ ಮಾಡಿಕೊಂಡಿದ್ದಾರೆ. ಯಾವ ಕಾಲದಿಂದಲೋ ಸತತವಾಗಿ ಅಲ್ಲಿ ವೇದಾಧ್ಯಯನ ನಡೆದುಕೊಂಡು ಬಂದಿದೆ, ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ – ಹೀಗೆ.

ಅವಧಾನಿಗಳ ಮಗ ಮಾತ್ರ ವೇದಾಧ್ಯಯನದಲ್ಲಿ ಅಷ್ಟು ಆಸಕ್ತಿ ತೋರಿಸಲಿಲ್ಲ; ಅವನದೇ ಒಂದು ಕಥೆ, ಈಗದು  ಬೇಡ. ಪೂಜೆಯ ಹೊತ್ತಿಗೆ ನೆವಕ್ಕೆ ಇರುತ್ತಾನೆ, ಅಷ್ಟೆ. ಉರಿದುರಿದೇ ಅಪ್ಪಮಗ ಒಬ್ಬರಿಗೊಬ್ಬರು ಮಾತಾಡೋದು. ಮೊನ್ನೆ ಮಾರಾಯ ಏನೋ ಕೆಲಸಕ್ಕೆಂದು ಶಿವಮೊಗ್ಗೆಗೆ ಹೋಗಿದ್ದ. ಅಲ್ಲಿ ಒಬ್ಬ ಸ್ವಾಮಿ ಇಂಗ್ಲಿಷಿನಲ್ಲಿ ಧಾರಾಕಾರವಾಗಿ ಭಗವದ್ಗೀತೆಯ ಬಗ್ಗೆ ಮಾತಾಡಿದ್ದನ್ನು ಕೇಳಿಸಿಕೊಂಡು ದಂಗಾಗಿ ಬಂದ. ಇಂಗ್ಲಿಷಿನಲ್ಲಿ ಅಷ್ಟು ನಿರರ್ಗಳವಾಗಿ ಮಾತಾಡುವುದು ಸಾಧ್ಯವೆಂಬ ಕಾರಣಕ್ಕಾಗಿಯೇ ಅವನಿಗೆ ಭಗವದ್ಗೀತೆ ಪೂಜ್ಯವೆನ್ನಿಸಿಬಿಟ್ಟಿದೆ. ನಿಜವೆಂದರೆ ಅವನಿಗೆ ಇಂಗ್ಲಿಷ್ ಬಾರದಿದ್ದರೂ ಭಾಷಣದ ನಂತರ ಒಂದು ಸಾವಿರ ರೂಪಾಯಿ ಸಭೆಯಲ್ಲಿ, ದಕ್ಷಿಣಾರೂಪದಲ್ಲಿ ಸಂಗ್ರಹವಾಗಿ ಸ್ವಾಮಿಗೆ ಸಿಕ್ಕಿತೆಂಬುದು ಆ ಮಾಣಿಗೆ ದೊಡ್ಡದನ್ನಿಸಿಬಿಟ್ಟಿತ್ತು. ಎಲ್ಲಿ ಅಪ್ಪ, ಎಲ್ಲಿ ಮಗ! ಕಾಲಾಯತಸ್ಮೈನಮಃ, ಅನ್ನಪೂರ್ಣೆಗೆ ಬೇಕಾದಷ್ಟು ದಿನ ಇದು ನಡೆದುಕೊಂಡು ಹೋಗುತ್ತದೆ ಎಂದು ಅವಧಾನಿಗಳು ಕಳವಳಿಸುತ್ತಾರೆ.

ಅವಧಾನಿಗಳು ಈ ಪ್ರದೇಶದಲ್ಲಿ ಯಾವ ಆಧುನಿಕ ಸವಲತ್ತುಗಳೂ ಬೆಳೆಯಗೊಡದಂತೆ ನೋಡಿಕೊಂಡಿದ್ದಾರೆ. ಪರಶುರಾಮ ಹಠದ ಮನುಷ್ಯ ಅವರು. ಮನೆಯವರಿಗೆ ಮುಂಗೋಪಿ; ಸಾರ್ವಜಿಕರಿಗೆ ಸಂತ. ತನ್ನನ್ನು ನಡೆಸುವುದು ಅನ್ನಪೂರ್ಣೇಶ್ವರಿಯೇ ಎಂದು ತಿಳಿದ ನಿಷ್ಠಾವಂತ, ಗೊತ್ತಾದ ಮೇಲೆ ಹೃದಯವಂತ.

ಆದರೆ ಅವರು ಕ್ಷೇತ್ರದಲ್ಲಿ ಹಾಕಿದ ಗೆರೆ ಮೀರತಕ್ಕದ್ದಲ್ಲ. ನಪ್ರಮದಿತವ್ಯಂ – ಈ ನಿಯಮಗಳನ್ನು ಮೀರತಕ್ಕದ್ದಲ್ಲ ಎನ್ನುತ್ತಾರೆ. ವಾದಿಸಹೋದವರಿಗೆ ನಗುತ್ತಲೇ ‘ಈ ಕ್ಷೇತ್ರದ ಮಟ್ಟಿಗೆ’ ಎಂದು ಬಾಯಿ ಮುಚ್ಚಿಸಿಬಿಡುತ್ತಾರೆ. ಅವು ಯಾವ್ಯಾವ ನಿಯಮಗಳು ಎಂದರೆ:

ಒಂದು: ತುಂಗಾ ನದಿಗೆ ಸೇತುವೆಯಾಗತಕ್ಕದ್ದಲ್ಲ; ಅನ್ನ ಪೂರ್ಣೇಶ್ವರಿಯ ದರ್ಶನಾಕಾಂಕ್ಷಿಗಳು ಈಜಿ ಬರಲಿ ಅಥವಾ ದೋಣಿಯಲ್ಲಿ ಬರಲಿ. ಶ್ರಮವಿಲ್ಲದ್ದು ಯಾತ್ರೆಯಲ್ಲ.

ಎರಡು: ಈ ಗುಡ್ಡದಲ್ಲಿ ಎಣ್ಣೆಯ ದೀಪದ ಹೊರತಾಗಿ ಬೇರೆ ಯಾವ ದೀಪವನ್ನೂ, ವಿದ್ಯುದ್ದೀಪದ ಮಾತಿರಲಿ ಸೀಮೆ ಎಣ್ಣೆಯ ದೀಪವನ್ನೂ, ಉರಿಸತಕ್ಕದ್ದಲ್ಲ. ಯಾತ್ರಿಕರು ಕೈಯಲ್ಲಿ ಟಾರ್ಚನ್ನೂ ತರಕೂಡದು. ನಡುರಾತ್ರೆಯ ಮಿಣುಕು ದೀಪದಲ್ಲಿ ಅನ್ನಪೂರ್ಣೆ ವನದುರ್ಗೆಯಾಗಿ ತೋರುತ್ತಾಳೆ ಭಕ್ತರಿಗೆ.

ಮೂರು : ಅನ್ನವಿಕ್ರಯ ಮಾಡುವ ಹೋಟೆಲು ಇರತಕ್ಕದ್ದಲ್ಲ. ಅಮ್ಮನವರ ದರ್ಶನಕ್ಕೆ ಬಂದವರು ಅಮ್ಮನ ಪ್ರಸಾದವನ್ನು ಮಾತ್ರ ಸ್ವೀಕರಿಸಬೇಕು.

ದೇವಸ್ಥಾನಕ್ಕೆ ಸುತ್ತ ಮುತ್ತ ಫಲವತ್ತಾದ ಮಣ್ಣಿನ ಗದ್ದೆಗಳು ಇವೆ. ಅವಧಾನಿಗಳು ಈ ಅಮ್ಮನವರ ಗುಡ್ಡದಲ್ಲಿ ಎಲ್ಲೂ, ಅದಕ್ಕೆ ಅತ್ಯಂತ ಪ್ರಶಸ್ತವಾದ ಸ್ಥಳ ಎಂಬಲ್ಲೂ, ಅಡಕೆಯನ್ನು ಬೆಳೆಯಲು ಬಿಟ್ಟಿಲ್ಲ. ಎಲೆಯಡಿಕೆಯ ನೈವೇದ್ಯಕ್ಕಾಗಿ ಕೆಲವು ಅಡಿಕೆ ಮರಗಳು ಇವೆ. ಒಟ್ಟಿನಲ್ಲಿ, ಪೇಟೆಯ ಜೊತೆಯಾಗಲೀ ಮಂಡಿಗಳ ಜೊತೆಯಾಗಲೀ ವ್ಯವಹಾರ ಅನಿವಾರ‍್ಯವೆನ್ನಿಸುವ ಏನ್ನನ್ನೂ ಅಲ್ಲಿ ಬೆಳೆಯುವಂತಿಲ್ಲ. ಮಾವು, ಪನ್ನೇರಳೆ, ಚಕೋಶ, ಸೀಬೆ, ಕಿತ್ತಳೆ, ಸೀಕಂಚಿ, ನೇರಳೆ, ಹಲಸು – ಹೀಗೆ ಮಲೆನಾಡಿನಲ್ಲಿ ಬೆಳೆಯುವ ಎಲ್ಲ ಬಗೆಯ ಹಣ್ಣಿನ ಮರಗಳೂ ಅಲ್ಲಿವೆ. ಅವು ಹಣ್ಣುಬಿಡುವ ಕಾಲದಲ್ಲಿ ಬಂದ ಭಕ್ತರಿಗೆ ಈ ಹಣ್ಣುಗಳನ್ನು ತಿನ್ನುವಷ್ಟು ಕೊಡಲಾಗುತ್ತದೆ. ಉಣ್ಣುವಷ್ಟು ಊಟ ಬಡಿಸಲಾಗುತ್ತದೆ. ನಿತ್ಯ ನಡೆಯುವ ಈ ಅನ್ನಸಂತರ್ಪಣೆಗೆ ಅಲ್ಲಿಯೇ ಬೆಳೆದ ದವಸ – ಧಾನ್ಯಗಳನ್ನು ಬಳಸಲಾಗುತ್ತದೆ. ಯಥಾಶಕ್ತಿಯಾಗಿ ಭಕ್ತಾದಿಗಳು ತಂದುಕೊಡುವ ಅಕ್ಕಿ ಹಣ್ಣು ಬೇಳೆಗಳನ್ನೂ ಬಳಸಲಾಗುತ್ತದೆ. ಅನ್ನಪೂರ್ಣೇಶ್ವರಿಯ ಸನ್ನಿಧಾನದಲ್ಲಿ ಎಂದೆಂದೂ ದುರ್ಭಿಕ್ಷವಾದ್ದು ಯಾರಿಗೂ ನೆನಪಿಲ್ಲ.

ಅವಧಾನಿಗಳು ಅಮ್ಮನ ಭಕ್ತರಿಂದ ದುಡ್ಡಿನ ರೂಪದಲ್ಲಿ ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲವೆಂದಿಲ್ಲ; ತಾವಾಗಿ ಕೊಟ್ಟರೆ ತೆಗೆದುಕೊಳ್ಳುತ್ತಾರೆ. ಆದರೆ ನಿತ್ಯದ ಪ್ರಸಾದಕ್ಕಾಗಿ ಪದಾರ್ಥಗಳನ್ನು ತಂದರೆ ಸಂತೋಷದಿಂದ ಸ್ವೀಕರಿಸುತ್ತಾರೆ.

ಇಂಥ ಒಂದು ಪುಣ್ಯ ಕ್ಷೇತ್ರದಲ್ಲಿ ಶಾಸ್ತ್ರಿಗಳು, ತಮ್ಮ ಮಗ ಹೋಟೆಲನ್ನು ಇಟ್ಟಾದ ಮೇಲೆ, ಅಂದರೆ ಈ ಒಂದು ವರ್ಷದಿಂದ ತನ್ನ ವಾನಪ್ರಸ್ಥ ಜೀವನ ಸಾಗಿಸುತ್ತಿದ್ದಾರೆ. ಅನ್ನಪೂರ್ಣೆಯ ಅನ್ನದ ಋಣವನ್ನು ಕಿಂಚಿತ್ತಾದರೂ ತೀರಿಸಲೆಂದು ಅವಧಾನಿಗಳು ಶಾಸ್ತ್ರಿಗಳಿಗೊಂದು ಕೆಲಸ ಕೊಟ್ಟಿದ್ದಾರೆ.

೧೩

ಕೃಷ್ಣಶಾಸ್ತ್ರಿಗಳು ತನ್ನ ಕೈ ಚೀಲದಿಂದ ಸಣ್ಣ ಅಕ್ಷರದಲ್ಲಿ ಒತ್ತಾಗಿ ಅಚ್ಚುಹಾಕಿದ ಹಳದಿ ಬಣ್ಣದ ಅಗಲವಾದ ಕಾಗದವನ್ನು ತೆಗೆದುಕೊಡುತ್ತಾರೆ. ‘ನೋಡಿ ಇದನ್ನು ಹಂಚುವುದೇ ನನ್ನ ಕೆಲಸ. ಅಮ್ಮನವರ ಉತ್ಸವದ ಆಮಂತ್ರಣ ಪತ್ರಿಕೆಯಿದು. ಇದನ್ನು ಓದಿ ನೀವು ನಿಮ್ಮ ಮನೆಯ ಬಾಗಿಲಿಗೆ ಅಂಟಿಸಬೇಕು.’ ಎನ್ನುತ್ತಾರೆ.

ಹೆಚ್ಚು ಕಡಿಮೆ  ಈ ಸುತ್ತಮುತ್ತಲಿನಲ್ಲಿ ಎಲ್ಲ ಹಿಡುವಳಿದಾರರ ಮನೆಯ ಬಾಗಿಲ ಮೇಲೂ ಈ ಆಮಂತ್ರಣ ಪತ್ರವನ್ನು ಕಾಣುವಂತೆ ಮಾಡಬೇಕೆಂದು ಕೃಷ್ಣಶಾಸ್ತ್ರಿಗಳು ಓಡಾಡುತ್ತಿದ್ದಾರೆ. ಕಾಗದವನ್ನು ಪಡೆದವರಿಗೆ ಅದನ್ನು ಓದುವುದು ಕಷ್ಟವಾದರೆ ಶಾಸ್ತ್ರಿಗಳೇ ಅದನ್ನು ಓದಿ ಹೇಳುತ್ತಾರೆ. ವಾದಿಸಲು ಅವರು ಹೋಗುವುದಿಲ್ಲ; ಆಧುನಿಕ ಜೀವನಕ್ಕಾಗಿ ಹಂಬಲಿಸಿ ಅವರ ಮಗನೇ ಪೇಟೆಸೇರಿ ಹೋಟೆಲನ್ನು ಇಟ್ಟಿದ್ದಾನೆ ಎಂದಮೇಲೆ, ಅವಧಾನಿಗಳ ಮಗನೂ ಆ ದಿಕ್ಕಿನಲ್ಲಿ ಇರಬಹುದೇನೊ ಎನ್ನಿಸುವಾಗ ಅವರೇನು ವಾದಿಸಿಯಾರು? ಆಧುನಿಕತೆಯ ರಾವಿನ ಕಾಲದಲ್ಲಿ ಅಡ್ಡಮಾತನ್ನಾದರೂ ಆಡುವವರು ಇರಬೇಕಲ್ಲವೆ, ಹೀಗೆ ಅನ್ನಪೂರ್ಣೇಶ್ವರಿ ತನ್ನನ್ನು ಪ್ರೇರಿಸಿದ್ದಾಳಲ್ಲವೆ ಎಂದು ಫಲಾಪೇಕ್ಷೆಯಿಲ್ಲದ ಕರ್ಮದಲ್ಲಿ ಅವರು ನಿರತರಾಗಿದ್ದಾರೆ.

ಅದರಲ್ಲಿ ಬರೆದದ್ದರ ತಾತ್ಪರ್ಯ ಇಷ್ಟು :

ಒಂದು : ಎಲ್ಲೂ ಅಣೆಕಟ್ಟುಗಳನ್ನು ಕಟ್ಟುಕೂಡದು; ಭೂ ತಾಯಿಗೆ ಹೀಗೆ ಕೃತಕವಾಗಿ ಒಂದೇ ಪ್ರದೇಶದಲ್ಲಿ ತೀರಾ ವಜೆಯಾಗುವಂತೆ ಮಾಡಿದಲ್ಲಿ ಭೂಕಂಪಗಳು ಉಂಟಾಗಬಹುದು. ಬಾವಿಗಳಲ್ಲಿ ಹಾಗೂ ಕೆರೆಗಳಲ್ಲಿ ಎಲ್ಲ ಪುಣ್ಯ ನದಿಗಳ ಸನ್ನಿಧಿಯಿದೆ.

ಎರಡು : ವಿದ್ಯುಚ್ಛಕ್ತಿಯ ಬಳಕೆಯನ್ನು ಹೆಚ್ಚಿಸಬಾರದು. ಯಾಕೆಂದರೆ ಈ ವಿದ್ಯುತ್ತಿಗಾಗಿ ಇದ್ದಿಲನ್ನು ಸುಟ್ಟು ಆಕಾಶ ಮಲಿನವಾಗುತ್ತದೆ; ಅಥವಾ ಅಣೆಕಟ್ಟುಗಳ ನಿರ್ಮಾಣವಾಗಿ ಭೂಭಾರವಾಗುತ್ತದೆ. ಈ ಭೂಮಿಯ ಮೇಲಣ ಶೀತೋಷ್ಣಗಳ ಸಮತೋಲ ತಪ್ಪಬಾರದು.

ಮೂರು : ಕಾಫಿ ಮತ್ತು ಚಹಾದ ಚಟ ಬೆಳೆಯಬಾರದು. ಯಾಕೆಂದರೆ ಇವು ಕಾಡುಗಳನ್ನು ನಾಶ ಮಾಡಿ ಬೆಳೆಯುವಂಥವು. (ಕೇಶವ ಈ ಮಾತನ್ನು ಓದಿ ಶಾಸ್ತ್ರಿಗಳನ್ನು ತುಂಟಾಗಿ ನೋಡಿದ್ದ. ಶಾಸ್ತ್ರಿಗಳೂ ತುಂಟಾಗಿ ನಕ್ಕು, ತಾನೆಲ್ಲೋ ಓದಿದ ಮಾತನ್ನು ನೆನಪು ಮಾಡಿಕೊಂಡು ‘ಆಚಾರ್ಯರೆ, ರೋಮಿನಲ್ಲಿದ್ದಾಗ ರೋಮಿನವರಂತೆ ಇರು ಎಂಬೊಂದು ಮಾತಿದೆ’ ಎಂದಿದ್ದರು. ‘ಹಾಗಾದರೆ ತಾವು ಕ್ಷೇತ್ರದ ಹೊರಗೇ ಹೆಚ್ಚು ಇರೋದು ಎಂದಾಯಿತು’ ಎಂದಿದ್ದ.)

ನಾಲ್ಕು: ಪೆಟ್ರೋಲಿನ ಬಳಕೆ ಹೆಚ್ಚದಂತೆ. ನಾವಿರುವ ಪ್ರದೇಶದಲ್ಲೇ ನಮ್ಮೆಲ್ಲರ ಅಗತ್ಯಗಳ ಪೂರೈಕೆಯಾಗುವಂತೆ ನೋಡಿಕೊಳ್ಳತಕ್ಕದ್ದು; ಅನಗತ್ಯವಾದ ರುಚಿಗಳನ್ನು ನಾಲಗೆಗೆ ಕಲಿಸಬಾರದು.

ಐದು : ರಾಜ್ಯಾಡಳಿತ ವಿಕೇಂದ್ರಿಕೃತವಾತಕ್ಕದ್ದು.

೧೪

ಪುಟ್ಟೇಗೌಡ ಈಗ ಶಾಸ್ತ್ರಿಗಳ ಬೆಂಬಲಿಗನಾಗಿಬಿಟ್ಟಿದ್ದಾನೆ; ನೆಹರೂ ಪ್ರಣೀತವಾದ ಐರೋಪ್ಯ ಮಾದರಿಯ ಆಧುನಿಕತೆಯನ್ನು ಎತ್ತಿಹಿಡಿಯುವ ಘನಶ್ಯಾಮನ ವಿರೋಧಿಯೂ ಆಗಿದ್ದಾನೆ. ಅವಧಾನಿಗಳ ವಿಚಾರ ಅವನಿಗೆ ಅತಿಯೆನ್ನಿಸಿದರೂ ಈ ಕಾಲದಲ್ಲಿ ಅತಿಗೆ ಹೋಗದೆ ಸತ್ಯದ ಆವಿಷ್ಕಾರವಾಗದು ಎಂದು ಅವನ ವಾದ. ತನ್ನಮಟ್ಟಿಗೆ ಲೋಹಿಯಾರ ಪರ‍್ಯಾಯ ಕಿರು ಯಂತ್ರದ ವ್ಯವಸ್ಥೆಯ ಕಟ್ಟಾ ಬೆಂಬಲಿಗ ಈಗ ಅವನು.

‘ಕೇಶವಯ್ಯ, ವೇದಗಳು ಅಪೌರುಷೇಯವೆಂದು ನಮ್ಮನ್ನು ನಂಬಿಸಿ ನೀವು ಬ್ರಾಹ್ಮಣರು ಶತಮಾನಗಳ ಕಾಲ ನಮ್ಮನ್ನು ಆಳಿದ್ದಾಯಿತು; ಈಗ ವೇದಗಳು ಸುಳ್ಳು, ಯೂರೋಪಿನವರ ವಿಜ್ಞಾನಮಾತ್ರ ನಿಜ ಎಂದು ಇಂಗ್ಲಿಷನ್ನು ಕಲಿತುಬಿಟ್ಟು ನಮ್ಮನ್ನ ಆಳಕ್ಕೆ ಹೊರಟಿರೋ ನವಬ್ರಾಹ್ಮಣರು ಹುಟ್ಟಿಕೊಂಡಿದ್ದಾರೆ. ಮಿಂಡರಿಗೆ ಹುಟ್ಟಿದೋರು ಇವರು, ಅಪ್ಪನಿಗೆ ಹುಟ್ಟಿದೋರಲ್ಲ’. ಎಂದು ಛೇಡಿಸುವನು. ಗೌರಿ ಬಾಗಿಲಿಗೆ ಒರಗಿನಿಂತದ್ದು ನೋಡಿ, ತಾನು ಕುಶಾಲಿಗೆ ಆಡಿಬಿಟ್ಟ ಮಾತಿನಿಂದ ಮುಜುಗರ ಪಡುವನು. ಟ್ರಸ್ಟಿನ ಸೆಕ್ರೆಟರಿಯಾಗಿ ಬಿಟ್ಟ ಕೇಶವ,

‘ಅಲ್ಲೂ ಬ್ರಾಹ್ಮಣರು ಇರುತ್ತಾರೆ; ಇಲ್ಲೂ ಬ್ರಾಹ್ಮಣರು ಇರುತ್ತಾರೆ ಅಲ್ಲವೇನೋ ಗೌಡ? ಇಬ್ಬರೂ ಗೌಡರಿಗೆ ಬೇಡದಿದ್ದಾರೆ ಬ್ರಾಹ್ಮಣರಿಗೆಲ್ಲಿ ಬೆಲೆ ಇರ‍್ತಿತ್ತೋ?’ ಎನ್ನುವನು.

‘ನಿನ್ನ ತಕಲೀ ಜನಿವಾರ ಯಾರಿಗೆ ಬೇಕು ಈಗ? ಇನ್ನು ಮುಂದೆ ಟೆರಿಲಿನ್ ಜನಿವಾರ. ಶಿಮೊಗ್ಗದಿಂದ ಟೊಮೊಟೊ ತಂದಿದ್ದೆ. ಅಕ್ಕಮ್ಮ ತಿನ್ನಲ್ಲಾಂತ ತರ‍್ಲಿಲ್ಲ. ದೊಣ್ಣೆಮೆಣಸೇನೂ ವಿಶ್ವಾಮಿತ್ರ ಸೃಷ್ಟಿಯಲ್ಲವಲ್ಲ. ಅಕ್ಕಮ್ಮನಿಗೆ ಕೊಡು. ಗೌರಮ್ಮನಿಗೆ ಹೇಳಿ ಕಾಫಿ ಮಾಡಿಸು’ ಎಂದು ಗಾಂಧಿ ಚಿತ್ರವಿದ್ದ ತರಕಾರಿ ಚೀಲವನ್ನು ಗೌರಿಗೆ ಕೊಡುವನು.

* * *

ಪುಟ್ಟೇಗೌಡನ ಜೊತೆಯಾಗಿ ಈಗ ಓಡಾಡುತ್ತಿರುವ ಶಾಸ್ತ್ರಿಗಳು ಘನಶ್ಯಾಮನನ್ನು ನೋಡಲು ಹೋದರು. ಅವನೇನು ಹೇಳಿಯಾನು ಗೊತ್ತೇ ಇತ್ತು ಅವರಿಗೆ. ಕಿವಿಯ ಮೇಲೆ ಬೀಳಬೇಕಾದ್ದು ಬೀಳಲೇಬೇಕು. ಅದು ಬಿತ್ತವಿದ್ದಂತೆ. ಚೆಲ್ಲಿದ್ದು ಅಲ್ಲೋ ಇಲ್ಲೋ ಇಂದೋ ನಾಳೆಯೋ ಚಿಗುರೊಡೆದೀತು. ಅನ್ನಪೂಣೇಶ್ವರಿ ಅರ್ಚಕರ ದೃಷ್ಟಿಯೂ ಅದೇ. ಬಿತ್ತುವುದು, ಕಾಯುವುದು, ಮಣ್ಣಿನೊಳಗಿನ ಸಹಿಷ್ಣು ಕತ್ತಲಿನಲ್ಲಿ ಕಾದಿರುತ್ತದೆ ಬೀಜ. ಎಲ್ಲೋ ಒಂದು ಬೀದಿ ಬದಿ, ಬಿಸಿಲುಕಾಯುತ್ತ, ಮುರುಕು ಬಂಡಿಯ ಹಿಂದೆ ಬೆನ್ನು ಕೆರೆಯುವ ಖುಷಿಯಲ್ಲಿ, ಅಡಗಿರುವ ಋಷಿ ರೈಕ್ವರು ರಾಜಾಧಿರಾಜನಿಗೆ ಬೇಕಾಗಿಬಿಡುವ ದಿನಬಂದೀತು: ರಾಜನೇ ಅವನನ್ನು ಹುಡುಕಿಕೊಂಡು ಬಂದಾನು.

ಇಬ್ಬರಿಗೂ ಕಾಫಿಕೊಟ್ಟು ಘನಶ್ಯಾಮ ಆಮಂತ್ರಣ ಪತ್ರವನ್ನು ಓದಿದ. ಕಾಫಿಯ ವಿಷಯವಾಗಿ ತಮ್ಮನ್ನು ಹಾಸ್ಯ ಮಾಡಿಯಾನು ಈ ಜಾಣ ಯುವಕ ಎಂದು ಪುಟ್ಟೇಗೌಡ ನಿರೀಕ್ಷಿಸಿದ್ದು ನಿಜವಾಗಲಿಲ್ಲ.

‘ನಮ್ಮ ಹಳ್ಳಿಗಳು ಜಾತೀಯ ನರಕಗಳಾಗಿವೆ; ಬಡತನ ಮತ್ತು ನಿರಕ್ಷರತೆ ಮೊದಲು ನಿರ್ನಾಮವಾಗಬೇಕು. ದೇಶದ ಸಂಪತ್ತಿನ ಅಭಿವೃದ್ಧಿಯಾಗಬೇಕು. ಅದಕ್ಕೆ ವಿದ್ಯುಚ್ಛಕ್ತಿ ಬೇಕು. ನೀರು ಹರಿದು ಪೋಲಾಗದಂತೆ ಆಣೆಕಟ್ಟುಗಳನ್ನು ಕಟ್ಟಬೇಕು. ಈ ಭೂಮಿಯ ಒಳಗೆ, ಉದಾಹರಣೆಗೆ ಈ ನಮ್ಮ ಊರಿನಲ್ಲೇ, ಏನೇನು ಖನಿಜ ಸಂಪತ್ತಿದೆಯೋ ಯಾರಿಗೂ ಗೊತ್ತಿಲ್ಲ. ಸಂಶೋಧನೆಯಾಗಬೇಕು, ರಸ್ತೆಗಳಾಗಬೇಕು, ನಮಗೆ ಪೆಟ್ರೋಲ್ ಬೇಕು; ಅದನ್ನು ನಾವು ನಮ್ಮ ಸಮುದ್ರಗಳಲ್ಲಿ ಹುಡುಕಬೇಕು. ಆಸ್ಪತ್ರೆಗಳಾಗಬೇಕು. ಇವೆಲ್ಲವನ್ನೂ ಬಿಟ್ಟು ಅನ್ನಪೂರ್ಣೆಯ ಆರಾಧನೆ ಮಾಡುತ್ತ ಕೂತರ ಈ ದೇಶ ಎಂದಾದರೂ ಮುಂದೆಬಂದೀತ?’

ಘನಶ್ಯಾಮ ಎದುರಾಳಿಯನ್ನು ಒಲಿಸಿಕೊಳ್ಳುವಂತೆ ಸಜ್ಜನಿಕೆಯಲ್ಲಿ ವಾದಿಸಿದ್ದ. ಶಾಸ್ತ್ರಿಗಳು ವಾದಕ್ಕೆ ಇಳಿಯಲು ಇಚ್ಛಿಸಲಿಲ್ಲ. ಹೇಳಬಹುದಿತ್ತು; ಖನಿಜಸಂಪತ್ತು ಮಾತ್ರವಲ್ಲ; ಈ ಕಾಡಿನಗುಡ್ಡ ದೇವದೇವಿಯರನ್ನು ಹಡೆದೀತು. ಅಂಥ ದೇವಿಯೊಬ್ಬಳನ್ನು ಏ ಮರುಳೇ ನೀನೇ ನಿನ್ನ ಪೂರ್ವಜರ ಕ್ಷೇತ್ರದಲ್ಲೇ ಕಂಡಿದೀಯ.

ರೂಮಿನ ಸುತ್ತಲೂ ಕಣ್ಣುಹಾಯಿಸಿದರು. ಕೆದರಿದ ಕೂದಲು ಗಡ್ಡಗಳ ಮುಳ್ಳುಹಂದಿಯ ಥರದ ಮೋರೆಯ ದೊಡ್ಡದೊಂದು ಚಿತ್ರ. ಆ ಚಿತ್ರದ ಕೆಳಗೆ, ಉದ್ದೇಶಪೂರ್ವಕವಾಗಿಯೇ ಎಂಬಂತೆ, ಒಂದು ಹಲಗೆಯನ್ನು ಗೋಡೆಗೆ ಮೊಳೆಯಿಂದ ಸಿಕ್ಕಿಸಿ, ಅದರಲ್ಲಿ ಒಂದು ವಿಗ್ರಹವನ್ನು ಘನಶ್ಯಾಮ ಇಟ್ಟಿದ್ದ.

ಶಾಸ್ತ್ರಿಗಳು ಆ ವಿಗ್ರಹವನ್ನೇ ನೋಡುತ್ತ ಅದು ಭೂವರಾಹ ವಿಗ್ರಹವೆಂದು ಅರಿತರು. ಮೇಲೊಂದು ಮುಳ್ಳು ಹಂದಿಯ ಥರದ ವಿದೇಶೀಯನ ಮೋರೆ; ಅದರ ಕೆಳಗೆ, ಮನುಷ್ಯಾಕೃತಿಯ, ಆದರೆ, ಕೋರೆಹಲ್ಲಿನ ಹಂದಿಯ ಮುಖದ ಭಗವಂತ; ಬಾಲೆಯನ್ನು ಎತ್ತಿಕೊಳ್ಳುವಂತೆ ಭೂದೇವಿಯನ್ನು ಎತ್ತಿ ಹಿಡಿದು, ಪಂಚಲೋಹದ ವಿಗ್ರಹವಾಗಿ ಅಭಯ ಹಸ್ತನಾಗಿ ನಿಂತಿದ್ದಾನೆ – ಐನೂರು ವರ್ಷಗಳ ಕಾಲ ಈ ಮನೆಯಲ್ಲಿ ಪೂಜ್ಯನಾಗಿದ್ದ ಭಗವಂತ. ಪ್ರಾಯಶಃ, ಈಗ ಘನಶ್ಯಾಮನ ಬೆನ್ನಿಗಿದ್ದ ಗೋಡೆಯ ಅಂದವನ್ನು ಹೆಚ್ಚಿಸಲಿಕ್ಕಾಗಿ.

ಪುಟ್ಟೇಗೌಡ ವಾದಿಸಿದ : ನಮಗೆ ಐರೋಪ್ಯ ಮಾದರಿಯ ಅಭಿವೃದ್ಧಿ ಬೇಡ, ಇತ್ಯಾದಿ. ಅವನೂ ಸರ್ವೋದಯದವರ ಜೊತೆ ಭೂದಾನ ಯಜ್ಞದಲ್ಲಿ ಭಾಗವಹಿಸಿದ್ದ ಜಯಪ್ರಕಾಶರ ಅನುಯಾಯಿ. ಅವನ ವಾದಗಳೆಲ್ಲವೂ ಘನಶ್ಯಾಮನಿಗೆ ಗೊತ್ತಿತ್ತು. ಒಂದು ಕಾಲದಲ್ಲಿ ಅವನೂ ಹಾಗೆ ವಾದಿಸಿದ್ದವ, ಬನಾರಸ್ಸಿನಲ್ಲಿ ಇದ್ದಾಗ. ಘನಶ್ಯಾಮ ಆಡುವ ಮಾತುಗಳೆಲ್ಲವೂ ಪುಟ್ಟೇಗೌಡನಿಗೆ ಗೊತ್ತು; ಅವನ ಅಕ್ಕನ ಮಗ ಲಾಯರ್ ಆಗಿ ಶಿವಮೊಗ್ಗದಲ್ಲಿ ಪ್ರಾಕ್ಟೀಸ್ ಮಾಡುತ್ತ ಕಮ್ಯುನಿಸ್ಟರಿಗೆ ಒಲಿದಿದ್ದ.

ಎಲ್ಲ ಮಾತುಗಳೂ ವ್ಯರ್ಥವೆಂದುಕೊಂಡ ಶಾಸ್ತ್ರಿಗಳಿಗೆ ಮಾತ್ರ ಭೂವರಾಹಮೂರ್ತಿ ಅಲಂಕಾರದ ಒಂದು ವಸ್ತುವಾಗಿಬಿಟ್ಟಿತೆಂದು ಕಳವಳವಾಗಿತ್ತು. ಎದ್ದುಬರುವಾಗ  ಹೇಳಲೇ ಎಂದುಕೊಂಡರು; ‘ಬೇಡವಾದರೆ ಪೂಜೆ ಬೇಡ; ಎಲ್ಲಾದರೂ ಬಿಸಾಕು ಅದನ್ನ. ಆದರೆ ಅದನ್ನೊಂದು ಗೋಡೆಯ ಅಲಂಕಾರಕ್ಕೆ ಬಳಸಬೇಡ.’

ಆದರೆ ಏನು ಹೇಳಿದರೂ ಪ್ರಯೋಜನವಿಲ್ಲವೆಂದು ಸುಮ್ಮನಾದರು. ಆಧುನಿಕತೆಯ ರಾವು ಬಡಿದ ಈ ಶೂರ ಒಂದಲ್ಲ ಒಂದು ದಿನ ತನ್ನಲ್ಲೇ ಅಂಗರ್ತತವಾದ ಸತ್ಯವನ್ನು ಕಂಡುಕೊಳ್ಳಲು ದಿಗಿಲುಪಡದಂತಾಗಲಿ ಎಂದು ದೇವರನ್ನು ಪ್ರಾರ್ಥಿಸಿದರು.

ಘನಶ್ಯಾಮ ಅವರಿಗೊಂದು ವಾಚಕರವಾಣಿಯಲ್ಲಿ ಬಂದ ಪತ್ರತೋರಿಸಿದ. ಅದು ಅನ್ನಪೂರ್ಣೇಶ್ವರಿ ಅರ್ಚಕರ ಜನ ವಿರೋಧಿಯೂ, ಪ್ರತಿಗಾಮಿಯೂ ಆದ ವಿಚಾರಗಳನ್ನು ಕಟುವಾಗಿ ಟೀಕಿಸಿ ಬರೆದ ಪತ್ರವಾಗಿತ್ತು. ಅದನ್ನು ಬರೆದವರು ಈ ಅರ್ಚಕರನ್ನು ದಸ್ತಗಿರಿ ಮಾಡಬೇಕೆಂದು ವಾದಿಸುತ್ತ ಹೇಳಿದ್ದರು: ‘ಅಭಿವೃದ್ಧಿಪಥದಲ್ಲಿರುವ ನಮ್ಮ ಭಾರತದ ಅಣೆಕಟ್ಟುಗಳನ್ನು ಯಾರಾದರೂ ಹುಂಬರು ಡೈನಮೈಟ್ ಇಟ್ಟು ಕೆಡವಬೇಕೆಂದು ಅನ್ನಿಸುವಂತೆ ಈ ಗೊಡ್ಡು ವೈದಿಕರು ವಾದಿಸುತ್ತಿದ್ದಾರೆ. ಈತ ಖಂಡಿತವಾಗಿ ಎಲ್ಲ ಬದಲಾವಣೆಗೆ ವಿರೋಧಿ. ಇಂತಹ ವೈದಿಕರು ಕ್ರಿಮಿನಲ್ಲುಗಳು ಎಂದು ನಾವು ಗುರುತಿಸಿ ಅವರನ್ನು ಶಿಕ್ಷಿಸುವಂತೆ ಪ್ರಜಾತಾಂತ್ರಿಕ ಸರ್ಕಾರದ ಮೇಲೆ ಒತ್ತಾಯ ತರುವುದು ಅನಿವಾರ್ಯವಾಗಿದೆ.’

ಈ ಪತ್ರಕ್ಕೆ ಉತ್ತರವಾಗಿ ಇನ್ನೊಂದು ಪತ್ರವಿತ್ತು; ಇನ್ನೊಬ್ಬ ವಿಚಾರವಾದಿ ಬರೆದದ್ದಿರಬೇಕು. ಅರ್ಚಕರ ಬಾಲಿಶವಾದ ಆದರ್ಶವಾದವನ್ನು ಛೆ ಪಾಪ ಅಯ್ಯೋ ಎಂದು ಗೇಲಿಮಾಡಿ, ಅನ್ನಪೂಣೇಶ್ವರಿ ಎಷ್ಟು ಕಾಲ ಅವಧಾನಿಗಳ ಅಂಕೆಯಲ್ಲಿದ್ದಾಳು, ಅವಳೂ ತಿರುಪತಿ ತಿಮ್ಮಪ್ಪನಂತೆ ವೈಭವದಲ್ಲಿ ಮೆರೆಯುವುದು ಬೇಡವೇ ಎಂದು ಈ ಪತ್ರಕೇಳಿತ್ತು. ಪತ್ರದ ಕೊನೆಯಲ್ಲಿದ್ದ ಒಂದು ಕೊಂಕಿನ ಸೂಚನೆಯನ್ನು ಗಮನಿಸಿದ ಶಾಸ್ತ್ರಿಗಳು ಯಾರೋ ಗೊತ್ತಿರುವವರೇ ಈ ಪತ್ರ ಬರೆದಿರಬಹುದೆಂದು ಅಂದುಕೊಂಡರು. ಅರ್ಚಕರ ಮಕ್ಕಳಿಗಾದರೂ ಅನ್ನಪೂರ್ಣೇಶ್ವರಿ ಒಳ್ಳೆಯ ಬುದ್ಧಿಯನ್ನು ಕೃಪೆಮಾಡಿ ತನ್ನ ಚಿನ್ನದ ಕಿರೀಟ ವಿದ್ಯುದೀಪದಲ್ಲಿ ಝಳಝಳಿಸುವಂತೆ ಭಕ್ತರಿಗೆ ತೋರಿಕೊಂಡಾಳು ಎಂಬ ಭರವಸೆಯಲ್ಲಿ ಪತ್ರಕೊನೆಯಾಗಿತ್ತು. ಅರ್ಚಕರ ಮಗನನ್ನು ಶಾಸ್ತ್ರಿಗಳೂ ಕಂಡವರಲ್ಲವೆ? ಕಾಲಾಯ ತಸ್ಮೈ ನಮಃ, ಆಗ ಅನ್ನಪೂರ್ಣೇಶ್ವರಿ ನನ್ನ ಹೃದಯಸ್ಥಳಾಗಿ ಇರುತ್ತಾಳೆ ಎಂದುಕೊಂಡರು. ಧೀರನೂ, ಸುಂದರನೂ, ಹಾಗೆಂದು ತನ್ನನ್ನೇ ಭಾವಿಸಿಕೊಂಡ ಮರುಳನೂ ಆದ ಘನಶ್ಯಾಮನನ್ನು ವಾತ್ಸಲ್ಯದಿಂದ ನೋಡಿದರು.

’ಹೀಗೆ ಬರೆದವರು ಕಂಟ್ರಾಕ್ಟರುಗಳ ಏಜೆಂಟೇ ಇರಬೇಕು. ಒಂದು ಅಣೆಕಟ್ಟು ಎಂದರೆ ಎಷ್ಟು ಹಣ ಅದರಲ್ಲಿ ಇದೆ ಗೊತ್ತ? ಅಣೆಕಟ್ಟಿನಿಂದ ಬಡವರಿಗೇನಾದರೂ ಲಾಭವಿದೆಯೆ?’ ಎಂದು ಪುಟ್ಟೇಗೌಡ ಸಿಟ್ಟಿನಲ್ಲಿ ಹೇಳಿದ.

‘ಹಾಗಾಗದಂತೆ ತಡೆಯುವ ಜವಾಬ್ದಾರಿ ನನ್ನ ನಿಮ್ಮ ಮೇಲಿದೆ. ಪುಟ್ಟೇಗೌಡರೇ ಕೇಳಿ ನಿಮ್ಮ ಸಹಕಾರ ನನಗೆ ಬೇಕು. ನೀವೂ ರಾಜಕೀಯ ಬಲ್ಲವರು. ಇಂಥ ಪ್ರಚಾರದಲ್ಲಿ ನೀವು ಸಮಯ ವ್ಯರ್ಥ ಮಾಡಬಾರದು’ ಎಂದು ಘನಶ್ಯಾಮ ಸ್ನೇಹದಲ್ಲಿ ಹೇಳಿದ.

ಇಬ್ಬರ ನಡುವಿನ ವಿರೋಧ ಆಳವಾದ್ದಲ್ಲ ಎಂದು ತಿಳಿದಿದ್ದ ಶಾಸ್ತ್ರಿಗಳು ‘ಮತ್ತೆ ನೋಡುವ’ ಎಂದು ಪುಟ್ಟೇಗೌಡನ ಜೊತೆ ಹೊರಟರು.